ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ನೀ ಮಾಡಿದಡುಗೆಯನು ನೀನುಣ್ಣಬೇಕು, ನೀನೆಟ್ಟ ಗಿಡದ ಫಲ ನೀ ಸವಿಯಬೇಕು, ನೀನೆಟ್ಟ ಮುಳ್ಳುಗಿಡ ನಿನ್ನ ಕಾಲಡಿಗೆ, ಕೂಡಿಟ್ಟ ಪಾಪಗಳು ನಿನ್ನ ಸಂತಿತಿಗೆ. ಈ ಸಾಲುಗಳು ಸಧ್ಯ ರಾವಣನಿಗೆ ಸರಿಯಾಗಿ ಅನ್ವಯವಾಗ್ತಾ ಇದೆ.

ರಾಮಾಯಣದ ಉತ್ತರಕಾಂಡಕ್ಕೆ ಹೋದರೆ ಅಲ್ಲಿ ರಾವಣನ ಪೂರ್ವಚರಿತ್ರೆ ಪೂರ್ತಿ ಇದೆ. ಅವನು ಹೇಗೆ ಲಂಕೆಯನ್ನು ತನ್ನದಾಗಿಸಿಕೊಂಡ? ಹೇಗೆ ಪುಷ್ಪಕವನ್ನ ತನ್ನದಾಗಿಸಿಕೊಂಡ? ಅಷ್ಟೆಲ್ಲ ಹೆಂಗಳೆಯರು ಹೇಗೆ ಅಲ್ಲಿಗೆ ಬಂದರು? ಮತ್ತು, ಜಗತ್ತಿನ ಮೇಲೆ ಅವನು ನಡೆಸಿದ ದೌರ್ಜನ್ಯವೇನು? ಎನ್ನುವುದು ಉತ್ತರಕಾಂಡದಲ್ಲಿ ನಮಗೆ ಲಭ್ಯವಾಗುವಂಥದ್ದು. ಬಾಲಕಾಂಡದಲ್ಲಿ ಒಂದು ಝಲಕ್ ಇದೆ. ಪುತ್ರಕಾಮೇಷ್ಠಿಯಲ್ಲಿ ಸೇರಿದ ದೇವತೆಗಳು ಮಾತಾಡಿಕೊಳ್ತಾರೆ. ಬ್ರಹ್ಮನಲ್ಲಿ ಹೇಳಿಕೊಳ್ತಾರೆ. ರಾವಣನ ಅನ್ಯಾಯವೇನು ಎಂಬುದನ್ನು. ಇನ್ನು ಅರಣ್ಯಕಾಂಡದ ಮಧ್ಯದಿಂದ, ಸೀತಾಪಹರಣದ ಸಂದರ್ಭದಿಂದ ನಾವು ರಾವಣನ ವಿಜೃಂಭಣೆಯನ್ನೇ ಕಾಣ್ತೇವೆ. ಸೀತೆಯನ್ನು ಕದ್ದೊಯ್ದು, ರಾಮನನ್ನು, ರಘುವಂಶವನ್ನು, ಸಜ್ಜನರನ್ನು ನೋಯಿಸಿ, ಮೆರೆಯುತ್ತಾ ಇದಾನೆ ಅವನು ಲಂಕೆಯಲ್ಲಿ. ಇಷ್ಟೇ ಕಥೆಯನ್ನ ಯಾರಾದರೂ ನೋಡಿದರೆ ಅನ್ಯಾಯಕ್ಕೊಂದು ಕೊನೆಯೇ ಇಲ್ಲವಾ? ಒಳ್ಳೆಯತನಕ್ಕೊಂದು ಬೆಲೆಯೇ ಇಲ್ಲವಾ? ಎನ್ನುವ ಪ್ರಶ್ನೆ ಮೂಡುವಂತೆ ಆಗ್ತದೆ.

ಸುಂದರಕಾಂಡದ ಈ ಘಟ್ಟಕ್ಕೆ ಬರುತ್ತಿರುವಂತೆಯೇ ನಮಗೆ ಸಮಾಧಾನ ಆಗ್ಲಿಕ್ಕೆ ಪ್ರಾರಂಭವಾಗ್ತದೆ. ಯಾಕೆಂದರೆ ಕರ್ಮಕ್ಕೊಂದು ಫಲವಿದೆ. ಒಳಿತಾಗಲಿ, ಕೆಡುಕಾಗಲಿ. ಸತ್ಕರ್ಮಕ್ಕೆ ಸತ್ಫಲವಿದೆ, ದುಷ್ಕರ್ಮಕ್ಕೆ ದುಷ್ಫಲವಿದೆ ಎಂಬುದು ನಮಗೆ ಗೊತ್ತಾಗ್ತದೆ. ಅದಲ್ಲದಿದ್ದರೆ ರಾವಣನು ಸೀತೆಯನ್ನು ಪೀಡಿಸುವಾಗ ಯಾರ ಮನಸ್ಸಾದರೂ ನೊಂದು ಹೋಗುವುದರಲ್ಲಿ ಏನೂ ಸಂಶಯವಿಲ್ಲ. ಅಕಾರಣವಾಗಿ ಆ ಸಾಧ್ವಿಯನ್ನು ಯಾಕಪ್ಪಾ ಪೀಡಿಸ್ತಾನೆ ಇವನು? ಯಾರೂ ಕೇಳುವವರೇ ಇಲ್ವಲ್ಲ ಅನಿಸಿಬಿಡ್ತದೆ ಆ ಘಟ್ಟದಲ್ಲಿ. ಕೊಂಚ ಮುಂದೆ ಬಂದಾಗ ರಾವಣನಿಗೆ ತಾನು ಮಾಡಿದ ಕರ್ಮ ತಿರುಗಿ ಬರುವುದು ಕಾಣ್ತೇವೆ. ಅದೆಲ್ಲ ಆಗಿದೆ ಈಗ. ಕಿಂಕರರು ಹತರಾದರು, ಅಶೋಕವನವು ಧ್ವಂಸವಾಯಿತು. ಕುಲದೇವತಾ ಸ್ಥಾನವಾದ ಚೈತ್ಯ ಪ್ರಾಸಾದವು ಧ್ವಂಸವಾಯಿತು. ಲಂಕೆಯ ಸೇನಾಪತಿಯ ಸುಪುತ್ರ ಜಂಬುಮಾಲಿ ಹತನಾಗಿ ಹೋಗಿದಾನೆ. ಅಮಾತ್ಯ ಪುತ್ರರು ಏಳು ಜನ ನಾಶವಾಗಿದಾರೆ. ಐವರು ಮುಂಚೂಣಿಯ ಸೇನಾನಾಯಕರು ಹತರಾಗಿದಾರೆ. ಕೊನೆಯಲ್ಲಿ ರಾವಣನ ಮತ್ತು ಮಂದೋದರಿಯ ಕಿರಿಯಪುತ್ರ ಅಕ್ಷಕುಮಾರ ಸತ್ತೇ ಹೋಗಿದಾನೆ. ಲಂಕೆಯಲ್ಲಿ ಅಗ್ರಮಾನ್ಯ ವೀರರ ಮಧ್ಯೆ ಗಣನೆಗೆ ಒಳಗಾಗತಕ್ಕಂತಹ ಅಕ್ಷ ಸತ್ತಾಗ ನಿಜಕ್ಕೂ ಕರ್ಮ ಫಲ ಕೊಡಲಿಕ್ಕೆ ಆರಂಭವಾಯಿತು.

ಒಂದು ಕೆಟ್ಟ ಕೆಲಸ ಮಾಡಿದರೆ ಕೂಡಲೇ ಫಲ ಬಂದುಬಿಡ್ತೆದೆ ಅಂತೇನಿಲ್ಲ. ಅದು ನಿಧಾನಕ್ಕೆ ತಿರುಗಿ ಬಂದೀತು. ನಿಧಾನಕ್ಕೆ ಹಿಂತಿರುಗಿ ಬರುವ ನಮ್ಮದೇ ದುಷ್ಕರ್ಮ ಆ ದುಷ್ಕರ್ಮ ಮಾಡಿದವನ ಬೇರುಬೇರನ್ನು ಕತ್ತರಿಸಿ ಹಾಕ್ತದೆ. ಪ್ರಾರಂಭವಾಗಿದೆ ಈಗ. ಹೇಗೋ ಮನಸ್ಸಿಗೆ ಸಮಾಧಾನವನ್ನ ತಂದುಕೊಂಡು ಮುಂದೇನು ಎನ್ನುವ ಚಿಂತನೆಯನ್ನು ರಾವಣ ಮಾಡ್ತಾನೆ. ಅಲ್ಲಿ ಅವನಿಗೆ ಯೋಚನೆ ಮಾಡೋದಕ್ಕೂ ಸಮಯವಿಲ್ಲ. ಎಲ್ಲವನ್ನು ಧ್ವಂಸಮಾಡಿ ದ್ವಾರದ ಮೇಲೆ ಕೂತಿದಾನೆ ಹನುಮಂತ. ಅವನು ಈಕಡೆ ಬರೋದ್ರೊಳಗೆ ಯಾರನ್ನಾದ್ರೂ ಕಳಿಸ್ಬೇಕು. ಯಾರು ಅಂತ ಗೊತಾಗ್ತಾ ಇಲ್ಲ, ಏನು ಅಂತ ಗೊತಾಗ್ತಾ ಇಲ್ಲ. ಇದ್ದಕಿದ್ದಂತೆ ಲಂಕೆಯ ಮೇಲೆ ವಜ್ರಾಘಾತವೇ ಆಗ್ಬಿಟ್ಟಿದೆ. ಹಾಗಾಗಿ ತನ್ನ ಯೋಧರ ಪೈಕಿಯಲ್ಲಿ ಸರ್ವೋಪರಿ ಎಂದು ಕರೆಯಬಲ್ಲಂತಹ ಒಬ್ಬ ಯೋಧ ಇವನ ಮಗನೂ ಹೌದು, ಯುವರಾಜನೂ ಹೌದು, ಲಂಕೆಯ ಉತ್ತರಾಧಿಕಾರಿ ಅಂತಹ ತ್ರಿಲೋಕವಿಖ್ಯಾತನಾದ ಇಂದ್ರಜಿತುವನ್ನು ಕರೆದ ರಾವಣ. ರೋಷವಿತ್ತು. ಇಂದ್ರಜಿತುವನ್ನು ಹೊಗಳ್ತಾನೆ. ನೀನು ಅಸ್ತ್ರ ಬಲ್ಲವನು, ಶಸ್ತ್ರ ಬಲ್ಲವನು. ನೀನು ಶೋಕದಾತ. ಈ ಪ್ರಪಂಚದ ಸಕಲರಿಗೆ ಶೋಕವನ್ನು ಕೊಟ್ಟವನು, ಕೊಡಬಲ್ಲವನು ಎಂದು ಹೊಗಳ್ತಾನೆ. ನೀನ್ಯಾರು ಮತ್ತು ನಿನ್ನ ಪರಾಕ್ರಮ ಏನು ಎಂಬುದರ ಪರಿಚಯ ದೇವತೆಗಳಿಗೆ ಮತ್ತು ಇಂದ್ರನಿಗೆ ಇದೆ. ದೇವತೆಗಳನ್ನು ಸೋಲಿಸಿದವನು, ಇಂದ್ರನನ್ನು ಹೆಡೆಮುರಿಕಟ್ಟಿ ಲಂಕೆಯಲ್ಲಿ ತಂದಿಟ್ಟವನು. ಹಾಗೇ ಬ್ರಹ್ಮನ ಆರಾಧನೆಯ ಮೂಲಕ ವಿವಿಧವಾದ ಅಸ್ತ್ರಗಳನ್ನ ಸಂಗ್ರಹ ಮಾಡಿದವನು. ನಿನ್ನ ಅಸ್ತ್ರಬಲದ ಮುಂದೆ ನಿಲ್ಲಲು ಅಸುರರಿಗೂ, ದೇವತೆಗಳಿಗೂ ಸಾಧ್ಯವಾಗಲಿಲ್ಲ. ಮೂರು ಲೋಕದಲ್ಲಿ ನಿನ್ನ ಮುಂದೆ ಯುದ್ಧಕ್ಕೆ ಬಂದು ನಿಂತವರು ಕಂಗೆಡದೆ ಇಲ್ಲ. ಹಾಗೆ ಮಾಡಿದವನು ನೀನು. ನಿನ್ನಲ್ಲಿ ಭುಜವೀರ್ಯ ಮತ್ತು ತಪಸ್ಸು ಎರಡೂ ಇದೆ. ಇವೆರಡೂ ನಿನ್ನನ್ನು ಕಾದುಕೊಳ್ತಿದಾವೆ. ನಿನಗೆ ಸಮಯ ಸಂದರ್ಭಗಳ ಸರಿಯಾದ ಪರಿಜ್ಞಾನವಿದೆ. ಹಾಗಾಗಿ ಯುದ್ಧದಲ್ಲಿ ಅಸಾಧ್ಯವಾದದ್ದು ನಿನಗೆ ಯಾವುದೂ ಇಲ್ಲ. ಮತ್ತು ರಾಜನೀತಿಯ ಸಮಾಲೋಚನೆಯಲ್ಲೂ ನೀನು ನಿಷ್ಣಾತ. ಹಾಗಾಗಿ ಜಗತ್ತಿಗೆ ನಿನ್ನ ಪರಿಚಯವು ಮಹಾವೀರನೆಂಬುದಾಗಿ ಆಗಿದೆ. ನನಗೆ ಅನುರೂಪ ನೀನು. ನನಗೆ ತಕ್ಕ ಮಗ. ವಿಕ್ರಮದಲ್ಲಿಯೂ, ಪಾಪಕರ್ಮದಲ್ಲಿಯೂ ಅಂತ ಅರ್ಥ. ಹಾಗಾಗಿ ತಪೋಬಲ, ಭುಜಬಲ ಹಾಗೂ ಅಸ್ತ್ರಬಲ ಇದೆಲ್ಲಾ ನಿನ್ನಲ್ಲಿರೋದ್ರಿಂದ ನೀನೆಲ್ಲಿವರೆಗೆ ರಣಕಣದಲ್ಲಿ ಜಾಗೃತನಾಗಿದೀಯೋ ಅಲ್ಲಿವರೆಗೆ ನನಗೆ ಚಿಂತೆಯಿಲ್ಲ. ನೀನು ಹೊರಟರೆ ನನಗೆ ಸಮಾಧಾನ. ಗೆದ್ದುಬರ್ತಾನೆ, ಕಾರ್ಯಸಾಧನೆ ಮಾಡ್ಕೊಂಡು ಬರ್ತಾನೆ ಎನ್ನುವ ಸಮಾಧಾನ ನನಗಿದೆ ಎಂಬುದಾಗಿ ಹೇಳಿ ಸತ್ತವರ ಪಟ್ಟಿ ಕೊಟ್ಟ.

