ಬೆಂಗಳೂರು: ಅಲ್ಲಿ ನೆರೆದವರ ಮನವೆಲ್ಲ ಪುಳಕ, ಧ್ಯಾನದ ಹಾದಿಯಲ್ಲಿ ಜೀವಾತ್ಮ ಪರಮಾತ್ಮನ ಕಾಣುವ ಯತ್ನದಲ್ಲಿ ದಿವ್ಯತೆಯನ್ನು ಅನುಭವಿಸಿದರು, ವಿಸ್ಮಿತರಾದರು. ಇದು ಸಾಧ್ಯವಾಗಿದ್ದು, ಬೆಂಗಳೂರಿನ ಕೆ.ಎಸ್.ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ವಿಶಿಷ್ಟ ಭಾವಪೂಜೆಯಲ್ಲಿ.
ಭಾನುವಾರ ಸಂಜೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕಲ್ಪನೆಯ ಕೂಸು, ರಾಮಕಥೆಗಿಂತಲೂ ವಿಶಿಷ್ಟವಾದ, ಅಧ್ಯಾತ್ಮದ ಸಿಹಿಜೇನು ತಿನಿಸುವ ಭಾವ ಪೂಜೆಯಲ್ಲಿ ತೊಡಗಿಸಿ, ನೆರೆದಿದ್ದ ಎಂಟುನೂರಕ್ಕೂ ಹೆಚ್ಚು ಮಂದಿ ಪುನೀತರಾದರು.
ಸಂಗೀತ ನೃತ್ಯ, ಕಲೆಯ ಸಮ್ಮಿಳಿತದ `ಭಾವ ಪೂಜೆ’ಯಲ್ಲಿ ಶ್ರೀಗಳು ತಮ್ಮ ಎಂದಿನ ಮಂತ್ರಮುಗ್ಧರನ್ನಾಗಿಸುವ ಮಾತುಗಳ ಮೂಲಕ ಪ್ರೇಕ್ಷಕರನ್ನು ವ್ಯಾಪಿಸಿದರು. ಜೀವನದಲ್ಲಿ ದೇವರನ್ನು ಕಾಣಬೇಕಾದರೆ ಭಕ್ತಿಯೊಂದಿಗೆ ಭಾವ ಬೇಕು. ತಮ್ಮದೆಲ್ಲವನ್ನೂ ಸಮರ್ಪಿಸುವ ಮನೋಭಾವನೆ ಬೇಕು ಎಂದರು. ಅಂತರಂಗದ ದೀಪವನ್ನು ಹಚ್ಚುವುದು `ಭಾವ’. ಮೂರ್ತಿಯಲ್ಲಿ ಭಕ್ತಿ ಭಾವ ಕಂಡರೆ ಸಾಕ್ಷಾತ್ಕಾರ. ಇಲ್ಲದಿದ್ದರೆ ಅದು ಬರೇ ಕಲ್ಲು, ಮಣ್ಣು ಅಥವಾ ಲೋಹದ ಮೂರ್ತಿಯಾಗಿದ್ದೀತು. ಪ್ರತಿ ಕಷ್ಟಗಳ ಹಿಂದೆ ಒಳ್ಳೆಯದೂ ಇರುತ್ತದೆ. ಕಷ್ಟ ಅನುಭವಿಸುವಾಗ ದೇವರನ್ನು ಕಾಣುವ ಮನಸ್ಸು ಬೇಕು ಎಂದರು.
ಭಾವ ಇಲ್ಲದ ಪೂಜೆ ವ್ಯರ್ಥ. ಅದು ಭಗವಂತನನ್ನು ತಲುಪುವುದೇ ಇಲ್ಲ. ಧ್ಯಾನ ಮತ್ತು ಧ್ಯಾನದ ಮೂಲಕ ಭಾವ ಪೂಜೆ ಪರಿಣಾಮಕಾರಿ. ಒತ್ತಾಯದ ಆಡಂಬರದ ಭಾವದಲ್ಲಿ ಪೂಜೆ ಸಲ್ಲ. ಹಣ್ಣು ಕಲಚಿ ಬೀಳುವಂತೆ ಶುದ್ಧ ಮನಸ್ಸು, ಅಂತರಾತ್ಮದಿಂದ ಭಗವಂತನನ್ನು ಪ್ರಾರ್ಥಿಸಿದರೆ ಆತ ಒಲಿಯುತ್ತಾನೆ. ಬಿಟ್ಟು ಬಿಡುವ ಮಾತೇ ಇಲ್ಲ ಎಂದು ಹೇಳಿದರು. ಭಾವ ಪೂಜೆಯ ಕೊನೆಯಲ್ಲಿ, ಧ್ಯಾನ, ಧ್ಯಾನದೊಂದಿಗೆ, ಶ್ರೀರಾಮನನ್ನು ಸಾಕ್ಷಾತ್ಕರಿಸುವ ಮಾತುಗಳು ಮನಸ್ಸು ತಟ್ಟಿದವು, ರೋಮಾಂಚನಗೊಳಿಸಿದವು.
ಶ್ರೀನುಡಿಗಳು:
  • ಆನೆಯ ಕಾಲನ್ನು ಮೊಸಳೆ ಹಿಡಿದಾಗ, ಆನೆ ನೂರು ಬಾರಿ ಬೊಬ್ಬೆ ಹೊಡೆದಿರಲಿಲ್ಲ. ಆದರೆ, ಒಂದೇ ಬಾರಿ ದೇವರ ಕುರಿತ ಅಂತರಂಗದ ಕರೆ ಕೊಟ್ಟಿತ್ತು. ಅಷ್ಟಕ್ಕೇ ದೇವರು ಒಲಿದ.
  • ರಾಮ ಎಷ್ಟು ಪೂಜೆ ಮಾಡಿದರೂ ಒಲಿಯಲಿಲ್ಲವೆಂದು ಒಬ್ಬಾತ ಪೂಜಿಸುತ್ತಿದ್ದ ಮೂರ್ತಿಯನ್ನು ಅಟ್ಟಕ್ಕೆ ಹಾಕಿ ಪರ್ಯಾಯವಾಗಿ ದೇವಿ ಮೂರ್ತಿಗೆ ಪೂಜೆ ಮಾಡುತ್ತಿದ್ದ. ಮನಸ್ಸಿನಲ್ಲಿ ನನಗೆ ರಾಮ ಒಳ್ಳೆಯದು ಮಾಡಿಲ್ಲ ಎಂಬ ಕೋಪ. ಈ ಸಂದರ್ಭ ದೇವಿಗೆ ಹಚ್ಚಿದ್ದ ಧೂಪ ಅಟ್ಟಕ್ಕೆ ವ್ಯಾಪಿಸಿದ್ದಕ್ಕೆ ಕೋಪಗೊಂಡ. ಅಟ್ಟವೇರಿ ಮೂರ್ತಿಯ ಮೂಗಿನ ಹೊಳ್ಳೆಗೆ ಹತ್ತಿ ತುರುಕಿಸಿ ನಿನಗೆ ಎಷ್ಟು ಪೂಜೆ ಮಾಡಿದರೂ ಒಲಿಯಲಿಲ್ಲ. ಅಂಥದ್ದರಲ್ಲಿ ಧೂಪ ನಿನಗೆ ಸೋಕಬಾರದು ಎನ್ನುತ್ತಿದ್ದಂತೆ ದೇವರು ಪ್ರತ್ಯಕ್ಷ. ಈ ವೇಳೆ ಕೋಪಿಷ್ಟ ಭಕ್ತ, ಎಷ್ಟು ಪೂಜೆ ಮಾಡಿದರೂ ನೀನು ಒಲಿಯಲಿಲ್ಲ. ಆದರೆ ಈಗ್ಯಾಕೆ ಬಂದೆ? ಹಿಂದೆ ನೀನು ಮಾಡಿದ ಪೂಜೆ ಕೇವಲ ಆಚಾರದ ಪೂಜೆ. ಅದರಲ್ಲಿ ಭಕ್ತಿಯ ಭಾವ ಇರಲಿಲ್ಲ. ಆದರೆ ಈಗ ನೀನು ನನ್ನ ಇರವನ್ನು ಕಂಡು ಮೂರ್ತಿಯ ಮೂಗಿಗೆ ಹತ್ತಿ ತುರುಕಿಸಿದೆ. ಆಗ ಇಲ್ಲದ ಭಾವ ಈಗ ನಿನ್ನಲ್ಲಿ ಕಂಡೆ, ರಾಮನ ಉತ್ತರ.
  • ಜೀವನಕ್ಕೆ ಶಬರಿ-ಭರತನ ಭಾವಗಳು ಆದರ್ಶ. ರಾಮ ಯಾವಾಗ ಬರುತ್ತಾನೆ ಎನ್ನುವ ಕುತೂಹಲ, ಅವನ ಆಗಮನಕ್ಕಾಗಿ ನಿತ್ಯವೂ ಸಿದ್ಧತೆ ಶಬರಿ ನಡೆಸುತ್ತಲೇ ಇದ್ದಳು. ಇದರಲ್ಲಿದ್ದದ್ದು ನಿಷ್ಕಲ್ಮಷ ಭಕ್ತಿ. ವನವಾಸಕ್ಕೆ ತೆರಳಿದ ರಾಮನದ ಪಾದುಕೆಯನ್ನೇ ಸಿಂಹಾಸನದಲ್ಲಿಟ್ಟ ಭರತ ಸೂರ್ಯವಂಶದ ಚಕ್ರವರ್ತಿಯಾಗಬಹುದಾದರೂ ಸ್ವಾರ್ಥ ತ್ಯಜಿಸಿದ. ನೀನಿಲ್ಲದೆ ನಾನಿಲ್ಲ, ಸರ್ವವೂ ನಿನ್ನದೇ ಎಂಬ ಭಾವ ಅವನಲ್ಲಿತ್ತು.
  • ರಾಮ ಸೀತೆ ಹೆಚ್ಚು ಮಾತನಾಡುತ್ತಿರಲಿಲ್ಲ. ಅವರ ನಡುವೆ ಮೌನವೇ ಭಾವ. ಪರಸ್ಪರರನ್ನು ಸ್ಫುಟವಾಗಿ ಅರಿತಿದ್ದರು. ಸೀತೆಯ ಹೃದಯ ಏನು ಎಂಬುದು ರಾಮನಿಗೆ, ರಾಮನ ಹೃದಯ ಏನು ಎಂಬುದು ಸೀತೆಗೆ ಗೊತ್ತಾಗುತ್ತಿದ್ದು. ಇದು ಅಂತರಾತ್ಮದ, ಅಂತರಂಗದ ಭಾವ ಬಂಧ.
  • ಪ್ರತಿ ಮನೆಯಲ್ಲೂ ದೇವರ ಕೋಣೆ ಇದೆ. ಆದರೆ ಅಲ್ಲಿ ದೇವರಿದ್ದಾನೆ ಎಂಬ ಭಾವ ನಮ್ಮಲ್ಲಿಲ್ಲ. ತಪ್ಪುಗಳನ್ನು ಮಾಡುತ್ತಲೇ, ಸುಳ್ಳುಗಳನ್ನು ಹೇಳುತ್ತಲೇ ಇರುತ್ತೇವೆ. ದೇವರಿದ್ದಾನೆ ಎಂಬ ಭಾವ ನಮ್ಮದಾಗಿದ್ದರೆ. ಅವನೆದುರು ಕೆಟ್ಟದ್ದನ್ನು ಮಾಡುವ ಮನಸ್ಸೇ ನಮ್ಮದಾಗಿರುವುದಿಲ್ಲ.
  • ಕಷ್ಟ ಬಂದಾಗ ಇದ್ಯಾಕೆ ಬಂತು ಅಯ್ಯೋ ಎಂಬ ಮನಸ್ಥಿತಿ ನಮ್ಮದು. ಕಷ್ಟಗಳೇ ದೇವರನ್ನು ಹತ್ತಿರದಿಂದ ಕಾಣಲು ಇರುವ ದಾರಿ. ಕುಂತಿಯಂತೆ ದೇವರೇ ನನಗೆ ಕಷ್ಟ ಕೊಡು, ಆಗ ನಿನ್ನನ್ನು ಆಗಾಗ್ಗೆ ಧ್ಯಾನಿಸಬಹುದು, ಕಾಣಬಹುದು, ನಿನ್ನ ಸಮೀಪವೇ ಇರಬಹುದು ಎಂಬ ಮನಸ್ಸುಗಳು ನಮ್ಮದಾಗಬೇಕು.
  • ಶಾಪದಿಂದ ಶಿಲೆಯ ಬಲೆಯಲ್ಲಿ ಬಂಧಿಸಲ್ಪಟ್ಟ ಅಹಲ್ಯೆಯ ಶಾಪ ವಿಮೋಚನೆ ರಾಮನ ಪಾದ ಧೂಳಿಂಯಿಂದ ಮಾತ್ರವೇ ಆಯಿತು. ಇದಕ್ಕೆ ಕಾರಣ, ಶಿಲೆಯೊಳಗಿನ ಅಹಲ್ಯೆಯ ಅಂತರಂಗದ ಭಕ್ತಿ, ಸಮರ್ಪಣಾ ಭಾವ.
  • ರಾಮ ಎಂದರೆ ಯಾರು..?
ಒಳಮನದ ತಳದ ತಳಮಳವನರಿಯುವನು
ತಿಳಿಮನದ ಭಾವುಕತೆಗೊಲಿದು ನಲಿದು ಬರುವವನು
ನುಡಿವ ಮೊದಲೇ ಧ್ವನಿಯನಾಲಿಸುವ ಕಿವಿಯವನು
ಶಿಲೆಯೊಳಗಿನ ಅಬಲೆ ಬಲೆ ಬಿಡಿಸಿ ಪೊರೆದವನು
ವರದಿ: ಈಶ್ವರಚಂದ್ರ ಬೆತ್ತಸರವು.
Facebook Comments