ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದ ಒಳಗಿರುವ ಚಿಂತಾಮಣಿ ವಿನಾಯಕ ದೇವರಿಗೆಂದು ನೂತನವಾಗಿ ನಿರ್ಮಿಸಲಾದ ರಜತ ಕವಚವನ್ನು ಗಣೇಶ ಚತುರ್ಥಿಯ ಶುಭ ದಿನವಾದ ಇಂದು ಸಮರ್ಪಿಸಲಾಯಿತು. ಶ್ರೀಮಹಾಬಲೇಶ್ವರ ಆತ್ಮಲಿಂಗದ ಮುಂಭಾಗದ ದಕ್ಷಿಣಪಾರ್ಶ್ವದಲ್ಲಿ ಸಂಸ್ಥಾಪಿತನಾಗಿರುವ ಬೇಡಿದ ಸತ್ಫಲಗಳನ್ನೆಲ್ಲ ನೀಡುವ ಕಾರಣಿಕ ದೇವರೆಂದೇ ಪ್ರಸಿದ್ಧನಾದ ಈ ಗಣಪತಿಗೆ ಆ ಕಾರಣದಿಂದಲೇ “ಚಿಂತಾಮಣಿ ಗಣಪತಿ” ಎಂದು ಪ್ರಸಿದ್ಧಿ. ಶ್ರೀಮಹಾಬಲೇಶ್ವರನನ್ನು ಅರ್ಚಿಸುವ ಮೊದಲು ಈ ಗಣಪತಿಯನ್ನು ಪೂಜಿಸುವುದು ಸಂಪ್ರದಾಯ.ದೇವಾಲಯದ ಆಡಳಿತದ ವತಿಯಿಂದ ಶ್ರೀದೇವರಿಗೆ ಸಮರ್ಪಿಸಲಾದ ಈ ರಜತಕವಚವು ಸುಮಾರು ಎರಡೂವರೆ ಅಡಿಗಳಷ್ಟು ಎತ್ತರವಿದ್ದು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ  ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಂಕಲ್ಪ ಹಾಗೂ ಮಾರ್ಗದರ್ಶನದಲ್ಲಿ ಇದೇ ಮೊದಲಬಾರಿಗೆ ಇಂತಹ ಅಲಂಕಾರವು ನಿವೇದಿತವಾಗಿದೆ.

ಸಮರ್ಪಣೆಯ ಅಂಗವಾಗಿ ಚಿಂತಾಮಣಿ ವಿನಾಯಕ ದೇವರಿಗೆ ವಿಶೇಷಪೂಜೆ ಹಾಗೂ ಅಥರ್ವಶೀರ್ಷ ಹವನ ಮೊದಲಾದ ಧಾರ್ಮಿಕವಿಧಿಗಳು ವೇ.ಕೃಷ್ಣಭಟ್ಟ ಷಡಕ್ಷರಿಯವರ ನೇತೃತ್ವದಲ್ಲಿ ಸಂಪನ್ನಗೊಂಡವು. ಪಾಲಕ್ಕಿಯಲ್ಲಿಟ್ಟು ಮೆರವಣಿಗೆಯ ಮೂಲಕ ತರಲಾದ ಈ ಕವಚವನ್ನು ಸಮರ್ಪಿಸುವ ಸಂದರ್ಭದಲ್ಲಿ ಶ್ರೀ ದೇವಾಲಯದ ಆಡಳಿತಕಾರ್ಯದರ್ಶಿ ಶ್ರೀ.ಜಿ.ಕೆ.ಹೆಗಡೆ, ಮುಖ್ಯ ಪ್ರಧಾನ ಅರ್ಚಕರಾದ ವೇ.ಶಿತಿಕಂಠ ಭಟ್ಟ ಹಿರೇ, ಶ್ರೀಕ್ಷೇತ್ರ ಗೋಕರ್ಣ ಉಪಾಧಿವಂತಮಂಡಲದ ವೇ.ಗಣೇಶ ಜಂಭೆ,ವೇ.ಬಾಲಕೃಷ್ಣ ಜಂಭೆ. ವೇ.ಕೃಷ್ಣ ಭಟ್ಟ ಷಡಕ್ಷರಿ  ವೇ.ಶಂಕರಲಿಂಗ ಭಟ್ಟ ಕುಟುಂಬದವರು   ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Facebook Comments Box