“ಕನ್ನಡಪ್ರಭ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಶ್ರೀಗುರುಗಳ ಲೇಖನಾಮೃತ “ಧರ್ಮಜ್ಯೋತಿ” ಇದೀಗ “ಹರೇರಾಮ.ಇನ್” ನಲ್ಲಿ, ಪ್ರತಿ ಭಾನುವಾರದಂದು. ಪ್ರಕಟಣೆ ಕೃಪೆ & Copyright: ಶ್ರೀ ಭಾರತೀ ಪ್ರಕಾಶನ, ಗಿರಿನಗರ – ಬೆಂಗಳೂರು.

~

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿಯಿಂದಲೇ ಬೆಳಗುವುದು ಜ್ಯೋತಿ
ಗುರುವಿನಿಂದಲೇ ಬೆಳಗುವುದು ಧರ್ಮಜ್ಯೋತಿ

ಜ್ಯೋತಿ 32: “ಆರಾಧನೆ”
ಶಿಷ್ಯರು ಗುರುಗಳ ಆರಾಧನೆಯನ್ನು ಮಾಡುತ್ತಾರೆ. ಮಕ್ಕಳು ತಂದೆಯ ಶ್ರಾದ್ಧವನ್ನು ಮಾಡುತ್ತಾರೆ. ಇವೆರಡರಲ್ಲಿ ವ್ಯತ್ಯಾಸವಿದೆ. ತಂದೆಯ ಜೀವ ಉದ್ಧಾರವಾಗಲಿ ಎಂದು ಶ್ರಾದ್ಧವನ್ನು ಮಾಡುತ್ತಾರೆ. ಆದರೆ ಗುರುಗಳ-ಮಹಾತ್ಮರ ಆರಾಧನೆ ಅವರ ಉದ್ಧಾರಕ್ಕೋಸ್ಕರವಲ್ಲ, ಶಿಷ್ಯರೆಲ್ಲರ ಉದ್ಧಾರಕ್ಕಾಗಿ ಮಹಾತ್ಮರ ಆರಾಧನೆ. ಹಾಗಿರುವುದರಿಂದಲೇ ಅದನ್ನು ‘ಆರಾಧನೆ’ ಎಂದು ಕರೆದಿರುವುದು. ‘ರಾಧ-ಸಂಸಿದ್ಧೌ’ ಎಂಬ ಧಾತುವಿನಿಂದ ಆರಾಧನಾ ಶಬ್ಧವು ನಿಷ್ಪನ್ನವಾಗಿದೆ. ಯಾರು ಸಂಸದ್ಧಿಯನ್ನು ಪಡೆದಿರುತ್ತಾರೋ ಅವರಿಗೆ ಮಾಡಬೇಕಾದ್ದು ಆರಾಧನೆ. ಅಂತಹ ಮಹಾತ್ಮರ ಆರಾಧನೆ – ಉಪಾಸನೆಯಿಂದಾಗಿ ಅವರ ಅನುಗ್ರಹ ಶಿಷ್ಯಕೋಟಿಗೆಲ್ಲ ಸಿಗಲಿ, ಶಿಷ್ಯರ ಜೀವನದಲ್ಲಿ ಭಾಗ್ಯೋದಯವಾಗಲಿ ಎಂಬ ಸದಾಶಯವನ್ನು ಹೊತ್ತಿದೆ ಈ ಆರಾಧನಾ ಮಹೋತ್ಸವ.
ದಿವ್ಯಪುರುಷನು ನೀಡಿದ ಪಾಯಸದಿಂದ ಜನ್ಮ ತಾಳಿದ ಶ್ರೀರಾಮ. ಭೂಮಿಯಿಂದ ಉದ್ಭವಿಸಿದಳು ಸೀತೆ, ಹೀಗೆ ದಿವಿಭುವಿಗಳ ಸಂಗಮ ಶ್ರೀರಾಮ ಸೀತೆಯರ ಸೇರುವಿಕೆ. ಅವತಾರದ ಅಂತ್ಯದಲ್ಲಿ ದಿವಿಯಿಂದ ಬಂದ ಶ್ರೀರಾಮ ದಿವಿಗೆ ಸೇರಿದರೆ ಭುವಿಯಿಂದ ಬಂದ ಸೀತೆ ಆಯೋಧ್ಯೆಯ ರಾಜಾಸ್ಥಾನದಲ್ಲಿ ಲಕ್ಷ ಲಕ್ಷ ಜನರ ಸಮ್ಮುಖದಲ್ಲಿ ಹದಿನಾಲ್ಕು ಲೋಕಕ್ಕೂ ತನ್ನ ಪಾವಿತ್ರ್ಯವನ್ನು ಪ್ರಕಟಪಡಿಸುತ್ತಾ ಪುನಃ ಭೂಮಿಯಲ್ಲಿಯೇ ಸೇರಿಹೋದಳು. ಇಲ್ಲಿ ಭಾವಿಸಬೇಕಾದ ಅಂಶ ’ಯಾವುದು ಎಲ್ಲಿಂದ ಬಂತೋ ಅದು ಅಲ್ಲಿಗೇ ಹೋಗಿ ಸೇರಬೇಕು.’ ದೇಹಸೃಷ್ಟಿಗೆ ಕಾರಣವಾಗಿರುವ ಪಂಚಭೂತಗಳು ಮರಣಾನಂತರದಲ್ಲಿ ಮಹಾಭೂತಗಳಲ್ಲಿ ಸೇರಿಕೊಳ್ಳುತ್ತವೆ. ಹಾಗೆ ಚೇತನವೂ ಕೂಡಾ ಮಹಾಚೇತನದಲ್ಲಿ ಒಂದಾಗಬೇಕು. ಆಗ ಅದು ಪೂರ್ಣ. ಹಾಗಾದಾಗ ಅದಕ್ಕೆ ಆರಾಧನೆ. ಅಂದರೆ

ಚೇತನವು ಚೇತನದಲ್ಲಿ ಲೀನವಾದಾಗ ಮಾಡುವುದು ಆರಾಧನೆ.

~*~

Facebook Comments