ಎಂಭತ್ತು ಸಾವಿರ ಕಿಂಕರರು ಹತರಾಗಿ ಹೋಗಿದಾರೆ. ಜಂಬುಮಾಲಿ ಹತನಾಗಿದಾನೆ. ಅಮಾತ್ಯಪುತ್ರರು ಏಳು ಜನ ಹತರಾಗಿದಾರೆ. ಐವರು ಮುಂಚೂಣಿಯ ಸೇನಾಪತಿಗಳು ಹತರಾಗಿದಾರೆ. ಹಾಗೆಯೇ ದೊಡ್ಡ ಸೈನ್ಯವೂ ನಾಶವಾಗಿದೆ. ಚತುರಂಗ ಬಲವು ದೊಡ್ಡ ಪ್ರಮಾಣದಲ್ಲಿ ನಾಶವಾಗಿದೆ. ಕೊನೆಯಲ್ಲಿ ನಿನ್ನ ಪ್ರೀತಿಯ ತಮ್ಮ ಅಕ್ಷಕುಮಾರ ಯುದ್ಧದಲ್ಲಿ ಆ ಕಪಿಯಿಂದ ಹತನಾಗಿದಾನೆ. ಆದರೆ ನನ್ನ ಶಕ್ತಿಯಿರುವುದು ಅವರಲ್ಲಲ್ಲ, ನಿನ್ನಲ್ಲಿ. ನನ್ನ ಕಡೆಯ ಪ್ರಬಲ ವೀರ ನೀನು ಹೊರತು ಇವರಲ್ಲ. ಹಾಗಾಗಿ ಯುದ್ಧಕ್ಕೆ ನೀನು ಮುಂದಾಗಬೇಕು. ನೀನೂ ಜಾಗ್ರತೆ. ಆ ಕಪಿಯ ಮಹದ್ಬಲ, ಮಹಾಪರಾಕ್ರಮಗಳನ್ನು ಸರಿಯಾಗಿ ಗಮನಿಸ್ಕೋ. ನಿನ್ನ ಶಕ್ತಿ ಸಾಮರ್ಥ್ಯಗಳನ್ನೂ ತುಲನೆ ಮಾಡ್ಕೊಂಡು ಸರಿಯಾದ ಯುದ್ಧತಂತ್ರವನ್ನು ಹೂಡು. ಕೊನೆಯಲ್ಲಿ ಹೀಗೊಂದು ಮಾತು ಹೇಳಿದ. ನಾನು ನಿನ್ನನ್ನು ಹೀಗೆ ಕಳುಹಿಸುವುದು ಸರಿಯಲ್ಲ. ಆದರೆ ಇದು ರಾಜಧರ್ಮ, ಕ್ಷತ್ರಧರ್ಮ. ಹಾಗಾಗಿ ನಾನು ನಿನ್ನನ್ನು ಕಳುಹಿಕೊಡ್ತಾ ಇದ್ದೇನೆ.

ಹನುಮಂತ ಶುರು ಮಾಡಿದ್ದೇ ಹಾಗೆ. ರಾವಣನು ನನ್ನನ್ನು ಗುರುತಿಸುವಂತಾಗಬೇಕು. ನನ್ನ ವೀರತನವನ್ನು ಸಮ್ಮಾನಿಸುವಂತೆ ಆಗಬೇಕು. ಅದು ಆಗಿದೆ.

ತಂದೆಯ ಮಾತನ್ನು ಕೇಳಿಕೊಂಡ ಇಂದ್ರಜಿತು. ತಿರುಗಿ ಮಾತನಾಡಲಿಲ್ಲ. ತಂದೆಗೆ ಪ್ರದಕ್ಷಿಣೆ ಬಂದ ದೃಢನಿಶ್ಚಯವನ್ನ ಮಾಡ್ತಾನೆ. ಅವನದ್ದೇ ಒಂದಷ್ಟು ಗಣಗಳಿವೆ. ಅವರನ್ನು ಕೂಡಿಕೊಂಡ. ಯುದ್ಧೋತ್ಸಾಹನಾಗಿ ಸಂಗ್ರಾಮಕ್ಕೆ ತೆರಳ್ತಾನೆ. ಅವರ ಉತ್ಸಾಹವನ್ನು ಕಂಡರೆ ಸಮುದ್ರಕ್ಕೆ ನೆರೆ ಬಂದಂತಿತ್ತು. ರಥವನ್ನೇರ್ತಾನೆ. ಹೇಗಿತ್ತು ರಥ ಅಂದ್ರೆ ಗರುಡನ, ವಾಯುವಿನ ವೇಗವುಳ್ಳ ನಾಲ್ಕು ಸರ್ಪಗಳು. ಬಿಳಿಯ ತೀಕ್ಷ್ಣವಾದ ಕೋರೆಹಲ್ಲುಗಳಿಂದ ಕೂಡಿರತಕ್ಕಂತಹ ನಾಲ್ಕು ದೊಡ್ಡ ದೊಡ್ಡ ಸರ್ಪಗಳಿಂದ ಕೂಡಿದ ರಥ. ಭಯಂಕರ ವೇಗವುಳ್ಳದ್ದು. ಆ ರಥವನ್ನು ಇಂದ್ರಜಿತು ಹತ್ತಿದ. ರಥವನ್ನೇರಿದಾನೆ. ಧನುಸ್ಸನ್ನು ಹಿಡಿದಿದಾನೆ. ಅಸ್ತ್ರ-ಶಸ್ತ್ರಗಳನ್ನು ಬಲ್ಲವನಾಗಿದಾನೆ. ಕ್ಷಿಪ್ರವಾಗಿ ಹನುಮನ ಕಡೆಗೆ ಧಾವಿಸಿದಾನೆ ಇಂದ್ರಜಿತು.

ಹನುಮಂತನಿಗೆ ರಥಘೋಷ ಕೇಳಿತು. ಧನುಷ್ಠೇಂಕಾರವೂ ಕೇಳಿತು. ಬಹಳ ಸಂತೋಷವಾಯ್ತಂತೆ ಹನುಮನಿಗೆ. ಆ ಕಡೆಗೆ ಇಂದ್ರಜಿತು ದೊಡ್ಡ ಧನುಸ್ಸು, ತೀಕ್ಷ್ಣವಾದ ಬಾಣಗಳನ್ನು ಹಿಡಿದುಕೊಂಡು ಹನುಮಂತನನ್ನು ಲಕ್ಷ್ಯವಾಗಿಟ್ಟುಕೊಂಡು ಬರ್ತಾ ಇದಾನೆ. ಆಗ ಪ್ರಕೃತಿಯಲ್ಲಿ ಬದಲಾವಣೆಗಳುಂಟಾದವಂತೆ. ಇದ್ದಕಿದ್ದಂತೆ ದಿಕ್ಕುಗಳು ಕಲುಷಿತವಾದವು. ದಿಕ್ಕುದಿಕ್ಕುಗಳಲ್ಲಿ ಧೂಳೆದ್ದಿತು. ರೌದ್ರಮೃಗಗಳು ಭಯಂಕರ ನಿನಾದವನ್ನು ಮಾಡಿದವು. ಆಕಾಶದಲ್ಲಿ ದೊಡ್ಡ ಸಭೆಯೇ ಸೇರಿತು. ನಾಗರು, ಯಕ್ಷರು, ಮಹರ್ಷಿಗಳು, ಸಿದ್ಧರು ಇವರೆಲ್ಲ ಸೇರ್ಕೊಂಡಿದಾರೆ. ಪಕ್ಷಿಗಳೂ ಸೇರ್ಕೊಂಡಿದಾವೆ. ಅಂತರಿಕ್ಷ ಜ್ಞಾನಿಗಳು ಸಂತೋಷದಲ್ಲಿದಾರೆ. ಪಕ್ಷಿಗಳೂ ಕೂಡ ಹರ್ಷದ ನಿನಾದವನ್ನೇ ಮಾಡ್ತಾ ಇದಾವಂತೆ ಅಲ್ಲಿ.

ಏತನ್ಮಧ್ಯೆ ಹನುಮಂತನ ದೃಷ್ಟಿಗೆ ಬಿದ್ದ ಇಂದ್ರಜಿತು. ಒಂದು ದೊಡ್ಡ ಗರ್ಜನೆ ಮಾಡಿದನಂತೆ ಹನುಮಂತ. ಶರೀರವನ್ನು ಮತ್ತೂ ಬೆಳೆಸಿದ. ಹನುಮಂತನನ್ನು ಕಾಣುತ್ತಿದ್ದಂತೆಯೇ ಇಂದ್ರಜಿತು ಧನುಷ್ಠೇಂಕಾರವನ್ನು ಮಾಡಿದ. ಹೀಗೆ ಒಬ್ಬರಿಗೊಬ್ಬರು ಎದುರಾಗ್ತಾರೆ. ಅವರಿಬ್ಬರೂ ಬದ್ಧವೈರರಾಗಿ ಹೋರಾಡಲಿಕ್ಕೆ ಸಿದ್ಧವಾಗ್ತಿದಾರೆ.

ಆರಂಭವಾಯ್ತು ಯುದ್ಧ. ಇಂದ್ರಜಿತು ಬಾಣಗಳನ್ನು ಪ್ರಯೋಗ ಮಾಡ್ತಾನೆ. ಹನುಮಂತ ಬಾಣದಂತೆ ಸಂಚರಿಸ್ತಾನೆ. ಇಂದ್ರಜಿತುವಿನ ಬಾಣಗಳು ವ್ಯರ್ಥವಾಗ್ತಾ ಇದಾವೆ. ಒಂದು ಬಾಣವೂ ಗುರಿ ಸೇರ್ತಾ ಇಲ್ಲ. ಹನುಮನ ವೇಗ ಹೇಗಿದೆಯೆಂದರೆ ಇಂದ್ರಜಿತು ಬತ್ತಳಿಕೆಗೆ ಕೈ ಹಾಕಿ, ಬಾಣವನ್ನು ತೆಗೆದು, ಅದನ್ನು ಎಳೆದು ಬಿಟ್ಟು ಅದು ಹೋಗುವಷ್ಟರಲ್ಲಿ ಹನುಮಂತನ ಜಾಗ ಬೇರೆಯಾಗಿರ್ತದೆ. ಬಾಣಗಳ ವೇಗವನ್ನು ತಡೆದನು ಹನುಮಂತ. ಇಂದ್ರಜಿತುವಿಗೆ ಆಶ್ಚರ್ಯವಾಗಿದೆ. ಆದರೆ ಯುದ್ಧವನ್ನು ಮುಂದುವರಿಸಲೇ ಬೇಕಾಗಿದೆ. ಹಾಗಾಗಿ ವಜ್ರಸದೃಶವಾದ ಅನೇಕಾನೇಕ ಬಾಣಗಳನ್ನು ಪ್ರಯೋಗ ಮಾಡ್ತಾ ಇದಾನೆ ಹನುಮಂತನ ಮೇಲೆ. ರಥನೇಮಿ ಶಬ್ಧ ಹನುಮಂತನಿಗೆ ಹಿತವಾಗಿ ಕೇಳ್ತಾ ಇದೆ. ಏತನ್ಮಧ್ಯೆ ಯುದ್ಧಕ್ಕೋಸ್ಕರವಾಗಿ ಮೃದಂಗ ವಾದನವನ್ನ ಮಾಡ್ತಾ ಇದಾರೆ, ಭೇರೀಪಡರಗಳನ್ನು ಬಾರಿಸ್ತಿದಾರೆ, ಅವುಗಳನ್ನ ಬಹಳ ಆರಾಮವಾಗಿ ಕೇಳ್ತಾ ಇದಾನೆ ಹನುಮಂತ.

ಇದೇನು ಅಭ್ಯಾಸವಿಲ್ಲ ಅವನಿಗೆ. ತುಂಬ ಏನು ಯುದ್ಧಗಳನ್ನು ಮಾಡಿದವನಲ್ಲ ಅವನು. ಇದು ಹೆಚ್ಚು ಕಡಿಮೆ ಮೊದಲ ಅನುಭವದಂತೆಯೇ ಇದೆ ಅಂತ ಹೇಳಿದ್ರೆ ತಪ್ಪೇನೂ ಇಲ್ಲ! ಬಳಿಕ, ಆ ಧನುಷ್ಠೇಂಕಾರ ಶಬ್ದವನ್ನು ಕೇಳಿದವನು ಗಗನಕ್ಕೆ ನೆಗೆದ. ಏನು ಮಾಡ್ತಾನೆ ಅವನು ಅಂತ ಇಂದ್ರಜಿತು ನೋಡ್ತಿರುವಾಗ ಸಣ್ಣ ರೂಪವನ್ನು ತಾಳಿ ಬಾಣದ ಮಧ್ಯೆ ಓಡಾಡೋದು. ಇಂದ್ರಜಿತುವಿನ ಅನೇಕಾನೇಕ ಪುಂಖಾನುಪುಂಕ ಬಾಣಗಳ ಪ್ರಯೋಗವಾಗ್ತಾ ಇದೆಯಲ್ಲ, ಸಾವಿರಾರು ಬಾಣಗಳ ಮಳೆ ಕರ್ದಿದ್ದಾನೆ. ಒಂದೇ ಬಾರಿಗೆ ವಜ್ರಸಮಾನವಾಗಿರ್ತಕ್ಕಂತ ದೀರ್ಘವಾದ, ತೀಕ್ಷ್ಣವಾದ ಅಲುಗುಗಳ್ಳಂಥಾ ತುಂಬ ಬಾಣಗಳು ಬಂದು ಬಿಟ್ಟಿದ್ದಾವೆ ಮಳೆಯ ಹಾಗೆ. ಒಂದು ರೀತಿಯ ಆಸಕ್ತಿ ಬಂತು ಹನುಮನಿಗೆ ಅದನ್ನು ಮಾಡಿದಾಗ. ಅವುಗಳ ಮಧ್ಯವೂ ಹೋದ. ಪಾಪ, ಇಂದ್ರಜಿತುವಿಗೂ ತೀರಾ ಹೊಸತಿದು. ಈ ರೀತಿಯ ಯುದ್ಧಗಳು ಅಭ್ಯಾಸವೇ ಇಲ್ಲ ಅವನಿಗೆ. ಆಮೇಲೆ ಇದ್ದಕ್ಕಿದ್ದಂತೆ ಸೀದ ಬಂದು ಕಾಲೆರಡು ಅಗಲ ಮಾಡಿ ಬಾಣಗಳ ಮುಂದೆ ಬಂದು ನಿಂತನಂತೆ. ಬಾಣಗಳೇನು ಲೆಕ್ಕ ಅಂತ ಇಲ್ಲ ಅವನಿಗೆ, ವಜ್ರಕಾಯ ಅವನು. ಹಾಗಾಗಿ, ಸರೀ ಆ ಬಾಣಗಳ ಮುಂದೆ ಬಂದು ಎರಡೂ ಕೈ ಕಾಲು ಅಗಲ ಮಾಡಿ ಇಟ್ಟುಕೊಂಡ್ನಂತೆ, ‘ಬರಲಿ ಬಾಣ’ ಎನ್ನುವ ಹಾಗೆ. ತಪ್ಪಿಸಿಕೊಳ್ಳಬಲ್ಲ, ಇದಿರಿಸಲೂ ಬಲ್ಲ. ಎರಡೂ ಗೊತ್ತವನಿಗೆ. ಅಂಥಾ ಒಂದು ಗಂಡೆದೆ ನೋಡಿ‌ ಅದು! ಇಷ್ಟು ಕಾರ್ಯಕ್ರಮ ಮಾಡಿದ ಹನುಮಂತ ಅಲ್ಲಿ.

ಯುದ್ಧ ನಡೀತಾ ಇದೆ. ಯುದ್ಧ ಹೇಗಿತ್ತಂತೆ? ಅಂದ್ರೆ, ಆ ಯುದ್ಧದ ಆಸಕ್ತಿ ಉಳ್ಳವರು ಅಂತ ಯಾರಿರ್ತಾರೆ ಪ್ರಪಂಚದಲ್ಲಿ, ಅವರಿಗೆ ಸುಗ್ರಾಸ! ಅಂಥಾ ಯುದ್ಧವಂತೆ. ಯಾಕಂದ್ರೆ, ಮೇಘನಾದನೂ ಕೂಡ ಒಬ್ಬ ಮಹಾವೀರ. ಅತ್ಯದ್ಭುತವಾದಂಥ ಪರಾಕ್ರಮವುಳ್ಳವನು. ಅವನು ತನ್ನ ಸರ್ವ ಶಕ್ತಿಯನ್ನೂ, ಸರ್ವ ನೈಪುಣ್ಯವನ್ನೂ ವಿನಿಯೋಗ ಮಾಡ್ತಾ ಇದ್ದಾನೆ. ಈ ಕಡೆಗೆ ಅದನ್ನು ವಿಚಿತ್ರವಾಗಿ, ಹೊಸ‌ ರೀತಿಯಲ್ಲಿ ಹನುಮಂತ ಎದುರಿಸ್ತಾ ಇದ್ದಾನೆ. ಹಾಗಾಗಿ ಇಬ್ಬರೂ ರಣಧರ್ಮ ವಿಶಾರದರು, ಇಬ್ಬರೂ ವೇಗಸಂಪನ್ನರು, ಇಡೀ ಪ್ರಪಂಚವನ್ನೇ ಸಭೆಯನ್ನಾಗಿ ಮಾಡ್ಕೊಂಡು, ಬ್ರಹ್ಮಾಂಡದ ದಿವ್ಯಶಕ್ತಿಗಳೆಲ್ಲವನ್ನೂ ವೀಕ್ಷಕರನ್ನಾಗಿ ಮಾಡ್ಕೊಂಡು, ಅವರ ಮುಂದೆ ಭಾರೀ ಚೆಂದದ ಯುದ್ಧನೃತ್ಯವನ್ನು ಇಬ್ಬರೂ ಮಾಡ್ತಿದ್ದಾರೆ. ನೃತ್ಯದಲ್ಲಿ ದೊಡ್ಡ ಪಾತ್ರ ಹನುಮಂತನದೇ. ಇಬ್ಬರಿಗೂ ಎಷ್ಟು ಪ್ರಯತ್ನ ಪಟ್ಟರೂ ಪರಸ್ಪರರ ಅಂತರ ಸಿಗಲಿಲ್ಲವಂತೆ. ಹಾಗೇ ಯುದ್ಧ ಕೆಲವು ಹೊತ್ತು ನಡೀತು. ಮತ್ತೂ ಮುಂದುವರೆದ ಯುದ್ಧ ಮೇಘನಾದನನ್ನು ಚಿಂತೆಗೆ ದೂಡಿತು.

ಯಾವ ಬಾಣಗಳು ಅಮೋಘ ಅಂತ ಅನ್ನಿಸಿಕೊಂಡಿದ್ದವೋ, ಆ ಬಾಣಗಳು ಮೋಘ(ವ್ಯರ್ಥ)ವಾಗ್ತಾ ಇದ್ದಾವೆ. ಈವರೆಗೆ ಇಂದ್ರಜಿತುವಿಗೆ ಯುದ್ಧ ಪ್ರಯೋಗದಲ್ಲಿ ಬಾಣ ಪ್ರಯೋಗ ಮಾಡಿದ್ರೆ ಫಲಿತಾಂಶ ನಿಶ್ಚಿತ ಎನ್ನುವಂಥಾ ಅನೇಕಾನೇಕ ಬಾಣಗಳಿದ್ದಾವೆ. ಅದ್ಯಾವುದೂ ಕೆಲಸಕ್ಕೆ‌ ಬರ್ಲಿಲ್ಲ. ಇಂದ್ರಜಿತುವಿನ ಪ್ರಯೋಗ ಮಾಡಲ್ಪಟ್ಟ ಬಾಣಗಳು ಅವನ ದೃಷ್ಟಿಯಿಂದ ಅದ್ಭುತ, ಪ್ರಯೋಗಕ್ಕೆ ಬರ್ಲೇಬೇಕು. ಅವು ಯಾವುವೂ ಉಪಯೋಗಕ್ಕೆ ಬರ್ತಾ ಇಲ್ಲ. ಕ್ಷಣ ಕಣ್ಮುಚ್ಚಿ ಅವನು ಚಿಂತಾಬದ್ಧನಾದ. ಇನ್ನು ಯಾವುದನ್ನು ಪ್ರಯೋಗ ಮಾಡಲಿ ಇವನ ಮೇಲೆ? ಹಾಗಾದ್ರೆ ದಿವ್ಯಾಸ್ತ್ರಳನ್ನ ಪ್ರಯೋಗ ಮಾಡ್ತೇನೆ. ಬಾಣಕ್ಕೆ ಗುರಿ ವಿಷಯ. ಅಸ್ತ್ರಕ್ಕೆ ಸಂಕಲ್ಪ ವಿಷಯ. ಅಸ್ತ್ರ ಮನಸ್ಸಿನ ಗುರಿ ಇರುವಲ್ಲಿಗೆ ಹುಡುಕಿಕೊಂಡು ಹೋಗಿ ಹೊಡೀತದೆ. ಅಸ್ತ್ರಗಳನ್ನು ಪ್ರಯೋಗ ಮಾಡ್ತಾನೆ. ಯಾವುದೂ ಕೆಲಸ ಮಾಡ್ಲೇ ಇಲ್ಲ. ಯಾಕಂದ್ರೆ, ಶಿಶು ಹನುಮನಿಗೇ ವರ ಇದೆ! ದಿವ್ಯಾಸ್ತ್ರಗಳು ಹನುಮನನ್ನು ಮುಟ್ಟಲಾರವು. ಅಸ್ತ್ರ, ಪಾಶುಪತಾಸ್ತ್ರಗಳಿಂದ ಅವನ ವಧೆಯೂ ಸಾಧ್ಯವಿಲ್ಲ, ಅವನ ಬಂಧವೂ ಕೂಡ ಸಾಧ್ಯವಿಲ್ಲ. ಇಂದ್ರಜಿತುವಿನ ದೊಡ್ಡದೊಂದು ಚೈತನ್ಯ ಎಲ್ಲಿತ್ತೋ, ಆ ಅಸ್ತ್ರಗಳು ವ್ಯರ್ಥವಾದವು. ನಿಜವಾಗಿಯೂ ಚಿಂತೆಗೀಡಾದ ಇಂದ್ರಜಿತು. ಏನಾಗ್ಬಹುದು ಇದರ ಪರಿಣಾಮ ಎನ್ನುವುದರಲ್ಲಿ ಅವನ ವಿಶ್ವಾಸ ಕಳೆದೇ ಹೋಯಿತು.

ಇನ್ನೇನು ಮಾಡೋದು? ಶಸ್ತ್ರಗಳೂ, ಅಸ್ತ್ರಗಳೂ ವ್ಯರ್ಥವಾದ ಮೇಲೆ ಬೇರೇನು ದಾರಿ ಇರ್ಥಕ್ಕಂತದ್ದು? ಯಾವ ಶಸ್ತ್ರ-ಅಸ್ತ್ರದಿಂದಲೂ ಹನುಮಂತ ವಧ್ಯನಲ್ಲ ಎನ್ನುವುದು ಇಂದ್ರಜಿತುವಿಗೆ ಅರ್ಥವಾಗಿ ಹೋಯಿತು. ಬಂಧಿಸಬಹುದಾ? ಬಂಧಿಸುವಲ್ಲಿ ಕೆಲವು ಅಸ್ತ್ರಗಳನ್ನು ಪ್ರಯೋಗ ಮಾಡ್ತಾನೆ. ಉಪಯೋಗ ಆಗ್ತಾ ಇಲ್ಲ. ಅಸ್ತ್ರ-ಶಸ್ತ್ರಗಳನ್ನು ಮೀರಿದವನನ್ನು, ಯುದ್ಧದಲ್ಲಿ ಗೆಲ್ಲುವುದಾದರೂ ಹೇಗೆ? ಕೊನೆಗೆ ಬೇರೆ ವಿಧಿಯಿಲ್ಲದೆ ಕೊಟ್ಟ ಕೊನೆಯ ತನ್ನ ಪ್ರಯತ್ನವನ್ನು ಇಂದ್ರಜಿತು ಮಾಡ್ತಾನೆ. ಅದು ವಿಫಲವಾದರೆ ಬೇರೆ ದಾರಿ ಯಾವುದೂ ಇಲ್ಲ. ವಧೆ ಸಾಧ್ಯವಿಲ್ಲ ಅಂತ ಅರ್ಥ ಆಗಿಬಿಟ್ಟಿದೆ. ಹಾಗಾಗಿ ಬ್ರಹ್ಮಾಸ್ತ್ರವನ್ನು ಬಂಧನ ಸಂಕಲ್ಪದಲ್ಲಿ ಪ್ರಯೋಗ ಮಾಡ್ತಾನೆ. ಆ ಬ್ರಹ್ಮಾಸ್ತ್ರವು ಹನುಮನನ್ನು ಬಂಧಿಸಿತು. ಅವನ ಶರೀರವನ್ನು, ಅವನ ಕೈಕಾಲುಗಳನ್ನು, ಅವನ ಚಟುವಟಿಕೆಗಳನ್ನು ನಿರೋಧಿಸಿತು ಬ್ರಹ್ಮಾಸ್ತ್ರ. ಹಾಗೆ ಧರೆಗೊರಗಿದನಂತೆ ಹನುಮಂತ.

ಸಮಾಧಾನದಿಂದ ದೊಡ್ಡ ಉಸಿರು ಬಿಟ್ಟ ಇಂದ್ರಜಿತು ಬೆವರೊರೆಸಿಕೊಂಡ. ಅತ್ತ ಹನುಮಂತ, ಅವನ ಒಳಗು ಎಚ್ಚರವಿದೆ. ಯೋಚನೆ ಮಾಡ್ತಾನೆ. ಏನಿದು? ನೋಡ್ಕೊಂಡ ಒಂದು ಸರ್ತಿ. ಓ ಬ್ರಹ್ಮಾಸ್ತ್ರ! ಅಂತ ಗೊತ್ತಾಯ್ತು. ಪಿತಾಮಹನ ನಿರ್ಬಂಧದಿಂದಾಗಿ ಈಗ ನಾನು ಚಟುವಟಿಕೆ ಕಡಿಮೆ ಮಾಡ್ಬೇಕು ಅಂತ ತಾನೇ ವಿಷಯ ಅಂತಂದುಕೊಂಡ. ಇದಕ್ಕೇನು ಮದ್ದು? ಅಂತ ಯೋಚನೆ ಮಾಡಿದ. ಆಗ ಅವನಿಗೆ ಬ್ರಹ್ಮನ ವರದಾನವು ನೆನಪಾಯಿತು. ‘ದೇವತೆಗಳಾಗಲಿ, ಅಸುರರಾಗಲಿ ನಿನ್ನನ್ನು ಯಾವ ಅಸ್ತ್ರದಿಂದಲೂ ತಾನಾಗಿ ವಧಿಸಲು, ಬಂಧಿಸಲೂ ಸಾಧ್ಯವಿಲ್ಲ. ನೀನೇ ಅದನ್ನು ಅನುಸರಿಸಿದರೆ ವಿಷಯ ಬೇರೆ’ ಎನ್ನುವ ಬ್ರಹ್ಮನ ವರದಾನ! ಆ ಬ್ರಹ್ಮಾಸ್ತ್ರದ ಸ್ವಾಯಂಭುವ ಮಂತ್ರಗಳು ಹನುಮನ ಮುಂದೆ ಗೋಚರಗೊಂಡವು. ಅಂದ್ಕೊಂಡ, ನನಗೆ ಶಕ್ತಿ ಇದ್ದರೂ ಕೂಡ, ಶಕ್ತಿ ಇಲ್ಲ ಅಂತಲೇ ಅಂದುಕೊಳ್ಳಬೇಕು ನಾನೀಗ! ಶಕ್ತಿ ಇದೆ ಅಂತ ಅಂದುಕೊಂಡ್ರೆ ಬಿಟ್ಟುಹೋಗ್ತದೆ ಬ್ರಹ್ಮಾಸ್ತ್ರ. ಬಿಟ್ಟುಹೋಗಬಾರದು, ಅದು ಇರಬೇಕು ಅಂತ ಅಂದುಕೊಂಡನಂತೆ. ಬಂಧನವಾಗಬೇಕು‌ ಅಂತ ಇದ್ದಂತಿದೆ ಹನುಮನಿಗೆ. ಇದೆಲ್ಲವನ್ನೂ ಆಲೋಚನೆ ಮಾಡಿ, ಸುಮ್ಮನೆ ತಟಸ್ಥವಾಗಿ ಇದ್ದನಂತೆ.‌ ಹಗಲು ರಾತ್ರಿಯೆನ್ನದೆ, ಕ್ಷಣ ಬಿಡದೆ ಬ್ರಹ್ಮದೇವ, ಇಂದ್ರದೇವ ಮತ್ತು ವಾಯುದೇವರು ನನ್ನ ಜೊತೆಗಿರುವಾಗ ನನಗೇನು ಭಯ? ಅಂತ ಅಂದುಕೊಂಡನಂತೆ.‌

ರಾವಣನ ಜೊತೆ ಮಾತುಕತೆ ಆಗುವುದೇ ಈಗ ಹನುಮನ ಮುಖ್ಯ ಉದ್ದೇಶ. ರಾಮದೂತನಾಗಿದ್ದರಿಂದ ಕೆಲವು ಮಾತುಗಳನ್ನು ರಾವಣನ ಬಳಿ ಹೇಳಲು ಅವಕಾಶ ಸಿಗೋದು ಹೇಗೆ? ಇದೇ ಅವಕಾಶ. ಈಗ ಅಲ್ಲಿಗೇ ಕರ್ಕೊಂಡು ಹೋಗ್ತಾರೆ ಹೇಗಿದ್ರೂ, ಒಂದು ಭೇಟಿಯಾದಂತೆ ಆಯಿತು. ಹಾಗಾಗಿ, ಈ ಬಂಧನದಲ್ಲಿಯೂ ಅನುಕೂಲಗಳಿದೆ. ಹನುಮನಿಗೆ ಬಾಧಕವೆನ್ನುವುದೇ ಇಲ್ಲ. ಎಲ್ಲವೂ ಕಾರ್ಯಸಾಧಕವೇ. ಇಷ್ಟು ನಿಶ್ಚಯ ಮಾಡಿದ ಮೇಲೆ, ಏನೂ ಕೈಕಾಲಾಡಿಸದೇ ಸುಮ್ಮನಿದ್ದನಂತೆ. ಅವರೆಲ್ಲರನ್ನೂ ಕೊಲ್ಲುವ ಶಕ್ತಿ ಅವನಿಗಿದೆ. ಆದರೂ ಸುಮ್ಮನಿದ್ದ. ಯಾಕಂದ್ರೆ, ನೋಡಿ ಮಾಡುವವನು ಹನುಮಂತ. ರಾಮ ಪ್ರತಿಜ್ಞೆ ಮಾಡಿದ್ದಾನೆ ರಾವಣನ ಸಂಹಾರಕ್ಕೆ. ಹಾಗಾಗಿ, ತಾನು ಗಡಿಬಿಡಿ ಮಾಡಬೇಕಾದ್ದಿಲ್ಲ ಎನ್ನುವ ಒಂದು ಅಭಿಪ್ರಾಯ ಅವನದು. ಆ ಕಡೆಗೆ ಆ ರಾಕ್ಷಸರೆಲ್ಲ ಓಡಿಬಂದು ಹಿಡ್ಕೊಂಡರಂತೆ ಹನುಮಂತನನ್ನು. ಹನುಮ, ಏನೋ ನೋವಾದವರ ಹಾಗೆ, ‘ಹಾ.. ಹೋ..’ ಅಂತ ಕೂಗಿಕೊಂಡನಂತೆ. ಅದೆಲ್ಲ ಆಟ! ಸುಮ್ಮನೆ. ಏತನ್ಮಧ್ಯೆ, ಆ ಚಿಲ್ಲರೆ ರಾಕ್ಷಸರು, ಬ್ರಹ್ಮಾಸ್ತ್ರದ ಜೊತೆಗೆ, ತಮ್ಮದೂ ಒಂದಿರ್ಲಿ, ಇದೂ ಒಂದು ಆಗಿಬಿಡಲಿ‌ ಎಂಬಂತೆ ಸೆಣಬಿನ ದಾರವನ್ನು ಕಟ್ಟಿದರಂತೆ ಹನುಮಂತನ ಮೇಲೆ. ‌ಇನ್ನು ಕೆಲವು ನಾರುಗಳನ್ನು ತಂದು ಕಟ್ಟಿದರಂತೆ ಹನುಮಂತನಿಗೆ. ಅವನಿಗೆ ಇಷ್ಟವೇ ಆಯಿತಂತೆ ಅದು. ಎಲ್ಲ ಒಳ್ಳೇದಾಯ್ತು ಅಂತ ಅಂದುಕೊಂಡ. ಈಗ ಸದ್ಯ ರಾವಣನ ಭೇಟಿ ಆಗಬೇಕು ಅನ್ನೋದೊಂದೇ ಅವನ ಮನಸ್ಸಿನಲ್ಲಿರೋದು.

ಬ್ರಹ್ಮಾಸ್ತ್ರವು ಬಿಟ್ಟು ಹೋಯಿತು. ಯಾಕೆಂದರೆ, ಬ್ರಹ್ಮಾಸ್ತ್ರದ ಸ್ವಭಾವ : ಇನ್ನೊಂದು ಬಂಧನ ಬಂದ್ರೆ, ಅದಿರೋದಿಲ್ಲ. ಅದಿದ್ರೆ ಅದೇ ಇರಬೇಕು. ಮತ್ತೊಂದನ್ನು ಅದು ಸಹಿಸೋದಿಲ್ಲ, ಚಿಕ್ಕದಾಗಲಿ; ದೊಡ್ಡದಾಗಲಿ. ಅನೇಕ ಉತ್ಕೃಷ್ಟ ಸಂಗತಿಗಳು ಹಾಗಿರ್ತವೆ. ಒಳಿತುಗಳು ಅನೇಕ ನಮ್ಮ ಜೊತೆ ಇರಬೇಕು ಅಂತಾದ್ರೆ ಕೆಡುಕುಗಳನ್ನು ತೊರೆಯಬೇಕಾಗ್ತದೆ ನಾವು. ಈಗ ಸದ್ಯ ಸೆಣಬಿನ ನಾರಿನ ಬಂಧನ ಮಾತ್ರ ಇದೆ ಹನುಮಂತನಿಗೆ. ಯಾವ ಲೆಕ್ಕ ಅವನಿಗದು? ಬ್ರಹ್ಮಾಸ್ತ್ರ ಬಿಟ್ಟುಹೋಗಿದ್ದಕ್ಕೆ ಹೃದಯಾಘಾತವಾಗಿದ್ದು ಯಾರಿಗೆ? ಇಂದ್ರಜಿತುವಿಗೆ!
ಈ ವಿಷಯ ಇಂದ್ರಜಿತುವಿಗೆ ಚೆನ್ನಾಗಿ ಗೊತ್ತು. ತಲೆಯ ಮೇಲೆ ಕೈಹೊತ್ತನಂತೆ ಇಂದ್ರಜಿತು. ಇನ್ನೇನು ಮಾಡೋದು? ಈ ರಾಕ್ಷಸರು… ಬೈಯ್ಯೋ ಹಾಗೂ ಇಲ್ಲ, ಹನುಮಂತನಿಗೆ ಗೊತ್ತಾಗಿಬಿಟ್ಟರೆ!? ಆದರೆ ಒಳಗೆ ಪೂರ ತಳಮಳ. ಅವನು ಅಂತರಂಗದಲ್ಲಿಯೇ ತಲೆ ಪೂರ ಚಚ್ಚಿಕೊಳ್ತಾನೆ. ಈ ರಾಕ್ಷಸರಿಗೆ ಒಂದು ಚೂರೂ ಅರ್ಥವಾಗೋದಿಲ್ವಲ್ಲಾ! ಅಸ್ತ್ರ ಅಂದರೇನು? ಮಂತ್ರ ಅಂದರೇನು? ಅದರ ನಡೆ ಹೇಗೆ ಹೋಗ್ತದೆ? ಒಂದು ಚೂರೂ ಬುದ್ಧಿ ಇಲ್ವಲ್ಲಾ ಇವರಿಗೆ! ಇಷ್ಟು ದೊಡ್ಡ ಕೆಲಸ ನಾನು ಮಾಡಿದ್ದು, ನಿರರ್ಥಕವಾಗಿ ಹೋಯಿತು. ಬ್ರಹ್ಮಾಸ್ತ್ರವೇ ಹಿಂದಿರುಗಿ ಹೋದ ಮೇಲೆ‌ ಇನ್ನೇನು ಅಸ್ತ್ರ ಪ್ರಯೋಗ ಮಾಡೋದು ಅವನ ಮೇಲೆ? ಈ ಅಸ್ತ್ರವೇ ವಿಹತವಾಗಿ ಹೋದ ಮೇಲೆ, ಇನ್ನೊಂದು ಅಸ್ತ್ರ ಕೆಲಸ ಮಾಡೋದಿಲ್ಲ ಅವನ ಮೇಲೆ, ಅದಂತೂ ಖಂಡಿತ. ಅದು ಮೊದಲೇ ನೋಡಿಯಾಗಿದೆ, ಈಗಂತೂ ಸಾಧ್ಯವೇ ಇಲ್ಲ. ಹಾಗಾಗಿ, ಬೇರೆ ಅಸ್ತ್ರಗಳು ಕೆಲಸ ಮಾಡೋದಿಲ್ಲ‌ ಇನ್ನು ಅವನ ಮೇಲೆ. ಇಡೀ ಲಂಕಾನಗರ, ನಮ್ಮಪ್ಪನ ಸಾಮ್ರಾಜ್ಯ ವಿಪತ್ತಿಗೀಡಾಯಿತು. ಮುಂದೆ ಏನಾಗ್ತದೆ ಅಂತ ಹೇಳೋದು ಕಷ್ಟ. ಇಡೀ ನಮ್ಮ ವ್ಯವಸ್ಥೆಯ ಭವಿಷ್ಯ ತೂಗುಯ್ಯಾಲೆಯಲ್ಲಿ ಅಂತ ಅನ್ನಿಸಿಬಿಡ್ತು ಇಂದ್ರಜಿತುವಿಗೆ. ಅದು, ದೊಡ್ಡ ವಸ್ತುಗಳು ಸಣ್ಣ ಜನರ ಕೈಗೆ ಸಿಕ್ಕಿದರೆ ಹೀಗೇ ಆಗೋದು.

ಅದರ ಮಹತ್ವವೇನೆಂಬುದು ಗೊತ್ತಿರುವುದಿಲ್ಲ. ಮಲಯಪರ್ವತದಲ್ಲಿ ಕಾಡೇ ಶ್ರೀಗಂಧದ್ದು. ಅಲ್ಲಿ ಬೇಡರ ಹೆಣ್ಣಿಗೆ ಒಲೆ ಉರಿಸಲು ಚಂದನವೇ. ಅವಳಿಗೆ ಅದರ ಮಹತ್ವ ತಿಳಿದಿಲ್ಲ. ಹಾಗೆಯೇ ರಾಕ್ಷಸರಿಗೆ ಬ್ರಹ್ಮಾಸ್ತ್ರದ ಮಹತ್ವ ಗೊತ್ತಿಲ್ಲ. ಹಾಗಾಗಿ ಸೆಣಬಿನ ದಾರವನ್ನೂ ತಂದು ಕಟ್ಟಿದ್ದಾರೆ. ಹನುಮಂತನು ಏನೂ ತಿಳಿಯದಂತೆ ಹೋಗುತ್ತಿದ್ದಾನೆ. ರಾಕ್ಷಸರು ಅವನನ್ನು ಎಳೆದಾಡುತ್ತಿದ್ದಾರೆ. ಗಟ್ಟಿಯಾಗಿ ಸೆಣಬಿನ ದಾರದಿಂದ ಕಟ್ಟಿ ಎಳೆಯುತ್ತಿದ್ದಾರೆ. ಮಾತ್ರವಲ್ಲ, ರಾಕ್ಷಸರು ದೊಣ್ಣೆಯಿಂದ ಹನುಮಂತನನ್ನು ಹೊಡೆಯುತ್ತಿದ್ದರು, ಗುದ್ದುತ್ತಿದ್ದರು. ಏನೂ ಹೇಳಲಿಲ್ಲ ಹನುಮಂತ. ಕಾರಣಗಳಿವೆ ಅದಕ್ಕೆ. ಒಂದು, ಅವನಿಗೆ ರಾವಣನನ್ನು ಕಾಣಬೇಕಿದೆ. ಇನ್ನೊಂದು, ಆ ವಜ್ರಕಾಯನಿಗೆ ಇದೆಲ್ಲಾ ವಿಷಯವೇ ಅಲ್ಲ. ಇನ್ನೊಂದೇನೆಂದರೆ ಇದು ಹನುಮಂತನಿಗೆ ಕಾಷ್ಠ-ಮುಷ್ಟಿಗಳ ಪೂಜೆ, ಅವರಿಗೆ ಪ್ರಸಾದವು ಮುಂದೆ ಸಿಗಲಿದೆ! ಅತ್ತ ಇಂದ್ರಜಿತು ಅವಸರದಲ್ಲಿ ಹೋಗುತ್ತಾ, ಹನುಮಂತನನ್ನು ರಾವಣನ ಆಸ್ಥಾನಕ್ಕೆ ಎಳೆದು ತರಿಸಿದ.ಅವನೇ ಮುಂದೆ ನಡೆದು ಹೋಗುತ್ತಿದ್ದಾನೆ ಹನುಮಂತ. ರಾಕ್ಷಸರ ಪ್ರಕಾರ ಅವರು ಅವನನ್ನು ಎಳೆದುಕೊಂಡು ಹೋಗುತ್ತಿದ್ದಾರೆ. ಬಂಧಿಸಿಲ್ಪಟ್ಟ ಮದಿಸಿದ ಮಹಾಗಜದಂತೆ ಇದ್ದಾನೆ ಆ ಕಪಿವರೋತ್ತಮ.

ರಾಕ್ಷಸರು ರಾವಣನಿಗೆ ನಿವೇದನೆ ಮಾಡಿದರು. ಆ ಮಹಾಕಪಿಯನ್ನು ಬಂಧನ ಮಾಡಿ ಸೆಳೆದು ತರಲಾಗುತ್ತಿದೆ ಎಂದು. ರಾವಣ ಮುಂದಿದ್ದಾನೆ.ಯಾರಿವನು? ಯಾರವನು? ಎಲ್ಲಿಂದ ಬಂದಿರಬಹುದು? ಇಲ್ಲೇನು ಕೆಲಸ ಇವನಿಗೆ? ಇವನ ಹಿಂದೆ ಯಾರಿರಬಹುದು? ಎಂದು ರಾಕ್ಷಸರೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ ಸಭೆಯಲ್ಲಿ. ಇವನು ಪ್ರಪಂಚದಲ್ಲಿ ಈಗಾಗಲೇ ಖ್ಯಾತಿಯನ್ನು ಪಡೆದವನಲ್ಲ. ಹಾಗಾಗಿ ಅವರಿಗೆ ಗೊತ್ತಿಲ್ಲದವನು ಇವನು. ಅವರಲ್ಲಿ ಚರ್ಚೆ ಮೊದಲನೇ ಹಂತ. ನಂತರ ಅವನ ಬಗ್ಗೆ ಸಿಟ್ಟು. ಲಂಕೆಯಲ್ಲಿ ಎಷ್ಟು ಉಪದ್ರವ ಮಾಡಿದ ಎಂದು. ಹಾಗಾಗಿ ಕೊಲ್ಲಿ, ಸುಡಿ, ತಿಂದು ಬಿಡೋಣ ಇವನನ್ನು ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ ಆ ರಾಕ್ಷಸರು. ಹನುಮಂತನು ಮುಂದೆ ವರದಿ ಕೊಡುವ ಕಾರಣಕ್ಕಾಗಿ ಸಭೆಯನ್ನು ಗಮನಿಸುತ್ತಿದ್ದಾನೆ. ಈ ದೀರ್ಘಮಾರ್ಗವನ್ನು ದಾಟಿ ರಾವಣನ ಬಳಿ ಬಂದ.

