ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಹೋದೆಯಾ ಪಿಶಾಚಿಯೇ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂದ ಹಾಗಾಯಿತು. ಬಹುಹೊತ್ತಿನಿಂದ ಪೀಡ ನೀಡುತ್ತಿದ್ದ ಮಹಾರಾಕ್ಷಸ ಒಬ್ಬ ತೊಲಗಿದರೆ ಹತ್ತಾರು ರಾಕ್ಷಸಿಯರು ಬಂದು ಪೀಡಿಸಲು ಆರಂಭ ಮಾಡುತ್ತಾರೆ ಭಗವತಿ ಸೀತೆಯನ್ನು. ಅಶೋಕವನದಿಂದ ರಾವಣನು ನಿರ್ಗಮಿಸಿ, ತನ್ನ ಅಂತಃಪುರವನ್ನು ಸೇರಲು ಏನಾಯಿತು? ಭಯಂಕರ ರೂಪದ ರಾಕ್ಷಸಿಯರು ಬಂದು ಸೀತೆಯನ್ನು ಮುತ್ತಿದರು. ಕೋಪವು ಮೈತುಂಬಾ ಆವರಿಸಿದೆ, ಅಂತಹ ರಾಕ್ಷಸಿಯರ ಮಾತೇ ಒರಟು, ಇನ್ನೂ ಒರಟಾದ ಮಾತುಗಳಿಂದ ಸೀತೆಯ ಮನಸನ್ನು ನೋಯಿಸಿದರು, ಬೈದು ಹಂಗಿಸಿದರು. ನಂತರ ಹೇಳಿದ್ದೇನು ಎಂದರೆ ಪೌಲಸ್ತ್ಯರು ಎಂದರೆ ವರಿಷ್ಠರು. ಅವರಲ್ಲಿಯೂ ಶ್ರೇಷ್ಠನಾದವನು ರಾವಣ, ಮಹಾತ್ಮ ಅವನು ಅಂತಹ ರಾವಣನ ಪತ್ನಿತ್ವವನ್ನು ಯಾಕೆ ನೀನು ದೊಡ್ಡದು ಎಂದು ಭಾವಿಸಿಲ್ಲ? ಬೇರೆಯವರು ರಾವಣನ ದೃಷ್ಟಿ ಬೇಕು, ಪ್ರಸನ್ನತೆ ಬೇಕು ಎಂಬುದಾಗಿ ಕಾದುಕುಳಿತಿದ್ದಾರೆ ಹೀಗಿರುವಾಗ ಅವನೇ ಅವನಾಗಿ ಬಂದು ನಿನ್ನ ಬಳಿ ಈ ಪ್ರಸ್ತಾಪವನ್ನು ಇಟ್ಟಾಗ ಅದನ್ನು ಹಿರಿಯದು ಎಂದು ಯಾಕೆ ಭಾವಿಸುತ್ತಿಲ್ಲ. ಏಕಜಟಾ ಎನ್ನುವ ರಾಕ್ಷಸಿಗೆ ಕೋಪದಲ್ಲಿ ಕಣ್ಣೆಲ್ಲಾ ಕೆಂಪಾಗಿದೆ. ಅವಳು ಸೀತೆಯನ್ನು ಕರೆದು ಮಾತನಾಡಿಸುತ್ತಾಳೆ. ಚತುರ್ಮುಖ ಬ್ರಹ್ಮನಿಗೆ ಆರು ಜನ ಮಾನಸಪುತ್ರರು ಅವರು ಪ್ರಜಾಪತಿಗಳು, ಸೃಷ್ಟಿಯ ಆದಿಪ್ರವೃತ್ತಕರು. ಯಾರೆಲ್ಲ? ಅಂದರೆ ಮರೀಚಿ, ಅತ್ರಿ, ಅಂಗೀರಸ್, ಪುಲಸ್ತ್ಯ, ಪುಲಹ, ಕೃತ್. ಈ ಆರು ಮಾನಸಪುತ್ರರಲ್ಲಿ ನಾಲ್ಕನೆಯವನು ಪುಲಸ್ತ್ಯ ಪ್ರಜಾಪತಿ. ಈ ಪುಲಸ್ತ್ಯ ಪ್ರಜಾಪತಿಗೆ ಮಾನಸಪುತ್ರ ಅವನೇ ಬ್ರಹ್ಮರ್ಷಿ ವಿಶ್ರವಸ್ ಅವರ ಮಗ ರಾವಣ. ಹೇ ವಿಶಾಲನೇತ್ರಳೇ ನಿನಗಿದು ಕಾಣುತ್ತಿಲ್ಲವಾ? ಎಲೈ ಸರ್ವಶರೀರಸುಂದರಳೇ ನಾನು ಹೇಳಿದ್ದನ್ನು ನೀನು ಯಾಕೆ ಒಪ್ಪುತ್ತಿಲ್ಲ? ಇದನ್ನೆಲ್ಲಾ ಪ್ರೀತಿಯಿಂದ ಹೇಳಿದ್ದು. ಆಗ ಹರಿಜಟಾ ಎಂಬ ರಾಕ್ಷಸಿ ಮಾತನಾಡಲು ಆರಂಭಿಸಿದಳು. ಈ ಹರಿಜಟೆಗೆ ಸಿಂಹದಂತೆ ಕೂದಲು ಇದೆ ಹಾಗೆಯೇ ಬೆಕ್ಕಿನಂತೆ ಕಣ್ಣುಉಳ್ಳವಳು. ಕೋಪದಿಂದ ಕಣ್ಣುಗಳನ್ನು ಗರಗರನೆ ತಿರುಗಿಸಿದಳಂತೆ ಆಮೇಲೆ ಹೇಳಿದಳು; ಯಾವ ರಾವಣನಿಂದ 33 ದೇವತೆಗಳೆಲ್ಲರೂ ನಿರ್ಜಿತರಾದರೋ ಅಂತಹ ರಾಕ್ಷಸೇಂದ್ರನ ಪತ್ನಿಯಾಗು ನೀನು. ಬಳಿಕ ಪ್ರಗಸ ಎಂಬ ಪಿತ್ತನೆತ್ತಿಗೇರಿದ ರಾಕ್ಷಸಿ ಅವಳು ಹೇಳಿದಳು; ರಾವಣನೆಂದರೆ ಯಾರು? ಶೂರ, ವೀರೋತ್ಕೃಷ್ಟ, ಯುದ್ಧದಲ್ಲಿ ಎಂದೂ ಬೆನ್ನು ತೋರಿದವನಲ್ಲ ಅಂತಹ ಮಹಾಬಲನ ಪತ್ನಿತ್ವವನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ. ಅವನಿಗೆ ನಿನ್ನ ಮೇಲೆ ವಿಶೇಷ ದೃಷ್ಟಿಯಿದೆ. ಅವನಿಗೆ ಅತ್ಯಂತ ಪ್ರಿಯಳಾದ ಪತ್ನಿ ಮಂಡೋದರಿಯನ್ನು ತ್ಯಜಿಸಿ ಆತ ನಿನ್ನ ಬಳಿ ಬರುತ್ತಿದ್ದಾನೆ. ಒಬ್ಬಾಕೆ ಮಾತ್ರ ಅಲ್ಲ, ಏಳುಸಾವಿರ ಸ್ತ್ರೀಯರನ್ನು ಪಕ್ಕಕ್ಕಿಟ್ಟು ನಿನ್ನ ಬಳಿಗೆ ರಾವಣನು ಬಂದಿದ್ದಾನೆ. ಸಾವಿರ ಸ್ತ್ರೀಯರ ಅಂತಃಪುರವನ್ನೇ ಬಿಟ್ಟು ನಿನ್ನ ಹಿಂದೆ ಬಂದರೆ ನೀನು ಯಾಕೆ ಹೀಗೆ ಮಾಡುತ್ತಿದ್ದಿಯೇ? ಬಳಿಕ ದ್ವಿಕಟಾ ಎನ್ನುವ ರಾಕ್ಷಸಿ ಹೇಳಿದಳು; ಗಂಧರ್ವ, ದಾನವರನ್ನು ಒಂದಲ್ಲ ಅನೇಕ ಬಾರಿ ಪರಾಭವಗೊಳಿಸಿದಂತವನು ಅವನು ತಾನಾಗೇ ನಿನ್ನ ಬಳಿ ಬಂದಿದ್ದಾನೆ ಅಂತವನ ಪತ್ನಿತ್ವವನ್ನು ಯಾಕೆ ನೀನು ಬಯಸುತ್ತಿಲ್ಲಾ? ಅಧಮೆ. ನಂತರ ದುರ್ಮುಖಿಯು ಸೀತೆಗೆ ಹೇಳಿದ್ದೇನು ಎಂದರೆ; ಯಾರಿಗೆ ಭಯಪಟ್ಟು ಸೂರ್ಯನು ತನ್ನ ಕಿರಣಗಳನ್ನು ಉಪಸಂಹಾರ ಮಾಡುತ್ತಾನೋ, ಹಿತವಾಗುವಷ್ಟೇ ಕಿರಣಗಳನ್ನು ಬಿಟ್ಟು ಕೊಡುತ್ತಾನೆ, ಬಿಸಿಲಾಗುವುದಿಲ್ಲ ರಾವಣನಿಗೆ. ಅಂತವನನ್ನು ನೀನು ಏಕೆ ಒಪ್ಪಿಕೊಳ್ಳುವುದಿಲ್ಲ? ವೃಕ್ಷಗಳು ರಾವಣಬಂದರೆ ಸಾಕು ಭಯದಿಂದಲೇ ಪುಷ್ಪವೃಷ್ಟಿಯನ್ನು ಮಾಡುತ್ತವೆ. ಇನ್ನು ಪರ್ವತಗಳು ಮತ್ತು ಮೋಡಗಳು ಅವನು ಬೇಕು ಅಂದಕೂಡಲೇ ನೀರು ಕೊಡುತ್ತವೆ. ಇಂತಹ ನೈಋತರಾಜನ ಪತ್ನಿಯಾಗಲು ನೀನು ಯಾಕೆ ಬುದ್ಧಿಮಾಡುತ್ತಿಲ್ಲ? ಮನಸ್ಸು ಮಾಡುತ್ತಿಲ್ಲ? ನೋಡು ಒಳ್ಳೆಯ ಮಾತನ್ನು ಹೇಳಿತ್ತಿದ್ದೇನೆ; ಹೇ ಭಾಮಿನೀ, ಸುಸ್ಮಿತೇ ನನ್ನ ಮಾತನ್ನು ತಗೋ ಇಲ್ಲವಾದರೆ ನೀನು ಇರೋದಿಲ್ಲ ಎಂದು ಪ್ರೀತಿಯಿಂದ ಹೇಳಿದಳು.

“ನೋಡಿ ಪ್ರೀತಿಯಿಂದ ಏರ್ಪಟ್ಟರೆ ಅದು ಸಂಬಂಧ, ಭೀತಿಯಿಂದ ಏರ್ಪಟ್ಟರೆ ಅದು ನಿರ್ಬಂಧ.”

ಇದು ಯಾವುದನ್ನೂ ಸೀತೆ ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಆಗ ಅಷ್ಟೂ ರಾಕ್ಷಸಿಯರು ಒಟ್ಟುಗೂಡಿ ಸೀತೆಯ ಮುಂದೆ ಬೊಬ್ಬೆ ಹೊಡೆದರಂತೆ; ಯಾಕೆ ಸೀತೆ, ಸರ್ವಭೂತಮನೋಹರಳೇ ನೀನು ಯಾಕೆ ಅಂತಃಪುರದಲ್ಲಿ ಅದ್ಭುತವಾಗಿರುವಂತಹ ಶಯೆಯನ್ನು ಒಪ್ಪಿಕೊಳ್ಳುತ್ತಿಲ್ಲ? ನಿನ್ನ ಮನಸ್ಸನ್ನು ಹಿಂದಿರುಗಿಸು ಇಲ್ಲದಿದ್ದಲ್ಲಿ ನೀನು ಉಳಿಯುವುದಿಲ್ಲ. ಮೂರುಲೋಕದ ಸಂಪತ್ತನ್ನು ಯಾರು ಭೋಗಿಸುವನೋ ಅಂತಹ ರಾಕ್ಷಸೇಶ್ವರ ರಾವಣನನ್ನು ಪತಿಯೆಂದು ಒಪ್ಪಿಕೊಂಡು ಸುಖವಾಗಿರು. ನೀನು ಮನುಷ್ಯಳು ಆ ಮನುಷ್ಯ ರಾಮನನ್ನು ಯಾಕೆ ಇಷ್ಟಪಡುತ್ತೀಯ? ಆ ಪ್ರಶ್ನೆಯಲ್ಲಿಯೇ ಉತ್ತರವಿದೆ. ಆಕೆ ಮನುಷ್ಯೆ ಆದ್ದರಿಂದ ಮನುಷ್ಯನನ್ನು ಇಷ್ಟಪಟ್ಟಿದ್ದಾಳೆ. ರಾಜ್ಯಕಳೆದುಕೊಂಡು ಏನೂ ಇಲ್ಲದೆ ದೀನನಾದ ರಾಮನನ್ನು ಇಷ್ಟಪಡುತ್ತಿದ್ದಿಯೇ ಯಾಕೆ ಎಂದು ಕೇಳುತ್ತಾರೆ. ರಾಕ್ಷಸಿಯರ ಮಾತನ್ನು ಕೇಳಿ ಪದ್ಮನಯನೆಯು ಕಣ್ಣಲ್ಲಿ ನೀರು ಸುರಿಸುತ್ತಾ ಈ ಮಾತನ್ನು ಹೇಳಿದಳು; ನೀವು ಏನು ಹೇಳುತ್ತಿದ್ದೀರೋ ಇದು ಲೋಕವಿದ್ವಿಷ್ಟ. ಪ್ರಪಂಚ ಒಪ್ಪುವಂತಹ ಮಾತಲ್ಲ ಬದಲಾಗಿ ತಿರಸ್ಕರಿಸುವಂತಹ ಮಾತು. ನಿಮ್ಮ ಮಾತು ಮಾತಲ್ಲ ಕೊಳಕು, ಕಲ್ಮಶ, ಅದು ಪಾಪ. ನನ್ನ ಮನಸ್ಸಿಗೆ ಬರುವಂತದ್ದಲ್ಲ, ನಾನು ಒಪ್ಪಿಕೊಳ್ಳುವುದಿಲ್ಲ. ಮನುಷ್ಯಳು ರಾಕ್ಷಸನ ಸತಿಯಾಗುವುದಿಲ್ಲ, ಅದು ಸೂಕ್ತ ಅಲ್ಲ. ಬೇಕಾದರೆ ನನ್ನನ್ನು ತಿನ್ನಿ ಆದರೆ ನಿಮ್ಮ ಮಾತನ್ನು ನಾನು ಪಾಲಿಸುವುದಿಲ್ಲ. ದೀನನಾಗಿರಬಹುದು, ರಾಜ್ಯವನ್ನು ಕಳೆದುಕೊಂಡಿರಬಹುದು ಆದರೆ ನನ್ನ ಪತಿ ನನಗೆ ಸರ್ವಸ್ವ. ಎಂದಿಗೂ ಅವನಲ್ಲಿ ನನ್ನ ಅನುರಾಗ ಸ್ಥಿರ. ನಾನು ಹೇಗೆ ರಾಮನಿಗೆ ಎಂದರೆ; ಸೂರ್ಯನಿಗೆ ಸುವತ್ಸಲೆ ಇದ್ದಂತೆ, ಶಕ್ರನಿಗೆ ಶಶಿ ಇದ್ದಂತೆ, ವಸಿಷ್ಠರಿಗೆ ಅರುಂಧತಿ ಇದ್ದಂತೆ, ಚಂದ್ರನಿಗೆ ರೋಹಿಣಿ ಇದ್ದಂತೆ, ಅಗಸ್ತ್ಯರಿಗೆ ಲೋಪಾಮುದ್ರೆ ಇದ್ದಂತೆ, ಸುಕನ್ಯೆ ಚವನರಿಗೆ ಇದ್ದಂತೆ, ಸತ್ಯವಂತನಿಗೆ ಸಾವಿತ್ರಿ ಇದ್ದಂತೆ, ಸೌದಾಸನಿಗೆ ಮದಯಂತಿ ಇದ್ದಂತೆ, ನಳನಿಗೆ ದಮಯಂತಿ ಇದ್ದಂತೆ ನಾನು ರಾಮನಿಗೆ ಒಪ್ಪಿದವಳು. ರಾಮನನ್ನು ಆತ್ಮಪೂರ್ವಕವಾಗಿ ಸ್ವೀಕರಿಸಿದವಳು. ಅವನನ್ನು ಬಿಟ್ಟು ನಾನಿಲ್ಲ.

ಧರ್ಮ ಯಾವುದು ಎಂದು ತೀರ್ಮಾನ ಮಾಡಲು ಪ್ರಮಾಣಗಳು ನಾಲ್ಕು. ಧರ್ಮ ಯಾವುದು ಎಂಬುದನ್ನು ವೇದ ಹೇಳುತ್ತದೆ. ಬಳಿಕ ಸ್ಮೃತಿ ಧರ್ಮ ಯಾವುದು ಎಂಬುದನ್ನು ನಿರೂಪಣೆ ಮಾಡಿದೆ. ಇದಾದ ಮೇಲೆ ಮುಂದಿರುವುದು ಸದಾಚಾರ. ಸತ್ಪುರುಷರ ಯಾವ ನಡೆಯಿಂದ ಸಾಗಿದ್ದರೋ ಅರಿತುಕೊಳ್ಳಿ ,ಅದು ನಮಗೆ ದಾರಿ. ಕೊನೆಗೆ ಅಂತರಾತ್ಮ ಒಪ್ಪಬೇಕು. ಇವೆಲ್ಲಾ ಧರ್ಮಕ್ಕೆ ಪ್ರಮಾಣಗಳು. ಸೀತೆ ಹೇಳಿದಳು; ನಾನು ಸದಾಚಾರದಿಂದ ನಡೆದುಕೊಳ್ಳುತ್ತೇನೆ , ರೋಹಿಣಿ, ಲೋಪಮುದ್ರೆ, ಸುಕನ್ಯೆ, ಸಾವಿತ್ರಿ, ಶ್ರೀಮತಿ, ಮದಯಂತಿ, ದಮಯಂತಿ ಇವರಂತೆ ನಾನು. ಇವರು ಹೇಗೆ ನಡೆದುಕೊಂಡರೋ ಹಾಗೆ ನಡೆದುಕೊಳ್ಳುತ್ತೇನೆ. ಅವರ ದಾರಿ ನನಗಿದೆ ಎಂಬುದಾಗಿ ಉದಾಹರಣೆಯನ್ನು ನೀಡಿದಳು.

ರಾಕ್ಷಸಿಯರಿಗೆ ಮತ್ತೂ ಕೋಪ ಬಂದಿತು. ಆಗ ತುಂಬಾ ಕ್ರೂರವಾದ, ಒರಟು ಮಾತುಗಳಿಂದ ಸೀತೆಯನ್ನು ಬೈದು ಭಂಗಿಸಿದರಂತೆ. ಅದು ಅವರ ಸ್ವಂತ ಬುದ್ಧಿಯಲ್ಲ. ರಾವಣನ ಪ್ರಚೋದನೆಗೆ ಒಳಗಾಗಿ ಸೀತೆಯನ್ನು ನಾನಾಪ್ರಕಾರವಾಗಿ ಭರ್ತ್ಸ್ಯನಮಾಡಿದರು ರಾಕ್ಷಸಿಯರು. ಶಿoಶುಪಾ ವೃಕ್ಷದ ರೆಂಬೆಕೊಂಬೆಗಳ ನಡುವೆ, ಎಲೆಗಳ, ಬಳ್ಳಿಗಳ ಹಿಂದೆ ಅಡಗಿ ಕುಳಿತು ಹನುಮಂತ ಕೇಳುತ್ತಾ ಇದ್ದಾನೆ. ಹನುಮಂತನ ರಕ್ತ ಕುದಿಯುತ್ತಾ ಇದೆ. ಒಂದು ಅವಕಾಶ ಸಿಕ್ಕಿದರೆ ಈ ರಾಕ್ಷಸಿಯರನ್ನು ಎಂದು ಅಂದುಕೊಳ್ಳುತ್ತಾ ಇದ್ದಾನೆ. ಈ ಅವಕಾಶಕ್ಕೆ ಕಾಯುತ್ತಾನೆ ಮುಂದೆ ಅವನು. ಅಂತಹ ಕ್ರೋಧ ಹನುಮಂತನನ್ನು ಆವರಿಸಿದೆ.

ಶಿಂಶುಪಾ ವೃಕ್ಷದ ಕೊಂಬೆಗಳ‌ ನಡುವೆ ಎಲೆಗಳ, ಬಳ್ಳಿಗಳ ಹಿಂದೆ ಅಡಗಿ ಕುಳಿತು ಹನುಮಂತ ಕೇಳ್ತಾ ಇದ್ದಾನೆ. ರಕ್ತ ಕುದೀತಾ ಇದೆ ಅವನದ್ದು. ‘ಒಂದು ಅವಕಾಶ ಸಿಕ್ಕಿದ್ರೆ ಈ ರಾಕ್ಷಸಿಯರನ್ನು..’ ಅಂತ ಅಂದುಕೊಳ್ತಾ ಇದ್ದಾನೆ. ಅಂಥಾ ಕ್ರೋಧ ಹನುಮಂತನನ್ನು ಆವರಿಸಿದೆ. ಸೀತೆಯ ಮನಸ್ಸೇನು, ಅವಳ ಮೇಲೆ ಎಂಥಾ ಒಂದು ಬಲಪ್ರಯೋಗ ನಡೀತು, ಎಷ್ಟು‌ ಹಿಂಸೆ ಕೊಟ್ಟರು ಆಕೆಗೆ ಎನ್ನುವುದಕ್ಕೆ ಹನುಮಂತ ಪ್ರತ್ಯಕ್ಷ ಸಾಕ್ಷಿ. ಅದೀಗ ‌ಮಹಾ ಸ್ಫೋಟಕ್ಕೆ ಸಿದ್ಧವಾಗುತ್ತಿರುವ ಜ್ವಾಲಾಮುಖಿ. ಅಗ್ನಿಪರ್ವತದಂತೆ ಕುಳಿತಲ್ಲಿಯೇ ಕುದಿದು, ಕುದಿದು ಕಾಯ್ತಾ ಇದ್ದಾನೆ ಹನುಮಂತ ಅವಕಾಶಕ್ಕಾಗಿ.

ಸೀತೆಯ ಮೇಲೆ ಏರಿ ಬಂದರಂತೆ ಮತ್ತೆ ರಾಕ್ಷಸಿಯರು. ಕ್ರುದ್ಧರಾಗಿದ್ದಾರೆ. ಸೀತೆ ನಡುಗ್ತಿದ್ದಾಳೆ, ಇವರು ಸುತ್ತು ಬರ್ತಾ ಇದ್ದಾರೆ. ತಮ್ಮ ಜೋಲು ತುಟಿಗಳನ್ನು ಉದ್ದ ನಾಲಿಗೆಯಿಂದ ನೆಕ್ಕಿದರಂತೆ. ಸೀತೆಗೆ ಸಂದೇಶ ಅದು ಏನು ಮಾಡ್ತೇವೆ ನಿನ್ನನ್ನು ಮುಂದೆ ಅಂತ. ತಮ್ಮ ಕೈಯ್ಯ ಗಂಡು ಒಡಲಿಗಳನ್ನು ತಿರುಗಿಸಿದರಂತೆ. ಆ ಗಂಡು ಒಡಲಿಗಳನ್ನು ಮೇಲೆತ್ತಿ ಅವರು ಬೊಬ್ಬಿರಿದು ಹೇಳಿದ್ದೇನು? ‘ಇವಳು ಯೋಗ್ಯಳಲ್ಲ ರಾವಣನಿಗೆ!’.- ಸತ್ಯವಾದ, ಸರಿಯಾದ ಮಾತು.

ಅವರು ಒಂದು ಕಡೆಯಿಂದ ಬೈತಾ ಇದ್ದಾರೆ ಸೀತೆಯನ್ನು. ಆಕೆ‌ ಕಣ್ಣೀರು ಒರೆಸ್ತಾ ಈ ಘಟನೆಗಳೆಲ್ಲ ನಡೀತಾ ಇದ್ದ ಚೈತ್ಯ ಪ್ರಾಸಾದ ಎಂಬ ದೊಡ್ಡ ಭವನದ ಕಡೆಯಿಂದ ಶಿಂಶುಪಾ ವೃಕ್ಷದ ಕಡೆಗೆ ಬಂದು‌ ನಿಂತಳಂತೆ ಸೀತೆ. ಆಕೆಯ ಸುತ್ತುವರಿದರು‌ ಮತ್ತೆ ರಾಕ್ಷಸಿಯರು. ಕಿರುಕುಳಕ್ಕೆ ಕೊನೆಯೇ ಇಲ್ಲ. ಕೃಶಳಾಗಿದ್ದಾಳೆ, ಮುಖದಲ್ಲಿ ದೈನ್ಯ ಇದೆ, ಮೈಯೆಲ್ಲಾ ಮಣ್ಣಾಗಿದೆ, ವಸ್ತ್ರ ಕೂಡ ಮಾಸಿ‌ ಹೋಗಿದೆ. ದೀನಾವಸ್ಥೆಯಲ್ಲಿ ಸೀತೆ ಇದ್ರೆ, ಆಕೆಯನ್ನು ಮತ್ತೆ ಪೀಡಿಸಿದರಂತೆ ರಾಕ್ಷಸಿಯರು.

ಈಕೆ ವಿನತಾ ಎಂಬ ರಾಕ್ಷಸಿ. ನೋಡಿದರೆ ಭಯವಾಗ್ತದಂತೆ. ಅವಳು ಕುಪಿತಳಾಗಿದ್ದಾಳೆ. ಕೋಪ ಮೈಯ್ಯಲ್ಲೆಲ್ಲಾ ಕಾಣ್ತಾ ಇದೆ, ಹಲ್ಲು ಮುಂದೆ ಬಂದಿದೆ. ಜೋಲು ಹೊಟ್ಟೆ. ಆ ರಾಕ್ಷಸಿ ಸೀತೆಗೆ ಬಂದು‌ ಹೇಳಿದ್ದೇನು?
‘ಸಾಕು, ರಾಮನ ಮೇಲೆ ಎಷ್ಟು ಪ್ರೀತಿ ತೋರಿಸಬೇಕೋ, ತೋರಿಸುವಷ್ಟು ತೋರಿಸಿ ಆಯ್ತು. ಸಾಕು ಮಾಡು. ಯಾವುದೂ ಅತಿಯಾಗಬಾರದು. ಯಾವುದು ಅತಿಯಾದರೂ ಕೂಡ ಅದು ವ್ಯಸನಕ್ಕೆ, ಸಂಕಷ್ಟಕ್ಕೆ ಕಾರಣವಾಗ್ತದೆ. ನೀನು ಪತಿಭಕ್ತಿಯನ್ನು ಪ್ರಕಟ ಪಡಿಸಿದ್ದೀಯಲ್ಲ, ನಿನ್ನ ಕುರಿತು ನಾನು ಪರಿತುಷ್ಟಳಾಗಿದ್ದೇನೆ‌. ಮನುಷ್ಯರು ಏನು ಮಾಡಬಹುದು ಅದಷ್ಟೂ ಮಾಡಿದ್ದೀಯೆ ನೀನು. ಈಗ ಸಾಕು. ಇನ್ನು ನೀನು ಸ್ವಲ್ಪ ನಾನು ಹೇಳುವುದನ್ನಾದರೂ ಕೇಳು. ನಿನ್ನ‌ ಒಳ್ಳೆಯದಕ್ಕೇ ಹೇಳೋದು. ಏನು ಮಾಡ್ಬೇಕು? ಸರ್ವರಾಕ್ಷಸರ ಪತಿ ರಾವಣನನ್ನು ಪತಿಯಾಗಿ ಒಪ್ಪಿಕೋ.

ರಾವಣನೆಂಥವನು? ವಿಕ್ರಾಂತ, ರೂಪವಂತ, ಉದಾರ, ತ್ಯಾಗಶೀಲ, ಸರ್ವರಿಗೂ ರಾವಣನು ಪ್ರಿಯದರ್ಶನ. ಹಾಗಾಗಿ ಇಂಥವನನ್ನು ಒಪ್ಪಿಕೋ. ದೀನನಾದ ಆ ಮನುಷ್ಯ ರಾಮನನ್ನು ಬಿಟ್ಟು ರಾವಣನನ್ನು ಆಶ್ರಯಿಸು. ನೀನು ಹೀಗೆ ಮಾಡಿದ ಕೂಡಲೇ ನಿನಗೆ ದಿವ್ಯವಾದ ಅನುಲೇಪನಗಳು, ದಿವ್ಯಾಭರಣಗಳು, ಮಾತ್ರವಲ್ಲ ಈಗ ಒಪ್ಪಿಕೊಂಡರೆ ಈಗಿಂದಲೇ ಸರ್ವಲೋಕೇಶ್ವರಿ ನೀನು. ಜೋಡಿ ಹೇಗಿರ್ತದೆ? ಅಗ್ನಿದೇವನ ಪಕ್ಕದಲ್ಲಿ ಜೋಡಿ ಸ್ವಾಹಾದೇವಿ‌ ಇದ್ದಂತೆ! ಇಂದ್ರನ ಪಕ್ಕದಲ್ಲಿ ಪತ್ನಿ ಶಚೀದೇವಿ ಇದ್ದಂತೆ ಅಂಥಾ ಜೋಡಿ‌ ಆಗ್ತದದು. ರಾಮ‌ನ ಆಯಸ್ಸು ಮುಗಿದುಹೋಗಿದೆ, ಹೆಚ್ಚು ಕಾಲ‌ ಇಲ್ಲ. ಈ ರಾವಣ ಉಳಿಸೋದಿಲ್ಲ ಅವನನ್ನು. ಹಾಗಾಗಿ‌ ಯಾಕೆ ಅವನು? ಬಿಟ್ಟುಬಿಡು, ರಾವಣನನ್ನು ಒಪ್ಪಿಕೋ’ ಅಂತ ಇಷ್ಟೆಲ್ಲ ಪ್ರೀತಿಯಿಂದ ಹೇಳಿ, ‘ಈ ನನ್ನ ಮಾತನ್ನು ಪಾಲಿಸದಿದ್ದರೆ ಇದೇ ಮುಹೂರ್ತದಲ್ಲಿ‌ ನಾವೆಲ್ಲ ಸೇರಿ ನಿನ್ನನ್ನು ತಿಂದು ಬಿಡ್ತೇವೆ, ಮುರಿದು ಮುಕ್ಕಿ ಬಿಡ್ತೇವೆ..’

ಮುಂದಿನ ರಾಕ್ಷಸಿ‌ ಇಷ್ಟು ಸೌಜನ್ಯದಲ್ಲಿ ಮಾತಾಡ್ಲಿಲ್ಲವಂತೆ. ಅವಳ ಹೆಸರು ವಿಕಟಾ. ಅಚಳು ತನ್ನ ಮುಷ್ಟಿಯೆಲ್ಲಾ ಮೇಲೆತ್ತಿ ಘರ್ಜಿಸಿದಳಂತೆ ಒಮ್ಮೆ, ಗುದ್ದಿ‌ ಬಿಡ್ತೇನೆ ಎನ್ನುವ ಹಾಗೆ. ಹೇಳಿದ್ದೇನು? ‘ಸುದುರ್ಮತಿಯೇ! ಎಷ್ಟು ನೀನು ಕೆಟ್ಟ ಮಾತಾಡಿದ್ದು? ನಾನೂ ನೋಡ್ತಾ ಇದ್ದೇನೆ ಆವಾಗಿನಿಂದ. ಎಷ್ಟು ನೀನು ಬೇಡದ ಮಾತಾಡಿದ್ದು? ಇಲ್ಲಿಯವರೆಗೆ ಸಹಿಸಿದ್ದೇವೆ. ಯಾಕೆ‌ ಸಹಿಸಿದ್ದೇವೆ ಅಂದರೆ ನಾವಿಲ್ಲಿ‌ ಕನಿಕರವುಳ್ಳವರು, ಮೃದು ಸ್ವಭಾವದವರು. ಕಾಲಕ್ಕೆ ತಕ್ಕುದಾಗಿರುವ ನಮ್ಮ‌ ಮಾತನ್ನು ನೀನು ಪಾಲಿಸೋದಿಲ್ವ? ಸಮುದ್ರದ ಈಚೆ ದಡಕ್ಕೆ‌ ನಿನ್ನನ್ನು ತರಲಾಗಿದೆ.‌ ಯಾರಿಗೂ ಇಲ್ಲಿಗೆ ಬರಲಾಗದು. ಇಲ್ಲಿ ನೌಕಾಪಥವೂ ಕೂಡ ಇಲ್ಲ. ಘೋರವಾದ ರಾವಣನ ಅಂತಃಪುರಕ್ಕೆ ನಿನ್ನನ್ನು ಪ್ರವೇಶಗೊಳಿಸಲಾಗಿದೆ. ರಾವಣಗೃಹದಲ್ಲಿ‌ ಬಂಧನಕ್ಕೊಳಪಟ್ಟಂತಹ, ನಮ್ಮಿಂದ ರಕ್ಷಿಸಲ್ಪಟ್ಟಂತಹ ನಿನ್ನನ್ನು ಕಾಪಾಡಲಿಕ್ಕೆ ಸಾಕ್ಷಾತ್ ದೇವರಾಜ ಇಂದ್ರನಿಗೂ ಸಾಧ್ಯವಿಲ್ಲ’ ಎಂದು ಹೇಳಿದ್ದನ್ನು ಕಾಪಾಡಬಲ್ಲವನು ಕೇಳಿಸಿಕೊಳ್ತಾ ಇದ್ದಾನೆ. ಹನುಮಂತ ಅಲ್ಲಿಯೇ ಮರದ ಮರೆಯಲ್ಲಿದ್ದಾನೆ. ಅವನ‌ ಮುಂದೇ ಹೇಳ್ತಾ ಇದ್ದಾರೆ. ‘ನಿನಗೆ ಇದಕ್ಕೋಸ್ಕರ ಹೇಳ್ತಾ ಇದ್ದೇನೆ, ಕೇಳು ನನ್ನ ಮಾತನ್ನು. ಈ ಕ್ಷಣವೇ ನೀನು ಕಣ್ಣೀರಿಡೋದು ನಿಲ್ಲಿಸ್ಬೇಕು, ಅನರ್ಥಕವಾದ ಶೋಕವನ್ನು ತ್ಯಜಿಸು. ಹಾಗಾಗಿ ಇನ್ನು ಮುಂದೆ ನೀನು ಸಂತೋಷವನ್ನು ತಾಳ್ಬೇಕು, ಈ ದೈನ್ಯವನ್ನು ಬಿಟ್ಟುಬಿಡಬೇಕು, ರಾಕ್ಷಸ ರಾಜನ ಜೊತೆಗೆ ಕ್ರೀಡಿಸಬೇಕು‌ ಸುಖವಾಗಿ ಅಂತ ಹೇಳಿ’ ಒಂದು ಪುಟ್ಟ ಉಪದೇಶವನ್ನೂ ಕೊಡ್ತಾಳೆ.

ಯೌವ್ವನವಾಗಲಿ, ಇನ್ನೊಂದಾಗಲಿ ಅನರ್ಥವಾಗೋದಕ್ಕಿಂತ ವ್ಯರ್ಥವಾಗೋದು ಒಳ್ಳೆಯದು

ಈಕೆ ಸೀತೆಗೆ ಹೇಳ್ತಾ ಇದ್ದಾಳೆ‌ ವಿಕಟೆ, ‘ರಾವಣನ ಜೊತೆಗೆ ಉದ್ಯಾನಗಳು, ಪರ್ವತಗಳು, ಇವೆಲ್ಲವನ್ನೂ ನೀನು ವಿಹರಿಸಬಹುದು. ಏಳು ಸಾವುರ ಸ್ತ್ರೀಯರ ಒಡತಿಯಾಗಬಹುದು ನೀನು. ನನ್ನ ಮಾತನ್ನು ಪಾಲಿಸದೇ ಇದ್ರೆ ಈಗಲೇ ನಿನ್ನ ಎದೆಯನ್ನು ಸೀಳಿ ಹೃದಯವನ್ನು ಕಿತ್ತು ತಿಂದುಬಿಡ್ತೇನೆ’.

ಮುಂದಿನವಳು ಚಂಡೋದರಿ. ತನ್ನ ದೊಡ್ಡ ಶೂಲವನ್ನು ತಿರುಗಿಸಿದಳಂತೆ. ‘ಇವತ್ತು ಹೇಳ್ತೇನೆ, ನನಗೊಂದು ಬಯಕೆಯಾಗಿತ್ತು. ಇವಳನ್ನು ರಾವಣ ತಂದು ನಮಗೆಲ್ಲಾ ಒಪ್ಪಿಸಿದ ದಿನ, ಆ ಕಣ್ಣು-ಜಿಂಕೆ ಕಣ್ಣು ಭಯದಲ್ಲಿ ಅಲ್ಲಾಡ್ತಾ ಇತ್ತು, ಎದೆ ನಡುಗ್ತಾ ಇತ್ತು ಇವಳದ್ದು ಆ ದಿನ. ಇವಳನ್ನು ಕಂಡಾಗ ಆ ಸಾತ್ವಿಕ‌ವಾದ ಬಯಕೆ ಮೂಡಿತ್ತು. ಇವಳ ದೇಹಾಂಗಗಳನ್ನೆಲ್ಲ ತಿಂದು‌ಬಿಡಬೇಕು ಎನ್ನುವ ಆಸೆಯಾಯ್ತು ನನಗಾವತ್ತೇ. ಆಗ ಇನ್ನೊಬ್ಬ ರಾಕ್ಷಸಿ‌ ಹೇಳಿದಳಂತೆ, ‘ಹೌದಾ, ಒಂದು ಕೆಲಸ ಮಾಡೋಣ ಹಾಗಾದ್ರೆ, ಇವಳ ಕುತ್ತಿಗೆ ಹಿಸುಕಿಬಿಡೋಣ. ಸತ್ತೋಗ್ತಾಳೆ. ನಾವು ರಾವಣನ‌ ಬಳಿ‌ ಹೋಗಿ ದುಃಖ ತಡೀಲಾರ್ದೇ ಸತ್ತುಬಿಟ್ಟಳು ಅಂತ ಹೇಳೋಣ’. ಆಗ ಅವನು‌ ‘ತಿಂದು‌ ಬಿಡಿ’ ಅಂತ ಹೇಳ್ತಾನೆ.‌ ಆಗ ಅವಕಾಶ ಆಗ್ತದೆ ಇದೆಲ್ಲ ತಿನ್ಲಿಕ್ಕೆ’. ಆಗ ಅಜಾಮಕಿ‌ ಹೇಳಿದಳಂತೆ, ‘ಸರಿಯಾಗಿ ನಾವು ಭಾಗ ಮಾಡ್ಬೇಕು ಈಕೆಯನ್ನು. ಎಲ್ಲರಿಗೂ ಸಮಪಾಲು‌ ಬರುವಂಥಾ ಪಿಂಡಗಳನ್ನು ಮಾಡಬೇಕು. ಇದು ನನ್ನ ಅಪೇಕ್ಷೆ. ಯಾಕಂದ್ರೆ ನನಗೆ ಜಗಳವೆಲ್ಲ ಇಷ್ಟ ಇಲ್ಲ. ಸುಮ್ನೆ ಮತ್ತೆ ನಮ್ಮ ಮಧ್ಯ ಜಗಳ‌ ಯಾಕೆ ಬರ್ಬೇಕು? ಹಾಗಾಗಿ, ಒಂದೇ ಸಮಾನ ಪಿಂಡಗಳಾಗಿ‌ ನಾವು ಈಕೆಯನ್ನು ಕತ್ತರಿಸಿ ಇಟ್ಕೊಳ್ಳಬೇಕು. ಆಮೇಲೆ ಮಧ್ಯವನ್ನು ತರಿಸ್ಬೇಕು, ಒಳ್ಳೆಯ ಉಪ್ಪಿನಕಾಯಿಗಳನ್ನು ತರಿಸ್ಬೇಕು’ ಎನ್ನುವ ಹೊತ್ತಿಗೆ ಶೂರ್ಪಣಖಿ ಪ್ರಾರಂಭ ಮಾಡಿದಳಂತೆ, ‘ನನ್ನ ಮನಸ್ಸನ್ನೇ ಮಾತಾಡಿದ್ದಾಳೆ ಅಜಾಮಕಿ. ಬೇಗ ಮಧ್ಯ(ಸುರೆ)ವನ್ನು ತರಿಸಿ.‌ ಎಲ್ಲಾ ಶೋಕಗಳನ್ನು ಪರಿಹರಿಸುವ ಸುರೆಯನ್ನು ಬೇಗ ತರಿಸಿ. ಬಹಳ ದಿನವಾಗಿದೆ ಮನುಷ್ಯ ಮಾಂಸವನ್ನು ಆಸ್ವಾದಿಸಿ ನಿಕುಂಬಿಲ(ರಾಕ್ಷಸರ ನೃತ್ಯಭೂಮಿ)ದಲ್ಲಿ ನೃತ್ಯ ಮಾಡೋಣ.

ಆ ದೇವಿಯ ಮುಂದೆ ಹೋಗಿ ಮನುಷ್ಯರ ಮಾಂಸ ತಿಂದು, ಮದ್ಯ ಕುಡಿದು, ನೃತ್ಯ ಮಾಡಿದರೆ ಅದನ್ನು ನೋಡಿ ಆ ದೇವಿಯೇ ಕಣ್ಣುಮುಚ್ಚಿಕೊಂಡಾಳು! ಹೀಗೆಲ್ಲಾ ಸೀತೆಯನ್ನು ಹಳಿಯುವಾಗ ದೇವಾಂಗನೆಯಂತಹ ಸೀತೆ ತಾನು ಬದುಕಬಹುದು ಎಂಬ ಧೈರ್ಯವನ್ನು ಕಳೆದುಕೊಂಡಳು. ಎಂದಾದರೂ ರಾಮ ಬಂದಾನು, ನನ್ನನ್ನು ಸ್ವೀಕರಿಸಿಯಾನು ಎಂಬ ಕುಟುಕು ಆಸೆಯೂ ಹೋಗಿ ಅಳತೊಡಗಿದಳು. ಎಂದಿಗೂ ಮಾನುಷಿ ರಾಕ್ಷಸನ ಪತ್ನಿಯಾಗುವುದು ಸರಿಯಲ್ಲ ತಿನ್ನಿ ನನ್ನನ್ನು ಎಂದು ಹೇಳಿದಳು. ಅಧೈರ್ಯದ ಮಧ್ಯದಲ್ಲಿ ಕೂಡಾ ನಾನು ರಾವಣನ ಸತಿಯಾಗುವುದಿಲ್ಲ ಎಂದೇ ಹೇಳುತ್ತಾಳೆ. ಮಾನ ಮತ್ತು ಪ್ರಾಣಗಳಲ್ಲಿ ಸೀತೆಯ ಆಯ್ಕೆ ಮಾನ. ರಾಕ್ಷಸಿಯರ ಮಧ್ಯದಲ್ಲಿ ಸೀತೆಗೆ ಕೊಂಚವೂ ನೆಮ್ಮದಿ ಇಲ್ಲದಾಯಿತು. ಅವರ ಕೆಟ್ಟ ಮಾತುಗಳನ್ನು ಕೇಳಿ ಅತಿಯಾದ ನಡುಕ ಬಂತು ಆಕೆಗೆ. ತನ್ನೊಳಗೆ ತಾನೇ ಹುದುಗಿದಳು. ಕಾಡಿನಲ್ಲಿ ತನ್ನ ಗುಂಪಿನಿಂದ ತಪ್ಪಿಸಿಕೊಂಡ ಹೆಣ್ಣುಜಿಂಕೆಯು ತೋಳಗಳಿಂದ ಸುತ್ತುವರಿಯಲ್ಪಟ್ಟರೆ ಆ ಜಿಂಕೆ ಇರುವ ಸ್ಥಿತಿಯಲ್ಲಿ ಸೀತೆಯಿದ್ದಳು.

ಪಕ್ಕದಲ್ಲಿ ಅಶೋಕ ವೃಕ್ಷವೊಂದಿತ್ತು. ಸೀತೆಗೇನು ಶೋಕದ ಪರಿಹಾರವಾಗುತ್ತಿಲ್ಲ. ಅದರ ಕೊಂಬೆಯನ್ನು ಹಿಡಿದುಕೊಂಡಳು ಸೀತೆ. ಅವಳಿಗೆ ಅವಮಾನವಾಗಿದೆ, ಮನೋಭಂಗವಾಗಿದೆ. ಕಣ್ಮುಚ್ಚಿ ರಾಮನ ನೆನಪು ಮಾಡುತ್ತಾಳೆ. ಕಣ್ಣಿಂದ ನೀರು ಹರಿಯುತ್ತಿದೆ. ಕೊರಳು, ಎದೆ ಎಲ್ಲಾ ಕಡೆ ಕಣ್ಣೀರು ಹರಿದು ಬರುತ್ತಿದೆ. ಎಷ್ಟು ದೂರ ಕಣ್ಣು ಹಾಯಿಸಿದರೂ ಶೋಕಸಾಗರದ ತುದಿ ಅವಳಿಗೆ ಕಾಣಿಸಲಿಲ್ಲ. ಈ ಶೋಕಕ್ಕೆ ಕೊನೆಯೆಲ್ಲಿ ಎಂಬ ಉತ್ತರವಿಲ್ಲ. ಒಂದು ನಡುಕ ಬಂತು. ಗಾಳಿಗೆ ಸಿಕ್ಕ ಬಾಳೆಯಂತೆ ನಡುಗಿ ಬಿದ್ದು ಬಿಟ್ಟಳು. ಮುಖವೆಲ್ಲ ಬಾಡಿತು. ಭೂಮಿಯಲ್ಲಿ ಬಿದ್ದಲ್ಲಿಯೇ ಶೋಕದಿಂದ ಹೊರಳುವಾಗ ಅವಳ ಜಡೆ ಕೂಡಾ ಸರ್ಪದಂತೆ ಹೊರಳಿತು ಎಂದು ವಾಲ್ಮೀಕಿಗಳು ವರ್ಣಿಸುತ್ತಾರೆ. ತುಂಬಾ ಅತ್ತಳು. ಆಮೇಲೆ ವಿಲಪಿಸಿದಳು. ದುಃಖದಿಂದ ರಾಮಾ, ಲಕ್ಷ್ಮಣ ಎಂದು ಕರೆಯುತ್ತಾಳೆ. ತಾಯಿಗಿಂತ ಮಿಗಿಲಾದ ಕೌಸಲ್ಯೆಯ ನೆನಪು ಮಾಡಿಕೊಳ್ಳುತ್ತಾಳೆ. ಸುಮಿತ್ರೆಯ ನೆನಪು ಮಾಡಿಕೊಳ್ಳುತ್ತಾಳೆ. ಮೃತ್ಯು ಅವರ ಕೈಯಲ್ಲಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಅದು ಸತ್ಯ. ಇಲ್ಲಿ ಸಾಯಲೂ ಅವಕಾಶವಿಲ್ಲ. ಅನಾಥೆಯಂತೆ ನನ್ನನ್ನು ಈ ರಾಕ್ಷಸಿಯರು ಬೈಯುತ್ತಾರೆ, ಹಳಿಯುತ್ತಾರೆ. ಜೊತೆಗೆ ರಾಮನೂ ಇಲ್ಲ. ಆದರೂ ನಾನು ಬದುಕಿದ್ದೇನಲ್ಲ ಎಂದೋ ಸಾಯಬೇಕಿತ್ತು. ಪುಣ್ಯವೇ ಕ್ಷಯಿಸಿದ ನಾನು ಇದೋ ಸಾಯುತ್ತಿದ್ದೇನೆ. ಜನಕನ ಮಗಳಾಗಿ, ದಶರಥನ ಸೊಸೆಯಾಗಿ, ರಾಮನ ಮಡದಿಯಾಗಿ, ಅಯೋಧ್ಯೆಯ ಚಕ್ರವರ್ತಿನಿಯಾಗಿ ಅನಾಥೆಯಾಗಿ ಸಾಯುತ್ತಿದ್ದೇನೆ. ಸಮುದ್ರದಲ್ಲಿ ಒಡೆದ ನೌಕೆಯಂತೆ ಮುಳುಗಿ ಹೋಗುತ್ತಿದ್ದೇನೆ. ಉದ್ಗರಿಸುತ್ತಾಳೆ. ಧನ್ಯರಾದವರು ಕಮಲಪತ್ರದ ನಯನ, ಪರಾಕ್ರಮಿ ಸಿಂಹದಂತ ಹೆಜ್ಜೆಗಳ, ಪ್ರೀತಿಮಾತನ್ನಾಡುವ ಆ ನನ್ನ ಒಡೆಯನನ್ನು, ರಾಮನನ್ನು ಕಾಣುತ್ತಾರೆ. ನಾನು ಆ ಪಟ್ಟಿಯಲ್ಲಿಲ್ಲ. ಹೇಗೂ ನನಗೆ ಬದುಕಿಲ್ಲ. ಈ ದುಃಖವೇ ಸಾಕು ನನ್ನನ್ನು ಮುಗಿಸಲು. ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೇನೋ ಎಂಥಾ ದಾರುಣ ದುಃಖ ನನ್ನನ್ನು ಕಾಡುತ್ತಿದೆ. ಸಾಯಬೇಕು ಎಂದುಕೊಳ್ಳುತ್ತೇನೆ ಆದರೆ ಸಾಯಲೂ ಅವಕಾಶವಿಲ್ಲ. ರಾಕ್ಷಸಿಯರು ಕಣ್ಣಿಟ್ಟು ಕಾಯುತ್ತಿದ್ದಾರೆ. ಈ ಮನುಷ್ಯತ್ವಕ್ಕೇ ಧಿಕ್ಕಾರ. ಈ ಪರಾಧೀನತೆಗೆ ಧಿಕ್ಕಾರ. ಹೀಗೆಲ್ಲಾ ಮುಖತಗ್ಗಿಸಿ ಆ ಬಾಲೆ ವಿಲಪಿಸಿದರೆ, ಅತ್ತರೆ ಕೇಳುವವರು ಯಾರು. ಬುದ್ಧಿ ಸ್ವಾಧೀನವಿಲ್ಲದಂತೆ, ಹುಚ್ಚಳಂತೆ ಸೀತೆ ಶೋಕಿಸುತ್ತಾಳೆ. ದುಃಖ ತಡೆಯಲಾರದೆ ಮಣ್ಣಲ್ಲಿ ಹೊರಳಾಡುತ್ತಾಳೆ.

ತನ್ನ ಕಥೆಯನ್ನು ನೆನಪು ಮಾಡಿಕೊಳ್ಳುತ್ತಾಳೆ. ಹೇಗೆ ಮೋಸವಾಯಿತು ನನಗೆ. ರಾಮನಿಗೆ, ನನಗೆ ಮೋಸವನ್ನು ಮಾಡಿ, ಚಿನ್ನದ ಜಿಂಕೆಯ ರೂಪವನ್ನು ತೋರಿ, ನನ್ನೊಡೆಯನನ್ನು ಎಲ್ಲೋ ಕರೆದುಕೊಂಡು ಹೋಗಿ, ವಂಚನೆಯಿಂದ ನನ್ನನ್ನು ಇಲ್ಲಿಗೆ ಕರೆತರಲಾಯಿತು. ಅವಳಿಗೆ ತಾನು ಕೂಗಿಕೊಂಡ ನೆನಪಾಯಿತು. ಈಗ ನೋಡಿದರೆ ರಾಕ್ಷಸಿಯರ ಮಧ್ಯೆ. ನನಗೆ ಜೀವನ ಬೇಡ. ರಾಮನಿಲ್ಲದೇ ರಾಕ್ಷಸಿಯರ ಮಧ್ಯೆ ಬದುಕಿದರೆ ಯಾವ ಪ್ರಯೋಜನವಿದೆ? ಸಂಪತ್ತೇಕೆ ನನಗೆ? ಆಭರಣಗಳು, ಭೂಷಣಗಳು ಏಕೆ ನನಗೆ? ಹೃದಯ ನನ್ನದು ಕಲ್ಲಿನಿಂದ ಮಾಡಲ್ಪಟ್ಟಿದ್ದಿರಬಹುದು. ಇಷ್ಟಾದರೂ ಒಡೆದೇ ಹೋಗುವುದಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ತನ್ನನ್ನೇ ತಾನು ಜರಿದುಕೊಳ್ಳುತ್ತಾಳೆ. ಧಿಕ್ಕಾರ ನನಗೆ, ಅನಾರ್ಯೆ ನಾನು, ಅಸತಿ ನಾನು. ಅಂತಹ ರಾಮನಿಂದ ದೂರವಾಗಿ ಬದುಕಿದ್ದೇನಲ್ಲ. ರಾಮನ ಮೇಲೆ ಪ್ರೀತಿಯಿದ್ದಿದ್ದರೆ ಇಷ್ಟು ಹೊತ್ತಿಗೆ ಸತ್ತುಹೋಗಬೇಕಾಗಿತ್ತು ನಾನು. ಯಾಕೆ ನನಗಿನ್ನೂ ಬದುಕುವ ಆಸೆ? ಯಾಕೆ ಸುಖದ ನಿರೀಕ್ಷೆ?

ರಾಕ್ಷಸಿಯರಿಗೆ ಸೀತೆ ಧೈರ್ಯವಾಗಿ ಹೇಳಿದಳು. ಈ ನನ್ನ ಶರೀರವನ್ನು ಸೀಳಿ ಹಾಕಿ, ತಿಂದು ಬಿಡಿ. ಅದಕ್ಕಿಂತ ಮೊದಲು ನಾನೇ ಬಿಡುತ್ತೇನೆ ಶರೀರವನ್ನು. ಈ ದುಃಖವನ್ನು ಸಹಿಸಲಾರೆ. ರಾವಣನನ್ನು ಮದುವೆಯಾಗಬೇಕೆ? ಅವನನ್ನು ಎಡಗಾಲಿನ ತುದಿಯಿಂದ ಕೂಡಾ ಮುಟ್ಟುವುದಿಲ್ಲ. ಆ ರಾಕ್ಷಸನಿಗೆ ಧಿಕ್ಕಾರ. ತಿರಸ್ಕಾರವನ್ನು ಕೂಡಾ ಅರ್ಥಮಾಡಿಕೊಳ್ಳುವುದಿಲ್ಲ. ಪುಲಸ್ತ್ಯರ ವಂಶದವನಾಗಿ ಹೀಗೆಲ್ಲಾ ಮಾಡುವುದೇ? ಪರಸತಿಯನ್ನು ಬಯಸುವುದೇ? ಬೇಕಿದ್ದರೆ ನನ್ನನ್ನು ಶಸ್ತ್ರಗಳಿಂದ ಕೊಯ್ದುಹಾಕಿ. ಖಡ್ಗಾದಿಗಳಿಂದ ಸೀಳಿ ನನ್ನನ್ನು. ನಾನು ರಾವಣನನ್ನು ಒಪ್ಪಿಕೊಳ್ಳುವುದಿಲ್ಲ. ನಿಮ್ಮ ಪ್ರಲಾಪಕ್ಕೆ ಅರ್ಥವಿಲ್ಲ. ಇದು ಆಗುವಂಥದ್ದಲ್ಲ ಎಂದು ಹೇಳಿ ರಾಮನ ನೆನಪು ಮಾಡಿಕೊಳ್ಳುತ್ತಾಳೆ.

ಪ್ರಾಜ್ಞನಾದ, ಸನ್ನಡತೆಯ, ಕರುಣಾಶೀಲನಾದ ನನ್ನ ಪ್ರಭು ಕರುಣೆಯನ್ನೇ ಕಳೆದುಕೊಂಡನಾ? ಏಕೆ ಬರುತ್ತಿಲ್ಲ? ಇಷ್ಟಾದರೂ ರಾಮನ ಮೇಲೆ ಆರೋಪವಿಲ್ಲ. ನನ್ನ ಭಾಗ್ಯಕ್ಷಯದಿಂದಲಾಗಿ ರಾಮನಿಗೆ ನನ್ನ ಮೇಲೆ ಕರುಣೆ ಇಲ್ಲದಾಯಿತೇ? ಅದಿಲ್ಲದಿದ್ದರೆ ನನ್ನನ್ನೇಕೆ ಬಂದು ಕಾಪಾಡುತ್ತಿಲ್ಲ? ಶಕ್ತಿಯಿಲ್ಲವೆಂದೇನಲ್ಲ. ಜನಸ್ಥಾನದಲ್ಲಿ 14,000 ರಾಕ್ಷಸರನ್ನು ಒಬ್ಬಂಟಿಯಾಗಿ ಎದುರಿಸಿದವನು ಏಕೆ ನನ್ನನ್ನು ಕಾಪಾಡುತ್ತಿಲ್ಲ? ಈ ರಾವಣ ರಾಮನ ಮುಂದೆ ಅಲ್ಪವೀರ್ಯ. ಅವನನ್ನು ಕೊಲ್ಲುವ ಶಕ್ತಿ ರಾಮನಿಗೆ ಖಂಡಿತವಾಗಿ ಇದೆ. ಅಂದು ವಿರಾಧನನ್ನು ಕೊಂದವನು ನನ್ನನ್ನು ಏಕೆ ಕಾಪಾಡುತ್ತಿಲ್ಲ? ಸಮುದ್ರ ಮಧ್ಯೆ ಲಂಕೆಯಿದೆ. ಅದನ್ನು ದಾಟಿ ಬರಲು ಆಗುತ್ತಿಲ್ಲವೆಂದೇನಲ್ಲ. ರಾಮನ ಬಾಣದ ಮುಂದೆ ಸಮುದ್ರವೇನೂ ಅಲ್ಲ. ಮತ್ತೇನು ಕಾರಣ? ನನ್ನನ್ನೇಕೆ ಅರಸಿ ಬರುತ್ತಿಲ್ಲ? ನಾನೆಂದರೆ ಅವನಿಗೆ ಇಷ್ಟ ತಾನೆ? ಬಹುಶಃ ರಾಮನಿಗೆ ನಾನಿಲ್ಲಿ ಇದ್ದೇನೆಂಬುದು ಗೊತ್ತಿಲ್ಲ. ಗೊತ್ತಾದ ಮೇಲೆ ರಾಮ ಸಹಿಸುತ್ತಾನಾ? ನನ್ನನ್ನು ಅಪಹರಿಸಿ ತಂದಿದ್ದನ್ನು, ಹೀಗೆ ಬೈದು ಭಂಗಿಸುವುದನ್ನು, ಹಿಂಸಿಸುವುದನ್ನು. ಇಲ್ಲ, ಸಾಧ್ಯವೇ ಇಲ್ಲ. ಅವನಿಗೆ ಗೊತ್ತಾಗಿರಲಿಕ್ಕಿಲ್ಲ. ಹೇಗೆ ತಾನೇ ಗೊತ್ತಾಗಬೇಕು? ಗೊತ್ತಾಗುವುದಾದರೆ ಜಟಾಯುವಿನ ಮೂಲಕ ಗೊತ್ತಾಗಬೇಕಿತ್ತು. ಪಾಪ, ಆ ಜಟಾಯುವನ್ನು ಈ ದುರುಳ ಕೊಂದುಹಾಕಿದನಲ್ಲ. ಯಾರು ಹೋಗಿ ರಾಮನಿಗೆ ಹೇಳಬಹುದಿತ್ತೋ ಅವನನ್ನು ರಾವಣ ಕೊಂದುಬಿಟ್ಟ. ಆ ಅವಕಾಶವೂ ಇಲ್ಲ. ಹಾಗಾಗಿ ಅವಳು ಅವನಿಗೆ ಹೇಳಿದ್ದಳು ರಾಮನನ್ನು ಕರೆದುಕೊಂಡು ಬಾ ಎಂದು. ಆದರೆ ಅವನಿಗೆ ಸಹಿಸಲು ಆಗಲಿಲ್ಲ. ಹಾಗಾಗಿ ಯುದ್ಧವನ್ನು ಮಾಡಿದ.

ಜಟಾಯು ಅಂದು ಮಾಡಿದ್ದು ಮಹತ್ಕಾರ್ಯ ಎಂದು ನೆನಪಿಸಿಕೊಳ್ಳುತ್ತಾಳೆ. ಸಾಮಾನ್ಯರು ಆ ಕಾರ್ಯವನ್ನು ಮಾಡಲು ಸಾಧ್ಯವಿಲ್ಲ. ವೃದ್ಧನಾದರೂ ಕೂಡ ರಾವಣನಿಗೆ ಯುದ್ಧವನ್ನು ಕೊಟ್ಟವವನು. ರಾವಣನನ್ನು ಹೊಡೆದುರುಳಿಸಿದವನು. ಅವನ ರಥವನ್ನು ಧ್ವಂಸಮಾಡಿದವನು. ಬಿಲ್ಲು ಮುರಿದು, ಬತ್ತಳಿಕೆಯನ್ನು ಕಿತ್ತೆಸೆದವನು. ಕವಚವನ್ನು ಹರಿದು, ಸಾರಥಿಯನ್ನು ಕೊಂದವನು. ರಾವಣನ ಕೈ ಕಡಿದವನು. ಅಂತಹ ಜಟಾಯುವಿನ ಭವ್ಯ ಚಿತ್ರ ಹೃದಯದಿಂದ ಮಾಸಿಲ್ಲ. ಅದು ಅಮರ ಚಿತ್ರ ಸೀತೆಯ ಹೃದಯದಲ್ಲಿ. ರಾಮನಿಗೆ ಗೊತ್ತಾದರೆ ಅವನ ಬಾಣಗಳಿಂದ ಈ ಲೋಕವನ್ನು ರಾಕ್ಷಸ ಶೂನ್ಯವನ್ನಾಗಿ ಮಾಡುತ್ತಾನೆ. ಲಂಕೆಯನ್ನು ಧ್ವಂಸ ಮಾಡಿಯಾನು. ಸಮುದ್ರವನ್ನು ಒಣಗಿಸಿಯಾನು. ನೀಚ ರಾವಣನ ಹೆಸರನ್ನು ಅಳಿಸಿಯಾನು. ಈ ನನ್ನ ಕಣ್ಣೀರು ನೂರಾಗಿ ಸಾವಿರವಾಗಿ ಲಕ್ಷ ಕೋಟಿಯಾದೀತು ಲಂಕೆಯಲ್ಲಿ. ಮನೆ-ಮನೆಯಲ್ಲಿ ರಾಕ್ಷಸಿಯರು ಅತ್ತಾರು. ಸೀತೆಯ ಮಾತು ಸತ್ಯವಾಗುತ್ತದೆ. ಅದು ಹೇಗಾದರೂ ರಾಮ ಹುಡುಕಿ ಲಂಕೆಗೆ ಬಂದಾನು. ಬಂದರೆ ಮುಗಿಯಿತು. ರಾಮ-ಲಕ್ಷ್ಮಣರ ಕಣ್ಣಿಗೆ ಲಂಕೆ ಬಿದ್ದರೆ ಉಳಿಯಲು ಸಾಧ್ಯವಿಲ್ಲ. ಏನಾದೀತು ಲಂಕೆ? ಎಲ್ಲಿ ನೋಡಿದರೂ ಚಿತೆ. ಚಿತೆಯ ಧೂಮ. ಆಕಾಶದಲ್ಲಿ ಎಲ್ಲಿ ನೋಡಿದರೂ ಗೃಧ್ರಗಳು. ಲಂಕೆಗೆ ಲಂಕೆಯೇ ಅನತಿ ಕಾಲದಲ್ಲಿ ಸ್ಮಶಾನವಾದೀತು. ಅವಳಿಗೆ ಇದ್ದಕ್ಕಿದ್ದಂತೆ ಭರವಸೆ ಬಂತು. ಹೆಚ್ಚುಕಾಲವಿಲ್ಲ. ಬೇಗ ನನ್ನ ಇಷ್ಟ ನೆರವೇರುತ್ತದೆ. ರಾಮ ಬರುತ್ತಾನೆ ಲಂಕೆಗೆ. ಕಾಪಾಡುತ್ತಾನೆ ನನ್ನನ್ನು. ರಾಕ್ಷಸಿಯರಿಗೆ ಸೀತೆ ಹೇಳಿದಳು. ನೀವು ಈ ದಾರಿಯಲ್ಲಿ ಮುಂದೆ ಹೋದರೆ ನಾಶ ಕಾದಿದೆ ನಿಮಗೆ ಎಂದು ಎಚ್ಚರಿಸಿದಳು. ಲಂಕೆಯಲ್ಲಿ ಅಪಶಕುನಗಳಾಗುತ್ತಿವೆ. ಈ ಅಪಶಕುನಗಳನ್ನು ಕಂಡರೆ ಲಂಕೆಗೆ ಹೆಚ್ಚು ಕಾಲವಿಲ್ಲ. ಲಂಕೆ ವಿಧವೆಯಾಗುತ್ತಾಳೆ. ರಾವಣ ಸಾಯುತ್ತಾನೆ.

ಕ್ರೂರವಾದ ಹೇಸಿಗೆ ಮಾತುಗಳನ್ನು ಮತ್ತೆ ಮತ್ತೆ ಸೀತಯ ಹತ್ತಿರ ಆಡ್ತಾರೆ. ಮತ್ತೆಲ್ಲಾ ಕೂಡ್ಕೊಂಡು ಹೇಳ್ತಾರೆ ಪಾಪನಿಶ್ಚಯಳೇ, ಅವಳ ನಿಶ್ಚಯ ಪಾಪದ್ದು ಅಂತ. ಅವರು ಹೇಳುವುದು ಈಗ ನಿನ್ನನ್ನು ಕೊಂದು ತಿನ್ನುತ್ತೇವೆ, ಪಾಪ ನಿಶ್ಚಯ ನೀನು, ಸುಖವಾಗಿ ನಿನ್ನ ಮಾಂಸವನ್ನು ತಿನ್ನುತ್ತೇವೆ ಹೀಗೆಲ್ಲ ಬಂದು ಆಕೆಯನ್ನು ಎಲ್ಲರೂ ಮುತ್ತಿ ಮುಸುಕುವಾಗ ಮಿತಿಮೀರಿ ಪೀಡಿಸುವಾಗ ಏನಾಗಿರಬಹುದು? ಹನುಮಂತ ಧುಮುಕಿರಬಹುದಾ ಅಲ್ಲಿ ಅವರ ಮಧ್ಯದಲ್ಲಿ? ಕೊಂದು ಬಿಡುತ್ತೇನೆ ಎನ್ನುವ ವಾತಾವರಣ ನಿರ್ಮಾಣವಾಗಿಬಿಟ್ಟಿದೆ ಅಲ್ಲಿ ಕೊಂದೇ ಬಿಡುತ್ತೇನೆ ಎನ್ನುವ ವಾತಾವರಣ ನಿರ್ಮಾಣವಾಗಿಬಿಟ್ಟಿದೆ ಹನುಮಂತ ಬಂದುಬಿಟ್ಟನಾ? ಮತ್ತೆ …? ಗಾಢನಿದ್ದೆಗೆ ಎಚ್ಚರವಾಯಿತು. ಅವರ ಪೈಕಿಯಲ್ಲಿ ಹಿರಿಯಳಾದ ತ್ರಿಜಟಾ ಎನ್ನುವ ರಾಕ್ಷಸಿಯು ಅತಿವಿನಯವಂತಳು. ಅವಳು ಸೀತೆಯನ್ನು, ಉಳಿದ ರಾಕ್ಷಸಿಯರನ್ನು ನೋಡ್ತಾಳೆ. ಇನ್ನೇನು ಸೀತೆಯನ್ನು ತಿಂದೇಬಿಡ್ತಾರೋ ಎನ್ನುವ ಹಾಗಿತ್ತು ಪರಿಸ್ಥಿತಿ. ತ್ರಿಜಟೆ ಎದ್ದು ಒಂದು ಕೂಗನ್ನು ಹಾಕಿದಳು, ಸೀತೆ ತಿಂತೀರಾ? ಅನಾರ್ಯರೇ, ನಿಮ್ಮನ್ನು ನೀವೇ ತಿಂದುಕೊಳ್ಳಿ. ಸೀತೆಯು ಜನಕರಾಜನ ಮಗಳು, ದಶರಥನ ಸೊಸೆ ಅಂತಹ ಪ್ರೀತಿಯ ಬಗ್ಗೆ ಕೆಟ್ಟ ಮಾತನ್ನಾಡಿದರೆ, ಒಳಿತಾಗದು ಮುಂದೆ ನೆನಪಿರಲಿ. ಆಗ ಆ ರಾಕ್ಷಸಿಯರಿಗೆ ಗಾಬರಿಯಾಯಿತು. ಸೀತೆಗೆ ಆಶ್ಚರ್ಯವಾಯಿತು, ತ್ರಿಜಟೆಯ ಧೈರ್ಯವನ್ನು ನೋಡಿ…!

ಅವಳಿಗೆ ನಿದ್ದೆಯೊಳಗಿನ ಕನಸು ಕೊಟ್ಟ ಶಕ್ತಿಯದು. ನನಸಾಗುವ ಕನಸು. ನೋಡಿ ನನಗೊಂದು ಸ್ವಪ್ನ ಬಿದ್ದಿದೆ. ದಾರುಣ ಸ್ವಪ್ನ. ರೋಮರೋಮಗಳು ಮೈನಿಮಿರುವಂತಿದೆ ನನ್ನ ಸ್ವಪ್ನ. ಆ ಸ್ವಪ್ನದ ಪ್ರಕಾರ ರಾಕ್ಷಸರೆಲ್ಲ ನಾಶವಾಗ್ತಾರೆ. ಸೀತಾಪತಿ ಗೆಲ್ತಾನೆ. ರಾಮನ ವಿಜಯದ ಮತ್ತು ರಾಕ್ಷಸರ ಸರ್ವನಾಶದ ಕನಸು. ಹೆದರಿಕೆಯಾಯಿತಂತೆ ಉಳಿದ ರಾಕ್ಷಸಿಯರಿಗೆ. ನಡುಗಲು ಆರಂಭಿಸಿದರಂತೆ, ಯಾಕೆಂದರೆ ಪಾಪ ಇದ್ದಾಗ ಭೀತಿ ಬರುವುದು ಸಹಜ. ಎಲ್ಲ ಬೆದರಿ, ತ್ರಿಜಟೆಯ ಮುಂದೆ ಮಂಡಿಯೂರಿ ನಿನ್ನ ಸ್ವಪ್ನದ ಕುರಿತು ಹೇಳು ಎನ್ನುವ ಕೆಟ್ಟ ಕುತೂಹಲ ಬಂದಿದೆ ಅವರಲ್ಲಿ. ಬೆಳಗಿನ ಜಾವ ಬಿದ್ದ ಸ್ವಪ್ನ ಸತ್ಯವಾಗ್ತದೆ. ಹಾಗಾಗಿ ಹೇಳು ಎಂದು ಕೈಕಟ್ಟಿ ಅವಳ ಮುಂದೆ ಕೂತಿದಾರೆ. ತುಂಬಾ ಸೊಗಸಾಗಿರುವ ಸ್ವಪ್ನ. ತ್ರಿಜಟೆ ಕಥೆ ಹೇಳ್ತಾ ಇದಾಳೆ, ಆ ಸ್ವಪ್ನದ ಪ್ರಕಾರ ರಾಮ ಬರ್ತಾ ಇದಾನೆ ಲಂಕೆಯ ಕಡೆಗೆ. ಪಲ್ಲಕ್ಕಿಯನ್ನೇರಿ ರಾಮ ಬರ್ತಾ ಇದಾನೆ. ಆನೆಯ ದಂತದಿಂದ ನಿರ್ಮಿಸಿದ ಪಲ್ಲಕ್ಕಿ ಆಕಾಶದಲ್ಲಿ ಗಾಳಿಯಲ್ಲಿ ತೇಲಿ ಬರ್ತಾ ಇದೆ. ಆ ಭವ್ಯವಾದ ಪಲ್ಲಕ್ಕಿಯನ್ನು ಸಾವಿರ ಹಂಸಗಳು ಹೊತ್ತು ತರ್ತಾ ಇದೆ. ಸ್ವಚ್ಛ ಬಿಳಿಯ ಬಟ್ಟೆಯನ್ನು ಹಾಕಿಕೊಂಡಿದ್ದಾನೆ ರಾಮ. ಬಿಳಿಯ ಮಾಲೆಯನ್ನು ಹಾಕಿಕೊಂಡಿದಾನೆ. ಈ ಬಿಳಿಯ ಬಟ್ಟೆ, ಬಿಳಿಯ ಮಾಲೆ ಎಲ್ಲ ಸ್ವಪ್ನದಲ್ಲಿ ಕಂಡರೆ, ಬಹಳ ಶ್ರೇಷ್ಠ. ರಾಮ ಲಕ್ಷ್ಮಣನ ಜೊತೆಗೆ ಬರ್ತಾ ಇದಾನೆ. ಇಂಥದ್ದೊಂದು ದಿವ್ಯವಾದ ಸ್ವಪ್ನವನ್ನು ನಾನು ಕಂಡೆ. ಸೀತೆಯನ್ನೂ ಕಂಡಳಂತೆ. ಬಿಳಿಯ ಬಟ್ಟೆಯುಟ್ಟು, ಸಾಗರದಿಂದ ಮೇಲೆದ್ದ ಬಿಳಿಯ ಪರ್ವತವ ಏರಿ, ಸೀತೆ ರಾಮನನ್ನು ಸೇರಿದಾಳೆ. ಆ ದೃಶ್ಯ ಸೂರ್ಯನನ್ನು ಸೂರ್ಯಪ್ರಭೆ ಸೇರಿದಂತಿತ್ತು. ಅದನ್ನು ಕಂಡೆ ನಾನು ಎಂದು ತ್ರಿಜಟೆ ಸ್ವಪ್ನಕಥೆಯನ್ನು ಹೇಳಿದಳು.

ಕನಸು ಕಾಣಬೇಕು ಮನುಷ್ಯ. ಇಲ್ಲದಿದ್ದರೆ ಸಾಧನೆ ಮಾಡುವುದು ಹೇಗೆ.. ಸ್ವಪ್ನದಲ್ಲಿ ರಾಮ ಕಂಡರೆ ಅಂಥವರಿಗೆ ಪಥನವುಂಟಾ..? ತ್ರಿಜಟೆಗೆ ಕಂಡ ಸ್ವಪ್ನದ ಫಲವಾಗಿ ಸೀತೆಗೆ ಒಳಿತಾಯಿತು. ಆ ಸ್ವಪ್ನದ ಫಲವಾಗಿ ಮುಂದೆ ರಾಕ್ಷಸಿಯರ ಜೀವ ಉಳಿಯುವುದು. ತ್ರಿಜಟೆಯು ಸ್ವಪ್ನವನ್ನು ಕಾಣದಿದ್ದರೆ, ಉಳಿದ ರಾಕ್ಷಸಿಯರು ಕೇಳದಿದ್ದರೆ ಅವರ ನಾಶಕ್ಕೆ ಕಾರಣವಾಗ್ತಿತ್ತು. ಇದರ ಸ್ವಪ್ನಕಥೆಯ ಸ್ವಾರಸ್ಯವನ್ನು ಮುಂದಿನ ಪ್ರವಚನದಲ್ಲಿ ಕೇಳೋಣ. ಬದುಕೊಂದು ಸುಂದರ ಸ್ವಪ್ನ ರಾಮಕೃಪೆಯಿಂದಾಗಲಿ. ಸ್ವಪ್ನದಲ್ಲಿ ರಾಮನಿರಲಿ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments