LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಪರಮಾತ್ಮನ ಸನ್ನಿಧಿಯಲ್ಲಿ ಅಹಂಭಾವ ಸಲ್ಲ- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

Author: ; Published On: ಶನಿವಾರ, ಆಗಸ್ತು 20th, 2011;

Switch to language: ಕನ್ನಡ | English | हिंदी         Shortlink:

ಗೋಕರ್ಣ: ಅಗಸ್ಟ್.೨೦: ವಿನಯ, ಸೌಜನ್ಯಗಳು ಮಾನವನ ಸಹಜಗುಣ. ಸಾಮಾನ್ಯ ವ್ಯವಹಾರದಲ್ಲಿಯೇ ಗುರುಹಿರಿಯರ ವಿಷಯದಲ್ಲಿ ಇವುಗಳಿಗೆ ಅಪಾರ ಮಹತ್ವವಿದೆ. ಶಕ್ತಿಯಿದ್ದರೆ ಅದರ ಜೊತೆ ವಿನಯವೂ ಇದ್ದರೆ ಮಾತ್ರ ಶೋಭೆ. ದೈವಭೀರುವಲ್ಲದವನ ಸಾಮರ್ಥ್ಯ ಪರರಹಿಂಸೆಯಲ್ಲಿಯೇ ಸಾರ್ಥಕವಾಗಿಬಿಡುವ ಅಪಾಯವಿದೆ. ಇದು ಜೀವನೋತ್ಕರ್ಷಕ್ಕೆ ಸಲ್ಲದ್ದು. ನಮ್ಮಲ್ಲಿರುವ ಶಕ್ತಿಯು ಪರೋಪಕಾರಕ್ಕಾಗಿ, ವಿದ್ಯೆಯು ಜ್ಞಾನಕ್ಕಾಗಿ ಹಾಗೂ ಸಂಪತ್ತು ದಾನಕ್ಕಾಗಿ ಉಪಯುಕ್ತವಾಗಬೇಕು. ಮಹಾತ್ಮರ ವಿಷಯದಲ್ಲಿ ಎಂದೂ ಅಪಚಾರವಾಗಬಾರದು. ಅಂತಹವರಿಗೆ ಮಾಡಿದ ಅವಮಾನ ಆ ವ್ಯಕ್ತಿಯ ಅವಸಾನದಲ್ಲಿ ಮುಕ್ತಾಯಗೊಳ್ಳುತ್ತದೆ, ಎಂದು ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಅಶೋಕೆಯಲ್ಲಿ ಆಯೋಜಿತವಾಗಿರುವ ರಾಮಕಥಾದಲ್ಲಿ ಅನುಗ್ರಹ ಪ್ರವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು, ಅಣ್ಣ ಕುಬೇರನನ್ನು ಸೋಲಿಸಿ ಅವನ ಸರ್ವಸ್ವವನ್ನೂ ದೋಚಿದ ರಾವಣ ಅವನ ಪುಷ್ಪಕವಿಮಾನವನ್ನೂಅಪಹರಿಸಿದ. ಅದನ್ನೇರಿ ಕೈಲಾಸ ಪರ್ವತದ  ಸಮೀಪ ಹೋದಾಗ ಅಲ್ಲಿ ವಿಮಾನವು ತಟಸ್ಥವಾಗಲು ಕಾರಣವನ್ನು ಹುಡುಕುತ್ತಾ ಪರಶಿವನ ಸೇವಕ ನಂದಿಯನ್ನು ಅವಮಾನಿಸಿ ಅವನಿಂದ ವಾನರಮುಖದವರಿಂದಲೇ ನಿನಗೆ ಸಾವು ಬರಲಿ ಎಂದು ಶಾಪವನ್ನು ಪಡೆದ. ಅಷ್ಟೇ ಅಲ್ಲದೆ ತನ್ನ ಭುಜಬಲದ ಗರ್ವದಿಂದ ಲೋಕೇಶ್ವರನಾದ ಶಂಕರನನ್ನೂ ಕಡೆಗಣಿಸಿ ಕೈಲಾಸ ಶಿಖರವನ್ನೇ ಎತ್ತಲು ಹೋಗಿ ಗರ್ವಭಂಗಗೊಂಡ ಸಂಗತಿಯನ್ನು ವಿಶ್ಲೇಷಿಸಿ, ಇದು ನಾವು ನಮ್ಮ ಬದುಕಿನಲ್ಲಿ ಪರರ ಶಕ್ತಿಸಾಮರ್ಥ್ಯವನ್ನು ತಿಳಿಯದೆ ಅಹಂಭಾವದಿಂದ ವರ್ತಿಸಿದರೆ ಬರುವ ಅಪಾಯದ ಸಂಭಾವ್ಯತೆಯನ್ನು ಸೂಚಿಸುತ್ತದೆಯಲ್ಲದೆ, ಭಗವಂತನ ಸಮೀಪಕ್ಕೆ ಹೋಗುವಾಗ ವಿನೀತಭಾವದಿಂದ ಪರಿಶುದ್ಧಮನಸ್ಸಿನಿಂದ ಹೋಗಬೇಕೆಂಬುದಕ್ಕೆ ನಿದರ್ಶನ ಎಂದರು. ಈ ಕಾರಣದಿಂದಲೇ ಶ್ರಮದಿಂದಲೇ ದೇವರನ್ನು ಪಡೆಯಬೇಕೆಂಬುದನ್ನು ಸೂಚಿಸಲೋ ಎಂಬಂತೆ ದೇವಾಲಯಗಳನ್ನು ಎತ್ತರವಾದ ಪರ್ವತಾಗ್ರಗಳಲ್ಲಿ, ನಿರ್ಮಿಸುತ್ತಿದ್ದುದನ್ನು ಕಾಣಬಹುದು. ರಾವಣನ ಈ ವೃತ್ತಾಂತವು ಪರಮಾತ್ಮನ ವಿಷಯದಲ್ಲಿ ನಮಗೆ ಎಚ್ಚರಿಕೆಯನ್ನು ಕೊಡುತ್ತಿದ್ದು ರಾಮಾಯಣದಲ್ಲಿ ಎಲ್ಲ ಭಾಗಗಳಲ್ಲಿಯೂ ಇಂತಹ ಬದುಕಿನ ಸಾರ್ಥಕತೆಯನ್ನು ಪ್ರತಿಪಾದಿಸುವ ಮೌಲ್ಯಗಳು ತುಂಬಿಕೊಂಡಿವೆ  ಎಂದು ಹೇಳಿದರು.

ಪ್ರೇಮಲತಾ ದಿವಾಕರ್, ವಸುಧಾ ಶರ್ಮಾ, ಶ್ರೀಪಾದ ಭಟ್ ಇವರ ಗಾಯನ, ಪ್ರಕಾಶರ ವೇಣುವಾದನ, ನರಸಿಂಹ ಮೂರ್ತಿಯವರ ಮೃದಂಗ, ಗೋಪಾಲಕೃಷ್ಣ ಹೆಗಡೆಯವರ ತಬಲಾ ವಾದನಗಳು,ಶ್ರೀ ರಾಘವೇಂದ್ರ ಹೆಗಡೆಯವರ ಮರಳುಚಿತ್ರ,  ಗಣಪತಿ ನೀರ್ನಳ್ಳಿಯವರ ಆಶುಚಿತ್ರಗಳು ತುಂಬಾ ಮನೋಹರವಾಗಿದ್ದವು. ಪ್ರೊ.ಕುಮಾರಿ ಸುಭದ್ರಾ ಇವರ ನಿರ್ದೇಶನದಲ್ಲಿ ಕೈಲಾಸದರ್ಶನ ರೂಪಕವು ಪ್ರಸ್ತುತವಾಯಿತು. ಉಡುಪಿ ವಲಯದ ಶಿಷ್ಯಸಮುದಾಯದಿಂದ ಶ್ರೀಗುರುದೇವತಾಸೇವೆಯು ಸಮರ್ಪಿತವಾಯಿತು. ಪೂಜ್ಯಶ್ರೀಗಳು ಧರ್ಮಸಭೆಯಲ್ಲಿ ಆಶೀರ್ವಚನ ಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ಸಭೆಯನ್ನು ನಿರ್ವಹಿಸಿದರು

 

2 Responses to ಪರಮಾತ್ಮನ ಸನ್ನಿಧಿಯಲ್ಲಿ ಅಹಂಭಾವ ಸಲ್ಲ- ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

 1. ನಂದ ಕಿಶೋರ ಬೀರಂತಡ್ಕ

  harE raama..

  [Reply]

 2. seetharama bhat

  ಹರೇರಾಮ್,

  ಅನ೦ತ ನಲ್ಲಿ ಅಹ೦
  ಸ೦ತನಲ್ಲಿ ಸವಾಲು
  ಬೆ೦ಕಿಯಲ್ಲಿ ಹಾಕಿದ ತರಗೆಲೆಗಳ೦ತೆ,
  ಜ್ನಾನಿಯಲ್ಲಿ ಜಿಜ್ನ್ನಸೆ,
  ಸ೦ತರ ಸ೦ಗ
  ಚಿನ್ನಕ್ಕೆ ಪುಟವಿಟ್ಟ೦ತೆ

  ಹರಿಸಿಗುರುದೇವಾ

  [Reply]

Leave a Reply

Highslide for Wordpress Plugin