ರಾವಣನ ಪಾದಮೂಲದಲ್ಲಿ ಕುಳಿತಿರುವ ಪರಿಚಾರವೃದ್ಧರನ್ನು ಕಂಡ. ಅಯೋಧ್ಯೆಯಲ್ಲಿ ಹಿರಿಯರಿಗೆ ಗೌರವ. ಆದರೆ ಇಲ್ಲಿ ಅವರೇ ಸೇವೆ ಮಾಡಬೇಕು. ಆ ಭವನವು ಮಹಾರತ್ನವಿಭೂಷಿತವಾಗಿದೆ, ಭವ್ಯವಾಗಿದೆ. ಏತನ್ಮಧ್ಯೆ ರಾವಣ ಹನುಮಂತನನ್ನು ನೋಡುತ್ತಾನೆ. ವಿಕೃತಾಕಾರದ ರಾಕ್ಷಸರು ಅವನನ್ನು ಅತ್ತ-ಇತ್ತ ಸೆಳೆದಾಡುತ್ತಿದ್ದಾರೆ. ಅವರ ಮಧ್ಯದಲ್ಲಿ ತೇಜೋರಾಶಿ ಹನುಮಂತ. ರಾಕ್ಷಸಾಧಿಪತಿಯನ್ನು ಆಂಜನೇಯನು ನೋಡಿದ. ಧರ್ಮ-ಅಧರ್ಮಗಳ ಮುಖಾಮುಖಿಯಾಗುತ್ತಿದೆ. ಒಬ್ಬ ಸ್ವಾರ್ಥಿ, ಇನ್ನೊಬ್ಬ ನಿಸ್ವಾರ್ಥಿ. ಒಬ್ಬ ಮಹಾಲಂಪಟ, ಇನ್ನೊಬ್ಬ ಆಜನ್ಮ ಬ್ರಹ್ಮಚಾರಿ. ಒಂದಕ್ಕೊಂದು ಯಾವ ರೀತಿಯಲ್ಲಿಯೂ ಹೋಲಿಕೆಯಿಲ್ಲ. ಅವನೋ ಚಕ್ರವರ್ತಿ! ಇವನೋ ರಾಮನ ದಾಸ, ಸುಗ್ರೀವನ ಮಂತ್ರಿ, ದೊರೆಯಲ್ಲ. ಹನುಮಂತನು ನೋಡಿದ. ತೇಜೋಬಲವಿದೆ ರಾವಣನಲ್ಲಿ. ಮಧ್ಯಾಹ್ನದ ಹೊತ್ತಿನಲ್ಲಿ ತಪಿಸುವ ಸೂರ್ಯನಂತಿದ್ದಾನೆ ಅವನು. ಕೋಪದಿಂದ ಕೆಂಪಾದ ಕಣ್ಣುಗಳನ್ನು ಪ್ರಹಸ್ತನ, ಕುಲವೃದ್ಧರ ಕಡೆಗೆ ತಿರುಗಿಸಿ ರಾವಣನು ಇವನನ್ನು ವಿಚಾರಿಸಿ ಎಂದು ಅಪ್ಪಣೆ ಮಾಡುತ್ತಾನೆ. ಅವರು ಅವನನ್ನು ಪ್ರಶ್ನಿಸಿದಾಗ ಸಂಕ್ಷಿಪ್ತವಾಗಿ ನಾನು ವಾನರೇಂದ್ರನಾದ ಸುಗ್ರೀವನ ಕಡೆಯಿಂದ ಬಂದಿದ್ದೇನೆ ಎಂದ. ಅವನಿಗೆ ಭಯವಿಲ್ಲ. ಹನುಮಂತ ರಾವಣನನ್ನು ಕಣ್ಣರಳಿಸಿ ನೋಡಿದ. ಅವನಿಗೆ ವಿಸ್ಮಯವಾಗಿದೆ. ಇಂದ್ರಜಿತುವಿನ ಯುದ್ಧಕೌಶಲವನ್ನು ಹನುಮಂತ ಗಮನಿಸಿದ್ದಾನೆ. ಬೇರೆಯವರಿಗೆ ಕಷ್ಟವಾಗಬಹುದು. ಹಾಗಾಗಿ ಇಂದ್ರಜಿತುವಿನ ಕುರಿತು ಒಂದು ವಿಸ್ಮಯವಿದೆ. ಈಗ ಈ ವೈಭವವನ್ನು, ರಾವಣನನ್ನು ಕಂಡಾಗ ಇಲ್ಲೂ ಒಂದು ಆಶ್ಚರ್ಯವಿದೆ. ಆದರೆ ಕಣ್ಣಿನಲ್ಲಿ ರೋಷವಿದೆ. ಕೆಂಪಾದ ಕಣ್ಣಿನಿಂದ ಅವನನ್ನು ನೋಡಿದ.

ರಾವಣನು ಹೇಗಿದ್ದ? ಭಾರೀ ವೈಭವ. ಅಪರಂಜಿ ಚಿನ್ನದಿಂದ ಮಾಡಿದ ಅವನ ಮುಕುಟ ಶೋಭಾಯಮಾನವಾಗಿದೆ. ಮುತ್ತಿನ ಕುಚ್ಚುಗಳಿಂದ ಅಲಂಕೃತವಾಗಿದೆ. ಅದರಿಂದ ಅಲಂಕೃತವಾಗಿದ್ದಾನೆ ರಾವಣ. ವಜ್ರಯುಕ್ತವಾದ, ಅಮೂಲ್ಯವಾದ ಮಣಿಗಳಿಂದ ಕೂಡಿರುವ ಆಭರಣಗಳನ್ನು ಧಾರಣೆ ಮಾಡಿದ್ದಾನೆ. ಆ ಆಭರಣಗಳನ್ನು ಮನಸ್ಸಿನಿಂದಲೇ ಮಾಡಲಾಗಿದೆಯೇನೋ ಎನ್ನುವಷ್ಟು ಚೆಂದವಾಗಿವೆ. ಬೆಲೆಬಾಳುವ ರೇಷ್ಮೆಯ ದುಕೂಲವನ್ನು ಉಟ್ಟಿದ್ದಾನೆ. ರಕ್ತ ಚಂದನವನ್ನು ಮೈಗೆ ಹಚ್ಚಿಕೊಂಡಿದ್ದಾನೆ. ವಿವಿಧವಾದ ಅನುಲೇಪನಗಳನ್ನು ಮಾಡಿಕೊಂಡಿದ್ದಾನೆ. ದೊಡ್ಡ ಹತ್ತು ತಲೆಗಳು.
ಅದರಲ್ಲಿ ಇಪ್ಪತ್ತು ಕೆಂಪು ಕಣ್ಣುಗಳು, ನೋಡಿದರೆ ಹೆದರಿಕೆಯಾಗುವಂತಿವೆ. ಕೋರೆದಾಡೆಗಳು, ಪ್ರಜ್ವಲಿಸುವ ತೀಕ್ಷ್ಣ ಹಲ್ಲುಗಳು. ಸ್ವಲ್ಪ ಜೋಲುದುಟಿ. ಒಂದೊಂದು ತಲೆಯೂ ಮಂದರಪರ್ವತದ ಹಾಗೆ. ಆ ಕಣ್ಣು,ಹಲ್ಲು,ಮೀಸೆಯೆಲ್ಲಾ ಕ್ರೂರ ಮೃಗಗಳ ಹಾಗೆ. ಕಪ್ಪು ಕಾಡಿಗೆಯ ರಾಶಿಯಂತಿದ್ದಾನೆ. ಕೊರಳಿಗೆ ದೊಡ್ಡ ಹಾರವನ್ನು ಹಾಕಿಕೊಂಡಿದ್ದಾನೆ. ಬಾಹುಗಳಿಗೆ ಕೇಯೂರ, ಅಂಗದ ಎಲ್ಲಾ ಹಾಕಿಕೊಂಡಿದ್ದಾನೆ. ಸುಪುಷ್ಟವಾದ ಬಾಹುಗಳು ಐದು ಹೆಡೆಯ ಸರ್ಪದಂತೆ. ದೊಡ್ಡದಾದ ಸ್ಫಟಿಕದ ಸಿಂಹಾಸನ. ಅದಕ್ಕೆ ರತ್ನಗಳ ಅಲಂಕಾರ. ಆಸನದ ಮೇಲಿರುವ ಮೆತ್ತನೆಯ ದಿಂಬು ಶ್ರೇಷ್ಠವಾದದ್ದು. ಗಟ್ಟಿ ಕುಳಿತಿದ್ದಾನೆ. ಅತ್ತ-ಇತ್ತ ವರನಾರಿಯರು ಗಾಳಿ ಬೀಸುತ್ತಿದ್ದಾರೆ. ಅವರು ವಿಪರೀತ ಅಲಂಕಾರ ಮಾಡಿಕೊಂಡಿದ್ದರು. ಅಕ್ಕಪಕ್ಕದಲ್ಲಿ ದುರ್ಧರ, ಪ್ರಹಸ್ತ, ಮಹಾಪಾರ್ಶ್ವ ಮತ್ತು ನಿಕುಂಭ ಎಂಬ ನಾಲ್ವರು ಮಂತ್ರಿಗಳು. ನಿಕುಂಭ ಎನ್ನುವವನು ಕುಂಭಕರ್ಣನ ಎರಡನೆಯ ಮಗ. ಇವನೂ ಮಹಾವೀರನೇ. ಈ ಮಹಾವೀರರು ಬುದ್ಧಿವಂತರೂ ಹೌದು. ಇನ್ನೂ ಕೆಲವರು ಒಳ್ಳೆಯ ಬುದ್ಧಿಯವರೂ ಇದ್ದರು ಅಲ್ಲಿ. ಇಂತಹ ರಾಕ್ಷಸಪತಿಯನ್ನು ಹನುಮಂತ ನೋಡುತ್ತಿದ್ದಾನೆ. ಮೇರುಶಿಖರದ ಮೇಲಿರುವ ನೀರು ತುಂಬಿರುವ ಕಾರ್ಮೋಡದಂತೆ ರಾವಣನಿದ್ದ.

ಈ ರಾಕ್ಷಸರು ಹನುಮಂತನನ್ನು ವಿಪರೀತವಾಗಿ ಪೀಡಿಸುತ್ತಿದ್ದಾರೆ. ಗುದ್ದುವುದು, ದೊಣ್ಣೆಗಳಿಂದ ಹೊಡೆಯುವುದು, ಮೂದಲಿಸುವುದು ಎಲ್ಲಾ ಮಾಡುತ್ತಿದ್ದಾರೆ. ಹಾಗಿದ್ದರೂ ಕೂಡಾ ಇದೆಲ್ಲಾ ಮರೆತು ರಾವಣನನ್ನೇ ನೋಡುತ್ತಿದ್ದ ಹನುಮಂತ. ದೌಷ್ಟ್ಯವನ್ನು ಪಕ್ಕಕ್ಕಿಟ್ಟು ತೇಜಸ್ಸಿಗೆ ಮಾರುಹೋದ ಹನುಮಂತ. ಏನು ರೂಪ! ಏನು ಧೀರತೆ! ಏನು ಸತ್ವ ಮತ್ತು ಪ್ರಭೆ! ಅವನಲ್ಲಿರುವುದು ರಾಜಲಕ್ಷಣ. ಅವನನ್ನು ಕಂಡು ವಿಸ್ಮಯವಾಗಿದೆ ಹನುಮಂತನಿಗೆ. ಪಕ್ಕದಲ್ಲಿಯೇ ಅವನ ಕ್ರೂರವಾದ, ನೀಚವಾದ, ಕೆಟ್ಟಕಾರ್ಯಗಳೂ ನೆನಪಾಗಿದ್ದಾವೆ. ಹಾಗಾಗಿಯೇ ಪ್ರಪಂಚಕ್ಕೆ ದೂರ ಇವನು. ಅದಿಲ್ಲದಿದ್ದರೆ ಅವನಿಗೆ ದೇವರು ಕೊಟ್ಟ ಸಾಮರ್ಥ್ಯವನ್ನು ಆಲೋಚಿಸಿದರೆ ಇವನು ಲೋಕರಕ್ಷಕನಾಗಬೇಕಾಗಿತ್ತು. ಇಂದ್ರನಲ್ಲ ಅತೀಂದ್ರನಾಗಬೇಕಾಗಿತ್ತು. ಆದರೆ ಅಧರ್ಮವು ಬಲವಂತವಾಗದಿದ್ದರೆ ಉಳಿದಿದ್ದೆಲ್ಲಾ ಇತ್ತು. ಸರ್ವ ಬಣ್ಣಗಳನ್ನೂ ಮಸಿ ನುಂಗಿತ್ತು ಎನ್ನುವಂತೆಯೇ ಅವನ ಬುದ್ಧಿಶಕ್ತಿ, ರೂಪ, ಪರಾಕ್ರಮ, ಕೌಶಲ ಇವೆಲ್ಲವನ್ನೂ ಅಧರ್ಮವು ನುಂಗಿತ್ತು. ಹೀಗೆ ಅವನ ಪ್ರಭಾವವನ್ನು ಕಂಡು ಹನುಮಂತನು ಅನೇಕ ಬಗೆಯ ಯೋಚನೆಗಳನ್ನು ಮಾಡಿದ. ಇದು ಮೂರನೆಯ ದರ್ಶನ ಹನುಮಂತನಿಗೆ. ಒಮ್ಮೆ ಮಂಚದ ಮೇಲೆ ಮಲಗಿದ್ದಾಗ, ಇನ್ನೊಮ್ಮೆ ಸೀತೆಯೊಡನೆ ಮಾತನಾಡುವಾಗ, ಈಗ ಮುಖಾಮುಖಿ.

ರಾವಣನೂ ಹನುಮಂತನನ್ನು ನೋಡಿದ. ನೋಡುವಾಗ ರೋಷವಿದ್ದರೂ ಅವನಿಗೆ ದಿಗಿಲಾಯಿತು. ಬೇರೆಲ್ಲಾ ಭಾವಗಳನ್ನು ನುಂಗಿ ಶಂಕೆ ರಾವಣನನ್ನು ಆಳಿತು. ಯಾರಿವನು? ಏನಿವನು? ಎಂದು. ಹನುಮಂತನ ಸುತ್ತ ದೊಡ್ಡ ತೇಜೋರಾಶಿಯಿದೆ. ಅದರ ನಡುವೆ ಶೋಭಿಸುತ್ತಿದ್ದಾನೆ. ಸುಮ್ಮನೆ ಕಪಿಯಲ್ಲ. ರಾವಣನಿಗೆ ಹನುಮಂತನನ್ನು ಕಂಡು ಭಗವಾನ ನಂದೀಶ್ವರನ ನೆನಪಾಯಿತು. ಅವನ ಪರಿಚಯ ಚೆನ್ನಾಗಿದೆ ರಾವಣನಿಗೆ. ಅವನು ನನ್ನನ್ನು ಶಪಿಸಿದವನು. ಕೈಲಾಸಪರ್ವತವನ್ನು ಶಂಕರನಿರುವಂತೆಯೇ ಎತ್ತಿದ್ದಾಗ ಆ ಪ್ರಕರಣದಲ್ಲಿ ನಂದೀಶ್ವರ ನನ್ನನ್ನು ಶಪಿಸಿದ್ದುಂಟು. ಅವನಿರಬಹುದಾ ಇವನು? ಅದಕ್ಕೆ ಕಾರಣವಿದೆ. ಬಹಳ ಹಿಂದೆ ಕುಬೇರನನ್ನು ಸೋಲಿಸಿ,ಅವನ ಪುಷ್ಪಕವಿಮಾನವನ್ನು ಕಿತ್ತುಕೊಂಡು ಹೊರಟ ರಾವಣ. ಹೊರಟ ಕೆಲವೇ ಕ್ಷಣಗಳಲ್ಲಿ ಸ್ಥಬ್ಧವಾಯಿತು ವಿಮಾನ. ಕುಬೇರನ ನಗರಿ ಅಲಕಾ. ಅದರ ಪಕ್ಕದಲ್ಲಿಯೇ ಕೈಲಾಸಪರ್ವತ. ಕುಬೇರನಿಗೂ ಮತ್ತು ಶಿವನಿಗೂ ಸಖ್ಯವಿದೆ. ಕುಬೇರ ಶಿವನ ಸಾನಿಧ್ಯದಲ್ಲೇ ವಾಸಮಾಡುತ್ತಾನೆ. ಹಾಗಾಗಿ ಕೈಲಾಸದ ಹತ್ತಿರ ಬರುತ್ತಿದ್ದಂತೆಯೇ ಅದರ ಪ್ರಭಾವವು ವಿಮಾನವನ್ನು ತಡೆದು ನಿಲ್ಲಿಸಿತು.

ತಲೆಬಿಸಿ ಆಯ್ತು ರಾವಣನಿಗೆ, ತನ್ನ ಸಚಿವರೊಡನೆ ಸಮಾಲೋಚನೆ ಮಾಡ್ತಾ. ಯಾಕೆ ನಿಂತಿದೆ ಈ ವಿಮಾನ? ಮುಂದೆ ಹೋಗ್ತಾ ಇಲ್ಲ, ಮಾರೀಚ ಜೊತೆಯಲ್ಲಿದ್ದ ಇದು ಬಹುಶಹ ಕುಬೇರನನ್ನು ಬಿಟ್ಟು ಬೇರೆ ಯಾರನ್ನು ಹೊತ್ತುಕೊಂಡು ಹೋಗುವುದಿಲ್ಲವೇ ಏನೋ ಎನ್ನುವ ಸಂಶಯ ಬಂತು ಅವನಿಗೆ. ಅಷ್ಟು ಹೊತ್ತಿಗೆ ಆ ವಿಮಾನದ ಮುಂದೆ ಒಂದು ಸ್ವರೂಪ ಪ್ರಕಟವಾಯಿತು. ಕರಾಲ ಕೃಷ್ಣಪಿಂಗಲ ವರ್ಣ, ಹೆಚ್ಚು ಎತ್ತರವೂ ಇಲ್ಲ, ವಾಮನ. ಅಂಗಾಂಗಗಳು ಒಂದೊಂದು ಒಂದೊಂದು ತರ ಇದೆ. ಮುಂಡಿ ಅಂದರೆ ತಲೆ ಕೂದಲು ಇಲ್ಲ. ಚಿಕ್ಕ ಚಿಕ್ಕ ಕೈಗಳು. ಹರನ ಗಣಗಳು ಇರುವುದೇ ಹಾಗೆ. ದೇಹದ ಕಡೆಗೆ ಚಿತ್ತವಿಲ್ಲ ಹರನ ಕಡೆಗೇ ಸಂಪೂರ್ಣ ಚಿತ್ತ. ಅದು ಯಾರು ಎಂದರೆ ನಂದಿ. ನಂದಿಗೆ ಎರಡು ರೂಪ. ಎತ್ತಿನ ರೂಪ ಹಾಗೂ ಗಣವಾಗಿ ಇನ್ನೊಂದು ರೂಪ. ಇದು ಶಿವನ ಬಲಗೈ ನಂದಿ ಎಂದರೆ. ಆ ನಂದಿಯು ರಾವಣನ ಹತ್ತಿರ ಬಂದು ಇಂತೆಂದನು, ಹಿಂದಿರುಗು ರಾವಣ. ಏಕೆಂದರೆ ಕೈಲಾಸಪರ್ವತದ ನೆತ್ತಿಯಲಿ ಶಂಕರನು ವಿಹರಿಸ್ತಾ ಇದ್ದಾನೆ ಯಾರಿಗೂ ಪ್ರವೇಶವಿಲ್ಲ. ನೀನೇನು, ಗರುಡರು, ನಾಗರು, ಯಕ್ಷರು, ದೇವತೆಗಳು, ಗಂಧರ್ವರು, ರಾಕ್ಷಸರು, ಯಾರಿಗೂ ಪ್ರವೇಶವಿಲ್ಲ. ಆದ್ದರಿಂದ ದುರ್ಬುದ್ಧಿ ಹಿಂದಿರುಗು, ವಿನಾಶವೇ ಬಂದೀತು ಎಂದನು. ರಾವಣನು ಮೊದಲೇ ಗರ್ವದ ಮುದ್ದೆ. ರಾವಣ ಹಿಂದಿರುಗುವ ಪ್ರಶ್ನೆ ಇಲ್ಲ. ಮುಂದೆ ಹೋಗುವುದೇ. ಕ್ರೋಧದಿಂದ ಕಣ್ಣಿಲ್ಲ ಕೆಂಪಾಗಿದೆ. ರಾವಣನು ಪುಷ್ಪಕ ವಿಮಾನದಿಂದ ಇಳಿದು ಬಂದು ಹೇಳಿದನು, “ಯಾರವನು ಶಂಕರ?”. ಎಷ್ಟು ದಾಷ್ಟ್ಯ ಇರಬೇಕು ರಾವಣನಿಗೆ. ಇವನನ್ನು ಶಿವಭಕ್ತ ಎಂದು ಕರೆಯುವುದಾದರೂ ಹೇಗೆ. ನಂದಿ ಬಂದಿದ್ದನು. ಪ್ರಜ್ವಲಿಸುವ ದೀಪ್ತವಾದ ಶೂಲವನ್ನು ಹಿಡಿದಿದ್ದನು. ಆ ಪ್ರಭಾವವನ್ನು ಕಂಡರೆ ಎರಡನೆಯ ಶಂಕರನಂತೆ ಕಾಣುತ್ತಿದ್ದಾನೆ.

ಶಿವನ ಇನ್ನೊಂದು ರೂಪ ನಂದಿ. ಆದರೆ ರಾವಣನಿಗೆ ನಂದಿಯ ಅಂತಃಸತ್ವವಾಗಲಿ, ಶಕ್ತಿಯಾಗಲಿ ಯಾವುದೂ ಕಾಣಲಿಲ್ಲ. ನಂದಿಯ ಮುಖವನ್ನು ನೋಡಿ ರಾವಣ, “ಕೋತಿ ಮುಖದವನು, ಕೋತಿ ಮುಖದವನು” ಎಂದು ಹೀಯಾಳಿಸಿದನು. ಮಾತ್ರವಲ್ಲ, ದೊಡ್ಡದಾಗಿ ಗಹಗಹಿಸಿ ನಕ್ಕನಂತೆ. ಆಗ ನಂದಿ ಕ್ರುದ್ಧನಾದ. ಆಗ ಅವನ ಬಾಯಿಂದ ರಾವಣನಿಗೆ ಶಾಪ ವಾಕ್ಯವೇ ಹೊರಬಂದಿತು. ನಗ್ತೀಯಾ ನನ್ನನ್ನು ಕಂಡು, ಅಪಹಾಸ್ಯ ಮಾಡ್ತೀಯಾ ಕೋತಿ ಮುಖದವನು ಎಂದು. ಇದೇ ಕೋತಿ ಮುಖ ನಿನಗೆ ಮುಂದೊಂದು ದಿನ ದುಸ್ವಪ್ನವಾಗಿ ಪರಿಣಮಿಸುತ್ತದೆ. ಕೋತಿ ಮುಖದವರು ಒಂದಲ್ಲ-ಎರಡಲ್ಲ ಕೋಟ್ಯನುಕೋಟಿ ಕಪಿಗಳು ಬಂದು ಲಂಕೆಯನ್ನು ಮುತ್ತುತ್ತಾರೆ. ನಿನ್ನ ಸರ್ವನಾಶ ಮಾಡುತ್ತಾರೆ. ನಕ್ಕಿದೆಯಲ್ಲ ಅಳತೀಯ ಮುಂದೆ. ನಗು ಮರೆತುಹೋಗುತ್ತದೆ ನಿನಗೆ. ಆ ಸನ್ನಿವೇಶ ಬಂದಾಗ ನಗುವುದೇ ಮರೆತುಹೋಗುತ್ತದೆ ನಿನಗೆ. ಅಂತಹ ಕಾಲ ಬರುವುದು. ಸ್ಪಷ್ಟವಾಗಿ ಹೇಳುತ್ತಾನೆ. ನನ್ನಂಥವರು ಬರ್ತಾರೆ. ಆಕಾರ ಮಾತ್ರ ನನ್ನಂತಲ್ಲ, ಪ್ರಭಾವ ಕೂಡ ನನ್ನಂತೆ. ಶಕ್ತಿ ಕೂಡ ನನ್ನಂತೆ. ಅಂತವರು ಬರ್ತಾರೆ, ನೆನಪಿನರಲಿ, ನಿನ್ನ ಕುಲವನ್ನು ನಾಶ ಮಾಡುತ್ತಾರೆ. ಮನೋವೇಗದಲ್ಲಿ ಹಾರ ಬಲ್ಲವರು ಯುದ್ಧೋನ್ಮತ್ತರು. ಪರ್ವತದಂತೆ ಕಾಣ್ತಾರೆ ಒಬ್ಬೊಬ್ಬರು. ಅವರು ಬಂದು ನಿನ್ನ ಸೊಕ್ಕನ್ನು ಇಳಿಸುತ್ತಾರೆ. ಈ ಜಗತ್ತಿನಲ್ಲಿ ಯಾರಿಗೂ ಇರದಂತಹ ಸೊಕ್ಕು ನಿನಗಿದೆ ಅಲ್ಲವಾ, ಸೊಕ್ಕನ್ನು ಇಳಿಸುತ್ತಾರೆ. ಮಕ್ಕಳ, ಸೈನ್ಯದ ಸೊಕ್ಕನ್ನು ಮಾತ್ರವಲ್ಲ, ಜೀವವನ್ನೇ ತೆಗೆಯುತ್ತಾರೆ. “ಇದು ಸತ್ಯ ಇದು ಸತ್ಯ” ಎಂದು ದಿವಿಯೂ ಸ್ಪಂದಿಸಿತು ದುಂದುಭಿಯು ಹಾಗೂ ಪುಷ್ಪ ವೃಷ್ಟಿಯ ಮೂಲಕವಾಗಿ.

ಆ ಸಮಯಕ್ಕೆ ರಾವಣನಿಗೆ ನೆನಪಾಯಿತು, ಶಾಪ ಕೊಟ್ಟಿದ್ದನಲ್ಲ ಅವನೇ ಬಂದು ಬಿಟ್ಟ ನಾ ಎಂದು. ಭಯವಾಯಿತು. ಒಂದು ವೇಳೆ ನಂದಿ ಅಲ್ಲ ಅಂತ ಆದರೆ ಇವನು ಬಾಣಾಸುರ ಇರಬಹುದು. ಅವನು ಕೂಡ ಮಹಾಶಿವಭಕ್ತ. ಬಲಿಚಕ್ರವರ್ತಿಯ ಮಗ. ಇವನಿಗೆ 1000 ತೋಳುಗಳಿದ್ದವಂತೆ. ಮಹಾಕಾಲ ಎಂಬ ಹೆಸರು ಕೂಡ ಇತ್ತು ಅವನಿಗೆ. ಮುಂದೆ ಕೃಷ್ಣನ ಜೊತೆ ಯುದ್ಧ ಮಾಡುತ್ತಾನೆ. ಬಾಣಾಸುರನ ಮೊಮ್ಮಗಳನ್ನೇ ಕೃಷ್ಣನ ಮೊಮ್ಮಗನಿಗೆ ಕೊಟ್ಟಿದ್ದು. ಇವನ ಮೊಮ್ಮಗಳು ಉಷಾ. ಅನಿರುದ್ಧನ ಹೆಂಡತಿ ಅವಳು. ಅನಿರುದ್ಧನಿಗೆ ಕೃಷ್ಣನಿಗೆ ಯುದ್ಧವಾಗ್ತದೆ ಅಲ್ಲಿ. ಶಿವ ಬಿಟ್ಟ ಬಾಣವಾ ಇವನು ಎಂದು ದಿಗಿಲಾಯಿತು ರಾವಣನಿಗೆ. ಹನುಮಂತನನ್ನು ಶಿವ ಎಂದು ಕೂಡ ಹೇಳುತ್ತಾರೆ. ಶಿವ ಹನುಮಂತನಾಗಿ ಹುಟ್ಟಿದನು ಎಂದು ಶಿವಪುರಾಣದಲ್ಲಿ ಹೇಳುತ್ತಾರೆ. ದಿಗಿಲಾಗಿ ಇಂತಹ ಒಂದು ದರ್ಶನ ರಾವಣನಿಗೆ ಆಯಿತು. ಹನುಮನ ಪ್ರಭಾವದಿಂದ ರಾವಣನಿಗೆ ದಿಗಿಲಾಗಿದೆ. ಹೀಗೆ ಪರಸ್ಪರ ದರ್ಶನವಾಯಿತು ರಾವಣ ಹನುಮನಿಗೆ. ಮತ್ತೆ ರಾವಣ ಪ್ರಹಸ್ತನಿಗೆ ಹೇಳಿದನು, ಈ ದುರಾತ್ಮನು ಯಾರಿವನು, ಯಾಕೆ ಬಂದವನು, ನನ್ನ ಅಶೋಕವನವನ್ನು ಯಾಕೆ ಧ್ವಂಸ ಮಾಡಿದನು ಎಂದು ಕೇಳು. ಪ್ರೀತಿಯ ರಾಕ್ಷಸಿಯರನ್ನು ಯಾಕೆ ಬೆದರಿಸಿದ್ದು….? ಯಾರೂ ಬರಲಾರದ ನನ್ನ ರಾಜ್ಯವನ್ನು ಯಾಕೆ ಪ್ರವೇಶ ಮಾಡಬೇಕಾಗಿತ್ತು. ಕೇಳು ಎಂದು ಪ್ರಹಸ್ಥನ ಕುರಿತು ಹೇಳಿದನು.

ಪ್ರಹಸ್ತನು, ಕಪಿಯೇ ಸಮಾಧಾನ ಮಾಡಿಕೋ. ನಿನಗೆ ಗಾಬರಿ ಆಗಿರಬಹುದು. ಹೆದರಿಕೊಳ್ಳಬೇಡ ಎಂದನು ಹನುಮನಿಗೆ. ಹನುಮನಿಗೆ ಭಯವೆಂದರೆ ಏನೆಂದೇ ಗೊತ್ತಿಲ್ಲ. ಇಂದ್ರ ಕಳಿಸಿದನಾ ? ಇದ್ದ ವಿಷಯ ಹೇಳಿದರೆ ನಿನ್ನನ್ನು ಬಿಡಲಾಗುತ್ತದೆ. ಅಥವಾ ಕುಬೇರ ಕಳುಹಿಸಿದನಾ, ಯಮ ವರುಣ ಇವರಲ್ಲಿ ಯಾರು ನಿನ್ನನ್ನು ಕಳುಹಿಸಿದವರು. ದೂತ ರೂಪದಲ್ಲಿ ಲಂಕೆಯನ್ನು ಪ್ರವೇಶ ಮಾಡಿದೆಯಲ್ಲಾ, ನಿನ್ನನ್ನು ಮಹಾವಿಷ್ಣುವು ಕಳುಹಿಸಿಕೊಟ್ಟನಾ… ನಿಜ ಹೇಳು ನೀನು ವಾನರನಲ್ಲ. ಇದು ಕಪಿಯ ಅಂತಸ್ಸತ್ವವಲ್ಲ. ಇದ್ದದ್ದನ್ನು ಇದ್ದ ಹಾಗೇ ಹೇಳಿದರೆ ಬದುಕ್ತೀಯಾ.. ಇಲ್ದಿದ್ರೆ ವಧೆ ಕಾದಿದೆ ನಿನಗೆ. ಇದ್ಯಾವುದೂ ಅಲ್ಲ ನೀನು ಎಂದಾದರೆ, ಯಾರು ನೀನು, ಯಾಕೆ ಬಂದೆ ಎಂದನು ಪ್ರಹಸ್ತ.

ಆಗ ಹನುಮನು, ನನಗೂ ಇಂದ್ರನಿಗೂ ಯಾವ ಸಂಬಂಧ ಇಲ್ಲ, ಯಮನ ಕಡೆಯವನಲ್ಲ, ನಾನು ವರುಣನ ಕಡೆಯವನು ಅಲ್ಲ. ನೀನು ಅಂದುಕೊಂಡ ಹಾಗೆ ವಿಷ್ಣುವಿನ ಕಡೆಯಿಂದಲೂ ಕಳುಹಿಸಲ್ಪಟ್ಟವನಲ್ಲ. ನೀನು ನಾನು ವಾನರ ಅಲ್ಲ ಅಂದ್ರೆ, ಹೌದು ವಾನರನೇ ನಾನು. ನನ್ನ ಜಾತಿ ವಾನರ ಜಾತಿ. ಉದ್ಯಾನವನವನ್ನು ಧ್ವಂಸ ಮಾಡಿದ್ದು ಯಾಕೆ ಎಂದರೆ, ನನಗೆ ರಾವಣನ ದರ್ಶನವಾಗಬೇಕಿತ್ತು. ಇರಲಿ, ನಿಮ್ಮ ದೊರೆಯ ದರ್ಶನ ದುರ್ಲಭ. ನನ್ನಂಥವರಿಗೆ ಯಾರು ದರ್ಶನ ಕೊಡುತ್ತಾರೆ, ಅದಕ್ಕಾಗಿ ಧ್ವಂಸ ಮಾಡಿದೆ. ಯುದ್ಧ ಮಾಡಿದ್ದು ಯಾಕೆ ಎಂದರೆ ಬಂದು ಮೈಮೇಲೆ ಬಿದ್ದರು ಅವರು ಆತ್ಮರಕ್ಷಣೆಗಾಗಿ ಹೀಗೆ ಮಾಡಿದೆ. ಆತ್ಮರಕ್ಷಣೆಗಾಗಿ ಹೀಗೆ ಮಾಡಬೇಕಾಯಿತು. ಆಗ ಅವರು ಸತ್ತು ಹೋದರೆ ನಾನೇನು ಮಾಡಲಿ! ನನಗೇನಾಗಲಿಲ್ಲ. ನಾನೇನು ಜವಾಬ್ದಾರನಲ್ಲ ಅವರ ಸಾವಿಗೆ. ಹೆದರಬೇಡ ಅಂದೆಯಲ್ಲ! ನೀವೇನು, ದೇವಿಸುರಗಳು ಒಂದುಗೂಡಿದರೂ ಕೂಡ ನನ್ನನ್ನು ಯಾವ ಅಸ್ತ್ರವೂ ಬಂಧಿಸಲು ಸಾಧ್ಯವಿಲ್ಲ. ಬಂಧನದಲ್ಲಿದೇನೆ ಎನ್ನುವುದು ಭೃಮೆ. ಇದು ನನಗೆ ಬೃಹ್ಮನೇ ಕೊಟ್ಟ ವರ. ದರ್ಶನಕ್ಕಾಗಿ ಬಂದೆ. ರಾಕ್ಷಸರಾಜನ ಕಾಣಲು ಬಂದೆ.

ರಾಜಕಾರ್ಯದಿಂದ ಬಂದವನು ನಾನು. ರಾಜದೂತ ನಾನು. ನಾನು ರಾಮನ ದೂತ. ಎಣೆಯಿಲ್ಲದ ಪರಾಕ್ರಮವುಳ್ಳ ರಾಮನ ದೂತ ನಾನು. ದೂತನೊಟ್ಟಿಗೆ ದೂತನ ಹಾಗೆ ವ್ಯವಹಾರ ಮಾಡು ಎಂದು ಹೇಳಿದನು. ಹನುಮನ ಮಾತನ್ನು ಮುಂದೆ ಕೇಳೋಣ. ರಾವಣ ವಿಭೀಷಣನ ಮಾತು ಮುಂದೆ ಎಲ್ಲಿಹೋಗಿ ನಿಲ್ಲುತ್ತದೆ ಎಂಬುದನ್ನು ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments