ಗೋಕರ್ಣ: ೫, ಹಿಂದೆ ದೇವಾಸುರ ಸಂಗ್ರಾಮವು ನಡೆಯಿತೆಂದು ಪುರಾಣಗಳು ಉಲ್ಲೇಖಿಸುತ್ತವೆ. ದೇವತೆಗಳ ಹಾಗೂ ರಾಕ್ಷಸರ ನಡುವೆ ಮಾತ್ರ ನಡೆಯುವ ಯುದ್ಧ ಇದಲ್ಲ. ಈ ಯುದ್ಧ ನಮ್ಮ ಅಂತರಂಗದಲ್ಲಿ ಪಾಶವೀ ಶಕ್ತಿಗಳು ಹಾಗೂ ಸಾತ್ವಿಕಶಕ್ತಿಗಳ ನಡುವೆ ಸದಾ ನಡೆಯುತ್ತಿರುತ್ತಲೇ ಇರುತ್ತದೆ. ನಮ್ಮಲ್ಲಿ ದೇವತಾಂಶವೂ ಇದೆ, ಹಾಗೆಯೇ ರಾಕ್ಷಸಾಂಶವೂ ಸಹ. ಈ ಎರಡು ಸ್ವಬಾವಗಳ ಮಿಲನವೇ ಮನುಷ್ಯ. ಅಂತಿಮ ಯುದ್ಧದಲ್ಲಿ ದೇವತೆಗಳಿಗೆ ಗೆಲುವಾದಂತೆ ಈ ಯುದ್ಧದಲ್ಲಿಯೂ ಸಾತ್ವಿಕಶಕ್ತಿಗೇ ಗೆಲುವಾಗುವಂತೆ ನಮ್ಮ ನಡವಳಿಕೆಯಿರಬೇಕು. ರಾಮಾಯಣವು ಎಂದೋ ಸಂದು ಹೋದ ಘಟನೆಯಾಗಿರದೆ ಅದು ನಮ್ಮ ನಿತ್ಯದ ಬದುಕಿಗೆ ಸಂಕೇತವಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಚಾತುರ್ಮಾಸ್ಯದ ನಿಮಿತ್ತ ಅಶೋಕೆಯಲ್ಲಿ ಆಯೋಜಿತವಾಗಿದ್ದ ರಾಮಕಥೆಯಲ್ಲಿ ಅನುಗ್ರಹ ಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಪಾಶವೀ ಸ್ವಭಾವವು ಜಾಸ್ತಿಯಾದರೆ ನಾವು ದಾನವರಾಗುತ್ತೇವೆ. ಸಾತ್ವಿಕಾಂಶಕ್ಕೆ ಒತ್ತು ಕೊಟ್ಟಾಗ ಮಾನವರೂಪದ ದೇವತೆಯಾಗುತ್ತೇವೆ. ರಾಕ್ಷಸತ್ವವೆಂಬುದು ಕತ್ತಲೆಯಾದರೆ ಸಾತ್ವಿಕತೆ ಜೀವನಕ್ಕೆ ದಾರಿ ತೋರುವ ಬೆಳಕು. ಮಹೋದರ, ವಿರೂಪಾಕ್ಷ, ಕುಂಭಕರ್ಣ ಮೊದಲಾದ ದಾನವರ ಹೆಸರೇ ಅವರ ಸ್ವಭಾವವನ್ನು ಸೂಚಿಸುತ್ತದೆ. ಆ ಎಲ್ಲ ಹೆಸರುಗಳೂ ಶರೀರಕ್ಕೆ ಪ್ರಾಮುಖ್ಯ ಕೊಟ್ಟದ್ದರಿಂದ ರೂಢವಾದವುಗಳು. ಕತ್ತಲು ಶಾಶ್ವತವಲ್ಲ. ಯಾಕೆಂದರೆ ಅದಕ್ಕೆ ಸ್ವತಂತ್ರವಾದ ಅಸ್ತಿತ್ವವೇ ಇಲ್ಲ. ಬೆಳಕಿನ ಅಭಾವವೇ ಕತ್ತಲು. ಹೃದಯದೊಳಗಿನ ಇಂತಹ ಅಂಧಕಾರಕ್ಕೆ ಅವಕಾಶ ನೀಡದ ಬದುಕು ನಮ್ಮದಾಗಬೇಕು ಎಂದು ಹೇಳಿದ ಪೂಜ್ಯಶ್ರೀಗಳು, ಒಮ್ಮೆ ವಿಷ್ಣುವಿನಿಂದ ಪರಾಜಿತನಾಗಿ ರಸಾತಲವನ್ನು ಸೇರಿದ್ದ ರಾಕ್ಷಸ ಸುಮಾಲಿಯು ತನ್ನ ವಂಶದ ಪುನಃಪ್ರತಿಷ್ಠೆಗೆ ಕಟಿಬದ್ಧನಾಗಿ ಮಗಳನ್ನು ದಾಳವನ್ನಾಗಿಸಿ, ರಾವಣನಂತಹ ಮೊಮ್ಮಗನನ್ನು ಪಡೆದ. ಆದರೆ ಕೊನೆಗೆ ಸತ್ಯಕ್ಕೇ ಗೆಲುವು ಎಂಬುದಕ್ಕೆ ಸೂಚಕವೋ ಎಂಬಂತೆ ದೇವತೆಗಳ ಮೇಲೆ ಧಾಳಿ ಮಾಡಿದಾಗ ಮರಣ ಹೊಂದಿದ. ಆದರೆ ಸುಮಾಲಿಯ ಆದರ್ಶವನ್ನು ರಾವಣನ ಮಗನಾದ ಮೇಘನಾದನು ಸ್ವೀಕರಿಸಿ, ಇಂದ್ರನನ್ನು ಸೋಲಿಸಿ ಇಂದ್ರಜಿತನೆಂದು ಪ್ರಸಿದ್ಧನಾದ ಎಂದು ಹೇಳಿ, ನಮ್ಮ ಹೃದಯಗಳು ದೇವತಾವಾಸಗಳಾಗಲಿ, ಎಂದೂ ಆಸುರೀ ಶಕ್ತಿಗಳಿಗೆ ಆಶ್ರಯವಾಗದಿರಲಿ ಎಂದೂ ಆಶಿಸಿದರು.

ಇಂದಿನ ರಾಮಕಥಾದಲ್ಲಿ ಶ್ರೀಪಾದ ಭಟ್, ವಸುಧಾ ಶರ್ಮಾ, ಪ್ರೇಮಲತಾ ದಿವಾಕರ್, ಇವರ ಸಂಗೀತ ಮತ್ತು ಪ್ರಕಾಶರ ವೇಣುವಾದನ, ಗೋಪಾಲಕೃಷ್ಣ ಹೆಗಡೆಯವರ ತಬಲಾ, ನರಸಿಂಹ ಮೂರ್ತಿಯವರ ಮೃದಂಗವಾದನಗಳು ಅದ್ಭುತವಾದ ಗಾನಲೋಕವೊಂದನ್ನು ಸೃಷ್ಟಿಸಿದರೆ ಖ್ಯಾತ ಆಶುಚಿತ್ರಕಾರ ಶ್ರೀ ಗಣಪತಿ ನೀರ್ನಳ್ಳಿಯವರ ಸಾಂದರ್ಭಿಕ ಚಿತ್ರಗಳು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದವು. ವಿದ್ವಾನ್ ಜಗದೀಶ ಶರ್ಮಾರವರ ನಿರ್ದೇಶನದಲ್ಲಿ ದೇವಾಸುರಸಂಗ್ರಾಮ ಎಂಬ ರೂಪಕ ಮತ್ತು ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ ಮತ್ತು ಶ್ರೀ  ಗಣಪತಿ ಹೆಗಡೆ ತೋಟಿಮನೆ ಇವರ ತಂಡದಿಂದ ರಾವಣಗರ್ವಭಂಗ ಎಂಬ ಯಕ್ಷರೂಪಕಗಳು ಪ್ರದರ್ಶಿತವಾದವು. ಕುಮುಟಾಮಂಡಲದ ಗುಡೇ ಅಂಗಡಿ, ಹೆಗಡೆ, ಮಿರ್ಜಾನ್ ವಲಯಗಳ ಶಿಷ್ಯಸಮುದಾಯದಿಂದ ಶ್ರೀಗುರುದೇವತಾಸೇವೆಯು ಸಮರ್ಪಿತವಾಯಿತು. ಪೂಜ್ಯಶ್ರೀಗಳು ಧರ್ಮಸಭೆಯಲ್ಲಿ ಆಶೀರ್ವಚನಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ಸಭೆಯನ್ನು ನಿರ್ವಹಿಸಿದರು.

 

 

Facebook Comments Box