ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಕಣ್ಣರಿಯದುದನ್ನು ಕರುಳರಿಯುವುದಂತೆ. ಕರುಳೂ ಅರಿಯದುದನ್ನು ಹೃದಯವು ಅರಿಯುವುದು. ಪ್ರತ್ಯಕ್ಷ ಕಣ್ಣಮುಂದೆ ಕಾಣದಿದ್ದರೂ ಕೂಡ ಕೆಲವೊಮ್ಮೆ ನಮ್ಮ ಅಂತಃಕರಣಕ್ಕೆ ಅರ್ಥವಾಗುವುದುಂಟು. ಅಂಥಾ ಒಂದು ಸ್ಥಿತಿಯಲ್ಲಿ ಹನುಮಂತನಿದ್ದಾನೆ. ಎಂಥಾ ದೊಡ್ಡ ನಿರಾಸೆಯಲ್ಲಿದ್ದವನು! ವಿಷಾದ ಸಾಗರದಲ್ಲಿ ಮುಳುಗೆದ್ದವನು. ಮುಂದಿನ ಕರಾಳ ಸನ್ನಿವೇಶವನ್ನು ಕಲ್ಪಿಸಿ ಖತಿಗೊಂಡವನು. ಅವನಿಗೆ ಅಶೋಕವನಿಕೆಯ ನೆನಪಾಗಿದೆ. ಹೌದು, ಕಣ್ಮುಂದೆ ಅಶೋಕ ವನವಿದೆ. ಆದರೆ ಅಲ್ಲಿ ಸೀತೆಯಿರುವುದನ್ನು ಹನುಮನ ಕಣ್ಣು ಕಂಡಿಲ್ಲ. ಆದರೆ ಏನೋ ಒಂದು ತುಡಿತ, ಒಂದು ಮಿಡಿತ ಅವನೊಳಗಿದೆ. ಹಾಗಾಗಿ ಸಮುದ್ರೋಲ್ಲಂಘನಕ್ಕೆ ಹೊರಟಾಗ ಮಾಡಿದ ಹಾಗೆ ಅವನು ದೇವ ನಮಸ್ಕಾರವನ್ನು ಮಾಡ್ತಾನೆ. ಒಂದು ಭರವಸೆ ಅವನಲ್ಲಿ ಅವ್ಯಕ್ತವಾಗಿದೆ. ಅಶೋಕ ವನವನ್ನು ಕಂಡಾಗಲೇ ಸಂಹರ್ಷವು ಹನುಮನನ್ನು ಆವರಿಸಿತು. ವಿಷಾದಮೂರ್ತಿಯಾಗಿದ್ದವನು ಇದ್ದಕ್ಕಿದ್ದಂತೆ ಆನಂದಮೂರ್ತಿಯಾದ. ಏನೋ ತಂಪು, ಹಿತ, ಶುಭದ ಪ್ರತೀಕ್ಷೆ.

‌ಪ್ರಾಕಾರದ ಮೇಲೆ ಕುಳಿತು ಅಶೋಕ ವನವನ್ನು ವೀಕ್ಷಿಸ್ತಾನೆ. ಮರಗಳೆಲ್ಲ ಹೂಬಿಟ್ಟಿವೆ. ರಾಮನ ಎದೆಯಿಂದ ಹೊರಟ ಬಾಣದಂತೆ ದೊಡ್ಡ ಮಾವಿನ ತೋಪಿನ ಕಡೆಯಿಂದ ಅಶೋಕ ವನಕ್ಕೆ ಧಾವಿಸಿದ ಕೋಲ್ಮಿಂಚಿನಂತೆ. ಹೋಗಿ ಸೀತೆಯನ್ನು ಹುಡುಕಿದ. ಅರ್ಧ ರಾತ್ರಿ ದಾಟಿದೆ. ಮಲಗಿದ್ದ ಹಕ್ಕಿಗಳನ್ನೆಲ್ಲ ಬಡಿದು ಎಬ್ಬಿಸಿ ಬಿಟ್ಟಿದ್ದಾನೆ ಸೀತೆಯ ಹುಡುಕುವ ಭರದಲ್ಲಿ. ಆ ಪಕ್ಷಿಗಳು ಎಚ್ಚೆತ್ತು ಹಾರಿದವು. ಅವುಗಳು ರೆಕ್ಕೆ ಬಡಿದು ಹಾರಿದಾಗ ಮರಗಳೆಲ್ಲ ಹೂಗಳನ್ನು ಚೆಲ್ಲಿದವು. ಹನುಮನ ಮೇಲೆ ಪುಷ್ಪವೃಷ್ಟಿಯಾದ. ಖುಷಿಯಲ್ಲಿ ಅತ್ತ ಇತ್ತ ಸುತ್ತಮುತ್ತ ನಲಿದಾಡಿದನಂತೆ. ವೃಕ್ಷಗಳೆಡೆ ಧಾವಿಸುವ ಹನುಮ ವಸಂತದಂತೆ ಕಂಡ.

ಅವನು ಅಶೋಕ ವನವನ್ನು ಪ್ರವೇಶಿಸುವ ಮೊದಲು ಒಂದು ಭೂಮಿಪೂಜೆ ಮಾಡಿದನಂತೆ. ಹೇಗೆ? ಆ ಮಹಾಬಲಶಾಲಿ ಹೋಗಿ ವೃಕ್ಷಗಳನ್ನು ಅಲ್ಲಾಡಿಸ್ತಾ ಇದ್ದಾನೆ. ಪುಷ್ಪಗಳು‌, ಹಣ್ಣುಗಳು, ಎಲೆಗಳು, ಪುಟ್ಟ ಕೊಂಬೆಗಳು ಬಿದ್ದವು. ಕೆಲವೇ ಕ್ಷಣಗಳಲ್ಲಿ ಅವನು‌ ಮುಟ್ಟಿದ ಮರಗಳೆಲ್ಲ ಬೋಳಾಗಿ ನಿಂತವು. ಹನುಮನ ಕಪಿತ್ವ ಮತ್ತೊಮ್ಮೆ ಪ್ರಕಟವಾಗಿದೆ. ಹಾಗಾಗಿ ಎಲ್ಲಿಂದ ಅವನ ಪ್ರವೇಶವಾಗ್ತಾ ಇದೆಯೋ ಅಲ್ಲಿದ್ದ ವೃಕ್ಷಗಳೆಲ್ಲ ಬೋಳಾದವು. ದೊಡ್ಡ ದೊಡ್ಡ ಬಳ್ಳಿಗಳು ನೆಲ ಸೇರಿದವು. ಸಂತೋಷದ ಅಭಿವ್ಯಕ್ತಿ!

‌ಅಶೋಕವನ ಹೇಗಿತ್ತು? ಅದು ಕೂಡ ಅತಿ ಅದ್ಭುತವಾಗಿತ್ತು. ರಾವಣನ ಅರಮನೆ ಹೇಗಿತ್ತೋ, ಪುಷ್ಪಕವಿಮಾನ ಹೇಗಿತ್ತೋ, ಲಂಕೆಯ ಅರಮನೆ ಹೇಗಿತ್ತೋ, ಹಾಗೇ ಅಶೋಕವನವೂ ಕೂಡ. ಬೆಳ್ಳಿಯ ವೃಕ್ಷಗಳು, ಬಂಗಾರದ ವೃಕ್ಷಗಳು, ಕೆಲವು ವೃಕ್ಷಗಳಿಗೆ ಉನ್ನತವಾದ ವೇದಿಕೆಯನ್ನು ಕಲ್ಪಿಸಲಾಗಿದೆ. ದೊಡ್ಡ ಕಟ್ಟೆ, ಅದಕ್ಕೆ ಹತ್ತಲು ಸ್ವರ್ಣಮಯವಾದ ಚಿಕ್ಕ ಚಿಕ್ಕ ಕಟ್ಟೆಗಳು. ವೃಕ್ಷಗಳು ಕೊಡೆಯ ಹಾಗೆ ಅರಳಿಕೊಂಡಿದ್ದಾವೆ ಬಿಸಿಲು, ಮಳೆ ಇದ್ಯಾವುದೂ ಬರದೇ ಇರುವಂತೆ. ಫಲಪುಷ್ಪಗಳು ತುಂಬಿದ್ದಾವೆ ಪುನ್ನಾಗ, ಸಂಪಿಗೆ ಮೊದಲಾದ ವೃಕ್ಷಗಳಲ್ಲಿ. ಇನ್ನು, ಭೂಮಿಯಲ್ಲಿ ಅಪರೂಪದ ಮೃಗಗಳು, ಪಕ್ಷಿಗಳ ನಿನಾದ. ಬೆಳ್ಳಿಯ, ಚಿನ್ನ, ರತ್ನ, ಹೂಗಳಿಂದ ಮಾಡಿದ ನೆಲಗಳು. ಅಲ್ಲಿ ಒಂದು ಶಿಲಾಮಂಟಪದಿಂದ ಶೋಭಿತವಾಗಿದ್ದ ಚಂದದ ಬೆಟ್ಟವಿತ್ತಂತೆ. ನಾನಾ ವೃಕ್ಷಗಳಿಂದ ಹಸಿರಾಗಿತ್ತು, ತುಂಗ ಶೃಂಗಗಳಿಂದ ಕೂಡಿತ್ತು. ಜಗದಲ್ಲಿ ರಮಣೀಯವೆನಿಸಿತ್ತು. ಚಿತ್ರಕೂಟದ ನೆನಪು ಮಾಡುವಂತೆ ಇತ್ತು. ಆ ಬೆಟ್ಟದಿಂದ ನದಿಯೊಂದು ಇಳಿದು ಬಂದಿತ್ತು. ಆ ನದಿಗೆ ಅಡ್ಡಲಾಗಿ ಕೆಲವು ಮರಗಳು ಬಿದ್ದಿದ್ದವು. ಕೆಲವು ಮರಗಳ ಕೊಂಬೆಗಳು ಆ ನೀರಿನಲ್ಲಿ ಇಳಿದಿದ್ದವು. ಹಾಗೇ ತುಂಬ ಜಲಾಶಯಗಳು, ಅವಕ್ಕೆ ಮಣಿಮಯ ಸೋಪಾನಗಳು. ದಂಡೆಯಲ್ಲಿ ಬಂಗಾರದ ಮರಗಳು. ತಾವರೆ ಮೊದಲಾದ ಹೂವುಗಳು, ಹಂಸ ಮುಂತಾದ ಪಕ್ಷಿಗಳು ತುಂಬಿರಕ್ಕಂತ ಕಮಲದ ಕೊಳಗಳು, ಜಲಾಶಯಗಳು ಅಲ್ಲಿದ್ದವು. ವಿಶ್ವಕರ್ಮ ನಿರ್ಮಿತ ಸೌಧಗಳಿದ್ದವು.
ಹನುಮಂತ ಅಲ್ಲಿ ದೇವ ವೃಕ್ಷಗಳನ್ನೂ ಕೂಡ ಕಾಣ್ತಾನೆ. ಕಲ್ಪವೃಕ್ಷ, ಕಲ್ಪಲತೆಗಳೂ ಅಲ್ಲಿದ್ದವು. ಅವುಗಳ ನಡುವೆ ಇದ್ದಂತಹ ಪರಮಶೋಭಾಯಮಾನವಾದ ಅನೇಕಾನೇಕ ಲತೆಗಳುಳ್ಳ ಒಂದು ದೊಡ್ಡ ಕಾಂಚನ ಶಿಂಶುಪಾ ವೃಕ್ಷವು‌ ಹನುಮನ ಗಮನ ಸೆಳೆಯಿತು. ಅಲ್ಲಿ ಸುತ್ತ ಸ್ವರ್ಣಮಯ ವೇದಿಕೆಗಳಿದ್ದಾವೆ. ‌ಕುಳಿತುಕೊಳ್ಳಲು ಅವಕಾಶಗಳು. ಅಲ್ಲಿಂದ ಸುತ್ತಮುತ್ತ ನೋಡ್ತಾ ಇದ್ದಾನೆ ಹನುಮಂತ. ಭೂಪ್ರದೇಶಗಳು, ನೀರಿನ ತೊರೆಗಳನ್ನೆಲ್ಲ ಕಾಣ್ತಾ ಇದ್ದಾನೆ.

ಈ ಶಿಂಶುಪಾ ವೃಕ್ಷದ ಸುತ್ತಮುತ್ತ ಪುಟ್ಟ ಬಂಗಾರದ ಮರಗಳು ಕೆಲವಿದ್ದಾವೆ. ಹನುಮನ ಮೇಲೆ ಶಿಂಶುಪಾ ವೃಕ್ಷದ ಸ್ವರ್ಣಕಾಂತಿಯೂ ಬಿತ್ತು, ಸುತ್ತಮುತ್ತ ಇದ್ದ ಸ್ವರ್ಣ ವೃಕ್ಷಗಳ ಕಾಂತಿಯೂ ಬಿತ್ತು. ಅಲ್ಲಿ ಎಲ್ಲಾ ಸ್ವರ್ಣವೇ.
ಇವನು ಕೂಡ ಚಿನ್ನದ ಬಣ್ಣದವನು. ಮುಖ ಕೆಂಪು, ಮೈಯೆಲ್ಲಾ ಚಿನ್ನದ ಬಣ್ಣದ ರೋಮಗಳು ಹನುಮಂತ ಅಂದರೆ‌. ಅವನ ಮೇಲೆ ಎಲ್ಲೆಡೆಯಿಂದ ಸ್ವರ್ಣಕಾಂತಿ ಬೀಳ್ತಾ ಇದೆ. ತನ್ನನ್ನು ತಾನು ನೋಡಿಕೊಂಡನಂತೆ ಹನುಮಂತ. ‘ಆಹಾ! ನಾನು ಚಿನ್ನದ ಕಪಿಯಾದೆ ಅಂತ ಅಂದುಕೊಂಡನಂತೆ’ ಒಂದು ಬಾರಿ. ಹೀಗೆ, ಆ ಕಾಂಚನ ಶಿಂಶುಪಾ ವೃಕ್ಷಕ್ಕೆ ಚಿಕ್ಕ ಚಿಕ್ಕ ಗಂಟೆಗಳನ್ನು ಕಟ್ಟಲಾಗಿತ್ತು. ಗಾಳಿ ಬೀಸ್ತಾ ಇತ್ತು, ನೂರಾರು ಕಿಂಕಿಣಿಗಳ ನಾದ, ವಿಸ್ಮಯವಾಯಿತು ಹನುಮಂತನಿಗೆ. ಎಷ್ಟು ಅದ್ಭುತವಾಗಿ ಇದೆಯಪ್ಪಾ! ಏನು ಸೊಬಗು! ಆ ಶಿಂಶುಪಾ ವೃಕ್ಷ ಹೂ ಬಿಟ್ಟಿದೆ, ಚೆಂದವಾಗಿದೆ.

ಹನುಮಂತನಿಗನ್ನಿಸಿತು, ಇಲ್ಲಿ ನಾನು ಸೀತೆಯನ್ನು ಕಾಣ್ತೇನೆ. ಅದೇ, ಕಣ್ಣರಿಯದಿದ್ದರೂ ಕರುಳರಿಯುವುದು. ಕರುಳು ಅರಿಯದಿರುವುದನ್ನೂ ಕೂಡ ಹೃದಯ ಅರಿಯುವುದು. ಅಲ್ಲಿ ಅವನಿಗೆ ಆ ಭಾವ ಬಂತು.
ವೈದೇಹಿಗೆ ರಾಮನನ್ನು ಕಾಣುವ ತವಕ, ಹನುಮನಿಗೆ ವೈದೇಹಿಯನ್ನು ಕಾಣುವ ತವಕ. ರಾಮನ ಕಾಣುವ ತವಕದ ಸೀತೆಯನ್ನು ನಾನಿಲ್ಲಿ ಕಾಣ್ತೇನೆ ಅಂದುಕೊಂಡ. ಆಮೇಲೆ ಅಶೋಕವನವನ್ನು ನೋಡಿದ. ತುಂಬ ಚೆಂದ ಕಾಣ್ತು ಅವನಿಗೆ. ಈ ದುರಾತ್ಮಕನ ಅಶೋಕವನ ಬಹಳ ಚೆಂದವಾಗಿದೆ ಅಂತ ಅಂದುಕೊಂಡನಂತೆ. ಇವನೆಷ್ಟು ದುರಾತ್ಮನೋ, ಈ ವನ ಅಷ್ಟೇ ಚೆನ್ನಾಗಿದೆ ಅಂತ. ಚಂಪಕ, ಚದನ, ವಕುಲ, ನಾನಾ ತರದ ವೃಕ್ಷಗಳು ಇಲ್ಲಿ ಎಷ್ಟು ಚೆನ್ನಾಗಿದೆ! ಹತ್ತಿರದಲ್ಲಿಯೇ ಒಂದು ಕಮಲದ ಕೊಳ ಇತ್ತು. ಅದನ್ನು ಕಂಡಾಗ ಸೀತೆ ಅಲ್ಲಿಗೆ ಬಂದಾಳು. ಖಂಡಿತವಾಗಿಯೂ ಈ ಚೆಂದದ ಕೊಳದ ಬಳಿ ಸೀತೆ ಬರ್ತಾಳೆ. ರಾಮನ ಪಟ್ಟದ ಮಹಿಷಿ ಇಲ್ಲಿಗೆ ಬರ್ತಾಳೆ ಯಾಕೆಂದರೆ ಆಕೆ ವನಸಂಚಾರ ಕುಶಲಾ. ರಾಮನಿಲ್ಲದ ಆಕೆಯ ದುಃಖವನ್ನು ಈ ಕೊಳ ಕಳೆಯುವಂಥದ್ದು. ಜಿಂಕೆಯಂತಹ ಲಕ್ಷಣವಾದ ಕಣ್ಣುಳ್ಳವಳು, ವನಪಂಡಿತೆ ಇಲ್ಲಿಗೆ ಬಂದಾಳು. ಅವನಿಗೆ ಇದ್ದಕಿದ್ದಂತೆ ಮಾಯಾಜಿಂಕೆಯ ನೆನಪಾಯಿತು. ಚಿನ್ನದ ಜಿಂಕೆಯನ್ನು ಇಷ್ಟಪಟ್ಟಿದ್ದಳಲ್ಲ ಆಕೆ. ಏನರ್ಥ? ಅವಳಿಗೆ ಕಾಡು ಪ್ರಾಣಿಗಳು ಅಂದ್ರೆ ಇಷ್ಟ. ಜಿಂಕೆಯನ್ನು ಇಷ್ಟಪಟ್ಟವಳು ಇಲ್ಲಿ ಅನೇಕ ಬಗೆಯ ಜಿಂಕೆಗಳು, ಪ್ರಾಣಿ ಪಕ್ಷಿಗಳು ಇವೆಯಲ್ಲ ಹಾಗಾಗಿ ವನಚರಪ್ರಿಯೆ ಸೀತೆ ಇಲ್ಲಿಗೆ ಬಂದಾಳು. ಬೇರೆಯೇನಲ್ಲದಿದ್ದರೂ ಸಂಧ್ಯಾಕಾಲ ಬಂದಾಗ ಸಂಧ್ಯೋಪಾಸನೆಗಾಗಿ ಸೀತೆ ಖಂಡಿತವಾಗಿ ಈ ನದಿಯ ಬಳಿ ಬಂದಾಳು.

ಹನುಮಂತ ಶ್ಯಾಮಾ ಅಂತ ಕರೀತಾನೆ. ಶಾಮಾ ಅಂದ್ರೆ ಹದಿನಾರು ವರ್ಷದ ಆಕೃತಿ. ಅದು ಸೀತೆಗೆ ಯಾವಾಗಲೂ ಇರುವಂಥದ್ದು. ರಾಮಚಂದ್ರನ ಪತ್ನಿ ಸೀತೆಗೆ ಸಲ್ಲುವಂಥದ್ದು ಈ ಅಶೋಕಾವನ. ರಾವಣನಿಗಲ್ಲ ಎಂಬುದಾಗಿ ಆಲೋಚನೆ ಮಾಡಿ ಶಿಂಶಿಪಾ ವೃಕ್ಷದೊಳಗೆ ಮರೆಯಾಗ್ತಾನೆ. ಅಲ್ಲಿಂದಲೇ ಸುತ್ತ ನೋಡ್ತಾನೆ. ಯಥಾಕಾಲ, ಸರ್ವಕಾಲ ಫಲಪುಷ್ಪಗಳು ಕಂಡವು ಅವನಿಗೆ. ಕೆಲವು ವರ್ಷಪೂರ್ತಿ ಫಲ ಕೊಡುವಂಥವು. ಇನ್ನು ಕೆಲವು ಕಾಲಕ್ಕನುಗುಣವಾಗಿ. ಹೂಹಣ್ಣುಗಳಿಂದ ತುಂಬಿ ಬಾಗಿದ ವೃಕ್ಷಗಳು. ಒಂದು ವೃಕ್ಷ ಕಂಡಿತಂತೆ ಹನುಮನಿಗೆ. ಅದರಲ್ಲಿ ಎಷ್ಟು ಪಕ್ಷಿಗಳಿದ್ದವು ಅಂದ್ರೆ, ಪಕ್ಷಿಗಳೆಲ್ಲ ಆ ಮರವನ್ನು ಮುತ್ತುವಾಗ ಮರವೇ ಕಾಣ್ತಾ ಇರ್ಲಿಲ್ವಂತೆ. ಸ್ವರ್ಗಲೋಕದ ಕಲ್ಪಲತೆಗಳು, ಅಶೋಕವನವೇ ಪ್ರಜ್ವಲಿಸುವುದೋ ಎಂಬಂತಿರತಕ್ಕಂಥ ಪುಷ್ಪಗಳ ಪ್ರಭೆ, ಕೋಗಿಲೆಗಳ ಕೂಜನ, ದಿವ್ಯವಾದ ಪರಿಮಳ, ನಡುನಡುವೆ ಮಾಳಿಗೆ ಮನೆಗಳು, ನೆಲಮಾಳಿಗೆಗಳು, ಅಲ್ಲಲ್ಲಿ ರತ್ನಗಂಬಳಿಗಳನ್ನು ಕೂಡಾ ಹಾಸಿದ್ದರು. ಚೆಂದದ ಕೊಳದಲ್ಲಿ ಬಂಗಾರದ ಕಮಲಗಳು, ಕನ್ನೈದಿಲೆಗಳು, ಅನೇಕಾನೇಕ ಅಶೋಕ ವೃಕ್ಷಗಳನ್ನ ಕಾಣ್ತಾನೆ ಹನುಮಂತ. ಬಣ್ಣಬಣ್ಣದ ಅಶೋಕವೃಕ್ಷಗಳು, ಕೆಲವು ಸೂರ್ಯನಂತೆ, ಚಂದ್ರನಂತೆ, ಅಗ್ನಿಯಂತೆ, ಕೆಲವು ನೀಲಾಂಜನದಂತಹ ಅಶೋಕವೃಕ್ಷಗಳು ಅಲ್ಲಿದ್ದವು. ಒಟ್ಟಾರೆ ಈ ಅಶೋಕವನವು ಇಂದ್ರನ ನಂದನವನದಂತೆ, ಕುಬೇರನ ಚೈತ್ರರಥವನದಂತೆ ಗೋಚರಿಸಿತು. ಹೂವುಗಳು ನಕ್ಷತ್ರವಾದರೆ ಅಶೋಕವನವು ಆಕಾಶ. ಹೂವುಗಳು ರತ್ನಗಳಾದರೆ ಅಶೋಕವನವು ಐದನೆಯ ಸಮುದ್ರ. ಅಲ್ಲಿ ಚೆಲ್ಲಿದ ಪರಿಮಳ ಇನ್ನೊಂದು ಗಂಧಮಾದನ ಪರ್ವತ. ಹನುಮ ಯಾವ ಶಿಂಶಿಪಾ ವೃಕ್ಷದಲ್ಲಿ ಅಡಗಿದ್ದನೋ ಅಲ್ಲಿಂದ ಅನತಿದೂರದಲ್ಲಿ ಎತ್ತರದ ಚೈತ್ಯಪ್ರಾಸಾದವಿತ್ತು. ಸಾವಿರ ಕಂಬಗಳು, ಕೈಲಾಸಪರ್ವತದಂತೆ ಧವಲ, ಅದಕ್ಕೆ ಹವಳದ ಮೆಟ್ಟಿಲು, ಅಪರಂಜಿ ಚಿನ್ನದ ವೇದಿಕೆ, ದೃಷ್ಟಿಗೆ ನಿಲುಕದಷ್ಟು ಎತ್ತರ, ಕಣ್ಣುಗಳನ್ನು ಸೆಳೆದೊಯ್ಯುವಂಥ ಶೋಭೆ. ಆ ಚೈತ್ಯಪ್ರಾಸಾದವನ್ನು ಹನುಮಂತ ಕಂಡ.

ಶಿಂಶಿಪಾ ವೃಕ್ಷಕ್ಕೆ ಅನತಿದೂರದಲ್ಲಿ ಒಬ್ಬಳು ಸ್ತ್ರೀ ಕುಳಿತಿದ್ದಾಳೆ. ಮಲಿನವಾದ ಬಟ್ಟೆಯನ್ನು ಉಟ್ಟುಕೊಂಡಿದಾಳೆ. ಸರಿಯಾಗಿ ಆಹಾರವಿಲ್ಲದೇ ಯಾವುದೋ ಕಾಲವಾಗಿದೆ. ಉಪವಾಸದಿಂದ ಕೃಶವಾದ ಶರೀರ. ನಿಟ್ಟುಸಿರು ಮತ್ತು ದೈನ್ಯ. ಅಮವಾಸ್ಯೆಯ ಮರುದಿನ ಪಾಡ್ಯದಲ್ಲಿ ಚಂದ್ರರೇಖೆಯು ಕಂಡೂ ಕಾಣದಂತೆ ಇದ್ದಾಳೆ. ಘೋರಾಕಾರದ ರಾಕ್ಷಸಿಯರು ಆಕೆಯನ್ನು ಸುತ್ತುವರೆದೆದ್ದರು. ಹಾಗಾಗಿ ಶುಕ್ಲಪಕ್ಷದ ಆರಂಭದ ಚಂದ್ರರೇಖೆಯಂತೆ ಕೃಶವಾದ ಶರೀರ. ಅಮಲಾ. ಅಮಲಾ ಎಂದರೆ ಮಲಿನವಿಲ್ಲದವಳು. ಆಕೆಯ ರೂಪ ಮಾಸಿಹೋಗಿದೆ. ಆದರೆ ದೃಷ್ಟಿಯಿಟ್ಟು ನೋಡಿದರೆ ದಿವ್ಯರೂಪ ಅಂತ ಗೊತ್ತಾಗುವಂತೆ ಇದೆ. ಅದೊಂದು ಅದ್ಭುತ ರೂಪವೇ ಎನ್ನುವುದು ನಿಧಾನಕ್ಕೆ ಗೊತ್ತಾಗ್ತದೆ. ಹೊಗೆಯ ಮಧ್ಯದಲ್ಲಿ ಅಗ್ನಿಜ್ವಾಲೆ ಕಾಣಿಸುವಂತೆ, ಕಮಲದ ಕೊಳವೇ ಹೌದು ಆದರೆ ಕಮಲಗಳಿಲ್ಲ, ಕೆಸರು ಮಾತ್ರ. ಉತ್ತರೀಯವಿಲ್ಲ, ಏಕವಸ್ತ್ರವನ್ನು ಧಾರಣೆ ಮಾಡಿಕೊಂಡಿದಾಳೆ, ಆ ಬಟ್ಟೆ ಒಂದು ಕಾಲದಲ್ಲಿ ಪೀತಾಂಬರವೇ ಹೌದು ಆದರೆ ಈಗ ಪೂರ್ತಿಯಾಗಿ ಮಾಸಿಹೋಗಿದೆ. ಆಕೆಗೆ ದೊಡ್ಡ ಅವಮಾನವಾದಂತೆ ತಲೆಯೆತ್ತದ ಸ್ಥಿತಿಯಿದೆ. ದುಃಖ ತುಂಬಿದೆ. ಅತಿಶಯವಾಗಿ ಬಾಡಿದೆ. ತಪಸ್ವಿನಿ ನೋಡಿದರೆ ಅಂಗಾರಕನಿಂದ ಪೀಡಿತನಾದ ರೋಹಿಣಿಯಂತೆ, ಕಣ್ತುಂಬ ಕಣ್ಣೀರು, ದೈನ್ಯ, ಉಪವಾಸದಿಂದ ಕೃಶ. ಈ ದೀನ ಎನ್ನುವುದನ್ನ ಪದೇ ಪದೇ ಹೇಳ್ತಾರೆ ವಾಲ್ಮೀಕಿಗಳು. ದುಃಖಕ್ಕೆ ಅಂತ್ಯವೇ ಇಲ್ಲವೇನೋ ಎಂಬಂತೆ. ಯಾರಾದ್ರೂ ಒಳ್ಳೆಯವರು, ಯಾರಾದ್ರೂ ಬೇಕಾದವರು, ಯಾರಾದ್ರೂ ಸಜ್ಜನರು, ನನ್ನವರು ಕಾಣ್ತಾರಾ ಎನ್ನುವಂತೆ ಸುತ್ತ ನೋಡ್ತಾಳೆ ಅವಳು. ಅವಳಿಗೆ ಪ್ರಿಯರಾದ ಯಾರೂ ಕೂಡ ಅಲ್ಲಿಲ್ಲ. ಯಾರನ್ನ ನೋಡೋದಿಕ್ಕೆ ಸರ್ವಥಾ ಇಷ್ಟವಾಗೋದಿಲ್ವೋ, ನೋಡೋಕ್ಕೆ ಹೇಸಿಗೆಯಾಗ್ತದೋ, ಜುಗುಪ್ಸೆ, ತಿರಸ್ಕಾರ ಹುಟ್ಟಬಹುದೋ ಅವರನ್ನ ನೋಡ್ತಾ ಇದಾಳೆ.

ಒಂದು ಅದ್ಭುತವಾದ ಉದಾಹರಣೆಯನ್ನ ಕೊಟ್ಟಿದಾರೆ ವಾಲ್ಮೀಕಿಗಳು ಇಲ್ಲಿ. ಜಿಂಕೆಯು ಸ್ವಗಣದಿಂದ ಹೀನವಾಗಿದೆ. ಶ್ವಗಣದಿಂದ ಆವೃತವಾಗಿದೆ. ಸ್ವಗಣ ಅಂದ್ರೆ ತನ್ನ ಗುಂಪು. ಶ್ವಗಣ ಅಂದ್ರೆ ನಾಯಿಗಳ ಗುಂಪು. ಗುಂಪಿನಿಂದ ತಪ್ಪಿಸಿಕೊಂಡ ಜಿಂಕೆಯನ್ನು ನಾಯಿಗಳು ಸುತ್ತುವರೆದಿದಾವೆ. ಸೀತೆಗೆ ಸರಿಯಾಗಿ ಸಲ್ತದೆ ಈಗಿನ ಪರಿಸ್ಥಿತಿಗೆ. ಸುತ್ತ ಇರಬೇಕಾದವರು ಯಾರೂ ಇಲ್ಲ. ಯಾರಿದಾರೆ ಅಂದ್ರೆ ಹುರಿದು ಮುಕ್ಕುವವರು, ತಿನ್ನಲು ಕಾಯುವವರು, ಕೊಲ್ಲಲು ಕಾಯುವವರು. ಆಕೆಯ ಜಡೆ ಹೇಗಿದೆ ಅಂದ್ರೆ ನೀಳವಾದ ಕೃಷ್ಣಸರ್ಪದಂತೆ. ನೋಡಿದರೆ ಮಳೆಗಾಲ ಕಳೆದ ಮೇಲೆ ಹಸಿರಾದ ಕಾಡಿನಿಂದ ಕೂಡಿರತಕ್ಕಂಥ ಭೂದೇವಿಯಂತೆ ಆಕೆ ಶೋಭಿಸ್ತಾ ಇದ್ದಾಳೆ. ಆಕೆ ಭೂದೇವಿಯಂತೆ, ಜಡೆ ವನರಾಜ್ಞಿಯಂತೆ. ದಟ್ಟವಾದ ಕಾಡು ಕಪ್ಪಾಗಿ ಕಾಣ್ತದೆ. ಹನುಮನಿಗೆ ಒಂದು ಅನ್ನಿಸ್ತು. ಇವಳು ಸುಖಕ್ಕೆ ಅರ್ಹಳು. ಆದರೀಗ ದುಃಖಸಂತಪ್ತಳಾಗಿದಾಳೆ. ಕಷ್ಟ ಗೊತ್ತಿಲ್ಲ. ಆದರೆ, ಬಂದುಬಿಟ್ಟಿದೆ. ಆಕೆಯನ್ನು ಮತ್ತೆ ಮತ್ತೆ ಅವಲೋಕಿಸಿದನು ಹನುಮಂತ. ತುಂಬ ಕೃಶವಾಗಿ ತುಂಬಾ ಮಲಿನವಾಗಿದೆ ಮೈಯೆಲ್ಲ. ಈಕೆ ಸೀತೆಯಿರಬಹುದು ಅಂತ ಊಹೆ ಮಾಡ್ತಾನೆ ಹನುಮಂತ. ಗಡಿಬಿಡಿ ಮಾಡೋದಿಲ್ಲ. ಯುಕ್ತಿಗಳಿಂದ ಈಕೆ ಸೀತೆಯೇ ಇರಬಹುದು ಅಂತ ಚಿಂತನೆ ಮಾಡ್ತಾನೆ. ತರ್ಕದಲ್ಲಿ ಮೊಟ್ಟಮೊದಲನೆಯದು ಅಂದು ಋಷ್ಯಮೂಕ ಪರ್ವತದ ಶಿಖರದ ಮೇಲೆ ನಾನು ಮತ್ತು ಸುಗ್ರೀವನೆ ಮೊದಲಾದ ನಾಲ್ವರು ಕಪಿವೀರರು ನೋಡಿದಾಗ ರಾಕ್ಷನನೊಬ್ಬ ಸೆಳೆದೊಯ್ದಿರುವಂಥದ್ದು. ಅಂದು ಕಂಡ ಆಕೆಯ ರೂಪ ಅದೇ ಇದಲ್ಲವೇ? ಹಾಗಾಗಿ ಸೀತೆಯೆನ್ನಲಿಕ್ಕೆ ಹನುಮಂತನಿಗೆ ಮೊದಲ ಆಧಾರ ನೆನಪು.

ಹೇಗಿದ್ದಾಳೆ ಆಕೆ ಅಂದ್ರೆ, ಪೂರ್ಣಚಂದ್ರನ ಮುಖ. ಮನೋಹರವಾಗಿರತಕ್ಕಂತ ಹುಬ್ಬುಗಳು, ಮನೋಜ್ಞವಾಗಿರತಕ್ಕಂತ ಮೈಕಟ್ಟು. ಆಕೆಯ ವಸ್ತ್ರ ಮಲಿನವಾಗಿದ್ರು ತನ್ನ ಮೈಯಿಂದ ದಿವ್ಯ ಕಾಂತಿಯನ್ನು ಹೊರಸೂಸ್ತಾ ಇದ್ದಳಂತೆ. ಎಷ್ಟರಮಟ್ಟಿಗೆ ಅಂದ್ರೆ ತನ್ನ ಮೈಯಿಂದ ಹೊರಹೊಮ್ಮುವ ಕಾಂತಿಯಿಂದ ದಿಕ್ಕುದಿಕ್ಕುಗಳ ಕತ್ತಲೆಯನ್ನು ದೂರಮಾಡಿ ಬೆಳಗ್ತಾ ಇದ್ದಳು. ಕಪ್ಪಾದ ಕೇಶರಾಶಿ, ಬಿಂಬಫಲದಂತಹ ಅದರ, ಸಪೂರವಾದ ನಡು, ಮನೋಜ್ಞವಾಗಿರತಕ್ಕಂಥ ಮೈಕಟ್ಟು, ಕಮಲದಳದಂತಹ ನಯನಗಳು, ಮನ್ಮಥನ ರತಿಯಂತೆ ರಾಮನ ಸೀತೆ. ಚಕ್ರವರ್ತಿ ಸಿಂಹಾಸನದಲ್ಲಿ ರಾಣಿಯಾಗಿ ರಾರಾಜಿಸಬೇಕಾದವಳು ನೆಲದ ಮೇಲೆ ಕುಳಿತಿದ್ದಾಳೆ. ತುಂಬ ಕೃಶವಾಗಿದಾಳೆ. ತಪಸ್ವಿನಿಯಂತೆ ಕಾಣ್ತಿದಾಳೆ. ನಿಟ್ಟುಸಿರು ಬಿಡ್ತಾ ಇದಾಳೆ. ಭಯಗೊಂಡಿದಾಳೆ. ಶೋಕಜಾಲ ಆವರಿಸಿದೆ. ಆಕೆಯನ್ನ ನೋಡಿ ಅನೇಕ ಭಾವಗಳು ಹನುಮಂತನಿಗೆ ಬಂದವು. ಸಂದಿಗ್ಧವಾದ ಸ್ಮೃತಿಯಂತೆ. ಮಾಸಿಹೋದ ನೆನಪಿನಂತೆ ಕಂಡಳು. ಪತನವನ್ನು ಕಂಡ ಸಮೃದ್ಧಿಯಂತೆ ಕಂಡಳು. ಕಮರಿದ ಆಸೆಯಂತೆ ಕಂಡಳು. ವಿಘ್ನಿತವಾದ ತಪಃಸಿದ್ಧಿಯಂತೆ, ಮಂಕುಹಿಡಿದ ಬುದ್ಧಿಯಂತೆ ಆಕೆ ಕಂಡುಬಂದಳು. ಮಿಥ್ಯಾಪವಾದದಿಂದ ಕಲಂಕಿತವಾದ ಕೀರ್ತಿಯಂತೆ, ಒಂದು ಕಡೆ ಇಷ್ಟವಾದವರು ಜೊತೆಯಿಲ್ಲದ ದುಃಖ, ಇನ್ನೊಂದು ಕಡೆ ಅನಿಷ್ಟವಾದ ಭೂತ ಪಕ್ಕದಲ್ಲಿರುವ ಕಷ್ಟ. ಅವಳಿಗೆ ರಾಮ ಬೇಕು ಆದರೆ ಅವನು ಜೊತೆಯಲ್ಲಿಲ್ಲ. ರಾವಣ ಬೇಡ ಆದರೆ ಅವನು ಅಲ್ಲೇ ಪಕ್ಕದಲ್ಲಿದ್ದಾನೆ. ಇಷ್ಟ ದೂರವಾಗಿದೆ. ಅನಿಷ್ಟವು ಬಂದು ಕವಿದಿದೆ. ಅಬಲೆ. ಜಿಂಕೆಯ ಕಣ್ಣವಳು, ಆಗಾಗ ಸುತ್ತ ನೋಡ್ತಿದಾಳೆ. ಹನುಮಂತ ನೋಡ್ತಾನೆ. ಚೆಂದದ ಕಣ್ಣು, ಆ ಕಣ್ಣಿನ ರೆಪ್ಪೆಯ ಕೂದಲು ಸರಿಯಾಗಿ ಬಾಗು ಬಳುಕಿದೆ, ಕಪ್ಪಾದ ಕಣ್ಣಿನಿಂದ ನೀರು ಸುರೀತಾ ಇದೆ. ಕಣ್ಣಿನ ತುಂಬ ನೀರು ತುಂಬಿದೆ. ಮುಖ ಬಾಡಿದೆ. ಮೈ ಕೆಸರಾಗಿದೆ. ಆಕೆಯ ರೂಪ ಎಂಥದ್ದು ಅಂದ್ರೆ ಉತ್ತಮೋತ್ತಮವಾದ ವಸ್ತ್ರಗಳನ್ನ ತೊಡಬೇಕು, ಉತ್ತಮೋತ್ತಮವಾದ ಆಭರಣಗಳನ್ನ ಹಾಕಿಕೊಳ್ಳಬೇಕು. ಆಭರಣಗಳು ಅಸ್ತವ್ಯಸ್ತವಾಗಿದೆ. ಹೇಗಿದೆ ಅಂದ್ರೆ ನಕ್ಷತ್ರಗಳ ಪ್ರಭೆಯನ್ನು ಕಾರ್ಮೋಡ ಮುಸುಕಿದೆ.

ಹನುಮಂತನಿಗೆ ಮತ್ತೆಮತ್ತೆ ಸೀತೆ ಹೌದೋ ಅಲ್ಲವೋ ಎಂಬ ಸಂಶಯವಾಯ್ತಂತೆ. ಯಾಕೆ ಅಂದ್ರೆ ಗುರುತಿಸುವುದು ಕಷ್ಟವಾಗುವಷ್ಟು ಮಾಸಿಹೋಗಿದಾಳೆ. ವೇದದ ಸಂಸರ್ಗವಿಲ್ಲದಿದ್ದರೆ ವಿದ್ಯೆ ಶಿಥಿಲವಾಗ್ತದೆ. ಹಾಗೇ ರಾಮನ ಸಂಸರ್ಗವಿಲ್ಲದ ಸೀತೆ ಶಿಥಿಲವಾಗಿದಾಳೆ. ಕಷ್ಟಪಟ್ಟು ಗುರುತಿಸಿದ ಹನುಮಂತ. ಅನಲಂಕೃತೆ. ಯುಕ್ತಿಯಿಂದ ತೀರ್ಮಾನ ಮಾಡ್ತಾನೆ ಹನುಮಂತ. ಏನಪ್ಪ ಕಾರಣಗಳು ಅಂದ್ರೆ, ರಾಮನು ಹೇಳಿದ ಸೀತೆಯ ದೇಹದ ಯಾವ ಯಾವ ಭಾಗಗಳಲ್ಲಿ ಯಾವ ಯಾವ ಅಭರಣವಿದೆ? ಹೇಗಿವೆ ಆಭರಣಗಳು? ರಾಮ ನಿರೂಪಿಸಿದ ಆಭರಣಗಳು ಅವು ಹಾಗೆಯೇ ಇವೆ. ಉದಾಹರಣೆಗೆ ಕಿವಿಗೆ ಹಾಕಿದ ಕರ್ಣಾಭರಣಗಳು. ನಾಯಿಯ ಹಲ್ಲಿನ ಆಕಾರದಲ್ಲಿರುವ ಕರ್ಣಾಭರಣಗಳು ಅಂತ ರಾಮ ಹೇಳಿದ್ದ, ಅದನ್ನು ಗಮನಿಸಿದ ಹನುಮಂತ. ಕೈಗೆ ಹಾಕಿದ ಆಭರಣಗಳು. ಅವುಗಳಲ್ಲಿ ಹವಳದ ಅಲಂಕಾರ ಇದೆ. ರಾಮ ಹೇಗೆ ಹೇಳಿದ್ದನೋ ಹಾಗೇ ಇದೆ ಆ ಆಭರಣಗಳು. ಬಹಳ ಕಾಲ ಹಾಗೆಯೇ ಧಾರಣೆ ಮಾಡಿದ್ದರಿಂದ ಕಪ್ಪಾಗಿದೆ. ಆದರೆ ಆಕೃತಿ ವ್ಯತ್ಯಾಸವಾಗಿಲ್ಲ. ಹಾಗೆಯೇ ಇದೆ. ಹನುಮಂತ ಇವಳೇ ಸೀತೆ ಎಂಬ ದೃಢನಿಶ್ಚಯಕ್ಕೆ ಬರಲು ಕಾರಣ ಇನ್ನೊಂದು ಕುರುಹಿದೆ. ಋಷ್ಯಮೂಕದಲ್ಲಿ ಸೀತೆ ಬಟ್ಟೆಯಲ್ಲಿ ಸುತ್ತಿ ಎಸೆದ ಆಭರಣಗಳು ಹನುಮಂತನ ಕೈಯ್ಯಲ್ಲೇ ಇದೆ. ಅದ್ಯಾವುದನ್ನೂ ಆಕೆ ತೊಟ್ಟಿಲ್ಲ. ತನಗೆ ಸಿಕ್ಕಿದ ಆಭರಣಗಳ್ಯಾವುವೂ ಇಲ್ಲಿಲ್ಲ ಅಂದ್ರೆ ಆಕೆ ಎಸೆದ ಅಭರಣಗಳು ಅವೇ ಅಲ್ಲವೇ. ಹಾಗಾಗಿ ಇರುವ ಆಭರಣಗಳು ರಾಮ ನಿರೂಪಿಸಿರುವ ಆಭರಣಗಳಂತೆಯೇ ಇದೆ. ಇಲ್ಲದ ಆಭರಣಗಳು ನನ್ನ ಬಳಿಯಲ್ಲಿಯೇ ಇದೆ.

ಹಾಗೆಯೇ ಭಾವ ಮತ್ತು ಅಭಾವಗಳಲ್ಲಿ ತೀರ್ಮಾನ ಮಾಡ್ತಾನೆ ಸೀತೆ ಹೌದು ಅಂತ. ಭಾವ ಅಂದ್ರೆ ಇರುವ ಆಭರಣಗಳು ರಾಮ ಹೇಳಿದ್ದಕ್ಕೆ ಹೊಂದ್ತಾ ಇವೆ. ಇಲ್ಲದ ಆಭರಣಗಳು ತನ್ನ ಬಳಿ ಇದೆ. ಸೀತೆಯ ಉತ್ತರೀಯ ಕಪಿಗಳ ಬಳಿ ಇತ್ತು. ಪರ್ವತದ ಬಳಿ ಬಿದ್ದಿತ್ತು ಪೀತ ವರ್ಣದ್ದು. ಸೀತೆ ಉಟ್ಟ ಬಟ್ಟೆಗೂ ಉತ್ತರೀಯಕ್ಕೂ ಪೂರ್ತಿ ಹೊಂದಾಣಿಕೆ ಇದೆ. ಆದರೆ ಉಟ್ಟ ಬಟ್ಟೆ ಮಾಸಿದೆ. ಉತ್ತರೀಯ ಹಾಗೇ ಇದೆ. ಹಾಗಾಗಿ ತೀರ್ಮಾನ ಮಾಡಿದ ಹನುಮಂತ. ಇದೇ ಬಟ್ಟೆಯ ಉತ್ತರೀಯವೇ ತನ್ನ ಬಳಿ ಇರುವಂಥದ್ದು. ಇಲ್ಲಿ ಇರುವ ಆಭರಣಗಳ ಜೋಡಿ ಆಭರಣಗಳು ನನ್ನ ಕೈಯಲ್ಲಿವೆ. ಅದು ಇದು ಎರಡನ್ನೂ ತುಲನೆ ಮಾಡಿದಾಗ ಇವಳು ಸೀತೆಯೇ ಹನುಮಂತನಿಗೆ ಸ್ಪಷ್ಟ ನಿಶ್ಚಯ ಸಿಕ್ಕಿತು. ಆಕೆ ಅಂದು ಎಸೆದ ಆಭರಣಗಳೇ ಇಂದು ಸೀತೆಯೇ ಹೌದು ಎಂದು ನಿಶ್ಚಯಿಸಲು ಸಾಧನಗಳು.

ಆಗ ಹನುಮಂತ ತೀರ್ಮಾನ ಮಾಡ್ತಾನೆ. ಈ ಕನಕವರ್ಣಾಂಗಿ, ರಾಮನ ಪ್ರಿಯ ಮಹಿಷಿ, ಹೊರಗಿನಿಂದ ಮರೆಯಾದರೂ ರಾಮನ ಮನಸ್ಸಿನಿಂದ ದೂರವಾಗದವಳು, ರಾಮನ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿರುವವಳು ಇವಳೇ. ಇವಳಿಗಾಗಿ ತಾನೇ ರಾಮ ಪರಿತಪಿಸ್ತಾ ಇರುವಂಥದ್ದು.

ನಾಲ್ಕು ಕಾರಣಗಳು ರಾಮ ಪರಿತಪಿಸ್ತಾ ಇರೋದಕ್ಕೆ. ಕಾರುಣ್ಯ – ಒಬ್ಬಳು ಸ್ತ್ರೀ ಕಾಣೆಯಾಗಿದಾಳೆ. ಕ್ರೂರಿಯ ಕೈ ಸೇರಿದಾಳೆ ಅಂದ್ರೆ ಕರುಣೆ ತಾನೆ ಬರುವಂಥದ್ದು. ಎರಡನೆಯದು ಅವಳು ಕೇವಲ ಸ್ತ್ರೀಯಲ್ಲ ರಾಮನ ಆಶ್ರಿತೆ ಅವಳು. ನಮ್ಮನ್ನ ಯಾರು ಆಶ್ರಯಿಸಿದಾರೋ ಅವರಿಗೆ ಯಾವ ಕೆಡುಕೂ ಆಗಬಾರದು. ಮೂರನೆಯದು ತನ್ನ ಪತ್ನಿ ಅವಳು. ಹಾಗಾಗಿ ಶೋಕ. ಮತ್ತು ಪ್ರಿಯೆ ಆಕೆ. ಪ್ರೇಮ ಭಾವ. ಶಾಶ್ವತ ಸತ್ಯವೊಂದನ್ನು ಆಂಜನೇಯ ಹೇಳ್ತಾನೆ. ಸೀತೆಯ ಮನಸ್ಸು ರಾಮನಲ್ಲಿ ನೆಲೆಗೊಂಡಿದೆ. ರಾಮನ ಮನಸ್ಸು ಸೀತೆಯಲ್ಲಿ ನೆಲೆಗೊಂಡಿದೆ. ಇಂದು ರಾಮ ಬದುಕಿದ್ದರೆ ಅದಕ್ಕೆ ಕಾರಣ ಸೀತೆ ಬದುಕಿದ್ದಾಳೋ ಎನ್ನುವ ಭಾವ. ಮರಳಿ ಸಿಕ್ಕಿಯಾಳು ಎನ್ನುವ ಆಶೆ. ಸೀತೆ ಬದುಕಿದ್ದರೆ ಎಂದಾದರೂ ರಾಮ ತನ್ನನ್ನು ಹುಡುಕಿಕೊಂಡು ಇಲ್ಲಿಗೆ ಬಂದಾನು, ಮರಳಿ ರಾಮನ ದರ್ಶನ, ರಾಮನ ಸಂಗ ಸಿಕ್ಕೀತು ಎಂದು. ಹಾಗಾಗಿ ಇವರಿಬ್ಬರು ಬದುಕಿದ್ದರೆ, ರಾಮ ಬದುಕಿದ್ದರೆ ಸೀತೆ ಕಾರಣ, ಸೀತೆ ಬದುಕಿದ್ದರೆ ರಾಮ ಕಾರಣ. ಹೇಗೆ ಬದುಕಿದನೋ ರಾಮ ಸೀತೆ ಇಲ್ಲದೇ ಎಂದು ಅನ್ನಿಸಿಬಿಡ್ತಂತೆ ಹನುಮಂತನಿಗೆ. ಆಕೆಯನ್ನು ಕಂಡಮೇಲೆ ರಾಮ ಶರೀರ ಬಿಟ್ಟಿಲ್ವಲ ಅದೇ ದೊಡ್ಡದು. ಇಂತಹ ಒಂದು ರತ್ನದಲ್ಲಿ ರತ್ನ, ಇಂತಹ ಒಂದು ಆನಂದಮೂರ್ತಿ, ಪ್ರೇಮಮೂರ್ತಿ, ಇಂತಹವಳನ್ನು ಕಳೆದುಕೊಂಡ ಮೇಲೆ ರಾಮ ಬದುಕಿದ್ದೇ ದೊಡ್ಡದು.

ಹೀಗೆಲ್ಲಾ ಹೇಳಿಕೊಂಡು, ಸೀತೆಯನ್ನು ಕಂಡು ಹೃಷ್ಟನಾದ ಪವನಸುತನು ಕಣ್ಮುಚ್ಚಿ ಅಂತರಂಗದಿಂದಲೇ ರಾಮನ ಬಳಿಸಾರಿದನು. ಮಂದೋದರಿಯನ್ನು ಕಂಡಾಗ ಹಾಗಾಗಬೇಕು, ಸೀತೆಯನ್ನು ಕಂಡಾಗ ಹೀಗಾಗಬೇಕು. ರಾವಣಪತ್ನಿಗೂ ರಾಮಪತ್ನಿಗೂ ಇರುವ ಅಂತರವಿದು. ಸೀತೆಯಂತ ಸೀತೆಯ ದಿವ್ಯ ರೂಪವನ್ನು ಕಂಡಾಗ ಏನಾಗಬೇಕು ಈ ಸಾತ್ವಿಕಮನಸ್ಸಿಗೆ, ಸಂಸ್ಕಾರವಂತ ಮನಸ್ಸಿಗೆ ಅಂದರೆ, ಹೋಗಿ ರಾಮನನ್ನು ಸೇರಿದನು. ಮನದಿಂದಲೇ ರಾಮನನ್ನು ಕಂಡು, ರಾಮನನ್ನು ಸ್ತುತಿಸಿದನು, ರಾಮ ಸ್ತೋತ್ರವನು ಹೇಳಿದನು. ಯಾಕೆ ಹಾಗೆ? ಸೀತೆಯನ್ನು ಕಂಡಾಗ ರಾಮನ ಬಳಿ ಯಾಕೆ ಹೋಗಬೇಕು ಹನುಮಂತ ಅಂದರೆ ಸೀತೆಯೆಂದರೆ ರಾಮ, ರಾಮನೆಂದರೆ ಸೀತೆ. ಸೀತೆಯೆಂದರೆ ರಾಮನ ಶಕ್ತಿ. ರಾಮನು ಸೂರ್ಯನಾದರೆ, ಸೀತೆ ಸೂರ್ಯನ ಪ್ರಭೆ… ಹಾಗಾಗಿ ಸೀತೆಯನ್ನು ಕಂಡ ಹನುಮಂತ ರಾಮನ ಸ್ಮರಣೆಯನ್ನು ಮಾಡಿದನು. ಮತ್ತೆ ಸೀತೆಯನ್ನು ಸ್ತುತಿಸಿದನು. ದಿವ್ಯರೂಪ, ಹಿರಿಮೆ ಗರಿಮೆಗಳನ್ನು, ಆಕೆಯ ಕಲ್ಯಾಣರೂಪವನ್ನು ಸ್ಮರಿಸಿ, ಮತ್ತೆ ಗುಣಾದಿ ರಾಮನನ್ನು ಸ್ತುತಿಸಿದನು.

ಇದ್ದಕ್ಕಿದ್ದಂತೆ ಹನುಮನನ್ನು ದುಃಖ ಆವರಿಸಿತಂತೆ. ವೇದನೆಯಾಯಿತು. ಮೂಹೂರ್ತಕಾಲ ವೇದನೆಯಲ್ಲಿದ್ದನು ಹನುಮಂತ. ಹನುಮನ ಕಣ್ಣಿಂದ ಧಾರಾಕಾರವಾಗಿ ಕಣ್ಣೀರು ಸುರಿಯಿತಂತೆ, ಸೀತೆಗಾಗಿ. ಸೀತೆಗಾಗಿ ಮರುಗಿದನು ಹನುಮಂತ. ಸೀತೆಗೂ ಕಷ್ಟ ಬಂತೇ? ಯಾರಿಗಿಂತ ಮೇಲೆ ಯಾವ ಸ್ತ್ರೀಯೂ ಇಲ್ಲವೋ, ಈ ಲೋಕಕ್ಕೊಂದೇ, ಅಂತಹ ಒಂದು ಅನರ್ಘ್ಯ ರತ್ನ, ದೋಷವೇ ಇಲ್ಲದವಳು, ತಪ್ಪನ್ನೇ ಮಾಡದವಳು, ನಿಷ್ಪಾಪಳು, ನಿರ್ದೋಷಳು, ಎಲ್ಲರ ಒಳಿತನ್ನು ಬಯಸುವವಳು, ಲೋಕನಾಥನ ಮಡದಿ, ಜನಕನ ಮಗಳು, ದಶರಥನ ಸೊಸೆ, ರಾಮನ ಮಡದಿ, ಲಕ್ಷ್ಮಣನಿಗೆ ಮಾತೃದೇವತೆ. ಗುರುವಿನೀತನಾದ ಲಕ್ಷ್ಮಣನ ಗುರುಸತಿ ಸೀತೆ, ಇವಳಿಗೂ ಕಷ್ಟಬಂತೆಂದರೆ, ಕಾಲಕ್ಕಿಂತ ದೊಡ್ಡದು ಬೇರಾವುದೂ ಇಲ್ಲ. ಗಮನವಿಟ್ಟು ಸೀತೆಯನ್ನು ನೋಡ್ತಾನೆ, ಅಬ್ಬಾ.. ಹೇಗೋ ಸಹಿಸಿಕೊಂಡಿದಾಳೆ ಅವಳು. ಇನ್ನೂ ಇದ್ದಾಳೆ. ಪ್ರಾಣಕಳಕೊಂಡಿಲ್ಲ. ಆಕೆಯನ್ನು ಕಂಡಾಗ ಹನುಮನಿಗೆ ಗಂಗಾನದಿಯ ನೆನಪಾಯಿತಂತೆ. ಇಂಥಾ ದೊಡ್ಡ ಕಷ್ಟ ಬಂದಾಗಲೂ ಕೂಡ ಪ್ರಾಣಕ್ಕೆರವಾಗಲಿಲ್ಲ. ಏನೋ ಹುಚ್ಚು ಹುಚ್ಚಾಗಿ ಮಾಡಬಾರದ್ದನ್ನು ಮಾಡಲಿಲ್ಲ ಈಕೆ. ಯಾಕೆ ಮಾಡಲಿಲ್ಲ ಅಂದರೆ ಅವಳಿಗೆ ರಾಮನೇನು ಅಂತ ಗೊತ್ತು, ಲಕ್ಷ್ಮಣ ಏನೂ ಅಂತ ಗೊತ್ತು. ಹೇಗಾದರೂ ರಾಮ ಬಂದಾನು ಲಂಕೆಗೆ. ಏನಾದರೂ ಮಾಡಿಯಾನು. ಯಾವುದಾದರೂ ರೀತಿಯಿಂದ ರಾವಣನ ಎದೆಯಲ್ಲಿ ರಾಮಬಾಣವನು ನೆಟ್ಟು, ಮರಳಿ ತನ್ನನ್ನು ಪಡೆದುಕೊಂಡಾನು. ಹಾಗಾಗಿ, ರಾಮನೇನು ಮಾಡಬಲ್ಲ, ಲಕ್ಷ್ಮಣನೇನು.. ಅಣ್ಣನಿಗಾಗಿ, ಅತ್ತಿಗೆಗಾಗಿ ಏನು ಮಾಡಬಲ್ಲ ಎಂಬುದು ಗೊತ್ತಿರುವುದಕ್ಕಾಗಿ ಇಷ್ಟಾದರೂ ಇದ್ದಾಳೆ ಸೀತೆ.

ಹನುಮ ತನ್ನಂತಃಕರಣದಲ್ಲಿ ರಾಮನಿಗೂ ಸೀತೆಗೂ ಮದುವೆ ಮಾಡ್ತಾನೆ. ಸೀತೆಯ ಶೀಲ ಹೇಗಿದೆಯೋ, ರಾಮನ ಶೀಲವೂ ಹಾಗೇ ಇದೆ. ರಾಮನ ಶೀಲವು ಹೇಗಿದೆಯೋ, ಸೀತೆಯದ್ದೂ ಹಾಗೇ ಇದೆ. ಶೀಲವೆಂದರೆ ಸ್ವಭಾವ, ಅವರ ಸಹಜತೆ. ಶೀಲವಿರಲಿ, ವಯಸ್ಸಿರಲಿ, ವೃತ್ತವಿರಲಿ, ವಂಶವಿರಲಿ, ಸೀತೆಗೆ ರಾಮ ತಕ್ಕವನು, ರಾಮನಿಗೆ ಸೀತೆ ತಕ್ಕವಳು. ರಾಮ ಸೂರ್ಯವಂಶದವನು, ಸೀತೆ ಜನಕವಂಶದವಳು, ಚಂದ್ರವಂಶದವಳು. ಸೀತೆ ಭೂಮಿಯಿಂದ ಎದ್ದು ಬಂದವಳು, ರಾಮ ಗಗನದಿಂದ ಇಳಿದು ಬಂದವನು. ಹೇಗೆ ನೋಡಿದರೂ ಸೀತೆಗೆ ರಾಮ, ರಾಮನಿಗೆ ಸೀತೆ ಸರಿ. ಮತ್ತೆ ನೋಡಿದನು, ಬಂಗಾರದ ಕಾಂತಿಯಿತ್ತು ಸೀತೆಯಲ್ಲಿ. ಲಕ್ಷ್ಮೀ ಇರಬಹುದಾ ಇವಳು…? ಲೋಕವೆಲ್ಲವೂ ಆರಾಧಿಸುವ ಲಕ್ಷ್ಮೀದೇವಿಯಂತೆ ಸೀತೆ ಹನುಮನಿಗೆ ಕಂಡಳು. ಮನದಲ್ಲೇ ಹೇಳಿಕೊಂಡನಂತೆ ಹನುಮ, ಎಷ್ಟೆಲ್ಲ, ಏನೆಲ್ಲ ಈ ಸೀತೆಗಾಗಿ..? ವಾಲಿಯ ವಧೆಯಾಯಿತು. ಮತ್ತೊಮ್ಮೆ ಮನಸ್ಸಿನಲ್ಲೇ ನೇರ ರಾಮನ ಬಳಿ ಹೋಗಿ, ರಾಮನ ಪಾದದಲ್ಲಿ ಕುಳಿತು, ಅವನ ಮುಖ ನೋಡ್ತಾ ಈ ಮಾತನ್ನಾಡಿದನು. ಪ್ರಭೂ, ಮಹಾಬಲನಾದ ವಾಲಿಯ ವಧೆ ಈಕೆಗಾಗಿ. ಇನ್ನೊಂದು ರಾವಣನೇ ಆದ ಕಬಂಧ, ಭೀಮವಿಕ್ರಮನಾದ ವಿರಾಧನನ್ನು, ಶಂಭರನನ್ನು ಇಂದ್ರ ಕೊಂದಂತೆ ಸಂಹರಿಸಿದೆ, ಸೀತೆಗಾಗಿ. ಹದಿನಾಲ್ಕು ಸಾವಿರ ರಾಕ್ಷಸರು ಜನಸ್ತಾನದಲ್ಲಿ. ಒಂದೂವರೆ ಮುಹೂರ್ತದಲ್ಲಿ ಅವರೆಲ್ಲರನು ಕೊಂದು ಹಣೆಯ ಮೇಲಿನ ಬೆವರೊರೆಸಿಕೊಂಡೆ, ಈ ಸ್ತ್ರೀರತ್ನಕ್ಕಾಗೀ, ಸೀತೆಗಾಗಿ…. ಖರನನ್ನು ಗೆದ್ದೆ, ದೂಷಣನನ್ನು ಗೆದ್ದೆ, ತ್ರಿಶಿರನನ್ನು ಸಂಹರಿಸಿದೆ, ಸೀತೆಗಾಗಿ. ಸುಗ್ರೀವನಿಗೆ ಇಂದು ವಾನರಸಾಮ್ರಾಜ್ಯ ಸಿಕ್ಕಿದ್ದರೆ, ದುರ್ಲಭವಾದ ವಾನರಾಧಿಪತ್ಯ ಸುಗ್ರೀವನಿಗಿಂದು ಸಿಕ್ಕಿದ್ದರೆ, ಆ ಐಶ್ವರ್ಯಕ್ಕೆ ಸೀತೆ ಕಾರಣ. ನಾನು ಸಮುದ್ರವನ್ನು ಹಾರಿದೆ. ಎಣಿಸಿದ್ದೆನಾ ಎಲ್ಲಾದರೂ…. ಎಂದು ಮಾಡದ್ದು, ನನಗಂತೂ ಕಲ್ಪನೆಗೂ ಮೀರಿದ್ದು. ಶತಯೋಜನ ವಿಸ್ತೀರ್ಣದ ಸಮುದ್ರವನ್ನು ನಾನು ಹಾರಿದ್ದು ಯಾರಿಗೋಸ್ಕರ, ಸೀತೆಗಾಗಿ. ಕಣ್ಣಲ್ಲಿ ಎಣ್ಣೆ ಬಿಟ್ಟು ಇಡೀ ಲಂಕಾನಗರಿಯನ್ನು ಒಂದು ರಾತ್ರಿ ಹುಡುಕಿದೆನಲ್ಲಾ, ಅದು ಸೀತೆಗಾಗಿ.

ತಪ್ಪಿಲ್ಲ, ಏನೂ ತಪ್ಪಿಲ್ಲ. ಸೀತೆಗಾಗಿ ಇದಲ್ಲ ಎಷ್ಟು ಬೇಕಾದರೂ ಮಾಡಬಹುದು. ಇಡಿ ಭೂಮಂಡಲವನ್ನು ಸೀತೆಗೋಸ್ಕರವಾಗಿ ರಾಮನು ತಲೆಕೆಳಗೆ ಮಾಡಿದರೂ, ಏನೂ ಹೆಚ್ಚಲ್ಲ. ಅಷ್ಟು ದೊಡ್ಡವಳು ಸೀತೆ. ಒಂದು ತುಲಾಭಾರ ಮಾಡಿದನು ಹನುಮಂತ. ಮೂರುಲೋಕದ ರಾಜ್ಯ ಒಂದು ತಕ್ಕಡಿಯಲ್ಲಿ, ಸೀತೆ ಇನ್ನೊಂದು ತಕ್ಕಡಿಯಲ್ಲಿ. ತ್ರಿಲೋಕಾಧಿಪತ್ಯ ಹಾಗೂ ಸೀತೆ ತಕ್ಕಡಿಯ ಭಾಗಗಳು. ತೂಕ ಮಾಡಿದರೆ, ಸೀತೆ ಮೇಲೇಳೋದೇ ಇಲ್ಲ. ತ್ರೈಲೋಕ್ಯರಾಜ್ಯ ಸೀತೆಯ ಒಂದಂಶ ಕೂಡ ಅಲ್ಲ, ಅಂತಹ ಸೀತೆ. ಧರ್ಮಶೀಲನಾದ, ಮಿಥಿಲಾಧಿಪತಿಯ ಮಗಳಾಗಿ ಜನಿಸಿದವಳು, ದೃಢ ಪತಿವೃತೆ. ಅಂದು ಜನಕನ ಹೊಲದಲ್ಲಿ ಮಣ್ಣನ್ನು ಬೇಧಿಸಿ ಮೇಲೆದ್ದು ಬಂದ ಮಗು. ಅವಳಿಗೆ ಪ್ರಥಮ ಪೂಜೆ ಕೇದಾರದ ಧೂಳಿಂದ( ಗೆದ್ದೆಯ ಮಣ್ಣಿನ ಕಣಗಳು) ಅಭಿಷಿಕ್ತಳು. ಪರಮವಿಕ್ರಮಿಯಾದ, ಆದಿಶೀಲನಾದ, ಯುದ್ಧದಲ್ಲಿ ಎಂದೂ ಹಿಂದಿರುಗದ, ದಶರಥ ಚಕ್ರವರ್ತಿಯ ಹಿರಿಯ ಸೊಸೆ ಕೀರ್ತಿಮತಿ. ಧರ್ಮಜ್ಞ, ಕೃತಜ್ಞ, ಆತ್ಮಜ್ಞ ರಾಮನ ಧರ್ಮಪತ್ನಿ, ರಾಮನ ಪ್ರಿಯ ಸತಿ ರಾಕ್ಷಸಿಯರ ವಶವಾದಳೇ… ಎಂಬುದಾಗಿ ಪರಿತಪಿಸ್ತಾನೆ ಹನುಮಂತ ಸೀತೆಗಾಗಿ. ತನ್ನ ಪತಿಗಾಗಿ ಎಲ್ಲಾ ಭೋಗಗಳನ್ನು ಬಿಟ್ಟವಳು. ತನ್ನ ಪತಿಗಾಗಿ ಕಾಡಿನ ದುಃಖವನ್ನು ಲೆಕ್ಕಿಸದೇ, ನಾಡು ಬಿಟ್ಟು ಕಾಡನ್ನು ಸೇರಿದವಳು. ಅರಮನೆ ಬಿಟ್ಟು ಗಡ್ಡೆ ಗೆಣಸು, ನದಿನೀರಿನ ಸ್ನಾನ, ಆಶ್ರಮದ ಜೀವನವನ್ನು ನಡೆಸಿರುವವಳು. ನಿರಂತರ ಪತಿಸೇವೆ ಮಾಡಿರತಕ್ಕಂಥವಳು. ಭವನದಲ್ಲಿ ಹೇಗೋ ವನದಲ್ಲಿ ಹಾಗೇ ಸಂತೋಷಪಟ್ಟವಳು ರಾಮನಿಗಾಗಿ. ಅಂತಹ ಸೀತೆ, ಕನಕವರ್ಣಾಂಗಿ, ಸುಸ್ಮಿತಭಾಷಿಣಿ ಅಂಥವಳಿಗೆ ಎಷ್ಟು ಕಷ್ಟ…? ಪಾಪ, ಸಹಿಸ್ತಾ ಇದಾಳಲ್ಲ, ಇವೆಲ್ಲವನ್ನೂ…

ಒಂದು ವೇಳೆ ಸೀತೆ ಮರಳಿ ರಾಮನಿಗೆ ಸಿಕ್ಕಿದರೆ ಏನಾಗಬಹುದು ರಾಮನಿಗೆ. ಎಷ್ಟು ಸಂತೋಷಪಡಬಹುದು ರಾಮ…! ಅದು ಅದ್ಭುತ. ಸೀತೆಗೆ ಯಾವ ಆಭರಣ ಅಲಂಕಾರವೂ ಬೇಡ, ಬದುಕಿದಾಳೆ. ಒಂದು ದಿನ ರಾಮನನ್ನು ಸೇರಬೇಕು ಎಂಬ ಆಶೆಯನ್ನು ಹೊತ್ತಿದಾಳೆ. ಅವಳ ದೃಷ್ಟಿ ರಾಮನಲ್ಲೇ ಇತ್ತು. ಹೇಗೆ ಬದುಕಿದನೋ ರಾಮ ಇವಳಿಲ್ಲದೇ… ಅವಳಿಗೆ ಯಾವ ಆಭರಣವಿದ್ದರೂ ಶೋಭೆಯಲ್ಲ, ರಾಮನೆಂಬ ಆಭರಣ ಮಾತ್ರ ಶೋಭೆತರುವಂಥದ್ದು. ನನಗೂ ದುಃಖವಾಯ್ತಲ್ಲ…! ಸೀತೆಗೋಸ್ಕರವಾಗಿ ಎಂದು ಅಂದುಕೊಂಡು ಪ್ರತೀಕ್ಷೆಯನ್ನು ಮಾಡಿದ ಒಳ್ಳೆಯ ಮುಹೂರ್ತಕ್ಕಾಗಿ. ರಾಮಲಕ್ಷ್ಮಣರ ರಕ್ಷೆಯಲ್ಲಿರಬೇಕಾದವಳು ರಾಕ್ಷಸಿಯರ ಮಧ್ಯೆ ಇದ್ದಾಳೆ ಎಂದು ಭಾವಿಸಿ ಸಮಯಪ್ರತೀಕ್ಷೆ ಮಾಡ್ತಾ, ಶಿಂಶುಪಾ ವೃಕ್ಷದ ಎಲೆಗಳ, ಬಳ್ಳಿಗಳ ಹಿಂದೆ ಹುದುಗಿಕುಳಿತಿದ್ದ ಹನುಮಂತ.

ಹನುಮಂತನ ಮುಂದಿನ ಹೆಜ್ಜೆಯೇನು… ಆ ಸಂದರ್ಭದಲ್ಲಿ ಕೆಲವು ಘಟನೆಗಳು ನಡೆಯುವುದನ್ನು ವಾಲ್ಮೀಕಿಗಳು ವರ್ಣಿಸುತ್ತಾರೆ, ಎಲ್ಲದಕ್ಕೂ ಹನುಮ ಸಾಕ್ಷಿ. ಸೀತೆ ಯಾರು, ಅಸಾಹಾಯಕ ಸೀತೆಯ ಶೌರ್ಯ, ಪರಾಕ್ರಮ, ಮನೋಸ್ಥೈರ್ಯ ಎಂಥದ್ದು ಎಂಬುದನ್ನು ಕಾಣ್ತಾನೆ ಹನುಮಂತ. ಮುಂದಿನ ಪ್ರವಚನದಲ್ಲಿ ಕೇಳೋಣ…

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments