ಗೋಕರ್ಣ: ವಿರೂಪವೆಂಬುದು ಶರೀರಕ್ಕೆ ಮಾತ್ರ ಸೀಮಿತವಲ್ಲ. ಅದು ಮನಸ್ಸಿನಲ್ಲಿಯೂ ಇರಲು ಸಾಧ್ಯ. ದೇಹದ ವಿರೂಪತೆ ಸಮಾಜಕ್ಕೆ ಕೇಡಲ್ಲ. ಆದರೆ ಮನಸ್ಸಿನಲ್ಲಿ ಮೂಡುವ ವಿರೂಪತೆ ಮಾತ್ರ ಆತಂಕಕಾರಿ. ಕೆಲವು ರೋಗಗಳನ್ನು ಔಷಧದಿಂದ ಕಡಿಮೆ ಮಾಡಬಹುದು. ಇನ್ನು ಕೆಲವಕ್ಕೆ ಪ್ರಯತ್ನದಿಂದ ಚಿಕಿತ್ಸೆಮಾಡಿ ಗುಣಪಡಿಸಬಹುದು. ಆದರೆ ಅಸಾಧ್ಯರೋಗಗಳಲ್ಲಿ ಯಾವ ಔಷಧವೂ ಪ್ರಯೋಜನಕ್ಕೆ ಬರುವುದಿಲ್ಲ. ಮನಸ್ಸಿನ ವಿರೂಪತೆ ಇಂತಹ ಅಸಾಧ್ಯರೋಗವರ್ಗಕ್ಕೆ ಸೇರಿದ್ದು. ರೋಗಿಯ ಅಂತ್ಯವೇ ರೋಗಕ್ಕೆ ಮದ್ದು. ನಾವು ಇಂತಹ ರೋಗಗಳ ಬಗ್ಗೆ, ರೋಗಿಗಳ ಬಗ್ಗೆ ಎಚ್ಚರಿಕೆಯಿಂದಿರುವುದು ಅಗತ್ಯ ಎಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಅಶೋಕೆಯಲ್ಲಿ ಆಯೋಜಿತವಾದ ಚಾತುರ್ಮಾಸ್ಯದ ರಾಮಕಥೆಯಲ್ಲಿ ಪ್ರವಚನ ನೀಡುತ್ತಿದ್ದ ಪೂಜ್ಯಶ್ರೀಗಳು ರಾಮಾಯಣದ ರಾವಣ ಇಂತಹ ರೋಗದಿಂದ ಪೀಡಿತನಾಗಿಯೇ ಸಮಾಜಕಂಟಕನಾಗಿ ಲೋಕಪೀಡಕನಾಗಿ ಪ್ರಸಿದ್ಧನಾದ. ಭಾವಬಲರಹಿತವಾದ ಕೇವಲ ಬಾಹುಬಲ ಯಾವ ಪ್ರಯೋಜನಕ್ಕೂ ಬಾರದು ಎಂಬುದಕ್ಕೆ ಉದಾಹರಣೆಯಾದ ಎಂದು ಹೇಳಿ ಅನೇಕ ಪತಿವ್ರತಾಸ್ತ್ರೀಯರನ್ನು, ಸುಂದರಿಯರನ್ನು ಬಲಾತ್ಕಾರವಾಗಿ ಸೆಳೆದೊಯ್ದು ತನ್ನ ಅಂತಃಪುರಕ್ಕೆ ಸೇರಿಸಿದ ರಾವಣ, ಶ್ರೀಹರಿಯನ್ನೇ ಪತಿಯನ್ನಾಗಿ ಪಡೆಯಲು ತೀವ್ರವಾದ ತಪಸ್ಸನ್ನು ಆಚರಿಸುತ್ತಿದ್ದ  ವೇದವತಿಯಂತಹ ಮಹಾವ್ರತೆಯನ್ನು ಬಲಾತ್ಕರಿಸಲು ಪ್ರಯತ್ನಿಸಿ ಆಕೆಯಿಂದ ಶಾಪಿತನಾದ. ಉರಿಯುವ ಅಗ್ನಿಕುಂಡದಲ್ಲಿ ಬಿದ್ದು ಶರೀರತ್ಯಾಗ ಮಾಡಿದ ಆಕೆ ಕಮಲದ ರೂಪದಲ್ಲಿ ಪುನಃ ರಾವಣನ ಆಸ್ಥಾನಕ್ಕೆ ಬಂದಾಗ ನಿಮಿತ್ತಜ್ಞರ ಸಲಹೆಯಂತೆ ಅವಳನ್ನು ಸಮುದ್ರದಲ್ಲೆಸೆದು ಶಾಂತನಾದ. ಆದರೆ ಆಕೆಯೇ ಅಯೋನಿಜೆ ಸೀತೆಯಾಗಿ ಜನಕರಾಜಪುತ್ರಿಯಾಗಿ ಹುಟ್ಟಿ ರಾಮನನ್ನು ವರಿಸಿದಳು. ಮೊದಲು ಬೇಡವೆಂದು ದೂರಮಾಡಿದ್ದ ಸೀತಾರೂಪದ ವೇದವತಿಯನ್ನೇ ಅಪಹರಿಸಿತಂದು, ತನ್ನ ವಿನಾಶವನ್ನು ತಾನೇ ತಂದುಕೊಂಡ. ಅಷ್ಟೇ ಅಲ್ಲ, ಸಮಸ್ತ ಕುಲಬಾಂಧವರ ಸಹಿತ ನಾಶವಾದ ಎಂದು ಹೇಳಿ, ವೇದವತಿ ಹಾಗೂ ಸೀತೆಯರ ಪ್ರಕರಣಗಳಲ್ಲಿನ ಅನೇಕ ಸಾಮ್ಯತೆಗಳನ್ನು ವಿಶ್ಲೇಷಿಸಿ ರಾಮಾಯಣದ ಉದಾತ್ತತತ್ವಗಳ ಮೇಲೆ ಬೆಳಕು ಚೆಲ್ಲಿದರು.

ವಸುಧಾ ಶರ್ಮಾ, ಪ್ರೇಮಲತಾ ದಿವಾಕರ, ಶ್ರೀಪಾದ ಭಟ್ಟ, ವಿಶ್ವೇಶ್ವರ ಭಟ್ಟ ಇವರ ಗಾಯನ, ನರಸಿಂಹ ಮೂರ್ತಿ, ಗೋಪಾಲಕೃಷ್ಣ ಹೆಗಡೆಯವರ ಮೃದಂಗ ಮತ್ತು ತಬಲಾವಾದನಗಳು, ಪ್ರಕಾಶರ ವೇಣುವಾದನ, ನೀರ್ನಳ್ಳಿ ಗಣಪತಿ, ರಾಘವೇಂದ್ರ ಹೆಗಡೆಯವರ ಚಿತ್ರಗಳು ರಾಮಕಥೆಗೆ ಮೆರುಗು ನೀಡಿದವು.ಗಜಾನನ ಶರ್ಮಾ ಅವರ ನೇತೃತ್ವದಲ್ಲಿ ವಿಜಯಲಕ್ಷ್ಮಿ ಹೆಗಡೆ ಕಂಪ್ಲಿ ಮತ್ತ ಬಳಗದಿಂದ ವೇದವತೀರೂಪಕವು ಪ್ರಸ್ತುತವಾಯಿತು. ಚಾತುರ್ಮಾಸ್ಯದ ನಿಮಿತ್ತ ನಡೆದ ಧರ್ಮಸಭೆಯಲ್ಲಿ ಚಿಣ್ಣರ ಬಾಲಕೃಷ್ಣ ವೇಷ, ಭಗವದ್ಗೀತಾಪಠನ ನಡೆದವು. ಡಾ.ವೈ.ವಿ.ಕೃಷ್ಣಮೂರ್ತಿಯವರಿಂದ ಮಹಾನಂದಿವರ್ಷದ ಆಚರಣೆ ಬಗ್ಗೆ ಮಾಹಿತಿ, ಗೋಸಂರಕ್ಷಣೆ ಬಗ್ಗೆ ಶ್ರೀ ಎಮ್.ಕೆ.ಹೆಗಡೆಯವರಿಂದ ಪ್ರಾಸ್ತಾವಿಕ ಸಂಪನ್ನಗೊಂಡವು. ಪೂಜ್ಯಶ್ರೀಗಳು ಅನುಗ್ರಹಸಂದೇಶವನ್ನು ನೀಡಿ ಮಹಾನಂದಿಯ ಆದರ್ಶವನ್ನು ನಮ್ಮದಾಗಿಸಿಕೊಳ್ಳಬೇಕೆಂದರು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.

Facebook Comments