LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಧರ್ಮಜ್ಯೋತಿ 28: “ಗರುಡನ ಹೂಟ; ವಿಧಿಯ ಆಟ”

Author: ; Published On: ರವಿವಾರ, ಏಪ್ರಿಲ್ 14th, 2013;

Switch to language: ಕನ್ನಡ | English | हिंदी         Shortlink:

“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 28:ಗರುಡನ ಹೂಟ; ವಿಧಿಯ ಆಟ
ಪಕ್ಷಿರಾಜನಾದ ಗರುಡ ತನ್ನ ಪ್ರಜೆಗಳ ಯೋಗಕ್ಷೇಮ ವೀಕ್ಷಣೆಗಾಗಿ ಭೂಲೋಕದಲ್ಲಿ ಸಂಚಾರ ಹೊರಟ. ಆಗ ಕಣ್ಣಿಗೆ ಬಿದ್ದ ದೃಶ್ಯವೊಂದು ಅವನ ಮನಸ್ಸನ್ನು ತಟ್ಟಿತು. ಒಂದು ಮರದ ಮೇಲೆ ಕುಳಿತಿದ್ದ ಪುಟ್ಟ ಪಾರಿವಾಳದ ಮರಿಯೊಂದು ಪ್ರಾಣ ಭೀತಿಯಿಂದಲೋ ಎಂಬಂತೆ ಗಡಗಡನೆ ನಡುಗುತ್ತಿತ್ತು. ಗರುಡ ಕಳಕಳಿಯಿಂದ ಹಕ್ಕಿಮರಿಯನ್ನು ವಿಚಾರಿಸಿದ -“ಪುಟ್ಟ ಹಕ್ಕಿಯ ಮರಿಯೇ! ಯಾಕೆ ನಡುಗುತ್ತಿದ್ದೀಯ? ನಿನಗೆ ಯಾರಿಂದಲಾದರೂ ಭಯವುಂಟಾಯಿತೇ?” ತಮ್ಮೊಡೆಯನ ಆಗಮನದಿಂದ ಸ್ವಲ್ಪ ಧೈರ್ಯ ತಾಳಿದ ಹಕ್ಕಿಮರಿ ತನ್ನ ಭೀತಿಯ ಕಾರಣವನ್ನು ಬಿಚ್ಚಿಟ್ಟಿತು. “ಪ್ರಭುವೇ! ನಿನ್ನ ಆಗಮನಕ್ಕೆ ಸ್ವಲ್ಪ ಮುಂಚಿತವಾಗಿ ಯಮಧರ್ಮರಾಯ ಈ ಮಾರ್ಗವಾಗಿ ಸಾಗಿ ಹೋದ. ಈ ಮರದ ಎದುರು ಹೋಗುವಾಗ ನನ್ನನ್ನೊಮ್ಮೆ ಕ್ರೂರದೃಷ್ಟಿಯಿಂದ ವೀಕ್ಷಿಸಿದ. ಮೃತ್ಯುದೇವನ ಕೆಂಗಣ್ಣಿಗೆ ಗುರಿಯಾದವರು ಎಲ್ಲಿಯಾದರೂ ಬದುಕುವುದುಂಟೇ? ಆದ್ದರಿಂದ ಪ್ರಾಣಕ್ಕಾಗಿ ಭಯಗೊಂಡೆ. “ಪಕ್ಷಿರಾಜ ಆ ಪುಟ್ಟ ಹಕ್ಕಿಮರಿಯ ಮೇಲೆ ಕನಿಕರಗೊಂಡ. “ಭಯ ಪಡಬೇಡ, ನಾನು ನಿನ್ನನ್ನು ರಕ್ಷಿಸುತ್ತೇನೆ.” ಎಂದು ಹಕ್ಕಿಮರಿಗೆ ಅಭಯವನ್ನು ನೀಡಿದ. ಮರಿಯನ್ನು ಮರಣದಿಂದ ಪಾರು ಮಾಡುವುದು ಹೇಗೆಂದು ಚಿಂತಿಸಿ ಒಂದು ಉಪಾಯ ಹೂಡಿದ. ಹಕ್ಕಿಮರಿಯನ್ನು ರೆಕ್ಕೆಯೊಳಗೆ ಹುದುಗಿಸಿಕೊಂಡು ಪ್ರಚಂಡವಾದ ವೇಗದಲ್ಲಿ ಮೃತ್ಯುದೇವನ ವಕ್ರದೃಷ್ಟಿ ಬಿದ್ದ ಸ್ಥಳದಿಂದ ಬಹುದೂರ ಸಾಗಿದ. ಕೆಲವೇ ಕ್ಷಣಗಳಲ್ಲಿ ಸಹಸ್ರ ಯೋಜನಗಳ ದೂರವನ್ನು ಕ್ರಮಿಸಿ ಹಿಮವತ್ಪರ್ವತದ ಶಿಖರವೊಂದರ ಮೇಲೆ ಹಕ್ಕಿಮರಿಯನ್ನಿರಿಸಿದ. “ಆ ಸ್ಥಳದಿಂದ ಬಹುದೂರ ಬಂದಿರುವುದರಿಂದ ಭಯಪಡಲು ಕಾರಣವಿಲ್ಲ” ಎಂದು ಅದಕ್ಕೆ ಪುನಃ ಧೈರ್ಯ ಹೇಳಿ ಸಂಚಾರವನ್ನು ಮುಂದುವರೆಸಿದ.
ತನ್ನ ಕಾರ್ಯಕ್ಕಾಗಿ ಹೆಮ್ಮೆಗೊಂಡ ಗರುಡನಿಗೆ ಯಮನನ್ನೊಮ್ಮೆ ಭೇಟಿಯಾಗಬೇಕೆನ್ನಿಸಿತು. ನೇರವಾಗಿ ಯಮಲೋಕಕ್ಕೆ ತೆರಳಿದ. ಗರುಡನನ್ನು ಸ್ವಾಗತಿಸಿದ ಯಮನಿಗೆ ಏನನ್ನೋ ಸಾಧಿಸಿದಂತೆ ಹೆಮ್ಮೆಯಲ್ಲಿದ್ದ ಅವನ ನಿಲುವನ್ನು ನೋಡಿ ಆಶ್ಚರ್ಯವೆನಿಸಿತು. ಪಕ್ಷಿರಾಜನಲ್ಲಿ ಬಂದ ಕಾರಣವನ್ನು ವಿಚಾರಿಸಿದ. ಗರುಡ ಹಮ್ಮಿನಿಂದಲೇ ತಾನು ಬಂದ ಕಾರಣವನ್ನು ಯಮಧರ್ಮನಿಗೆ ತಿಳಿಯಪಡಿಸಿದ – “ಇಂದು ನೀನು ನನ್ನ ಪ್ರಜೆಯಾದ ಪಾರಿವಾಳದ ಮರಿಯೊಂದನ್ನು ಕ್ರೂರದೃಷ್ಟಿಯಿಂದ ವೀಕ್ಷಿಸಿದೆಯಂತೆ. ಅದನ್ನು ನಾನು ಸಾವಿರ ಯೋಜನಗಳಾಚೆಯ ಹಿಮವತ್ಪರ್ವತದ ಶಿಖರವೊಂದರಲ್ಲಿ ಸುರಕ್ಷಿತವಾಗಿರಿಸಿ ಬಂದಿದ್ದೇನೆ. ಆ ಪಕ್ಷಿಯನ್ನು ನೀನು ಹಾಗೆ ವೀಕ್ಷಿಸಲು ಕಾರಣವೇನಿರಬಹುದೆಂದು ತಿಳಿಯುವ ಕುತೂಹಲದಿಂದ ಬಂದಿದ್ದೇನೆ.”ಯಮಧರ್ಮ ಉತ್ತರಿಸಿದ -“ಓ!ಹಾಗೇನು? ಹಾಗಿದ್ದರೆ ನನ್ನ ಜಿಜ್ಞಾಸೆಗೆ ಈಗ ಉತ್ತರ ಸಿಕ್ಕಂತಾಯಿತು. ಆ ಹಕ್ಕಿಮರಿಗೆ ಅದರ ಕರ್ಮಕ್ಕನುಗುಣವಾಗಿ ಕೆಲವೇ ಕ್ಷಣಗಳಲ್ಲಿ ಹಿಮವತ್ಪರ್ವತದ ಶಿಖರದಲ್ಲಿ ಸಾವು ಬರಬೇಕಾಗಿತ್ತು. ಇನ್ನೂ ಇಲ್ಲಿಯೇ ಇರುವ ಈ ಪಕ್ಷಿ ಮರಿ ಕೆಲವೇ ಕ್ಷಣಗಳಲ್ಲಿ ಹಿಮವತ್ಪರ್ವತವನ್ನು ಸೇರಿ ಸಾಯುವುದು ಹೇಗೆಂಬ ಜಿಜ್ಞಾಸೆಯಿಂದ ಒಮ್ಮೆ ಅದನ್ನು ನೋಡಿದೆ. ನೀನು ಕೆಲವೇ ಕ್ಷಣಗಳಲ್ಲಿ ಹಿಮವತ್ಪರ್ವತದಲ್ಲಿರಿಸಿ ಬಂದಿದ್ದರಿಂದ ನನ್ನ ಸಮಸ್ಯೆಗೆ ಪರಿಹಾರ ಸಿಕ್ಕಿತು.” ಅದನ್ನು ಕೇಳಿದ ಗರುಡ ಅಪ್ರತಿಭನಾದ. ಆ ಹಕ್ಕಿಯನ್ನು ರಕ್ಷಿಸಹೋಗಿ ತಾನೇ ಸಾವಿನ ಬಾಯಿಗೆ ಕೊಟ್ಟಂತಾಯಿತೆಂದು ಪರಿತಪಿಸಿದ. ಮೃತ್ಯುವಿನ ಹಿಂದೆ ಯಾರ ಹೂಟವೂ ನಡೆಯದೆಂಬ ಚಿರಸತ್ಯ ಅಂದು ಅವನಿಗೆ ಅರ್ಥವಾಯಿತು.

ವಿಧಿ ಕೊಲ್ಲಬಯಸಿದರೆ ಅವನನ್ನು ಬದುಕಿಸಲು ಯಾರಿಂದಲೂ ಸಾಧ್ಯವಿಲ್ಲ. ವಿಧಿ ಬದುಕಗೊಟ್ಟರೆ ಅಂತಹವನನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ.

ಸುಭಾಷಿತಕಾರನೊಬ್ಬನು ಹೇಳುತ್ತಾನೆ-

ದ್ವೀಪಾದನ್ಯಸ್ಯಾದಪಿ ಮಧ್ಯಾದಪಿ ಜಲನಿಧೇರ್ದಿ ಶೋsಪ್ಯಂತಾತ್ |
ಆನೀಯ ಝಟಿತಿ ಘಟಯತಿ ವಿಧಿರನಭಿಮುಖಮಭಿಮುಖೀಭೂತಃ ||

ವಿಧಿಗೆ ಯಾರನ್ನಾದರೂ ಯಾವುದಾದರೂ ಸಂದರ್ಭ ಸಂಗತಿಯೊಡನೆ ಜೋಡಿಸಬೇಕೆನ್ನಿಸಿದರೆ, ಆ ವ್ಯಕ್ತಿ ಬೇಕಿದ್ದರೆ ದೂರದ ದ್ವೀಪದಲ್ಲಿರಲಿ, ಸಮುದ್ರ ಮಧ್ಯದಲ್ಲಿರಲಿ, ದಿಗಂತಗಳಾಚೆಯಿರಲಿ, ಕ್ಷಣಮಾತ್ರದಲ್ಲಿ ಕರೆತಂದು ಜೋಡಿಸಿ ಆ ಕಾರ್ಯವನ್ನು ನಡೆಸುತ್ತಾನೆ. ವಿಧಿಯಾಟದಲ್ಲಿ ಕಾಯುವವನೂ ಗರುಡನಂತೆ ಕೊಲ್ಲುವ ಉಪಕರಣವಾಗಬಹುದು. ವಿಧಿ ದಯೆ ತೋರಿದರೆ ಕೊಲ್ಲುವವನೂ ಗರುಡನಂತೆ ಕಾಯುವ ಸಾಧನವಾಗಬಹುದು. ಕಾಲ- ದೇಶ – ವಸ್ತುಗಳು ವಿಧಿಯ ಆಟಕ್ಕೆ ಅಡ್ಡಿಯಾಗಲಾರವು.

ಪುರುಷ ಪ್ರಯತ್ನವನ್ನು ವಿಧಿ ಮೆಚ್ಚುವಂತೆ ಮಾಡುತ್ತಾ ವಿಧಿಯ ಬಲ ಹೆಚ್ಚಾದಾಗ ಅದನ್ನು ತಲೆಬಾಗಿ ಗೌರವದಿಂದ ಸ್ವೀಕರಿಸುವುದೇ ಮಾನವ ಜೀವಿತದ ಪರಮಾದರ್ಶ.

~*~

5 Responses to ಧರ್ಮಜ್ಯೋತಿ 28: “ಗರುಡನ ಹೂಟ; ವಿಧಿಯ ಆಟ”

 1. geethamanjappa

  ಹರೇ ರಾಮ,
  ಪುರ್ಣ ಸತ್ಯ.
  ನಿನ್ನೆಯಸ್ಟೆ ಇನ್ದೊನೆಶ್ಯದ ಬಾಲಿ ದ್ವೀಪದಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರೂ ಬದುಕುಳಿದಿರುವುದೇ ಸಾಕ್ಷಿ.

  [Reply]

 2. ಶೋಭಾ

  ಹರೇರಾಮ… ವಿಧಿ ಮೆಚ್ಹುವ೦ತೆ ನಮ್ಮನ್ನು ಮುನ್ನಡೆಸು ದೇವಾ..

  [Reply]

 3. Archana

  Hare Rama

  [Reply]

 4. Ramamurthy

  Hare Raama

  [Reply]

 5. Sandesha Talakalakoppa

  Harinapi Harenapi Bramhenapi Tridashairapi| Lalatalikhitam Rekham Parimarjum na Shakyate||

  Adaru, Guru Drusti(Guru Krupe) Srusti Niyamavanu Meridudu..

  Hare Raama

  [Reply]

Leave a Reply

Highslide for Wordpress Plugin