ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಅತ್ಯಂತ ಪುರಾತನ ಮತ್ತು ಶಕ್ತಿ ಕೇಂದ್ರವೆಂದರೆ ಕಿತ್ರೆ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ. ಇಲ್ಲಿ ಸ್ವಯಂಭೂ ಲಿಂಗ ಶಕ್ತಿ ಸ್ವರೂಪಿಯಾಗಿ ಅವತರಿಸಿದ್ದಾಳೆ.  ಪ್ರಕೃತಿದತ್ತವಾದ ಈ ಲಿಂಗದ ಮೇಲೆ ಗೋಮಾತೆ ಪ್ರತಿನಿತ್ಯ ಹಾಲು ಸುರಿಸಿ ಹೋಗುತಿತ್ತು. ಮನೆಯಲ್ಲಿ ಗೋವು ಹಾಲನ್ನು ಏಕೆ ಕೊಡುವುದಿಲ್ಲ ಎಂದು ಯೋಚಿಸಿ ಗೋವಿನ ಮಾರ್ಗವನ್ನು ಅನುಸರಿಸಿ ತೆರಳಿದಾಗ ಈ ಲಿಂಗರ ದರ್ಶನವಾಯಿತು. ಅಂದಿನಿಂದ ಪ್ರಸಿದ್ದ ಶಕ್ತಿ ಕ್ಷೇತ್ರವಾಗಿ ಬೆಳೆದು, 1979ರಲ್ಲಿ ಹೊಸನಗರ ಶ್ರೀ ರಾಮಚಂದ್ರಾ ಪುರ ಮಠದ ೩೫ ನೇ ಪೀಠಾಧಿಪತಿಗಳಾದ ಶ್ರೀ ರಾಘವೇಂದ್ರ ಭಾರತೀ ಮಹಾ ಸ್ವಾಮಿಗಳ ಸಾನಿದ್ಯದಲ್ಲಿ  ಶಿಖರ ಪ್ರತಿಷ್ಟಾಕಾರ್ಯ ನಡೆದಿತ್ತು. ಈ ಸಂದರ್ಭದಲ್ಲಿ ನಾಗ  ಬನದ  ಪುನರ್ ಪ್ರತಿಷ್ಠೆ ಹಮ್ಮಿಕೊಂಡಾಗ ಸರ್ಪವೊಂದು ಈ ಕಾರ್ಯ ಮುಗಿಯುವ ತನಕವೂ ಇದ್ದು ಆಸ್ತಿಕರಲ್ಲಿ ಭಗವದ್ಭಾಕ್ತಿಯನ್ನು ಜಾಗೃತ  ಗೊಳಿಸಿತ್ತು.
65 ವರ್ಷಗಳ ಹಿಂದೆ ಇಲ್ಲಿನ ಗುಹೆಯಲ್ಲಿ ದತ್ತಸ್ವರೂಪಿ ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳು ತಪಸ್ಸನ್ನಾಚರಿಸಿ ಸಶಿವ ಶಾಂತಿಕಾಪರಮೆಶ್ವರಿ ಸನ್ನಿಧಿ ದೇವಿಮನೆಯಾಯಿತು.  ದೇವಸ್ಥಾನದ ಎದುರಿನಲ್ಲಿ ಪುಷ್ಕರಣಿ ಇದ್ದು ವರ್ಷಂಪ್ರತಿ ಸ್ಪಟಿಕದಂತ ಜಲವಿರುತ್ತದೆ. ಅಂದಾಜು 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನ ಶಿಲಾಮಯ ದೇಗುಲ ನಿರ್ಮಾಣಗೊಂಡಿದ್ದು, ಬರುವ ವೈಶಾಖ ಶುಕ್ಲ ಚತುರ್ಥಿಯಂದು [25-4-2012] ಬುಧವಾರ  ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಅಮೃತ  ಹಸ್ತಗಳಿಂದ ಪ್ರಾಣ ಪ್ರತಿಷ್ಟೇ ಮತ್ತು ಬ್ರಹ್ಮಕಲಶೋತ್ಸವ ನಡೆಯಲಿದೆ.  20 ರಿಂದ 26 ರ ವರೆಗೆ ಕಾರ್ಯಕ್ರಮ ನಡೆಯಲಿದ್ದು ಅಂದಾಜು 50 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ದೇವಸ್ಥಾನ  ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ವಾಸುದೇವ ಹೆಬ್ಬಾರ್ ತಿಳಿಸಿದ್ದಾರೆ.

Facebook Comments