ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಕಷ್ಟವನ್ನು ಕಂಡಾಗ ಕನಿಕರ ಉಕ್ಕಿ ಬರಬೇಕು. ಇದು ಸತ್ಪುರುಷರ ಲಕ್ಷಣ. ಕಷ್ಟಕ್ಕೆ ಕಾರಣರಾದವರನ್ನು ಕಂಡಾಗ ಕ್ರೋಧ ಉಕ್ಕಿ ಬರಬೇಕು. ಇದು ಲೋಕರಕ್ಷಕರ ಲಕ್ಷಣ. ಹನುಮಂತನಿಗೆ ಕ್ರೋಧವು ಉಕ್ಕಿ ಬರ್ತಾ ಇದೆ. ರಾಮನ ದುಃಖವನ್ನು ನೆನೆಸಿ, ಸೀತೆಯ ಕಷ್ಟವನ್ನು ನೆನೆಸಿ, ಅವರದ್ದಾವತಪ್ಪಿಲ್ಲದಿದ್ದರೂ ಕೂಡ ಎಷ್ಟು ಸಂಕಟವನ್ನು ಅವರಿಗೆ ಕೊಡಲಾಯಿತು. ಕೊಟ್ಟವನು ಈ ಪಾಪಿ ರಾವಣ ಮತ್ತು ಅವನ ಕಡೆಯವರು ಎಂಬುದನ್ನು ಭಾವಿಸಿದಂತೆ, ಭಾವಿಸಿದಂತೆ ಕ್ರೋಧಾಗ್ನಿಯು ಉಕ್ಕಿತು ಆಂಜನೇಯನಲ್ಲಿ. ಅಲ್ಲಿಯವರೆಗೆ ಅವನು ಗಂಭೀರವಾಗಿ, ವಿನಮ್ರವಾಗಿ ಇದ್ದನಂತೆ, ಸೀತೆಯ ಮುಂದೆ ಇರುವವರೆಗೆ. ಸೀತೆಯಂತೂ ಸುವಾಕ್ಯಗಳ ಅಮೃತವೃಷ್ಟಿಯನ್ನೆ ಕರೆದಿದಾಳೆ ಆಂಜನೇಯನ ಮೇಲೆ. ಹಾಗೆ ಅವಳ ಮಾತುಗಳಿಂದ ಪ್ಲಾವಿತನಾಗಿ, ಪಾವಿತನಾಗಿ ಸೀತೆಯಿಂದ ಶುಭಾಶಿಷಗಳನ್ನ ಪಡೆದುಕೊಂಡು ಇತ್ತ ಬಂದ ಹನುಮಂತನ ಮನಸ್ಸಿನಲ್ಲಿ ಬಂದ ಭಾವ ಏನು? ದಂಡ. ಇದೇ ಸರಿ ಅವರಿಗೆ. ಸ್ವಲ್ಪ ಮಾತ್ರವೇ ಉಳಿದಿದೆ ನನ್ನ ಕಾರ್ಯದಲ್ಲಿ. ಹೆಚ್ಚಿನದ್ದಾಗಿದೆ. ರಾಮನರಸಿಯನ್ನು, ಲೋಕಾಲಂಕಾರ ಭೂಷಿತೆಯಾದ ಸೀತೆಯನ್ನು ಕಂಡಾಯಿತು. ಇನ್ನೇನು ಅಂದ್ರೆ, ಸಾಮ, ದಾನ, ಭೇದಗಳೆಂಬ ಮೂರು ಉಪಾಯಗಳನ್ನು ದಾಟಿ, ನಾಲ್ಕನೆಯ ದಂಡೋಪಾಯವು ಅವನ ಮುಂದೆ ಕಾಣ್ತಾ ಇದೆಯಂತೆ.

ಅದಕ್ಕೆ ಇವನು ಒಂದು ಯುಕ್ತಿಯನ್ನು ಹುಡುಕ್ತಾನೆ. ಈ ರಾಕ್ಷಸರಲ್ಲಿ ಯಾವ ಉಪಾಯವು ಉಪಯೋಗಕ್ಕೆ ಬಂದೀತು? ರಾಕ್ಷಸರಲ್ಲಿ ಸಾಮಕ್ಕೆ ಯಾವ ಬೆಲೆಯೂ ಇಲ್ಲ. ದಾನ ಲಂಕೆಯ ರಾಕ್ಷಸರಲ್ಲಿ ಏನು ಉಪಯೋಗವೂ ಇಲ್ಲ. ಯಾಕೆಂದರೆ ಬೇಕಾದಷ್ಟಿದೆ. ಮೂರನೆಯದು ಭೇದ. ಬೆದರಿಸಿದರೆ ಬೆದರುವವರಲ್ಲ. ಉಳಿದಿದ್ದು ಪರಾಕ್ರಮ ಮಾತ್ರ. ನನಗಂತೂ ಅದೇ ರುಚಿಸ್ತಾ ಇದೆ. ಈ ಕಾರ್ಯಕ್ಕೆ ಪರಾಕ್ರಮದ ಹೊರತು ಬೇರೆ ದಾರಿಯಿಲ್ಲ. ತನ್ನ ಮುಂದಿರುವ ಸೀತೆಯನ್ನು ಮರಳಿ ರಾಮನಿಗೆ ದೊರಕಿಸಿಕೊಡುವ ಕಾರ್ಯಕ್ಕೆ ಪರಾಕ್ರಮದ ಹೊರತು ಬೇರೆ ದಾರಿಯಿಲ್ಲ ಎಂಬುದನ್ನು ನಿಶ್ಚಯಿಸಿದ ಹನುಮಂತ. ಪ್ರಮುಖ ರಾಕ್ಷಸರಲ್ಲಿ ಕೆಲವರನ್ನು ನಾನು ಕೊಂದುಹಾಕಿದರೆ ಉಳಿದವರಿಗೆ ಬುದ್ಧಿ ಬಂದೀತು. ಆಗ ಮತ್ತೆ ಒಂದು ಪ್ರಶ್ನೆ ಅವನ ಮುಂದೆ ಬಂದು ನಿಂತಿತು. ನಾನು ಬಂದ ಕೆಲಸವಾಗಿದೆ. ಸುಮ್ಮನೆ ಬೇಡದ ಉಪದ್ರವಕ್ಕೆ ಹೋಗ್ತಿದೀನಾ ನಾನು? ಏನು ಮಾಡ್ತಿದೇನೆ ಎಂಬುದಾಗಿ ಹನುಮಂತ ಒಂದು ಆತ್ಮಾವಲೋಕನವನ್ನು ಮಾಡಿ ತನಗೆ ತಾನೆ ಉತ್ತರ ಕೊಟ್ಗೊಳ್ತಾನೆ. ನಿರ್ದಿಷ್ಟವಾದ ಕಾರ್ಯವನ್ನು ಪೂರೈಸಿದ ಮೇಲೆ ಹೆಚ್ಚಿನದನ್ನು ಸಾಧನೆ ಮಾಡ್ಬೇಕು. ಹಾಗೆ ಮಾಡುವಾಗ ಮೊದಲು ಸಾಧನೆ ಮಾಡಿದ ಕಾರ್ಯ ಹಾಳಾಗಬಾರದು ಎಂಬುದಾಗಿ ತೀರ್ಮಾನ ಮಾಡ್ತಾನೆ. ನಿಶ್ಚಿತವಾದ ಕಾರ್ಯಕ್ಕೆ ವಿರೋಧ ಇಲ್ಲದಂತೆ ಹೆಚ್ಚಿನದನ್ನು ಸಾಧಿಸುವವನು ಕಾರ್ಯಕರ್ತ.

ಈಗ ನನ್ನ ಬಲವೇನು? ನನ್ನವರ ಬಲವೇನು? ಈ ರಾಕ್ಷಸರ ಬಲವೇನು? ಇದಕ್ಕೂ ಅದಕ್ಕೂ ಅಂತರವೇನು ಎಂಬುದನ್ನು ಒರೆಗೆ ಹಚ್ಚಿಬಿಡೋಣ. ತನ್ನವರ ಮತ್ತು ಪರಸೈನಿಕರ ಬಲಾಬಲಗಳ ಒಂದು ಪರೀಕ್ಷೆ ಆಗಿಬಿಡಲಿ. ಹಾಗೆ ಮಾಡಿದರೆ ನನ್ನ ಒಡೆಯನ ಅಪ್ಪಣೆಯನ್ನು ಪಾಲಿಸಿದಂತೆ ಆಯಿತು ಎಂಬುದಾಗಿ ತೀರ್ಮಾನ ಮಾಡ್ತಾನೆ. ಹೀಗೆ ತನ್ನ ಮತ್ತು ಶತ್ರುಗಳ ಪರೀಕ್ಷೆಗೆ ತನ್ನನ್ನೇ ತಾನು ಒಡ್ಡಿಕೊಂಡ ಹನುಮ. ಆಲೋಚನೆ ಮಾಡ್ತಾನೆ. ಸುಲಭವಾಗಿ ಯುದ್ಧವನ್ನು ಸಂಬೋಧನೆ ಮಾಡುವುದು ಹೇಗೆ ಅಂತ. ಒಂದು ಕಾಳಗ ಆಗ್ಲಿ. ರಾಕ್ಷಸರೇ ಬಂದು ನನ್ನ ಮೇಲೆ ಬೀಳ್ಬೇಕು ಅಂಥದ್ದೇನು ಮಾಡಲಿ? ಒಂದು ರುಚಿ ತೋರಿಸ್ಬೇಕು ರಾವಣನಿಗೆ. ನಾನ್ಯಾರು? ಅವನಿಗೆ ಗೊತ್ತಾಗಬೇಕು. ತನ್ನವರ ಶಕ್ತಿಯೇನು? ಹನುಮನ ಶಕ್ತಿಯೇನು ಅಂತ ರಾವಣನಿಗೆ ಗೊತ್ತಾಗಬೇಕು. ರಾವಣನ ಜೊತೆ ಒಂದು ಮಾತು ಆಡ್ಬೇಕು ಅಂತನೂ ಅಪೇಕ್ಷೆ ಇದೆ. ಅವನ ಹೃದಯದ ಅಭಿಪ್ರಾಯವೇನು? ಅವನ ತೋಳುಗಳ ಬಲವೇನು? ತಿಳಿದುಕೊಂಡು ಸುಖವಾಗಿ ಹೋಗ್ತೇನೆ.

ಅತ್ತ ಇತ್ತ ನೋಡಿದಾಗ ಅವನ ಕಣ್ಣಿಗೆ ಬಿದ್ದಿದ್ದು ಅಶೋಕವನ. ಅದನ್ನ ನೋಡಿದಾಗ ಅವನಿಗೆ ಅನ್ನಿಸ್ತು. ಈ ದುಷ್ಟನಿಗೆ, ಕ್ರೂರಿಗೆ ಇಷ್ಟು ಚೆಂದದ ವನ ಬೇರೆ. ಇವನಿಗ್ಯಾಕೆ ಬೇಕಿದು? ನಂದನವನದಂಥ ಈ ಉದ್ಯಾನವನ ಬೃಶಂಸ ರಾವಣನಿಗೆ ಸಲ್ಲುವುದಿಲ್ಲ. ಕಣ್ಣಿಗೂ ಮನಸ್ಸಿಗೂ ಎಷ್ಟು ಹಿತವಾಗುವಂತೆ ಇದೆ ಇದು. ಇದು ಸಂದರೆ ನನ್ನ ಪ್ರಭು ರಾಮನಿಗೆ ಸಲ್ಲಬೇಕೇ ಹೊರತು ಈ ದುಷ್ಟನಿಗಲ್ಲ ಎಂಬುದಾಗಿ ಒಂದು ಆಲೋಚನೆ ಬಂತು. ಇದು ಯುದ್ಧಕ್ಕೆ ಕಾರಣವಾಗಬಹುದು. ಹೇಗೆ ಅಂದ್ರೆ ಈ ಅಶೋಕವನವನ್ನು ಧ್ವಂಸಗೊಳಿಸ್ತೇನೆ. ಒಣಗಿದ ಕಾಡನ್ನು ಸುಟ್ಟು ಬೂದಿ ಮಾಡುವ ಯಜ್ಞೇಶ್ವರನಂತೆ ಈ ಅಶೋಕವನವನ್ನು ಧ್ವಂಸ ಮಾಡ್ತೇನೆ. ಆಗ ರಾವಣನಿಗೆ ಕೋಪ ಬರ್ತದೆ. ಹನುಮನ ಪ್ರಕಾರ ದೊಡ್ಡ ಸೈನ್ಯವೇ ಬರ್ತದೆ ನನ್ನ ಮೇಲೆ ಯುದ್ಧ ಮಾಡಲಿಕ್ಕೆ. ಕುದುರೆಗಳು, ಆನೆಗಳು, ದೊಡ್ಡದೊಡ್ಡ ರಥಗಳು ಇದೆಲ್ಲ ರಾವಣನ ಅಪ್ಪಣೆಯ ಮೇರೆಗೆ ನನ್ನ ಮೇಲೆ ಬಂದು ಬೀಳ್ತದೆ. ತ್ರಿಶೂಲವಿರಬಹುದು, ಕಬ್ಬಿಣದ ಪಟ್ಟಸವಿರಬಹುದು. ಇಂತಹ ದೊಡ್ಡ ದೊಡ್ಡ ಆಯುಧಗಳನ್ನು ತೆಗೆದುಕೊಂಡು ರಾಕ್ಷಸರು ಬರ್ತಾರೆ. ಆಮೇಲೆ ದೊಡ್ಡ ಯುದ್ಧವೇ ಆಗ್ತದೆ. ನನ್ನನ್ನು ತಡ್ಕೊಳ್ಳಲಿಕ್ಕೆ ಅವರಿಗೆ ಸಾಧ್ಯವಿಲ್ಲ. ಸಹಿಸಲಾರದ ವಿಕ್ರಮವುಳ್ಳವನು ನಾನು. ಚಂಡ ವಿಕ್ರಮರು ರಾಕ್ಷಸರು. ಸಹ್ಯವಲ್ಲದ ವಿಕ್ರಮವುಳ್ಳ ನಾನು, ಆ ರಾವಣನ ಅಪ್ಪಣೆಯಂತೆ ಬರ್ತಕ್ಕಂತ ಸೈನ್ಯವನ್ನು ನಾಶ ಮಾಡಿ ಆಮೇಲೆ‌ ಕಿಷ್ಕಿಂಧೆಗೆ ಹೋಗ್ತೇನೆ’.

ಇದು ಬರೀ ಆಲೋಚನೆ ಆಗಿ ಉಳೀಲಿಲ್ಲ, ಮತಿಯು ಕೃತಿಯಾಯ್ತು. ಹೇಗಪ್ಪಾ? ಅಂದ್ರೆ, ಕ್ರುದ್ಧನಾದ ಮಾರುತನಂತೆ(ಚಂಡಮಾರುತದಂತೆ) ಭೀಮವಿಕ್ರಮನಾದ ಮಾರುತಿಯು ಅಶೋಕವನದ ಮೇಲೆ ದೊಡ್ಡ ದಾಳಿಯನ್ನೇ ನಡೆಸಿದನು. ತನ್ನ ತೊಡೆಗಳ ವೇಗದಿಂದ ಮರಗಳನ್ನು ಉರುಳಿಸಿದ. ಅದು ಶುರುವಂತೆ! ಬಳಿಕ ವೀರನಾದ ಹನುಮನು, ಪ್ರಮದಾ ವನವನ್ನು ಹಾಳು ಮಾಡಿದನು.

ಹೇಗಿದ್ದು ಅದು ಅದಕ್ಕಿಂತ ಮೊದಲು? ಮದಿಸಿದ ಪಕ್ಷಿಗಳ ಕೂಜನ ಕೇಳಿ ಬರ್ತಾ ಇತ್ತು. ಬಗೆಬಗೆಯ ಲತೆಗಳು ಇದ್ದವು ಆ ಕಾಡಿನಲ್ಲಿ. ಈಗ ಹೇಗಿದೆ? ಉರುಳಿ ಬಿದ್ದ ವೃಕ್ಷಗಳು, ಮುಳುಗಿ ಹೋದ ಕೆರೆಗಳು.‌ ಚಿಗುರುಗಳು ಬಾಡಿವೆ, ಧ್ರುವಲತೆಗಳು ಕಳೆಗುಂದಿವೆ. ನೋಡಿದ್ರೆ, ಅಷ್ಟೆ ಕಾಡ್ಗಿಚ್ಚು ಬಂದು ಹೋದಾಗಿದೆ ಅಶೋಕವನ ಈಗ. ಕೋಪ ಹನುಮಂತನಿಗೆ! ಇಲ್ಲಿ ತಾನೇ ನನ್ನ ಅಮ್ಮನನ್ನು ಇಷ್ಟೆಲ್ಲ ಪೀಡೆ ಮಾಡಿದ್ದು ಇವ್ರು? ಯಾರನ್ನು ಕಂಡ್ರೂ ಆಗೋದಿಲ್ಲ ಅನ್ನುವ ಸ್ಥಿತಿ ಮೂಡ್ಕೊಂಡಿದೆ. ಲತೆಗಳೆಲ್ಲ ನೆಲದಲ್ಲಿದ್ದವಂತೆ. ಲತಾಗೃಹಗಳು, ಚಿತ್ರಶಾಲೆಗಳು, ಶಿಲಾಗೃಹಗಳು, ಮತ್ತೆ ಬೇರೆ ಬೇರೆ ಬಗೆಯ ಗೃಹಗಳು ಎಲ್ಲ ಧ್ವಂಸವಾಗಿವೆ. ಈ ಪಕ್ಷಿ, ಮೃಗ, ಹಾವು ಎಲ್ಲ‌ವನ್ನೂ ಓಡಿಸಿದನಂತೆ. ಆ ಕಡೆ-ಈ ಕಡೆಗೆ. ಹೀಗೆ, ಹೆಚ್ಚು-ಕಡಿಮೆ ಅಶೋಕವನ ಇಲ್ಲ! ಸ್ವರ್ಗದಿಂದ ಬಂದ ದೇವ ವೃಕ್ಷಗಳು, ದೇವ ಲತೆಗಳೂ ಇದ್ದವಲ್ಲಿ. ಬೇರೆ ಬೇರೆ ರೀತಿಯ ತಳಿಗಳೆಲ್ಲ ಇವೆ ಅಲ್ಲಿ. ಭಾರೀ ಕಷ್ಟದಿಂದ ಆ ಗಿಡಮರಗಳನ್ನೆಲ್ಲ ತಂದು ಬೆಳೆಸಲಾಗ್ತಾ ಇದೆ. ಮತ್ತೆ, ಬಂಗಾರ, ಬೆಳ್ಳಿ, ಸ್ಫಟಿಕದ ನೆಲಗಳು, ಚಿತ್ರವಿಚಿತ್ರವಾಗಿದ್ದ ಆಕರ್ಷಕ ಭವನಗಳು ಎಲ್ಲ ಧ್ವಂಸ ಮಾಡಿ ಹಾಕಿಬಿಟ್ರೆ, ಒಂದು ಸ್ವಲ್ಪ ಹೊತ್ತಲ್ಲಿ, ಯಾರಿಗಾದ್ರೂ ಹೊಟ್ಟೆ ಉರಿಯೋದಿಲ್ವಾ ಹೇಳಿ!?
ಆದರೆ ಅದು ನಿಜವಾಗಿ ರಾವಣನದ್ದೇನಲ್ಲ, ತೊಂದ್ರೆ ಇಲ್ಲ. ಹೀಗೇ, ಅಶೋಕ ಲತೆಗಳೂ ಇರ್ತಕ್ಕಂತ ಅಶೋಕವನ ಶೋಕವನವಾಯ್ತಂತೆ. ಯಾಕಂದ್ರೆ, ಸೀತೆಗೆ ಇಲ್ಲಿವರೆಗೂ ಶೋಕ‌ ಕೊಟ್ಟಿದೆ. ಅಲ್ಲಿಟ್ಟು ಅವಳನ್ನ ಪೀಡಿಸಿದ್ದಾರೆ. ಹಾಗೇ, ಅಶೋಕಲತೆಗಳೂ ಶೋಕಲತೆಗಳಾಗಿ ಪರಿಣಮಿಸಿದವು. ಇನ್ನು, ರಾವಣನ ಸೊಕ್ಕು ಮತ್ತು ಅಮಲುಗಳು ಇಳಿಯದಂತೆ ಮಾಡಲು ಈ ಅಶೋಕವನವಿದೆಯಂತೆ. ಅಂತಹ ಆ ಪ್ರಮದಾ ವನ.

ಆ ಮಹಾಕಪಿಯು ಲಂಕೆಯ ದೊರೆಗೆ ಬಹು ದೊಡ್ಡ ಅನಾಹುತವನ್ನು ಮಾಡಿ ಅಲ್ಲೇ ಇದ್ದ ಲಂಕೆಯ ಮಹಾದ್ವಾರದ ಮೇಲೆ ಹತ್ತಿ ಕೂತ್ಕೊಂಡು ಯಾರು ಬರ್ತಾರೆ ಅಂತ ಕಾಯ್ತಾ ಇದ್ದ! ಗೊತ್ತಿತ್ತವನಿಗೆ, ಈಗ ತಾನೊಬ್ಬನೇ, ತನ್ನ ಮೇಲೆ ಬಂದು ಬೀಳುವವರು ಅಸಂಖ್ಯ ಸಂಖ್ಯೆ. ಅವರು ಯಾರೋ ಕ್ಷುದ್ರರಲ್ಲ, ಮಹಾಬಲರು. ನಾನೊಬ್ಬನೇ ಅದರ ಸ್ವಾರಸ್ಯವನ್ನು ಸವೀತೇನೆ, ಯಾರಾದ್ರೂ ಬರ್ಲಿ, ಯುದ್ಧ ಆಗಲಿ ಅಂತ. ಒಂದು‌ ಕಳೆ ಬಂತಂತೆ, ಉತ್ಸಾಹ ಬಂದಿದೆ ಹನುಮಂತನಿಗೆ. ಈ‌ ಕಡೆ, ಲಂಕಾ ನಿವಾಸಿಗಳಿಗೆ ಗಾಬರಿಯಾಯಿತು. ಏನೂಂತ ತಿಳಿಯಲಿಲ್ಲ. ಒಂದು, ಭಯಂಕರವಾದ ಪಕ್ಷಿಗಳ‌ ಶಬ್ದ ಕೇಳಿ‌ ಬಂತಂತೆ. ಅಶೋಕವನದಲ್ಲಿ ಇದ್ದ ಎಲ್ಲಾ‌ ಪಕ್ಷಿಗಳೂ ಒಟ್ಟಿಗೇ ಅರಚಿಕೊಂಡಿದ್ದಾವೆ. ಅದು ಮೊದಲು ಗಮನ ಸೆಳೆಯಲು ಕಾರಣ. ಎರಡನೇಯದು, ಮರಗಳು ಮುರಿಯುವ ದೊಡ್ಡ ದೊಡ್ಡ ಶಬ್ದ ಆಯ್ತಂತೆ ಅಶೋಕವನದಲ್ಲಿ. ಗಾಬರಿಯಾದರು ಲಂಕಾ ನಿವಾಸಿಗಳು. ಏನಾಗ್ತಾ ಇದೆ? ಹೊರಗಿಂದ ಯಾರೂ ಬಂದ‌ ಕುರುಹು ಏನೂ ಇಲ್ಲ. ಮೃಗಪಕ್ಷಿಗಳು ಭಯಗೊಂಡು ದಿಕ್ಕುದಿಕ್ಕಿಗೆ ಪಲಾಯನ ಮಾಡಿದ್ದಾವೆ. ಮಾತ್ರವಲ್ಲ, ರಾಕ್ಷಸರಿಗೆ ಅಪಶಕುನಗಳು‌ ಉಂಟಾದವು. ಸೋಲನ್ನು ಮತ್ತು ಸಾವನ್ನು‌ ಸೂಚಿಸ್ತಕ್ಕಂತ ದುರ್ನಿಮಿತ್ತಗಳು ರಾಕ್ಷಸರಿಗೆ ಉಂಟಾದವು. ರಾಕ್ಷಸಿಯರಿಗೆ ಎಚ್ಚರವಾಯ್ತು. ಎದ್ದು ನೋಡಿದ್ರೆ ಎಲ್ಲ ಧ್ವಂಸ ಆಗಿದೆ, ಆಗ್ತಾನೇ ಇದೆ. ಇದ್ದಿದ್ದೆಲ್ಲವನ್ನೂ ಮುರಿದು ಹಾಕ್ತಾ ಇದ್ದಾನೆ ಹನುಮಂತ. ದೊಡ್ಡ ಕಪಿ! ಹನುಮಂತನನ್ನು ಕಂಡಾಗ ಅವರಿಗೆ ಗಾಬರಿಯಾಯ್ತು, ಸಿಟ್ಟೂ ಬಂತು. ಹನುಮಂತನ ಕಡೆಗೆ ಹೋದರಂತೆ. ಹನುಮಂತ ನೋಡಿದ ಈ ರಾಕ್ಷಸಿಯರನ್ನು. ಭೀಕರ ರೂಪವನ್ನು ತಾಳಿ‌ ಹೆದರಿಸಿದನಂತೆ ರಾಕ್ಷಸಿಯರನ್ನು. ಅದು‌ ಹನುಮಂತ! ಸೀದ ಸೀತೆಯ ಹತ್ರ ಬಂದರಂತೆ ರಾಕ್ಷಸಿಯರು, ಸೀತೆಯನ್ನು ಪ್ರಶ್ನೆ ಮಾಡ್ತಾರೆ.
ಯಾಕಂದ್ರೆ, ಅವರಲ್ಲಿ ಕೆಲವರಿಗೆ ಸ್ವಲ್ಪ ಮೊದಲೇ ಎಚ್ಚರವಾಗಿದೆ. ಇವರು ಮಾತನಾಡುವ ಕೊನೆಯ ಭಾಗ ಅವರು ಗಮನಿಸಿದ್ದಾರೆ. ಹಾಗಾಗಿ, ಸೀತೆಯನ್ನು ಬಂದು ಕೇಳಿದರಂತೆ, ‘ಯಾರವನು? ಎಲ್ಲಿಂದ ಬಂದನು? ಇಲ್ಲಿಗೆ ಯಾಕೆ‌ ಬಂದಿದ್ದಾನೆ? ನಿನ್ನೊಡನೆ ಅವನು ಮಾತನಾಡಿದ್ದು ಏನದು? ಹೇ ವಿಶಾಲನೇತ್ರೆಯೇ, ಹೇಳು ನಮಗೆ. ನಿನಗೇನೂ ತೊಂದ್ರೆ ಮಾಡೋದಿಲ್ಲ ನಾವು. ನಿನ್ನ ಜೊತೆಗೆ ಅವನು ‌ಮಾತನಾಡಿದ ವಿಷಯ ಏನೆಂದು ಹೇಳು’. ಅದಕ್ಕೆ, ಆ ಸರ್ವಾಂಗ ಸುಂದರಿ ಸೀತೆಯು ತುಂಬಾ ಸುಂದರವಾದ ಉತ್ತರವನ್ನು ಕೊಡ್ತಾಳೆ. ಅದು‌ ಸುಳ್ಳಲ್ಲ, ಹಾಗಂತ ಅವರಿಗೆ ವಿಷಯ‌ ಹೇಳ್ಲಿಲ್ಲ. ಅವಳು ಹೀಗಂದು ಬಿಟ್ಟಳಂತೆ, ‘ರಾಕ್ಷಸರು ಕಾಮರೂಪಿಗಳು. ಆ ರಾಕ್ಷಸರ ಕಾಮರೂಪ ವಿಜ್ಞಾನ ನನಗೇನಿದೆ? ನೀವು ಕಾಮರೂಪಿಗಳಲ್ವಾ, ನೀವೇ ತಿಳ್ಕೊಳಿ ಅದೇನೂಂತ. ನಾನೂ ಭಯಗೊಂಡಿದ್ದೆ. ನಾನೂ, ರೂಪಾಂತರ ತಾಳಿ‌ ಬಂದ ರಾಕ್ಷಸ ಅಂತಲೇ‌ ತಿಳ್ಕೊಂಡಿದ್ದೆ ಇವನನ್ನು’. ಅದಷ್ಟೇ ಹೇಳ್ತಾಳೆ. ಆಮೇಲೆ ಅವನ್ಯಾರು ಅಂತ ಗೊತ್ತಾಯ್ತು.. ಅದನ್ನೆಲ್ಲ‌ ಹೇಳೋದಿಲ್ಲ ಎಂದಳು.

ಸೀತೆ ಮಾತಾಡೋದನ್ನು‌ ಕೇಳಿದಾಗ ಕೆಲವರು ಓಡಿದರಂತೆ ಪ್ರಾಣ ಉಳಿಸಿಕೊಳ್ಳೋದಕ್ಕೆ, ಕೆಲವರು ಅಡಗಿದರಂತೆ. ಇನ್ನು ಕೆಲವು ರಾವಣ ನಿಷ್ಠೆಯರು ರಾವಣನ ಮನೆಗೆ ಹೋದರಂತೆ ವರದಿ ಕೊಡಲಿಕ್ಕೆ. ಹನುಮಂತನಿಗೂ ಇದೇ ಬೇಕಾದದ್ದು. ವಾನರನ ಬಗ್ಗೆ ರಾವಣನಿಗೆ ವಿಚಾರ ಹೋಯಿತು. ದೊರೆಯೇ, ಅಶೋಕವನದ ಮಧ್ಯದಲ್ಲಿ ಭೀಮಶರೀರದ ಒಬ್ಬ ಕಪಿ ಇದೆ. ರಾಕ್ಷಸಿಯರು ಸೀತೆಯನ್ನು ಎಷ್ಟು ಕೇಳಿದರೂ ಹನುಮಂತ ಒಂದು ಅಂಶವನ್ನೂ ಬಿಟ್ಟುಕೊಡಲಿಲ್ಲ. ಬಹುವಿಧವಾಗಿ ಕೇಳಿದರೂ ಹೇಳಲಿಲ್ಲ. ಆಗ ರಾವಣನ ಹತ್ತಿರ ರಾಕ್ಷಸಿಯರು, ಇಂದ್ರನ ದೂತನಾಗಿರಬೇಕು ಅಥವಾ ಕುಬೇರನ ದೂತನಾಗಿರಬೇಕು, ಅಥವಾ ರಾಮನೇ ದೂತನನ್ನು ಕಳುಹಿಸಿದಾನೋ ಏನೋ… ಆ ಅದ್ಭುತ ರೂಪಿ ಅಶೋಕವನವನ್ನು ಪೂರ್ತಿ ಧ್ವಂಸ ಮಾಡಿದನು. ಆದರೊಂದು ಸ್ವಾರಸ್ಯ. ಸೀತೆ ಎಲ್ಲಿದ್ದಾಳೋ ಅಷ್ಟು ಜಾಗವನ್ನು ಮಾತ್ರ ಬಿಟ್ಟಿದಾನೆ. ಸೀತೆಯ ರಕ್ಷಣೆಗಾಗಿಯೋ ಅಥವಾ ಶ್ರಮದಿಂದಲೋ ಆ ಸ್ಥಳವನ್ನು ಹಾಗೇ ಬಿಟ್ಟಿದಾನೆ. ಎಲ್ಲಿ ಶಿಂಶಪಾ ವೃಕ್ಷವಿದೆಯೋ, ಆ ಒಂದು ಜಾಗವನ್ನು ಹಾಗೇ ಬಿಟ್ಟಿದಾನೆ. ದೊರೆಯೇ, ಆ ಉಗ್ರರೂಪನಿಗೆ ಉಗ್ರದಂಡ ವಧಿಸಿ. ಸೀತೆಯ ಹತ್ತಿರ ಯಾಕೆ ಮಾತನಾಡಬೇಕು ಅವನು, ಅದಕ್ಕಾಗಿ ಉಗ್ರದಂಡ. ರಾವಣನು ಕೃದ್ಧನಾಗಿ ಚಿತೆಯ ಬೆಂಕಿಯಂತೆ ಉರಿದುಹೋದನು. ಅಮಂಗಲ ಪ್ರಭೆ…! ಕಿಂಕರರನ್ನು ಕರೆದನು ರಾವಣ, ನಿಗ್ರಹಿಸಿ ಆ ಕಪಿಯನ್ನೆಂದು ಬಲಶಾಲಿಗಳಾದ 80ಸಾವಿರ ಕಿಂಕರರನ್ನು ಕಳುಹಿಸಿದನು. ಎಲ್ಲರಿಗೂ ಯುದ್ಧದ ಹುಮ್ಮಸ್ಸು. ಕೊಲ್ಲದೇ ಜೀವಂತ ಹಿಡಿದು ತರ್ತೇವೆ ಎಂದರು. ಹನುಮಂತ ಮಹಾಬಾಗಿಲಿನ ನೆತ್ತಿಯ ತಲೆಮೇಲೆ ಕೂತಿದಾನೆ ಎಲ್ಲರಿಗೂ ಕಾಣುವ ಹಾಗೆ. ಆ ಕಿಂಕರರು ಮಹಾವೇಗದಿಂದ ಹೋಗಿ ಮುತ್ತಿದರಂತೆ. ಆ ದೃಶ್ಯ ಪ್ರಜ್ವಲಿಸಿ ಉರಿಯುವ ಅಗ್ನಿಯನ್ನು ಎಲ್ಲೆಡೆಯಿಂದ ಮುತ್ತುವ ಪತಂಗದಂತೆ ಇತ್ತು. ಯುದ್ಧವನ್ನಾರಂಭಿಸಿದರು. ಹನುಮಂತನನ್ನು ಎಲ್ಲೆಡೆಯಿಂದ ಸುತ್ತುವರಿದು ಪ್ರಹರಿಸಿದರು. ಆಗ ಹನುಮಂತನು ತನ್ನ ಬಾಲವನ್ನು ಎತ್ತಿ ಬಡಿದನಂತೆ, ಲಂಕೆಗೆ ಲಂಕೆಯೇ ಮಾರ್ಮೊಳಗುವಂತೆ ಭಯಂಕರವಾಗಿ ಘರ್ಜಿಸಿದನು. ದೊಡ್ಡ ಆಕಾರಮಾಡಿ, ತನ್ನೆರಡು ತೋಳುಗಳನ್ನು ತಟ್ಟಿಕೊಂಡು ದೊಡ್ಡ ಶಬ್ದವನ್ನು ಮಾಡಿದನು. ಈ ಮೂರು ಶಬ್ದಗಳು ಲಂಕೆಯನ್ನು ಮುಚ್ಚಿದವು. ಪ್ರತಿಧ್ವನಿಸಿದವು, ಆ ಶಬ್ದ ಕೇಳಿ ಗಗನದಲ್ಲಿ ಹಾರುವ ಪಕ್ಷಿಗಳು ನೆಲಕ್ಕೆ ಬಿದ್ದವು.

ನಂತರ ಹನುಮಂತ ಸಮರೋದ್ಘೋಷವನ್ನು ಮಾಡಿದನು. ಜಯಮಂತ್ರ ಎಂದು ಕೂಡ ಕರೀತಾರೆ. ಲಂಕೆಯ ಮಹಾದ್ವಾರದ ತಲೆಯ ಮೇಲೆ ನಿಂತು, ಮಹಾಬಲ ರಾಮನಿಗೆ ಜಯವಾಗಲಿ, ಮಹಾಬಲ ಲಕ್ಷ್ಮಣನಿಗೆ ಜಯವಾಗಲಿ, ರಾಮಪಾಲಿತ ರಾಜಾ ಸುಗ್ರೀವನಿಗೆ ಜಯವಾಗಲಿ…. ಕೋಸಲೇಂದ್ರ ರಾಮನ ದಾಸ ನಾನು. ಇದು ನನ್ನ ನಿಜ ಪರಿಚಯ. ನಾನು ಶತ್ರುಸೈನ್ಯವನ್ನು ಧ್ವಂಸಗೊಳಿಸುವವನು, ಮಾರುತಾತ್ಮಜ, ವಾಯುದೇವ ನನ್ನ ತಂದೆ. ಯುದ್ಧಕ್ಕೆ ನಿಂತೆನೆಂದರೆ, ಸಾವಿರ ರಾವಣರೂ ನನಗೆ ಸಮಾನರಲ್ಲ. ದೊಡ್ಡ ದೊಡ್ಡ ವೃಕ್ಷಗಳನ್ನೂ, ಬಂಡೆಗಳನ್ನೂ ಕಿತ್ತೆಸೆದು ಯುದ್ಧವನ್ನು ಮಾಡ್ತೇನೆ ನಾನು. ಸಂದರ್ಭ ಬಂದರೆ ಕಾಡೇ ಕಿತ್ತು ಬರಬಹುದು. ಲಂಕೆಯನ್ನು ಮರ್ದಿಸಿ, ಮೈಥಿಲಿಗೆ ವಂದಿಸಿ ಹೊಟ್ಟೆತುಂಬಿಕೊಂಡು ಹೋಗ್ತೇನೆ ನಿಮ್ಮೆಲ್ಲರ ಕಣ್ಣೆದುರೇ… ಎಂದು ಬೊಬ್ಬಿರಿದನು ಹನುಮಂತ. ಹನುಮಂತನ ಮಾತು ಕಿಂಕರರಲ್ಲಿ ಭಯವನ್ನು, ಶಂಕೆಯನ್ನೂ ಉಂಟುಮಾಡಿತು. ಶತ್ರುವಿಗೆ ಭಯವಾದರೆ, ಅರ್ಧ ಗೆದ್ದ ಹಾಗೆ. ಯಮಕಿಂಕರನಂತೆ ಕಂಡನು ಹನುಮ.

ಬಳಿಕ ಅವರು ಯುದ್ಧಕ್ಕೆ ಮುಂದಾಗುತ್ತಾರೆ. ಏಕೆಂದರೆ ರಾವಣನ ಆಜ್ಞೆಯಿದೆ. ಮರಳಿ ಹಿಂದೆ ಹೋದರೂ ಜೀವವಿಲ್ಲ. ಹಾಗಾಗಿ ರಾವಣನ ಅಪ್ಪಣೆಯನ್ನು ನೆನಪಿಸಿಕೊಂಡು, ಶಂಕೆಯನ್ನು ದೂರ ತಳ್ಳಿ ಚಿತ್ರ-ವಿಚಿತ್ರವಾದ ಆಯುಧಗಳನ್ನು ಹಿಡಿದು ಹನುಮಂತನನ್ನು ಮುತ್ತಿದರು. ಒಮ್ಮೆ ಆಚೆ ಈಚೆ ನೋಡಿದನು ಹನುಮಂತ. ಮರ-ಗಿಡಗಳೆಲ್ಲಾ ದೂರವಿದೆ. ಅಶೋಕವನದಲ್ಲಿ ಎಲ್ಲಾ ಮುರಿದು ಹಾಕಿದ್ದಾನೆ. ಇಂತಹ ಆಯುಧವೇ ಬೇಕೆಂದಿಲ್ಲ ಅವನಿಗೆ. ಯಾವುದಾದರೂ ಸರಿ. ಲಂಕೆಯ ಮಹಾದ್ವಾರದ ಅಗುಳಿಯು (ಕಬ್ಬಿಣದ ಸಲಾಕೆ) ಅಲ್ಲೇ ಇತ್ತು. ಅದನ್ನು ಕೈಗೆ ತೆಗೆದುಕೊಂಡ. ಆಯುಧವೂ ಲಂಕೆಯದೇ. ಅದನ್ನು ಕೈಯಲ್ಲಿ ಹಿಡಿದು ರಾಕ್ಷಸರು ಚದುರಿದಲ್ಲೆಲ್ಲ ಗಗನದಲ್ಲಿ ಸಂಚರಿಸಿದನು ಹನುಮಂತ. ಹನುಮಂತನ ಕೈಯಲ್ಲಿ ಆ ಆಯುಧ ಗರುಡ ಸರ್ಪವನ್ನು ಹಿಡಿದಂತೆ ಕಾಣುತ್ತಿತ್ತು. ಅದನ್ನು ತಿರುಗಿಸಿ ತಿರುಗಿಸಿ ಆ ರಾಕ್ಷಸರನ್ನು ಸ್ವಲ್ಪ ಸಮಯದಲ್ಲೇ ಬಡಿದು ಮುಗಿಸಿಬಿಟ್ಟ. ಕೆಲವರನ್ನು ಬಿಟ್ಟ, ಅವರು ಹೋಗಿ ರಾವಣನಿಗೆ ಹೇಳಲಿ ಎಂದು. ಏಕೆಂದರೆ ಅವನಿಗೆ ಯುದ್ಧ ಮಾಡಬೇಕಾಗಿದೆ. ಮತ್ತೆ ಮಹಾದ್ವಾರದ ಮೇಲೆ ಹತ್ತಿ ಕುಳಿತ. ಹೇಗೋ ಬದುಕಿದ ಕೆಲವು ರಾಕ್ಷಸರು ಕಾಲಿಗೆ ಬುದ್ಧಿ ಹೇಳಿ ರಾವಣನ ಬಳಿ ಸೇರಿ ನಡೆದುದ್ದನ್ನು ವಿವರಿಸಿದರು. ಆ ಕಿಂಕರರ ಸೇನೆಯು ಹತವಾಗಿ ಹೋಯಿತು ಎಂಬ ವಿಷಯವನ್ನು ಕೇಳಿದ ರಾವಣನ ಕಣ್ಣುಗಳು ತಿರುಗಿದವು. ಇದು ಸರಳವಲ್ಲ ಎಂದು ಲಂಕೆಯ ಸೇನಾಪತಿಯ ಮಗನಾದ ಜಂಬುಮಾಲಿಯನ್ನು ಸೇನೆಯ ಮುಂಚೂಣಿಯಲ್ಲಿರಿಸಿ ಪುನಃ ಕಳುಹಿಸಿಕೊಟ್ಟ ರಾವಣ.

ಹನುಮಂತ ಆ ಕಡೆ ಈ ಕಡೆ ನೋಡುತ್ತಾ ಕುಳಿತಿದ್ದಾಗ ಚೈತ್ಯಪ್ರಾಸಾದ ಕಾಣಿಸಿತು. ಅದು ರಾಕ್ಷಸರ ಕುಲದೇವತೆಯ ದೊಡ್ಡ ಭವನ. ಅದರ ಅನತಿ ದೂರದಲ್ಲಿಯೇ ಸೀತೆ ಕಂಡಿದ್ದು. ಅದನ್ನು ತಾನು ಹಾಳುಮಾಡಲಿಲ್ಲವಲ್ಲ ಎಂದು ಯೋಚಿಸಿದ. ತನ್ನ ಬಲವನ್ನು ತೋರ್ಪಡಿಸುತ್ತಾ ಮಹಾದ್ವಾರದಿಂದ ನೆಗೆದು ಆ ಚೈತ್ಯಪ್ರಾಸಾದದ ನೆತ್ತಿಯನ್ನು ಹತ್ತಿದ. ಚೈತ್ಯಪ್ರಾಸಾದದ ಮೇಲೆ ಸೂರ್ಯೋದಯವಾದಂತೆ ಹನುಮಂತ ಕಾಣಿಸುತ್ತಿದ್ದ. ಅಲ್ಲಿ ಕೈಕಾಲಿಗೆ ಸಿಕ್ಕಿದ್ದನ್ನೆಲ್ಲಾ ಮುರಿದುಹಾಕಿ, ಪರ್ವತದಂತೆ ಬೆಳಗಿದನು ಹನುಮಂತ. ಆಮೇಲೆ ಮಹಾಶರೀರಿಯಾಗಿ ತೋಳನ್ನು ತಟ್ಟಿದ. ಆ ಚೈತ್ಯವನ್ನು ಕಾಯುವವರ ಕಿವಿ ಒಡೆಯುವಂತೆ ದೊಡ್ಡ ಶಬ್ಧವಾಯಿತು. ಲಂಕೆಯೇ ಪ್ರತಿಧ್ವನಿಸಿತು. ಪಕ್ಷಿಗಳು ಉರುಳಿ ಬಿದ್ದವು. ಚೈತ್ಯಪಾಲರಿಗೆ ಮೈಮರೆವು ಆವರಿಸಿತು. ಅಸ್ತ್ರಗಳಿರುವ ರಾಮನಿಗೆ ಜಯವಾಗಲಿ, ಮಹಾಬಲನಾದ ಲಕ್ಷ್ಮಣನಿಗೆ ಜಯವಾಗಲಿ, ರಾಘವಪಾಲಿತನಾದ ಸುಗ್ರೀವನಿಗೆ ಜಯವಾಗಲಿ ಎಂದು ಹನುಮಂತ ಜಯಘೋಷ ಮಾಡಿದ. ಅಕ್ಲಿಷ್ಟಕರ್ಮನಾದ ಕೋಸಲೇಂದ್ರನ ದಾಸ ನಾನು – ಹನುಮಂತ, ಶತ್ರುಸೈನ್ಯಗಳ ನಿಹಂತ, ಮಾರುತಾತ್ಮಜ. ಸಾವಿರ ರಾವಣರು ಯುದ್ಧದಲ್ಲಿ ನನಗೆ ಎದುರಲ್ಲ. ವೃಕ್ಷಗಳಿಂದ, ಶಿಲೆಗಳಿಂದ ಯುದ್ಧ ಮಾಡುತ್ತೇನೆ. ಲಂಕೆಯನ್ನು ಮರ್ದಿಸುತ್ತೇನೆ, ಸೀತೆಯನ್ನು ವಂದಿಸುತ್ತೇನೆ. ನಿಮ್ಮೆಲ್ಲರ ಕಣ್ಣೆದುರೇ ಇಷ್ಟೂ ಕಾರ್ಯವನ್ನು ಮಾಡಿ ಸಂತೃಪ್ತನಾಗಿ ಮರಳಿ ತೆರಳುತ್ತೇನೆ ಎಂದು ಬೊಬ್ಬಿರಿದು ನುಡಿದ.

ಹನುಮಂತನು ಮತ್ತೊಮ್ಮೆ ಘರ್ಜಿಸಿದ. ಆ ಚೈತ್ಯಪಾಲರಿಗೆ ಹೆದರಿಸಿ ಗೊತ್ತು, ಹೆದರಿ ಗೊತ್ತಿಲ್ಲ.ಆದರೆ ಅವರಿಗೆಲ್ಲಾ ಭಯವಾಯಿತು. ಆಮೇಲೆ ಒಂದು ನೂರು ಚೈತ್ಯಪಾಲರು ವಿಧವಿಧವಾದ ಖಡ್ಗಗಳು, ಅಸ್ತ್ರಗಳು, ಪ್ರಾಸಗಳು, ಕೊಡಲಿಗಳು, ಬಾಣಗಳು ಎಲ್ಲವನ್ನೂ ಹಿಡಿದುಕೊಂಡು ಮಾರುತಿಯನ್ನು ಸುತ್ತುವರಿದರು, ಗಂಗೆಯ ಸುಳಿಯಂತೆ. ಹನುಮಂತನಿಗೆ ಸಿಟ್ಟು ಬಂತು. ಮತ್ತೂ ಭಯಂಕರಾಕಾರವನ್ನು ತಾಳಿ ಆ ಕಡೆ ಈ ಕಡೆ ನೋಡಿದ. ಅಗುಳಿಯನ್ನು ಅಲ್ಲೇ ಬಿಟ್ಟು ಬಂದಿದ್ದಾನೆ. ಹಾಗಾಗಿ ಆ ಚೈತ್ಯಪ್ರಾಸಾದದ ಒಂದು ದೊಡ್ಡ ಕಂಬವನ್ನೇ ಕಿತ್ತ. ಅದಕ್ಕೆ ಚಿನ್ನದ ಲೇಪವಿತ್ತು. ಆ ಕಂಬವನ್ನು ನೂರಾರು ಬಾರಿ ತಿರುಗಿಸಿದ. ಆ ವೇಗಕ್ಕೆ ಕಂಬದಲ್ಲಿ ಬೆಂಕಿಬಂತು. ಆ ಬೆಂಕಿಯು ಎಲ್ಲಾ ಕಡೆಯೂ ವ್ಯಾಪಿಸಿ ಭವನವು ಸುಟ್ಟುಹೋಯಿತು. ಲಂಕೆಯ, ಸರ್ವರಾಕ್ಷಸರ ಕುಲದೇವತಾಭವನವು ಬೆಂಕಿಗೆ ಆಹುತಿಯಾಯಿತು. ರಾಕ್ಷಸರ ಭಾಗ್ಯ ಮುಸುಕಿತು. ಆಮೇಲೆ ಒಮ್ಮೆ ನೋಡಿದ, ಪೂರ್ತಿ ಸುಟ್ಟಿತೋ ಇಲ್ಲವೋ ಎಂಬಂತೆ. ನೂರು ರಾಕ್ಷಸರನ್ನೂ ಕೊಂದನು. ಸ್ವಲ್ಪ ಮುಂಚೆ 80,000 ರಾಕ್ಷಸರನ್ನು ಕೊಂದಿದ್ದ. ಮುಂದೆ ಯುದ್ಧದಲ್ಲಿ ಇಂದ್ರಜಿತನು ತನ್ನ ಸಾರಥಿಗೆ ಮಹಾಕಪಿಯ ಬಳಿ ನನ್ನನ್ನು ಕರೆದುಕೊಂಡು ಹೋಗು ಇಲ್ಲವಾದರೆ ಎಲ್ಲರನ್ನೂ ಮುಗಿಸಿಬಿಡುತ್ತಾನೆ ಅವನು ಎಂದು ಹೇಳುತ್ತಾನೆ. ಅಷ್ಟು ಬೇಗ ಹನುಮಂತನ ಸಂಹಾರಕಾರ್ಯ ಎಂಬುದು. ಹೀಗೆ ರಾಕ್ಷಸರನ್ನು ಕೊಂದು, ಆಕಾಶವನ್ನೇರಿ ಲಂಕೆಯನ್ನು ಉದ್ದೇಶಿಸಿ ಒಂದು ಸಂದೇಶವನ್ನು ಹೇಳಿದ.

ಈಗ ಒಬ್ಬನೇ ಬಂದಿದ್ದೇನೆ ನಾನು, ಇನ್ನೂ ಲಕ್ಷಾಂತರ ಕಪಿಗಳು ಆ ಕಡೆ ಇದ್ದಾರೆ. ಇವರೆಲ್ಲಾ ಸುಗ್ರೀವನ ವಶವರ್ತಿಗಳು. ನನ್ನಂತೆಯೇ ಅನೇಕ ವಾನರೇಂದ್ರರು ಭೂಮಿಯನ್ನು ಸಂಚರಿಸುತ್ತಿದ್ದಾರೆ. ಇವರಲ್ಲಿ ಕೆಲವರಿಗೆ ಹತ್ತಾನೆಗಳ ಬಲ, ಕೆಲವರಿಗೆ ನೂರಾನೆಗಳ ಬಲ, ಕೆಲವರಿಗೆ ಸಾವಿರಾನೆಗಳ ಬಲ. ಕೆಲವರಿಗೆ ವಾಯುಬಲ. ಕೆಲವರ ಬಲ ಅಪ್ರಮೇಯ. ಇಂತಹ ಕೋಟ್ಯನುಕೋಟಿ ಕಪಿಗಳ ಜೊತೆಗೆ ಸುಗ್ರೀವನು ಲಂಕೆಗೆ ಬರಲಿದ್ದಾನೆ. ನಿಮ್ಮೆಲ್ಲರಿಗೆ ಮಹಾಮೃತ್ಯು ಅವನು. ಈ ಲಂಕಾನಗರಿ, ನೀವು, ರಾವಣ ಯಾರೂ ಉಳಿಯುವುದಿಲ್ಲ. ಏಕೆಂದರೆ ನೀವು ನಮ್ಮ ಪ್ರಭುವಾದ ಸೂರ್ಯಕುಲತಿಲಕನೊಂದಿಗೆ ವೈರ ಕಟ್ಟಿಕೊಂಡಿದ್ದೀರಿ ಎಂದು ಉದ್ಘೋಷಿಸಿದ ಹನುಮಂತ. ಎಂತಹ ವಿಜಯೋತ್ಸಾಹದ ಮಾತುಗಳಿವು. ಇಂತಹ ಮಾತುಗಳನ್ನು ಕೇಳಿ, ಹನುಮಂತನ ಕಥೆಯನ್ನು ಕೇಳಿ ಎಂತಹ ಹೇಡಿ ಕೂಡಾ ಧೀರನಾಗುತ್ತಾನೆ, ಧೈರ್ಯತುಂಬುತ್ತದೆ ಎದೆಯಲ್ಲಿ. ಆದರೆ ರಾಕ್ಷಸರಿಗೆ ಭಯವುಂಟುಮಾಡುವಂತಹ ಮಾತುಗಳು. ರಾವಣನಿಗೆ ಚಳಿಜ್ವರ ಬರಬೇಕು ಎನ್ನುವಂತಹ ಮಾತುಗಳು. ಇದರ ಮಧ್ಯೆ ಜಂಬುಮಾಲಿ ಸೇನಾಸಮೇತನಾಗಿ ಈ ಕಡೆ ಬರುತ್ತಿದ್ದಾನೆ. ಅವನು ಸೇನಾಪತಿ ಪ್ರಹಸ್ತನ ಮಗ. ಪ್ರಹಸ್ತ ರಾವಣನ ಹಳೆಯ ಒಡನಾಡಿ. ಜಂಬುಮಾಲಿ ಮತ್ತು ಹನುಮಂತನ ಯುದ್ಧದ ಸ್ವಾರಸ್ಯವನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments