ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಒಳ್ಳೆಯ ಕಾರ್ಯಕ್ಕೆ‌ ಮುಂದಾಗುವಾಗ ಬಲಗಾಲು ಮುಂದಿಟ್ಟು ಪ್ರವೇಶಿಸುವುದು ಪದ್ಧತಿ. ಬಲ‌ ಎಷ್ಟು ಮುಖ್ಯವೋ ಎಡವೂ ಅಷ್ಟೇ ಮುಖ್ಯ. ಹೇಗಾದರೆ ಒಳ್ಳೆಯ ಕಾರ್ಯಕ್ಕೆ ನಾವು ಬಲಗಾಲು ಮುಂದಿಟ್ಟು ಮುಂದಾಗ್ತೇವೆ, ಹಾಗೇ ಬೇರೆ ರೀತಿಯ ಕಾರ್ಯಗಳಿಗೆ ಎಡಗಾಲು ಮುಂದಿಟ್ಟು ಮುಂದಾಗುವುದು ಕೂಡ ಇದೆ. ಈಗ ಹನುಮಂತ ಮಾಡಿದ್ದೂ ಅದನ್ನು. ಎಡಗಾಲು ‌ಮುಂದಿಟ್ಟು ಲಂಕೆಯನ್ನು ಪ್ರವೇಶ ಮಾಡಿದನಂತೆ ಹನುಮ. ಮಾತ್ರವಲ್ಲ, ಲಂಕೆಯ ಮಹಾದ್ವಾರವನ್ನು ಆತನು ಉಪಯೋಗಿಸಲಿಲ್ಲ‌. ಯದ್ಯಪಿ, ಲಂಕಾ ದೇವಿಯನ್ನು ಗೆದ್ದಾಗಿದೆ. ಲಂಕಾ ದೇವಿಯೇ ಮೊದಲು ಯುದ್ಧಾಹ್ವಾನ ಕೊಟ್ಟವಳು, ಈಗ ಲಂಕಾ ನಗರಕ್ಕೆ ಆಹ್ವಾನವನ್ನು, ಸ್ವಾಗತವನ್ನು ನೀಡಿದ್ದಾಳೆ. ಹಾಗಾಗಿ ಲಂಕಾ ಪ್ರವೇಶಕ್ಕೆ ಏನಡ್ಡಿಯಿಲ್ಲ. ಆದರೆ ಹನುಮಂತ ದ್ವಾರದ ಮೂಲಕವಾಗಿ ಪ್ರವೇಶ ಮಾಡ್ಲಿಲ್ಲ, ದ್ವಾರವಲ್ಲದ ಸ್ಥಳದಿಂದ, ಪ್ರಾಕಾರವನ್ನು ಹಾರಿ ಲಂಕೆಯನ್ನು ಪ್ರವೇಶ ಮಾಡಿದ. ಅದು ಒಳ್ಳೆದು ಮಾಡಲಿಕ್ಕಲ್ಲವೆಂದೇ ಲೆಕ್ಕವದು. ಮಿತ್ರನಾದರೆ ದ್ವಾರದಿಂದ ಒಳಗೆ ಬರಬೇಕು. ಹಾಗೇ, ಕಾಮರೂಪಿಣಿಯಾದ ಲಂಕಾ ನಗರಿಯನ್ನು ಗೆದ್ದ ಹನುಮಂತ, ಪ್ರಾಕಾರವನ್ನು ಲಂಘಿಸಿ ಎಡಗಾಲನ್ನು ಮುಂದಿಟ್ಟು ಪ್ರವೇಶ ಮಾಡ್ತಾನೆ.

ಪ್ರಯಾಣ ಕಾಲದಲ್ಲಿ, ಸ್ವಗೃಹವನ್ನು ಪ್ರವೇಶಿಸುವಾಗ, ವಿವಾಹ ಕಾಲದಲ್ಲಿ‌ ಮನೆಯನ್ನು ತುಂಬಿಸುವಾಗ ಕುಲವಧು ಬಲಗಾಲು ಮುಂದಿಟ್ಟು ಪ್ರವೇಶ ಮಾಡ್ಬೇಕು. ಆದರೆ ಶತ್ರುವಿನ ನಗರವನ್ನು ಪ್ರವೇಶ ಮಾಡುವಾಗ ದೊರೆಯಾದವನು ಎಡಗಾಲು ಮುಂದಿಟ್ಟು ಪ್ರವೇಶ ಮಾಡಬೇಕು. ಇಲ್ಲಿ ದೊರೆಯ ಪ್ರತಿನಿಧಿ ಆಗಿರತಕ್ಕಂತ ಹನುಮಂತ ಅದನ್ನೇ ಮಾಡ್ತಾನೆ. ಈ ಪ್ರಾಕಾರವನ್ನು ನೆಗೆದವನು, ಇಳಿಯಬೇಕಾದರೆ ಎಡಗಾಲನ್ನಿಟ್ಟ‌. ಬಲಗಾಲು ಆಮೇಲೆ ಇಟ್ಟ. ಇಟ್ಟ ಎಡಗಾಲು ಹನುಮಂತನ ಪ್ರಕಾರ, ‘ಇದು ನಾನು ರಾವಣನ ತಲೆಯ ಮೇಲೆ ಇಡ್ತಾ ಇದ್ದೇನೆ’ ಎನ್ನುವ ಭಾವ ಇದೆ, ಲಂಕೆಯ ನೆಲದಲ್ಲಿ ಅಂತ ಅಲ್ಲ. ರಾವಣನ ತಲೆ‌ಮೆಟ್ಟುವ ಮೂಲಕ ಶುಭಾರಂಭ ಅನ್ನುವ ಹಾಗೆ‌.

ಸರಿ, ಲಂಕಾ ನಗರಿಯೊಳಗೆ ಹನುಮಂತನ ಸಂಚಾರ ಪ್ರಾರಂಭ. ಚಂದ್ರೋದಯದ ಹೊತ್ತು ಅದು. ರಾಜಮಾರ್ಗದಲ್ಲಿಯೇ ಮುನ್ನಡೆದನಂತೆ ಹನುಮಂತ. ಅಲ್ಲಿ‌ ಮುತ್ತಿನಂಥಾ ಪುಷ್ಪಗಳು ಚೆಲ್ಲಿದ್ದವು. ಇಕ್ಕೆಲಗಳಲ್ಲಿ ವಜ್ರದ ಜಾಲಕಗಳನ್ನು ಒಳಗೊಂಡು ಐರಾವತದಂತೆ ಶೋಭಿಸುತ್ತಿರುವ ಆ ಭವನಗಳು. ಹನುಮಂತನ ಕಣ್ಣಿಗೆ ಲಂಕೆ ಹೊತ್ತಿ ಉರಿಯಿತೋ ಎಂಬಂತೆ ಗೋಚರಿಸಿತು ಮುಕ್ತಾಮಣಿಗಳ ಪ್ರಭೆಯಿಂದಲಾಗಿ. ಅಲ್ಲಿ ಬಗೆಬಗೆಯ ಭವನಗಳಿದ್ದವು. ಲಂಕೆಯ ಭವನಗಳಿಗೆ ಹೂಮುಡಿಸಲಾಗಿದೆ, ಆಭರಣಗಳನ್ನು ತೊಡಿಸಲಾಗಿದೆ. ಒಂದೊಂದೇ ಮನೆಯನು ನೋಡ್ತಾ ಇದ್ದಾನೆ ಹನುಮಂತ. ಒಂದು ಇದ್ದ ಹಾಗೆ ಇನ್ನೊಂದು ಇಲ್ಲ. ಚಿತ್ರ-ವಿಚಿತ್ರವಾಗಿರುವ ಆಕೃತಿಗಳು. ಲಂಕಾಲೋಕದ ಸ್ತ್ರೀಯರಿಂದ ಮಧುರ ಗಾಯನ ಕೇಳಿತು. ಆ ಗಾಯನದಲ್ಲಿ ಸ್ವಲ್ಪ‌ ಅಮಲಿನ ಚಿಹ್ನೆಯೂ ಇದೆ‌. ಸ್ತ್ರೀಯರ ನೂಪುರಗಳು, ಕಾಂಚೀ(ಡಾಭಿ)ಗಳು ಸದ್ದು ಮಾಡ್ತಾ ಇದ್ದವು. ಮೆಟ್ಟಿಲು ಹತ್ತಿ ಹೋಗುವ ಶಬ್ದ. ಹಾಗೆಯೇ ಚಪ್ಪಾಳೆ, ಘರ್ಜಿಸುವ ಶಬ್ದ ಎಲ್ಲ ಕೇಳ್ತಾ ಇದೆ.‌ ಆಶ್ಚರ್ಯ ಕಾದಿತ್ತು ಹನುಮಂತನಿಗೆ, ಮಂತ್ರಘೋಷ ಕೇಳಲು ಶುರುವಾಯಿತಂತೆ. ರಾಕ್ಷಸರೇ ಮಂತ್ರ ಹೇಳ್ತಾ ಇದ್ದಾರೆ, ವೇದಾಧ್ಯಯನವನ್ನೂ ಮಾಡ್ತಾ ಇದ್ದರಂತೆ. ಇದೆಲ್ಲ ಅವರ ಕೈಗೆ ಸಿಕ್ಕಿದರೆ ಇನ್ನು ಏನೇನು ವಿಪತ್ತೋ ಪ್ರಪಂಚಕ್ಕೆ! ಇನ್ನು ಕೆಲವರದು ರಾವಣನ ಸ್ತೋತ್ರ! ಇನ್ನು ಕೆಲವರು ರಾಕ್ಷಸರು ಬೊಬ್ಬಿರಿತಾ ಇದ್ದರು‌. ಮತ್ತೂ ಮುಂದುವರೆದು ಹೋದಾಗ ಹನುಮಂತ ನಗರ ಮಧ್ಯದಲ್ಲಿ‌ ದೊಡ್ಡ ರಾಕ್ಷಸರ ಸೈನ್ಯವೊಂದನ್ನು ಕಂಡ.‌

ಆಮೇಲೆ ರಾವಣನ ‘ಚರಲು’ (ಅಧಿಕಾರಿಗಳು) ಅಲ್ಲಲ್ಲಿ ಅಡ್ಡಾಡ್ತಾ ಇತ್ತು. ಇನ್ನು ಎಂತೆಂಥಾ ರಾಕ್ಷಸರನ್ನು‌ ಹನುಮ ಕಂಡನಂತೆ? ದೀಕ್ಷಿತರು, ಜಟೆ ಬಿಟ್ಟ ರಾಕ್ಷಸರು, ಕಡಲ ರಾಕ್ಷಸರು ಪೂರ್ತಿ ಬೋಳು ಮಾಡಿಕೊಂಡಿದ್ದರಂತೆ. ಕೆಲವರು ಗೋವಿನ ಚರ್ಮವನ್ನು ತೊಟ್ಟಿದ್ದರಂತೆ. ಇನ್ನು ಕೆಲವು ರಾಕ್ಷಸರಿಗೆ ದರ್ಭಮುಷ್ಟಿಯೇ ಆಯುಧವಂತೆ. ಇನ್ನು ಕೆಲವು ರಾಕ್ಷಸರಿಗೆ ಅಗ್ನಿಕುಂಡವೇ ಆಯುಧವಂತೆ. ಅಂದರೆ, ವಾಮಾಚಾರವನ್ನು ಮಾಡತಕ್ಕಂತವನು.

ಹಾಗೆಯೇ, ಮುಂದುವರೆದ ಹನುಮಂತನಿಗೆ ರಾಕ್ಷಸರ ಅನೇಕ ವೈವಿಧ್ಯಗಳು ಕಂಡವು. ಒಂದೇ ಕಣ್ಣಿನ, ಒಂದೇ ಕಿವಿಯ, ಜೋಲು ಹೊಟ್ಟೆಯ ರಾಕ್ಷಸರು. ಇನ್ನು ಕೆಲವರಿಗೆ ಎದೆಯೇ ಜೋಲುತ್ತಾ ಇತ್ತಂತೆ. ಕೆಲವರು ಕರಾಳರು, ಕೆಲವರಿಗೆ ಸೊಟ್ಟೆ ಮೂತಿ, ಕೆಲವರು ವಿಕಟರು, ಕೆಲವರು ವಾಮನರು. ಬಗೆಬಗೆಯ ಆಯುಧಗಳನ್ನು ಹಿಡಿದವರು.
ಧನುಸ್ಸು, ಜಡ್ಗ, ಶತಘ್ನೀ, ಮುಸಲ, ಪರಿಧಗಳನ್ನು ತೊಟ್ಟ ರಾಕ್ಷಸರು‌. ವಿಚಿತ್ರ ಕವಚಗಳನ್ನು ತೊಟ್ಟು ಶೋಭಿಸುವವರು ಕೆಲವರು. ಆದರೆ ಒಳ್ಳೆಯ ತಳಿಗಳೂ ಇದ್ದವಂತೆ. ಕೆಲವು ರಾಕ್ಷಸರು ಹೆಚ್ಚು ಸ್ಥೂಲ ಅಲ್ಲ, ಅತಿಕೃಶವೂ ಅಲ್ಲ. ಅತಿ ದೀರ್ಘವಲ್ಲ, ಅತಿ ಹೃಸ್ವವಲ್ಲ. ಅತಿ ಬಿಳಿಯಲ್ಲ, ಅತಿ ಕಪ್ಪಲ್ಲ. ಅತಿ ಕುಬ್ಜ ಅಲ್ಲ, ಹೇಗಿರಬೇಕೋ‌ ಹಾಗಿದ್ದಾರೆ. ಅಂಥವರೂ ಇದ್ದರು. ಕೆಲವರು ವಿರೂಪರು, ಕೆಲವರು ಬಹುರೂಪರು. ಇನ್ನು ಕೆಲವರು ಸುರೂಪರು‌. ಕೆಲವರ ಕೈಯ್ಯಲ್ಲಿ ಪತಾಕೆ, ಕೆಲವರ ಕೈಯ್ಯಲ್ಲಿ ಧ್ವಜ. ಕೆಲವರ ಕೈಯ್ಯಲ್ಲಿ ಕೆಲವು ಕೆಲವು ಆಯುಧಗಳು.

ಕೆಲವರು‌ ಒಳ್ಳೆಯ ಮಾಲೆ ಹಾಕಿಕೊಂಡು‌ ಗಂಧ ಲೇಪನ ಮಾಡಿಕೊಂಡಿದ್ದಾರೆ. ಒಳ್ಳೊಳ್ಳೆಯ ಆಭರಣಗಳನ್ನು ಹಾಕಿಕೊಂಡಿದ್ದಾರೆ, ನಾನಾ ರೀತಿಯ ವೇಷಗಳನ್ನು ಧಾರಣೆ ಮಾಡಿದ್ದಾರೆ. ಮನಬಂದಂತೆ ಇದ್ದ ಕೆಲವರು ರಾಕ್ಷಸರನ್ನು ಹನುಮಂತ ಕಂಡ. ಮುಂದೆ ಹನುಮಂತ ಅವನಿಗೇ ಗೊತ್ತಿಲ್ಲದಂತೆ ರಾವಣನ ಅರಮನೆಯ ಮುಂದೆ ಬಂದು ನಿಂತಿದ್ದಾನೆ. ಅಲ್ಲಿ ಲಕ್ಷೋಪಲಕ್ಷ ರಾಕ್ಷಸರು ಶೂಲ, ವಜ್ರಗಳನ್ನು ಹಿಡಿದು ನಿಂತಿದ್ದಾರೆ. ತಲೆ ಎತ್ತಿ‌ ನೋಡಿದಾಗ ಇದು ರಾವಣನ ಮನೆ ಅಂತ ಗೊತ್ತಾಯಿತು ಹನುಮನಿಗೆ. ಇಡೀ ಲಂಕೆಯಲ್ಲಿಯೇ ಅತ್ಯಂತ ಶೋಭಾಯಮಾನವಾದ ಭವನಮಾಲಿಕೆ‌ ಅದು. ಮೈಲುಗಟ್ಟಲೆ ವಿಸ್ತೀರ್ಣದಲ್ಲಿ ಇತ್ತಂತೆ ಆ ಒಂದು‌ ನಿಲಯ. ಯಾಕೆಂದರೆ ಅಲ್ಲಿ ಅನೇಕಾನೇಕ ಪ್ರಾಸಾದಗಳು, ಭವನಗಳು ಇದ್ದವು. ದೊಡ್ಡ ಅಪರಂಜಿ‌ ಚಿನ್ನದ ತೋರಣವಿತ್ತು. ಗಿರಿಶಿಖರದಲ್ಲಿ ಲಂಕೆ, ಲಂಕೆಯ ನೆತ್ತಿಯಲ್ಲಿ‌ ರಾವಣನ ಮನೆ. ಆ ಮನೆಯ ಸುತ್ತ ಕಂದಕಗಳು, ಕೋಟೆ. ತಪ್ಪು ಮಾಡಿಕೊಂಡವರಿಗೆ ರಕ್ಷಣೆ ಜಾಸ್ತಿ ಬೇಕಾಗ್ತದೆ‌. ಹೀಗೆ, ಕಂದಕಗಳ ಸುತ್ತ ನೀರು, ನೀರಲ್ಲಿ ‌ಕಮಲ ಮತ್ತು ಉತ್ಫಲಗಳು ಅರಳಿದ್ದವು. ಎಲ್ಲ‌ ಕಡೆಯಿಂದ ಆ ಪ್ರಾಕಾರವಿತ್ತು. ಮನೆಯೆಂದರೇನು ಸ್ವರ್ಗದಂತೆ ಇದೆ.

ದಿವ್ಯವಾಗಿದೆ. ದಿವ್ಯನಾದವನ್ನ ಹೊರಗೆ ಚೆಲ್ತಾ ಇದೆ ಮನೆ. ಕುದುರೆಗಳ ಹೇಷಾರವವೇನು? ಆಭರಣಗಳ ಧ್ವನಿಯೇನು? ರಥಗಳೇನು, ಪಲ್ಲಕ್ಕಿಗಳೇನು, ವಿಮಾನಗಳೇನು, ಆನೆ ಕುದುರೆಗಳೇನು, ನಾಲ್ಕು ದಂತದ ಆನೆಗಳನ್ನು ಕಂಡನಂತೆ ಹನುಮಂತ. ಮನೋಹರವಾದ ದ್ವಾರ. ಆ ದ್ವಾರವು ಅಲಂಕೃತವಾಗಿದೆ. ಅಮಲೇರಿದ ಮೃಗಪಕ್ಷಿಗಳು. ಸಾವಿರಾರು ರಾಕ್ಷಸರು ಕಾವಲು ಕಾಯ್ತಿದಾರೆ ಆ ರಾವಣನ ಮನೆಯನ್ನು. ಇಂತಹ ರಾವಣನ ಮನೆಯನ್ನು ಪ್ರವೇಶಿಸಲೆಣಿಸಿದನು ಹನುಮಂತ. ಅಷ್ಟು ಹೊತ್ತಿಗೆ ಚಂದ್ರ ಮೇಲೆ ಬಂದ. ಚಂದ್ರದೀಪದಲ್ಲಿ ಲಂಕೆಯನ್ನು ನೋಡ್ತಾನೆ ಹನುಮಂತ. ಲಂಕೆಯನ್ನು ಪ್ರವೇಶಮಾಡುವಾಗ ಚಂದ್ರೋದಯ. ರಾವಣನ ಮನೆಗೆ ಬರುವಾಗ ಮಧ್ಯ ಬಂದಿದಾನೆ ಚಂದ್ರ. ಬೆಳದಿಂಗಳನ್ನು ಚೆಲ್ತಾ ಇದಾನೆ. ನೋಡಿದರೆ ದೊಡ್ಡ ಬಿಳಿಯ ನಂದಿಯು ಹಟ್ಟಿಯಲ್ಲಿ ಅತ್ತಿತ್ತ ಅಡ್ಡಾಡುವಂತೆ ಕಾಣ್ತಿದಾನೆ ಚಂದ್ರ. ಲೋಕದ ದುಃಖವನ್ನು ಕಳೆಯುವವನು. ಸಮುದ್ರವನ್ನು ಉಕ್ಕೇರಿಸುವವನು. ಸಮಸ್ತ ಜೀವರಾಶಿಗಳಿಗೆ ತಂಪೀಯುವವನು ಆ ಚಂದ್ರನು ಮೇಲೇರಿ ಬರುವುದನ್ನು ಕಂಡನಂತೆ ಹನುಮಂತೆ.

ಇತ್ತ ಲಂಕೆಯಲ್ಲಿ ಸಂಗೀತ ಜೋರಾಯಿತು. ಕಿವಿಗೆ ಇಂಪಾಗಿರುವ ತಂತ್ರೀ ವಾದ್ಯಗಳು ಆರಂಭವಾದವಂತೆ. ಹನುಮಂತ ನೋಡ್ತಾ ಇದಾನೆ. ಅನೇಕ ನಾರಿಯರು ತಮ್ಮ ಪತಿಯ ಜೊತೆಯಲ್ಲಿ ಸುಖವಾಗಿ ಪವಡಿಸಿದಾರೆ. ಕೆಲವು ರಾಕ್ಷಸರು ಅತ್ಯದ್ಭುತ ಕ್ರೌರ್ಯಕ್ಕಾಗಿ ಹೊರಟರಂತೆ. ರಾಕ್ಷಸರು ಕೆಲವರು ಒಬ್ಬರನ್ನೊಬ್ಬರು ಬೈದಾಡ್ತಾ ಇದ್ದರಂತೆ. ಮತ್ತೊಬ್ಬರ ಭುಜಕ್ಕೆ ತಮ್ಮ ಭುಜ ಘಟ್ಟಿಸುವ ರಾಕ್ಷಸರು, ಇನ್ನು ಕೆಲವರು ಕುಡಿದ ಅಮಲೇರಿ ಹುಚ್ಚರಂತೆ ಹಲುಬುತ್ತಾ ಇದ್ದಾರೆ. ಕೆಲವು ರಾಕ್ಷಸರು ಎದೆ ತಟ್ತಾ ಇದ್ದರಂತೆ. ಇನ್ನು ಕೆಲವರು ತಮ್ಮ ಕಾಂತೆಯರ ಮೇಲೆ ಠೀವಿಯಲ್ಲಿ ಕೈಯಿಡ್ತಾ ಇದ್ರು. ಕಲವು ರಾಕ್ಷಸರು ಬಗೆಬಗೆಯ ವೇಷಗಳನ್ನು ತೊಟ್ಟಿದ್ದರು, ಇನ್ನು ಕೆಲವು ರಾಕ್ಷಸರು ಧನುರ್ವಿದ್ಯೆಯ ಅಭ್ಯಾಸವನ್ನು ಮಾಡ್ತಾ ಇದ್ರು. ಕಾಂತೆಯರನ್ನ ಕಂಡನಂತೆ ಹನುಮಂತ. ಕೆಲವರು ಪ್ರೀತಿ ಮಾತುಕತೆಗಳಲ್ಲಿ ತೊಡಗಿದ್ದರು, ಕೆಲವರು ನಿದ್ದೆ ಮಾಡಿದ್ದರು, ಇನ್ನು ಕೆಲವರು ಒಳ್ಳೆಯ ಮುಖ, ಒಳ್ಳೆಯ ರೂಪ ನಗುತ್ತಾ ಇದ್ದರು. ಇನ್ನು ಕೆಲವರು ತಮ್ಮ ತಮ್ಮ ಪ್ರಿಯರ ಮೇಲೆ ಕೋಪ ಮಾಡಿಕೊಂಡು ನಾಗಿಣಿಯಂತೆ ಉಸಿರು ಬಿಡ್ತಾ ಇದ್ದರಂತೆ.

ಆನೆಗಳು ಘೀಂಕಾರ ಮಾಡ್ತಾ ಇದ್ದವು ಯಾರೋ ಯಾರಿಗೋ ಸತ್ಕಾರ, ಗೌರವ, ಪೂಜೆ ಮಾಡ್ತಾ ಇರೋದನ್ನ ಕಾಣ್ತಾನೆ ಹನುಮಂತೆ. ಮತ್ತೆ ಕೆಲವು ವೀರರು ಯುದ್ಧದ ತೀಟೆ ತೀರದೆ ಬಿಸಿಯುಸಿರು ಬಿಡ್ತಾ ಇದ್ದರಂತೆ. ಕೆಲವು ಒಳ್ಳೆಯ ರಾಕ್ಷಸರನ್ನೂ ಕಂಡ. ಅವರು ಹೇಗಿದ್ದರು ಅಂದ್ರೆ ಬುದ್ಧಿಪ್ರಧಾನರು, ಶ್ರದ್ಧೆಯುಳ್ಳವರು, ನಾನಾ ವಿಧಾನಗಳನ್ನ ಬಲ್ಲವರು. ಇಂತಹ ಕೆಲವು ಸಾತ್ವಿಕ ರಾಕ್ಷಸರನ್ನು ಕಂಡಾಗ ಇಲ್ಲಿ ಒಳ್ಳೆಯವರೂ ಇದ್ದಾರೆ ಅಂತ ಸಂತೋಷಗೊಂಡನಂತೆ ಹನುಮಂತ. ತನ್ನಂತೆ ಶೋಭೆಯುಳ್ಳ ಕೆಲವು ರಾಕ್ಷಸರನ್ನೂ ಹನುಮಂತ ಕಂಡ. ಮತ್ತೆ ಕೆಲವು ವಿರೂಪರನ್ನೂ ಕಂಡ. ನಾರಿಯರನ್ನು ಕಂಡ. ಕೆಲವರು ಶುದ್ಧ ಮನಸ್ಸುಳ್ಳವರು, ಮಹಾನುಭಾವರಾದ ಪತಿವ್ರತಾ ಸ್ತ್ರೀಯರು, ಪತಿ ಮತ್ತು ಪಾನದಲ್ಲಿ ಏಕಕಾಲದಲ್ಲಿ ಪ್ರೀತಿ ಇಟ್ಟಿಕೊಂಡಿರುವವರು, ಕೆಲವರು ಉಪ್ಪರಿಗೆಯಲ್ಲಿ ತಮ್ಮ ಪತಿಯ ಮಡಿಲಿನಲ್ಲಿ ಸುಖವಾಗಿ ಪವಡಿಸಿರತಕ್ಕಂತವರು, ತಮ್ಮ ಪತಿಯ ಮನಸ್ಸನ್ನು ಪ್ರವೇಶ ಮಾಡಿರುವಂಥವರು, ಧರ್ಮಮಾರ್ಗದಲ್ಲಿರುವಂಥವರು, ಪತಿವ್ರತಾ ಸ್ತ್ರೀಯರನ್ನೂ ಕೂಡಾ ಕಂಡ. ಕೆಲವರು ಅವಘುಂಟನ ಹಾಕಿಕೊಂಡಿರದ ಸ್ವರ್ಣ ಕಾಂತಿಯ ಸ್ತ್ರೀಯರು, ಪತಿ ವಿರಹದ ದುಃಖದಲ್ಲಿ ಬಿಳುಚಿರುವವರು, ಹೀಗೆ ಅನೇಕ ಬಗೆಯ ಸ್ತ್ರೀಯರನ್ನು ಕಾಣ್ತಾನೆ ಮತ್ತು ಗಮನವಿಟ್ಟು ನೋಡ್ತಾನೆ. ಚಂದ್ರನಂತಹ ಮುಖ, ವಕ್ರವಾಗಿರುವ ರೆಪ್ಪೆಗಳು, ಒಳ್ಳೆಯ ನೇತ್ರಗಳು, ಒಳ್ಳೆಯ ಆಭರಣಗಳು ಇವನ್ನೆಲ್ಲ ನೋಡಿದ ಹನುಮಂತ. ಸೀತೆಯ ಹೋಲಿಕೆ ಇದೆಯಾ? ಆ ಕಣ್ಣುಗಳು, ಆಭರಣಗಳು, ಅದನ್ನೆಲ್ಲ ಗಮನಿಸ್ತಿದಾನೆ ಹನುಮಂತ ಎಲ್ಲಿಯಾದರೂ ಸೀತೆ ಕಾಣ್ತಾಳ ಎಂಬುದಾಗಿ. ಆದರೆ ಸೀತೆ ಮಾತ್ರ ಕಾಣಲಿಲ್ಲ. ಸತ್ಕುಲಪ್ರಸೂತೆ, ಜನಕವಂಶಜಾತೆ, ಸರ್ವಲಕ್ಷಣ ಸಂಪನ್ನೆ, ಸನಾತನ ಧರ್ಮಮಾರ್ಗದಲ್ಲಿರುವವಳು, ರಾಮನಲ್ಲಿಯೇ ತನ್ನ ದೃಷ್ಟಿಯನ್ನು ನೆಟ್ಟವಳು, ಅಂತಹ ರಾಮನಲ್ಲಿ ಭಾವವುಳ್ಳ ಸೀತೆಯನ್ನು ಹನುಮಂತ ಕಾಣಲಿಲ್ಲ. ರಾಮನ ಮನಸ್ಸಿನಲ್ಲಿ ಸದಾ ಇರುವವಳು, ಜಗತ್ತಿನ ಎಲ್ಲ ಸ್ತ್ರೀಯರಿಗಿಂತ ವಿಶಿಷ್ಟವಾಗಿರುವಂತಹವಳು, ಜಗತ್ತಿನ ಉತ್ತಮೋತ್ತಮ ಸ್ತ್ರೀಯರಿಗಿಂತ ಶ್ರೇಷ್ಠಳಾದವಳು ಸೀತೆ. ಅವಳನ್ನ ವಾಲ್ಮೀಕಿಗಳು ವರ್ಣನೆ ಮಾಡಿದಾರೆ. ಯಾವ ಸೀತೆಯ ಕೊರಳಿನಲ್ಲಿ ಉತ್ತಮೋತ್ತಮವಾದ ನಿಷ್ಕವೆಂಬ ಆಭರಣವಿತ್ತೋ ಆ ಕೊರಳ ಮೇಲೆ ಇಂದು ಕಣ್ಣೀರಧಾರೆ. ಒಳ್ಳೆಯ ಕೊರಳವಳು, ಉತ್ತಮೋತ್ತಮವಾಗಿರತಕ್ಕಂತಹ ಕಂಠ, ಒಂದು ಕಾಲದಲ್ಲಿ ತನ್ನ ಪತಿಯ ಪಕ್ಕದಲ್ಲಿ ಮಯೂರಿಯಂತೆ ನಲಿದವಳು, ಆದರೆ ಇಂದು ಕಣ್ಣೀರಿನಿಂದ ಕೈ ತೊಳಿತಾ ಇದಾಳೆ. ಅಂತಹ ಮನುಷ್ಯೇಂದ್ರನಾದ ರಾಮನ ಪತ್ನಿಯನ್ನು ಕಾಣದೇ ದುಃಖ ತುಂಬಿತು ಹನುಮನ ಮನಸ್ಸಿನಲ್ಲಿ. ಕೆಲಕಾಲ ಏನೂ ತೋಚದ ದಿಙ್ಮೂಢ ಸ್ಥಿತಿ ಹನುಮನನ್ನು ಆವರಿಸಿತು. ಆದರೆ ಪ್ರಯತ್ನ ಬಿಡಲಿಲ್ಲ ಆತ. ಅಲ್ಲಿ ಇಲ್ಲಿ ಹುಡುಕಿ ಮತ್ತೆ ರಾವಣನ ಮನೆಗೆ ಬಂದ. ಹನುಮಂತ ಇದ್ದಕಿದ್ದಂತೆ ರಾವಣನ ಮನೆಯೊಳಗೆ ಪ್ರವೇಶ ಮಾಡಲಿಲ್ಲ. ಸುತ್ತಮುತ್ತ ನೋಡ್ತಾನೆ ಮೊದಲು ಏಳು ಮಹಡಿಗಳುಳ್ಳ ಮನೆಯಲ್ಲಿ ಹುಡುಕಿ ಹುಡುಕಿ ಕೊನೆಗೆ ಮತ್ತೆ ರಾಕ್ಷಸೇಂದ್ರನ ಮನೆಗೆ ಬಂದ.

ರಾವಣನ ಮನೆಯ ಪ್ರಾಕಾರವೆ ಸೂರ್ಯನಂತಿದೆ. ಸುರಕ್ಷೆ ತುಂಬ ಇದೆ. ಸಿಂಹಗಳು ವನದಲ್ಲಿ ಅಡ್ಡಾಡುವಂತೆ ರಾಕ್ಷಸರ ಹಿಂಡು ಅಡ್ಡಾಡ್ತಾ ಇದೆ ಅಲ್ಲಿ. ಅವರನ್ನ ಗಮನಿಸ್ತಾನೆ ಹನುಮಂತ.

ಸಣ್ಣ ಕಪಿಯಾದ್ದರಿಂದ ಅವನ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇಡೀ ಲಂಕೆಯಲ್ಲಿ ಮುಕ್ತಸಂಚಾರ. ಬೆಳ್ಳಿ, ಬಂಗಾರದ ಅಲಂಕಾರದ ಬಾಗಿಲುಗಳು. ವಿಚಿತ್ರವಾದ ಆಕೃತಿಯ ಕೋಣೆಗಳು. ರಾಕ್ಷಸೇಂದ್ರನ ಮನೆಯ ಸುತ್ತ ಅಧಿಕಾರಿಗಳು ಸಂಚಾರ ಮಾಡುತ್ತಿದ್ದಾರೆ. ಕೆಲವರು ಆನೆಯ ಮೇಲೆ, ಕೆಲವರು ಕುದುರೆಯ ಮೇಲೆ, ಕೆಲವರು ರಥದ ಮೇಲೆ ಸಂಚಾರ ಮಾಡುತ್ತಿದ್ದಾರೆ. ಅವರೆಲ್ಲಾ ಶೂರರು. ಶ್ರಮವೇ ಗೊತ್ತಿಲ್ಲದವರು. ಅವರನ್ನು ಕೊಲ್ಲಲು ಸಾಧ್ಯವೇ ಇಲ್ಲ. ಅಂತಹ ವೀರರಾದ ರಾವಣನ ಅಧಿಕಾರಿಗಳು ಸುತ್ತ ಇದ್ದಾರೆ. ದಂತ, ಚಿನ್ನ, ಬೆಳ್ಳಿಯ ರಥಗಳು. ಕೆಲವು ರಥಗಳಿಗೆ ಸಿಂಹದ ಚರ್ಮವನ್ನು ಹೊದಿಸಲಾಗಿದೆ. ಇನ್ನು ಕೆಲವು ರಥಗಳಿಗೆ ಹುಲಿಯ ಚರ್ಮವನ್ನು ಹೊದಿಸಲಾಗಿದೆ. ಆ ರಥಗಳಲ್ಲಿ ಚಿಕ್ಕಚಿಕ್ಕ ಘಂಟೆಗಳು. ಕಿಣಿಕಿಣಿ ಶಬ್ಧವನ್ನು ಮಾಡುತ್ತಾ ಆ ರಥಗಳು ಸಂಚಾರ ಮಾಡುತ್ತಿದ್ದಾವೆ. ಎಲ್ಲಿ ನೋಡಿದರೂ ರತ್ನಗಳು, ರಾಜಾಸನಗಳು. ಈ ರಾಜಾಸನಗಳು ಪರಮವೀರರಿಗಾಗಿ ಮೀಸಲಿರುವ ಆಸನಗಳು. ಹೊರಗೆ ವಿನೀತರಾದ ಅಂತಪಾಲರು.

ಹೊರಗೆ ಅವರು ಕಾಯುತ್ತಿದ್ದರೆ ಒಳಗೆ ಉತ್ತಮ ಸ್ತ್ರೀಯರು. ಶ್ರೇಷ್ಠನಾರಿಯರು ಅಲ್ಲಿ ಸಂತೋಷವಾಗಿದ್ದಾರೆ. ಅಲ್ಲಿಂದ ಆಭರಣಗಳ ಸದ್ದು ಸಮುದ್ರದಂತೆ ಕೇಳಿಬರುತ್ತಿತ್ತು. ಆ ಭವನ ರಾಜಭವನವೇ. ಉತ್ತಮೋತ್ತಮ ಪರಿಮಳ ಹಬ್ಬಿ ಹರಡಿದೆ. ಭೇರಿ, ಮೃದಂಗಗಳ ಶಬ್ಧ. ಶಂಖನಾದ. ನಿತ್ಯ ಪೂಜೆ ಮತ್ತು ನಿತ್ಯ ಹೋಮ. ರಾಕ್ಷಸರು ಆ ಮನೆಯನ್ನು ಪೂಜಿಸುತ್ತಿದ್ದಾರೆ. ಸಮುದ್ರದಂತೆ ಗಂಭೀರ. ಅಂತಹ ದೊಡ್ಡ ಮನುಷ್ಯನ ದೊಡ್ಡ ಮನೆ. ಅಲ್ಲಿ ದೊಡ್ಡ ದೊಡ್ಡ ರತ್ನಗಳಿವೆ. ಅದನ್ನು ಹನುಮಂತ ಕಾಣುತ್ತಾನೆ. ಆನೆ, ಕುದುರೆಗಳ ಹಿಂಡು. ಇದು ಲಂಕಾಭರಣ ಎನ್ನುವುದು ಹನುಮಂತನ ಅಭಿಪ್ರಾಯ. ರಾವಣನ ಮನೆ ಲಂಕೆಗೆ ಕಿರೀಟದಂತೆ. ಕಿರೀಟಕ್ಕೆ ವಜ್ರದ ಮಣಿ ಇದ್ದಂತೆ. ಹನುಮಂತನು ರಾವಣನ ಹತ್ತಿರದಲ್ಲಿ ಓಡಾಡುತ್ತಿದ್ದಾನೆ. ಘೋರ ರಾವಣನ ಬಳಿಯಲ್ಲಿ ವೀರ ಹನುಮ. ಎರಡು ಧ್ರುವಗಳು. ಅದು ಅಧರ್ಮದ ಮುದ್ದೆ. ಇದು ಧರ್ಮಮೂರ್ತಿ. ಅವನು ರಾಜ. ಇವನು ಸೇವಕ. ರಾವಣನ ಕೋಟಿ ಪಾಲು ಮಿಗಿಲಾದ ಯೋಗ್ಯತೆಯುಳ್ಳ ರಾಮನ ಸೇವಕ. ಮನೆಯ ಒಳಗೆ ಹನುಮಂತ ಹೋಗಲಿಲ್ಲ. ಮತ್ತೊಮ್ಮೆ ಹೊರಗೆ ಸಂಚಾರವನ್ನು ಪ್ರಾರಂಭಿಸಿದ.

ಎಚ್ಚರಿಕೆಯಿಂದಿದ್ದಾನೆ ಹನುಮಂತ. ಮನೆಯಿಂದ ಮನೆಗೆ, ಉದ್ಯಾನದಿಂದ ಉದ್ಯಾನಕ್ಕೆ ನಿರ್ಭೀತನಾದ ಹನುಮಂತನು ಸಂಚಾರವನ್ನು ಮಾಡುತ್ತಿದ್ದಾನೆ. ರಾವಣನ ಸೇನಾಪತಿಯಾದ ಪ್ರಹಸ್ತನ ಮನೆಯನ್ನು ಹೊಕ್ಕನು. ಕಪಿಗಳಿಗೆ ನೀಲನಿದ್ದಂತೆ. ಅಲ್ಲಿಂದ ಮಹಾಪಾರ್ಶ್ವನ ಮನೆಗೆ ಹಾರಿದ. ಮುಂದೆ ಕುಂಭಕರ್ಣನ ಮನೆಗೆ. ಅದು ದೊಡ್ಡದಾಗಿತ್ತು. ಅಲ್ಲಿಂದ ವಿಭೀಷಣನ ಮನೆಗೆ ನೆಗೆದನು. ತುಳಸೀ ರಾಮಾಯಣದಲ್ಲಿ ಇಲ್ಲಿಯ ಘಟನೆಗಳ ವರ್ಣನೆಯಿದೆ.

ವಿಭೀಷಣನ ಮನೆಯನ್ನು ಹುಡುಕಿದ. ಅಲ್ಲಿಂದ ಮಹೋದರನ ಮನೆ. (ದೊಡ್ಡಹೊಟ್ಟೆಯವನು). ರಾಕ್ಷಸರ ಹೆಸರೇ ಹೀಗಿತ್ತು. ಅಲ್ಲಿಂದ ವಿರೂಪಾಕ್ಷನ ಮನೆಗೆ ಹೋದನು. (ವಿರೂಪವಾದ ಕಣ್ಣುಳ್ಳವನು). ಶಿವನಿಗೂ ಈ ಹೆಸರಿದೆ. ಮೂರು ಕಣ್ಣುಳ್ಳವನು ಎನ್ನುವ ಅರ್ಥದಲ್ಲಿ. ಮುಂದೆ ವಿದ್ಯುಜ್ಜಿಹ್ವನ ಮನೆ(ಮಿಂಚಿನಂತೆ ನಾಲಿಗೆಯುಳ್ಳವನು). ಅಲ್ಲಿಂದ ವಿದ್ಯುನ್ಮಾಲಿಯ ಮನೆ(ಮಿಂಚಿನ ಮಾಲೆ). ಅಲ್ಲಿಂದ ವಜ್ರದಂಷ್ಟ್ರನ ಮನೆ (ವಜ್ರದಂತಹ ಹಲ್ಲುಳ್ಳವನು). ಮುಂದೆ ಶುಕನ ಮನೆ. ಅವನು ರಾವಣನ ಗುಪ್ತಚರ. ಅಲ್ಲಿಂದ ಸಾರಣನ ಮನೆ. ಅಲ್ಲಿಗೆ ತುಂಬಾ ವೇಗದಲ್ಲಿ ಪ್ರಯಾಣ ಮಾಡಿದ. ನಂತರ ಇಂದ್ರಜಿತನ ಮನೆ. ಅಲ್ಲಿಂದ ಜಂಬುಮಾಲಿಯ ಮನೆಗೆ. ಬಳಿಕ ಸುಮಾಲಿ. ಇವನು ಕೈಕಸೆಯ ತಂದೆ. ಮುಂದೆ ಸೂರ್ಯಶತ್ರು, ವಜ್ರಕಾಯ, ಧೂಮ್ರಾಕ್ಷ (ಹೊಗೆಯ ಕಣ್ಣವನು), ಸಂಪಾತಿ, ಶಠ(ಮೋಸಗಾರ), ವಿಕಟ, ದಂಷ್ಟ್ರ, ರೋಮಷ, ಯುದ್ಧೋನ್ಮತ್ತ(ಯುದ್ಧದ ಹುಚ್ಚು), ಮತ್ತ(ಅಮಲೇರಿದವನು), ಹಸ್ತಿಮುಖ, ಕರಾಲ, ಪಿಶಾಚ, ಶೋಣಿತಾಕ್ಷ(ರಕ್ತದ ಕಣ್ಣು) ಮುಂತಾದವರ ಮನೆಗೆ ಹೊದನು. ಇವರ ಹೆಸರುಗಳೇ ಹೀಗಿದ್ದ ಮೇಲೆ ಸಂಸ್ಕೃತಿ ಹೇಗಿದ್ದಿರಬಹುದು! ಅವರೆಲ್ಲರ ಮನೆಯಲ್ಲೂ ಹುಡುಕಿದನು ಹನುಮಂತ. ಎಂತಹ ವೈಭವದ ಮನೆಗಳು ಅವು. ಅಲ್ಲೆಲ್ಲ ಹುಡುಕಿದ ನಂತರ ಮತ್ತೆ ರಾವಣನ ಮನೆಗೆ ಬಂದನು. ಪ್ರತಿ ಬಾರಿಯೂ ಬೇರೆ ಮಾರ್ಗದಲ್ಲಿ ಬರುತ್ತಿದ್ದರಿಂದ ಈಗ ಸ್ತ್ರೀಯರ ಸೈನ್ಯ ಕಂಡಿತು ಅವನಿಗೆ. ಅವರು ರಾವಣನು ಒಳಗೆ ಮಲಗಿದರೆ ಹೊರಗೆ ಕಾಯುವಂತಹ ರಾಕ್ಷಸಿಯರು. ಅವರು ವಿಕಾರವಾದ ಕಣ್ಣವರು. ಕೆಲವರ ಕೈಯಲ್ಲಿ ಶೂಲ, ಕೆಲವರ ಕೈಯಲ್ಲಿ ಮುದ್ಗರ, ಕೆಲವರಲ್ಲಿ ತೋಮರ. ಬಳಿಕ ರಾಕ್ಷಸರ ಸೈನ್ಯ. ದೊಡ್ಡ ಆಕಾರದವರು. ಕೆಂಪು, ಬಿಳಿ, ಹಸಿರು ಬಣ್ಣದ ರಾಕ್ಷಸರು! ಅದರ ಬಳಿಕ ಯುದ್ಧದ ಆನೆಗಳು. ಅವುಗಳಿಗೆ ಸರಿಯಾದ ತರಬೇತಿಯಾಗಿದೆ. ಯುದ್ಧದಲ್ಲಿ ಅವು ಐರಾವತಕ್ಕೆ ಸಮಾನ. ಅವು ಗಿರಿಯಿಂದ ಝರಿ ಹರಿಯುವಂತೆ ಮದೋದಕವನ್ನು ಸುರಿಸುತ್ತಿದ್ದಾವೆ. ಅವುಗಳನ್ನು ಕಂಡನು ಹನುಮಂತ. ಹಾಗೆಯೇ ಅನೇಕ ಸೈನಿಕರ ಗುಂಪುಗಳನ್ನು ಕಾಣುತ್ತಾನೆ. ಬಗೆಬಗೆಯ ಸ್ವರ್ಣಭೂಷಿತವಾದ ಪಲ್ಲಕ್ಕಿಗಳು. ಅಲ್ಲಿ ಬೇರೆಬೇರೆ ಬಗೆಯ ಲತಾಗೃಹಗಳು. ಹಾಗೆಯೇ ಚಿತ್ರಶಾಲಾಗೃಹಗಳು. ಉದ್ದದ ಕಟ್ಟಡಕ್ಕೆ ಶಾಲೆಯೆಂದು ಹೆಸರು. ಮುಂದೆ ಕ್ರೀಡಾಗೃಹಗಳು. ಮರದಿಂದ ಮಾಡಿದ ಪರ್ವತದ ರಚನೆಗಳು. ಕಾಮಗೃಹ ಮತ್ತು ದಿವಾಗೃಹ(ಹಗಲು ಹೋಗಿ ಕುಳಿತುಕೊಳ್ಳುವಂತಹದ್ದು). ಅವೆಲ್ಲವನ್ನೂ ಕಂಡ ರಾವಣನ ಮನೆಯಲ್ಲಿ.

ಆದಮೇಲೆ ಮಂದರಗಿರಿಯಷ್ಟು ಎತ್ತರದ ಭವನವನ್ನು ಕಂಡನು. ರಾವಣನ ಮನೆಯಲ್ಲಿ ನೂರಾರು ಭವನಗಳಿದ್ದವು. ಅಲ್ಲಿ ನವಿಲುಗಳಿಗಾಗಿಯೇ ಶಿಲೆಯಲ್ಲಿ ಮಾಡಿದ ಒಂದು ಸ್ಥಾನವಿತ್ತು. ಅಲ್ಲಿ ನವನಿಧಿ ಮತ್ತು ನವರತ್ನಗಳು ಇದ್ದವು. ರಾಕ್ಷಸರು ರಾವಣನಿಗೆ ವಿಜಯವಾಗಬೇಕೆಂದು ಕೋಣನ ಬಲಿಯನ್ನು ಮಾಡುತ್ತಿರುವ ದೃಶ್ಯವನ್ನು ಹನುಮಂತನು ನೋಡಿದನು. ಹನುಮಂತನಿಗೆ ರಾವಣನ ಮನೆಯು ಭೂತಗಳ ಮನೆಯಂತೆ ಭಾಸವಾಯಿತು. ಅಲ್ಲಿರುವ ರತ್ನಗಳು ಮತ್ತು ರಾವಣನ ತೇಜಸ್ಸು ಸೇರಿ ಮನೆಯೇ ಸೂರ್ಯನಂತೆ ಕಂಡಿತು. ಮನೆಯಲ್ಲಿರುವ ಮಂಚ, ಪಾತ್ರೆ ಹೀಗೆ ಎಲ್ಲ ವಸ್ತುಗಳು ಚಿನ್ನದ್ದಾಗಿದ್ದವು. ಮನೆಯಲ್ಲಿ ಮದ್ಯದ ಪಾತ್ರೆಯನ್ನು ಮತ್ತು ಮದ್ಯದಿಂದ ನೆಲ ಒದ್ದೆಯಾಗಿರುವುದನ್ನು ಹನುಮಂತನು ಕಂಡನು. ಒಟ್ಟಾರೆ ರಾವಣನ ಮನೆಯು ಕುಬೇರನ ಮನೆಯಂತೆ ಇತ್ತು. ಹನುಮಂತನಿಗೆ ಗೆಜ್ಜೆ, ಮೃದಂಗ ಮತ್ತು ವಾದ್ಯಗಳ ಶಬ್ದ ಕೇಳಿಸಿತು. ಹನುಮಂತ ಯಾವ ದಿಕ್ಕಿಗೆ ನೋಡಿದರೂ ಭವನಗಳ ಸಾಲೇ ಕಾಣುತ್ತಿತ್ತು. ನಂತರ ಹನುಮಂತನು ಮನೆಯೊಳಗೆ ಪ್ರವೇಶ ಮಾಡಿದನು. ಪ್ರವೇಶ ಮಾಡುವಾಗ ಶಂಖ ಶಾಲೆಯನ್ನು ಕಂಡನು. ಕೆಲವು ಕಡೆ ಧನಸ್ಸಗಳ ಉಗ್ರಾಣ , ಕೆಲವು ಕಡೆ ಕತ್ತಿಗಳ, ಚಕ್ರಗಳ ಶಾಲೆಯೇ ಇತ್ತು. ಭವನದಲ್ಲಿ ದೇವಾಸುರರು ಆಸೆಪಡುವಂತಹ ಸಂಪತ್ತುಗಳು ಇದ್ದವು. ರಾವಣನ ಮನೆಯಲ್ಲಿ ಯಾವ ವಾಸ್ತುದೋಷವೂ ಇರಲಿಲ್ಲ. ಮಯನೇ ಕಟ್ಟಿದ, ಭೂಮಂಡಲದಲ್ಲಿ ಸರ್ವೋತ್ಕ್ರಷ್ಠ ಎನ್ನುವಂತೆ ಹನುಮಂತನಿಗೆ ರಾವಣನ ಮನೆಯು ಕಾಣಿಸಿತು. ಹನುಮಂತನು ಇದನ್ನೆಲ್ಲ ನೋಡುತ್ತಾ ಮುಂದೆ ಸಾಗಿದಾಗ ಭವನಗಳಿಗೆ ಏನೂ ಕಡಿಮೆಯಿಲ್ಲದ ಭವನವೊಂದು ಕಾಣಿಸಿತು. ಆ ಭವನವು ನೆಲದ ಮೇಲೆ ಇರಲಿಲ್ಲ. ಬೆಳ್ಳಿ ಮೊಡದಂತೆ ನೆಲ ಬಿಟ್ಟು ತೇಲುತ್ತಿತ್ತು. ಮನೆಯೇ ಎಂದರೆ ಮನೆಯಲ್ಲ, ಮನೆಯಲ್ಲ ಎಂದರೆ ಮನೆ ಎನ್ನುವಂತೆ ಇತ್ತು. ಇದನ್ನು ನೋಡಿದ ಹನುಮಂತನಿಗೆ ಈ ಜಗತ್ತಿನಲ್ಲಿ ಇಂತಹ ಮನೆಯನ್ನು ನೋಡಿಲ್ಲವಲ್ಲ, ಏನಿದು..? ಎಂದು ತಿಳಿಯಲು ಹನುಮಂತನಿಗೆ ಸ್ವಲ್ಪ ಸಮಯ ಬೇಕಾಯಿತು. ಅದು ರಾವಣನ ಪುಷ್ಪಕ ವಿಮಾನವಾಗಿತ್ತು. ವಿಮಾನವೇ ಭವನದಂತೆ, ಭೂಮಿಗೆ ಚೆಲ್ಲಿದ ಸ್ವರ್ಗದಂತೆ ಕಾಣುತ್ತಿತ್ತು. ಪುಷ್ಪಕ ವಿಮಾನದಲ್ಲಿ ಎಲ್ಲವೂ ರತ್ನಗಳೇ ಆಗಿದ್ದವು. ( ರತ್ನ : ಯಾವುದೇ ಜಾತಿಯಲ್ಲಿ ಉತ್ಕೃಷ್ಟವಾದದ್ದು) ಅಲ್ಲಿ ಹೂವಿನ ಶಿಲ್ಪಗಳು ನೈಜ ಹೂವುಗಳು ಚೆಲ್ಲಿದಂತೆ ಕಾಣುತ್ತಿದ್ದವು. ಇದರಿಂದ ಪುಷ್ಪಕ ವಿಮಾನದಲ್ಲಿನ ಶಿಲ್ಪ ವೈಶಿಷ್ಟ್ಯವು ಅರ್ಥವಾಗುತ್ತದೆ. ಆ ವಿಮಾನಗಳನ್ನು ಹಂಸಗಳು ಹೊತ್ತಿದ್ದವು!!. ಹಂಸಗಳೇ ಎಂದರೆ ಪ್ರತಿಮೆಗಳಂತೆ.. ಪ್ರತಿಮೆಗಳೇ ಎಂದರೆ ಹಂಸಗಳಂತೆ ಇತ್ತು …

ವಿಮಾನದೊಳಗೆ ಶ್ರೇಷ್ಠ ಸ್ತ್ರೀಯರಿದ್ದರು. ಅಲ್ಲಿ ಯಾವುದು ಶಿಲ್ಪ ಮತ್ತು ಯಾವುದು ನಿಜ ಎಂದು ಗೊತ್ತಾಗುವಂತೆ ಇರಲಿಲ್ಲ. ಉತ್ತಮೋತ್ತಮ ಪರ್ವತಗಳು ಬಣ್ಣಗಳಿಂದ, ಬೇರೆ ಬೇರೆ ಧಾತುಗಳಿಂದ ಶೋಭಿಸುವಂತೆ, ಆಕಾಶವು ನಕ್ಷತ್ರ, ಗ್ರಹ, ಚಂದ್ರನಿಂದ ಶೋಭಿಸುವಂತೆ, ವಿಮಾನವು ಬಗೆಬಗೆಯ ರತ್ನಗಳಿಂದ ಶೋಭಿಸುತ್ತಿತ್ತು. (ಆ ಕಾಲದಲ್ಲಿ ಪರ್ವತಗಳಲ್ಲಿ ರತ್ನ, ಚಿನ್ನ, ಬೆಳ್ಳಿ ಎಲ್ಲವೂ ಇರುತ್ತಿದ್ದವು. ಅದನ್ನು ವಾಲ್ಮೀಕಿಗಳು ಪರ್ವತಗಳು ಬೇರೆಬೇರೆ ಧಾತುಗಳಿಂದ ಶೋಭಿಸುತ್ತಿದ್ದವು ಎಂದು ವರ್ಣಿಸಿದ್ದಾರೆ.) ವಿಮಾನದೊಳಗೆ ವಿಚಿತ್ರವಾದ ಕಲೆಯೊಂದನ್ನು ಹನುಮಂತನು ಕಾಣುತ್ತಾನೆ. ಒಂದರೊಳಗೊಂದರೊಳ.. ಒಂದರೊಳ… ಒಂದು. ವಿಮಾನದೊಳಗೆ ಭೂಮಿಯ ಕೆತ್ತನೆ ಇತ್ತು. ಭೂಮಿಯೊಳಗೆ ಪರ್ವತ ಮಾಲೆ, ಪರ್ವತ ಮಾಲೆಯ ಒಂದೊಂದು ಪರ್ವತದಲ್ಲಿ ವೃಕ್ಷಗಳು, ಒಂದೊಂದು ವೃಕ್ಷದಲ್ಲಿ ಹೂವುಗಳು, ಒಂದೊಂದು ಹೂವಿನಲ್ಲಿಯೂ ಕೇಸರ, ದಳಗಳು ಎಲ್ಲವೂ ಕಾಣುವಂತೆ ಇತ್ತು. ಭೂಮಂಡಲದಿಂದ ಹೂವಿನ ಕೇಸರದ ತನಕ ಸ್ಪಷ್ಟವಾಗಿ ಕಾಣುವಂತೆ ಅತ್ಯಂತ ಸೂಕ್ಷ್ಮವಾಗಿ ಕೆತ್ತನೆ ಮಾಡಲಾಗಿತ್ತು. ಅಲ್ಲಿ ಭವನಗಳ ಶಿಲ್ಪವು ಇತ್ತು. ಸ್ವಚ್ಛಂದವಾದ ಭವನಗಳು, ಭವನದೊಳಗೆ ಕೆರೆಗಳು, ಸರೋವರಗಳು, ಸರೋವರದೊಳಗೆ ಕಮಲಗಳು, ಕಮಲದೊಳಗೆ ಕೇಸರ ಮತ್ತು ದಳಗಳು ಕಾಣುವಂತೆ ಕೆತ್ತನೆ ಮಾಡಲಾಗಿತ್ತು. ಮನೆಯಲ್ಲಿ ಉಪವನಗಳು, ಉಪವನದಲ್ಲಿ ಮರ–ಗಿಡ, ಬಳ್ಳಿ, ಹೂವು ಎಲ್ಲವೂ ಕಾಣುವಂತೆ ಮನೆಯ ಶಿಲ್ಪ ಇತ್ತು. ಪುಷ್ಪಕ ವಿಮಾನದ ಮುಂದೆ ಜಗತ್ತಿನ ಯಾವ ಒಳ್ಳೆಯ ಭವನಗಳು ಸಪ್ಪೆಯಾಗಿತ್ತು. ಏಕೆಂದರೆ ಮನೆಯೊಳಗೆ ಇರಲು ಬೇಕಾಗುವ ಎಲ್ಲ ವ್ಯವಸ್ಥೆಗಳು ಪುಷ್ಪಕ ವಿಮಾನದಲ್ಲಿ ಇತ್ತು. ಪುಷ್ಪಕ ವಿಮಾನವು ಒಂದು ಊರಿನಂತೆ ಕಾಣುತ್ತಿತ್ತು ಮತ್ತು ಅದರಲ್ಲಿ ಸುಖ ಜೀವನಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳು ಇದ್ದವು.

ವಾಲ್ಮೀಕಿಗಳು ಇಲ್ಲಿ ಪಕ್ಷಿಗಳ ಶಿಲ್ಪದ ವರ್ಣನೆಯನ್ನು ಮಾಡಿದ್ದಾರೆ. ವೈಢೂರ್ಯದ ಮಣಿಗಳಿಂದ ಮಾಡಿದ ಪಕ್ಷಿಗಳು, ಬೆಳ್ಳಿಯ ಪಕ್ಷಿಗಳು, ಹವಳದ ಪಕ್ಷಿಗಳು ಹಾಗೆ ಸರ್ಪಗಳು ಜಾತ್ಯಶ್ವಗಳು, ಪಕ್ಷಿಗಳಿಗೆ ಹವಳದ ಮತ್ತು ಚಿನ್ನದ ರೆಕ್ಕೆಗಳನ್ನು ಕೆತ್ತನೆ ಮಾಡಲಾಗಿತ್ತು. (ಜಾತ್ಯಶ್ವಗಳು : ಜಾತಿಯನ್ನು ಗುರುತಿಸುವಂತೆ ಮಾಡಿದ ಬೇರೆ ಬೇರೆ ಜಾತಿಯ ಅಶ್ವಗಳ ಕೆತ್ತನೆ.) ಹನುಮಂತ ನೋಡುವಾಗ ತಮ್ಮ ವಕ್ರವಾದ ರೆಕ್ಕೆಗಳನ್ನು ಒಳಗೆ ಎಳೆದುಕೊಳ್ಳುತ್ತಿದ್ದವು. ಇದನ್ನು ಹನುಮಂತನಿಗೆ ನೈಜವೋ / ಸುಳ್ಳೋ ಎಂದು ತಿಳಿಯಲಿಲ್ಲ. ಮನುಷ್ಯನ ಆಶೋತ್ತರಗಳಿಗೆ ರೆಕ್ಕೆ ಬಂದಂತೆ ಇದ್ದವು. ಯಾವುದು ನಿಜ ..? ಯಾವುದು ಕಲೆ..? ಎಂದು ಪತ್ತೆಮಾಡಲು ಸಾಧ್ಯವಿರಲಿಲ್ಲ. ಅಲ್ಲಿಯೇ ಒಂದು ಸರೋವರ ಇತ್ತು. ಸರೋವರದಲ್ಲಿ ಲಕ್ಷ್ಮೀ ವಿಗ್ರಹ, ವಿಗ್ರದ ಎರಡು ಪಾರ್ಶ್ವದಲ್ಲಿ ಆನೆಗಳು, ಆನೆಗಳ ಶೃಂಗದಲ್ಲಿ ಪದ್ಮಗಳು, ಪದ್ಮದಲ್ಲಿ ದಳ ಮತ್ತು ಕೇಸರ ಎಲ್ಲವೂ ಸ್ಪಷ್ಟವಾಗಿ ಕಾಣುವಂತೆ ಇತ್ತು. ಆ ಲಕ್ಷ್ಮೀ ವಿಗ್ರಹವನ್ನು ಕುಬೇರನು ತಪಸ್ಸಿನಿಂದ ಪಡೆದಿದ್ದನು. ಕುಬೇರನು ತಪಸ್ಸನ್ನು ಮಾಡಿ, ಲೋಕಸೇವೆಯನ್ನು ಕೇಳಿದಾಗ ಬ್ರಹ್ಮನು ಮೆಚ್ಚಿ ಪುಷ್ಪಕ ವಿಮಾನವನ್ನು ಕೊಟ್ಟಿದ್ದನು. ಅದರ ಜೊತೆಗೆ ಲಕ್ಷ್ಮಿಯ ವಿಗ್ರಹವನ್ನು ಪಡೆದಿದ್ದ. ಇಂತಹ ವಿಮಾನವನ್ನು ಹನುಮಂತನು ಒಂದು ಸುತ್ತು ತಿರುಗಿ ಸೀತೆಯನ್ನು ಹುಡುಕಿದನು. ಹನುಮಂತನಿಗೆ ಮನೋಹರವಾದ ಶಿಲ್ಪಗಳೇ ಮೊದಲಾದ ಜಡ ವಸ್ತುಗಳು ಮಾತ್ರ ಗೋಚರಿಸಿದವು. ಆದರೆ ಪರಮ ಪೂಜನೀಯಳಾದ ಸೀತೆ ಮಾತ್ರ ಗೋಚರಿಸಲಿಲ್ಲ. ರಾಮನಿಗೆ ಪೂರ್ಣವಾಗಿ ಮನಸೋತ ಸೀತೆಯನ್ನು ಕಾಣದೇ ದುಃಖಿತನಾದನು. ಹನುಮಂತನ ಕಣ್ಣಿಗೆ ಅತ್ಯಂತ ಸೂಕ್ಷ್ಮವನ್ನು ನೋಡುವ ಶಕ್ತಿ ಇತ್ತು. ವಿಶ್ವಕರ್ಮನಿಗಿಂತ ಹೆಚ್ಚು ಶಕ್ತಿ ಪ್ರಪಂಚದಲ್ಲಿ ಯಾರಿಗೂ ಇಲ್ಲ. ಅಂತಹ ವಿಶ್ವಕರ್ಮ ಪೂರ್ಣ ಮನಸ್ಸಿಟ್ಟು ಪುಷ್ಪಕ ವಿಮಾನವನ್ನು ನಿರ್ಮಿಸಿದ್ದನು. ನಿರ್ಮಾಣ ಮಾಡಿದ ಮೇಲೆ ನೋಡುವಾಗ ವಿಶ್ವಕರ್ಮನು ತನ್ನನ್ನು ತಾನೇ ಮೆಚ್ಚಿದ್ದನಂತೆ. ಇಂತಹ ಪುಷ್ಪಕ ವಿಮಾನವು ಆಕಾಶಕ್ಕೆ ಅಲಂಕಾರವಾಗಿತ್ತು.

ವಿಮಾನದಲ್ಲಿ ಪ್ರತಿಯೊಂದು ಅಂಗವೂ ಅನರ್ಘ್ಯವಾಗಿತ್ತು. ಕುಬೇರನಿಗೆ ತಪಸ್ಸಿನಿಂದ ಈ ವಿಮಾನವೂ, ರಾವಣನು ತನ್ನ ಬಲ ಗರ್ವಗಳಿಂದ ತನ್ನದಾಗಿಸಿಕೊಂಡಿದ್ದನು. ಪುಷ್ಪಕ ವಿಮಾನದ ವಿಶೇಷತೆ ಏನೆಂದರೆ ಅದರಲ್ಲಿ ಕುಳಿತು ಮನಸ್ಸಿನಲ್ಲಿ ಎಲ್ಲಿಗೆ ಹೋಗಬೇಕು ಎಂದು ಭಾವಿಸಿದರೆ ಅಲ್ಲಿಗೆ ಕರೆದೊಯ್ಯುತ್ತಿತ್ತು. ಜಗತ್ತಿನಲ್ಲಿ ಕಾಣದೇ ಇರುವ ಆಕೃತಿಗಳು ಇದ್ದವು. ಗಗನ ಸಂಚರಿಗಳಾದ, ನಿಶಾಚಾರರಾದ ಭೂತ ಗಣಗಳು ವಿಮಾನವನ್ನು ಹೊತ್ತು ಸಂಚರಿಸುತ್ತಿದವು. ಅಂತಹ ಭೂತ ಗಣಗಳನ್ನು ಹನುಮಂತನು ಕಾಣುತ್ತಾನೆ. ಆ ವಿಮಾನದ ಮುಂದೆ ವಸಂತ ಮಾಸದ ಚೈತ್ರವೂ ಸಪ್ಪೆಯಾಗಿತ್ತು. ವಿಮಾನವನ್ನು ಕಂಡು ಸಂತೋಷಪಟ್ಟ ಹನುಮಂತ ಸೀತೆಯನ್ನು ಕಾಣದೇ ಬೇಸರಗೊಂಡನು. ಎಲ್ಲಿ ಸೀತೆ …? ಎಂದು ಹನುಮಂತನು ಮತ್ತೆ ಹುಡುಕಲು ಮುಂದಾದನು.

ಮುಂದೇನಾಯಿತು ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments