ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಅಮಂಗಲವನ್ನು ಮಂಗಲವನ್ನಾಗಿ ಮಾರ್ಪಡಿಸಲು ಮಂಗಲವು ಅಮಂಗಲವಿರುವಲ್ಲಿಗೆ ಯಾತ್ರೆಯನ್ನು ಕೈಗೊಳ್ತದೆ. ಅಯೋಧ್ಯೆಯ ರಾಮ ಪಂಚವಟಿಗೆ ಬರ್ತಾನೆ. ಯಾಕೆಂದರೆ ಪಂಚವಟಿ ಅಮಂಗಲವಾಗಿತ್ತು. ಅದು ರಾಕ್ಷಸಾಕೀರ್ಣವಾಗಿತ್ತು. ರಾಮನೆಂಬ ಮಂಗಲವು ಅಯೋಧ್ಯೆಯಿಂದ ಪಂಚವಟಿಗೆ ಏಕೆ ಬಂತು? ಎಂದರೆ ಜನಸ್ಥಾನವನ್ನು ಮಂಗಲಮಯವನ್ನಾಗಿ ಮಾಡಲು. ಅಮಂಗಲವನ್ನು ಪರಿಹರಿಸಲು. ಅಯೋಧ್ಯೆಯಿಂದ ಪಂಚವಟಿ ಬಹುದೂರ. ಭಾರತದ ಆ ಕಡೆಯಿಂದ ಮಧ್ಯಕ್ಕೆ ಬಂದಂತಾಯಿತು. ಈಗ ರಾಮ ಭಾರತದ ಮಧ್ಯದಿಂದ ಭಾರತದ ಕೊನೆಯ ಕಡೆಗೆ ಪ್ರಯಾಣ ಮಾಡ್ತಾನೆ. ಏಕೆಂದರೆ ಅಮಂಗಲದ ಕೇಂದ್ರ ಅಲ್ಲಿದೆ. ಲಂಕೆ, ಅದು ಅಮಂಗಲಮಯ. ರಾಮನೆಂಬ ಮಂಗಲವು ಲಂಕೆಯೆಂಬ ಅಮಂಗಲದೆಡೆಗೆ ಯಾತ್ರೆಯನ್ನು ಕೈಗೊಂಡು ಆ ಅಮಂಗಲವನ್ನು ಮಂಗಲವನ್ನಾಗಿ ಮಾರ್ಪಡಿಸ್ತದೆ. ರಾವಣ ರಾಜ್ಯವು ರಾಮ ರಾಜ್ಯವಾಗಿ, ರಾಮಶರಣ ವಿಭೀಷಣನ ರಾಜ್ಯವಾಗಿ ಮಾರ್ಪಡ್ತದೆ.

ದಕ್ಷಿಣಕ್ಕೆ ಪ್ರಯಾಣ. ದಕ್ಷಿಣವೆಂದರೆ ಅಮಂಗಲ. ಅಂತಹ ದಕ್ಷಿಣ ದಿಕ್ಕಿನೆಡೆಗೆ ರಾಮನ ಮಂಗಲ ಯಾತ್ರೆ. ಅವನ ಹಿಂದೆ ಕೋಟ್ಯಾನುಕೋಟಿ ವಾನರರು, ವಾನರ ನಾಯಕರು. ಅದು ಮಂಗಲಸೇನೆ. ಆ ವಾನರರೆಲ್ಲರೂ ಕೂಡ ಮಂಗಲಾತ್ಮಕರು. ಎಲ್ಲ ದೈವೀಶಕ್ತಿಗಳು ವಾನರ ರೂಪವನ್ನು ಧಾರಣೆ ಮಾಡಿ, ಮಹಾಮಂಗಲವಾದ ರಾಮನನ್ನು ಈ ಮಂಗಲದ ಪುಂಜಗಳು, ಮಂಗಲದ ಬಿಂದುಗಳು ಅನುಸರಣೆ ಮಾಡ್ತಾ ಇದ್ದಾವೆ. ಲಂಕೆಯೆಡೆಗೆ ತೆರಳುವ ರಾಮನನ್ನು ಬಹುದೊಡ್ಡ ವಾನರಸೇನೆಯು ಹಿಂಬಾಲಿಸುತ್ತಿತ್ತು. ಸುಗ್ರೀವನಿಂದ ಪಾಲಿತವಾಗಿರತಕ್ಕಂತಹ ಆ ವಾನರ ಸೇನೆಯಲ್ಲಿ ಕಸುವಿಲ್ಲದವರು ಯಾರಿಲ್ಲ. ಹೊರಟಿದ್ದು ಯುದ್ಧಕ್ಕೆ, ಮಾರಣ ಹೋಮವಾಗಬಹುದು, ಅಂಗಭಂಗವಾಗಬಹುದು, ಬದುಕೇ ಮುಕ್ತಾಯವಾಗಬಹುದು. ಅಂತಹ ಕಾರ್ಯಕ್ಕೆ ಹೊರಟಿದ್ದಾರೆ. ಆದರೆ ಸಂತೋಷ, ಪರಮಸಂತೋಷ, ಪರಮಸುಖ, ಪರಮಾನಂದ ಆ ವಾನರರ ಹೃದಯಗಳಲ್ಲಿ. ನಾವು ರಾಮನ ಕಾರ್ಯವನ್ನು ಮಾಡ್ತೇವೆ. ರಾಮನಿಗಾಗಿ ಯುದ್ಧ ಮಾಡ್ತೇವೆ. ರಾಮನಿಗೆ ಪ್ರಾಣಸಮರ್ಪಣೆ ಮಾಡ್ತೇವೆ ಎಂಬ ಒಂದು ದಿವ್ಯ ಭಾವ ವಾನರರಲ್ಲಿ. ಲಂಕೆಗೆ ಅಭಿಮುಖವಾಗಿ ವಾನರರು ಹಾರಿದರು. ಎಲ್ಲೆಡೆಗೆ ಹಾರಿದರು. ಘರ್ಜಿಸ್ತಾ ಇದಾರೆ. ಸಿಂಹನಾದವನ್ನ ಮಾಡ್ತಾ ಇದಾರೆ. ಕೇಕೆ ಹಾಕ್ತಾ ಇದಾರೆ. ತಮ್ಮ ಪ್ರಯಾಣದ ಜೊತೆಯಲ್ಲಿ. ಇಡೀ ಕಪಿಸೇನೆ ಅದ್ಭುತವಾದ ಯುದ್ಧನಾದಗಳನ್ನ, ಉತ್ಸಾಹದ ಘರ್ಜನೆಗಳನ್ನು ಹೊಮ್ಮಿಸ್ತಾ ಇದೆ. ದಾರಿಯಲ್ಲಿ ಸುಗಂಧಭರಿತ ಹಣ್ಣುಗಳನ್ನು ಕಿತ್ತು ತಿಂದರು. ದಾರಿಯಲ್ಲಿ ಎಲ್ಲಿ ಜೇನು ಸಿಕ್ಕರೂ ಅದನ್ನೂ ಸವಿದೇ ಸವಿದರು. ಆಮೇಲೆ ಆ ವೃಕ್ಷವನ್ನು ಕಿತ್ತು ಹೆಗಲ ಮೇಲೆ ಹಾಕ್ಕೊಂಡು ಹೋಗ್ತಾ ಇದ್ರು. ಅದ್ಯಾಕೆ ಅಂದ್ರೆ ತೂಕ ಬೇಕು. ನಡಿಬೇಕಾದ್ರೆ ಭಾರ ಇದ್ರೆ ನಡಿಗೆಗೊಂದು ತೂಕ ಬರ್ತದೆ ಅಂತ. ದೊಡ್ಡ ದೊಡ್ಡ ಸುಮಭರಿತ ಮಹಾವೃಕ್ಷಗಳನ್ನ ಕಿತ್ತು ಹೆಗಲ ಮೇಲೆ ಹಾಕ್ಕೊಂಡು ಹೋಗ್ತಾ ಇದ್ರಂತೆ. ಸೊಕ್ಕಿದ ಕೆಲವು ವಾನರರು ಬೇರೆ ವಾನರರನ್ನೆ ಹೊತ್ತುಕೊಂಡು ಹೋಗ್ತಿದ್ರಂತೆ. ಕೆಲವರು ಹಾರುತ್ತಾ ಹೋಗ್ತಿದ್ರೆ ಅವರಿಗಿಂತ ಇನ್ನು ಮೇಲೆ ಇನ್ನು ಕೆಲವರು ಹಾರ್ತಾ ಹೋಗ್ತಿದ್ರಂತೆ. ಕೆಲವರು ಮತ್ತುಳಿದ ಕಪಿಗಳನ್ನು ಬೀಳಿಸ್ತಾ ಹೋಗ್ತಿದ್ರಂತೆ. ಎಲ್ಲರದ್ದೂ ಒಂದೇ ಮನಸ್ಸು ‘ನಾವು ರಾವಣನನ್ನು ಕೊಲ್ಲಬೇಕು. ರಾವಣ ಮಾತ್ರವಲ್ಲ ಎಲ್ಲಾ ರಾಕ್ಷಸರನ್ನೂ ಕೊಲ್ಲಬೇಕು’ ಎಂಬುದಾಗಿ ಅವರ ಸಂಕಲ್ಪ. ಅದನ್ನು ರಾಮನಿಗೆ ಕೇಳುವ ಹಾಗೆ ಕೂಗಿ ಹೇಳ್ತಿದ್ರಂತೆ.

