#ತತ್ತ್ವ_ಭಾಗವತಮ್, ಭಾಗವತದಲ್ಲಿ ನಿಹಿತವಾದ ಗಹನತತ್ತ್ವಗಳನ್ನಾಧರಿಸಿದ ನಿತ್ಯಪ್ರವಚನಮಾಲಿಕೆ:
#ಗೋಸ್ವರ್ಗ_ಚಾತುರ್ಮಾಸ್ಯ
22-09-2018:

ವಾಮನಾವತಾರ

ಚಿಕ್ಕವನಿಗೆ ನಮಸ್ಕಾರ, ಎಲ್ಲರಿಗಿಂತ ಚಿಕ್ಕವನಿಗೆ ನಮಸ್ಕಾರ, ಎಲ್ಲರಿಗಿಂತ ಚಿಕ್ಕವನೇ ಎಲ್ಲರಿಗಿಂತ ದೊಡ್ಡವನು.
ನಮೋ ಮಹದ್ಭ್ಯಃ ಕ್ಷುಲ್ಲಕೇಭ್ಯಶ್ಚ ನಮಃ | ಎನ್ನುವಂತೆ, ಅಣೋರಣೀಯಾನ್ ಮಹತೋ ಮಹೀಯಾನ್ ಎಂಬಂತೆ. ಬಿಂದುವಿನಲ್ಲಿ ಬಿಂದುವಾಗಿದ್ದೂ, ದೊಡ್ಡದರಲ್ಲಿ ದೊಡ್ಡವನಾಗಿರುವುದು ಅವನಿಗೆ ಮಾತ್ರವೇ ಸಾಧ್ಯ. ಆ ಎತ್ತರಕ್ಕೇರಲು ಅವನೊಬ್ಬನೇ ಸಮಥ೯, ಯಾವುದೇ ವಿಷಯದ ತುತ್ತತುದಿಗೆ ತಲುಪಿದರೆ ಅವನ ಆವಿರ್ಭಾವ ಅಲ್ಲಿದೆ ಎಂತಲೇ ಅಥ೯. ಶಂಕರರು, ವಾಮನನು ನಮ್ಮ ಮನವನ್ನು ಮೋಹಕ್ಷಯವನ್ನಾಗಿ ಮಾಡಲಿ ಎಂದು ಕೇಳುತ್ತಾರೆ. ಮೋಹಕ್ಷಯವೇ ಮೋಕ್ಷ; ಮೊದಲ ಅಕ್ಷರಗಳನ್ನು ಮಾತ್ರಾ ಗಣಿಸಿದರೆ ಅದೇ ಪದ ಬರುತ್ತದೆ. ಅವನು ಎಂಥವನು ಅಂದರೆ ಮೂರೂ ಜಗವನ್ನು ತನ್ನ ಛಲದಿಂದ ಆಕ್ರಮಿಸಿ, ಬಲಿಯನ್ನು ಬಂಧಿಸಿದವನು, ಮೂಜಗದಲ್ಲಿ ಬಲವಂತ, ರೂಪ ಮಾತ್ರ ಚಿಕ್ಕದು, ಅಂತವನನ್ನು ಸ್ಮರಿಸುವ ಶಂಕರರನ್ನು ನಾವು ಮುಟ್ಟೋಣ. ಏಕೆಂದರೆ ಅವರು ಅವನನ್ನು ಮುಟ್ಟಿದ್ದಾರೆ, ಹಾಗಾಗಿ ಅವರನ್ನು ಮುಟ್ಟಿದರೆ ನಮ್ಮನ್ನೂ ಅವರು ವಾಮನನಲ್ಲಿಗೆ ಮುಟ್ಟಿಸುತ್ತಾರೆ.

ತತ್ತ್ವಭಾಗವತಮ್

ಗುರುಕೃಪೆ ದೇವಕೃಪೆಗಳಿಗೆ ಪರಮ ಶ್ರೇಷ್ಠ ಉದಾಹರಣೆಯಾಗಿ ನಿಂತವನು ಯಾರು? ಋಷಿ, ಮಹಷಿ೯, ಯಕ್ಷ, ದೇವ, ಗಂಧವ೯ನೇ ಅಂದರೆ, ಅಲ್ಲ. ಅವನು ಅಸುರ, ಮಹಾ ಅಸುರ ಅಂದರೆ ದೊಡ್ಡ ರಾಕ್ಷಸ, ಅವನ ಹೆಸರು ಬಲಿ. ಹೆಸರು ಬಂದಿದ್ದು ದೇಹಬಲದಿಂದಾಗಿ ಅಲ್ಲ. ಅವನ ನಿಜವಾದ ಬಲ ಬೇರೆಯೇ ಇದೆ, ಅವನು ಯುದ್ಧದಲ್ಲಿ ಸೋತವನು ಹಾಗೂ ಸತ್ತುಹೋದವನು. ಹಾಗಾಗಿ ಅವನ ಬಲ, ಅಸ್ತ್ರ, ಶಸ್ತ್ರ ದೇಹ ಬಲಗಳಲ್ಲ. ಅವನ ಪ್ರಥಮ ಬಲ ಗುರುಕೃಪೆ, ಎರಡನೇ ಬಲ ದೈವಕೃಪೆ. ಸತ್ತೇ ಹೋಗಿದ್ದ ಅವನನ್ನು ಅವನ ಕುಲಗುರುಗಳು ಬದುಕಿಸಿದ್ದರು, ಅವರು ಶುಕ್ರಾಚಾರ್ಯರು. ನೋಡಿ ಗುರುಕೃಪೆಗೆ ಏನು ಬೇಕಾದರೂ ಸಾಧ್ಯವಿದೆ. ಕೆಲವು ಸಾರಿ ನಾವು ಬದುಕಿಯೂ ಸತ್ತಂತಾಗಿರುತ್ತೇವೆ. ಅಲ್ಲಿಂದ ಮತ್ತೆ ಮೇಲೆದ್ದು ಬರಬೇಕೆಂದರೆ ಇಂಥದ್ದೇನೋ ಬೇಕು. ಫೀನಿಕ್ಸ್ ಹಕ್ಕಿಯಂತೆ. ಅಂತಹ ಕಥೆ ಬಲಿಯದ್ದು. ಬದುಕಿ ಬಂದವನು ತಾನು ಯಾರಿಂದ ಬದುಕಿದೆ ಎನ್ನುವುದನ್ನು ಮರೆಯಲಿಲ್ಲ. ಸರ್ವಾತ್ಮನಾ ಅವರನ್ನು ಭಜಿಸಿದ, ಸೇವೆಗೈದ. ತಾನು ಮಾಡಬಹುದಾದ ಎಲ್ಲ ಸೇವೆ, ಸಮರ್ಪಣೆಗಳಿಂದ ಆಶ್ರಯಿಸಿದ, ತನ್ನೆಲ್ಲ ಸಂಪತ್ತನ್ನು ಗುರು ಸಮರ್ಪಿತ ಮಾಡಿದ. ಆಗ ಅವನ ಗುರಿ ಒಂದು ಹಂತವನ್ನು ತಲುಪಿತು. ಇದು ಅವನ ಬಲ, ಗುರುಬಲ.

ಹಾಗಾಗಿ ಕೇವಲ ಬಹಿರಂಗವನ್ನು ನೋಡಿ ಒಂದು ತೀರ್ಮಾನಕ್ಕೆ ಬರಬಾರದು. ಸುರನೆಂದು ಕರೆಸಿಕೊಂಡವನೊಳಗೆ ಅಸುರ ಇರಬಹುದು. ಇಂದ್ರನ ಅಹಲ್ಯ-ಗೌತಮ ದಾಂಪತ್ಯ ಭಂಗ ಪ್ರಕರಣ, ಶ್ರೀ ಕೃಷ್ಣನೇ ಸ್ವತಃ ವಾಸಿಸುವ ವ್ರಜದ ಮೇಲೆ ಮಳೆಗರೆಯುವಾಗಿನ ಕಾಲದಲ್ಲಿ, ಇಂದ್ರನೂ ಅಸುರನಂತೆಯೇ ತೋರುತ್ತಾನೆ. ಇವರ ಮುಂದೆ ಬಲಿಯಾಗಲೀ, ಅವನ ತಂದೆ ವಿರೋಚನ, ಹಾಗೂ ಅವನ ತಂದೆ ಪ್ರಹ್ಲಾದ ಇವರೆಲ್ಲರೂ ದೊಡ್ಡವರೇ. ಹೀಗೆ ಅಸುರರಾಗಿ ಹೋದವರನ್ನು ರಾಕ್ಷಸರೆಂದು ಕರೆಯಲು ಮನಸ್ಸು ಬರುವುದಿಲ್ಲ. ಗುರುಕರುಣೆಯಿಂದಾಗಿ ಸೋಲು, ಸಾವುಗಳನ್ನು ಮೀರಿನಿಂತ ಮಹಾತ್ಮ ಆತ. ಗುರುಬಲದ ಮೇಲೆ ಮತ್ತೆ ತನ್ನವರು ಎಲ್ಲರನ್ನು ಸಂಘಟಿಸಿ ಮತ್ತೆ ದೇವಲೋಕದ ಮೇಲೆ ಆಕ್ರಮಣ ಮಾಡಿದಾಗ ದೇವತೆಗಳು ಯುದ್ಧ ಮಾಡದೇ ಓಡಿ ಹೋಗುತ್ತಾರೆ, ಏಕೆಂದರೆ ದೇವತೆಗಳ ಗುರು ಅವರಿಗೆ ಆ ರೀತಿ ಹೇಳುತ್ತಾರೆ. ಅವನು ಈಗ ದಾಳಿ ಮಾಡಿರುವುದು, ಗುರುಬಲದಿಂದಾಗಿ, ಗುರುಬಲ ಉಳ್ಳವನನ್ನು ಯಾರೂ ಏನೂ ಮಾಡಲಾರರು, ಹಾಗಾಗಿ ಈ ಕ್ಷಣ ನೀವು ಮರೆಯಾಗಿ, ಮುಂದೆ ಕಾಲ ಬಂದಾಗ ಎದುರಿಸಬಹುದು ಎಂದು. ಸರಿ ಬಲಿ ದೇವಲೋಕವನ್ನು ಆಕ್ರಮಿಸಿ ಬಲೀಂದ್ರನಾದ. ಬಲಿ ಒಳ್ಳೆಯವನಿರಬಹುದು. ಅವನ ಜೊತೆಯವರು ರಾಕ್ಷಸರೇ, ಇವನ ಗಮನಕ್ಕೆ ಬಾರದೆಯೇ ಕೆಟ್ಟ ಕಾರ್ಯಗಳು ನಡೆಯಲಾರಂಭಿಸಿದವು. ಅವರು ತಮ್ಮ ಬುದ್ಧಿಗೆ ತಕ್ಕಂತೆ ವರ್ತಿಸಿದರು. ಇಂತಹ ಮಹಾತ್ಮರಿಗೆ ಯಾವುದೇ ಬಗೆಯ ಹಿನ್ನಡೆ ಬಂದರೂ ಅದು ಒಳ್ಳೆಯ ರೀತಿಯಲ್ಲಿ ಪರ್ಯವಸಾನವಾಗುತ್ತದೆ. ನೀವು ಶುಭವಾದ ಮಾರ್ಗದಲ್ಲಿದ್ದರೆ ನಿಮ್ಮೆದುರಿಗೆ ಬರುವುದು ಎಲ್ಲವೂ ಆ ರೀತಿ ಶುಭವಾಗಿಯೇ ತೋರಿಕೊಳ್ಳುತ್ತದೆ. ಅದು ವಿಷವಾಗಲೀ, ಸಾವೇ ಆಗಲಿ.

ಬಲಿಗೆ ಎರಡು ಸಂಗತಿಗಳು ಪ್ರಿಯಕರವಾಗಿದ್ದವು, ಒಂದು ಯಜ್ಞ ಇನ್ನೊಂದು ದಾನ. ಯಜ್ಞವೆಂದರೆ ದೇವಪ್ರೀತಿಗಾಗಿ ಮಾಡುವ ದ್ರವ್ಯತ್ಯಾಗ. ದಾನವೆಂದರೆ ಜೀವಪ್ರೀತಿಗಾಗಿ ಮಾಡುವುದು. ಯಾರನ್ನೂ ಕೆಟ್ಟವನು ಅಂತ ಹಣೆಪಟ್ಟಿ ಹಾಕಬೇಡಿ, ಬಳಿಗೆ ಹೋಗಿ ನೋಡಬೇಕು. ಅಹ೯ಜೀವಕ್ಕೆ ನಮ್ಮ ಯಾವುದೇ ದಾನ ಸಂದರೆ ಅದು ದೇವರಿಗೇ ಸಂದಂತೆ. ಹಾಗಾಗಿ ಎರಡು ಮುಖಗಳು ಇದಕ್ಕೆ; ನೇರ ದೇವನಿಗೆ ಯಜ್ಞದಿಂದ, ಜೀವರ ಮೂಲಕ ದೇವನಿಗೆ ದಾನದಿಂದ ಅರ್ಪಣೆ. ಒಮ್ಮೆ ಒಂದು ದೊಡ್ಡ ಯಜ್ಞ ಪ್ರಾರಂಭಿಸಿದ. ಭೃಗುಕಚ್ಚ ಎಂಬಲ್ಲಿ ಆ ಯಜ್ಞ ಹೇಗೆ ನಡೆಯಿತೆಂದರೆ ಅದಕ್ಕೆ ಸರಿಮಿಗಿಲಿಲ್ಲ. ಹಾಗಾಗಿ ದೇವದೇವನೇ ಬಂದ ಅಲ್ಲಿಗೆ. ಸಾಮಾನ್ಯವಾಗಿ ಯಜ್ಞದಲ್ಲಿ ಯಾವುದೂ ಸರಿ ಇರದಿದ್ದರೆ ದೇವತೆಗಳು ಬರಲಾರರು, ಸರಿಯಾಗಿ ನಡೆದ ಯಜ್ಞದಲ್ಲಿ ದೇವತೆಗಳು ಬಂದರೂ ಕಾಣಲಾರರು. ಆದರೆ ಇಲ್ಲಿ ಸಾಕ್ಷಾತ್ ದೇವದೇವನೇ ಭಿಕ್ಷೆ ಬೇಡಲು ಬರಬೇಕಾಯಿತು. ಇಲ್ಲಿ ಬಲಿಗೆ ಮೇಲಾಟದ ಉದ್ದೇಶವಿರಲಿಲ್ಲ, ಅವನ ಸ್ವಭಾವ ಅದು. ದಾನ ಎಂದರೆ ಎಂಥಾದ್ದು. ಬಲಿಯ ಪ್ರತಿಜ್ಞೆಯೇ ಹೀಗಿತ್ತು. ತನ್ನಿಂದ ದಾನ ಪಡೆದವನು ಜೀವನದಲ್ಲಿ ಮತ್ಯಾರಿಂದಲೂ ಯಾವತ್ತೂ ದಾನ ಪಡೆಯಬಾರದು ಎಂದು. ಹಾಗೆ ದಾನ ಮಾಡುತ್ತಿದ್ದ. ಹೀಗೆ ನಡೆಯುತ್ತಿರುವಾಗ ದೇವತೆಗಳು ಬಂದು ಹೋದ ನಂತರ, ಋಷಿ ಮುನಿಗಳು ಬಂದು ಹೋದ ನಂತರ ಅವನು ಬಂದ ದೇವರ ದೇವ. ಮಗುವಾಗಿ ಬಂದ, ವಟುವಾಗಿ ಬಂದ. ಚಿಕ್ಕವನಾಗಿ ಬರದಿದ್ದರೆ ಅದು ದೊಡ್ಡ ತಲೆ ಅಲ್ಲ. “ತಲೆ ಭಾರವಾದರೆ ಬಾಗಬೇಕು, ಬಾಗದಿದ್ದರೆ ಹೇಗೆ? ಬ್ರಹ್ಮಾಂಡವೂ ಅವನ ಒಂದು ಅಂಶ ಮಾತ್ರವೇ, ಅಂತಹವನು ಚಿಕ್ಕವನಾಗಿ ಬಂದ. ಅವನ ತೇಜಸ್ಸು ಹೇಗಿತ್ತೆಂದರೆ ಭೃಗುವಂಶೀಯರಾದ ಋಷಿಗಳು ದಂಗಾದರಂತೆ ಅವರನ್ನು ನೋಡಿ.

ಬಲಿಗೆ ಸಂಭ್ರಮ ಒಬ್ಬ ಚಿಕ್ಕ ವಟು ಬಂದಿದ್ದಾನೆ ಅಂತ. ಒಮ್ಮೊಮ್ಮೆ ಪದವಿಯಲ್ಲಿದ್ದಾಗ ಹೀಗೆ ಆಗುತ್ತೆ. ವಾಮನ ಮೂತಿ೯ಯ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದ.
ತಪಸ್ವಿಯಾದವನು ಅಧಿಕಾರಸ್ಥರಿಗಿಂತ ದೊಡ್ಡವನು. ಎಲ್ಲರಿಗಿಂತ ದೊಡ್ಡವನು ಹೀಗೆ ಎಲ್ಲರಿಗಿಂತ ಚಿಕ್ಕವನಾಗಿ ಬಂದರೆ, ಆಗ ಬಲಿ ಅವನಿಗಿಂತ ಚಿಕ್ಕವನಾಗಿ ಬೇಡಿದ; ಏನು ನೀಡಲಿ ಎಂದು. ದಾನ ಕೇಳುವವರ ಸಾಲಿನಲ್ಲಿ ಕೊನೆಯವನಾಗಿ ಬಂದ ವಾಮನ. ಕೆಲವರು ಕೊನೆಯಲ್ಲಿ ಬರುವುದೇ ಒಳ್ಳೆಯದು. ಮೊದಲೇ ಬಂದರೆ ಉಳಿದವರಿಗೆ ಏನೂ ಉಳಿಯಲಾರದು. ಊಟ ಚೆನ್ನಾಗಿ ಮಾಡುವವನು ಮೊದಲ ಪಂಕ್ತಿಯಲ್ಲಿ ಕುಳಿತರೆ ಆಗ ಮುಂದೆ ಇರುವವರಿಗೆ ಏನೂ ಸಿಗದಂತೆ ಆಗುತ್ತದೆ ಅಂತ ಇದೆಯಲ್ಲ ಹಾಗೇ ಇದೂ. ವಾಮನನಲ್ಲಿ ಬಲಿ ಬೇಡಲು ಆಹ್ವಾನಿಸಿದಾಗ ವಾಮನ ಬೇಡಿದ್ದು ಸಣ್ಣದೇ, ನಮ್ಮಲ್ಲಿ ಕೇಳಿದ್ದರೂ ಕೊಡುತ್ತಿದ್ದೆವು ತೆಗೆದುಕೋ ಅಂತ. ಆದರೆ ಬಲಿ ಮೂಜಗದ ಒಡೆಯ ಅವನಲ್ಲಿ ಇಷ್ಟು ಚಿಕ್ಕದ್ದು ಕೇಳಿದರೆ? ಬಲಿಗೇ ತೃಪ್ತಿ ಆಗಲಿಲ್ಲ. ಅವನಿಗೆ ಇನ್ನೂ ಹೆಚ್ಚಿನದ್ದು, ಶ್ರೇಷ್ಠವಾದದ್ದು ಕೊಡಬೇಕು ಅನ್ನಿಸಿತು.

