ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಸಂಗದಿಂದ ಗುಣಗಳೂ, ದೋಷಗಳೂ ನಮ್ಮಲ್ಲಿ‌ ಸಂಕ್ರಾಂತವಾಗ್ತದೆ. ಉತ್ತಮರ ಸಂಗ ಮಾಡಿದರೆ ಉತ್ತಮ ಗುಣಗಳು ನಮ್ಮಲ್ಲಿ ಬರ್ತವೆ. ಅಧಮರ ಸಂಗ ಮಾಡಿದರೆ ಅವರ ದುರ್ಗುಣಗಳು ನಮ್ಮಲ್ಲಿ ಬರ್ತವೆ.
‘ಸಗಣಿಯವನೊಡನೆ ಸರಸಕ್ಕಿಂತ ಗಂಧದವನ ಜೊತೆ ಗುದ್ದಾಟ ಲೇಸು’ ~ ಯಾಕೆಂದರೆ ಮೈ ಸುಗಂಧ-ಭರಿತ ಆಗ್ತದೆ ಅವನ ಜೊತೆ ಗುದ್ದಾಟವಾಡುವಾಗ, ಗಂಧದ ಪರಿಮಳ ಮೈಗೆ ಬರ್ತದೆ. ಹಾಗಾಗಿ ನಾವು ಯಾರ ಸಂಸರ್ಗ ಮಾಡ್ತೇವೆ, ಯಾವ ವಾತಾವರಣದಲ್ಲಿ ನಾವಿರ್ತೇವೆ ಅದು ನಮ್ಮ ಮೇಲೆ ತುಂಬಾ ಪರಿಣಾಮವನ್ನು ಬೀರ್ತದೆ ಎನ್ನುವುದು ಲೋಕದಲ್ಲಿ ಲಕ್ಷಾಂತರ, ಕೋಟ್ಯಂತರ ಬಾರಿ ಸಾಬೀತಾದ ನಿಯಮ. ಆದರೆ ವಿಭೀಷಣನಿಗೆ ಈ ನಿಯಮ ಅನ್ವಯವಾಗಲೇ ಇಲ್ಲ.

ವಿಭೀಷಣ ಲಂಕೆಯಲ್ಲಿ ಕಳೆದ ಕಾಲ ಬಹು ದೊಡ್ಡದು. ಎಲ್ಲಿಂದ ರಾವಣನು ಲಂಕೆಯಲ್ಲಿದ್ದನೋ ಅಲ್ಲಿಂದ ವಿಭೀಷಣ ಕೂಡ ಲಂಕೆಯಲ್ಲಿದ್ದಾನೆ. ಪರಮ ದುಷ್ಟನೊಬ್ಬನ ನೆರಳಿನಲ್ಲಿ ಇದ್ದಿದ್ದು! ದುಷ್ಟರದ್ದೇ ರಾಜ್ಯ – ಯಾವ ಕಡೆ ನೋಡಿದರೂ ದುಷ್ಟರೇ ಇರ್ತಕ್ಕಂತದ್ದು. ದುಷ್ಟಕಾರ್ಯಗಳು ನಿತ್ಯದ ಸಂಗತಿ. ಇಂಥಾ ಒಂದು‌ ವಿಷಭೂಮಿಯಲ್ಲಿ ಇದ್ದುಕೊಂಡು ಕೂಡ ವಿಭೀಷಣ ಕೆಟ್ಟು ಹೋಗಲಿಲ್ಲ.

ಪಾಪವನ್ನು ಮಾಡುವವನು ಮಾತ್ರ ಪಾಪಿಯಲ್ಲ, ಪಾಪಕ್ಕೆ ಯಾರು ಪ್ರೇರಣೆಯನ್ನು, ಅನುಮೋದನೆಯನ್ನು, ಸಹಕಾರವನ್ನು ಕೊಡ್ತಾನೆ ಇವರೆಲ್ಲ ಪಾಪಭಾಗಿಗಳು ಮಾತ್ರವಲ್ಲ ಪಾಪವನ್ನು ನೋಡನೋಡುತ್ತಾ ಸುಮ್ಮನಿರುವವನಿಗೂ ಪಾಪದಲ್ಲಿ ಪಾಲಿದೆ ಎಂಬುದಾಗಿ ಪರಂಪರೆ, ಶಾಸ್ತ್ರಗಳು ಸಾರಿವೆ‌. ವಿಭೀಷಣನು ಹಾಗಾಗಲೇ ಇಲ್ಲ! ಪ್ರತಿಯೊಂದು ಹಂತದಲ್ಲಿಯೂ ಕೂಡ ಕೆಡುಕನ್ನು ಖಂಡಿಸಿ ಬಾಳಿದ್ದಾನೆ. ಆಗುವ ಅನ್ಯಾಯಗಳನ್ನು ತಡೆಯಲಿಕ್ಕೆ ಶಕ್ತಿ ಮೀರಿ ಪ್ರಯತ್ನವನ್ನೂ ಪಟ್ಟಿದ್ದಾನೆ ವಿಭೀಷಣ. ಹಾಗಾಗಿ ಆ ಕೆಡುಕರೂ ಕೂಡ ವಿಭೀಷಣನ ಮೇಲೆ ಒಂದಷ್ಟು ಗೌರವವನ್ನು ಇಟ್ಟುಕೊಂಡಿದ್ದರು. ಅನೇಕರಿಗೆ ಅವನು ಸರಿ ಅಂತ ಅನ್ನಿಸಿದೆ. ಮತ್ತು, ಹೆಜ್ಜೆ ಹೆಜ್ಜೆಗೆ ತನ್ನ ತಪ್ಪುಗಳನ್ನು ಎತ್ತಿ ಆಡಿದರೂ ಕೂಡ ವಿಭೀಷಣನಿಗೆ ಕೈ ಮಾಡಲಿಕ್ಕೆ ರಾವಣನ ಅಂತಃಸ್ಥೈರ್ಯದ ಸಾಕ್ಷಿ ಒಪ್ಪಲಿಲ್ಲ. ಏನೋ‌ ತಡೀತಾ ಇತ್ತು ಅವನನ್ನು. ವಿಭೀಷಣ ನೇರವಾಗಿ ಹೇಳಬೇಕಾದ್ದನ್ನ ಹೇಳ್ತಾನೆ, ಖಂಡಿಸಬೇಕಾದ್ದನ್ನ ಖಂಡಿಸ್ತಾನೆ. ಆದರೆ ಅವನಿಗೆ ಪ್ರತಿಕ್ರಿಯೆ ಅಷ್ಟು ತೀಕ್ಷ್ಣವಾಗಿ ಬರೋದಿಲ್ಲ. ಅಂದ್ರೆ, ಸತ್ಯ ತನ್ನೊಟ್ಟಿಗೆ ಒಂದು ಬಲವನ್ನು ಒಟ್ಟುಕೊಂಡಿದೆ. ಸತ್ಯದ ಬಲ, ಸತ್ಯ ಕೊಡುವ ಆತ್ಮವಿಶ್ವಾಸ ತುಂಬಾ ದೊಡ್ಡದು. ಹಾಗಾಗಿಯೇ ರಾವಣನಂಥಾ ರಾವಣನಿಗೂ ಕೂಡ ವಿಭೀಷಣ ಮಾತನಾಡುವಾಗ ಸುಮ್ಮನೆ ಇರುವಂತೆ, ಉತ್ತರ ಕೊಡಲಿಕ್ಕೆ ಸಾಧ್ಯ ಆಗದೇ ಇದ್ದಂತೆ ಆಗ್ತಿತ್ತು. ಹಾಗಾಗಿಯೇ ಅವನೊಂದು ಅದ್ಭುತ.

ರಾವಣನ ಆ ಮಂತ್ರಾಲೋಚನೆಯ ಸಭೆಯಲ್ಲಿ ಎಷ್ಟು vote ಬಿದ್ದಿತ್ತು ವಿಭೀಷಣನಿಗೆ? ಎಲ್ಲ ರಾವಣನ ಪೈಕಿಯವರೇ ಇದ್ದಿದ್ದು, ರಾವಣನ ಪದಾಧಿಕಾರಿಗಳೇ ಇದ್ದಿದ್ದು. ಅವರಿಗೇನು ಸತ್ಯನಿಷ್ಠೆಯ ಗಂಧವೇ ಇಲ್ಲ. ರಾವಣ ಹೇಳಿದ್ದೇ ಸರಿ ಎನ್ನುವ ಒಂದು ವಾತಾವರಣ. ಆದರೆ ಅದರ ನಡುವೆ ವಿಭೀಷಣ ಹೇಗೆ ಪ್ರತಿಕ್ರಿಯಿಸ್ತಾನೆ ಎನ್ನುವಂಥದ್ದು ತುಂಬಾ ಮುಖ್ಯವಾಗಿರತಕ್ಕಂತದ್ದು. ನಮಗಿವನು ಪ್ರೇರಣೆ. ಜೀವನದಲ್ಲಿ ನಾವು ಎಲ್ಲಿರಬೇಕು..! ಈಗ ನಮಗೆ ಅತ್ಯಂತ ಆತ್ಮೀಯರೇ ಅಧರ್ಮಿಗಳಾಗಿದ್ರೆ, ನಮ್ಮ ಬಂಧುಗಳು ಅನ್ನುವ ಕಾರಣಕ್ಕೆ ನಾವು ಅವರ ಜೊತೆಗೆ ಇರಬೇಕಾ ಅಥವಾ ಧರ್ಮಕಾರ್ಯದ ಜೊತೆಯಿರಬೇಕಾ?

ವಿಭೀಷಣ ಬಂಧುತ್ವಕ್ಕೂ ಬೆಲೆ ಕೊಟ್ಟಿದ್ದಾನೆ. ಸಾಧ್ಯವಾದಷ್ಟೂ ಪ್ರಯತ್ನ ಮಾಡಿ ರಾವಣನನ್ನು ಸರಿ ಮಾಡಲಿಕ್ಕೆ, ಸಾಧ್ಯವೇ ಇಲ್ಲ ಅಂತ ಆದ್ರೆ ನಿಮ್ಮ ಜೊತೆಗೆ ನಾನಿಲ್ಲ. ಅಲ್ಲಿ ಸ್ಪಷ್ಟ! ನಾನೆಂದಿಗೂ ಧರ್ಮದ ಜೊತೆಯಲ್ಲಿ ಹೊರತು ಅಧರ್ಮದ ಜೊತೆಯಲ್ಲಲ್ಲ ಎಂಬುದರಲ್ಲಿ ತುಂಬಾ ಸ್ಪಷ್ಟತೆ ಇದೆ ವಿಭೀಷಣನಿಗೆ. ನೋಡಿ, ಸಭೆಯಲ್ಲಿ ನಡೆಯುತ್ತಿರುವುದೆಲ್ಲವನ್ನೂ ವಿಭೀಷಣನು ಅವಲೋಕನ ಮಾಡ್ತಾ ಇದ್ದಾನೆ. ರಾವಣನ ಅಬದ್ದ ಕಾಮಪ್ರಲಾಪವನ್ನೂ ಕೇಳಿದ್ದಾನೆ. ಕುಂಭಕರ್ಣನ ನ್ಯಾಯೋಚಿತವಾದ ಮಾತುಗಳನ್ನೂ ಕೇಳಿಸಿಕೊಂಡಿದ್ದಾನೆ. ಮತ್ತು ಕುಂಭಕರ್ಣನ ಗರ್ಜನೆಗಳನ್ನು ಕೂಡ. ಮಹಾಪಾರ್ಶ್ವದ ಕುತ್ಸಿತ ಸಲಹೆ, ರಾವಣನ ಪ್ರತಿಕ್ರಿಯೆ ಅದೆಲ್ಲವನ್ನೂ ಅವದರಿಸಿದ್ದಾನೆ ವಿಭೀಷಣ. ಇನ್ನು ಅವನಿಗೆ ತಡೀಲಿಕ್ಕೆ ಸಾಧ್ಯ ಆಗಲಿಲ್ಲ. ವಿಭೀಷಣ ಎದ್ದು ನಿಂತ.

ವಿಭೀಷಣ ಆಡಿದ ಮಾತು ಹಿತವಾದುದಾಗಿತ್ತು ಮತ್ತು ಅರ್ಥಪೂರ್ಣವಾದುದು ಆಗಿತ್ತು. ನೇರವಾಗಿ ರಾವಣನಿಗೆ ವಿಭೀಷಣ ಹೇಳಿದ್ದು, ‘ಅಣ್ಣಾ, ಗೊತ್ತಿಲ್ಲದೇ ನೀನು ಸುಖವೆಂದುಕೊಂಡು ಸರ್ಪದ ಬಳಿ ಸಾರಿದ್ದೀಯೆ. ಸೀತೆಯೆಂಬುವವಳು ರಾಜನಿಗೆ ರಾಣಿ, ನಿನ್ನ ಪಾಲಿಗೆ ಅವಳು ಸರ್ಪಿಣಿ ಹೊರತು ಎಂದೂ ನಿನ್ನ ರಮಣಿಯಾಗತಕ್ಕವಳಲ್ಲ. ನೀನು ಯಾವ ರೀತಿಯಲ್ಲಿ ಹೋಗಬೇಕೋ ಆ ರೀತಿಯಲ್ಲಿ ಆಕೆಯ ಬಳಿಗೆ ಹೋದರೆ ನಿನ್ನ ಪಾಲಿಗೆ ಆಕೆ ದೇವಿಯಾಗಬಹುದು. ಹೀಗೆ ಹೋದರೆ, ಆಕೆ ನಿನ್ನ ಪಾಲಿಗೆ ಸರ್ಪಿಣಿಯಾಗಿ ಪರಿಣಮಿಸ್ತಾಳೆ. ನೀನು ‘ನಗು’ ಅಂತ ಕಲ್ಪನೆ ಮಾಡಿಕೊಂಡಿದ್ದೀಯೆ. ಅವಳು ಯಾವತ್ತೂ ನಿನ್ನನ್ನು ನೋಡಿ ನಕ್ಕಿಲ್ಲ. ಆ ನಗು ಮಹಾಸರ್ಪದ ಕೋರೆ ದಾಡೆ ಅಂತ ಭಾವಿಸು ನೀನು. ಒಂದೊಂದನ್ನೂ ವರದಿ ಕೊಡ್ತಾ ಹೋಗ್ತಾನೆ. ಇವೆಲ್ಲವೂ ಸರ್ಪ ಸ್ವರೂಪ :
ಕುಂಡಲಿನಿ ಶಕ್ತಿ ಸೀತೆ ಅಂದ್ರೆ, ಆಕೆಯ ಆಲೋಚನೆಗಳು ನಿನಗೆ ವಿಷ ಇದ್ದಂತೆ, ಪಂಚಾಂಗುಲಿಗಳು ಐದು ಹೆಡೆಯಿದ್ದಂತೆ.. ಹೀಗೆಲ್ಲ ಹೇಳಿ‌ ಸೀತೆಯೆಂಬ ಆ‌ ಕುಂಡಲಿನಿ‌ ಶಕ್ತಿಯನ್ನು ನೀನು ಕೆಣಕ ಹೋಗಬೇಡ, ಇದು‌ ಮೃತ್ಯುವಿನಲ್ಲಿ‌ ಪರ್ಯವಸಾನವಾಗ್ತದೆ. ಅಣ್ಣಾ, ಪರ್ವತಕೂಟದ ಆಕೃತಿ ಉಳ್ಳಂತಹಾ ವಾನರರು ಲಂಕೆಯನ್ನು ಬಂದು‌ ಮುತ್ತುವ ಮೊದಲು, ತಮ್ಮ ಕೋರೆ ದಾಡಿಗಳಿಂದ, ತೀಕ್ಷ್ಣವಾದ ಉಗುರುಗಳಿಂದ ವಾನರರು, ರಾಕ್ಷಸರನ್ನು ಸೀಳಿ ಹಾಕುವ ಮೊದಲು ಕೊಟ್ಟು‌ ಬಿಡೋಣ ಸೀತೆಯನ್ನು ರಾಮನಿಗೆ. ರಾಮನಿಂದ ಪ್ರಹಿತವಾದ ಸಿಡಿಲಿನಂತಹಾ ಬಾಣಗಳು‌ ಲಂಕೆಯ ರಾಕ್ಷಸರುಗಳ‌ ತಲೆಯನ್ನು ಕೊಳ್ಳುವ ಮೊದಲು ಸೀತೆಯನ್ನು ಕೊಟ್ಟು ಬಿಡೋಣ ಅಣ್ಣಾ.. ಎಲ್ಲವೂ ಹೀಗೇ ನಡೆದಿದೆ ಮುಂದೆ.

ವಿಭೀಷಣ ಮುಂದುವರಿಸ್ತಾನೆ. ‘ಯಾರನ್ನು ವಧಿಸಬೇಕು ಎನ್ನುವ ಸಂಕಲ್ಪವನ್ನು ರಾಮನು ಮಾಡ್ತಾನೋ ಅವನನ್ನ‌ ಉಳಿಸಲಿಕ್ಕೆ ಕುಂಭಕರ್ಣನಿಗೂ ಸಾಧ್ಯ ಇಲ್ಲ, ಇಂದ್ರಜಿತುವಿಗೂ ಸಾಧ್ಯವಿಲ್ಲ, ಮಹಾಪಾರ್ಶ್ವ ಮಹೋದರರಿಗೂ ಸಾಧ್ಯ ಇಲ್ಲ, ಕುಂಭ ನಿಕುಂಭರಿಗೂ ಸಾಧ್ಯವಿಲ್ಲ, ಅತಿಕಾಯನಿಗೂ ಸಾಧ್ಯವಿಲ್ಲ’. ಯದ್ಯಪಿ ಕುಂಭಕರ್ಣ – ವಿಭೀಷಣರ ಮಧ್ಯೆ ತುಂಬ ಒಳ್ಳೆಯ ಸಂಬಂಧವಿತ್ತು. ಕುಂಭಕರ್ಣನಿಗೆ ಪ್ರೀತಿ, ಮಮತೆ ವಿಭೀಷಣನಲ್ಲಿತ್ತು; ಆದರೆ ನಿಷ್ಠೆ ಅಣ್ಣನಲ್ಲಿ! ಸತ್ಯ ಗೊತ್ತು, ಆದರೆ ರಾವಣನನ್ನು ಮೀರುವ ಶಕ್ತಿ ಅವನಲ್ಲಿಲ್ಲ. ಆದರೆ ವಿಭೀಷಣ ಅದನ್ನೂ ನೋಡಲಿಲ್ಲ.

ವಿಭೀಷಣ ಹೇಳ್ತಾನೆ, ‘ಇದೆಲ್ಲ ಬಿಡು, ಸೂರ್ಯನೋ, ಮರುದ್ಗಣಗಳೋ, ಇಂದ್ರನೋ ಅಥವಾ ಸಕಲ‌ ದೇವತೆಗಳೋ ನಿನಗೆ ರಕ್ಷಕರಾಗಿ ನಿಂತರೂ ಕೂಡ ನೀನು ರಾಮನಿಂದ ಬದುಕಿ ಉಳಿಯಲಾರೆ. ಬೇಕಾದರೆ ಗಗನಕ್ಕೆ ಹಾರು/ ಪಾತಾಳವನ್ನು ಸೇರು. ನೀನು ರಾಮನ ಕೈಯಲ್ಲಿ ಬದುಕಿ ಉಳಿಯಲಾರೆ. ನನ್ನ ದಾರಿಯಲ್ಲಿ ಬಾ. ಆಗ ಅವನು ನಿನಗೆ ರಾಮ. ನಿನ್ನ ದಾರಿಯಲ್ಲೇ ಹೋಗುವುದಾದರೆ ಅವನು ನಿನಗೆ ಯಮ. ಇಷ್ಟು ಹೇಳಿದ ವಿಭೀಷಣ. ಆಗ, ವಿಭೀಷಣನ‌ ಮಾತಿಗೆ ಉತ್ತರ ಕೊಡಲಿಕ್ಕೆ ಸೇನಾಪತಿ ಪ್ರಹಸ್ತ ನಿತ್ತುಕೊಂಡ. ರಾವಣ ಉರು ಹಾಕಿಸಿದ್ದನ್ನೆಲ್ಲ ಹೇಳಲಿಕ್ಕೆ ಸಾಧ್ಯವಾಗದೇ ಇದ್ದರೂ ಸ್ವಲ್ಪ‌ ಸೌಮ್ಯವಾಗಿ ಪ್ರಹಸ್ತ ಹೇಳ್ತಾನೆ, ‘ನಮಗೆಲ್ಲಿಯ ಭಯ? ದೇವತೆಗಳೋ? ದಾನವರೋ? ಯಕ್ಷ ಗಂಧರ್ವ ಮಹೋರಗರೋ? ಇಂಥವರಿಂದ ಕೂಡ ನಮಗೆ ಭಯವಿಲ್ಲ. ಪಕ್ಷಿಶ್ರೇಷ್ಠರಿಂದ ಕೂಡ ನಮಗೆ ಭಯವಿಲ್ಲ. ರಾಮನಿಂದ ನಮಗೇನು ಭಯ? ರಾಜಪುತ್ರ ಅವನು ಹೇಳಿಕೇಳಿ. ಅವನೇನು ದೇವತೆಯೂ‌ ಅಲ್ಲ ದಾನವನೂ ಅಲ್ಲ, ಯಕ್ಷ ಗಂಧರ್ವ ಮಹೋರಗನಲ್ಲ. ಅಥವಾ ಪಕ್ಷಿಶ್ರೇಷ್ಠನೂ ಕೂಡ ಅಲ್ಲ. ಅವನಿಂದ ಯಾವ ತರಹ ಭಯ ನಮಗೆ?’ ಅಂತ ಇಷ್ಟೇ ಹೆಸಳಿ ಕುಳಿತುಕೊಂಡನಂತೆ. ಅಂದ್ರೆ, ತೀವ್ರವಾದ ಖಂಡನೆ, ತೀಕ್ಷ್ಣವಾದ ಮಾತುಗಳನ್ನ ಆಡಲಿಕ್ಕೆ ಪ್ರಹಸ್ತನಿಂದ ಸಾಧ್ಯವಾಗಲಿಲ್ಲ. ಒಳಗಡೆ ಒಂದು ಕಡೆ ಗೊತ್ತಿದೆ ಪ್ರಹಸ್ತನಿಗೆ ವಿಭೀಷಣ ಹೇಳ್ತಾ ಇರೋದು ಸರಿ. ಜೀವಭಯ ಕೂಡ ಇದೆ. ಎಲ್ಲಿಯಾದರೂ ವಿಭೀಷಣ ಹೇಳಿದ್ದು ನಡೆದು ಹೋಗಿಬಿಟ್ಟರೆ ಬದುಕಿ ಉಳಿಯಬಹುದೋ?

ಆಗ, ತನ್ನ ಅಣ್ಣನಾದ ಕಾರಣ, ರಾವಣನ ಹಿತವನ್ನು ಬಯಸಿದ್ದ ವಿಭೀಷಣ ಉತ್ತರ ಕೊಡ್ತಾನೆ. ಅವನು ಧರ್ಮನಿಮಿಷ್ಠ, ಅರ್ಥನಿಮಿಷ್ಠ, ಕಾಮನಿಮಿಷ್ಠ ಬುದ್ಧಿ, ಹಿತೈಷಿ. ಹಿತೈಷಿಗಳನ್ನು ಅರಿಯುವ ಹೃದಯವಿದ್ದವರು ಬದುಕಿ ಬಾಳ್ತಾರೆ. ವಿಭೀಷಣ ಹೇಳಿದ, ‘ಹೇ ಪ್ರಹಸ್ತ, ರಾವಣನಾಗಲಿ, ಮಹೋದರನಾಗಲೀ, ನೀನಾಗಲಿ, ಕುಂಭಕರ್ಣನಾಗಲಿ, ರಾಮನ ಕುರಿತು ಏನೆಲ್ಲಾ ಹೇಳ್ತಾ ಇದ್ದೀರೋ, ಯಾವುದೂ ಸಾಧ್ಯವಲ್ಲ. ಇದು ಹೀಗೆ ನಡೆಯೋದಿಲ್ಲ ಮುಂದೆ. ತನ್ನನ್ನೂ ಕೂಡಿಕೊಂಡು ಹೇಳ್ತಾನೆ.

‘ನೀನು, ನಾನು, ಎಲ್ಲಾ ರಾಕ್ಷಸರು ಸೇರಿಯೂ ರಾಮನನ್ನು ಏನೂ ಮಾಡಲು ಸಾಧ್ಯವಿಲ್ಲ. ನಮಗೆ ಅವನು ಅವಧ್ಯ. ಯಾರಲ್ಲಿ ಧರ್ಮವು ನೆಲೆಸಿದೆಯೋ, ಯಾರು ಜಗತ್ತಿನಲ್ಲಿ ಧರ್ಮರಕ್ಷಣೆಗಾಗಿಯೇ ಇರುವ ಇಕ್ಷ್ವಾಕು ವಂಶದ ಕುಡಿಯೋ ಅಂತಹ ರಾಮ. ನಾವೆಲ್ಲಾ ಎಲ್ಲಿ? ದೇವತೆಗಳಲ್ಲಿ ಸತ್ವಗುಣವಿದೆ. ಅವರು ರಾಮನ ಮುಂದೆ ಬಂದು ನಿಂತರೆ ಅವರ ಬುದ್ಧಿಗೂ ಮಂಕು ಕವಿದೀತು. ಹೇಳೀ-ಕೇಳೀ ನಾವು ತಾಮಸರು. ನಮ್ಮ ಗತಿಯೇನು? ಇನ್ನೂ ನಿನ್ನ ಶರೀರವನ್ನು ರಾಮನ ತೀಕ್ಷ್ಣವಾದ ಬಾಣಗಳು ಭೇದಿಸಿಲ್ಲ ಹಾಗಾಗಿ ಹೀಗೆಲ್ಲಾ ಹೇಳುತ್ತಿದ್ದೀಯೆ. ವಿಷಕುಡಿದು ಅದು ವಿಷ ಹೌದೋ ಅಲ್ಲವೋ ಎಂದು ತೀರ್ಮಾನಮಾಡಬೇಕೇ? ಅವನ ಬಾಣಗಳು ನಿನ್ನ ಶರೀರವನ್ನು ಭೇದಿಸಿದ ಮೇಲೆ ನಿನ್ನ ಅಭಿಪ್ರಾಯ ಬದಲಾಗುತ್ತದೆ’. ಮುಂದೆ ಪ್ರಹಸ್ತ ರಾಮನನ್ನೂ ತಲುಪುವುದಿಲ್ಲ. ರಾಮನ ಸೇವಕನಾದ ನೀಲನಿಂದ ಹತನಾಗುತ್ತಾನೆ. ‘ರಾವಣನೂ, ಕುಂಭಕರ್ಣನೂ, ಯಾರೂ ರಾಮನನ್ನು ರಣದಲ್ಲಿ ಸಹಿಸಲು ಶಕ್ತರಲ್ಲ. ದೇವಾಂತಕ, ನರಾಂತಕ, ಅತಿಕಾಯ ಇವರು ಯಾರೂ ರಾಮನನ್ನು ಸಹಿಸಲು, ನಿನ್ನನ್ನು ರಕ್ಷಿಸಲು ಸಮರ್ಥರಲ್ಲ. ಜೀವವನ್ನು ಕೊಟ್ಟವನೇ ಜೀವವನ್ನು ತೆಗೆಯಲು ಬಂದರೆ ಉಳಿಸುವವರು ಯಾರು?’ ಕೋಪಬಂತು ವಿಭೀಷಣನಿಗೆ. ರಾವಣನ ಸಚಿವರನ್ನು ತೆಗಳುತ್ತಾನೆ.

‘ನೀವು ರಾವಣನಿಗೆ ಮಿತ್ರರೋ ಅಥವಾ ಶತ್ರುಗಳೋ, ನಿಜವಾಗಿ ಹೇಳಿ. ಹಿತೈಷಿಗಳಾದರೆ ರಾವಣನನ್ನು ನಿಯಂತ್ರಿಸಿ. ಇವನನ್ನು ವ್ಯಸನವು ಆವರಿಸಿದೆ’. ರಾಜರಿಗಿರುವ 7 ವ್ಯಸನಗಳನ್ನು ಹೇಳುತ್ತಾನೆ. ಮೊದಲನೆಯದು ವಾಗ್ದಂಡ(ಅಧಿಕಾರದಲ್ಲಿದ್ದಾಗ ಕ್ರೂರ ಮಾತುಗಳನ್ನಾಡುವುದು), ಪಾರುಷ್ಯ(ಕಠಿಣ ಶಿಕ್ಷೆಯನ್ನು ನೀಡುವುದು), ಸಂಪತ್ತಿನ ಅಪವ್ಯಯ ಮಾಡುವುದು, ಮದ್ಯಪಾನ, ಸ್ತ್ರೀ, ಬೇಟೆ, ದ್ಯೂತ. ವಿಭೀಷಣನು ಇಲ್ಲಿ ಸ್ತ್ರೀವ್ಯಸನವನ್ನು ಹೇಳುತ್ತಿದ್ದಾನೆ. ‘ನೀವೆಲ್ಲಾ ಅದಕ್ಕೇ ಗಾಳಿ ಹಾಕುತ್ತಿದ್ದೀರಿ. ಎಲ್ಲಿ ಬೇಡವೋ ಅಲ್ಲಿ ತೀಕ್ಷ್ಣನಾಗಿದ್ದಾನೆ ರಾವಣ. ಇವನ ಸ್ವಭಾವವೇ ದುಡುಕುವುದು. ಇವನನ್ನು ನೀವು ಪ್ರೋತ್ಸಾಹಿಸುತ್ತಿದ್ದೀರ. ಹಿತೈಷಿಗಳಾದರೆ ರಾವಣನನ್ನು ಈ ವ್ಯಸನದಿಂದ ಹೊರತನ್ನಿ. ಸಾವಿರ ಹೆಡೆಗಳ ಸರ್ಪ (ಅನಂತಭೋಗ-ತುದಿಯೇ ಇಲ್ಲದ ಶರೀರ) ರಾವಣನನ್ನು ಸುತ್ತಿಕೊಂಡಿದೆ’. ಆದಿಶೇಷನ ನೆನಪು ಮಾಡುತ್ತಿದ್ದಾನೆ ವಿಭೀಷಣ. ವಾಲ್ಮೀಕಿಗಳು ನೇರವಾಗಿ ಹೇಳುವುದಿಲ್ಲ. ಒಂದು ಧ್ವನಿಕೊಡುತ್ತಿದ್ದಾರೆ. ಎಲ್ಲೋ ಶ್ರೀವಿಷ್ಣುವಿಗೆ ಅಪಚಾರವಾಗುತ್ತಿದೆ. ಹಾಗಾಗಿ ಆದಿಶೇಷ ಕುಪಿತನಾಗಿದ್ದಾನೆ ಎಂದು. ‘ರಾವಣನನ್ನು ನುಂಗಲು ಬಾಯಿ ತೆರೆದಿದೆ. ಸಾಧ್ಯವಿದ್ದರೆ ಹಿಡಿದೆಳೆದು ಬದುಕಿಸಿಕೊಳ್ಳಿ ಅವನನ್ನು. ರಾಜನಾದವನನ್ನು ಮಂತ್ರಿಗಳು, ಸೇನಾಪತಿಗಳು ರಕ್ಷಿಸಬೇಕು. ಕೆಲವೊಮ್ಮೆ ರಾಜನಿಗೆ ಬುದ್ಧಿ ಕೆಡಬಹುದು. ಆಗ ನಿಗ್ರಹಿಸಿಯಾದರೂ ರಾಜನನ್ನು ಉಳಿಸಿಕೊಳ್ಳಬೇಕು. ಭಯಂಕರ ಭೂತ ಬಂದು ಹಿಡಿದಿದೆ ಇವನನ್ನು. ರಾಜನು ಮಾಡುವ ಕಾರ್ಯವಲ್ಲ ಇದು. ಹಾಗಾಗಿ ಕೂದಲು ಹಿಡಿದಾದರೂ ಕೂಡಾ ರಾಜನನ್ನು ಬದುಕಿಸಿಕೊಳ್ಳಬೇಕು’.

ರಾಮನನ್ನು ಸಮುದ್ರವೆಂದು ಕರೆಯುತ್ತಾನೆ ವಿಭೀಷಣ. ‘ಅಲ್ಲಿ ಹೋಗಿ ಬಿದ್ದು ಮುಳುಗುತ್ತಾನೆ ಇವನು. ರಾಮನು ಪಾತಾಳದ್ವಾರ. ಅಲ್ಲಿ ಬಿದ್ದು ಪತಿತನಾಗುತ್ತಾನೆ ಇವನು’. ಹೀಗೆಲ್ಲಾ ಹೇಳಿ ಕೊನೆಯ ಮಾತನ್ನು ಹೃದಯದಿಂದ ಹೇಳುತ್ತಾನೆ. ‘ನಾನು ಏನು ಹೇಳುತ್ತಿದ್ದೇನೋ ಅದು ಈ ಪುರಕ್ಕೆ ಒಳ್ಳೆಯದು. ಇಲ್ಲಿರುವ ರಾಕ್ಷಸರಿಗೆ ಒಳ್ಳೆಯದು. ರಾಜನಿಗೂ, ಅವರ ಹತ್ತಿರದವರಿಗೂ ಒಳ್ಳೆಯದು. ಮತ್ತೆ ಮತ್ತೆ ಹೇಳುತ್ತಿದ್ದೇನೆ. ಇದು ಲಂಕೆಗೆ, ರಾವಣನಿಗೆ, ಅವನ ಬಳಗಕ್ಕೆ ಒಳ್ಳೆಯದು. ರಾಮನಿಗೆ ಅವನ ಪತ್ನಿಯನ್ನು ಕೊಟ್ಟುಬಿಡೋಣ. ರಾಜನಿಗೆ ಸಚಿವನಾದವನು ಶತ್ರುವಿನ ಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು. ಯಾವ ಹೆಜ್ಜೆ ತೆಗೆದುಕೊಂಡರೆ ಸ್ಥಾನ, ಕ್ಷಯ, ವೃದ್ಧಿ ಆಗಬಹುದು ಎಂಬುದನ್ನು ತಿಳಿದಿರಬೇಕು. ಸ್ವಾಮಿಗೆ ಯಾವುದು ಹಿತವೋ, ಉಚಿತವೋ ಪ್ರಾಣ ಹೋದರೂ ಸರಿ, ಅದನ್ನೇ ಹೇಳಬೇಕು. ನಾನು ಆ ಧರ್ಮವನ್ನು ಪಾಲಿಸುತ್ತಿದ್ದೇನೆ’. ಹೀಗೆ ದೇವಗುರು ಬೃಹಸ್ಪತಿಗೆ ಸಮನಾದ ಮತಿಯುಳ್ಳ ವಿಭೀಷಣನು ಧರ್ಮವನ್ನು, ಸತ್ಯವನ್ನು ಹೇಳುತ್ತಿರಲಾಗಿ ಅವನನ್ನು ಮಾತಿನಲ್ಲಿ ಎದುರಿಸಲು ಇಂದ್ರಜಿತನು ಎದ್ದುನಿಂತನು.

ಇಂದ್ರಜಿತು ಯುವರಾಜ. ರಾವಣನಾದರೂ ಬೇಕು ಇವನು ಬೇಡ ಎನ್ನುವಂಥವನು ಅವನು. ರಾವಣನ ಮುಂದಿನ ಪೀಳಿಗೆ. ರಾವಣನಿಗೆ ಇವನನ್ನು ಕಂಡರೆ ಅಭಿಮಾನ. ಇಂದ್ರಜಿತು ಅವನ ಮಟ್ಟಕ್ಕೆ ತಕ್ಕಂತೆ ಮಾತನಾಡುತ್ತಾನೆ. ವಿಭೀಷಣನನ್ನು ಅಪಮಾನಿಸಿ ಮಾತನಾಡುವಂಥದ್ದು ಲಂಕೆಯಲ್ಲಿ ಈವರೆಗೆ ಇಲ್ಲ. ಮೊಟ್ಟಮೊದಲ ಬಾರಿಗೆ ಅದಾಯಿತು. ರಾವಣ-ಕುಂಭಕರ್ಣರಿಗೆ ಕಿರಿಯವನು ಎಂಬುದನ್ನು ಇಟ್ಟುಕೊಂಡು ಕನಿಷ್ಟ ನೀನು ಎಂಬ ಧ್ವನಿಯನ್ನು ಕೊಟ್ಟು, ‘ಏನು ನಿನ್ನದಿದು ಕನಿಷ್ಟ ವಾಕ್ಯ, ಅರ್ಥವಿಲ್ಲದ್ದು. ಹೆದರಿದ್ದೀಯೆ ನೀನು. ನಮ್ಮ ಕುಲದಲ್ಲಿ ಹುಟ್ಟದಿದ್ದರೂ ಈ ಮಾತನ್ನು ಆಡಬಾರದು. ನಮ್ಮ ಕುಲದಲ್ಲಿ ಹುಟ್ಟಿ ಇಂತಹ ಹೇಡಿಗಳ ಮಾತು!’ ಎಂದು ಹೇಳಿ ಒಂದು ಘೋಷಣೆ ಮಾಡಿದ. ‘ನಮ್ಮ ಕುಲದಲ್ಲಿ ಸತ್ವವೇ ಇಲ್ಲದವರು ಯಾರಾದರೂ ಇದ್ದರೆ ಅದು ಈ ವಿಭೀಷಣ. ವೀರತ್ವವೇ ಇಲ್ಲದವರಿದ್ದರೆ ಅದು ವಿಭೀಷಣ. ಪರಾಕ್ರಮಶೂನ್ಯರಿದ್ದರೆ ಅದು ವಿಭೀಷಣ. ನಮ್ಮ ಕುಲದಲ್ಲಿ ಶೌರ್ಯ, ಧೈರ್ಯ ಇಲ್ಲದವರಿದ್ದರೆ ಅದು ಈ ಕನಿಷ್ಟ’. ಪ್ರಹಸ್ತನೇ ಬೇಕು ಇವನಿಗಿಂತ. ಬಳಿಕ ವಿಭೀಷಣನ ಕಡೆ ತಿರುಗಿ ಹೇಳುತ್ತಾನೆ. ‘ಆ ಇಬ್ಬರು ಅರಸುಮಕ್ಕಳನ್ನು ಯುದ್ಧದಲ್ಲಿ ಕೊಲ್ಲಲು ಯಾರು ಬೇಕಂತೆ? ರಾವಣನೂ ಬೇಡ, ನಾನೂ ಬೇಡ, ಕುಂಭಕರ್ಣನೂ ಬೇಡ. ಯಾರಾದರೂ ಸಾಮಾನ್ಯರಲ್ಲಿ ಸಾಮಾನ್ಯ ರಾಕ್ಷಸ ಸಾಕು’ ಎಂದು ಹೇಳಿ ಆತ್ಮಪ್ರಶಂಸೆಯನ್ನು ಮಾಡಿಕೊಂಡ. ‘ನಾನ್ಯಾರು? ಮೂರುಲೋಕದ ಒಡೆಯ, ದೇವರಾಜ ಇಂದ್ರನನ್ನು ಸೆಳೆದುತಂದವನು. ಆ ಹೊತ್ತಿನಲ್ಲಿ ದೇವತೆಗಳು ದಿಕ್ಕುಗೆಟ್ಟು, ಭೀತರಾಗಿ ಓಡಿಹೋಗಿದ್ದರು. ಐರಾವತವನ್ನು ಹಿಡಿದೆಳೆದು ಭೂಮಿಗೆ ಬೀಳಿಸಿದಾಗ ಅದು ವಿಕಾರವಾಗಿ ಕೂಗಿಕೊಂಡಿತ್ತು. ಹಾಗೆ ಬಿದ್ದ ಐರಾವತದ ದಂತವನ್ನು ನಾನು ಕಿತ್ತು ಎಳೆದು, ಅದರಿಂದ ದೇವತೆಗಳನ್ನು ಬೆದರಿಸಿದೆ. ಅವರ ದರ್ಪಧ್ವಂಸಕ ನಾನು. ದೊಡ್ಡ ದೈತ್ಯರಿಗೂ ಶೋಕವನ್ನು ಕೊಟ್ಟವನು’.

ನನ್ನಿಂದ ಸಾಧ್ಯ ಇಲ್ಲ? ಅವರಿಬ್ಬರೂ ಪ್ರಾಕೃತ ಮನುಷ್ಯರು, ಸಾಮಾನ್ಯ ಮನುಷ್ಯರು ಅವರನ್ನು ಇದರಿಸಲಿಕ್ಕೆ ನಿಗ್ರಹಿಸಲಿಕ್ಕೆ ನನ್ನಂತಹ ಘನ ಪರಾಕ್ರಮಿಗೆ ಸಾಧ್ಯವಿಲ್ಲವಾ? ಎಂದು ಇಂದ್ರಜಿತ್ ಗುಡುಗಿದಾಗ ವಿಭೀಷಣನು ಅದನ್ನು ಸಹಿಸಲಿಲ್ಲ. ವಿಭೀಷಣನ ಬಗ್ಗೆ ವಾಲ್ಮೀಕಿಗಳು ವಿವರಿಸ್ತಾರೆ. ಶತ್ರುಧಾರಿಗಳಲ್ಲಿ ಶ್ರೇಷ್ಠ ವಿಭೀಷಣ. ಯುದ್ಧ ಗೊತ್ತಿಲ್ಲದವನಲ್ಲ ಮತ್ತು ಹೇಡಿ ಅಲ್ಲ. ಬೇರೆ ಬೇರೆ ಕಡೆ ವಿಭೀಷಣ ಅಂದ್ರೆ ಪುಳಿಚಾರು ಅಂತ ಉಲ್ಲೇಖ ಇದೆ. ಆದರೆ ವಿಭೀಷಣ ಯುದ್ಧ ಸಮರ್ಥ ಇದ್ದಾನೆ. ಅದನ್ನೇ ಇಲ್ಲಿ ಹೆಳಿದ್ದಾರೆ. ಶತ್ರುಧಾರಿಗಳಲ್ಲಿ ಶ್ರೇಷ್ಠನಾದ ವಿಭೀಷಣನು ಇಂದ್ರಜಿತ್ ನಿಗೆ ಅವನದ್ದೇ ಭಾಷೆಯಲ್ಲಿ ಹೇಳ್ತಾನೆ, “ಏನು ಗೊತ್ತು ನಿನಗೆ ಮಂತ್ರಾಲೋಚನೆ ಅಂದ್ರೆ! ನಿನ್ನೆ ಮೊನ್ನೆ ಹುಟ್ಟಿದವನು. ಅಪಕ್ವ ಬುದ್ಧಿ ನಿನಗೆ. ಇಲ್ಲದಿದ್ದರೆ ನೀನು ಇಂತಹ ಮಾತನಾಡುತ್ತಿದ್ದಿಲ್ಲ. ಮಂತ್ರಾಲೋಚನೆಯಲ್ಲಿ ಯಾವ ಮಾತುಗಳನ್ನು ಆಡಬೇಕು, ಯಾವ ಸಲಹೆ ಕೊಡಬೇಕು ಗೊತ್ತಾ ನಿನಗೆ? ಇಷ್ಟು ಹೊತ್ತು ಮಾತನಾಡಿದ್ದನ್ನು ಹಲುಬಿದೆ ಅಂತ ಅನ್ನಬಹುದು. ಈ ಹಲುಬಿದ್ದು ನಿನ್ನದೇ ನಾಶದವರೆಗೆ ಮುಟ್ಟಬಹುದು. ನೀನು ರಾವಣನ ಪುತ್ರನೋ ಶತ್ರುವೋ? ನನ್ನ ದೃಷ್ಟಿಯಿಂದ ಪುತ್ರನ ವೇಷದಲ್ಲಿ ಇರುವ ಶತ್ರು ನೀನು. ರಾವಣನನ್ನು ಯುದ್ಧಕ್ಕೇ ಪ್ರೋತ್ಸಾಹಿಸುವುದಾದರೇ ಇದು ರಾವಣನ ಮೃತ್ಯುವಿನಲ್ಲಿ ಪರ್ತಾವಸಾನವಾಗ್ತದೆ. ನೀನು ಅದಕ್ಕೆ ಹೊಣೆಗಾರನಾಗುತೀಯಾ. ಜನ್ಮಕೊಟ್ಟವನ ಮರಣಕ್ಕೆ ಕಾರಣವಾಗುತ್ತೀಯಾ. ನಿಜವಾಗಿ! ನೀನು ನಿನ್ನ ಮಾಡಿದ ಹಳೆಯ ಪಾಪಗಳನ್ನು ನೆನೆಸಿದರೇ ವಧೆಗೆ ಯೋಗ್ಯ ನೀನು. ಆದರೆ ನೀನು ಯುವರಾಜನಾಗಿ ಕುಳಿತ್ತಿದ್ದೀಯಾ. ನಿನ್ನನ್ನು ಯಾರು ಕರೆದುಕೊಂಡು ಬಂದಿದ್ದರೋ ಅವರಿಗೆ ಮೊದಲು ದಂಡನೆ ಕೊಡಬೇಕು. ಚಕ್ರವರ್ತಿಗೆ ಉಚಿತವಾದ ಸಲಹೆಗಳನ್ನು ಕೊಡುವಂತಹ ಸ್ಥಾನದಲ್ಲಿ ನಿನ್ನನ್ನು ಯಾರು ಕರೆ ತಂದರು? ಅವರಿಗೆ ದಂಡನೆ ಕೊಡಬೇಕು. ಮೂಢ, ಅಪ್ರಬುದ್ಧ, ತೀಕ್ಷ್ಣ ಸ್ವಭಾವ, ಅಲ್ಪಮತಿ, ಅವಿನಯ, ದುರಾತ್ಮನ್, ಮೂರ್ಖ, ದುರ್ಮತಿ, ಬಾಲ” ಎಂದು ಹೇಳಿ ಇಂದ್ರಜಿತ್ ನನ್ನು ಖಂಡಿಸುತ್ತಾನೆ ಮತ್ತು ದಂಡಿಸುತ್ತಾನೆ ವಿಭೀಷಣ.

ಮುಂದುವರಿಸಿ ಹೇಳ್ತಾನೆ,”ಬೇಡ ಬ್ರಹ್ಮದಂಡಕ್ಕೆ ಸಮಾನವಾಗಿರುವಂತಹ ರಾಮನ ಬಾಣಕ್ಕೆ ನಾವು ಎದುರಾಗುವುದು ಬೇಡ. ರಾಮನಿಗೆ ನಾವು ಸೀತೆಯನ್ನು ಒಪ್ಪಿಸೋಣ. ಸೀತೆಯನ್ನು ಮಾತ್ರವಲ್ಲ ಮಾಡಿದ ತಪ್ಪಿಗೆ ಧನವನ್ನು, ಆಭೂಷಣಗಳನ್ನು, ರತ್ನಗಳನ್ನು, ಉತ್ತಮೋತ್ತಮ ವಸ್ತ್ರಗಳನ್ನು, ಮಣೀಗಳನ್ನು ದಂಡವಾಗಿ ಕೊಡೋಣ. ನಿಶ್ಚಿಂತರಾಗಿ ಸುರಕ್ಷಿತರಾಗಿ ಲಂಕೆಯಲ್ಲಿ ವಾಸ ಮಾಡೋಣ. ಇದು ನನ್ನ ಅಭಿಪ್ರಾಯ. ಇಷ್ಟು ಮಾಡಿದರೆ ನಮ್ಮ ತಪ್ಪಿಗೆ ಪ್ರಾಯಶ್ಚಿತ ಆದೀತು. ಲಂಕೆಗೆ ಬಂದ ಆಪತ್ತು ತೊಲಗೀತು.” ವಿಭೀಷಣನಿಗೆ ಎದುರಾಗಿ ಆ ಸಭೆಯಲ್ಲಿ ಯಾರೂ ಮಾತನಾಡಲಿಲ್ಲ. ಆಗ ಬೇರೆ ದಾರಿಯೇ ಇಲ್ಲದೆ ರಾವಣನೇ ಕಠಿಣ ಮಾತನ್ನು ಮಾತನಾಡಿದ. ಯಾಕೆ ಮಾತನಾಡಿದ? ಅಂದ್ರೆ ಕಾಲವು, ಮೃತ್ಯುವನ್ನು ಕರೆದಿತ್ತು. ಇಲ್ಲದಿದ್ದರೆ ವಿಭೀಷಣ ಎಷ್ಟು ಚೆನ್ನಾಗಿ ವಾದಸರಣಿಯನ್ನು ಮಾಡಿದ್ದ, ಆದ್ರೆ ಅದಕ್ಕೆ ಉತ್ತರ ರಾವಣನ ಬಳಿ ಇರಲಿಲ್ಲ. ಆ ಸಭೆಯಲ್ಲಿ ಯಾರಲ್ಲೂ ಇರಲಿಲ್ಲ. ಧರ್ಮವೇ ಬದುಕಿಸಲು ಪರಿ ಪರಿಯಾಗಿ ಪ್ರಯತ್ನಿಸಿದರೂ, ವಿಭೀಷಣ ಧರ್ಮ ಮೂರ್ತಿ, ಆದರೆ ಅರ್ಥ ಮಾಡಿಕೊಳ್ಳುತ್ತಿಲ್ಲ ರಾವಣ. ಹೀಗಾಗಿ ರಾವಣನ ಕಣ್ಣಿನಲ್ಲಿ ಹಿತೈಷಿಯು ಪರಮ ಶತ್ರುವಾದ. against all odds ಅನ್ನುವ ಹಾಗೆ ವಿಭೀಷಣನ ವಿರುದ್ಧ ಎಲ್ಲರೂ ಇದ್ದಾರೆ. ಆದರೆ ವಿಭೀಷಣ ರಾವಣನನ್ನು, ಲಂಕೆಯನ್ನು ಬದುಕಿಸಲು ಪ್ರಯತ್ನ ಪಡುತ್ತಿದ್ದಾನೆ. ರಾವಣ ನೇರವಾಗಿ ನೀನೇ ಅಂತ ಹೇಳುವುದಿಲ್ಲ ಆದರೆ ಹೀಗೆ ಹೇಳ್ತಾನೆ, “ಸಿಟ್ಟುಗೊಂಡು ಸರ್ಪದ ಜೊತೆಗಾದರೂ ವಾಸಮಾಡಬಹುದು, ಆದರೆ ಹಿತೈಷಿಯಂತೆ ಜೊತೆಗಿರತ್ಕಂತಹ ಶತ್ರುಪಕ್ಷೀಯ, ಅವನ ಜೊತೆಗೆ ಇರಬಾರದು ಮತ್ತು ಅವನನ್ನು ಜೊತೆಗೆ ಇಟ್ಟುಕೊಳ್ಳಬಾರದು. ವಿಭೀಷಣ, ನನಗೆ ದಾಯಾದಿಗಳ ಸ್ವಭಾವ ಗೊತ್ತು. ಈ ಲಂಕೆ ಅಂತ ಅಲ್ಲ, ಭೂಲೋಕ ಅಂತ ಅಲ್ಲ. ಎಲ್ಲ ಕಡೆ ಇಡೀ ಲೋಕದಲ್ಲಿ ಕೂಡ ಈ ದಾಯಾದಿಗಳು ಹೀಗೆ. ಅವರಿಗೆ, ತಮ್ಮ ಅಣ್ಣನಿಗೋ ತಮ್ಮನಿಗೋ ವ್ಯಸನ ಬಂದರೆ, ಸಂಕಟ ಬಂದರೆ, ಸಂತೋಷ ಆಗ್ತದೆ. ಈ ದಾಯಾದಿಗಳಿಗೆ ಮನೆಯಲ್ಲಿ ಯಾರು ಪ್ರಧಾನನೋ, ಯಾರು ಸಾಧನೆ ಮಾಡಿರ್ತಾನೆ ಅವನ ಬಗ್ಗೆ, ಯಾರು ವಿದ್ಯಾವಂತನೋ ಅವನ ಬಗ್ಗೆ ಮತ್ತು ಮನೆಯಲ್ಲಿ ಯಾರು ಧರ್ಮಶೀಲನೋ ಅವನ ಬಗ್ಗೆ ಮತ್ಸರ ಇರ್ತದೆ. ಸಂದರ್ಭ ಬಂದಾಗ ಅವರ ತೇಜೋವಧೆ ಮಾಡ್ತಾರೆ, ಅವಮಾನ ಮಾಡ್ತಾರೆ. ದಾಯಾದಿಗಳು ಭಯಂಕರರು. ಜೀವನದಲ್ಲಿ ಒಟ್ಟಿಗೆ ಇರ್ತಾರೆ ಒಳ್ಳೆಯವರ ಹಾಗೆ ಇರ್ತಾರೆ ಆದರೆ ಅವರು ಏನು ವಿಚಾರ ಮಾಡ್ತಾರೆ ಅಂತ ಗೊತ್ತಾಗುವುದಿಲ್ಲ. ರಾಜನಿಗೆ ಕಷ್ಟ ಬಂದಾಗ ಇವರೆಲ್ಲರೂ ಒಳಗೊಳಗೆ ಚರ್ಚೆ ಮಾಡಿಕೊಂಡು ಖುಷಿ ಪಡ್ತಾರೆ.”

ರಾವಣ ಅವನದ್ದೇ ಕಲ್ಪನೆ ಮಾಡಿಕೊಂಡು ಏನೇನೋ ಹೇಳ್ತಾ ಇದ್ದಾನೆ. ಮತ್ತೆ ಪುನಃ, “ಆನೆಗಳ ಹಾಡನ್ನು ಕೇಳು ಅಂತ – ನಮಗೆ ಅಗ್ನಿ ಕಂಡರೆ ಭಯವಿಲ್ಲ, ನಮಗೆ ಶತ್ರು ಕಂಡರೆ ಭಯವಿಲ್ಲ, ನಮಗೆ ಪಾಶ ಕಂಡರೆ ಭಯವಿಲ್ಲ ಆದರೆ ನಮಗೆ ನಮ್ಮವರನ್ನು ಕಂಡ್ರೆ ಭಯ.” ಪಳಗಿದ ಆನೆಗಳು ಕಾಡಿನ ಆನೆಗಳನ್ನು ಪಳಗಿಸಲು ಸಹಾಯ ಮಾಡ್ತವೆ. ಹಿಡಿಯುವುದಕ್ಕೂ ಸಹಾಯ ಮಾಡ್ತವೆ. ಹೆಣ್ಣಾನೆಗಳನ್ನು ತಂದು ಗಂಡಾನೆಗಳನ್ನು ಹಿಡಿಯಲು ಸಹಾಯ ಮಾಡ್ತವೆ. ಅದನ್ನು ವಿಭೀಷಣನನ್ನು ಉದ್ದೇಶಿಸಿ, ನೇರವಾಗಿ ಅಲ್ಲ, ಮಾತನಾಡುತ್ತಾನೆ. ಹಾಗೆಯೇ ಮಾತನ್ನು ಮುಂದುವರಿಸ್ತಾನೆ, “ಗೋವುಗಳಲ್ಲಿ ಸಂಪತ್ತಿದೆ. ಇದು ಸತ್ಯ. ಲೋಕವೇ ಒಪ್ಪಿರುವಂತಹ ಮಾತಿದು. ಬ್ರಾಹ್ಮಣನಲ್ಲಿ ಧರ್ಮ ಇದೆ, ಇಂದ್ರಿಯ ನಿಗ್ರಹ ಇದೆ. ಇದೂ ಕೂಡ ಲೋಕ ಒಪ್ಪಿದ ಮಾತು. ಸ್ತ್ರೀಯರಲ್ಲಿ ಚಾಪಲ್ಯ ಇದೆ, ದಾಯಾದಿಗಳಿಂದ ಆಪತ್ತಿದೆ.” ಏಳು ಸಾವಿರ ಸ್ತ್ರೀಯರನ್ನು ತಂದು ಕೂಡಾಕಿದ್ದ ರಾವಣ, ಸ್ವತಃ ಸ್ತ್ರೀ ಚಪಲ. ಆ ವಾಕ್ಯವನ್ನು ಸೀತೆ ಸುಳ್ಳು ಅಂತ ಸಾಬೀತು ಮಾಡಿದ್ದಾಳೆ. ಮೊದಲಿನ ಒಂದೆರಡು ಮಾತು ಸರಿಯಾದದ್ದನ್ನು ಹೇಳಿ, ಇದನ್ನೂ ಹೇಳಿಬಿಟ್ಟ. ಆದರೂ ತಡೆದುಕೊಳ್ಳಲಿಕ್ಕೆ ಆಗಲಿಲ್ಲ ಕೊನಗೂ ವಿಭೀಷಣನ ಬಗ್ಗೆ ನೇರವಾಗಿ ಹೇಳಿಬಿಟ್ಟ, “ತಮ್ಮ, ಇಡೀ ಪ್ರಪಂಚ ನನ್ನನ್ನು ಗೌರವಿಸುತ್ತದೆ, ಇದು ನಿನಗೆ ಸಮಾಧಾನವಾಗಲಿಲ್ಲ ಅಲ್ವಾ? ಇದು ನಿನಗೆ ಸಹ್ಯವಾಗಲಿಲ್ಲ ಅಲ್ವಾ? ನಿನಗೆ ಇಷ್ಟವಾಗಲಿಲ್ಲ ಅಲ್ವಾ? ನಾನು ದೊಡ್ಡ ಕುಲದಲ್ಲಿ ಹುಟ್ಟಿ ದೊಡ್ಡ ಐಶ್ವರ್ಯವನ್ನು ದೊಡ್ಡ ಅಧಿಕಾರವನ್ನು ಸಾಧನೆ ಮಾಡಿದೆ, ಶತ್ರುಗಳ ತಲೆ ಮೆಟ್ಟಿ ನಿಂತೆ, ನಿನಗೆ ಇದು ಸಹ್ಯವಾಗಲಿಲ್ಲ ಅಲ್ವಾ? ಹಾಗಾಗಿ ಇದೆಲ್ಲ ಹೇಳಿದೆ ನೀನು. ಈ ತಾವರೆಯ ಎಲೆಯ ಮೇಲೆ ನೀರಿನ ಬಿಂದುಗಳು ಬಿದ್ದರೆ ತಾವರೆಯ ಎಲೆಗೆ ಅಂಟಿಕೊಳ್ತದಾ? ಇಲ್ಲ. ಅನಾರ್ಯರ ಪ್ರೀತಿ ಅಂದ್ರೆ ಹೀಗೆ. ಒಟ್ಟಿಗೇ ಇರ್ತಾರೆ ಆದರೆ ನಿಜವಾಗಿ ಲಗ್ನವಾಗಿರುವುದಿಲ್ಲ ಅವರು.” ನಿಜವಾಗಿ ಹೌದು. ಲಂಕೆಯಲ್ಲಿ ನಡೆದ ಪಾಪಗಳನ್ನು ಅಂಟಿಸಿಕೊಳ್ಳಲಿಲ್ಲ ವಿಭೀಷಣ. “ಹಾಗೇ ದುಂಬಿಗಳು ಹೂವನ್ನು ಸೇರಿ ತೃಪ್ತಿಯಾಗಿ ಜೇನನ್ನು ಕುಡಿಯುತ್ತವೆ, ಆಮೇಲೆ ಅದರ ಮೇಲೆ ಇರ್ತಾವಾ? ಇಲ್ಲ ಹಾರಿ ಹೋಗ್ತವೆ. ಲಾಭ ಇರುವಷ್ಟು ಹೊತ್ತು ಇರುವುದು ಅವು, ಆಮೇಲೆ ಹೋಗ್ತವೆ ಎಂದೆಲ್ಲ ಹೇಳಿದ ರಾವಣ.

ಹೀಗೆಲ್ಲ ಅಲ್ಲ ವಿಭೀಷಣ ಅಂದರೆ, ಆದರೆ ರಾವಣ ಅಲ್ಲಿಗೆ ದೂಡುತ್ತಿದ್ದಾನೆ. ತನ್ನ ಮಾತಿನಿಂದಲೇ ವಿಭೀಷಣ ಊರು ಬಿಟ್ಟು ಹೋಗುವ ಹಾಗೆ ಮಾಡುತ್ತಾನೆ ರಾವಣ. ಆನೆಗಳು ಸ್ವಚ್ಛವಾಗಿ ಸ್ನಾನ ಮಾಡುತ್ತವೆ, ಆಮೇಲೆ ಧೂಳನ್ನ ತೆಗೆದು ತಲೆ ಮೇಲೆ ಹಾಕಿಕೊಳ್ಳುತ್ತದೆ. ವಿಭೀಷಣನ ಪ್ರೀತಿ ಎಂದರೆ ಹೀಗೆ. ಒಂದಿಷ್ಟು ದಿನ ತುಂಬಾ ಪ್ರೀತಿ ಮಾಡಿ ಆಮೇಲೆ ಬಿಡುವುದು. ಇಂತಹ ಅನಾರ್ಯರು ಮಾತಾಡುತ್ತಾ ಇರುತ್ತಾರೆ, ಆದರೆ ಪ್ರೀತಿಯಿಂದ ಅಲ್ಲ. ನೀನಲ್ಲದೇ ಬೇರೆ ಯಾರಾದರೂ ಈ ಮಾತನ್ನಾಡಿದ್ದರೆ ಅವರು ಇರುತ್ತಿರಲಿಲ್ಲ. ನಿನಗೆ ಧಿಕ್ಕಾರ. ನೀನು ನಮ್ಮ ಕುಲಕ್ಕೆ ಸಲ್ಲುವವನಲ್ಲ. ಎಂದನು ರಾವಣ. ಆದರೆ ನಿಜವಾಗಿ ಪುಲಸ್ತ್ಯರ, ವಿಶ್ರವಸರ ಕುಲಕ್ಕೆ ಸಲ್ಲುವವನು ಇವನೊಬ್ಬನೇ. ಇನ್ನೆಲ್ಲ ಕುಲವೈರಿಗಳು.

ರಾವಣನ ಕೆಡು ಮಾತನ್ನು, ಕೇಳಲಾಗದ ಮಾತನ್ನು ಕೇಳಿದ ನ್ಯಾಯವಾದಿ ವಿಭೀಷಣನು ಮೇಲೆದ್ದನು! ಲಂಕೆಯ ನೆಲವನ್ನೂ ಬಿಟ್ಟು ಆಕಾಶದಲ್ಲಿ ಎದ್ದು ನಿಂತನಂತೆ. ಅವನ ಜೊತೆಯಲ್ಲಿ, ಅನಿಲ, ಅನಲ, ಹರ, ಸಂಪಾತಿ ಎಂಬ ನಾಲ್ಕು ರಾಕ್ಷಸರು ಅವನ ಜೊತೆಯಲ್ಲಿ ಎದ್ದರು. ಲಂಕೆಯ, ರಾವಣನ ಋಣ ತೀರಿತು ಎನ್ನುವ ಹಾಗೆ ಎದ್ದರು. ಇಲ್ಲಿ ವಾಲ್ಮೀಕಿಗಳು ವಿಭೀಷಣನನ್ನು ನ್ಯಾಯವಾದಿ ಎಂದು ಕರೆದಿದ್ದಾರೆ. ಯಾವ ಗೌರವದ ಅಪೇಕ್ಷೆಯೂ ಇಲ್ಲ. ವಿಭೀಷಣನ ಈ ನಡೆಯಿಂದ ಅವನ ತಲೆ ಹೋಗಬಹುದು. ಸಚಿವ ಸ್ಥಾನ, ಮಡದಿ ಮಕ್ಕಳು ಇವೆಲ್ಲದರ ಆಲೋಚನೆ ಮಾಡದೇ, ನ್ಯಾಯದ ಪರ ನಿಂತಿದ್ದ ಈ ನ್ಯಾಯವಾದಿ ವಿಭೀಷಣ. ಆತ್ಮಪ್ರೇರಣೆಯಿಂದ ಎದ್ದ ವಿಭೀಷಣ ತೀರ್ಮಾನಿಸಿದ, ಸಾಧ್ಯವಾದರೆ ಅಧರ್ಮವನ್ನು ಧರ್ಮಕ್ಕೆ ತಂದು ನಿಲ್ಲಿಸುವೆ. ಸಾಧ್ಯವೇ ಇಲ್ಲದಿದ್ದರೆ, ಧರ್ಮದ ಜೊತೆಗೆ ನಿಲ್ಲುತ್ತೇನೆ. ಅಣ್ಣ, ಕುಲಬಂಧು ಎಲ್ಲ ಸರಿ. ಆದರೆ ಯಾವ ಬಂಧವೂ ಧರ್ಮಕ್ಕಿಂತ ದೊಡ್ಡದಲ್ಲ. ಆ ನಾಲ್ವರೂ ಎಂದೂ ವಿಭೀಷಣನನ್ನು ಬಿಟ್ಟಿಲ್ಲ. ಮತ್ತೆ ವಿಭೀಷಣ ರಾವಣನಿಗೆ ಹೇಳಿದ, ದೊಡ್ಡಣ್ಣ ತಂದೆಗೆ ಸಮಾನ. ಆದರೆ ನೀನು ಅಣ್ಣನಾಗಲಿಲ್ಲ. ಯಾವಾಗ ನೀನು ಧರ್ಮಪಥವನ್ನು ಬಿಟ್ಟೆಯೋ, ನನ್ನ ನಿನ್ನ ಬಾಂಧವ್ಯ ಉಳಿಲಿಲ್ಲ. ಪತಿತರ ಜೊತೆ ವ್ಯವಹಾರ ಮಾಡಬಾರದು. ನನ್ನ ಬಗ್ಗೆ ನೀನು ನೇರವಾಗಿ / ಪರೋಕ್ಷವಾಗಿ ಹೇಳಿದ ಮಾತನ್ನು ಸಹಿಸಲಾರೆ. ಹಿತಕರವಾದ ಮಾತನ್ನೇ ಆಡಿದ್ದೆ ನಾನು, ಆದರೆ ನೀನು ಕಾಲಕ್ಕೆ ವಶವಾದೆ. ಅಪ್ರಿಯವಾದ ಸತ್ಯವನ್ನು ಹೇಳುವವರು ವಿರಳ. ಅಂಥವರು ಜೀವನದಲ್ಲಿ ಬೇಕು. ನಾನು ಇಲ್ಲಿದ್ದು, ಈ ಅನಾಹುತ ಆಗೋದು ಬೇಡ. ಮುಂದೆ ಲಂಕೆ ಹೊತ್ತಿ ಉರಿಯುತ್ತದೆ. ಬೆಂಕಿ ಬಿದ್ದ ಮನೆಯಿಂದ ನಾನು ಹೊರಬರಲೇಬೇಕು.

ವಿಭೀಷಣ ಎಂದರೆ ಧರ್ಮ. ಎಲ್ಲಿಯವರೆಗೆ ವಿಭೀಷಣ ಲಂಕೆಯಲ್ಲಿರ್ತಾನೋ, ಅಲ್ಲಿವರೆಗೆ ಲಂಕೆ ಸರ್ವನಾಶ ಆಗಲಿಕ್ಕೆ ಸಾಧ್ಯವಿಲ್ಲ. ಧರ್ಮ & ಧರ್ಮಪುರುಷರು ಯಾವ ದೇಶದಲ್ಲಿ ಇರುತ್ತಾರೋ, ಆ ದೇಶ ಸರ್ವನಾಶವಾಗುವುದಿಲ್ಲ. ರಾವಣನಿಗೆ ವಿಭೀಷಣ ಹೇಳಿದನು, “ಆಯಿತು, ನೀನು ನನಗೆ ಹಿರಿಯ, ನನ್ನವನು, ನಾನಾಡಿದ ಮಾತು ಸರಿಗಾಣದೇ ಇದ್ದರೆ ಬಿಡು. ನನ್ನನ್ನು ಕ್ಷಮಿಸು. ನಿನ್ನ ಆತ್ಮರಕ್ಷಣೆ ಮಾಡಿಕೋ, ಸಾಧ್ಯವಾದರೆ ನಿನ್ನವರನ್ನೂ, ಲಂಕಾನಗರಿಯನ್ನು ರಕ್ಷಿಸು. ನಿನಗೆ ಒಳ್ಳೆಯದಾಗಲಿ, ಹೊರಟುಹೋಗ್ತೇನೆ ನಾನು. ನನ್ನನ್ನು ಬೀಳ್ಕೊಟ್ಟು, ಹೊರಹಾಕಿ ಸುಖವಾಗಿರು” ಎಂದನು. ಇದ್ಯಾವುದೂ ಆಗಿಲ್ಲ. ವಿಭೀಷಣ ಹೋದಮೇಲೆ ಒಂದೇ ಒಂದು ಕ್ಷಣವೂ ಸುಖವಾಗಿರಲಿಲ್ಲ. ಹಿತೈಷಿಯಾಗಿ ಎಷ್ಟೇ ಪ್ರಯತ್ನ ಪಟ್ಟರೂ ನೀನೊಪ್ಪುತ್ತಿಲ್ಲ. ಅದು ನಿನ್ನ ತಪ್ಪಲ್ಲ. ಕಾಲಕೊರಳಿಗೆ ಪಾಶ ಹಾಕಿದರೆ, ನೀನಲ್ಲ ಯಾರೇ ಆದರೂ ಹೀಗೆ ಮಾಡ್ತಾರೆ ಎಂದು ಹೇಳಿ ವಿಭೀಷಣ ಹೊರಟ. ಯಾರೂ ನಿಲ್ಲು ಎನ್ನಲಿಲ್ಲ. ಹೆಚ್ಚಿನವರಿಗೆ ಒಪ್ಪಿಗೆಯಿಲ್ಲ, ಆದರೆ ತಡೆಯಲಾಗಲಿಲ್ಲ. ಲಂಕೆಯ ನಾಶಕ್ಕೆ ಇದೂ ಕಾರಣ. ಯಾವ ರಕ್ಷೆಯೂ ಇಲ್ಲದಿದ್ದರೂ ಧರ್ಮ ಕಾಯುತ್ತದೆ. ನಿಶ್ಶಬ್ದವಾಗಿ ಲಂಕೆಯನ್ನು ಕಾಪಾಡಿದ್ದ ವಿಭೀಷಣ. ವಿಭೀಷಣ ತನ್ನ ಮನೆಗೂ ಹೋಗದೇ, ರಾಮನಿದ್ದಲ್ಲಿ ಹೊರಟನು. ಇನ್ನೇನಿದ್ದರೂ ರಾಮನೇ… ತನ್ನಂತರಂಗದಿಂದ ಬದುಕಬೇಕೆಂದು ಶರಣಾಗತಿಲ್ಲಿ ರಾಮನೆಡೆಗೆ ಹೋಗ್ತಾನೆ ವಿಭೀಷಣ.

ಏಕಭಾವದಲ್ಲಿ ರಾಮನನ್ನೇ ನಂಬಿ ಹೊರಟನು ವಿಭೀಷಣ. ಅವನ ನಾಲ್ವರು ಸಹಚರರು ಅನಿಲ, ಅನಲ, ಹರ, ಸಂಪಾತಿ ಅವನನ್ನು ಹಿಂಬಾಲಿಸಿದರು. ಮುಂದೆ ರಾಮ ಹೇಗೆ ಸ್ವೀಕರಿಸಿದ ವಿಭೀಷಣನನ್ನು .. ಏನು ಕಷ್ಟ ಬಂತು. ಕಪಿಗಳು ಹೇಗೆ ಪ್ರತಿಕ್ರಯಿಸಿದರು..? ರಾಜನೀತಿಯನ್ನು ಬಲ್ಲವ ಸುಗ್ರೀವ ಹೇಗೆ ಸ್ವೀಕರಿಸಿದ. ಸುಲಭವಾಗಿ ಒಪ್ಪುವುದಿಲ್ಲ… ರಾಮನ ಸಂಸತ್ತಿನಲ್ಲಿ ವಿಭೀಷಣನ ಪರೀಕ್ಷೆ ಹೇಗೆ ನಡೆಯಿತು ಮುಂದೆ ಅವಲೋಕನ ಮಾಡೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments