ಗೋಕರ್ಣ. 19: ಶಿವ-ಪಾರ್ವತಿಯರು ಈ ಲೋಕದ ಆದಿದಂಪತಿಗಳು. ಇವರ ಸಂಸಾರದ ಫಲವೇ ಈ ಪ್ರಪಂಚ. ಸನಾತನರು ಇದನ್ನೇ ಶಿವ-ಶಕ್ತಿ ಎಂದು ಉಲ್ಲೇಖಿಸಿದ್ದಾರೆ. ಶಿವನ ಮೊದಲ ಪತ್ನಿ ದಕ್ಷಪುತ್ರಿಯಾದ ಸತೀದೇವಿ. ತಂದೆಯು ಮಾಡಿದ ಅವಮಾನದಿಂದ ನೊಂದ  ಸತೀದೇವಿ ಯೋಗಾಗ್ನಿಯಲ್ಲಿ ತನ್ನನ್ನು ತಾನು ಸುಟ್ಟುಕೊಂಡಳು. ಶಿವ ಪತ್ನೀ ರಹಿತನಾದ.ಶಿವನ ದಾಂಪತ್ಯದ ಫಲರೂಪವಾಗಿ ಜನಿಸುವ ಸ್ಕಂದನಿಂದಲೇ ತಾರಕಾಸುರನ ಸಂಹಾರವಾಗಬೇಕಾದಾಗ ದೇವತೆಗಳು ಮನ್ಮಥನನ್ನು ಪ್ರೇರಿಸಿದರು. ವಸಂತನ ಸಹಕಾರದಿಂದ ಶಿವನನ್ನು ತಪಸ್ಸಿನಿಂದ ವಿಮುಖಗೊಳಿಸಲು ಹೊರಟ ಮದನ ಶಿವನ ಹಣೆಗಣ್ಣಿನ ಜ್ವಾಲೆಗೆ ಸಿಕ್ಕಿ ಭಸ್ಮವಾದ. ತನ್ನ ರೂಪದಬಲದಿಂದ ಈಶ್ವರನನ್ನು ಪಡೆಯಲು ಅಸಮರ್ಥಳಾಗಿ ತಪಸ್ಸಿನಿಂದ  ಶಿವನನ್ನು ಪತಿಯನ್ನಾಗಿ ಪಡೆಯುತ್ತಾಳೆ. ಬದುಕಿನಲ್ಲಿ ದುಷ್ಟಕಾಮಗಳು ಭಸ್ಮವಾದರೆ ಮಾತ್ರ ಜೀವನದಲ್ಲಿ ಔನ್ನತ್ಯ, ಸಾರ್ಥಕತೆಗಳು ಲಭ್ಯ ಎಂಬುದಕ್ಕೆ ಸತೀದೇವಿಯ ಪ್ರಕರಣ ಹಾಗೂ ಪಾರ್ವತೀಕಲ್ಯಾಣ ಪ್ರಸಂಗಗಳು ಸಾಕ್ಷಿಯಾಗಿವೆ ಎಂದು ಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಗೋಕರ್ಣದ ಸಾಗರತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಆಯೋಜಿತವಾದ “ರಾಮಕಥಾ” ದಲ್ಲಿ ಅನುಗ್ರಹಪ್ರವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಮಹಾತ್ಮರಿಗೆ ಮಾಡಿದ ಅಪಕಾರ ಅವಮಾನಗಳು ಅತಿಶೀಘ್ರವಾಗಿ ಫಲವನ್ನು ಕೊಡುತ್ತವೆ. ಹಾಗೆಯೇ ಮಹಾತ್ಮರಿಗೆ ಬರುವ ತೊಂದರೆಗಳು ಕಷ್ಟಗಳು ಮೇಲ್ನೋಟಕ್ಕೆ ಸಮಸ್ಯೆಗಳಾಗಿ ಕಂಡರೂ ಅದರ ಮೂಲ ಉದ್ದೇಶ ಬೇರೆಯೇ ಆಗಿರುತ್ತದೆ. ಅಂತಹವರಿಗೆ ಬರುವ ಕಷ್ಟಕೋಟಲೆಗಳು ಲೋಕೋಪಕಾರಕ್ಕೆ ನಾಂದಿಯಾಗುತ್ತವೆ. ಚಂದ್ರನ ಪಕ್ಷಪಾತ ಅವನನ್ನು ಶಿವನ ಶಿರೋಭೂಷಣವನ್ನಾಗಿ ಮಾಡಿಸಿತು. ಪ್ರಜಾಪತಿಯಾದ ದಕ್ಷನು ಶಿವನಿಗೆ ಮಾಡಿದ ಅವಮಾನ ದಕ್ಷನ ಗರ್ವಭಂಗದಲ್ಲಿ ಮಾತ್ರ ಅಂತ್ಯವಾಗದೆ ಅದರಿಂದ ಲೋಕಕ್ಕೆ ಅತ್ಯಂತ ಪರಾಕ್ರಮಿಯಾದ ದೇವಸೇನಾನಿಯಾದ ಸ್ಕಂದನ ಲಾಭವಾಯಿತು.

ಹಾಗೆಯೇ ಕೈಕೇಯಿಯ ರಾಮವನವಾಸ ಪ್ರಾರ್ಥನೆಯಿಂದಾಗಿ ಲೋಕಕಂಟಕನಾದ ರಾವಣನ ವಿನಾಶಕ್ಕೆ ಕಾರಣವಾಯಿತು. ಇದು ಲೋಕನಿಯಮ ಎಂದು ಹೇಳಿ ದೇವರಲ್ಲಿ ಶಿವ ಹೆಚ್ಚು, ವಿಷ್ಣು ಹೆಚ್ಚು ಎಂಬ ಭಾವ ಎಂದೂ ಇಲ್ಲ. ಇರುವ ಲೋಕನಿಯಾಮಕಶಕ್ತಿ ಒಂದೇ. ಯಾವುದೇ ವಸ್ತುವಿನ ಮೌಲ್ಯ ಅದರ ಉಪಯೋಗದಿಂದ. ಪ್ರತಿಯೊಂದಕ್ಕೂ ಉಪಯೋಗದ ಹಿನ್ನೆಲೆಯಲ್ಲಿ ಅದರದ್ದೇ ಆದ ಬೆಲೆಯಿರುವಂತೆ ದೇವತೆಗಳಲ್ಲಿ ಕೂಡಾ. ಸೃಷ್ಟಿಕಾರ್ಯದಲ್ಲಿ ಬ್ರಹ್ಮದೇವರು ಶ್ರೇಷ್ಠವಾದರೆ ಪಾಲನೆಯ ವಿಷಯದಲ್ಲಿ ವಿಷ್ಣು ಹಾಗೂ ಲಯದಲ್ಲಿ ರುದ್ರದೇವರು ಮುಖ್ಯರಾಗುತ್ತಾರೆ. ಇದನ್ನರಿಯದೆ ನಾವು ಒಪ್ಪಿದ್ದೇ ಉತ್ತಮ ಎಂದು ಹೊಡೆದಾಟ ಸಾಮಾನ್ಯರಲ್ಲಿ ನಡೆಯುತ್ತದೆ. ವಾಸ್ತವಸತ್ಯ ಬೇರೆಯೆ ಆಗಿದೆ. ಅಲ್ಲದೆ ನಮ್ಮ ಜೀವನದಲ್ಲಿನ ಹೆಚ್ಚಿನ ಸಮಸ್ಯೆಗಳಿಗೆ ನಮ್ಮ ಅಸೂಯೆ-ಅಹಂಕಾರ ಮೊದಲಾದವುಗಳೇ ಮೂಲಕಾರಣವಾಗಿದ್ದು ಆ ದುರ್ಗುಣಗಳ ಪರಿತ್ಯಾಗದಿಂದ ಮಾತ್ರ ಬದುಕಿನ ಸಾರ್ಥಕತೆ ಸಾಧ್ಯ ಎಂದೂ ಪೂಜ್ಯ ಶ್ರೀಗಳು ಅಭಿಪ್ರಾಯಪಟ್ಟರು.

“ರಾಮಕಥಾ” ವೃಂದದ ಕಲಾವಿದರಾದ ಶ್ರೀಪಾದ ಭಟ್ಟ, ಪ್ರೇಮಲತಾ ದಿವಾಕರ ಅವರ ಗಾಯನ, ಗೋಪಾಲಕೃಷ್ಣ ಹೆಗಡೆಯವರ ತಬಲಾ, ಗೌರೀಶ ಯಾಜಿಯವರ ಹಾರ್ಮೋನಿಯಂ, ಪ್ರಕಾಶ ಕಲ್ಲಾರೆಮನೆಯವರ ಕೊಳಲು ವಾದನ ಗಣಪತಿ ನೀರ್ನಳ್ಳಿಯವರ ಚಿತ್ರ ಮತ್ತು ರಾಘವೇಂದ್ರ ಹೆಗಡೆಯವರ ಮರಳು ಚಿತ್ರಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಶ್ರೋತೃಗಳನ್ನು ರಂಜಿಸಿದವು. ಶ್ರೀಕಾಂತ ಕಾಳಮಂಜಿ ಯವರ ನಿರ್ದೇಶನದಲ್ಲಿ ಶಿವಮೊಗ್ಗದ ಸಹಚೇತನಾ ನಾಟ್ಯಾಲಯದ ಸಹನಾ ಪ್ರಭು ಮತ್ತು ಸಹ ಕಲಾವಿದರಿಂದ “ಚಂದ್ರ-ಚಂದ್ರಶೇಖರ” ಎಂಬ ರೂಪಕವು ಆಯೋಜಿತವಾಗಿತ್ತು.

Facebook Comments