ಪೆರಾಜೆ ಮಾಣಿಮಠಃ 29.7.2013, ಸೋಮವಾರ

ಇಂದು ಗೋಕರ್ಣಮಂಡಲದ ಉಪಾಧಿವಂತರ ಗುರುಭಿಕ್ಷಾ ಸೇವೆ ನಡೆಯಿತು. ಮಂಡಲದ ಪರವಾಗಿ ಶ್ರೀ ರಮೇಶ ಪ್ರಸಾದ, ಗೋಕರ್ಣ ಭಿಕ್ಷಾಕಾರ್ಯ ನೆರವೇರಿಸಿದರು. ಗೋಕರ್ಣ ಮಂಡಲದ ಶಿಷ್ಯರು ಗುರುಸೇವೆ ಮಾಡಿ ಕೃತಾರ್ಥರಾದರು. ಶ್ರೀಕರಾರ್ಚಿತ ದೇವರ ಪೂಜೆಗಳು ನಡೆದು, ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ಮಹಾಸಭೆಯಲ್ಲಿ ಶ್ರೀ ಶಶಿಧರ ಕೋಟೆ, ಶ್ರೀಮಠದ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಯಾಗಶಾಲೆಯಿಂದಃ
ಆಂಜನೇಯ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಹನುಮನಿಗೆ ವಿಶೇಷವಾದ  ಚಂದನ ಅಲಂಕಾರದ ಸೇವೆ ನಡೆಯಿತು. ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ, ಮೇಧಾದಕ್ಷಿಣಾಮೂರ್ತಿ ಹವನ ನಡೆಯಿತು.

ಪಾದಪೂಜೆ:
ಸದಾಶಿವ ಗೋವಿಂದ ಹೆಗಡೆ, ಮಹಾಬಲೇಶ್ವರ ಗಣಪತಿ, ತಾಮ್ರಗೌರೀ

ಸೂಃ ರಾಮತಾರಕ ಜಪವನ್ನು ಮಾಡಿ ಯಜ್ಞವೇದಿಕೆಯ ಬಳಿಯ ಕಾರ್ಯಾಲಯದಲ್ಲಿ ಸಂಖ್ಯಾನೋಂದಣಿ ಮಾಡಬೇಕೆಂದು ಯಾಗಶಾಲೆಯ ಸಮಿತಿಯಿಂದ ಹೇಳಿಕೆ ಕೊಟ್ಟಿರುತ್ತಾರೆ.
(ಒಂದು ಕಡೆ ಕುಳಿತು ಮಾಡಿದ ಜಪದ ಸಂಖ್ಯೆಗಳನ್ನಷ್ಟೇ ಕೊಡಬೇಕು)

~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

ರಾಮಕಥೆಃ
ರಾಮಕಥೆಯ ಎರಡನೇ ದಿನ ಶ್ರೀಗುರುವಂದನೆಯೊಂದಿಗೆ ಆರಂಭವಾಗಿ, ಶ್ರೀ ಗುರುಗಳು ಸಪರಿವಾರ ಶ್ರೀರಾಮನಿಗೆ ಹಾಗೂ ಆಂಜನೇಯನಿಗೆ ಪುಷ್ಪಾರ್ಚನೆ ಮಾಡಿದರು. ನಂತರ ಕಥಾಭಾಗವನ್ನು ಆರಂಭಿಸಿ, ಆಂಜನೇಯ ಹನೂಮಂತನೆನಿಸಿ ಆತನ “ಪುನರ್ಜನ್ಮ”ವೆನಿಸಿದ ಕಥಾ ಭಾಗದ ಪ್ರವಚನ ನಡೆಯಿತು. ಶ್ರೀಗುರುಗಳು ಬಾಲ ಹನುಮನ ಲೀಲಾವಿನೋದಗಳನ್ನು ಮನಮುಟ್ಟುವಂತೆ ವಿವರಿಸಿದರು. ಬಾಲ ಹನುಮ ಬಾಲರವಿಯನ್ನು ಕಂಡು ಹಣ್ಣೆಂದು ಭ್ರಮಿಸಿ ಆಕಾಶಕ್ಕೆ ನೆಗೆದಾಗ ಇಂದ್ರ ತನ್ನ ವಜ್ರಾಯುಧದಲ್ಲಿ ಥಳಿಸಿದಾಗ ಮಾರುತಿ ತಲೆಕೆಳಗಾಗಿ ಧರೆಗುರುಳಿದಾಗ ತನ್ನ “ಹನು”ವನ್ನು(ದವಡೆ) ಮುರಿದು ಕೊಳ್ಳುತ್ತಾನೆ. ಇದರಿಂದ ಕೋಪಗೊಂಡ ವಾಯುದೇವ ಮೂರ್ಛಿತನಾದ ಮಗನನ್ನು ಕೈಯ್ಯಲ್ಲಿ ಹಿಡಿದು ಗುಹೆಯನ್ನು ಪ್ರವೇಶಿಸುತ್ತಾನೆ. ಜಗವೆಲ್ಲ ಪ್ರಾಣವಾಯುವಿಲ್ಲದೆ ತತ್ತರಿಸುತ್ತಿದ್ದಾಗ ದೇವಾಧಿದೇವತೆಗಳು ಬ್ರಹ್ಮನಲ್ಲಿ ಮೊರೆಯಿಟ್ಟು ಬ್ರಹ್ಮ ಮಾರುತಿಯನ್ನು ನೇವರಿಸಿದಾಗ ಪುನಶ್ಚೇತನಗೊಂಡವನಿಗೆ ಸಕಲ ದೇವರುಗಳು ಹಲವು ವರವನ್ನಿತ್ತರು. ಹನುವನ್ನು ಜಜ್ಜಿಸಿಕೊಂಡ ಮಾರುತಿಯನ್ನು “ಹನುಮಂತ”ನೆಂದು ಅಭಿದಾನ ಮಾಡಿದರು. ಜೈಜೈ ರಾಮಕಥಾದೊಂದಿಗೆ ಈ ದಿನದ ರಾಮಕಥೆ ಮುಕ್ತಾಯವಾಯಿತು. ಈ ದಿನದ ರಾಮಕಥೆಯ ಪ್ರಾಯೋಜಕರು ಮಂಗಳೂರು ದಕ್ಷಿಣ ಹವ್ಯಕ ವಲಯದವರು.

~

Facebook Comments