#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
09-09-2018:

ಮಹಾವಿದ್ಯೆಗಳ ಮೇಲಾಟ

ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನ ಚ ದೃಶ್ಯತೇ ಅಂತ ವಾಕ್ಯವಿದೆ. ಕಮಲದೊಳಗೆ ಕಮಲ ಹುಟ್ಟುವುದನ್ನು ಕೇಳಬಹುದೇ ಹೊರತು, ನೋಡಲು ಸಾಧ್ಯವಿಲ್ಲ ಅನ್ನುವ ಅರ್ಥದಲ್ಲಿ. ಆದರೆ ಅದನ್ನು ನೋಡಲೇಬೇಕಾದರೆ ಇಲ್ಲಿ ಬರಬೇಕು, ಇಲ್ಲೇ ನೋಡಬೇಕು. ಇಲ್ಲಿ ರಾಮನ ಸಾನ್ನಿಧ್ಯದಲ್ಲಿ ಕೃಷ್ಣನ ಕಥೆ. ಇಂತಹ ರಾಮಕೃಷ್ಣರ ಅದ್ವೈತಕ್ಕೆ ಪ್ರಣಾಮಗಳು.

ನಾರಾಯಣನ ಕಥೆಯಿಂದ ಇಂದು ಮತ್ತೆ ನರನ ಕಥೆಗೆ ಮರಳುತ್ತಿದ್ದೇವೆ. ನಳ-ನರ ಎರಡೂ ಒಂದೇ, ಸಂಸ್ಕೃತ ಸಾಹಿತ್ಯದಲ್ಲಿ ಳ ಹಾಗೂ ರ ಎರಡಕ್ಕೂ ಭೇದವಿಲ್ಲದಿರುವುದರಿಂದ. ಅಲ್ಲದೇ ಕೃಷ್ಣಕಥೆಯು ದೇವರು ಮನುಷ್ಯನಾಗಿ ಹುಟ್ಟಿ ಅನುಭವಿಸಿದ ಕಥೆಯಾದರೆ, ನಳಚರಿತ್ರೆಯು ನಮ್ಮ ಮಧ್ಯೆಯೇ ಹುಟ್ಟಿದ ಸಾಧಾರಣ ಮನುಷ್ಯನೊಬ್ಬ ತನ್ನ ಯೋಗ್ಯತೆಯಿಂದಾಗಿ ಅತಿಮಾನವ, ದೇವಮಾನವನಾಗಿ ಬೆಳೆದ ಕಥೆ.

ತತ್ತ್ವಭಾಗವತಮ್

ಹಿಂದಿನ ದಿನದ ಕಥೆ ಎಲ್ಲಿಗೆ ನಿಂತಿತ್ತು ಅಂದರೆ ಓಟದಲ್ಲಿ ನಿಂತಿತ್ತು, ಅದೂ ಎಂತಹ ವೇಗದ ಓಟವೆಂದರೆ ಯಾರೂ ಓಡಿರದಂತಹ ಓಟ. ಸಾಮಾನ್ಯವಾಗಿ ಓಡುವುದು ಸುಲಭ, ಆದರೆ ಓಡಿಸುವುದು ಸುಲಭವಲ್ಲ. ಕೆಲಸವನ್ನು ತಾವೇ ಮಾಡುವುದು ಸುಲಭ, ಆದರೆ ಇನ್ನೊಬ್ಬರಿಂದ ಕೆಲಸವನ್ನು ಮಾಡಿಸುವುದು ಸುಲಭವಲ್ಲ. ತಾವು ಹಾಡುವುದು ಸುಲಭ, ಆದರೆ ಇತರರಿಂದ ಹಾಡಿಸುವುದು ಸುಲಭವಲ್ಲ. ಅವರಲ್ಲಿ ಮುಖ್ಯವಾಗಿ ಆ ಯೋಗ್ಯತೆ ಇರಬೇಕು, ಸ್ವರದ ಜ್ಞಾನ ಇರಬೇಕು, ರಾಗಗಳ ಕುರಿತು ತಿಳಿದಿರಬೇಕು. ಹೀಗೆಲ್ಲಾ ಇದ್ದವರನ್ನು ತರಬೇತು ಮಾಡಬಹುದಷ್ಟೇ, ಅದರಲ್ಲೂ ತುಂಬಾ ಇತಿಮಿತಿಗಳಿರುತ್ತದೆ. ಹಾಗೆಯೇ ಕುದುರೆಗಳನ್ನು ಓಡಿಸುವುದೂ ಕಷ್ಟ. ಆದರೆ ಅದರಲ್ಲೇ ನಳನ ಕೌಶಲ್ಯವಿರುವುದು. ಅವನಿಗೆ ಅಶ್ವಹೃದಯ ಗೊತ್ತು, ಅವುಗಳ ಮಾತನ್ನು, ಹೃದಯದ ಭಾವಗಳನ್ನು ಅವನು ಅರ್ಥಮಾಡಿಕೊಳ್ಳಬಲ್ಲ, ಅವುಗಳೊಳಗೆ ಅಡಗಿರುವ ಚೈತನ್ಯವನ್ನು ಜಾಗೃತಮಾಡಬಲ್ಲ, ಹೀಗಾಗಿ ಋತುಪರ್ಣನ ರಥ ವಾಯುವೇಗದಲ್ಲಿ ಓಡುತ್ತಿದೆ.

ಎಲ್ಲಿಯ ಅಯೋಧ್ಯೆ, ಎಲ್ಲಿಯ ಕುಂಡಿನಪುರ! ಇವತ್ತಿನ ಲೆಕ್ಕದಂತೆ ಸಾವಿರದಿನ್ನೂರು ಕಿಲೋಮೀಟರ್‌ಗಳಷ್ಟು ದೂರದ ಪ್ರಯಾಣ. ಅಷ್ಟು ದೂರವನ್ನು ಆ ಕಾಲದಲ್ಲಿ ಒಂದೇ ದಿನದಲ್ಲಿ ತಲುಪುವ ಸಾಹಸದ ಪ್ರಯತ್ನ. ವೇಗದಲ್ಲಿ ಓಡುತ್ತಿದೆ ರಥ, ಬೆಟ್ಟಗುಡ್ಡಗಳು, ನದೀಪರ್ವತಗಳು ವೇಗವಾಗಿ ಹಿಂದೋಡುತ್ತಿವೆ, ರಥದಲ್ಲಿರುವವರಿಗೆ ಗಾಳಿಯಲ್ಲಿ ತೇಲುತ್ತಿರುವಂತಹ ಅನುಭವ. ಆ ವೇಗ ಎಷ್ಟಿತ್ತು ಅನ್ನುವುದನ್ನು ಪ್ರಮಾಣೀಕರಿಸುವಂತಹ ಒಂದು ಘಟನೆ ಅಲ್ಲಿ ನಡೆಯುತ್ತದೆ. ಅದೇನೆಂದರೆ ಆ ವೇಗಕ್ಕೆ ಸಿಕ್ಕು ಋತುಪರ್ಣನ ಅಂಗವಸ್ತ್ರ ಹಾರಿ ರಥದಿಂದ ಕೆಳಗೆ ಬೀಳುತ್ತದೆ. ಅವನು ಸಹಜವಾಗಿ ಬಾಹುಕನನ್ನು ಕುರಿತು ನನ್ನ ಉತ್ತರೀಯ ಹಾರಿ ಕೆಳಗೆ ಬಿದ್ದಿದೆ, ಒಂದು ಕ್ಷಣ ನಿಲ್ಲಿಸು ವಾರ್ಷ್ಣೇಯ ಕೆಳಗಿಳಿದು ಹೋಗಿ ತರುತ್ತಾನೆ, ಅಂಗವಸ್ತ್ರವಿಲ್ಲದೇ ಸಭೆಗೆ ಹೋಗುವುದು ಲಕ್ಷಣವಲ್ಲ ಎನ್ನುತ್ತಾನೆ. ಅದಕ್ಕೆ ನಳ ಹೇಳುತ್ತಾನೆ, ರಥ ನಿಲ್ಲಿಸಲು ಸಾಧ್ಯವೇ ಇಲ್ಲ. ರಥ ಎಷ್ಟು ವೇಗದಲ್ಲಿದೆಯೆಂದರೆ ಒಂದುವೇಳೆ ರಥ ನಿಲ್ಲಿಸಿ ವಾರ್ಷ್ಣೇಯ ಅಂಗವಸ್ತ್ರ ತರಲು ಹೊರಟರೆ ಅವನು ಹಿಂದಿರುಗಿ ಬರಲು ಗಂಟೆಗಳೇ ಬೇಕಾಗುತ್ತವೆ, ಒಂದು ಕ್ಷಣದಲ್ಲಿ ಅಷ್ಟು ದೂರ ಕ್ರಮಿಸಿದ್ದೇವೆ ನಾವು ಎಂದು. ಈಗ ಇಷ್ಟು ಮಾತಾಡುವಷ್ಟರಲ್ಲಿ ನಾವು ಎಷ್ಟೋ ಯೋಜನಗಳಷ್ಟು ದೂರ ನಾವು ಪ್ರಯಾಣಮಾಡಿದ್ದೇವೆ ಎಂದು. ಅದನ್ನು ವಿವರಿಸಬೇಕಾದರೆ ಇದು ಕೇವಲ ಇಂದಿನ ಕಾಲದ ವೇಗದ ಕಾರಿಗಿಂತ ಹೆಚ್ಚು. ಅದನ್ನು ವಿಮಾನದ ವೇಗವೆಂದು ಹೇಳಬಹುದೇನೋ.

ಆದರೆ ಈ ಮಾತಿನಿಂದ ಋತುಪರ್ಣನಿಗೆ ಸಂತೋಷವಾಗಲಿಲ್ಲ, ಮೊದಲಲ್ಲಿ ಹೊರಟಾಗ ಆ ವೇಗ ಕಂಡು ಸಂತೋಷವಾಗಿತ್ತು. ಅದು ಒಂದೇ ದಿನದಲ್ಲಿ ವಿದರ್ಭವನ್ನು ತಲುಪಿಬಿಡುತ್ತೇನೆನ್ನುವ ಉತ್ಸಾಹದಿಂದ ಆಗಿತ್ತು, ತಾನು ಸವಾಲನ್ನು ಗೆದ್ದುಬಿಡುತ್ತೇನೆನ್ನುವ ಉತ್ಸಾಹವಿತ್ತು ಆಗ, ಈಗ ಅದೇ ಅವನ ಸ್ವಾಭಿಮಾನಕ್ಕೆ ಪೆಟ್ಟುಕೊಡುತ್ತಿದೆ. ಹಿಂದಿನ ಘಟನೆ ನೆನಪು ಮಾಡಿಕೊಳ್ಳಿ, ಋತುಪರ್ಣ ಹೊರಡುವ ಆತುರ ತೋರಿದಾಗ ಬಾಹುಕ ನಿಧಾನವಾಗಿ ಕುದುರೆಗಳನ್ನು ಹುಡುಕುತ್ತಿದ್ದ, ನಂತರದಲ್ಲಿಯೂ ತಾನು ಸಿಟ್ಟಿನಲ್ಲಿ ಅವನು ಹುಡುಕಿದ ಬಡಕಲು ಕುದುರೆಗಳನ್ನು ಅಪಹಾಸ್ಯ ಮಾಡಿದಾಗ ಬಾಹುಕ ತನ್ನನ್ನೇ ತುಚ್ಛೀಕರಿಸಿದ, ತನ್ನ ಆಯ್ಕೆ ಸರಿಯಾಗಿರದಿದ್ದರೆ ನೀವೇ ಆಯ್ಕೆ ಮಾಡಿಕೊಡಿ, ಇಲ್ಲದಿದ್ದರೆ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದಲ್ಲ ಅಂತ ಹೇಳಿದ. ನಂತರವೂ ಋತುಪರ್ಣ ರಥ ಹತ್ತಲು ಹೋದಾಗ ಆ ಕುದುರೆಗಳು ವಿರೋಧಿಸಿದ್ದವು. ನಂತರ ಬಾಹುಕ ಅವುಗಳನ್ನು ಸಮಾಧಾನ ಮಾಡಿ ರಥ ಹೊರಡಿಸಿದ್ದ. ಈಗ ನೋಡಿದರೆ ಹೀಗೆ, ಒಟ್ಟು ಎಲ್ಲೆಡೆ ಅವಮಾನವಾಗಿತ್ತು, ಬಾಹುಕನ ಅಶ್ವತಜ್ಞತೆ ಅವನಿಗೆ ಸಹಿಸಲು ಅಸಾಧ್ಯವಾಗಿ ತೋರಿತು. ಸಾಮಾನ್ಯವಾಗಿ ದೊಡ್ಡಸ್ಥಾನದಲ್ಲಿರುವವರಿಗೆ ಈ ರೀತಿಯಾದ ಅಹಂ ಇರುತ್ತದೆ, ಅದಕ್ಕೇ ಪೆಟ್ಟುಬಿದ್ದರೆ ಸಹಿಸುವುದು ಹೇಗೆ? ಋತುಪರ್ಣನೂ ಹಾಗೆಯೇ ಇದನ್ನು ಯೋಚಿಸಿದ, ತಾನೇನೂ ಸಾಮಾನ್ಯನಲ್ಲ ತನ್ನಲ್ಲೂ ಅಸಾಮಾನ್ಯ ಶಕ್ತಿ ಇದೆ ಎನ್ನುವುದನ್ನು ಸಾಬೀತುಪಡಿಸಲು ನಿಶ್ಚಯಿಸಿದ. ರಥ ಆ ವೇಗದಲ್ಲಿ ಹೋಗುತ್ತಿದೆ, ಆಗಲೇ ಪಕ್ಕದಲ್ಲಿ ಕಂಡ ವಿಭೀತಕ ಮರವೊಂದು ಅವನ ಕಣ್ಣಿಗೆ ಬಿತ್ತು. ಅದನ್ನು ಕಂಡವನೇ ರಾಜ ಆ ಮರದಲ್ಲಿರುವ ಒಟ್ಟು ಎಲೆಗಳು, ಹಣ್ಣುಗಳು ಮರದಿಂದ ಬಿದ್ದಿರುವ ಎಲೆಗಳು, ಹಣ್ಣುಗಳು ಹಾಗೂ ಒಂದು ನಿಶ್ಚಿತ ಕೊಂಬೆಯಲ್ಲಿರುವ ಹಣ್ಣುಗಳು ಹಾಗೂ ಎಲೆಗಳ ಸಂಖ್ಯೆಯನ್ನು ನಿಶ್ಚಿತವಾಗಿ ತಿಳಿಸಿದ. ಮರದಲ್ಲಿರುವುದಕ್ಕಿಂತ ಬಿದ್ದಿರುವ ಹಣ್ಣು, ಎಲೆಗಳ ಸಂಖ್ಯೆ ೧೦೨ ಹೆಚ್ಚಿದೆ ಹಾಗೂ ೨೦೯೫ ಹಣ್ಣುಗಳು ಕೇವಲ ಎರಡು ಕೊಂಬೆಗಳಲ್ಲಿದೆ ನೋಡು ಎಂದ. ಹೀಗೆ ಎಲ್ಲರೂ ಸರ್ವಜ್ಞರಲ್ಲ, ಆದರೆ ಒಬ್ಬೊಬ್ಬರಲ್ಲಿ ಒಂದೊಂದು ಶಕ್ತಿ ಇರುತ್ತದೆ. ಹೀಗೆ ನನ್ನ ಗಣಿತದ ಶಕ್ತಿ, ಗಣಿತದ ಪ್ರಜ್ಞೆಯನ್ನು ನೋಡು ಎಂದು ಅಭಿಮಾನದಿಂದ ಹೇಳಿದ. ಇದನ್ನು ಕೇಳಿದ ಬಾಹುಕರೂಪಿ ನಳ ಮೊದಲು ನಂಬಲಿಲ್ಲ, ನೀನು ಸುಮ್ಮನೇ ಹೇಳುತ್ತಿದ್ದೀಯೆ, ಈಗ ಪ್ರಯಾಣದಲ್ಲಿ ತುರ್ತು ಇರುವುದರಿಂದಾಗಿ ನಾವು ಹೇಗೂ ಇಳಿದು ಎಣಿಸಲು ಸಾಧ್ಯವಿಲ್ಲ ಎಂಬುದಾಗಿ ನಿನ್ನ ಆಲೋಚನೆ ಇರಬಹುದು. ಆದರೂ ಎಣಿಸಿಯೇ ನೋಡುತ್ತೇನೆ, ನೀನು ಸರಿಯೇ ಅಲ್ಲವೇ ಎನ್ನುವುದನ್ನು ಎಂಬುದಾಗಿ ರಥದಿಂದ ಇಳಿಯುತ್ತಲೇ ಹೇಳಿದ. ನನಗೆ ಗಣಿತ ಬಾರದೆಂದಲ್ಲ ಆದರೆ ನಿನ್ನಂತೆ ನಾನು ವಿದ್ಯಾಮರ್ಮವನ್ನು ತಿಳಿದವನಲ್ಲ, ನಿನ್ನಂತೆ ಆ ವಿದ್ಯಾಸಿದ್ಧಿಯನ್ನು ಪಡೆದವನಲ್ಲ. ಆದರೂ ವಾರ್ಷ್ಣೇಯ ಈ ವಾಘೆಯನ್ನು ಒಮ್ಮೆ ಹಿಡಿದಿರು, ನಾನು ಅದರ ಲೆಕ್ಕಮಾಡಿ ಬರುತ್ತೇನೆ ಎಂದು ಹೇಳಿ ಬಾಹುಕ ಹೊರಟ.

ದೊರೆಗೆ ಮತ್ತೆ ಪೇಚಿಗೆ ಸಿಲುಕಿದಂತಾಯಿತು. ಅವನು ಹೇಳಿದ, ಬಾಹುಕ ಈಗ ಸಮಯವಿಲ್ಲ ತಿರುಗಿ ಬರುವಾಗ ಇದೇ ದಾರಿಯಲ್ಲಿ ಬರುತ್ತೇವೆ, ಆಗ ನೀನು ನನ್ನ ಪರೀಕ್ಷೆ ಮಾಡಬಹುದು ಅಂತ. ಆದರೆ ಈಗ ನಳ ಹಠಬಿಡಲಿಲ್ಲ. ಅವನೂ ಒಂದೊಮ್ಮೆ ಚಕ್ರವರ್ತಿಯಾಗಿದ್ದವನು ಅವನಲ್ಲಿನ ಕ್ಷಾತ್ರವೂ ಜಾಗೃತಗೊಂಡಿದೆ. ಹಾಗಾಗಿ ಹೇಳಿದ, ರಾಜನೇ ನಿನ್ನನ್ನು ನಾಳೆ ಬೆಳಗಿನ ಒಳಗಾಗಿ ವಿದರ್ಭಕ್ಕೆ ಮುಟ್ಟಿಸುವ ವಚನ ನನ್ನದು, ನಾನು ಖಂಡಿತವಾಗಿ ಮುಟ್ಟಿಸುತ್ತೇನೆ. ಈಗ ನನಗೆ ಈ ಕೆಲಸ ಮಾಡಲು ಬಿಡು ಅಂತ ಹೇಳಿದ. ಋತುಪರ್ಣ ಏನೂ ಮಾತಾಡಲಿಲ್ಲ ಆದರೆ ಏನು ಮಾಡುತ್ತಿದ್ದೀ ಎನ್ನುವಂತೆ ಕೈಮಾಡಿ ತೋರಿಸಿದ ಅಷ್ಟೇ, ಬಾಹುಕ ಮತ್ತೆ ಹೇಳಿದ ನಿಮಗೆ ಒಪ್ಪಿಗೆ ಇಲ್ಲದಿದ್ದರೆ ಇದೋ ಇದೇ ದಾರಿ ವಿದರ್ಭಕ್ಕೆ ಹೋಗುತ್ತದೆ, ವಾರ್ಷ್ಣೇಯನನ್ನು ಕರೆದುಕೊಂಡು ಹೋಗಿ. ಆದರೆ ನಾನು ಮಾತ್ರಾ ನನ್ನ ಕೆಲಸ ಮಾಡಿಯೇ ಮುಂದುವರೆಯುವುದು ಎಂದ.

ಕೆಲವು ಬಾರಿ ಸೇವಕರೇ ದೊರೆಗಳನ್ನು ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತಾರೆ, ಅವರು ಹೇಳಿದ್ದನ್ನು ಅನಿವಾರ್ಯವಾಗಿ ಕೇಳುವಂತೆ ಮಾಡಿಬಿಡುತ್ತಾರೆ. ಹಾಗೆಯೇ ಇಲ್ಲಿಯೂ ಬಾಹುಕ ತನ್ನ ದೊರೆಯನ್ನೇ ಮೀರಿ ನಡೆಯುತ್ತಿದ್ದಾನೆ. ಋತುಪರ್ಣನಿಗೆ ಗೊತ್ತು, ಬಾಹುಕನಿಲ್ಲದಿದ್ದರೆ ತನ್ನ ರಥ ಚಲಿಸಲು ಸಾಧ್ಯವಿಲ್ಲ ಹಾಗೂ ಸಮಯಕ್ಕೆ ಸರಿಯಾಗಿ ವಿದರ್ಭ ಮುಟ್ಟಲೂ ಸಾಧ್ಯವಿಲ್ಲ ಅಂತ. ಜೊತೆಗೆ ಬಾಹುಕನ ಮಾತಿನಲ್ಲಿ ಅಸಮಾಧಾನದ ಸುಳಿವು ಕಾಣುತ್ತಿದೆ. ಹಾಗಾಗಿ ಮಣಿದ ಹಾಗೂ ಹೇಳಿದ ಸರಿ ಬಾಹುಕ, ಕರೆದುಕೊಂಡು ಹೋಗುವವನೂ ನೀನೇ ಅಂದರೆ ಸಾರಥಿಯೂ ನೀನೇ, ನಿನಗಾಗಿಯೇ ನಾವು ವಿದರ್ಭಕ್ಕೆ ಹೋಗುತ್ತಿರುವುದು (ವಾಸ್ತವವಾಗಿ ಬಾಯಿತಪ್ಪಿ ಆಡಿದ ಮಾತಾದರೂ ದೈವದ ಉದ್ದೇಶ ಅದೇ ಇತ್ತು ಅನ್ನುವುದನ್ನು ತಿಳಿಸಿಕೊಡುತ್ತದೆ), ಒಂದರ್ಥದಲ್ಲಿ ಅದು ನಿಜವೂ ಹೌದು, ಈ ಪ್ರಯಾಣದಿಂದ ಋತುಪರ್ಣನಿಗೆ ಏನೂ ಲಾಭವಿಲ್ಲ, ಅವನು ಪಡೆದುಕೊಳ್ಳುವುದು ಏನೂ ಇಲ್ಲ ಇದರಿಂದ. ಏನು ಪಡೆದುಕೊಳ್ಳುವುದಿದ್ದರೂ ಅದು ನಳನೇ, ಈ ಪ್ರಯಾಣ ಇಲ್ಲದಿದ್ದರೆ ಅವನ ಜೀವನದಲ್ಲಿ ಬಹಳಷ್ಟು ನಷ್ಟವಾಗಲಿಕ್ಕಿದೆ. ಅವನಿಗೆ ತನ್ನ ಪತ್ನಿ ನಿಜವಾಗಿಯೂ ಸ್ವಯಂವರಕ್ಕೆ ತಯಾರಾಗಿದ್ದಾಳೆಯೇ ಎಂದು ತಿಳಿಯಬೇಕಿದೆ. ಹಾಗಾಗಿ ಅವನಿಗೆ ವಿದರ್ಭಕ್ಕೆ ಹೋಗುವುದು ಅನಿವಾರ್ಯ. ಆದರೂ ನಳನಿಗೆ ಈ ಸಂಖ್ಯೆ ಚಮತ್ಕಾರ ಸೋಜಿಗವನ್ನು ಉಂಟುಮಾಡಿದೆ, ಹಾಗಾಗಿ ಇದನ್ನು ಬಿಟ್ಟು ಹೋಗಲು ಮನಸ್ಸಿಲ್ಲ.

ಋತುಪರ್ಣ ಬಾಹುಕನನ್ನು ಅನುನಯಿಸುತ್ತಾನೆ. ನೀನು ಏನು ಕೇಳಿದರೂ ಕೊಡುತ್ತೇನೆ, ಒಂದುಸಾರಿ ನೀನು ನನ್ನನ್ನು ವಿದರ್ಭಕ್ಕೆ ತಲುಪಿಸು. ನಾಳಿನ ಸೂರ್ಯೋದಯವನ್ನು ವಿದರ್ಭದಲ್ಲಿ ತೋರಿಸು, ಏನಾದರೂ ಆಗಲಿ ರಥವನ್ನೇರು ಅಂತ ಹೇಳಿದ. ಇದೆಲ್ಲವೂ ಪ್ರಭುಗಳ ಅಸಹಾಯಕತೆ, ಬೇರೆಯವರಿಗೆ ಅರ್ಥ ಆಗಲಾರದು. ಸಾಧಾರಣವಾಗಿ ಪ್ರಭುಗಳು ಬಲಿಷ್ಟರಾಗಿರುತ್ತಾರೆ, ಸೇವಕರು ಅವರು ಹೇಳಿದಂತೆ ನಡೆಯುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಸೇವಕರೇ ಬಲವಂತರಾಗಿರುತ್ತಾರೆ, ನೀರಿನಲ್ಲಿ ಮೊಸಳೆಯ ಶಕ್ತಿ ಹೆಚ್ಚಾಗಿರುವಂತೆ, ಆಗ ಸೇವಕರು ಹೇಳಿದಂತೆಯೇ ದೊರೆಗಳು ಕೇಳುವಂತಹ ಪರಿಸ್ಥಿತಿ ಬರುತ್ತದೆ. ಕಡೆಗೂ ಬಾಹುಕ ನಾನು ಆ ಮರದಲ್ಲಿನ ಹಣ್ಣು, ಎಲೆಗಳನ್ನು ಎಣಿಸಿಯೇ ಬರುವುದು ಅಂತ ಬಾಯಿಬಿಟ್ಟು ಹೇಳುತ್ತಾನೆ. (ನಳನೂ ಒಂದುಕಾಲದಲ್ಲಿ ಚಕ್ರವರ್ತಿಯಾಗಿದ್ದವನೇ, ಅವನೊಳಗಿನ ಆ ಗುಣ ಈಗ ಸರಿಯಾದ ಸುಮುಹೂರ್ತ ಬಂತೇನೋ, ಎದ್ದು ಬರುತ್ತಿದೆ)
ಕೊನೆಗೂ ಬಾಹುಕನ ಹಠಕ್ಕೆ ಒಪ್ಪಿದ ಋತುಪರ್ಣ ಸರಿ ಹೋಗು, ಅಂತ ಎಣಿಕೆಮಾಡಲು ಒಪ್ಪಿದ, ಋತುಪರ್ಣನ ಬೇಡಿಕೆಯಂತೆ ಬಾಹುಕ ಆ ಎರಡು ಕೊಂಬೆಗಳನ್ನು ಮಾತ್ರಾ ಎಣಿಸಲು ನಿಶ್ಚಯಿಸಿದ. ಆ ಮರದ ಬಳಿಗೆ ಹೋಗಿ, ಕೊಂಬೆಯನ್ನು ಕಡಿದು ನೆಲದ ಮೇಲೆ ಹಾಕಿ ಎಣಿಸಲು ಪ್ರಾರಂಭ ಮಾಡಿದ.

ವಿದ್ಯಾಸಿದ್ಧಿಯೂ, ವಿದ್ಯಾ ಸಹೃದಯತೆಯೂ ದುರ್ಲಭವಾದದ್ದು ಅದರ ನೆನಪಿಗಾಗಿ ಹಿಂದೆ ಹೇಳಿರುವ ಒಂದು ಕಥೆಯನ್ನು ನೆನಪಿಸುತ್ತೇವೆ. ಒಂದೂರಿನಲ್ಲಿ ಒಬ್ಬ ಬಹುರೂಪಿಯಿದ್ದ, ತನ್ನ ಕೌಶಲವನ್ನು ತೋರಿಸಲು ಅವನು ರಾಜನ ಆಸ್ಥಾನಕ್ಕೆ ಬಂದ, ಸಭೆಯಲ್ಲಿ ಗೋವಿನ ರೂಪವನ್ನು ಧರಿಸಿ ವಿಧವಿಧದ ಪ್ರದರ್ಶನ ತೋರಿಸಿದ, ಸಭಾಸದರು ತೃಪ್ತರಾದರು, ದೊರೆಗೂ ಅವನ ಕೌಶಲ ಕಂಡು ಆನಂದವಾಗಿ ಬೆಲೆಬಾಳುವ ವಸ್ತ್ರವೊಂದನ್ನು ಅವನಿಗೆ ಹೊದೆಸಿದ. ಆ ಸಭೆಯಲ್ಲೆ ಇದ್ದ ಗೊಲ್ಲನೊಬ್ಬ ಇನ್ನೂ ಅವನನ್ನು ಪರೀಕ್ಷಿಸಲೆಣೆಸಿ ಒಂದು ಸಣ್ಣಕಲ್ಲನ್ನು ತೆಗೆದುಕೊಂಡು ಆ ಗೋವಿನ ವೇಷದ ಬಹುರೂಪಿಗೆ ಹೊಡೆದ, ನಿಜವಾಗಿ ಗೋವಿಗೆ ಹಾಗೆ ಮಾಡಿದರೆ ಅದು ಚರ್ಮದ ಆ ಭಾಗವನ್ನು ಮಾತ್ರವೇ ಕದಲಿಸುತ್ತದೆ. ಹಾಗೆಯೇ ಈ ಬಹುರೂಪಿಯೂ ಮಾಡಿದಾಗ, ಆ ಗೊಲ್ಲನಿಗೆ ತುಂಬಾ ಸಂತಸವಾಗಿ ತಾನು ಹೊದೆದಿದ್ದ ಹರಕು ಕಂಬಳಿಯನ್ನೇ ಅವನಿಗೆ ನೀಡುತ್ತಾನೆ. ಸಂತೃಪ್ತನಾದ ಆ ನಟ ಅರಸ ನೀಡಿದ್ದ ವಸ್ತ್ರವನ್ನು ತೆಗೆದು ಗೊಲ್ಲನ ಹರಕು ಕಂಬಳಿಯನ್ನು ಹೊದೆಯುತ್ತಾನೆ. ಅರಸನಿಗೆ ಸಿಟ್ಟು ಬಂದು ಹೀಗೇಕೆ ಮಾಡಿದೆ ಎಂದಾಗ ನಟ ಹೇಳುತ್ತಾನೆ, ಅವನು ನನ್ನಲ್ಲಿನ ವಿದ್ಯೆಯನ್ನು ಪೂರ್ಣವಾಗಿ ಪರೀಕ್ಷಿಸಿದ, ನೈಜಪ್ರತಿಭೆಯನ್ನು ಗುರುತಿಸಿದ, ಹಾಗಾಗಿ ಅವನು ಕೊಟ್ಟ ಪಾರಿತೋಷಕ ಅದು ಹೆಚ್ಚಿನ ಬೆಲೆಯದ್ದು ಎಂದು.

ಋತುಪರ್ಣನಿಗೆ ಕೇವಲ ತಾನು ಪಂಥದಲ್ಲಿ ಗೆಲ್ಲುವುದಷ್ಟೇ ಬೇಕಾಗಿದೆ. ಆದರೆ ನಳನಿಗೆ ಅದು ತನ್ನ ಪ್ರೀತಿಯನ್ನೇ ಪಡೆಯುವ ಅವಕಾಶ! ಅಲ್ಲದೆ, ಅವನಿಗೆ ಅಲ್ಲಿನ ನೈಜಪರಿಸ್ಥಿತಿಯ ಬಗ್ಗೆಯೂ ತಿಳಿಯಬೇಕಿದೆ. ಹಾಗಿದ್ದರೂ ವಿದ್ಯೆಯ ವಿಷಯ ಬಂದಾಗ ಆ ವಿದ್ಯಾಕುತೂಹಲ, ವಿದ್ಯಾ ಜಿಜ್ಞಾಸೆ ಹೇಗಿದೆ ನೋಡಿ? ತಾನು ಕೇಳಿದ್ದನ್ನು ಕಣ್ಣಾರೆ ಕಂಡು ಅರ್ಥಮಾಡಿಕೊಳ್ಳಬೇಕೆನ್ನುವ ತವಕ ಅದು ಸರಿಯಾಗಿದೆ. ಹಾಗಾಗಿ ಅದನ್ನು ಎಣಿಸಿಯೇ ಬಿಟ್ಟ. ಎಣಿಸಿದಾಗ ನಳನಿಗೇ ಆಶ್ಚರ್ಯ. ಅಷ್ಟೇ, ಋತುಪರ್ಣ ಹೇಳಿದಷ್ಟೇ ಸರಿಯಾಗಿ ಇದೆ, ವಿದ್ಯುತ್ ವೇಗದಲ್ಲಿ ಚಲಿಸುತ್ತಿದ್ದ ರಥದಿಂದ ನೋಡಿ ಈ ವೃಕ್ಷದ ವಿವರಗಳನ್ನು ಇಷ್ಟು ಸರಿಯಾಗಿ ಹೇಳಿದನೆಂದರೆ ಅವನು ಮೂಕವಿಸ್ಮಿತನಾದ ಹಾಗೂ ಹೇಳಿದ ದೊರೆಯೇ ನಿನ್ನ ವಿದ್ಯಾಬಲವನ್ನು ಕಂಡು ಒಪ್ಪಿದೆ, ಆದರೆ ಈ ವಿವರ ನಿನಗೆ ಹೇಗೆ ತಿಳಿಯಿತು ಎನ್ನುವ ಕುತೂಹಲ ಎಂದ. ಋತುಪರ್ಣನಿಗೆ ಹೆಮ್ಮೆಯಾಯಿತು. ಹೇಳಲು ಪ್ರಾರಂಭಿಸಿದ. ಮೊದಲೇ ಸಮಯದ ಅಭಾವವಿದೆ. ಅದು ನಳನಿಗೇ ಹೆಚ್ಚಾದರೂ, ಋತುಪರ್ಣನಿಗೂ ಹಾಗೆಯೇ. ಆದರೂ ಏನೂ ಮಾತನಾಡದಿದ್ದರೆ ವಿದರ್ಭಕ್ಕೆ ಹೋಗುವುದು ಇನ್ನಷ್ಟು ತಡವಾಗುತ್ತದೆ ಅಂತ ಇಬ್ಬಂದಿತನಕ್ಕೆ ಸಿಲುಕಿ, ಹೌದು ಇದೆಲ್ಲಾ ನನಗೆ ಗೊತ್ತಿದೆ ಎಂದು ಹೇಳಿದ. ಎರಡು ವಿದ್ಯೆಗಳು ನನಗೆ ಸಿದ್ಧಿಸಿವೆ: ಅಕ್ಷವಿದ್ಯೆ ಹಾಗೂ ಸಂಖ್ಯಾ ವಿದ್ಯೆ. ಇದರ ಬಲದಿಂದ ನಾನು ಹೀಗೆ ಹೇಳಲು ಸಾಧ್ಯವಾಯಿತು ಅಂದ. ಸಾಮಾನ್ಯವಾಗಿ ಹೀಗೆ ಗುಟ್ಟು ಬಿಡುವವನಲ್ಲ ದೊರೆ ಆದರೆ ಈಗ ಅಸಹಾಯಕ (ಯಾರೇ ಆದರೂ ಹೀಗೆ ವಿದ್ಯೆಯ ಗುಟ್ಟುಗಳನ್ನು ರಟ್ಟುಮಾಡಲಾರರು.) ಈ ಒತ್ತಡದಲ್ಲಿ ಬಾಯಿಬಿಟ್ಟ.

ಇದನ್ನು ಕೇಳಿದ ಕೂಡಲೇ ನಳನ ಕಿವಿ ಚುರುಕಾಯಿತು ಏನು ಅಕ್ಷವಿದ್ಯೆಯೇ ಅಂದ! ಸಂಖ್ಯೆಯ ವಿದ್ಯೆಯ ಕಡೆ ಅವನ ಉತ್ಸಾಹವಿಲ್ಲ. ಅವನಿಗೆ ದ್ಯೂತದ್ದೇ ಚಿಂತೆ. ಅವನಿಗೆ ಬೇಕಾದದ್ದು ಅಕ್ಷವಿದ್ಯೆ ಮಾತ್ರ (ನಾವು ಎಲ್ಲಿ ಕಳೆದುಕೊಂಡಿದ್ದೆವೋ ಅಲ್ಲಿಯೇ ಪಡೆದುಕೊಳ್ಳಬೇಕು) ನಳ ಎಲ್ಲವನ್ನೂ ಕಳೆದುಕೊಂಡಿದ್ದು ತನ್ನ ತಮ್ಮನಾದ ಪುಷ್ಕರನಲ್ಲಿ ಜೂಜಾಡಿಯೇ ಆಗಿತ್ತು, ಹಾಗಾಗಿ ಈಗ ಆ ಮೂಲಕವೇ ಮರಳಿ ಪಡೆಯಬೇಕು. ಹಾಗಾಗಿ ಅವನಿಗೆ ಅದು, ಆ ವಿದ್ಯೆ ಬೇಕು. ಹಾಗಾಗಿ ಯಾವಾಗ ಋತುಪರ್ಣ ಅಕ್ಷವಿದ್ಯೆಯ ಪ್ರಸ್ತಾಪ ಮಾಡಿದನೋ ಆಗ ಬಲವಾಗಿ ಹಿಡಿದುಕೊಂಡ, ನನಗೆ ಆ ವಿದ್ಯೆ ಉಪದೇಶ ಕೊಡು ಎಂಬುದಾಗಿ. ಅದರ ಬದಲಾಗಿ ನಾನು ನಿನಗೆ ಅಶ್ವಹೃದಯ ವಿದ್ಯೆಯನ್ನು ಕೊಡುತ್ತೇನೆ ಎಂದ. ಚಕ್ರವರ್ತಿಯಾದ್ದರಿಂದ ಅವನು ಭಿಕ್ಷೆ ಬೇಡಲಾರ, ಹಾಗಾಗಿ ಬದಲಿಗೆ ಏನಾದರೂ ಕೊಡಬೇಕು ಇದನ್ನು ಕೊಡುತ್ತೇನೆ ಎಂಬುದು ಅವನ ಯೋಚನೆ, ಅಲ್ಲದೇ ಅವನಿಗೆ ಆ ಅಮೂಲ್ಯ ವಿದ್ಯೆಯನ್ನು ಬೇರೊಬ್ಬ ಬಳಸಬಾರದು ಎನ್ನುವ ಸಂಕೀರ್ಣ ಮನಸ್ಥಿತಿಯೂ ಇರಲಿಲ್ಲ. ಋತುಪರ್ಣನಿಗೂ ಅಶ್ವವಿದ್ಯೆಯ ಆಸೆ ಇದೆ ಆದರೆ ಸುಲಭಕ್ಕೆ ತನ್ನ ವಿದ್ಯೆಗಳನ್ನು ಕೊಡಬೇಕಲ್ಲ? ನಳನಿಗಾದರೋ ಇದರಿಂದ ಅವನ ಸರ್ವಸ್ವವೂ ಸಿಗುತ್ತದೆ. ಹಾಗಾಗಿ ನಳ ಏನು ಮಾಡಿದರೂ ಬಿಡಲಿಲ್ಲ, ಹಠ ಹಿಡಿದು ಕುಳಿತ.

‘ಕೊ’ ಅನ್ನುವುದು ನಮ್ಮ ಕುಲಕೋಟಿಗೂ ತಿಳಿದಿಲ್ಲ, ‘ತಾ’ ಎನ್ನುವುದು ತಾತಮುತ್ತಾತಂದಿರಿಂದಲೂ ಬಂದಿದೆ ಎನ್ನುವ ಮಾತೇ ಇದೆ. ಋತುಪರ್ಣ ಕೊಡಲಾರ ಕೊಡದಿರಲಾರ, ತನ್ನಲ್ಲಿರುವ ಅಪೂರ್ವ ವಿದ್ಯೆ ಅದು. ಅದನ್ನು ಗೋಪ್ಯವಾಗಿಟ್ಟುಕೊಂಡಿದ್ದಾನೆ, ಕೊಡದಿದ್ದರೆ ಮುಂದೆ ಹೋಗಲೂ ಸಾಧ್ಯವಿಲ್ಲ, ವಿದರ್ಭಕ್ಕೆ ಹೋಗಲೇ ಬೇಕಲ್ಲ. ನೋಡೋಣ ಏನು ಮಾಡುತ್ತಾನೆ ಅಂತ. ಇನ್ನು ಮುಂದಿನದ್ದು ನಾಳೆ ಮುಂದುವರೆಯುತ್ತದೆ. ನಾಳೆ ಕಲಿನಿಗ್ರಹದ ಮಹೋಪಕಾರ, ಬನ್ನಿ, ನಾಳೆ ನಾವು ನೀವು ಸೇರೋಣ, ಕಲಿ ಹಾಗೂ ನಳರ ಮುಖಾಮುಖಿಗೆ ಸಾಕ್ಷಿಯಾಗೋಣ. ಎಲ್ಲ ಭಾವವನ್ನೂ ಕೃಷ್ಣಚರಣಗಳಲ್ಲಿ ಸಮರ್ಪಣೆ ಮಾಡೋಣ.

 

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments Box