ಕಠೋಪನಿಷತ್ತಿನಲ್ಲಿ ನಚಿಕೇತನ ಕಥೆ ಬರುತ್ತದೆ, ಅವನ ತಂದೆ ಬಡಕಲಾದ, ರೋಗಿಷ್ಟ, ಸಾಯಲು ಸಿದ್ಧವಾದ ಗೋವುಗಳನ್ನು ದಾನ ನೀಡುತ್ತಿರುತ್ತಾನೆ. ಹಲವು ಬಾರಿ ಮಠಕ್ಕೆ ನೀಡುವವರೂ ಹೀಗೇ! ಅವು ಕನಿಷ್ಟ ಆಹಾರ, ನೀರು ಸ್ವೀಕರಿಸುವ ಸ್ಥಿತಿಯಲ್ಲೂ ಇರಲಿಲ್ಲ. ಆಗ ನಚಿಕೇತ ಅಪ್ಪನನ್ನು ಕೇಳುತ್ತಾನೆ. ನನ್ನನ್ನು ಯಾರಿಗೆ ಕೊಡುತ್ತೀಯ ಅಂತ, ಯಾಕೆಂದರೆ ಯಾವತ್ತೂ ಉತ್ಕೃಷ್ಟವಾದುದನ್ನು, ಪ್ರೀತಿಕರವಾದುದನ್ನು ದಾನ ಮಾಡಬೇಕು ಅಂತ. ಇಂತಹ ದುರ್ಬುದ್ಧಿಯ ತಂದೆಯರಿಗೆ ಇಂತಹ ಮಕ್ಕಳೇ ಹುಟ್ಟುತ್ತಾರೆ. ಇದನ್ನು ನಾವು ನೋಡಬಹುದು. ಬಲಿ ಹೇಳುತ್ತಾನೆ ವಟುವೇ ನೀನು ತೇಜಸ್ವಿ, ಆದರೆ ವ್ಯವಹಾರಜ್ಞಾನ ಇಲ್ಲ. ನಾನು ಸಲಹೆ ಕೊಡುತ್ತೇನೆ; ದೊಡ್ಡದು ಕೇಳು, ಜೀವನಕ್ಕೆ ತೃಪ್ತಿಯಾಗುವಷ್ಟು ಕೇಳು ಅಂತ. ವಾಮನ ಹೇಳಿದ ಎಷ್ಟು ಕೊಟ್ಟರೂ ತೃಪ್ತಿ ಇರುವುದಿಲ್ಲ, ಅದಕ್ಕೆ ಹೆಚ್ಚು ಕಡಿಮೆ ಯಾವುದೂ ಬೇಡ ಅಂತ ಹೇಳಿದ.

ಬಲಿ ದಾನಕ್ಕೆ ಮುಂದಾದ, ಅದನ್ನು ಕೊಡುವಾಗ ಎಲ್ಲವನ್ನೂ ಕೊಟ್ಟುಬಿಟ್ಟ, ಎಲ್ಲ ಕಳೆದುಕೊಂಡ. ಮೊದಲು ಕಳೆದುಕೊಂಡಿದ್ದು ಮೂರೂಲೋಕದ ಒಡೆತನ, ಗೊತ್ತಿಲ್ಲದೇ ಅಲ್ಲ. ಅಷ್ಟರಲ್ಲಿ ಅವನಿಗೆ ಅರ್ಥವಾಗಿತ್ತು, ಆದರೂ ಹಿಂದಕ್ಕೆ ಬರಲಿಲ್ಲ. ತನ್ನವರೆಲ್ಲರನ್ನೂ ಕಳೆದುಕೊಂಡ, ಎಲ್ಲವನ್ನೂ ಕಳೆದುಕೊಂಡವನ ಮೇಲೆ ಸಿಟ್ಟು ರಾಕ್ಷಸರಿಗೆ. ಹೆಂಡತಿ ಕಣ್ಣೀರನ್ನು ಹಾಕಿದಳು. ಕೊನೆಗೆ ಗುರುಕೃಪೆಯನ್ನೂ ಕಳೆದುಕೊಂಡ. ಶುಕ್ರರು ದಾರಿಗೆ ಅಡ್ಡ ಬಂದರು; ನಿಲ್ಲಿಸು, ನೀನಾಡಿದ ಮಾತು ಸುಳ್ಳಾದರೂ ಚಿಂತೆ ಇಲ್ಲ, ದಾನ ಕೊಡಬೇಡ ಅಂತ. ಆದರೆ ಬಲಿಗೆ ಗುರುವಿನ ಮಾತಿಗಿಂತ ಅವರು ತೋರಿದ ದಾರಿ ಮುಖ್ಯವಾಯಿತು. “ಅರಿವು” ಅದೇ ನಿಜವಾದ ಗುರು. ಗುರುವಿಗೂ ಒಂದು ಬಗೆಯ ವ್ಯಾಮೋಹ, ಆದರೆ ಬಲಿಗೆ ಯಾವುದೇ ವ್ಯಾಮೋಹವೂ ಇಲ್ಲ. ಹಾಗಾಗಿ ಅವರನ್ನೂ ಕಳೆದುಕೊಂಡ. ಇಟ್ಟ ಹೆಜ್ಜೆಯನ್ನು ಹಿಂದೆಗೆಯಲಾರೆ ಅಂತ. ಕಡೆಗೆ ಅವರೂ ಶಪಿಸಿದರು ಎಲ್ಲ ಸಂಪತ್ತನ್ನೂ ಕಳೆದುಕೋ ಅಂತ. ಆಗಲಿ ಅಂದ. ಮತ್ತೆ ನರಕವೇ ಗತಿಯಾಗುತ್ತದೆ; ಎರಡೇ ಹೆಜ್ಜೆ ಕೊಡಲು ಸಾಧ್ಯ, ಮೂರನೆಯದು ಕೊಡದಿದ್ದರೆ ಮಾತಿಗೆ ತಪ್ಪಿದ್ದಕ್ಕಾಗಿ ನರಕಪ್ರಾಪ್ತಿ ಅನ್ನುವ ಬೆದರಿಕೆಯೂ ಅವನನ್ನು ಚಲಿಸಗೊಡಲಿಲ್ಲ. ಎರಡು ಹೆಜ್ಜೆಯಲ್ಲಿ ಎಲ್ಲ ಮುಗಿದಿತ್ತು. ಭಗವಂತನೇ ಹೆದರಿಸಿದ ಎಲ್ಲಿ ಮೂರನೇ ಹೆಜ್ಜೆ? ಕೊಡು ಅಂತ. ಆಗಲೂ ಎಲ್ಲಿಗೆ ಸಮರ್ಪಣೆ ಮಾಡುತ್ತಿದ್ದಾನೋ, ಅಲ್ಲಿಂದ ಪ್ರೀತಿ ವಾಕ್ಯವು ಸಿಗುತ್ತಿಲ್ಲ. ಗರುಡ ಬಂದು ವರುಣಪಾಶದಿಂದ ಬಂಧಿಸುತ್ತಾನೆ. ಆಗ ಪ್ರಹ್ಲಾದ ಬರುತ್ತಾನೆ. ತಾತನನ್ನು ಕಂಡು ಪರಮಾನಂದ ಆಗುತ್ತದೆ, ಆದರೂ ಅವನನ್ನು ಆದರಿಸಲು ಆಗುವುದಿಲ್ಲ. ಮನಸಿನಲ್ಲೇ ನಮಿಸುತ್ತಾನೆ. ಹಾಗಾಗಿಯೇ ಬಲಿ ದೊಡ್ಡವನಾಗುವುದು.

ಇದೆಲ್ಲ ಅಸುರತ್ವ ಅಲ್ಲ ದೈವತ್ವವೇ. ಗುರುಕೃಪೆ ಕಳೆದರೂ ಅದು ಸಂಪತ್ತಿನ ಬಗೆಗೆ ಮಾತ್ರವೇ ಇತ್ತು. ದೈವಕೃಪೆ ನಾಶವಾಗಲಿಲ್ಲ. ಜೀವನದಲ್ಲಿ ಕೆಲವಷ್ಟನ್ನು ಕಳೆದುಕೊಳ್ಳದಿದ್ದರೆ, ಕೆಲವಷ್ಟನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಒಂದಷ್ಟು ಕಳೆದುಕೊಂಡರೇ ಒಳ್ಳೆಯದು. ಹಾಗಾಗಿ ಈ ಪರೀಕ್ಷೆಯ ತುತ್ತತುದಿಯಲ್ಲಿ ಬ್ರಹ್ಮನೇ ಬಂದು ಹೇಳಿದನಂತೆ ಪಾಪ, ಸಾಕು ಅವನಿಗೆ ನೀಡಿದ ಶಿಕ್ಷೆ ಅಂತ. ಆಗ ಅವನು ಪೂಣ೯ ಕರುಣೆ ತೋರಿದ. ಕಳೆದು ಹೋಗುತ್ತಿರುವಾಗ ಆಗುವ ನೋವು ದೊಡ್ಡದು. ಕ್ಷಯ ಅನ್ನುವುದು ಪರಮ ದುಃಖಕರ, ಈಗ ಏನೂ ಉಳಿದಿಲ್ಲ, ಎಲ್ಲ ಖಾಲಿ, ಅಧಿಕಾರವೂ ಇಲ್ಲ. ಶತ್ರುಗಳು ಬಂಧಿಸಿದ್ದಾರೆ. ತನ್ನವರೆನ್ನುವವರು ಬಿಟ್ಟು ಹೋಗಿದ್ದಾರೆ. ಸಾಮಾನ್ಯವಾಗಿ ಒಂದು ಜೀವ ಅನುಭವಿಸಬಹುದಾದ ಎಲ್ಲ ನೋವನ್ನೂ ಅನುಭವಿಸಿದ, ಹಿಂದೊಮ್ಮೆ ಕೈ ಹಿಡಿದು ನಡೆಸಿದ ಗುರು ಸಿಟ್ಟಾಗಿದ್ದಾನೆ, ಶಾಪ ನೀಡಿದ್ದಾನೆ. ಆದರೂ ಸತ್ಯವನ್ನು ಬಿಡಲಿಲ್ಲ. ನನ್ನನ್ನು ಬಿಡಲಿಲ್ಲ ಅಂದ ಭಗವಂತ. ಅಷ್ಟರಲ್ಲಿ ಬಲಿ ಹೇಳಿದ ನನ್ನ ತಲೆ ಮೇಲೆ ಕಾಲಿಡು ಅಂತ. ಅದರ ಅಥ೯ ತಲೆ ನಿನ್ನದು ಅಂತ. ಅಳೆದದ್ದೆಲ್ಲಾ ನಿನ್ನದಾದರೆ ಈ ತಲೆಯೂ ನಿನ್ನದು ಅಂತ. ಬೇರೆ ರಾಕ್ಷಸರೆಲ್ಲಾ ಅವನನ್ನು ಬಯ್ದರು. ಇವನು ಅವರಿಗೇ ಬುದ್ಧಿ ಹೇಳುತ್ತಾನೆ. ಯಾಕೆ ಕಲಹ, ಬಿಡಿ, ಕೊಟ್ಟವನೇ ಹಿಂದೆಗೆದುಕೊಳ್ಳುತ್ತಿದ್ದಾನೆ ಅಂತ. ವ್ಯರ್ಥಕಲಹ ಬೇಡ. ಎಲ್ಲಿಯಾದರೂ ದೂರ ಹೋಗಿ ಬದುಕಿ ಅಂತ ಬಲಿ ತನ್ನವರಿಗೆ ಹೇಳುತ್ತಾನೆ.

ಇಂತಹ ಬಲಿ ದೊಡ್ಡವನು, ಅವನನ್ನು ನಾನೂ ಬಿಡಲಾರೆ ಎಂದು ಭಗವಂತ ಅನುಗ್ರಹಿಸಿದ. ಯಾವುದು ದೇವತೆಗಳಿಗೂ ಮೀರಿದ್ದೋ ಅಂತಹ ನನ್ನ ಪದವನ್ನು ಬಲಿಗೆ ಕೊಟ್ಟೆ, ಅದಕ್ಕೆ ಮೊದಲು ಈಗ ಅವನು ಏನನ್ನು ಕಳೆದುಕೊಂಡಿರುವನೋ ಅದನ್ನು ಅವನು ಪಡೆದುಕೊಳ್ಳಲೇಬೇಕು. ಮುಂದಿನ ಸಾವರ್ಣಿ ಮನ್ವಂತರದಲ್ಲಿ ಪೂರ್ಣಕಾಲ ಅವನು ಇಂದ್ರನಾಗಿರುತ್ತಾನೆ. ಅಲ್ಲಿಯವರೆಗೆ ಸುತಲದಲ್ಲಿ ಇರುತ್ತಾನೆ. ಸ್ವಗ೯ಕ್ಕೆ ಮಿಗಿಲಾದ ವೈಭವದೊಡನೆ, ಅವನಿಗೆ ಬೇಕಾದ ಸಾಮ್ರಾಜ್ಯ ಅಲ್ಲಿ ಈಗಾಗಲೇ ವಿಶ್ವಕರ್ಮನಿಂದ ನಿರ್ಮಾಣವಾಗಿದೆ. ಅಲ್ಲಿ ಯಾವುದೇ ಚಿಂತೆ ಅವನನ್ನು ಮುಟ್ಟಲಾರದು, ಅಂತ ಹೇಳಿದ. ಇದರಥ೯ವೆಂದರೆ, ಅದೇ; ದೇಹಕ್ಕೆ ಆರೋಗ್ಯ ಹಾಗೂ ಮನಸ್ಸಿಗೆ ನೆಮ್ಮದಿ ಕೊಟ್ಟ ಭಗವಂತ. ಆದಿವ್ಯಾಧಿಗಳಿಂದ ಮುಕ್ತನಾದ ಬಲಿ. ಇನ್ನವನಿಗೆ ಆಲಸ್ಯ, ಸೋಲು ಇಲ್ಲ. ಅವನು ಏನನ್ನೂ ಪಡೆದುಕೊಳ್ಳಲು ವಿಘ್ನಗಳಿಲ್ಲ. ಯಾಕೆಂದರೆ ನನ್ನ ದೃಷ್ಟಿ ಅವನ ಮೇಲೆ ಎಡಬಿಡದೇ ಇರುತ್ತದೆ. ಇಂದ್ರಸೇನ ಅನ್ನುವುದು ಬಲಿಯ ಇನ್ನೊಂದು ಹೆಸರು , ಹಾಗೇ ಸಂಬೋಧನೆ ಮಾಡುತ್ತಾನೆ. ಸುತಲಕ್ಕೆ ಉಳಿದ ನಿನ್ನವರೊಡನೆ ಹೊರಟುಹೋಗು. ಯಾರು ನಿನ್ನವರೆಂದರೆ ಕಷ್ಟದಲ್ಲಿಯೂ ಜೊತೆ ಬಿಡದವರು. ಲೋಕಪಾಲಕರಿಗೂ ನಿನ್ನನ್ನು ಮುಟ್ಟಲು ಸಾಧ್ಯವಿಲ್ಲ. ನಿನ್ನನ್ನು ಮೆಟ್ಟಿನಿಲ್ಲುವ ಎಲ್ಲ ದೈತ್ಯರನ್ನು ನನ್ನ ಚಕ್ರ ನೋಡಿಕೊಳ್ಳುತ್ತದೆ. ಇದು ಸಹಜ, ನಮ್ಮವರೇ ನಮಗೆ ತೊಂದರೆ ಕೊಡುವುದು. ಎಡಬಿಡದೇ ನಿನ್ನ ಬಳಿಯಲ್ಲಿಯೇ ಸದಾ ಸನ್ನಿಹಿತನಾಗಿರುವ ನನ್ನನ್ನು ನೀನು ನೋಡುತ್ತಿರುವೆ. ನಿನ್ನ ಮನೆಯ ದ್ವಾರದಲ್ಲಿ ಪಾಲಕನಾಗಿ ಇರುತ್ತೇನೆ. ಅಂದರೆ ಬಲಿಯ ಸೇವಕತ್ವವನ್ನು ಭಗವಂತನೇ ಮಾಡುತ್ತಾನೆ.

ಈಗ ಹೇಳಿ! ಯಾರು ತ್ರಿವಿಕ್ರಮ? ಭಗವಂತ ತ್ರಿವಿಕ್ರಮನಾಗಿರುವುದರಲ್ಲಿ ವಿಶೇಷ ಏನಿದೆ? ಇಲ್ಲಿ ಭಕ್ತನೇ ತ್ರಿವಿಕ್ರಮನಾದ. ನಿಜವಾದ ತ್ರಿವಿಕ್ರಮ ಭಾವ ಇಲ್ಲಿ ಬಲಿಯದ್ದು. ವಾಮನ ಬೆಳೆದು ತ್ರಿವಿಕ್ರಮನಾದದ್ದೇನೋ ಹೌದು, ಆದರೆ ಅವನ ಅಂತರಂಗದಲ್ಲಿ ತ್ರಿವಿಕ್ರಮನಾಗಿ ಬೆಳೆದು ನಿಂತವನು ಬಲಿ. ಭಾವದಿಂದ ತ್ರಿವಿಕ್ರಮ . ತನ್ನದ್ದೆಲ್ಲವನ್ನೂ ಕೊಟ್ಟ ಬಳಿಕ ತನ್ನನ್ನೇ ಕೊಟ್ಟನೋ! ಆಗ ಆ ಮೂರು ಹೆಜ್ಜೆಯಲ್ಲಿ ಪರಿಪೂಣ೯ನಾಗಿ ಬೆಳೆದು ನಿಂತವನು ಬಲಿ. ಹೀಗಾಗಿ ಆ ತ್ರಿವಿಕ್ರಮನನ್ನು ಭಾವಿಸೋಣ. ಪ್ರತಿನಿತ್ಯ ಕೊನೆಯಲ್ಲಿ ಹೇಳುವ ಮಾತು, ನಿನ್ನ ವಸ್ತು ನಿನಗೆ ಅಂತ. ಇದು ಯಾರ ಭಾವವೆಂದರೆ ಅದೇ, ಬಲಿಯದ್ದು. ಬಲಿಯ ಕಡೆಯವರು ಜಗಳಕ್ಕೆ ನಿಂತಾಗಲೂ ಬಲಿ ಹೇಳಿದ್ದು. ಇದು ಅವನದ್ದೇ ಅವನೇ ತೆಗೆದುಕೊಳ್ಳುತ್ತಿದ್ದಾನೆ. ಎಷ್ಟೋ ಬಾರಿ ನಾವು ದಾನ ಮಾಡುವಾಗ ಹಿಂಜರಿಯುತ್ತಾ ಮಾಡುತ್ತೇವೆ. ಪೂರ್ತಿ ಕೊಡಬೇಕಾ ಸ್ವಲ್ಪ ಉಳಿಸೋಣವಾ ಅಂತ. ಆಗ ಇದು ನೆನಪಾಗಬೇಕು. ಮೊದಲು, ಇದು ನನ್ನದು ಎನ್ನುವುದು ಯಾವುದಿದೆ? ಎಲ್ಲವೂ ಅವನದ್ದೇ, ಅವನದ್ದನ್ನು ಅವನಿಗೇ ಕೊಡುವ ಭಾಗ್ಯವಂತರು ನಾವು, ಬಲವಂತರು ನಾವು.
ಅದನ್ನೇ ನಾವೂ ಮಾಡೋಣ.
ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ|

ಚಿತ್ರ:ಅಂತರ್ಜಾಲದಿಂದ

ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಮೃತವಾಣಿಯಲ್ಲಿ ಹರಿದು ಬಂದ ತತ್ತ್ವಭಾಗವತಮ್ ನ ಪೂರ್ಣವೀಡಿಯೋ:

Facebook Comments