ಗೋಕರ್ಣ: ನಾವು ಬದುಕಿನಲ್ಲಿ ಬೇಡಿದ್ದನ್ನೆಲ್ಲ ಭಗವಂತ ನೀಡುವುದಿಲ್ಲ. ಪರಮಾತ್ಮ ವಾತ್ಸಲ್ಯಮಯಿಯಾದ ತಾಯಿಯಂತೆ. ನಮ್ಮ ಒಳಿತನ್ನು ನಮಗಿಂತಲೂ ಚೆನ್ನಾಗಿ ಬಲ್ಲವನಾತ. ಆದ್ದರಿಂದಲೇ ನಮಗೆ ನಾವು ಕೇಳಿದೆವೆಂದು ಪ್ರಿಯವಾದುದನ್ನು ನೀಡದೆ ಹಿತವಾದುದನ್ನೇ ಕೊಡುತ್ತಾನೆ. ಹೀಗೆ ಪರಮಾತ್ಮನ ಪ್ರಸಾದರೂಪವಾದ ಜೀವನದಲ್ಲಿ ನಮಗೆ ಸಿಕ್ಕಿದ್ದಷ್ಟಕ್ಕೇ ತೃಪ್ತರಾದರೆ ನಮ್ಮ ಬದುಕು ಆನಂದಮಯವಾಗುತ್ತದೆಯೆಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಇಂದು ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿದ್ದ ರಾಮಕಥಾದ ತೃತೀಯಪರ್ವದಲ್ಲಿ ಲೋಕಕಂಟಕರಾದ ರಾವಣ, ಕುಂಭಕರ್ಣ ಹಾಗೂ ಧರ್ಮಾತ್ಮನೆಂದು ವಾಲ್ಮೀಕಿಯಿಂದಲೇ ಪ್ರಶಂಸಿತನಾದ ವಿಭೀಷಣರು ವಿಧಿಯಿಂದ ಪಡೆದ ವರಗಳ ಸಾಂಕೇತಿಕತೆಯನ್ನು ಹಾಗೂ ಅಂತರಾರ್ಥವನ್ನು ವಿಶ್ಲೇಷಿಸಿ ಮಾತನಾಡುತ್ತಿದ್ದ ಪೂಜ್ಯಶ್ರೀಗಳು ರಾವಣನಿಗೆ ಅವನು ಕೇಳಿದ ಅಮರತ್ವದ ವರ ಸಿಗಲಿಲ್ಲ. ಕುಂಭಕರ್ಣನಿಗೆ ತಪಸ್ಸಿಗೆ ಮುಖ್ಯವಾದ ಉದ್ದೇಶವೇ ಇರದೆ ಅಣ್ಣಂದಿರು ತಪಸ್ಸು ಮಾಡುತ್ತಿದ್ದಾರೆಂಬ ಕಾರಣದಿಂದ ಮಾತ್ರವೇ ತಪಸ್ಸನ್ನಾಚರಿಸಿದ್ದರಿಂದ ಬೇಡವಾದ ನಿದ್ದೆಯನ್ನು ವರವಾಗಿ ಪಡೆದ. ಇವರಿಬ್ಬರೂ ವಿಕೃತರಾಜಸ ಹಾಗೂ ತಮೋಗುಣಗಳಿಗೆ ಪ್ರತೀಕವಾಗಿ ನಿಲ್ಲುತ್ತಾರೆ. ಆದರೆ ವಿಭೀಷಣ ಮಾತ್ರ ತನ್ನ ಮನಸ್ಸು ಎಂತಹ ಆಪತ್ ಸ್ಥಿತಿಯಲ್ಲಿಯೂ ಧರ್ಮವನ್ನು ಬಿಡದಿರುವಂತೆ ವರವನ್ನುಕೇಳಿದ್ದರಿಂದ ಅವನು ಕೇಳದೆಯೇ ಅಣ್ಣನಿಗೂ ಅಲಭ್ಯವಾದ ಸರ್ವಾಮರತ್ವ ದೊರಕಿತು. ಹೀಗೆ ಬಯಸದೆಯೇ ಬಂದ ಭಾಗ್ಯ ವಿಭೀಷಣನಿಗಾಯಿತು ಎಂದು ಹೇಳಿ ಹರಾವಣನ ಉದ್ದೇಶದ ಹಿಂದೆ ಲೋಕಹಿತ ಚಿಂತನೆಯಿಲ್ಲದೆ ಅಜ್ಜನಾದ ಸುಮಾಲಿಯ ಕೇವಲ ರಾಕ್ಷಸಕುಲಹಿತ ಹಾಗೂ ಭಗವದ್ವೇಷ ರೂಪವಾದ ದುರುದ್ದೇಶ ಮಾತ್ರ ಇದ್ದುದರಿಂದ ಅವನ ಬಯಕೆ ಕೈಗೂಡಲಿಲ್ಲ. ಪರಮಾತ್ಮನ ಸನ್ನಿಧಿಯಲ್ಲಿ  ನಮಗೆ ವಿಭೀಷಣ ಉದಾಹರಣೆಯಾಗಬೇಕೇ ಹೊರತು ರಾವಣಕುಂಭಕರ್ಣರಲ್ಲ ಎಂದು ಹೇಳಿ ರಾಮಾಯಣದ ಸಾರ್ವಕಾಲಿಕ ಪ್ರಸ್ತುತತೆಯನ್ನು ಸೋದಾಹರಣವಾಗಿ ಪ್ರತಿಪಾದಿಸಿದರು.

ಪ್ರೊ.ಕುಮಾರಿ ಸುಭದ್ರಾ ಹಾಗೂ ವಿದ್ವಾನ್ ಜಗದೀಶ ಶರ್ಮಾರವರ ನಿರ್ದೇಶನದಲ್ಲಿ ನಡೆದ ರಾಕ್ಷಸ ಪುನರಾಗಮನ ಹಾಗೂ ಭ್ರಾತೃವಾತ್ಸಲ್ಯ ರೂಪಕಗಳು ಅತ್ಯಂತ ಮನೋಜ್ಞವಾಗಿ ಮೂಡಿಬಂದವು. ಪ್ರೇಮಲತಾ ದಿವಾಕರ್, ವಸುಧಾ ಶರ್ಮಾ, ಸಂದ್ಯಾ ಭಟ್, ಶ್ರೀಪಾದ ಭಟ್, ಪ್ರೊ ಶಂಭು ಭಟ್, ವಿಶ್ವೇಶ್ವರ ಭಟ್ ಇವರ ಗಾಯನ, ಪ್ರಕಾಶರ ವೇಣುವಾದನ, ನರಸಿಂಹ ಮೂರ್ತಿಯವರ ಮೃದಂಗ, ಗೋಪಾಲಕೃಷ್ಣ ಹೆಗಡೆಯವರ ತಬಲಾ ವಾದನಗಳು ಶ್ರೀ ರಾಘವೇಂದ್ರ ಹೆಗಡೆಯವರ ಮರಳುಶಿಲ್ಪ, ಗಣಪತಿ ನೀರ್ನಳ್ಳಿಯವರ ಆಶುಚಿತ್ರಗಳು ತುಂಬಾ ಮನೋಹರವಾಗಿದ್ದವು. ಇದಕ್ಕೂ ಮೊದಲು ಇಂದು ಅಖಿಲ ಹವ್ಯಕ ಮಹಾಸಭಾ ವತಿಯಿಂದ ಶ್ರೀಗುರು ದೇವತಾ ಸೇವೆಯು ಸಂಪನ್ನಗೊಂಡಿತು. ಈ ಪ್ರಯುಕ್ತ ಆಯೋಜಿತವಾದ ಧರ್ಮಸಭೆಯಲ್ಲಿ ಪಾಲ್ಗೊಂಡ ಶಿಕ್ಷಣಸಚಿವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು,  ಇಂದು ಸ್ವಾತಂತ್ರ್ಯೋತ್ಸವ. ಆದರೆ ಪರಕೀಯರ ದಾಸ್ಯದಿಂದ ಬಿಡುಗಡೆಯಾದರೂ ನಾವು ಮಾನಸಿಕವಾಗಿ ಪರಕೀಯದಾಸ್ಯದಲ್ಲಿಯೆ ಇದ್ದೇವೆ. ನಮ್ಮದಾದ ಸಂಸ್ಕೃತಿ,ಸಂಸ್ಕಾರಗಳ ಬಗ್ಗೆ ಅವುಗಳ ಹಿರಿಮೆಯ ಬಗ್ಗೆ ಉದಾಸೀನ ತಾಳಿ ಅಂಧಾನುಕರಣೆಯಲ್ಲಿ ಮಗ್ನರಾಗಿದ್ದೇವೆ. ಈ ಸ್ಥಿತಿ ತೊಲಗಿ ನಮ್ಮಲ್ಲಿ ಭಾರತೀಯತ್ವದ ಎಚ್ಚರ ಮೂಡಬೇಕಾಗಿದೆ. ಪೂಜ್ಯ ಶ್ರೀಗಳು ಸಮಾಜವನ್ನು ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ. ಇಂತಹ ಮಹಾತ್ಮರ ಮಾರ್ಗದರ್ಶನದಲ್ಲಿ ನಾವು ಮುಂದುವರೆಯಬೇಕಾದ ಅಗತ್ಯ ಇಂದು ಹೆಚ್ಚಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮಾನ್ಯಸಚಿವರು ಅಶೋಕೆಯ ರಸ್ತೆಯ ಡಾಮರೀಕರಣ ಕಾರ್ಯಕ್ಕೆ ಶಿಲಾನ್ಯಾಸವನ್ನು ಮಾಡಿದರು. ಶ್ರೀ ಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ಸಭೆಯನ್ನು ನಿರ್ವಹಿಸಿದರು.

Facebook Comments