#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
01-09-2018:

ದೇಹವೇ ರಥ, ಜೀವನವೇ ಯಾತ್ರೆ, ಇಂದ್ರಿಯಗಳೇ ಕುದುರೆ, ಜೀವನು ರಥಿಕ, ಸಾರಥಿ ಯಾರು ಎಂದರೆ ನಮ್ಮ ಬುದ್ಧಿ, ನಮ್ಮ ಮನಸ್ಸು ಆಗಬಾರದು, ಆ ಪಾಥ೯ಸಾರಥಿಯೇ ಸಾರಥಿಯಾದರೆ ಮಾತ್ರವೇ ಪ್ರಯಾಣ ಸುರಕ್ಷಿತ, ಗುರಿ ತಲುಪುವುದು ನಿಶ್ಚಿತ. ಆ ಮಹಾಸಾರಥಿಗೆ, ಪಾಥ೯ಸಾರಥಿಗೆ ಪ್ರಣಾಮಗಳನ್ನು ಸಲ್ಲಿಸೋಣ.

ಋತುಪಣ೯ನ ಸಾರಥಿ ಬಾಹುಕ ತನ್ನ ಒಡೆಯನ ಮುಂದೆ ಒಂದು ಹಗಲಿನಲ್ಲಿ ಅಯೋಧ್ಯೆಯಿಂದ ಕುಂಡಿನಪುರಕ್ಕೆ ಅವನನನ್ನು ಕರೆದುಕೊಂಡು ಹೋಗುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಅದೇನೂ ಸುಲಭದ ದಾರಿಯಾಗಿರಲಿಲ್ಲ. ಕಾಡುಮೇಡು ಬೆಟ್ಟಗುಡ್ಡ, ನದೀ ಕೊಳ್ಳಗಳ ಮಧ್ಯದ ಅಂದಾಜು ಇಂದಿನ ಸಾವಿರದ ಎರಡು ನೂರು ಕಿಲೋಮೀಟರ್‌ಗಳದ್ದಾಗಿತ್ತು. ಹೀಗಿರುವ ದಾರಿಯ ಪ್ರಯಾಣವನ್ನು ಬಾಹುಕ, ಸವಾಲಾಗಿ ಸ್ವೀಕರಿಸುತ್ತಾನೆ.

ತತ್ತ್ವಭಾಗವತಮ್

ನಳ ಸತ್ಯಕ್ಕಾಗಿ ಎಲ್ಲವನ್ನು ಕಳೆದುಕೊಂಡಿದ್ದಾನೆ ಆದರೆ ಸತ್ಯವನ್ನಲ್ಲ. ಹಾಗಾಗಿ ಒಂದೇ ದಿನದಲ್ಲಿ ಪ್ರಯಾಣ ಮಾಡಿಸಬಲ್ಲೆ, ನಾಳೆ ಬೆಳಿಗ್ಗೆ ಅಲ್ಲಿಯೇ ಇರಬಹುದು ಎಂದು ಅವನು ಮಾಡಿದ ಪ್ರತಿಜ್ಞೆ ಅಥ೯ಪೂರ್ಣದ್ದಾಗಿರುತ್ತೆ. ಅದು ಸುಳ್ಳಾಗಲಾರದು. ಕೇಳಿ ದೊರೆ ಸಂತಸಪಟ್ಟ. ಅವನಿಗೆ ಬಾಹುಕನನ್ನು ಒಪ್ಪಿಸುವುದೇ ಪ್ರಮುಖವಾಗಿತ್ತು. ಏಕೆಂದರೆ ಒಪ್ಪಿದ ಯಾವುದೇ ಕೆಲಸವನ್ನೂ ಈವರೆಗೆ ಅವನು ಪೂರೈಸದೇ ಇರಲಿಲ್ಲ, ಅವನು ಅಂಥವನು ಅಂತ ರಾಜನಿಗೂ ಗೊತ್ತು. ಬೇರಾವುದೇ ಸಾರಥಿಗಳು ಒಪ್ಪದಿದ್ದಾಗ ಬಾಹುಕ ಈಗ ಒಪ್ಪಿದ್ದ. ದೊರೆ ಸುಪ್ರಸನ್ನನಾಗಿ ಅವನಿಗೆ ಹೇಳಿದ. ನಿನ್ನ ಅಪೇಕ್ಷೆ ಏನು ತಿಳಿಸು ಮಾಡಿಕೊಡುತ್ತೇನೆ! ಅಂತ.

ಯಾವಾಗಲೂ ದೊರೆ ಸುಪ್ರಸನ್ನನಾದಾಗ ಹೀಗಾಗುವುದು ಸಹಜ. ಅಲ್ಲದೇ ಈಗ ಸಾರಥಿಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಾಗಿದೆ ಅವನಿಗೆ, ಆದರೆ ಬಾಹುಕ ಅದನ್ನು ಕೇಳದವನಂತೆ ಆ ಕಡೆ ತಿರುಗಿಯೂ ನೋಡದೆ ಹೊರಟು ಹೋದ. ರಾಜನ ಕಡೆ ಗಮನವನ್ನೇ ಕೊಡಲಿಲ್ಲ. ಬದಲಾಗಿ ಹೇಳಿದ, ನನಗೆ ಹೊರಡುವ ರಥವನ್ನು ಸಿದ್ಧಗೊಳಿಸುವ ಕೆಲಸ ಇದೆ ಅಂತ ಹೊರಟ. ಎರಡು ಕಾರಣ ಇರಬಹುದು ಇದಕ್ಕೆ. ಒಂದಾನೊಂದು ಕಾಲದಲ್ಲಿ ಚಕ್ರವತಿ೯ ಆಗಿದ್ದವನು, ಅವನೂ ನೂರಾರು ಜನಕ್ಕೆ ಹೀಗೆ ಕೇಳಿದ್ದಿದೆ. ಅಂತಹವನಿಗೆ ನಿನ್ನ ಅಪೇಕ್ಷೆ ಈಡೇರಿಸುತ್ತೇನೆ ಹೇಳು ಎಂದರೆ ಏನನಿಸಬಹುದು? ಜೊತೆಗೇ ಈಗ ಅವನಿಗೆ ಬೇಕಿರುವುದು ಕಳೆದುಕೊಂಡ ಸತೀಸುತರು. ಋತುಪಣ೯ ಅದನ್ನು ಕೊಡಲು ಸಾಧ್ಯವೇ. ಒಂದು ವೇಳೆ ಕೊಟ್ಟರೂ ಸ್ವಾಭಿಮಾನಿಯಾದ ನಳ ಅದನ್ನು ಸ್ವೀಕರಿಸಬಲ್ಲನೇ ?
ರಾಮನೂ ಹೀಗೆಯೇ, ವನವಾಸಕ್ಕೆ ಹೊರಟಿದ್ದವನನ್ನು ಕಾಡಿನಲ್ಲಿ ಬರಮಾಡಿಕೊಂಡ ಗುಹ ತನ್ನ ಮನೆಯ ಆತಿಥ್ಯವನ್ನು ಸ್ವೀಕರಿಸಲು ಹೇಳುತ್ತಾನೆ. ಆದರೆ ರಾಮ ಒಪ್ಪುವುದಿಲ್ಲ. ನಾನು ಕೊಡಬಲ್ಲೆನೇ ಹೊರತು ತೆಗೆದುಕೊಳ್ಳಲಾರೆ, ಎಂದು ಹೇಳಿ ನೀರು ಕುಡಿದು ಮಲಗುತ್ತಾನೆ. ರಾಮ ಭಿಕ್ಷೆಯಾಗಿ ಏನನ್ನೂ ಸ್ವೀಕರಿಸಲಾರ, ಸುಗ್ರೀವನಿಂದ ಸಹಾಯ ಪಡೆಯುವಾಗಲೂ ಅಷ್ಟೇ ಪ್ರತ್ಯುಪಕಾರ ಮಾಡಿ, ಅವನಿಗೆ ಸತಿ, ರಾಜ್ಯವನ್ನು ಕೊಡಿಸಿದ ನಂತರವೇ ಸಹಾಯ ಅಪೇಕ್ಷಿಸುತ್ತಾನೆ. ಅದೂ ಮೈತ್ರಿಯ ಒಪ್ಪಂದದಂತೆ. ಹಾಗೆಯೇ ವೀರಕ್ಷತ್ರಿಯನಾದವನು ಬೇಡಲಾರ.
ಇನ್ನೊಂದೆಡೆ ಸದ್ಯ ಈಗ ಅವನ ಸ್ಥಿತಿ ಹೇಗಿದೆಯೆಂದರೆ ಪ್ರೀತಿಯ ಪತ್ನಿಗೆ ಇನ್ನೊಂದು ಮದುವೆ ಎನ್ನುವ ಸುದ್ದಿ ಬಂದಿದೆ. ಈ ಹಂತದಲ್ಲಿ ಅವನಿಗೆ ಯಾವುದು ರುಚಿಸೀತು? ಅವನಿಗೆ ಮೊದಲು ಅವಳ ಮನಸ್ಥಿತಿಯನ್ನು ಖಾತ್ರಿ ಮಾಡಿಕೊಳ್ಳಬೇಕಿದೆ. ಹಾಗಾಗಿ ಹೋಗಲು ರಥದ ವ್ಯವಸ್ಥೆ ಬಗ್ಗೆ ಚಿಂತಿಸುತ್ತಿದ್ದಾನೆ. ಅವನು ನೇರ ಅಶ್ವಶಾಲೆಗೆ ಹೋಗಿ ಯಾವುದು ಯೋಗ್ಯ ಅಶ್ವವೆಂದು ಪರೀಕ್ಷಿಸುತ್ತಿದ್ದಾನೆ.

ಆಯ್ಕೆ ಅನ್ನುವುದು ಜೀವನದಲ್ಲಿ ತುಂಬಾ ಮುಖ್ಯ. ಅದಾ ಇದಾ ಅಂತ ಸಂಶಯ ಪ್ರಾರಂಭವಾಗಿ ತುಂಬಾ ತೊಂದರೆ ಕೊಡುತ್ತದೆ. ಕವಲುದಾರಿ ಬಂದಾಗ ಸರಿಯಾದ ದಾರಿ ಆಯ್ಕೆ ಮಾಡಿಕೊಂಡರೆ ಮಾತ್ರ ಗುರಿ ತಲುಪಲು ಸಾಧ್ಯ. ಸುತ್ತು ಬಳಸಿನ ದಾರಿಯಾದರೆ ಗುರಿ ತಲುಪುವುದು ನಿಧಾನವಾಗುತ್ತದೆ. ತಪ್ಪು ದಾರಿಯಾದರೆ ತಲುಪುವುದೇ ಇಲ್ಲ! ಅದಕ್ಕೆ ಬುದ್ಧಿ ಎಚ್ಚರವಾಗಿರಬೇಕು, ಅದನ್ನೇ ಹಿರಿಯರು ಧಿಯೋ ಯೋ ನಃ ಪ್ರಚೋದಯಾತ್ | ಅಂದಿದ್ದಾರೆ. ಯಾವುದೇ ಕೆಲಸ ಮಾಡುವುದಕ್ಕೂ ನಮಗೆ ಬುದ್ಧಿ ಬೇಕು, ದೇವರ ಕೃಪೆ ಬೇಕು. ಅದಕ್ಕೂ ಪೂವ೯ಪುಣ್ಯ ಬೇಕು. ದೇವರು ನಾವು ದಾರಿ ತಪ್ಪುತ್ತಿದ್ದರೆ ಕುರಿಮಂದೆ ಕಾಯುವಂತೆ ಕೋಲು ಹಿಡಿದು ಬರಲಾರ. ನಮ್ಮ ಬದ್ಧಿಯನ್ನು ಎಚ್ಚರಿಸುತ್ತಾನೆ ಅಷ್ಟೇ, ಆ ಸಮಯಕ್ಕೆ ಸರಿಯಾಗಿ ಪ್ರೇರಣೆ ಕೊಡುತ್ತಾನೆ. ಹಾಗೆಯೇ ಒಂದು ರಾಜ್ಯ ನಡೆಸಬೇಕಾದರೆ ಸರಿಯಾದ ವ್ಯಕ್ತಿ ಸರಿಯಾದ ಜಾಗದಲ್ಲಿ ಇರಬೇಕು. ಇದು ರಾಜನೀತಿ ಮ. ಯಾರು ಯಾವ ಸ್ಥಾನದಲ್ಲಿ ಸಲ್ಲುವರೋ ಅವರನ್ನು ಅಲ್ಲಿ ತಂದುಕೊಳ್ಳಬೇಕು. ಚದುರಂಗ ಆಟದಲ್ಲಿ ಕೂಡಾ ಹಾಗೇ ಆನೆ, ಕುದುರೆ ಕಾಲಾಳುಗಳು ಎಲ್ಲೆಲ್ಲಿ ಯಾವ ಜಾಗದಲ್ಲಿ ಇರಬೇಕೋ, ಅಲ್ಲಲ್ಲಿ ಇರಬೇಕು. ಆಗ ಮಾತ್ರ ಚದುರಂಗದಲ್ಲಿ ಗೆಲ್ಲಲು ಸಾಧ್ಯ. ಸ್ವಲ್ಪ ಬದಲಾದರೂ ಶತ್ರು ಒಳನುಗ್ಗುತ್ತಾನೆ. ಘೋರ ವಿನಾಶ ಖಚಿತ. ಹಾಗೇ ಈ ಆಯ್ಕೆಗಳು, ಯಾರು ಯಾವಾಗ ಎಲ್ಲಿ ಸರಿಯೋ ಅವರನ್ನು ಆಯ್ಕೆ ಮಾಡಬೇಕು. ಈಗ ನಳನ ಮುಂದೆ ಇರುವ ಸವಾಲು ಅಸಂಭವವನ್ನು ಸಂಭವ ಮಾಡಬೇಕು. ಅದಕ್ಕಾಗಿ ಯೋಗ್ಯವಾದ ತಕ್ಕುದಾದ ಕುದುರೆಗಳು ಬೇಕು. ಅವನು ಯಾವ ಕುದುರೆಯನ್ನು ಬೇಕಾದರೂ ಮಾತನಾಡಿಸಬಲ್ಲ, ಅವನು ಅಶ್ವಹೃದಯಜ್ಞ. ಅವನು ಕುದುರೆಯ ಜೊತೆ ಪ್ರೀತಿಸಂವಾದವನ್ನು ಮಾಡಬಲ್ಲ. ಅದರ ಅಂತಃಸತ್ವವನ್ನು ಗ್ರಹಿಸಬಲ್ಲ ಹಾಗೂ ಅದನ್ನು ಪ್ರಕಟಪಡಿಸಬಲ್ಲ. ಇದು ಅಷ್ಟೇ ಅಲ್ಲ, ಅದರಲ್ಲಿಯೂ ಶ್ರೇಷ್ಠಾತಿಶ್ರೇಷ್ಠ ಕುದುರೆಗಳು ಅವನಿಗೆ ಬೇಕಾಗಿದೆ. ಹಾಗಾಗಿ ಅಂಥವನ್ನು ಹುಡುಕುತ್ತಿದ್ದಾನೆ. ಹಿಂದೆ ಒಂದು ದ್ಯೂತದಲ್ಲಿಯೇ ಅವನು ಎಲ್ಲವನ್ನೂ ಕಳೆದುಕೊಂಡದ್ದು ಆದರೆ ಈಗ ಎಲ್ಲವನ್ನೂ ಮರಳಿ ಪಡೆಯಬೇಕಾಗಿದೆ. ಹಾಗಾಗಿ ಎಚ್ಚರಿಕೆಯಿಂದ ಕುದುರೆಗಳನ್ನು ನಿಧಾನವಾಗಿ ಆರಿಸುತ್ತಾ ಇದಾನೆ. ಆದರೆ ಋತುಪಣ೯ನಿಗೆ ಅಸಹನೆ! ಇಷ್ಟು ಸಮಯ ಯಾಕೆ ಬೇಕು ರಥ ಹೊರಡಿಸಲು ಎಂದು. ಅವನು ಅವಸರ ಮಾಡುತ್ತಿದ್ದಾನೆ, ಆದರೆ ಬಾಹುಕ ಅವನೆಡೆಗೆ ತಿರುಗಿಯೂ ನೋಡಲಿಲ್ಲ. ಏಕಾಗ್ರತೆಯಲ್ಲಿ ರಾಜನ ಮಾತನ್ನು ಕಿವಿಗೇ ಹಾಕಿಕೊಳ್ಳದೇ ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಾ ಇದಾನೆ. ಕೊನೆಗೆ ನಾಲ್ಕು ಕುದುರೆಗಳನ್ನು ಆರಿಸಿದ. ಅವು ಹೇಗಿದ್ದವೆಂದರೆ 6 ತಿಂಗಳಿನಿಂದ ಹೊಟ್ಟೆಗೆ ಏನೂ ತಿನ್ನದಂತಿದ್ದವು, ಬಡಕಲಾಗಿ, ಸೊರಗಿಹೋಗಿದ್ದ ಕುದುರೆಗಳನ್ನು ಸ್ವೀಕಾರ ಮಾಡಿದ್ದ ಅವನು. ಆದರೆ ಅದು ಮೇಲ್ನೋಟದ ವಿವರ ಅಷ್ಟೇ.

ನಿಜವಾಗಿ ಅವುಗಳು ಸಮಥ೯ವಾದವು, ಯಾವುದೇ ಹಳ್ಳಕೊಳ್ಳ ಕಾಡುಮೇಡುಗಳ ದಾರಿಯಲ್ಲಿ ಸಮಥ೯ವಾಗಿ ಸಂಚರಿಸಬಲ್ಲವು. ಅವು ತೇಜೋಬಲದಿಂದ ಕೂಡಿದ್ದವು, ಆತ್ಮಬಲ ಎಲ್ಲಕ್ಕಿಂತ ಹೆಚ್ಚು ಅದರಿಂದ ತುಂಬಿದ್ದವು.
ಮನುಷ್ಯರಲ್ಲಿಯೂ ಹೀಗೇ, ಕೇವಲ ಸ್ಥೂಲಕಾಯನಾಗಿರುವಂಥವನು ಮಾತ್ರವೇ ಉಪಯುಕ್ತ ಅಂತ ಅಲ್ಲ, ಕೇವಲ ಚಮ೯ ಚಂದವಿದ್ದರೆ ಮಾತ್ರಾ ಆಗಲಿಲ್ಲ. ತೇಜೋಬಲವಿದೆಯೇ ಅಲ್ಲಿ ಎಂಬುದು ಮುಖ್ಯ. ಬೆಳಕು ಬೆಳಗಿದೆಯೇ ಎಂಬುದು ಮುಖ್ಯ. ಆ ಬಲ, ಆತ್ಮಬಲ ಇದೆ ಅಂತ ಆದರೆ ಅದು ಎಲ್ಲದಕ್ಕಿಂತ ಮುಖ್ಯ. ಅಂಥವರು ಮಾತ್ರಾ ಕಾಯ೯ಸಾಧನೆ ಮಾಡುತ್ತಾರೆ. ಮನುಷ್ಯರಾಗಲೀ, ಪ್ರಾಣಿಗಳಾಗಲೀ ಎಲ್ಲರಲ್ಲಿಯೂ ಅದೇ ಮಖ್ಯ. ನಾವು ಗೋವುಗಳನ್ನು ಪೂಜಿಸುತ್ತೇವೆ ಯಾಕೆಂದರೆ ಅವುಗಳಲ್ಲಿ ತೇಜೋಬಲ ಇದೆ ಅಂತ. ಹಾಗೆ ಬಾಹುಕ ಆರಿಸಿರುವ ಕುದುರೆಗಳು ತೇಜೋ ಬಲದಿಂದ ಕೂಡಿವೆ, ಉತ್ತಮ ಕುಲದಲ್ಲಿ ಹುಟ್ಟಿವೆ. ಕುಲವೂ ಮುಖ್ಯ ನಾವು ಸುಮ್ಮನೆ ಕುಲ, ಜಾತಿ ಅಂದರೆ ನಿಮ್ಮಲ್ಲಿ ಕೆಲವರಿಗೆ ಬೇಸರ ಆಗಬಹುದು. ಬೇಡ ಬಿಡಿ, ಜೀನ್ಸ್ ಅಂತ ಹೇಳಬಹುದು. ವಂಶವಾಹಿಗಳು… ಅಂದರೆ ನಮ್ಮ ಏಳು ತಲೆಮಾರಿನ ಹಿಂದೆ ಯಾರಾದರೂ ಇಸ್ಪೀಟು ಆಡುತ್ತಾ ಇದ್ದರೆ, ಆ ಗುಣ ನಮಗೂ ಬರಬಹುದಂತೆ. ಆಗ ಅವರಲ್ಲಿದ್ದ ಖಾಯಿಲೆ ನಮಗೂ ಬರಬಹುದಂತೆ, ಆಗ ಅವರು ಯಾವುದರಲ್ಲಿ ಆಸಕ್ತರಾಗಿದ್ದರೋ ಈಗ ನಮ್ಮಲ್ಲೂ ಅದು ಬರಬಹುದಂತೆ. ಮನುಷ್ಯನ ಜೀನ್ ಗಳು ಅವನ ವ್ಯಕ್ತಿತ್ವವನ್ನು ಹೇಳುತ್ತವಂತೆ. ನಾವೇನು ಅನ್ನುವುದು ನಮ್ಮ ಪೂವ೯ಜರನ್ನು ಅವಲಂಬಿಸಿರುತ್ತದಂತೆ. ಹಾಗಾಗಿ ಒಳ್ಳೆ ಕುಲವನ್ನು ನೋಡಬೇಕು ಅಂತ. ಈಗಿನವರು ಕುಲ ಅಂತ ಹೇಳುವುದು ಸರಿಯಾಗಿಲ್ಲ ಅಂತ ಜೀನ್ಸ್ ಅಂತಾರೆ. ಕುಲ ಅಂದರೆ ಅದೇ… ಕುಲಕ್ಕೆ ಒಂದು ಅಥ೯ ಇದೆ. ಒಂದು ಸಂಗತಿಯನ್ನು ತಲೆಮಾರುಗಳಲ್ಲಿ ಆಚರಿಸುತ್ತಾ ಬಂದರೆ ಅದು ನಂತರ ಜೀನ್ ನಲ್ಲಿ ಸಹಜವಾಗಿ ಬಂದಿರುತ್ತೆ ಅಂತ. ಹಾಗಾಗಿ ಇಲ್ಲಿ ಕುದುರೆಗಳು ಸಿಂಧೂ ದೇಶದಲ್ಲಿ ಹುಟ್ಟಿದವುಗಳಾಗಿರಬೇಕು ಅಂತ. ಹಾಗೆಯೇ ಶೀಲ, ಕುದುರೆಗೆ ಏನು ಶೀಲ ಅಂದರೆ ಸ್ವಭಾವ ಅಂತ. ಅವು ಸಹಜವಾಗಿ ಓಡಬೇಕು, ಹಿಂದೆ ಮುಂದೆ ಚಂಚಲತೆಯಿಂದ ತಿರುಗಬಾರದು, ಗುರಿಯತ್ತಲೇ ನಡೆಯಬೇಕು ಒಡೆಯನ ಅಪ್ಪಣೆಗೆ ಕಿವಿಗೊಡಬೇಕು. ಇದೆಲ್ಲವನ್ನೂ ಅವನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ಋತುಪಣ೯ನಿಗೆ ಇದಾವುದೂ ತಿಳಿಯಲ್ಲ ಹೇ! ಯಾವುದಾದರೂ ನಾಲ್ಕು ಕುದುರೆಗಳನ್ನು ಹೂಡು ಹೊರಡು ಅನ್ನುತ್ತಿದ್ದಾನೆ. ಬಾಹುಕನ ಚಿಂತೆ ಅದಲ್ಲ, ಯಾವುದೋ ನಾಲ್ಕು ಕುದುರೆ ಹೂಡಿದರೆ ಇವತ್ತು ಹೋಗಲು ಸಾಧ್ಯವಿಲ್ಲ ಮಧ್ಯ ದಾರಿಯಲ್ಲಿ ಉಳಿಯಬೇಕಾಗುತ್ತದೆ ಅಂತ ಚಿಂತೆ.
ಹೀನ ಲಕ್ಷಣಗಳಿಂದ ಕೂಡಿರದ ಕುದುರೆ ಆಗಬೇಕು ಅದು. ಬಾಲದಿಂದ ತುಟಿಯವರೆಗೆ ಯಾವುದಾದರೂ ಬೇಡದ ಲಕ್ಷಣ ಇದೆಯೇ ಅಂತ ನೋಡಬೇಕು. ದೊಡ್ಡ ಕೆನ್ನೆಗಳು, ಹತ್ತು ಸುಳಿಗಳಿಂದ ಕೂಡಿರಬೇಕು, ವಾಯು ವೇಗದಿಂದ ಚಲಿಸುವಂತಿರಬೇಕು. ಆದರೆ ದೇಹದ ಅಂಗಗಳು ಬಡಕಲಾಗಿರಬೇಕು. ಅವೇ ಭಾರ ಆದರೆ ಆ ಭಾರ ಹೊತ್ತುಕೊಂಡು ಹೋಗೋದು ಹೇಗೆ?

ರಥಕ್ಕೆ ಕಟ್ಟಿದ ದುಬ೯ಲ ಕುದುರೆಗಳನ್ನು ಕಂಡ ರಾಜ ಸಿಡಿಮಿಡಿಗೊಂಡ. ಕೋಪದಿಂದ ತಪ್ಪು ಮಾತಾಡಿದ. “ಏನು ಮಾಡುತ್ತಿದ್ದೀಯೇ ಬಾಹುಕ, ನೀನು ನನಗೆ ಮೋಸ ಮಾಡಲು ಹೊರಟಿದ್ದೀಯಾ? ವಂಚನೆ ಮಾಡಬಾರದು ನೀನು, ಈ ಕೃಶ ಕುದುರೆಗಳು ರಥವನ್ನಾದರೂ ಎಳೆಯುವ ಸಾಮಥ್ಯ೯ ಇರುವವೇ? ಇವುಗಳನ್ನು ನಂಬಿಕೊಂಡು ಅಷ್ಟು ದೂರದ ಪ್ರಯಾಣವನ್ನು ಚಿಂತಿಸಬಹುದೇ? ಅಂದ. ಪಾಪ, ನಳ ಈವರೆಗೆ ಯಾರನ್ನೂ ವಂಚಿಸಿದವನಲ್ಲ, ಅವನ ಜೀವನದಲ್ಲಿ ಅವನಿಗೇ ಬೇಕಾದಷ್ಟು ವಂಚನೆ ಆಗಿದೆ. ಬಾಹುಕ ಹೇಳುತ್ತಾನೆ. ರಾಜ, ಹಣೆಯಲ್ಲಿ ಎರಡು ನೆತ್ತಿಯಲ್ಲಿ ಎರಡು, ಪಾರ್ಶ್ವಗಳಲ್ಲಿ ಎರಡು, ಉಪ ಪಾರ್ಶ್ವಗಳಲ್ಲಿ ಎರಡು ಹಾಗೂ ಎದೆಯಲ್ಲಿ ಎರಡು ಹೀಗೆ ಹತ್ತು ಸುಳಿಗಳು ಇರಬೇಕು. ಹೀಗಿರುವುದೇ ಶ್ರೇಷ್ಠ, ಈ ರೀತಿ ಇರುವ ಬೇರಾವುದೇ ಕುದುರೆ ತೋರಿಸಿ ಅದನ್ನೇ ಕಟ್ಟುತ್ತೇನೆ. ಈಗಿರುವ ಕುದುರೆಗಳಿಂದ ನಿನ್ನನ್ನು ನಾಳೆ ವಿದಭ೯ಕ್ಕೆ ತಲುಪಿಸುವ ಭಾರ ನನ್ನದು, ಇಲ್ಲದಿದ್ದಲ್ಲಿ ಪ್ರಭು ಚಿತ್ತ’ ಕೊಟ್ಟದ್ದನ್ನು ತೆಗೆದುಕೊಂಡು ಹೋಗೋಣ. ಅಂತ ನಿಂತುಕೊಂಡ.

ಗೊತ್ತಿರುವವರು ಕೆಲಸ ಮಾಡುತ್ತಾ ಇರುವಾಗ ಗೊತ್ತಿಲ್ಲದವರು ತಲೆಹಾಕಬಾರದು. ಸುಮ್ಮನೇ ನೋಡುತ್ತಾ ಇರಬೇಕು. ಭಾಗ್ಯವ್ಯತ್ಯಯದಿಂದಾಗಿ ಅವನು ಇಂದು ಸಾರಥಿಯಾಗಿರಬಹುದು. ಆದರೆ ಅವನ ವ್ಯಕ್ತಿತ್ವ ರಾಜನದ್ದೇ, ತೂಕದ ವ್ಯಕ್ತಿತ್ವ ಅವನದ್ದು, ಋತುಪಣ೯ನಿಗಿಂತಲೂ ಅನೇಕ ಪಟ್ಟು ಹೆಚ್ಚಿನ ವ್ಯಕ್ತಿತ್ವ, ರಾಜನಿಗೆ ದೃಷ್ಟಿ ಕೊಟ್ಟು ಹೀಗೆ ಹೇಳಿದಾಗ, ರಾಜನೇ ಅಧೀರನಾದ, ಹೆಜ್ಜೆ ಹಿಂದಿಟ್ಟ, ಹೇಳಿದ, ಬಾಹುಕ ನೀನೇ ಅಶ್ವಹೃದಯತಜ್ಞ ಅದನ್ನೆಲ್ಲಾ ಬಲ್ಲವನು, ನೀನೇ ನಡೆಸುವವನು, ನಿನ್ನದೇ ಆಯ್ಕೆ, ನಾಳೆ ನನ್ನನ್ನು ವಿದಭ೯ಕ್ಕೆ ಮುಟ್ಟಿಸಿದರೆ ಸರಿ, ಅಂತ.
ನಾವು ಪ್ರಭು ಅನ್ನುವ ಕಾರಣಕ್ಕೆ ಎಲ್ಲಕ್ಕೂ ಕೈ ಹಾಕಬಾರದು, ಬಿಟ್ಟುಕೊಡಬೇಕು, ಸ್ವಾತಂತ್ರ್ಯ ಕೊಡಬೇಕು, ಅವಕಾಶ ಕೊಡದಿದ್ದರೆ ಯಾವ ಕೆಲಸವೂ ಆಗುವುದಿಲ್ಲ. ಅಧಿಕಾರ ವಿಕೇಂದ್ರಿಕರಣ ಅಂತ ಹೇಳಿದಂತೆ, ಅದು ಉಪಯುಕ್ತ. ಇಲ್ಲದಿದ್ದರೆ ಯಾರೂ ಕೆಲಸ ಮಾಡಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣ ಆಗುತ್ತೆ.

ಬಾಹುಕನಿಗೆ ಜವಾಬ್ದಾರಿ ಕೊಟ್ಟ ನಂತರ ಅವನು ಅದೇ ಕುದುರೆಗಳನ್ನು ರಥಕ್ಕೆ ಕಟ್ಟಿದ. ರಥ ನೇರವಾದ ಒಡನೆಯೇ ಋತುಪಣ೯ ಆತುರದಿಂದ ನೆಗೆದು ರಥದಲ್ಲಿ ಕುಳಿತ, ತಕ್ಷಣ ಕುದುರೆಗಳು ಮುಗ್ಗರಿಸಿ ನೆಲಕ್ಕೆ ಕುಸಿದವು. ಅವು ಉತ್ತಮಾಶ್ವಗಳಾಗಿದ್ದರೂ ಹಾಗೆ ಮಾಡಿದವು. ಆಗ ಬಾಹುಕ ಹೋಗಿ ಆ ಕುದುರೆಗಳನ್ನು ಮುದ್ದಿಸಿ, ಸಂತೈಸಿದ. ಆಗಿದ್ದು ಏನೆಂದರೆ ಕುದುರೆಗಳಿಗೆ ರಥ ಏರಿದ್ದು ತಮ್ಮ ಯಜಮಾನನಲ್ಲ ಅಂತ ತಿಳಿಯಿತು, ಹಾಗಾಗಿ ಅವನು ಕುಳಿತದ್ದು ಸರಿ ಹೋಗಲಿಲ್ಲ ಎನ್ನುವ ಕಾರಣಕ್ಕೆ ಪ್ರತಿರೋಧ ವ್ಯಕ್ತಿ ಮಾಡಿದವು ಅಷ್ಟೇ. ಯಜಮಾನನೆಂದರೆ, ನಳ ಅವುಗಳ ಹೃದಯಕ್ಕೆ ಹತ್ತಿರದವನಾಗಿದ್ದ, ಆತ್ಮೀಯನಾಗಿದ್ದ. ಅವನನ್ನು ಬಿಟ್ಟು ಬೇರೆಯವರಿಗೆ ನಾವು ಸೇವೆ ಮಾಡಲ್ಲ ಅಂತ ಗಲಾಟೆ ಮಾಡಿದಾಗ ಇವನು ಕಿವಿಯಲ್ಲಿ ಹೋಗಿ ನಾನೇ ಬಂದಿದ್ದೇನೆ ಎನ್ನುವಂತೆ ಹೇಳಿದಾಗ ಒಪ್ಪಿದವು. ನಂತರ ಬಾಹುಕ ವಾರ್ಷ್ಣೇಯನನ್ನ ಕರೆದು ಪಕ್ಕ ಕೂರಿಸಿಕೊಂಡ, ದೂರ ಪ್ರಯಾಣಕ್ಕೆ ಒಬ್ಬ ಜೊತೆಗಾರ ಇರಲಿ ಅಂತ. ಇಂದಿನ ಭಾಷೆಯಲ್ಲಿ ಕೋ-ಪೈಲಟ್ ಅಂತ ಹೇಳಬಹುದೇನೋ. ಹಗ್ಗವನ್ನು ಕೈಯಲ್ಲಿ ಹಿಡಿದು ಜೀವಮಾನದ ಪ್ರಯಾಣಕ್ಕೆ ಸಿದ್ಧನಾದ. ಅದು ಜೀವಮಾನದ ವೇಗ ಕೂಡಾ. ಇದರಲ್ಲಿ ಆರಂಭಕ್ಷಣ ಅತೀ ಮುಖ್ಯ ಆ ಸಮಯದಲ್ಲಿ, ಮನಸ್ಸನ್ನು ಸಿದ್ಧಪಡಿಸಿಕೊಳ್ಳಬೇಕು, ಅಲ್ಲಿನ ನಿಶ್ಚಯ ಅತೀ ಮುಖ್ಯ. ಅದು ಪರಮವೇಗದ ಸಂಕಲ್ಪ. ಸಮುದ್ರೋಲ್ಲಂಘನದ ಸಮಯದಲ್ಲಿ ಹನುಮಂತ ಕೂಡಾ ಹೀಗೆಯೇ ಸಿದ್ದನಾಗುತ್ತಾನೆ.

ಒಂದು ಗಾಳಿ ಬೀಸಿತು ನೋಡಿ. ಧೂಳೆಬ್ಬಿತು, ಸುತ್ತ ನೆರೆದವರಿಗೆ ಧೂಳುಮಾತ್ರಾ ಕಾಣಿಸಿತು, ರಥ ಯಾವ ದಿಕ್ಕಿಗೆ ಹೋಯಿತೋ ತಿಳಿಯಲಿಲ್ಲ. ಅದು ನೆಲದಲ್ಲಿ ಹೋಯಿತೋ? ಆಗಸದಲ್ಲಿ ಹೋಯಿತೋ? ಭೂಮಿಯೊಳಗೆ ಹೋಯಿತೋ? ಯಾರಿಗೂ ತಿಳಿಯಲಿಲ್ಲ. ಆಗಸಕ್ಕೆ ನೆಗೆಯಿತು ಅಂತ ಹೇಳಿರುವುದರಲ್ಲಿ ಉತ್ಪ್ರೇಕ್ಷೆ ಇಲ್ಲ, ಋತುಪಣ೯ನಿಗೆ ತಲೆ ತಿರುಗಿತು, ಏನಾಗುತ್ತಿದೆ ಅಂತ ತಿಳಿಯಲಿಲ್ಲ. ಅವನೇನು ಕಡಿಮೆ ಜನ ಅಲ್ಲ. ವೀರಾಧಿವೀರ, ಸೂಯ೯ವಂಶೀಯ, ಕುದುರೆಗಳನ್ನು ಏರಿ ತಿಳಿದಿರುವವನು, ಬಾಲ್ಯದಿಂದಲೂ ಕುದುರೆಗಳ ಒಡನಾಟ, ಸವಾರಿ ಮಾಡಿರುವವನು ಆದರೆ ಈ ವೇಗವನ್ನು ಹುಟ್ಟಿದ ಮೇಲೆ ಅವನು ಕಂಡಿರಲಿಲ್ಲ. ಈಗ ಕುಶಲ ಸಾರಥಿ , ಕುಶಲ ಅಶ್ವಹೃದಯಜ್ಞ ದೊರಕಿದ್ದಾನೆ. ಪಾತಾಳವೋ ಆಕಾಶವೋ! ಎಲ್ಲಿದ್ದೇನಿ ಅಂತ ತಿಳಿಯದೇ ಕ್ಷಣಕಾಲ ದಿಗ್ಮೂಢನಾಗಿ ಕಣ್ಮುಚ್ಚಿದ ಋತುಪಣ೯.

ಪರಮ ವಿಸ್ಮಯ ದೊರೆಗೆ, ಋತುಪಣ೯ ಈಗ ಸ್ವಲ್ಪ ಸಾವರಿಸಿಕೊಂಡಿದ್ದಾನೆ. ಬಾಹುಕನ ವೇಗಕ್ಕೆ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಾ ಇದಾನೆ. ಮುಂದೆ ಅಶ್ವಗಳ ವೇಗವನ್ನು ಕಂಡು ಆಶ್ಚರ್ಯ ರಾಜನಿಗೆ. ಬಾಹುಕನೆಡೆ ನೋಡುತ್ತಾನೆ, ಅವನ ಅಶ್ವಜ್ಞಾನ ಎಷ್ಟು ಮಹತ್ವದ್ದು ಅಂತ. ಅದನ್ನು ಭಾವಿಸಿ ಪರಮಾನಂದ ಹೊಂದಿದ. ಪ್ರಪಂಚದಲ್ಲಿ ಇಂತಹ ಸಾರಥಿ ಬೇರಾರಿಗೂ ಇಲ್ಲ, ಎಂದು ಯೋಚಿಸಿ. ಆಮೇಲೆ ಅವನ ಏಕಾಗ್ರತೆಯನ್ನು ಕಂಡು ಬೆರಗಾದ. ಆಗಿನ ಕಾಲದ ಸಾರಥಿಯಾದರೂ, ಈಗಿನ ಕಾಲದವನಾದರೂ ಸಹ ಈ ರೀತಿಯ ಗುರುತರ ಸಂದಭ೯ಗಳಲ್ಲಿ ಏಕಾಗ್ರತೆ ಬೇಕು. ಹಾಡು ಕೇಳುತ್ತಾ ಓಡಿಸುವುದಲ್ಲ.
ನಳನ ಮನದಲ್ಲಿ ಬೇರೆಯೇ ಓಡುತ್ತಿದೆ ಬಹಳ ಕಾಲದ ವಿರಹದ ನಂತರ ಮತ್ತೆ ಹೆಂಡತಿಯನ್ನು ನೋಡುತ್ತಾನೆ ಎನ್ನುವ ಸಾಧ್ಯತೆಯ ಬಗ್ಗೆಯೇ ಅವನಲ್ಲಿ ಅಂತಮ೯ಥನ ಆಗುತ್ತಿದೆ. ಅಲ್ಲಿ ಏಕಾಗ್ರತೆ, ಉತ್ಸಾಹ ಇದೆ. ಹೀಗಿರುವಾಗ ಸಹಜವಾಗಿ ಮನುಷ್ಯ ದಣಿಯುತ್ತಾನೆ, ಆದರೆ ಇವನಲ್ಲಿ ದಣಿವು ಕಾಣುತ್ತಿಲ್ಲ. ಹಾಗೂ ಕುದುರೆಗಳ ನಿಯಂತ್ರಣದಲ್ಲಿ ಇವನು ಅತ್ಯಂತ ಕುಶಲಿ. ಇದನ್ನೆಲ್ಲ ಕಂಡ ರಾಜ ಹೆಮ್ಮೆಪಟ್ಟ ತನ್ನ ಸಾರಥಿ ಎಂತಹ ಕುಶಲಿ. ಪ್ರಪಂಚದಲ್ಲಿ ತನ್ನೊಬ್ಬನಿಗೆ ಮಾತ್ರವೇ ಈ ಅದೃಷ್ಟ ಅಂತ.

ಅಲ್ಲೇ ಪಕ್ಕದಲ್ಲಿ ಇನ್ನೊಬ್ಬ ಸಾಕ್ಷಿ ಇದಾನೆ ಈ ಪ್ರಯಾಣಕ್ಕೆ. ಅವನು ನಳನ ನಾಡಿಮಿಡಿತ ಬಲ್ಲ ವಾರ್ಷ್ಣೇಯ. ಸಾರಥ್ಯದಲ್ಲಿ ಅವನು ತಿಳಿದವನೇ ಆದರೂ ಅವನ ಕಣ್ಣು ತಿರುಗಿದೆಯಂತೆ. ನಳನ ವೇಗ ಅವನಿಗೆ ಪರಿಚಿತ ಈ ವೇಗ ಅದನ್ನೂ ಮೀರಿಸಿದ್ದು. ಅವನ ಕಿವಿಗೆ ರಥದ ಘೋಷ ಬಿತ್ತು. ಅದು ನಳನ ರೀತಿಯದ್ದೇ ಇವನು ನಳನೇ ಅಂತ ಅವನಿಗೆ ಸಂಶಯ! ರಥದ ವೇಗ, ಕೌಶಲ ಹೌದು, ಆದರೆ ರೂಪ? ತನ್ನ ದೊರೆ ತಲೆಕೂದಲಿನಿಂದ ಹಿಡಿದು ಬೆರಳ ತುದಿಯವರೆಗೂ ಸುಂದರ, ಸ್ಫುರದ್ರೂಪಿ, ಸುಲಕ್ಷಣಗಳಿಂದ ಕೂಡಿರುವವನು, ಹಾಗಿದ್ದರೆ ಇವನ್ಯಾರು ದೇವರಾಜನ ಸಾರಥಿ ಮಾತಲಿಯೇ? ಅಥವಾ ಅಶ್ವವಿದ್ಯಾ ಪ್ರವತ೯ಕನಾದ ಶಾಲಿಹೋತ್ರನೇ (ಶಾಲಿ ಹೋತ್ರನು ಹಯಘೋಷರ ಪುತ್ರ, ಅಶ್ವವಿದ್ಯಾ ಪ್ರವರ್ತಕನಾದ್ದರಿಂದ ಸಾರಥಿಗಳಿಗೆ ಪೂಜ್ಯ )
ಆದರೆ ಆ ಘೋಷ ತನಗೆ ಚಿರಪರಿಚಿತ, ಅದು ನಳನದ್ದೇ. ಇವನೆಲ್ಲಿಯಾದರೂ ನಳನಿಂದ ಕಲಿತವನೇ? ಆದರೆ ನನಗೆ ತಿಳಿಯದಂತೆ ಕಲಿಯಲು ಹೇಗೆ ಸಾಧ್ಯ? ಈ ಕೌಶಲ ನಳನದ್ದೇ, ಸಾದೃಶ್ಯವಿದೆ, ಅಲ್ಲದೇ ವಯಸ್ಸು ಇಬ್ಬರದ್ದೂ ಹೆಚ್ಚು ಕಡಿಮೆ ಸಮಾನ. ಇವನಿಗೆ ಅಶ್ವವಿದ್ಯೆ ಒಲಿದು ಬಂದಿರಬಹುದೇ? ಮತ್ತೆ ಒಬ್ಬನೇ ಇರಬಹುದೇ ಅನಿಸತ್ತೆ. ಛೇ! ಅವನೆಲ್ಲಿ, ಇವನೆಲ್ಲಿ ? ನಳನಿಗೆ ಶಿಷ್ಯರಿರುವುದು ಅಸಾಧ್ಯ ಏಕೆಂದರೆ ಅವನು ಕಾಡುಪಾಲಾಗುವವರೆಗೂ ನಾನು ಅವನ ಜೊತೆಯಲ್ಲಿದ್ದೆ. ಹಾಗಿದ್ದರೆ ಅವನೇ ಹೌದಾ? ಆದರೆ ಈ ರೂಪ.? ಮಹಾತ್ಮರು ಯಾವುದೋ ಕಾರ್ಯಸಾಧನೆಗಾಗಿ ಮಾರುವೇಷವನ್ನು ತಾಳುವುದು ಉಂಟು. ರೂಪ ಹೀಗಿದೆ ಅನ್ನುವ ಕಾರಣಕ್ಕೆ ಚಿಂತಿಸಬಾರದು, ಇವನು ನಳನೇ ಸಂಶಯವಿಲ್ಲ. ಸಕಲ ಗುಣಯುಕ್ತನಾದ ನನ್ನ ಸ್ವಾಮಿಯೇ ಈ ರೂಪದಲ್ಲಿ ಇರುವುದು ನಿಶ್ಚಯ ಅಂತ ಭಾವಿಸಿದ. ಅವನ ಕಣ್ಣೆದುರು ನಳನ ರೂಪ ಮೂಡಿಬಂತು. ನಳನನ್ನು ಎಲ್ಲೆಡೆಯೂ ಪುಣ್ಯಶ್ಲೋಕನೆಂದೇ ಕರೆದಿದೆ. ಅವನನ್ನು ನೆನೆದರೂ ಸಾಕು ಪಾಪ ಕಳೆಯುತ್ತದೆ.

ವಾರ್ಷ್ಣೇಯನಿಗೆ ಮಾತ್ರಾ ಗೊತ್ತಾದರೆ ಸಾಕೇ… ದಮಯಂತಿಗೆ ತಿಳಿಯಬೇಡವೇ. ಇಡೀ ಜಗತ್ತಿಗೆ ತಿಳಿಯಬೇಡವೇ? ಇನ್ನೂ ನಳನೊಳಗಿರುವ ಕಲಿಯನ್ನು ನಳ ಕಾಣಬೇಕಾಗಿದೆ. ಅದಕ್ಕೆ ಪುಣ್ಯ ಸಂಪಾದನೆ ಮಾಡಬೇಕಾಗಿದೆ. ನಾಳೆಯಿಂದ ಒಂದು ವಾರ ಕೃಷ್ಣಕಥೆಯನ್ನು ಅನುಸಂಧಾನ ಮಾಡಿದರೆ ಅದು ಉಪಯುಕ್ತ ಆಗಬಹುದು. ಇನ್ನೂ ನಳ ದಮಯಂತಿಯರ ಮುಖಾಮುಖಿ ಆಗಲಿಕ್ಕಿದೆ, ನಳ -ಕಲಿಯರ ಮುಖಾಮುಖಿ, ನಳ – ಪುಷ್ಕರರ ಮುಖಾಮುಖಿ ಹೀಗೆ ಮೂರೂ ಬೇರೆ ಬೇರೆ ರೀತಿಯಲ್ಲಿ ಆಗಲಿಕ್ಕಿದೆ ಇದನ್ನು ಯಾರು ಕೇಳುತ್ತಾರೋ? ಯಾರು ಒಳಗಣ್ಣು ತೆರೆದು ನೋಡುತ್ತಾರೋ? ಅವರ ಮನಸ್ಸು ಕಲಿಯಿಂದ ದೂರವಾಗುತ್ತೆ. ಅವರ ಮನ ಕೃತಯುಗವಾಗುತ್ತೆ. ಅವರ ಮನೆ ಕೃತಯುಗವಾಗುತ್ತೆ, ಅವರ ಸುತ್ತಲ ವಾತಾವರಣ ಕೃತಯುಗವಾಗುತ್ತೆ. ನಿಮಗೂ ಹಾಗೆ ಆಗಬೇಕೆಂದಿದ್ದರೆ ಬನ್ನಿ
ಕರ್ಕೋಟಕಸ್ಯ ನಾಗಸ್ಯ ದಮಯಂತ್ಯಾಃ ನಲಸ್ಯ ಚ | ಋತೂಪರ್ಣಸ್ಯ ರಾಜರ್ಷೇಃ ಕೀತ೯ನಂ ಕಲಿನಾಶನಂ ||

ಇವರುಗಳ ಚರಿತೆಯನ್ನು ಅನುಸಂಧಾನ ಮಾಡೋಣ. ಕಲಿಯನ್ನು ನಿಗ್ರಹಿಸೋಣ.

ಚಿತ್ರ:ಅಂತರ್ಜಾಲದಿಂದ

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments Box