#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
05-08-2018:

ಗೋಸ್ವರ್ಗದ ಮಧ್ಯ ಒಂದು ತೀರ್ಥಕುಂಡವಿದೆ. ಅದಕ್ಕೆ ಸಪ್ತಸನ್ನಿಧಿ ಎಂದು ಹೆಸರು. ಅದರಲ್ಲಿ 7 ದೇವತೆಗಳ ಮಹಾ ಸಾನಿಧ್ಯವಿದೆ. 8 ನೆಯದ್ದು ಶ್ರೀಕೃಷ್ಣ.

ತತ್ತ್ವಭಾಗವತಮ್

8ನೆಯದ್ದಾಗಿ ಶ್ರೀಕೃಷ್ಣನ ಸಾನಿಧ್ಯ ತೀರ್ಥಕುಂಡ ಮಾತ್ರವಲ್ಲ ಗೋಸ್ವರ್ಗವೆಲ್ಲ ವ್ಯಾಪಿಸಿದೆ. ಅವನ ಪ್ರೀತ್ಯರ್ಥವಾಗಿ ಈ ಪ್ರವಚನ ಮಾಲಿಕೆ.

ಆಲಯಂ ಪಿಬತ: ಭಾಗವತವನ್ನು ಲಯಪರ್ಯಂತ ಪಾನ ಮಾಡಿ. ಲೀನದ ಪರ್ಯಂತ.. ಆಳದವರೆಗೂ ವ್ಯಾಪಿಸುವಂತೆ ಪಾನ ಮಾಡಿ.
ಭಾಗವತ ರಸ ದೇಹ ಮನಸ್ಸುಗಳನ್ನ ವ್ಯಾಪಿಸಿ ಆತ್ಮಕ್ಕೆ ತೆರಳಬೇಕು, ಆತ್ಮ ಅರಳಬೇಕು.
ಭಾಗವತದ ಕಥೆ ರಂಜಕ ಆದರೆ ಕಥೆಯ ತಡಿಕೆಯ ಒಳಗಿರುವ ತತ್ವ ಲಕ್ಷ್ಯ.

ಕಗ್ಗ: ಹಾಲ ಕಾಯಿಸಿ ಹೆಪ್ಪನಿಕ್ಕಿ ಕಡದೊಡೆ
ಮೊದಲು ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ
ಬಾಳನೀ ಜಗದ ಮಂತುವು ಕಡೆಯಲು 
ಏಳುವುದು ಆಳದಿಂದಾತ್ಮಮತಿ

ಹಾಲಿನಲ್ಲಿ ಅಗೋಚರವಾಗಿರುವ ಮೊಸರು, ಬೆಣ್ಣೆ, ತುಪ್ಪಗಳು ಕಡೆದಾಗ ಮೇಲಿ ತೇಲಿ ಬರುವಂತೆ, ಈ ಜಗತ್ತೆಂಬ ಕಡಗೋಲು ನಮ್ಮ
ಬಾಳೆಂಬ ಹಾಲನ್ನು ಕಡೆದೊಡೆ ಏಳುವದು ಆತ್ಮಜ್ಞಾನ.

ಜೀವನದ ಮಥನವೇ ಆತ್ಮಜ್ಞಾನ.

ಜೀವನದಲ್ಲಿ ದುಡುಕಿ ಮಾಡುವ ಕೆಲಸಗಳು ಅನರ್ಥಕ್ಕೆ ಕಾರಣ. ಕೃತಿಯ ಹಿಂದೆ ಸದಿಚ್ಛೆ ಮತ್ತು ಸರಿಯಾದ ಜ್ಞಾನ ಇರಲೇಬೇಕು.

ಒಂದೇ ವಿಷಯದಲ್ಲಿ ಆಳವಾಗಿ ಹೋದರೆ ಸಿದ್ಧಿಯಾಗುತ್ತದೆ.
ಯೋಗಃ ಕರ್ಮಸು ಕೌಶಲಮ್:
ಕುಶಲತೆ ಅಂದರೆ ಒಂದರ್ಥದಲ್ಲಿ ತಲ್ಲೀನತೆ. ಮಾಡುವ ಯಾವುದೇ ಕಾರ್ಯದಲ್ಲಿ ತಲ್ಲೀನತೆ ಇರಬೇಕು. ಬೇರೆನೂ ತಿಳಿದಿಲ್ಲ ಎಂಬಂತೆ
ಒಂದೇ ಕಾರ್ಯದಲ್ಲಿ ಮುಳುಗಿದರೆ ಅದು ಸಿದ್ಧಿಯಾಗುತ್ತದೆ.

ದೃಷ್ಟಾಂತ:
ವೇದಾಂತಾದಿ ಷಡ್ ದರ್ಶನಗಳಲ್ಲಿ ತಳಸ್ಪರ್ಶಿ ಜ್ಞಾನವುಳ್ಳ ಮಹಾವಿದ್ವಾಂಸರು ವಾಚಸ್ಪತಿಮಿಶ್ರರು. ವೇದಾವಲಂಬಿಯಾದ ಎಲ್ಲಾ ಆಸ್ಥಿಕ ದರ್ಶನಗಳಿಗೆ ವಾಚಸ್ಪತಿಮಿಶ್ರರು ವ್ಯಾಖ್ಯಾನ ಬರೆದಿದ್ದಾರೆ. ಶಂಕರರ ಬ್ರಹ್ಮಸೂತ್ರಕ್ಕೆ ವಾಚಸ್ಪತಿಮಿಶ್ರರ ಶಿಷ್ಯರಾದ ಪದ್ಮಪಾದಾಚಾರ್ಯರು ಪಂಚಪಾದಿಕ ಎಂಬ ವ್ಯಾಖ್ಯೆ ಬರೆದಿದ್ದಾರೆ. ವಾಚಸ್ಪತಿಮಿಶ್ರರು ಅದಕ್ಕೆ ವಿಸ್ತೃತ ವ್ಯಾಖ್ಯಾನ ಮಾಡಿದ್ದಾರೆ.

ವಾಚಸ್ಪತಿಮಿಶ್ರರ ಪತ್ನಿ ಭಾಮತಿ. ಭಾಮತಿ ಎಂದರೆ ಬೆಳಕುಳ್ಳವಳು, ತೇಜೋಮತಿ. ನವವಿವಾಹಿತರಾದ ವಾಚಸ್ಪತಿಮಿಶ್ರರ ಪೂರ್ಣ ಗಮನವಿದ್ದದ್ದು ಶಂಕರಾಚಾರ್ಯರ ಬ್ರಹ್ಮಸೂತ್ರದ ಮೇಲೆ. ಬ್ರಹ್ಮಸೂತ್ರ ಭಾಷ್ಯದ ಬಗ್ಗೆ ಪೂರ್ಣಾಸಕ್ತರಾದ ವಾಚಸ್ಪತಿಮಿಶ್ರರಿಗೆ ತನ್ನ ಪತ್ನಿ, ಮನೆ, ಸುತ್ತಮುತ್ತಲಿನ ಪರಿಸರ, ತನ್ನ ಊಟ, ತಿಂಡಿ, ನಿದ್ದೆಯ ಬಗ್ಗೆ ಗಮನವೇ ಇರಲಿಲ್ಲ.
ಲೌಕಿಕ ಸುಖದಲ್ಲಿರುವುದು ಆನಂದದ ಬಿಂದು. ವೇದಾಂತದಲ್ಲಿರುವುದು ಆನಂದದ ಸಿಂಧು.
ಬ್ರಹ್ಮಸೂತ್ರ ಭಾಷ್ಯದ ವ್ಯಾಖ್ಯಾನ ನಿರತರಾದ ವಾಚಸ್ಪತಿಮಿಶ್ರರಿಗೆ ಸಮಯ ಸಮಯಕ್ಕೆ ಎಲ್ಲ ಪರಿಕರಗಳನ್ನು ಒದಗಿಸಿಕೊಡುತ್ತಾ, ಊಟೋಪಚಾರಿಯಾದಿ ಸೇವೆಗಳನ್ನು ಪ್ರೀತ್ಯಾದರದಿಂದ ಮಾಡುತ್ತಿದ್ದಳು ಭಾಮತಿ.

ಹೀಗೆ ಸಮಯ ಉರುಳುತ್ತಿರಲು, ವ್ಯಾಖ್ಯಾನ ಬರೆದು ಮುಗಿಸಿದ ವಾಚಸ್ಪತಿಮಿಶ್ರರು ತಲೆ ಎತ್ತಿ ನೋಡಿದರು. ಎದುರಿಗಿರುವ ಹೆಣ್ಣನ್ನು ನೋಡಿ ಯಾರು ನೀನು ಏಂದು ಪ್ರಶ್ನಿಸಲಾಗಿ, ನಾನು ನಿಮ್ಮ ಪತ್ನಿ ಭಾಮತಿ ಎಂದುತ್ತಿರಸಿದಳು ಆಕೆ.
ವಾಚಸ್ಪತಿಮಿಶ್ರರು ಒಂದೇ ವಿಷಯದಲ್ಲಿ ಮುಳುಗಿ ಪತ್ನಿಯ ಬಗ್ಗೆ ಗಮನವಿರಲಿಲ್ಲ. ಪತ್ನಿಯ ಇಷ್ಟು ವರ್ಷಗಳ ತ್ಯಾಗ, ತಪಸ್ಸು, ಸೇವೆಗಳಿಗೆ ಸಂತುಷ್ಟರಾದ ವಾಚಸ್ಪತಿಮಿಶ್ರರು ತಮ್ಮ ಕೃತಿಗೆ ಭಾಮತಿ ಎಂದು ಹೆಸರಿಟ್ಟರು.
ಭಾಮತಿಗೆ ಪತಿ ಸೇವಾಕರ್ಮದಲ್ಲಿ ತಲ್ಲೀನತೆ. ವಾಚಸ್ಪತಿಮಿಶ್ರರಿಗೆ ಕೃತಿ ರಚನೆಯಲ್ಲಿ ಆಳವಾದ ತಲ್ಲೀನತೆ. ಅದರ ಫಲವೇ ಮಹಾಕೃತಿ.

ಹರೇರಾಮ..ಹರೇಕೃಷ್ಣ ..ಇದು ಭಜನೆಯಲ್ಲ..ಸಂಬೋಧನೆ. ಹರೇ ಎನ್ನುವಾಗ ವೈಕುಂಠದ ಭಗವಂತ. ರಾಮ, ಕೃಷ್ಣ ಎನ್ನುವಾಗ ಭುವಿಗಿಳಿದು ಬಂದ ಭಗವಂತ. ಈ ಸಂಬೋಧನೆಗಳು ರಾಮ ಕೃಷ್ಣ ರ ಅದ್ವೈತವನ್ನೂ, ದಿವಿ-ಭುವಿಗಳ ಅದ್ವೈತವನ್ನೂ ಸೂಚಿಸುತ್ತದೆ.

ಭಗವಂತನಿಗೆ ತಲಪುವಂತೆ ರಸವುಳ್ಳವರಾಗಿ ಕರೆಯಿರಿ. ವಾಚಸ್ಪತಿಮಿಶ್ರರು ಹೇಗೆ ಸೂತ್ರ ಭಾಷ್ಯದಲ್ಲಿ ಮುಳುಗಿದರೋ ಹಾಗೆ ನಾವು
ಭಾಗವತದಲ್ಲಿ ಮುಳುಗಬೇಕು.

 

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments Box