#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
10-09-2018:

ಕಲಿನಿಗ್ರಹ

ಹರಿ ಇರುವಲ್ಲಿ ಕಲಿ ಇರಲು ಸಾಧ್ಯವಿಲ್ಲ, ಕಲಿ ಇರುವಲ್ಲಿ ಹರಿ ಇರುವುದಿಲ್ಲ. ಕಲಿಗೆ ಸರಿಯಾದ ಪರಿಹಾರ ಹರಿ. ಹಾಗಾಗಿ ಅಂತಹ ಹರಿಯನ್ನು ಹೃದಯದಲ್ಲಿ ನಿಲ್ಲಿಸಿ ಪ್ರವಚನಕ್ಕೆ ಉಪಕ್ರಮಿಸೋಣ.

ಕೊಟ್ಟದ್ದು ತನಗೆ, ಇಟ್ಟುಕೊಳ್ಳುವುದಕ್ಕಿಂತ ಕೊಟ್ಟುಬಿಡುವುದು ಒಳ್ಳೆಯದು. “ದಾನಂ ಭೋಗೋ ನಾಶಃ ತಿಸ್ರೋಗತಯಃ ಭವಂತಿ ವಿತ್ತಸ್ಯ|” ಎಂದು ಹೇಳಿದೆ ಅದರರ್ಥ, ಧನವು ಒಂದೋ ನಿಮ್ಮ ಉಪಯೋಗಕ್ಕೆ ಬರಬೇಕು ಅಥವಾ ಬೇರೆಯವರ ಉಪಯೋಗಕ್ಕೆ ಬರಬೇಕು. ಇಲ್ಲದಿದ್ದರೆ ಅದು ನಾಶವಾಗುತ್ತದೆ. ಹಾಗಾಗಿ ಎಷ್ಟು ಬೇಕೋ ಅಷ್ಟನ್ನು ಅನುಭವಿಸಿ, ಉಳಿದದದ್ದನ್ನು ದಾನಮಾಡಿ, ಉಳಿಸಬೇಡಿ. ಉಳಿಸಲು ಪ್ರಯತ್ನಿಸಿದರೆ ಹಾಳಾಗಿ ಹೋಗುತ್ತದೆ. ಬಾವಿಯ ನೀರು ತೆಗೀತಾ ಇದ್ದರೆ ಹೊಸ ನೀರು ಬರಲಿಕ್ಕೆ ಅವಕಾಶ ಆಗಿ ನೀರು ಶುದ್ಧವಾಗಿರುತ್ತದೆ. ಇಲ್ಲದಿದ್ದರೆ ಇರುವ ನೀರು ಕೊಳೆಯುತ್ತದೆ. ಅದು ನಷ್ಟವೇ, ಹಾಗಾಗಿ ಸಾಧ್ಯವಾದಷ್ಟೂ ವಿನಿಯೋಗ ಮಾಡುತ್ತಿರಬೇಕು. ಇದೇರೀತಿ ಯಾವ ದುಡ್ಡು ಬಳಕೆಯಾಗುವುದಿಲ್ಲವೋ ಅದೂ ಕೊಳೆಯುತ್ತದೆ. ಅದರಿಂದ ಮತ್ತೇನು ಉಪಯೋಗವಾಗುತ್ತದೆ? ಹಾಗಾಗಿಯೇ, ಹಣವಾಗಲೀ ಅಥವಾ ಇತರ ಯಾವುದೇ ವಸ್ತುವಾಗಲೀ ನಮ್ಮ ಬಳಿ ಇರುವುದನ್ನು ಉಳಿಸಿಕೊಳ್ಳಲು ಪ್ರಯತ್ನಿಸದೇ ಯೋಗ್ಯವಾಗಿ ಬಳಸಿಕೊಳ್ಳಬೇಕು.

ತತ್ತ್ವಭಾಗವತಮ್

ಸದ್ಯ ಋತುಪರ್ಣ ಸಂದಿಗ್ಧದಲ್ಲಿದ್ದಾನೆ, ಸಂಖ್ಯಾನ ಹಾಗೂ ಅಕ್ಷವಿದ್ಯೆ ಎರಡೂ ಅವನಲ್ಲಿ ಇದೆ. ಸಂಖ್ಯಾನವೆಂದರೆ ಗಣಿತದ ವಿದ್ಯೆ, ಇಂದಿಗೂ ಗಣಿತದಲ್ಲಿ ಇಂತಹ ಮೇರು ಪ್ರತಿಭೆಗಳನ್ನು, ಅದ್ಭುತ ವ್ಯಕ್ತಿಗಳನ್ನು ನಾವು ಕಾಣಬಹುದು. ಇಲ್ಲಿ ಈ ಎರಡೂ ವಿದ್ಯೆಗಳು ಅವನಲ್ಲಿ ಇದ್ದದ್ದು ಇಷ್ಟು ದಿನ ಗುಟ್ಟಾಗಿತ್ತು. ಈಗ ಗುಟ್ಟುರಟ್ಟಾಗಿದೆ, ಅವನಾಗಿಯೇ ನಳನ ಮುಂದೆ ಬಾಯಿಬಿಟ್ಟಿದ್ದಾನೆ. ಅದೂ ಅಗತ್ಯ ಸಮಯದಲ್ಲೇ, ನಳನಿಗೆ ಅದು ಮನಸ್ಸಿಗೆ ನಾಟಿಬಿಟ್ಟಿದೆ, ಅವನು ಇನ್ನು ರಾಜನನ್ನು ಬಿಡಲಾರ, ಪಡೆದೇ ತೀರುತ್ತಾನೆ. ಶಾಸ್ತ್ರಗಳೂ ಹಾಗೆಯೇ ಹೇಳುತ್ತವೆ. ವಿದ್ಯಯಾ ಸಹ ಮರ್ತವ್ಯಂ| ಅಂದರೆ ಯೋಗ್ಯನಾದವನನ್ನು ಹುಡುಕಿಯೇ ವಿದ್ಯೆಯನ್ನು ಕೊಡಬೇಕು, ಒಂದು ವೇಳೆ ಅಂತಹವನು ಸಿಗದಿದ್ದಲ್ಲಿ ಅದು ನಿನ್ನೊಂದಿಗೇ ಮಣ್ಣಾದರೂ ಚಿಂತೆಯಿಲ್ಲ ಎಂದು. ಹೀಗೆ ಅಧಿಕಾರಿಗಳಿಗೆ ಅಂದರೆ ಯೋಗ್ಯತೆ ಇರುವವರಿಗೆ ಮಾತ್ರವೇ ವಿದ್ಯೆಯನ್ನು ಕೊಡಬೇಕು. ಅದನ್ನು ಅಯೋಗ್ಯರ ಪಾಲು ಮಾಡಿದರೆ ವಿದ್ಯೆಗೂ ಕೋಪ ಬರುತ್ತದೆ. ತನ್ನನ್ನು ಅಯೋಗ್ಯರಿಗೆ ಕೊಟ್ಟ ಎಂದು ಆ ವಿದ್ಯೆಯೇ ಆಗ ಶಪಿಸುತ್ತದೆ. ಬರಿಯ ವಿದ್ಯೆ ಮಾತ್ರವೇ ಅಲ್ಲ ಯಾವುದೇ ವಸ್ತುವನ್ನಾದರೂ ಯೋಗ್ಯರಿಗೆ ಮಾತ್ರವೇ ನೀಡಬೇಕು. ಅಯೋಗ್ಯರಿಗೆ ನೀಡಿದರೆ ಹೀಗೆಯೇ ಶಾಪ ಬರುತ್ತದೆ. ಅದೆಲ್ಲವೂ ಲಕ್ಷ್ಮಿಯದೇ ರೂಪ, ಯೋಗ್ಯರಿಗೆ ನೀಡಬೇಕಾಗಿರುವುದರಿಂದಲೇ ಅದು ಗೋಪ್ಯ.

ಇಲ್ಲಿ ಋತುಪರ್ಣನಿಗೂ ಅದೇ ಸಮಸ್ಯೆ, ಆದರೆ ನಳ ಇಲ್ಲಿ ವಿದ್ಯೆಯನ್ನು ಸುಮ್ಮನೇ ಕೇಳುತ್ತಿಲ್ಲ. ಬದಲಿಗೆ ತನ್ನಲ್ಲಿರುವ ಅಶ್ವಹೃದಯಕ್ಕೆ ವಿನಿಮಯವಾಗಿ ಕೇಳುತ್ತಿದ್ದಾನೆ. ಜೊತೆಗೆ ಅವನಿಗೆ ಸದ್ಯಕ್ಕೆ ಬಾಹುಕನ ಅನಿವಾರ್ಯತೆ ಇದೆ, ವಿದರ್ಭಕ್ಕೆ ತಲುಪುವವರೆಗೆ. ಋತುಪರ್ಣನಿಗೆ ಚಿಕ್ಕಂದಿನಿಂದಲೂ ಅಶ್ವಶಾಸ್ತ್ರದ ಕುರಿತು ಒಲವು ಇದೆ ಜೊತೆಗೇ, ಬಾಹುಕ ಋತುಪರ್ಣನಲ್ಲಿಯೇ ಇದ್ದ ಬಡಕಲು ಕುದುರೆಗಳನ್ನೇ ಕಟ್ಟಿ ತನ್ನ ವಿದ್ಯೆಯ ಚಾತುರ್ಯವನ್ನು ತೋರಿದ್ದಾನೆ, ಹಾಗಾಗಿ ಅವನಿಗೆ ಈಗ ಅಶ್ವವಿದ್ಯೆಯ ಮೇಲೆ ಲೋಭ ಉಂಟಾಗಿದೆ. ಹೀಗೆ ಮುಂದಿನ ಕಾರ್ಯದ ಪ್ರಾಮುಖ್ಯ ಹಾಗೂ ವಿದ್ಯೆಯ ಲೋಭ ಇವುಗಳಿಂದಾಗಿ ಋತುಪರ್ಣ ಕಡೆಗೂ ಒಪ್ಪಿದ. ಇದನ್ನೇ ಕರ್ಕೋಟಕ ನಳನಿಗೆ ಹೇಳಿದ್ದು, ಹೀಗೆಲ್ಲ ನಡೆಯಲಿಕ್ಕಿದೆ ಮುಂದೆ ಒಳ್ಳೆಯ ಅವಕಾಶ ಬರುತ್ತದೆ, ಅಲ್ಲಿಯವರೆಗೂ ನೀನು ಮಾರುವೇಷದಲ್ಲಿರಬೇಕು. ನಿನ್ನ ನಿಜ ರೂಪದಲ್ಲಿದ್ದರೆ ನಿನ್ನ ಕಾರ್ಯಸಾಧನೆ ಆಗುವುದಿಲ್ಲ ಅಂತ, ಈಗ ಅವನು ನಳನ ವೇಷದಲ್ಲಿಯೇ ಇದ್ದಿದ್ದರೆ ಋತುಪರ್ಣನಲ್ಲಿ ಸಾರಥ್ಯಮಾಡಲಿಕ್ಕೆ ಆಗುತ್ತಿರಲಿಲ್ಲ, ಹಾಗೂ ಈ ವಿದ್ಯೆಯ ಪ್ರಸ್ತಾಪವೇ ಬರುತ್ತಿರಲಿಲ್ಲ, ಹಾಗೆಯೇ ಕೇಳಿದರೂ ಋತುಪರ್ಣನಿಗೆ ನಿರಾಕರಿಸಲು ಎಲ್ಲ ಕಾರಣಗಳೂ ಇದ್ದವು.

ಹೀಗೆ ಸನ್ನಿವೇಶ ಬರದ ಹೊರತು ಯಾವುದೇ ಕೆಲಸ ಆಗುವುದಿಲ್ಲ, ಬಾಳೆಹಣ್ಣಿನ ಸಿಪ್ಪೆ ಸುಲಿದಂತೆ ಅನ್ನುತ್ತೇವಲ್ಲ. ಅಂದರೆ, ಅಷ್ಟು ಸುಲಭವಾದ ಕೆಲಸ ಅಂತ. ಅದೇ ಹಲಸಿನ ಸಿಪ್ಪೆ ಸುಲಿಯುವುದು ಅತೀ ಕಠಿಣ ಕೆಲಸ. ಅಲ್ಲದೇ, ಕೈ ಮೈಗಳಿಗೆಲ್ಲ ಅಂಟುತ್ತದೆ ಅದರ ರಸ, ದಪ್ಪದಾದ ಸಿಪ್ಪೆ ಬೇರೆ. ಹೀಗೆ ಬಾಳೆಯ ಹಣ್ಣಾದರೂ ಕಾಯಿಯಾಗಿದ್ದರೆ ಆಗ ಸಿಪ್ಪೆ ತೆಗೆಯಲಾದೀತೇ? ಅದು ಹದವಾಗಿ ಕಳಿತಾಗ, ಬೆಳೆದು ಹಣ್ಣಾದಾಗ ಸಿಪ್ಪೆ ತಂತಾನೇ ಸುಲಭವಾಗಿ ತೆಗೆಯಲು ಬರುತ್ತದೆ. ಮೊದಲೇ ಯಾಕೆ ಕಷ್ಟ ಎಂದರೆ, ಕಾಲ ಇನ್ನೂ ಪಕ್ವವಾಗಿಲ್ಲ ಅಂತ, ಒಂದು ವೇಳೆ ಆಗಲೇ ಮಾಡಬೇಕೆಂದರೆ ಅದಕ್ಕೆ ಮಹಾಪ್ರಯತ್ನ, ದೊಡ್ಡಪ್ರಯತ್ನ ಬೇಕಾಗುತ್ತದೆ. ಹಾಗಾದರೂ ಕೆಲಸ ಆಗಬಹುದು, ಆಗದೆಯೂ ಇರಬಹುದು. ಹೀಗೆ ಕರ್ಕೋಟಕನ ಮಾತು ಈಗ ಫಲಿಸುತ್ತಿದೆ. ನಳನೂ ರಾಜನೀತಿಜ್ಞನೇ, ಬುದ್ದಿವಂತ ಹಾಗೂ ಜ್ಞಾನವಂತ. ಅವನು ಒಳ್ಳೆಯವನು ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ದೋಷ ಅವನಲ್ಲಿ ಇಲ್ಲ. ಏನು ಒಳ್ಳೆಯವನಾಗಿರುವುದು ದೋಷವೇ? ಎಂದರೆ, ಹೌದು ಈಗ ಪ್ರಪಂಚದಲ್ಲಿ ಒಳ್ಳೆಯತನವೂ ದೋಷವೇ. ಕಾಲವೇ ಹಾಗಾಗಿದೆ. ಹೀಗೆಯೇ ರಾಮನೂ ಸಮುದ್ರೋಲ್ಲಂಘನ ಸಮಯದಲ್ಲಿ ಸಮುದ್ರರಾಜ ತನ್ನ ಪ್ರಾರ್ಥನೆಗೆ ಒಪ್ಪಿ ಸೇತುವೆಗೆ ಜಾಗ ಕೊಡದಿದ್ದಾಗ ಲಕ್ಷ್ಮಣನಿಗೆ ಹೇಳುತ್ತಾನೆ. ಲಕ್ಷ್ಮಣ ನನ್ನ ಮೃದುತ್ವಕ್ಕಿಂತ ಧನುರ್ಬಾಣಗಳೇ ಒಳ್ಳೆಯದು ಎಂದು.
ಋತುಪರ್ಣನಿಗೆ ಇದು ಸರಿಯಾದ ಸಂದರ್ಭ ಅಂತ ತೋರಿತು. ಅಂತೂ ಒಪ್ಪಿದ, “ಆಯಿತು ನಿನ್ನಿಚ್ಛೆಯಂತೆ ನಿನಗೆ ಬೇಕಾದ ಅಕ್ಷವಿದ್ಯೆ ಹಾಗೂ ಸಾಂಖ್ಯಾನಗಳನ್ನು ಕೊಡುತ್ತೇನೆ ಆದರೆ ನನಗೆ ಬೇಕಾದ ಅಶ್ವವಿದ್ಯೆ ನಿನ್ನಲ್ಲೇ ನ್ಯಾಸವಾಗಿ ಇರಲಿ ಮುಂದೆ ಬೇಕಾದಾಗ ನಾನೇ ಕೇಳಿ ಪಡೆದುಕೊಳ್ಳುತ್ತೇನೆ” ಅಂತ.

ಇದೇನು ವ್ಯವಹಾರವೇ? ಇದು ಸಾಧುವೇ ? ಅಂತ ಕೇಳಿದರೆ ಈ ಕಾಲದಲ್ಲಿ ಇದು ಸಾಧುವಲ್ಲವೇನೋ, ಆದರೆ ಆ ಕಾಲದಲ್ಲಿ ಈ ರೀತಿಯಾದ ಅನೇಕ ಉದಾಹರಣೆಗಳನ್ನು ಕಾಣಬಹುದು, ನಿಕ್ಷೇಪವಾಗಿ ಇರಿಸಿದ್ದನ್ನು ಅನುಕೂಲ ಬಂದಾಗ ಪಡೆದುಕೊಳ್ಳುವ ವಿಚಾರವಾಗಿ. ಋತುಪರ್ಣನೇನೂ ದಡ್ಡನಲ್ಲ ಯಾಕಾಗಿ ಹೀಗೆ ಹೇಳಿದ ಅಂದರೆ ಬಾಹುಕನ ಮೇಲೆ ಹೇಗೂ ನಂಬಿಕೆ ಇದೆ. ಆದರೆ ಈಗ ಅಷ್ಟಾದರೂ ಸಮಯ ಉಳಿಯಲಿ ಪ್ರಯಾಣದಲ್ಲಿ, ಬೇಗ ವಿದರ್ಭಕ್ಕೆ ತಲುಪೋಣ ಈಗಾಗಲೇ ಸಾಕಷ್ಟು ತಡವಾಗಿದೆ ಅಂತ ಅವನ ಚಿಂತೆ ಅಷ್ಟೇ.

ವಿದ್ಯೆ ಕೊಡಲು ಯಾಕೆ ಒಪ್ಪಿದ ಎಂದರೆ, ವಿದ್ಯಾದಾನಮಾಡುವುದರಿಂದ ವಿದ್ಯೆ ಹೆಚ್ಚಾಗುತ್ತದೆ ಬಿಟ್ಟರೆ ಕಡಿಮೆಯಗುವುದಿಲ್ಲ, ಬೇರೆಯವರಿಗೆ ಹೇಳಿಕೊಟ್ಟಂತೆ ತಮಗೂ ಹೆಚ್ಚುಹೆಚ್ಚು ಅರ್ಥವಾಗುತ್ತದೆ. ಅಲ್ಲದೇ ಈಗ ಎರಡು ಲಾಭ ಕಾಣುತ್ತಿದೆ, ಒಂದು ಬೇಗ ತಲುಪಬಹುದು ಹಾಗೂ ಆ ಅಶ್ವಹೃದಯವನ್ನು ಪಡೆಯಬಹುದು. ಹಾಗಾಗಿ ಒಪ್ಪಿದ, ವಿದ್ಯೆ ವಿನಿಮಯ ಯಾಕಾಗಿ ಅಂದರೆ ಅದಕ್ಕೂ ಕಾರಣ ಇದೆ ಶಾಸ್ತ್ರದಲ್ಲಿ. ಯಾವುದೇ ವಿದ್ಯೆಯನ್ನು ಪಡೆಯಲು ಮೂರು ವಿಧಾನಗಳನ್ನು ತಿಳಿಸಿದ್ದಾರೆ. ಮೊದಲನೆಯದು ಗುರುಶುಶ್ರೂಷೆ ಮಾಡುವುದರ ಮೂಲಕ ಅಂದರೆ ಗುರುಕುಲ ವಾಸಮಾಡಿ ನಿಯಮಗಳಿಗನುಸಾರವಾಗಿ ಕ್ಲೇಶಗಳನ್ನನುಭವಿಸಿ, ಪರವಶತೆಯಿಂದ ಗುರುಗಳ ಸೇವೆಮಾಡಿ ಅವರನ್ನು ಸಂಪ್ರೀತಿಗೊಳಿಸಿ ಪಡೆಯುವುದು, ಎರಡನೆಯದು ಬಹುದೊಡ್ಡ ಸಂಪತ್ತನ್ನು ಕೊಟ್ಟು ವಿದ್ಯೆಯನ್ನು ಪಡೆಯುವುದು, ಹಾಗೆಯೇ ಮೂರನೆಯದು ವಿದ್ಯಾವಿನಿಮಯದ ರೂಪದಲ್ಲಿ ಅಂದರೆ ತಾನು ಪಡೆದುಕೊಳ್ಳುವ ಒಂದು ವಿದ್ಯೆಗೆ ಪ್ರತಿಯಾಗಿ ಇನ್ನೊಂದು ವಿದ್ಯೆಯನ್ನು ನೀಡುವುದರ ಮೂಲಕವಾಗಿ, ಇದು ಬಿಟ್ಟರೆ ನಾಲ್ಕನೆಯದು ಉಪಾಯ ಯಾವುದೂ ಇಲ್ಲ. ಇಲ್ಲಿ ಬಾಹುಕನಿಗೆ ಮೊದಲೆರಡೂ ಸಾಧ್ಯವಿಲ್ಲ. ಅದಕ್ಕೆ ಋತುಪರ್ಣನೂ ಒಪ್ಪಲಾರ ಹಾಗಾಗಿ ಮೂರನೆಯದಾದ ವಿನಿಮಯಕ್ಕೆ ಸಿದ್ಧನಾದ ಅಲ್ಲದೇ ರಾಜಾಧಿರಾಜನಾದ್ದರಿಂದ ಅವನು ಭಿಕ್ಷೆ ಬೇಡಲಾರ.

ಹೀಗೆ ಋತುಪರ್ಣನಿಂದ ನಳನಿಗೆ ಅಕ್ಷವಿದ್ಯೆಯ ಸಂಕ್ರಮಣವಾಯಿತು. ನಳನೊಳಗೆ ಅಕ್ಷವಿದ್ಯೆಯ ಪ್ರವೇಶವಾದೊಡನೆಯೇ ಅವನೊಳಗಿದ್ದ ದುಷ್ಟಶಕ್ತಿಗೆ ಇನ್ನೂ ಅಲ್ಲಿರಲು ಕಷ್ಟವಾಯಿತು. ಆ ವಿದ್ಯೆ ನಳನಲ್ಲಿ ಆತ್ಮಸಾತ್ ಆಗುತ್ತಿದ್ದಂತೆಯೇ ಅವನ ಶರೀರದಿಂದ ಅತ್ಯಂತ ಕುರೂಪವಾದ ಆಕೃತಿಯೊಂದು ಹೊರಗೆ ಬಂದಿತು. ಅದರ ಬಾಯಿಂದ ಅದಕ್ಕಿಂತಲೂ ಕಪ್ಪಾಗಿದ್ದ ದ್ರವವೊಂದನ್ನು ಹೊರ ಸುರಿಸುತ್ತಾ ಬಂತು, ನಳ ಆಶ್ಚರ್ಯದಿಂದ ಅದೇನೆಂದು ನೋಡುತ್ತಿದ್ದಾನೆ, ಬೇರೆ ಇಬ್ಬರಿಗೂ ಅದು ಕಾಣುತ್ತಿಲ್ಲ. ಆ ಆಕಾರ ಕಾರಿಕೊಳ್ಳುತ್ತಿರುವ ದ್ರವ ಕಡಿಮೆಯಾಗುತ್ತಾ ಬಂದಂತೆ ಮಸುಕಾಗಿದ್ದ ಆ ಆಕಾರ ಸ್ಪಷ್ಟವಾಗತೊಡಗಿತು. ಪೂರ್ತಿ ಮುಗಿದ ನಂತರ ಅದು ತಿಳಿಯಾಗಿ ಕಂಡಿತು, ಅದು ಕಲಿ. ಅದುವರೆಗೂ ಕಲಿಯ ಬಾಯಿಂದ ಕಾರುತ್ತಿದ್ದ ಆ ದ್ರವ ಅದು ಕರ್ಕೋಟಕನ ವಿಷ, ಇಲ್ಲಿಯವರೆಗೂ ಆ ವಿಷ ನಳನ ದೇಹದ ಯಾವುದೇ ಅಂಗವನ್ನು ಹಾನಿ ಮಾಡದೇ ಕಲಿಯನ್ನು ಮಾತ್ರಾ ಒಳಗೂ ಹೊರಗೂ ತುಂಬಿ ಕ್ಷಣಕ್ಷಣವೂ ಬೇಯಿಸುತ್ತಿದೆ, ಸುಡುತ್ತಿದೆ. ಆದರೂ ಆ ಕಲಿ ಇದನ್ನೆಲ್ಲ ತಡೆದು ಒಳಗೇ ಕುಳಿತಿದ್ದ ಇನ್ನೇನಾದರೂ ಸಮಸ್ಯೆ ಮಾಡಲು ಸಾಧ್ಯವೇ ಅಂತ. ಆದರೆ ಯಾವಾಗ ಅಕ್ಷವಿದ್ಯೆಯ ಉಪದೇಶ ಆಯಿತೋ ಆ ನಂತರ ಕಲಿಗೆ ಒಳಗೆ ಉಳಿಯಲು ಸಾಧ್ಯವಾಗದೆ ಅನಿವಾರ್ಯವಾಗಿ ಹೊರಬಂದ. ಇಲ್ಲಿ ನೆನಪಿಡಬೇಕಾದ ವಿಷಯವೆಂದರೆ ನಮ್ಮನ್ನು ನಾವು ಸುಟ್ಟುಕೊಳ್ಳದೇ ಬೇರೆಯವರನ್ನು ಸುಡಲು ಸಾದ್ಯವಿಲ್ಲ. ಬೇರೆಯವರನ್ನು ಸುಡಲು ಹೊರಟರೆ ಅದು ನಮ್ಮನ್ನೂ ಸುಡಲೇಬೇಕು. ಅಲ್ಲದೇ ಶಾಪದ ಪರಿಣಾಮ ಬೇರೆ ಇದೆ. ಇದಕ್ಕೆ ಕಾರಣ ಏನು ಎಂಬುದನ್ನು ಮುಂದೆ ನೋಡೋಣ.

ವಿಷ ವಮನಗೈಯುವ ವಿಕೃತಾಕೃತಿ ಕಲಿಯದ್ದೇ ಎನ್ನುವುದು ಖಾತರಿಯಾಯಿತು, ಹಿಂದೆ ಕರ್ಕೋಟಕ ಹೇಳಿದ್ದ, ಕಲಿಯ ಪ್ರವೇಶ ನಿನ್ನೊಳಗೆ ಅದದ್ದರಿಂದಲೇ ನೀನು ಜೂಜಿನಲ್ಲಿ ಸೋಲುವಂತೆ ಆಗಿದ್ದು, ನಿನ್ನ ಪತ್ನಿಯನ್ನು ಕಾಡಿನಲ್ಲಿ ಒಬ್ಬಂಟಿಯಾಗಿ ಬಿಟ್ಟು ಬರುವಂತಾಗಿದ್ದು ಅಂತ. ಈಗ ಅವನೇ ಹೊರಬಂದ. ವಿಷ ಯಾವಾಗಲೂ ಅಪಾಯಕಾರಿಯೇ ಅಂತಲ್ಲ ಅದು ಔಷಧವಾಗಿಯೂ ಬಳಕೆಗೆ ಬರುತ್ತದೆ. ಕೆಟ್ಟದ್ದು ಅಂತಲೇ ಸೃಷ್ಟಿಯಲ್ಲಿ ಯಾವುದಕ್ಕೂ ಹಣೆಪಟ್ಟಿ ಹಚ್ಚಲು ಸಾಧ್ಯವಿಲ್ಲ, ಕರ್ಕೋಟಕನ ವಿಷವೂ ಅಂತೆಯೆ, ಈಗ ನೋಡಿ ಕಲಿ ವಿಷವನ್ನೇ ವಮನ ಮಾಡುತ್ತಿದ್ದಾನೆ, ಪೂರ್ಣವಿಷ ಹೊರಬಂದ ನಂತರ ಕಲಿ ನಿರುಮ್ಮಳನಾದಾಗ, ಅದನ್ನು ಕಂಡ ನಳನಿಗೆ ಅಮಿತವಾದ ಕ್ರೋಧ ಉಂಟಾಯಿತು. ಅವನು ಕಲಿಯನ್ನು ಕ್ರೋಧದಿಂದ ನೋಡುತ್ತಾ ಏನೂ ತಪ್ಪನ್ನು ಮಾಡದ ನನಗೆ ಯಾಕೆ ಇಂತಹ ನೋವು ಕೊಟ್ಟೆ ನೀನು ಶಾಪಕ್ಕೆ ಅರ್ಹನಾಗಿದ್ದೀಯೆ ಎಂದು ಶಾಪ ಕೊಡಲು ಮುಂದಾದ. ಆಗಿನ ರಾಜರಿಗೆ ಶಾಪ ಕೊಡುವ ಯೋಗ್ಯತೆ ಇತ್ತು. ಶಾಪ ಕೊಡಬೇಕಾದರೆ ತಪಃಶಕ್ತಿ ಹಾಗೂ ಪುಣ್ಯಸಂಚಯ ಎರಡೂ ಇರಬೇಕು, ಕೆಲವರು ಕೆಟ್ಟಬಾಯಿಯವರು ಇರುತ್ತಾರೆ ಬಾಯಿಬಿಟ್ಟರೆ ಶಾಪಕೊಡುತ್ತಾರೆ. ಅವರಿಂದ ಏನೂ ಅಪಾಯ ಇಲ್ಲ, ಇನ್ನು ಕೆಲವರಂತೂ ಶಾಪಕೊಟ್ಟರೆ ಒಳ್ಳೆಯದೇ ಆಗುತ್ತದೆ ಪಡೆದುಕೊಂಡವರಿಗೆ. ಹಾಗಾಗಿ ಎಲ್ಲ ಶಾಪಗಳಿಗೆ ಹೆದರಬೇಕಾಗಿಲ್ಲ. ಎಲ್ಲಿ ತಪಸ್ಸಿದೆಯೋ ಎಲ್ಲಿ ಧರ್ಮವಿದೆಯೋ ಅಲ್ಲಿ ಮಾತ್ರವೇ ಶಾಪ ಫಲಿಸುತ್ತೆ. ನಳನಲ್ಲಿ ಧರ್ಮ ಪರಿಪೂರ್ಣವಾಗಿದೆ ಜೊತೆಗೆ ನಳ ರಾಜರ್ಷಿಯೂ ಹೌದು. ಹೇಗೆ ಅಂದರೆ ಅವನ ಪ್ರಜೆಗಳ ಕರದ ಮೂಲಕವಾಗಿ, ತನ್ನ ಪ್ರಜೆಯ ಆರನೇ ಒಂದು ಭಾಗದ ಉತ್ಪತ್ತಿ ರಾಜನಿಗೆ ಸಲ್ಲುತ್ತದೆ ಅಂತೆಯೆ ಪುಣ್ಯವಾಗಲೀ ಪಾಪವಾಗಲೀ ರಾಜನಿಗೆ ಸಲ್ಲಬೇಕು. ಯಾಕೆಂದರೆ ರಾಜನು ವ್ಯವಸ್ಥೆಮಾಡಿಕೊಟ್ಟಿರುವುದರಿಂದ. ಮನೆ, ಶಾಲೆ, ನೀರು, ವಿದ್ಯುತ್ ಇತ್ಯಾದಿಗಳ ವ್ಯವಸ್ಥೆ ಮಾಡಿಕೊಟ್ಟಿರುವುದರಿಂದ ರಾಜನಿಗೆ ಪುಣ್ಯಪಾಪಗಳಲ್ಲಿ ಭಾಗವಿದೆ. ಅದಕ್ಕಾಗಿಯೇ ರಾಜಾ ರಾಷ್ಟ್ರಗತಂ ಪಾಪಂ| ಎಂದೂ ಹೇಳಿದೆ. ಧಮಾತ್ಮನಾದ ರಾಜ ತನ್ನ ರಾಜ್ಯದಲ್ಲಿ ಪಾಪಕರ್ಮ ಆಗಲೂ ಬಿಡ, ಮಾಡಿದವನಿಗೂ ಯೋಗ್ಯ ದಂಡನೆ ನೀಡುತ್ತಾನೆ. ಹೀಗಾಗಿ ಅವನ ರಾಜ್ಯದಲ್ಲಿ ಪಾಪಿಯೂ ಶುದ್ಧ, ಇದರಿಂದಾಗಿ ರಾಜನೂ ಶುದ್ಧ ಇದೇ ನಿಜವಾದ ದಂಡನೀತಿ.. ಯಾವ ರಾಜ ಧಾರ್ಮಿಕನಾಗಿರುತ್ತಾನೋ ಅವನು ಸಹಜವಾಗಿಯೇ ರಾಜರ್ಷಿ ಆಗಿರುತ್ತಾನೆ. ಯಾಕೆಂದರೆ ಕೋಟ್ಯಾನುಕೋಟಿ ಪ್ರಜೆಗಳ ಪುಣ್ಯ ಅವನ ಪಾಲಿಗೆ ಬಂದಿರುತ್ತದೆ. ಹಾಗೂ ಅವನು ಪಾಪಿಗಳನ್ನು ಸರಿಯಾಗಿ ದಂಡಿಸಿರುತ್ತಾನೆ. ನಳನೂ ಹಾಗೆಯೇ. ಅವನದು ಧರ್ಮಯುಕ್ತ ಜೀವನ, ಅವನೆಂದಿಗೂ ಸುಳ್ಳನ್ನು ಅಡಿಲ್ಲ. ಯಾರು ಎಂದಿಗೂ ಸುಳ್ಳಾಡಿಲ್ಲವೋ ಅವನು ಆಡುವ ಮಾತೆಲ್ಲವೂ ಸತ್ಯವಾಗಿರುತ್ತದೆ. ಸತ್ಯ ಅನ್ನುವುದು ಒಂದು ಗುಣ, ಸಹಜ ಸತ್ಯಸಿದ್ಧಿಯ ಲಕ್ಷಣವೇ ಇದು. ಹಾಗಾಗಿಯೇ ನಳ ಕಲಿಯನ್ನು ಶಪಿಸಲು ಹೊರಟ. ಅಗ ಕಲಿ ಏನು ಮಾಡಬೇಕು? ಇಷ್ಟುಕಾಲವೂ ನಳನ ದೇಹದೊಳಗೆ ಕರ್ಕೋಟಕನ ವಿಷದಲ್ಲಿ ಮುಳುಗಿ ಅದನ್ನು ಕುಡಿದು ಹೈರಾಣಾಗಿದ್ದ, ಈಗಷ್ಟೇ ಅದರಿಂದ ಹೊರಬಂದ ಕೂಡಲೇ ಈಗ ಶಾಪವೆಂದರೆ ಕಲಿ ಹೆದರಿದ, ನಳನ ಕಾಲು ಹಿಡಿದ, ಗಡಗಡನೆ ನಡುಗುತ್ತಿದ್ದಾನೆ. ಲೋಕವನ್ನೆಲ್ಲಾ ನಡುಗಿಸಬಲ್ಲವನು ತಾನೇ ನಡುಗುತ್ತಿದ್ದಾನೆ.

ನಳ ಶರಣಾಗತ ರಕ್ಷಕನೆಂಬುದು ಕಲಿಗೆ ತಿಳಿದಿದೆ, ಹಾಗಾಗಿ ಶರಣಾದ ಹಾಗೂ ಹೇಳಿದ ರಾಜ ಒಂದು ಕ್ಷಣ ತಡಿ, ಒಂದು ಮಾತು ಕೇಳು, ಕೋಪಮಾಡಿಕೊಳ್ಳಬೇಡ, ನನಗೆ ಶಾಪವನ್ನು ನೀನು ನೀಡದಿದ್ದರೆ ನಿನಗೆ ಶಾಶ್ವತ ಕೀರ್ತಿ ಉಂಟಾಗುವಂತೆ ಮಾಡುತ್ತೇನೆ. ಒಳಗೆ ನಾನೆಷ್ಟು ಕಷ್ಟ ಅನುಭವಿಸಿದ್ದೇನೆ ನಿನಗೆ ತಿಳಿದಿದೆಯೇ? ಒಳಗೆ ಮೂರು ಅಗ್ನಿಗಳು ನನ್ನನ್ನು ನಿತ್ಯ ಸುಡುತ್ತಿದ್ದವು. ಒಂದು ಧರ್ಮಯುಕ್ತವಾದ ನಿನ್ನ ಶರೀರದಲ್ಲಿನ ವಾಸ, ಎರಡು ಕರ್ಕೋಟಕನ ವಿಷ ಹಾಗೂ ಮೂರನೆಯದು, ಇವೆರಡಕ್ಕಿಂತಲೂ ಹೆಚ್ಚಿನದ್ದು ಆ ಸುಭಗೆ ನಿನ್ನ ಮಗನ ತಾಯಿಯ ಶಾಪ, ನೀನು ಅವಳನ್ನು ಬಿಟ್ಟು ಹೊರಟಾಗ ಇದಕ್ಕೆ ಕಾರಣರಾದವರು ನನ್ನ ಪತಿಗಿಂತ ಹೆಚ್ಚು ಸಂಕಟಪಡಲಿ ಅಂತ ಅವಳು ನನಗೆ ಶಾಪಕೊಟ್ಟಿದ್ದಾಳೆ. ಹೀಗೆ ಈ ಮೂರೂ ನನ್ನನ್ನು ಅಹರ್ನಿಶಿ ಪೀಡಿಸಿದೆ, ಇನ್ನು ಹೆಚ್ಚಿನ ಶಾಪ ಕೊಡಬೇಡ ಅಂತ ಬೇಡಿಕೊಂಡ. ಅವಳು ಕೊಟ್ಟಿದ್ದೂ ಹೌದು. ಪಾಪಿಯಲ್ಲದ ನನ್ನ ನಳನನ್ನು ಯಾವನು ಪೀಡಿಸಿದನೋ ಅವನಿಗೆ ಸಾವಿಗಿಂತ ಕೆಟ್ಟ ಬದುಕು ಬರಲಿ ಎಂದು ಅವಳು ತನ್ನ ನೋವಿನಿಂದ ಕೂಡಿ ಶಪಿಸಿದ್ದಳು. ನೊಂದವರು ಶಪಿಸುವುದು ಬೇಡ, ಉಂಡವರು ಹರಸುವುದು ಬೇಡ ಅಂತ ಗಾದೆಯೇ ಇದೆ. ಆ ನೊಂದ ನೋವೇ ಶಾಪ, ಬೇರೆ ಶಾಪವೇ ಬೇಡ. ಆ ನಿಟ್ಟಸಿರು ಶಾಪ. ಹಾಗಾಗಿಯೇ ನಮ್ಮ ಕಾರಣದಿಂದಾಗಿ ಯಾರೂ ನಿಟ್ಟುಸಿರು ಬಿಡಬಾರದು, ಯಾರಲ್ಲೂ ಬಿಸಿಯುಸಿರು ಬರಬಾರದು. ಪತಿವ್ರತೆಯಾದವಳು ಅಳುತ್ತಾ ಶಪಿಸಿದರೆ ಅಷ್ಟು ಸಾಕು ಜೀವನ ಹಾಳಾಗಲು. ಸ್ತ್ರೀ ಕಣ್ಣೀರು ಹಾಕಿದರೂ ಸಾಕು ಅವರ ಮನೆಯೇ ಹಾಳಾಗುತ್ತದೆ ಅಂತ ಮನು ಹೇಳುತ್ತಾನೆ. ರಾವಣನಿಗೂ ಇದೇ ಕಾರಣದಿಂದಾಗಿ ಸರ್ವನಾಶ ಬಂದಿತು ಅಂತಲೂ ಹೇಳಿದೆ ಉತ್ತರಕಾಂಡದಲ್ಲಿ. ಅವನು ಸಾವಿರಾರು ಸ್ತ್ರೀಯರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಬಯಸಿ, ಅವರ ಮನೆಯವರನ್ನು ನೋಯಿಸಿ ಅವರುಗಳನ್ನು ಅಪಹರಿಸಿ ಕೂಡಿಹಾಕಿದ್ದ. ಅವರೆಲ್ಲರ ಕಣ್ಣೀರು ನೋವಾಗಿ ಅದೇ ಸಾಕಾಯಿತು, ಅಲ್ಲದೇ ಅವರು ನಿನಗೆ ಸಾಧ್ವಿಯೊಬ್ಬಳ ದೆಸೆಯಿಂದಲೇ ಮರಣವಾಗಲಿ ಎಂದೂ ಶಾಪಕೊಟ್ಟಿದ್ದರು, ಅಲ್ಲದೇ ಸೀತೆಯೂ ತನ್ನ ಅಪಹರಣವಾದಾಗ ನೀನು ಸರ್ವನಾಶವಾಗು ಎಂದು ಶಪಿಸಿರುತ್ತಾಳೆ, ಈ ಎಲ್ಲವೂ ಸೇರಿ ಎಷ್ಟು ವೈಭವ, ಅಧಿಕಾರವಿದ್ದರೇನು ರಾವಣ ನಾಶಹೊಂದಿದ. ಇಲ್ಲಿ ಕಲಿಯೂ ಹಾಗೆಯೇ ಅವಳ ಹೆಸರನ್ನು ಹೇಳಲಿಕ್ಕೂ ಅಗದಿರುವಷ್ಟು ತತ್ತರಿಸಿದ್ದಾನೆ. ಯಾವಳನ್ನು ಬಯಸಿ ಮದುವೆಯಾಗಲು ಹೊರಟು, ನಳ ಅದಕ್ಕೆ ಅಡ್ಡಿಯಾದನೆಂಬ ಒಂದು ಕಾರಣಮಾತ್ರದಿಂದಲೇ ಅವರನ್ನು ಇನ್ನಿಲ್ಲದಂತೆ ಪೀಡಿಸಿದ್ದನೋ, ಅವಳ ಹೆಸರು ಹೇಳಲೂ ಅವನಿಗೆ ಈಗ ಬಾಯಿಲ್ಲ, ಹೆದರುತ್ತಿದ್ದಾನೆ. ಹೀಗೆ ಪತಿವ್ರತೆಯರು ತಮ್ಮ ಪುಣ್ಯದ್ಯಿಂದ ಪತಿಯರನ್ನೂ ಕಾಪಾಡುತ್ತಾರೆ.

ಕಲಿ ಎಲ್ಲಿಯವರೆಗೆ ಅಂದರೆ ವ್ಯಾಪಾರಕ್ಕೆ ಇಳಿದುಬಿಟ್ಟ. ನೀನು ಶಾಪಕೊಡದಿದ್ದರೆ ನಿನ್ನ ಹೆಸರನ್ನು ಸ್ಮರಣೆ ಮಾಡಿದರೂ ಸಾಕು ಅಂತಹವರನ್ನು ನಾನು ಮುಟ್ಟುವುದಿಲ್ಲ, ದಯಮಾಡಿ ನನ್ನನ್ನೊಂದು ಬಿಟ್ಟುಬಿಡು ಅಂತ. ಯುಗಯುಗಗಳಲ್ಲಿಯೂ ಇದನ್ನು ಪಾಲಿಸುತ್ತೇನೆ. ಯಾವನು ಶ್ರದ್ಧೆಯಿಂದ ನಿನ್ನನ್ನು ನೆನೆಯುತ್ತಾನೋ ಅವನಿಗೆ ನನ್ನಿಂದ ಕಾಟವಿಲ್ಲ ಅಂತ ಬೇಡುತ್ತಾನೆ.
ನಾವು ಪ್ರಪಂಚಕ್ಕೆ ಏನನ್ನು ಕೊಡುತ್ತೇವೋ ಅದು ಇಮ್ಮಡಿ, ಮುಮ್ಮಡಿಯಾಗಿ ಹಿಂದೆ ಬರುತ್ತದೆ, ನಮ್ಮ ಮುಖದಲ್ಲಿ ಮಸಿಮೆತ್ತಿರುವುದು ಕನ್ನಡಿಯಲ್ಲಿ ಕಂಡರೆ ಅದು ನಮ್ಮ ಮುಖದ ದೋಷವೇ ಹೊರತು ಕನ್ನಡಿಯದ್ದಲ್ಲ. ಒಳ್ಳೆಯವರಿಗೆ ಒಳ್ಳೆಯದನ್ನು ಮಾಡಿದರೆ ಹತ್ತುಪಟ್ಟು ಒಳ್ಳೆಯದಾಗುತ್ತದೆ, ಹಾಗೆಯೇ ಒಳ್ಳೆಯವರಿಗೆ ಕೆಟ್ಟದನ್ನು ಮಾಡಿದರೆ ಹತ್ತುಪಟ್ಟು ಪಾಪ ಅವರನ್ನು ಮುತ್ತುತ್ತದೆ. ಹೀಗಿರುವಾಗ ಕಲಿಗೆ ಬೇಕಿತ್ತಾ ಇದೆಲ್ಲ, ಅವನಿಗೆ ಇದರ ಪರಿಣಾಮ ಕಲಿಯುಗದಲ್ಲಿಯೂ ಬಿಡುತ್ತಿಲ್ಲ, ಈಗಲೂ ನಳನ ಹೆಸರನ್ನು ಹೇಳಿದರೆ ಅಲ್ಲಿ ಕಲಿ ಇರುವಂತಿಲ್ಲ, ಅಷ್ಟು ದೂರವಾಗುವಂತಾಯಿತು, ಹೀಗೆ ನಳನ ಹೆಸರನ್ನು ಹೇಳಿಯೇ ಉದ್ಧಾರವಾಗುವ ಸಾಧ್ಯತೆ ಇದೆ. ಆದರೆ ನಳನ ಹೆಸರನ್ನು ಹೇಳುವಾಗ ತೂಕಡಿಸುತ್ತಾ, ಆಲಸ್ಯದಿಂದ ಹೇಳುವಂತಿಲ್ಲ. ಶ್ರದ್ಧೆಯಿಂದ, ಪ್ರೀತಿಯಿಂದ ಸ್ಮರಣೆ ಮಾಡಿದರೆ ಸಾಕು.

ಆದರೆ ಆಗಲೂ ನಳನಲ್ಲಿ ಕೋಪ ಹೋಗಲಿಲ್ಲ, ಆದರೆ ಕೋಪವನ್ನು ನಿಯಂತ್ರಣ ಮಾಡಿಕೊಂಡ, ಅದನ್ನು ಗಮನಿಸಿದ ಕಲಿ ಮಾತಾಡದೇ ಓಡಿ ಹೋದ. ಓಡಿದವನೇ ಅಲ್ಲಿಯೇ ಇದ್ದ ವಿಭೀತಕದ ಮರದಲ್ಲಿ ಸೇರಿಕೊಂಡ, ಅಂದಿನಿಂದ ಆ ವಿಭೀತಕ ಮರ ವರ್ಜ್ಯವೆಂದಾಯಿತು, ಅದು ದುಷ್ಟಶಕ್ತಿಗಳಿಗೆ ಆವಾಸವಾಯಿತು. ಅಪ್ರಶಸ್ತ ಎನ್ನುವ ಪಟ್ಟಿಗೆ ಸೇರಿತು ಆ ಮರ. ಆ ನಂತರ ನಳ ಪೂರ್ಣವಾಗಿ ನಿರಾಳನಾದ, ಅವನಿಗೆ ಸುಖವಾಯಿತು. ಇಡೀ ಜಗತ್ತಿನ ಸಂತೋಷ ತುಂಬಿಕೊಂಡಿತು, ಅಪ್ರತಿಮ ತೇಜಸ್ಸು ಪ್ರಕಟವಾಯಿತು, ಕಷ್ಟಗಳಿಂದ ಮುಕ್ತನಾದ, ಗ್ರಹಣ ಬಿಟ್ಟ ಚಂದ್ರನಂತೆ ಕಂಗೊಳಿಸಿದ ನಂತರ ರಥವನ್ನೇರಿದ, ಈಗ ಅವನಲ್ಲಿ ಇಮ್ಮಡಿಯಾದ ಹುಮ್ಮಸ್ಸು ಇತ್ತು. ಆ ಕುದುರೆಗಳಲ್ಲೂ ವಿಶೇಷ ಶಕ್ತಿ ಸಂಚಯವಾದಂತಾಯಿತು, ಹಾಗಾಗಿ ಮತ್ತಷ್ಟು ವೇಗದಲ್ಲಿ ಓಡಿದವು. ಹೇಗೆಂದರೆ ಅವು ಹಕ್ಕಿಗಳಂತಾಗಿ ಆಕಾಶದಲ್ಲಿ ಹಾರುವಂತೆ ಓಡಿದವು. ಪಾಪ ಇತ್ತ ಋತುಪರ್ಣನಿಗೆ ಜ್ವರ ಬಂದಂತಾಗಿದೆ. ಅವನಿಗೂ ವಾರ್ಷ್ಣೇಯನಿಗೂ ಇಲ್ಲಿ ನಡೆದ ವಿಷಯಗಳು ಅಗೋಚರವಾಗಿತ್ತು. ಅದು ಅವ್ಯಕ್ತ ಹಾಗೂ ಜೀವಗಳ ನಡುವಿನ ವ್ಯವಹಾರವಾಗಿತ್ತು. ಅವರಿಬ್ಬರೂ ಇವನು ಸಮಯ ಹಾಳುಮಾಡುತ್ತಲಿದ್ದಾನೆಂದು ಭಾವಿಸಿದ್ದರು. ಅವರಿಗೆ ಸುಸ್ತಾಗಿತ್ತು. ಈಗಿನ ವೇಗ ಅವರಿಗೆ ಸಮಾಧಾನ ತಂದಿತು.

ಇಂತಹ ಪ್ರಚಂಡ ವೇಗದಲ್ಲಿ ನಳ ವಿದರ್ಭದ ಕಡೆಗೆ ಧಾವಿಸಿದ.

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments Box