ಮುಂಬಯಿ.ಫೆ೧೭. ನಮಗೆ ಬದುಕನ್ನಿತ್ತ ಭಗಂತನಿಗೆ ನಾವೆಲ್ಲರೂ ಋಣಿಗಳು.ಇದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಅಂತಹ ಭಗವಂತನ ಬಾಯಿಂದಲೇ ತಾನು ನಿನಗೆ ಋಣಿ ಎಂಬ ಮಾತನ್ನು ಆಡಿಸಿದ ಭಕ್ತನೋರ್ವ ಲೋಕದಲ್ಲಿದ್ದರೆ ಆತ ಆಂಜನೇಯ ಮಾತ್ರ. ರಾವಣನಿಂದ ಅಪಹೃತಳಾಗಿದ್ದ ಲೋಕಮಾತೆಯಾದ ಜನಕನಂದಿನಿಯನ್ನು ಕನಕಮಯಲಂಕೆಯಲ್ಲಿ ಕಂಡು ಅವಳಿಗೆ ರಾಮಮುದ್ರಿಕೆಯನ್ನಿತ್ತು ಅವಳಿಂದ ಅಭಿಜ್ಞಾನವನ್ನು ಪಡೆದು ಅದನ್ನು ಪ್ರಭು ಶ್ರೀರಾಮಚಂದ್ರನಲ್ಲಿ ನಿವೇದಿಸಿಕೊಂದಾಗ ಸ್ವತಹ ಶ್ರೀರಾಮನೆ ಆಂಜನೇಯನಿಗೆ ಹೇಳಿದ ಮಾತಿದು. ಜೀವನದಲ್ಲಿ ಪ್ರಾಣಕ್ಕಿಂತಲೂ ಪ್ರಿಯವಾದ ವಿಷಯವನ್ನು ಹೇಳಿದ್ದರಿಂದಾಗಿ ನಿನಗೆ ಬೆಲೆಬಾಳುವ ಪಾರಿತೋಷಕವನ್ನು ನೀಡಬೇಕಾದದ್ದು ರಾಜವಂಶದ ನನ್ನ ಕರ್ತವ್ಯ. ಆದರೆ ವನವಾಸಿಯಾಗಿರುವ ನಾನು ಏನನ್ನೂ ಕೊಡುವ ಸ್ಥಿತಿಯಲ್ಲಿಲ್ಲ.ನನ್ನ ಸರ್ವಸ್ವಭೂತವಾದ ಈ ನನ್ನ ಆಲಿಂಗನವನ್ನು ಕೊಡುವುದರ ಮೂಲಕ ಒಂದು ಋಣವನ್ನು ಪರಿಹರಿಸಿಕೊಳ್ಳುತ್ತೇನೆ.ಉಳಿದ ನಿನ್ನ ಉಪಕಾರಗಳಿಗೂ ನಾನು ನಿನಗೆ ಋಣಿಯಾಗಿರುತ್ತೇನೆ ಎಂದು ಹೇಳುವ ಮೂಲಕ ಭಗವಂತನ ಹೃದಯದಲ್ಲಿ ಭಕ್ತನ ಸ್ಥಾನ ಎಷ್ಟೊಂದು ದೊಡ್ಡದೆಂಬುದನ್ನು ಶ್ರೀರಾಮಚಂದ್ರ ತೋರಿಸಿಕೊಟ್ಟಿದ್ದಾನೆ. ತನ್ನ ಸ್ವಾಮಿಯಾದ ಶ್ರೀರಾಮನಿಗೆ ತನ್ನದೆಲ್ಲವನ್ನೂ ಅರ್ಪಿಸಿ ಬದುಕಿನಲ್ಲಿ ಬೇರೇನನ್ನೂ ಬಯಸದೆ ಸೇವೆಯಲ್ಲಿಯೇ ಬದುಕಿನ ಸಾರ್ಥಕ್ಯವನ್ನು ಕಂಡುಕೊಂಡ ಆಂಜನೇಯನ ನಡೆ ನಮ್ಮ ಬದುಕಿಗೆ ಆದರ್ಶವಾಗಬೇಕು ಎಂದು ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಮುಂಬಯಿಯ ದೊಂಬಿವಲಿಯಲ್ಲಿ ಆಯೋಜಿತವಾಗಿರುವ “ಶ್ರೀರಾಮಕಥಾ” ದಲ್ಲಿ ೧೬ ರಂದು ಪ್ರವಚನದ ಅನುಗ್ರಹವನ್ನು ನೀಡುತ್ತಿದ್ದ ಶ್ರೀಗಳು ನಮ್ಮ ಬದುಕಿನಲ್ಲಿ ಲೋಕದ ಆದಿದಂಪತಿಗಳಾದ ಶ್ರೀರಾಮಸೀತೆಯರ ಹುಡುಕಾಟವೇ ರಾಮಾಯಣ.ಆದಿಪುರುಷ ಶ್ರೀರಾಮನಾದರೆ ಲೋಕಮಾತೆಯಾದ ಸೀತಾದೇವಿ ಪ್ರಕೃತಿಯಾಗಿದ್ದಾಳೆ.ಜೀವನದಲ್ಲಿ ಪ್ರಕೃತಿಪುರುಷರ ಸಮಾಗಮವೇ ಆತ್ಮಜ್ಞಾನಪ್ರಾಪ್ತಿ. ರಾಮಾಯಣವು ಕೇವಲಕಾಲ್ಪನಿಕಕಥೆಯಲ್ಲ. ಮಹರ್ಷಿ ವಾಲ್ಮೀಕಿ ಶ್ರೀರಾಮನ ರಾಜ್ಯಸುಖವನ್ನು ಸ್ವತಹ ಅನುಭವಿಸಿ ದಾಖಲಿಸಿದ ಕಾವ್ಯವೆ ರಾಮಾಯಣ.ಇಂತಹ ಆದಿಕಾವ್ಯದ ಪ್ರತಿಯೊಂದು ಪಾತ್ರವೂ ಗ್ರಾಹ್ಯ ಹಾಗೂ ನಿಷಿದ್ಧವಾದ ಗುಣಗಳಿಗೆ ಪ್ರತೀಕವಾಗಿದೆ ಎಂದೂ ಪೂಜ್ಯಶ್ರೀಗಳು ಅಭಿಪ್ರಾಯಪಟ್ಟರು.ಶ್ರೀರಾಮಕಾರ್ಯಕ್ಕಾಗಿಯೇ ಜನಿಸಿದ ಆಂಜನೇಯ ಅದ್ಭುತಬಲಶಾಲಿಯಾಗಿದ್ದರೂ ಬಾಲ್ಯದಲ್ಲಿ ತನ್ನ ತುಂಟಾಟದಿಂದಾಗಿ ಋಷಿಗಳ ಶಾಪಕ್ಕೊಳಗಾಗಿ ತನ್ನ ಶಕ್ತಿಸಾಮರ್ಥ್ಯವನ್ನು ಮರೆತಿದ್ದ.ಅವನ ಅಗಾಧ ಶಕ್ತಿಯನ್ನು ನೆನಪಿಸಿದ. ಅದರಿಂದಾಗಿ ಮಾರುತಿಗೆ ಸಾಗರೋಲ್ಲಂಘನವನ್ನು ಮಾಡಲು ಸಾಧ್ಯವಾಯಿತು.ಮುಂದೆ ಸೀತಾಮಾತೆಯನ್ನು ಕಂಡು ಸೀತಾರಾಮರನ್ನು ಒಂದುಗೂಡಿಸಿದ. ಇದು ಲೋಕೋತ್ತರವಾದ ಕಾರ್ಯ.ಇಂತಹ ಘಟನೆ ನಮ್ಮ ಬದುಕಿನಲ್ಲಿ ಬರಬಹುದಾದ ತೊಂದರೆಗಳನ್ನು ನಮ್ಮ ಆತ್ಮಬಲದಿಂದ ದೂರಮಾಡಿ ಸಫಲತೆಯನ್ನು ಪಡೆದುಕೊಳ್ಳಲು ಸಹಕಾರಿಯಾಗಬೇಕು ಎಂದೂ ಪೂಜ್ಯಶ್ರೀಗಳು ಅಭಿಪ್ರಾಯಪಟ್ಟರು.

ಶ್ರೀರಾಮಕಥಾ ವೃಂದದ ಕಲಾವಿದರಾದ ಶ್ರೀಪಾದ ಭಟ್, ವೆಂಕಟಗಿರಿ ಹಾಗೂ ಕುಮಾರಿ ದೀಪಿಕಾ ಭಟ್ ಇವರ ಮನೋಜ್ಣವಾದ ಗಾಯನ,ಉದಯ ಭಂಡಾರಿಯವರ ಕೀಬೋರ್ಡ್, ಶ್ರೀ ನಿರಂಜನ ಅವರ ಬಾನ್ಸುರಿವಾದನ ಮಹೇಶ್ ಗಾಡವಿ ಯವರ ತಬಲಾ ವಾದನಗಳು ಶ್ರೋತೃಗಳನ್ನು ಬೇರೊಂದುಲೋಕಕ್ಕೆ ಕರೆದೊಯ್ದವು.ಆಶುಚಿತ್ರಕಾರ ಖ್ಯಾತ ವ್ಯಂಗ್ಯಚಿತ್ರಕಾರ ಗಣಪತಿ ನೀರ್ನಳ್ಳಿ ಯವರ ಮಿಂಚಿನಸಂಚಾರದ ಚಿತ್ರರಚನೆ ಅದ್ಭುತವಾಗಿತ್ತು. ಕರ್ನಾಟಕದ ಸುಪ್ರಸಿದ್ಧ ಯಕ್ಷಗಾನಕಲಾವಿದರಾದ ಶ್ರೀ ವಿಷ್ಣುಭಟ್ ಮೂರೂರು ಹಾಗೂಶ್ರೀ ಈಶ್ವರ ಭಟ್ ಕಟ್ಟೆ ಇವರಿಂದ “ವಾಮನ-ತ್ರಿವಿಕ್ರಮ ” ಎಂಬ ರೂಪಕವು ಪ್ರದರ್ಶಿತವಾಯಿತು.ದೊಂಬಿವಲಿ ವಲಯದ ಶ್ರೀ ವಿನೋದ ಧರಣಿಧರ ಪೂಜ್ಯಶ್ರೀಗಳಿಗೆ ಮಾಲಾರ್ಪಣೆ ಮಾಡಿ ಗುರುವಂದನೆ ಸಲ್ಲಿಸಿದರು.

Facebook Comments