ಗೋಕರ್ಣ: ೩. ಉಪಕಾರಸ್ಮರಣೆ, ಕೃತಜ್ಞತೆಗಳು ಜೀವಿಯ ಮೂಲಭೂತ ಸ್ವಭಾವ. ಸಾಕುಪ್ರಾಣಿಗಳೂ ಕೂಡಾ ನಾವು ಎಂದೋ ಹಾಕಿದ ಆಹಾರವನ್ನು, ತೋರಿಸಿದ ಪ್ರೀತಿಯನ್ನು ಮರೆಯದೆ ಅದನ್ನು ವ್ಯಕ್ತಪಡಿಸುತ್ತವೆ. ಮಾನವನೆಂದೂ ಕೃತಘ್ನನಾಗಬಾರದು. ಅನ್ನ ಹಾಕಿದ ಮನೆಗೆ ಕನ್ನ ಹಾಕುವುದು ರಾಕ್ಷಸತ್ವದ ದ್ಯೋತಕ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಇಂದು ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾಗಿದ್ದ ರಾಮಕಥಾದಲ್ಲಿ ಶ್ರೀಮದ್ವಾಲ್ಮೀಕಿರಾಮಾಯಣದ ತಾತ್ವಿಕಾಂಶಗಳನ್ನಾಧರಿಸಿದ ಅನುಗ್ರಹ ಸಂದೇಶವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಪ್ರಕೃತಿಮಾತೆಯು ನಮಗಿತ್ತ ವರಗಳು ಹಲವಾರು. ಆಕೆಯ ನೆರವಿಲ್ಲದೆ ನಮ್ಮ ಬದುಕಿಲ್ಲ. ಆದರೆ ನಾವು ಮಾತ್ರ ತಾಯಿಯಾದ ಆಕೆಯ ಮೇಲೆ ಅವ್ಯಾಹತವಾದ ಧಾಳಿಯನ್ನು ನಡೆಸುತ್ತಿದ್ದೇವೆ. ರಾಮಾಯಣದಲ್ಲಿ ರಾವಣಪುತ್ರನಾದ ಮೇಘನಾದ ಕೂಡಾ ಇದೇ ಸ್ವಭಾವದವನಾಗಿದ್ದು ಇಂದ್ರಾದಿದೇವತಾ ಪ್ರೀತ್ಯರ್ಥವಾಗಿ ಯಾಗಗಳನ್ನು ಮಾಡಿ ಅವರಿಂದ ವರಗಳನ್ನು ಪಡೆದು ಆ ವರಬಲದಿಂದ ಬಂದಶಕ್ತಿಯನ್ನು ಆ ದೇವತೆಗಳ ವಿರುದ್ಧವೇ ಬಳಸಿ ವಿಜಯಿಯಾದ. ಒಂದು ರೀತಿಯಲ್ಲಿ ಇದು ಕಲಿಸಿದ ಗುರುವಿಗೇ ತಿರುಮಂತ್ರ ಹೇಳುವ ರೀತಿ. ಎಲ್ಲ ಕಾಲದಲ್ಲಿಯೂ ಇಂತಹ ಸ್ವಭಾವದವರು ಇರುತ್ತಾರೆಂಬುದನ್ನು ಇತಿಹಾಸವು ಉಲ್ಲೇಖಿಸುತ್ತದೆ ಎಂದು ಹೇಳಿದ ಶ್ರೀಗಳು ರಾವಣನು ದೇವತಾದ್ವೇಷಿ. ತನ್ನಶತ್ರುಗಳನ್ನು ತನ್ನ ಮಗನೇ ಆರಾಧಿಸುತ್ತಿರುವುದನ್ನು ಕಂಡ ರಾವಣ ಮೇಘನಾದನನ್ನು ಆ ಯಾಗದಿಂದ ವಿಮುಖನನ್ನಾಗಿ ಮಾಡಿದ. ಇದರಿಂದಾಗಿ ಸರಿಯಾದ ಯಾಗಫಲವು ಲಭ್ಯವಾಗದೆ ಮೇಘನಾದನು ಮುಂದೆ ಶ್ರೀರಾಮ ಯುದ್ಧದಲ್ಲಿ ಸಾಯುವಂತಾಯಿತು. ಆದರೆ ಭಗವದಿಚ್ಛೆಯಂತೆ ನಡೆಯುವುದೆಲ್ಲವೂ ಲೋಕಕ್ಷೇಮಕ್ಕಾಗಿಯೇ ಎಂಬುದನ್ನು ಈ ಘಟನೆಯು ನಿರೂಪಿಸುತ್ತದೆ ಎಂದರು.

ಇಂದಿನ ರಾಮಕಥಾದಲ್ಲಿ ಶ್ರೀಪಾದ ಭಟ್, ವಸುಧಾ ಶರ್ಮಾ, ಪ್ರೇಮಲತಾ ದಿವಾಕರ್, ಇವರ ಸಂಗೀತ ಮತ್ತು ಪ್ರಕಾಶರ ವೇಣುವಾದನ, ಗೋಪಾಲಕೃಷ್ಣ ಹೆಗಡೆಯವರ ತಬಲಾ, ನರಸಿಂಹ ಮೂರ್ತಿಯವರ ಮೃದಂಗವಾದನಗಳು ಅದ್ಭುತವಾದ ಗಾನಲೋಕವೊಂದನ್ನು ಸೃಷ್ಟಿಸಿದರೆ ಖ್ಯಾತ ಆಶುಚಿತ್ರಕಾರ ಶ್ರೀ ಗಣಪತಿ ನೀರ್ನಳ್ಳಿಯವರ ಸಾಂದರ್ಭಿಕ ಚಿತ್ರಗಳು, ವಿಶ್ವೇಶ್ವರ ಭಟ್ ಮೂರೂರು ಇವರ ನೃತ್ಯಗಳು ಪ್ರೇಕ್ಷಕರ ಮನಸೆಳೆದವು.

ಮುಳ್ಳೇರಿಯಾ ಮಂಡಲದ ಎಣ್ಮಕಜೆ, ಬದಿಯಡ್ಕ, ಈಶ್ವರಮಂಗಲ ಹಾಗೂ ಮುಳ್ಳೇರಿಯಾ ವಲಯಗಳ ಶಿಷ್ಯಸಮುದಾಯದಿಂದ ಶ್ರೀಗುರುದೇವತಾಸೇವೆಯು ಸಮರ್ಪಿತವಾಯಿತು. ಪೂಜ್ಯಶ್ರೀಗಳು ಧರ್ಮಸಭೆಯಲ್ಲಿ ಆಶೀರ್ವಚನ ಮಂತ್ರಾಕ್ಷತೆಗಳನ್ನು ಅನುಗ್ರಹಿಸಿದರು. ಶ್ರೀಸವಾರಿಯ ವ್ಯವಸ್ಥಾಪಕ ಶ್ರೀ ರಾಘವೇಂದ್ರ ಮಧ್ಯಸ್ಥರು ಸಭೆಯನ್ನು ನಿರ್ವಹಿಸಿದರು.

 

Facebook Comments