ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಕೋಪದ ಮೂಲ ಬಲವಲ್ಲ. ಎಷ್ಟೋ ಬಾರಿ ಕೋಪದ ಮೂಲ ಅಸಹಾಯಕತೆ, ಸೋತೆನೆಂಬ ಭಾವ. ಅದು ಕೋಪವನ್ನು ಉಂಟು ಮಾಡ್ತದೆ. ತಾಯಿ ಸಮಾಧಾನವಾಗಿ ಹೇಳಿದ್ರೆ ಮಗು ಕೇಳ್ತದೆ ಅಂತಾದ್ರೆ ತಾಯಿ ಕೋಪ ಮಾಡುವ ಪ್ರಮೇಯವೇ ಇಲ್ಲ. ಸೋತೆನೆನಿಸಿದಾಗ ತಾಯಿ ಕೋಪ ಮಾಡ್ತಾಳೆ. ಯಾರಾದರೂ ಹಾಗೆಯೇ, ತಾಯಿಯಾದರೂ ಕೂಡ ಹಾಗೆಯೇ, ಆತತಾಯಿಯಾದರೂ ಕೂಡ ಹಾಗೆಯೇ.
ಈಗ ರಾವಣನಿಗೆ ಕೋಪ ಬಂದಿದೆ. ಕೋಪ ಏಕೆ ಬಂದಿದೆ? ಅಂದರೆ ಗಾಬರಿಯಾಗಿದೆ. ತಾನೇ ಶುಕ ಸಾರಣರನ್ನು ರಾಮನೆಡೆಗೆ ಕಳುಹಿಸಿ, ಇಡೀ ವರ್ತಮಾನವನ್ನು ತಾನೇ ತೆರೆಸಿಕೊಂಡು, ಅದನ್ನ ಕೇಳಿದ ಮೇಲೆ ತಾನೇ ಗಾಬರಿಗೊಂಡು ತಾನೇ ಅವರ ಮೇಲೆ ಕೋಪ ಮಾಡ್ತಕ್ಕಂಥಾ ಸ್ವಯಂಕೃತಿಯ ಮಾಲಿಕೆ!! ಶುಕನು, ಸಾರಣನು ತೋರಿಕೊಟ್ಟ ಆ ವಾನರ ಯೂಥಪಾಲರನ್ನು ವೀಕ್ಷಿಸಿ, ಮಹಾವೀರನಾದ ಲಕ್ಷ್ಮಣನನ್ನು ಕಂಡು, ರಾಮನ ಹತ್ತಿರ ನಿಂತಿರ್ತಕ್ಕಂತ ತನ್ನದೇ ತಮ್ಮ ವಿಭೀಷಣನನ್ನು ನೋಡಿ, ಸಮಸ್ತ ವಾನರರ ಅಧಿಪತಿಯಾದ ಭೀಮವಿಕ್ರಮನಾದ ಸುಗ್ರೀವನನ್ನು ಕಂಡು, ಗವಯ, ಗವಾಕ್ಷ, ಮೈಂದ, ದ್ವಿವಿದ, ಬಲಶಾಲಿಯಾದ ಅಂಗದನನ್ನು ಕಂಡು, ವಿಕ್ರಮಿ ಹನುಮಂತನನ್ನೂ ಕಂಡು, ದುರ್ಜಯನಾದ ಜಾಂಬವಂತನನ್ನೂ ಕಂಡು, ಸುಷೇಣ, ಕುಮುದ, ನೀಲ-ನಲರನ್ನು ಕಂಡು ಗಾಬರಿಗೊಂಡನು, ಉದ್ವೇಗಕ್ಕೊಳಗಾದನು ರಾವಣ. ಹಾಗಾಗಿ ಸಿಟ್ಟುಬಂತು. ಯಾರ ಮೇಲೆ ತೀರಿಸಿಕೊಳ್ಬೇಕು? ರಾಮನ ಮೇಲೆ ತೀರಿಸುವ ಪರಿಸ್ಥಿತಿ ಇಲ್ಲ, ಹಾಗಾಗಿ ಶುಕ-ಸಾರಣರ ಮೇಲೆ ತೀರಿಸ್ತಕ್ಕಂಥದ್ದು.

ಸಿಟ್ಟು ಆವೇಗದ ಮರಿ!
ಹೇಳಿ ಮುಗಿಸುವವರೆಗೆ ಸುಮ್ನಿದ್ದಾನೆ, ಇರಬೇಕಾಗಿದೆ. ಹೇಳುವುದು ಪೂರ್ತಿಯಾದ ಮೇಲೆ ಬೈಯ್ಯಲಿಕ್ಕೆ ಶುಕ-ಸಾರಣರಿಗೆ ಶುರುಮಾಡಿದ. ಪಾಪ, ಅವರಿಬ್ಬರು ತಲೆ ತಗ್ಸಿ ನಿತ್ಕೊಂಡಿದ್ದಾರೆ. ಕೆಟ್ಟ ಮಾತುಗಳನ್ನು ಆಡ್ತಾ ಇದ್ದಾನೆ, ಧ್ವನಿ ಕೋಪದಿಂದ ನಡುಗ್ತಾ ಇದೆ.
‘ನನ್ನ ಅನ್ನ ತಿನ್ನುವವರು ನೀವು, ನಾನು ಸಂಬಳ ಕೊಡೋದು ನಿಮಗೆ. ಹೀಗಿರುವಾಗ ಹೇಗೆ ರಾಜನಾದ ನನಗೆ ಅಪ್ರಿಯವಾದ ಮಾತುಗಳನ್ನಾಡಿದಿರಿ?’
‘ನಿಗ್ರಹಕ್ಕೂ ಅನುಗ್ರಹಕ್ಕೂ ಪ್ರಭು ನಾನು. ನನ್ನ ವೈರಿಗಳಾದ ರಾಮ-ಲಕ್ಷ್ಮಣರು, ವಾನರರು ಯುದ್ಧಕ್ಕೋಸ್ಕರ ಬರ್ತಿದ್ದಾರೆ ಲಂಕೆಯ ಮೇಲೆ, ಅವರ ಸ್ತೋತ್ರ ಮಾಡ್ತೀರಾ ನನ್ನ ಮುಂದೆ? ನೀವು ಸುಮ್ಮನೇ ಆಚಾರ್ಯರನ್ನು, ಗುರುಗಳನ್ನು, ವೃದ್ಧರನ್ನು ಸೇವೆ ಮಾಡಿದ್ದು. ರಾಜಶಾಸ್ತ್ರಗಳ ಸಾರವು ಯಾವುದೋ ಅದು ನಿಮಗಿನ್ನೂ ಸಿಕ್ಕಿಲ್ಲವಲ್ಲ ಅಥವಾ ಇನ್ನೂ ಅರ್ಥ ಮಾಡಿಕೊಳ್ಳಲಿಲ್ಲವಲ್ಲ! ನಿಮ್ಮಂತಹ ಮೂರ್ಖ ಸಚಿವರನ್ನು ಹೊಂದಿದ ನಾನು ಇನ್ನೂ ಬದುಕಿದ್ದೇನೆ ಎಂಬುದೇ ಅದೃಷ್ಟ. ನಿಮಗೇನು ಸಾವಿನ ಭಯವಿಲ್ಲವಾ, ನನ್ನ ಮುಂದೆ ಹೀಗೆಲ್ಲ ಮಾತನಾಡಲಿಕ್ಕೆ? ಎಷ್ಟು ನೀವು ಅಪ್ರಿಯವಾದ ಮಾತುಗಳನ್ನು ಆಡ್ತಾ ಇದ್ದೀರಿ?
ಈ ನಾಲಿಗೆಗೆ ಮನೆ-ಮಾರು, ಮುತ್ತು-ರತ್ನಗಳನ್ನು ಕೊಡುವ ಶಕ್ತಿಯೂ ಇದೆ, ಮೃತ್ಯುವನ್ನು ಕೊಡುವ ಶಕ್ತಿಯೂ ಇದೆ. ಅಂತಹಾ ನಾಲಿಗೆಯಿದು. ಕಾಡಿನಲ್ಲಿ ಕಾಡ್ಗಿಚ್ಚಿಗೆ ಸಿಕ್ಕಿದ ಮರಗಳಾದರೂ ಬದುಕಿಯಾವು, ರಾಜನ ಕೋಪಕ್ಕೆ ಸಿಕ್ಕಿದ ಸೇವಕರು ಬದುಕುವುದಿಲ್ಲ. ಶತ್ರುಪಕ್ಷದ ಪ್ರಶಂಸಕರು ನೀವು. ಕೊಂದೇ ಬಿಡ್ತಿದ್ದೆ, ಆದರೆ ಹಿಂದೆ ತುಂಬಾ ಸೇವೆ ಮಾಡಿದ್ದೀರಿ, ಉಪಕಾರಗಳನ್ನು ಮಾಡಿದ್ದೀರಿ. ಹಾಗಾಗಿ ನನ್ನ ಕ್ರೋಧವು ಮೃದುವಾಗುತ್ತಿದೆ. ತೊಲಗಿ, ಹಾಳಾಗಿಹೋಗಿ ನನ್ನ ಕಣ್ಣಿನಿಂದ ದೂರ ಹೋಗಿ. ನಿಮ್ಮನ್ನು ಕೊಲ್ಲದಿದ್ದರೂ ಸತ್ತ ಹಾಗೇ, ಯಾಕಂದ್ರೆ ನನ್ನ ಮೇಲೆ ಪ್ರೀತಿ ಇಲ್ವಲ್ಲ ನಿಮಗೆ.

ರಾವಣನ ಮಾತುಗಳನ್ನು ಕೇಳಿ ಶುಕ-ಸಾರಣರಿಗೆ ನಾಚಿಕೆಯಾಯ್ತಂತೆ. ಅವರು ಶಿಷ್ಟಾಚಾರವನ್ನು ಪರಿಪಾಲಿಸಿ, ರಾಜನಿಗೆ ಹೊರಡುವಾಗ ನಮಸ್ಕಾರ ಮಾಡಿ ಹೊರಟು ಹೋದರು. ಆಮೇಲೆ ಮಹೋದರನೆಂಬ ರಾಕ್ಷಸ ನಾಯಕನನ್ನು ರಾವಣ ಕರೀತಾನೆ, ಬೇರೆ ಗುಪ್ತಚರರನ್ನು ಕರೆಸು ಇಲ್ಲಿಗೆ ಅಂತ ಹೇಳ್ತಾನೆ. ಅಂದ್ರೆ, ಶುಕ-ಸಾರಣರು ಹೇಳಿದ್ದರ ಮೇಲೆ ನಂಬಿಕೆಯಿಲ್ಲ, ತಿಳಿಯುವ ಕುತೂಹಲ ಮುಗಿದೇ ಇಲ್ಲ. ಮಹೋದರನು ಬೇರೆ ಗುಪ್ತಚರರನ್ನು ಕರ್ಕೊಂಡು ಬರ್ತಾನೆ. ಅವರೆಲ್ಲ ಬರ್ತಾರೆ, ರಾವಣನಿಗೆ ನಮಸ್ಕಾರ ಮಾಡ್ತಾರೆ, ಜಯಕಾರ ಮಾಡ್ತಾರೆ.
ಅವರಿಗೆ ರಾವಣನು ಹೇಳಿದನಂತೆ, ‘ರಾಮನ ಬಳಿಗೆ ಹೋಗಿ, ಅವನೇನು ಮಾಡ್ತಾನೆ ನೋಡಿ, ಅವನಿಗೆ ಯಾರು ಹತ್ತಿರ? ಯಾರಿಗೆ ರಾಮನ ಮೇಲೆ ಪ್ರೀತಿಯಿದೆ? ಅದನ್ನು ಗಮನಿಸಿ. ರಾಮ ಹೇಗೆ ಮಲಗ್ತಾನೆ? ಹೇಗೆ ಏಳ್ತಾನೆ? ಮತ್ತೇನು ಮಾಡ್ತಾನೆ? ಎಲ್ಲವನ್ನೂ ಚೆನ್ನಾಗಿ ನೋಡಿ ಬರಬೇಕು. ಯಾಕೆಂದ್ರೆ, ಗುಪ್ತಚರರ ಮೂಲಕ ಶತ್ರುಗಳ ಸಾಮರ್ಥ್ಯ-ದೌರ್ಬಲ್ಯಗಳನ್ನು ತಿಳಿದರೆ ಸ್ವಲ್ಪ ಪ್ರಯತ್ನದಲ್ಲೇ ಶತ್ರುಗಳನ್ನು ಸೋಲಿಸಲಿಕ್ಕೆ ಸಹಾಯ ಆಗ್ತದೆ. ಅದು ರಾಜನೀತಿ. ಹೋಗಿ’ ಎಂದಾಗ, ಗುಪ್ತಚರರಿಗೆ ಅವರಿಗೂ ಒಂದು ಅವಕಾಶ ಬಂತು ಅಂತ ಭಾರೀ ಸಂತೋಷವಾಯ್ತಂತೆ. ಅವರು ‘ಶಾರ್ದೂಲ’ನನ್ನು ಮುಂದಿಟ್ಟುಕೊಂಡು ಹೊರಟರು. ಅಲ್ಲಿ ಹೋಗಿ ರಾಮ-ಲಕ್ಷ್ಮಣರನ್ನು ಕಂಡರು, ಸುಗ್ರೀವ-ವಿಭೀಷಣರನ್ನು ಕಂಡರು, ರೂಪವನ್ನು ಮರೆ ಮಾಡಿಕೊಂಡು ಕಪಿಗಳಾಗಿಯೇ ಹೋಗಿದ್ರು. ಹೋಗಿ ಸೇನೆಯನ್ನು ಕಂಡಾಗ ಆಗಿದ್ದು ಭಯ!! ಯಾಕಂದ್ರೆ, ಇಷ್ಟು ದೊಡ್ಡ ಸೈನ್ಯ ಬಂದು ಮುತ್ತಿದ್ರೆ ಏನಾಗ್ಬಹುದು ಲಂಕೆಯ ಪರಿಸ್ಥಿತಿ ಎಂಬ ಚಿಂತೆ ಅವರನ್ನು ಕಾಡಿತು.

ಹಾಗೆಯೇ ಅವರು ಬಳಗ ಪ್ರವೇಶ ಮಾಡಿ ನೋಡ್ತಾ ಇದ್ದಾರಷ್ಟೆ. ಆಕಸ್ಮಾತ್ ವಿಭೀಷಣನ ಕೈಗೆ ಸಿಕ್ಕಿಬಿದ್ದರಂತೆ. ವಿಭೀಷಣನಂತೂ ಯಾರಾದ್ರೂ ರಾವಣನ ಕಡೆಯ ಗುಪ್ತಚರರು ಬರ್ತಾರಾ ಎನ್ನುವುದನ್ನು ಹದ್ದಿನ ಕಣ್ಣಿಂದ ಹಗಲಿರುಳು ಗಮನಿಸ್ತಾ ಇದ್ದಾನೆ. ಹಾಗಾಗಿ ವಿಭೀಷಣನೇ ಶಾರ್ದೂಲ ಮತ್ತು ಅವನ ಇಡೀ ಗುಂಪನ್ನೇ ಹಿಡಿದು ಹಾಕಿದ, ಕಪಿಗಳಿಗೊಪ್ಪಿಸಿದ ಹಿಡಿದು. ಕಪಿಗಳಿಗೆ ಹೇಳ್ತಾನೆ, ‘ಇವರೆಲ್ಲ ಪಾಪಿಗಳೇ, ಈ ಶಾರ್ದೂಲ ಪರಮಪಾಪಿ’ ಎಂದು ತೋರಿಸಿದ್ದಾನೆ. ಕಪಿಗಳು ರಾಮನ ಕಣ್ಣಿಗೆ ಬೀಳುವ ಮೊದಲು ಯಥಾಶಕ್ತಿ ಗುದ್ದಿದ್ದಾರೆ. ಅಷ್ಟು ಹೊತ್ತಿಗೆ ರಾಮನಿಗೆ ಗೊತ್ತಾಗಿ ‘ಬಿಡಿ, ಬಿಡಿ’ ಎಂದನಂತೆ ರಾಮ. ರಾಮನ ಕರುಣೆಯಿಂದಾಗಿ ಅವರಿಗೆ ಬಿಡುಗಡೆ ಸಿಕ್ಕಿತು. ಶತ್ರುಗಳ ಮೇಲೂ ವಾತ್ಸಲ್ಯವಿರುವವನು ರಾಮ ಎನ್ನುವುದಕ್ಕೆ ಇದೇ ಉದಾಹರಣೆ. ಗುಪ್ತಚರರೆಲ್ಲ‌ ಒಂದೇ ಏಟಿಗೆ ಲಂಕೆಗೆ ಓಡಿ ಹೋಗಿ ರಾವಣನ ಮುಂದೆ ನಿತ್ಕೊಳ್ತಾರೆ. ಏದುಸಿರು, ಬುದ್ಧಿಯೇ ನಷ್ಟವಾಗಿತ್ತು ಅವರದ್ದು. ಏನೂ ನೆನಪಾಗ್ತಾನೂ ಇಲ್ಲ, ಏನೂ ಹೊಳೀತಾನೂ ಇಲ್ಲ ಮನಸ್ಸಿಗೆ, ಅಂತಹಾ ಪರಿಸ್ಥಿತಿ ಬಂದಿದೆ. ನರಕಲೋಕಕ್ಕೆ ಹೋಗಿ ಬಂದವರ ಪರಿಸ್ಥಿತಿ ಆಗಿದೆ ಅವರದ್ದು. ಅಂತೂ ಕಟ್ಟಿದ ಉಸಿರಿನಲ್ಲಿ ‘ರಾಮ ಬಂದು ಬಿಟ್ಟಿದ್ದಾನೆ ಹತ್ತಿರದಲ್ಲಿ, ಸುವೇಲಾ ಪರ್ವತದ ಪಕ್ಕದಲ್ಲಿ ರಾಮನಿದ್ದಾನೆ.’ ಅಷ್ಟು ಮಾತ್ರ ಹೇಳೋಕ್ಕೆ ಸಾಧ್ಯವಾಯ್ತು ಅವರಿಗೆ.

ಮತ್ತೆ ಉದ್ವೇಗವಾಯಿತು ರಾವಣನಿಗೆ. ಮತ್ತೆ, ಶಾರ್ದೂಲನಿಗೆ ಕೇಳಿದನಂತೆ, ‘ಏನಾಯ್ತು? ನಿನ್ನ ಬಣ್ಣ ಮೊದಲಿನ ಹಾಗೆ ಇಲ್ವಲ್ಲಾ? ದೈನ್ಯ ಕಾಣ್ತಾ ಇದೆ, ಕೈಯ ಮೇಲೆಲ್ಲ ಗಾಯ ಕಾಣ್ತಾ ಇದೆ. ನೀನೂ ಶುಕ-ಸಾರಣರ ಹಾಗೆ ಅವರ ಕೈಗೆ ಸಿಕ್ಕಿಬಿದ್ಯಾ?’ ಅಂದಾಗ ಬಹುವಿಹ್ವಲನಾಗಿ ಮೆಲ್ಲನೆ ಮಾತನಾಡಿದನಂತೆ ಶಾರ್ದೂಲ, ‘ರಾಮನ ಸೇನೆಯಲ್ಲಿ ಗುಪ್ತಚರ್ಯ ಮಾಡೋಕ್ಕೆ ಆಗೋದಿಲ್ಲ. ಅವರೆಲ್ಲ ಬಲಶಾಲಿಗಳು, ಪರಾಕ್ರಮಿಗಳು, ರಾಮನ ರಕ್ಷಣೆ ಬೇರೆ ಇದೆ. ಮಾತುಕತೆ ಕೊನೆಗೆ, ಪ್ರಶ್ನೆಗೇ ಅವಕಾಶವಿಲ್ಲ. ನೀನ್ಯಾರು? ಅಂತ ಕೇಳೋಕ್ಕಿಂತ ಮುಂಚೆ 3 ಗುದ್ದು ಬಿದ್ದಾಗಿರ್ತದೆ ಅಂತ. ಹಾಗಾಗಿ ಮಾತುಕತೆ ಇರಲಿ, ಪ್ರಶ್ನೆ ಕೇಳೋ ಹಾಗೇ ಇಲ್ಲ ಅಲ್ಲಿ. ರಾಮನ ಕರುಣೆಯಿಂದ ನಾನು ಬದುಕಿ ಬಂದಿದ್ದೇನು. ಮತ್ತು ಎಲ್ಲ ಕಡೆಯಿಂದ ವಾನರರ ಭದ್ರಪಡರು ಕಾಯ್ತಾ ಇದ್ದಾರೆ. ಹಾಗಾಗಿ ಅವರು ಜಾಗರೂಕರಾಗಿದ್ದಾರೆ. ಸೈನ್ಯವನ್ನು ಹೊಕ್ಕಿದ್ದೇ ಹೊಕ್ಕಿದ್ದು ಅಷ್ಟು ಹೊತ್ತಿಗೆ ವಿಭೀಷಣನ ಅನುಚರರಾದ ರಾಕ್ಷಸರು ಮತ್ತು ವಿಭೀಷಣ ನಮ್ಮನ್ನು ಹಿಡಿದುಕೊಂಡರು, ಅವರೇ ನಾಲ್ಕು ಪೆಟ್ಟು ಕೊಟ್ಟಿದ್ದಾರೆ ಮೊದಲು, ಆಮೇಲೆ ವಾನರರ ಕೈಗೆ ಕೊಟ್ಟಿದ್ದು’. ಹೆಜ್ಜೆಹೆಜ್ಜೆಗೂ ವಿಭೀಷಣ ಸೇವೆ ಮಾಡುತ್ತಿದ್ದಾನೆ.

ಅವರು ಯಾವುದರಿಂದ ಹೊಡೆದರು ಎಂಬುದನ್ನೂ ಹೇಳಿದ್ದಾನೆ ಶಾರ್ದೂಲ. ‘ಮೊಣಕಾಲಿನಿಂದ ತಿವಿದಿದ್ದಾರೆ, ಮುಷ್ಟಿಯಿಂದ ಗುದ್ದಿದ್ದಾರೆ,ಅಲ್ಲಲ್ಲಿ ಕಚ್ಚಿದ್ದಾರೆ, ತಲದಿಂದ ಹೊಡೆದಿದ್ದಾರೆ. ಇಷ್ಟಾದ ಮೇಲೆ ನನ್ನನ್ನು ಮೆರವಣಿಗೆ ಮಾಡಿದರು’. ಇದು ಯಾಕೆಂದರೆ ಹಿಂದೆ ಇವರು ಹನುಮಂತನನ್ನು ಕಟ್ಟಿ ಬಾಲಕ್ಕೆ ಬೆಂಕಿಹಚ್ಚಿ ಮೆರವಣಿಗೆ ಮಾಡಿದ್ದರು. ಆ ಸೇಡಿಗಾಗಿ. ‘ಮೆರವಣಿಗೆಯಾದ ಮೇಲೆ ರಾಮನ ಬಳಿ ನನ್ನನ್ನು ಕರೆದುಕೊಂಡು ಹೋದರು. ಅಲ್ಲಿ ಹೋಗುವ ಹೊತ್ತಿಗೆ ಮೈಯೆಲ್ಲಾ ರಕ್ತವಾಗಿತ್ತು. ತೂಗಾಡುತ್ತಿದ್ದೆ ನಾನು. ಕಣ್ಣು,ಕಿವಿ ಎಲ್ಲಿದೆ ಎಂದು ಗೊತ್ತಾಗಲಿಲ್ಲ. ರಾಮನ ಮುಂದೆ ಕೈಮುಗಿದು ಬೇಡಿದೆ ಪ್ರಾಣಸಹಿತ ನನ್ನನ್ನು ಉಳಿಸು ಎಂದು, ಆಗಲು ಗುದ್ದುತ್ತಿದ್ದರು. ಆಗ ರಾಮ ಹಾಗೆ ಮಾಡಬೇಡಿ ಎಂದು ಹೇಳಿ ನನ್ನನ್ನು ಬಿಡಿಸಿದ. ಆಮೇಲೆ ಇಲ್ಲಿ ಬಂದೆ’ ಇಷ್ಟು ಹೇಳಿ, ಮತ್ತೆ ರಾವಣನ ಮೈಗೆ ತುರಿಕೆ ಬಳ್ಳಿಯನ್ನು ತಾಗಿಸಿದ ಹಾಗೆ ಮಾಡಿ, ವಿಷಯವನ್ನು ಹೇಳಿದ. ‘ರಾಮನು ಪರ್ವತಗಳಿಂದ, ದೊಡ್ಡ ದೊಡ್ಡ ಬಂಡೆಗಳಿಂದ ಸಮುದ್ರವನ್ನು ತುಂಬಿ, ಸಮುದ್ರವನ್ನು ದಾಟಿ ಬಂದು ಧನುಸ್ಸನ್ನು ಎತ್ತಿ ಲಂಕೆಯ ಬಾಗಿಲಿನಲ್ಲಿ ನಿಂತಿದ್ದಾನೆ. ಗರುಡವ್ಯೂಹದ ರಚನೆಯಾಗಿದೆ’. ಗರುಡವ್ಯೂಹವೆಂದರೆ ಇಡೀ ಸೇನೆ ಗರುಡ ಪಕ್ಷಿಯ ಆಕಾರದಲ್ಲಿರುತ್ತದೆ. ಕೊಕ್ಕಿನ ಜಾಗದಲ್ಲಿ ಯಾರು, ಕಣ್ಣಿನ ಜಾಗದಲ್ಲಿ,ರೆಕ್ಕೆಯ ಜಾಗದಲ್ಲಿ ಯಾರು, ಹೊಟ್ಟೆಯ ಜಾಗದಲ್ಲಿ ಯಾರು ಎಂಬುದನ್ನು ವಿಭಾಗಿಸಿಕೊಂಡಿರುತ್ತಾರೆ. ಬೇರೆ ಬೇರೆ ವ್ಯೂಹಗಳಿವೆ. ‘ಗರುಡವ್ಯೂಹದ ರಚೆನೆಯನ್ನು ಮಾಡಿ ಎಲ್ಲಾ ಕಡೆಯಿಂದ ವಾನರರಿಂದ ವ್ಯಾಪ್ತನಾದ ರಾಮನು ನನ್ನನ್ನು ಕಳುಹಿಕೊಟ್ಟು ನನ್ನ ಹಿಂದೆಯೇ ಲಂಕೆಗೆ ಬರುತ್ತಿದ್ದಾನೆ. ಅವನು ಕೋಟೆಯ ಬಳಿಗೆ ಬರುವ ಮುನ್ನ ಕ್ಷಿಪ್ರವಾಗಿ ಒಂದು ಕೆಲಸವನ್ನು ಮಾಡು. ಸೀತೆಯನ್ನು ಕೊಟ್ಟುಬಿಡು. ಇಲ್ಲದಿದ್ದರೆ ಯುದ್ಧವೇ ಗತಿ. ಘೋರಯುದ್ಧ ಕಾದಿದೆ’ ಎಂದ. ಶುಕ-ಸಾರಣರು ಸರಿಯಿಲ್ಲ ಎಂದು ಬೇರೆಯವರನ್ನು ಕಳುಹಿಸಿದ್ದರೆ ಪರಿಣಾಮ ಅದೇ ಇದೆ.

ಶಾರ್ದೂಲ ಹೇಳಿದ್ದು ರಾವಣನ ತಲೆಯಲ್ಲಿ ಒಂದು ಬಾರಿ ಸುತ್ತಿತು. ಮತ್ತೆ ಅದೇ ಮಾತನ್ನು ಆಡುತ್ತಾನೆ. ‘ದೇವ-ದಾನವ-ಗಂಧರ್ವರೆಲ್ಲರೂ ಸೇರಿ ಬಂದು ನನ್ನ ಮೇಲೆ ಯುದ್ಧ ಸಾರಿದರೂ, ಸರ್ವಲೋಕದ ಭಯ ನನಗಿದ್ದರೂ ಸೀತೆಯನ್ನು ಬಿಟ್ಟುಕೊಡುವುದಿಲ್ಲ’ ಎಂದು ಕೂಗಾಡಿ ಮತ್ತೆ ಸಮಾಧಾನದಿಂದ ಕೇಳಿದ. ‘ಅಲ್ಲಿ ಯಾರೆಲ್ಲ ಹೇಗಿದ್ದಾರೆ ಹೇಳು. ಕಪಿಗಳ ಪೈಕಿ ಶೂರರು ಯಾರು? ಅವರ ಪ್ರಭಾವ, ಹೇಗಿದ್ದಾರೆ ಅವರು, ಯಾರ ಮಕ್ಕಳು ಎಂಬುದೆಲ್ಲಾ ಹೇಳು. ರಾಜನಿಗೆ ಯುದ್ಧಮಾಡುವಾಗ ಇದನ್ನು ತಿಳಿದುಕೊಳ್ಳುವುದು ಕರ್ತವ್ಯವಾಗುತ್ತದೆ’ ಎಂದ. ನಿಜವಾಗಿ ಉತ್ತಮ ಗುಪ್ತಚರ ಶಾರ್ದೂಲ. ಅವನು ವಿವರಣೆಯನ್ನು ಕೊಟ್ಟ. ಸುಗ್ರೀವ, ಜಾಂಬವಂತ ಎಲ್ಲರ ವರ್ಣನೆ ಕೊಟ್ಟ. ಜಾಂಬವಂತನನ್ನು ಗದ್ಗದನ ಮಗ ಎಂದು ಹೇಳಿದ್ದಾನೆ. ನಿಜವಾಗಿ ಬ್ರಹ್ಮನ ಮಗ ಜಾಂಬವಂತ. ಅವನ ಸಾಕು ತಂದೆ ಗದ್ಗದ. ‘ಅವನ ಇನ್ನೊಬ್ಬ ಮಗ ಧೂಮ್ರ, ಜಾಂಬವಂತನ ಅಣ್ಣ. ಇಂದ್ರನ ಗುರುವಾದ ಬೃಹಸ್ಪತಿಯ ಮಗ ಕೇಸರಿ. ಕೇಸರಿಯೆಂದರೆ ಇಲ್ಲೊಬ್ಬ ಬಂದು ಇಡೀ ರಾಕ್ಷಸವೀರರೊಡನೆ ಒಬ್ಬನೇ ಯುದ್ಧಮಾಡಿ, ಲಂಕೆಯನ್ನು ಸುಟ್ಟು ಹಾಕಿದನಲ್ಲ ಅವನ ತಂದೆ’ ಎಂದು ಹನುಮಂತನ ಮೂಲಕ ಪರಿಚಯ ಕೊಟ್ಟಿದ್ದಾನೆ. ಆಮೇಲೆ ಸುಷೇಣ, ದಧಿಮುಖರ ವರ್ಣನೆ. ‘ವರುಣ ಪುತ್ರ ಸುಷೇಣ, ಚಂದ್ರನ ಮಗ ದಧಿಮುಖ. ಸುಮುಖ,ದುರ್ಮುಖ ಮತ್ತು ವೇಗದರ್ಶಿ ಎಂಬುವವರು ಇದ್ದಾರೆ. ನೀಲನೆಂದರೆ ಮೃತ್ಯುವೇ ವಾನರರೂಪದಲ್ಲಿ ಬಂದಂತಿದೆ. ಅವನು ಅಗ್ನಿಯ ಮಗ, ಸೇನಾಪತಿ. ಹಾಗೆ ಅನಿಲಪುತ್ರ ಹನುಮಾನ್, ಇಂದ್ರನ ಮೊಮ್ಮೊಗನಾಗಿರುವ ಬಲಶಾಲಿ ಅಂಗದ. ಅಶ್ವಿನಿ ದೇವತೆಗಳ ಮಕ್ಕಳು ಮೈಂದ-ದ್ವಿವಿದರು, ಯಮನ ಮಕ್ಕಳು ಗಜ, ಗವಯ, ಗವಾಕ್ಷ, ಶರಭ, ಗಂಧಮಾದನ ಎಲ್ಲರು’. ಇವನು ಸರಿ ಕೇಳಿಕೊಂಡು ಬಂದಿಲ್ಲ. ನಿಜವಾಗಿ ಗಂಧಮಾದನ ಕುಬೇರನ ಮಗ, ಶರಭ ಪರ್ಜನ್ಯನ ಮಗ. ಇವನಿಗೆ ಎಲ್ಲರು ಯಮನ ಮಕ್ಕಳಂತೆ ಕಾಣ್ತಿದ್ದಾರೆ!

‘ಹತ್ತು ಕೋಟಿ ಯುದ್ಧಾಕಾಂಕ್ಷಿ ವಾನರರಿರಬಹುದು. ಇವರೆಲ್ಲಾ ದೇವತೆಗಳಿಂದ ಹುಟ್ಟಿರುವವರು. ಇನ್ನು ದಶರಥ ಪುತ್ರ, ಸಿಂಹಶರೀರಿ, ರಾಮ. ಖರ, ದೂಷಣ, ತ್ರಿಶಿರರೆಲ್ಲರ ಸಂಹಾರಿ. ವಿಕ್ರಮದಲ್ಲಿ ರಾಮನಿಗೆ ಸಮಾನರು ಈ ಭೂಮಿಯಲ್ಲಿ ಯಾರೂ ಇಲ್ಲ’ ಎಂದನು. ಶುಕ-ಸಾರಣರು,ವಿಭೀಷಣ ಎಲ್ಲರೂ ಇದನ್ನೇ ಹೇಳಿದ್ದರು. ರಾವಣ ಅವರ ಮೇಲೆ ಕೋಪ ಮಾಡಿದ್ದ. ಈಗ ಇವನ ಎದುರೇ ಹೇಳುತ್ತಿದ್ದಾನೆ ಶಾರ್ದೂಲ. ‘ವಿರಾಧನನ್ನು ಕೊಂದವನು, ಅಂತಕನಂಥ ಕಬಂಧನನ್ನು ಕೊಂದವನು’ ಎಂದ. ರಾಕ್ಷಸ ದೃಷ್ಟಿಗೆ ರಾಮನ ಭವ್ಯತೆ ಗೋಚರವಾಗುತ್ತಿದೆ. ಒಂದು ಚೆನ್ನಾಗಿರುವ ಮಾತನ್ನು ಹೇಳುತ್ತಾನೆ. ‘ರಾಮನ ಸದ್ಗುಣಗಳನ್ನು ಬಾಯಿಂದ ವರ್ಣಿಸಲು ಇಡೀ ಭೂಮಂಡಲದಲ್ಲಿ ಯಾರಿಗೂ ಶಕ್ತಿ ಇಲ್ಲ’ ಎನ್ನುವಾಗ ಅವನಿಗೆ ರಾಮನ ಬಗ್ಗೆ ಇದ್ದ ಗೌರವ ಗೊತ್ತಾಗುತ್ತದೆ. . ಅಂದಿನಕಾಲದಲ್ಲಿ ಅವನ ವೈರಿಗಳು ರಾಮನನ್ನು ಹೇಗೆ ಭಾವಿಸಿದ್ದರು ಎಂದು ಗಮನಿಸಬೇಕು. ‘ಪಂಚವಟಿಯ ಎಲ್ಲಾ ರಾಕ್ಷಸರನ್ನು ಒಬ್ಬನೇ ಕೊಂದನಲ್ಲ, ಎಂತಹ ಪರಾಕ್ರಮ ಅದು. 14,000 ರಾಕ್ಷಸರನ್ನು ಒಬ್ಬನೇ ಕೊಂದವನು. ಲಕ್ಷ್ಮಣನು ಧರ್ಮಾತ್ಮ, ಲಕ್ಷ್ಮಣನು ಗಜರಾಜನಂತಿದ್ದಾನೆ. ಅವನ ಬಾಣದ ವ್ಯಾಪ್ತಿಯಲ್ಲಿ ಬಂದರೆ ಇಂದ್ರನೂ ಬದುಕಲು ಸಾಧ್ಯವಿಲ್ಲ. ಇನ್ನಿಬ್ಬರು ಸೂರ್ಯನ ಮಕ್ಕಳು,ಶ್ವೇತ ಮತ್ತು ಜ್ಯೋತಿರ್ಮುಖ. ವರುಣನ ಮಗ ಹೇಮಕೂಟ, ವಿಶ್ವಕರ್ಮನ ಮಗ ನಲ, ವಸುಪುತ್ರ ಸುದುರ್ಧರ, ರಾಕ್ಷಸ ಶ್ರೇಷ್ಠನಾದ ನಿನ್ನ ಸಹೋದರ ವಿಭೀಷಣ. ಅವನು ಲಂಕೆಯ ಶ್ರೇಯಸ್ಸನ್ನು ಹೃದಯದಲ್ಲಿಟ್ಟುಕೊಂಡು ರಾಮನ ಜೊತೆಯಲ್ಲಿದ್ದಾನೆ. ರಾಮನ ಸೇವೆಯನ್ನು ಮಾಡುತ್ತಿದ್ದಾನೆ. ಇದು ವಾನರ ಬಲ. ಸುವೇಲ ಪರ್ವತಕ್ಕೆ ಬಂದು ನೆಲೆಸಿದೆ. ಉಳಿದಿದ್ದು ನಿನಗೆ ಬಿಟ್ಟಿದ್ದು’ ಎಂಬುದಾಗಿ ಹೇಳಿದ.

ಮತ್ತೆ ರಾವಣನಿಗೆ ಉದ್ವೇಗವಾಯಿತು. ಇದು ರಾಮಾಯಣದ ರಾವಣ. ಇವನಿಗೆ ಬಾರಿ ಬಾರಿಗೆ ಭಯವಾಗಿದೆ ರಾಮನ ಕುರಿತು. ಮಂತ್ರಿಗಳಿಗೆ ಹೇಳಿದ. ‘ ಬೇಗ ಬೇಗ ಎಲ್ಲಾ ಮಂತ್ರಿಗಳನ್ನು ಕರೆಯಿರಿ. ಮಂತ್ರಾಲೋಚನೆ ಮಾಡಬೇಕು’ ಎಂದು. ಭಯದ ಪರಿಣಾಮವಿದು. ಮಂತ್ರಿಗಳೆಲ್ಲಾ ಧಾವಿಸಿದರು. ಅವರೊಟ್ಟಿಗೆ ತುಂಬಾ ಹೊತ್ತು ಮಂತ್ರಾಲೋಚನೆ ನಡೆಸಿದ. ಅದನ್ನು ಮುಗಿಸಿದ ಮೇಲೆ ಸಚಿವರನ್ನೆಲ್ಲ ಕಳುಹಿಸಿಕೊಟ್ಟ.ತನ್ನ ಮನೆಗೆ ಬಂದು ವಿದ್ಯುಜ್ಜಿಹ್ವ ಎಂಬ ರಾಕ್ಷಸನನ್ನು ಕರೆದ. ಅವನು ಮಹಾ ಮಾಯಾವಿ. ಇದ್ದದ್ದು ಇದ್ದ ಹಾಗೆ ಕಾಣದೇ ಬೇರೆ ತರಹ ಕಾಣುವ ಹಾಗೆ ಮಾಡುವುದರಲ್ಲಿ ಅವನಿಗೆ ಪಾಂಡಿತ್ಯವಿದೆ. ಅವನನ್ನು ಕರೆದುಕೊಂಡು ಸೀತೆ ಇರುವಲ್ಲಿ ಹೊರಟ. ದಾರಿಯಲ್ಲಿ ವಿದ್ಯುಜ್ಜಿಹ್ವನಿಗೆ ಹೇಳಿದ. ‘ಬಾ, ನಾನು ನೀನು ಹೋಗಿ ಸೀತೆಯನ್ನು ಭ್ರಮೆಗೊಳಿಸೋಣ’. ಸಾಯುವವರೆಗೂ ಮೋಸದ ಚಿಂತೆಯೇ. ಮತ್ತೇನು ಮೋಸಮಾಡಲಿ ಎಂಬ ಯೋಚನೆಯೇ.ಮೋಸಕ್ಕೆ ರಾವಣನೇ ಸಲಹೆ ಕೊಟ್ಟ. ‘ರಾಮನ ಮಾಯಮಯವಾದ ಶಿರಸ್ಸು ಮತ್ತು ಬಾಣಸಹಿತವಾದ ಧನುಸ್ಸನ್ನು ತೆಗೆದುಕೊಂಡು ಹೋಗಿ ಸೀತೆಯನ್ನು ಭ್ರಮೆಗೊಳಿಸೋಣ. ರಾಮ ಇಲ್ಲ ಎಂದು ಮಾಡಿಬಿಡೋಣ. ಆಗ ಅನಿವಾರ್ಯವಾಗಿ ನನಗೆ ಅವಳು ಶರಣಾಗುತ್ತಾಳೆ. ಇದನ್ನು ಮಾಡಿ ತೋರಿಸು ನೋಡೋಣ’ ಎಂದು ವಿದ್ಯುಜ್ಜಿಹ್ವನಿಗೆ ಹೇಳಿದ. ಇದು ರಾವಣನ ಕಪಟೋಪಾಯ. ವಿದ್ಯುಜ್ಜಿಹ್ವ ರಾಮನ ಶಿರಸ್ಸು,ಧನುಸ್ಸನ್ನು ಮಾಡಿ ತೋರಿಸಿದ. ಆಗ ರಾವಣನು ಸಂತೋಷಗೊಂಡು ಒಂದು ಆಭರಣವನ್ನು ತೆಗೆದು ಕೊಟ್ಟ ಅವನಿಗೆ. ಸೀತೆಯನ್ನು ಕಾಣುವ ತವಕದಲ್ಲಿ ಅಶೋಕವನಕ್ಕೆ ಹೋದ.

ಅಲ್ಲಿ ನೋಡಿದರೆ ದೀನಳಾಗಿ,ತಲೆತಗ್ಗಿಸಿ, ಶೋಕದಿಂದ ಕುಳಿತಿದ್ದಾಳೆ ಸೀತೆ.ಅವಳು ಅದಕ್ಕೆ ಅರ್ಹಳಲ್ಲ. ಎಡೆಬಿಡದೆ ರಾಮನ ನೆನಪು. ಸುತ್ತ ರಾಕ್ಷಸಿಯರು ಇದ್ದಾರೆ. ಸೀತೆಯ ಬಳಿ ಹೋಗಿ ಭಾರೀ ಸಂತೋಷವಾದಂತೆ ಅಭಿನಯಿಸಿ ಈ ಮಾತನ್ನು ಧೈರ್ಯದಿಂದ ಹೇಳಿದ. ‘ನಾನು ನಿನ್ನನ್ನು ಒಲಿಸಿಕೊಳ್ಳಲು ಎಷ್ಟು ಪ್ರಯತ್ನಪಟ್ಟರೂ ಕೂಡಾ ಒಲಿದು ಬರಲಿಲ್ಲ ನೀನು. ಯಾವ ರಾಮನಿಗಾಗಿ ನೀನು ನನ್ನನ್ನು ಒಪ್ಪಿಕೊಳ್ಳುತ್ತಿಲ್ಲವೋ ಅವನು ಯುದ್ಧದಲ್ಲಿ ಹತನಾಗಿ ಹೋದ. ನಿನ್ನ ದರ್ಪದ ಬುಡವೇ ತುಂಡಾಗಿದೆ. ರಾಮನು ಇಲ್ಲ. ಇಂತಹ ಕಷ್ಟ ಬಂದಾಗ ಎಲ್ಲಿ ಹೋಗುತ್ತೀಯೆ ನೀನು? ನನಗೆ ವಶವಾಗಲೇಬೇಕು. ಯಾರೂ ಇಲ್ಲ ಎಂದು ಯೋಚಿಸಬೇಡ. ನಾನಿದ್ದೇನೆ. ನನ್ನ ಪತ್ನಿಯಾಗಬೇಕು ನೀನೀಗ. ಮೂಢೆ, ಈ ರಾಮ,ರಾಮ ಎನ್ನುವ ಬುದ್ಧಿಯನ್ನು ಬಿಡು. ಅವನಿಲ್ಲ. ನನ್ನ ಪತ್ನಿಯಾಗಿ ನನ್ನೆಲ್ಲ ಪತ್ನಿಯರಿಗೆ ಒಡತಿಯಾಗು. ನಿನ್ನ ಪುಣ್ಯವೆಲ್ಲಾ ಮುಗಿದಿದೆ. ನಿಜವಾಗಿ ನೀನು ಮೂರ್ಖಳಾದರೂ ಎಲ್ಲಾ ತಿಳಿದವಳು ಎಂದು ಅಂದುಕೊಂಡಿದ್ದೀಯೆ.ನಿನಗೆ ಬುದ್ಧಿಯಿಲ್ಲ. ನೋಡು ಹೀಗಾಗಿದೆ. ಹೇಗಾಯಿತು ಎಂದು ಹೇಳುತ್ತೇನೆ’ ಎಂದು ಕಾಲ್ಪನಿಕ ಕಥೆಯನ್ನು ಕಟ್ಟಿ ಹೇಳಿದ.

‘ನಿನ್ನ ಪತಿಯ ವಧೆ ಹಿಂದಿನ ಕಾಲದಲ್ಲಿ ಇಂದ್ರ ವೃತ್ತನ ವಧೆಮಾಡಿದಂತೆ ಇದೆ. ಅದೇನೆಂದರೆ ನನ್ನನ್ನು ಕೊಲ್ಲಲು ರಾಮನು ಸಮುದ್ರದವರೆಗೆ ಬಂದ. ಕಿಷ್ಕಿಂಧೆಯಿಂದ ಹೊರಟು ಸುಗ್ರೀವನ ದೊಡ್ಡ ಸೈನ್ಯದೊಂದಿಗೆ ಸಮುದ್ರದ ಉತ್ತರತೀರಕ್ಕೆ ಬಂದು ಬಿಡಾರವನ್ನು ಹೂಡಿದ. ಸೂರ್ಯಾಸ್ತವಾಯಿತು ಮತ್ತು ಬಹಳ ದೂರದಿಂದ ಬಂದ ಕಾರಣ ಆಯಾಸವೂ ಆಗಿತ್ತು, ನಿದ್ರೆ ಮಾಡಿದ್ರು. ಇಡೀ ಸೈನ್ಯಕ್ಕೆ ಸೈನ್ಯವೇ ಚೆನ್ನಾಗಿ ನಿದ್ದೆ ಮಾಡಿದ್ರು. ಆ ಸಮಯದಲ್ಲಿ ನನ್ನ ಗುಪ್ತಚರರನ್ನು ಕಳುಹಿಸಿ, ಎಲ್ಲರೂ ಮಲಗಿದ್ರಾ ಅಥವಾ ಯಾರಾದರೂ ಎದ್ದಿದ್ದಾರೋ ಎಂದು ನೋಡಿಸಿದೆ. ಯಾರೂ ಎದ್ದಿಲ್ಲ ಎಂಬುದು ನಿಶ್ಚಯವಾಯಿತು. ಕೂಡಲೇ ನನ್ನ ರಾಕ್ಷಸರು ಆಕಾಶ ಮಾರ್ಗವಾಗಿ ಹೋಗಿ ಎಲ್ಲರನ್ನೂ ಕೊಂದುಹಾಕಿದರು. ಪಟ್ಟಸ, ಪರಿಘ, ಚಕ್ರ, ದಂಡ, ಖಡ್ಗ, ಬಾಣಗಳು, ಶೂಲಗಳು, ಕೂಟ ಮುದ್ಗರಗಳು, ಯಟ್ಟಿಗಳು, ತೋಮರಗಳೂ, ಎತ್ತಿ ಎತ್ತಿ ವಾನರರ ಮೇಲೆ ಪ್ರಹಾರ ಮಾಡಿದ್ದೇ ಮಾಡಿದ್ದು. ಪ್ರಹಸ್ತನು ಮಲಗಿದ ರಾಮನ ಶಿರಚ್ಛೇದಿಸಿ ತಂದಿದ್ದಾನೆ. ವಿಭೀಷಣನನ್ನು ಬಂಧಿಸಿದ ಹಾಗೆ, ಲಕ್ಷ್ಮಣ ಕೆಲವು ಕಪಿಗಳೊಡನೆ ಓಡಿ ಹೋಗಿದ್ದಾನೆ. ಸುಗ್ರೀವನ ಕೊರಳೇ ತುಂಡಾಗಿಬಿಟ್ಟಿದೆ. ಹನುಮಂತನ ಹನುವಿಗೆ ಭಾರೀ ಪೆಟ್ಟುಬಿದ್ದಿದೆ. ಜಾಂಬವಂತನ ಜಾನುವನ್ನು ಅಂದ್ರೆ ಮಂಡಿಯನ್ನು ಮುರಿಯಲಾಗಿದೆ. ಹಾಗೇ ಪಟ್ಟಸಗಳಿಂದ ತುಂಡು ತುಂಡು ಮಾಡಲಾಗಿದೆ. ಮೈಂದ ದ್ವಿವಿದನನ್ನು ಕೊಲ್ಲಲಾಗಿದೆ. ಪನಸ, ಅವನನ್ನು ಹಲಸಿನ ಹಣ್ಣನ್ನು ಕೊಚ್ಚಿದ ಹಾಗೆ ಕೊಚ್ಚಲಾಗಿದೆ. ಕುಂಭಸೇನೆಗೆ ಮಾತನಾಡುವ ಸ್ಥಿತಿ ಕೂಡ ಇಲ್ಲ. ಅಂಗದನನ್ನು ನಾನಾ ರೀತಿಯ ಬಾಣಗಳಿಂದ ಛಿನ್ನ ವಿಛಿನ್ನ ಮಾಡಿ, ಅವನ ಅಂಗಗಳೆಲ್ಲವೂ ಕಳಚಿ ಬಿದ್ಧಿದೆ. ಹೀಗೆ ಕಪಿಗಳನ್ನ ಆನೆಗಳಿಂದ ತುಳಿಸಲಾಗಿದೆ. ಕುದುರೆಗಳ ಕಾಲಡಿಗೆ ಬಿದ್ದು ಸತ್ತಿದ್ದಾರೆ. ಇನ್ನು ಓಡಿಹೋಗುವವರನ್ನು ಹಿಂದಿಂದ ಅಟ್ಟಿಸಿಕೊಂಡು ಹೋಗಲಾಗಿದೆ. ಕೆಲವರು ಸಮುದ್ರಕ್ಕೆ ಹೋಗಿ ಬಿದ್ದು ಬಿಟ್ಟಿದ್ದಾರೆ. ಈ ಕರಡಿಗಳೆಲ್ಲ ಮರ ಹತ್ತಿ ಕೂತಿದ್ದಾರೆ. ಸಮುದ್ರತೀರದಲ್ಲಿ, ಪರ್ವತಗಳಲ್ಲಿ, ವನಗಳಲ್ಲಿ ಅನೇಕ ಪಿಂಗಲಗಳನ್ನು ಕಪಿಗಳನ್ನು ಧ್ವಂಸ ಮಾಡಿದ್ದಾರೆ. ಹೀಗೆ ಸೇನಾ ಸಹಿತ ನಿನ್ನ ಪತಿಯ ಸಂಹಾರ ಕಾರ್ಯವೇ ಆರಂಭವಾಗಿವೆ. ನೋಡು ರಕ್ತದಲ್ಲಿ ತುಯಿದು ಹೋದ, ಧೂಳಿನಿಂದ ಆವೃತ್ತವಾದ ನಿನ್ನ ಪತಿಯ ಶಿರಸ್ಸು.”

ಹೀಗೆ ಹೇಳಿ ಪಕ್ಕದಲ್ಲಿ ಇದ್ದ ರಾಕ್ಷಸಿಯನ್ನು ಕರೆದು ರಾವಣ ಹೇಳ್ತಾನೆ, “ಆ ವಿದ್ಯುಜ್ಜಿಹ್ವನಿಗೆ ಹೇಳು, ರಾಮನ ಶಿರಸ್ಸನ್ನು ತಂದಿದ್ದಾನಲ್ವಾ ಯುದ್ಧ ಭೂಮಿಯಿಂದ ತರಲು ಹೇಳು. ಅದನ್ನ ಸೀತೆಯೆ ಮುಂದೆ ಇಡಲು ಹೇಳು ” ವಿದ್ಯುಜ್ಜಿಹ್ವ ಮಾಯೆಯಿಂದ ಮಾಡಿದ ರಾಮನ ಶಿರಸ್ಸು ಮತ್ತು ಧನಸ್ಸನ್ನು ತೆಗೆದುಕೊಂಡು ಬಂದು ಸೀತೆಯ ಮುಂದೆ ಇಟ್ಟ. ರಾವಣ ಆ ಧನಸ್ಸನ್ನು ಸೀತೆಯ ಮುಂದೆ ಎಸೆದ, “ನೋಡು ಇದನ್ನು ನಿನ್ನ ರಾಮನದ್ದೆಯೋ ಅಲ್ಲವೋ ಅಂತ ನೋಡಿಕೊ ಸರಿಯಾಗಿ. ಈಗ ವಶವಾಗ್ತಿಯೋ ಇಲ್ಲವೋ ನನಗೆ.” ಎಂದು black mail ಮಾಡ್ತಾನೆ ರಾವಣ. ಹನುಮಂತ ಹೇಳಿದ್ದ ರಾಮನ ಆಕೃತಿಯ ಬಗ್ಗೆ, ಆ ಸುಗ್ರೀವನ ಕಥೆಯ ಮತ್ತು ಸ್ನೇಹದ ಬಗ್ಗೆ ಕೇಳಿದ್ದಳು. ಅದೇ ಪ್ರಕಾರ ರಾವಣನೂ ಹೇಳ್ತಾ ಇದ್ದ. ಇಡೀ ಆಕೃತಿ ರಾಮನ ಹಾಗೇ ಇದೆ. ಕೂದಲು, ಕೂದಲ ಕೊನೆ, ಚೂಡಾಮಣಿ ಇದನ್ನೆಲ್ಲ ಕಂಡಾಗ ರಾಮನದ್ದೇ ಅಂತ ಅನ್ನಿಸಿಬಿಡ್ತು. ದುಃಖಕ್ಕೆ ಪಾರವೇ ಇಲ್ಲ. ಮೊಟ್ಟ ಮೊದಲು ಅವಳ ಕಣ್ಣೆದುರಿಗೆ ಬಂದದ್ದು ಕೈಕೇಯಿ. ನಿನ್ನಿಂದ ಆದದ್ದು ಇದೆಲ್ಲ ಎಂದು. ಕುರಡ ಪಕ್ಷಿಯಂತೆ, ನಿನ್ನ ಆಸೆ ತೀರಿತಲ್ವಾ? ಎಂದು ಆಕ್ರಂದನ ಮಾಡಿದಳಂತೆ. ಆ ಆರ್ತನಾದದಲ್ಲಿ ಮುಂದುವರಿದಾಗ ಕೈಕೇಯಿಯ ನಿಂದೆ ಇತ್ತು. “ಕುಲನಂದನ ಹತವಾಗಿ ಹೋದ, ಕುಲವೇ ನಾಶವಾಯಿತು. ಏನು ಮಾಡಿದ್ದ ರಾಮ ನಿನಗೆ. ನಾರು ಬಟ್ಟೆ ಕೊಟ್ಟು ಕಾಡಿಗೆ ಅಟ್ಟಿದೆಯಲ್ಲ! ” ಎಂಬುದಾಗಿ ಆರ್ತನಾದ ಮಾಡಿದಳು. ನಡುಗಿ ನಡುಗಿ ಮೂರ್ಛೆ ತಪ್ಪಿ ಬಿದ್ದು ಬಿಟ್ಟಳು. ಎಚ್ಚರವಾದಾಗ ಆ ಶಿರಸ್ಸನ್ನು ಆಘ್ರಾಣಿಸಿ ಪರಿ ಪರಿಯಾಗಿ ವಿಲಪಿಸಿದಳು.

“ಹೇ ಮಹಾಬಾಹುವೇ, ವೀರವ್ರತವೇ, ಸತ್ತೆ. ಯುದ್ಧದಲ್ಲಿ ಸಾವನ್ನು ಅಪ್ಪಿದವರಿಗೆ ವೀರವ್ರತ ಎನ್ನುತ್ತಾರೆ. ನಾನು ವಿಧವೆ ಆದೆನೇ? ಮೊದಲು ನಾನು ಸಾಯಬೇಕು. ಮೊದಲು ಪತಿಯ ಸಾವು ಬರಬಾರದು. ಚಾರಿತ್ರ್ಯವತಿಯಾದ, ಶೀಲವತಿಯಾದ ನನ್ನ ಕಣ್ಮುಂದೆ ಹೀಗೆ ಆಯಿತೇ ನಿನಗೆ” ಎಂದು ದುಃಖಿಸುತ್ತಾಳೆ. ಈ ದುಃಖಸಾಗರದಿಂದ ನನ್ನನ್ನು ಉದ್ಧರಿಸಲಿಕ್ಕೆ ನೀನು ಬಂದವನಾಗಿದ್ದೆ. ಹೀಗಾಗಿ ಹೋಯಿತೆ ನಿನಗೆ? ಕೌಸಲ್ಯೆಯನ್ನು ನೆನಪು ಮಾಡಿಕೊಳ್ತಾಳೆ. “ನೀನು ಇಲ್ಲದೇ ಕೌಸಲೆಯಯ ಪರಿಸ್ಥಿತಿ ಏನಾಗಬಹುದು? ಅವಳು ಎಷ್ಟು ಸಂಕಟ ಪಡಬಹುದು”. ಅವಳಿಗೆ ಒಂದು ಸಂಗತಿ ನೆನಪಾಯಿತು. ಎಲ್ಲ ದೈವಜ್ಞರೂ ನಿನಗೆ ದೀರ್ಘಾಯಸ್ಸನ್ನು ಹೇಳಿದ್ದರಲ್ಲ! ಹೀಗೇಕಾಯಿತು? ಸುಳ್ಳಾಯಿತಾ ಅವರ ಮಾತು?”
ಅವಳ ಜಿಜ್ಞಾಸೆ, ‘ರಾಮನಿಗೆ ಮೋಸ ಮಾಡಲಿಕ್ಕೆ ಸಾಧ್ಯ ಇಲ್ಲ. ಹಾಗೇ, ರಾತ್ರಿ ಎಚ್ಚರ ತಪ್ಪಿ ಮಲಗಿ ಇದು ಹೇಗೆ ನಡಿಯಿತು? ಹದಿಮೂರು ವರ್ಷದ ಸಹವಾಸದಲ್ಲಿ, ಕಾಡಲ್ಲಿ, ಒಂದು ಕ್ಷಣವೂ ರಾಮ ಎಚ್ಚರ ತಪ್ಪಿದ್ದನ್ನು ಆಕೆ ಕಂಡಿಲ್ಲ. ಹಾಗಿರುವಾಗ ಸೇನೆಯೊಟ್ಟಿಗೆ ಬಂದು, ಯಾರೂ ಎಚ್ಚರ ಇಲ್ಲದೇ ಸೇನೆಯಲ್ಲಿ, ಹಾಗೇ ಮಲಗಲು ಸಾಧ್ಯವೆ? ಅಂತಹ ಸಮಯದಲ್ಲಿ ಪ್ರಾಜ್ಞನಾದ ನಿನಗೂ ಪ್ರಜ್ಞೆ ಇಲ್ಲದಂತೆ ಆಯಿತೇ? ರಾಜನೀತಿಯಲ್ಲಿ ಎಲ್ಲರೂ ಒಟ್ಟಿಗೆ ಮಲಗುವ ಹಾಗೆ ಇಲ್ಲ. ರಾತ್ರಿ ಕಾವಲುಗಾರರು ಕಾವಲು ಕಾಯಬೇಕು. ಅದ್ಯಾವುದೂ ಆಗಿಲ್ಲ ಅಂದ್ರೆ ಏನಾಗಿರಬಹುದು, ಮಂಕು ಕವಿದಿತ್ತಾ ಎಲ್ಲರಿಗೂ ಆ ಸಮಯದಲ್ಲಿ. ಕಾಲಪ್ರವಾಹವೋ? ರಾಜನೀತಿಯ ಬಗ್ಗೆ ಎಲ್ಲ ಬಲ್ಲವನಿಗೆ ಹೀಗೆ ಮಾಡಲಿಕ್ಕೆ ಸಾಧ್ಯ ಇಲ್ಲ. ಆಪತ್ತುಗಳು ಹೇಗೆ ಬರಬಹುದು ಎಂದು ಬಲ್ಲವ ನೀನು, ಅದನ್ನು ನಿವಾರಿಸುವಂತಹ ಕೌಶಲ ನಿನ್ನಲ್ಲಿದೆ, ಆದರೂ ಯಾಕೆ ಹೀಗಾಯಿತು?

ನಾನು ನಿನ್ನ ಪಾಲಿಗೆ ಕಾಲರಾತ್ರಿಯಾದೆ. ರೌದ್ರಳಾದ ನಾನು, ಅತೀ ಕ್ರೂರಿಯಾದ ನಾನು, ನಿನ್ನನ್ನು ಕೊಂದೆ. ಭೂಮಿಯನ್ನು ತಬ್ಬಿ ಮಲಗಿರಬಹುದು ನೀನು. ಈ ಧನಸ್ಸು ನಿತ್ಯ ನಾನೇ ಪೂಜೆ ಮಾಡುತ್ತಾ ಇರುವ ಧನಸ್ಸು. ಗಂಧ ಮತ್ತು ಹೂವಿನಿಂದ ಪೂಜೆ ಮಾಡ್ತಾ ಇದ್ದೆ ನಾನು. ಬಹುಶಃ ನೀನು ಈಗ ನಿನ್ನ ಅಪ್ಪನ ಜೊತೆಗೆ ಇರಬಹುದು. ಇಕ್ಷ್ವಾಕು ವಂಶಜರೊಟ್ಟಿಗೆ ಇರಬಹುದು ನೀನು. ಆಕಾಶದಲ್ಲಿ ನಕ್ಷತ್ರವಾಗಿರಬಹುದು ನೀನು. ನಿನ್ನಂತಹ ಮಹಾಪುರುಷರು ನಕ್ಷತ್ರವಾಗ್ತಾರೆ, ತೇಜಸ್ಸು ಆಗ್ತಾರೆ. ನಿನ್ನ ವಂಶವನ್ನು ಕಡೆಗಣಿಸಿದೆಯಾ? ಯಾಕೆ ನನ್ನನ್ನು ನೋಡ್ತಾ ಇಲ್ಲ? ಯಾಕೆ ನನ್ನ ಜೊತೆ ಮಾತನಾಡುತ್ತಾ ಇಲ್ಲ. ನಾವಿಬ್ಬರು ಬಾಲ್ಯದಲ್ಲೇ ಒಂದಾದವರಲ್ವಾ? ನಿನ್ನ ಸಹಚಾರಿಣಿಯಾದವಳು ನಾನು. ನನ್ನನ್ನು ಬಿಟ್ಟು ಹೋಗುವುದಿಲ್ಲ, ಜೊತೆಗೆ ಇರ್ತೆನೆ ಎಂದು ನೀನು ನನ್ನ ಕೈಯ ಮೇಲೆ ಕೈಯಿಟ್ಟು ಹೇಳಿದ್ದೆ. ನನ್ನನ್ನೂ ಕರೆದುಕೊಂಡು ಹೋಗು. ಎಲ್ಲೇ ಆಗಲಿ, ಪರಲೋಕದಲ್ಲಾಗಲೀ ನನ್ನನೂ ಕರೆದುಕೊಂಡು ಹೋಗು. ನಾನು ಎಷ್ಟೋ ಬಾರಿ ಆಲಂಗಿಸಿದಂತಹ ಆ ಮಂಗಲ ಶರೀರವನ್ನು ನಾಯಿ ನರಿಗಳು ಎಳೆದಾಡುತ್ತಾ ಇರಬಹುದು ಈ ಸಂದರ್ಭದಲ್ಲಿ. ಅಗ್ನಿಷ್ಟೋಮದಂತಹ ಯಜ್ಞಗಳನ್ನು ಮಾಡಿದವನಿಗೆ ನ್ಯಾಯವಾಗಿ ಅಗ್ನಿಹೋತ್ರದಿಂದ ಸಂಸ್ಕಾರವಾಗಬೇಕು. ಅದೂ ಇಲ್ವಾ? ಮೂರು ಜನರು ಹೋದದ್ದು ಕಾಡಿಗೆ ಒಬ್ಬ,ಲಕ್ಷ್ಮಣ, ಮಾತ್ರ ಮರಳಿ ಹೋಗ್ತಾನೆ ನಾಡಿಗೆ. ಏನು ಹೇಳಬಹುದು ಕೌಸಲ್ಯೆ? ಕೇಳಬಹುದು ಲಕ್ಷ್ಮಣನಿಗೆ ಏನಾಯಿತು ರಾಮನಿಗೆ ಏನಾಯಿತು ಸೀತೆಗೆ? ಲಕ್ಷ್ಮಣ ಕಥೆ ಹೇಳಿದಾಗ, ಕೌಸಲ್ಯೆ ನೀನು ಮಲಗಿದ್ದಲ್ಲೇ ಹತನಾದೆ, ಸೀತೆ ರಾವಣ ಮನೆಯಲ್ಲಿ ಬಂದಿ ಎಂದು ಗೊತ್ತಾದಾಗ ಅವಳ ಹೃದಯವು ಚೂರಾಗಿ ಸತ್ತು ಹೋಗ್ತಾಳೆ ಅವಳು. ಸಾಗರವನ್ನು ದಾಟಿ ಬಂದವನು ಗೋವಿನ ಹೆಜ್ಜೆಯಲ್ಲಿ ಹತನಾಗಿ ಹೋದೆಯಾ?. ನಾನು ಯಾವ ಜನ್ಮದಲ್ಲಿ ಪಾಪ ಮಾಡಿದ್ನೋ? ಯಾವ ಸತಿ ಪತಿಯರನ್ನು ಅಗಲಿಸಿದ್ನೋ? ಹೇ ರಾವಣ, ನನ್ನನ್ನು ತೆಗೆದುಕೊಂಡು ಹೋಗಿ ರಾಮನ ಮೇಲೆ ಹಾಕು. ರಾಮನ ಶಿರಸ್ಸಿನ ಜೊತೆಗೆ ನನ್ನ ಶಿರಸ್ಸನ್ನೂ, ನನ್ನ ಶರೀರವನ್ನು ಅವನ ಶರೀರದ ಜೊತೆಗೆ ಜೋಡಿಸು. ಅವನ ಜೊತೆಯಲ್ಲಿ ನಾನೂ ಹೋಗ್ತೆನೆ. ನಿನಗೆ ಪುಣ್ಯ ಬರ್ತದೆ.” ರಾವಣ ಅಂದುಕೊಂಡಿದ್ದ ರಾಮ ಇಲ್ಲದಿದ್ದರೆ ನನ್ನ ಜೊತೆಗೆ ಬರ್ತಾಳೆ ಅಂತ. ಹಾಗೆ ಆಗಲಿಲ್ಲ. ರಾಮನೊಡನೆಯೇ ಒಂದಾಗುವ ಭಾವ. ಸೀತೆ ವಶವಾಗ್ತಾಳೆ ಎನ್ನುವುದು ರಾವಣ ಭ್ರಮೆ ಅಲ್ಲದೇ ಮತ್ತೇನು? ಅಷ್ಟೊತ್ತಿಗೆ ಸೇನೆಗೆ ಸಂಬಂಧಪಟ್ಟ ವ್ಯಕ್ತಿಯೊಬ್ಬ ಬರ್ತಾನೆ. ಬಂದು ರಾವಣನಿಗೆ ಗೌರವ ಎಲ್ಲ ಕೊಟ್ಟು ಹೇಳಿದ, “ಪ್ರಹಸ್ತ ಕಾಯ್ತಾ ಇದ್ದಾನೆ ಮಾತಿಗೆ ಎಂದನಂತೆ. ಎಲ್ಲ ಅಮಾತ್ಯರೂ ಕೂಡ ಬಂದು ನಿಂತಿದ್ದಾರೆ ಮತ್ತು ನಿಮ್ಮನ್ನು ಕಾಯ್ತಾ ಇದ್ದಾರೆ. ನಿಮ್ಮನ್ನು ಕರೀತಾ ಇದ್ದಾರೆ ಎಂಬುದಾಗಿ ಹೇಳಿದ.” ಆಗ ರಾವಣ ಎದ್ದು ಹೋದ. ಆಶ್ಚರ್ಯ ಅಂದ್ರೆ ಅವನು ಎದ್ದು ಆಕಡೆ ಹೋಗಿದ್ದಂತೆ ಆ ಶಿರಸ್ಸು ಮತ್ತು ಧನಸ್ಸು ಮಾಯವಾಗಿ ಹೋಯಿತು. ಆದರೆ ಸೀತೆಗೆ ಅದು ಗೊತ್ತಾಗಲಿಲ್ಲ. ಅವಳು ಏನಾಯ್ತು ಏನಾಗಲಿಲ್ಲ ಎನ್ನುವ ಯಾವುದೇ ಮನಸ್ಥಿತಿಯಲ್ಲಿ ಅವಳಿಲ್ಲ.

ರಾವಣ ಮಂತ್ರಿಗಳ ಜೊತೆಗೆ ಮುಂದೆ ಏನು ಮಾಡಬೇಕು, ರಾಮ ಏನು ಮಾಡಬಹುದು ಎಂದೆಲ್ಲ ಯೋಚನೆ ಮಾಡ್ತಾ ಇದ್ದಾನೆ. ರಾಮಕಾರ್ಯದ ಬಗ್ಗೇ ಚಿಂತೆ ಅವನಿಗೆ. ಆಮೇಲೆ ಸಮೀಪ ಇರುವ ರಾಕ್ಷಸಿರೆಗೆಲ್ಲ ಹೇಳಿದನಂತೆ. ಒಂದು ಸಲ ಜೋರಾಗಿ ಶಬ್ದ ಮಾಡಿ. ಸೇನೆಯನ್ನು ಕರಿಯಿರಿ. ಕಾರಣ ಮಾತ್ರ ಹೇಳಬೇಡಿ. ರಾವಣನ ಜನರು ಹಾಗೇ ಮಾಡ್ತಾರೆ. ಸೇನೆ ಎಲ್ಲ ಬರ್ತಾ ಇದೆ. ರಾವಣನಿಗೆ ಅದನ್ನು ನಿವೇದನೆ ಮಾಡ್ತಾ ಇದ್ದಾರೆ. ಸೀತೆ ಎಂತಹ ಸ್ಥಿತಿಯಲ್ಲಿ ಇದ್ದಳು ಅಂದ್ರೆ, ರಾಮ ಸತ್ತಿದ್ದಾನೆ ಎನ್ನುವ ಭ್ರಮೆ ಅವಳನ್ನು ಆವರಿಸಿದೆ. ಶೋಕದಲ್ಲೇ ಹುಚ್ಚು ಹಿಡಿಯಬಹುದು. ಅಂತಹ ಒಂದು ಭಯಂಕರವಾದ ಮನಸ್ಥಿತಿಯಲ್ಲಿ ಇದ್ದಾಳೆ. ನೇಣು ಹಾಕಿಕೊಂಡು ಸಾಯಬಹುದು ಅಂತಹ ವಿಕ್ಷಿಪ್ತ ಅವಸ್ಥೆಯಲ್ಲಿ ಇರುವಾಗ, ಸರಮ ಎಂಬ ರಾಕ್ಷಸಿ ಅವಳ ಹತ್ತಿರ ಬಂದಳೂ. ಆಕೆ ಸೀತೆಯ ಪ್ರೀತಿಯ ಸಖಿ, ಸೀತೆಯ ಮೇಲೆ ಎಲ್ಲಿಲ್ಲದ ಪ್ರೀತಿ ಅವಳಿಗೆ. ಈ ಘಟನೆಯನ್ನೆಲ್ಲ ನೋಡ್ತಾ ಇದ್ದಾಳೆ ಮತ್ತು ಅದೆಲ್ಲ ಗೊತ್ತು ಅವಳಿಗೆ. ಸ್ವತಃ ಅವಳೂ ಕೂಡ ಮಾಯಾವಿನಿಯೇ. ಅವಳು ಸೀತೆಯನ್ನು ಮೃದು ಮಾತುಗಳಿಂದ ಸಂತೈಸ್ತಾಳೆ. ಅವಳೇ ಸರಮಾ.

ಅವಳ ಮೇಲೆ ರಾವಣನಿಗೆ ಬಹಳ ನಂಬಿಕೆಯಿತ್ತು. ಆದರೆ ಅವಳಿಗೆ ರಾವಣನ ಮೇಲೆ ಸೀತೆಯ ಕಾರಣಕ್ಕೇ ಯಾವ ಭಾವವೂ ಉಳಿದಿರಲಿಲ್ಲ. ತುಂಬ ಕನಿಕರ ಅವಳಿಗೆ ಸೀತೆಯ ಕುರಿತು. ಮಾತ್ರವಲ್ಲ, ಸೀತೆಯ ಬಗ್ಗೆ ಅವಳಿಗಿರುವ ನಿಷ್ಠೆ ತುಂಬಾ ಸ್ಪಷ್ಟವಿತ್ತು. ಅವಳು ನೋಡ್ತಾಳೆ ಸೀತೆಯನ್ನು, ‘ಸೀತೆಯ ಬುದ್ಧಿಯೇ ನಷ್ಟವಾಗಿಬಿಟ್ಟಿದೆ. ಹೊರಳಾಡಿ ಬಿಟ್ಟಿದ್ದಾಳೆ ಮಣ್ಣಿನಲ್ಲಿ, ಅಶೋಕವನದ ನೆಲದಲ್ಲಿ. ಮೈಯೆಲ್ಲ ಧೂಳಾಗೊ ಹೋಗಿದೆ. ಹತ್ತಿರ ಹೋಗಿ, ತುಂಬ ಪ್ರೀತಿ ಮಾಡಿ ಅವಳನ್ನು ಸಾಂತ್ವನ ಮಾಡುವ ಪ್ರಯತ್ನ ಮಾಡ್ತಾಳೆ ಸರಮಾ. ಸೀತೆಗೆ ಹೇಳಿದಳಂತೆ, ‘ನೀನು ಸಮಾಧಾನ ಮಾಡ್ಕೊ, ವ್ಯಥೆ ಪಡಬೇಡ. ನಂಗೊತ್ತಿಲ್ಲ ಅಂದುಕೊಂಡ್ಯಾ? ರಾವಣ ನಿನಗೇನು ಹೇಳಿದ, ನೀನು ತಿರುಗಿ ಏನು ಹೇಳಿದೆ? ಅದೆಲ್ಲವನ್ನೂ ಮಾಯೆಯಿಂದ ಆಕಾಶದಲ್ಲಿ ಶೂನ್ಯವಾಗಿದ್ದುಕೊಂಡು ನಾನು ಕೇಳಿದೆ. ರಾವಣನ ಭಯವಿಲ್ಲದೆ ಜೀವ ಹೋದರೆ ಹೋಗಲಿ ಎಂದುಕೊಂಡು ಬಳಿ ಬಂದು ಕೇಳಿದೆ. ಅವನು ಹೇಳಿದ್ದರ ನಿಜ ಏನು ಎನ್ನುವುದನ್ನು ಕೂಡ ಹೊರಗೆ ಹೋಗಿ ತಿಳ್ಕೊಂಡಿದ್ದೇನೆ. ಸೀತೆ,! ರಾಮನು ಮಲಗಿರುವಾಗ ವಧಿಸಲು(ಸೌಪ್ತಿಕ) ಸಾಧ್ಯವಿಲ್ಲ ಯಾಕಂದ್ರೆ ಸ್ವಭೋದ ಅವನಿಗೆ ಎಂದೂ ಇದೆ. ನೋಡು, ಮಲಗಿದಾಗ ಕೊಲ್ಲೋದಿರಲಿ, ಯಾವ ರೀತಿಯಿಂದಲೂ ರಾಮನನ್ನು ಕೊಲ್ಲೋದಕ್ಕೆ ಸಾಧ್ಯವಿಲ್ಲ. ಆ ಪುರುಷ ಸಿಂಹನನ್ನು ಕೊಲ್ಲಲಾಗದು. ಮಾತ್ರವಲ್ಲ, ವಾನರರನ್ನೂ ಕೊಲ್ಲಲಿಕ್ಕೆ ಸಾಧ್ಯವಿಲ್ಲ. ಇಡೀ ವಾನರ ಗಡಣವನ್ನು ರಾಮನೇ ಕಾಯ್ತಾನೆ.

ಅವಳು ರಾಮನನ್ನು ವರ್ಣನೆ ಮಾಡ್ತಾಳೆ, ‘ರಾಮನೆಂಬ ದೀರ್ಘವೃತ್ತಭುಜ, ದೊಡ್ಡ ಎದೆಯವನು, ಪ್ರತಾಪಶಾಲಿ, ಜಗತ್ತಿನಲ್ಲಿ ಯಾರಿಗೂ ಇಲ್ಲದಿರುವ ಅಪರೂಪದಲ್ಲಿ ಅಪರೂಪದ ಶರೀರವುಳ್ಳವನು, ಈ ಜಗತ್ತಿಗೇ ಧರ್ಮಾತ್ಮ. ಅಂತಹಾ ರಾಮ, ವಿಕ್ರಾಂತ ಮತ್ತು ರಕ್ಷಕ, ಆ ರಾಮ ತನ್ನ ತಮ್ಮ ಲಕ್ಷ್ಮಣನೊಡನೆ ಕುಶಲಿ. ಅವನಿಗೇನೂ ಆಗಿಲ್ಲ. ರಾಮನಿಗೆ ನೀತಿಶಾಸ್ತ್ರ ಗೊತ್ತಿದೆ. ಈ ವ್ಯೂಹಗಳು, ಕಪಟಗಳನ್ನು ಎದುರಿಸ್ತಕ್ಕಂತಹ ರೀತಿಯನ್ನು ಚೆನ್ನಾಗಿ ಬಲ್ಲವನು ಅವನು. ತುಂಬ ಎಚ್ಚರವಾಗಿದ್ದಾನವನು. ಅವನು ಪರಸೈನ್ಯ ಪ್ರಹಾರವನ್ನು ನಾಶ ಮಾಡಬಲ್ಲವನು. ಅವನ ಬಲವೆಷ್ಟು, ಪೌರುಷವೆಷ್ಟು ಊಹೆಗೂ ಮೀರಿರ್ತಕ್ಕಂಥದ್ದು. ಅವನಿಗೇನಾಗಿಲ್ಲ. ಆ ಶ್ರೀಮಾನ್ ರಾಮನು ಹತನಾಗಿಲ್ಲ, ಅವನೇ ಶತ್ರುಗಳನ್ನು ಸಂಹಾರ ಮಾಡ್ತಾನೆ.
ಈ ರಾವಣ! ಕೆಟ್ಟ ಬುದ್ಧಿ, ಕೆಟ್ಟ ಕೃತ್ಯ, ಇವನು ಸರ್ವಜೀವ ವಿರೋಧಿ. ಈ ದುಷ್ಟ, ಈ ರೌದ್ರ, ಈ ಮಾಯಾವಿ ನಿನ್ನ ಮೇಲೆ ಮಾಯೆಯ ಪ್ರಯೋಗವನ್ನು ಮಾಡಿದ್ದಾನೆ. ಸೀತೆ, ದೂರ ಹೋಯ್ತು ಶೋಕ! ನೋಡು, ಮಂಗಲವು ರಾಮನ ರೂಪದಲ್ಲಿ ನಿನ್ನ ಹತ್ತಿರಕ್ಕೆ ಬರ್ತಾ ಇದೆ. ಶಾಶ್ವತವಾದ ಲಕ್ಷ್ಮಿಯು ನಿನ್ನನ್ನು ವರಿಸ್ತಾಳೆ. ಕೇಳು ಕೇಳು, ನಿನಗೆ ತುಂಬ ಪ್ರೀತಿಯಾಗ್ತಕ್ಕಂತಹ ವಾರ್ತೆಯನ್ನು ಹೇಳ್ತೇನೆ.
‘ರಾಮನು ವಾನರ ಸೇನೆಯಿಂದ ಸಹಿತನಾಗಿ ಸಾಗರವನ್ನು ದಾಟಿ ದಕ್ಷಿಣ ತೀರಕ್ಕೆ ಬಂದಿದ್ದಾನೆ. ಅಲ್ಲಿ ಸೇನೆಯನ್ನು ನೆಲೆಗೊಳಿಸಿದ್ದಾನೆ, ಬೀಡುಬಿಟ್ಟಿದ್ದಾನೆ ರಾಮ. ನಾನು ಕಣ್ಣಾರೆ ಕಂಡಿದ್ದೇನೆ, ಅವನಲ್ಲಿ ಯಾವ ಭಯವೂ ಇಲ್ಲ, ಯಾವ ಆತಂಕವೂ ಇಲ್ಲ, ಏನೂ ಇಲ್ಲ. ನಿಶ್ಚಿತವಾದ ಉದ್ದೇಶ ಸಂಕಲ್ಪದ ಕಡೆಗೆ ದೃಢಚಿತ್ತನಾದ, ಹೆಚ್ಚು-ಕಡಿಮೆ ಕಾರ್ಯಸಿದ್ಧಿಯಾಗಿದೆ ಎನ್ನುವಂಥಾ ರಾಮನನ್ನು ನಾನು ಕಣ್ಣಾರೆ ಕಂಡವಳು. ಲಕ್ಷ್ಮಣನೂ ಇದ್ದಾನೆ ಪಕ್ಕದಲ್ಲೇ. ಸಮುದ್ರವನ್ನು ಹೋಲುವ ಭಾರೀ ಸೇನೆ ಸುತ್ತಿವರಿದಿದೆ ಅವನನ್ನು.

ರಾವಣ ಅಲ್ಲಿಗೆ ಗುಪ್ತಚರರನ್ನು ಕಳಿಸಿದ್ದ, ಎಲ್ಲ ಸರಿಯಾಗಿ ಪೆಟ್ಟು ತಿಂದುಕೊಂಡು ಬಂದಿದ್ದಾರೆ. ರಾಮನೇ ಬಿಟ್ಟು ಕಳಿಸಿದ್ದರಿಂದ ಜೀವಂತ ಇದ್ದಾರೆ ಅವರು. ನನಗೆ ಗೊತ್ತು, ಸ್ವಲ್ಪ ಮೊದಲು ರಾವಣನಿಗೆ ಇದೇ ವಾರ್ತೆಯನ್ನು ಅವನ ಚರರು ಹೇಳಿರುವಂಥದ್ದು. ಇವನು ಈಗ ಹೆದರಿ ಮಂತ್ರಿಗಳ ಜೊತೆ ಸಮಾಲೋಚನೆ ಮಾಡ್ತಾ ಇದ್ದಾನೆ’.
ಅಷ್ಟು ಹೊತ್ತಿಗೆ ಭಾರೀ ‘ಭೇರಿ’ಯ ಶಬ್ದ ಕೇಳಿತು. ಇಡೀ ಸೈನ್ಯವು ಬಂದು ಬಿಡಬೇಕೆಂಬ ಸೂಚನೆ ಅದು. ಅದು ಕೇಳಿತು ಸರಮೆಗೆ. ಆಗ ಆ ಮಧುರಭಾಷಿಣಿ ಸೀತೆಗೆ ಹೇಳ್ತಾಳೆ, ‘ಈ ಭೇರಿಯನ್ನು ಯುದ್ಧ ಸನ್ನಾಹವಾಗುವಾಗ ಬಡೀತಾರೆ, ಯುದ್ಧ ಮುಗಿದ ಮೇಲಲ್ಲ. ನೋಡು, ಸದ್ದು ಕೇಳು. ಆನೆಗಳು, ರಥಗಳನ್ನು, ಕುದುರೆಗಳನ್ನು ಹೂಡಲಾಗ್ತಾ ಇದೆ, ಪದಾತಿಗಳು ಕೂಡ ಶಸ್ತ್ರಗಳನ್ನು ಹಿಡಿದು ರಾಜಮಾರ್ಗವನ್ನು ತುಂಬ್ತಾ ಇದ್ದಾರೆ. ಆ ಶಸ್ತ್ರಗಳ‌ ಹೊಳಪೂ ಈಕಡೆಗೆ ಬರ್ತಾ ಇದೆ. ಇದೆಲ್ಲ ಸೇನೆಯ ಸಿದ್ಧತೆ. ಹಾಗೇ ಆನೆಗಳಿಗೆ ಕಟ್ಟುದ ಘಂಟೆಗಳ ಸದ್ದು, ಕುದುರೆಗಳ ಹೇಷಾರವ, ರಥಗಳ ಗಡಗಡ ಶಬ್ದ, ಬಗೆಬಗೆಯ ವಾದ್ಯಗಳ ಗಂಭೀರ ಧ್ವನಿ, ರಾಕ್ಷಸರ ಘರ್ಜನೆ, ಇದೆಲ್ಲ ಯುದ್ಧ ಸಿದ್ಧತೆ ಅಷ್ಟೇ. ಇನ್ನು ಮುಂದೆ ಯುದ್ಧ ಇರ್ತಕ್ಕಂತದ್ದು. ಈಗ ಏನೂ ಆಗಿಲ್ಲ. ಹಾಗಾಗಿ ನೀನೇನೂ ಚಿಂತೆ ಮಾಡಿಕೊಳ್ಳಬೇಡ, ನಿನಗೆ ವಿಜಯ ಖಂಡಿತವಾಗಿಯೂ ಕೂಡ ಸಿದ್ಧ. ಕಮಲನಯನ ರಾಮ ಬಂದು ರಾಕ್ಷಸರನ್ನು ಸಂಹಾರ ಮಾಡ್ತಾನೆ, ತನ್ನ ಅಚಿಂತ್ಯ ಪರಾಕ್ರಮದಿಂದ ನಿನ್ನನ್ನು ಗೆದ್ದುಕೊಳ್ತಾನೆ. ರಾಕ್ಷಸರಲ್ಲಿ ಪರಾಕ್ರಮವನ್ನು ಮೆರೀತಾನೆ. ನನಗೂ ಆಸೆಯಿದೆ, ನೀನು ರಾಮನ ಮಡಿಲೇರಿ ಕುಳಿತಿದ್ದನ್ನು ನೋಡ್ಬೇಕು ನಾನು. ಅದಾಗ್ತದೆ ಸದ್ಯದಲ್ಲಿಯೇ. ರಾವಣನ ಶವವನ್ನು ಕಾಣುವಾಸೆ ನನಗೆ. ಆಗ ನೀನು ಸಂತೋಷದಿಂದ ಅಳುವೆ. ರಾಮನ ಆ ಮಹಾವಕ್ಷಸ್ಥಳದಲ್ಲಿ ಮುಖವಿಟ್ಟು ನೀನು ಆನಂದಾಶ್ರುವನ್ನು ಹರಿಸ್ತೀಯೆ ಆ ಸಂದರ್ಭದಲ್ಲಿ. ಆ ಮೊದಲಿನ ಸಂದರ್ಭ ಮತ್ತೆ ನೆನಪಿಗೆ ಬರ್ತದೆ; ಈ ಜಡೆಯನ್ನು ರಾಮನೇ ಬಿಡಿಸ್ತಾನೆ. ಪೂರ್ಣಚಂದ್ರನಂತೆ ಉದಿಸಿದ ರಾಮನ ಆ ಕಲ್ಯಾಣವದನವನ್ನು ನೀನು ಕಾಣ್ತೀಯೆ. ಹೆಚ್ಚುಕಾಲವಿಲ್ಲ, ಬಹಳ ಹತ್ತಿರವೇ ಬಂರು ಆ ಸಮಯ, ರಾವಣನನ್ನು ಕೊಲ್ತಾನೆ ರಾಮ’ ಅಂತ ಈಗಲೇ ಸಂಭ್ರಮಾಚರಣೆ ಮಾಡ್ತಾಳೆ ಸರಮಾ ಎಂಬ ರಾಕ್ಷಸಿ!
ಇದೆಲ್ಲವನ್ನೂ ವರ್ಣನೆ ಮಾಡಿ, ಸೂರ್ಯನನ್ನು ತೋರಿಸ್ತಾಳೆ, ‘ಸೂರ್ಯನಿಗೆ ಶರಣಾಗು, ನಮಸ್ಕಾರ ಮಾಡು. ಅವನ ಕೃಪೆಯಿಂದ ಈ ಕಾರ್ಯ ಆಗ್ತದೆ‌’ ಎಂಬುದಾಗಿ ಸೀತೆಯನ್ನು ಸಂತೈಸ್ತಾಳೆ.
ಸರಮೆಯ ಪಾತ್ರ ರಾಮಾಯಣದಲ್ಲಿ ತುಂಬ ಸುಂದರವಾಗಿರತಕ್ಕಂತ ಪಾತ್ರ. ಸೀತೆಗೆ ಸಮಾಧಾನದ ಕೇಂದ್ರ ಅವಳು! ಇನ್ನೂ ದೊಡ್ಡ ಸಾಹಸಕ್ಕೆ ಸಿದ್ಧಳಾಗಿದ್ದಾಳೆ ಆಕೆ.

ದೈವ ಎಲ್ಲೆಲ್ಲೋ ಒಳ್ಳೆಯವರನ್ನು ಇಟ್ಟಿರ್ತದೆ. ದುಷ್ಟರ ಮಧ್ಯದಲ್ಲಿ, ಕೇಡಿಗಳ ಮಧ್ಯದಲ್ಲಿಯೂ ಕೂಡ ಇಂತವರು ಒಳ್ಳೆಯವರು ಇರ್ತಾರೆ. ಭಾರೀ ದೊಡ್ಡ ಸೇವೆ ಆಕೆ ಮಾಡಿದ್ದು. ಇಲ್ಲಾಂದ್ರೆ ಏನಾಗ್ತಿತ್ತೋ ಸೀತೆಯ ಕತೆ! ಮೃತ್ಯುವಿನ ದವಡೆಯಿಂದ ಸೀತೆಯನ್ನು ಮರಳಿ ಬದುಕಿಗೆ ಕರೆತಂದವಳು ಸರಮಾ.

ಸರಮೆಯ ಸಾಹಸವೇನು? ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ನೋಡೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments