ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಮಹಾಪುರುಷರಾದವರು ತಮ್ಮೊಳಗಿನ ಚೈತನ್ಯವನ್ನು ತಮ್ಮಲ್ಲಿಯೇ ಇಟ್ಟುಕೊಂಡುಬಿಡುವುದಿಲ್ಲ. ತಮ್ಮ ಸಂಸರ್ಗಕ್ಕೆ ಯಾರು ಬರ್ತಾರೋ/ ಏನು ಬರ್ತದೋ, ಅವರುಗಳಲ್ಲಿ/ ಅವುಗಳಲ್ಲಿ ತಮ್ಮ ಚೈತನ್ಯವನ್ನ ನಿಕ್ಷೇಪಿಸ್ತಾ ಇರ್ತಾರೆ. ಹಾಗಾಗಿಯೇ ಮಹಾಪುರುಷರ ದೃಷ್ಟಿಗೆ ನಾವು ಒಳಪಡಬೇಕು. ಮಹಾಪುರುಷರ ಸ್ಪರ್ಶಕ್ಕೆ ಒಳಪಡಬೇಕು. ಆಶೀರ್ವಾದಕ್ಕೆ ಒಳಪಡಬೇಕು ಎಂಬುದಾಗಿ ನಮ್ಮ ಪರಂಪರೆ ನಿರೂಪಿಸುವಂಥದ್ದು. ಅವರ ಸಂಸರ್ಗದ ಒಂದೊಂದು ವ್ಯಕ್ತಿಗೆ, ಒಂದೊಂದು ವಸ್ತುವಿಗೆ ಎಷ್ಟೋ ಬಾರಿ ಅವರದ್ದೇ ಯೋಗ್ಯತೆ ಇದ್ದುಬಿಡ್ತದೆ. ಅಂದ್ರೆ ಅವರೇ ಅಲ್ಲಿಂದ ಕೆಲಸ ಮಾಡತಕ್ಕಂಥ ಸಾಧ್ಯತೆ ಇರ್ತದೆ. ಅವರಿಗೂ ಮತ್ತು ಅವರ ಆಶೀರ್ವಾದಕ್ಕೆ ಒಳಪಟ್ಟ ವಸ್ತುವಿಗೂ ಯಾವ ವ್ಯತ್ಯಾಸವೂ ಇಲ್ಲ ಎನ್ನುವಂತೆ.

ಉದಾಹರಣೆಗೆ ರಾಮನ ಮುದ್ರೆಯುಂಗುರ ಇದೆ. ಮುದ್ರೆಯುಂಗುರಕ್ಕೆ ಏನು ಯೋಗ್ಯತೆ ಅಂದ್ರೆ ರಾಮನದೇ ಯೋಗ್ಯತೆ. ಸೀತೆಗೆ ರಾಮನೇ ಬಂದಂತಾಯಿತು ಎನ್ನುವುದು ಭ್ರಮೆಯಲ್ಲ. ಅದು ವಾಸ್ತವ. ತನ್ನ ಅಂತಃಸತ್ವವನ್ನು, ತನ್ನ ಪ್ರೇಮವನ್ನು, ತನ್ನೊಳಗಿನ ಚೈತನ್ಯವನ್ನು ಶ್ರೀರಾಮ ಉಂಗುರದಲ್ಲಿ ನಿಕ್ಷೇಪಿಸಿದ್ದಾನೆ. ಅದನ್ನು ಹನುಮಂತ ತಂದುಕೊಟ್ಟಿದಾನೆ. ಆಗ ರಾಮನೇ ಬಂದಂತಾಯಿತು. ಹಾಗೇ ಪಾದಕೆ. ತನ್ನನ್ನು ತಾನೇ ತನ್ನ ಪಾದುಕೆಯಲ್ಲಿಟ್ಟು ಭರತನ ಕೈಲಿ ರಾಮ ಕೊಟ್ರೆ ಪಾದುಕೆಯನ್ನು ಪೀಠದಲ್ಲಿಡಬಹುದು. ಆ ಪಾದುಕೆ ರಾಜ್ಯಭಾರವನ್ನು ಕೂಡಾ ಮಾಡ್ಬಹುದು. ಹಾಗಾಗಿ ರಾಮನಿಗೂ, ರಾಮ ಪಾದುಕೆಗೂ ಏನೂ ವ್ಯತ್ಯಾಸ ಇಲ್ಲ. ರಾಮನಿಗೂ, ರಾಮನ ಉಂಗುರಕ್ಕೂ ಏನೂ ವ್ಯತ್ಯಾಸ ಇಲ್ಲ. ಪರಿಣಾಮದಲ್ಲಿ ವ್ಯತ್ಯಾಸ ಇಲ್ಲ. ಈ ಹಿನ್ನೆಲೆಯಲ್ಲಿ ಹನುಮಂತ ಸೀತೆಯನ್ನು ಕೇಳಿದನಂತೆ, ನಿನ್ನನ್ನೇ ಕರೆದುಕೊಂಡು ಹೋಗಬೇಕು ಅಂತಿದ್ದೆ ರಾಮನ ಬಳಿಗೆ, ಈಗ ಅದೇಕೆ ಸಾಧ್ಯವಿಲ್ಲ ಎನ್ನುವುದನ್ನು ನೀನು ನಿರೂಪಣೆ ಮಾಡಿದೀಯೆ, ನಾನೂ ಒಪ್ಪಿದ್ದೇನೆ. ಈಗ ನಿನ್ನನ್ನೇ ಕರೆದುಕೊಂಡು ಹೋದಂತೆ ಆಗಬೇಕು. ಅಂಥದ್ದೇನಾದರೂ ಮಾಡು ಎಂಬುದಾಗಿ ಕೇಳ್ತಾನೆ. ನಿನ್ನ ಕುರುಹು ಬೇಕು ನನಗೆ. ನಾನು ನಿನ್ನನ್ನು ಕಂಡಿದ್ದೇನೆ, ನಿನ್ನೊಡನೆ ಸಂಭಾಷಣೆ ನಡೆಸಿದ್ದೇನೆ, ರಾಮನ ಸಂದೇಶವನ್ನು ನಿನಗೆ ತಲುಪಿಸಿದ್ದೇನೆ ಎನ್ನುವುದಕ್ಕೆ ಸರಿಯಾದ ಕುರುಹು ಬೇಕು. ಯಾಕೆಂದರೆ, ನೀನೇ ಇಷ್ಟು ಪ್ರಶ್ನೆ ಕೇಳಿದೀಯೆ ನನಗೆ. ಈಗ ಹೋಗುವುದು ನಿನ್ನ ಯಜಮಾನರ ಹತ್ತಿರ. ಅವರು ಏನೇನು ಕೇಳ್ತಾರೋ ಗೊತ್ತಿಲ್ಲ. ಹಾಗಾಗಿ ಆದಷ್ಟು ತಯಾರಿ ಮಾಡ್ಕೊಂಡೆ ಇಲ್ಲಿಂದ ಹೋಗೋದು ಒಳ್ಳೆದು. ಉಂಗುರವನ್ನು ಅವನಾಗಿಯೇ ನನಗೆ ಕೊಟ್ಟಿದಾನೆ. ಈಗ ನಾನು ಪುನಃ ರಾಮನ ಬಳಿ ಹೋಗುವಂಥದ್ದು. ನೀನು ನಾಲ್ಕು ವೇದ, ಶಾಸ್ತ್ರ, ಪುರಾಣ ಓದಿದೀಯೋ ಇಲ್ವೋ ಗೊತ್ತಿಲ್ಲ ಆದ್ರೆ ಅವನು ಓದಿದಾನೆ. ಹಾಗಾಗಿ ಅವನ ಪರೀಕ್ಷೆಗೆ ನನಗೆ ಸಹಾಯ ಮಾಡು, ಕುರುಹು ಕೊಡು ಎಂಬುದಾಗಿ ಹನುಮಂತ ಸೀತೆಯನ್ನು ಬೇಡಿದಾಗ ಆಕೆ ಮೊದಲಾಗಿ ವಸ್ತು ರೂಪದ ಕುರುಹನ್ನ ಕೊಡಲಿಲ್ಲ. ವಸ್ತು ರೂಪದ ಕುರುಹು ಹೇಗಾದರೂ ಸಿಗಬಹುದು. ಅದಕ್ಕಿಂತ ಮಿಗಿಲಾದ ಕುರುಹನ್ನ ಕೊಡ್ಬೇಕು.

ಸೀತೆ ಒಂದು ಸಂಗತಿಯನ್ನು ಹೇಳ್ತಾಳೆ. ಈ ಸಂಗತಿ ಗೊತ್ತಿದ್ದರೆ ನನಗೆ ಗೊತ್ತು, ರಾಮನಿಗೆ ಗೊತ್ತು. ಲಕ್ಷ್ಮಣನಿಗೂ ಗೊತ್ತಿರಬಹುದು. ಇನ್ಯಾರಿಗೂ ಗೊತ್ತಿಲ್ಲ. ಇದನ್ನು ನೀನು ಹೇಳಿದ್ರೆ, ನೀನು ನನ್ನ ಜೊತೆಗೆ ಸಂಭಾಷಿಸಿದ್ದು ಹೌದು ಎಂದು ರಾಮನಿಗೆ ಭರವಸೆ ಬರ್ತದೆ ಎಂಬುದಾಗಿ ಹೇಳಿ ಒಂದು ಸಂಗತಿಯನ್ನು, ಒಂದು ಘಟನೆಯನ್ನು ಹನುಮಂತನ ಮುಂದೆ ನಿರೂಪಣೆ ಮಾಡ್ತಾಳೆ. ನಿರೂಪಣೆಗೆ ತೊಡಗುವಾಗಲೇ ಕಣ್ಣೀರು ಬಂತು ಆಕೆಗೆ. ಅಕ್ಷರಗಳು ತೊದಲಿದವು. ಧ್ವನಿ ಮುಂದವಾಯಿತು. ಮೆಲ್ಲಮೆಲ್ಲನೆ ಹೇಳಿದಳು ಆ ಕಥೆಯನ್ನು. ನಾನೀಗ ಯಾವ ಘಟನೆಯ ಕುರಿತು ಹೇಳ್ತೇನೋ ಆ ಘಟನೆಯು, ಆ ಕುರುಹು ತುಂಬಾ ಶ್ರೇಷ್ಠವಾಗಿರುವಂಥದ್ದು. ಬಹುಷಃ ಅದೊಂದೇ ಸಾಕು ಎನ್ನುವಂಥದ್ದು ಅದು. ಇದನ್ನು ನೀನು ನನ್ನ ಪ್ರಿಯನಾದ ರಾಮನ ಕುರಿತು ನಾನು ಹೇಳಿದ್ದೇನೆ ಎಂದು ರಾಮನಿಗೆ ಹೇಳ್ಬೇಕು. ಈ ಘಟನೆ ಚಿತ್ರಕೂಟ ಪರ್ವತದಲ್ಲಿ ನಡೆದಿದೆ. ಚಿತ್ರಕೂಟ ಪರ್ವತದ ಈಶಾನ್ಯದ ತಪ್ಪಲು. ಚಿತ್ರಕೂಟ ಪರ್ವತದ ಈಶಾನ್ಯದ ಉಪಪರ್ವತ ಅಂತ ಕರೀಬಹುದು. ಅಲ್ಲಿ ಈ ಘಟನೆ ನೆಡೆದಿದೆ. ಅಲ್ಲಿ ನಮ್ಮ ಆಶ್ರಮವಿತ್ತು. ಅಲ್ಲಿ ಬಗೆಬಗೆಯ ಪುಷ್ಪಗಳ ಸುಗಂಧ, ಸಿದ್ಧರ ಸಂಸರ್ಗ, ತಾಪಸರ, ಸಾಧಕರ ಸಮಾವೇಶ ಅಲ್ಲಿ. ಅನತಿದೂರದಲ್ಲಿ ಹರಿಯುವ ಮಂದಾಕಿನೀ ನದಿ. ಆ ಚಿತ್ರಕೂಟದ ರಮಣೀಯವಾದ ಪರಿಸರದಲ್ಲಿ, ಚಿತ್ರಕೂಟದ ಉದ್ಯಾನದಂತಿದ್ದ ವನಗಳಲ್ಲಿ ನಾನು ವಿಹರಿಸಿದೆ. ಎಷ್ಟು ವಿಹರಿಸಿದೆ ಅಂದ್ರೆ ಬೆವತು ಹೋಗುವಷ್ಟು. ಆ ವನಗಳನ್ನು ವಿಹರಿಸಿ ಬಳಿಕ ಬಂದು ನಿನ್ನ ಮಡಿಲನ್ನು ನಾನು ಸೇರಿದೆ. ರಾಮನಿಗೆ ಸೀತೆ ಹೇಳ್ತಾಯಿರುವಂಥದ್ದು. ಆಗೊಂದು ಘಟನೆಯಾಯ್ತು. ಒಂದು ಕಾಗೆ ಬಂದು ಕುಕ್ಕಿತು ನನ್ನನ್ನು. ಕೋಪ ಬಂತು ನನಗೆ. ಎಲಾ ಕಾಗೆಯೇ ಎಂದು ಮಣ್ಣಿನ ಹೆಂಟೆಯನ್ನು ತೆಗೆದುಕೊಂಡು ಹೊಡೆದೆ. ಅದು ಓಡಿತು. ಮತ್ತೆ ಬಂತು. ಮತ್ತೆ ಓಡಿಸಿದೆ. ಓಡಿಸಿದಾಗ ಅಡಗುವುದು. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಬಂದು ಕುಕ್ಕಲು ಪ್ರಯತ್ನ ಮಾಡುವುದು. ನನ್ನ ಮಾಂಸವನ್ನೇ ತಿನ್ನಲಿಕ್ಕೆ ಹೊರಟಿದೆಯೋ ಏನೋ ಎನ್ನುವಂತೆ ನನಗೆ ಸಂಶಯ ಬರುವಷ್ಟು ಅದು ಪದೇ ಪದೇ ಬಂದು ನನಗೆ ಪೀಡೆಯನ್ನು ಕೊಡ್ತಾಯಿತ್ತು. ಕೋಪಗೊಂಡು ಡಾಬನ್ನ ಎತ್ತಿಕೊಂಡು ಹೊಡೆಯಲಿಕ್ಕೆ ಹೋದೆ ಕಾಗೆಗೆ. ಕೊಂಚ ಬಟ್ಟೆ ಜಾರಿದಾಗ ತುಂಬಾ ನಕ್ಕಿದ್ದೆ ನೀನು ಆದಿನ. ನನಗೋ ಪ್ರಾಣ ಸಂಕಟ. ಕಾಗೆಯ ಉಪದ್ರವ. ನೀನು ನನಗೆ ಸಹಾಯ ಮಾಡೋದು ಬಿಟ್ಟು ನನ್ನನ್ನು ನೋಡಿ ತುಂಬಾ ನಕ್ಕಿದ್ದೆ ಆ ದಿನ. ವಿನೋದ ಮಾಡಿದ್ದೆ. ಆಗ ನಾನು ತುಂಬಾ ಅತ್ತಿದ್ದೆ. ಆಗ ನೀನು ನನ್ನನ್ನು ಸಂತೈಸಿದ್ದೆ. ಗಾಯ ಮಾಡಿಕೊಂಡು ಬಂದ ನಾನು ನಿನ್ನ ಮಡಿಲಲ್ಲಿ ಮಲಗಿದ್ದೆ. ನನ್ನ ಕಣ್ತುಂಬಾ ನೀರು ತುಂಬಿತ್ತು. ನೀನದನ್ನು ಒರೆಸಿದ್ದೆ. ಸಮಾಧಾನ ಮಾಡಿದ್ದೆ. ಬಹುಹೊತ್ತು ನಾನು ನಿನ್ನ ಮಡಿಲಿನಲ್ಲಿಯೇ ವಿಶ್ರಮಿಸಿದ್ದೆ. ಬಳಿಕ ನೀನು ನನ್ನ ಮಡಿಲಿನಲ್ಲಿ ವಿಶ್ರಮಿಸಿದೆ. ಆ ಕಾಗೆ ಮತ್ತೆ ಬಂತು. ಈ ಸಮಯವನ್ನು ಉಪಯೋಗಿಸಿ ಕಾಗೆ ಬಹುವಾಗಿ ಪೀಡಿಸಿತು ನನ್ನನ್ನು. ಎದೆಯನ್ನೇ ಕುಕ್ಕಿತು. ಒಂದಲ್ಲ ಹಲವು ಬಾರಿ. ನನಗೋ ಮೊದಲು ನಿನ್ನನ್ನು ಎಬ್ಬಿಸಲು ಕಷ್ಟವಾಯಿತು. ಯಾಕೆಂದರೆ ಸುಖನಿದ್ರೆಯಲ್ಲಿದ್ದಾಗ ಸಣ್ಣ ಸಣ್ಣ ವಿಷಯಕ್ಕೆ ಯಾಕೆ ಎಬ್ಬಿಸಬೇಕು ಎಂಬುದಾಗಿ. ಆದರೆ ಪೀಡೆ ಮಿತಿಮೀರಿತು. ನಾನೇಳಿಸುವ ಮೊದಲೇ ನಿನಗೆ ಎಚ್ಚರವಾಯಿತು. ಹೇಗೆಂದರೆ ನನ್ನ ರಕ್ತದ ಬಿಂದುಗಳು ನಿನ್ನ ಮುಖದ ಮೇಲೆ ಬಿದ್ದವು. ಹರಿದ ರಕ್ತ ನಿನ್ನನ್ನು ತಲುಪಿತು. ಅದರಿಂದ ಎಚ್ಚರಗೊಂಡೆ ನೀನು. ನನ್ನನ್ನು ನೋಡಿದೆ. ನೋಡಿದರೆ ಗಾಯವಾಗಿದೆ. ರಕ್ತ ಬರ್ತಾಯಿದೆ. ಅದರಲ್ಲೂ ಎದೆಯಲ್ಲಿ ಗಾಯ ಎಂದಾಗ ಪ್ರಾಣಾಪತ್ತಿಗೆ ಹೊರಟಂತೆ ಭಾವ. ಹಾಗಾಗಿ ಕೆರಳಿದ ಸರ್ಪದಂತೆ, ವೇಗದ ಉಸಿರುಬಿಟ್ಟು ಬುಸುಗುಟ್ಟಿದಂತೆ ನೀನು ಕೇಳಿದೆ ನನ್ನನ್ನು. ಯಾರು ನಿನ್ನೆದೆಯನ್ನು ಗಾಯಗೊಳಿಸಿದವರು? ಐದು ಹೆಡೆಯ ಸರ್ಪದ ಜೊತೆಗೆ ಆಟವಾಡುವ ದುರ್ಬುದ್ಧಿ ಯಾರಿಗೆ ಬಂತು? ಎಂದು ಕೇಳಿದಾಗ ಉತ್ತರ ನಿನಗೇ ಸಿಕ್ಕಿತು. ಅತ್ತ ತಿರುಗಿ ನೋಡುವಾಗ ಕಾಗೆ. ಆ ಕಾಗೆಯನ್ನ ನೀನು ನೋಡಿದೆ. ಅದರ ಕಾಲುಗಳೆಲ್ಲ ರಕ್ತ. ಕಾಲ ಉಗುರುಗಳ ರಕ್ತವು ನನಗೇನು ತೊಂದರೆ ಮಾಡಿದೆ ಅದು ಎನ್ನುವುದನ್ನು ಹೇಳ್ತಾಯಿತ್ತು. ಆ ಕಾಗೆ ನನ್ನ ಕಡೆಯೇ ಅಭಿಮುಖವಾಗಿರುವಂಥದ್ದು ಇನ್ನು ಇದೆ, ಮುಗಿದಿಲ್ಲ. ಬಂದು ಕುಕ್ಕಲಿಕ್ಕಿದೆ ಎನ್ನುವುದನ್ನು ಸೂಚಿಸ್ತಾ ಇತ್ತು.

ಯಾವ ಕಾಗೆ ಅದು? ಸಣ್ಣಪುಟ್ಟ ಕಾಗೆಯಲ್ಲ. ಇಂದ್ರನ ಮಗನಂತೆ. ಆಕಾಶಗಮನದಲ್ಲಿ ವಾಯುವಿಗೆ ಸಮಾನ ಎಂಬಂತಿದ್ದಹ ಆ ಕಾಗೆ ಯಾವುದೋ ಕಾರಣಕ್ಕೆ ಭೂಮಿಗೆ ಬಂದಿದೆ. ವಿಹಾರಾರ್ಥವಾಗಿ ಭೂಮಿಗೆ ಬಂದು ಮಾಡಬಾರದ ಕೆಲಸವನ್ನು ಮಾಡಿದೆ. ಕೋಪ ಬಂತು ರಾಮನಿಗೆ. ಕೋಪದಲ್ಲಿ ಕೆಂಪಾಯಿತು ಕಣ್ಣು. ಆ ಕಾಗೆಯ ಕುರಿತು ಕಠೋರವಾದ ನಿಶ್ಚಯವನ್ನು ನೀನು ಮಾಡಿದೆ. ಬದುಕಲು ಯೋಗ್ಯವಲ್ಲ. ಇದಕ್ಕೆ ಮೃತ್ಯುದಂಡವೇ ಸರಿಯಾದ ಶಿಕ್ಷೆಯೆನ್ನುವ ಒಂದು ಕಠೋರವಾದ ನಿಶ್ಚಯವನ್ನು ನೀನು ಮಾಡಿದೆ. ಕುಳಿತ ದರ್ಭಾಸನದಿಂದಲೇ ದರ್ಭೆಯೊಂದನ್ನು ಸೆಳೆದು ತೆಗೆದು ಅದಕ್ಕೆ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿದೆ. ಯಾವಾಗ ರಾಮನು ಆ ದರ್ಭೆಗೆ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿದನೋ ಆ ದರ್ಭೆ ಬೆಂಕಿಯುಗುಳಲು ಪ್ರಾರಂಭಿಸಿತು. ಪ್ರಳಯಕಾಲದ ಅಗ್ನಿಯಂತೆ ಅದು ಪ್ರಜ್ವಲಿಸಿತು. ಆ ದರ್ಭೆಯನ್ನು ಕಾಗೆಯೆಡೆಗೆ ಪ್ರಯೋಗಿಸಿದೆ ನೀನು. ಆ ದರ್ಭೆಯು ಕಾಗೆಯನ್ನು ಹಿಂಬಾಲಿಸಿತು.

ಪರಿಣಾಮವನ್ನರಿಯದೇ ಕೆಲಸ ಮಾಡಬಾರದು. ನಾವು ಒಂದು ಕಾರ್ಯ ಮಾಡಬೇಕಿದ್ದರೆ ನಾಲ್ಕನೇ ಹೆಜ್ಜೆಯವರೆಗೆ ಯೋಚಿಸಬೇಕಂತೆ. ಕಾಗೆಯು ತಾನು ಬಹಳ ವೇಗವಾಗಿ ಹಾರಬಲ್ಲೆ ಎಂಬ ಧೈರ್ಯದಲ್ಲಿ ವೇಗವಾಗಿ ಹಾರಿತು. ಹಿಂದಿನಿಂದ ಬರ್ತಾಯಿದೆ ಬ್ರಹ್ಮಾಸ್ತ್ರ. ಬಳಿಕ ವಿವಿಧ ಗತಿಯನ್ನು ಹೊಂದಿತು. ಅದು ಹೇಗೆ ಹೋಯಿತೋ ಬ್ರಹ್ಮಾಸ್ತ್ರವೂ ಅದರ ಹಿಂದೆ ಹಾಗೆಯೇ ಹೋಯಿತು. ಗುರಿ‌ ಹಿಡಿದು ಪ್ರಯೋಗ ಮಾಡಿದ ಕೇವಲ‌ ಭೌತಿಕ ಬಾಣದಂತಲ್ಲ ಬ್ರಹ್ಮಾಸ್ತ್ರ. ಅದಕ್ಕೆ ಸಂಕಲ್ಪ‌ ಇದೆ, ಸಂಕಲ್ಪದ ಪ್ರಕಾರ ಕೆಲಸ‌ ಮಾಡ್ತದೆ. ಅಸ್ತ್ರದೇವತೆ ಅದು. ಆ ಕಾಗೆಗೆ ತಾನು ಓಡಿ‌ ತಪ್ಪಿಸಿಕೊಳ್ಲಿಕ್ಕೆ ಸಾಧ್ಯವಿಲ್ಲ‌ ಅಂತ ತೀರ್ಮಾನ ಆದ್ಮೇಲೆ ಯಾರನ್ನಾದ್ರೂ ದೊಡ್ಡವರನ್ನು ಹಿಡಿಯೋದು ಅಂತ ಒಬ್ಬೊಬ್ಬರನ್ನೇ ದೊಡ್ಡವರನ್ನು ಆಶ್ರಯಿಸಿತದು. ದೊಡ್ಡ ದೊಡ್ಡ ಮಹರ್ಷಿಗಳು, ಬ್ರಹ್ಮರ್ಷಿಗಳು, ಲೋಕಪಾಲಕರು, ದೇವತೆಗಳು ಯಾರೂ ಆಶ್ರಯಕೊಡಲಿಲ್ಲ. ಅವರು ಹೇಳಿದ್ದೇನು? ‘ನಿನಗೆ ಆಶ್ರಯ ಕೊಟ್ಟರೆ ಪರಿಣಾಮ ನಿನ್ನ ಜೊತೆಯಲ್ಲಿ ‌ನಾವೂ ಹೋಗ್ಬೇಕಾಗ್ತದೆ. ನೀನೊಬ್ನೇ ಹೋಗೋದು ಒಳ್ಳೇದು. ನಾನೇನು ಮಾಡಿಲ್ಲ’ ಎನ್ನುವ ಉತ್ತರ ಆ ಪಕ್ಷಿಗೆ ಬಂದಿದೆ.
ಲೋಕವೆಲ್ಲ ಸುತ್ತಿದ ಕಾಗೆ ಯಾರಾದ್ರೂ ಅಭಯ ಕೊಡಿ, ಆಶ್ರಯ ಕೊಡಿ ಎಂಬುದಾಗಿ, ಎಲ್ಲಿಯೂ ಆಶ್ರಯ ಸಿಕ್ಕಿಲ್ಲ. ಕೊನೆಗೆ ಹೋಗಿ ತಂದೆಯನ್ನಾಶ್ರಯಿಸಿತು ~ ಇಂದ್ರದೇವನನ್ನು! ಇಂದ್ರನಂತೂ ತ್ಯಜಿಸಿದನಂತೆ. ‘ಹಾಳಾಗಿ ಹೋಗು ನೀನು. ನಾನೇನೂ ಮಾಡ್ಲಿಕ್ಕೆ‌ ಸಾಧ್ಯ ಇಲ್ಲ. ನೀನು ಮಾಡ್ಕೊಂಡಿದ್ದು ನೀನು ಅನುಭವಿಸು. ರಾಮನಿಗೆ ಎದುರಾಗಿ, ಬ್ರಹ್ಮಾಸ್ತ್ರಕ್ಕೆದುರಾಗಿ ನಾನು ಕಾರ್ಯ ಮಾಡ್ಲಿಕ್ಕೆ ಸಾಧ್ಯ ಇಲ್ಲ’ ಎಂಬುದಾಗಿ ತಂದೆಯೂ ಪರಿತ್ಯಜಿಸಿದ ಮೇಲೆ‌, ಎಲ್ಲಾ ದೇವತೆಗಳೂ, ಮಹರ್ಷಿಗಳೂ,‌ ಬ್ರಹ್ಮರ್ಷಿಗಳೂ ಕೈಬಿಟ್ಟ ಮೇಲೆ ಮೂರು ಲೋಕವೆಲ್ಲ ಸುತ್ತಾಡಿ ಕೊನೆಗೆ ರಾಮನ ಕಾಲಬುಡಕ್ಕೇ ಬಂತು. ಬಂದು ಕಾಲಿಗೆ ಬಿದ್ದುಬಿಟ್ಟಿದೆ. ಅಭಯವನ್ನು ಯಾಚನೆ ಮಾಡ್ತಾ ಇದೆ. ರಾಮನದೊಂದು ವ್ರತ ಇದೆ. ಏನು? ಅಭಯ ಬೇಡಿ ಬಂದವರನ್ನು ರಾಮನು‌ ಬರಿಗೈಯಲ್ಲಿ ಹಿಂದಿರುಗಿಸುವುದಿಲ್ಲ. ರಾಮನ ರೋಮಾಂಚಕವಾದ ಪ್ರತಿಜ್ಞೆ : ಒಂದೇ ಒಂದು ಬಾರಿ‌ ಬಂದು ಶರಣಾದರೆ, “ನಾನು ನಿನ್ನವನು” ಎಂಬುದಾಗಿ ಬೇಡಿಕೊಂಡರೆ ಅಭಯ ಕೊಟ್ಟೆ. ಅದು ಶತ್ರುವೇ ಆಗಿರಲಿ. ಮೂರು ಲೋಕದಲ್ಲಿ ಯಾರಿಂದ ಬೇಕಾದ್ರೂ ಭಯವಿರಲಿ, ಅಭಯವನ್ನು ಕೊಡ್ತೇನೆ. ಇದು ನನ್ನ ವ್ರತ. ಇದು ಬಹಳ‌ ಸರಳ‌ ಇದೆ. ಏನಪ್ಪಾ? ಹೋಗಿ ರಾಮನ ಮುಂದೆ ಬಿದ್ದುಬಿಟ್ಟರಾಯ್ತು! ಶರಣಾಗಿ, ‘ನಾನು ನಿನ್ನವನು’ ಎಂಬ ಎರಡೇ ಶಬ್ದ ಬಳಸಿದ್ರೆ ಸಾಕು. ಎರಡೇ ಪದದಲ್ಲಿ‌ ನಮ್ಮೆಲ್ಲಾ ಕಷ್ಟಗಳಿಗೆ ಪರಿಹಾರ‌ ಇದೆ. ಒಂದು ಶರಣಾಗತಿಯ ‌ಭಾವ!

ಕಾಗೆ ಶರಣಾಗತ, ರಾಮ ಶರಣ್ಯ. ಈ ಕಾಗೆ ನಿಜವಾಗಿ ಮೃತ್ಯು ದಂಡಕ್ಕೆ ಯೋಗ್ಯ, ಹಾಗೆಂದು ಯೋಚಿಸಿಯೇ ಬ್ರಹ್ಮಾಸ್ತ್ರ ಪ್ರಯೋಗ‌ ಮಾಡಿದ್ದು‌ ನೀನು. ಆದರೆ ಕಾಲಿಗೆ ಬಿದ್ದಾಗ, ಕೃಪೆತೋರಿ ಪಾಲಿಸಿದೆ ನೀನು ಕಾಗೆಯನ್ನು. ಜೀವ ತೆಗೆಯಲಿಲ್ಲ. ಅಕಾರಣ ಕರುಣಾಪೂರ್ಣ ರಾಮ. ಶಸ್ತ್ರಧಾರಿಗಳಲ್ಲಿ ಅವನಿಗೆ ಸಮಾನರಿಲ್ಲ ಹಿಂದಾಗಲಿ, ಮುಂದಾಗಲಿ, ಅಂದಾಗಲಿ ಎಂಬುದಾಗಿ ಗೀತೆ ಮಹಾಭಾರತದಲ್ಲಿ ಹೇಳಿದೆ. ಆ ಕಾಗೆ ಮರಳಿ ಬರುವಾಗ ಮೊದಲಿನ ಯಾವ ಪೊಗರೂ ಇಲ್ಲ. ಪೂರ್ತಿ ಕ್ಷೀಣಶಕ್ತಿ. ಪೂರ್ತಿ ಭಯವಾಗಿಬಿಟ್ಟಿದೆ. ಅಂಥಾ ಕಾಗೆಗೆ ನೀನು ಹೇಳಿದ್ದೇನು? ‘ಹೋಗು ಬದುಕು. ಆದರೆ ಈ ಬ್ರಹ್ಮಾಸ್ತ್ರವನ್ನು ವ್ಯರ್ಥಗೊಳಿಸ್ಲಿಕ್ಕೆ ಸಾಧ್ಯ ಇಲ್ಲ. ನನ್ನ ಕೈಯ್ಯಲ್ಲಿರುವಂಥದ್ದಲ್ಲ ಅದು. ಹಾಗಾಗಿ ನಿನ್ನದೇನಾದರೂ ಕೊಡ್ಬೇಕು ಬ್ರಹ್ಮಾಸ್ತ್ರಕ್ಕೆ ನೀನು’ ಎಂದಾಗ ಆ ಕಾಗೆ ಹೇಳಿತಂತೆ, ‘ನನ್ನ ಬಲ ಕಣ್ಣನ್ನು ಕೊಡ್ತೇನೆ. ಯಾಕೆ? ಕಣ್ಣು ಸರಿ ಇರ್ಲಿಲ್ಲ. ದೃಷ್ಟಿ ಸರಿ ಇದ್ದಿದ್ರೆ ನನಗೆ ಈ ಪರಿಸ್ಥಿತಿ ಬರ್ತಿರ್ಲಿಲ್ಲ’ ಎಂದು ಹೇಳಿದಾಗ ಹಾಗೆಯೇ ಮಾಡಿದೆ ನೀನು. ಇಷ್ಟಾದ ಮೇಲೆ‌ ಆ ಕಾಗೆಯು ರಾಮನಿಗೆ ಸರಿಯಾಗಿ ನಮಸ್ಕಾರ ಮಾಡಿತಂತೆ. ರಾಮನ ತಂದೆಗೂ ನಮಸ್ಕರಿಸಿತು. ರಾಮ ಹೋಗು ಅಂತ ಬಿಟ್ಟ ಮೇಲೆ ಹೊರಟು ಹೋಯ್ತು.

ಜೀವಮಾನದಲ್ಲಿ ಯಾವತ್ತೂ ನೆನಪಿರ್ಬೇಕು. ಅನಗತ್ಯವಾಗಿ ಯಾವುದೇ ಅನಗತ್ಯ ಕಾರ್ಯವನ್ನು ಮಾಡಬಾರದು.

ಇಷ್ಟು ಹೇಳಿದ ಸೀತೆ ರಾಮನಿಗೆ ಮುಂದೆ ಹೇಳ್ತಾಳೆ, ‘ ನನಗಾಗಿ ಒಂದು ಕಾಗೆಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದವನು ನೀನು. ಈ ರಾವಣ ಮಾಡಿದ್ದು ಅದಕಿಂತ ದೊಡ್ಡ ಪಾಪದ ಕೆಲಸ. ನಿನ್ನ ಸತಿಯ ಮಾನ ಪ್ರಾಣಗಳನ್ನು ಪ್ರಶ್ನಾರ್ಥಕ ರೀತಿಯಲ್ಲಿ ಇಡ್ತಕ್ಕಂಥಾ ಸುಳ್ಳು ರಾಕ್ಷಸ ನಿನ್ನನ್ನು ಮೋಸಗಳಿಸಿ ಇಡೀ ನನ್ನನ್ನು ಕದ್ದೊಯ್ದಿರ್ತಕ್ಕಂಥವನು. ಯಾಕೆ ನೀನು ಅವನ ವಿಷಯದಲ್ಲಿ ಸುಮ್ಮನಿದ್ದೀಯೆ? ಕೃಪೆದೋರು ನನ್ನಲ್ಲಿ. ಮಿಗಿಲಾದ ಉತ್ಸಾಹದಲ್ಲಿ ಮೇಲೇಳು. ಲೋಕನಾಥನ ಮಡದಿ ಸದ್ಯ ಲಂಕೆಯಲ್ಲಿ ಅನಾಥೆಯಂತೆ ಇದ್ದೇನೆ. ನೀನೇ ಹೇಳಿದ್ದು, ‘ಕರುಣೆಗಿಂತ ದೊಡ್ಡ ಧರ್ಮ ಬೇರೆ ಯಾವುದೂ ಇಲ್ಲ’. ನನ್ನ ಮೇಲೆ ಕರುಣೆ ತೋರು. ನೀನೇನು ಅಂತ ಗೊತ್ತು ನನಗೆ. ಮಹಾವೀರ ನೀನು. ಮಹೋತ್ಸಾಹ, ಮಹಾಬಲ, ಅಪಾರಪಾರ ನೀನು. ಸಾಗರದ ತೆರನಾದ ಗಾಂಭೀರ್ಯ ನಿನ್ನದು. ದೇವರದೇವ ನೀನು. ಅಸ್ತ್ರಜ್ಞರಲ್ಲಿ ಶ್ರೇಷ್ಠ, ಸತ್ಯವಂತ, ಬಲವಂತ. ಯಾಕೆ ನೀನು ರಾಕ್ಷಸರ ಮೇಲೆ ಅಸ್ತ್ರಗಳನ್ನು ಪ್ರಯೋಗ ಮಾಡ್ತಾ ಇಲ್ಲ? ಏಕೆ ನೀನು ಸುಮ್ಮನಿರುವೆ? ಸಮರದಲ್ಲಿ ನಿನ್ನ ವೇಗವನ್ನುಮೀರಿಸುವ ಶಕ್ತಿ ನಾಗರಿಗೂ ಇಲ್ಲ, ಗಂಧರ್ವರಿಗೂ ಇಲ್ಲ, ಅಸುರರಿಗೂ ಇಲ್ಲ, ದೇವತೆಗಳಿಗೂ ಇಲ್ಲ. ನಿನ್ನೆದುರು ಇನ್ನಾರೂ ಕೂಡ ನಿಲ್ಲಲಾರರು. ಇಂಥ ನಿನಗೆ ನನ್ನ ಕುರಿತಾದ ಗಾಬರಿ, ಆತಂಕ ಇದ್ದಿದ್ದೇ ಆದರೆ, ಎತ್ತು ಧನುಸ್ಸನ್ನು, ಪ್ರಯೋಗಿಸು ಶರಗಳನ್ನು. ಕ್ಷಯಗೊಳಿಸು ರಾಕ್ಷಸರನ್ನು. ಏಕೆ ಮಾಡ್ತಾ ಇಲ್ಲ? ಅಥವಾ ನಿನ್ನ ಆದೇಶವನ್ನು ಲಕ್ಷ್ಮಣನಾದರೂ ಯಾಕೆ ನನ್ನನ್ನು ಕಾಪಾಡಲಿಕ್ಕೆ ಮುಂದೆ ಬರ್ತಾ ಇಲ್ಲ? ರಾಮ – ಲಕ್ಷ್ಮಣರೆಂದರೆ ಅನಲ-ಅನಿಲರು, ವಾಯು-ಅಗ್ನಿಗಳು. ಆ ಪುರುಷವ್ಯಾಘ್ರರೀರ್ವರು ಯಾಕೆ ನನ್ನನ್ನು ಉಪೇಕ್ಷಿಸ್ತಾ ಇದ್ದಾರೆ? ನಂದೇ ಏನೋ ತಪ್ಪಿದೆ, ಪಾಪವಿದೆ. ಹಾಗಾಗಿ ಹೀಗೆ.‌ ಸಮರ್ಥರಾದರೂ ಕೂಡ ಅವರು ಧನುಸ್ಸನ್ನು ಎತ್ತುತ್ತಿಲ್ಲ. ಅವರ ತಪ್ಪಲ್ಲ. ಯಾಕೆಂದರೆ ಅವರು ತಪ್ಪು ಮಾಡುವವರೇ ಅಲ್ಲ. ರಾಮನಿಗೂ ತಪ್ಪಿಗೂ ಸಂಬಂಧವೇ ಇಲ್ಲ. ಇದ್ದರೆ ನನ್ನಲ್ಲಿಯೇ ಏನೋ ಇರ್ಬೇಕು’.

ಹನುಮಂತ ಸೀತೆಯ ಕರುಣವಿಲಾಪವನ್ನು ಕೇಳಿಸಿಕೊಂಡ. ಕಣ್ಣೀರಿಂದ ತುಂಬಿದ ಮಾತುಗಳನ್ನು ಕೇಳಿಸಿಕೊಂಡ. ಈಗಾಗಲೇ ಒಂದು ಬಾರಿ ಆಣೆ ಮಾಡಿ ಹೇಳಿದ್ದಾನೆ ಹನುಮಂತ. ರಾಮನಿಗೆ ನಿನ್ನಲ್ಲಿ ಪ್ರೀತಿ ಹಾಗೇ ಇದೆ. ಏನೂ ವ್ಯತ್ಯಾಸವಾಗಿಲ್ಲ. ಗೊತ್ತಾಗಿಲ್ವಷ್ಟೇ ನೀನಿಲ್ಲಿದ್ದೀಯೆ ಅಂತ. ಅಷ್ಟೇ ಕಾರಣ ಬರದೇ ಇರುವುದಕ್ಕೆ’ ಅಂತ. ಆದರೆ ಸೀತೆಗೆ ಸಮಾಧಾನ ಬೇಕಾಗಿದೆ ಇನ್ನೂ ಕೂಡ. ಮತ್ತದನ್ನೇ ಹೇಳ್ತಾನೆ ಹನುಮಂತ. ನಿನ್ನ ಶೋಕದಿಂದಲಾಗಿ ರಾಮನು ವಿಮುಖನಾಗಿ ಹೋಗಿದ್ದಾನೆ. ನನ್ನ ಸತ್ಯದ ಮೇಲಾಣೆ. ರಾಮ ದುಃಖಿತನಾದ ಮೇಲೆ ಲಕ್ಷ್ಮಣನೂ ಕೂಡ ದುಃಖ ಪಟ್ಟೇ ಪಡ್ತಾನೆ. ಅವರಿಬ್ಬರೂ ದುಃಖಿತರು ನಿನಗಾಗಿ. ನಿನ್ನನ್ನು ಉಪೇಕ್ಷೆ ಮಾಡ್ತಾ ಇಲ್ಲ, ನಿನ್ನನ್ನು ಮರೆತಿಲ್ಲ, ನಿನ್ನ ಬಳಿ ಕಾಳಜಿ ಇಲ್ಲದಾಗಿಲ್ಲ ಏನೂ. ಸಂಪೂರ್ಣ ಕಾಳಜಿ ಇದೆ. ಆಯಿತು, ಮುಗೀತು. ಇನ್ನೇನೂ ಹೆಚ್ಚು ದೂರ ಇಲ್ಲ. ನೀನು ಕಂಡೆಯೋ ಇಲ್ಲವೋ ನನಗೆ? ಬಹಳ ಕಷ್ಟದಲ್ಲಿ ಕಂಡದ್ದು ನೀನು. ಕಂಡ ಮೇಲೆ ಆಯಿತು. ಹೆಚ್ಚು ಹೊತ್ತೇ ಇಲ್ಲ ಈ ದುಃಖ ಪರ್ವ ಮುಗಿಯಲಿಕ್ಕೆ. ಹತ್ತಿರ ಇದೆ. ನಾನು ಇಲ್ಲಿಂದ ಪ್ರಸ್ರವಣ ಪರ್ವತಕ್ಕೆ ಹೋಗ್ಬೇಕು, ವಾಯುವೇಗದಲ್ಲಿ ಹೋಗ್ತೇನೆ ನಾನು. ಸೇನಾಸಮೇತನಾಗಿ ರಾಮ ಇಲ್ಲಿಗೆ ಬರ್ಬೇಕು. ಅದೂ ಕೂಡ ಬೇಗ ಆಗ್ತದೆ. ಕಪಿಗಳು ಬಹಳ ವೇಗವಾಗಿ ಪ್ರಯಾಣವನ್ನು ಮಾಡ್ತಾರೆ. ನನ್ನ ಬೆನ್ನ ಮೇಲೆ ಕುಳಿತು ಅದೇ ವೇಗದಲ್ಲಿ ಬರ್ತಾನೆ ರಾಮ ಅಲ್ಲಿಂದ ಇಲ್ಲಿಗೆ. ಆಯ್ತು ಅಷ್ಟೇ. ಮುಗೀತು ಇದು ಅಂತ. ಅವರಿಬ್ಬರು ನಿನ್ನ ದರ್ಶನದ ತವಕದಲ್ಲಿ ಲಂಕೆಯಲ್ಲಿ ಭಸ್ಮೀಭೂತವನ್ನಾಗಿ ಮಾಡ್ತಾರೆ. ಲಂಕೆಸುಟ್ಟ ಉರಿಯ ಬೆಳಕಿನಲ್ಲಿ ನಿನ್ನನ್ನು ನೋಡ್ಬೇಕವರು. ಯಾಕಂದ್ರೆ ನೀನು ಲಂಕೆಯ ಒಳಗಿದ್ದೀಯೆ. ಲಂಕೆಯನ್ನು ಸುಟ್ಟು ಬೂದಿ ಮಾಡಿ ನಿನ್ನನ್ನು ಬಂದು ನೋಡ್ತಾರೆ. ಕ್ರೂರ ರಾವಣನನ್ನು ಸಂಹಾರ ಮಾಡ್ತಾರೆ. ರಾಮ ನಿನ್ನನ್ನು ಅಯೋಧ್ಯೆಗೆ ಕರ್ಕೊಂಡು ಹೋಗ್ತಾನೆ. ಅದಿರಲಿ, ಈಗ ರಾಮನಿಗೆ ಸಂದೇಶ ಏನು ಹೇಳ್ಬೇಕು ಅಂತ ಹೇಳು.

ರಾಮ ಲಕ್ಷ್ಮಣರಿಗೆ ಮತ್ತು ಸುಗ್ರೀವನಿಗೆ ಮತ್ತು ಎಲ್ಲ ಕಪಿಗಳೂ ಕೂಡ ಕಾಯ್ತಾ ಇದ್ದಾರೆ. ಅವರಿಗೂ ಹೇಳ್ತೇನೆ. ಸೀತೆ ನಿಮ್ಮನ್ನು ಕುರಿತು ಇಂಥಾ ಸಂದೇಶವನ್ನು ಹೇಳಿದಳು..ಹಾಗಾಗಿ, ಸಂದೇಶವನ್ನು ಹೇಳು’ ಅಂದಾಗ, ಆ ದೇವಾಂಗನೆಯಂಥಾ ಸೀತೆ ಹನುಮಂತನನ್ನು ಕುರಿತು, ರಾಮ-ಲಕ್ಷ್ಮಣ-ಸುಗ್ರೀವರು ಎದುರಿದ್ದಾಗ ಹೇಗೆ ಮಾತಾಡ್ತಾರೋ‌ ಹಾಗೇ ಮಾತನಾಡ್ತಾಳೆ, ಅವರಿಗೆ ಸಂದೇಶವನ್ನು ಕೊಡ್ತಾಳೆ. ‘ಹನುಮ, ಯಾವ ಜಗದೊಡೆಯನನ್ನು ಕೌಸಲ್ಯೆಯು, ಆ ಮನಸ್ವಿನಿಯು, ಯೋಗವಂತೆಯು ಪ್ರಕಟಿಸಿದಳೋ, ಕೌಸಲ್ಯಾನಂದವರ್ಧನ.. ಅಂಥಾ ರಾಮನನ್ನು ನನ್ನ ಪರವಾಗಿ ಕುಶಲ ಪ್ರಶ್ನೆ ಮಾಡು. ಇದೊಂದು ಶ್ಲೋಕ‌ ರಾಮನಿಗೆ.
ಲಕ್ಷ್ಮಣನಿಗೆ ಸುಮಾರು! ಲಕ್ಷ್ಮಣನೆಂದರೆ ಯಾರು? ಪರಿಚಯ ಕೊಡ್ತಾಳೆ ಹನುಮಂತನಿಗೆ ಸೀತೆ. ಲಕ್ಷ್ಮಣನೆಂದರೆ ತ್ಯಾಗಿ. ಏನೆಲ್ಲ ಬಿಟ್ಟು ಬಂದ. ಚೆಂದ ಚೆಂದದ ಮಾಲೆಗಳು, ಸರ್ವ ರತ್ನಗಳು, ಅವನು ಬಯಸಿದ್ದರೆ ವರಾಂಗನೆಯರು ಅವನಿಗೆ ದುರ್ಲಭವಲ್ಲ. ಈ ಭೂಮಂಡಲದಲ್ಲಿಯೇ ದುರ್ಲಭವಾದ ಐಶ್ವರ್ಯ. ಇದೆಲ್ಲವನ್ನೂ ರಾಮನಿಗಾಗಿ ತ್ಯಾಗ ಮಾಡಿದನು. ತಂದೆಯನ್ನೂ,ತಾಯಿಯನ್ನೂ ಬಿಟ್ಟು ಬಂದವನು. ಭಾಗ್ಯವಂತೆಯಾದ ಸುಮಿತ್ರೆಯನ್ನು ಸಮಾಧಾನಪಡಿಸಿ ರಾಮನ ಹಿಂದೆಯೇ ಕಾಡಿಗೆ ಬಂದ. ವನವಾಸವು ರಾಮನಿಗೆ ಮಾತ್ರಾ ಇತ್ತು. ಲಕ್ಷ್ಮಣನಿಗೆ ಬರಬೇಕೆಂದಿರಲಿಲ್ಲ. ಅನುತ್ತಮವಾದ ಸುಖವನ್ನು ಬಿಟ್ಟು ಬಂದವನು. ಇಲ್ಲಿ ರಾಮನ ಸುಖವೇ ಸುಖ. ಹಗಲಿರುಳೂ ಏನು ರಾಮನಿಗೆ ಅನುಕೂಲ, ಹೇಗೆ ರಾಮನಿಗೆ ಅನುಕೂಲ, ಯಾವುದು ಯಾವಾಗ ರಾಮನಿಗೆ ಹಿತ ಎನ್ನುವುದೊಂದೇ ಚಿಂತೆ. ಆ ಧರ್ಮಾತ್ಮನು ಸದಾ ರಾಮನ ಅನುಕೂಲವನ್ನು, ಹಿತವನ್ನು ಬಯಸಿ ಅವನನ್ನು ಹಿಂಬಾಲಿಸಿದ್ದಾನೆ. ಕಾಡಿನಲ್ಲಿ ರಾಮನನ್ನು ರಕ್ಷಿಸುತ್ತಾನೆ. ಅವನಿಗೆ ಬೇಕಾದುದ್ದೆಲ್ಲವನ್ನೂ ಮಾಡಿಕೊಡುತ್ತಾನೆ. ಹಣ್ಣು-ಹಂಪಲು, ಸಮಿತ್ತು, ಹೂಗಳು, ಕಟ್ಟಿಗೆ ಎಲ್ಲವನ್ನೂ ಅವನೇ ತಂದುಕೊಡುತ್ತಾನೆ. ನೂರು ಸೇವಕರ ಕಾರ್ಯವನ್ನು ಒಬ್ಬನೇ ಮಾಡುತ್ತಾನೆ. ಎಂತಹ ರೂಪ ಅವನದು! ಸಿಂಹದ ಹೆಗಲು, ದೃಢವಾದ ಮನಸ್ಸಿನವನು, ಪ್ರಿಯದರ್ಶನ, ರಾಮನೆಂದರೆ ತಂದೆಯಂತೆ, ನಾನೆಂದರೆ ತಾಯಿಯಂತೆ. ಆ ಮಾಯಾಮೃಗದ ಸನ್ನಿವೇಶದಲ್ಲಿ ಬಂದ ಮಾತುಗಳು ಸೀತೆಯ ಭಾವವಲ್ಲ. ಲಕ್ಷ್ಮಣ ಮತ್ತು ಸೀತೆಯ ಬಗ್ಗೆ ಏನೆಲ್ಲ ಬರೆದವರಿದ್ದಾರೆ. ಬುದ್ಧಿಯ ಬೆಳಕು ಮತ್ತು ಕೊಳಕು ಎರಡೂ ಪುಸ್ತಕವಾಗಿ ಹೊರಬರಬಹುದು. ಕೊಳಕನ್ನು ಪುಸ್ತಕವಾಗಿ ಬರೆದವರು ಈ ಪಂಕ್ತಿಯನ್ನು ನೋಡಿಲ್ಲ. ಸುಮಿತ್ರೆಯು ಲಕ್ಷ್ಮಣನಿಗೆ ಹೇಳಿ ಕಳುಹಿಸಿದ್ದದು.ಲಕ್ಷ್ಮಣ, ಕಾಡೇ ನಿನಗೆ ಅಯೋಧ್ಯೆ, ರಾಮನೇ ದಶರಥ, ಸೀತೆಯೇ ನಿನಗೆ ನಾನು. ಹಲವು ಬಾರಿ ಹೋಗು ಎಂದಳು. ಅವಳು ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸಿದ್ದಾನೆ. ಮಾತೃಭಾವವನ್ನು ಸೀತೆಯಲ್ಲಿ ಮತ್ತು ಪಿತೃಭಾವವನ್ನು ರಾಮನಲ್ಲಿ ಇಟ್ಟಿದ್ದಾನೆ.

ಇನ್ನೊಂದು ಮಾತನ್ನು ಹೇಳುತ್ತಾಳೆ. ಅಂದು ರಾವಣ ಬಂದು ನನ್ನನ್ನು ಸೆಳೆಯುವಾಗ ಅವನಿದ್ದಿದ್ದರೆ ರಾವಣನಿಗೊಂದು ಗತಿಕಾಣಿಸುತ್ತಿದ್ದ. ನನ್ನ ಅಪಹರಣವಾಗುತ್ತಿರುವುದು ಗೊತ್ತೇ ಆಗಲಿಲ್ಲ ರಾಮನ ಚಿತ್ತವನ್ನು ಪ್ರಸನ್ನಗೊಳಿಸುವಂತಹ ಲಕ್ಷ್ಮಣನಿಗೆ. ಗುರುಹಿರಿಯರ ಸೇವೆಯೇ ಅವನ ಸ್ವಭಾವ. ಒಳ್ಳೆಯ ಕಳೆಯುಳ್ಳವನು, ಸಮರ್ಥ, ಹೆಚ್ಚು ಮಾತನಾಡುವವನಲ್ಲ. ಅವನು ಎಲ್ಲರಿಗೂ ಪ್ರಿಯ. ದಶರಥನಂತೆಯೇ ಅವನು. ರಾಮನೂ ಹಾಗೆಯೇ ಹೇಳುತ್ತಾನೆ ಲಕ್ಷ್ಮಣನಿಗೆ. ಪಂಚವಟಿಯಲ್ಲಿ ಲಕ್ಷ್ಮಣನು ಕುಟೀರ ಕಟ್ಟಿದಾಗ ಪ್ರಭು ಎಂದು ಸಂಬೋಧಿಸಿದ್ದಾನೆ ರಾಮ ಅವನನ್ನು. ಸೀತೆ ಇನ್ನೊಂದು ಪ್ರಶಸ್ತಿಯನ್ನು ಕೊಟ್ಟಿದ್ದಾಳೆ ಲಕ್ಷ್ಮಣನಿಗೆ. ಹನುಮಂತ ನಿನಗೆ ಆಗೊಂದು ಗುಟ್ಟು ಹೇಳಿದ್ದೆ. ಇನ್ನೊಂದು ಗುಟ್ಟು ಈಗ ಹೇಳುತ್ತೇನೆ. ಲಕ್ಷ್ಮಣನೆಂದರೆ ರಾಮನಿಗೆ ನನಗಿಂತ ಹೆಚ್ಚು ಪ್ರೀತಿ. ಆಗ ಹೇಳಿದ್ದೇನು? ರಾಮನಿಗೆ ನನಗಿಂತಲೂ ಪ್ರಿಯವಾದವರು ಯಾರೂ ಇಲ್ಲ ಎಂದು. ಈಗ ಹೇಳಿದಳು, ನನಗಿಂತ ಪ್ರೀತಿ ಎಂದರೆ ಅದು ಲಕ್ಷ್ಮಣ ಮಾತ್ರ. ರಾಮನು ಯಾವ ಹೊಣೆಗಾರಿಕೆಯನ್ನು ಕೊಟ್ಟರೂ ಅವನು ಮಾಡುತ್ತಾನೆ. ಹಾಗಾಗಿ ನನ್ನ ರಾಮನಿಗೆ ದಶರಥನ ಕೊರತೆ ಮನಸ್ಸಿಗೆ ಬರುತ್ತಿಲ್ಲ. ಹಾಗೆ ಲಕ್ಷ್ಮಣ ನೋಡಿಕೊಳ್ಳುತ್ತಾನೆ ರಾಮನನ್ನು. ಕೊನೆಯಲ್ಲಿ ಒಂದು ಮಾತನ್ನು ಹೇಳಿದಳು. ಏನಾದರೂ ಮಾಡು ಹನುಮಂತ. ಲಕ್ಷ್ಮಣ ನನಗಾಗಿ ಎದ್ದು ಬರಬೇಕು. ನೀನು ಬುದ್ಧಿವಂತ, ಸಮರ್ಥ. ಹಾಗಾಗಿ ನೀನೇ ದಾರಿ. ಲಕ್ಷ್ಮಣ ನನಗಾಗಿ ಸಮರಕ್ಕೆ ಸನ್ನದ್ಧನಾಗುವಂತೆ ಮಾಡು. ಲಕ್ಷ್ಮಣ ಮೃದು, ಶುಚಿ, ರಾಮನ ಪ್ರಿಯ. ಇವೆಲ್ಲ ನಿತ್ಯ.

ನಿನ್ನ ಪ್ರಯತ್ನದಿಂದಲಾಗಿ ರಾಮನು ಕಾರ್ಯೋನ್ಮುಖನಾಗಬೇಕು ಎಂದು ಹೇಳಿ, ಕೊನೆಯಲ್ಲಿ ನೋಡು, ನಾನು ನಿನಗೆ ಹೇಳಿದ್ದೆ. ಒಂದು ವರ್ಷದಲ್ಲಿ 10 ತಿಂಗಳು ಕಳೆದಿದೆ. ನನಗೆ ಇನ್ನು 2 ತಿಂಗಳು ಆಯಸ್ಸು. ನಂತರ ಅವನು ಕೊಲ್ಲುತ್ತಾನೆ. ನಾನು ಸಾಯುತ್ತೇನೆ. ಆದರೆ ನಾನು ಇನ್ನು ಬದುಕಿರುವುದು 1 ತಿಂಗಳು ಮಾತ್ರಾ. ಆಮೇಲೆ ನಾನಿಲ್ಲಿರುವುದಿಲ್ಲ. ಇದು ಸತ್ಯ. ಅಷ್ಟರಲ್ಲಿ ರಾಮ ಬರದಿದ್ದರೆ ನಾನಿಲ್ಲ. ಇದಕ್ಕೆ ಎರಡು ಕಾರಣಗಳು. ಒಂದು ಅವಳಿಗೆ ಸಹಿಸಲು ಕಷ್ಟವಾಗುತ್ತಿದೆ .ಈಗ ಒಂದು ದಾರಿ ಸಿಕ್ಕಿದ ಮೇಲೆ ಇನ್ನೂ ಕಷ್ಟ. ಇನ್ನೊಂದು ಹೀಗೆ ಹೇಳಿದರೆ ರಾಮ ಬೇಗ ಬರುತ್ತಾನೆ ಎಂದು. ವಿಷ್ಣುವು ಕೌಶಿಕಿಯನ್ನು ಪಾತಾಳದಿಂದ ಎತ್ತಿ ತಂದಂತೆ ನನ್ನನ್ನು ರಾಮನು ಉದ್ಧರಿಸಲಿ. ಕೌಶಿಕಿ ಎಂದರೆ ಸ್ವರ್ಗಶ್ರೀ. ಅದು ಕಾರಣಾಂತರದಿಂದ ಪಾತಾಳಕ್ಕೆ ಹೋಗಿತ್ತು. ಇಂದ್ರನು ವೃತ್ರಾಸುರನನ್ನು ಕೊಂದಾಗ ಬ್ರಹ್ಮಹತ್ಯೆಯ ದೋಷ ಪ್ರಾಪ್ತವಾದಾಗ ಸ್ವರ್ಗಶ್ರೀ ಅವನನ್ನು ಬಿಟ್ಟು ಪಾತಾಳವನ್ನು ಸೇರಿತ್ತು. ಮಹಾವಿಷ್ಣುವು ಇಂದ್ರನನ್ನು ತ್ರೈಲೋಕ್ಯಾಧಿಪತಿಯಾಗಿ ಅಭಿಷೇಕ ಮಾಡಿದರೂ ಆ ಲಕ್ಷ್ಮಿ ಬರಲಿಲ್ಲ. ಆಗ ಅದು ಪಾತಾಳದಲ್ಲಿದೆ ಎಂಬ ಅಶರೀರವಾಣಿಯಾಯಿತು. ಆಗ ವಿಷ್ಣುವು ಅಲ್ಲಿ ಹೋಗಿ ಪುನಃ ಇಂದ್ರಶ್ರೀ ಅವನಿಗೆ ಪ್ರಾಪ್ತವಾಗುವಂತೆ ಮಾಡುತ್ತಾನೆ. ಅದನ್ನು ನೆನಪಿಸಿ ಈ ಪಾತಾಳದಂತಹ ಲಂಕೆಯಿಂದ ನನ್ನನ್ನು ಉದ್ಧರಿಸಲಿ ಎಂದು ಹೇಳಿ ತನ್ನ ಮಾಸಿಹೋದ ವಸ್ತ್ರದ ಗಂಟೊಂದನ್ನು ಸೀತೆ ಬಿಡಿಸಿದಳು.ಚೂಡಾಮಣಿ ಎಂದರೆ ಜಡೆಬಿಲ್ಲೆ. ಸ್ವರ್ಣಪುಷ್ಪದ ರೂಪವಿದ್ದು ಅದರ ಮೇಲೆ ಮಣಿ ಇರುತ್ತದೆ. ಅದರ ರಂಧ್ರದಿಂದ ಕೂದಲನ್ನು ಬಂಧಿಸುವಂಥದ್ದು. ಆಕೆಗೆ ಆಭರಣಗಳ ಆಸಕ್ತಿಯಿಲ್ಲದಿರುವುದರಿಂದ ಅದನ್ನು ವಸ್ತ್ರದಲ್ಲಿ ಇರಿಸಿದ್ದಳು. ಅದನ್ನು ತೆಗೆದು ರಾಮನಿಗೆ ಕೊಡು ಎಂದು ಕೊಟ್ಟಳು.

ಇದನ್ನು ಕಾಯುತ್ತಿದ್ದ ಹನುಮಂತ ಅನುತ್ತಮವಾದ ಚೂಡಾಮಣಿಯನ್ನು ಸ್ವೀಕರಿಸಿದ. ಧನ್ಯವಾದ ಭಾವ ಅವನಿಗಿರಬಹುದು. ಅದನ್ನು ಭುಜದಲ್ಲಿಡಲು ಆಗದಿದ್ದಾಗ ಸುರಕ್ಷಿತವಾಗಿ ಬೆರಳಿನಲ್ಲಿ ಸಿಕ್ಕಿಸಿಕೊಂಡ. ಸೀತೆಗೆ ನಮಸ್ಕಾರ ಮಾಡಿ, ಪ್ರದಕ್ಷಿಣೆ ಬಂದು ಮತ್ತೆ ನಮಸ್ಕಾರ ಮಾಡಿದ. ಪಕ್ಕದಲ್ಲಿ ಬಂದು ಬಾಗಿ ನಿಂತುಕೊಂಡ. ಆಗ ಅವನಿಗಾದ ಸಂತೋಷಕ್ಕೆ ಪಾರವೇ ಇಲ್ಲ. ಸೀತೆಯನ್ನು ಕಂಡಿದ್ದು, ಮಾತನಾಡಲು ಅವಕಾಶವಾಗಿದ್ದು, ಅವಳು ನಂಬಿದ್ದು, ರಾಮನ ಸಂದೇಶವನ್ನು ಕೊಟ್ಟಿದ್ದು, ಸೀತೆಯ ಸಂದೇಶವನ್ನು ಪಡೆದುಕೊಂಡಿದ್ದು, ಈ ಮಣಿ ಸಿಕ್ಕಿದ್ದು. ಇದರಿಂದ ಮಹದಾನಂದವಾಗಿದೆ ಅವನಿಗೆ. ಹೃದಯದಿಂದ ಹೋಗಿ ರಾಮನನ್ನು ಸೇರಿದ ಹನುಮಂತ. ಶರೀರ ಮಾತ್ರ ಇಲ್ಲಿತ್ತು. ಹನುಮನ ವಿಷಯದಲ್ಲಿ ಈ ಉಲ್ಲೇಖವನ್ನು ಪದೇ ಪದೇ ಕಾಣುತ್ತೇವೆ. ಅಂತರಂಗದ ಸ್ಥಿತಿ ಅದು. ಹನುಮಂತನಿಗೆ ತುಂಬಾ ಸಹಜ. ಚಂಡಮಾರುತದಿಂದ ಮುಕ್ತವಾದ ಪರ್ವತದಂತೆ ಸ್ಥಿರಗೊಂಡು ಮರಳಿಹೋಗುವ ಯೋಚನೆ ಮಾಡಿದ. ಚೂಡಾಮಣಿಯನ್ನು ಕೊಟ್ಟ ಸೀತೆ ಹನುಮಂತನಿಗೆ ಹೀಗೆ ಹೇಳಿದಳು. ನೋಡು, ಇದು ಸರಿಯಾದ ಕುರುಹು. ಇದು ರಾಮನಿಗೆ ಚೆನ್ನಾಗಿ ಗೊತ್ತು. ಇದನ್ನು ಕೊಟ್ಟ ಮೇಲೆ ರಾಮನಿಗೆ ಸಂಶಯವಾಗುವುದಿಲ್ಲ. ಇದನ್ನು ಕಂಡೊಡನೆ ರಾಮನು ಕೌಸಲ್ಯೆ, ನಾನು ಮತ್ತು ದಶರಥ ಈ ಮೂವರ ಸ್ಮರಣೆಯನ್ನು ಮಾಡುತ್ತಾನೆ. ಇದರ ಕಾರಣ ಮುಂದೆ ತಿಳಿಯುತ್ತದೆ. ಜನಕನ ಸಂಬಂಧವೂ ಇದೆ ಈ ಮಣಿಗೆ. ಅವರೆಲ್ಲರ ಸ್ಮರಣೆಯನ್ನು ರಾಮ ಮಾಡುತ್ತಾನೆ. ನೀನು ಏನೇನು ಮಾಡಿದರೆ ರಾವಣನ ಸಂಹಾರವಾಗಿ ನಾನು ರಾಮನನ್ನು ಸೇರುತ್ತೇನೋ ಅದೆಲ್ಲಾ ಮಾಡು. ನನ್ನ ದುಃಖವನ್ನು ನೀಗು ಎಂದಾಗ ಆ ಭೀಮವಿಕ್ರಮನು ಮತ್ತೆ ಸೀತೆಗೆ ನಮಸ್ಕಾರ ಮಾಡಿದನು. ಈ ಬಾರಿ ತನ್ನ ಶಿರಸ್ಸನ್ನು ಸೀತೆಯ ಪಾದದಲ್ಲಿ ಇಟ್ಟು ಹೊರಡುವ ಉದ್ದೇಶಕ್ಕೆ ತೊಡಗಿದ. ಸೀತೆಗೆ ಅವನು ಹೊರಟನೆಂದು ತಿಳಿಯಿತು. ಅವಳಿಗೇಕೋ ನೋವಾಯಿತು. ಅವಳ ಗಂಟಲು ಕಟ್ಟಿತು. ಮತ್ತೆ ಹೇಳಿದಳು. ಹನುಮಂತ ರಾಮ-ಲಕ್ಷ್ಮಣರನ್ನು ನಾನು ಕುಶಲಪ್ರಶ್ನೆ ಮಾಡಿದ್ದೇನೆ ಎಂದು ಹೇಳು. ಸುಗ್ರೀವನಿಗೂ, ಅವನ ಮಂತ್ರಿಗಳಿಗೂ ಹೇಳು. ಹಳೆಯ ವಾನರರಿಗೂ ಹೇಳು. ನಾನು ಕುಶಲವಾಗಿದ್ದೇನೆ ಎಂದು ಹೇಳು. ಏನಾದರೂ ಮಾಡಿ ನಾನು ಬದುಕಿರುವಾಗಲೇ ರಾಮನಿಲ್ಲಿ ಬರುವಂತೆ ಮಾಡು.

ಸನ್ನಿವೇಶ ಎಷ್ಟು ಕಠಿಣವಾಗಿದೆ. ಜೀವಂತ ನಾನು ರಾಮನಿಗೆ ಸಿಗುವಂತೆ ಮಾಡು. ನೀನಿಷ್ಟು ಮಾಡಿದರೆ, ನಿನ್ನ ಮಾತಿನಿಂದಲೇ ದೊಡ್ಡ ಧರ್ಮಸಂಪಾದನೆ ಮಾಡ್ತೀಯ ನೀನು. ಅಂಥ ದೊಡ್ಡ ಪುಣ್ಯ ಬರೀ ಮಾತಿನಿಂದ ಸಿಗ್ತದೆ. ಮಾಡು ಇದನ್ನು ಹನುಮಂತ, ರಾಮನ ಉತ್ಸಾಹವನ್ನು ವರ್ಧಿಸು ಎಂದು ಸೀತೆ ಹೇಳಿದಾಗ ತಲೆ ಮೇಲೆ ಕೈಮುಗಿದನಂತೆ ಹನುಮಂತ. ಮತ್ತೆ ಹೇಳಿದನು ಹನುಮಂತ, ಬರ್ತಾನೆ ರಾಮ. ಬರುವ ಬಂದೇ ಬರುವ ರಾಮ ಕಪಿಸೇನಾಸಮೇತನಾಗಿ. ಮತ್ತೆ ಅವನ ಮುಂದೆ ಯಾರೂ ನಿಲ್ಲಲು ಸಾಧ್ಯವಿಲ್ಲ. ಅವನಿಗೆ ಎದುರಾಗಿ ಸೂರ್ಯ ಬರಲಿ, ಪರ್ಜನ್ಯ ಬರಲಿ, ಯಮಧರ್ಮರಾಜ ಬರಲಿ, ಯುದ್ಧದಲ್ಲಿ ಅವರನ್ನು ಸೋಲಿಸುವ ಶಕ್ತಿ ರಾಮನಿಗೆ. ಅದೂ ನಿನಗಾಗಿ ಎಂದ ಮೇಲೆ ಯಾರನ್ನು ಬೇಕಾದರೂ ರಾಮ ಎದುರಿಸಬಲ್ಲ. ಹಾಗಾಗಿ, ಇದು ನಿಶ್ಚಿತ. ನಿನ್ನ ನಿಮಿತ್ತವಾಗಿ ಧರೆಗೆಲ್ಲ ಒಳಿತು ಮಾಡುವುದು. ನಿನ್ನಿಂದಾಗಿ ಲೋಕೈಕನಾಯಕತ್ವ ರಾಮನಿಗೆ ಪ್ರಾಪ್ತವಾಗ್ತದೆ ಎಂದಾಗ, ಒಪ್ಪಿದಳು ಸೀತೆ. ಸೀತೆ ರಾಮಪ್ರೇಮದಿಂದ ಹೇಳಿದಳು, ಇವತ್ತೊಂದು ದಿನ ಇಲ್ಲೇ ಇರು. ನಾಳೆ ಹೋಗುವಿಯಂತೆ. ರಾಕ್ಷಸರು, ಲಂಕೆ ಹೇಗಿರಲಿ ಎಂದರೆ, ಏಕಾಂತವಾದ ರಹಸ್ಯಪ್ರದೇಶದಲ್ಲಿ ಕುಳಿತುಕೊ. ವಿಶ್ರಾಂತಿ ಮಾಡು, ನಾಳೆ ಹೋಗುವಿಯಂತೆ. ಯಾಕೆ ನೀನುಳಿಯಬೇಕು ಎಂದರೆ, ಈ ಹತಭಾಗ್ಯೆಗೆ ಒಂದು ದಿನವಾದರೂ ಸಮಾಧಾನ ಸಿಗಲಿ ನಿನ್ನ ಸಾನ್ನಿಧ್ಯದಿಂದ ಎಂದು. ಹನುಮಂತ ಇದ್ದಷ್ಟು ಹೊತ್ತು ತಂಪು ಅವಳಿಗೆ. ತನ್ನವರಂತೆ ಹನುಮ, ರಾಮದೂತ. ಅವನು ಹತ್ತಿರ ಇದ್ದರೆ ಶೋಕ ದೂರವಾಗಲೇ ಬೇಕು. ಹಾಗಾಗಿ ಈ ದೊಡ್ಡ ಕಷ್ಟದ ಸಣ್ಣ ಬಿಡುಗಡೆಗೆ ಅವಕಾಶ ಕೊಡು ಎಂದು ಹೇಳಿದಳು. ನೀನು ಹೋಗ್ತೀಯಾ ಈಗ, ರಾಘವನು ಮರಳಿಬರಬೇಕೆಂದೇ ಹೋಗ್ತೀಯ. ಆದರೂ ಕೂಡ ನನಗೆ ಗೊತ್ತಿಲ್ಲ ನಾನು ಬದುಕೀ ಇರ್ತೇನೋ ಇಲ್ವೋ…. ಈಗಲೇ ನಾನು ರಾಮವಿರಹದಲ್ಲಿ ದುಃಖಿತೆ. ಈಗ ನನಗೆ ರಾಮದೂತನಾದ ನಿನ್ನಲ್ಲಿ ಪ್ರೀತಿ ಉಂಟಾಗಿದೆ, ವಾತ್ಸಲ್ಯ ಬಂದಿದೆ. ಈಗಲಾದರೆ, ನೀನು ಹೋದ ದುಃಖ ಕೂಡ ಸೇರ್ತದೆ. ಈ ದುಃಖಕ್ಕೆ ಆ ದುಃಖವೂ ಸೇರುತ್ತದೆ. ನಿನ್ನ ಅಗಲಿಕೆಯ ದುಃಖ ನನ್ನನ್ನು ಇನ್ನೂ ಕ್ಲೇಶಗೊಳಿಸೀತು.

ಬಳಿಕ ಒಂದು ಸಂದೇಹವನ್ನು ಹೇಳ್ತಾಳೆ. ನೀನು ಬಂದಿದ್ದು ಹೌದು, ಆದರೆ ರಾಮಲಕ್ಷ್ಮಣರು ಅವರೆಲ್ಲ ಹೇಗೆ ಬರ್ತಾರೆ. ದೊಡ್ಡಯುದ್ಧವಾಗಬೇಕು ಅಂದರೆ ಕಪಿಸೈನ್ಯ ಬರಬೇಕು. ಅವರೆಲ್ಲ ಬರುವುದಾದರೂ ಹೇಗೆ… ನನ್ನ ಪ್ರಕಾರ ಗರುಡ, ವಾಯುದೇವ ಹಾಗೂ ಹನುಮಂತ, ಈ ಮೂವರನ್ನು ಬಿಟ್ಟು ಬೇರೆ ಯಾರೂ ಬರಲು ಸಾಧ್ಯವಿಲ್ಲ. ಇದಕ್ಕುತ್ತರವೇನು, ಹೇಳು ಸಮಾಧಾನವನ್ನು… ? ಲಂಕೆಗೆ ಬಂದು ರಾಕ್ಷಸ ಸಂಹಾರಮಾಡಿ, ರಾವಣನ ಎದೆಮೆಟ್ಟಿ ನಿಂತು, ನನ್ನನ್ನು ಪುನಃ ಪಡೆದರೆ ಎಷ್ಟು ಚಂದ…ಇದು ಹೇಗೆ ಸಾಧ್ಯ ಎಂದು ಕೇಳಿದಳು. ಆಗ ಹನುಮಂತ, ನೋಡಮ್ಮಾ, ಸುಗ್ರೀವನ ಬಳಿ ದೊಡ್ಡ ಕಪಿಸೈನ್ಯವಿದೆ. ಕೋಟ್ಯನುಕೋಟಿ ಕಪಿಗಳಿದ್ದಾರೆ. ಈಗ ಮುಂದೆ ಅವನ ಸೇನೆ ಬರಲಿಕ್ಕಿದೆ. ಅಲ್ಲಿ ನನಗೆ ಸಮಾನರಾದ ಕಪಿಗಳಿದ್ದಾರೆ, ನನಗಿಂತ ವೀರ ಕಪಿಗಳು ಇದ್ದಾರೆ. ನಾನೇ ಕೊನೆ. ನನಗಿಂತ ಕಿರಿಯ ಕಪಿಗಳಿಲ್ಲ ಸುಗ್ರೀವನ ಸೇನೆಯಲ್ಲಿ. ಹನುಮಂತನ ಭಾವ ನೋಡಿ… ವಿಕ್ರಮಸಂಪನ್ನರು, ಬಲವಂತರು, ಮನೋವೇಗದಲ್ಲಿ ಸುಗ್ರೀವನ ಆಜ್ಞೆಗೆ ತಕ್ಕಂತೆ ಹಾರಬಲ್ಲವರು ಅವರೆಲ್ಲ ಸುಗ್ರೀವನ ಆಜ್ಞಾಧಾರಕರು. ಹೆದರದೇ, ಭೂಮಿಯನ್ನೇ ಸುತ್ತಿಬಂದವರಿದ್ದಾರೆ. ಎಲ್ಲರೂ ನನಗಿಂತ ಬಲಾಢ್ಯರು ಹಾಗೂ ಕೆಲವರು ನನ್ನಂಥವರು. ನನಗಿಂತ ಕೆಳಗಿನವರಿಲ್ಲ. ನಾನೇ ಬಂದಮೇಲೆ ಉಳಿದವರಿಗೆಲ್ಲ ಯಾವ ಮಾತು…?

ಮಧ್ಯಮ ಬಲ, ಕಡಿಮೆ ಬಲ ಇರುವ ಸಾಮಾನ್ಯರನ್ನೇ ದೂತನನ್ನಾಗಿ ಕಳುಹಿಸಿಕೊಡ್ತಾರೆ ಹೊರತು ಉತ್ತಮರನ್ನಲ್ಲ. ಹಾಗಾಗಿ, ನಾನೇ ಬಂದ ಮೇಲೆ ಒಂದೇ ನೆಗೆತಕ್ಕೆ ಕಪಿಗಳೆಲ್ಲರೂ ಬರ್ತಾರೆ ಈ ಕಡೆಗೆ, ಮತ್ತೆ ರಾಮ-ಲಕ್ಷ್ಮಣರು ಹೇಗೆ ಬರ್ತಾರೆ? ಯೋಚನೆಯೇ ಬೇಡ. ಈ ಕಡೆ ರಾಮ, ಈ ಕಡೆ ಲಕ್ಷ್ಮಣ. ಭುಜದಲ್ಲಿಯೇ ಕೂತ್ಕೊಂಡು ಬರ್ತಾರೆ ಅವರಿಬ್ಬರೂ. ನಿನಗೆ ನಂಬಿಕೆಯಿಲ್ಲವಾ? ನಾನು ಬಂದಿದ್ದೇನಲ್ಲ ಅಲ್ಲಿಂದ ಈಗಾಗಲೇ! ಹಾಗಾಗಿ, ನನ್ನ ಬೆನ್ನ ಮೇಲೆ ಸೂರ್ಯ-ಚಂದ್ರೋದಯ ಆಗ್ತದೆ. ಆ ನೃಸಿಂಹರು ನಿನ್ನೆಡೆಗೆ ಲೀಲಾಜಾಲವಾಗಿ ನನ್ನನ್ನೇರಿ ಬರ್ತಾರೆ. ನೀನು ಸಮಾಧಾನ ಪಡು, ಕಾಲ ಪ್ರತೀಕ್ಷೆ ಮಾಡು. ಬೇರೇನೂ ಬೇಡ. ಹೆಚ್ಚು ಕಾಲವಿಲ್ಲ ರಾಮನನ್ನು ನೋಡೋದಕ್ಕೆ ಅಂತೆಲ್ಲ ಹೇಳಿ, ಇನ್ನೊಂದು ಸ್ವಲ್ಪ ಸಮಯದಲ್ಲಿ ರಾಮನ ಧನುಷ್ಠೇಂಕಾರವನ್ನು ಲಂಕೆಯಲ್ಲಿ ಕೇಳ್ತೀಯೆ ನೀನು. ಕಪಿಗಳ ಸಿಂಹನಾದವನ್ನು ಕೇಳ್ತೀಯೆ. ಘೋರರಾದ ನಖ-ದಂಷ್ಟ್ರಾಯುಧರಾದ ಕಪಿಗಳ‌ ಘರ್ಜನೆಯನ್ನು ಈ ತ್ರಿಕೂಟ ಪರ್ವತದ ಪರಿಸರದಲ್ಲಿ ನೀನು‌ ಕೇಳ್ತೀಯೆ, ಹೆಚ್ಚು ಸಮಯವಿಲ್ಲ. ಅಳಬೇಡಮ್ಮಾ.. ಮನಸ್ಸಿಗೆ ನೋವು ಮಾಡಿಕೊಳ್ಳಬೇಡ. ನೀನು ಅನಾಥೆಯಲ್ಲ. ನಿನ್ನ ಒಡೆಯ ರಾಮನಿದ್ದಾನೆ. ರಾಮನಿಗೆ ಯಾರು ಸಮಾನ? ಲಕ್ಷ್ಮಣನಿಗೆ ಯಾರು ಸಮಾನ? ಅಂಥಾ ವಾಯು-ಅಗ್ನಿಗಳಂಥಾ ಸಹೋದರರು ನಿನಗೆ ಆಶ್ರಯ. ಬಹಳ ಬೇಗ ನೀನು ಇಲ್ಲಿಂದ ಹೊರಟೆ. ಅಷ್ಟೇ.. ನಾನು ಅಲ್ಲಿಗೆ ಹೋಗೋದು, ರಾಮ ಬರೋದು ಇಲ್ಲಿಗೆ, ರಾಕ್ಷಸ ಸಂಹಾರ. ಆಯ್ತು ಇಷ್ಟೇ, ಕಾಯಿ ನೀನು ಎಂಬುದಾಗಿ ಸೀತೆಗೆ ಹೇಳಿ‌ ಹನುಮಂತ ಹೊರಡುವ ಸಿದ್ಧತೆಯನ್ನು ಮಾಡ್ತಾ ಇದ್ದಾನೆ.

ಸಂತೋಷ ಪಟ್ಟಳು ಸೀತೆ, ‘ ನಿನ್ನ ಮಾತು ಕೇಳಿದಾಗ ಸಮಾಧಾನವಾಗ್ತದೆ ಹನುಮಂತ. ಎಷ್ಟು ನೊಂದಿದ್ದೆ, ಬೆಂದಿದ್ದೆ, ಕಿವಿಯಲ್ಲಿ ಅಮೃತವನ್ನು ಎರೀತಾ ಇದ್ದೀಯೆ ನೀನು. ಒಂದು ಬಾರಿ ನಾನು, ರಾಮ‌ನನ್ನು ಸೇರುವಂತೆ ಮಾಡು. ಮತ್ತೆ, ಅದನ್ನು ಹೇಳು, ಮರೀಬೇಡ ~ ಕಾಗೆ ಒಕ್ಕಣ್ಣ ಆದ ಕಥೆ! ಇನ್ನೊಂದಿದೆ, ಚಿಕ್ಕ ಕುರುಹು. ಅದನ್ನೂ ಹೇಳಿಬಿಡು. ಅದ್ಯಾವಾಗಲೋ ಒಮ್ಮೆ ಶ್ರೀರಾಮ ಕೆಂಪು ಬಣ್ಣದ ಕಲ್ಲಿಂದ ತಿಲಕವನ್ನು ತೆಗೆದು ಸೀತೆಯ ಕೆನ್ನೆ ಮೇಲೆ ಇಟ್ಟಿದ್ನಂತೆ. ಈ ವಿನೋದ ನನಗೆ, ಅವನಿಗೆ ಇಬ್ಬರಿಗೆ ಮಾತ್ರವೇ ಗೊತ್ತು. ಮತ್ತೆ ಚೂಡಾಮಣಿಯ ಬಗ್ಗೆ ರಾಮನನ್ನು ಕುರಿತು ಹೇಳ್ತಕ್ಕಂಥದ್ದು, ಕಷ್ಟಪಟ್ಟು ರಕ್ಷಣೆ ಮಾಡ್ಕೊಂಡಿದ್ದೆ ಇಲ್ಲಿಯವರೆಗೂ ನಾನಿದನ್ನ. ಇದನ್ನು ನೋಡಿದಾಗಲೆಲ್ಲ ನಿನ್ನನ್ನು ನೋಡಿದಂತೆ ಆಗ್ತಾ ಇತ್ತು ನನಗೆ. ಇದನ್ನು ಕೊಟ್ಟೆ. ಇನ್ನು ಹೆಚ್ಚು ಕಾಲ ಬದುಕಲಾರೆ. ಈ ರಾಕ್ಷಸಿಯರ, ರಾವಣನ ಮಾತುಗಳು ಹೃದಯವನ್ನು ಭೇದಿಸ್ತಕ್ಕಂತವು. ನಿನಗಾಗಿ ಸಹಿಸಿದ್ದು ಇಲ್ಲಿವರೆಗೂ, ಇಲ್ಲವಾದರೆ ಸತ್ತೇ ಹೋಗ್ತಿದ್ದೆ. ನಿನಗಾಗಿ ಒಂದು ತಿಂಗಳು ಪ್ರತೀಕ್ಷೆ ಮಾಡ್ತೇನೆ. ಒಂದು ತಿಂಗಳ ಬಳಿಕ ಹೊರಟು ಹೋಗ್ತೇನೆ. ಯಾಕಂದ್ರೆ, ಈ ಘೋರ ರಾವಣನ ದೃಷ್ಟಿಯನ್ನು ಸಹಿಸಲಿಕ್ಕೆ ನನ್ನಿಂದ ಆಗ್ತಾ ಇಲ್ಲ’ ಎಂಬುದಾಗಿ ಎಲ್ಲ ಹೇಳಿ, ಅವಳನ್ನ ಮತ್ತೆ ಹನುಮಂತ ಏನೇನೆಲ್ಲ ಹೇಳಿ, ಇನ್ನೊಂದು ಸರ್ತಿ ಆಣೆ ಹಾಕಿ, ಸಮಾಧಾನ ಮಾಡಿ ಕೊನೆಗೆ ಹೊರಡುವ ಸಿದ್ಧತೆಯನ್ನು ಮಾಡ್ತಾನೆ.

ಇನ್ನೇನು ಉತ್ಪಾತದ ತಯಾರಿಯಲ್ಲಿದ್ದ, ಬೆಳೀತಾ ಇದ್ದ, ಅವನಲ್ಲಿ ವೇಗವೂ ಕೂಡ ಉಂಟಾಗ್ತಾ ಇತ್ತು. ಮತ್ತೆ ಸೀತೆ ಕುಶಲ ಪ್ರಶ್ನೆಯನ್ನು ಮಾಡ್ತಾಳೆ. ನೂರಾರು ಸರ್ತಿ, ನನ್ನನ್ನು ದಾಟಿಸುವಂತೆ ಮಾಡು, ಹೇಗಾದರೂ ಮಾಡಿ ರಾಮನಿಗೆ ಉತ್ಸಾಹ‌ ಬರುವಂತೆ ಮಾಡು, ಕೆಚ್ಚಿನ ಕಿಡಿ ಅವನೊಳಗೆ ಏರುವಂತೆ ಮಾಡು, ನನ್ನ ಕಷ್ಟ ಹೇಳು‌ ರಾಮನಿಗೆ.. ಎಲ್ಲವನ್ನೂ ಮತ್ತೆ ಮತ್ತೆ ಹೇಳಿ ನಿನ್ನ ದಾರಿ ಶುಭವಾಗಲಿ ಎಂಬುದಾಗಿ ಹೇಳಿ ಆಶೀರ್ವಾದ ಮಾಡಿದ್ದಾಳೆ‌ ಸೀತೆ. ಅದೆಲ್ಲವನ್ನೂ ಮನಸ್ಸಿನಲ್ಲಿ‌ ಧಾರಣೆ ಮಾಡಿದ ಹನುಮಂತ ಕೃತಾರ್ಥನಾಗಿದ್ದಾನೆ. ಕೆಲಸವಾಗಿದೆ. ಆಲೋಚನೆ ಮಾಡ್ತಾನೆ, ಇನ್ನೇನು ಉಳೀತು? ಸ್ವಲ್ಪ ಉಳಿದಿದೆ ಅಷ್ಟೇ, ಮತ್ತೆಲ್ಲ ಆಗಿಬಿಟ್ಟಿದೆ. ನಿಜವಾಗಿ ಸುಗ್ರೀವ ಕೊಟ್ಟ ಲಕ್ಷ್ಯ ‘ಸೀತೆಯನ್ನು ಕಂಡು ಬಾ’ ಅಷ್ಟೇ. ರಾಮನದು ಸ್ವಲ್ಪ ಜಾಸ್ತಿ, ‘ಉಂಗುರ ಕೊಟ್ಟು ಸಂದೇಶವನ್ನು ಹೇಳ್ಬೇಕು’. ಅದೂ ಮುಗಿದಿದೆ ಈಗ. ಹನುಮಂತ ಹೇಳುವುದು, ನಾನು ಅಧಮ ದೂತನೂ ಅಲ್ಲ, ಮಧ್ಯಮ ದೂತನೂ ಅಲ್ಲ, ಉತ್ತಮ ದೂತ ನಾನು. ಏನ್ಮಾಡಲಿ ಅಂತ ಕಾಯ್ತಾ ಇದ್ದಾನೆ. ಇಲ್ಲಿಯವರೆಗೆ ಅವನ ವಿವೇಕ, ಸೌಜನ್ಯ, ವಿದ್ಯೆ ಈ ಮುಖವನ್ನು ಕಂಡಿದ್ದೇವೆ. ಹನುಮಂತನ ಬೆಳಕನ್ನು ಕಂಡಿದ್ದೀರಿ.
ಹನುಮಂತನ ಬೆಂಕಿಯನ್ನು ಕಾಣ್ತೀರಿ.

ಇಲ್ಲಿಂದ ಮುಂದೆ ಹನುಮಂತ ಬೇರೆ. ಚೂರು ಉಳಿದಿದೆ ಅಂದ್ರೆ ಏನು? ಆ ಚೂರು ಬೆಂಕಿಯ ಚೂರದು! ಅಂಥಾದ್ದೊಂದು ಅದ್ಭುತ ಸಾಮರ್ಥ್ಯ ಇದೆ ಮುಂದೆ. ಒಂಟಿ ಹನುಮಂತ ರಾಮನ ಕಡೆಯವನು, ಅವನು ಲಂಕೆಯನ್ನು ನಡುಗಿಸಿದ ಪರಿ ಅನನ್ಯವಾಗಿರ್ತಕ್ಕಂತದ್ದು. ಆದರೆ ಅದಕಿಂತ ಮೊದಲು ಹನುಮ ಉತ್ತರ ದಿಕ್ಕಿಗೆ ಮನಸಲ್ಲಿಯೇ ಹೋದ. ಉತ್ತರ ದಿಕ್ಕಿನಲ್ಲಿ ರಾಮನಿದ್ದಾನೆ, ಅಯೋಧ್ಯೆಯಿದೆ. ಉತ್ತರ ದಿಕ್ಕಿನಲ್ಲಿಯೇ ಜಾಂಬವಂತ, ಕಪಿಗಳೆಲ್ಲ ಇದ್ದಾರೆ. ಹಾಗಾಗಿ ಒಮ್ಮೆ ಮನಸ್ಸಿನಲ್ಲಿಯೇ ರಾಮನನ್ನು ಸೇರಿ ರಾಮನನ್ನು ಕಂಡು ಒಂದು ಚೂರು ಕೆಲಸ ಇದೆ. ಅದನ್ನು ಮಾಡಿ ಬರ್ತೇನೆ ಎಂಬುದಾಗಿ ರಾಮನಿಗೆ ಮನಸ್ಸಿನಲ್ಲಿಯೇ ಹೇಳಿದ್ದಾನೆ ಹನುಮಂತ.

ಹನುಮಂತನ ‘ಲೂಟಿ’ಯನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ನೋಡೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:

 

ಪ್ರವಚನವನ್ನು ನೋಡಲು:

Facebook Comments