ಮಾಣಿ, ನವೆಂಬರ್ 05, 2009:
ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಯಕ್ಷಗಾನ ಮೇಳವಾದ ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ತನ್ನ 2009 ನೇ ವರ್ಷದ ತಿರುಗಾಟವನ್ನು ಇಂದು ಬಂಟ್ವಾಳ ಮಾಣಿ – ಪೆರಾಜೆಯ ಶ್ರೀಮಠದಲ್ಲಿ, ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಆರಂಭಿಸಿತು.  ಶ್ರೀ ಶ್ರೀಗಳು ಶ್ರೀರಾಮದೇವರ ಪೂಜಾನಂತರ ಕಲಾವಿದರಿಗೆ ಗೆಜ್ಜೆಯನ್ನು ಅನುಗ್ರಹಿಸಿದರು.ಶಶಿವಂಶವಲ್ಲರಿ-ಯಕ್ಷಗಾನ ರಾತ್ರಿ 8:10ರ ಸುಮುಹೂರ್ತದಲ್ಲಿ ಕಲಾವಿದರುಗಳು ಶ್ರೀ ದೇವ, ಹಾಗೂ  ಶ್ರೀಗುರುಗಳ ದಿವ್ಯ ಸನ್ನಿಧಿಯಲ್ಲಿ ನರ್ತನ ಸೇವೆಗೈದು ಕಲಾಪೂಜೆಯ ಮೂಲಕ ಈ ವರ್ಷದ ತಿರುಗಾಟವನ್ನು ಆರಂಭಿಸಿದರು.

ಅನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಶ್ರೀಶ್ರೀಗಳು ಆಶೀರ್ವಚನ ನೀಡುತ್ತಾ ’ಒಳ್ಳೆಯ ವಸ್ತುಗಳು ಮನಸ್ಸಿಗೆ ಸಂತೋಷ ನೀಡುತ್ತದೆ. ಆ ವಸ್ತು ನಮ್ಮದೇ ಆದರೆ ಆ ಸಂತೋಷ ಸಾವಿರ ಪಟ್ಟು ಹೆಚ್ಚಾಗಿರುತ್ತದೆ. ರಾಮಚಂದ್ರಾಪುರ ಮೇಳವು ತುಂಬ ಒಳ್ಳೆ ಗುಣಮಟ್ಟದಲ್ಲಿ ಕೆಲಸ ಮಾಡಿ ಸಂತೋಷ ಕೊಡುತ್ತಿದೆ. ಯಕ್ಷಗಾನ ಮೇಳಗಳಲ್ಲಿ ಅಗ್ರಸ್ಥಾನದಲ್ಲಿದೆ. ಆ ಮೇಳ ನಮ್ಮದೇ ಆಗಿರುವುದರಿಂದ ಈ ಕುಶಿ ಸಾವಿರ ಪಟ್ಟು ಹೆಚ್ಚಾಗಿದೆ. ಈ ವರ್ಷದ ತಿರುಗಾಟ ಎಲ್ಲರಿಗೂ ಅಭಿವೃದ್ಧಿ, ಸಂತೋಷ ತರಳಿ’ ಎಂದು ಕಲಾವಿದರುಗಳನ್ನು ಪ್ರೋತ್ಸಾಹಿಸಿದರು.
ನೆರೆದ ನೂರಾರು ಕಲಾವಿದರು, ಕಲಾಸಕ್ತರು, ಶ್ರೀಗುರುಗಳಿಂದೆ ಮಂತ್ರಾಕ್ಷತೆ ಸ್ವೀಕರಿಸಿದರು. ರಾತ್ರಿ ಯಕ್ಷಗಾನ ಸೇವೆಯಾಟವನ್ನು ಶ್ರೀಗಳಾದಿಯಾಗಿ ಎಲ್ಲರೂ ಆಸ್ವಾದಿಸಿದರು.


ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯ 2009ನೇ ವರ್ಷದ ತಿರುಗಾಟದ ವಿವರವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.

Facebook Comments