“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 26:ದೇವರ ನೈಜ ಪರಿಚಯ
ಕುರುಡನೊಬ್ಬನ ಹೆಂಡತಿ ಎಳೆಯ ಮಗುವಿಗೆ ಹಾಲು ಕುಡಿಸುತ್ತಿದ್ದಳು. ಹಾಲು ಮಗುವಿನ ಪುಟ್ಟ ಗಂಟಲಿಗೆ ಸಿಕ್ಕಿ ಮಗು ಸತ್ತು ಹೋಯಿತು.ಹೆಂಡತಿ ತನ್ನ ಕುರುಡ ಗಂಡನಿಗೆ ಮಗು ಸತ್ತ ವಿಷಯವನ್ನು ಅರುಹಿದಳು. ಕುರುಡ ಗಾಬರಿಯಿಂದ ಕೇಳಿದ – “ಹೇಗೆ ಮಗು ಸತ್ತು ಹೋಯಿತು?” ಎಂದು. ಹೆಂಡತಿ ಹೇಳಿದಳು – “ಹಾಲು ಕುಡಿಯುವಾಗ ಗಂಟಲಿಗೆ ಸಿಕ್ಕಿತು.” ಹಾಲನ್ನು ನೋಡದ ಕುರುಡ ಹೆಂಡತಿಯಲ್ಲಿ ಹಾಲಿನ ಪರಿಚಯ ಕೇಳಿದ – ಆಕೆ ಹೇಳಿದಳು “ಹಾಲು ಬೆಳ್ಳಗಿರುತ್ತದೆ.” ಹಾಲಿನ ಪರಿಚಯವಿದ್ದಷ್ಟೂ ಬಿಳಿಯ ಬಣ್ಣದ ಪರಿಚಯವಿರದ ಕುರುಡ ಪುನಃ ಕೇಳಿದ – “ಬೆಳ್ಳಗಿರುವುದೆಂದರೆ ಹೇಗೆ?” ಆಕಸ್ಮಿಕ ಅವಗಢದಿಂದಾಗಿ ಮನಸ್ತಿಮಿತವಿಲ್ಲದ ಆಕೆ ಹೇಳಿದಳು – “ಬೆಳ್ಳಗಿರುವುದೆಂದರೆ ಕೊಕ್ಕರೆಯ ಹಾಗೆ.” ಪಾಪ! ಕೊಕ್ಕರೆಯನ್ನೇ ನೋಡಿರದ ಕುರುಡ, “ಕೊಕ್ಕರೆ ಹೇಗಿರುತ್ತದೆ?” ಎಂದು ಪುನಃ ಕೇಳಬೇಕಾಗಿ ಬಂತು. ಕುರುಡ ಗಂಡನಿಗೆ ಕೊಕ್ಕರೆ ಹೇಗಿರುತ್ತದೆ ಎಂಬುದನ್ನು ತಿಳಿಸುವುದು ಹೇಗೆಂಬ ಗೊಂದಲಕ್ಕೆ ಬಿದ್ದ ಆಕೆ, ಕೊನೆಗೆ ತನ್ನ ಕೈಬೆರಳುಗಳಿಂದ ಕೊಕ್ಕರೆಯ ಉದ್ದ ಕೊಕ್ಕಿನ ಆಕೃತಿಯನ್ನು ತೋರಿಸಿ – “ಕೊಕ್ಕರೆ ಹೀಗಿರುತ್ತದೆ” ಎಂದಳು. ಹೆಂಡತಿಯ ಕೈಬೆರಳುಗಳನ್ನು ಮುಟ್ಟಿ ನೋಡಿದ ಕುರುಡ ಒಮ್ಮೆಲೇ ಕ್ರೋಧ ದುಃಖಗಳಿಂದ ಕೂಡಿದವನಾಗಿ ಉದ್ಘರಿಸಿದ -“ಇಷ್ಟು ಚೂಪಾದ ಹಾಲು ಮಗುವಿನ ಎಳೆಯ ಗಂಟಲಿಗೆ ಸಿಕ್ಕಿದರೆ ಅದು ಸಾಯದೇ ಇನ್ನೇನಾದೀತು?”

ಆಕೆ ಮಗುವಿಗೆ ಕುಡಿಸಿದ ಹಾಲು ಉದ್ದವಾಗಿಯೂ ಇರಲಿಲ್ಲ. ಚೂಪಾಗಿಯೂ ಇರಲಿಲ್ಲ. ಆದರೆ ಆಕೆ ಕುರುಡ ಗಂಡನಿಗೆ ಹಾಲನ್ನು ಪರಿಚಯಿಸಿದ ವಿಧಾನ ಸರಿಯಾಗಿರಲಿಲ್ಲ. ಹಾಲಿನ ಪರಿಚಯವನ್ನು ಕೊಕ್ಕರೆಯ ಮೂಲಕ ಹೇಳುವ ಬದಲು ಗಂಡನಿಗೆ ಸ್ವಲ್ಪ ಹಾಲನ್ನೇ ಕುಡಿಸಿದ್ದರೆ ಅವನಿಗೆ ಹಾಲಿನ ಪರಿಚಯ ಸರಿಯಾಗಿ ಆಗಲು ಸಾಧ್ಯವಿತ್ತು.

ಕುರುಡನ ಹೆಂಡತಿಯಂತೆ ಪಂಡಿತರು ದೇವರನ್ನು ಕಾಣುವ ಕಣ್ಣಿಲ್ಲದ ಸಾಮಾನ್ಯರಿಗೆ ದೇವರ ಪರಿಚಯವನ್ನು ದೃಷ್ಟಾಂತದ ಮೂಲಕ ಮಾಡಲೆತ್ನಿಸುತ್ತಾರೆ. ಅಂತರ್ದೃಷ್ಟಿಯನ್ನು ತೆರೆದು ದೇವರನ್ನು ಸಾಕ್ಷಾತ್ತಾಗಿ ಕಂಡಾಗ ಮಾತ್ರ ದೇವರನ್ನು ನೈಜ ಪರಿಚಯವಾಗುವುದೇ ಹೊರತು ದೃಷ್ಟಾಂತಗಳಿಂದ, ದೊಡ್ಡ ಪುಸ್ತಕಗಳನ್ನು ಓದುವುದರಿಂದ ದೇವರ ನಿಜವಾದ ಪರಿಚಯ ಸಿಕ್ಕುವುದಿಲ್ಲ. ಪುಸ್ತಕಗಳು ಹಿಮವತ್ಪರ್ವತದ ವಿಸ್ತಾರವನ್ನು, ಔನ್ನತ್ಯವನ್ನು ವಿಸ್ತೃತವಾಗಿ ವರ್ಣಿಸಬಹುದು. ಆದರೆ ಅಲ್ಲಿ ಆಗುವ ಚಳಿಯ ಅನುಭವ ಪುಸ್ತಕಗಳಲ್ಲಿ ಸಿಗುವುದಿಲ್ಲ. ಹಿಮವತ್ಪರ್ವತದ ಚಳಿಯನ್ನು ಅಲ್ಲಿ ಹೋಗಿಯೇ ಅನುಭವಿಸಬೇಕು. ಪುಸ್ತಕಗಳಲ್ಲಿ ಸಿಗುವ ಮಾಹಿತಿಗಳೆಲ್ಲ ಸೆಕೆಂಡ್ ಹ್ಯಾಂಡ್ ಮಾಹಿತಿಗಳು. ದೇವರ ಬಗ್ಗೆ ಫಸ್ಟ್ ಹ್ಯಾಂಡ್ ಮಾಹಿತಿ ಬೇಕೆಂದರೆ
ಹೃದಯದ ಗುಹೆಯನ್ನೇ ಪ್ರವೇಶಿಸಬೇಕು. ಹಾಗಿಲ್ಲದಿದ್ದಾಗ ಸಮುದ್ರವನ್ನೆಂದೂ ನೋಡದ ಬಾವಿಯ ಕಪ್ಪೆ ಬಾವಿಯೊಳಗೇ ಕುಳಿತು ಸಮುದ್ರದ ಆಳ ವಿಸ್ತಾರವನ್ನು ಅಳೆದಂತೆ ಆಗಬಹುದು.

~*~

Facebook Comments Box