ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಶಬ್ದ ಪ್ರಪಂಚದಲ್ಲಿ ವಾಲ್ಮೀಕಿ ಪ್ರಣೀತವಾದ ರಾಮಾಯಣವು ಸರ್ವಶ್ರೇಷ್ಠವಾದುದು. ಶ್ರೀ ರಾಮಾಯಣದಲ್ಲಿಯೂ ಕೂಡ ಸುಂದರಕಾಂಡವು ಸರ್ವೋತ್ಕೃಷ್ಟವಾದ ಭಾಗ ಎಂಬುದಾಗಿ ಬಲ್ಲವರು ಮಾನ್ಯ ಮಾಡ್ತಾರೆ.

” ಸುಂದರೇ ಸುಂದರೋ ರಾಮಃ, ಸುಂದರೇ ಸುಂದರಃ ಕಪಿಃ |
ಸುಂದರೇ ಸುಂದರೀ ಸೀತಾ, ಸುಂದರೇ ಕಿಂ ನ ಸುಂದರಂ ||”
ಸುಂದರದಲ್ಲಿ ಯಾವುದು ತಾನೇ ಸುಂದರವಲ್ಲ ? ಎಂಬುದಾಗಿ ಬಲ್ಲವರು ಕೇಳಿದ್ದಾರೆ.

‘ಸುಂದರಕಾಂಡ’ ಎಂಬುದನ್ನು ರಂಗಪ್ರಿಯರ ಭಾಷೆಯಲ್ಲಿ ಹೇಳುವುದಾದರೆ, ಎರಡು ಬಗೆಯಲ್ಲಿ ಅರ್ಥೈಸಬಹುದು :
ಒಂದು, ‘ಸುಂದರನ ಕಾಂಡ’ ಅಂತ. ಇನ್ನೊಂದು ‘ಸುಂದರವಾದ ಕಾಂಡ’ ಎಂಬುದಾಗಿ. ಸುಂದರವಾದ ಕಾಂಡ ಎಂದರೆ, ಈ ಕಾಂಡದಲ್ಲಿ ಅನೇಕಾನೇಕ ರಸಗಳು, ಗುಣಗಳು, ವಿಶೇಷಗಳು ಇವೆ. ತುಂಬ ಚೆನ್ನಾಗಿದೆ. ಹಾಗಾಗಿ ಸುಂದರವಾದ ಕಾಂಡ ಇದು.
‌ ಅದು ಏನು ಎನ್ನುವುದನ್ನು ನೀವೇ ನೋಡ್ತೀರಿ, ಹೇಗೆ ಹೋಗ್ತದೆ ಅದು, ಈ ಒಂದು ಸುಂದರಕಾಂಡದ ನಡೆ, ಗೊತ್ತಿಲ್ಲದ ಊರಿಗೆ ಆಂಜನೇಯನ ಪ್ರಯಾಣ. ಗೊತ್ತಿಲ್ಲದ ದಾರಿಯಲ್ಲಿ ಗೊತ್ತಿಲ್ಲದ ಊರಿಗೆ, ತಾನೇ ಗೊತ್ತಿಲ್ಲದೇ ಇರುವವನು; ತನ್ನನ್ನು ತಾನು ಗೊತ್ತು ಮಾಡ್ಕೊಂಡು ಪ್ರಯಾಣ ಮಾಡ್ತಾನೆ. ಅಲ್ಲಿ ಹೋಗಿ ಹುಡುಕುತ್ತಾನೆ ಸೀತೆಯನ್ನು. ಹುಲ್ಲಿನ ರಾಶಿಯಲ್ಲಿ ಸೂಜಿಯನ್ನು ಹುಡುಕಿದ ಹಾಗೆ ಸೀತೆಯನ್ನು ರಾಕ್ಷಸ ಕೋಟಿಯ ಮಧ್ಯದಲ್ಲಿ ಹುಡುಕುತ್ತಾನೆ.

ಅತ್ಯದ್ಭುತವಾಗಿರುವ ಒಂದು ಶೋಧ ಕಾರ್ಯ ಅಲ್ಲಿ ನಡೆಯುವಂತದ್ದು. ಆಮೇಲೆ ಹನುಮಂತ ಏನು ಗುಪ್ತನಾಗಿ ಉಳಿಯೋದಿಲ್ಲ. ಅವನು ಪ್ರಕಟನಾಗ್ತಾನೆ. ತಾನು ಯಾರು ಎಂಬುದನ್ನು ಲಂಕೆಯ ರಾಜ ಮಾರ್ಗಗಳಲ್ಲಿ ಸಾರಿ ಸಾರಿ ಹೇಳಿ ಇಡೀ ಲಂಕೆಗೇ ಸವಾಲು ಕೊಟ್ಟು, ಲಂಕೆಯ ತಲೆ ಮೆಟ್ಟಿ ಅವನು ಮರಳ್ತಾನೆ. ಅಂತಹ ಅದ್ಭುತವಾದ ಒಂದು ಭಾಗ ಇದೆ ಅಲ್ಲಿ. ಹಾಗಾಗಿ ಸುಂದರವಾಗಿರತಕ್ಕಂಥ ಕಾಂಡವೂ ಹೌದು, ಹಾಗೆಯೇ ಸುಂದರನ ಕಾಂಡ! ಸುಂದರ – ರಾಮ, ಸುಂದರ – ಸೀತೆ, ಕಪಿಯೂ ಸುಂದರನಂತೆ. ಹನುಮಂತ ~ ನಿಜವಾಗಿಯೂ ಸುಂದರ ಅವನು. ಸುಂದರ ಶಬ್ದಕ್ಕೇ ‘ಕಪಿಮುಖ್ಯ’ ಎನ್ನುವ ಅರ್ಥವಿದೆ. ಹನುಮಂತನದು ಯಾವುದು ಸೊಬಗಲ್ಲ? ಯಾವುದು ಸೊಗಸಲ್ಲ? ಅದೆಲ್ಲವೂ ರಾಮಾರ್ಪಣ. ಅವನ ಎಲ್ಲ ಸೊಗಸು, ಎಲ್ಲ ಸಾಮರ್ಥ್ಯ, ರಾಮನಿಗೇ ಅರ್ಪಿತವಾಯಿತು. ಮತ್ತೆ ಯಾರಿಗೂ ಒದಗಲಿಲ್ಲ. ಹಾಗಾಗಿಯೇ ಆ ಒಂದು ಆತ್ಮವಿಸ್ಮೃತಿಯ ಶಾಪ ಅವನಿಗೆ ಬಂದಿದ್ದು. ಆ ಶಾಪ, ನಿಜವಾಗಿ ವರವದು. ಆ ಶಾಪಕ್ಕೆ‌ ಅರ್ಥ, ಹನುಮಂತನಲ್ಲಿ‌ ಏನಿತ್ತೋ ಅದೆಲ್ಲವೂ ರಾಮನಿಗೆ. ಹಾಗಾಗಿ, ಮೊದಲು ಅವನಿಗೆ ಗೊತ್ತೇ ಆಗಲಿಲ್ಲ ತಾನೇನು ಅನ್ನುವಂಥದ್ದು. ಯಾಕಂದರೆ, ಎಂಜಲಾಗಬಾರದು! ಸುಗ್ರೀವನ ಪೂರ್ವ ಜೀವನದಲ್ಲಿಯೂ ಕೂಡ ಹನುಮಂತನ ಸಾಮರ್ಥ್ಯ ಪ್ರಯೋಜನಕ್ಕೆ ಬರಲಿಲ್ಲ.

ಹಾಗಾಗಿ, ಆ ಹೊತ್ತಿನಲ್ಲಿ‌ ಅವನಿಗೆ ಎಚ್ಚರವಾಯಿತು ತಾನೇನು ಎನ್ನುವಂಥದ್ದು. ರಾಮನಿಗೆ ತನ್ನನ್ನು ತಾನು ಸಮರ್ಪಣೆ ಮಾಡಿಕೊಳ್ತಾನೆ.
ಸೀತೆ ಸುಂದರಿ ಎನ್ನುವಂಥದ್ದು‌ ಸಹಜವದು. ಮೂಲಪ್ರಕೃತಿ. ಆ ತತ್ತ್ವಕ್ಕೆ ಆಶ್ರಯವಾಗಿ ಇರುವಂಥದ್ದು ಪುರುಷ ತತ್ತ್ವ, ಪರಮಪುರುಷ ತತ್ತ್ವ. ಅದೇ ಶ್ರೀರಾಮ. ಸೌಂದರ್ಯ ತತ್ತ್ವದ ಮೂರ್ತಿಭಾವ ಸೀತೆ, ಆನಂದ ತತ್ತ್ವದ ಮೂರ್ತಿಭಾವ ರಾಮ, ಹನುಮಂತನೆಂದರೆ ಇದೆರಡರ ಸೇತು. ಹನುಮಂತನ ಆ ಒಂದು ಆವರಣವನ್ನು ನಾವೆಲ್ಲರೂ ಕಾಣೋಣ. ಪರದೆಯನ್ನು ಜಾಂಬವಂತ ಸರಿಸಿದ್ದಾನೆ. ನೋಡೋಣ ಹನುಮಂತ ಹೇಗೆ ಕಾಣ್ತಾನೆ ಎಂಬುದನ್ನು..

ಸೀತೆಯ ಪದವನ್ನು ಅನ್ವೇಷಿಸಲು ಹನುಮಂತ ಉದ್ದೇಶಿಸಿದ್ದಾನೆ. ಅದಕ್ಕಾಗಿ‌ ಗಗನದಲ್ಲಿ‌ ಯಾತ್ರೆ ಗೈಯಲು ಸಂಕಲ್ಪ‌ ಮಾಡಿದ್ದಾನೆ. ಇನ್ನೊಬ್ಬರು ಆ ಕಾರ್ಯವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂತಹ ದುಷ್ಕರ ಕಾರ್ಯವನ್ನು ಮಾಡಲು ಹನುಮನು ತನ್ನ ಕೊರಳು-ತಲೆಗಳನ್ನು ಎತ್ತಿ‌ ನಿಂತಾಗ ಮಹಾವೃಷಭದಂತೆ ಗೋಚರಿಸಿದನು.
ಆತ್ಮವಿಶ್ವಾಸದಿಂದ ಮೈತಿವಿದೆದ್ದನು.
ಅವನ ಅಂತಃಕರಣ ಆಗಸದಲ್ಲಿ ನೆಟ್ಟಿದೆ. ಹಾರಲು ಸರಿಯಾದ ಸ್ಥಳವನ್ನು ಆರಿಸಲು ಹಚ್ಚಹಸುರಾಗಿ ಜಲರಾಶಿಯಂತೆ ಶೋಭಿಸುತ್ತಿದ್ದ ಹುಲ್ಲುಗಾವಲಿನಲ್ಲಿ ಹನುಮಂತ ಸಂಚರಿಸ್ತಾನೆ, ಗಮನಿಸ್ತಾನೆ ಎಲ್ಲಿಂದ ಹಾರುವುದು? ಎಂದು.

‌ ಬಣ್ಣಬಣ್ಣದ ಧಾತುಗಳಿಂದ ಕೂಡಿದ ಮಹೇಂದ್ರ ಪರ್ವತವನ್ನು ನೋಡ್ತಾನೆ. ಹನುಮಂತನ ಅಂತಃಕರಣ ಭಾವೀ ಕಾರ್ಯಕ್ಕೆ ಸಿದ್ಧವಾಯಿತು. ಪ್ರಣಾಮಗಳನ್ನು ಸಲ್ಲಿಸಬೇಕಾದವರಿಗೆ ಪ್ರಣಾಮ ಸಲ್ಲಿಸ್ತಾನೆ ಹನುಮಂತ. ಎಲ್ಲಿಂದ ಲಂಘನ ಮಾಡಬೇಕೋ ಅಲ್ಲಿಗೆ ಬಂದು ನಿಂತು ‘ಮಂಗಲ’ವನ್ನು ಮಾಡ್ತಾ ಇದ್ದಾನೆ.
‌ಕಾರ್ಯಗಳು ಭಾರತೀಯರ ದೃಷ್ಟಿಯಿಂದ ಮಂಗಲಾದಿ, ಮಂಗಲಮಧ್ಯ, ಮಂಗಲಾಂತ್ಯದಿಂದ ಸಂಪನ್ನವಾಗಬೇಕು. ಭಗವತ್ ಸ್ಮರಣವನ್ನು ನಾವು ಮಾಡಬೇಕು. ಆ ಪದ್ಧತಿಗೆ ಅನುಸಾರವಾಗಿ ಸರ್ವ ಶಾಸ್ತ್ರಗಳ ಅಧ್ಯಯನ ಮಾಡಿಸಿದ ಸೂರ್ಯನಿಗೆ, ದೇವತೆಗಳ ದೊರೆಯಾಗಿರತಕ್ಕಂತಹ ಇಂದ್ರನಿಗೆ ವಂದಿಸ್ತಾನೆ. ತನ್ನನ್ನು ಸೃಜಿಸಿದ ಪವನದೇವನಿಗೆ ವಂದಿಸ್ತಾನೆ. ಮತ್ತು ಗೋಚರಾಗೋಚರವಾಗಿ ನಮ್ಮ ಬದುಕಿಗೆ ಶ್ರೇಯಸ್ಸನ್ನುಂಟು ಮಾಡತಕ್ಕಂತಹ ಅನೇಕಾನೇಕ ಶಕ್ತಿಗಳಿಗೆ ವಂದಿಸ್ತಾನೆ. ಬಳಿಕ ಲಂಘಿಸುವಂತಹ ಪ್ರಯಾಣದ ಮನಸ್ಸನ್ನು ಮಾಡ್ತಾನೆ.

ಮತ್ತೊಮ್ಮೆ ತನ್ನ ತಂದೆಗೆ ಪೂರ್ವಾಭಿಮುಖವಾಗಿ ಇನ್ನೊಂದು ಪ್ರಣಾಮವನ್ನ ಸಲ್ಲಿಸ್ತಾನೆ. ಬಳಿಕ ದಕ್ಷಿಣನಾದ ಹನುಮಂತನು ದಕ್ಷಿಣದಿಕ್ಕಿಗೆ ಪ್ರಯಾಣ ಮಾಡುವ ಸಲುವಾಗಿ ಬೆಳೆಯತೊಡಗಿದನು. ಅವನೂ ದಕ್ಷಿಣ, ಅವನು ಹೊರಟಿದ್ದೂ ಕೂಡ ದಕ್ಷಿಣಕ್ಕೆ. ದಕ್ಷಿಣ ಅಂದರೇನು? ಸಮರ್ಥ!

ರಾಮವೃದ್ಧಿಗಾಗಿ ತಾನು ವೃದ್ಧಿಸಿದ. ಹನುಮನ ಹೆಜ್ಜೆಹೆಜ್ಜೆಯಲ್ಲಿಯೂ ಸಮರ್ಪಣೆಯನ್ನು ಕಾಣಬಹುದು. ತಾನು, ತನ್ನದು ಎಂದು ಏನೆಲ್ಲ ಇದೆಯೋ ಅದೆಲ್ಲವೂ ರಾಮ ಸಮರ್ಪಿತ. ಹಾಗಾಗಿ ಸಾಗರೋಲ್ಲಂಘನದ ನಿಶ್ಚಯವನ್ನು ಮಾಡಿ, ಕಪಿವೀರರೆಲ್ಲರೂ ನೋಡುತ್ತಿರಲಾಗಿ, ಪರ್ವಕಾಲದಲ್ಲಿ ಸಮುದ್ರವು ಉಬ್ಬಿ, ಮುನ್ನುಗ್ಗಿ ಬರುವಂತೆ ಹನುಮಂತ ಬೆಳೆಯುತ್ತ ಇದಾನೆ. ವರ್ಧಿಸಿ ವರ್ಧಿಸಿ ಏನಾದ ಅಂದ್ರೆ ಆ ಶರೀರಕ್ಕೊಂದು ಅಳತೆಯೇ ಇರದೇ ಹೋಯಿತು. ಅಮೇಯ, ಅಪ್ರಮೇಯ. ಅಂತಹ ಶರೀರವುಳ್ಳವನಾಗಿ ಹನುಮಂತನು ತನ್ನ ಬಾಹುಗಳಿಂದ ಮತ್ತು ಚರಣಗಳಿಂದ ಪರ್ವತವನ್ನು ಪೀಡಿಸಿದನು. ಹನುಮಂತನ ಹಸ್ತ, ಪಾದದ ಆಘಾತಕ್ಕೆ ಸಿಲುಕಿ ನಲುಗಿ, ನಡುಗಿದೆ ಪರ್ವತ. ಪರ್ವತ ಕಂಪಿಸುವಾಗ ವೃಕ್ಷಗಳೂ ಕಂಪಿಸಿ ಪುಷ್ಪವೃಷ್ಟಿ ಆಯ್ತಂತೆ. ಒಂದು ಕ್ಷಣ ಹನುಮಂತ ಹೂವಿನ ಬೆಟ್ಟದಂತೆ ಕಂಡ. ಆ ಮಹಾಬಲಶಾಲಿಯ ಹಸ್ತ, ಪಾದಗಳ ಪೀಡನೆಗೊಳಪಟ್ಟ ಪರ್ವತವು ಧಾರಾಕಾರವಾಗಿ ನೀರು ಸುರಿಸಿತಂತೆ. ಪರ್ವತದ ಎಲ್ಲೆಡೆಯಿಂದ ನೀರಿನ ಬುಗ್ಗೆಗಳು ಎದ್ದವಂತೆ. ಅವುಗಳಿಗೆ ಹೊಂಬಣ್ಣ, ಬಿಳಿ ಬಣ್ಣ ಮತ್ತು ಕಪ್ಪು ಬಣ್ಣದ ಧಾತುಗಳು ಕರಗಿ ನೀರಿನಲ್ಲಿ ಮಿಶ್ರವಾಗಿ ಬಂದವು. ದೊಡ್ಡ ದೊಡ್ಡ ಶಿಲೆಗಳು ಕೆಳಗುರುಳಿ ಬಂದವಂತೆ.

ಮಹೇಂದ್ರ ಪರ್ವತದ ಗುಹೆಯೊಳಗಿನ ಪ್ರಾಣಿಗಳಿಗೆ ಏನಾಯಿತು ಎಂಬುದೇ ಗೊತ್ತಾಗದೇ ಒಟ್ಟಿಗೆ ದೊಡ್ಡ ಸ್ವರದಲ್ಲಿ ಕಿರುಚಿಕೊಂಡವು. ಪರ್ವತದ ಎಲ್ಲ ಪ್ರಾಣಿ ಪಕ್ಷಿಗಳು ಒಟ್ಟಿಗೇ ಕೂಗಿದಾಗ ಆ ಕೂಗು ಭೂಮಿ ಆಕಾಶಗಳನ್ನು ತುಂಬಿತು. ಮಹಾಸರ್ಪಗಳು ತಮ್ಮ ಹೆಡೆಗಳನ್ನು ಬಿಡಿಸಿ ಘೋರವಿಷವನ್ನು ಉಗುಳುವಾಗ ಬೆಂಕಿಯನ್ನು ಉಗುಳುತ್ತಾ ಬಂಡೆಯನ್ನು ಕಚ್ಚಿದವು. ಪರಿಣಾಮವಾಗಿ ಆ ಮಹಾಶಿಲೆಗಳೂ ಹೊತ್ತಿ ಉರಿದವಂತೆ. ಸಿಡಿದು ಸಾವಿರಾರು ಚೂರಾದವಂತೆ. ಆ ವಿಷದ ಪ್ರಮಾಣವನ್ನು ತಗ್ಗಿಸಲಿಕ್ಕೆ ಪರ್ವತದಲ್ಲಿದ್ದ ಯಾವ ಗಿಡಮೂಲಿಕೆಯಿಂದಲೂ ಸಾಧ್ಯವಾಗಲಿಲ್ಲ.

ಆ ಪರ್ವತದಲ್ಲಿ ವಿದ್ಯಾಧರರ ದೊಡ್ಡ ಗಡಣವೇ ಇತ್ತು. ವಿದ್ಯಾಧರರು ಎಂದರೆ ದೇವತೆಗಳ ಒಂದು ಪ್ರಬೇಧ. ತಪಸ್ವಿಗಳೂ ಕೂಡ ಅಲ್ಲಿ ವಾಸ ಮಾಡ್ತಾ ಇದ್ರು. ಭೂತಗಡಣಗಳು ಸೇರಿ ಈ ಪರ್ವತವನ್ನು ಸೀಳಿ ಹಾಕ್ತಿದಾವೆ ಅಂತ ಅಂದುಕೊಂಡರಂತೆ ಅವರು. ಪ್ರಳಯಕಾಲ ಬಂದು ಪಂಚಭೂತಗಳು ಕುಪಿತವಾಗಿ ಪರ್ವತವನ್ನು ಸೀಳಿ ಹಾಕುತ್ತಿವೆಯೇನೋ ಎನ್ನುವ ಭ್ರಮೆಯಲ್ಲಿ ಆಕಾಶಕ್ಕೆ ನೆಗೆದರಂತೆ ತಮ್ಮ ಸ್ತ್ರೀಯರೊಡಗೂಡಿ. ಬಂಗಾರದ ಪಾನ ಪಾತ್ರೆಗಳು, ಉತ್ತಮೋತ್ತಮವಾದ ಭಕ್ಷ್ಯಗಳು, ಕತ್ತಿ ಗುರಾಣಿಗಳ ಬಿಟ್ಟು ಆಕಾಶಕ್ಕೆ ಒಮ್ಮೆಲೇ ನೆಗೆದರು.

ಅವರು ಕೆಂಪು ಮಾಲೆಯನ್ನು ಹಾಕಿಕೊಂಡಿದ್ದಾರೆ. ಕೆಂಪಾದ ತಾವರೆಯನ್ನು ಹೋಲುವ ಕಣ್ಣನ್ನು ಉಳ್ಳವರಾಗಿದ್ದಾರೆ. ಪಾನದಿಂದ ಕಣ್ಣು ಇನ್ನೂ ಕೆಂಪಗಾಗಿದೆ. ಹೀಗೆ ಇವರೆಲ್ಲಾ ಆಕಾಶವನ್ನು ಸೇರಿ ಅಲ್ಲಿ ನಿಂತಿದ್ದಾರೆ. ಆ ಸ್ತ್ರೀಯರು ಸರ್ವಾಭರಣಭೂಷಿತೆಯರು. ಅವರು ಆಕಾಶದಲ್ಲಿ ಪತಿಗಳೊಡನೆ ವಿಸ್ಮಿತರಾಗಿ,ನಗುಮುಖದಿಂದ ನಿಂತಿದ್ದಾರೆ. ಅಲ್ಲಿಂದ ಪರ್ವತವನ್ನು ಅವಲೋಕನ ಮಾಡುತ್ತಿದ್ದಾರೆ. ಆಕಾಶದಲ್ಲಿ ನಿರಾಲಂಬನವಾಗಿ ನಿಲ್ಲುವ ವಿದ್ಯೆಯನ್ನು ಪ್ರದರ್ಶನಮಾಡುತ್ತಾ ಗಗನದಲ್ಲಿ ನಿಂತು ಭೂಮಿಯನ್ನು ನೋಡುತ್ತಿರುವಾಗ ಆಕಾಶದಿಂದ ಅವರ ಕಿವಿಗೆ ಭಾವಿತಾತ್ಮರಾದ ಋಷಿಗಳ, ಸಿದ್ಧ-ಚಾರಣರ ವಾಣಿ ಕೇಳಿಬಂತು. ಅವರೂ ಗಗನದಲ್ಲಿಯೇ ಇದ್ದಾರೆ. ಅವರು ಏನಾಗುತ್ತಿದೆಯೆಂಬ ವಿಷಯವನ್ನು ಹೇಳುತ್ತಿದ್ದಾರೆ. ಪರ್ವತಾಕಾರನಾಗಿರುವ ಮಾರುತಾತ್ಮಜ ಹನುಮಂತನು ಮಹಾವೇಗವನ್ನು ಹೊಂದಿದವನಾಗಿ ಸಮುದ್ರವನ್ನು ಲಂಘಿಸಲು ಹೊರಟಿದ್ದಾನೆ. ಇದು ರಾಮನಿಗಾಗಿ, ಸುಗ್ರೀವನಿಗಾಗಿ. ಇಂತಹ ದುಷ್ಕರವಾದ ಕರ್ಮವನ್ನು ಮಾಡಲು ಹನುಮಂತನು ಹೊರಟಿದ್ದಾನೆ. ಸಮುದ್ರದ ಆಚೆಯ ದಡವು ದುಷ್ಪ್ರಾಪ್ತ. ಅಲ್ಲಿಂದ ಲಂಕೆಗೆ ನೌಕಾಮಾರ್ಗವಿಲ್ಲವೆಂದು ಹನುಮಂತನೇ ಹೇಳಿದ್ದಾನೆ. ಯಾರಿಗೆ ಗಗನಸಂಚಾರದ ಸಾಮರ್ಥ್ಯವಿದೆಯೋ ಅಂಥವರು ಮಾತ್ರ ಹೋಗಲು ಸಾಧ್ಯ. ಅಂತಹ ದಕ್ಷಿಣ ತೀರಕ್ಕೆ ಹೋಗಲು ಹನುಮಂತನು ಬಯಸಿದ್ದಾನೆ ಎಂಬುದಾಗಿ ಸಿದ್ಧ-ಚಾರಣರು ಘೋಷಣೆ ಮಾಡುತ್ತಿರುವುದನ್ನು ಕೇಳಿದ ವಿದ್ಯಾಧರರು
ಹನುಮಂತನನ್ನು ಕಂಡರು. ಹನುಮಂತನು ಪರ್ವತದಲ್ಲಿ ಪರ್ವತ. ಮಹೇಂದ್ರದಲ್ಲಿ ಮಾರುತಿ ಪರ್ವತ. ಅಂತಹ ಅಪ್ರಮೇಯನನ್ನು ಧನ್ಯರಾದ ವಿದ್ಯಾಧರರು ಕಂಡರು.

ಅತ್ತ ಹನುಮಂತ ಯಾವುದರ ಪರಿವೆಯೂ ಇಲ್ಲದೇ ಲಂಘನದ ಸಿದ್ಧತೆಯನ್ನು ಮಾಡುತ್ತಿದ್ದಾನೆ. ಅವನಲ್ಲಿ ರೋಮಾಂಚನ ಏರ್ಪಟ್ಟಿತು. ಹೊರಟಿರುವಂಥದ್ದು ಮಹತ್ಕಾರ್ಯ. ಹನುಮಂತನಂಥವರು ಹುಟ್ಟಲು ಯುಗಯುಗಗಳೇ ಕಳೆಯಬೇಕು. ಅಂತಹ ಹನುಮಂತನ ಬದುಕಿನ ಸ್ವರ್ಣಕ್ಷಣವಿದು. ಮಹಾಮೇಘದಂತೆ ಘರ್ಜಿಸಿದನು. ನಂತರ ರೋಮಭರಿತವಾದ ಲಾಂಗೂಲವನ್ನು ಕ್ರಮವಾಗಿ ಸುತ್ತಿ ಗಗನದಲ್ಲಿ ಎಸೆದನು. ಆ ಹನುಮಂತನು ಗರುಡನಂತೆ ಕಂಡರೆ ಅವನು ಕಚ್ಚಿಕೊಂಡ ಹಾವಿನಂತೆ ಬಾಲವು ಕಂಡಿತು. ಬಳಿಕ ದೊಡ್ಡ ಪರಿಘಾಯುಧದಂತಿರುವ ತನ್ನೆರಡೂ ಬಾಹುಗಳನ್ನು ಸ್ತಂಭನಗೊಳಿಸಿದನು. ತನ್ನ ಸೊಂಟವನ್ನು ಸ್ವಲ್ಪ ಬಾಗಿಸಿದನು. ತನ್ನ ಕಾಲುಗಳನ್ನು ಸಂಕುಚಿತಗೊಳಿಸಿದನು. ತನ್ನ ಕೊರಳನ್ನು, ಭುಜಗಳನ್ನು ಒಳಗೆ ಸೆಳೆದುಕೊಂಡನು. ಅಂತರ್ಮುಖತೆಯ ಪರಾಕಾಷ್ಠೆ ಇದು. ಹನುಮಂತನು ತೇಜಸ್ಸನ್ನು, ವೀರತ್ವವನ್ನು ಪ್ರವೇಶಿಸಿದನು. ಕಣ್ಣನ್ನು ಗಗನದಲ್ಲಿ ನೆಟ್ಟು ದೂರದ ತನ್ನ ಮಾರ್ಗವನ್ನು ಅವಲೋಕನ ಮಾಡಿದನು.
ತನ್ನ ಪ್ರಾಣಗಳನ್ನು ಹೃದಯದಲ್ಲಿ ನಿರೋಧ ಮಾಡಿದನು. ತನ್ನ ಅಂತರಾಕಾಶವನ್ನು ಅವಲೋಕಿಸಿದನು. ತನ್ನ ಕಾಲುಗಳನ್ನೊಮ್ಮೆ ಗಟ್ಟಿಯಾಗಿ ಊರಿ, ಕಿವಿಗಳನ್ನು ಒಳಸೆಳೆದು ಇನ್ನೇನು ಹಾರಬೇಕು ಎನ್ನುವಾಗ ವಾನರರನ್ನು ಉದ್ದೇಶಿಸಿ ಒಂದೆರಡು ಮಾತುಗಳನ್ನಾಡಿದನು.

ರಾಮ ಬಿಟ್ಟ ಬಾಣವು ವಾಯುವೇಗದಲ್ಲಿ ಸಾಗುವಂತೆ ನಾನು ಲಂಕೆಯೆಡೆಗೆ ತೆರಳುವೆ. ರಾಮಬಾಣವಾಗಿದ್ದರಿಂದ ಅದು ಗುರಿ ತಲುಪಿಯೇ ತಲುಪುತ್ತದೆ. ಅವನಲ್ಲಿ ಆ ಭಾವವಿದೆ, ವಿನಯವಿದೆ ಏಕೆಂದರೆ ಬಾಣಕ್ಕೆ ಸ್ವಂತಶಕ್ತಿಯಿಲ್ಲ. ಯಾರು ಆ ಬಾಣವನ್ನು ಪ್ರಯೋಗಿಸುತ್ತಾನೋ ಅವನ ಶಕ್ತಿಯಿಂದ ಬಾಣವು ಮುಂದೆ ಹೋಗುವಂಥದ್ದು. ಹನುಮಂತನು ರಾಮನ ಶಕ್ತಿಯಿಂದ ನಾನು ಸಮುದ್ರಲಂಘನ ಮಾಡುವಂಥದ್ದು ಎಂದಿದ್ದಾನೆ. ಅಲ್ಲಿ ಬುದ್ಧಿಯೂ ಇದೆ. ಬಾಣವು ಗುರಿಯನ್ನು ತಲುಪಿದರೆ ಅದು ತನ್ನ ಹೆಗ್ಗಳಿಕೆಯನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ತನ್ನ ಗುರಿಯಿಲ್ಲ. ಹಿಂದಿರುವವನ ಗುರಿಯೇ ಗುರಿ. ಹನುಮಂತನ ಶರಣಾಗತಿ ಯಾವ ಪ್ರಮಾಣದಲ್ಲಿದೆ ಎಂದು ಇದೇ ಉದಾಹರಣೆಯಿಂದ ನೋಡಬಹುದು.
ಇದು ನಿಜವಾದ ಹನುಮಂತನ ಹನುಮತ್ವ. ಒಂದು ವೇಳೆ ಲಂಕೆಯಲ್ಲಿ ಸೀತೆಯನ್ನು ಕಾಣದಿದ್ದರೆ ಇದೇ ವೇಗದಿಂದ ದೇವಲೋಕಕ್ಕೆ ಹೋಗುತ್ತೇನೆ. ಅಲ್ಲಿಯೂ ಸೀತೆಯನ್ನು ಕಾಣದಿದ್ದರೆ ರಾವಣನೆಂಬ ಪಶುವನ್ನು ಕಟ್ಟಿ ಸೆಳೆದು ತರುತ್ತೇನೆ.

ಮಹೇಂದ್ರ ಪರ್ವತವನ್ನು ಹನುಮಂತನು ಕಾಲಿನಿಂದ ತುಳಿದು ನೆಗೆದಾಗ ಕಾಡಿಗೆ ಕಾಡೇ ಹನುಮಂತನ ಹಿಂದೆ ಎದ್ದು ಬಂತು. ಮರದ ರೆಂಬೆ-ಕೊಂಬೆ ಸಮೇತವಾಗಿ ಅವನ ಹಿಂದೆ ಬಂದಿತು. ಅದು ದೊಡ್ಡ ವೃಕ್ಷಗಳ ಮೆರವಣಿಗೆಯಂತೆ ತೋರಿತು. ಹೀಗೆ ಹನುಮಂತ ಮಹೇಂದ್ರ ಪರ್ವತಕ್ಕೆ ಭೇಟಿಯಿತ್ತು ಲಂಕೆಯ ಕಡೆಗೆ ಹೊರಟನು. ಸೇನಾಪತಿಯು ಯುದ್ಧಕ್ಕೆಂದು ಹೊರಟಾಗ ಸೇನೆಯು ಬಂದಂತೆ ಕಂಡಿತು.
ಆಗ ಹನುಮಂತನ ಅದ್ಭುತವಾದ ದರ್ಶನವಾದಂತಿತ್ತು. ಸ್ವಲ್ಪ ಹೊತ್ತು ಬೃಹದಾಕಾರ ಹನುಮಂತ ಮತ್ತು ಅವನ ಸುತ್ತ-ಮುತ್ತ ಮರಗಳು ಕಂಡವು ; ಮುಂದೆ ಸಾಗಿದಂತೆ ನಂತರದಲ್ಲಿ ಸುಮಾರು ಭಾರವಾದ ಮರಗಳು ಸಮುದ್ರದ ನೀರಿನಲ್ಲಿ ಮುಳುಗಿ ಹೋದವು. ಆದರೆ ಅವನ ಮೇಲೆ ಬಿದ್ದಿದ್ದ ಬಣ್ಣ ಬಣ್ಣದ ಹೂವುಗಳು, ಚಿಗುರುಗಳು ದೊಡ್ಡ ಬೆಟ್ಟದಲ್ಲಿದ್ದ ಸಾವಿರಾರು ಮಿಂಚುಹುಳಗಳಂತೆ ಗೋಚರಿಸಿದವು. ಜೊತೆಗೆ ಬರುತ್ತಿದ್ದ ಒಂದೊಂದೇ ಮರ – ಹೂವುಗಳು ಉದುರಲಾರಂಭಿಸಿದವು. ಹೀಗೆ ಬಗೆ ಬಗೆಯ ಹೂವುಗಳಿಂದ ಕೂಡಿದ್ದ ಹನುಮಂತನ ಜೊತೆಗಿದ್ದ ಹೂವುಗಳು ಸಮುದ್ರಕ್ಕೆ ಬಿದ್ದಾಗ ; ಸಮುದ್ರವು ನೀಲಾಕಾಶದಲ್ಲಿರುವ ತಾರೆಗಳಂತೆ ಕಂಡಿತು.

ಎರಡು ಕೈಗಳನ್ನು ನೀಳವಾಗಿ ಚಾಚಿರುವ ಹನುಮಂತನನು ನೋಡಿದರೆ ಒಂದು ದೊಡ್ಡ ಪರ್ವತದಿಂದ ಎರಡು ಮಹಾಸರ್ಪಗಳು ಹೆಡೆ ಬಿಚ್ಚಿ ನಿಂತಂತೆ ಕಾಣುತ್ತಿತ್ತು. ನೀಡಿರುವ ಎರಡು ಕೈಗಳು ಸಮುದ್ರವನ್ನೇ ಆಪೋಶನ ಮಾಡುವಂತಿತ್ತು. ಆತನ ಕಣ್ಣುಗಳು ಹೊಳೆಯುತ್ತಿದ್ದವು ಮತ್ತು ನೋಡಿದರೆ ದೊಡ್ಡ ಪರ್ವತದ ಎರಡು ಭಾಗಗಳಲ್ಲಿ ಬೆಂಕಿಯಿದ್ದಂತೆ ಮತ್ತು ಕಣ್ಣುಗಳೆರಡು ಕೋಲ್ಮಿಂಚನ್ನು ಸೂಸುವಂತಿತ್ತು. ಅಂತಹ ಕಾಂತಿ ಪಿಂಗಲ ವರ್ಣದ ಕಣ್ಣುಗಳು ಅವನದಾಗಿತ್ತು. ಬೃಹದಾಕಾರ ಶರೀರ, ವೃತ್ತಾಕಾರದ ಕಣ್ಣುಗಳು ಕಂಗೊಳಿಸುತ್ತಿದ್ದವು.

ಕೆಂಪು ಮೂಗು, ನೋಡಿದರೆ ಸಂಧ್ಯಾಕಾಲದಲ್ಲಿ ಸೂರ್ಯಮಂಡಲವನ್ನು ನೋಡಿದಂತೆ ತೋರುತ್ತಿತ್ತು. ಹಾಗೇ ಬಾಲವು ಇಂದ್ರ ಧ್ವಜದಂತೆ ಮತ್ತು ಎರಡು ಭುಜಗಳ ಬಗಲ/ಕಂಕುಳಗಳ ನಡುವೆ ಹಾದು ಹೋಗುತ್ತಿದ್ದ ಗಾಳಿಯ ಶಬ್ಧವು ಗಾಳಿಯು ಘರ್ಜಿಸಿದಂತಿತ್ತು. ಹೀಗೆ ಕೆಲವರು ಹನುಮಂತನನ್ನು ಉತ್ತರದಿಂದ ದಕ್ಷಿಣಕ್ಕೆ ಲಂಕೆಯತ್ತ ತೆರಳುವ ಬಾಲವುಳ್ಳ ಉಲ್ಕೆಯಂತೆ, ಚಲಿಸುತ್ತಿದ್ದ ಸೂರ್ಯನಂತೆ ಗೋಚರಿಸುತ್ತಿದ್ದನೆಂದು ವ್ಯಾಖ್ಯಾನಿಸಿದ್ದಾರೆ.

ಮೇಲಿನಿಂದ ಸಾಗುತ್ತಿರುವಾಗ ಹನುಮಂತನ ನೆರಳು ಕಾಣುವಾಗ ನೌಕೆಯಂತೆ ಕಂಡಿತು. ಹೀಗೆ ಸಮುದ್ರದ ಯಾವ ಯಾವ ಭಾಗಕ್ಕೆ ಹನುಮಂತ ಸಾಗಿದನೋ ಅಲ್ಲೆಲ್ಲಾ ಹುಚ್ಚು ಹಿಡಿಯುವಂತೆ ಅಂದರೆ ಅವನು ಸಾಗುತ್ತಿದ್ದ ವೇಗಕ್ಕೆ ಸಮುದ್ರವು ವಿಚಿತ್ರವಾಗಿ ವರ್ತಿಸುತ್ತಿತ್ತು ; ಕೆಲವೊಮ್ಮೆ ಸಮುದ್ರದ ಅಲೆಗಳು ಮೇಲೆದ್ದು ಎದೆಗೆ ಅಪ್ಪಳಿಸುತ್ತಿದ್ದವು. ಹೀಗೆ ಅಪ್ಪ-ಮಗ ಸೇರಿ ಕಡಲನ್ನೇ ನಡುಗಿಸಿದಂತಿತ್ತೆಂದು ರಾಮಾಯಣದಲ್ಲಿ ವಾಲ್ಮೀಕಿಗಳು ಉಲ್ಲೇಖಿಸಿದ್ದಾರೆ.

ಭೂಮಿ-ಆಕಾಶಗಳನ್ನು ಚದುರಿ ಚೆಲ್ಲುವವನಂತೆ ಆ ಕ್ಷಣದಲ್ಲಿ ಹನುಮಂತನು ಗೋಚರಿಸಿದನು. ಹನುಮಂತನ ನೆರಳು ೩೦ ಯೋಜನ ಉದ್ದ ೧೦ ಯೋಜನ ಅಗಲ ವ್ಯಾಪಿಸಿತ್ತು. ವಾಯುದೇವನು ಮೋಡವನು ಎಳೆದುಕೊಂಡು ಹೋಗುವಂತೆ ಹನುಮಂತ ನೆರಳನ್ನು ಎಳೆದುಕೊಂಡು ಹೋಗುತ್ತಿದ್ದ. ರೆಕ್ಕೆಯಿಲ್ಲದ ಪಕ್ಷಿಯಂತೆ ಆ ಮಹಾ ಕಪಿಯು ಗಗನದಲ್ಲಿ ಕಂಗೊಳಿಸುತ್ತಿದ್ದ. ಆಗ ಕೆಲವೊಮ್ಮೆ ಸಮುದ್ರವೇ ದೋಣಿಯಾದಂತೆ ಕಂಡಿತು.

ಪಕ್ಷಿಗಳ ಮಧ್ಯೆ ಸಾಗುವ ಪಕ್ಷಿ ರಾಜನಂತೆ, ಆಗಸದಲ್ಲಿನ ಚಂದ್ರನಂತೆ, ಮೋಡಗಳ ಮಧ್ಯೆ ಸಾಗುವಾಗ ಮೋಡಗಳ ನಡುವೆ ಒಮ್ಮೆ ಗೋಚರಿಸಿ ಮತ್ತೊಮ್ಮೆ ಮರೆಯಾಗಿ ಸಾಗುತ್ತಿದ್ದ ಹನುಮಂತನನು ಕಂಡು ; ಏತನ್ಮಧ್ಯೆ ದೇವವೃಂದವು ಸಂತುಷ್ಟಗೊಂಡು ಪುಷ್ಪವೃಷ್ಟಿಯನು ಹರಿಸಿದರು. ಮಾರುತಿಯು ಮಾರುತವನ್ನು ರಾಮ ಕಾರ್ಯಾರ್ಥವಾಗಿ ಸೇವಿಸಿದಂತೆ ಸೂರ್ಯನು, ವಾಯುವು ಸೇವಿಸಿದರು, ಋಷಿಗಳು ಹನುಂತನನು ಸ್ತುತಿಸಿದರು, ಅಸಾಧ್ಯವಾದ ಆ ಬಲವನ್ನು ಕಂಡು ದೇವ ಗಂಧರ್ವರು ಹಾಡಿದರು , ದೇವತೆಗಳು, ರಾಕ್ಷಸರಾದಿಯಾಗಿ ಹಾಡಿದರು. ಹೀಗೆ ಲಂಕೆಗೆ ಮೃತ್ಯುವೆಂಬುದು ವಿಶ್ವರೂಪವನು ತಾಳಿ ಬರುತಿರುವಾಗ ರಾವಣನಿಗದು ಗೊತ್ತೇ ಆಗಲಿಲ್ಲ.

ಬಗೆ ಬಗೆಯ ಪ್ರಜ್ಞೆಯುಳ್ಳ ವಿಶಿಷ್ಟ ಪಕ್ಷಿಗಳು ಕೂಡ ಹನುಮಂತನನ್ನು ಸ್ತುತಿಸಿದರು. ಆ ಕಪಿ ವೀರನು ಕ್ರಮವನ್ನು ವಿಕ್ರಮ ಮಾಡಿ ; ಅಂದರೆ ಆಯಾಸ, ಬಳಲಿಕೆಯನ್ನು ಗೆದ್ದು ಪ್ರಯಾಣವನ್ನು ಮಾಡುತ್ತಿರುವ ಹನುಮನ ಸ್ತುತಿಯನ್ನು ಇಡೀ ಪ್ರಪಂಚವು ಮಾಡುತ್ತಿತ್ತು. ಇದ್ಯಾವುದರ ಗಮನವಿಲ್ಲದೇ ಹನುಮಂತನು ರಾಮಕಾರ್ಯದಲ್ಲಿ ಸಾಗಿದನು.
ಇದೆಲ್ಲದರ ನಡುವೆ ಒಂದು ಹಿತವಾದ ವಿಘ್ನ ಬಂದಿತು. ಆ ವಿಘ್ನ ಏನು ಎಂಬುದಾಗಿ ಮುಂದಿನ ಕಥಾ ಪ್ರವಚನದಲ್ಲಿ ಕೇಳೋಣ

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments