ಜ.೨ – ಇಂದು ಯಾತ್ರೆ ಉದಯಪುರದಿಂದ ಹೊರಟು ಸಲುಂಬರ್, ಆಶ್ಪುರ್, ಬಾಂಸವಾಡಾ ಮೂಲಕ ರತ್ಲಾಮ್ ನಗರವನ್ನು ಬಂದು ಸೇರಿತು.

ಸಲುಂಬರಿನಲ್ಲಿ ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ವೇದಿಕೆಯಲ್ಲಿ ಸಂತರಾದ ನಿರಂಜನನಾಥ ಅವಧೂತ ಜೀ, ಪ್ರಕಾಶಾ ಶಾಸ್ತ್ರೀ ಜೀ ಮಹಾರಾಜ್, ಪೂ. ಮೀರಾಮಾತಾ ಜೀ, ಇವರು ದಿವ್ಯ ಉಪಸ್ಥಿತಿ ನೀಡಿದ್ದರು.

ಹುಕುಂಚಂದ್ ಸಾವ್ಲಾ ಅವರು ಗೋವಿನ ಭಾವನಾತ್ಮಕ ವಿಷಯಗಳನ್ನು ಮುಖ್ಯವಾಗಿ ಮಾತೆಯರ ಮನಮುಟ್ಟುವಂತೆ ವಿವರಿಸಿದರು. ಯಾತ್ರೆಯ ರಾಷ್ಟ್ರೀಯ ಕಾರ್ಯದರ್ಶಿಗಳಾದ ಶ್ರೀ ಶಂಕರಲಾಲ ಜೀ ಅವರು ಗೋವಿನ ಆರ್ಥಿಕ, ಸಾಮಾಜಿಕ ಪ್ರಸ್ತುತತೆಯನ್ನು ವಿವರಿಸಿದರು.

ನಗರಗಳ ಗೋ ಪ್ರೇಮಿಗಳು ನಿತ್ಯ ಒಂದು ರೂಪಾಯಿಯನ್ನಾದರೂ ಗೋವಿಗಾಗಿ ಮುಡಿಪಿಡುವುದರ ಮೂಲಕ ಮತ್ತು ತಮ್ಮ ನಗರದಲ್ಲಿ ನಿತ್ಯ ಎಲ್ಲ ಗಲ್ಲಿ, ರಸ್ತೆಗಳಲ್ಲಿ ಆಹಾರಧಾನ್ಯ ಇತರ ವಸ್ತುಗಳನ್ನು ಸಂಗ್ರಹಿಸಿ ಗೋಶಾಲೆಗೆ ನೀಡಬಹುದು ಎಂಬ ಉತ್ತಮ ಸಲಹೆಯನ್ನಿತ್ತರು. ಇದಕ್ಕಾಗಿ ಒಂದು ಗಾಡಿಯನ್ನು ಗೊತ್ತುಪಡಿಸಿ, ಅದು ಎಲ್ಲ ರಸ್ತೆಗಳಲ್ಲಿ, ನಿಶ್ಚಿತ ವೇಳೆಯಲ್ಲಿ ಗಂಟೆ ಬಾರಿಸುತ್ತಾ ಹೋಗಿ ಪದಾರ್ಥಗಳನ್ನು ಸಂಗ್ರಹಿಸಬೇಕು.

ಪೂಜ್ಯ ಸಂತ ನಿರಂಜನನಾಥ ಜೀ ಸಂಕಲ್ಪ ಬೋಧಿಸಿದರು.

ಯಾತ್ರೆ ಮುಂದುವರೆದು ವನವಾಸೀ ಕ್ಷೇತ್ರವಾದ ಬಾಂಸವಾಡಾವನ್ನು ತಲುಪಿತು. ಒಳ್ಳೆಯ ಸ್ವಾಗತವನ್ನು ಯಾತ್ರೆಗೆ ಹಾಗೂ ಜತೆಗೂಡಿದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀಯವರಿಗೆ ನೀಡಿದರು.

ಬಾಂಸವಾಡದ ಸಭೆಯನ್ನುದ್ದೇಶಿಸಿ, ಆಶೀರ್ವಚನ ಅನುಗ್ರಹಿಸಿದ ಪರಮಪೂಜ್ಯರು, ರಾಜಸ್ಥಾನ – ಬಾಂಸವಾಡಕ್ಕೂ ತಮಗೂ ಜನ್ಮ ಜನ್ಮದ ಸಂಬಂಧವಿದೆ. ಅದು ಗೋಮಾತೆಯ ಮೂಲಕ ಎಂದರು. ಗೋವಿನ ಬಗ್ಗೆ ಅತೀವ ಆಸ್ಥೆ ಹೊಂದಿರುವ ರಾಜಸ್ಥಾನ ತಮ್ಮ ಮಾತೃಭೂಮಿಯೆನಿಸುತ್ತದೆ ಎಂದರು. ಬಾಂಸವಾಡ ಒಂದು ರೀತಿಯಲ್ಲಿ ಛೋಟಾ ಪ್ರಯಾಗ, ಏಕೆಂದರೆ ಇದು ಮೂರು ರಾಜ್ಯಗಳ (ರಾಜಸ್ಥಾನ-ಗುಜರಾತ್-ಮಧ್ಯಪ್ರದೇಶ) ಸಂಗಮ ಸ್ಥಳದಲ್ಲಿದೆ ಎಂದರು.

ಈಶ್ವರನ ಆವಾಸಸ್ಥಾನ ಗೋಮಾತೆ. ಗೋಮಾತೆಗಾಗಿ ತಮ್ಮ ಜೀವನ ಸಮರ್ಪಿತವೆಂದರು. ಎಲ್ಲ ಒಳ್ಳೆಯ ವಿಷಯಗಳೂ ಗೋಮಾತೆಯಲ್ಲಿವೆ. ಅಂಥ ಗೋಮಾತೆಯ ಕಷ್ಟ ತಮ್ಮ ಜೀವಿತ ಕಾಲದಲ್ಲಿಯೇ ದೂರಾಗಬೇಕು ಎಂದು ಆಶಿಸಿದರು.

ಗೋವು ಭೂಮಾತೆಯ ಇನ್ನೊಂದು ರೂಪ. ಆದ್ದರಿಂದ ಗೋಮಾತೆ, ಭಾರತಮಾತೆ ಬೇರೆಯಲ್ಲ – ಎರಡೂ ಒಂದೇ, ಗೋಮಾತೆಯ ಕಷ್ಟವೆಂದರೆ ಭಾರತಮಾತೆಯ ಕಷ್ಟ. ಅದನ್ನು ದೂರಮಾಡಲು ಈ ಯಾತ್ರೆ ಎಂದರು. ಸತ್ತೆಯಲ್ಲಿರುವವರು ಮಾಡದಿರುವುದನ್ನು ಸಂತಶಕ್ತಿ-ಸಮಾಜಶಕ್ತಿ ಒಂದಾಗಿ ಮಾಡಲು ಮುಂದಾಗಿದೆ.

ಭಾರತವೆಂದರೆ ಗ್ರಾಮ. ಆ ಗ್ರಾಮಗಳ ರಕ್ಷಣೆಗಾಗಿ ಸ್ವತಂತ್ರ ಬಂದ ನಂತರ, ನಮ್ಮವರಿಂದಲೇ ನಮಗೆ ಮೋಸವಾಗಿದೆ. ಹಾಗಾಗಿ ಈಗ ಧರ್ಮ ಸಂಗ್ರಾಮ ಮಾಡಲಾಗಿದೆ. ಸಂಗ್ರಾಮದಲ್ಲಿ ಯಾರೂ ತಟಸ್ಥರಾಗಿರುವಂತಿಲ್ಲ. ಒಂದೋ ಗೋವಿನ ಪಕ್ಷ, ಇಲ್ಲವೇ ವಿರೋಧ ಪಕ್ಷದಲ್ಲಿರಬೇಕು. ಎಲ್ಲರನ್ನು ಗೋವಿನ ಪಕ್ಷಕ್ಕೆ ಸೆಳೆಯಲು ಈ ಯಾತ್ರೆಯೆಂದರು. ಸಂತ ನೇತೃತ್ವದಲ್ಲಿ ನಡೆಯಲಿರುವ ಈ ಸಂಗ್ರಾಮದಲ್ಲಿ ವಾಣಿಯ ಮೂಲಕ ಯುದ್ಧ ನಡೆಯಲಿದೆ (ವಾಗ್ಯುದ್ಧ) ಎಂದು ಆಂದೋಲನದ ಆತ್ಮವನ್ನು ಬಿಚ್ಚಿಟ್ಟರು. ಗೋಮಾತೆ ಸ್ವರ್ಗಕ್ಕೆ ಹೋಗಲು ಸೇತು. ಅವಳ ಹೊರತು ಮುಕ್ತಿಗೆ ಸುಲಭ ದಾರಿ ಇಲ್ಲ. ವಿಶ್ವದ ಕಷ್ಟಗಳ ಹರಣಕ್ಕೂ ಗೋವೇ ಆಧಾರ. ಗೋವಿನಿಂದಾಗಿಯೇ ಇಡೀ ವಿಶ್ವ ಆರ್ಥಿಕ ಹಿಂಜರಿತ ಅನುಭವಿಸುವಾಗ ಭಾರತ ಮಾತ್ರ ಅದನ್ನು ಸಮರ್ಥವಾಗಿ ನಿಭಾಯಿಸಲಾಯಿತು. ಏಕೆಂದರೆ ನಮ್ಮ ಅರ್ಥವ್ಯವಸ್ಥೆ ಇನ್ನೂ ಕೃಷಿಯನ್ನವಲಂಬಿಸಿದೆ ಎಂದರು.

ಸಮಾಜ ನೇತಾರರ ಮೇಲೆ ವಿಶ್ವಾಸ ಕಳೆದುಕೊಂಡಿದೆ. ಅವರು ಮಾಡಿದ ಪಾಪವನ್ನು ದೇಶವಿಡೀ ಅನುಭವಿಸಬೇಕಾಗಿದೆ. ಈಗ ಗೋವಿಂದ ಗುರುವಿನ ನಾಡಾದ ಬಾಂಸವಾಡಾದ ಜನತೆಯಿಂದ ಶಂಕರಾಚಾರ್ಯರು ಗೋವಧೆ ಮಾಡಲು ಇನ್ನು ಮುಂದೆ ಬಿಡೆವು ಎಂಬ ವಚನವನ್ನು ಕೀಳುತ್ತಿದ್ದಾರೆ ಎಂದರು. ಸಂಗ್ರಾಮದಲ್ಲಿ ಪ್ರಾಣ ಕೊಡುವುದಾದರೆ ತಾವು ಅದಕ್ಕಾಗಿ ಮುಂಚೂಣಿಯಲ್ಲಿರುತ್ತೇವೆ ಎಂದರು.

ಬಾಂಸವಾಡಾದ ಸಭೆಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಯಾತ್ರೆ ಅಲ್ಲಿಂದ ರತ್ಲಾಮಿಗೆ ತೆರಳಿತು. ರತ್ಲಾಮಿನಲ್ಲಿ ಅಂದಾಜು 2 ಗಂಟೆಗಳ ಕಾಲ ಮುಖ್ಯ ಬೀದಿಗಳಲ್ಲಿ ಸಾವಿರಾರು ಗೋ ಪ್ರೇಮಿಗಳಿಂದ ಸ್ವಾಗತ ದೊರೆಯಿತು.

ಇಲ್ಲಿಯ ಸಭೆಯಲ್ಲೂ ಶಂಕರಾಚಾರ್ಯರಾದಿಯಾಗಿ ಎಲ್ಲ ಸಂತರು ಮಾರ್ಗದರ್ಶನ ಮಾಡಿ, ಆಶೀರ್ವಚನ ನೀಡಿದರು.

Facebook Comments Box