“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು.
ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 21:ಧರ್ಮ-ಅಧರ್ಮ

ನಮ್ಮ ನಿತ್ಯ ಜೀವನದಲ್ಲಿ ಹೆಜ್ಜೆಯಿಡುವಾಗ ಪ್ರತಿಯೊಂದು ಕ್ರಿಯೆಯೂ ಧರ್ಮ ಅಥವಾ ಅಧರ್ಮದಿಂದ ಕೂಡಿರುತ್ತದೆ. ಜೀವನವೆಂಬುದು ಧರ್ಮಾಧರ್ಮಗಳ ಸಂಘರ್ಷವಾಗಿದೆ.
ಮಹರ್ಷಿಗಳು ಧರ್ಮದ ಮರ್ಮವನ್ನು ಕಂಡು, ಅನುಸರಿಸಿ ಲೋಕಕ್ಕೆ ಸಾರಿದ ಜಾಡಿನಲ್ಲಿ ಸಾಗಿ ಬಂದ ನಾವು ಧರ್ಮಕ್ಕೆ ಅಂಟಿಕೊಂಡೇ ಬದುಕಬೇಕು. ಇಲ್ಲಿ ನೆಮ್ಮದಿ ಹಾಗೂ ಉತ್ಕರ್ಷ ಎರಡೂ ಇದೆ. ಧರ್ಮಾಧರ್ಮಗಳ ಸಂಘರ್ಷದಲ್ಲಿ ಅಂತಿಮವಾಗಿ ಧರ್ಮಕ್ಕೇ ಜಯ ಎಂಬುದು ನಿರ್ವಿವಾದ ಸತ್ಯ.
ದುರ್ಯೋಧನನು ಕುರುಕ್ಷೇತ್ರಯುದ್ಧ ಪೂರ್ವದಲ್ಲಿ ತಾಯಿ ಗಾಂಧಾರಿಯಲ್ಲಿ ವಿಜಯಾಪೇಕ್ಷೆಯ ಆಶೀರ್ವಾದ ಬೇಡಿದಾಗ, ಅವಳು “ ಯತೋ ಧರ್ಮಃ ತತಃ ಕೃಷ್ಣಃ ಯತಃ ಕೃಷ್ಣಃ ತತೋಜಯಃ “ ಎಂದು ನುಡಿಯುತ್ತಾಳೆ. ಎಲ್ಲಿ ಧರ್ಮವಿದೆಯೋ ಅಲ್ಲಿ ಕೃಷ್ಣನಿದ್ದಾನೆ. ಎಲ್ಲಿ ಕೃಷ್ಣನಿದ್ದಾನೋ ಅಲ್ಲಿ ಜಯವಿದೆ. ಹೀಗೆ ಮಗನ ಹಿತವನ್ನು ಬಯಸಿದ ಮಾತೆಯ ಅಂತರಂಗದಲ್ಲಿ ಸಾಕ್ಷಿಯಾಗಿ ಧರ್ಮದ ಮಹತ್ವವನ್ನು ಅರಿಯಬಹುದಾಗಿದೆ. ಅವಳ ಹೊರಗಣ್ಣು ಕಟ್ಟಲ್ಪಟ್ಟರೂ ಒಳಗಣ್ಣು ತೆರೆದಿರುವುದು ಇದಕ್ಕೆ ಸಾಕ್ಷಿಯಾಗಿದೆ. “ಕೃಷ್ಣಂ ಧರ್ಮಂ ಸನಾತನಂ” ಎಂಬಂತೆ ಧರ್ಮಸ್ವರೂಪನಾದ ಪಾಂಡುರಂಗನು ಪಾಂಡವರ ಪಾಳಯದಲ್ಲಿರುವುದರಿಂದ ಧರ್ಮಪರವಾದ ಪಾಂಡವರಿಗೆ ಜಯವನ್ನು ನಾವು ನಿರ್ಣಯಿಸಬಹುದಾಗಿದೆ.
ರಕ್ಷಿಸುವುದು ಧರ್ಮದ ಸ್ವಭಾವವಾದರೆ ಶ್ರೀಕೃಷ್ಣನು ಪಾಂಡವರನ್ನು ಮಾತ್ರ ರಕ್ಷಿಸಿ ಕೌರವರನ್ನು ಕೊಲ್ಲಿಸಿದ ಪರಿಯನ್ನು ಅವಲೋಕಿಸಿದರೆ, ” ಧರ್ಮೋ ರಕ್ಷತಿ ರಕ್ಷಿತಃ “ ಎಂಬಂತೆ ಧರ್ಮವನ್ನು ರಕ್ಷಿಸಿದ ಪಾಂಡವರನ್ನು ಧರ್ಮವು ರಕ್ಷಿಸಿತು ಎನ್ನಬೇಕು. ಕವಚವನ್ನು ರಕ್ಷಿಸಿಕೊಂಡರೆ ಅವನ ಶರೀರ ರಕ್ಷಣೆಯಾಗುವಂತೆ ನಾವು ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಈ ಜೀವನವೇ ಯುದ್ಧ ಭೂಮಿಯಾಗಿದ್ದು ಇಲ್ಲಿ ನಾವು ಧರ್ಮದ ಕವಚವನ್ನು ಧರಿಸಿದರೆ ನಮ್ಮ ಶತ್ರುವಾದ ಅಧರ್ಮವು ಆಕ್ರಮಿಸುವಾಗ ಧರ್ಮಕವಚವು ರಕ್ಷಣೆ ನೀಡುತ್ತದೆ. ಅದೇ ರೀತಿ ನಮ್ಮ ಕಣ್ಣಿನ ಧರ್ಮವನ್ನು ರಕ್ಷಿಸಿಕೊಂಡರೆ ನಮ್ಮ ಯಾತ್ರೆಯನ್ನು ಕಣ್ಣು ಸುಗಮವಾಗಿಸುತ್ತದೆ. ಜೀವನಯಾತ್ರೆಯಲ್ಲಿ ಕಣ್ಣಿನ ಸ್ಥಾನದಲ್ಲಿರುವ ಧರ್ಮವನ್ನು ರಕ್ಷಿಸಿ, ಧರ್ಮದೃಷ್ಟಿಯಿಂದ ಜಗತ್ತನ್ನು ನೋಡಿ, ಅಧರ್ಮದಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕು. ಧರ್ಮವನ್ನು ನಿರ್ಲಕ್ಷಿಸಿದಲ್ಲಿ ಅದು ನಮ್ಮ ಮನೆಯನ್ನೂ, ಮನವನ್ನೂ, ತನುವನ್ನೂ ಬಿಟ್ಟು ಸಾಗುವುದು. ಹಾಗಾಗದೇ –

ಅಂತರಂಗದಲ್ಲಿ ಧರ್ಮಮೂರ್ತಿಯನ್ನು ಕಂಡು ಜೀವನಸಾಫಲ್ಯಗೊಳಿಸಿಕೊಳ್ಳುವ ಭಾಗ್ಯ ಎಲ್ಲರಿಗೂ ಒದಗಲಿ.

~*~

Facebook Comments