04, ಜೂನ್; 2011, ಶನಿವಾರ: ಹರೇರಾಮ e-ಮಠದಂಗಳ ಮತ್ತು ಹರೇರಾಮದ ಓದುಗರನ್ನೊಳಗೊಂಡ ಹರೇರಾಮ ತಂಡಕ್ಕೆ ಸಂಭ್ರಮದ ದಿನ. ಶ್ರೀ ಗುರುಗಳ ದಿವ್ಯ ಉಪಸ್ಥಿತಿಯಲ್ಲಿ, ಶ್ರೀ ಶ್ರೀ ರಾಘವೇಂದ್ರ ಭಾರತೀ ಸ್ವಾಮೀಜಿಗಳ ದಿವ್ಯ ಅನುಭೂತಿಯಿರುವ ಶ್ರೀ ರಾಮಾಶ್ರಮದ ಅಂಗಣದಲ್ಲಿ, ಶ್ರೀಮಠದ ಮುಖವಾಣಿಯಾದ, ಶ್ರೀ ಗುರುಗಳ ಅಂತರ್ಜಾಲ ತಾಣವಾದ ಹರೇರಾಮ e-ಮಠದಂಗಳದ ಶ್ರೀ ಗುರುಗಳ ಮತ್ತು ಶ್ರೀ ಗುರುಗಳ ಆತ್ಮಬಂಧುಗಳ ಹೃದಯ ಸಂವಾದ ನಡೆಯಿತು.

ಗಡಿಯಾರದ ಮುಳ್ಳುಗಳು ತಮ್ಮ ಚಲನೆಯಲ್ಲಿ ವ್ಯತ್ಯಾಸವನ್ನು ಮಾಡಿಯೂ ಮಾಡಿಯಾವು, ಆದರೆ ಶ್ರೀ ಸಂಸ್ಥಾನ ಸರಿಯಾದ ಸಮಯಕ್ಕೆ ಸಭಾಮಧ್ಯಕ್ಕೆ ಆಗಮಿಸಿ, ಶ್ರೀಪೀಠದ ಧರ್ಮದ್ವಜವನ್ನು, ವಿಶ್ವ ಜನನಿಯ ಕೀರ್ತಿಯನ್ನು ಸಾರುವ ಧರ್ಮಪತಾಕೆಯನ್ನು ಶ್ರೀ ರಾಘವೇಂದ್ರ ನಾರಾಯಣ ಮತ್ತು ಅಡ್ಮಿನ್ ಶ್ರೀ ಮಹೇಶ ಎಳ್ಯಡ್ಕರೊಂದಿಗೆ ಆರೋಹಿಸಿದರು. ನಂತರ ಶ್ರೀಪೀಠವನ್ನು ಅಲಂಕರಿಸಿ, ಶ್ರೀ ಪೀಠದ ಪರಂಪರೆಯ ಬಿರುದುಬಾವಲಿಗಳ ಗೌರವವನ್ನು ಸ್ವೀಕರಿಸಿ, ಶಂಖನಾದದೊಂದಿಗೆ  ಶಿಷ್ಯರಿಂದ ಗುರುವಂದನೆಯನ್ನು ಸ್ವೀಕರಿಸಿ,  ಕಾರ್ಯಕ್ರಮಕ್ಕೆ ಅಣಿಯಾದರೂ, ಶ್ರೀಗಳ ಶಿಷ್ಯರಿಗೆ ಶ್ರೀ ಗುರುಗಳ ವೇಗಕ್ಕೆ ತಾವಿನ್ನೂ ತಯಾರಿಲ್ಲವೆಂಬಂತೆ ಭಾಸವಾಯಿತು. ಕೆಲವು ಸಮಯವೇ ಹಿಡಿಯಿತು ಸಭೆ ರೂಪುಗೊಳ್ಳಲು.

ಶ್ರೀ ಗುರುಗಳ ಉಪಸ್ಥಿತಿಯಿರುವಲ್ಲಿ ಒಂದು ಕಡೆ ಕುಳಿತು ತಮ್ಮ ಮಧುರ ಕಂಠದಿಂದ ಶ್ರೀ ಗುರುಗಳ ಮೇಲಿನ ಭಕ್ತಿ ಭಾವಗಳನ್ನು ಬಿಂಬಿಸುವ ಹಾಡುಗಳನ್ನು ತನ್ಮಯತೆಯಿಂದ ಹಾಡುವ “ಹಾಡಿನ ಕಮಲಕ್ಕ”ನನ್ನು ಗೊತ್ತಿಲ್ಲದವರು ವಿರಳ. ತಮ್ಮ ಅನಾರೋಗ್ಯಗಳನ್ನು ಬದಿಗಿಟ್ಟು ಶ್ರೀ ಗುರುಗಳ ಮೇಲಿನ ಭಕ್ತಿಯಲ್ಲಿ “ಸದ್ಗುರು ಸಂಕೀರ್ತನ” ಎಂಬ ಒಂದು ಸಿ.ಡಿ ಯನ್ನು ಶ್ರೀ ಗುರುಗಳ ಕರಕಮಲಗಳಿಂದ ಲೋಕಾರ್ಪಣೆ ಮಾಡಿ, ಅದರ ಬಿಕರಿಯಲ್ಲಿ ಬಂದ ಮೊತ್ತವನ್ನು ಗೋಕರ್ಣದ ಅಶೋಕೆಯಲ್ಲಿ ನಿರ್ಮಾಣವಾಗುವ ನಮ್ಮ ಮೂಲ ಮಠದ ನಿರ್ಮಾಣ ನಿಧಿಗೆ ಸಮರ್ಪಿಸಿದ್ದಾರೆ.  ಡಾ.ಜಿ.ಜಿ.ಶಾಸ್ತ್ರಿಗಳ ಸ್ಫೂರ್ತಿ,ಸಾಹಿತ್ಯ, ವಾಚನವಿರುವ, ಶ್ರೀ ವೆಂ.ಭ. ವಂದೂರು, ಶ್ರೀಮತಿ ಸೀತಾಲಕ್ಷ್ಮಿ ಹೆಗಡೆ, ಶ್ರೀಮತಿ ಸರಸ್ವತಿ ಭಟ್ಟ ಇವರುಗಳ ಸಾಹಿತ್ಯವಿರುವ, ಶ್ರೀಮತಿ ನಾಗವೇಣಿ ಹೆಗಡೆ, ಕೆರೆಮನೆಯವರ ರಾಗಸಂಯೋಜನೆಯಲ್ಲಿ ರೂಪುಗೊಂಡ ಈ ಸೇವಾ  ಸಂಕೀರ್ತನೆ ಶ್ರೀ ಪೀಠದ, ಶ್ರೀ ಗುರುಗಳ ಭಕ್ತರಿಗೆ ಒಂದು ಕೊಡುಗೆಯಾಗಿದೆ.  ಸಿ.ಡಿ ಬಿಡುಗಡೆಯ ಸಂದರ್ಭದಲ್ಲಿ ಡಾ.ಜಿ.ಜಿ.ಶಾಸ್ತ್ರಿಗಳು ಭಾವಪೂರ್ಣವಾಗಿ ಶ್ರೀ ಗುರುಗಳ ವೈಭವವನ್ನು ತಿಳಿಸಿ, ಹಾಡಿನ ಕಮಲಕ್ಕನವರ ಭಜನೆ ಮನೆ ಮನೆಗೂ ತಲುಪುವಂತಾಗಲಿ ಎಂದು ಹಾರೈಸಿದರು.

ಹರೇರಾಮದ ಅಡ್ಮಿನ್ ಶ್ರೀ ಮಹೇಶ ಎಳ್ಯಡ್ಕರಿಂದ ಸಭಾಪೂಜೆ ನಡೆಯಿತು. ತಮ್ಮ ಸಭಾವಂದನೆಯ ಮಾತುಗಳನ್ನು “ಅಜ್ಞಾನ ತಿಮಿರಾಂಧಸ್ಯ”ಶ್ಲೋಕದಿಂದ ಶ್ರೀ ಗುರುಗಳ ಅನುಗ್ರಹ ಪಡೆದು ಆರಂಭಿಸಿ,  ” ಅಂತರ್ಜಾಲ ಲೋಕದಲ್ಲಿ ಅಂತರ್ಜಾಲದ ಸಮಯದ ಬಹು ಹಿಂದೆಯೇ ಶ್ರೀ ಗುರುಗಳು  ದೂರದೃಷ್ಟಿಯನ್ನು ನೆಟ್ಟು  ಶ್ರೀಮಠದ ಮುಖವಾಣಿ ಹರೇರಾಮ ಮೂಡಿ ಬಂದಿದೆ. ೨೦೦೯, ದೀಪಾವಳಿಯಂದು ಪ್ರಜ್ವಲನವಾದ ಹರೇರಾಮದ ತಂಡ ಶ್ರೀ ಗುರುಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿ, ಬೆಳಗಿ ಮುಂದರಿಯುತ್ತಿದೆ. ತಂಡದ ಸದಸ್ಯರೆಲ್ಲರೂ ಇರುವ ಇಂದಿನ ಈ ಸಂವಾದ ಕಾರ್ಯಕ್ರಮದಲ್ಲಿ, ತಾಂತ್ರಿಕ, ಆಧ್ಯಾತ್ಮಿಕ ವಿಷಯಗಳ ಬಗ್ಗೆ  ಶ್ರೀ ಗುರುಗಳೊಂದಿಗೆ ನೇರವಾಗಿ ಪ್ರಶ್ನಿಸಬಹುದು. ಸಭಾಪೂಜೆಯ ಮರ್ಯಾದಿಯನ್ನು ಈ ಧರೆಗೆ ಸಲ್ಲಿಸಿ, ಶ್ರೀ ಗುರುಗಳ ದಿವ್ಯ ಉಪಸ್ಥಿತಿಯ ಅಧ್ಯಕ್ಷತೆಯಲ್ಲಿ, ಶ್ರೀ ಗುರುಗಳ ಆಶೀರ್ವಾದದ ಮೂಲಕ ಎಲ್ಲರ ಪ್ರಶ್ನೆಗಳಿಗೆ, ಎಲ್ಲರ ಸಮಸ್ಯೆಗಳಿಗೆ ಸೂಕ್ತ ಉತ್ತರ ಕರುಣಿಸಿ ತನ್ಮೂಲಕ ಹರೇರಾಮ ವೆಬ್ ಸೈಟ್ ಮತ್ತು ಹರೇರಾಮ ತಂಡ ಅನಂತ ಕಾಲದವರೆಗೂ ಯಶಸ್ವಿಯಾಗಿ ನಡೆಯಲು ಬೇಕಾಗುವ ಶುಭಾಶೀರ್ವಾದಗಳನ್ನು ಮಹಾಗುರುಗಳು ಕರುಣಿಸಬೇಕು” ಎಂದು ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಹರೇರಾಮ ಅಂತರ್ಜಾಲ ತಾಣ e-ಮಠದಂಗಳದ ಎಲ್ಲಾ ಅಂಕಣಗಳ ಮತ್ತು ಪ್ರತಿಯೊಂದು ವಿಭಾಗಗಳ ಸೂಕ್ಷ್ಮ ಪರಿಚಯವನ್ನು ಸಿ. ಎಚ್. ಎಸ್. ಭಟ್ ರವರು ಪಿ. ಪಿ. ಟಿ ಮೂಲಕ ಮಾಡಿ, ” ಹಗಲಿರುಳಿನ ವ್ಯತ್ಯಾಸವಿರುವ ಈ ಲೋಕದಲ್ಲಿ ಹಗಲಿರುಳೆನ್ನದೆ ತನ್ನ ಸಮಸ್ತ ಪುಟಗಳನ್ನೂ ತೆರೆದುಕೊಂಡು ಶಿಷ್ಯರಿಗಾಗಿ ಆಧ್ಯಾತ್ಮಿಕ ಜ್ಞಾನವನ್ನು ತುಂಬಿಕೊಂಡು ಕಾಯುತ್ತಿರುವ e-ಮಠದಂಗಳ ಎಲ್ಲಾ ಶಿಷ್ಯವರ್ಗದ ಆಡೊಂಬೊಲವಾಗಲಿ.  ಸಮಸ್ತ ಶಿಷ್ಯರೂ ‘e-ಮಠ’ದ, ಮತ್ತು ‘ಈ ಮಠ’ದ ಮೂಲಕ ಶ್ರೀ ಗುರುಗಳ ಕೃಪೆಗೆ ಪಾತ್ರರಾಗಲಿ. ಶ್ರೀ ಪೀಠದ ಸೇವೆಯ ಭಾಗ್ಯ ಪಡೆಯಲಿ.” ಎಂದು  ಹಾರೈಸಿದರು.

ಶ್ರೀ ಕೆ. ಪಿ. ಎಡಪ್ಪಾಡಿ ಹರೇರಾಮ ತಂಡದ  ಪರಿಚಯವನ್ನು ಎಲ್ಲರಿಗೂ ಮಾಡಿದರು. ಶ್ರೀ ಗುರುಗಳ ಅಕ್ಷರಯಜ್ಞದಲ್ಲಿ ತಮ್ಮ ಅಕ್ಷರ ಸೇವೆಯ ಮೂಲಕ ಶ್ರೀಗುರುಗಳ ಶ್ರೀಪೀಠದ ಸೇವೆಯ ಭಾಗ್ಯ ಹೊಂದಿದ ಹರೇರಾಮ ತಂಡ ಶ್ರೀ ಗುರುಗಳ ಸಮಕ್ಷಮ ಎಲ್ಲರ ಎದುರು ಶ್ರೀಪೀಠದ ತಾಂತ್ರಿಕ ಮತ್ತು ಅಕ್ಷರದಾಸರೆಂದು ಗುರುತಿಸಿಕೊಂಡು ಕೃತಾರ್ಥರಾದರು.

ನಂತರ ಹರೇರಾಮದ ಓದುಗರ ಮತ್ತು ಶ್ರೀ ಗುರುಗಳ ನಡುವೆ ಸಂವಾದ ಕಾರ್ಯಕ್ರಮ ಏರ್ಪಟ್ಟಿತು. ತಾಂತ್ರಿಕ ವಿಷಯಗಳನ್ನು ಶ್ರೀ ಮಹೇಶ ಎಳ್ಯಡ್ಕ ಮತ್ತು ಅಧ್ಯಾತ್ಮಿಕ ವಿಷಯಗಳನ್ನು  ವಿದ್ವಾನ್ ಜಗದೀಶ ಶರ್ಮರು ನೆರವೇರಿಸಿದರು.ಹರೇರಾಮ ಅಂತರ್ಜಾಲ ಮುಖವಾಣಿಯ ಸಂವಾದದ ಕಾರ್ಯಕ್ರಮಗಳು ನಾಡಿನ ಹಲವಾರು ಕಡೆ ನಡೆಯಬೇಕೆಂದು  ಮತ್ತು ವರ್ಷಕ್ಕೊಂದು ಬಾರಿ ಹರೇರಾಮದ ವಿನ್ಯಾಸ  ಬದಲಾವಣೆಯ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಯಿತು. ಸಂವಾದದಲ್ಲಿ ಓದುಗರು ಮಂಡಿಸಿದ ವಿಚಾರಗಳನ್ನು ಅತಿ ಶೀಘ್ರದಲ್ಲಿ ಹರೇರಾಮದಲ್ಲಿ ಅಳವಡಿಸಿಕೊಳ್ಳುವುದಾಗಿ ತೀರ್ಮಾನವಾಯಿತು.

ದೂರದೂರದಿಂದ ಬಂದ ಹರೇರಾಮ ಓದುಗರ ಮನದ ಪ್ರಶ್ನೆಗಳಿಗೆ ಸಮಯದ ಚೌಕಟ್ಟಿನಲ್ಲಿ ಪರಿಹಾರ ನೀಡಿ, ಹರೇರಾಮದ ಓದುಗರಿಂದ ಬಂದಂತಹ ಪ್ರಶ್ನೆಗಳಿಗೆ ಶ್ರೀ ಗುರುಗಳು ಸೂಕ್ಷ್ಮವಾಗಿ ಉತ್ತರವನ್ನಿತ್ತು, ಸಮಯದ ಅಭಾವದಿಂದ ಮುಂದೆ ಈ ಪ್ರಶ್ನೆಗಳಿಗೆ ಹರೇರಾಮ ಅಂತರಂಗ ತಾಣದಲ್ಲಿ  ಉತ್ತರವನ್ನು ನೀಡುವುದಾಗಿ ಹೇಳಿದರು. ಬಳಿಕ ಆಶೀರ್ವಚನವನ್ನಿತ್ತ ಶ್ರೀ ಸಂಸ್ಥಾನ,

” ಹರೇರಾಮ ಅಂತರಂಗತಾಣ ಆ ಮಠ e-ಮಠ ಆಯ್ತು. ದೂರದಲ್ಲಿದ್ದ ಮಠ ಹತ್ತಿರಕ್ಕೆ ಬಂತು. ಇಂಟರ್ ನೆಟ್ ಎಂಬ ಒಂದು ಮಾಯೆ, ಈ ಮಾಯೆಯ ಸೆಳೆತದಲ್ಲಿರುವ ಶಿಷ್ಯರಿಗೆ, ಮಾಯೆಯ ಮಧ್ಯದಲ್ಲಿ ಆಧ್ಯಾತ್ಮಿಕ ಒಂದು ಸಾಮ್ರಾಜ್ಯ ಈ ತಾಣ. ಗಾಢಾಂಧಕಾರದ ಮಧ್ಯದಲ್ಲಿ ಒಂದು ದೀಪದಂತೆ. ದೀಪದ ಕೆಲಸ ಕತ್ತಲೆಯಲ್ಲಿ. ಎಲ್ಲಿ ಕತ್ತಲಿದೆ, ಅಲ್ಲೇ ಬೆಳಕಿಗೆ ಕೆಲಸ ಇರಬೇಕು.ಸೂರ್ಯ ಇರುವಲ್ಲಿ ಬೆಳಕಿಗೇನು ಕೆಲಸ? ಹಾಗೇ, ಅಂಥಾ ಒಂದು ತಮೋಮಯ ಅಂತರ್ಜಾಲ ಲೋಕದಲ್ಲಿ ಮಠದಿಂದ ದೂರ ಹೋದವರಿಗೆ ಹತ್ತಿರದಲ್ಲಿಯೇ ಮಠ ಸಿಗುವಂತಾಗಿದೆ. ಮನಸ್ಸಿದ್ದವರಿಗೆ ಮಠ ದೂರ ಇಲ್ಲ. ಸದಾ ಕಾಲ ಗುರುಗಳ ಜೊತೆಗಿರುವ ಅವಕಾಶ. ಎಲ್ಲಾ ಸಮಾಜ ಬಾಂಧವರನ್ನು e-ಮುಖಕ್ಕೆ ತಿರುಗುವ ಹಾಗೆ ಮಾಡಿದ ಪ್ರಯತ್ನ. ಒಳ್ಳೆಯ ವಿಷಯವನ್ನು ಆನಂದಿಸಿ ನಿಮಗೆ ಉಣಬಡಿಸುತ್ತೇವೆ. ಕೈಕಾಲಿಲ್ಲದ ತಾಯಿ, ಬಾಯಿಯಿಂದಲೇ ಊಟವನ್ನು ಆಸ್ವಾದಿಸಿ ಮಗುವಿಗೆ ನೀಡುವಂತೆ, ಹರೇರಾಮ ವೆಬ್ ಸೈಟ್ ನಲ್ಲಿಯೂ ನಾವು ಕೂಡಾ ಸವಿಯನ್ನು ಸವಿದು ನಿಮಗೆ ಉಣಬಡಿಸುತ್ತೇವೆ. ಆಕಾಶ ಕಳಚಿ ಬೀಳುವಾಗ ತಡೆಯಲು ಪ್ರಯತ್ನಿಸಿದ ಒಂದು ಸಣ್ಣ ಗುಬ್ಬಚ್ಚಿಯ ಪ್ರಯತ್ನದಂತೆ ಸಮಾಜ ಬದಲಾವಣೆಗೆ ನಮ್ಮ ಕೈಯ್ಯಲ್ಲಾಗುವ ಪ್ರಯತ್ನ ನಾವು ಮಾಡಬೇಕು.  ಸಮಾಜ ಬದಲಾವಣೆಯ ಈ ಪ್ರಯತ್ನ ಅಮೃತ ಪ್ರಯತ್ನವಾಗಬೇಕು. ಜತೆಜತೆಗೆ ಇದ್ದುಕೊಂಡು ವಿಧಿ, ಕಾಲದೇಶಗಳು ಎಷ್ಟೇ ದೂರ ಮಾಡಿದರೂ, ಬಿಡದೆ ಹತ್ತಿರ ಇರುತ್ತೇವೆ, ಒಟ್ಟಿಗೇ ಇರುತ್ತೇವೆ, ಹಂಚಿಕೊಳ್ಳುತ್ತೇವೆ, ಪ್ರಪಂಚ ಮತ್ತು ಪ್ರಪಂಚದ ಪರಮಾತ್ಮನನ್ನು ಆಲಿಸುತ್ತೇವೆ. ಅದು ಈ ಅಂತರ್ಜಾಲ ತಾಣ ಆಗಲಿ. ತಂಡ-ನಾವು-ನೀವು ಈ ತ್ರಿವೇಣೀ ಸಂಗಮ ಹೀಗೇ ಇರಲಿ. ಎಲ್ಲರೂ ಬರೆಯುತ್ತಾ ಇರಿ. ಈ ತಂಡದ ಜೊತೆಯಾಗಬಯಸುವವರು ನಮ್ಮೊಂದಿಗೆ ಬನ್ನಿ. ಹರೇ ಅಂದರೆ ವೈಕುಂಠದಲ್ಲಿರುವ ವಿಷ್ಣುವನ್ನು ಕರೆಯುವುದು,  ರಾಮ ಅಂದರೆ ಮಠದಲ್ಲಿ ವಿಷ್ಣುವನ್ನು ರಾಮನಾಗಿ ಕರೆಯುವುದು. ಈ ನಾಮವೇ ಎಲ್ಲರನ್ನೂ ಆವರಿಸಲಿ. ರಾಮ ಇಲ್ಲಿಂದ ವೈಕುಂಠಕ್ಕೆ ಸಾಗಿಸಲಿ ಇಲ್ಲದಿದ್ದರೆ ವೈಕುಂಠವನ್ನು ಇಲ್ಲಿಗೆ ಇಳಿಸಲಿ.”

ಶ್ರೀ ಸಂಸ್ಥಾನದ ಅಮೃತ ವಚನವನ್ನಾಲಿಸಿದ ಶಿಷ್ಯವರ್ಗ ಹರೇರಾಮ ನಾಮದಲ್ಲಿ ಒಂದಾದರು. ವಿದ್ವಾನ್ ಜಗದೀಶ ಶರ್ಮರು ಕಾರ್ಯಕ್ರಮವನ್ನು ನಿರೂಪಿಸಿದರು. ಶಂಖನಾದದೊಂದಿಗೆ ಮತ್ತು ಧರ್ಮಧ್ವಜಾವತರಣದೊಂದಿಗೆ ಶ್ರೀ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು. ಎಲ್ಲರ ಮನದಲ್ಲಿ ಪುನಃ ಇದೇ  ತರಹದ  ಭೇಟಿಯ ಕಾತರ ಎದ್ದು ಕಾಣುತ್ತಿತ್ತು. ಮುಂದಿನ ಶ್ರೀ ಸಂವಾದದ ನಿರೀಕ್ಷೆಯಲ್ಲಿ…

ಫೋಟೋಗಳು: http://hareraama.in/en/photogallery/?album=VaishakhaMayJune2011

Facebook Comments