ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ“ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ 21:

   ಬ್ರಹ್ಮೈಕ್ಯ ಪೂಜ್ಯಗುರುವರ್ಯರು
 -ನಾನು ದರ್ಶನ ಮಾಡಿದಂತೆ

                                     ಡಾ||ಬಿ.ವಿ.ನರಹರಿ ರಾವ್

       ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಮಹಾತಪಸ್ವಿಗಳೂ, ತಪೋನಿಷ್ಠರೂ, ಮಹಾಜ್ಞಾನಿಗಳೂ ಮತ್ತು ಮಹಾಮಹಿಮಾನ್ವಿತರೂ ಆಗಿದ್ದರು. ಅವರು ಅತ್ಯಂತ ದೀರ್ಘಕಾಲ ನಮ್ಮನ್ನು ಮುನ್ನಡೆಸಿದವರು. 54 ಚಾತುರ್ಮಾಸ್ಯ ವ್ರತಗಳನ್ನು ನಡೆಸಿ, ಸಮಾಜದ ಎಲ್ಲಾ ವರ್ಗಗಳ ಹಿತವನ್ನು ಬಯಸಿ, ತಮ್ಮ ಅಪಾರವಾದ ಕರುಣೆ, ಶಿಷ್ಯ ವಾತ್ಸಲ್ಯಗಳಿಂದ ನಮ್ಮನ್ನು ಅನುಗ್ರಹಿಸಿದವರು -ಅವರು.

ಈಗ್ಗೆ ಸುಮಾರು 30-35 ವರ್ಷಗಳ ಹಿಂದಿನ ಮಾತು. ಆಗ ಶ್ರೀ ಸವಾರಿಯು ಶಿವಮೊಗ್ಗಾ ಜಿಲ್ಲಾ ಕ್ಯಾಸನೂರು ಶೀಮಾ ಬನದಕೊಪ್ಪಗ್ರಾಮದ ಶ್ರೀಕಾಶೈನ ಮಂಜಪ್ಪನವರ ಮನೆಯಲ್ಲಿ ಮೊಕ್ಕಾಂ ಮಾಡಿತ್ತು. ಆ ಸಂದರ್ಭದಲ್ಲಿ ಉತ್ಸಾಹದಿಂದ ಕೂಡಿದ ನಾವು ಕೆಲವು ಯುವಕರು ನಮ್ಮ ಶ್ರೀಗುರುವರೇಣ್ಯರನ್ನು ಭೇಟಿಮಾಡಿ ಮಾತುಕತೆಯಾಡಿದೆವು. ನಮ್ಮ ಮಾತುಕತೆಯಿಂದ ಶ್ರೀಗುರುಗಳಿಗೆ ತುಂಬ ಸಂತೋಷವಾಯಿತು. ಅಲ್ಲದೆ ಇನ್ನು ಮುಂದೆ ನೀವೆಲ್ಲರೂ ಗುರುಗಳನ್ನು ಆಗಾಗ ಭೇಟಿ ಮಾಡಬೇಕು. ಶ್ರೀಮಠಕ್ಕೂ ನಿರಂತರವಾಗಿ ಬರಬೇಕು ನೀವು ಯಾವುದೇ ಉಡುಗೆಯನ್ನು ಧರಿಸಿಯಾದರೂ ಬರಬಹುದು ಎಂದು ಅಪ್ಪಣೆ ಕೊಟ್ಟರು. ಈ ಪ್ರಕರಣದಿಂದ ನಮ್ಮ ಗುರುಗಳಿಗೆ ಯುವಕರನ್ನು ಪ್ರೋತ್ಸಾಹಿಸುವುದರ ಜೊತೆಗೆ ಯುವಕರ ಮೇಲೆ ಅಗಾಧವಾದ ವಿಶ್ವಾಸ ಮತ್ತು ಭರವಸೆ ಇತ್ತು ಎಂಬುದು ಗೊತ್ತಾಗುತ್ತದೆ.

ಇನ್ನೊಂದು ಪ್ರಸಂಗವನ್ನು ದಾಖಲಿಸಲು ನನಗೆ ಸಂತೋಷವೆನಿಸುತ್ತದೆ. ನಮ್ಮ ಗುರುಗಳು ಒಂದು ಗ್ರಂಥವನ್ನು ರಚಿಸಿದ್ದರು. ಆ ಗ್ರಂಥಕ್ಕೆ ಶಿರೋನಾಮೆ “ಆತ್ಮವಿದ್ಯಾssಖ್ಯಾಯಿಕ”ಎಂದು ನಮೂದಿಸಿದ್ದರು. ಶ್ರೀಗುರುಗಳು ಬೆಂಗಳೂರಿನಲ್ಲಿ ಇದ್ದಾಗ ಗಿರಿನಗರದ ಶ್ರೀಮಠಕ್ಕೆ ನಾನೂ ಆಗಾಗ ಹೋಗುತ್ತಿದ್ದೆ. ಒಂದು ಸಲ ಅವರು ತಾವು ಬರೆದ ಗ್ರಂಥದ ಬಗ್ಗೆ ವಿವರಿಸಿದರು. ನಾನು ಆಗ ಆಲೋಚನೆ ಮಾಡಿ ಶ್ರೀಗುರುಗಳ ಹತ್ತಿರ “ವ್ಯಾಕರಣ ದೃಷ್ಟಿಯಿಂದ ತಾವು ಬರೆದ ಗ್ರಂಥದ ಹೆಸರು “ಆತ್ಮವಿದ್ಯಾSSಖ್ಯಾಯಿಕಾ”ಎಂದು ಇಟ್ಟಿರುವುದು ಯೋಗ್ಯವಾಗಬಹುದಾದರೂ ನಮ್ಮಂತಹ ಸಾಮಾನ್ಯ ಜನತೆಗೆ ಆ ಗ್ರಂಥದ ಶಿರೋನಾಮೆಯನ್ನು ಉಚ್ಚರಿಸುವುದು ಕಷ್ಟಕರವೆಂದೂ, ಸುಲಭವಾಗಿ ಉಚ್ಚರಿಸುವಂತೆ ಶಿರೋನಾಮೆಯು ಇರುವುದು ಉಚಿತವೆಂದೂ, ಅಲ್ಲದೆ ಈ ಗ್ರಂಥ ಬಿಡುಗಡೆ ಸಮಾರಂಭವು ರಾಜ್ಯದ ರಾಜಧಾನಿಯಲ್ಲಿಯೇ ನಾಡಿನ ಶ್ರೇಷ್ಠ ವ್ಯಕ್ತಿಯೊಬ್ಬರಿಂದ ಬಿಡುಗಡೆಯಾಗುವುದು ಅತ್ಯಂತ ಸಮಂಜಸವೆಂದೂ, ನಿವೇದಿಸಿದೆ. ಆಮೇಲೆ ಮೂರ್ನಾಲ್ಕು ದಿವಸಗಳ ನಂತರ ಪುನಃ ಶ್ರೀಮಠಕ್ಕೆ ಹೋದಾಗ ನನಗೊಂದು ಅಚ್ಚರಿ ಕಾದಿತ್ತು. ಶ್ರೀಗುರುಗಳನ್ನು ಭೇಟಿಯಾದಾಗ ನನಗೆ “ನೀನು ಹೇಳಿದಂತೆ ಗ್ರಂಥದ ಶಿರೋನಾಮೆಯನ್ನು ಎಲ್ಲರೂ ಸ್ಪಷ್ಟವಾಗಿ ಉಚ್ಚರಿಸಲು ಸುಲಭವಾಗುವಂತೆ “ಅತ್ಮವಿದ್ಯಾ ಆಖ್ಯಾಯಿಕಾ“ಎಂದು ಬದಲಾಯಿಸಿದ್ದೇವೆ” ಎಂದರು. ಸ್ವಲ್ಪ ದಿವಸಗಳ ನಂತರ ಆ ಗ್ರಂಥವು ಭಾರತದ ಸರ್ವೋಚ್ಛ ನ್ಯಾಯಾಲಯದ ಶ್ರೇಷ್ಠ ನ್ಯಾಯಾಧೀಶರಾದ ಶ್ರೀ.ಇ.ಎಸ್.ವೆಂಕಟರಾಮಯ್ಯ ಅವರಿಂದ ಬೆಂಗಳೂರಿನ ಗಿರಿನಗರದಲ್ಲಿ ಭವ್ಯಸಮಾರಂಭವೊಂದರಲ್ಲಿ ಬಿಡುಗಡೆಯಾಯಿತು. ಇದರಿಂದ ನಮ್ಮಂತಹ ಯುವಕರ ಮಾತಿಗೂ ಶ್ರೀಗುರುಗಳು ಬೆಲೆ ಕೊಡುತ್ತಿದ್ದರು ಎಂಬುದು ದೃಢಪಡುತ್ತದೆ.

ಇನ್ನೊಂದು ವಿಚಾರವನ್ನು ಇಲ್ಲಿ ಹೇಳಬೇಕಾಗುತ್ತದೆ. ನಮ್ಮ ಗುರುಗಳು ತಾವು ಸ್ವತಃ ಗ್ರಂಥವನ್ನು ರಚಿಸಿದ್ದಲ್ಲದೆ ಬೇರೆಯವರನ್ನು ಸಹ ಧಾರ್ಮಿಕ, ತಾತ್ವಿಕ, ನೈತಿಕ ವಿಷಯಗಳ ಬಗ್ಗೆ ಬರೆಯಲು ಪ್ರೋತ್ಸಾಹಿಸುತ್ತಿದ್ದರು. ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ “ಭಾರತ ದರ್ಶನ”ಪ್ರಕಾಶನದವರು ಶ್ರೀಮನ್ಮಹಾಭಾರತ, ಶ್ರೀಮದ್ರಾಮಾಯಣ ಹಾಗೂ ಶ್ರೀಮದ್ಭಾಗವತ ಗ್ರಂಥದ 52ಸಂಪುಟಗಳನ್ನು ಹೊರತಂದಿದ್ದಾರೆ. ಈ ಎಲ್ಲಾ ಸಂಪುಟಗಳಿಗೂ ಹಾಗೂ ವಿಶೇಷ ಸಂಚಿಕೆಗಳಿಗೂ ಸುವರ್ಣ ಮಂತ್ರಾಕ್ಷತೆಯನ್ನು ಅನುಗ್ರಹಿಸಿ ಪ್ರೋತ್ಸಾಹಿಸಿದವರು ನಮ್ಮ ಶ್ರೀಗುರುವರೇಣ್ಯರು. ನಮ್ಮ ಗುರುಗಳು ಬ್ರಹ್ಮೈಕ್ಯರಾದ ಸಂದರ್ಭದಲ್ಲಿ ಈ ಸಂಸ್ಥೆಯು “ಭಾರತ ದರ್ಶನ” ಮಾಸಿಕ ಪತ್ರಿಕೆಯಲ್ಲಿ ಸಂಪಾದಕೀಯ ಲೇಖನ ಬರೆದು ಶ್ರೀಗುರುಗಳಿಗೆ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿ ಗೌರವಿಸಿದೆ.

ಶ್ರೀಗುರುವರೇಣ್ಯರ ದೀರ್ಘಕಾಲದ ಇತಿಹಾಸದಲ್ಲಿ ಹವ್ಯಕ ಸಮಾಜದ ಗಣ್ಯರು ಭಕ್ತವೃಂದದ ಅನೇಕರು ಸರ್ಕಾರಿ ಕ್ಷೇತ್ರದಲ್ಲಿಯೂ ಹವ್ಯಕರು ಅತ್ಯಂತ ಉನ್ನತ ಪದವಿಗಳಲ್ಲಿ ವಿಜೃಂಭಿಸಿದವರು. ಶ್ರೀಗುರುವರ್ಯರು ನಮ್ಮೆಲ್ಲರನ್ನು ಪ್ರೋತ್ಸಾಹಿಸಿ ಅನುಗ್ರಹಿಸಿದ್ದಾರೆ.ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಗುರುವರೇಣ್ಯರಿಗೆ ಶ್ರದ್ದಾಭಕ್ತಿ ಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

~*~

 

Facebook Comments