ಗೋಕರ್ಣ: ಮಾತೃತ್ವ ಎಂದರೇ ವಾತ್ಸಲ್ಯದ ಇನ್ನೊಂದು ಹೆಸರು. ನಮ್ಮ ಮೇಲಿನ ಪೃಕೃತಿಮಾತೆಯು ಅನುಗ್ರಹ ಅಪಾರ.ಸುಖವಾಗಿ ಬದುಕಲು ಬೇಕಾದ ಸಕಲ ವಸ್ತುಗಳನ್ನೂ ಈ ತಾಯಿ ನಮಗೆ ನೀಡುತ್ತಾಳೆ.ನಮಗೆ ಬರಬಹುದಾದ ವಿಪತ್ತನ್ನೂ ಆಕೆ ಮೊದಲೇ ಸೂಚಿಸುತ್ತಾಳೆ. ತಾಯಿಯ ಭಾಷೆಯು ಅರ್ಥವಾಗುವವರು ಅದನ್ನು ತಿಳಿದುಕೊಳ್ಳಬಲ್ಲರು. ರಾವಣ, ಕುಂಭಕರ್ಣರು ಹುಟ್ಟುವಾಗ ಅಸಹಜವಾದ ಅನೇಕ ಉತ್ಪಾತಗಳು ಕಾಣಿಸಿಕೊಂಡವೆಂದು ಮಹರ್ಷಿ ವಾಲ್ಮೀಕಿ ಉಲ್ಲೇಖಿಸುತ್ತಾರೆ. ಅವರ ಜನನ ಕಾಲದಲ್ಲಿ ರಕ್ತದ ಮಳೆ, ಕ್ಷೊಭೆಗೊಂಡ ಸಾಗರ, ಅಕಾಲದಲ್ಲಿ ಕಾಣಿಸಿಕೊಂಡ ಮಾಂಸಭಕ್ಷಕಪ್ರಾಣಿಗಳು, ನಡುಗಿದ ಭೂಮಿ ಇವೆಲ್ಲವೂ ಮುಂದೆ ಅನ್ಯಾಯ, ಅನರ್ಥಗಳಯಗವು ಪ್ರಾರಂಭವಾಗಲಿದೆಯೆಂಬುದಕ್ಕೆ ಪ್ರಕೃತಿಯು ನೀಡಿದ ಸೂಚನೆಗಳಾಗಿದ್ದವು ಎಂದು ಪೂಜ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ  ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.

ಇಂದು ಸಮೀಪದ ಅಶೋಕೆಯಲ್ಲಿ ಚಾತುರ್ಮಾಸ್ಯದ ನಿಮಿತ್ತ ಆಯೋಜಿತವಾದ ರಾಮಕಥಾಪ್ರವಚನವನ್ನು ಅನುಗ್ರಹಿಸುತ್ತಿದ್ದ ಪೂಜ್ಯಶ್ರೀಗಳು ರಾವಣನ ಕಾಲದಲ್ಲಿ ಅವ್ಯಾಹತವಾದ ಸಜ್ಜನರ ಹಿಂಸೆ ಕ್ರೌರ್ಯಗಳಿಂದಾಗಿ ರಕ್ತದ ಹೊಳೆ ಹರಿಯುವುದನ್ನು, ಲೋಕಕಂಟಕನಾಗಿ ಎಲ್ಲರನ್ನೂ ಪೀಡಿಸಲಿರುವ ರಾವಣ ತನ್ನ ಮೇಲೆಯೂ ಆಕ್ರಮಣ ಮಾಡಬಹುದೆಂದು ಸಮುದ್ರವು ಕ್ಷೊಭೆಗೊಂಡಿದ್ದನ್ನು, ಮುಂದೆ ರಾವಣನ ಆಳ್ವಿಕೆಯ ಕಾಲದಲ್ಲಿ ಪ್ರತಿದಿನವೂ ತಮಗೆ ಅನಾಯಾಸವಾಗಿ ಮಾನವಶರೀರ ರೂಪದ ಆಹಾರವು ದೊರೆಯುವುದನ್ನು ಸೂಚಿಸಲು ಹಿಂಸ್ರಪ್ರಾಣಿಗಳು ಆ ಸಮಯದಲ್ಲಿ ಸುತ್ತವರೆದಿದ್ದನ್ನು ಪ್ರಕೃತಿಯ ಮೇಲೆ ಮುಂದೆ ನಡೆಯಲಿರುವ ಆಕ್ರಮಣದ ಸಾಂಕೇತಿಕ ಸೂಚನೆ ಎಂದೇ ಅರ್ಥ ಮಾಡಬೇಕಾಗುತ್ತದೆ.ಆದರೆ ಎಲ್ಲ ರೋಗಗಳಿಗೂ ಮದ್ದಿರುವಂತೆ , ಎಲ್ಲ ದೋಷಗಳಿಗೂ ಪರಿಹಾರವಿರುವಂತೆ ಈ ರಾಕ್ಷಸಕುಲದ ದೌಷ್ಟ್ಯವನ್ನು ಮರೆಸಲೋ ಎಂಬಂತೆ ಧರ್ಮಾತ್ಮನಾದ ವಿಭೀಷಣ ರಾವಣ ತಮ್ಮನಾಗಿ ಜನಿಸಿದ.

ಆಗ ಎಲ್ಲ ಶುಭಶಕುನಗಳೂ ಮೇಳೈಸಿದ್ದು ವಿಭೀಷಣ ಜನನ ರಾವಣನಂತಹ ಲೋಕಪೀಡಕನ ಅಂತ್ಯವಾಗುತ್ತದೆಂಬುದಕ್ಕೆ ದ್ಯೋತಕವಾಗುತ್ತದೆ ಎಂದು ಹೇಳಿದ ಪೂಜ್ಯಶ್ರೀಗಳು ರಾಣನಿಗೆ ಹತ್ತುತಲೆ ಅಂದರೆ ಅವನ ರಾಕ್ಷಸಸ್ವಭಾವ ಹತ್ತುರೀತಿ ಎಂಬುದಕ್ಕೆ ನಿದರ್ಶನ. ರಾವಣ, ಕುಂಭಕರ್ಣ, ಶೂರ್ಪಣಖಾ ಬಾಹುಬಲದವರಾದರೆ ವಿಭೀಷಣ ಭಾವಬಲಕ್ಕೆ ಒತ್ತು ನೀಡಿದವನು. ಅಣ್ಣನಾದ ರಾವಣನಿಗೆ ಹಲವುಸಂದರ್ಭಗಳಲ್ಲಿ ಬುದ್ಧಿಯನ್ನೂ ಹೇಳಿದವನು. ಕೊನೆಗೂ ಧರ್ಮಕ್ಕೇ ಜಯವೆಂಬ ಸಿದ್ಧಾಂತಕ್ಕೆ ಉತ್ತಮ ಉದಾಹರಣೆಯಾದ ವಿಭೀಷಣ ಕೊನೆಯವರೆಗೂ ತನ್ನ ಧಾರ್ಮಿಕಸ್ವಭಾವವನ್ನು ಬಿಡದೆ ನಮಗೆ ಆದರ್ಶ ರೂಪನಾಗಿದ್ದಾನೆ ಎಂದೂ ಹೇಳಿ ರಾಕ್ಷಸತ್ವವನ್ನು ವಿವೇಚಿಸಿದರು.

ಶ್ರೀಪಾದಭಟ್ಟ,ಪ್ರೇಮಲತಾ ದಿವಾಕರ, ಇವರ ಸುಮಧುರಗಾಯನ,ಪ್ರಕಾಶರ ವೇಣುವಾದನ,ಗೋಪಾಲಕೃಷ್ಣ ಹೆಗಡೆಯವರ ತಬಲಾ ವಾದನಗಳು ಕಾರ್ಯಕ್ರಮಕ್ಕೆ ರಂಗೇರಿಸಿದವು. ರಾಘವೇಂದ್ರ ಹೆಗಡೆಯವರ ಮರಳುಚಿತ್ರ ಹಾಗೂ ಗಣಪತಿ ನೀರ್ನಳ್ಳಿಯವರ ಆಶುಚಿತ್ರಗಳು ತುಂಬ ಸುಂದರವಾಗಿ ಮೂಡಿಬಂದವು. ವಿಶ್ವೇಶ್ವರ ಬಟ್ಟ ಹಾಗೂ ತಂಡದಿಂದ ಭೀಷಣಜನನಎಂಬ ರೂಪಕವು ಪ್ರಸ್ತುತಗೊಂಡಿತು.

ಇಂದು ಚಾತುರ್ಮಾಸ್ಯದ ನಿಮಿತ್ತ ಸಾಗರಮಂಡಲದ ಸಾಗರ, ಕೆಳದಿ, ಕ್ಯಾಸನೂರು ವಲಯಗಳ ಶ್ರೀಗುರುದೇವತಾಸೇವತೆ ಹಾಗೂ ಪಟಗಾರ ಸಮಾಜದಿಂದ ಗುರುಪಾದಪೂಜಾಸೇವೆಗಳು ಸಮರ್ಪಿತಗೊಂಡವು. ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಉಮೇಶ ಭಟ್ಟರು ಇಂದು ಪೂಜ್ಯಶ್ರೀಗಳನ್ನ ಸಂದರ್ಶಿಸಿ ಆಶೀರ್ವಾದ ಪಡೆದರು. ಶ್ರಿಗಳವರು ಎಲ್ಲ ಶಿಷ್ಯರಿಗೆ ಆಶೀರ್ಮಂತ್ರಾಕ್ಷತೆಯನ್ನು ಅನುಗ್ರಹಿಸಿದರು. ಶ್ರೀಸವಾರಿಯ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥರು ಸಭೆಯನ್ನು ನಿರ್ವಹಿಸಿದರು.

Facebook Comments