ಗೋಕರ್ಣ: ನಾವು ಆಚರಿಸಿದ ಧರ್ಮವೇ ನಮ್ಮ ಬದುಕಿಗೆ  ಔನ್ನತ್ಯಕಾರಕ. ಧರ್ಮವು ಜೀವನದಲ್ಲಿ ಸ್ಥಾಯಿಯಾದಾಗ ಅದು ಭಗವತ್ಪ್ರಾಪ್ತಿಗೆ ಸೇತುವೆಯೂ ಆಗುತ್ತದೆ. ಭಗವಂತನಲ್ಲಿ ಯಾವುದನ್ನೂ ಬೇಡದಿದ್ದಾಗ ನಾವು ಬಯಸುವುದಕ್ಕಿಂತಲೂ ಹೆಚ್ಚಿನ ಅನುಗ್ರಹ ದೊರೆಯುತ್ತದೆ ಎಂಬುದಕ್ಕೆ ರಾಮಾಯಣದ ಕುಬೇರನೇ ಶ್ರೇಷ್ಠ ಉದಾಹರಣೆ. ಆತ ತಂದೆಯಿಂದ ಪ್ರಾಪ್ತವಾಗಿದ್ದ ಲಂಕಾನಗರವನ್ನು ರಾವಣನು ಬಯಸಿದನೆಂಬ ಕಾರಣಕ್ಕಾಗಿ ಅದನ್ನು ಅವನಿಗೇ ಬಿಟ್ಟುಕೊಟ್ಟು ದಕ್ಷಿಣದ ತುದಿಯನ್ನು ಬಿಟ್ಟು ಉತ್ತರದ ತುತ್ತತುದಿಯನ್ನು ಸೇರಿದ. ಕೈಲಾಸದಲ್ಲಿ ಪರಶಿವನ ದರ್ಶನಮಾಡಿದಾಗ ಪಾರ್ವತಿಯ ಕಡೆ ದೃಷ್ಟಿ ಹರಿಸದಿದ್ದುದರಿಂದ ಅವಳಿಂದ ಏಕಾಕ್ಷಿಯೂ, ಪಿಂಗಲನೂ ಆಗುವ ಶಾಪವನ್ನೂ ಪಡೆದ. ಆದರೆ ಧರ್ಮಾತ್ಮರಿಗೆ ಸಿಗುವ ಶಾಪವೂ ವರದ ರೂಪವೇ ಆಗುತ್ತದೆಯೆಂಬುದಕ್ಕೆ, ತದೇಕನಿಷ್ಠೆಯಿಂದ ಶಿವನನ್ನು ಆರಾಧಿಸಿದ್ದರಿಂದ ಪ್ರೀತನಾದ ಶಿವನೇ ಸ್ವತಃ ತನ್ನ ಆತ್ಮಸಖ್ಯವನ್ನು ನೀಡಿ, ಲೋಕದ ಏಕೈಕಘಟನೆಗೆ  ಸಾಕ್ಷಿಯೂ ಆದ. ಇದು ವೈಶ್ರವಣನು ಕುಬೇರನಾದ ಬಗೆ. ಧರ್ಮವು ತನ್ನನ್ನು ನಂಬಿದವರನ್ನು ಕೈಬಿಡದೆ ಅವರನ್ನು ಉದ್ಧರಿಸುತ್ತದೆಯೆಂಬುದಕ್ಕೆ ನಿದರ್ಶನ ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

 ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿರುವ ರಾಮಕಥೆಯಲ್ಲಿ ಪ್ರವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಕುಬೇರ ಲಂಕಾ ನಗರವನ್ನು ತ್ಯಜಿಸಿ ತಪಸ್ವಿಗಳ ನೆಲೆಯಾದ ಹಿಮವತ್ಪರ್ವತದ ತಪ್ಪಲಿನಲ್ಲಿ ಹೊಸದಾದ ಅಲಕಾನಗರವನ್ನು ನಿರ್ಮಾಣ ಮಾಡಿದ. ಅಲ್ಲಿ ಸಹಜ ಭೂಧರ್ಮದಿಂದಾಗಿ ಅವನ ಧರ್ಮಾಭಿರುಚಿಯೂ ಹೆಚ್ಚಿತು. ಉತ್ತರಕ್ಕೆ ಹೋದವನು ಎತ್ತರದವನಾಗಿಯೂ ಬೆಳೆದ. ಮಾನವನಾಗಿ ಹುಟ್ಟಿದ ಕುಬೇರ ದೈವತ್ವದ ಪಟ್ಟ ಗಳಿಸಿದ. ಇವೆಲ್ಲವೂ ಆತನ ಧರ್ಮಾಸಕ್ತಿಯ, ಆಚರಣೆಯ ಫಲ ಎಂದು ನುಡಿದ ಶ್ರೀಗಳು ಕೆಡುಕರ ರಾಜ್ಯಕ್ಕೆ ಮನೆಹಾಳನೇ ಅಧಿಪತಿಯೆನ್ನುವಂತೆ ರಾವಣ ಲಂಕಾಧಿಪತಿಯಾಗಿ ರಾಜ್ಯಾಭಿಷಿಕ್ತನಾದ. ಅಣ್ಣ ಕುಬೇರನ ಗಡೀಪಾರಿನ ನಾಂದಿಯೊಂದಿಗೆ ಪ್ರಾರಂಭಗೊಂಡ ರಾವಣನ ಲೋಕಪೀಡೆಯು ಮುಂದೆ ಸಮೃದ್ಧವಾಗಿ ವಿಸ್ತರಿಸುತ್ತಾ ಸಾಗಿತು, ಎಂದು ಹೇಳಿ ರಾಮಾವತಾರಕ್ಕೆ ಮೂಲವಾದ ಅನೇಕಸಂಗತಿಗಳನ್ನು ತಾತ್ವಿಕಪ್ರಸಂಗಗಳನ್ನು ವಾಲ್ಮೀಕಿ ರಾಮಾಯಣದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರು.

ಪ್ರೇಮಲತಾ ದಿವಾಕರ್, ಶ್ರೀಪಾದ ಭಟ್ ಇವರ ಗಾಯನ, ಪ್ರಕಾಶರ ವೇಣುವಾದನ, ರಾಜಶೇಖರ ಹೆಬ್ಬಾರ್, ಜಿ.ಕೆ. ಹೆಗಡೆಯವರ ತಬಲಾ ವಾದನಗಳು, ಶ್ರೀ ರಾಘವೇಂದ್ರ ಹೆಗಡೆಯವರ ಮರಳು ಚಿತ್ರ, ಗಣಪತಿ ನೀರ್ನಳ್ಳಿಯವರ ಆಶುಚಿತ್ರಗಳು ಸಭ್ಯರ ಕಲಾರಸಿಕರ ಮನಸ್ಸನ್ನು ಆಕರ್ಷಿಸಿದವು. ಖ್ಯಾತ  ಯಕ್ಷಗಾನ ಕಲಾವಿದ ಶ್ರೀ ವಿಷ್ಣು ಭಟ್, ಸೌಮ್ಯಾ ಬಳಗದಿಂದ ಕುಬೇರ ಶಿವಸಖ್ಯ ಸರಮಾ ರೂಪಕಗಳು ಪ್ರಸ್ತುತಗೊಂಡವು. ಇಂದು ಹೊಸನಗರ ಮಂಡಲದ ಭೀಮನಕೋಣೆ, ಪುರಪ್ಪೇಮನೆ, ಕಾನುಗೋಡು ವಲಯಗಳ ಶಿಷ್ಯಸಮುದಾಯದಿಂದ ಶ್ರೀಗುರುದೇವತಾಸೇವೆಯು ಸಮರ್ಪಿತವಾಯಿತು. ಪೂಜ್ಯಶ್ರೀಗಳು ಧರ್ಮಸಭೆಯಲ್ಲಿ ಆಶೀರ್ಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು. ಶ್ರೀಸವಾರಿಯ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.

Facebook Comments