ಗೋಕರ್ಣ 17.  ನಮ್ಮ ಉದ್ಧಾರಕ್ಕಾಗಿ ನಮ್ಮಮೇಲಿನ ವಾತ್ಸಲ್ಯದಿಂದ ಪರಮಾತ್ಮ  ಲೋಕದಿಂದ ಇಳಿದು ಬಂದು ನಮ್ಮ ಕಷ್ಟಗಳನ್ನು ನೋವನ್ನು ಪರಿಹರಿಸಿ ಶಾಶ್ವತಸುಖವನ್ನು ಅನುಗ್ರಹಿಸುತ್ತಾನೆ. ಇದಕ್ಕೇ ಅವತಾರ ಎಂದು ಹೆಸರು. ಈ ರೀತಿಯಲ್ಲಿ ಲೋಕದ ಜನರ ಪಾಪವನ್ನು ತೊಳೆಯಲು ಕಳೆಯಲು ಕಾರಣವಾದ ದೇವಗಂಗೆಯೂ ಇಳಿದುಬಂದವಳೇ. ಲೋಕಕ್ಕೇ ಆದರ್ಶಪ್ರಾಯರಾದ ಸೂರ್ಯವಂಶದ ಚಕ್ರವರ್ತಿಗಳ ಕೊಡುಗೆ. ಮನುಕುಲಕ್ಕೇ ಇಂತಹ ತಾಯಿಯನ್ನು ನೀಡಿದ  ಅವರು ಎಂದಿಗೂ ಸ್ಮರಣಾರ್ಹರು ಎಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

ಇಂದು ಗೋಕರ್ಣದ ಸಾಗರತೀರದಲ್ಲಿ ಮಹರ್ಷಿ ದೈವರಾತ ವೇದಿಕೆಯಲ್ಲಿ ಆಯೋಜಿತವಾದ “ರಾಮಕಥಾ” ದಲ್ಲಿ ಪ್ರವಚನದ ಅನುಗ್ರಹವನ್ನು ನೀಡುತ್ತಿದ್ದ ಶ್ರೀಗಳು ಸಗರಚಕ್ರವರ್ತಿಯ ಕಾಲದಲ್ಲಿ ಪ್ರಾರಂಭಗೊಂಡ ಈ ಗಂಗಾವತರಣ ಕಾರ್ಯ ಅಂಶುಮಂತ-ದಿಲೀಪ ರಲ್ಲಿ ಮುಂದುವರೆದು ಭಗೀರಥನ ಕಾಲದಲ್ಲಿ ಅವನ ದೃಢಸಂಕಲ್ಪ ಬಲದಿಂದ ಪೂರ್ಣಗೊಂಡಿತು. ಆದರೆ  ಗಂಗಾವತರಣದಂತಹ ಮುಖ್ಯವಾದ ಕಾರ್ಯವು ಸಂಪನ್ನಗೊಳ್ಳಲು ಸಾಕಷ್ಟು ಬೆಲೆಯನ್ನೂ ತೆರಬೇಕಾಯಿತು. ಅಶ್ವಮೇಧದ ಕುದುರೆಯನ್ನು ಹುಡುಕುತ್ತ ಹೊರಟ ಸಗರಪುತ್ರರು ತಂದೆಯ ಕಟ್ಟಪ್ಪಣೆಗೊಳಗಾಗಿ ಭೂಮಿಯನ್ನು ಅಗೆಯುತ್ತ ಸಾಗಿದರು. ಅಡ್ಡಬಂದವರನ್ನು ಸಂಹರಿಸಿದರು. ತಂದೆಯ ಆಜ್ಞೆಯನ್ನು ಪಾಲಿಸಬೇಕೆಂಬ ಒಂದೇ ಉದ್ದೇಶದಿಂದ ಪಾತಾಲದವರೆಗೂ ವಸುಂಧರೆಯ ಒಡಲನ್ನು ಸೀಳಿದರು. ಆದರೆ ಪ್ರಕೃತಿ ಎಂದೂ ತನ್ನ ಮೇಲೆ ನಡೆಯುವ ಅತ್ಯಾಚಾರವನ್ನು ಸಹಿಸುವುದಿಲ್ಲ. ಅದರ ಶಾಪವೋ ಎಂಬಂತೆ ಅವಿವೇಕಿಗಳಾಗಿ ವರ್ತಿಸಿದರು. ಕಪಿಲಮುನಿಯ ಆಶ್ರಮಪ್ರದೇಶದಲ್ಲಿ ಯಜ್ಣಾಶ್ವವನ್ನು ಕಂಡರು. ಇವನೇ ಕುದುರೆಯ ಕಳ್ಳ ಎಂದು ತಮ್ಮೊಳಗೆ ನಿಶ್ಚಯಿಸಿ ಕಪಿಲಮಹರ್ಷಿಯ ಕೋಪಾಗ್ನಿಗೆ ಸಿಕ್ಕಿ ಭಸ್ಮವಾಗಿ ಹೋದರು. ಆಸೆಯೆಂಬ ಕುದುರೆಯ ಬೆನ್ನು ಹತ್ತಿ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಿರಂತರವಾಗಿ ಅತ್ಯಾಚಾರವನ್ನು ನಡೆಸುತ್ತಿರುವ ನಮಗೆ ರಾಮಾಯಣ ಈ ಸಂದರ್ಭವನ್ನು ನೀತಿಪಾಠವಾಗಿ ನೀಡುತ್ತದೆ.

ಭೂಮಾತೆಯ ರಕ್ತರೂಪವಾದ ಅಂತರ್ಜಲವನ್ನು ಹೀರಿದ್ದೇವೆ. ಧಾತುರೂಪವಾದ ಖನಿಜವನ್ನು ಅಗೆದಿದ್ದೇವೆ. ಆಕೆಯ ಮೈಮುಚ್ಚಿದ ವಸ್ತ್ರರೂಪವಾದ ನಿತ್ಯಹರಿದ್ವರ್ಣದ ಕಾಡನ್ನು ಕಡಿದು  ಬೋಳು ಮಾಡಿ ಆಕೆಯನ್ನು ನಗ್ನಗೊಳಿಸಿದ್ದೇವೆ. ಪ್ರಕೃತಿ ಬಳಸಿ ಬಿಸಾಡುವಂತಹದ್ದಲ್ಲ. ಅದು ನಮ್ಮವಿಲಾಸಕ್ಕಿರುವುದಲ್ಲ. ಪೂಜ್ಯವಾದದ್ದನ್ನೆಂದೂ ಭೋಗಕ್ಕೆ ಬಳಸಬಾರದು. ಈ ಎಚ್ಚರ ನಮಗಿಲ್ಲವಾದರೆ ರಾಮಾಯಣದ ಘಟನೆ ಪುನರಾವರ್ತನೆಯಾಗುತ್ತದೆ ಎಂದೂ ನುಡಿದ ಪೂಜ್ಯ ಶ್ರೀಗಳು ಇಂತಹ ಪ್ರಕೃತಿ ವಿನಾಶಕರಾದ ಸಗರಪುತ್ರರ ಸದ್ಗತಿಗಾಗಿಯೇ ದೇವಲೋಕದಿಂದ ಗಂಗೆಯು ಇಳಿದು ಬರಬೇಕಾಯಿತು. ಅದಕ್ಕಾಗಿ ರಾಜಾ ಭಗೀರಥ ಅಪೂರ್ವ ಸಿದ್ಧಿ ಕ್ಷೇತ್ರವಾದ ಗೋಕರ್ಣಕ್ಕೆ ಬಂದು ತಪಸ್ಸು ಮಾಡಿ ಸುರಗಂಗೆಯನ್ನು ಭೂಮಿಗಿಳಿಸಿದ. ಈ ಗಂಗಾವತರಣ ಕಾರ್ಯ ನಮಗೆ ಪ್ರಕೃತಿಯ ರಕ್ಷಣೆಯ ವಿಷಯದಲ್ಲಿ  ಪಾಠವಾಗಬೇಕು ಎಂದೂ ಹೇಳಿದರು.

ರಾಮಕಥಾ ಸಂಘಟನೆಯ ಕಲಾವಿದರಾದ ಶ್ರೀಪಾದ ಭಟ್ಟ,ಪ್ರೇಮಲತಾ ದಿವಾಕರ ಗಾಯಕರಾಗಿ, ಗೌರೀಶ ಯಾಜಿ ಹಾರ್ಮೋನಿಯಂ ವಾದಕರಾಗಿ ಗೋಪಾಲಕೃಷ್ಣ ಹೆಗಡೆ ತಬಲಾವಾದಕರಾಗಿ ಪ್ರಕಾಶ ಕಲ್ಲರೆಮನೆ ಕೊಳಲು ವಾದಕರಾಗಿ ಗಣಪತಿ ನೀರ್ನಳ್ಳಿ ಚಿತ್ರಕಾರರಾಗಿ,ರಾಘವೇಂದ್ರ ಹೆಗಡೆ ಮರಳುಚಿತ್ರಕಾರರಾಗಿ ಪಾಲ್ಗೊಂಡರು. ಕೊನೆಯಲ್ಲಿ ಮಂಗಳೂರಿನ ಶ್ರೀಧರ ಹೊಳ್ಳ ಹಾಗೂ ಪ್ರತಿಮಾ ಹೊಳ್ಳ ಇವರ ನೇತೃತ್ವದಲ್ಲಿ “ಗಂಗಾವತರಣ” ರೂಪಕ ಪ್ರದರ್ಶಿತವಾಯಿತು. ಶ್ರೀ ಎಂ.ಜಿ.ಉಪಾಧ್ಯ ದಂಪತಿಗಳಿಂದ  ಶ್ರೀ ರಾಮಾಯಣ ಗ್ರಂಥಕ್ಕೆ ಪುಷ್ಪಾರ್ಚನೆಯು ನಡೆಯಿತು.

Facebook Comments