ಮಾಣಿ ಮಠ, ದ.ಕ: 01-ಜನವರಿ-2015:
ಮಾಣಿ ಶಾಖಾ ಮಠದಲ್ಲಿ ಗುರುವಾರ ಸಂಜೆ ಶಿಷ್ಯಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀ ಶ್ರೀ ರಾಘವೇಶ್ವರಶ್ರೀಗಳು, ಪೂರ್ವಕ್ಕೆ ಹೋಗಬೇಕಾದರೆ ಪಶ್ಚಿಮವನ್ನು ಒದೆಯಬೇಕಾಗಿಲ್ಲ – ಸೀದಾ ಪೂರ್ವಕ್ಕೆ ಹೋದರಾಯಿತು. ಹೀಗಿರುವಾಗ ಸದಾ ಒಳ್ಳೆಯದನ್ನೇ ಚಿಂತಿಸುತ್ತಾ ನಾವು ಸಾಗಬೇಕು. ಯಾರನ್ನೋ ತುಳಿದು ಮುಂದೆ ಸಾಗಬೇಕಾಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಜಗತ್ತನ್ನು ಧರಿಸಿರುವುದು ಧರ್ಮ.ಆ ಧರ್ಮವೇ ಮೈವೆತ್ತು ಬಂದವನು ರಾಮ.ಅಂಥ ರಾಮ ಈ ತನಕ ಈ ಮಠವನ್ನು ಆ ಶಿಷ್ಯರನ್ನು ಕಾಯ್ದುಕೊಂಡ ಎಂದು ಭಾವುಕರಾಗಿ ಹೇಳಿದ ಶ್ರೀಗಳು, ಶಿಷ್ಯ ಎಂದರೆ ಛಾತ್ರ. ಛಾತ್ರ ಎಂದರೆ ಕೊಡೆ. ಇಂದು ಶಿಷ್ಯರು ಒಗ್ಗಟ್ಟಾಗಿ ಗುರುವನ್ನು ರಕ್ಷಿಸಿದ್ದಾರೆ, ಗುರುವಿಗೆ ಬಿಸಿಲು ಬೇಗೆ ತಾಗದಂತೆ ನೋಡಿಕೊಂಡಿದ್ದಾರೆ. ಶಿಷ್ಯರ ನಗು ಮಾಸದಂತೆ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದರು. ತಮ್ಮ ಮೇಲೆ ಬಂದ ಆರೋಪಗಳ ಕುರಿತು ಪರೋಕ್ಷವಾಗಿ ಮಾತನಾಡಿದ ಅವರು, ರಾತ್ರಿ ಇಲ್ಲದಿದ್ದರೆ ಹಗಲು ಏನೆಂದು ಗೊತ್ತಾಗುವುದಿಲ್ಲ. ಬಿಸಿಲಿಗೆ ನಿಲ್ಲದಿದ್ದರೆ ನೆರಳಿನ ತಂಪು ಏನೆಂದು ಗೊತ್ತಾಗುವುದಿಲ್ಲ. ಅನುಭವಕ್ಕಿಂತ ದೊಡ್ಡದು ಏನೂ ಇಲ್ಲ. ಆದರೆ ಹೃದಯ ವಜ್ರದಷ್ಟು ಗಟ್ಟಿಮಾಡಿ, ತುಟಿಯಲ್ಲಿ ಮಾಸದ ನಗುವಿರುವ ಜೀವಕ್ಕೆ ಏನೂ ಆಗದು ಎಂದರು. ಬಹಿರಂಗವನ್ನು ನೀವು ಏನೂ ಮಾಡಬಹುದು,ಆದರೆ ಅಂತರಂಗವನ್ನು ಏನೂ ಮಾಡಲು ಸಾಧ್ಯವಿಲ್ಲ.ಈಗ ಆಗಿರುವ ಘಟನೆಯಿಂದ ಯಾರೂ ತತ್ತರಿಸುವ ಅಗತ್ಯವಿಲ್ಲ. ದ್ರೌಪದಿಯ ವಸ್ತ್ರಾಪಹರಣವಾಗಿದ್ದೇ ಹಸ್ತಿನಾವತಿಯ ಶೃಂಗ ಸಭೆಯಲ್ಲಿ. ಆ ಘಟನೆಯ ಮೂಲಕ ಆಕೆಗೆ ಅಕ್ಷಯ ವಸ್ತ್ರವೂ ಸಿಕ್ಕಿತು, ಶ್ರೀಕೃಷ್ಣನ ಬಾಂಧವ್ಯವೂ ಲಭಿಸಿತು. ಜೀವನಕ್ಕೆ ಅರ್ಥ ಬರಬೇಕಾದರೆ ಸಂಕಟ ಸನ್ನಿವೇಶಗಳೂ ಬರಬೇಕು, ಚಿನ್ನದ ಕಾಲು ಬೇಕಾದರೆ ಬೆಂಕಿಯ ಮೇಲೆ ನಡೆಯಲೇಬೇಕು ಎಂದು ಶ್ರೀಗಳು ಹೇಳಿದರು.

ಫೋಟೋ: ಸಂತೋಷ್, ಶ್ರೀ ಪರಿವಾರ

Facebook Comments