ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 31:

ಸಂಸ್ಕಾರಗಳು

           ವಿದ್ವಾನ್ ಸೂರ್ಯನಾರಾಯಣ ಭಟ್ಟ, ಎಂ.ಎ

  ಪ್ರತ್ಯಕ್ಷೇಣಾನುಮಿತ್ಯಾವಾ ಯಸ್ತೂಪಾಯೋ ನ ಬುಧ್ಯತೇ |
  ಏತಂ ವಿದಂತಿ ವೇದೇನ ತಸ್ಮಾತ್ ವೇದಸ್ಯ ವೇದತಾ ||

ಪ್ರತ್ಯಕ್ಷ, ಅನುಮಾನ ಈ ಪ್ರಮಾಣಗಳಿಂದ ತಿಳಿಯಲ್ಪಡದಿರುವ ವಿಚಾರಗಳನ್ನು ವೇದಗಳಿಂದ ಸ್ವೀಕರಿಸಬೇಕು  ಎಂಬುದಾಗಿ ವೇದದ ಉಪಾದೇಯತ್ವವು ಸರ್ವಸಿದ್ಧವಾಗಿದೆ.

 ಸ್ಮೃತಿ ವಚನಗಳಲ್ಲಿಯೂ ಸಹ ವೇದದ ಅನಾದಿತ್ವವನ್ನು ಹೀಗೆ ವಿವರಿಸಿದ್ದಾರೆ.

 ಅನಾದಿನಿಧನಾ ನಿತ್ಯಾ ವಾಗುತ್ಸೃಷ್ಟಾ ಸ್ವಯಂಭುವಾ |
ಅದೌ ವೇದಮಯೀ ದಿವ್ಯಾ ಯತಃ ಸರ್ವಾಃ ಪ್ರವೃತ್ತಯಃ ||

 ಸೃಷ್ಟಿಕರ್ತನಾದ ಬ್ರಹ್ಮನಿಂದ ನಿತ್ಯವಾದ, ಅನಾದಿಯಾದ ವೇದರೂಪ (ಮಾತು) ಶಬ್ದ ಜಗತ್ತಿಗೆ ಕೊಡಲ್ಪಟ್ಟಿದೆ. ಮತ್ತು ಅದು ಅಪೌರುಷೇಯವೂ ಆಗಿದೆ. ಇಂತಹ ವೇದವಿಹಿತವಾದ ಕರ್ಮಾಚರಣೆಯಿಂದ ಲೌಕಿಕ ಮತ್ತು ಪಾರಲೌಕಿಕವಾದ ಶ್ರೇಯಸ್ಸಿಗೆ ಮಾನವನು ಭಾಗಿಯಾಗುತ್ತಾನೆ.

ವೇದಃ ಸ್ಮೃತಿಃ ಸದಾಚಾರಃ ಸ್ವಸ್ಯ ಚ ಪ್ರಿಯಮಾತ್ಮನಃ |
ಏತಚ್ಚತುರ್ವಿಧಂ ಪ್ರೋಕ್ತಂ ಸಾಕ್ಷಾತ್ ಧರ್ಮಸ್ಯ ಲಕ್ಷಣಮ್ ||

ವೇದಗಳು, ಸ್ಮೃತಿಗಳು, ಸದಾಚಾರ ಇವುಗಳೆಲ್ಲಾ ಸಾಕ್ಷಾತ್ ಧರ್ಮದ ಪ್ರಮಾಣಗಳೇ ಆಗಿವೆ. ಎಂಬುದಾಗಿ ಮನುವಚನ.

   ಯತೋsಭ್ಯುದಯನಿಃಶ್ರೇಯಸಸಿದ್ಧಿಃ ಸಃ ಧರ್ಮಃ

 ಅಭ್ಯುದಯಕ್ಕೆ, ನಿಃಶ್ರೇಯಸ್ಸಿಗೆ ಕಾರಣವಾದುದು ಧರ್ಮ. “ಸಂಸ್ಕೃಯತೇ ಆತ್ಮಾ ಏಭಿಃ” ಎಂಬ ವ್ಯುತ್ಪತ್ತಿಯನ್ನು ಮಾಡುವುದರ ಮೂಲಕ ಅವಿದ್ಯೆಯಿಂದ ಆವೃತನಾದ ಆತ್ಮನನ್ನು ಅನಾವರಣಗೊಳಿಸಲು ಆವಶ್ಯಕವಾದ ವೈದಿಕಕ್ರಿಯೆಗಳೇ ಸಂಸ್ಕಾರವೆಂಬುದಾಗಿ ಕರೆಯಲ್ಪಡುತ್ತದೆ. ಸಂಸ್ಕಾರಗಳು ದೌರ್ಭಾಗ್ಯನಾಶಕಗಳೂ, ಸೌಭಾಗ್ಯಕಾರಕಗಳೂ ಆಗುತ್ತವೆ.

  ವೈದಿಕೈಃ ಕರ್ಮಭಿಃ ಪುಣ್ಯೈಃ, ನಿಷೇಕಾದಿರ್ದ್ವಿಜನ್ಮನಾಮ್ |
  ಕಾರ್ಯಃ ಶರೀರಸಂಸ್ಕಾರಃ ಪಾವನಃ ಪ್ರೇತ್ಯ ಚೇಹ ಚ ||

ವೇದವಿಹಿತವಾದ, ಪುಣ್ಯಕರವಾದ ನಿಷೇಕಾದಿ (ಗರ್ಭಾಧಾನಾದಿ) ಕರ್ಮಗಳಿಂದ ಶರೀರಸಂಸ್ಕಾರವು ಮಾಡಲ್ಪಡಬೇಕು ಎಂಬುದಾಗಿ ಮನುವಚನ.

ನಿಷೇಕಾದೀನಿ ಕರ್ಮಾಣಿ ಯಃ ಕರೋತಿ ಯಥಾವಿಧಿ |
ಸಂಭಾವಯತಿ ಧರ್ಮೇಣ ಸ ವಿಪ್ರೋ ಗುರುರುಚ್ಯತೇ ||

ನಿಷೇಕಾದಿ (ಗರ್ಭಾಧಾನಾದಿ) ಕರ್ಮಗಳನ್ನು ಶಾಸ್ತ್ರವಿಹಿತ ರೀತಿಯಲ್ಲಿ ಆಚರಿಸುವವನೇ ಗುರು ಎನಿಸುತ್ತಾನೆ. ಈ ರೀತಿಯಾಗಿ ಸಂಸ್ಕಾರಗಳಿಂದ ಸಂಸ್ಕೃತನಾದ ವ್ಯಕ್ತಿಗೆ ಕರ್ಮಾಧಿಕಾರ ಪ್ರಾಪ್ತವಾಗುತ್ತದೆ ಮತ್ತು ಅದರಿಂದ ಉತ್ತಮಲೋಕ ಪ್ರಾಪ್ತಿಯಾಗುತ್ತದೆ.

  ಸಂಸ್ಕಾರಗಳನ್ನು ಜಾತಸಂಸ್ಕಾರ ಮತ್ತು ಮೃತಸಂಸ್ಕಾರ ಎಂಬುದಾಗಿ ವಿಂಗಡಿಸಿ ಒಂದೊಂದನ್ನೂ ಹದಿನಾರು ವಿಧವಾಗಿ ವಿಂಗಡಿಸಿ ಒಟ್ಟು ಮೂವತ್ತೆರಡು ಸಂಸ್ಕಾರಗಳು ಉಕ್ತವಾಗಿವೆ. ಅವುಗಳಲ್ಲಿ 16 ಜಾತ ಸಂಸ್ಕಾರಗಳು, 16 ಮೃತಸಂಸ್ಕಾರಗಳು. 

ಜಾತಸಂಸ್ಕಾರೇಣ ಇಮಂ ಲೋಕಮಭಿಜಯತಿ |
ಮೃತಸಂಸ್ಕಾರೇಣ ಅಮುಂ  ಲೋಕಂ ||

 ಜಾತ ಸಂಸ್ಕಾರಗಳಿಂದ ಜೀವಿತ ಕಾಲದಲ್ಲೂ,ಮೃತ ಸಂಸ್ಕಾರಗಳಿಂದ ದೇಹತ್ಯಾಗಾನಂತರವೂ ಉತ್ತಮ ಸ್ಥಿತಿ,ಉತ್ತಮ ಲೋಕಗಳನ್ನು ಪಡೆಯುತ್ತಾನೆ ಎಂಬುದಾಗಿ ಗ್ರಹ್ಯಸೂತ್ರದ ವಿವರಣೆಯು ತಿಳಿಸುತ್ತದೆ. ಗರ್ಭಾಧಾನಾದಿ 16 ಸಂಸ್ಕಾರಗಳು ಜಾತ ಸಂಸ್ಕಾರಗಳು.ಎಲ್ಲ 16 ಸಂಸ್ಕಾರ ಕರ್ಮಗಳೂ ಕಾಮ್ಯ ಕರ್ಮಗಳೇ ಆದರೂ ಸಂಕಲ್ಪೋಚ್ಚಾರಣ ಕಾಲದಲ್ಲಿ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಎಂದು ಸಂಕಲ್ಪಿಸಿ ಕರ್ಮಾಂತ್ಯದಲ್ಲಿ, “ಓಂ ತತ್ಸತ್ ಬ್ರಹ್ಮಾರ್ಪಣ ಮಸ್ತು” ಎಂದು ಬ್ರಹ್ಮಾರ್ಪಣ ಮಾಡಲಾಗುತ್ತದೆ. ಅಂದರೆ ಸಕಾಮಕರ್ಮವನ್ನು ಸಂಕಲ್ಪಿಸಿದ ಯಜಮಾನ ನಿಷ್ಕಾಮ ಕರ್ಮಫಲವನ್ನು ಅಪೇಕ್ಷಿಸುವವನಾಗುತ್ತಾನೆ. ಇದನ್ನೇ ಶಂಕರ ಭಗವತ್ಪಾದರು ಬೃಹದಾರಣ್ಯಕೋಪನಿಷತ್ತಿನಲ್ಲಿ, 

ಸಕಾಮಂ ಕರ್ಮಾಪಿ ಜ್ಞಾನಪೂರ್ವಕಂ ಕೃತಂ ಚೇತ್ ದೇವಲೋಕಾದಿ ಪ್ರಾಪ್ತಯೇ ಭವತಿ ||

  ಫಲಾಪೇಕ್ಷೆಯಾಗಿ ಕರ್ಮಾಚರಣೆಯನ್ನು ಮಾಡಿದರೂ ಸಹ ಅದು ಜ್ಞಾನಪೂರ್ವಕವಾಗಿದ್ದರೆ ಉತ್ತಮ ಲೋಕಪ್ರಾಪ್ತಿಗೆ ಸಹಾಯಕವಾಗುತ್ತದೆ ಎಂದು ವಿವರಿಸಿದ್ದಾರೆ.

   ಗರ್ಭಾಧಾನ, ಪುಂಸವನ, ಸೀಮಂತ, ಜಾತಕರ್ಮ, ನಾಮಕರಣ, ಉಪನಿಷ್ಕ್ರಮಣ, ಅನ್ನಪ್ರಾಶನ, ಕರ್ಣವೇಧನ, ಚೌಲ, ಉಪನಯನ, ಹೋತೃ, ಶುಕ್ರಿಯ, ಉಪನಿಷತ್, ಗೋದಾನ, ಸಮಾವರ್ತನ, ವಿವಾಹ ಹೀಗೆ 16 ಜಾತ ಸಂಸ್ಕಾರಗಳು. ವಿಷ್ಣುಬಲಿಯು ರಕ್ಷಾತ್ಮಕವಾದದ್ದರಿಂದಲೂ,

  ಪಂಚಮಂ ನೇಷ್ಯತೇ ಪರೈಃ
  ವ್ರತಾನ್ಯವಶ್ಯಚರ್ಯಾಣಿ ಚತ್ವಾರ್ಯುಕ್ತಾನಿ ಯಾನಿ ತು ||

ಇವೇ ಮೊದಲಾದ ವಚನಾಧಾರಗಳಿಂದ ವಿಷ್ಣುಬಲಿಯನ್ನೂ ಮತ್ತು ಸಮ್ಮಿತವ್ರತವನ್ನೂ ಹದಿನಾರು ಸಂಸ್ಕಾರಗಳಲ್ಲಿ ಸೇರಿಸಲಿಲ್ಲ.

ವಿಪ್ರಕ್ಷತ್ರಿಯವಿಟ್ ಶೂದ್ರಾಃ ವರ್ಣಾಸ್ತ್ವಾದ್ಯಾಸ್ತ್ರಯೋ ದ್ವಿಜಾಃ |
ನಿಷೇಕಾದ್ಯಾಃ ಶ್ಮಶಾನಾಂತಾಃ ತೇಷಾಂ ವೈ ಮಂತ್ರತಃ ಕ್ರಿಯಾಃ ||

ಚಾತುರ್ವಣ್ಯಗಳಲ್ಲಿ ಮೊದಲಿನ ಮೂರು ವರ್ಣದವರಿಗೂ ಪೂರ್ವಾಪರಸಂಸ್ಕಾರಗಳನ್ನು ಸಮಂತ್ರಕವಾಗಿಯೇ ಆಚರಿಸಬೇಕು ಎಂದು ಯಾಜ್ಣ್ಞವಲ್ಕ್ಯಸ್ಮೃತಿಯಲ್ಲಿಯೂ ಉಕ್ತವಾಗಿದೆ.

ಇದರಿಂದ ಗುರುದೇವತಾನುಗ್ರಹವನ್ನು ಪೂರ್ಣವಾಗಿ ಪಡೆಯಲು ಶಕ್ತನಾಗುತ್ತಾನೆ. ಪೂರ್ವಸಂಸ್ಕಾರಗಳಲ್ಲಿ ವಿವಾಹ ಸಂಸ್ಕಾರವು ಕೊನೆಯದಾಗಿದೆ.

  ಆಚಾರ್ಯಾಯ ಪ್ರಿಯಂಧನಮಾಹೃತ್ಯ ಪ್ರಜಾತಂತುಂ ವ್ಯವಚ್ಛೇತ್ಸೀಃ

  ಗುರುವಿಗೆ ಇಷ್ಟವಾದ ಗುರುಕಾಣಿಕೆಯನ್ನು ಕೊಟ್ಟು ಪಿತೃಋಣದ ಅಪಾಕರಣವನ್ನು ಅವಶ್ಯವಾಗಿ ಮಾಡಿಕೊಳ್ಳತಕ್ಕದ್ದು ಎಂದು ತೈತ್ತಿರೀಯೋಪನಿಷತ್ತಿನ ವಾಕ್ಯ ವಿವರಿಸುತ್ತದೆ.

ಅನಾಶ್ರಮೀ ನ ತಿಷ್ಠೇತ್ ಕ್ಷಣಮಾತ್ರಮಪಿ ದ್ವಿಜಃ |
ಆಶ್ರಮೇಣ ವಿನಾ ತಿಷ್ಠನ್ ಪ್ರಾಯಶ್ಚಿತ್ತೀಯತೇ ತು ಸಃ ||

ವಿಪ್ರನಾದವನು ಆಶ್ರಮರಹಿತನಾಗಿ ಕ್ಷಣಕಾಲವೂ ಸಹ ಇರಬಾರದು. ಹಾಗಾಗಿ ಬ್ರಹ್ಮಚರ್ಯಾಶ್ರಮದ ಪರಿಪಾಲನೆಯ ನಂತರ ಗುರುವಿನ ಅನುಜ್ಞೆಯಂತೇ ಸ್ನಾನ ಮಾಡಬೇಕು.ಈ ವ್ರತಾಂತ್ಯ ಸ್ನಾನವನ್ನೇ “ಸಮಾವರ್ತನ” ಎಂದು ಕರೆದಿದ್ದಾರೆ. ಹೀಗೆ ಗುರುಋಣದಿಂದ ನಿರ್ಮುಕ್ತನಾಗಬೇಕು. ಮೇಲೆ ಹೇಳಿದ ಉಕ್ತಿಯಂತೆ ವಿವಾಹ ಸನ್ನಿಹಿತವಾದಾಗ ವಿವಾಹಕ್ಕಿಂತ ಪೂರ್ವ ಸಮಾವರ್ತನವನ್ನು ಮಾಡಬೇಕೆಂದು ತಿಳಿದುಬರುತ್ತದೆ.

 

ಸ್ನಾತಕದಲ್ಲಿ ವಿದ್ಯಾಸ್ನಾತಕ, ವ್ರತಸ್ನಾತಕ, ಉಭಯ ಸ್ನಾತಕ ಎಂದು ಮೂರು ವಿಧ. ಈ ಸ್ನಾತಕ ವ್ರತಗಳನ್ನು ಪರಿಪಾಲಿಸಿ ಬ್ರಹ್ಮಚರ್ಯ, ವಾನಪ್ರಸ್ಥ, ಸಂನ್ಯಾಸ ಈ ಮೂರು ಆಶ್ರಮಗಳಿಗೂ ಆಧಾರಭೂತವಾದ ಗೃಹಸ್ಥಾಶ್ರಮವನ್ನು ಸ್ವೀಕರಿಸಬೇಕು.

ಗೃಹಾ ಮೂಲಂ ಹಿ ಯಜ್ಞಾನಾಂ ಗೃಹಾ ಹ್ಯಾನೃಣ್ಯಕಾರಣಂ |
ಗೃಹಾಹ್ಯಾಶ್ರಮಪೂಜಾರ್ಥಂ ಸ್ಥಿತ್ಯರ್ಥಂ ಚ ಗೃಹಾಃ ಸ್ಮೃತಾಃ ||

 ಯಜ್ಞಾಯಾಗಾದಿ ಧಾರ್ಮಿಕ ಕ್ರಿಯಾಚರಣೆಗಳಿಗೂ ಪಿತೃ ಋಣಾದಿಗಳನ್ನು ದೂರ ಮಾಡಿಕೊಳ್ಳಲೂ ಸಂನ್ಯಾಸಾದಿ ಆಶ್ರಮ ಗೌರವರಕ್ಷಣೆಗಾಗಿಯೂ ತನ್ನ ಆಶ್ರಮದ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿಯೂ ಗೃಹಸ್ಥಾಶ್ರಮವು ಆವಶ್ಯಕವೆನಿಸಿದೆ.

  ಯಥಾ ವಾಯುಂ ಸಮಾಶ್ರಿತ್ಯ ವರ್ತಂತೇ ಸರ್ವಜಂತವಃ |
  ತಥಾ ಗೃಹಸ್ಥಮಾಶ್ರಿತ್ಯ ವರ್ತಂತೇ ಸರ್ವ ಆಶ್ರಮಾಃ ||

ಜೀವನಾಧಾರವಾದ ವಾಯುವನ್ನು ಆಶ್ರಯಿಸಿ ಎಲ್ಲ ಪ್ರಾಣಿಗಳೂ ಬದುಕುವಂತೆ ಗೃಹಸ್ಥಾಶ್ರಮವನ್ನು ಅವಲಂಬಿಸಿ ಎಲ್ಲ ಆಶ್ರಮಗಳೂ ಇವೆ. ಅದಕ್ಕಾಗಿ ಗೃಹಸ್ಥಾಶ್ರಮವನ್ನು ಚೆನ್ನಾಗಿ ಪರಿಪಾಲಿಸಬೇಕು. ವಿವಾಹಸಂಸ್ಕಾರದಲ್ಲಿ ವಾಗ್ದಾನ, ಮಧುಪರ್ಕ, ಕನ್ಯಾದಾನ, ಕಂಠಸೂತ್ರಬಂಧನ, ಪಾಣಿಗ್ರಹಣ, ಸಪ್ತಪದೀ, ವಿವಾಹಹೋಮ ಮುಂತಾದವು ಪ್ರಧಾನಭೂತವಾದ ಅಂಶಗಳಾಗಿವೆ. ಇನ್ನು ಮೃತಸಂಸ್ಕಾರಗಳಲ್ಲಿ ಹದಿನಾರು ಸಂಸ್ಕಾರಗಳನ್ನು ಹೀಗೆ ವಿಭಾಗಿಸಿದ್ದಾರೆ.

ಪ್ರಥಮಂ ಚ ದ್ವಿತೀಯಂ ಚ ತೃತೀಯಂ ಚ ಚತುರ್ಥಕಂ
ಪಂಚಮಂ ಚಾಥ ಷಷ್ಠಂ ಚ ಸಪ್ತಮಂ ಚಾಷ್ಟಮಂ ತಥಾ
ನವಮಂ ದಶಮಂ ಚೈವ ದಶಕರ್ಮಾಣ್ಯನುಕ್ರಮಾತ್
ದಹನಂ ಸಂಚಯಂ ಚೈವ ಏಕೋದ್ದಿಷ್ಟಂ ಚ ಮಾಸಿಕಂ
ಸಪಿಂಡೀಕರಣಂ ಪಶ್ಚಾದೇಕೋದ್ದಿಷ್ಟಂ ತತಃ ಪರಂ
ಏತಾನ್ಯುತ್ತರ ಕರ್ಮಾಣಿ ಷೋಡಶೇತಿ ವಿದುರ್ಬುಧಾಃ ||

ಮೊದಲನೇ ದಿನದಿಂದಾರಂಭಿಸಿ ಹತ್ತನೆಯ ದಿನದವರೆಗಿನದಶಕರ್ಮಗಳು ದಹನ, ಸಂಚಯ, ಏಕೋದ್ದಿಷ್ಟ, ಮಾಸಿಕ, ಸಪಿಂಡೀಕರಣ, ಷೋಡಶ ಮಾಸಿಕ, ಶ್ರಾದ್ಧ ಹೀಗೆ ಉಕ್ತವಾಗಿವೆ. ಈ ಎರಡೂ ವಿಧವಾದ ಸಂಸ್ಕಾರಗಳು ಅವಶ್ಯವಾಗಿ ಕಾಲಕಾಲಕ್ಕೆ ಮಾಡಲ್ಪಡಬೇಕೆಂದು ಶಾಸ್ತ್ರಗ್ರಂಥಗಳು ಸೂಚಿಸಿವೆ.

 ಇತ್ಯೇತಾಭಿಃ ಸಂಸ್ಕೃಯಾಭಿರ್ವಿಹೀನಃ ಜೀವನ್ ವಿಪ್ರೋ ಹೀಯತೇ ಬ್ರಾಹ್ಮಣತ್ವಾತ್|
ತ್ಯಕ್ತಪ್ರಾಣಶ್ಚಾಂತ್ಯಸಂಸ್ಕಾರಹೀನಃ ಶಶ್ವತ್ ಪ್ರೇತಃ ಪುಣ್ಯಲೋಕಂ ನ ಯಾತಿ||

ಹೀಗೆ ಜಾತಸಂಸ್ಕಾರ, ಮೃತಸಂಸ್ಕಾರಗಳಿಲ್ಲದ ಮನುಷ್ಯನು ಬ್ರಾಹ್ಮಣತ್ವದಿಂದಲೂ ಮತ್ತು ಉತ್ತಮ ಲೋಕಾವಾಪ್ತಿಯಿಂದಲೂ ವಂಚಿತನಾಗುತ್ತಾನೆ.

                        ||ಇತಿಶಂ||

Facebook Comments Box