ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ನಾಲ್ಕು ಬಗೆಯ ಅವಸ್ಥೆಗಳನ್ನ ಬಲ್ಲವರು ನಿರೂಪಣೆ ಮಾಡ್ತಾರೆ. ಮೊದಲನೆಯದು ಜಾಗೃತ್. ಹಾಗೆಂದರೆ ಹೊರಜಗತ್ತಿನೊಡನೆ ನಮ್ಮ ಇಂದ್ರಿಯಗಳು ಸಂಪರ್ಕದಲ್ಲಿದ್ದುಕೊಂಡು, ಹೊರಜಗತ್ತಿನ ಶಬ್ಧಗಳು, ಸ್ಪರ್ಶಗಳು, ರೂಪಗಳು ರಸಗಂಧಗಳನ್ನು ಅರಿಯುವುದು. ಸ್ವಪ್ನದಲ್ಲಿ ಹೊರಜಗತ್ತಿನ ಸಂಸರ್ಗವಿಲ್ಲ. ಕಣ್ಣುಗಳು ಮುಚ್ಚಿರುತ್ತವೆ ಕಿವಿಗಳು ಏನನ್ನೂ ಕೇಳ್ತಿರೋದಿಲ್ಲ. ಆದರೆ ಒಳಗಡೆಗೆ ಏನೇನೋ ನಡೀತಾ ಇರ್ತದೆ. ಸುಷುಪ್ತಿಯಲ್ಲಿ ಯಾವುದೂ ಇಲ್ಲ. ಯಾವ ಭಾವಗಳು, ಆಲೋಚನೆಗಳೂ ಇಲ್ಲ. ಕೇವಲ ತಮಸ್ಸು ಮಾತ್ರ. ತುರೀಯದಲ್ಲಿ ಬೆಳಕಿದೆ. ದೇವದೇವತೆಗಳ ದರ್ಶನವಿದೆ. ತುರೀಯವೇ ತುಟ್ಟತುದಿಗೇರಿದರೆ ಬ್ರಹ್ಮಾನಂದದ ಅದ್ಭುತವಿದೆ. ಈ ನಾಲ್ಕೂ ಕೂಡ ಬೇರೆ ಬೇರೆ ಪ್ರಪಂಚಗಳು. ಒಂದಕ್ಕೊಂದು ಸಂಬದ್ಧವಾಗುವುದು ಬಹಳ ಕಷ್ಟ. ಆದರೆ ಅವು ಹೇಗೆ ಸಂಬಂಧಪಡಬಹುದು ಎಂಬುದಕ್ಕೆ ತ್ರಿಜಟೆ ಉದಾಹರಣೆ. ಕೆಲವು ಬಾರಿ ಸ್ವಪ್ನವು ಮುಂದಾಗುವುದನ್ನು ನೇರವಾಗಿ ತೋರಿಸಬಹುದು. ಇನ್ನು ಕೆಲವು ಬಾರಿ ತನ್ನದೇ ಭಾಷೆಯಲ್ಲಿ ಸ್ವಪ್ನವು ಮುಂದಾಗುವುದನ್ನು ಹೇಳಬಹುದು. ಇಲ್ಲಿ ಒಳಿತನ್ನು ಸ್ವಪ್ನವು ತ್ರಿಜಟೆಗೆ ಹೇಳ್ತಾಯಿದೆ. ಅಥವಾ ಸೀತೆಗೆ ಒಳಿತನ್ನು ತ್ರಿಜಟೆಯ ಸ್ವಪ್ನ ಹೇಳ್ತಾಯಿದೆ. ಇದೂ ಆಗಬಹುದು. ಯಾರದೋ ಸ್ವಪ್ನ ಯಾರದೋ ಭವಿಷ್ಯತ್ತನ್ನು ಸೂಚನೆ ಮಾಡಬಹುದು. ನಮಗೆ ಅರ್ಥವಾಗುವುದೇನೆಂದರೆ ತ್ರಿಜಟೆಗೂ ಸೀತೆಗೂ ಎಂತಹ ಒಂದು ಭಾವಬಂಧ ಇತ್ತು ಅಂದ್ರೆ ಸೀತೆಯ ಮುಂದಾಗುವಿಕೆ ತ್ರಿಜಟಿಗೆ ಗೋಚರಿಸುವಷ್ಟು. ತ್ರಿಜಟೆ ಏಳುವಾಗ ಸೀತೆ ಬಹಳ ದಾರುಣ ಸ್ಥಿತಿಯಲ್ಲಿದಾಳೆ. ಅವಳು ಬದುಕುವುದೇ ಕಷ್ಟ ಎನ್ನುವ ಸ್ಥಿತಿಗೆ ಹೋಗಿದಾಳೆ. ಆತ್ಮಘಾತಕ್ಕೆ ಮನಮಾಡಬೇಕು ಎನ್ನುವ ಸ್ಥಿತಿಯಲ್ಲಿ ಸೀತೆ ಇದಾಳೆ. ಆಗ ತ್ರಿಜಟೆಗೆ ಎಚ್ಚರವಾಗಿದ್ದು. ಎಚ್ಚರವಾದಾಗ ನೋಡಿದ್ರೆ ನಾಯಿಗಳು ಜಿಂಕೆಯನ್ನು ಮುತ್ತುವ ಹಾಗೆ ಸೀತೆಯನ್ನು ರಾಕ್ಷಸಿಯರು ಮುತ್ತಿದಾರೆ. ಸೀತೆಯನ್ನ ತಿಂತೇನೆ ತಿಂತೇನೆ ಅಂತನೆ ಹೇಳ್ತಾಯಿದ್ದಿದ್ದು ಅವರೆಲ್ಲರೂ ಕೂಡ. ನಿಮ್ಮನ್ನು ನೀವೇ ತಿಂದುಕೊಳ್ಳಿ ಅಥವಾ ಒಬ್ಬರಿಗೊಬ್ಬರು ತಿಂದುಕೊಳ್ಳಿ. ಸೀತೆಯನ್ನು ನೀವು ತಿನ್ನಲಾರಿರಿ. ಮಾತ್ರವಲ್ಲ ಸೀತೆಯ ಪ್ರಾಣಕ್ಕೆ ಎರವಾಗುವ ಮಾತಿರಲಿ, ನಿಮ್ಮ ಪ್ರಾಣ ಉಳಿಬೇಕಾದರೆ ಸೀತೆ ಬೇಕು. ಸೀತೆಯ ರಕ್ಷಣೆ ಬೇಕಾಗ್ತದೆ. ಯಾಕೆಂದರೆ ಅಂಥದ್ದನ್ನ ಕಂಡೆ ನಾನು. ಆ ರಾಕ್ಷಸಿಯರೆಲ್ಲ ಹೆದರಿ ಅದೆಂತಹ ಸ್ವಪ್ನ ಅಂತ ಕೇಳೋದಿಕ್ಕೆ ಸುತ್ತುವರೆದು ಕೂತ್ತಕೊಂಡ್ರು. ಆಗ ತ್ರಿಜಟೆ ಹೇಳ್ತಾಳೆ. ಸ್ವಪ್ನ ಪ್ರಾರಂಭವಾಗುವುದೇ ಹಾಗೆ.

ಲಂಕೆಗೆ ಗಗನಮಾರ್ಗದಲ್ಲಿ ಪಲ್ಲಕ್ಕಿಯನ್ನೇರಿ ರಾಮ ಬರ್ತಾ ಇದಾನೆ. ಸಾವಿರ ಸಾವಿರ ಹಂಸಗಳು ಆ ಪಲ್ಲಕ್ಕಿಯನ್ನು ಹೊತ್ತುಕೊಂಡು ಬರ್ತಾ ಇದಾವೆ. ಸ್ವಚ್ಛ ಬಿಳಿಯ ಬಣ್ಣದ ಮಾಲೆಯನ್ನು ರಾಮ ಧಾರಣೆ ಮಾಡಿದಾನೆ. ಜೊತೆಯಲ್ಲಿ ಲಕ್ಷ್ಮಣ ಇದಾನೆ. ಪರಮಹಂಸರ ಹೃದಯವಿಹಾರಿಯು ಹಂಸಗಳ ಮೇಲೇರಿ ಕಾಗೆಗಳ ನಾಡಿಗೆ ಬರ್ತಾ ಇದಾನೆ. ಸ್ವಪ್ನದಲ್ಲಿ ಸೀತೆಯನ್ನು ಕಂಡಿದಾಳೆ. ಸೀತೆ ಕೂಡ ಧವಲವರ್ಣದ ಅಂಬರವನ್ನು ತೊಟ್ಟಿದಾಳೆ. ಸಮುದ್ರದಿಂದ ಪರ್ವತವೊಂದು ಮೇಲೆದ್ದು ಬಂದಿದೆ. ಆ ಪರ್ವತವೂ ಕೂಡ ಬಿಳಿಯ ಬಣ್ಣದಲ್ಲಿದೆ. ಸೀತೆಯು ಆ ಬಿಳಿಯ ಪರ್ವತವನ್ನೇರಿ ನಿಂತಿದಾಳೆ. ಶೋಕಸಾಗರದಿಂದ ಮೇಲೆದ್ದು ಸೀತೆ ಸೌಖ್ಯ ಪರ್ವತವನ್ನು ಏರಿದಾಳೆ. ಮುಖದಲ್ಲಿ ಆನಂದದ ಕಳೆಯಿದೆ. ರಾಮ ಸೀತೆಯರು ಸೇರಿದರು. ಬೆಳಕಿನ ಕಿರಣಗಳು ಬೆಳಕಿನ ಸ್ರೋತಸ್ಸನ್ನು ಸೇರಿತು. ಸ್ವಪ್ನದಲ್ಲಿ ಬೇರೆಬೇರೆ ದೃಶ್ಯಾವಳಿಗಳಿದಾವೆ. ಈಗ ಪಲ್ಲಕ್ಕಿ, ಹಂಸ ಇದೆಲ್ಲ ಮೊದಲ ದೃಶ್ಯಾವಳಿ. ಎರಡನೇ ದೃಶ್ಯಾವಳಿಯಲ್ಲಿ ರಾಮನು ಐರಾವತದಂತಹ ನಾಲ್ಕು ದಂತಗಳ ಗಜವೊಂದನ್ನು ಏರಿದಾನೆ. ಪರ್ವತಾಕಾರದ ನಾಲ್ಕು ದಂತಗಳ ಗಜವನ್ನು ರಾಮನು ಲಕ್ಷ್ಮಣನೊಡನೆ ಏರಿ ಶೋಭಿಸ್ತಾ ಇದಾನೆ. ನಾಲ್ಕು ಪುರುಷಾರ್ಥಗಳು ಧರ್ಮ ಅರ್ಥ ಕಾಮ ಮೋಕ್ಷ ಇವುಗಳನ್ನು ಚತುರ್ಭದ್ರಗಳು ಅಂತ ಕರೀತಾರೆ. ಭದ್ರ ಅಂದ್ರೆ ಮಂಗಲ ಅಂತ. ಧರ್ಮ ಅರ್ಥ ಕಾಮ ಮೋಕ್ಷಗಳೇ ನಾಲ್ಕು ದಂತ. ಜೀವನವೇ ಆನೆ. ಧರ್ಮಾರ್ಥಕಾಮಮೋಕ್ಷ ಪರಿಪೂರ್ಣವಾದ ಬದುಕನ್ನು ಏರಿ ಶೋಭಿಸ್ತಿದಾನೆ ರಾಮ. ರಾಮ ಲಕ್ಷ್ಮಣರು ತಮ್ಮ ಸ್ವಯಂಪ್ರಭೆಯಿಂದ ಶೋಭಿಸ್ತಾ ಇದಾರೆ. ಆ ಎರಡನೇ ದೃಶ್ಯಾವಳಿಯಲ್ಲಿಯೂ ಕೂಡ ಅವರು ಬಿಳಿಯ ಮಾಲೆಯನ್ನು ತೊಟ್ಟು ಅವರು ಸೀತೆಯನ್ನು ಸಮೀಪಿಸ್ತಾರೆ. ಸೀತೆ ಆಕಾಶಮಾರ್ಗದಲ್ಲಿ ಬರ್ತಾ ಇರುವ ತನ್ನ ಪತಿಯಿರುವ ಆನೆಯನ್ನು ಏರ್ತಾಳೆ. ಸ್ವಲ್ಪ ಹೊತ್ತು ರಾಮನ ಮಡಿಲಿನಲ್ಲಿ ಸೀತೆ ಕುತ್ಕೊಂಡಿದಾಳೆ. ಬಳಿಕ ಅಲ್ಲಿಂದ ಏಳ್ತಾಳೆ. ಎದ್ದು ತನ್ನ ಕೈಯಿಂದ ಸೂರ್ಯಚಂದ್ರರನ್ನು ಸವರುತ್ತಿದ್ದಾಳೆ. ಇಲ್ಲಿ ಸ್ವಪ್ನಶಾಸ್ತ್ರ ಏನು ಹೇಳ್ತದೆ ಅಂದ್ರೆ, ಸ್ವಪ್ನಸಮಯದಲ್ಲಿ ಯಾರು ಸೂರ್ಯಮಂಡಲವನ್ನಾಗಲೀ ಅಥವಾ ಚಂದ್ರಮಂಡಲವನ್ನಾಗಲೀ ತನ್ನ ಕೈಯಿಂದ ಮುಟ್ತಾನೋ ಅವನಿಗೆ ಮಹಾರಾಜ್ಯವು ಪ್ರಾಪ್ತವಾಗ್ತದೆ. ಇದು ಮುಂದೆ ಸೀತೆಯು ಅಯೋಧ್ಯೆಯ ಸಾಮ್ರಾಜ್ಞಿಯಾಗುವುದನ್ನು ಸೂಚಿಸ್ತಾ ಇದೆ.

ಬಳಿಕ ಸೀತೆ, ರಾಮಲಕ್ಷ್ಮಣರನ್ನೊಡಗೂಡಿರತಕ್ಕಂತಹ ಆನೆಯು ಲಂಕೆಯ ಮೇಲೆ ಬಂದು ನಿಂತಿತು. ಈಗ ಬೇರೆ ದೃಶ್ಯಾವಳಿ. ರಥ. ಎಂಟು ಬಿಳಿಯ ವೃಷಭಗಳನ್ನ ಕಟ್ಟಿರುವ ರಥವನ್ನೇರಿ ರಾಮ ಬರ್ತಿದಾನೆ. ಪಕ್ಕದಲ್ಲಿ ಸೀತೆ ಇದಾಳೆ. ಮುಂದಿನ ದೃಶ್ಯ ಕೊನೆಗೆ ಬಂದಿದೆ. ಬಿಳಿಯ ಮಾಲೆಯನ್ನು ತೊಟ್ಟ ರಾಮನು ಲಕ್ಷ್ಮಣನೊಡನೆ ಪುಷ್ಪಕ ವಿಮಾನವನ್ನೇರಿದಾನೆ. ದಿವ್ಯವಾಗಿ ಸೂರ್ಯನಂತೆ ಶೋಭಿಸ್ತಾಯಿದೆ ಪುಷ್ಪಕ ವಿಮಾನ. ಅದನ್ನೇರಿ ರಾಮನು ಉತ್ತರ ದಿಕ್ಕಿಗೆ ಅಯೋಧ್ಯೆಯ ಕಡೆಗೆ ಹೊರಟುಹೋದ. ಇದು ರಾಮನ ಸರಣಿಯ ಕೊನೆಯ ಸ್ವಪ್ನ. ನಿಜವೆ. ರಾಮಾಯಣ ಯುದ್ಧ ಮುಗಿದ ಮೇಲೆ, ರಾವಣನ ಸಂಹಾರವಾದ ಬಳಿಕ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಹೋಗಲು ಹೊರಟಿದ್ದ ರಾಮನಿಗೆ ವಿಭೀಷಣ ಒತ್ತಾಯಿಸಿ ಪುಷ್ಪಕವಿಮಾನವನ್ನ ಕೊಡ್ತಾನೆ. ಪುಷ್ಪಕ ವಿಮಾನವನ್ನೇರಿಯೇ ರಾಮ ಅಯೋಧ್ಯೆಗೆ ತೆರಳಿದ್ದು. ತ್ರಿಜಟೆಯ ಈ ಕನಸು ಪ್ರತ್ಯಕ್ಷ ಭವಿಷ್ಯದರ್ಶನ. ಇಷ್ಟು ಹೇಳಿ ಆ ತ್ರಿಜಟೆ ಹೀಗೆ ಸ್ವಪ್ನವನ್ನು ಕಂಡೆ ನಾನು ಅಂತ ಹೇಳ್ತಾಳೆ. ಅವಳೊಂದು ವಿಚಿತ್ರವಾದ ಮಾತನ್ನ ಹೇಳ್ತಾಳೆ. ರಾಮನೆಂದರೆ ವಿಷ್ಣುಪರಾಕ್ರಮ ಅಂತ. ಆಗಿನ ಕಾಲದಲ್ಲಿ ಸಾಮಾನ್ಯವಾಗಿ ಇಂದ್ರನ ಜೊತೆಗೆ ಹೋಲಿಕೆ ಮಾಡುವುದು ಪದ್ಧತಿ. ಆದರೆ ಅವಳು ನೇರವಾಗಿ ರಾಮನನ್ನು ವಿಷ್ಣುಪರಾಕ್ರಮ ಅಂತ ಕರೆದು ಅವಳ ಧ್ಯಾನಸ್ಥಿತಿಯಲ್ಲಿ ಅವಳು ಇನ್ನೂ ಏನೇನನ್ನ ಕಂಡಿದಾಳೆ. ಇವಳಿಗೆ ರಾಮನ ಗುಟ್ಟೇ ಗೊತ್ತಿದೆಯೋ ಏನೋ, ರಾಮನ ಸತ್ಯದರ್ಶನವೇ ಈ ವೃದ್ಧೆಗೆ ಆಗಿದೆಯೋ ಏನೋ ಅಂತ ಅನ್ನಿಸಿಬಿಡ್ತದೆ. ಆಕೆ ಹೇಳಿದ್ದೇನೆಂದರೆ, ಲಕ್ಷ್ಮಣ, ಸೀತೆಯೊಡಗೂಡಿರತಕ್ಕಂತಹ ರಾಮನನ್ನು ಗೆಲ್ಲಲಾಗದು. ಇದು ನಿಶ್ಚಯ. ದೇವತೆಗಳು ರಾಕ್ಷಸರು ಒಡಗೂಡಿ ಬಂದರೂ ಕೂಡ ರಾಮನನ್ನು ಯುದ್ಧದಲ್ಲಿ ಗೆಲ್ಲಲಾಗದು. ಎಂಬ ತೀರ್ಮಾನವನ್ನ ಕೊಡ್ತಾಳೆ. ಇನ್ನು ಮುಂದೆ ಸ್ವಪ್ನದ ದೃಶ್ಯಾವಳಿ ಬದಲಾಗ್ತದೆ. ರಾವಣನನ್ನೂ ಕಾಣ್ತಾಳೆ. ರಾವಣ ಕಂಡಿದ್ದು ಹೇಗೆ ಅಂದ್ರೆ ರಾವಣ ಸಿಂಹಾಸನದ ಮೇಲಿಲ್ಲವಂತೆ. ನೆಲದ ಮೇಲಿದ್ದಾನಂತೆ. ನೆಲದ ಮೇಲೆ ಕುಳಿತುಕೊಂಡು ಎಣ್ಣೆ ಹಚ್ಚಿಕೊಳ್ತಾ ಇದಾನೆ. ಕೆಂಪು ಬಟ್ಟೆಯನ್ನು ತೊಟ್ಟಿದ್ದಾನೆ. ಮತ್ತಿದು ಅನಿಷ್ಟಸೂಚಕವೇ ಹೌದು. ಕುಡೀತಾ ಇದ್ದಾನೆ ಮಧ್ಯವನ್ನಲ್ಲ, ಎಣ್ಣೆಯನ್ನು. ಸ್ವಪ್ನದಲ್ಲಿ ಎಣ್ಣೆಯನ್ನು ಕುಡಿದು ಅಮಲೇರ್ತಾ ಇದೆಯಂತೆ. ಆಮೇಲೆ ಕೆಂಪು ಕಣಗಿಲೆ ಹೂವಿನ‌ ಹಾರವನ್ನು ಹಾಕ್ಕೊಂಡಿದ್ದಾನಂತೆ. ಅಮಂಗಲ ಅದು ಕೂಡ ಮತ್ತೆ. ಇಷ್ಟಾಯ್ತಾ? ಇನ್ನೊಂದು ದೃಶ್ಯಾವಳಿ ಪ್ರಾರಂಭ ಆಯ್ತು ಇದು ಬಿಟ್ಟು. ಆ ದೃಶ್ಯಾವಳಿ ಪುಷ್ಪಕವಿಮಾನದಿಂದ ಆರಂಭವಾಗ್ತದೆ. ಮುಂದೆ‌ ರಾವಣನಿಗೆ ಅನಾಹುತವೇ ಕಾದಿದೆ ಅದರಲ್ಲಿಯೂ ಕೂಡ. ಪುಷ್ಪಕವಿಮಾನದಿಂದ ರಾವಣ ಭೂಮಿಗೆ ಬಿದ್ದು ಬಿಟ್ಟನಂತೆ. ಒಂದು ಹೆಣ್ಣು ಪುಷ್ಪಕವಿಮಾನದಿಂದ ಹಿಡಿದೆಳೆದು ಕೆಡವಿದ್ದಾಳೆ ಭೂಮಿಗೆ. ಎಳೆದಾಡ್ತಾ ಇದ್ದಾಳೆ ಮತ್ತೆ. ರಾವಣನ ತಲೆಯನ್ನು ಬೋಳಿಸಲಾಗಿದೆ. ಕಪ್ಪು ಬಟ್ಟೆಯನ್ನು ರಾವಣ ಸ್ವಪ್ನದಲ್ಲಿ ಹಾಕ್ಕೊಂಡಿದ್ದಾನೆ. ಈ ಸ್ವಪ್ನವು ರಾವಣನ ಪಥನವನ್ನು ಸೂಚನೆ ಮಾಡುವುದು. ಮಾತ್ರವಲ್ಲ, ಹೆಣ್ಣಿಂದಲೇ ಪಥನ. ತಿರುಗಿ ಬಂದಿದೆ ಅದು.

ಈಗ ದೃಶ್ಯಾವಳಿ ಮುಂದುವರೆದಿದೆ. ಇನ್ನೊಂದು ದೃಶ್ಯಾವಳಿಗೆ ಹೋಗ್ತಾ ಇದೆ ಸ್ವಪ್ನ. ಅಲ್ಲಿ ಕತ್ತೆ ಕಟ್ಟಿದ ರಥವನ್ನು ರಾವಣನು ಏರಿದ್ದಾನೆ. ಕೆಂಪು ಮಾಲೆಯನ್ನು ತೊಟ್ಟುಕೊಂಡು, ಕೆಂಪು ಅನುಲೇಪನಗಳನ್ನು ಹಚ್ಚಿಕೊಂಡು ಎಳ್ಳೆಣ್ಣೆಯನ್ನು‌ ಕುಡೀತಾ ಇದ್ದಾನೆ. ನಗ್ತಾ ಇದ್ದಾನೆ ಹುಚ್ಚನಂತೆ. ನೃತ್ಯ ಮಾಡ್ತಾ ಇದ್ದಾನೆ. ಹುಚ್ಚು ಕುಣಿತ. ಕಂಗಾಲಾಗಿದ್ದಾವೆ ಇಂದ್ರಿಯಗಳು. ಆಯ್ತು, ಈ ದೃಶ್ಯಾವಳಿಯ‌ ಕೊನೆ ಹೇಗೆ ಅಂದ್ರೆ, ಕತ್ತೆಯ ಮೂಲಕ ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡಿದ. ಈಗಾಗಲೇ ರಾವಣನ ಜೀವವು ಯಮನೂರಿಗೆ ಮುಖಮಾಡಿ ನಿಂತಿದ್ದನ್ನು ಈ ಸ್ವಪ್ನವು ಸೂಚನೆ ಮಾಡ್ತಾ ಇದೆ.

ಮತ್ತೆ ರಾವಣ ಕಂಡನಂತೆ ಸ್ವಪ್ನದಲ್ಲಿ. ಈ ಸಾರಿ ಕಂಡಿದ್ದು ಹೇಗೆ ಅಂದ್ರೆ ರಾಕ್ಷಸೇಶ್ವರ ರಾವಣ ಕತ್ತೆಯ ಮೇಲೆ ಕೂತಿದ್ದಾನಲ್ಲ, ಅವನಿಗೇನೋ ಭಯ-ಮೋಹಗಳು ಉಂಟಾಗ್ತಾ ಇದೆ. ಇದ್ದಕ್ಕಿದ್ದಂತೆ ಕತ್ತೆಯಿಂದ ತಲೆ ಕೆಳಗಾಗಿ ನೆಲಕ್ಕೆ ಬಿದ್ದ. ಬಿದ್ದವನು ಎದ್ದನಂತೆ, ಗಾಬರಿಗೊಂಡಿದ್ದಾನೆ. ಅಮಲು ಕೂಡ ಏರಿದೆ. ಸಾಕ್ಷಾತ್ ಹುಚ್ಚನಂತೆ ಕಾಣ್ತಾ ಇದ್ದಾನೆ. ದಿಗಂಬರನಾಗಿದ್ದಾನೆ. ಬಟ್ಟೆ ಇಲ್ಲದೆ ಸ್ವಪ್ನದಲ್ಲಿ ಕಾಣೋದು ಅಶುಭ. ಕೆಟ್ಟ ಕೆಟ್ಟ ಮಾತುಗಳನ್ನು ಹಲುಬುತ್ತಾ ಇದ್ದಾನೆ. ಆಮೇಲೆ, ದೊಡ್ಡದೊಂದು ದುರ್ಗಂಧ ಬರ್ತಾ ಇರೋ ಕೊಳಕು ಕೊಳಕಿನ ಕೆಸರಿನ ಹೊಂಡದಲ್ಲಿ ಪ್ರವೇಶ ಮಾಡಿ ಮುಳುಗಿ ಹೋದ ಅದರೊಳಗೆ. ತಲೆ ಕಾಣಲಿಲ್ಲ. ಈ ಒಂದು ದೃಶ್ಯಾವಳಿ.

ಮತ್ತೊಂದು ದೃಶ್ಯಾವಳಿಯಲ್ಲಿ ಕೆಂಪು ಬಟ್ಟೆಯನ್ನು ತೊಟ್ಟಿರತಕ್ಕಂತ ಒಂದು ಹೆಣ್ಣು ಪ್ರಮದಾ. ಆಕೆ ಈ ರಾವಣನ‌‌ ಕೊರಳಿಗೆ ಬಳ್ಳಿ ಹಾಕಿ ದಕ್ಷಿಣಕ್ಕೆ ಎಳೀತಾ ಇದ್ದಾಳೆ. ತೊಟ್ಟಿದ್ದು ಕೆಂಪು ಬಟ್ಟೆ, ಅವಳು ಕಪ್ಪು ಬಣ್ಣದವಳು. ಆಕೆ ತನ್ನ ಮೈಗೆ ಕೆಸರು ಎರೆಚಿಕೊಂಡಿದ್ದಾಳಂತೆ. ರಾವಣ ಒಬ್ಬನಾದ್ರೆ ಬೇರೆ. ‘ನಾನು ಕುಂಭಕರ್ಣನನ್ನೂ ಹೀಗೇ ಕಂಡೆ’. ಆಮೇಲೆ ರಾವಣನ ಮಕ್ಕಳು. ಸುಮಾರು ಮಕ್ಕಳಿದ್ದಾರೆ ರಾವಣನಿಗೆ. ಈ ಎಲ್ಲಾ ಮಕ್ಕಳೂ ತಲೆ ಬೋಳಿಸಿಕೊಂಡಿದ್ದಾರೆ, ಎಳ್ಳೆಣ್ಣೆ ಹಚ್ಕೊಂಡಿದ್ದಾರಂತೆ. ಯಾರ್ಯಾರು ಯಾವುದರ ಮೇಲೆ ಹೋದ್ರು? ಅಂದ್ರೆ, ರಾವಣ ಹಂದಿಯ ಮೇಲೆ ಹೋದ್ನಂತೆ. ಇಂದ್ರಜಿತು ಮೊಸಳೆ ಮೇಲೆ ಕೂತ್ಕೊಂಡು ಹೋಗ್ತಾ ಇದ್ದಾನೆ. ಕುಂಭಕರ್ಣ ಒಂಟೆ ಮೇಲೆ ಕೂತ್ಕೊಂಡಿದ್ದಾನಂತೆ! ಅವುಗಳ ಮೇಲೆ ಕುಳಿತು ದಕ್ಷಿಣಕ್ಕೆ ಹೋಗ್ತಾ ಇದ್ದಾರೆ. ಕೋತಿ ತಾನು ಕೆಟ್ಟಿದ್ದಲ್ಲದೆ ವನವನ್ನೂ ಕೆಡಿಸಿತು ಅನ್ನೋ ಹಾಗೆ ರಾವಣ ತಾನು ಹೋಗೋದಲ್ದೆ ಇಡೀ ಬಳಗವನ್ನೂ ಕರೆದುಕೊಂಡು ಹೋಗ್ತಾ ಇದ್ದಾನೆ. ಇಷ್ಟು ಕೆಟ್ಟದಾ ಲಂಕೆಯಲ್ಲಿ ಕಾಣ್ತಾ ಇರ್ತಕ್ಕಂತದ್ದು? ಅಂದ್ರೆ ಇಲ್ಲ. ತುಂಬ ಒಳ್ಳೇದೂ ಕಂಡಿದೆ‌ ಅದರ ಜೊತೆಗೆ. ದೃಶ್ಯಾವಳಿ ಮುಂದುವರೆದಿದೆ. ಆ ಮುಂದುವರಿದ ದೃಶ್ಯಾವಳಿಯಲ್ಲಿ ಒಬ್ಬನೇ ಒಬ್ಬ ರಾಕ್ಷಸನಾಯಕನು ಅತಿವೈಭವದಿಂದ ಗೋಚರಿಸ್ತಿದ್ದಾನೆ‌. ವಿಭೀಷಣ ಮಾತ್ರವೇ ಶ್ವೇತಚ್ಛತ್ರದ ನೆರಳಲ್ಲಿ ಕಂಗೊಳಿಸ್ತಿದ್ದಾನೆ. ಬಿಳಿಯ ಬಟ್ಟೆಯನ್ನು ಧಾರಣೆ ಮಾಡಿದ್ದಾನೆ. ಬಿಳಿಯ ಮಾಲೆಯನ್ನು ಹಾಕ್ಕೊಂಡಿದ್ದಾನೆ. ಬಿಳಿಯ ಗಂಧ(ಶ್ರೀಗಂಧ)ವನ್ನು ಅನುಲೇಪನ ಮಾಡ್ಕೊಂಡಿದ್ದಾನೆ ವಿಭೀಷಣ. ಅವನನ್ನುದ್ದೇಶಿಸಿ ಶಂಖ ದುಂದುಭಿಗಳ ಘೋಷವನ್ನು ಮಾಡಲಾಗ್ತಾ ಇದೆ. ನೃತ್ಯ-ಗೀತಗಳು ಅವನನ್ನು ಅಲಂಕರಿಸಿವೆ. ಕೊನೆಗೂ ಲಂಕೆಯಲ್ಲಿ ಅತಿದೀರ್ಘವಾದ ಕತ್ತಲಿನ ರಾಜ್ಯದ ಬಳಿಕ ಧರ್ಮಕ್ಕೊಂದು ಅವಕಾಶ ಸಿಗಲಿದೆ. ಈ ಸ್ವಪ್ನದ ಅರ್ಥ ಅದು.

ಮತ್ತೊಂದು ದೃಶ್ಯಾವಳಿಯಲ್ಲಿ ಪರ್ವತಾಕಾರದ ದಿವ್ಯವಾದ ಒಂದು ಆನೆಯನ್ನು ಏರಿ ಮೆರೆದನು ವಿಭೀಷಣ. ಯಾರಿದ್ದಾರೆ ಅವನ ಜೊತೆಗೆ ಲಂಕೆಯವರು? ಅಂದ್ರೆ, ಅವನ ನಾಲ್ವರು ಸಚಿವರು. ಅವರು ವಿಭೀಷಣನ ಬೆನ್ನು ಬಿಡೋರೆ ಅಲ್ಲ. ಅನಿಲ, ಅನಲ, ಹರ ಮತ್ತು ಸಂಪಾತಿ ಎಂಬ ನಾಲ್ವರು ರಾಕ್ಷಸೋತ್ತಮರು , ಅವನ ಹಾಗೇ ಧರ್ಮಬುದ್ಧಿ ಉಳ್ಳವರು ಅವರೂ ಕೂಡ. ಇವರದ್ದೊಂದು ಗುಂಪು. ಇವರಿಗೆ ಅವರು ಹೆದರ್ತಾರೆ. ಯಾಕೆಂದ್ರೆ, ಸಾತ್ವಿಕ ಶಕ್ತಿ ಒಂಥರಾ ಅದು. ಇವನಿಗೆ ಏನು ಕೆಡುಕಾದ್ರೂ ಪ್ರತಿಭಟನೆ ಮಾಡ್ತಾರೆ ಅವ್ರು. ಇವರು ಮಾತ್ರ ಶ್ವೇತವರ್ಣದಲ್ಲಿ ಕಂಗೊಳಿಸ್ತಾರೆ. ಧರ್ಮವೊಂದನ್ನೇ ಬಯಸಿದವನು ವಿಭೀಷಣ. ಅವನಿಗೆ ಧರ್ಮದ ಜೊತೆಯಲ್ಲಿ ಸಾಮ್ರಾಜ್ಯವೂ ಪ್ರಾಪ್ತವಾಗಲಿಕ್ಕಿದೆ. ಆಯ್ತು, ಮತ್ತೆ ಮುಂದೆ ತಿರುಗಿದ್ರೆ, ಲಂಕೆಯ ಮಿಕ್ಕುಳಿದ ರಾಕ್ಷಸಕೂಟ ಏನಾಯ್ತು ಅಂದ್ರೆ? ಅವರು ಕೆಂಪು ಮಾಲೆ ಹಾಕಿದ್ದಾರೆ, ಎಳ್ಳೆಣ್ಣೆ ಕುಡೀತಾ ಇದ್ದಾರೆ,‌ ಕೆಂಪು ಮಾಲೆಗಳನ್ನು ಹಾಕ್ಕೊಂಡೊದ್ದಾರೆ, ಕೆಂಪು ಬಟ್ಟೆಗಳನ್ನು ಹಾಕ್ಕೊಂಡಿದ್ದಾರೆ, ಅಂಥಾದ್ದು ಇಡೀ ಲಂಕೆಯ ಸಮಾಜ! ಅಸಂಖ್ಯ ಲಂಕೆಯ ರಾಕ್ಷಸರು ಇಡೀ ಗುಂಪಾಗಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಸಾಯ್ತಾರೆ ಯುದ್ಧದಲ್ಲಿ ಇವರೆಲ್ಲರೂ ಕೂಡ, ಆ ಸೂಚನೆ ಅದು.

ಹಾ! ಮತ್ತೊಂದು ದೃಶ್ಯಾವಳಿಯಲ್ಲಿ ಲಂಕೆಗೆ ಲಂಕೆಯೇ ಮುರಿದು ಸಮುದ್ರಕ್ಕೆ ಬಿದ್ದುಬಿಟ್ಟಿದೆ. ಗೋಪುರಗಳು, ತೋರಣಗಳು ಭಗ್ನವಾಗಿದ್ದಾವೆ ಲಂಕೆಯಲ್ಲಿ. ಆನೆ, ಕುದುರೆ, ರಥಗಳ ಸಹಿತವಾಗಿ ರಮ್ಯವಾಗಿರತಕ್ಕಂತ ಲಂಕಾಪುರಿ ಸಮುದ್ರದ ಪಾಲಾಗಿದೆ. ಲಂಕೆಯ ಪಥನ. ಸೀತೆ ಸಾಗರದಿಂದ ಮೇಲೆದ್ದು ಬಂದಳು, ಲಂಕೆ ಸಮುದ್ರದಲ್ಲಿ ಮುಳುಗಿ ಹೋಯಿತು. ಇದು ಸದ್ಯದಲ್ಲೇ ನಡೀಲಿಕ್ಕೆ ಇರ್ತಕ್ಕಂತದ್ದು : ರಾಮನ ದೂತನಾದ ಒಬ್ಬ ವಾನರ ಬಂದಿದ್ದಾನೆ ಸ್ವಪ್ನದಲ್ಲಿ. ಅಲ್ಲೇ ಮರದ ಕೆಳಗೆ ಕೂತಿದ್ದಾನೆ! ಇವಳ ಬೆನ್ನ ಹಿಂದೆಯೇ ಇದ್ದಾನೆ ಅವನು. ಮಹಾಬಲಶಾಲಿಯಾದ ಆ ವಾನರನು ರಾವಣನಿಂದ ರಕ್ಷಿತವಾಗಿರ್ತಕ್ಕಂತ ಲಂಕೆಯನ್ನು ಸುಟ್ಟುರುಹಿದ್ದಾನೆ. ಅವನಲ್ಲೇ ಮರದ ಮೇಲೆ‌ ಕೂತುಕೊಂಡು ಈ ಭವಿಷ್ಯವನ್ನು ಕೇಳ್ತಾ ಇದ್ದಾನೆ! ಭವಿಷ್ಯ ಕೂಡಲೇ ಸತ್ಯವಾಗ್ಲಿಕ್ಕಿದೆ. ಹಾಗಾಗಿ ಈ ಒಂದು ನಿಜವೂ ಕೂಡ ಕಂಡಿದೆ. ಭವಿಷ್ಯ ದರ್ಶನ, ಸುಡುವವನು ಕೂಡ ಅಲ್ಲೇ ಕೂತ್ಕೊಂಡಿದ್ದಾನೆ.

ಆಮೇಲೆ ಮುಂದಿನ ಸ್ವಪ್ನ ಏನು ಅಂದ್ರೆ, ರಾಕ್ಷಸ ಸ್ತ್ರೀಯರು ಬಾಯ್ದೆರೆದು ದೊಡ್ಡ ಶಬ್ದದಲ್ಲಿ ನಗ್ತಾ , ನೃತ್ಯ ಮಾಡ್ತಾ, ತೈಲವನ್ನು ಕುಡೀತಾ ಸುಟ್ಟು ಭಸ್ಮವಾದ ಲಂಕೆಯನ್ನು ಹೊಕ್ಕರು ರಾಕ್ಷಸಿಯರೆಲ್ಲಾ. ಅಷ್ಟು ರಾಕ್ಷಸಿಯರೂ ತಮ್ಮ ತಮ್ಮ ಗಂಡದಿರ ಬೂದಿಯನ್ನು ಪ್ರವೇಶ ಮಾಡ್ತಾರೆ. ಆಮೇಲೆ ಕುಂಭಕರ್ಣನೇ ಮೊದಲಾದ ಪ್ರಮುಖ ರಾಕ್ಷಸ ನಾಯಕರು ಕೆಂಪು ಬಟ್ಟೆ ತಗೊಂಡು ಗೋಮಯದ ಹೊಂಡದಲ್ಲಿ ಹಾರ್ಕೊಂಡರು. ಇಷ್ಟೂ ಸ್ವಪ್ನವನ್ನು ಹೇಳಿದ ತ್ರಿಜಟೆ, ಕೊನೆಯಲ್ಲಿ ರಾಕ್ಷಸಿಯರಿಗೆ ಹೇಳಿದ್ದೇನು? ‘ತೊಲಗಿ, ಹಾಳಾಗಿ ಹೋಗಿ. ಸೀತೆಯನ್ನು ರಾಮನು ಪಡ್ಕೊಂಡಾಯಿತು. ನೀವು ಸೀತೆಗೆ ಮಾಡಿದ ಹಿಂಸೆ ಗೊತ್ತಾದಾಗ ನಿಮ್ಮನ್ನು ಕೊಂದು ಬಿಡ್ಬಹುದು ರಾಮನು.’ ಎಂದಾಗ ಬೆವರಿಳಿಯಲು ಪ್ರಾರಂಭವಾಯ್ತು ರಾಕ್ಷಸಿಯರಿಗೆಲ್ಲ. ಗಡಗಡನೆ ನಡುಗಿದರು.

ಮುಂದುವರಿಸ್ತಾಳೆ ತ್ರಿಜಟೆ. ‘ಸೀತೆ ಅಂದ್ರೆ ಏನು? ರಾಮನಿಗೆ ಪ್ರಿಯ ಪತ್ನಿ ಅವಳು ಮತ್ತು ಬಹುವಾಗಿ ಆಕೆಯನ್ನು ಮಾನಿಸ್ತಾನೆ, ಭಾವಿಸ್ತಾನೆ, ಆದರಿಸ್ತಾನೆ ರಾಮ. ಅಂಥವಳು ಅವಳು. ವನವಾಸದಲ್ಲಿ ರಾಮನನ್ನು ಹಿಂಬಾಲಿಸಿದವಳು‌ ಅವಳು. ಇಂಥವಳಿಗೆ ನೀವು ಏನೆಲ್ಲ ಮಾಡಿದಿರಿ? ರಾಮನಿದನ್ನು ಒಪ್ತಾನಾ? ನಿಮ್ಮ‌ ಕೆಟ್ಟ ಮಾತುಗಳನ್ನು ನಿಲ್ಲಿಸಿ ಬಾಯ್ಮುಚ್ಚಿ. ಆಡೋದಾದ್ರೆ ಒಳ್ಳೆಯ ಮಾತಾಡಿ, ಗೌರವ ಕೊಟ್ಟು, ಪ್ರೀತಿಯಿಂದ ಮಾತಾಡಿ. ಅದು ಬಿಟ್ಟು ಕೆಟ್ಟ ಮಾತಾಡಿದಿರೋ? ಕಾದಿದೆ ಅನಾಹುತ. ಈಗ ಮಾಡಿದ್ದಕ್ಕೇ ನೀವು ಪ್ರಾಯಶ್ಚಿತ್ತ ಮಾಡ್ಕೊಳ್ಬೇಕು. ನನ್ನ ಸ್ಪಷ್ಟ ಅಭಿಪ್ರಾಯ, ನಾವು ಹೋಗಿ ಸೀತೆಯಲ್ಲಿ ಬೇಡಬೇಕು. ನನಗೂ ವಯಸ್ಸಾಗಿದೆ. ನಾನು ಕಾಲವನ್ನು, ಲೋಕವನ್ನು ಕಂಡವಳು. ನನಗೂ ಒಂದಷ್ಟು ಗೊತ್ತು. ನನ್ನ ಜ್ಞಾನದ ಮೇಲೆ ಹೇಳೋದಾದ್ರೆ, ನಾನು ಕಂಡ ಈ ಸ್ವಪ್ನದ ಫಲ ಸೀತೆಯ ಶ್ರೇಯಸ್ಸು. ಈ ಸ್ವಪ್ನ ಬಿದ್ದಿದ್ದು ಯಾವಾಗ?

ಸೀತೆಯು ಅತ್ಯಂತ ದುಃಖಿತಳಾದಾಗ ಈ ಸ್ವಪ್ನ ಬಿದ್ದಿದೆ. ಸೀತೆಗೆ ವಿಧೆ ನನ್ನ ಮೂಲಕ ಮಾತನಾಡುತ್ತಿದೆ. ರಾವಣ ಬಂದಿದ್ದು ಎಂಥಾ ಸಮಯ? 3-4 ಘಂಟೆ ಇರಬಹುದು. ಸೀತೆಗೆ ನಿದ್ದೆ ಇಲ್ಲ. ಆಗ ತ್ರಿಜಟೆ ಮಲಗಿದ್ದಳು. ಆಗ ಅವಳಿಗೆ ಬಂದ ಸ್ವಪ್ನ ಅದಾದರಿಂದ ಈ ಎಲ್ಲಾ ದುಃಖಗಳಿಂದ ಸೀತೆ ಬಿಡುಗಡೆ ಹೊಂದುತ್ತಾಳೆ. ಉತ್ತಮೋತ್ತಮವಾದ ಶ್ರೇಯಸ್ಸನ್ನು ಪಡೆದುಕೊಳ್ಳುತ್ತಾಳೆ. ಇಷ್ಟು ಹೊತ್ತು ಬಾಯಿಗೆ ಬಂದಂತೆ ಬೈದಿದ್ದೇವೆ ಈಗ ಹೇಗೆ ಅವಳ ಬಳಿ ಹೋಗುವುದೆಂದು ಮುಖ ನೋಡಬೇಡಿ. ಹೋಗಿ ಪ್ರಾಣಭಿಕ್ಷೆಯನ್ನು ಬೇಡಿಕೊಳ್ಳಿ. ರಾಮನಿಂದ ರಾಕ್ಷಸರಿಗೆಲ್ಲಾ ನಾಶ ಕಾದಿದೆ. ನೀವು ಅದೇ ಪಟ್ಟಿಯಲ್ಲಿದ್ದೀರಿ. ನನಗೆ ಸೀತೆ ಏನೆಂದು ಗೊತ್ತು. ನೀವು ಕಾಲಿಗೆ ಬಿದ್ದರೆ ಅವಳು ಪ್ರಸನ್ನಳಾಗುತ್ತಾಳೆ. ಅವಳ ಸ್ವಭಾವ ಅದು. ತನ್ನ ಗಂಡನ ಹಾಗೆಯೇ ಅವಳೂ ಕೂಡಾ. ನೂರು ಅಪರಾಧಗಳನ್ನು ಮಾಡಿದ್ದರೂ ಕೂಡಾ ಹೋಗಿ ಶರಣಾಗತರಾದರೆ ಅಭಯವನ್ನು ಕೊಡುತ್ತಾನೆ. ನಿಮ್ಮನ್ನು ಜೀವಭಯದಿಂದ ಉಳಿಸುವುದಾದರೆ ಅದು ಸೀತೆಗೆ ಮಾತ್ರ ಸಾಧ್ಯ. ಸೀತೆ ಕ್ಷಮಿಸಿದರೆ ಬಚಾವಾಗುತ್ತೀರಿ. ಸೀತೆ ಶರಣಾಗತರಕ್ಷಿಣಿ ಎಂಬುದನ್ನು ತ್ರಿಜಟೆ ಬಲ್ಲಳು.

ಸೀತೆಯನ್ನು ನೋಡಿ. ಇಡೀ ಶರೀರದಲ್ಲಿ ಮುಂದೆ ಕೆಟ್ಟದಾಗುತ್ತದೆ ಎಂಬ ಒಂದು ಅವಲಕ್ಷಣವೂ ಇಲ್ಲ. ಹಾಗಾಗಿ ಕಷ್ಟ ಅವಳ ನೆರಳಿಗೆ ಬಂದಿದ್ದು ಅಷ್ಟೆ. ಸ್ವಪ್ನದಲ್ಲಿ ಸೀತೆ ಗಗನದಲ್ಲಿ ಬಂದಿದ್ದು ಕಂಡ ಮೇಲೆ ಅವಳಿಗೆ ಒಳ್ಳೆಯದಾಗಲೇ ಬೇಕು. ಹಾಗಾಗಿ ಸೀತೆ ಬಯಸಿದ್ದು ಈಡೇರುತ್ತದೆ. ಅವಳು ಬಯಸಿದ್ದು ರಾಕ್ಷಸೇಂದ್ರನ ವಿನಾಶ, ರಾಘವನ ವಿಜಯ ಎನ್ನುವಾಗಲೇ ಸೀತೆಯ ಎಡಗಣ್ಣು ಅದುರಿತು. ನೋಡಿ ನೋಡಿ ಎಂದಳು ತ್ರಿಜಟೆ. ಇದು ನಿಮಿತ್ತ. ಅವಳಿಗೆ ಮುಂದೆ ಒಳ್ಳೆಯದಾಗುತ್ತದೆ ಎಂದಳು. ಯಾವ ಕಾರಣವಿಲ್ಲದೇ ಈಕೆಯ ಎಡಭುಜ ಅದುರುತ್ತಿದೆ. ಭುಜಕ್ಕೇ ಸಂತೋಷವಾದಂತೆ. ಎಡತೊಡೆ ಕೂಡಾ ಸ್ಪಂದಿಸುತ್ತಿದೆ. ರಾಮನು ಮುಂದಿದ್ದಾನೆಂಬುದನ್ನು ಈ ಮೂರು ಲಕ್ಷಣಗಳು ತೋರಿಸುತ್ತಿವೆ. ಆಗ ಒಂದು ಪಕ್ಷಿ ಹತ್ತಿರದ ಕೊಂಬೆಯಲ್ಲಿ ಬಂದು ಕುಳಿತು ಸೀತೆಗೆ ಏನೇನೋ ಹೇಳಿತು. ಅದರ ಭಾಷೆಯಲ್ಲಿ ಮುಂದೆ ಸೀತೆಗೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಿದೆ. ಮಂಗಲ ಭವಿಷ್ಯಕ್ಕೆ ನಿನಗೆ ಸುಸ್ವಾಗತ ಎಂದು ಪಕ್ಷಿ ಹೇಳುತ್ತಿದೆ. ಇದನ್ನು ತ್ರಿಜಟೆ ಅನುವಾದಿಸುತ್ತಿದ್ದಾಳೆ. ಆಗ ಸೀತೆಯು ರಾಮನೇ ಪಕ್ಕದಲ್ಲಿ ಬಂದು ನಿಂತಂತೆ ನಾಚಿದಳು. ತನ್ನ ಪತಿಗೆ ವಿಜಯವು ಪ್ರಾಪ್ತವಾಗುವುದೆಂದು ಅವಳಿಗೆ ಹರ್ಷವಾಯಿತು. ಇದು ಸತ್ಯವಾಗಿ ಪರಿಣಮಿಸಿದರೆ ನಾನೇ ನಿಮಗೆ ರಕ್ಷಕಳಾಗುತ್ತೇನೆ ಎಂದು ರಾಕ್ಷಸಿಯರಿಗೆ ವರವಿತ್ತಳು. ಒಂದು ಕ್ಷಣ ಮುಂಚೆ ಅಷ್ಟು ಪೀಡಿಸುತ್ತಿದ್ದವರಿಗೆ ಅವರಿಗೆ ಕೂಡಾ ವರಕೊಟ್ಟಳು. ಅವಳೂ ರಾಮನಂತೆ ಶರಣಾಗತ ರಕ್ಷಿಣಿ.

ಮುಂದೆ ರಾವಣವಧೆಯಾದ ಮೇಲೆ ಹನುಮಂತ ಸೀತೆಯಲ್ಲಿ ಇವರಿಗೆಲ್ಲಾ ಚಿತ್ರಹಿಂಸೆಕೊಟ್ಟು ಕೊಲ್ಲುವ ಅವಕಾಶವನ್ನು ಕೇಳಿದಾಗ ಸೀತೆ ಒಪ್ಪುವುದಿಲ್ಲ. ಅವರು ಸ್ವಂತಬುದ್ಧಿಯಿಂಂದ ಬೈಯಲಿಲ್ಲ ರಾವಣನಿಂದಾಗಿ ಬೈದರು ಎಂದಳು. ಅಷ್ಟು ಉದಾತ್ತವಾದ ವ್ಯಕ್ತಿತ್ವ ಸೀತೆಯದ್ದು. ತ್ರಿಜಟೆಗೆ ಎಚ್ಚರವಾದಾಗ ಗಂಭೀರ ಸಂದರ್ಭವಿತ್ತು. ರಾವಣ ಮತ್ತು ರಾಕ್ಷಸಿಯರು ಕೆಟ್ಟ ಮಾತುಗಳನ್ನಾಡಿ ಅವಳ ಮನಸ್ಸನ್ನು ಎಷ್ಟು ಕೆಡಿಸಿದ್ದರೆಂಂದರೆ ಅವಳಿಗೆ ಕೊಲೆಪಾತಕನಿಗೆ ಮೃತ್ಯುದಂಡವಿದ್ದಾಗ ಪ್ರತೀಕ್ಷೆಮಾಡುವವನಂತೆ ಅನಿಸಿತ್ತು. ಅಯೋಧ್ಯೆಯ ಚಕ್ರವರ್ತಿನಿಗೆ ಈ ಸ್ಥಿತಿ ಬಂದರೂ ಮನಸ್ಸನ್ನು ಮಾತ್ರ ಈ ದುಷ್ಟನಿಗೆ ಕೊಡಲಾರೆ. ಆ ಸಂದರ್ಭದಲ್ಲಿ ಅವಳು ರಾಮ, ಲಕ್ಷ್ಮಣ, ಸುಮಿತ್ರೆ, ಕೌಸಲ್ಯೆ, ತನ್ನ ತಾಯಿ ಎಲ್ಲರನ್ನೂ ನೆನೆದಿದ್ದಾಳೆ. ನಾನೇಕೆ ಮಾಯಾಮೃಗಕ್ಕೆ ಮರುಳಾದೆನೋ ಎಂದು ದುಃಖಪಟ್ಟಿದ್ದಾಳೆ. ಕಾಲವೇ ಮಾಯಾಮೃಗವಾಗಿ ಬಂತೇನೋ ಎಂದು ಪೂರ್ಣಚಂದ್ರನ ಮುಖದವನೇ, ಜೀವಲೋಕದ ಹಿತನೇ, ಪ್ರಿಯನೇ ರಾಕ್ಷಸರು ನನ್ನನ್ನು ಕೊಂದುಹಾಕುತ್ತಿದ್ದಾರೆ ನಿನಗೆ ಗೊತ್ತಾಗುತ್ತಿಲ್ಲವಲ್ಲ ಎಂದೆಲ್ಲಾ ಅತ್ತು ಒಂದು ಪ್ರಶ್ನೆ ಬಂದಿತ್ತು. ಈ ಧರ್ಮವನ್ನಾಚರಿಸಿದ್ದಕ್ಕೆ ಪಾತಿವ್ರತ್ಯಕ್ಕೆ ಅರ್ಥವೇ ಇಲ್ಲವೇ ಎಂಬ ಪ್ರಶ್ನೆ. ಇದಕ್ಕೆಲ್ಲ ಫಲ ರಾಮ ಮತ್ತೆ ಸಿಕ್ಕಿದರಾಯಿತು. ಸಿಗದಿದ್ದರೆ ಇದಕ್ಕೆಲ್ಲಾ ಏನರ್ಥ ಎಂಬ ಪ್ರಶ್ನೆ ಬಂದಿತ್ತು ಅವಳಿಗೆ.

ಹನುಮಂತ “ಲಕ್ಷಾಂತರ ಕಪಿಗಳು ದಿಕ್ಕು ದಿಕ್ಕಿನಲಿ ಹುಡುಕುತ್ತಿರುವ ಆ ಸೀತೆಯನು ನಾನು ಕಂಡೆ” ಎಂದು ತನ್ನ ಬಗ್ಗೆಯೇ ಸಮಾಧಾನ ಮತ್ತು ತೃಪ್ತಿಯನ್ನು ಪಟ್ಟುಕೊಂಡನು. ನಾನು ಸಮರ್ಪಕವಾದ ಕಾರ್ಯವನ್ನು ಮಾಡಿದ್ದೇನೆ, ಗುಪ್ತವಾಗಿ ತಾನು ಸಂಚರಿಸಿ; ಸೀತೆಯನ್ನು ಮತ್ತು ಲಂಕಾನಗರಿಯನ್ನು ಕಂಡೆ. ಹಾಗೆಯೇ ರಾಕ್ಷಸರ ವಿಶೇಷ ಮತ್ತು ರಾಕ್ಷಸಾಧಿಪತಿಯ ಪ್ರಭಾವವನ್ನು ಕೂಡ ಕಂಡನು. ಇದರ ಅರ್ಥ ಕೊಟ್ಟ ಕಾರ್ಯವಾಗಿದೆ/ನಡೆದಿದೆ. ಆದರೆ ಹನುಮಂತನಿಗದು ತೃಪ್ತಿಯಿಲ್ಲ; ಕೊಟ್ಟ ಕಾರ್ಯದ ಜೊತೆಗೆ ಹೆಚ್ಚಿನದ್ದನ್ನು ಸಾಧನೆ ಮಾಡಬೇಕು. ಹಾಗಾಗಿ ಮೊದಲನೆಯದಾಗಿ, ನಾನು ಸೀತೆಯನ್ನು ಸಂತೈಸುವುದು ಯುಕ್ತ. ಅಪ್ರಮೇಯನ ಪತ್ನಿಯಾದ ಆಕೆ ; ಸೀತೆ ಮಾತ್ರವಲ್ಲ, ಎಲ್ಲಾ ಜೀವಿಗಳ ಮೇಲೆ ದಯೆಯುಳ್ಳವನ ಪತ್ನಿ, ಪತಿದರ್ಶನಾಕಾಂಕ್ಷಿಯಾದ ಆಕೆಯು ಪೂರ್ಣಚಂದ್ರಾಣಿನಿಯಾದ ಅವಳನ್ನು ಸಂತೈಸಬೇಕು.

ಒಂದು ವೇಳೆ ನಾನು ಸಂತೈಸದೇ ಹಿಂದಿರುಗಿದರೆ, ನನ್ನ ಮರು ಪ್ರಯಾಣ ದುಃಖಮಯವಾಗುವುದು, ಸೀತೆಯು ಪ್ರಾಣತ್ಯಾಗ ಮಾಡಿ ಬಿಟ್ಟಾಳು. ಆದ ಕಾರಣ ಅತಿಶಯ ದುಃಖದಿಂದ ಕೂಡಿದ ಆಕೆಯನು ಸಂತೈಸಬೇಕು. ಇನ್ನೊಂದು ಕಾರ್ಯ, ಸೀತಾದರ್ಶನಾಕಾಂಕ್ಷಿಯಾದ ರಾಮನನ್ನು ನಾನು ಹೋಗಿ ಸಂತೈಸಬೇಕು. ಹಾಗಾಗಿ ಈಗಲೇ ಹೋಗಿ ಮಾತನಾಡಿಸಿ ಬರಲೇ ಸೀತೆಯನು ಎಂದರೆ, ಈ ರಾಕ್ಷಸಿಯರ ಸಮೂಹ. ಆದ ಕಾರಣ ಅವಳೊಬ್ಬಳೇ ಇರುವಾಗ ಮಾತನಾಡಿಸಿ ಬರಬೇಕು. ಇದು ಹನುಮನ ಮೂಲ ಯೋಜನೆಯಾಗಿದೆ.

ಈ ನಿಶಾಚರಿಯರ ಮುಂದೆ ಮಾತನಾಡುವುದು ಹೇಗೆ? ಕಷ್ಟಕ್ಕೆ ಸಿಲುಕಿಕೊಂಡೇನು. ಆದರೆ ಸೀತೆಯನ್ನು ಮಾತನಾಡಿಸಬೇಕು… ಈ ಪ್ರಮಾಣದಲಿ ದುಃಖಿತಳಾಗಿರುವ ಸೀತೆಯನು ನೋಡಿದ ಹನುಮನಿಗೆ; ಸೂರ್ಯೋದಯದೊಳಗೆ ಸೀತೆಯನು ಸಂತೈಸದಿದ್ದರೆ ಆಕೆ ನಿಶ್ಚಿತವಾಗಿಯು ಉಳಿಯಳು. ಅಕಸ್ಮಾತ್ ನಾನು ಸೀತೆಯನು ಮಾತನಾಡಿಸದೇ ಹಾಗೆಯೇ ಹಿಂದಿರುಗಿ ರಾಮನ ಬಳಿ ಹೋಗಿ ಸೀತೆಯನು ನೋಡಿ ಬಂದೆ ಎಂದು ಹೇಳಿದಾಗ ಸೀತೆ ಏನಂದಳು ಎಂಬುದಾಗಿ ರಾಮನು ಕೇಳುವನು. ನಾನು ಮಾತನಾಡಿಸಲಿಲ್ಲವೆಂದು ಹೇಳಿದಾಗ ತನ್ನ ಕೆಂಡದಂತಹ ಕೋಪದ ಕಣ್ಣುಗಳಿಂದ ನನ್ನನ್ನು ಸುಟ್ಟು ಬಿಟ್ಟರೆ ; ಅಂದರೆ ರಾಮನ ಅಸಮಾಧಾನದ ನೋಟವನು ಹನುಮನು ಸಹಿಸಲಾರ ಎಂಬ ರಾಮನ ಬಗೆಗಿನ ಪ್ರೀತಿ, ಗೌರವ ಹನುಮನಿಗೆ ಇದೆ. ಮತ್ತೆ ನಾನು ಹೋಗಿ ಸುಗ್ರೀವನ ಜೊತೆಗೂಡಿ ಇಡೀ ವಾನರ ಸೇನೆಯನ್ನು ಕರೆತರುವಷ್ಟರಲ್ಲಿ ಸೀತೆ ಏನಾದರೂ ಮಾಡಿಕೊಂಡುಬಿಟ್ಟರೆ; ಆದ್ದರಿಂದ ಏನು ಮಾಡಲಿ ಎಂದು ಬಹಳವಾಗಿ ಚಿಂತಿಸಿ ಕೊನೆಗೊಂದು ಅಭಿಪ್ರಾಯಕ್ಕೆ ಬಂದನು.

ರಾಕ್ಷಸಿಯರು ದೂರದಲ್ಲಿರುವಾಗ ಒಂದು ಅವಕಾಶವನ್ನು ಕಾದು, ಸೀತೆಯನು ಕಂಡು ಸಂತೈಸುತ್ತೇನೆಂದು ಹನುಮನು ತೀರ್ಮಾನಿಸಿದನು. ಈ ಬೆಕ್ಕಿನಂತಹ ಗಾತ್ರದ ಮಂಗ/ವಾನರ ಹೋಗಿ ಸೀತೆಯಲಿ ಸಂಸ್ಕೃತ ಮಾತನಾಡಲು ಪ್ರಾರಂಭಿಸಿದಾಗ ಸೀತೆ ನಂಬಿಯಾಳೇ? ಏನೋ ಮಾಯೆ ಎಂಬುದಾಗಿ ತಿಳಿಯುವಳು. ನಾನು ಮಾನುಷ ಸಂಸ್ಕೃತದಲ್ಲಿ ಮಾತನಾಡುವೆ. ನಾನು ದ್ವಿಜಾದಿ ಸಂಸ್ಕೃತವನ್ನು ಮಾತಾಡೆನು. ಕಾರಣ- ರಾವಣನು ಈ ಬ್ರಾಹ್ಮಣ ಸಂಸ್ಕೃತವನ್ನು ಮಾತನಾಡುತ್ತಿದ್ದ ಕಾರಣ, ಸೀತೆ ನನ್ನನ್ನು ರಾವಣನೆಂದು ಅಂದುಕೊಂಡಾಳು ಎಂಬ ದೃಷ್ಟಿಯಿಂದ ತಾನು ಹೇಗೆ ಮಾತನಾಡಬೇಕು ಎಂಬ ಪ್ರಶ್ನೆಯು ತನ್ನೊಳಗೆ ಹನುಮನಿಗೆ ಮೂಡಿತು.

ಹೀಗೆ ಮೊದಲೇ ಹೆದರಿರುವ ಸೀತೆಗೆ ಹೆದರಿಕೆಯಾಗಿ ಶಬ್ಧಗಳನ್ನು ಮಾಡಿದರೆ ಮಾತನಾಡಲಾಗದು. ಈ ಮೃತ್ಯುರೂಪಿಗಳಾದ ರಾಕ್ಷಸರು ನನ್ನನ್ನು ಕೊಲ್ಲಲು ಬರುವರು. ನಾನು ಕೊಂಬೆಗಳಿಂದ ಕೊಂಬೆಗೆ ಹಾರಿ ಗದ್ದಲಗಳಾದಾಗ, ರಾಕ್ಷಸರು ಶೂಲ, ಖಡ್ಗ, ಆಯುಧಗಳನ್ನು ಹಿಡಿದು ಸುತ್ತುವರಿಯುವರು ; ಯುದ್ಧ ಮಾಡಿ ನಾನವರನು ನಿಗ್ರಹಿಸುವೆನು. ಆದರೆ ಬಂದಂತಹ ಕಾರ್ಯ? ಸೀತೆಯನು ಹೆದರಿಸಿಯಾರು ಮತ್ತು ನಾನು ಮರಳುವುದು ನಿಶ್ಚಿತವಲ್ಲ. ಆಗ ರಾಮ ಕಾರ್ಯವದು ನಷ್ಟವಾಗುವುದು. ರಾಮನ ಈ ಕಾರ್ಯವನ್ನು ಇನ್ನೊಬ್ಬ ವಾನರ ಮಾಡಲು ಸಾಧ್ಯವಿಲ್ಲವೆಂದು ಭವಿಷ್ಯದ ಪರಿಣಾಮದ ಚಿತ್ರಗಳು ಹನುಮಂತನ ಕಣ್ಣಿಗೆ ಕಟ್ಟಿದವು. ನಾನು ಹತನಾಗಿ ಹೋದರೆ ಈ ಸಮುದ್ರವನು ಲಂಘಿಸಿ; ಬೇರೊಬ್ಬ ವಾನರ ಬರಲು ಸಾಧ್ಯವಿಲ್ಲ. ಬಂದರೂ ಮರಳಿ ಹೋಗಲು ಸಾಧ್ಯವಿಲ್ಲ. ಯುದ್ಧಗಳೆಂದರೆ ಮಾಯೆ. ಎಷ್ಟು ರಾಕ್ಷಸರು ಬಂದರೂ ಸಂಹಾರ ಮಾಡುತ್ತೇನೆ. ಆದರೆ ಈ ನಿಸ್ಸಂಶಯಗ್ರಸ್ತವಾದ ಕಾರ್ಯವನ್ನು ಪುನಃ ಸಂಶಯಗ್ರಸ್ತವನ್ನಾಗಿ ಮಾಡಲು ಆಗದು.

ಇಡೀ ಅಯೋಧ್ಯೆಯ, ರಾಮನ, ಸೀತೆಯ, ಕಿಷ್ಕಿಂಧೆಯ ಭವಿಷ್ಯವು ನನ್ನ ನಿರ್ಧಾರದ ಮೇಲೆ ನಿಂತಿದೆ. ಆದ್ದರಿಂದ ಏನು ಮಾಡಲಿ? ಮಾತನಾಡದಿದ್ದರೆ ಇಷ್ಟೆಲ್ಲಾ ಅನಾಹುತವಾಗುದು. ಆದ ಕಾರಣ ದೂತಕಾರ್ಯ ಅತೀ ಜವಾಬ್ದಾರಿಯುತವಾದದ್ದು. ಕಾರ್ಯ ಹಾಳಾಗಬಾರದು. ಹಾಗಾಗಿ ನಾನು ಸೀತೆಯ ಬಳಿ ಮಾತನಾಡಲೇ ಬೇಕು. ಆದರೆ ಆಕೆಯು ಅದರಿಂದ ಉದ್ವೇಗಗೊಳ್ಳಬಾರದು. ಆದ ಕಾರಣ ಇದಕ್ಕೇನು ದಾರಿ??? ಎಂಬುದಾಗಿ ಹನುಮಂತನು ಯೋಚಿಸುತ್ತಾನೆ.

ಏನು ಯೋಚಿಸಿದ್ದಾನೆ ಎಂಬುದಾಗಿ ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments