ಗೋಕರ್ಣ: ೧೩. ನಮ್ಮ ಈ ಬದುಕು ಭಗವಂತನ ಕೊಡುಗೆ. ಇಲ್ಲಿ ನಾವು ಕೇವಲ ಸಾಧನ ಮಾತ್ರ. ಯಾವ ಕಾರ್ಯದಲ್ಲಿಯೂ ನಮಗೆ ಸ್ವತಂತ್ರಕತೃತ್ವವಿಲ್ಲ. ಎಂದಾದರೂ ಇದು ನಮ್ಮದೇ ಸಾಧನೆಯೆಂಬ ಭಾವ ಬಲಿತರೆ ಅಹಂಕಾರ ಅಮರಿಕೊಂಡರೆ ನಮ್ಮ ಪತನಕ್ಕೆ ಹೆಚ್ಚು ಸಮಯವಿಲ್ಲ ಎಂದೇ ಅರ್ಥ. ಪ್ರಭು ಶ್ರೀರಾಮಚಂದ್ರ ಈ ವರ್ಷದ ಚಾತುರ್ಮಾಸ್ಯ ಕಾರ್ಯಕ್ರಮವನ್ನು ತುಂಬ ಸುಂದರವಾಗಿ ನಿರೂಪಿಸಿದ್ದಾನೆ. ಇದಕ್ಕೆ ಕಾರಣ ನಾವೂ ಅಲ್ಲ ಅಥವಾ ಶಿಷ್ಯರಾದ ನೀವೂ ಅಲ್ಲ. ಇಲ್ಲಿ ನಮ್ಮೆಲ್ಲರ ಪಾತ್ರ ಪುಸ್ತಕಲೇಖನದಲ್ಲಿ ಉಪಯೋಗವಾಗುವ ಲೇಖನಿಯಂತೆ. ಈ ಮಹಾಕಾವ್ಯವನ್ನು ಬರೆಯಲು ನಮ್ಮನ್ನು ಸಾಧನವಾಗಿಸಿಕೊಂಡಿದ್ದಾನೆ. ನಮ್ಮ ಭಾಗಕ್ಕೆ ಬಹು ದೊಡ್ಡದಾದ ಬಹುಮಾನವನ್ನು ನೀಡಿದ್ದಾನೆ ಎಂಬ ಸಮಾಧಾನ ಮಾತ್ರ ಸಾಕು. ಅದಕ್ಕಿಂತ ಹೆಚ್ಚಿನ ಅಪೇಕ್ಷೆ ಸಲ್ಲದು. ಕೋಟಿ ಕೋಟಿ ಜನರ ಮಧ್ಯೆ ಆತ ತನ್ನಸೇವೆಗೆ ನಮ್ಮನ್ನು ಆಯ್ಕೆ ಮಾಡಿದ್ದಾನೆಂದರೆ ಅದರರ್ಥ ನಾವು ಪರಮಾತ್ಮನಿಗೆ ಪ್ರಿಯರಾಗಿದ್ದೇವೆಂಬುದೇ. ಆದರೆ ಈ ರೀತಿಯ ಅಹಂಭಾವವು ನಮ್ಮಲ್ಲಿ ಮೊಳೆಯಿತೆಂದರೆ ಆತ ನಮ್ಮಿಂದ ದೂರಾಗಲು ಹೆಚ್ಚುಕಾಲ ಬೇಕಾಗದು ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಇಂದು ಅಶೋಕೆಯಲ್ಲಿ ನಿನ್ನೆಗೆ ಸಮಾಪ್ತವಾದ ಚಾತುರ್ಮಾಸ್ಯದಲ್ಲಿ ನಿರಂತರವಾಗಿ ಎರಡು ತಿಂಗಳಿನಿಂದ ಶ್ರೀಗಳ ಎಲ್ಲ ಕಾರ್ಯಕ್ರಮದಲ್ಲಿ ಸೇವೆಸಲ್ಲಿಸಿದ ಶ್ರೀಮಠದ ಕಾರ್ಯಕರ್ತರು ಸಮರ್ಪಿಸಿದ ಶ್ರೀಗುರುದೇವತಾಸೇವೆಯನ್ನು ಸ್ವೀಕರಿಸಿ ಆಶೀರ್ವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು, ಅಶೋಕೆಯು ಚೈತನ್ಯದ ಚಿಲುಮೆ. ಇಲ್ಲಿ ಅದೆಷ್ಟೋ ಧಾರ್ಮಿಕ ಕಾರ್ಯಕ್ರಮಗಳು, ಗ್ರಹಯಾಗಾದಿಗಳು ನಡೆದಿವೆ. ಈ ಪರಿಸರವನ್ನು ಮತ್ತಷ್ಟು ಪವಿತ್ರವನ್ನಾಗಿಸಿವೆ. ನಿರಂತರವಾಗಿ ನಡೆದ ಶ್ರೀರಾಮಕಥೆಯು ಅದೆಷ್ಟೋ ಜನರ ಬಾಳಿಗೆ ದೀಪವಾಗಿದೆ. ಆದಿಶಂಕರಾಚಾರ್ಯರಿಂದ ಸಂಸ್ಥಾಪಿತವಾಗಿ ತನ್ನ ಅವಿಚ್ಛಿನ್ನಪರಂಪರೆಯಿಂದ ಲೋಕವಂದ್ಯತ್ವವನ್ನು ಗಳಿಸಿದ ಈ ಮಠದ ಆರಾಧ್ಯದೇವತೆಯಾದ ಪ್ರಭು ಶ್ರೀರಾಮಚಂದ್ರನ ನಡೆಯೇ ಅದ್ಭುತ. ಆತನ ಎಲ್ಲ ಕಾರ್ಯಗಳೂ ಲೋಕಹಿತೈಕದೃಷ್ಟಿಯವಾಗಿದ್ದು ಅದು ಈ ಚಾತುರ್ಮಾಸ್ಯ ಕಾಲದಲ್ಲಿ ಸ್ಪಷ್ಟವಾಗಿದೆ ಎಂದು ನುಡಿದ ಪೂಜ್ಯಶ್ರೀಗಳು, ಶ್ರೀರಾಮನನ್ನು ನಂಬಿ ಬದಕುವವರಿಗೆ ಯಾವ ಆತಂಕವೂ ಕಾಡದು, ಲೇಖನಿಯಿಲ್ಲದೆ ಬರೆಯಲಾಗದು,  ಹಾಗೆಂದು ಗ್ರಂಥಕ್ಕೆ ಸಲ್ಲುವ ಗೌರವವನ್ನು ಲೇಖನಿ ಬಯಸಬಾರದು. ಆ ಮಹಾಕಾರ್ಯದಲ್ಲಿ ಸಾಧನವಾಗಿರುವುದೇ ತನ್ನ ಭಾಗ್ಯವೆಂದುಕೊಳ್ಳಬೇಕು ಎಂದು ಹೇಳಿ ಎಲ್ಲ ಕಾರ್ಯಕರ್ತರಿಗೂ ಪ್ರಭು ಶ್ರಿರಾಮಚಂದ್ರ ಸಂಪೂರ್ಣಾನುಗ್ರಹವನ್ನು ಆಶಿಸಿದರು.

ಕುಮುಟಾ ಹವ್ಯಕಮಂಡಲದ ಸೇವಾಶಾಖೆಯ ಪ್ರಧಾನ ಶ್ರೀ ಗಜಾನನ ಹಂಸಳ್ಳಿ ದಂಪತಿಗಳು ಕಾರ್ಯಕರ್ತರ ಪರವಾಗಿ ಶ್ರೀಗಳಿಗೆ ಫಲಕಾಣಿಕೆಗಳನ್ನು ಸಮರ್ಪಿಸಿದರು. ಉಗ್ರಾಣ ವಿಭಾಗದ ಶ್ರೀ ಆರ್.ಬಿ.ಹೆಗಡೆ, ಚಾತುರ್ಮಾಸ್ಯಸಮಿತಿಯ ಶ್ರೀ ಎಮ್.ಕೆ.ಹೆಗಡೆ, ಶ್ರೀಪರಿವಾರದ ಶ್ರಿಹರ್ಷ ಜೋಯ್ಸ್ ಚಾತುರ್ಮಾಸ್ಯಕಾಲದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಶ್ರೀಗಳಲ್ಲಿ ನಿವೇದಿಸಿಕೊಂಡರು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ನಿರ್ವಹಿಸಿದರು.

Facebook Comments