ಮುಂದಾಗಿ ಋಷಭ, ನೀಲ, ಕುಮುದ. ಮುಂದಕ್ಕೆ ಯಾಕೆ ಅಂದ್ರೆ ಮಾರ್ಗಾವೇಕ್ಷಣೆ. ದಾರಿಯಲ್ಲಿ ಏನಾದ್ರೂ ತೊಂದರೆ ಇದ್ಯಾ? ಶತ್ರುಗಳು ಹೊಂಚು ಹಾಕಿ ಕಾಯ್ತಾ ಇದ್ದಾರ? ಅಥವಾ ನೀರಿಗೋ, ಹಣ್ಣು-ಹಂಪಲುಗಳಿಗೋ, ಗೆಡ್ಡೆ-ಗೆಣಸುಗಳಿಗೋ ವಿಷ ಬೆರೆಸಿದ್ದಾರಾ? ಮಾರ್ಗ ಶೋಧನೆ. ಯುದ್ಧದ ವಿಷಯದಲ್ಲಿ ತಂತ್ರಗಳು ಬದಲಾಗ್ತಾ ಇರ್ತವೆ. ತಂತ್ರಗಳು ಒಂದೇ ರೀತಿ ಇರೋದಿಲ್ಲ. ಇರಲೂಬಾರದು. ಯಾಕಂದ್ರೆ ಎಲ್ಲಿಯಾದರೂ ತಂತ್ರಗಳು ಶತ್ರುಗಳಿಗೆ ಗೊತ್ತಾಗಿದ್ರೆ? ಹಾಗಾಗಿ ತಂತ್ರಗಳನ್ನ ಬದಲಿಸ್ತಾ ಇರ್ಬೇಕು. ಸೇನೆಯ ಮಧ್ಯದಲ್ಲಿ ರಾಜ ಸುಗ್ರೀವ, ಪ್ರಭು ರಾಮ ಮತ್ತು ಅವನ ಪ್ರಿಯ ಸಹೋದರ ಲಕ್ಷ್ಮಣ. ಅವರ ಸುತ್ತ ಮಹಾ ಬಲಿಷ್ಠರಾಗಿರತಕ್ಕಂತಹ ಶೂರರಾಗಿರತಕ್ಕಂತಹ ಅನೇಕ ವಾನರರು.

ವೀರನಾದ ಶತಬಲಿ ಎಂಬ ವಾನರ ನಾಯಕನು ತನ್ನ ಹತ್ತುಕೋಟಿ ಅನುಚರರೊಡಗೂಡಿ ಆ ವಾನರ ಸೇನೆಯನ್ನು ರಕ್ಷಿಸಿದನು. ಕೇಸರಿ ಎಂಬ ಮೇರುಪರ್ವತದಲ್ಲಿ ರಾಜ್ಯವನ್ನಾಳುವ ವಾನರೇಶ್ವರ – ಆಂಜನೇಯನ ತಂದೆ, ಮತ್ತು ಪನಸ, ಗಜ, ಅರ್ಕ ಎಂಬ ವಾನರ ನಾಯಕರುಗಳು ಕೋಟ್ಯಂತರ ಕಪಿಗಳೊಡಗೂಡಿ ಆ ವಾನರ ಸೇನೆಯ ಒಂದು ಪಾರ್ಶ್ವವನ್ನು ರಕ್ಷಣೆ ಮಾಡ್ತಾ ಇದ್ರು. ಹೊರಡುವಾಗ ಇದ್ದ ನಿಶ್ಚಯಕ್ಕೂ ಈಗಿರುವ ವ್ಯವಸ್ಥೆಗೂ ಬದಲಾವಣೆ ಆಗಿದೆ. ಹಾಗೆಯೇ ಸುಷೇಣ ಮತ್ತು ಜಾಂಬವಂತ ಇವರೀರ್ವರು ದೊಡ್ಡ ಸಂಖ್ಯೆಯ ಕರಡಿಗಳೊಡನೆ ಕೂಡಿಕೊಂಡು, ಸುಗ್ರೀವನನ್ನು ಮುಂದಿಟ್ಟುಕೊಂಡು ವಾನರ ಸೇನೆಯ ಬಾಲವನ್ನು ರಕ್ಷಣೆ ಮಾಡಿದ್ರು. ಅಂದ್ರೆ ಸೇನೆಯ ಹಿಂಭಾಗ. ಸೇನಾಪತಿ ನೀಲನು ಎಲ್ಲೆಡೆ ಸಂಚರಿಸ್ತಾ, ಮುಖ್ಯವಾಗಿ ಮುಂಭಾಗದಲ್ಲಿ ಸಂಚರಿಸ್ತಾ ಆ ಇಡೀ ವಾನರ ಸೇನೆಯನ್ನು ಪರಿಪಾಲಿಸಿದನು. ದಧಿಮುಖ, ವ್ರಜಂಗ, ರಂಭ, ರಭಸ ಎಂಬ ಕಪಿನಾಯಕರುಗಳು ಎಲ್ಲರಿಗೂ ಗಡಿಬಿಡಿ ಮಾಡೋದು. ಕೆಲವು ಕಪಿಗಳು ಎಲ್ಲಾದರೂ ಜೇನು ಕಂಡುಬಿಟ್ರೆ, ಹಣ್ಣುಹಂಪಲುಗಳನ್ನ ಕಂಡ್ರೆ ಅಲ್ಲಿಯೇ ತಿಂದು ಕುಡಿದು ವಿಶ್ರಾಂತಿ ಮಾಡಿದರೆ ಅಂತ. ಹಾಗಾಗಿ ತ್ವರೆಗೊಳಿಸಲೆಂದೇ ಈ ವಾನರ ನಾಯಕರುಗಳು ಕೆಲಸ ಮಾಡ್ತಾ ಇದ್ರು. ಮುಂದೆ ಹೋಗಿ, ಬೇಗ ಹೋಗಿ, ಎಂದು ವಾನರ ಸೈನಿಕರನ್ನು ತ್ವರೆಗೊಳಿಸುವ ಸಲುವಾಗಿಯೇ ಒಂದು ತುಕಡಿಯಿದೆ! ಹೀಗೇ ಆ ವಾನರರು ಪ್ರಯಾಣ ಮಾಡುತ್ತಾ ಪಶ್ಚಿಮ ಘಟ್ಟದ ಒಂದು ಭಾಗವಾದ ಸಹ್ಯ ಪರ್ವತವನ್ನು ಸೇರಿದರು. ಅಲ್ಲೇನು ಬಗೆಬಗೆಯ ವೃಕ್ಷಗಳು, ಸರೋವರಗಳು.. ಜಾಗೃತೆಯಿಂದ ವಾನರರು ಗ್ರಾಮಗಳನ್ನು, ನಗರಗಳನ್ನು ದೂರವಿಟ್ಟು ಪ್ರಯಾಣ ಮಾಡಿದರು. ಯಾಕೆ? ರಾಮನಿಗೆ ಭೀಮಕೋಪ ಬಂದುಬಿಟ್ಟರೆ ಎಲ್ಲಿಯಾದರೂ…ಅಂತ ಹೆದರಿ! ಯಾಕಂದ್ರೆ ರಾಮನು ಪ್ರವೇಶ ಮಾಡುವಂತಿಲ್ಲ 14 ವರ್ಷ ಪೂರ್ತಿಯಾಗುವವರೆಗೆ. ನನ್ನ ಪೈಕಿಯವರೂ ಯಾರೂ ಹೋಗುವುದು ಬೇಡ ಎಂಬ ರಾಮನ ಸೂಚನೆಯನ್ನು ಹೆದರಿ ಹೆದರಿ ಪಾಲಿಸಿದರು.

ಸಾಗರವೇ ಪ್ರವಾಹವಾಗಿ ಹರಿದಂತೆ ಇತ್ತು, ಭಯಂಕರವಾಗಿದ್ದ ಆ ವಾನರಸೈನ್ಯ. ರಾಮನ ಅತ್ತ ಇತ್ತ ಶೂರರಾದ ಕಪಿನಾಯಕರು ಹಾರ್ತಾ ಇದ್ದಾರೆ ಕುದುರೆಗಳ ಹಾಗೆ. ಇನ್ನು ರಾಮ ಲಕ್ಷ್ಮಣರು ವಾನರಸೇನೆಯ ಈರ್ವರು ಮಹಾವೀರರ ಮೇಲೆ ಕುಳಿತು ಪ್ರಯಾಣ ಮಾಡ್ತಾ ಇದ್ದಾರೆ. ಹನುಮಂತನ ಮೇಲೆ ಶ್ರೀರಾಮ, ಅಂಗದನ ಮೇಲೆ ಲಕ್ಷ್ಮಣ. ನೋಡಿದರೆ, ಚಂದ್ರ ಸೂರ್ಯರು ಗುರು ಶುಕ್ರರ ಜೊತೆ ಸೇರಿದ ಹಾಗೆ ಇತ್ತು. ರಾಮ-ಲಕ್ಷ್ಮಣರು ರವಿಚಂದ್ರರಂತೆ. ಹನುಮಂತ ಮತ್ತು ಅಂಗದರು ಗುರು ಶುಕ್ರರಂತೆ. ಹೀಗೆ ವಾನರ ರಾಜ ಸುಗ್ರೀವನಿಂದ ಮತ್ತು ಲಕ್ಷ್ಮಣನಿಂದ ಪೂಜಿತನಾಗಿರತಕ್ಕಂತ ಧರ್ಮಾತ್ಮನಾದ ರಾಮನು ಸೇನಾಸಮೇತನಾಗಿ ದಕ್ಷಿಣಕ್ಕೆ ಪ್ರಯಾಣವನ್ನ ಮಾಡ್ತಾನೆ.

ಏತನ್ಮಧ್ಯೆ ಅಂಗದನ ಮೇಲಿಂದ ಲಕ್ಷ್ಮಣನು ರಾಮನಿಗೆ ಕೆಲವು ಮಾತುಗಳನ್ನು ಹೇಳ್ತಾ ಇದ್ದಾನೆ. ‘ಅಣ್ಣಾ, ಅಪಹರಿಸಲ್ಪಟ್ಟ ಸೀತೆಯನ್ನು ಮರಳಿ ಪಡೆದು, ಯುದ್ಧದಲ್ಲಿ ರಾವಣನನ್ನು ಸದೆಬಡಿದು, ನೀನು ಇಷ್ಟಾರ್ಥವು ಕೈಗೂಡಿದವನಾಗಿ ಸೀತಾ ಸಮೇತನಾಗಿ ಅಯೋಧ್ಯೆಗೆ ಪ್ರತಿ ಪ್ರಯಾಣವನ್ನು ಮಾಡ್ತೀಯೆ’. ಸೀತೆಯೇ ರಾಮನ ಸಮೃದ್ಧಿ.
‘ನೋಡು, ದೊಡ್ಡ ದೊಡ್ಡ ನಿಮಿತ್ತಗಳು ಏರ್ಪಡ್ತಾ ಇದ್ದಾವೆ ಈ ವಿಷಯವನ್ನು ಸೂಚನೆ ಮಾಡುವ ಸಲುವಾಗಿ. ಆಕಾಶದಲ್ಲಿಯೂ ಭೂಮಿಯಲ್ಲಿಯೂ ಅನೇಕ ಶುಭಶಕುನಗಳು. ಇವೆಲ್ಲವೂ ನಿನಗಾಗಿ, ನಿನ್ನ ಇಷ್ಟಸಿದ್ಧಿಯನ್ನು ಸೂಚಿಸುವ ಸಲುವಾಗಿ. ನೋಡಣ್ಣಾ, ಪ್ರಕೃತಿ ಮಾತನಾಡ್ತಾ ಇದೆ, ನಿನ್ನ ವಿಜಯವನ್ನು ಸಾರ್ತಾ ಇದೆ’.

ಒಂದೊಂದೇ ಹೇಳ್ತಾನೆ ಲಕ್ಷ್ಮಣ. ‘ಶುಭವಾದ ವಾಯುವು ನಮ್ಮ ಹಿಂದಿನಿಂದ ಮುಂದಕ್ಕೆ ಬೀಸ್ತಾ ಇದೆ ~ ಅನುಕೂಲ ವಾತ! ಮೃದುವಾಗಿ, ಹಿತವಾಗಿ, ಸುಖವಾಗಿ, ಅನುವಾಗಿ ಬೀಸುವ ಗಾಳಿ ನಿನ್ನ ವಿಜಯದ ಸೂಚನೆ‌ ಮಾಡ್ತಾ ಇದೆ. ಹಾಗೇ ಪಕ್ಷಿಗಳು ಮತ್ತು ಪ್ರಾಣಿಗಳು ಪೂರ್ಣ ಮೃದು ಸ್ವರದಲ್ಲಿ ಸದ್ದು ಮಾಡ್ತಾ ಇದ್ದಾವೆ, ನಿನ್ನ‌ ವಿಜಯವನ್ನು ಸೂಚಿಸಿ. ದಿಕ್ಕುಗಳು ತಿಳಿಯಾಗಿವೆ, ಧೂಳಿಲ್ಲ. ಸೂರ್ಯನು ತೇಜಸ್ವಿಯಾಗಿ ಬೆಳಗ್ತಿದ್ದಾನೆ. ಮತ್ತೊಂದು‌ ಮುಖ್ಯ ವಿಜಯ ಸೂಚಕ‌ ಲಕ್ಷಣ : ಅಂತರಿಕ್ಷದಲ್ಲಿ ಶುಕ್ರಗ್ರಹವು ಸೇನೆಯನ್ನು ಹಿಂಬಾಲಿಸಿ ಬರ್ತಾ ಇದೆ. ಹಾಗೇ, ಸಪ್ತರ್ಷಿ ಮಂಡಲ – ಆ ಸಪ್ತ ಋಷಿಗಳ‌ ನಕ್ಷತ್ರ ಗೊಂಚಲು ಶುದ್ಧವಾಗಿ ಕಂಗೊಳಿಸ್ತಾ ಇದೆ. ಮತ್ತು, ಧ್ರುವ ನಕ್ಷತ್ರಕ್ಕೆ ಪ್ರದಕ್ಷಿಣಾಕಾರವಾಗಿ ಇವೆ ಆ ಸಪ್ತರ್ಷಿ ನಕ್ಷತ್ರಗಳು. ಹಾಗೇ, ನಮ್ಮ‌ ಪೂರ್ವಜ‌, ರಾಜರ್ಷಿ ತ್ರಿಶಂಕು! ಅವನೂ ನಕ್ಷತ್ರವೇ. ಅವನು ವಸಿಷ್ಠ ನಕ್ಷತ್ರದೊಡಗೂಡಿ ಶೋಭಿಸ್ತಾ ಇದ್ದಾನೆ ಮುಂಭಾಗದಲ್ಲಿ. ವಿಮಲವಾಗಿ ಬೆಳಗುವ ತ್ರಿಶಂಕು, ನಮ್ಮ ಪೂರ್ವಿಕ, ನಮ್ಮ‌ವಿಜಯವನ್ನು ಸೂಚನೆ ಮಾಡ್ತಾ ಇದ್ದಾನೆ.

ಇಕ್ಷ್ವಾಕು ವಂಶ ನಕ್ಷತ್ರವಾದ ವಿಶಾಖ ನಕ್ಷತ್ರ (ಜೋಡಿ ನಕ್ಷತ್ರ)ವನ್ನು ಕ್ರೂರ ಗ್ರಹಗಳು ಬಾಧಿಸ್ತಾ ಇಲ್ಲ, ನಿರ್ಮಲವಾಗಿ ಬೆಳಗ್ತಾ ಇದ್ದಾವೆ. ಹಾಗೆಯೇ ರಾಕ್ಷಸರ ನಕ್ಷತ್ರ – ಮೂಲ! ಮೂಲಾ ನಕ್ಷತ್ರವನ್ನು ಬಾಲವುಳ್ಳ ಧೂಮಕೇತುವೊಂದು ಪೀಡಿಸ್ತಾ ಇದೆ. ಹಾಗಾಗಿ ಆ ನಕ್ಷತ್ರವು ತಪಿಸ್ತಾ ಇದೆ. ಇದೆಲ್ಲವೂ ರಾಕ್ಷಸರ ನಾಶಕ್ಕಾಗಿ. ರಾಕ್ಷಸರಿಗೆ ಕಾಲ ಬಂದಿದೆ. ಕಾಲನು‌ ತನ್ನ ಪಾಶವನ್ನು ಬೀಸಿದ್ದಾನೆ ರಾಕ್ಷಸರ ಕಡೆಗೆ. ಹಾಗಾಗಿ ಅವರ ನಕ್ಷತ್ರವು ಧೂಮಕೇತುವಿನಿಂದ ಪೀಡಿತವಾಗಿದೆ. ಏತನ್ಮಧ್ಯೆ ನಮಗೆ ಎಲ್ಲ ವಿಮಲ. ದಾರಿಯಲ್ಲಿ ಕಾಣುವ ನೀರೆಲ್ಲವೂ ಕೂಡ ನಿರ್ಮಲವಾಗಿ ಗೋಚರಿಸ್ತಾ ಇದೆ.

‘ಕಾಡುಗಳಲ್ಲಿ ಹಣ್ಣು-ಹಂಪಲುಗಳು, ಫಲವೃಕ್ಷಗಳು, ಪುಷ್ಪವೃಕ್ಷಗಳು, ಪ್ರಸನ್ನವಾಗಿರುವ ಸಲಿಲಾಶಯಗಳು. ಹಾಗೆಯೇ ಸಕಾಲಫಲವೃಕ್ಷಗಳು, ಅದರ ಪರಿಮಳ, ಬೀಸಿ ಬರುವ ಮೃದುವಾದ ಗಾಳಿ, ಹಣ್ಣುಗಳ ಪರಿಮಳ. ಅಣ್ಣಾ, ವಾನರಸೇನೆಯನ್ನು ನೋಡು. ತಾರಕಾಸುರನ ಸಂಹಾರದಲ್ಲಿ ಕಂಗೊಳಿಸಿದ ದೇವಸೇನೆಯಂತೆ ಗೋಚರಿಸುತ್ತಿದೆ’. ನಿಜವಾಗಿಯೂ ದೇವಸೇನೆಯೇ ಹೌದು. ವಾನರರೆಂದರೆ ರೂಪಾಂತರದಲ್ಲಿ ಬಂದ ದೇವತೆಗಳೇ. ಹೀಗೆ ಎಲ್ಲಾ ನಿಮಿತ್ತಗಳನ್ನು ನೋಡಿ ‘ಅಣ್ಣಾ, ನಿಶ್ಚಿಂತನಾಗು, ಸಂತುಷ್ಟನಾಗು’ ಎಂದು ಅಣ್ಣನನ್ನು ಸಂತೈಸಿದ ಸೌಮಿತ್ರಿ ತುಂಬಾ ಸಂತೋಷದಲ್ಲಿದ್ದಾನೆ.

ಏತನ್ಮಧ್ಯೆ ಜೈತ್ರಯಾತ್ರೆ ಮುಂದುವರೆದಿದೆ. ಆ ಮಹಾಸೇನೆಯು ಭೂಮಿಯನ್ನು ಮುಚ್ಚಿದೆ. ಕರಡಿಗಳು, ವಾನರನಾಯಕರುಗಳಿಗೆ ಉಗುರು, ಹಲ್ಲುಗಳೇ ಆಯುಧಗಳು. ಬೇರೆ ಆಯುಧವೇ ಬೇಡ. ಬಳಸಿದರೆ ಪ್ರಕೃತಿಯಿಂದ. ಮರಗಳು, ಬಂಡೆಗಳಿಂದ ಯುದ್ಧಮಾಡುತ್ತಾರೆ. ಅಂತಹ ಕಪಿ-ಕರಡಿಗಳ ಸೇನೆ. ಅವರಿಗೆ ಬಹಳಾ ಹುಮ್ಮಸ್ಸು. ಅವರ ಕೈತುದಿ, ಕಾಲ್ತುದಿಯಿಂದ ಧೂಳು ಚಿಮ್ಮುತ್ತಿತ್ತು. ಅವರದ್ದು ನಾಲ್ಕು ಕಾಲುಗಳ ಪ್ರಯಾಣ. ಆ ಧೂಳು ಲೋಕವನ್ನೇ ಮುಚ್ಚಿತು. ಸೂರ್ಯ ಕಾಣಲಿಲ್ಲ. ಸೇನೆಯು ಭೂಮಿಯನ್ನು, ದಕ್ಷಿಣದ ಪರ್ವತ, ವನ, ಆಕಾಶಗಳನ್ನು ಮುಚ್ಚಿತು. ಮೋಡದ ಮಾಲಿಕೆಯಂತೆ ಸೇನೆಯು ಲಂಕೆಯ ಕಡೆಗೆ ಸಾಗಿತು. ಕೆಲವು ಸಣ್ಣ-ಪುಟ್ಟ ನದಿಗಳನ್ನು ಅವರು ದಾಟುವಾಗ ನದಿಗಳು ನಿಂತುಹೋದವು. ಕೆಲವು ನದಿಗಳು ಹಿಂದಿರುಗಿ ಹರಿದವು. ಕೆಲವೊಮ್ಮೆ ಫಲಭರಿತವಾದ ಕಾಡುಗಳ ಮಧ್ಯದಿಂದ, ಕೆಲವೊಮ್ಮೆ ಹಸಿರು ಪರ್ವತಗಳ ಕೆಳಗಿನಿಂದ, ಕೆಲವೊಮ್ಮೆ ನಿರ್ಮಲ ಜಲದ ಸರೋವರಗಳಿಗೆ ಅಡ್ಡವಾಗಿ ಆ ಸೇನೆ ಪ್ರಯಾಣ ಮಾಡಿತು. ವಾನರರೆಲ್ಲರೂ ತಮ್ಮ ವಿಕ್ರಮವನ್ನು ರಾಮನಿಗೆ ಸಮರ್ಪಿಸಿದರು. ತಮ್ಮ ಹರ್ಷ, ತಮ್ಮ ವೀರತ್ವ, ತಮ್ಮ ಬಲವನ್ನು ಒಬ್ಬರಿಗೊಬ್ಬರು ತೋರಿಸಿಕೊಳ್ಳುತ್ತಿದ್ದಾರೆ. ಕೆಲವರು ಬೇಗ ಮುಂದುವರಿದರು. ಅದನ್ನು ಕಂಡು ಕೆಲವರು ಹಾರಿ ಮುಂದೆ ನಡೆದರು. ಕೆಲವರು ಕಿಲ-ಕಿಲ ಶಬ್ಧ ಮಾಡಿದರು. ಕೆಲವರು ಬಾಲವನ್ನು ನೆಲಕ್ಕೆ ಬಡಿದರು. ಕೆಲವರು ಕಾಲು ಕುಟ್ಟಿದರೆ ಕೆಲವರು ತೊಡೆ ತಟ್ಟಿದರು. ಕೆಲವರು ಅತ್ತ-ಇತ್ತ ಸಿಕ್ಕ ಮರಗಳನ್ನು, ಪರ್ವತ ಶಿಖರಗಳನ್ನು ಮುರಿದುಹಾಕಿದರು, ಬಂಡೆಗಳನ್ನು ಕಿತ್ತು ಎಸೆದರು. ಪರ್ವತಗಳನ್ನು ಏರಿ ಅಲ್ಲಿಂದ ದೊಡ್ಡ ಘರ್ಜನೆ ಮಾಡಿದರು, ಕೇಕೆ ಹಾಕಿದರು. ಬಳ್ಳಿಗಳೆಲ್ಲಾ ಲೆಕ್ಕವೇ ಇಲ್ಲ. ಕಾಲಿಗೆ ಸಿಕ್ಕಿದರೆ ಮೋಕ್ಷ! ಕೆಲವರಂತೂ ದೊಡ್ಡ ಬಂಡೆಗಳು, ಮರಗಳನ್ನು ಕಿತ್ತು ಆಟವಾಡಿದರು. ಎಂತಹ ಸುಂದರವಾದ ವರ್ಣನೆ.
ಹೀಗೆ ನೂರು, ನೂರುಸಾವಿರ, ಕೋಟಿ, ಕೋಟಿಸಾವಿರ ವಾನರರ ಸೈನ್ಯ ಮುಂದೆ ಸಾಗುತ್ತಿದೆ. ಹಗಲು-ರಾತ್ರಿ ಎನ್ನದೇ, ಆಯಾಸವಿಲ್ಲದೇ ಸಂತೋಷದಿಂದ ಪ್ರಯಾಣ ಮಾಡುತ್ತಿದ್ದಾರೆ. ಎಲ್ಲ ಕಡೆಗೆ ಸುಗ್ರೀವನು ಕಣ್ಗಾವಲಿಟ್ಟಿದ್ದಾನೆ. ಸಮಯ ಸರಿದಂತೆ ಕಪಿಗಳ ವೇಗ ಹೆಚ್ಚಾಯಿತು. ರಾಮನಿಗಾಗಿ ಯುದ್ಧ ಮಾಡಬೇಕೆಂಬ ಉತ್ಸಾಹ. ಬೇಗ ಸೀತೆಯನ್ನು ಬಿಡಿಸಬೇಕು ಎಂದು ಒಂದು ಘಳಿಗೆಯೂ ಕುಳಿತುಕೊಳ್ಳಲಿಲ್ಲ. ಈಗ ವಾನರರು ಸಹ್ಯ-ಮಲಯ ಉಭಯ ಪರ್ವತಮಾಲಿಕೆಯನ್ನು ಸೇರಿದ್ದಾರೆ. ಪಶ್ಚಿಮಘಟ್ಟದ ಆರಂಭದ ಭಾಗ ಸಹ್ಯಪರ್ವತ(ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ). ಹಾಗೆಯೇ ಮುಂದೆ ಮಲಯ ಪರ್ವತ (ಕೇರಳ, ತಮಿಳುನಾಡು). ವಿಚಿತ್ರವಾದ ಕಾನನಗಳನ್ನು ರಾಮನು ನೋಡುತ್ತಿದ್ದಾನೆ. ಆ ಪರ್ವತಕ್ಕೇ ಸಲ್ಲುವ ನದಿಗಳು, ಝರಿಗಳು, ಕಾನನಗಳು. ಚಂಪಕ, ತಿಲಕ, ಚೂತ,ಅಶೋಕ, ಕರವೀರ, ನೆರ್ಮೆ,ಅಂಕೋಲ, ಹೊನ್ನೆ ಮುಂತಾದ ಅನೇಕ ವೃಕ್ಷಗಳು. ಗಾಳಿ ಬೀಸಿದಾಗ ಸೇನೆಯ ಮೇಲೆ ಪುಷ್ಪವೃಷ್ಟಿ. ಸುಖಸ್ಪರ್ಶದ ಚಂದನ-ಶೀತಲ ಮಾರುತ. ದುಂಬಿಗಳ ನಿನಾದ, ಜೇನಿನ ಪರಿಮಳ. ಕಪಿಗಳಿಗೆ ಸ್ವರ್ಗವದು. ಆ ಪರ್ವತವು ಬಗೆಬಗೆಯ ಧಾತುಗಳಿಂದ ಶೋಭಿಸಲ್ಪಟ್ಟಿತ್ತು. ಆ ಬಣ್ಣಬಣ್ಣದ ಧಾತುಗಳ ರೇಣುಗಳು ಸೇನೆಯ ಮೇಲೆ ಬೀಳುತ್ತಿತ್ತು. ಗಿರಿಪ್ರಸ್ಥಗಳಲ್ಲಿ ಕೇತಕಿ, ವಾಸಂತಿ, ಮಾಧವಿ, ಚಿರಿಬಿಲ್ವ, ಬಕುಳ, ನಾಗಸಂಪಿಗೆ, ಅರ್ಜುನ ಮುಂತಾದ ರಮಣೀಯವಾದ ಹೂಬಿಟ್ಟ ಮರಗಳು, ವಿಮಲವಾದ ಜಲಮೂಲಗಳು. ಚಕ್ರವಾಕ, ಕಾರಂಡವ, ಕ್ರೌಂಚಗಳೆಲ್ಲಾ ಅಲ್ಲಿವೆ. ಹಂದಿಗಳು, ಜಿಂಕೆಗಳು, ಕರಡಿಗಳು, ಚಿರತೆ-ಹುಲಿಗಳೆಲ್ಲಾ ಆ ಸರೋವರಗಳನ್ನು ಸೇವಿಸುತ್ತಿವೆ. ಕಮಲ, ಸೌಗಂಧಿಕಾ, ಕುಮುದ, ಉತ್ಪಲ ಮುಂತಾದ ಪುಷ್ಪಗಳು, ಮಧುರವಾಗಿ ಕೂಜನ ಮಾಡುವ ಪಕ್ಷಿಗಳು ಎಲ್ಲವನ್ನೂ ಅಲ್ಲಿ ಕಂಡರು ಕಪಿಗಳು. ನಂತರ ತೃಪ್ತಿಯಾಗುವಷ್ಟು ನೀರು ಕುಡಿದರು, ಆಮೇಲೆ ಜಲಕ್ರೀಡೆ. ಎತ್ತರದ ಬೆಟ್ಟವನ್ನೇರಿ ಅಲ್ಲಿಂದ ಹಾರಿದರು.

ಪರಿಮಳ ಉಳ್ಳಂತಹ ಫಲಗಳು. ಗಡ್ಡೆ ಗೆಣಸುಗಳನ್ನು ತಿಂದ್ರು, ಮರಗಳನ್ನು ಮುರಿದು ಹಾಕಿದ್ರು. ದೊಡ್ಡ ಜೇನಿನ ಗೂಡುಗಳನ್ನು ಬಾಯಿಗೆ ಹಿಂಡಿಕೊಂಡ್ರು. ಮಧುವನ್ನು ಕುಡಿದ ವಾನರರು ಮುಂದು ವರಿತಾ ಇದ್ದಾರೆ. ಬೆಟ್ಟಗಳು ನೆಲ ಸಮ ಮತ್ತು ಮರಗಳು ಅಡಿ ಮೇಲಾಗ್ತಾ ಇದ್ದಾವೆ. ಕೆಲವರು ಮರದಿಂದ ಮರಕ್ಕೆ ಹಾರಿದ್ರೆ ಇನ್ನು ಕೆಲವರು ಮರ ಹತ್ತಿ ಇಳಿತಾ ಇದ್ದಾರೆ. ಭೂಮಿ ಧ್ವಸ್ತವಾಗ್ತಾ ಇದೆ ಹೇಗೆಂದ್ರೆ ಮಾಗಿದ ಭತ್ತದ ಗದ್ದೆಯ ಹಾಗೆ. ಕಪಿಗಳದ್ದು ಅದೇ ಬಣ್ಣ. ಮಾಗಿದ ಭತ್ತದ ಗದ್ದೆಯಲ್ಲಿ ನೆಲವೇ ಕಾಣಿಸೋದಿಲ್ಲ ಹಾಗೆಯೇ ಕಪಿಗಳು ಕಂಡ್ರು. ಅಂತೂ ಮಹೇಂದ್ರವನ್ನು ತಲುಪಿದರು. ಮಹೇಂದ್ರ ಪರ್ವತ ಅಂದ್ರೆ ಹನುಮ ಲಂಕೆಗೆ ಹಾರಿದ ಪರ್ವತ. ಮಹೇಂದ್ರ ಪರ್ವತವನ್ನು ರಾಮ ಏರಿ, ಅಲ್ಲಿ ಕಂಡಿದ್ದೇನು? ಸಮುದ್ರ! ಕೂರ್ಮಗಳಿಂದ ಮೀನುಗಳಿಂದ ಕೂಡಿದ ದಕ್ಷಿಣ ಸಮುದ್ರವನ್ನು ಕಂಡನು. ರಾಮನು ಮಹೇಂದ್ರ ಪರ್ವತವನ್ನು ಇಳಿದು, ವೇಲಾವನ, ಸಮುದ್ರ ತೀರದ ಕಾಡು, ಅದನು ಸೇರ್ತಾನೆ ಸುಗ್ರೀವ ಅಂಗದನೊಟ್ಟಿಗೆ. ಸಮುದ್ರ ಬಂಡೆಗಳನ್ನು ತೊಳಿತಾ ಇವೆ, ತೀರದ ಬಂಡೆಗಳಿಗೆ ಅಲೆಗಳು ಬಂದು ಅಪ್ಪಳಿಸುತ್ತಾ ಇವೆ. ಆಗ ರಾಮನು ಸುಗ್ರೀವನನ್ನು ಕರೆದು, ಮೊದಲನೆಯ ವಿಷಯದ ಚಿಂತನೆಯ ಕಾಲ ಬಂತು. ಸಾಗರವನ್ನು ದಾಟುವುದು ಹೇಗೆ, ವಾನರ ಸೇನೆ ಸಮುದ್ರವನ್ನು ದಾಟುವುದು ಹೇಗೆ ಎಂಬ ಚಿಂತನೆಯ ಕಾಲ ಬಂತು. ಆಚೆ ತೀರ ಉಂಟೋ ಇಲ್ಲವೋ ಎನ್ನುವ ಹಾಗೆ ಸುತ್ತಲೂ ಸಮುದ್ರ. ನಾವಿಲ್ಲೇ ಬೀಡು ಬಿಡೋಣ ಎಂದು ವಾಸಕ್ಕೆ ಅಪ್ಪಣೆ ಕೊಟ್ಟ. ವಾನರ ಸೇನೆಯು ತುಕಡಿ ತುಕಡಿ ಯಾಗಿ ಬರ್ತಾ ಇದೆ. ಯಾರೂ ತಮ್ಮ ತುಕಡಿಯನ್ನು ಬಿಟ್ಟು ಹೋಗಬಾರದು ಎಂದು ಸೂಚನೆಯನ್ನೂ ಕೊಡುತ್ತಾನೆ. ಮರಾಠಾ ರೆಜಿಮೆಂಟ ಇದ್ದ ಹಾಗೆ ಇಲ್ಲಿಯೂ ಬೇರೆ ಬೇರೆ ರೆಜಿಮೆಂಟಗಳು ಇದ್ದಾವೆ ಅಲ್ಲಿ. ಹಾಗೆಯೇ ಶೂರ ವಾನರರನ್ನು ಕರೆದು ಸುತ್ತಲೂ ಗಮನಿಸಿ ಏನಾದರೂ ಅಪಾಯ ಇದೆಯೇ ಎಂದು ನೋಡಲು ಹೇಳಿದನು. ಗುಪ್ತ ಭಯ, ಮೊಸದ ಭಯ ಇದೆಯಾ ಎಂದು ನೋಡಲು ಹೇಳಿದನು. ನಿನ್ನೆಯ ಪ್ರವಚನದಲ್ಲಿ ಹೆಳಿದ ಹಾಗೇ ರಾಮನು ಮೋಸ ಮಾಡಿದವನು ಅಲ್ಲ, ಮೋಸ ಹೋದವನೂ ಅಲ್ಲ. ಹಾಗಾಗಿ ೧೩ ವರ್ಷದಲ್ಲಿ ಸೀತೆಯನ್ನು ಎಂದೂ ಬಿಟ್ಟು ಹೋದವನಲ್ಲ ರಾಮ, ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದಾರೆ. ರಾಮನಾಗಲಿ, ಲಕ್ಷ್ಮಣನಾಗಲಿ ಯಾರಾದರೂ ಒಬ್ಬರು ಇರಲೇಬೇಕು. ವಿಧಿ ಸೀತೆಯನ್ನು ಕದ್ದುಕೊಂಡು ಹೋಗಿದ್ದು ಹೊರತು ರಾವಣನಲ್ಲ. ರಾವಣನ ಮೃತ್ಯು. ರಾಮನ ಮಾತನ್ನು ಆಲಿಸಿದ ಸುಗ್ರೀವನು ಸೇನೆಯನ್ನು ನಿವೇಶಗೊಳಿಸಿದನು ಸಾಗರ ತೀರದಲ್ಲಿ. ಸಮುದ್ರ ತೀರದಲ್ಲಿ ವಾನರ ಸಮುದ್ರ. ಲವಣ ಸಾಗರದ ತೀರದಲ್ಲಿ ಮಧು ಸಾಗರ. ಕಪಿಗಳ ಬಣ್ಣ ಜೇನಿನ ಬಣ್ಣ. ಬೇಲೆಕಾನು ಆ ತೀರದ ಕಾಡಿನಲ್ಲಿ ಸೇನೆ ಬೀಡು ಬಿಡ್ತಾ ಇದೆ. ಬೀಡು ಬಿಡುವ ಭಾರೀ ಶಬ್ದ. ಪರಿಣಾಮ ಸಮುದ್ರದ ಮೊರೆತ ಕೇಳಲೇ ಇಲ್ಲ. ಮೂರು ಭಾಗವಾಗಿ ಬೀಡು ಬಿಟ್ಟಿತು ವಾನರ ಸೇನೆ. ಬೀಡು ಬಿಡುವಾಗ ಕೂಡ ಒಬ್ಬಬ್ಬ ವಾನರ ಸೈನಿಕನಿಗೆ ರಾಮನ ಹಿತ ಚಿಂತೆ. ರಾಮನ ಸೇವೆಯನ್ನು ಮಾಡಿ ರಾಮನ ಕಾರ್ಯವನ್ನು ಸಾಧಿಸಬೇಕು, ಸೀತೆಯನ್ನು ಬಿಡುಗಡೆಗೊಳಿಸಬೇಕು ಎನ್ನುವುದೇ ಅವರೆಲ್ಲರ ಹೃದಯದಲ್ಲಿ ತುಂಬಿತ್ತು. ಸಮುದ್ರವು ಭೋರ್ಗರೆದು ಎದ್ದಿದೆ, ತೀರ ಕಾಣ್ತಾ ಇಲ್ಲ. ರಾಕ್ಷಸರು ಅಡ್ಡಾಡುವುದು ಕಾಣ್ತಾ ಇದೆ ಅಲ್ಲಲ್ಲಿ. ಆ ವರುಣಾಲಯವನ್ನು ಅಂದ್ರೆ ಸಾಗರವನ್ನು ಕಂಡ ಕಪಿನಾಯಕರು ವಿಷಣ್ಣರಾದರು. ಕಳವಳ ಗೊಂಡರು. ಇದನ್ನು ದಾಟಿ ಹೋಗಬೇಕಾ ಎನ್ನುವ ಚಿಂತೆ. ಹನುಮಂತ ಮಾತ್ರ ಹೋಗಬಹುದು ವಾನರ ಸೇನೆ ಹೋಗುವುದು ಹೇಗೆ? ಸಂಜೆ ಹೊತ್ತಿಗೆ ಆ ಸಮುದ್ರ ಆ ಕಪಿಗಳ ಪಾಲಿಗೆ ಇನ್ನೂ ಭಯಂಕರವಾಗಿ ಕಂಡಿತಂತೆ. ಭೋರ್ಗರೆಯುವ ಅಲೆಗಳನ್ನು ಕಂಡಾಗ ಸಮುದ್ರ ರಾಜನು ನೃತ್ಯ ಮಾಡ್ತಾ ಇದ್ದಾನೋ ಎನ್ನುವಂತೆ. ಚಂದ್ರೋದಯವಾಗ್ತಾ ಇದೆ. ಅಲ್ಲಿ ಒಂದು ಚಂದ್ರ ಇಲ್ಲಿ ಸಾವಿರಾರು ಚಂದ್ರಗಳು ಸಮುದ್ರದಲ್ಲಿ. ಒಂದು ಸುಂದರವಾದ ವರ್ಣನೆ ಇದೆ ಇಲ್ಲಿ. ಸಮುದ್ರವು ತನ್ನ ಅಲೆಗಳೆಂಬ ಕೈಗಳಿಂದ ನೊರೆಯೆಂಬ ಚಂದನವನ್ನು ತೇಯ್ತಾ ಇದೆ. ಈ ನೊರೆಯ ಚಂದನವನ್ನು ಚಂದ್ರನು ತನ್ನ ಕಿರಣಗಳೆಂಬ ಕೈಗಳಿಂದ ತೆಗೆದುಕೊಂಡು ದಿಕ್ಕುಗಳೆಂಬ ನಾರಿಯರಿಗೆ ಹಚ್ಚುತ್ತಾ ಇದ್ದಾನೆ ಹಾಗೆ ಇದೆಯಂತೆ. ತಿಮಿಂಗಿಲಗಳು, ಭೂತಾಕಾರದ ಜಲಚರಗಳು ಮತ್ತು ಚಂಡಮಾರುತದ ವೇಗದ ಕೆಲವು ಜಂತುಗಳು. ಅಂದ್ರೆ ಅಷ್ಟು ವೇಗವಾಗಿ ಈಜಾಡತಕ್ಕಂತಹ ಜಲಜಂತುಗಳು. ಸರ್ಪಗಳು – ತಮ್ಮ ಹೆಡೆಯ ರತ್ನದ ಬೆಳಕಿನಲ್ಲಿ ಅವುಗಳ ಶರೀರ ಹೊಳೆಯುತ್ತಾ ಇವೆ. ಇದೆಲ್ಲ ಕಪಿಗಳಿಗೆ ಕಾಣ್ತಾ ಇವೆ. ದುರ್ಗಮವಾಗಿರತಕ್ಕಂತಹ ಸಾಗರ, ದಾರಿಯಿಲ್ಲ ಹೋಗಲಿಕ್ಕೆ. ಸ್ಥಳಕಾಣದ, ಸ್ಥಳವಿಲ್ಲದ, ರಾಕ್ಷಸರ ವಾಸಸ್ಥಾನ. ಸಮುದ್ರದ ದಡದಲ್ಲಿ ರಾಕ್ಷಸರು ವಾಸ ಮಾಡ್ತಾರೆ ಅಂತ ಲೆಕ್ಕ. ಸಮುದ್ರದ ದಡದಲ್ಲಿ ಪಾತಾಳದ ದಾರಿಯಿದೆ ಅಂತ. ಕೆಲವೊಮ್ಮೆ ಸಮುದ್ರದ ಅಲೆಗಳು ಎತ್ತರಕ್ಕೆ ಹೋಗ್ತಾ ಇದ್ದವಂತೆ ಅದರ ಜೊತೆಗೆ ಮೊಸಳೆಗಳೋ ತಿಮಿಂಗಿಲಗಳೋ ಅಲೆಗಳ ಜೊತೆಗೆ ಹಾರ್ತಾ ಇದ್ದವಂತೆ. ಬೆಂಕಿಯ ಚೂರ್ಣಗಳು ಸಿಂಪಡಿಸಿದ ಹಾಗೆ ಕೆಲವು ಕಡೆ ಹೊಳೀತಾ ಇದೆ ಸಮುದ್ರ. ಬೆಂಕಿಯನ್ನು ಸಣ್ಣ ಚೂರ್ಣಮಾಡುವುದು ಸಾಧ್ಯವಾಗಿದ್ದರೇ ಅದನ್ನು ಸಿಂಪಡಿಸಿದರೇ ಹೇಗೆ, ಹಾಗೆ ಸಮುದ್ರದ ನೀರು ಕಾಣ್ತಾ ಇತ್ತು ಮತ್ತು ಪಾತಾಳದಂತೆ ಘೋರವಾಗಿತ್ತು. ಇದೆಲ್ಲವನ್ನು ಕಪಿಗಳು ಸೂಕ್ಷ್ಮವಾಗಿ ಗಮನಿಸಿದರು. ಇಲ್ಲಿ ವಾಲ್ಮೀಕಿಗಳು ಸಮುದ್ರಕ್ಕೂ ಮತ್ತು ಆಕಾಶಕ್ಕೂ ಹೋಲಿಕೆ ಮಾಡಿದ್ದಾರೆ. “ಸಮುದ್ರವು ಆಕಾಶದಂತೆ, ಆಕಾಶವು ಸಮುದ್ರದಂತೆ”. ಸಮುದ್ರ ಮತ್ತು ಆಕಾಶ ಎರಡು ಸಹ ಅನಾದಿ ಹಾಗೂ ಅನಂತ. ಸಮುದ್ರವು ಹೋಗಿ ಆಕಾಶಕ್ಕೆ ಕೂಡಿದೆ, ಆಕಾಶವು ಹೋಗಿ ಸಮುದ್ರಕ್ಕೆ ಸೇರಿದೆ ಎಂದು ವರ್ಣಿಸಿದ್ದಾರೆ. ಸಮುದ್ರದಲ್ಲಿ ರತ್ನಗಳು ಕಂಡರೆ ಆಕಾಶದಲ್ಲಿ ನಕ್ಷತ್ರಗಳು ಗೋಚರಿಸಿದವು. ಆಕಾಶದಲ್ಲಿ ಮೇಘ ಮಾಲೆ ಕಂಡರೆ ಸಮುದ್ರದಲ್ಲಿ ಅಲೆಗಳ ಮಾಲೆ ಕಾಣುತ್ತಿತ್ತು. ಹೀಗೆ ಆಕಾಶ ಮತ್ತು ಸಮುದ್ರಕ್ಕೆ ವ್ಯತ್ಯಾಸವೇ ಇರಲಿಲ್ಲ. ಅಲೆಗಳು ಒಂದಕ್ಕೊಂದು ಬಡಿದು ಭಾರಿ ಶಬ್ದದೊಡನೆ ಬಂದು ಅಪ್ಪಳಿಸುತ್ತಿದ್ದವು. ರಣಭೇರಿಗಳಂತೆ ಅಲೆಗಳು ಒಂದಕ್ಕೊಂದು ಬಡಿದು ಶಬ್ಧ ಮಾಡುತ್ತಿದ್ದವು. ಅಲೆ ಬರುತ್ತಿರುವಾಗ , ಗಾಳಿ ಬೀಸುತ್ತಿರುವಾಗ, ಜಲ–ಜಂತುಗಳು ಕಾಣುತ್ತಿರುವಾಗ ಸುಂದರವಾಗಿ ವಾಲ್ಮೀಕಿಗಳು ವರ್ಣಿಸಿದ್ದಾರೆ. ಗಾಳಿ ವಾಯುದೇವನಾದ್ದರಿಂದ ಜೋರಾಗಿ ಬೀಸಿದೆ, ಸಮುದ್ರದ ಒಳಗಿರುವ ರತ್ನಗಳನ್ನು ಕದಿಯುವ ಸಲುವಾಗಿ ಜೋರಾಗಿ ಬಂತೇನೋ ಎಂಬಂತೆ, ಕೋಪಿಸಿಕೊಂಡ ಸಮುದ್ರ ತನ್ನೊಳಗಿರುವ ರತ್ನ ಮುಟ್ಟಬೇಡ ಎಂದು ಗಾಳಿಗೆ ನೀರನ್ನು ಎರಚುವಂತೆ, ಕ್ರೂರ ಜಲ–ಜಂತುಗಳು ಸೈನ್ಯ ಕಟ್ಟಿಕೊಂಡು ಸಮುದ್ರ ರಾಜನ ಮೇಲೆ ಯುದ್ಧಕ್ಕೆ ಹೋದಂತೆ ಕಾಣುತ್ತಿತ್ತು ಎಂದು ಮನೋಜ್ಞವಾಗಿ ವರ್ಣಿಸಿದ್ದಾರೆ. ಮುತ್ತು, ರತ್ನ, ಹವಳ ಎಲ್ಲವೂ ಸಾಗರದಲ್ಲಿ ಸಿಗುವುದರಿಂದ ಸಾಗರವನ್ನು “ರತ್ನಾಕರ” ಎಂದು ಕರೆಯುತ್ತಾರೆ. ರತ್ನಾಕರನನ್ನು ಕರೆಯಲು ಗಾಳಿ ಬಂದಾಗ ಅದಕ್ಕೆ ಸಮುದ್ರವು ನೀರನ್ನು ಎರಚಿತು. ಸಮುದ್ರವು ಮೀನು, ಮೊಸಳೆಯ ಸೈನ್ಯವನ್ನು ಕಟ್ಟಿಕೊಂಡಿತ್ತು.
ಭಾರೀ ಉತ್ಸಾಹದಿಂದ ವಾನರರು ಸಮುದ್ರವನ್ನು ನೋಡಿದರು. ಆಕಾಶದಲ್ಲಿ ಸಮುದ್ರ ರಾಜನ ನೃತ್ಯ ನಡೆಯಿತು. ಇದನ್ನೆಲ್ಲ ನೋಡಿದ ಕಪಿಗಳಿಗೆ ವಿಸ್ಮಯವಾಯಿತು. ಸಮುದ್ರ ರಾಜನು ಆಕಾಶದಲ್ಲಿ ಉರುಳಾಡುತ್ತಿದ್ದಂತೆ ಕಪಿಗಳಿಗೆ ಕಾಣಿಸಿತು. ಏತನ್ಮಧ್ಯೆ ನೀಲನು ತನ್ನ ಸೈನ್ಯವನ್ನು ಸುವ್ಯವಸ್ಥಿತವಾಗಿ ನೆಲೆ ಗೊಳಿಸಿದನು. ನಂತರ ಅಗ್ನಿ ದೇವತೆಗಳ ಮಕ್ಕಳಾಗಿರುವ ಮೈಂದ ಮತ್ತು ದ್ವಿವಿಧ ಇಬ್ಬರು ರಕ್ಷಾರ್ಥವಾಗಿ ಸಂಚಾರ ಮಾಡುತ್ತಿದ್ದರು. ಆಗ ರಾಮನು ಲಕ್ಷ್ಮಣನಿಗೆ ಸೀತೆಯ ನೆನಪಿನ ಕೆಲವು ಮಾತುಗಳನ್ನು ಹೇಳಿದನು. ಲೋಕದಲ್ಲಿ ಒಂದು ಮಾತಿದೆ, ಸಮಯ ಹೋದಂತೆ ದುಃಖವೂ ದೂರ ಹೋಗುತ್ತದೆ, ಆದರೆ ನನಗೆ ಮಾತ್ರ ಸೀತೆಯನ್ನು ಕಾಣದೆ ದಿನದಿಂದ ದಿನಕ್ಕೆ ದುಃಖ ಹೆಚ್ಚಾಗುತ್ತಿದೆ ಹೊರತು ಕಡಿಮೆಯಲ್ಲ ಎಂದು ರಾಮನು ಹೇಳಿದನು. ನನಗೆ ಸೀತೆ ದೂರದಲ್ಲಿದ್ದಾಳೆ ಎಂದು ದುಃಖ ಅಲ್ಲ, ಅಪಹರಣ ಆಗಿದೆ ಎಂದು ದುಃಖ ಅಲ್ಲ, ಅವಳ ರತ್ನಪ್ರಾಯವಾಗಿರುವ ಆಯಸ್ಸು ಸುಮ್ಮನೆ ವ್ಯರ್ಥವಾಗುತ್ತಿದೆ ಎಂದು ದುಃಖ ಎಂದು ರಾಮನು ಲಕ್ಷ್ಮಣನಿಗೆ ಹೇಳಿದನು. ಗಾಳಿಗೆ ರಾಮನು ಎಲೈ ಮಾರುತನೇ! ಒಮ್ಮೆ ಸೀತೆಯ ಮೇಲೆ ಬೀಸಿ ನಂತರ ನನ್ನ ಮೇಲೆ ಬೀಸು ಎಂದು ಹೇಳಿದನು. ಗಾಳಿಯು ಸೀತೆಯನ್ನು ಸ್ಪರ್ಶಿಸಿ ತನ್ನನ್ನು ಸ್ಪರ್ಶಿಸಿದರೆ ಅದು ಸೀತಾ ಸ್ಪರ್ಶ ಎಂದು ರಾಮನು ಹೇಳಿದನು. ನಂತರ ದೃಷ್ಠಿ ಸಮಾಗಮ ಚಂದ್ರನಲ್ಲಿ ಎಂದು ರಾಮನು ಹೇಳಿದನು. ರಾಮನು ತಾನು ಚಂದ್ರನನ್ನು ನೋಡುತ್ತಿರುವಾಗ ಸೀತೆ ಚಂದ್ರನನ್ನು ನೋಡಿದರೆ ಅಲ್ಲಿ ಈರ್ವರ ದೃಷ್ಠಿ ಸಮಾಗಮ ಎಂದು ಹೇಳಿದನು. ರಾವಣನು ಬಲಾತ್ಕಾರವಾಗಿ ಸೀತೆಯನ್ನು ಕರೆದೊಯ್ಯುವಾಗ ಅವಳು ಹಾ ರಾಮಾ!, ಹಾ ನಾಥ! ಎಂದು ಕೂಗಿದ್ದು ನನ್ನನ್ನು ಸುಡುತ್ತಾ ಇದೆ, ಆರ್ತನಾದ ಮಾಡುವಾಗ, ಆಕ್ರಂದನ ಮಾಡುವಾಗ, ಕಾಪಾಡು ಎಂದು ಕೂಗಿ ಕರೆಯುವಾಗ ನಾನು ಇರಲಿಲ್ಲ. ವಿಷವನ್ನು ಉಂಡರೆ ವಿಷವು ಹೊಟ್ಟೆಯಲ್ಲಿ ಸುಡುವ ಹಾಗೆ ಸೀತೆಯ ಆಕ್ರಂದನಕ್ಕೆ ಸ್ಪಂದಿಸಲಿಲ್ಲ ಎನ್ನುವ ದುಃಖವು ನನ್ನನ್ನು ಸುಡುತ್ತಿದೆ ಎಂದು ರಾಮನು ಲಕ್ಷ್ಮಣನಿಗೆ ಹೇಳಿದನು. ಸಮುದ್ರದಲ್ಲಿ ಇಳಿದು ಸಮುದ್ರದ ತಳದಲ್ಲಿ ಮಲಗುತ್ತೇನೆ, ಸುಡುವ ದುಃಖ, ಸೀತಾ ವಿರಹದ ದುಃಖದಿಂದ ಪಾರಾಗಬೇಕು ಎಂದರೆ ಸಮುದ್ರದ ಕೆಳಗೆ ಹೋಗಿ ಮಲಗಿದರೆ ಮಾತ್ರ ಈ ದಾವಾಗ್ನಿಗೆ ಶಮನ ಸಿಗಬಹುದು ಎಂದು ರಾಮನು ಹೇಳಿದನು. ಕೊನೆಗೆ ಆಶಾಭಾವದ ಮಾತನ್ನು ಚೆಂದದಲ್ಲಿ ರಾಮನು ಹೇಳಿದನು. ನಾನು ಮತ್ತು ಸೀತೆ ಒಂದೇ ಭೂಮಿಯಲ್ಲಿ ಇದ್ದೇವೆ ಎಂಬ ಕಾರಣಕ್ಕೆ ಬದುಕಬಹುದು, ಸೀತೆ ಯಾವ ಭೂಮಿಯಲ್ಲಿದ್ದಾಳೋ ಅದೇ ಭೂಮಿಯಲ್ಲಿ ನಾನು ಇದ್ದೇನೆ ಎನ್ನುವುದು ಸಾಲದಾ ಬದುಕಲು ? .. ತುಂಬಾ ಭಾವದ ಸ್ಪಂದ ಉಂಟುಮಾಡುವ ಮಾತುಗಳನ್ನು ಶ್ರೀರಾಮನು ಹೇಳಿದನು. ಮೇಲಿನ ಗದ್ದೆ(ಶೋಧಕ) ಯಲ್ಲಿ ನೀರಿದ್ದು, ಕೆಳಗಿನ ಗದ್ದೆ(ನಿರೋಧಕ) ಯಲ್ಲಿ ನೀರಿಲ್ಲದಿದ್ದರೂ ಮೇಲಿನ ಗದ್ದೆಯ ನೀರು ಕೆಳಗಿನ ಗದ್ದೆಯನ್ನು ತಂಪಾಗಿಡುತ್ತದೆ. ಹಾಗೆ ಸೀತೆ ಜೀವಂತವಾಗಿದ್ದಾಳೆ ಎನ್ನುವ ವಾರ್ತೆ ನನ್ನನ್ನು ಬದುಕಿಸಿ ಇಟ್ಟಿದೆ, ನನಗೆ ತಂಪನ್ನು ಕೊಟ್ಟಿದೆ, ಎಂದು ಕಾಣುವೆನೋ ಶತಪತ್ರ ನೇತ್ರೆಯನ್ನು ಎಂದು ರಾಮನು ಹೇಳಿದನು. ಶತ್ರುಗಳನ್ನು ಸಂಹರಿಸಿ ಸೀತೆಯೆಂಬ ಲಕ್ಷ್ಮಿಯನ್ನು ಎಂದು ಕಂಡೆನೋ..? ಎಂದು ಸೀತೆ ಬಂದು ನನ್ನನ್ನು ಸೇರುತ್ತಾಳೋ ಎಂದು ರಾಮನು ದುಃಖಿಸಿದನು. ನಾಥನಾಗಿ ನಾನಿರುವಂತೇ ರಾಕ್ಷಸರ ಮಧ್ಯದಲ್ಲಿ ಯಾರೂ ಕಾಪಾಡಲೂ ಇಲ್ಲದಂತೆ ಅನಾಥಳಾಗಿ ಕಷ್ಟಪಡುತ್ತಿದ್ದಾಳಲ್ಲ, ಜನಕ ರಾಜನ ಮಗಳು, ನನ್ನ ಪ್ರಿಯೆ, ದಶರಥ ರಾಜನ ಸೊಸೆ ಒಬ್ಬಳೇ ಕಷ್ಟಪಡುತ್ತಿದ್ದಾಳೆ ಎಂದು ರಾಮನು ದುಃಖಿಸಿದನು. ಶರತ್ ಕಾಲದ ಚಂದ್ರ ರೇಖೆಗಳು ಮಳೆಗಾಲದ ಕಾರ್ಮೋಡಗಳನ್ನು ಕೆಳಗೆ ತಳ್ಳಿ ಮೇಲೆದ್ದು ಬರುವಂತೆ ಸೀತೆ ಎಂದು ರಾಕ್ಷಸರನ್ನೆಲ್ಲ ಅತ್ತ ಇತ್ತ ತಳ್ಳಿ ಮೇಲೆದ್ದು ಬರುತ್ತಾಳೋ, ಸೀತೆ ಸಹಜವಾಗಿ ಕೃಶ, ಈಗ ಶೋಕ ಮತ್ತು ಉಪವಾಸ ಎಲ್ಲ ಸೇರಿ ಇನ್ನು ಸಾಧ್ಯವಿಲ್ಲ ಎನ್ನುವಷ್ಟು ಕೃಶವಾಗಿರುತ್ತಾಳೆ, ಇದು ಕಾಲ ವಿಪರ್ಯಯ, ಇದು ದೇಶ ವಿಪರ್ಯಯ, ರಾಕ್ಷಸೇಂದ್ರನಾದ ರಾವಣನ ಎದೆಯಲ್ಲಿ ಬಾಣಗಳನ್ನು ನೆಟ್ಟು ಎಂದು ಸೀತೆಯನ್ನು ಮರಳಿ ತರುವೇನೋ? ಎಂದು ಈ ಶೋಕದಿಂದ ಮುಕ್ತನಾಗುವೇನೋ? ಎಂದು ಸೀತೆ ಬಂದು ನನ್ನನ್ನು ಆಲಂಗಿಸಿ ಆನಂದದ ಕಣ್ಣೀರನ್ನು ಬಿಡುವಳೋ ಎಂದು ರಾಮನು ವ್ಯಥಿಸುತ್ತಿದ್ದಾಗ ಸಂಜೆಯಾಯಿತು. ಆಗ ಲಕ್ಷ್ಮಣನು ರಾಮನನ್ನು ಸಮಾಧಾನ ಮಾಡಿದನು. ರಾಮನು ಸಂಧ್ಯಾವಂದನೆಯಲ್ಲಿ ತೊಡಗಿದನು. ದಕ್ಷಿಣ ಸಮುದ್ರದ ತೀರದಲ್ಲಿ ಸಾಯಂ ಸಂಧ್ಯೆಗೆ ಶೋಕ ಆವರಿಸಿದರೂ ತನ್ನ ಕರ್ತವ್ಯವನ್ನು ಬಿಡದೆ ಸಂಧ್ಯಾವಂದನೆಗೆ ರಾಮನು ತೊಡಗಿದನು. ಇಲ್ಲಿ ರಾಮನು ಸಮಾಜಕ್ಕೆ ಎಂತಹ ಶೋಕದ ಮಧ್ಯೆಯೂ ಕರ್ತವ್ಯವನ್ನು ಬಿಡಬಾರದು ಎಂಬ ಸಂದೇಶವನ್ನು ನೀಡಿದ್ದಾನೆ.

ಮುಂದೇನಾಯಿತು ..? ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments