ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಲಂಕಾ ನಗರದ ಹೆಬ್ಬಾಗಿಲ ಅಡ್ಡತೊಲೆಯ ಮೇಲೆ ಹನುಮಂತನ ಒಡ್ಡೋಲಗ. ಆ ಊರಿಗೂ ಒಂದು ಯೋಗ. ಹನುಮಂತನ ಆ ಪರಿಯ ದರ್ಶನ ದುರ್ಲಭ. ಮೂರು ಬಾರಿ ಬೃಹದಾಕಾರದ ರೂಪವನ್ನು ತಾಳಿ ಮಹಾದ್ವಾರದ ನೆತ್ತಿಯ ಮೇಲೆ ನಿಂತು ಇಡೀ ಲಂಕೆಗೆ ತನ್ನ ಆಗಮನವನ್ನ ಸಾರಿ ಹೇಳಿದ್ದಾನೆ. ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದಾನೆ. ರಾವಣನ ಪೈಕಿಯವರಿಗೆ ಯಾವ ಪರಿಯ ದರ್ಶನ ಕೊಡಬೇಕೋ ಆ ಪರಿಯ ದರ್ಶನ ಕೊಡ್ತಾ ಇದಾನೆ. ಹೀಗಾಗಿ ಅಲ್ಲಿ ಅನೇಕ ಉತ್ಪಾತಗಳು ಸಂಭವಿಸಿವೆ. ಅಶೋಕವನ ಭಗ್ನವಾಗಿದೆ. ಹಾಗೇ ರಾಕ್ಷಸಿಯರು ಬೆದರಿಸಿ ಓಡಿಸಲ್ಪಟ್ಟಿದಾರೆ. ರಾಕ್ಷಸರು ಮಣ್ಣುಮುಕ್ಕಿ ಹೋಗಿದಾರೆ ಹನುಮನ ಈ ಅವತಾರದ ಮುಂದೆ. ರಾಕ್ಷಸರ ಕುಲದೇವತಾಸ್ಥಾನ ಚೈತ್ಯಪ್ರಾಸಾದವು ಧ್ವಂಸಗೊಂಡಿದೆ. ನೂರು ಜನ ಚೈತ್ಯಪಾಲರನ್ನು ಸಂಹಾರ ಮಾಡಿದಾನೆ ಆಂಜನೇಯ.

ಏತನ್ಮಧ್ಯೆ ರಾವಣ ಕಳುಹಿಸಿದ ಸೇನಾಪತಿ ಪ್ರಹಸ್ಥನ ಮಗ ಜಂಬುಮಾಲಿ ಹೊರಗೆ ಬಂದ. ಅವನು ತ್ರಿಜಟೆಯ ಕನಸಿನ ಹಾಗೆ ಕೆಂಪುಬಟ್ಟೆ ಹಾಕಿಕೊಂಡು, ಕೆಂಪು ಮಾಲೆಯನ್ನೂ ಹಾಕ್ಕೊಂಡು, ಮನೋಹರವಾದ ಕುಂಡಲಗಳನ್ನು ಹಾಕ್ಕೊಂಡು ಹೊರಗೆ ಬಂದ. ಕೋಪದಿಂದಲಾಗಿ ಕಣ್ಣರಳಿತು. ಸಮರದುರ್ಜಯನಾದ ಜಂಬುಮಾಲಿ ರಣಕಣಕ್ಕೆ ಕೈಯ್ಯಲ್ಲಿ ಇಂದ್ರಧನಸ್ಸನ್ನು ಹೋಲುವ ಧನಸ್ಸಿನ ಠೇಂಕಾರದಿಂದ ಸುತ್ತಮುತ್ತಲ ಪರಿಸರವನ್ನ ತುಂಬ್ತಾ ಇದ್ದಾನೆ. ರಥಕ್ಕೆ ಕತ್ತೆಯನ್ನು ಕಟ್ಟಿದೆ. ಹಾಗೆ ಅಂತಹ ಒಂದು ಖರವಾಹನನಾಗಿ ಹೊರಗೆ ಬರ್ತಿದಾನೆ ಜಂಬುಮಾಲಿ. ಹನುಮಂತನಿಗೆ ಧನುಷ್ಠೇಂಕಾರ ಕೇಳಿತು. ಕತ್ತೆಗಳು ಕಂಡವು. ಬಳಿಕ ಜಂಬುಮಾಲಿ ಕಂಡ. ಕಂಡಕೂಡಲೇ ಸಂತೋಷವಾಯ್ತು ಹನುಮಂತನಿಗೆ. ಒಂದು ಸಿಂಹನಾದವನ್ನು ತಾನೂ ಮಾಡಿದ. ವೇಗದ ಆವಾಹನೆ ಆಗ್ತಾ ಇದೆ ಹನುಮಂತನಲ್ಲಿ. ಮುಂದೆ ಯುದ್ಧ ಇದೆಯಲ್ಲ. ಜಂಬುಮಾಲಿ ಹನುಮಂತ ಎಲ್ಲಿ ಅಂತ ನೋಡ್ತಾನೆ. ಸ್ತಂಭಗಳ ಮೇಲೆ ಅಡ್ಡಲಾಗಿ ಹಾಕಲಾಗಿರತಕ್ಕಂತಹ ಮರದ ಮೇಲೆ ಕೂತಿದಾನೆ. ಅವನನ್ನು ನಿಷದವಾದ ಬಾಣಗಳಿಂದ ಪ್ರಹರಿಸಿದನು ಜಂಬುಮಾಲಿ. ಒಂದು ಅರ್ಧಚಂದ್ರದಿಂದ ಮುಖದಲ್ಲಿ, ಶಿರಸ್ಸಿನಲ್ಲಿ ಒಂದು ಕರ್ಣಿ ಎನ್ನುವ ಬಾಣವನ್ನು, ಎರಡು ಕಡೆಗಳಲ್ಲಿ ಹತ್ತು ನಾರಾಚವೆನ್ನುವ ಬಾಣಗಳನ್ನು ಪ್ರಯೋಗ ಮಾಡಿದ ಜಂಬುಮಾಲಿ. ಹನುಮಂತನ ಮುಖ ಚೆಂದ ಕಂಡಿತು ಅಂತ ವರ್ಣನೆ ಮಾಡ್ತಾರೆ ವಾಲ್ಮೀಕಿಗಳು. ಕೆಂಪು ಮುಖ, ಸ್ವರ್ಣವರ್ಣದ ಬಾಣ. ಅದನ್ನು ನೋಡಿದ್ರೆ ಶರತ್ಕಾಲದಲ್ಲಿ ಕಮಲವು ಅರಳಿದೆ, ಒಂದೇ ಒಂದು ಸೂರ್ಯಕಿರಣ ಬಂದಿಳಿದಿದೆ ಆ ಕಮಲದ ಮೇಲೆ. ಬಾಣ ಬಂದು ಹೊಕ್ಕಿದ್ದರಿಂದಾಗಿ ತನ್ನ ರಕ್ತವೇ ಮುಖದ ಮೇಲೆ ಬಂದು ಚೆಲ್ಲಿತ್ತಂತೆ ಹನುಮಂತನಿಗೆ. ಅದನ್ನ ನೋಡಿದರೆ ದೊಡ್ಡ ಪದ್ಮವೊಂದು ಗಗನದಲ್ಲಿ ಅರಳಿದೆ ಅದರ ಮೇಲೆ ಚಂದನದ ಬಿಂದುಗಳು ಬಿದ್ದ ಹಾಗೆ ಕಾಣ್ತಾ ಇತ್ತು. ಕೋಪ ಬಂತು ಹನುಮಂತನಿಗೆ. ಆಯುಧ ಯಾವುದಿದೆ ಅಂತ ಆಕಡೆ ಈಕಡೆ ನೋಡಿದ. ಪಕ್ಕದಲ್ಲಿ ದೊಡ್ಡ ಬಂಡೆ ಬಿದ್ದಿತ್ತಂತೆ. ಆ ಶಿಲೆಯನ್ನು ಕಿತ್ತು ಕೈಗೆತ್ತಿಕೊಂಡ. ಎಸೆದ ಜಂಬುಮಾಲಿಯ ಮೇಲೆ. ಜಂಬುಮಾಲಿ ಹತ್ತು ಬಾಣಗಳಿಂದ ಆ ಶಿಲೆಯನ್ನು ಭೇದಿಸಿದ. ಹನುಮಂತ ನೋಡಿದ. ಬಂಡೆ ಉಪಯೋಗವಾಗ್ಲಿಲ್ಲ. ಇನ್ನೊಂದ ಸಾಲವೃಕ್ಷ ಇತ್ತು ಪಕ್ಕದಲ್ಲಿ. ಅದನ್ನ ಕಿತ್ತುಕೊಂಡು ಗರಗರ ತಿರುಗಿಸ್ತಾ ಇದ್ದನಂತೆ. ಏತನ್ಮಧ್ಯೆ ಜಂಬುಮಾಲಿಗೆ ಆ ಮರವನ್ನ ಈಗ ನನ್ಮೇಲೆ ಎಸೀತಾನೆ ಅಂತ ಗೊತ್ತಾಯ್ತು. ಅದಕ್ಕಿಂತ ಮೊದಲೇ ಅನೇಕಾನೇಕ ಬಾಣಗಳನ್ನ ಜಂಬುಮಾಲಿ ಪ್ರಯೋಗ ಮಾಡ್ತಾನೆ. ನಾಲ್ಕು ಬಾಣಗಳು ಸಾಲವೃಕ್ಷದ ಮೇಲೆ. ಐದು ಬಾಣಗಳು ಹನುಮಂತನ ಭುಜದಲ್ಲಿ. ಒಂದು ಬಾಣ ತಲೆಯಲ್ಲಿ. ಹತ್ತು ಬಾಣಗಳು ಎದೆಯಲ್ಲಿ. ಇಷ್ಟು ಬಾಣಗಳನ್ನು ಪ್ರಯೋಗಿಸಿದ ಜಂಬುಮಾಲಿ ಆ ಸಾಲವೃಕ್ಷವನ್ನು ಕತ್ತರಿಸಿಬಿಡ್ತಾನೆ.

ಹನುಮಂತ ನೋಡ್ಕೊಳ್ತಾನೆ ಮೈ ತುಂಬಾ ಬಾಣ ಆಗೋಗಿದೆ. ಭಾರಿ ಸಿಟ್ಟು ಬಂತಂತೆ. ಮತ್ತೆ ಇನ್ನೇನು ಆಯುಧ ಇದೆ ಅಂತ ಆಕಡೆ ಈಕಡೆ ನೋಡಿದ. ಕಿಂಕರರನ್ನು ಸಂಹಾರ ಮಾಡಿದ ಲಂಕೆಯ ಮಹಾದ್ವಾರದ ಅಗುಳಿ ತಗೊಂಡು ಮತ್ತೂ ವೇಗದಲ್ಲಿ ಆ ಅಗುಳಿಯನ್ನು ತಿರುಗಿಸಿದ. ಅವನೂ ಅತ್ಯಂತ ವೇಗಶಾಲಿ. ಆಯುಧವನ್ನು ಇನ್ನೂ ವೇಗದಲ್ಲಿ ತಿರುಗಿಸಿದಾನೆ. ಜಂಬುಮಾಲಿಗೆ ಗುರಿಯೇ ಸಿಗಲಿಲ್ಲ. ತಿರುಗಿಸಿ, ತಿರುಗಿಸಿ, ತಗೊಂಡುಹೋಗಿ ಅದನ್ನು ಜಂಬುಮಾಲಿಯ ವಕ್ಷಸ್ಥಲದಲ್ಲಿ ಹೊತ್ತು ಹಾಕಿದ. ಅವಾಗ ನೋಡಿದರೆ ಜಂಬುಮಾಲಿ ಕಾಣಲೇ ಇಲ್ವಂತೆ. ತಲೆ ಕಾಣ್ತಾಯಿಲ್ಲ, ಬಾಹುಗಳೂ ಕಾಣ್ತಾ ಇಲ್ಲ, ಕಾಲುಗಳೂ ಕಾಣ್ತಾ ಇಲ್ಲ, ಧನುಸ್ಸೂ ಕಾಣಲಿಲ್ಲ, ರಥವೂ ಕಾಣಲಿಲ್ಲ, ಕುದುರೆಗಳೂ ಕಾಣಲಿಲ್ಲ, ಬಾಣಗಳೂ ಕಾಣಲಿಲ್ಲ. ಮಾಯವಾದನಾ ಜಂಬುಮಾಲಿ ಅಂದ್ರೆ ಇಲ್ಲ. ಸಣ್ಣ ಸಣ್ಣ ಚೂರುಗಳು ಕಂಡವು ಆಕಡೆ ಈಕಡೆ. ಚೂರುಚೂರಾಗಿ ಚೆಲ್ಲಾಡಿ ಹೋದ ಜಂಬುಮಾಲಿ. ಅಂಗವು ಪುಡಿಪುಡಿಯಾಗಿದೆ. ಆಭರಣವೂ ಕೂಡ.

ಅತ್ತ ರಾವಣನಿಗೆ ಸುದ್ದಿ ಮುಟ್ಟಿತು. ಕೆಂಪಾದ ಕಣ್ಣುಗಳು ಗರಗರನೆ ತಿರುಗಿದವು ರಾವಣನದು ಮತ್ತೆ. ಆಶ್ಚರ್ಯವಾಯಿತು ಅವನಿಗೆ. ಕೋಪವೂ ಬಂತು. ಮುಂದೇನು ಮಾಡೋದು ಅಂತ ಯೋಚನೆ ಮಾಡಿ ಮಂತ್ರಿಗಳ ಮಕ್ಕಳನ್ನು ಕರೆದು ಹೋಗಿ ಕಪಿಯನ್ನು ನಿಗ್ರಹಿಸಿ ಅಂತ ಅಪ್ಪಣೆ ಮಾಡ್ತಾನೆ. ಹೀಗೆ ರಾಜನಿಂದ ಚೋದಿತರಾಗಿ ಮಂತ್ರಿಸುತರು ರಾಜಭವನದಿಂದ ಹೊರಟರು. ಏಳು ಮಂದಿ. ದೊಡ್ಡ ಸೈನ್ಯ ಅವರ ಹಿಂದೆ ಹೊರಟಿದೆ. ಅಸ್ತ್ರವಿದ್ಯಾಭ್ಯಾಸ ಚೆನ್ನಾಗಿ ಆಗಿದೆ ಅವ್ರಿಗೆ. ಅಸ್ತ್ರ ಬಲ್ಲವರಲ್ಲಿ ಶ್ರೇಷ್ಠರೂ ಕೂಡ ಆಗಿದಾರೆ. ಪರಸ್ಪರರ ಮಧ್ಯೆ ಪರಾಕ್ರಮಕ್ಕಾಗಿ ಸ್ಪರ್ಧೆ ಇದೆ. ಮಹಾರಥಗಳನ್ನು ಏರಿದಾರೆ. ಆ ಮಹಾರಥಗಳು ಹೇಗಿದೆ ಅಂದ್ರೆ ಬಂಗಾರದ ಜಾಲಗಳಿದೆ. ಪತಾಕೆಗಳಿದೆ. ರಥವು ಚಲಿಸುವಾಗ ಗುಡುಗಿನ ಸದ್ದಿದೆ. ಆ ರಥವನ್ನೇರಿ ಹೊರಟಿದಾರೆ. ಕಾಂಚನಭೂಷಿತವಾದ ಧನಸ್ಸು ಕೈಯಲ್ಲಿ. ಆ ಧನಸ್ಸುಗಳನ್ನು ಠೇಂಕಾರ ಮಾಡ್ತಾ ಯುದ್ಧಭೂಮಿಗೆ ಬರ್ತಾರೆ. ಈ ಅಮಾತ್ಯಪುತ್ರರ ತಾಯಂದಿರು ಚಿಂತಿತರಾದರು. ಯಾಕೆಂದರೆ ಅವರಿಗೆ ಕಿಂಕರರ ಸಮಾಚಾರ ಮುಟ್ಟಿತ್ತು. ಈ ಅಮಾತ್ಯರ ಬಂಧುಬಾಂಧವರಿಗೂ ಚಿಂತೆಯುಂಟಾಯಿತು.

ಈ ಕಡೆ ಇದಾದರೆ ಆ ಕಡೆ ಯುದ್ಧ ಮಾಡ್ತಾನೆ ಇದಾರೆ. ಅವರು ಹನುಮಂತನನ್ನ ಬಂದು ಮುತ್ತಿದರು. ಮುತ್ತುವಾಗಲೂ ಪರಸ್ಪರ ಸ್ಪರ್ಧೆಯಂತೆ ಅವರಲ್ಲಿ. ಹಾಗೆ ತೋರಣದ ಮೇಲೆ ಕುಳಿತ ಹನುಮಂತನನ್ನು ಬಂದು ಭೇಟಿಯಾದರು ಅಮಾತ್ಯ ಪುತ್ರರು. ಬಾಣಗಳ ಮಳೆಗರೆದರು. ಧ್ವನಿಯೇ ಗುಡುಗಾಯಿತು. ಅವರೇ ಮೋಡಗಳು. ಸುತ್ತ ಸಂಚರಿಸ್ತಾರೆ. ಹನುಮಂತನ ಸುತ್ತ ಸಂಚರಿಸ್ತಾರೆ. ಹನುಮಂತನ ಮೇಲೆ ಶರಾಭಿಷೇಕ! ಒಂದು ಕ್ಷಣ ಹನುಮಂತನ ಆಕೃತಿಯೇ ಕಾಣದಂತಾಯ್ತಂತೆ‌ ಈ ಅಸಂಖ್ಯಾತ ಬಾಣಗಳ ಆ ಕಡೆ ಈ ಕಡೆ ಕಾಣುವಾಗ. ದೊಡ್ಡ ಬೆಟ್ಟದ ಮೇಲೆ ಮಳೆ ಬೀಳುವಂತೆ ಕಾಣ್ತಾ ಇತ್ತು ಆ ದೃಶ್ಯ. ಹನುಮಂತ ಕ್ಷಿಪ್ರವಾದ ಸಂಚಾರವನ್ನು ಪ್ರಾರಂಭ ಮಾಡ್ತಾನೆ. ಅವರು ಇಲ್ಲಿ ಬಾಣ ಬಿಟ್ರೆ ಅಲ್ಲಿಗೆ ಹೋಗ್ತಾನೆ, ಅಲ್ಲಿ ಬಾಣ ಬಿಟ್ರೆ ಈ ಕಡೆಗೆ ಬರ್ತಾನೆ. ಆ ಅಮಾತ್ಯಪುತ್ರರ ಬಾಣಗಳನ್ನು ವ್ಯರ್ಥಗೊಳಿಸಿದ. ಅತಿವೇಗದಿಂದ ಆಕಾಶದಲ್ಲಿ ಅತ್ತ ಇತ್ತ ಹಾರುತ್ತಾ ರಾಕ್ಷಸರ ಶರವೇಗಗಳನ್ನು ಮತ್ತು ರಥವೇಗಗಳನ್ನು ಸಹಿಸಿಕೊಳ್ತಾ ಇದ್ದಾನೆ. ಒಂದು ಸ್ವಲ್ಪ ಹೊತ್ತು ಆಟ ಆಡಿದ್ನಂತೆ ಅವನು, ಮೋಡಗಳ ಜೊತೆ ಮಾರುತನು ಆಟ ಆಡುವಂತೆ..

ಬಳಿಕ ಕೆಲಸವನ್ನು ಪ್ರಾರಂಭ ಮಾಡ್ತಾನೆ. ಒಂದು ಭಯಂಕರವಾದ ಸಿಂಹನಾದವನ್ನ ಮಾಡಿದಾಗ ಸೇನೆಗೆ ಸೇನೆಯೇ ನಡುಗಿತು. ಬಳಿಕ‌ ವೇಗವನ್ನು ತೆಗೆದುಕೊಂಡ ಹನುಮಂತ. ಕೆಲವರಿಗೆ ತಲ ಪ್ರಹಾರ, ಕೆಲವರಿಗೆ ವಧೆ, ಕೆಲವರಿಗೆ ಮುಷ್ಟಿ, ಕೆಲವರನ್ನ ಉಗುರುಗಳಿಂದ ಸೀಳಿ ಹಾಕಿದ್ದಾನೆ. ಇನ್ನು ಕೆಲವರನ್ನು ತಗೊಂಡು ತನ್ನದೆಗೆ ತಿಕ್ಕಿದನಂತೆ. ಕೆಲವರನ್ನ ತೊಡೆಗಳಲ್ಲಿ ಒದ್ದನಂತೆ.‌ ಅದೇ ಸಾಕಾಯಿತು. ಇನ್ನು ಕೆಲವರು ಹನುಮಂತನ ಘರ್ಜನೆಗೇ ಸತ್ತು ಬಿದ್ದರಂತೆ. ಹೀಗೆ ಆ ಅಮಾತ್ಯಪುತ್ರರೂ ಎಲ್ಲ ಹೋಗ್ಬಿಟ್ಟಿದ್ದಾರೆ. ಅವರ್ಯಾರು, ಏನು ಅಂತ ಗೊತ್ತಿಲ್ಲ ಹನುಮಂತನಿಗೆ. ಅವನೇನು ವಿಶೇಷ ಮರ್ಯಾದಿ ಕೊಟ್ಟೇ ಇಲ್ಲ ಅವರಿಗೆ.

ಹೀಗೆ, ವೀರರೆಲ್ಲರೂ ಸತ್ತು ಬಿದ್ದಿರಲು, ಉಳಿದ ಸೈನ್ಯವು ಓಡಿಹೋಯಿತು. ರಾವಣನ ಸೈನ್ಯವು ಲಂಕೆಯ ಮಹಾದ್ವಾರದ ಮುಂದೆಯೇ ಹನುಮಂತನ ಆಕ್ರಮಣವನ್ನು ತಾಳಲಾರದೇ ದಿಕ್ಕು ದಿಕ್ಕಿಗೆ ಪಲಾಯನ ಮಾಡಿತು. ಅಟ್ಟಿಸಿಕೊಂಡು ಹೋಗಲಿಲ್ಲ ಹನುಮಂತ. ಆನೆಗಳು ವಿಕಾರವಾಗಿ ಕಿರುಚಿಕೊಂಡವು, ಕುದುರೆಗಳು ಬಿದ್ದವು, ಇನ್ನು ರಥಗಳ ಭಾಗಗಳೆಲ್ಲ‌ ಚದುರಿ ಹೋಗಿದೆ. ಆ ರಣಭೂಮಿಯಲ್ಲೆಲ್ಲ ಯುದ್ಧೋಪಕರಣಗಳು ಚೆಲ್ಲಾಡಿದ್ದಾವೆ. ಲಂಕಾ ನಗರಿಯೇ ಚಿತ್ತವಿಚಿತ್ರವಾದ ಸ್ವರಗಳಿಂದ ಕೂಗಿಕೊಂಡಂತೆ ಭಾಸವಾಗ್ತಾ ಇತ್ತು. ಹನುಮಂತ ಮತ್ತೆ ಮಹಾದ್ವಾರವನ್ನು ಬಂದು ಸೇರಿದ. ಆ ಮಹಾದ್ವಾರದ ಅಡ್ಡದಲ್ಲಿ ಕುಳಿತು ಹನುಮಂತ ಕಾದನಂತೆ ಮತ್ತೆ ಯಾರು ಬರ್ತಾರೆ ಯುದ್ಧ ಮಾಡಲು ಅಂತ.

ಈ ಕಡೆಗೆ, ರಾವಣ! ಅವನ ಎದೆಯಲ್ಲಿ ಕಂಪನ. ಯಾರು? ಸತ್ತವರೇನು ಲಂಕೆಯ ಅಗ್ರಮಾನ್ಯ‌ ರಾಕ್ಷಸರಲ್ಲ. ಆದರೆ ಆ ಕೊಂದ ರೀತಿ, ಪರಾಕ್ರಮ ಇದೆಯಲ್ಲ, ಅದು ಅಸದೃಶವಾಗಿರ್ತಕ್ಕಂತದ್ದು. ಅದು ರಾವಣನ ಮನಸ್ಸಿಗೆ‌ ಬಂದಿದೆ. ಹಾಗಾಗಿ, ರಾಮನ ಎದೆಯಲ್ಲಿ ನಡುಕ ಉಂಟಾಯಿತು. ತನ್ನೊಳಗಿನ ಆತಂಕವನ್ನು ತೋರಿಸಿಕೊಡದೆ ಇನ್ಯಾರನ್ನು ಕಳುಹಿಸಿ ಕೊಡಬಹುದು ಎನ್ನುವ ಚಿಂತನೆಯಿಂದ ಐವರು ಸೇನಾಗ್ರ ನಾಯಕರನ್ನು ಕರೀತಾನೆ. ಅವರಿಗೆ ‘ಹನುಮಂತನನ್ನು ಹಿಡಿದು ತನ್ನಿ’ ಅಂತ ಅಪ್ಪಣೆ ಮಾಡ್ತಾನೆ. ಎಲ್ಲಾ ವೀರರು, ನೀತಿ‌ ವಿಶಾರದರು, ವಾಯುವೇಗವುಳ್ಳವರು ಅವರೆಲ್ಲರೂ ಕೂಡ. ‘ ಎಲೈ ಸೇನಾಧಿಪತಿಗಳೇ, ದೊಡ್ಡ ಸೈನ್ಯವನ್ನು ಒಡಗೂಡಿಕೊಂಡು ಹೋಗಿ ನೀವು, ಆ ಕಪಿಗೆ ತಕ್ಕ‌ ಶಾಸ್ತಿಯನ್ನು ಮಾಡಿ, ಯೋಗ್ಯ ಪ್ರತೀಕಾರವನ್ನು ಮಾಡಿ’ ಎಂಬುದಾಗಿ ಅಪ್ಪಣೆ ಮಾಡಿದ ರಾವಣ.

ಆದರೆ, ಕೆಲವು ಕಿವಿಮಾತುಗಳನ್ನು ಹೇಳ್ತಾನೆ. ಇದಕಿಂತ ಮೊದಲು ಕಿವಿ ಮಾತು ಹೇಳಿದ್ದೇನೂ ಇರಲಿಲ್ಲ. ಈಗ, ‘ಜಾಗೃತರಾಗಿರಿ, ಆ ಕಪಿಯ ಮುಂದೆ ನೀವು ಯುದ್ಧಕ್ಕೆ ಹೋದಾಗ ಎಚ್ಚರಿಕೆಯಿಂದ ಇರಬೇಕು. ನೀವು ಏನೇ ಮಾಡೋದಾದ್ರೂ ಆ ಸಮಯ ಮತ್ತು ಆ ಸನ್ನಿವೇಶ ನೋಡಿಕೊಂಡು ಜಾಗರೂಕರಾಗಿ ಮಾಡ್ಬೇಕು. ನನ್ನ ಚಿಂತನೆ, ನನ್ನ ಯುಕ್ತಿಯ ಪ್ರಕಾರ, ಅವನು ಕಪಿಯಲ್ಲ. ಅದು ಸುಮ್ಮನೆ ಮಂಗವಲ್ಲ. ಸರ್ವಥಾ ಅದೊಂದು ದೊಡ್ಡ ಭೂತವಾಗಿರ್ಬೇಕು. ಭಾರೀ ಶಕ್ತಿ ಸಂಪನ್ನವಾಗಿರತಕ್ಕಂತಾ ಒಂದು ಪ್ರಚಂಡ ಶಕ್ತಿ ಬಂದಿರ್ಬೇಕು‌ ಲಂಕೆಗೆ. ಬಹುಷ ಹೀಗಾಗಿರ್ಬೇಕು, ಲಂಕೆಯಲ್ಲಿ ಏನು ಮಾಡಿದರೂ ಬಗ್ಗುಬಡಿಯಲಿಕ್ಕೆ ಸಾಧ್ಯ ಇಲ್ಲದಾಗ ಇಂದ್ರನು ತಪಸ್ಸು ಮಾಡಿ ದೊಡ್ಡ ಭೂತವನ್ನು ಸೃಷ್ಟಿಸಿ‌ ಕಳುಹಿಸಿರಬೇಕು‌ ಇಲ್ಲಿಗೆ. ಸೇನಾಪತಿಗಳೇ, ನಿಮಗೆಲ್ಲ ಗೊತ್ತು. ನಾನು, ನೀವೆಲ್ಲ ಕೂಡಿಕೊಂಡೇ ದಿಗ್ವಿಜಯ ಮಾಡಿದವರು. ಬಗ್ಗು ಬಡಿದಿಲ್ವಾ ಆವತ್ತು! ದಿಕ್ಕು ದಿಕ್ಕಿಗೆ ಓಡಿಸಿಲ್ವಾ? ಸುಮ್ಮನಿರ್ತಾರಾ ಅವರು? ಸೇಡು ತೀರಿಸಿಕೊಳ್ಳಲೇಬೇಕಲ್ಲ! ಅದೇ ಇದು. ಎಷ್ಟು ಕಾಲ ಅದುಮಿ ಕೂತಿರ್ತಾರೆ? ಏನೋ ಪ್ರತಿಕ್ರಿಯೆ ಮಾಡಲೇ ಬೇಕಲ್ಲ. ಈ ರೂಪದಲ್ಲಿ ಅವರ ಪ್ರತಿಕ್ರಿಯೆ ಹೊರಹೊಮ್ಮಿದೆ!

ಸಂಪೂರ್ಣ ಸುಳ್ಳೇನಲ್ಲ. ಪ್ರತಿಕ್ರಿಯೆಯೇ ಅದು ಈಗ ಬರ್ತಿರೋದು. ಆದರೆ ಇವನು ಅಂದುಕೊಂಡ ಹಾಗೆ ಅಲ್ಲ ಅಷ್ಟೆ. ಮತ್ತೆ ಹೇಳಿದ, ‘ಯಾವ ಕಾರಣಕ್ಕೂ ಆ ಕಪಿಯನ್ನು ಉಪೇಕ್ಷೆ ಮಾಡಬೇಡಿ. ನಾನು ಹಿಂದೆ ವಿಫಲವಿಕ್ರಮರಾದ‌ ಕಪಿಗಳನ್ನು ಕಂಡಿದ್ದೇನೆ. ಯಾರು? ವಾಲಿ, ವಾಲಿಯ ತಮ್ಮ ಸುಗ್ರೀವ, ಇನ್ನೊಬ್ಬ ಜಾಂಬವಂತ, ಈಗ ವಯಸ್ಸಾಗಿರಬೇಕು ಅವನಿಗೆ. ಅವನೂ ಬಲಸಂಪನ್ನನೇ ಹೌದು. ಮತ್ತೊಬ್ಬ ಅವರ ಸೇನಾಪತಿ ನೀಲ. ಇನ್ನು ದ್ವಿವಿದನೇ ಮೊದಲಾದ ಕೆಲವರಿದ್ದಾರೆ. ಇವರೆಲ್ಲ ಘನಪರಾಕ್ರಮಿಗಳು. ಆದರೆ‌ ಹೀಗಲ್ಲ’. ವಾಲಿಗೂ ಹನುಮಂತನಿಗೂ ವ್ಯತ್ಯಾಸ ಕಂಡು ಹಿಡಿದಿದ್ದಾನೆ ರಾವಣ ಆಗಲೇ. ‘ಈ ಕಪಿಯ ಗತಿಯಂತೆ ಭಯಂಕರವಾದ ಗತಿ ಅವರದ್ದಲ್ಲ. ಇವನ ತೇಜಸ್ಸಿನಂತೆ ಅವರ ತೇಜಸ್ಸಿಲ್ಲ. ಇವನ ಪರಾಕ್ರಮದಂತೆ ಅವರ ಪರಾಕ್ರಮ ಇಲ್ಲ. ಈ ಬುದ್ಧಿಯಂತೆ ಆ ಬುದ್ಧಿಯಿಲ್ಲ, ಈ ಬಲದಂತೆ ಆ ಬಲವಲ್ಲ, ಈ ಉತ್ಸಾಹದಂತೆ ಆ ಉತ್ಸಾಹವಲ್ಲ. ಈ ರೂಪ ಪರಿಕಲ್ಪನೆ ಅದಲ್ಲ. ಅವರೆಲ್ಲರಿಗಿಂತ ವಿಶಿಷ್ಟವಾಗಿರತಕ್ಕಂತ ಯಾವುದೋ ಒಂದು ವಿಶೇಷವಾದ ದೊಡ್ಡ ಶಕ್ತಿ‌ ಬಂದಿರ್ಬೇಕು ಇಲ್ಲಿಗೆ’.

ರಾವಣನ ಅಂದಾಜು ಸರಿ‌ ಇದೆ. ‘ಯಾವುದೋ ಒಂದು ದೊಡ್ಡ ಶಕ್ತಿ ಕಪಿಯ ರೂಪದಲ್ಲಿ ಬಂದಿದೆ. ಅದಂತೂ ಖಂಡಿತ. ಹಾಗಾಗಿ, ದೊಡ್ಡ ಪ್ರಯತ್ನ ಬೇಕಾಗಬಹುದು. ಅವನನ್ನು ನಿಗ್ರಹ ಮಾಡ್ಬೇಕಾದರೆ ನಿಮ್ಮ‌ ಜೀವಮಾನದ ಪ್ರಯತ್ನ ಬೇಕಾಗಬಹುದು. ಮಾಡಿ, ಹಾಗಂತ ಹೆದರಿಕೊಳ್ಳಬೇಡಿ. ನಾವು, ನೀವು ಸೇರಿ‌ಏನೆಲ್ಲ ಮಾಡಿಲ್ಲ! ಮೂರು ಲೋಕಗಳೂ ನಿಮ್ಮ ಮುಂದೆ ನಿಲ್ಲಲಿಕ್ಕೆ ಸಾಧ್ಯವಿಲ್ಲ. ಅಂಥಾ ಪರಾಕ್ರಮಿಗಳು ನೀವು. ಆದರೂ, ಜಾಗ್ರತೆ ಮಾಡೋದು ಒಳ್ಳೆಯದು. ಜಯ ಬೇಕು ಅಂದರೆ ನಾವು ಯುದ್ಧ ಮಾಡಬೇಕಾದರೆ ಚೆನ್ನಾಗಿ ಯುದ್ಧನೀತಿಯನ್ನು ಅರ್ಥ ಮಾಡಿಕೊಂಡು ಹುಷಾರಾಗಿರಬೇಕು. ಆತ್ಮರಕ್ಷಣೆಯ ಬಗ್ಗೆ ಹುಷಾರಾಗಿರಿ.’ ಎನ್ನುವ ಸಂದೇಶ ಬಂತು. ಕೊನೆಯ ಶಬ್ದ ಏನು ಅಂದ್ರೆ, ಯಾವುದೇ ಯುದ್ಧವಾದರೂ ಅದರಲ್ಲಿ ಏನಾಗ್ತದೆ ಅಂತ ಹೇಳೋದು ಕಷ್ಟ.

ತಮ್ಮ ಸ್ವಾಮಿಯ ವಚನವನ್ನು ತಲೆಬಾಗಿ ಸ್ವೀಕರಿಸಿದರು ಆ ಮಹಾಬಲಶಾಲಿಗಳಾದ ಸೇನಾನಾಯಕರು. ಬಳಿಕ ವೀರಾವೇಶದಿಂದ ಎದ್ದರಂತೆ ಯುದ್ಧಕ್ಕೆ. ರಥಗಳನ್ನೇರಿದರು, ಮದಿಸಿದ ಆನೆಗಳನ್ನೇರಿದರು, ಮಹಾ ವೇಗಶಾಲಿಗಳಾದ ಕುದುರೆಗಳನ್ನು ಏರಿದರು, ತೀಕ್ಷ್ಣವಾದ ಶಸ್ತ್ರಗಳನ್ನು ಹಿಡಿದರು, ಸೈನ್ಯವನ್ನು ಕೂಡಿಕೊಂಡರು, ಅತ್ತಕಡೆಗೆ; ಹನುಮನೆಂಬ ಯಮನ ಕಡೆಗೆ ಸಾರಿದರು ರಾಕ್ಷಸರು. ಹೋಗಿ ನೋಡ್ತಾರೆ ಹನುಮಂತನನ್ನು. ಆ ಹೆಬ್ಬಾಗಿಲ ಮೇಲೆ ಪ್ರಜ್ವಲಿಸ್ತಾ ಇದ್ದಾನೆ. ಅವನ ತೇಜಸ್ಸೇ ಅವನಿಗೆ ರಶ್ಮಿಯಂತೆ.
ಮಹೋತ್ಸಾಹದಲ್ಲೇ ಇಮ್ಮಡಿ, ಮಹಾವೇಗ, ಮಹಾಬಲ,‌ ಮಹಾಮತಿ, ಮಹಾಕಾಯ, ಇಂಥವನನ್ನು ಕಂಡೊಡನೆಯೇ ಅವರು ಎಲ್ಲ‌ ದಿಕ್ಕುಗಳಿಗೂ ಚದುರಿ ವ್ಯೂಹರಚನೆ ಮಾಡ್ಕೊಳ್ತಾರೆ ಯುದ್ಧಕ್ಕಾಗಿ. ಎಲ್ಲರೂ ಇದಿರಿನಿಂದ ಬಂದು ಯುದ್ಧ ಮಾಡಲಿಲ್ಲ. ಕೆಲವರು ಇದಿರಿನಿಂದ, ಕೆಲವರು ಪಕ್ಕದಿಂದ, ಕೆಲವರು ಹಿಂದಿಂದ, ಕೆಲವರು ಮೂಲೆಗಳಲ್ಲಿ, ಎಲ್ಲಾ ದಿಕ್ಕುಗಳು ಮತ್ತು‌ ಉಪದಿಕ್ಕುಗಳಿಂದ, ಎಲ್ಲ ಕೋಣೆಗಳಿಂದ ಹನುಮಂತನ ಮೇಲೆ ಯುದ್ಧ ಮಾಡ್ತಾರೆ ರಾಕ್ಷಸರು.

ಮೊದಲು ದುರ್ಧರ. ಐದು ಕಬ್ಬಿಣದ ಬಾಣಗಳು. ಸಾಕಷ್ಟು ಎಣ್ಣೆ ಕುಡಿಸಲಾಗಿದೆ ಅದಕ್ಕೆ. ಅಂತಹ 5 ಶರಗಳನ್ನು ಹನುಮಂತನ ಶಿರಸ್ಸಿನ ಮೇಲೆ ಪ್ರಯೋಗ ಮಾಡುತ್ತಾನೆ ದುರ್ಧರ. ಅದು ಬಿತ್ತು. ಹನುಮಂತನಿಗೆ ಕನ್ನೈದಿಲೆಯ ದಳಗಳು ತಲೆಯ ಮೇಲೆ ಬಿದ್ದಂತಾಯಿತು. ಗಗನಕ್ಕೆ ನೆಗೆದನು. ಬಲವಾಗಿ ಘರ್ಜಿಸಿದನು. ಬಿಲ್ಲನ್ನು ಸಜ್ಜುಗೊಳಿಸಿ ನೂರಾರು ಬಾಣಗಳನ್ನು ಪ್ರಯೋಗಿಸುತ್ತಾ ದುರ್ಧರ ಅವನನ್ನು ಬೆನ್ನಟ್ಟಿದನು. ಬೆನ್ನಟ್ಟಿ ಬಂದಾಗ ತಿರುಗಿ ನಿಂತನು ಹನುಮಂತ. ರಥವು ಅಲ್ಲೇ ನಿಂತಿತು. ಗಗನದಲ್ಲಿ ಬಾಣಗಳ ಮಳೆ ಸುರಿಸುವ ದುರ್ಧರನನ್ನು ಎದೆಯಿಂದಲೇ ತಡೆದನು ಹನುಮಂತ. ಅವನ ಮೇಲೆ ಬಾಣಪ್ರಯೋಗವಾಗುತ್ತಲೇ ಇತ್ತು. ಇನ್ನೊಂದು ದೊಡ್ಡ ಸಿಂಹನಾದವನ್ನು ಮಾಡಿ ಬೆಳೆದನು. ವೇಗವನ್ನು ತಾಳಿ, ದೂರ ಹೋದನು. ಅಲ್ಲಿಂದ ಮಹಾವೇಗದಲ್ಲಿ ಬಂದು ದುರ್ಧರನ ಮೇಲೆ ಬಿದ್ದನು. ಇದೆಲ್ಲಾ ಹೊಸ ಯುದ್ಧಕ್ರಮ. ನೂರಾರು ಸಿಡಿಲುಗಳು ಒಮ್ಮೆಲೇ ಬೆಟ್ಟದ ಮೇಲೆ ಬಿದ್ದಂತೆ ಇತ್ತು ಅದು. ಆ ರಥಕ್ಕೆ 8 ಕುದುರೆಗಳನ್ನು ಕಟ್ಟಿದ್ದರು. ಎಲ್ಲವೂ ಸತ್ತು ಹೋಗಿದ್ದವು. ರಥದ ಅಂಗಾಂಗಗಳೆಲ್ಲಾ ಬೇರೆಯಾಗಿ ಚೂರುಚೂರಾಗಿದ್ದವು. ದುರ್ಧರನ ಪ್ರಾಣವೂ ಹೋಗಿತ್ತು. ಅದನ್ನು ವಿರೂಪಾಕ್ಷ ಮತ್ತು ವೇಪಾಕ್ಷರು ಕಂಡರು. ರೋಷವುಂಟಾಗಿ ಯುದ್ಧಕ್ಕಾಗಿ ಮೇಲೆದ್ದರು. ಗಗನವನ್ನಡರಿ ಕೈಯ ಮುದ್ಗರಗಳಿಂದ ಹನುಮಂತನ ವಕ್ಷಸ್ಥಲಕ್ಕೆ ಪ್ರಹಾರ ಮಾಡಿದರು. ಅದರಿಂದ ಏನೂ ಆಗಲಿಲ್ಲ. ಮುದ್ಗರಗಳು ಮುರಿದುಹೋದವು. ಅವರ ವೇಗವನ್ನು ಇಲ್ಲದಂತೆ ಮಾಡಿ, ಭೂಮಿಗಿಳಿದನು. ಅತ್ತ ಇತ್ತ ನೋಡಿದನು. ಒಂದು ಸಾಲವೃಕ್ಷವಿತ್ತು. ಅದನ್ನು ಕಿತ್ತು ತೆಗೆದುಕೊಂಡು ಮತ್ತೆ ಆಕಾಶಕ್ಕಡರಿ ಆ ಇಬ್ಬರು ರಾಕ್ಷಸರಿಗೂ ಪೆಟ್ಟುಕೊಟ್ಟನು. ಸಾಲವೃಕ್ಷದಿಂದಲೇ ಅವರನ್ನು ಸಂಹರಿಸಿದನು.

ಐವರು ಸೇನಾಪತಿಗಳಲ್ಲಿ ಮೂವರು ಹೋಗಿದ್ದಾರೆ. ಪ್ರಘಸ ಮತ್ತು ಭಾಸಕರ್ಣ ಎಂಬ ಇಬ್ಬರು ಸೇನಾಗ್ರರು ಉಳಿದುಕೊಂಡಿದ್ದಾರೆ. ಅವರಿಬ್ಬರೂ ಹನುಮಂತನ ಮೇಲೆ ಯುದ್ಧಕ್ಕೆ ಬರುತ್ತಾರೆ. ಭಾಸಕರ್ಣ ಕ್ರುದ್ಧನಾಗಿದ್ದಾನೆ. ಕೈಯಲ್ಲಿ ಶೂಲವಿದೆ. ಅವನೊಂದು ಕಡೆ. ಇನ್ನೊಂದೆಡೆ ಪ್ರಘಸ. ಅವನ ಕೈಯಲ್ಲಿ ಪಟ್ಟಸವಿದೆ. ಹೀಗೆ ಅವರಿಬ್ಬರೂ ಹನುಮಂತನನ್ನು ಪ್ರಹರಿಸಿದರು. ಹನುಮಂತನ ಮೈಗೆ ರಕ್ತ ತಾಗಿತು. ಸಿಟ್ಟು ಬಂದಿತು. ಆ ಕಡೆ ಈ ಕಡೆ ನೋಡಿ ಒಂದು ಬೆಟ್ಟದ ಶಿಖರವನ್ನು ಮುರಿದು ತಂದು ಅವರ ಮೇಲೆ ಹಾಕಿದನು. ಆ ಶಿಖರದಲ್ಲಿ ಮರಗಳು, ಪ್ರಾಣಿಗಳು ಎಲ್ಲಾ ಇದ್ದವು. ಸಮಾಧಿ ಕಟ್ಟಿದಂತಾಯಿತು. ಹೀಗೆ ಸೇನಾಪತಿಗಳು ಐವರೂ ಸತ್ತುಹೋದ ಮೇಲೆ ಉಳಿದ ಸೈನ್ಯವನ್ನು ನಾಶ ಮಾಡಿದನು. ಅದು ವಿಚಿತ್ರವಾಗಿದೆ. ಹೇಗೆಂದರೆ ಒಂದು ಕುದುರೆಯನ್ನೆತ್ತಿ ಇನ್ನೊಂದು ಕುದುರೆಯನ್ನು ಹೊಡೆಯುವುದು. ಒಂದು ಆನೆಯನ್ನು ಎತ್ತಿ ಇನ್ನೊಂದು ಆನೆಯ ಮೇಲೆ ಹಾಕುವುದು. ಪದಾತಿಗಳು ಸಿಕ್ಕಿದರೆ ಒಬ್ಬನನ್ನು ಹಿಡಿದು ಇನ್ನೊಬ್ಬನಿಗೆ ಹೊಡೆಯುವುದು. ರಥಗಳನ್ನು ಎತ್ತಿ ರಥಗಳ ಮೇಲೆ ಹಾಕಿದನು. ಹೀಗೆ ಸೈನ್ಯವು ನಾಶವಾಯಿತು. ಕುದುರೆಗಳು, ಆನೆಗಳು ಎಲ್ಲಾ ಸತ್ತು ರಾಶಿ ಬಿದ್ದಿವೆ. ಹನುಮಂತನ ಬಳಿ ಬರಲು ದಾರಿಯೇ ಇಲ್ಲವಾಯಿತು. ಹೀಗೆ ಎಲ್ಲಾ ಸೇನಾಪತಿಗಳನ್ನು, ಅವರ ಸೇನೆಯ ಪರಿಕರಗಳನ್ನು ನಾಶ ಮಾಡಿ ಮತ್ತೆ ಹೆಬ್ಬಾಗಿಲ ಮೇಲೆ ಹೋಗಿ ಕುಳಿತನು. ಪ್ರಳಯಕಾಲದಲ್ಲಿ ಕಾಲಪುರುಷನು ಕುಳಿತಹಾಗೆ ಕುಳಿತಿದ್ದನು.

ರಾವಣನಿಗೆ ಈ ಸುದ್ದಿ ಹೋಯಿತು. ಮಾತೇ ಬರಲಿಲ್ಲ ಅವನಿಗೆ. ಅವನ ಮಗ ಅಕ್ಷಕುಮಾರ ಮುಂದೆ ಕುಳಿತಿದ್ದ. ರಾವಣನ ಮಕ್ಕಳ ಪೈಕಿಯಲ್ಲಿ ಕೆಲವರು ಮಹಾಪರಾಕ್ರಮಿಗಳು. ಇಂದ್ರಜಿತು, ಅತಿಕಾಯ, ಅಕ್ಷಕುಮಾರ ಇವರೆಲ್ಲಾ ಲಂಕೆಯ ಶ್ರೇಷ್ಠರಾದ ವೀರರು. ರಾವಣ ಅವನನ್ನು ನೋಡಿದನು. ಅಷ್ಟಕ್ಕೇ ಎದ್ದನು ಅಕ್ಷಕುಮಾರ. ಅಪ್ಪನ ದೃಷ್ಟಿಯ ಅರ್ಥ ಗೊತ್ತು ಅವನಿಗೆ. ಪ್ರತಾಪಶಾಲಿ, ಚಿನ್ನದ ಧನುಸ್ಸುಳ್ಳವನು, ಯಜ್ಞದಲ್ಲಿ ಅಗ್ನಿಯು ಜ್ವಲಿಸಿ ಮೇಲೇಳುವಂತೆ ಎದ್ದನು. ವೀರರು ಹಾಗೇ. ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಅವಕಾಶವನ್ನು ಕಾಯುತ್ತಿರುತ್ತಾರೆ. ತಂದೆಗೆ ನಮಸ್ಕಾರ ಮಾಡಿದನೆಂದು ಕೂಡಾ ಇಲ್ಲ. ಹಾಗೆಯೇ ದೊಡ್ಡ ರಥವನ್ನೇರಿ ಎದ್ದು ಹೊರಟನು ರಾಕ್ಷಸನಾಯಕ ಅಕ್ಷ. ಆ ರಥವೂ ಕೂಡಾ ಸಾಮಾನ್ಯದ್ದಲ್ಲ. ತುಂಬಾ ತಪಸ್ಸು ಮಾಡಿ ಪಡೆದುಕೊಂಡ ರಥವು ಸ್ವರ್ಣಭೂಷಿತವಾಗಿತ್ತು. ರತ್ನವಿಭೂಷಿತವಾದ ಧ್ವಜ, 8 ಮನೋವೇಗದ ಕುದುರೆಗಳು. ಆ ರಥವನ್ನು ತುಡುಕಲು ಸುರಾಸುರರಿಗೂ ಸಾಧ್ಯವಿರಲಿಲ್ಲ. ಸೂರ್ಯಪ್ರಭೆಯ ಆ ರಥವು ಭೂಮಿಯನ್ನು ಸ್ಪರ್ಶಿಸುತ್ತಿರಲಿಲ್ಲ, ಗಗನಸಂಚಾರಿ. ಆ ರಥಕ್ಕೆ 8 ಖಡ್ಗಗಳನ್ನು ಕಟ್ಟಲಾಗಿತ್ತು. ಅಲಂಕಾರವೂ ಹೌದು, ಆಯುಧವೂ ಹೌದು. ಅಲ್ಲಲ್ಲಿ ಆಯುಧಗಳನ್ನು ಇಡಲಾಗಿದೆ. ಅವೆಲ್ಲ ಶೋಭಿಸುತ್ತಿವೆ. ಆ ರಥದ ಕಡಿವಾಣ ಸೂರ್ಯಚಂದ್ರರ ಕಿರಣಗಳಂತೆ ಇತ್ತು. ಅಂತಹ ರಥವನ್ನೇರಿ ದೇವತುಲ್ಯವಿಕ್ರಮನಾದ ಅಕ್ಷನು ಯುದ್ಧಕ್ಕೆ ಹೊರಟನು. ಭೂಮ್ಯಾಕಾಶವನ್ನು ತುಂಬಿತು ಅಕ್ಷನ ರಥ ಮತ್ತು ಸೈನ್ಯದ ಧ್ವನಿ. ನೇರವಾಗಿ ಸಮರ್ಥನಾದ ಆಂಜನೇಯನಿದ್ದಲ್ಲಿಗೆ ಬಂದ ಅಕ್ಷ.

ಅಕ್ಷನಿಗೆ ಹೇಗಿದ್ದಾನೆ ಹನುಮಂತ ಎಂದು ನೋಡುವ ಕುತೂಹಲ. ಸಿಂಹನೇತ್ರನು ಮಹಾಸಿಂಹವನ್ನು ನೋಡಿದ ಹಾಗೆ ಹನುಮಂತನನ್ನು ನೋಡಿದನು. ಹನುಮಂತನು ಕಾಲಾಗ್ನಿಯಂತಿದ್ದಾನೆ. ಅವನಿಗೆ ಅಚ್ಚರಿ ಮತ್ತು ಸ್ವಲ್ಪ ಗಾಬರಿಯಾಯಿತು. ಅಬ್ಬಾ! ಎಂತಹ ತೇಜಸ್ಸು ಮತ್ತು ಧೈರ್ಯ ಎಂಬುದಾಗಿ ಗೌರವದಿಂದ ನೋಡುವಂತಾಯಿತು ಅಕ್ಷನಿಗೆ. ಈ ಕಪಿಯ ವೇಗ, ಪರಾಕ್ರಮಗಳೇನು? ಈವರೆಗೆ ಶತ್ರುಗಳ ಮೇಲೆ ಮಾಡಿದ ಸಾಧನೆಗಳೇನು? ಎಂದು ಯೋಚಿಸುತ್ತಾ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ. ಅವನೂ ಮಹಾಪ್ರತಾಪಿಯಾಗಿದ್ದರಿಂದ ಅವನ ಬಲವು ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಹಿಂದೆ ಯಾರನ್ನೆಲ್ಲಾ ಕೊಂದ ಇವನು ಎಂದು ನೆನೆಸಿಕೊಂಡಾಗ ಕೋಪ ಬಂತು. ಮನಸ್ಸನ್ನು ಸಮಾಧಾನಗೊಳಿಸಿ, ಏಕಾಗ್ರ ಮಾಡಿಕೊಂಡು ಮೂರು ಬಾಣಗಳಿಂದ ಹನುಮಂತನನ್ನು ಪ್ರಹರಿಸುತ್ತಾನೆ ಅಕ್ಷ. ಅವರ ನಡುವೆ ಯುದ್ಧ ಪ್ರಾರಂಭವಾಯಿತು. ಆ ಸಮಾಗಮ ಅಪ್ರತಿಮವಾಗಿತ್ತು ಎಂದು ವಾಲ್ಮೀಕಿಗಳು ವರ್ಣಿಸಿದ್ದಾರೆ. ದೇವತೆಗಳಿಗೂ, ರಾಕ್ಷಸರಿಗೂ ಗಾಬರಿಯಾಗುವಂತೆ ಆ ಯುದ್ಧವು ನಡೆಯಿತು. ಭೂಮಿ ಮೆಲ್ಲನೆ ಕಂಪಿಸಿತು, ಸೂರ್ಯನ ಪ್ರಭೆ ತಗ್ಗಿತು, ಗಾಳಿ ಬೀಸಲಿಲ್ಲ, ಪರ್ವತಗಳು ಕಂಪಿಸಿದವು, ಆಕಾಶವು ಮೊಳಗಿತು, ಸಮುದ್ರವು ಕ್ಷೋಭೆಗೊಂಡಿತು. ಪ್ರಕೃತಿಯ ಎಲ್ಲಾ ಕಡೆಗಳಿಂದ ಪ್ರತಿಕ್ರಿಯೆ ಇದೆ. ಮೂರು ಬಾಣಗಳು ಸರ್ಪದಂತಿವೆ. ಅವನ್ನು ಹನುಮಂತನ ತಲೆಯ ಮೇಲೆ ಪ್ರಯೋಗಿಸಿದ ಅಕ್ಷ.

ಹನುಮಂತ ರಾವಣನ ಮಗನನ್ನು ಕಂಡಾಗ ಅತ್ಯಂತ ಸಂತೋಷದಿಂದ ಯುದ್ಧಕ್ಕೆ ಅಭಿಮುಖನಾದನು. ಕಣ್ಣಿನಿಂದಲೇ ಅಕ್ಷನನ್ನು ಮತ್ತು ಅವನ ಬಳಗವನ್ನು ಸುಟ್ಟುಬಿಡುವ ಹಾಗೆ ನೋಡಿದನು. ಅತ್ತ ಅಕ್ಷನು ಪರ್ವತದ ಮೇಲೆ ಮಳೆ ಬಿದ್ದ ಹಾಗೆ ಸಾಲು-ಸಾಲಾಗಿ ಬಾಣಗಳನ್ನು ಹನುಮಂತನ ಮೇಲೆ ಪ್ರಯೋಗ ಮಾಡುತ್ತಿದ್ದ. ಆಗಲೂ ಸಂತೋಷದಿಂದ ಹನುಮಂತನು ವೀರ ಘರ್ಜನೆಯನ್ನು ಮಾಡಿದನು. ಅಕ್ಷನು ಮುಂದುವರಿದು ಹನುಮಂತನನ್ನು ಸಮೀಪಿಸುತ್ತಿದ್ದನು. ಹನುಮಂತನ ಬಳಿ ಅಕ್ಷನು ಸಾರುವುದನ್ನು ವಾಲ್ಮೀಕಿಗಳು ಕಾಡಿನಲ್ಲಿ ಮಹಾಗಜವೊಂದು ಮಹಾಕೂಪದ ಬಳಿ ಸಾರುವಂತೆ ಎಂದು ವರ್ಣಿಸಿದ್ದಾರೆ. ಕಾಡಿನಲ್ಲಿ ಮೇಲೆ ಹುಲ್ಲನ್ನು ಮುಚ್ಚಿದ, ಆಳವನ್ನು ಅಳೆಯಲಾಗದ ಕೂಪವನ್ನೂ ಮದಗಜವು ಸಮೀಪಿಸಿದಂತೆ ಅಕ್ಷನು ಹನುಮಂತ ಹತ್ತಿರಕ್ಕೆ ಬರುತ್ತಿದ್ದನು. ಹನುಮಂತನ ಮೇಲೆ ಬಾಣಗಳ ಸುರಿಮಳೆ ಆಗುತ್ತಿರುವಾಗ ಕೈ–ಕಾಲುಗಳನ್ನು ಅಗಲಿಸಿ ಜೋರಾಗಿ ಹನುಮಂತನು ಕೂಗಿದನು. ಹನುಮಂತನು ಅಕ್ಷನು ಪ್ರಯೋಗಿಸಿದ ಎಲ್ಲ ಬಾಣಗಳನ್ನು ವ್ಯರ್ಥ ಮಾಡಿದನು. ಒಂದೇ ಕಡೆ ನಿಲ್ಲದೆ ಓಡಾಡುತ್ತಾ ಇದ್ದುದರಿಂದ ಬಾಣಗಳಿಗೆ ಹನುಮಂತನನ್ನು ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ. ಒಂದು ಹಂತದಲ್ಲಿ ಎರಡು ಬಾಣಗಳು ಬರುತ್ತಿರುವಾಗ ಅದರ ಮಧ್ಯೆ ಚಿಕ್ಕ ಆಕಾರ ತಾಳಿ ತೂರಿ ಹೋದನು. ಎಷ್ಟೇ ಬಾಣ ಪ್ರಯೋಗ ಮಾಡಿದರೂ ಹನುಮಂತನಿಗೆ ಏನೇನು ಆಗದಿದ್ದಾಗ ಅಕ್ಷನಿಗೆ ಬಹಳ ಚಿಂತೆಯಾಯಿತು. ಆಗ ಅಕ್ಷನು ಹನುಮಂತನನ್ನು ವೀರಕಪಿ ಇದು ಎಂದು ಭಾವಿಸಿ ವೀರರಿಗೆ ಕೊಡುವ ಗೌರವವನ್ನು ಕೊಟ್ಟು ನೋಡಿದನು. ಹನುಮಂತನಿಗೆ ವಕ್ಷಸ್ಥಲದಲ್ಲಿ ಕೆಲವು ಬಾಣಗಳು ತಗಲಿದ್ದವು. ನಂತರ ಹನುಮಂತನು ಮುಂದೇನು ಮಾಡಬಹುದು..? ಎಂದು ಯೋಚಿಸಿದನು. ಅಕ್ಷನು ವಯಸ್ಸಿನಲ್ಲಿ ಸಣ್ಣವನಾದರೂ ಮಹಾರಾಕ್ಷಸ ಮಾಡುವ ಕೆಲಸವನ್ನೇ ಮಾಡುತ್ತಿದ್ದಾನೆ, ಇವನನ್ನು ಕೊಲ್ಲಲೇ ಎಂದು ಯೋಚಿಸಿ ಸಣ್ಣವರನ್ನೆಲ್ಲ ಯಾಕೆ ಕೊಲ್ಲಬೇಕು ಎಂದು ಹನುಮಂತನು ಹಾಗೆಯೇ ಸುಮ್ಮನಾದನು. ಇನ್ನೊಮ್ಮೆ ಯೋಚಿಸಿದಾಗ ಹನುಮಂತನಿಗೆ ಇವನಿಗೆ ತುಂಬಾ ಸಾಮರ್ಥ್ಯ ಇರುವುದರಿಂದ ಮತ್ತೊಬ್ಬ ರಾವಣನಾಗುತ್ತಾನೆ ಎಂದು ಅನಿಸಿತು. ಇವನು ಪ್ರಪಂಚಕ್ಕೆ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗುತ್ತಾನೆ ಎಂದು ಅನ್ನಿಸಿದಾಗ ಹೇಗೆ ಮನೆಯೊಳಗೆ ಬೆಂಕಿ ಬಿದ್ದಾಗ ಅದರ ಮೇಲೆ ಕರುಣೆ ತೋರಿ ಹಾಗೆಯೇ ಬಿಡದೆ ಆರಿಸಲು ಪ್ರಯತ್ನಿಸುವರೋ ಹಾಗೆ ಇವನನ್ನು ಅಕ್ಷನನ್ನು ಕೊಲ್ಲುವುದೇ ಸರಿ ಎಂದು ಆಂಜನೆಯನಿಗೆ ಅನ್ನಿಸಿತು. ಹನುಮಂತನು ತನ್ನ ಮತ್ತು ಅಕ್ಷನ ಸಾಮರ್ಥ್ಯ ಮತ್ತು ವೇಗವನ್ನು ಹಾಗೂ ಅವನು ಎಲ್ಲಿದ್ದಾನೆ ಎಂದು ಲೆಕ್ಕಾಚಾರ ಮಾಡಿ, ಅಕ್ಷಕುಮಾರನ ವಧೆಗೆ ಮನಸ್ಸು ಮಾಡಿದನು. ಆಕಾಶದಿಂದ ಅಕ್ಷಕುಮಾರನ ಬಳಿ ರಥಗಳು ಹಾರಿ ಬರುತ್ತಿದ್ದವು. ಇದನ್ನು ನೋಡಿದ ಹನುಮಂತನು ರಥದ ಎಂಟು ಕುದುರೆಗಳಿಗೆ ತನ್ನ ಕೈಯಿಂದ ಪೆಟ್ಟನ್ನು ಕೊಟ್ಟನು. ಕುದುರೆಗಳಿಗೆ ಆಕಾಶದಲ್ಲಿ ಹಾರಬಲ್ಲ, ಅತ್ಯಂತ ಭಾರವನ್ನು ಹೊರಬಲ್ಲ ವಿಶೇಷ ಸಾಮರ್ಥ್ಯ ಇತ್ತು. ಅಂತಹ ಕುದುರೆಗಳಿಗೆ ಹನುಮಂತನು ಕೈಯಿಂದಲೇ ಪೆಟ್ಟು ಕೊಟ್ಟು, ರಥಕ್ಕೂ ಹೊಡೆದನು. ಆಗ ತಪಸ್ಸನ್ನು ಮಾಡಿ ಪಡೆದ ರಥವು ನೂರಾರು ಚೂರಾಗಿ ಹೋಯಿತು. ಕುದುರೆಗಳು ಸತ್ತು ಹೋದವು. ಅಕ್ಷಕುಮಾರ ಇದನ್ನೆಲ್ಲ ಗಮನಿಸಿದನು. ರಥವೆಂದರೇ ಯುದ್ಧಕ್ಕೆ ಸಾಧನ, ರಥವೆಂದರೇ ರಕ್ಷಣೆ, ರಥವೆಂದರೇ ಶಾಸ್ತ್ರಾಗಾರ, ರಥದ ಚಲನೆಯಿಂದ ಅನೇಕ ಆಘಾತಗಳನ್ನು ತಪ್ಪಿಸಿಕೊಳ್ಳಬಹುದು. ಇಂತಹ ರಥವು ನಷ್ಟವಾಗಿದ್ದನ್ನು ಕಂಡಾಗ ಅಕ್ಷಕುಮಾರನು ಗಗನಕ್ಕೆ ನೆಗೆದನು. ಆ ಸಂದರ್ಭದಲ್ಲಿ ಅಕ್ಷನ ಕೈಯಲ್ಲಿ ಖಡ್ಗ ಮತ್ತು ಗುರಾಣಿಗಳಿದ್ದವು. ಆಕಾಶದಲ್ಲಿ ಕೇವಲ ಧನಸ್ಸು ಮತ್ತು ಬಾಣಗಳು ಉಪಯೋಗಕ್ಕೆ ಬರುವುದಿಲ್ಲ. ಆ ಸನ್ನಿವೇಶವು ಋಷಿಯು ಉಗ್ರ ತಪಸ್ಸಿನಿಂದ ದೇಹವನ್ನು ತ್ಯಜಿಸಿ ಆಕಾಶಕ್ಕೆ ನೆಗೆದಂತೆ ಇತ್ತು ಎಂದು ವಾಲ್ಮೀಕಿಗಳು ವರ್ಣಿಸಿದ್ದಾರೆ. ಆಕಾಶದಲ್ಲಿ ಅಕ್ಷಕುಮಾರ ಮತ್ತು ಹನುಮಂತ ಇಬ್ಬರು ಸಂಚಾರ ಮಾಡುತ್ತಿದ್ದರು. ಆಗ ಸಮಯಸಾಧಿಸಿ ಹನುಮಂತನು ಅಕ್ಷಕುಮಾರನ ಕೆಳಗೆ ಬಂದು ಅವನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡನು. ನಂತರ ಅಕ್ಷಕುಮಾರನನ್ನು ಸಾವಿರಾರು ಬಾರಿ ಗರಗರ ತಿರುಗಿಸಿ ಬಲವಾಗಿ ಭೂಮಿಗೆ ಅಪ್ಪಳಿಸಿದನು. ಆಗ ಅಕ್ಷಕುಮಾರನ ತೋಳು, ತೊಡೆ, ಸೊಂಟ ಮತ್ತು ಕಂಠಗಳು ಮುರಿದುಹೋದವು. ಮೂಳೆಗಳು ಪುಡಿಯಾದವು, ಸಂಧಿಗಳು ಸಡಿಲಗೊಂಡವು, ಕಣ್ಣು ಕಾಣದಾಯಿತು, ತೊಟ್ಟಿದ್ದ ಕವಚವೂ ಹೋಯಿತು. ಇದರಿಂದ ಹನುಮಂತನ ಪ್ರಚಂಡ ಶಕ್ತಿಯನ್ನು ತಿಳಿಯಬಹುದು. ಇದನ್ನೆಲ್ಲ ನೋಡಿದ ರಾವಣನಿಗೆ ದೊಡ್ಡ ಭಯವಾಯಿತು. ಗಗನದಲ್ಲಿ ಸುರರು, ಅಕ್ಷ ಪನ್ನಗರು, ಮಹರ್ಷಿಗಳು, ಇಂದ್ರನೇ ಮೊದಲಾದವರು ರಾವಣನ ಮಗನ ಸಂಹಾರವಾಗುತ್ತಿರುವ ದೃಶ್ಯವನ್ನು ನೋಡಿದರು. ಗಗನದಲ್ಲಿ ದೊಡ್ಡ ಸಭೆಯೇ ಸೇರಿತ್ತು. ಎಲ್ಲರೂ ಅಚ್ಚರಿಯಿಂದ ಹನುಮಂತನನ್ನು ನೋಡುತ್ತಿದ್ದರು. ಆದರೇ ಹನುಮಂತನು ಏನು ಆಗದೇ ಇದ್ದ ಹಾಗೆ ಮತ್ತೆ ಹೆಬ್ಬಾಗಿಲ ಬಳಿ ಕುಳಿತುಕೊಂಡನು. ಯುದ್ಧವು ಘೋರ ಎಂದು ಅನ್ನಿಸಿದರೂ ವೀರನಾದವನು ಇದಕ್ಕೆ ಸಿದ್ಧನಾಗಿರುತ್ತಾನೆ.

ವೀರನಾದವನು ಯುದ್ಧದಲ್ಲಿ ಮರಣಕ್ಕೆ ಸಿದ್ಧನಿರಬೇಕು. ಅಭಿಮುಖವಾಗಿ ಹೊರಡುವಾಗ ಬರುವ ಮರಣವು ಎಲ್ಲ ಪಾಪಗಳಿಂದ ಬಿಡುಗಡೆ ಮಾಡಿ, ಮೋಕ್ಷವನ್ನು ನೀಡುತ್ತದೆ. ವೀರನಾದವನು ಯುದ್ಧದಲ್ಲಿ ಮರಣ ಹೊಂದಿದರೆ ವೀರಸ್ವರ್ಗ ― ಶ್ರೀಸೂಕ್ತಿ.

ರಾಕ್ಷಸರು ತಮ್ಮ ಅಪಾರ ಸಾಮರ್ಥ್ಯಗಳಿಂದ ಅಕಾರ್ಯವನ್ನೇ ಮಾಡಿದ್ದರು. ರಾವಣನು ವಿಚಾಲಿತನಾಗಿ ಭಯಗೊಂಡನು. ಅವನಿಗೆ ಸಮಾಧಾನವಾಗಲೂ ಕೊಂಚ ಸಮಯವೇ ಬೇಕಾಯಿತು. ಇನ್ನು ಉಪೇಕ್ಷೆ ಮಾಡುವುದಕ್ಕೆ ಅರ್ಥವೇ ಇಲ್ಲ, ಇದು ಸಾಮಾನ್ಯ ಕಪಿ / ಶಕ್ತಿ / ಭೂತ ಅಲ್ಲ , ಇಡೀ ಲಂಕೆಯೇ ಭಯಪಡುವ ಸಮಯದಲ್ಲಿದೆ, ನಮ್ಮೆಲ್ಲರ ಭವಿಷ್ಯ ತೂಗುಯ್ಯಾಲೆಯಲ್ಲಿದೆ ಎಂದು ರಾವಣನಿಗೆ ಅನಿಸಿತು. ಬಳಿಕ ರಾವಣನು ಲಂಕೆಯ ಸರ್ವೋಚ್ಚ ವೀರರನ್ನು ಕರೆದನು. ಇಂದ್ರಜಿತು, ಮೇಘನಾದನೇ ಮೊದಲಾದ ಪರಾಕ್ರಮಿಗಳನ್ನು ರಾವಣನು ಕರೆದನು. ಇಂದ್ರಜಿತು ಎಂಬುದು ಹೆಸರಲ್ಲ. ಇಂದ್ರನನ್ನು ಸೋಲಿಸಿ ಲಂಕೆಯಲ್ಲಿ ತಂದು ಇಟ್ಟಿದ್ದರಿಂದ ಪಡೆದ ಬಿರುದಾಗಿತ್ತು. ಸ್ವತಃ ಬ್ರಹ್ಮದೇವನೇ ಲಂಕೆಗೆ ಬಂದು ಕೆಲವನ್ನು ಕೊಟ್ಟು ಇಂದ್ರನನ್ನು ಕರೆದುಕೊಂಡು ಹೋಗಿದ್ದ. ಏಕೆಂದರೆ ಇಂದ್ರಜಿತುವು ತಪಸ್ಸನ್ನು ಮಾಡಿ ಇಂದ್ರನನ್ನು ಸೋಲಿಸಿ ಅವನಿಂದ ಸುವಸ್ತುಗಳನ್ನು ಪಡೆಯಬೇಕೆಂದು ವರ ಪಡೆದಿದ್ದ. ಇಂದ್ರಜಿತುವಿನ ಬಳಿಯಲ್ಲಿ ಇರುವ ದಿವ್ಯಾಸ್ತ್ರಗಳು ಬೇರೆ ಯಾವ ರಾಕ್ಷಸರಲ್ಲಿಯೂ ಇರಲಿಲ್ಲ. ರಾಮನಲ್ಲಿ ಇಂದ್ರಜಿತುವಿನ ಬಳಿ ಇರುವ ಎಲ್ಲ ದಿವ್ಯಾಸ್ತ್ರಗಳು ಇದ್ದವು. ಇಂದ್ರಜಿತುವಿಗೆ ‘ದಯೆ’ ಎನ್ನುವ ಶಬ್ದವೇ ತಿಳಿದಿರಲಿಲ್ಲ. ನಿರ್ದಯನಾದ ಇಂದ್ರಜಿತು ಯುದ್ಧಕ್ಕೆ ನಿಂತರೆ ಅವನ ಹತ್ತಿರ ಯಾರೂ ಬರಲು ಸಾಧ್ಯವಿರಲಿಲ್ಲ. ಹುಟ್ಟಿದಾಕ್ಷಣ ಮೋಡದಂತೆ ಅಳುತ್ತಿದ್ದರಿಂದ ಮೇಘನಾದನಿಗೆ ಆ ಹೆಸರು ಬಂದಿತ್ತು.

ಲಂಕೆಯಲ್ಲಿ ರಾವಣ, ಕುಂಬಕರ್ಣ, ಮತ್ತು ಇಂದ್ರಜಿತು ಮಹಾ ಪರಾಕ್ರಮಿಗಳಾಗಿದ್ದರು. ಅವರಲ್ಲಿ ಸರಿಯಾಗಿ ತೂಕ ಹಾಕಿದರೆ ಇಂದ್ರಜಿತುವಿನಲ್ಲಿ ಹೆಚ್ಚು ಪರಾಕ್ರಮವಿತ್ತು. ಅಂತಹ ಇಂದ್ರಜಿತುವನ್ನು ರಾವಣನು ಕರೆದನು. ಇಂದ್ರಜಿತು ಮತ್ತು ಹನುಮಂತನ ಯುದ್ಧ ಬಹಳ ಘೋರವಾಗಿತ್ತು. ಇಂದ್ರಜಿತುವೂ ಸಹ ಹನುಮಂತನು ದೊಡ್ಡ ಪರಾಕ್ರಮಿಯೆಂದು ಮರ್ಯಾದೆಯನ್ನು ಕೊಡುತ್ತಾನೆ. ಇಂದ್ರಜಿತುವಿಗೆ ಮೊಸಗಳು ಸಹಜವಾಗಿದ್ದವು. ಲೀಲಾಜಾಲವಾಗಿ ಯಾರನ್ನಾದರೂ ಮೋಸ ಮಾಡುವ ಶಕ್ತಿ ಇತ್ತು. ಧರ್ಮಯುದ್ಧ ತಿಳಿದಿರಲಿಲ್ಲ, ಒಬ್ಬ ಮಹಾವೀರ ಅಧರ್ಮದಿಂದ ಯುದ್ಧ ಮಾಡಲು ಆರಂಭ ಮಾಡಿದರೆ ಲೋಕಕಂಟಕನಾಗುತ್ತಾನೆ.

ಲೋಕಕಂಟಕರಿಗೆ ಮೋಸ ಬಹಳ ಸಹಜ. ಮಹಾವೀರನು ಅಧರ್ಮದಿಂದ ಯುದ್ಧ ಮಾಡಿದರೆ ಲೋಕಕಂಟಕನಾಗುತ್ತಾನೆ ―ಶ್ರೀಸೂಕ್ತಿ.

ಇಂತಹ ಇಂದ್ರಜಿತುವನ್ನು ಕರೆದು ರಾವಣನು ಉತ್ಸಾಹ ತುಂಬಲು ದೊಡ್ಡ ಭಾಷಣವನ್ನೇ ಮಾಡಿದನು. ಇಂದ್ರಜಿತು ಯುದ್ಧಕ್ಕೆ ಮುಂದಾಗುತ್ತಾನೆ. ಮುಂದೇನಾಯಿತು..? ಹನುಮಂತ ಮತ್ತು ಮೇಘನಾದನ ನಡುವೆ ನಡೆದ ಅತೀಘೋರ ಯುದ್ಧವನ್ನು ಮತ್ತು ಅದರ ಪರಿಣಾಮವನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments