ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಜೀವಕ್ಕೆ ಸಂತೋಷವಾದರೆ ಅದು ಮುಖದಲ್ಲಿ, ಮೈಯಲ್ಲಿ ಗೊತ್ತಾಗದೇ ಇರೋದಿಲ್ಲ. ದೊಡ್ಡ ಸಂತೋಷವಾದರೆ ದೊಡ್ಡದಾಗಿಯೇ ಗೊತ್ತಾಗ್ತದೆ. ಸ್ವಲ್ಪ ಸಂತೋಷವಾದರೆ ಸ್ವಲ್ಪ ತುಟಿ ಅರಳಬಹುದು, ಸ್ವಲ್ಪ ಕಣ್ಣರಳಬಹುದು, ಹಲ್ಲು ಕಾಣದೇ ಇರಬಹುದು, ಒಂದು ತೃಪ್ತಿಯ ನಗು ಬರಬಹುದು. ದೊಡ್ಡ ಸಂತೋಷವಾದಾಗ ಹಲ್ಲೆಲ್ಲ ಕಾಣಬಹುದು, ಹಹ್ಹಹ್ಹಾ ಶಬ್ದ ಕೇಳಬಹುದು, ಅನೇಕ ರೀತಿಯ ಉದ್ಗಾರಗಳು ಹೊರಗೆ ಬರಬಹುದು. ಸಂತೋಷ ದೊಡ್ಡದಾದಂತೆ ಅದರ ಅಭಿವ್ಯಕ್ತಿಯು ಕೂಡ ದೊಡ್ಡದಾಗ್ತದೆ.

ದೊಡ್ಡ ಜೀವಕ್ಕೆ ದೊಡ್ಡ ಸಂತೋಷವಾದರೆ? ಅದೇ, ಉದಾಹರಣೆಗೆ ಹನುಮಂತನಿಗೆ. ‘ಜೀವ’ ಅಂತ ಕರೀಲಿಕ್ಕೆ ಸಾಧ್ಯ ಅದು. ವಿಚಿತ್ರ ಅದು. ಸೇವಕ ಅಂದ್ರೆ ಸೇವಕ, ಸಾರ್ವಭೌಮ ಅಂತ ಕರೆದ್ರೆ ಸಾರ್ವಭೌಮ ಅವನು. ಜೀವ ಅಂದ್ರೆ ಜೀವ, ದೇವ ಅಂದ್ರೆ ದೇವ. ಕಪಿ‌ ಅಂದ್ರೆ ಕಪಿ, ಕಪಿ ಅಲ್ಲ ಅಂದ್ರೆ ಕಪಿ ಅಲ್ಲ. ಅಂಥಾ ಅದ್ಭುತ ಅವನು. ಘನಪಂಡಿತ, ವೇದ ಶಾಸ್ತ್ರಗಳ ಸರ್ವಜ್ಞ. ಆದರೆ, ಮುಗ್ಧ ಮಗುವಿನಂತೆ, ಸಾಮಾನ್ಯ ಕಪಿಯಂತೆ ಕೂಡ ಬದುಕುತ್ತ ಇರ್ತಕ್ಕಂತವನು ಸಂದರ್ಭಗಳು ಬಂದಾಗ. ಸೀತೆ ಸಿಕ್ಕಿದಳು ಅಂತ ಆದಾಗ, ಮಂದೋದರಿಯನ್ನು ಸೀತೆ ಅಂತ ಭಾವಿಸಿದಾಗ ಎಷ್ಟು ಸಂತೋಷ ಪಟ್ಟುಕೊಂಡ ಅವನು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ನಾವು.

ಅದು ಸೀತೆಯಲ್ಲ ಅಂತ ಗೊತ್ತಾದಾಗ, ಪುನಃ ಹುಡುಕಿದಾಗ ಸೀತೆ ಸಿಗದೇ ಎಷ್ಟು ದುಃಖ ಆಗಿರ್ಬೇಕು? ಹೌದು, ಅಲ್ಲಿಂದ ಮುಂದೆ ಪಾನಭೂಮಿಗೆ ಹೋಗಿ, ಆ ಮಧ್ಯ ಮಾಂಸಗಳ ಮೈಲಿಗೆ ಪ್ರಪಂಚದಲ್ಲಿ ತುಂಬ ಹುಡುಕ್ತಾನೆ, ಸೀತೆಯಿಲ್ಲ. ಅದರ ಬಳಿಕ ಲತಾ ಗೃಹಗಳು, ಚಿತ್ರ ಗೃಹಗಳು, ನಿಷಾ ಗೃಹಗಳು, ಇವುಗಳನ್ನೆಲ್ಲ ಹುಡುಕ್ತಾನೆ, ಸೀತೆ ಸಿಗಲಿಲ್ಲ. ಹೀಗೆ ಎಲ್ಲಿ ಹುಡುಕಿದರೂ ಸೀತೆ ಸಿಗದಿದ್ದಾಗ ಹನುಮಂತನಿಗೆ ಆತಂಕವಾಯಿತು. ಒಂದು ಬರಬಾರದ ಸಂಶಯ ಬಂತವನಿಗೆ. ಸೀತೆ ಬದುಕಿದ್ದಾಳೋ? ಇಲ್ಲವೋ? ಸೀತೆ ರಾವಣನ ವಶವಾಗಿದ್ದಾಳೋ ಎಂಬ ಯಾವ ಸಂಶಯವೂ ಅವನಿಗಿಲ್ಲ. ಶವವಾದಾಳು, ವಶವಾಗಳು ಎನ್ನುವುದು ಸ್ಪಷ್ಟ. ಆದರೆ ಬದುಕಿರುವಳೋ ಇಲ್ಲವೋ ? ಸೀತೆ ಹೆಚ್ಚಿನಂಶವೂ ಬದುಕಿಲ್ಲ. ಇಷ್ಟು ಹುಡುಕಿದರೂ ಕಾಣದಿರುವುದು ಅಂದರೇನು? ತುಂಬಾ ಸೂಕ್ಷ್ಮವಾಗಿ ಹುಡುಕಿದ್ದಾನೆ ಹನುಮಂತ. ಸೀತೆ ಒಂದು ವೇಳೆ ಬದುಕಿಲ್ಲದಿದ್ದರೆ ಏನಾಗಿರಬಹುದು? ಏನಾಗಿ ಅವಳು ಬದುಕನ್ನು ಮುಗಿಸಿರಬಹುದು? ಎನ್ನುವುದನ್ನೆಲ್ಲ ಊಹೆ ಮಾಡ್ತಾನೆ ಹನುಮಂತ.

ಮೊಟ್ಟ ಮೊದಲು ಅವನಿಗೆ ಬಂದ ಶಂಕೆ, ರಾವಣನಿಂದ ತನ್ನ ಶೀಲವನ್ನು ಸಂರಕ್ಷಣೆ ಮಾಡಿಕೊಳ್ಳುವ ಸಂಘರ್ಷದಲ್ಲಿ ಸೀತೆ ತನ್ನ ಪ್ರಾಣವನ್ನು ಕೊಟ್ಟಿರಬಹುದು. ಅತ್ಯಂತ ದುಷ್ಟನಾದ ರಾವಣ ಕೊಂದನೇನೋ ಸೀತೆಯನ್ನು! ಸೀತೆ ಆರ್ಯಮಾರ್ಗವನ್ನು ಬಿಡುವವಳಲ್ಲ. ಹಾಗಾಗಿ, ಇದು ಒಂದು. ಅದಲ್ಲದಿದ್ದರೆ, ಇನ್ನೊಂದು. ಈಗ ರಾವಣನಿಗೆ ಸೀತೆಯ ಮೇಲೆ‌ ಮನಸ್ಸಾಗಿದೆ. ರಾವಣನ ಪತ್ನಿಯರಿಗೆ ಏನನ್ನಿಸಿರಬಹುದು? ಅವರೇ ಮುಗಿಸಿದರೆ ಸೀತೆಯನ್ನು! ರಾವಣನ ರಾಕ್ಷಸ ಪತ್ನಿಯರು ವಿಕೃತರೂಪಿಣಿಯರು, ಕೆಟ್ಟ ಕಾಂತಿಯುಳ್ಳವರು, ದೊಡ್ಡ ಬಾಯವರು, ಸೀತೆಯನ್ನು ನುಂಗೋದಕ್ಕೆ ಸಾಕು ಅಥವಾ ಅವರ ದರ್ಶನಮಾತ್ರದಿಂದಲೇ ಎದೆ ಒಡೆದು ಸೀತೆ ಬದುಕನ್ನು ಮುಗಿಸಿರಬಹುದಾ? ಎನ್ನುವ ಸಂಶಯವೂ ಹನುಮಂತನಿಗೆ ಉಂಟಾಯಿತು. ಬಳಿಕ ಅವನಿಗೆ ತುಂಬಾ ವಿಷಾದವಾಯಿತು. ಈಗ ನಾನು ಯಾವ ಮುಖ ಹೊತ್ತು ಸುಗ್ರೀವನ ಬಳಿಗೆ ಹೋಗಲಿ? ಹೋದರೂ ಸೀತೆಯ ವಾರ್ತೆಯನ್ನು ತೆಗೆದುಕೊಂಡು ಹೋಗದಿದ್ದರೆ ಮೃತ್ಯುದಂಡಕ್ಕೆ ಒಳಗಾಗಿ ಈ ಹನುಮಂತನ ಬದುಕು ಮುಗಿತದೆ.

ಅಂತಃಪುರದಲ್ಲಿ ನೋಡಲಿಕ್ಕೆ ಇನ್ನೇನೂ ಉಳಿದಿಲ್ಲ. ರಾವಣನ ಸತಿಯರಲ್ಲಿ ಇನ್ನು ನೋಡುವುದಕ್ಕೆ ಏನೂ ಉಳಿದಿಲ್ಲ. ನನ್ನ ಶ್ರಮ ವ್ಯರ್ಥವಾಯಿತು. ಈ ಸೋತ ಮುಖ ಹೊತ್ತು ಮರಳಿದರೆ ಸಮುದ್ರದ ಆಚೆ ತೀರದಲ್ಲಿ ಇರತಕ್ಕಂತ ನನ್ನ ವಾನರ ಮಿತ್ರರು ಏನೆಂದಾರು? ನನ್ನನ್ನು ಅವರು ಸಾಮೂಹಿಕವಾಗಿ , ‘ಹೇ ವೀರ, ಲಂಕೆಗೆ ಹೋಗಿ ಏನು ಮಾಡಿದೆ? ಹೇಳು’ ಎಂದು ಕೇಳಿದರೆ ನಾನು ಏನು ಹೇಳಲಿ? ಸೀತೆಯನ್ನು ಕಾಣದೇ ಏನುತ್ತರ ಕೊಡಲಿ? ಅವರು ಮತ್ತೆ ಮರಣ ಪರ್ಯಂತ ನಿರಶನಕ್ಕೆ ಕೂತ್ಕೊಳ್ತಾರೆ. ನಾನು ಹೋಗಿ ಎಲ್ಲ ವಾನರರ ಸಾವಿಗೆ ಕಾರಣನಾಗ್ತೇನೆ. ವೃದ್ಧ ಜಾಂಬವಂತ ಕೇಳಿದರೆ ಏನು ಹೇಳಲಿ? ಏನು ಹೇಳಿಯಾನು ಜಾಂಬವಂತ ನನಗೆ? ಯುವರಾಜ ಅಂಗದ ಏನು ಹೇಳಿಯಾನು? ಅಷ್ಟು ದೊಡ್ಡ ಸಮುದ್ರಲಂಘನದ ಕಾರ್ಯವನ್ನು ಮಾಡಿ ಬರಿಗೈಯಲ್ಲಿ ಬಂದವನನ್ನು ಏನೆಂದಾರು? ಎಂಬುದಾಗಿ ತುಂಬ ಬೇಸರವನ್ನು ಅನುಭವಿಸ್ತಾನೆ ಹನುಮಂತ.

ಬಳಿಕ ಅವನಿಗೆ ಅವನೇ ಸಮಾಧಾನ ಮಾಡಿಕೊಳ್ತಾನೆ. ಉತ್ಸಾಹವು ಸಂಪತ್ತಿನ ಮೂಲ, ಪರಮಸುಖದ ಮೂಲ, ಸರ್ವಕಾರ್ಯಗಳಲ್ಲಿ ಪ್ರವರ್ತಕ. ನಮ್ಮನ್ನು ಕಾರ್ಯ ಮಾಡುವಂತೆ ಉತ್ತೇಜಿಸುವುದು ಉತ್ಸಾಹ. ಮಾಡಿದ ಕಾರ್ಯವನ್ನು ಸಫಲವಾಗಿ ಮಾಡಬೇಕು ಅಂತ ಆದರೆ, ಆಗಲೂ ಕೂಡ ಉತ್ಸಾಹ ಬೇಕು. ನಾನು ಕೂಡ ಮತ್ತೊಂದು ಪ್ರಯತ್ನವನ್ನು ಮಾಡ್ತೇನೆ. ಈವರೆಗೆ ಮಾಡಿದ ಪ್ರಯತ್ನಕ್ಕಿಂತ ದೊಡ್ಡ ಪ್ರಯತ್ನವನ್ನು, ಇನ್ನೂ ಉತ್ತಮವಾದ ಪ್ರಯತ್ನವನ್ನು ಉತ್ಸಾಹದಿಂದ ಮಾಡ್ತೇನೆ. ರಾವಣನ ಆಳ್ವಿಕೆಯಲ್ಲಿ‌ ಇರತಕ್ಕಂತಾ ಭೂಭಾಗದಲ್ಲಿ ಇನ್ನೇನೇನು ಉಳೀತು ನೋಡೋದಕ್ಕೆ, ಎಲ್ಲ ನೋಡ್ತೇನೆ. ಹುಡುಕ್ತೇನೆ ಅದೆಲ್ಲವನ್ನು ಎಂಬುದಾಗಿ ಹೇಳಿ ಮತ್ತೆ ಪಾಪ, ಹುಡುಕಲಿಕ್ಕೆ ಆರಂಭ ಮಾಡ್ತಾನೆ. ಮತ್ತೆ ಎಲ್ಲಿ ಹುಡುಕಿದ? ಅಂದರೆ, ವಾಮಶಾಲೆಗಳು, ಪುಷ್ಪ ಗೃಹಗಳು, ಚಿತ್ರ ಗೃಹಗಳು, ಕ್ರೀಡಾ ಗೃಹಗಳು, ಅರಮನೆಯ ಹೂದೋಟದ ಕಿರು ದಾರಿಗಳು, ವಿಮಾನಗಳು, ಏಳುಪ್ಪರಿಗೆಯ ಮನೆಗಳು, ಎಂಟುಪ್ಪರಿಗೆಯ ಮನೆಗಳು, ಇವೆಲ್ಲವನ್ನೂ ಅವನು ಹುಡುಕ್ತಾ ಇದ್ದಾನೆ. ಆಮೇಲೆ? ಲಂಕೆಯ ನೆಲಮಾಳಿಗೆಗಳನ್ನು ಒಂದೂ ಬಿಡದೆ ಹುಡುಕಿದ. ಪೂಜಾಗೃಹಗಳನ್ನು ಹುಡುಕ್ತಾನೆ. ಮನೆಗಳೂ ಮತ್ತು ವಿಹಾರಗೃಹಗಳನ್ನು ಅವೆಲ್ಲವನ್ನೂ ಕೂಡ ಹುಡುಕ್ತಾನೆ. ಅವನ ಬಗೆಬಗೆಯ ಚಲನವಲನಗಳನ್ನು ವಾಲ್ಮೀಕಿಗಳು ವರ್ಣನೆ ಮಾಡ್ತಾರೆ.

ಮೇಲಕ್ಕೆ ನೆಗೆಯುತ್ತಾನೆ, ಕೆಳಕ್ಕೆ ಹಾರ್ತಾನೆ, ಹೋಗ್ತಾನೆ, ನಿಲ್ಲುತ್ತಾನೆ, ಪುನಃ ಹೋಗ್ತಾನೆ, ದ್ವಾರಗಳನ್ನ ತೆರೀತಾನೆ, ಕಪಾಟುಗಳನ್ನು, ಕದಗಳನ್ನು ತಟ್ಟುತ್ತಾನೆ, ಮನೆಗಳ ಒಳಗಡೆ ಹೋಗ್ತಾನೆ, ಹೊರಗಡೆ ಬರ್ತಾನೆ, ಚಿತ್ರ ವಿಚಿತ್ರವಾದ ಗತಿಗಳು. ಮನೆಗಳ ದ್ವಾರಗಳನ್ನ ತೆಗೆದು ನೋಡ್ತಾನೆ, ಒಮ್ಮೊಮ್ಮೆ ಮನೆ ಒಳಗಡೆ ಪ್ರವೇಶ ಮಾಡ್ತಾನೆ, ಅಲ್ಲಿ ಜಾನಕಿಯನ್ನು ಕಾಣದೆ ನಿರಾಸೆಯಿಂದ ಹೊರಗೆ ಬರ್ತಾನೆ, ಮೇಲಿನಿಂದ ಕೆಳಕ್ಕೆ ಹಾರ್ತಾನೆ, ಕೆಳಗಿನಿಂದ ಮೇಲಕ್ಕೆ ಹಾರ್ತಾನೆ, ಈ ಮನೆಯಿಂದ ಆ ಮನೆಗೆ ಹಾರ್ತಾನೆ. ಎಲ್ಲವನ್ನೂ ಮಾಡ್ತಾನೆ ಹನುಮಂತ.

ಹುಡುಕಬಹುದಾದ್ದೆಲ್ಲವನ್ನೂ ಹುಡುಕಿದ. ಎಷ್ಟರಮಟ್ಟಿಗೆ ಹುಡುಕಿದ ಅಂದ್ರೆ ರಾವಣನ ಅಂತಃಪುರದಲ್ಲಿ ನಾಲ್ಕು ಅಂಗುಲವೂ ಉಳಿಯಲಿಲ್ಲ. ಏನು ಪ್ರಯತ್ನ ಮಾಡಿದಾನೆ ಹನುಮಂತ ಅಂತ ನೋಡಿ, ಮತ್ತೆ ಎಷ್ಟು ಬೇಗ ಬೇಗ ಮಾಡಿದಾನೆ. ಒಂದೇ ರಾತ್ರಿಯ ಕತೆ ಇದೆಲ್ಲವೂ ಕೂಡ. ಆದರೆ ಆಕೆ ನಿಜವಾಗಿ ಎಲ್ಲಿದ್ದಳೋ ಅದನ್ನು ಬಿಟ್ಟು ಎಲ್ಲಾ ಕಡೆ ಹುಡುಕಿದ. ಹಾಗಾಗಿ ಸೀತೆ ಸಿಗಲಿಲ್ಲ. ಪ್ರಾಕಾರದ ಒಳಗಿನ ಮಂತ್ರಿಗಳ ಮನೆಗೆ ಹೋಗುವ ರಸ್ತೆಗಳು, ದೇವಸ್ಥಾನದ ಮಂಟಪಗಳು, ಚಿಕ್ಕ ಕೆರೆ, ದೊಡ್ಡಕೆರೆ ಯಾವುದೂ ಬಿಡಲಿಲ್ಲ. ವಿವಿಧಾಕಾರದ, ವಿರೂಪರಾದ, ವಿಕೃತರಾದ ರಾಕ್ಷಸಿಯರು ಕಂಡರು. ಸೀತೆ ಕಾಣಲಿಲ್ಲ. ರೂಪದಲ್ಲಿ ಅಪ್ರತಿಮರಾದ, ಲೋಕದಲ್ಲಿ ಶ್ರೇಷ್ಠರೆನಿಸುವ ನಾರಿಯರು ಕಂಡರು. ಸೀತೆ ಕಾಣಲಿಲ್ಲ. ನಾಗಕನ್ಯೆಯರು, ಸುಂದರಾಂಗಿಯರು, ಪೂರ್ಣಚಂದ್ರಮುಖಿಯರು ಹನುಮಂತನಿಗೆ ಗೋಚರಿಸಿದರು. ಸೀತೆ ಕಾಣಲಿಲ್ಲ. ಇನ್ನು ಕೆಲವು ನಾಗಕನ್ಯೆಯರು, ಬಲಾತ್ಕಾರದಿಂದ ಸೆಳೆದುಕೊಂಡು ಬಂದಿದ್ದು, ಇನ್ನು ಕೆಲವರು ಒಪ್ಪಿ ಬಂದಿದ್ದು. ಈ ರೀತಿ ಎರಡು ಗುಂಪು ಮಾಡಿದ್ದಾರೆ. ಅಲ್ಲಿ ಹುಡುಕ್ತಾನೆ. ಹೀಗೆ ಬೇರೆಲ್ಲರನ್ನು ಕಂಡು ಸೀತೆಯನ್ನು ಕಾಣದಾದಾಗ ಮತ್ತೆ ವಿಷಾದಕ್ಕೊಳಗಾದ ಆಂಜನೇಯ.

ವಾನರ ನಾಯಕರ ಮಹಾಪ್ರಯತ್ನ ವಿಫಲ. ಯುಗಕ್ಕೊಂದು ಜಗಕ್ಕೊಂದು ಎನ್ನುವಂತಹ ಸಾಗರ ಲಂಘನ ವಿಫಲ. ಶತಯೋಜನದ ಸಾಗರಲಂಘನವು ವ್ಯರ್ಥವೆಂದುಕೊಂಡಾಗ ಹನುಮಂತನಿಗೆ ತುಂಬಾ ನೋವಾಯಿತು. ಬಳಿಕ ಪುಷ್ಪಕ ವಿಮಾನದಿಂದ ಕೆಳಗಿಳಿದು ಅರಮನೆಯ ಪ್ರಾಕಾರವನ್ನು ಸಮೀಪಿಸ್ತಾನೆ. ಆ ಸಂದರ್ಭದಲ್ಲಿ ಮಿಂಚಿನ ವೇಗ ಹನುಮಂತನಿಗೆ. ಅಲ್ಲಿ ರಾವಣನ ಮನೆಯನ್ನು ಇನ್ನೊಂದು ಸಾರಿ ಪೂರ್ತಿ ಸುತ್ತಾಡಿ ಸೀತೆ ಕಾಣದಿದ್ದಾಗ ಅವನಿಗೆ ಅವನೇ ಮಾತನಾಡಿಕೊಳ್ತಾನೆ. ಹುಡುಕುವಷ್ಟು ಹುಡುಕಿಯಾಯಿತು. ಇನ್ನು ಹುಡುಕಲು ಸಾಧ್ಯವಿಲ್ಲ. ರಾಮಕಾರ್ಯವಾಗಬೇಕು, ರಾಮನಿಗೆ ಸಂತೋಷವಾಗಬೇಕು ಎಂದು ಒಂದೇ ಒಂದು ಕಾರಣವನ್ನಿಟ್ಟುಕೊಂಡು ಇನ್ನಿಲ್ಲದಂತೆ ಲಂಕೆಯನ್ನು ಹುಡುಕಿಯಾಯಿತು. ಸರ್ವಾಂಗಶೋಭನೆ ಸೀತೆ ಎಲ್ಲಿ? ಚಿಕ್ಕ ಚಿಕ್ಕ ಸರೋವರಗಳು, ತಟಾಕಗಳು, ದೊಡ್ಡ ಸರೋವರಗಳು, ನದಿಗಳು ಎಲ್ಲವನ್ನು ಹುಡುಕಿದೆ. ನದಿಯ ಸಮೀಪದ ವನಗಳು, ಕೋಟೆಗಳು, ಪರ್ವತಗಳು ಎಲ್ಲ ಹುಡುಕಿದೆ. ಸಂಪಾತಿ ಸೀತೆ ಇಲ್ಲಿಯೇ ಇದ್ದಾಳೆ ಅಂತ ಹೇಳಿದ್ದ. ನಾನು ಕಾಣ್ತಾ ಇದೇನೆ, ಲಂಕೆಯಲ್ಲಿ ಸೀತೆ ಈಗಲೂ ಇದ್ದಾಳೆ, ಸೀತೆಯನ್ನು ಕದ್ದೊಯ್ದಿದ್ದನ್ನೂ ನೋಡಿದೇನೆ, ನನ್ನ ಮಗನೂ ಕೂಡ ನೋಡಿದಾನೆ, ಈಗಲೂ ಇಲ್ಲಿಂದ ಕಾಣ್ತಾಯಿದೆ ನನಗೆ, ಸೀತೆ ಅಲ್ಲೇ ಇದಾಳೆ ಎಂಬುದಾಗಿ ಸಂಪಾತಿ ಹೇಳಿದ್ನಲ್ಲ. ಇಲ್ಲಿ ಕಾಣ್ತಾ ಇಲ್ಲ ಅವಳು. ಗೃಧ್ರರಾಜ ಸುಳ್ಳು ಹೇಳುವನಲ್ಲ. ಆದರೆ ಅವನು ಹೇಳಿದ ಸತ್ಯ ಇಲ್ಲಿ ಗೋಚರಿಸ್ತಾ ಇಲ್ಲ. ಏನಾಗಿರಬಹುದು?

ಪಾಪ ಸೀತೆಯಾದರೂ ಏನು ಮಾಡ್ತಾಳೆ? ಅವಳಿಗೇನು ಇಷ್ಟವಿದ್ದು ಲಂಕೆಗೆ ಬಂದಿದ್ದಲ್ಲ. ರಾವಣ ಬಲದಿಂದ ಆಕೆಯನ್ನು ತಂದಿದ್ದು ಹೊರತು ಅವಳೇನು ಒಪ್ಪಿ ಬಂದಿದ್ದಲ್ಲ. ಈ ರಾವಣನಿಗೆ ರಾಮನ ಭಯ ಇದೆ. ಇಲ್ಲದಿದ್ದರೆ ಯುದ್ಧ ಮಾಡ್ತಿದ್ದ ರಾಮನ ಜೊತೆಗೆ. ಯುದ್ಧ ಮಾಡದೇ ಮಾಯಾಮೃಗವನ್ನು ಮುಂದೊಡ್ಡಿ, ರಾಮ ಲಕ್ಷ್ಮಣರು ದೂರ ಹೋಗುವ ಹಾಗೆ ಮಾಡಿ, ಶೂನ್ಯವನ್ನೇರ್ಪಡಿಸಿ, ಯಾರಿಲ್ಲದಾಗ ಸೀತೆಯನ್ನು ಕದ್ದ ಎಂದರೆ ರಾಮನ ಭಯ ಇದೆ ಅವನಿಗೆ ಎಂದಾಯಿತು. ಬಹುಷಃ ಸೀತೆಯನ್ನು ಆಕಾಶ ಮಾರ್ಗದಲ್ಲಿ ಎತ್ತಿಕೊಂಡು ಬರುವಾಗ ಎಲ್ಲಿಯೋ ರಾಮನ ಬಾಣದ ನೆನಪಾಗಿರಬೇಕು ರಾವಣನಿಗೆ. ಭಯವಾಗಿ ಸೀತೆಯನ್ನು ಕೆಳಗೆ ಎಸೆದುಬಿಟ್ಟನಾ? ರಾಮನ ಬಾಣದ ಪ್ರತಾಪ ನೆನಪಾಗಿ ನಡುಗಿ ಸೀತೆಯನ್ನು ಕೈಬಿಟ್ಟಿರಬಹುದೇ? ಅಥವಾ ಕೆಳಗೆ ಯಾವ ಆವರಣವೂ ಇಲ್ಲದೇ ರಾವಣನು ಸಮುದ್ರದ ಮೇಲೆ ಸೀತೆಯನ್ನು ಸೆಳೆದು ತರುವಾಗ ಸೀತೆ ಕೆಳಗೆ ನೋಡಿ ಸೀತೆಯ ಎದೆಯೊಡೆದಿರಬಹುದೇ? ಅಥವಾ ಮಹಾ ಬಲಾಢ್ಯ, ಕ್ರೂರ ರಾಕ್ಷಸ ರಾವಣ. ಅವನು ಮೃದುವಾಗಿ ಹಿಡಿದುಕೊಂಡು ಬಂದರೂ ಪ್ರಾಣ ಹೋಗಬಹುದು. ಈಗಂತೂ ಗಾಬರಿಯಾಗಿದೆ, ಭಯ ಬೇರೆ ಹಾಗಾಗಿ ಅವನು ಹಿಡಿದ ರಭಸಕ್ಕೆ ಸೀತೆಯ ಪ್ರಾಣ ಹೋಗಿರಬಹುದ? ಅಥವಾ ಸೆಳೆದು ತರುವಾಗಿನ ವೇಗಕ್ಕೆ ಸೀತೆಯ ಪ್ರಾಣ ಹೋಗಿರಬಹುದ? ಅಥವಾ ಮೊದಲೇ ಆಲೋಚನೆ ಮಾಡಿದಂತೆ ಸಾಗರದ ಮೇಲೆ ಬರುವಾಗ ಎಲ್ಲಿಯಾದರೂ ಆಯತಪ್ಪಿ ಸೀತೆ ಸಮುದ್ರಕ್ಕೆ ಬಿದ್ದಿರಬಹುದ? ರಾವಣನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಸಫಲವಾಗಿ ಸಮುದ್ರಕ್ಕೆ ಬಿದ್ದು ಜಲಜಂತುಗಳಿಗೆ ಆಹಾರವಾಗಿರಬಹುದ? ಅಥವಾ ಮೊದಲೇ ಆಲೋಚಿಸಿದಂತೆ ಶೀಲ ರಕ್ಷಣೆಗಾಗಿ ಹೋರಾಡುವ ಸೀತೆಯನ್ನು ಸಿಟ್ಟು ತಡೆಯಲಾರದೇ ರಾವಣ ತಿಂದುಹಾಕಿರಬಹುದ? ಯಾಕೆಂದರೆ ಆ ಸಮಯದಲ್ಲಿ ಮೊರೆಯನ್ನು ಆಲಿಸುವವರು ಯಾರೂ ಇಲ್ಲ ಆಕೆಗೆ. ಅಥವಾ ರಾವಣನ ಹೆಂಡತಿಯರು ತಿಂದು ಹಾಕಿರಬಹುದ? ಇವಳೋ ಯಾವ ದೋಷವೂ ಇಲ್ಲದವಳು. ಅವರಲ್ಲಿ ದುಷ್ಟ ಭಾವವೇ ತುಂಬಿದೆ. ತನ್ನ ಗಂಡನಿಗೆ ಈಕೆಯ ಮೇಲೆ ಪ್ರೀತಿ ಬಂತು ಎಂಬ ಕಾರಣಕ್ಕೆ ರಾವಣ ಇಲ್ಲದ ಸಮಯದಲ್ಲಿ ಇವರು ಅವಳನ್ನು ತಿಂದುಬಿಟ್ಟರಾ? ಅಥವಾ ಅವಳೇ ದುಃಖವನ್ನು ತಾಳಲಾರದೇ, ರಾಮನ ಪೂರ್ಣಚಂದ್ರನಂತಹ ಮುಖವನ್ನು, ಪದ್ಮಪತ್ರದಂತಹ ನೇತ್ರಗಳನ್ನು ನೆನಪು ಮಾಡುತ್ತಾ ಹಾಗೆಯೇ ಪ್ರಾಣ ಬಿಟ್ಟಿರಬಹುದಾ? ಅಥವಾ ಎಲ್ಲಾದರೂ ಸೀತೆಯನ್ನು ಬಂಧಿಸಿ ಅವಳನ್ನು ಓಲೈಸುವ ಪ್ರಯತ್ನ ನಡೆಯುತ್ತಿದೆಯಾ? ಒಂದಂತೂ ಸತ್ಯ. ಜನಕನ ಮಗಳು, ರಾಮನ ಪತ್ನಿ, ಪರಮಸಾಧ್ವಿ ಸೀತೆ ಆಕೆ ಉಸಿರಿದ್ದರೆ ರಾವಣನ ವಶವಾಗಲಾರಳು.

ಇದಿಷ್ಟು ಯೋಚನೆ ಮಾಡಿದವನಿಗೆ, ಸೀತೆ ಒಂದು ವೇಳೆ ವಿನಷ್ಟ, ಮೃತ, ಜೀವವೇ ಇಲ್ಲ ಅವಳಿಗೆ, ಹೋಗಿಯಾಗಿದೆ ಅಥವಾ ಇನ್ನೇನೋ ಆಗಿದೆ ಇಂತಹ ಸ್ಥಿತಿಯಲ್ಲಿ ಹೋಗಿ ರಾಮನಿಗೆ ಹೇಳಲಿಕ್ಕೆ ಸಾಧ್ಯವಿಲ್ಲ. ಸೀತೆಗೆ ಹೀಗಾಯಿತು, ಸೀತೆ ಇಲ್ಲ ಎನ್ನುವುದನ್ನು ರಾಮನಿಗೆ ಹೇಳಲಿಕ್ಕೆ ಸಾಧ್ಯವಿಲ್ಲ. ಅಷ್ಟು ಪ್ರಿಯಳು ರಾಮನಿಗೆ ಸೀತೆ. ಅಂತಹ ಪ್ರೇಮಭಾವವುಳ್ಳ ರಾಮನಿಗೆ ಹೋಗಿ ನಿನ್ನ ಪತ್ನಿಗೆ ಹೀಗಾಯಿತು ಎಂದು ಹೇಗೆ ಹೇಳಲು ಸಾಧ್ಯ? ಹೇಳಲಿಕ್ಕೆ ಸಾಧ್ಯವೇ ಇಲ್ಲ. ಏನು ಮಾಡಲಿ? ಹೇಳಿದರೂ ಕಷ್ಟ, ಹೇಳದಿದ್ದರೂ ಕಷ್ಟ. ಹೇಳದೇ ಇರುವುದಾದರೂ ಹೇಗೆ? ಹೇಳಿದರೆ ಕಥೆಯೇನು? ಹೇಳಿದರೂ ದೋಷ, ಹೇಳದಿದ್ದರೂ ದೋಷ. ಏನು ಮಾಡಲಿ? ಇದು ನನಗೆ ವಿಷಮ, ಕ್ಲಿಷ್ಟ ಎನಿಸುತ್ತಿದೆ.

ಈ ಕಾರ್ಯವು ಇಲ್ಲಿಗೆ, ಅಂದರೆ ಮುಂದುಗಾಣದ ಸ್ಥಿತಿಗೆ ಬಂದು ನಿಂತ ಮೇಲೆ ಏನು ಮಾಡಬೇಕು ನಾನು? ಏನು ಮಾಡಿದರೆ ಸರಿ ಎಂದು ವಿಚಾರಕ್ಕೆ ಬಿದ್ದನಂತೆ ಆಂಜನೇಯ. ಬಳಿಕ ಏನಾಗಬಹುದು ಮುಂದೆ ಅಂತ ಅತನ ಮುಂದೆ ಚಿತ್ರಗಳು ಹಾದುಹೋಗ್ತವೆ. ಇದರ ಪರಿಣಾಮಗಳು ಏನೇನು ಅಂತ. ಹನುಮಂತನ ಕಣ್ಣೆದುರು ಕಂಡ ಅನಾಹುತ ಪರಂಪರೆ ಇದು.

ಸೀತೆಯನ್ನು ಕಾಣದೆ ಕಿಷ್ಕಿಂಧೆಗೆ ಮರಳ್ತೇನೆ ನಾನು. ಏನಾಗಬಹುದು? ಮೊಟ್ಟ ಮೊದಲನೆಯದಾಗಿ ನಾನೇನಾದಂತಾಯಿತು? ನಾನು ಏನು ಮಾಡಿದಂತಾಯಿತು? ಇಂತಹ ಮಹಾಕಾರ್ಯವನ್ನು ನಾನು ಮಣ್ಣುಪಾಲು ಮಾಡಿದಂತಾಯಿತು. ಇದು ಒಂದು. ಇನ್ನೊಂದು, ಸಮುದ್ರ ಲಂಘನ ವ್ಯರ್ಥ. ಲಂಕಾ ಪ್ರವೇಶ ವ್ಯರ್ಥ. ಲಂಕೆಯ ಅನ್ವೇಷಣೆ, ರಾಕ್ಷಸ ರಾಕ್ಷಸಿಯರ ದರ್ಶನ ವ್ಯರ್ಥ. ಸುಗ್ರೀವ ಏನು ಹೇಳಿಯಾನು? ಇತರ ವಾನರ ನಾಯಕರು ಏನು ಹೇಳಿಯಾರು? ರಾಮ-ಲಕ್ಷ್ಮಣರಾದರೂ ಏನು ಹೇಳಿಯಾರು? ಇದೆಲ್ಲ ಸಣ್ಣ ವಿಷಯ. ದೊಡ್ಡ ವಿಷಯ ಮುಂದಿದೆ. ಒಂದು ವೇಳೆ ನಾನು ಹೋಗಿ ರಾಮನಿಗೆ ಸೀತೆಯನ್ನು ಕಾಣಲಿಲ್ಲ, ಸೀತೆ ಇಲ್ಲ ಎಂದು ಹೇಳ್ತೇನೆ. ಏನಾಗಬಹುದು? ಅತ್ಯಂತ ಅಪ್ರಿಯವಾದ ಈ ಮಾತನ್ನು ಕೇಳಿದ ಮೇಲೆ ನಿಶ್ಚಯವಾಗಿ ರಾಮನು ಬದುಕಿರುವುದಿಲ್ಲ. ಅವರಿಬ್ಬರೂ ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ. ಹಾಗಾಗಿ ನಾನೇನಾದರೂ ಹೋಗಿ ಸೀತೆ ಇಲ್ಲ ಎಂದರೆ ಅಲ್ಲಿಂದ ಮುಂದೆ ರಾಮನಿಲ್ಲ. ಸೀತೆ ಇಲ್ಲ ಎನ್ನುವ ಮಾತು ರಾಮನ ಪಾಲಿಗೆ ದಾರುಣ, ಕ್ರೂರ, ತೀಕ್ಷ್ಣ, ಇಂದ್ರಿಯ ತಾಪನ. ಅಂತಹ ಸೀತೆಯ ನಿಮಿತ್ತವಾದ ದುರ್ವಾರ್ತೆ ಅದು. ಆ ಮಾತನ್ನು ಕೇಳಿದ ರಾಮನು ಇರುವುದಿಲ್ಲ. ಸೀತೆಯ ಮೇಲೆ ರಾಮನಿಗೆ ಪ್ರೀತಿ ಇತ್ತೋ ಇಲ್ಲವೋ ಎನ್ನುವ ಸಂಶಯ ಇರುವವರು ಹನುಮಂತನ ಮಾತನ್ನು ಕೇಳಬೇಕು. ಆಯ್ತು. ರಾಮನಿಲ್ಲ ಎಂದಾಯಿತು. ಮುಂದೇನಾಗಬಹುದು? ಲಕ್ಷ್ಮಣನಿಲ್ಲ. ಸೀತೆಯಿಲ್ಲದ ಮೇಲೆ ರಾಮನಿರೋದಿಲ್ಲ. ರಾಮ ಇಲ್ಲದ ಮೇಲೆ ರಾಮನನ್ನು ಅತಿಶಯವಾಗಿ ಪ್ರೀತಿಸುವ ಲಕ್ಷ್ಮಣನೂ ಪ್ರಾಣತ್ಯಾಗ ಮಾಡ್ತಾನೆ.

ರಾಮ-ಲಕ್ಷ್ಮಣರು ಈ ಭೂಮಿಯನ್ನು ಬಿಟ್ಟರು ಎಂದು ಗೊತ್ತಾದರೆ ಭರತ ಸಾಯುತ್ತಾನೆ. ಶತ್ರುಘ್ನ ಅವನ ಹಿಂದಿರುತ್ತಾನೆ. ಹೀಗೆ ನಾಲ್ವರು ಸಹೋದರರು ಇಲ್ಲವಾಗಿ ಬಿಡುತ್ತಾರೆ. ಮಕ್ಕಳೆಲ್ಲಾ ಗತಿಸಿಹೋದ ಮೇಲೆ ತಾಯಂದಿರು ಉಳಿಯುವುದಿಲ್ಲ. ಅಯೋಧ್ಯೆಯಲ್ಲಿ ಸಾಲಾಗಿ ಶವಗಳು ಬೀಳುತ್ತಾವೆ. ಒಳ್ಳೆಯವರು ಯಾರೂ ಉಳಿಯುವುದಿಲ್ಲ. ಇಕ್ಷ್ವಾಕು ವಂಶವನ್ನು ಪ್ರೀತಿಸುವ ಅಧಿಕಾರಿಗಳು, ಮಂತ್ರಿಗಳು, ಪ್ರಜೆಗಳು ಎಲ್ಲರೂ ಪ್ರಾಣತ್ಯಾಗ ಮಾಡುತ್ತಾರೆ. ಇತ್ತ ಕಿಷ್ಕಿಂಧೆಯಲ್ಲಿ ಸುಗ್ರೀವ ಬದುಕಿರುವುದಿಲ್ಲ. ರಾಮನು ದೇಹತ್ಯಾಗ ಮಾಡಿದಾಗಲೇ ಅವನೂ ದೇಹತ್ಯಾಗ ಮಾಡುತ್ತಾನೆ. ಇದು ಹೌದು ಏಕೆಂದರೆ ಮುಂದೆ ರಾಮಾವತಾರ ಮುಕ್ತಾಯವಾಗುವಾಗ ಸುಗ್ರೀವ ದೇಹತ್ಯಾಗ ಮಾಡುವುದನ್ನು ನಾವು ಕಾಣುತ್ತೇವೆ. ಸುಗ್ರೀವನ ಪತ್ನಿ ರುಮೆ. ಅವಳ ಮನಸ್ಸು ಕೆಟ್ಟು ಹೋಗುತ್ತದೆ. ದೀನಳಾಗಿ, ಪತಿಶೋಕ ಪೀಡಿತಳಾಗಿ ರುಮೆ ಪ್ರಾಣತ್ಯಾಗ ಮಾಡುತ್ತಾಳೆ. ತಾರೆಗೆ ಮೊದಲೇ ವಾಲಿಯ ಮರಣದ ದುಃಖವಿದೆ. ಈಗ ಸುಗ್ರೀವನೂ ಇಲ್ಲದಿದ್ದರೆ ಅವಳು ಹೋಗಿಯೇ ಬಿಡುತ್ತಾಳೆ. ಅಂಗದ ತಾಯಿ-ತಂದೆಯರು ಸತ್ತ ಮೇಲೆ ತಾನೂ ಬದುಕುವುದಿಲ್ಲ. ಮುಂದೆ ವಾನರ ಸೇನೆ. ಅವರೆಲ್ಲಾ ತಮ್ಮ ಪ್ರಭುವನ್ನು ಅತಿಯಾಗಿ ಪ್ರೀತಿಸುವವರು. ಯಾರೂ ಇದನ್ನು ಸಹಿಸುವುದಿಲ್ಲ. ಹಾಗಾಗಿ ಅವರು ತಮ್ಮ ತಲೆಯನ್ನು ತಮ್ಮ ಮುಷ್ಟಿಗಳಿಂದ ಕುಟ್ಟಿ, ಒಡೆದು ತಮ್ಮ ಪ್ರಾಣಬಿಡುತ್ತಾರೆ. ಕಪಿರಾಜನು ಅವರನ್ನೆಲ್ಲಾ ಪ್ರೀತಿ ಮಾಡಿದ್ದಾನೆ. ಅವರಿಗೆ ಕೊಡಬೇಕಾದುದ್ದನ್ನು ಕೈತುಂಬ ಕೊಟ್ಟಿದ್ದಾನೆ. ಗೌರವಿಸಿದ್ದಾನೆ. ಮಕ್ಕಳಂತೆ ಪ್ರೀತಿಸಲ್ಪಟ್ಟ ಕಪಿಗಳು ರಾಮನ ಮತ್ತು ತಮ್ಮ ಪ್ರಭುವಿನ ಅವಸಾನದ ಬಳಿಕ ಪ್ರಾಣತ್ಯಾಗ ಮಾಡುತ್ತಾರೆ. ಸುಖವಾಗಿರುವುದಿಲ್ಲ. ಕಾಡುಗಳಲ್ಲಿ, ಬೆಟ್ಟಗಳಲ್ಲಿ, ಮನೆಗಳಲ್ಲಿ ಅವರಿಗೆ ವಿಹರಿಸಲು ಸಾಧ್ಯವಿಲ್ಲ. ಹೀಗಾಗಿ ಅವರು ತಮ್ಮ ಬಳಗವನ್ನು ಕಟ್ಟಿಕೊಂಡು ಪರ್ವತಾಗ್ರಗಳನ್ನೇರಿ ಪ್ರಪಾತಗಳಿಗೆ ಧುಮುಕುತ್ತಾರೆ. ಕೆಲವರು ವಿಷ ಕುಡಿಯಬಹುದು. ಕೆಲವರು ನೇಣು ಹಾಕಿಕೊಳ್ಳಬಹುದು. ಕೆಲವರು ಬೆಂಕಿಗೆ ಬೀಳಬಹುದು. ಕೆಲವರು ಉಪವಾಸವಿದ್ದು ಪ್ರಾಣಬಿಡಬಹುದು. ಕೆಲವರು ಶಸ್ತ್ರಗಳನ್ನು ಬಳಸಿ ಪ್ರಾಣತ್ಯಾಗ ಮಾಡಬಹುದು.

ಹೀಗೆ ನಾನು ಮರಳಿದ ಬಳಿಕ ಕಿಷ್ಕಿಂಧೆಯಲ್ಲಿ, ಅಯೋಧ್ಯೆಯಲ್ಲಿ ಘೋರವಾದ ಸಾಮೂಹಿಕ ನಾಶ ಮತ್ತು ಮರಣದ ಆಕ್ರಂದನ. ಇತ್ತ ಇಕ್ಷ್ವಾಕು ವಂಶ ನಾಶ. ಅತ್ತ ವಾನರರ ಸರ್ವನಾಶ. ಇದೆಲ್ಲಾ ಬರಿಗೈಯಲ್ಲಿ ಮರಳಿದ ಹನುಮಂತನಿಂದಾಗಿ ಆಗುವಂಥದ್ದು ಎಂದು ಯೋಚಿಸಿದ. ಇದರಲ್ಲೇನು ಅತಿಶಯೋಕ್ತಿ ಇಲ್ಲ. ಹೀಗಾಗಬಹುದು. ಏಕೆಂದರೆ ಈ ಜನರೆಲ್ಲಾ ಒಬ್ಬರನ್ನೊಬ್ಬರು ಪ್ರೀತಿಸಿ ಬದುಕಿದ್ದಾರೆ. ಏನು ಮಾಡಲಿ? ಸೀತೆಯ ವಾರ್ತೆಯಿಲ್ಲದೆ ಕಿಷ್ಕಿಂಧೆಗೆ ಹೋಗಲು ಸಾಧ್ಯವೇ ಇಲ್ಲ. ಎಂದಾದರೂ ಸೀತೆಯನ್ನು ಹುಡುಕಿ ತಂದಾನು ಎನ್ನುವ ಆಸೆಯಿಂದ ಬದುಕಿಯಾರು ರಾಮ-ಲಕ್ಷ್ಮಣರು. ಅವರು ಬದುಕಿರಲಿ. ವಾನರರು ಬದುಕಿರಲಿ. ಇಲ್ಲಿ ನಾನು ವ್ರತಗಳ ಮೂಲಕ ದೇಹತ್ಯಾಗ ಮಾಡುತ್ತೇನೆ ನಾನು. ಆಹಾರಕ್ಕಾಗಿ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಕೈಗೆ ಯಾರಾದರೂ ತಂದು ಇಟ್ಟರೆ ಅದನ್ನು ತಿನ್ನಬಹುದು. ಇದು ಹಸ್ತಾದಾನ. ಮುಖಾದಾನ ಎಂದರೆ ಆಹಾರವನ್ನು ಬಾಯಲ್ಲಿಟ್ಟರೆ ನುಂಗುವುದು. ಇಲ್ಲದಿದ್ದರೆ ಉಪವಾಸ. ನಾನು ಈ ವ್ರತಗಳನ್ನು ಮಾಡುತ್ತೇನೆ. ನಾನು ವಾನಪ್ರಸ್ಥನಾಗುತ್ತೇನೆ. ಕಿಷ್ಕಿಂಧೆಗೆ ಮರಳುವುದಿಲ್ಲ. ಅಥವಾ ಸಮುದ್ರತೀರದಲ್ಲಿ ಯಾವುದಾದರೂ ಪುಣ್ಯಸ್ಥಳವನ್ನು ಆರಿಸಿಕೊಂಡು, ಚಿತೆಯನ್ನು ನಿರ್ಮಾಣ ಮಾಡಿ ಅದನ್ನು ಪ್ರವೇಶಿಸುತ್ತೇನೆ. ಅದಲ್ಲದಿದ್ದರೆ ಎಲ್ಲಾದರೂ ಕುಳಿತುಕೊಂಡು ಅಂತರ್ಮುಖನಾಗಿ ಇದ್ದುಬಿಡುತ್ತೇನೆ. ಬಾಹ್ಯಪ್ರಪಂಚಕ್ಕೆ ಹೋಗುವುದೇ ಇಲ್ಲ. ಆತ್ಮಸಾಧನೆ ಮಾಡುತ್ತಿರುವಾಗ ಪ್ರಾಣಿಗಳು ನನ್ನ ಶರೀರವನ್ನು ತಿನ್ನುತ್ತವೆ. ತಿನ್ನಲಿ. ರಮಣ ಮಹರ್ಷಿಗಳು ಬಹಳ ಕಾಲ ಹಾಗೆಯೇ ಇದ್ದಾಗ ಇರುವೆಗಳು ದೇಹದ ಕೆಲವು ಭಾಗಗಳನ್ನು ತಿಂದುಬಿಟ್ಟಿದ್ದವೆಂದು ಕೇಳುತ್ತೇವೆ ನಾವು. ಹಾಗೆ ಕಾಗೆಗಳೋ, ನಾಯಿಗಳೋ ತಿನ್ನಲಿ ನನ್ನನ್ನು. ಇದು ಮಹರ್ಷಿಗಳು ಕಂಡ ಶ್ರೇಷ್ಠ ನಿರ್ಯಾಣ. ಪಾರ್ಸಿಗಳು ಸತ್ತ ನಂತರ ಅವರ ದೇಹವನ್ನು ಪಕ್ಷಿಗಳಿಗೆ ಹಾಕುತ್ತಾರೆ. ಆ ಪದ್ಧತಿಯಿದೆ. ಇದು ಇನ್ನು ಮುಂದಿನದು. ಜೀವವಿರುವಾಗಲೇ ಸಮಾಧಿ ಸ್ಥಿತಿಯಲ್ಲಿ ದೇಹವನ್ನು ಪ್ರಾಣಿ-ಪಕ್ಷಿಗಳಿಗೆ ಕೊಡುವುದು. ಹೀಗೆ ಪ್ರಾಣ ಬಿಡುವೆನೆಂದು ಹನುಮಂತ ಭಾವಿಸಿದ.

ಒಮ್ಮೆ ವಿಷಾದವಾಯಿತು. ಹನುಮಂತನ ಕೀರ್ತಿಮಾಲೆ ಹರಿದುಹೋಯಿತು. ಹುಟ್ಟಿದ ಕೂಡಲೆ 300 ಯೋಜನ ಸೂರ್ಯನ ಕಡೆಗೆ ಹಾರಿದವನು. ರಾಹುವನ್ನೇ ಬೆದರಿಸಿ ಓಡಿಸಿದವನು. ಇಂದ್ರನ ವಜ್ರಾಘಾತಕ್ಕೆ ಸಿಲುಕಿಯೂ ಕೂಡಾ ಅಂಗಭಂಗವಾಗದವನು. 300 ಯೋಜನ ಮೇಲಿನಿಂದ ಪರ್ವತದ ಮೇಲೆ ಬಿದ್ದರೆ ಒಂದು ಹಲ್ಲು ಮಾತ್ರ ಭಂಗವಾಗಿತ್ತು. ಅಂತಹ ವಜ್ರಕಾಯ. ಹೇಗೆ ಬಂದೆ ನಾನು ಎನ್ನುವುದನ್ನು ಹನುಮಂತ ಯೋಚನೆ ಮಾಡಿದನಂತೆ. ರಾಮ-ಸುಗ್ರೀವರ ಸಖ್ಯವನ್ನು ಏರ್ಪಡಿಸಿ, ವಾನರ ದೊಡ್ಡ ಸೈನ್ಯದ ನೇತೃತ್ವವನ್ನು ವಹಿಸಿ, ಇಡೀ ದಕ್ಷಿಣ ದಿಕ್ಕನ್ನು ಹುಡುಕಿ, ವಿಶ್ವಾಕಾರವಾಗಿ ಬೆಳೆದು, ಸಮುದ್ರವನ್ನು ಲಂಘಿಸಿ, ಲಂಕಾಧಿದೇವತೆಯನ್ನು ಮಣಿಸಿ, ಒಳಹೊಕ್ಕು ಇಡೀ ಲಂಕೆಯ ಅಂಗುಲ-ಅಂಗುಲವನ್ನೆಲ್ಲಾ ಶೋಧನೆ ಮಾಡಿದ ಹನುಮಂತನ ಕೀರ್ತಿ ಈಗ ಸೀತೆಯನ್ನು ಕಾಣದ ಮೇಲೆ ಹರಿದುಹೋಗುತ್ತದೆ, ಮಣ್ಣು ಪಾಲಾಗುತ್ತದೆ. ಬೇಡ ನನಗೆ. ಎಲ್ಲಾದರೂ ಹೋಗಿ ನಾನು ತಪಸ್ವಿಯಾಗಿ ಮರದ ಬುಡದಲ್ಲಿ ಕುಳಿತುಕೊಳ್ಳುತ್ತೇನೆ. ಕಿಷ್ಕಿಂಧೆಗೆ ಮರಳುವುದಿಲ್ಲ. ನಾನು ಆ ತೀರಕ್ಕೆ ಹೋದರೆ ಅಂಗದಾದಿಗಳು ಸಾಯುತ್ತಾರೆ.

ಹೀಗೆ ಬಹುವಿಧವಾದ ದುಃಖವನ್ನು ತನ್ನ ಮನಸ್ಸಿನಲ್ಲಿ ಧರಿಸಿದನು ಹನುಮಂತ. ಕೊನೆಗೆ ಇನ್ನೊಂದು ತೀರ್ಮಾನ ಮಾಡಿದನು. ಸಾಯುವುದಿಲ್ಲ ನಾನು, ಬದುಕುತ್ತೇನೆ. ಸೀತೆಯಿಲ್ಲವೆಂದು ನನಗಿನ್ನೂ ಗೊತ್ತಾಗಿಲ್ಲವಲ್ಲ ಎಂದು ಸಾವು-ಬದುಕಿನಲ್ಲಿ ಸಾವಿನಲ್ಲಿ ಜಾಸ್ತಿ ದೋಷವಿದೆ, ಸಾಯುವುದಿಲ್ಲ ಎಂದು ಒಮ್ಮೆ ಯೋಚನೆ ಮಾಡಿದ. ಬಳಿಕ ಅವನಿಗೆ ಕೋಪ ಬಂತು. ಈ ದುಷ್ಟ ರಾವಣನಿಂದಲೇ ಇಷ್ಟೆಲ್ಲ. ಹೋಗಿ ಕೊಂದುಬಿಡುತ್ತೇನೆ ಅವನನ್ನು. ಪ್ರತೀಕಾರ ಮಾಡಿದಂತಾದರೂ ಆಯಿತು ಎಂದು ಮನಸ್ಸಿನಲ್ಲೇ ಅಬ್ಬರಿಸಿದ. ಆಮೇಲೆ ಇನ್ನೊಂದು ಯೋಚನೆ ಮಾಡಿದ. ರಾವಣನನ್ನು ಬಡಿದು ಹಾಕಿ, ಕೈ-ಕಾಲನ್ನು ಕಟ್ಟಿ, ಹುಳುವನ್ನು ತೆಗೆದುಕೊಂಡು ಹೋದಹಾಗೆ ಸಮುದ್ರದ ಮೇಲೆ ತೆಗೆದುಕೊಂಡು ಹೋಗಿ ರಾಮನ ಕಾಲಿನ ಮುಂದೆ ಪಶುಪತಿಗೆ ಪಶುವನ್ನು ಒಪ್ಪಿಸಿದಂತೆ ಎಸೆದು ಬಿಡುತ್ತೇನೆ. ರಾಮನು ಏನಾದರೂ ಮಾಡಲಿ. ಹನುಮಂತನ ಚಿಂತೆಗೆ ಮುಕ್ತಾಯವೇ ಇಲ್ಲ. ನೂರಾರು ಯೋಚನೆಗಳು, ನೂರಾರು ಭಾವಗಳು, ನೂರಾರು ಸನ್ನಿವೇಶಗಳ ಕಲ್ಪನೆಗಳು ಕಣ್ಮುಂದೆ ಸುಳಿದವು.

ಕೊನೆಗೆ ಮತ್ತೆ ಆಲೋಚನೆ ಮಾಡಿದ. ಇಲ್ಲ ಸೀತೆ ಸಿಗುವವರೆಗೆ ಲಂಕೆಯನ್ನು ಹುಡುಕುತ್ತೇನೆ. ಎಷ್ಟು ಕಾಲವಾದರೂ ಆಗಲಿ. ಹೇಗೂ ಸಂಪಾತಿ ನಾನು ಸೀತೆಯನ್ನು ಲಂಕೆಯಲ್ಲಿ ನೋಡಿದ್ದೇನೆ ಎಂದು ಹೇಳಿದ್ದಾನಲ್ಲ ಹಾಗಾಗಿ ರಾಮನನ್ನು ಇಲ್ಲಿಗೆ ಕರೆದುಕೊಂಡು ಬಂದುಬಿಡುತ್ತೇನೆ. ಹೌದು, ರಾಮನನ್ನು ಕರೆದುಕೊಂಡು ಬಂದಾಗ ಸೀತೆ ಕಾಣದಿದ್ದರೆ ರಾಮನಿಗೆ ಕೋಪ ಬಂದರೆ! ಆಗ ರಾಮನ ಕಣ್ಣಿನಿಂದ ಹೊರಟ ಕೋಪದ ಕಿಡಿ ಎಲ್ಲಾ ವಾನರರನ್ನೂ ಸುಟ್ಟು ಭಸ್ಮಮಾಡೀತು. ಇದು ಬೇಡ. ಹೀಗೆ ಅವನು ಅಷ್ಟು ಬಗೆಯ ಆಲೋಚನೆಗಳನ್ನು ಮಾಡುತ್ತಾನೆ. ಕಡೆಗೆ ಬೇಡ, ಆಹಾರವನ್ನು ತ್ಯಾಗ ಮಾಡಿ ಒಂದು ಕಡೆ ಕುಳಿತುಬಿಡುತ್ತೇನೆ ಎಂದು ಮತ್ತೊಮ್ಮೆ ಯೋಚಿಸಿದ. ನನ್ನಿಂದ ನರ, ವಾನರರೆಲ್ಲರೂ ಸಾಯುವುದು ಬೇಡ. ತಪಸ್ಸಿಗೆ ಕುಳಿತುಕೊಳ್ಳುತ್ತೇನೆ ಎಂದು ಯೋಚಿಸುವಾಗ ಇದ್ದಕ್ಕಿದ್ದಂತೆ ಒಂದು ನೆನಪಾಯಿತು ಅವನಿಗೆ. ಅಶೋಕವನ ಹುಡುಕಿಲ್ಲವಲ್ಲ ಎಂದು. ಇಷ್ಟೂ ಆಲೋಚನೆಗಳನ್ನು ಮಾಡಿದ್ದು ಅಶೋಕವನದ ಮುಂದೆ ಕುಳಿತುಕೊಂಡು. ಅಶೋಕವನವು ಅವನ ಕಣ್ಣ ಮುಂದೆಯೇ ಇತ್ತು. ಅದರೊಳಗೆ ಸೀತೆಯಿದ್ದಾಳೆ. ಮುಂದೆ ಕುಳಿತು ಎಷ್ಟೆಲ್ಲಾ ಯೋಚಿಸಿದ್ದಾನೆ. ಅದೊಂದು ಜಾಗವನ್ನು ಬಿಟ್ಟು ಇಡೀ ಲಂಕೆಯನ್ನು ಅಂಗುಲ-ಅಂಗುಲವೂ ಬಿಡದೇ ಹುಡುಕಿದ್ದಾನೆ.ಈಗ ಇದೊಂದು ಹುಡುಕಿಲ್ಲ ಎಂಬ ಯೋಚನೆ ಬಂದಿದೆ. ದೇವರು ತನ್ನ ಭಕ್ತಾಗ್ರಣಿಯನ್ನೂ ಕೂಡ ಹೇಗೆ ಪರೀಕ್ಷೆ ಮಾಡುತ್ತಾನೆ. ಹನುಮಂತನಿಗೆ ರಾಮನು ಕೊಟ್ಟ ಬಹುಮಾನಗಳು ಅಷ್ಟಿಷ್ಟಲ್ಲ ಮುಂದೆ. ಆದರೆ ಅದಕ್ಕಿಂತ ಮೊದಲು ಮಾಡಿದ ಪರೀಕ್ಷೆ ಎಂಥದ್ದು! ಈ ಅಶೋಕವನವನ್ನು ಹೋಗಿ ನೋಡುತ್ತೇನೆ.

ಹಿಂದೆ ಚಕ್ರವರ್ತಿಗಳ ಅರಮನೆಯಲ್ಲೊಂದು ಉದ್ಯಾನವನವಿರುತ್ತಿತ್ತು. ಅದಕ್ಕೆ ಅಶೋಕವನವೆಂದು ಹೆಸರು. ಲಂಕೆಯಲ್ಲಿ ಮಾತ್ರ ಅಶೋಕವನ ಇತ್ತು ಅಂತ ತಪ್ಪು ತಿಳಿದುಕೊಳ್ಳಬೇಡಿ. ಅಯೋಧ್ಯೆಯಲ್ಲಿ ರಾಮನದ್ದೂ ಅಶೋಕವನವಿದ್ದು. ನೋವಾದಾಗ ದುಃಖವನ್ನು ಕಡಿಮೆಮಾಡುವ ವನವದು. ಅಶೋಕವನ, ಅಶೋಕ ವೃಕ್ಷಗಳಿಗೆ ನೋವನ್ನು ಸಹಜವಾಗಿ ಸಮಾಧಾನ ಸ್ಥಿತಿಗೆ ತರುವ ಸಾಮರ್ಥ್ಯ ಸಹಜವಾಗಿಯೇ ಇದೆ. ಅವನ್ಯಾಕೆ ಅಶೋಕಾವನದಲ್ಲಿ ಸೀತೆಯನ್ನಿಟ್ಟ ಅಂದರೆ ಸ್ವಲ್ಪ ಸಮಾಧಾನ ಆಗಲಿ ಅಂತ. ರಾಮನದೇ ನೆನಪಿನಲ್ಲಿದ್ದಾಳಲ್ಲ, ಸಮಾಧಾನಗೊಂಡು ರಾವಣನ ವಶಕ್ಕೆ ಬರಲಿ ಅಂತ.

ಮುಂದೆ ಪಟ್ಟಾಭಿಷೇಕದ ಸಂದರ್ಭದಲ್ಲಿ ಸುಗ್ರೀವನಿಗೆ ತನ್ನ ಮನೆಯನ್ನು ಕೊಡಿ ಅಂತ ಹೇಳ್ತಾನೆ ರಾಮ. ರಾಮನಿಗೆ ರಾಜಭವನವಿದೆ. ಆ ರಾಮನು ತನ್ನ ಮನೆಯನ್ನು ವರ್ಣನೆ ಮಾಡುವಾಗ ಅಶೋಕವನಸಹಿತ ಇರುವ ನನ್ನ ಮನೆ ಸುಗ್ರೀವನಿಗಿರಲಿ ಎನ್ನುತ್ತಾನೆ. ಹಾಗಾಗಿ ಲಂಕೆಯಲ್ಲೊಂದೇ ಅಶೋಕಾವನ ಎಂಬ ತಪ್ಪು ಕಲ್ಪನೆಯನ್ನು ಬಿಡಬೇಕು. ಹೀಗೆ ಹನುಮಂತ ಅಶೋಕವನವನ್ನು ಪ್ರವೇಶ ಮಾಡಬೇಕಾದರೆ ಮತ್ತೆ ಮಂಗಲಾಚರಣೆಯನ್ನು ಪ್ರಾರಂಭಿಸಬೇಕೆಂದುಕೊಂಡ. ಸಮುದ್ರಲಂಘನದ ಪ್ರಾರಂಭದಲ್ಲಿ ಮಾಡಿದ್ದಾನೆ. ಈಗ ವಸುಗಳಿಗೆ, ರುದ್ರರಿಗೆ, ಮರುದ್ಗಣಗಳಿಗೆಲ್ಲ ನಮಸ್ಕಾರ ಮಾಡಿ, ಅಶೋಕವನ ಪ್ರವೇಶ ಮಾಡಿ, ಇಕ್ಷ್ವಾಕುಕುಲ ನಂದಿನಿ ಸೀತೆಯನ್ನು ರಾಮನಿಗೆ ಕಾಣಿಕೆಯಾಗಿ ಸಮರ್ಪಣೆ ಮಾಡ್ತೇನೆ. ಚಿಂತೆಯನ್ನೊದರಿ, ಮಹಾತೇಜಸ್ವಿ ಎದ್ದನು.

ನಮೋಸ್ತು ರಾಮಾಯ ಸ ಲಕ್ಷ್ಮಣಾಯ
ದೇವೈಚತಸೈ ಜನಕಾತ್ಮಜಾಯೈ
ನಮೋಸ್ತು ರುದ್ರೇಂದ್ರ ಯಮಾನಿಲೇಭ್ಯಃ
ನಮೋಸ್ತು ಚಂದ್ರಾರ್ಕ ಮರುದ್ಗಣೇಭ್ಯಃ ||

ಅಶೋಕವನಕ್ಕೆ ಪ್ರವೇಶ ಮಾಡುವಾಗ ಹನುಮಂತ ರಾಮ, ಸೀತೆ, ಲಕ್ಷ್ಮಣರಿಗೆ ನಮಸ್ಕರಿಸಿದ ಶ್ಲೋಕ ಇದು. ಎಂಥಾ ದುಃಖದಲ್ಲಿದ್ದ ಹನುಮ ಸೀತೆಯನ್ನು ಹುಡುಕಿದ್ದು ಈ ಶ್ಲೋಕದಿಂದ. ರಾಮನಿಗೆ, ಲಕ್ಷ್ಮಣನಿಗೆ, ಸೀತೆಗೆ, ರುದ್ರ ಇಂದ್ರ, ಯಮ, ಅನಿಲನಿಗೆ, ಸೂರ್ಯ ಚಂದ್ರ ಮರುದ್ಗಣಗಳಿಗೆ ನನ್ನ ನಮಸ್ಕಾರವಿರಲಿ. ಬಳಿಕ ವಾನರರಾಜ ಸುಗ್ರೀವನಿಗೂ ಒಂದು ವಂದನೆಯನ್ನು ಸಲ್ಲಿಸಿ, ಎಲ್ಲ ದಿಕ್ಕುಗಳ ಅವಲೋಕನವನ್ನು ಮಾಡ್ತಾನೆ. ಬಳಿಕ ಅಶೋಕವನವನ್ನು ಅವಲೋಕನ ಮಾಡಿ, ಮನಸ್ಸಿಂದ ಅಶೋಕವನಕ್ಕೆ ಹೋದನಂತೆ. ಬಳಿಕ ಇದರೊಳಗೂ ರಾಕ್ಷಸರಿದ್ದಾರೆಂದು ನೆನೆದನು. ಸಂಸ್ಕಾರವುಳ್ಳ ಉದ್ಯಾನ. ವೃಕ್ಷರಕ್ಷಕರಿದ್ದಾರೆ. ವಾಯು ಕೂಡ ಗಡಿಬಿಡಿ ಮಾಡುವಂತಿಲ್ಲ. ಭಾರೀ ರಕ್ಷಣೆ, ಭದ್ರ ಕಾವಲು ಇರಬೇಕು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡನು. ರಾಮನಿಗಾಗಿ ಸಣ್ಣ ರೂಪವನ್ನು ತಾಳಿದನು. ದೇವತೆಗಳೇ, ಋಷಿಗಳೇ, ಸೂರ್ಯಚಂದ್ರರು, ಅಶ್ವಿನಿದೇವತೆಗಳು, ಮರುದ್ಗಣಗಳೇ ನನಗೆ ಸಿದ್ಧಿಯನ್ನು ಕೊಡಿ. ಸಮಸ್ತ ಒಳಿತಿನ ಶಕ್ತಿಗಳೆಲ್ಲರೂ ನನಗೆ ಸಿದ್ಧಿಯನ್ನು ಕೊಡಲಿ. ಶಿವನೂ ಹರಸಲಿ, ನನ್ನಿಂದ ಈ ಕಾರ್ಯವಾಗುವಂತೆ ಮಾಡು. ಎಂದೆಲ್ಲಾ ಪ್ರಾರ್ಥನೆ ಮಾಡ್ಕೊಂಡು, ನಾನು ಸೀತೆಯನ್ನು ನೋಡ್ತೇನೆ ಎಂದು ಸಂಕಲ್ಪಮಾಡಿದನು. ಮೂಗು ಎತ್ತರ, ಸ್ವಚ್ಛ ಬಿಳಿಯ ದಂತಪಂಕ್ತಿಗಳು, ಮುಖದಲ್ಲಿ ಒಂದೇ ಒಂದು ಗೆರೆಯಿಲ್ಲ ಸೀತೆಯ ಮುಖದಲ್ಲಿ. ಸ್ವಚ್ಛ ನಗುವಿನವಳು ಸೀತೆ. ರಾಜೀವದಳನೇತ್ರೆ, ಆರ್ಯಾವದನೆ ಸೀತೆ. ಪ್ರಸನ್ನ ಚಂದ್ರನ ದರ್ಶನದಂತೆ ಸೀತೆಯು ಪ್ರಸನ್ನಳು. ಒಳಿತಿನ ಸಂಕಲ್ಪವನ್ನು ಮತ್ತೆ ಮತ್ತೆ ಮಾಡಬೇಕು, ಹಾಗೇ ಮಾಡ್ತಾನೆ ಹನುಮಂತ. ಮೈಥಿಲಿಯ, ಧರೆಯ ದೇವತೆಯ ನೆನಪು ಮಾಡಿಕೊಳ್ಳುತ್ತಾ, ಸೀತೆಯ ಆ ಸ್ಥಿತಿಗಾಗಿ ತುಂಬ ಬೇಸರಿಸಿದನು ಹನುಮಂತ.

ಕೇಡಿ ರಾವಣ, ಅಬಲೆಯಾದ ಸೀತೆಯನ್ನು ಬಲಾತ್ಕಾರವಾಗಿ ಇಲ್ಲಿಗೆ ತಂದನಲ್ಲಾ…! ಅಬಲೆಯನ್ನು ಬಲದಿಂದ, ಅವಳಿಚ್ಛೆಗೆ ವಿರುದ್ಧವಾಗಿ ತಂದನಲ್ಲಾ..! ಅಂತಹ ಸೀತೆ, ಇಷ್ಟೆಲ್ಲ ಒಳ್ಳೆಯವಳಾಗಿದ್ದು, ಜಗತ್ತಿನ ಸರ್ವೋತ್ಕೃಷ್ಟ ಸ್ತ್ರೀರತ್ನವಾದ, ರಾಮನ ಮಡದಿ, ಜನಕನ ಮಗಳು, ದಶರಥನ ಸೊಸೆ, ಇಕ್ಷ್ವಾಕು ವಂಶ ಕುಲನಂದಿನಿ ಆಗಿದ್ದುಕೊಂಡವಳು ಈಗ ಇವನ ಅಧೀನದಲ್ಲಿ, ಬಂಧನದಲ್ಲಿ ಇರುವಳಲ್ಲಾ…..! ಹೇಗೆ ನನಗೆ ಕಂಡಾಳು…? ಎಷ್ಟು ಹೊತ್ತಿಗೆ ಗೋಚರಿಸಿಯಾಳು ಎಂಬುದನ್ನು ಬಯಸಿ, ಹಾರೈಸಿ, ಅಪೇಕ್ಷಿಸಿ, ಧ್ಯಾನಿಸಿ, ಮನಸ್ಸಿಂದ ಹೋಗಿ ಸೀತೆಯನ್ನು ಕಂಡನಂತೆ ಹನುಮ… ದಿವ್ಯತೆಯ ಒಂದು ಝಲಕ್. ಅಂತರಾತ್ಮದಿಂದ ಆಕೆಯನ್ನು ಸೇರಿ, ಬಳಿಕ ನೆಗೆದನು ಅಶೋಕವನಕ್ಕೆ ಹನುಮಂತ. ಮುಂದೇನಾಯಿತು ಕೇಳೋಣ ಮುಂದಿನ ಪ್ರವಚನದಲ್ಲಿ…

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments