ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಲಂಕಾ ದ್ವೀಪದ ತ್ರಿಕೂಟ ಪರ್ವತದ ಪಕ್ಕದ ಸುವೇಲ ಪರ್ವತವನ್ನು ಏರುವ ಮನಸ್ಸು ರಾಮನಿಗೆ. ಅಂದೇ ಸಮುದ್ರಗಳನ್ನು ದಾಟಿ ರಾಮನು ಸಮುದ್ರದ ದಕ್ಷಿಣ ತೀರಕ್ಕೆ, ಲಂಕೆಯ ಪರಿಸರಕ್ಕೆ ಬಂದಿದ್ದಾನೆ. ಶುಕ-ಸಾರಣರ ಆಗಮನ ಮತ್ತು ಬಂಧನ, ಮೋಚನ; ಶಾರ್ದೂಲ ಮತ್ತು ಬಳಗದ ಆಗಮನ, ಬಂಧನ, ಮೋಚನ ಇವುಗಳು ನಡೆದು ಹೋಗಿದೆ. ಅಲ್ಲಿಂದ ಮುಂದಕ್ಕೆ ಸಾಯಂಕಾಲವು ಸಮೀಪಿಸ್ತಿರುವಂತೆ ಸುವೇಲ ಪರ್ವತವನ್ನು ಏರುವ ಮನಸ್ಸನ್ನು ರಾಮನು ಮಾಡ್ತಾನೆ. ಯಾಕೆ? ಅಂದ್ರೆ, ಕಾಲಿಡುವ ಮೊದಲು ಕಣ್ಣಿಡು, ಕಣ್ಣಿಟ್ಟಲ್ಲಿ ಕಾಲಿಡು!! ತ್ರಿಕೂಟ ಪರ್ವತವನ್ನು, ಲಂಕೆಯನ್ನು ಸುವೇಲ ಪರ್ವತದಿಂದ ವೀಕ್ಷಿಸುವ ಸಲುವಾಗಿ ರಾಮನು ಸುವೇಲ ಪರ್ವತವನ್ನು ಏರ್ತಾ ಇದ್ದಾನೆ. ಸುಗ್ರೀವನಿಗೆ; ಜೊತೆಯಲ್ಲಿ ಧರ್ಮಜ್ಞ, ಅನುರಕ್ತ, ಮಂತ್ರಜ್ಞ, ವಿಧಿಜ್ಞ ಅಂತಹಾ ವಿಭೀಷಣನಿಗೆ ಈ ಮಾತನ್ನು ಹೇಳ್ತಾನೆ, ‘ನೂರಾರು ಧಾತುಗಳಿಂದ ಅಲಂಕೃತವಾಗಿರ್ತಕ್ಕಂತ ಸುವೇಲ ಪರ್ವತವನ್ನು ಏರೋಣ, ರಾತ್ರಿ ಅಲ್ಲಿಯೇ ಉಳಿಯೋಣ. ಏಕೆ ಅಂದ್ರೆ, ಲಂಕೆಯನ್ನು ವೀಕ್ಷಿಸೋಣ. ಲಂಕೆಯಂದ್ರೆ ಏನು? ಆ ರಕ್ಷಸ್ಸಿನ ಮನೆ! ತನ್ನ ಸಾವಿಗಾಗಿ ನನ್ನ ಪತ್ನಿಯನ್ನು ಅಪಹರಿಸಿದ ಆ ದುರಾತ್ಮನ ಮನೆಯದು. ಯಾವನಿಗೆ ಧರ್ಮವು ಗೊತ್ತಿಲ್ಲವೋ, ಯಾವನಿಗೆ ನಡತೆ ಗೊತ್ತಿಲ್ಲವೋ, ಯಾವನಿಗೆ ತನ್ನ ಕುಲದ ಪರಿಕಲ್ಪನೆ ಇಲ್ಲವೋ ಅಥವಾ ಸೀತೆಯ ಕುಲದ ಪರಿಕಲ್ಪನೆ ಇಲ್ಲವೋ, ಯಾರ ಬುದ್ಧಿ ನೀಚ ಬುದ್ಧಿ ಎಂದು ಖಂಡಿತವಾಗಿಯೂ ಹೇಳಬಹುದೋ, ಯಾವನಿಂದ ಈ ಒಂದು ನಿಂದ್ಯ ಕರ್ಮ ನಡೆಯಲ್ಪಟ್ಟಿದೆಯೋ, ಅವನ ಮನೆ. ಅವನಲ್ಲಿ ನನಗೆ ರೋಷವಿದೆ. ಅವನೊಬ್ಬನ ಅಪರಾಧದಿಂದ ತುಂಬ ದೊಡ್ಡ ಸಂಖ್ಯೆಯ ರಾಕ್ಷಸರು ಸಾಯ್ತಾರೆ. ಪಾಪವನ್ನು ಕಾಲಪಾಶ ಕೊರಳಿಗೆ ಬಿದ್ದಂಥವನು ಒಬ್ಬನೇ ಮಾಡ್ತಾನೆ. ಆದರೆ ಅವನ ಕಾರಣದಿಂದ ಅವನ ಕುಲವೇ ನಾಶವಾಗ್ತದೆ. ಅವನ ಜಾತಿ, ಬಂಧು-ಬಳಗ ನಾಶವಾಗ್ತದೆ, ಎಲ್ಲ ನಾಶವಾಗ್ತಾರೆ’. ಕೇಡುಗನ ಒಡನಾಡಿದರೆ ಕೇಡು ತಪ್ಪದು.

ಹೀಗೆ ಸುಗ್ರೀವ, ವಿಭೀಷಣರಲ್ಲಿ ಮಾತನಾಡುತ್ತಲೇ ರಾವಣನ ಕುರಿತು ಕ್ರೋಧವಶನಾಗಿ ಸುವೇಲ ಪರ್ವತವನ್ನು ಏರ್ತಾನೆ. ಆ ಸುವೇಲ ಪರ್ವತದ ತಪ್ಪಲು ವಿಚಿತ್ರವಾಗಿದೆ, ಆಶ್ಚರ್ಯಕರವಾಗಿದೆ. ಹಿಂದಿನಿಂದ ಲಕ್ಷ್ಮಣ, ಜಾಗೃತನಾಗಿದ್ದಾನೆ, ಏಕಾಗ್ರನಾಗಿದ್ದಾನೆ. ಕೈಯಲ್ಲಿ ಬಿಲ್ಲು-ಬಾಣಗಳಿವೆ, ಎತ್ತಿ ಹಿಡಿದಿದ್ದಾನೆ. ದೊಡ್ಡ, ಜೀವಮಾನದ ಪರಾಕ್ರಮಕ್ಕೆ‌ ಮನಸ್ಸು ಮಾಡಿದ್ದಾನೆ. ರಾಮನೇರುವಾಗ ಹಿಂದಿನಿಂದ‌ ಲಕ್ಷ್ಮಣನಲ್ಲದೆ ಸುಗ್ರೀವ, ವಿಭೀಷಣ ಮತ್ತು ಅವನ ನಾಲ್ವರು ಸಚಿವರು ಜೊತೆಗೇ ಪರ್ವತವನ್ನು ಏರ್ತಾ ಇದ್ದಾರೆ. ಹನುಮಂತ ಒಟ್ಟಿಗೇ ಬಂದ, ಅಂಗದ ಬಿಡಲಿಲ್ಲ. ನೀಲ‌ ಬಂದ ಮೈಂದ-ದ್ವಿವಿದರು ಬಂದರು, ಗಜ, ಗವಾಕ್ಷ, ಗವಯ, ಶರಭ, ಗಂಧಮಾದನರು ಬಂದರು. ಪನಸ, ಕುಮುದರು ಬಂದರು. ಹರ, ಯೂಥಪತಿ, ರಂಭ, ಜಾಂಬವಂತ, ಸುಷೇಣರು, ಋಷಭರು ಬಂದರು, ದುರ್ಮುಖ ಮತ್ತು ಶತಬಲಿಗಳು ಕೂಡ ಬಂದರು.

ಹೀಗೆ, ರಾಮನ ಸೇನಾನಾಯಕರು ಅನೇಕರು ರಾಮನನ್ನು ಹಿಂಬಾಲಿಸಿ ಬರ್ತಾ ಇದ್ದಾರೆ. ಅವರಿಗೂ ನೋಡ್ಬೇಕಾಗಿದೆ ಲಂಕೆಯನ್ನು ಮತ್ತು ರಾಮನ ಜೊತೆಗಿರಬೇಕಾಗಿದೆ. ಇವರು ಮಾತ್ರವೇ ಅಲ್ಲದೆ, ಇನ್ನೂ ಅನೇಕ ವಾನರರು, ಶೀಘ್ರಗಾಮಿಗಳಾಗಿ ರಾಮನನ್ನು ಹಿಂಬಾಲಿಸ್ತಾ ಇದ್ದಾರೆ. ಅವರ ವೇಗ ವಾಯುವೇಗ. ಪರ್ವತಾರೋಹಣ, ಅವರೋಹಣ ಅವರಿಗೆ ಹೊಸದೇ ಅಲ್ಲ. ಬಹಳ ಹೊತ್ತಾಗಲಿಲ್ಲ, ಬೇಗ ಬೇಗ ಪರ್ವತವನ್ನು ಏರ್ತಾ ಇದ್ದಾರೆ. ಮಾರ್ಗ ಮಧ್ಯದಲ್ಲಿಯೇ, ಸಾಕಷ್ಟು ಎತ್ತರ ಹೋದಾಗ ಸ್ಫುಟವಾಗಿ ಲಂಕೆಯನ್ನು ಕಂಡರು. ಆಕಾಶದಲ್ಲಿ ಓಲಾಡುತ್ತಿರುವಂತೆ, ಅಷ್ಟು ಎತ್ತರ ಇದೆ ಲಂಕೆ. ತುಂಬಾ ಶುಭವಾದ ನಗರಿ ಅಂದ್ರೆ ವಿಶ್ವಕರ್ಮ ಕಟ್ಟಿದ್ದು. ಭವ್ಯವಾದ ದ್ವಾರಗಳು, ಪ್ರಾಕಾರಗಳಿಂದ ಪರಿಶೋಧಿತವಾದ ಲಂಕೆ, ಇದೆಲ್ಲ ಚೆನ್ನಾಗಿದೆ. ಒಳಗೆ ತುಂಬಿರುವುದೆಲ್ಲ ಕರಿ ಕರಿ ರಾಕ್ಷಸರು. ಅಂತಹ ಲಂಕೆಯನ್ನು ವಾನರ ಯೂಥಪತಿಗಳು ವೀಕ್ಷಿಸಿದರು. ಲಂಕೆಯ ಕೋಟೆಗಳು ಕೆಲವೆಡೆ ಚಿನ್ನದ್ದು, ಕೆಲವೆಡೆ ಬೆಳ್ಳಿಯದ್ದು. ಆದರೆ ಈಗ ಆ ಕೋಟೆಯು ಕರಿಬಣ್ಣದಲ್ಲಿ ಕಾಣ್ತಾ ಇದೆ. ಯಾಕಂದ್ರೆ, ರಾಕ್ಷಸರ ಹಿಂಡು ಕೋಟೆಯ ಮೇಲೆ ಹತ್ತಿ ನಿಂತಿದೆ! ಕೋಟೆ ಎಷ್ಟಿದೆಯೋ, ಅಷ್ಟಕ್ಕೂ ರಾಕ್ಷಸರಿದ್ದಾರೆ ಕೋಟೆಯ ಮೇಲೆ, ಕೋಟೆಯ ಕೆಳಗೆ. ಕರಿ ಬಣ್ಣದ ಇನ್ನೊಂದು ಪ್ರಾಕಾರವು ನಿರ್ಮಿತವಾದಂತೆ ಕಾಣುತ್ತಿತ್ತಲ್ಲಿ ಎಂಬುದಾಗಿ ವಾಲ್ಮೀಕಿಗಳು ವರ್ಣನೆ ಮಾಡಿದ್ದಾರೆ.

ರಾಕ್ಷಸರನ್ನು ಕಂಡಕೂಡಲೇ ಉತ್ಸಾಹ ಬಂತಂತೆ ವಾನರರಿಗೆ. ಇಲ್ಲಿಂದಲೇ ಯುದ್ಧಾಕಾಂಕ್ಷಿಗಳಾಗಿ ರಾಕ್ಷಸರನ್ನು ಕುರಿತು ಬಗೆಬಗೆಯ ಶಬ್ದಗಳನ್ನು ಮಾಡಿದರಂತೆ. ಅದು ಬಹಳ ಜೋರಾಯ್ತು; ಯಾಕೆಂದ್ರೆ, ರಾಮನು ನೋಡ್ತಾ ಇದ್ದ! ಅಷ್ಟು ಹೊತ್ತಿಗೆ ಸೂರ್ಯಾಸ್ತವಾಯಿತು, ಸಂಧ್ಯಾಕಾಲ ಬಂತು, ಕೆಂಪಾಯಿತು ಆಕಾಶ. ಪೂರ್ಣಚಂದ್ರನ ರಾತ್ರಿ ಅವತ್ತು. ಆ ರಾತ್ರಿ ಸಮಸ್ತ ವಾನರ ಸೇನೆಯ ಮಹಾಧಿನಾಯಕನಾದ ಪ್ರಭು ಶ್ರೀರಾಮಚಂದ್ರನು ವಿಭೀಷಣನಿಂದ ಸತ್ಕೃತನಾಗಿ ಲಕ್ಷ್ಮಣನ ಜೊತೆಯಲ್ಲಿ ಮತ್ತು ಕಪಿನಾಯಕರ ಸಮುದಾಯದೊಂದಿಗೆ ಸುವೇಲ ಪರ್ವತದ ಬೆನ್ನಿನಲ್ಲಿ ಸುಖವಾಗಿ ವಾಸ ಮಾಡಿದ. ಅಲ್ಲಿ ರಾವಣನಿಗೆ ತುಂಬ ಆತಂಕ, ಭಯ ಎಲ್ಲ ಇದೆ. ಆದರೆ ರಾಮನಿಗೆ ನಿಶ್ಚಿಂತೆ. ಒಂದು, ರಾಮನೇನು ತಪ್ಪು ಮಾಡ್ತಾ ಇಲ್ಲ. ಮಾಡ್ಲೇ ಬೇಕಾದ್ದನ್ನು ಮಾಡ್ತಾ ಇದ್ದಾನೆ, ಧರ್ಮದ ದಾರಿಯಲ್ಲಿದ್ದಾನೆ. ಇನ್ನೊಂದು, ಅವನಿಗೆ ಅವನ ಬಲದಲ್ಲಿ ಪೂರ್ಣ ವಿಶ್ವಾಸವಿದೆ.

ಬೆಳಗಾಯಿತು, ಆ ಬೆಳಗಿನ ಹೊತ್ತಿನಲ್ಲಿ ವಾನರ ನಾಯಕರು ಲಂಕೆಯ ಪರಿಸರದಲ್ಲಿ ರಮಣೀಯವಾದ ವನ-ಉಪವನಗಳನ್ನು ಕಂಡರು. ಸಮವಾಗಿದೆ, ಸೌಮ್ಯವಾಗಿದೆ, ರಮ್ಯವಾಗಿದೆ, ವಿಶಾಲವಾಗಿದೆ, ದೀರ್ಘವಾಗಿದೆ ಆ ವನಗಳು. ಅದನ್ನು ನೋಡಿ ವಾನರರಿಗೆ ವಿಸ್ಮಯವಾಗಿದೆ. ಅಲ್ಲಿ ಚಿತ್ರ-ವಿಚಿತ್ರವಾದ ವೃಕ್ಷಗಳಿದ್ದವು, ಹೂ ಬಿಟ್ಟ ಲತೆಗಳು ನಾನಾ ಪ್ರಕಾರದ್ದು ಇದ್ದವು, ಹುಲ್ಲುಗಾವಲುಗಳು ಇದ್ದವು, ಹೂ-ಹಣ್ಣುಗಳು ಇವರಿಗಾಕರ್ಷಣೆ, ಅವಿದ್ದವು. ಇಂದ್ರನ ನಂದನವನದಂತೆ ಶೋಭಿಸ್ತಾ ಇತ್ತು. ಬಗೆ ಬಗೆಯ ಪಕ್ಷಿಗಳು, ಕಮಲಗಳು, ಜೇನು, ಗೆಡ್ಡೆಗೆಣಸು, ಇವರಿಗೆ ಬೇಕಾದ್ದೆಲ್ಲ‌ ಬೇಕಾದಷ್ಟು ಇದೆ. ಹಾಗಾಗಿ ಇವರೆಲ್ಲ ಭಾರೀ ಸಂತೋಷದಲ್ಲಿ ಉಪವನ ಪ್ರವೇಶ ಮಾಡಿದರಂತೆ. ಪ್ರವೇಶ ಮಾಡಿದ ಕೂಡಲೇ ಭವ್ಯ ಸ್ವಾಗತವಾಯಿತು ವಾನರರಿಗೆ. ಏನಪ್ಪಾ? ಅಂದ್ರೆ, ಮೂಗಿಗೆ ತುಂಬ ಸುಖವಾದ ಪರಿಮಳದ ಗಾಳಿ ಬೀಸಿತು. ಇನ್ನು ಉಳಿದ ಕೆಲವು ಯೂಥಪರಿಗೆ ಇದು ಸಾಕಾಗಲಿಲ್ಲ, ಲಂಕೆಯ ಸುತ್ತಮುತ್ತ ಇರೋದೇ ಬೇಕು ಅಂತ. ಹಾಗಾಗಿ ಸುಗ್ರೀವನಿಂದ ಅಪ್ಪಣೆ ಪಡ್ಕೊಂಡು ಲಂಕೆಯ ಪರಿಸರಕ್ಕೆ ಹೋಗ್ತಾರೆ. ಕಂದಕದ ಹೊರಗೇ ಇರ್ತಕ್ಕಂತ ವನ-ಉಪವನಗಳು. ಹೋಗಿ ಪಕ್ಷಿಗಳನ್ನ ಬೆದರಿಸಿದ್ರು, ಪ್ರಾಣಿಗಳನ್ನ ಓಡಿಸಿದರು ಅಲ್ಲಿಂದ, ತಮ್ಮ ಗರ್ಜನೆಯಿಂದ ಲಂಕೆಯನ್ನೇ ನಡುಗಿಸಿದ್ರು. ಅದಕ್ಕೇ ಹೋಗಿದ್ದು! ಅವರ ಪಾದಾಘಾತಕ್ಕೆ ಎದ್ದ ಧೂಳು ಮುಗಿಲು ಮುಟ್ಟಿತು. ಇನ್ನು ಕರಡಿಗಳು, ಸಿಂಹಗಳು, ಕಾಡುಕೋಣಗಳು, ಹಂದಿಗಳು, ಆನೆಗಳು, ಜಿಂಕೆಗಳೋ ಬೇರೆ ಜಾಗ ನೋಡಿಕೊಳ್ಳೋದೇ! ಆ ಕಾಡನ್ನು ಬಿಟ್ಟು ದಿಕ್ಕು ದಿಕ್ಕುಗಳಿಗೆ ಓಡಿ ಹೋದವು. ಅಂತೂ ಲಂಕೆಯ ಹೊರಗಿನ ಮೃಗಗಳು ಓಡಿವೆ. ಮುಂದಿನ ಸರದಿ ಒಳಗಿನ ಮೃಗಗಳದ್ದು.

ಇತ್ತ ರಾಮ ಮತ್ತು ಅವನ ಸಹಚರರು ಲಂಕೆಯನ್ನು ಗಮನಿಸ್ತಾ ಇದ್ದಾರೆ. ಮೊದಲು ತ್ರಿಕೂಟ ಪರ್ವತದ ಶೃಂಗವನ್ನು ಗಮನಿಸಿದ್ರು. ತ್ರಿಕೂಟ ಪರ್ವತದ ಒಂದು ಶೃಂಗ ಮುಗಿಲು ಮುಟ್ಟುವಂತೆ ಎತ್ತರವಾಗಿತ್ತು. ಸುತ್ತ ತುಂಬ ಸುಂದರವಾಗಿತ್ತು. ಹೂವುಗಳು ಮತ್ತು ಬೆಳ್ಳಿಯ ಬಣ್ಣ ಶೋಭಿಸ್ತಾ ಇತ್ತು. ಅದರ ಮೇಲೆ ನೂರು ಯೋಜನ ವಿಸ್ತೀರ್ಣದ ಒಂದು ಪರ್ವತ ಶಿಖರ. ಮತ್ತು, ಆ ಹತ್ತುವ ಜಾಗ ನುಣುಪಾಗಿದೆ. ಹಕ್ಕಿಗಳಿಗೂ ಹೋಗಲು ಕಷ್ಟ ಅಲ್ಲಿಗೆ. ಇನ್ನು ಮನುಷ್ಯರೋ ಅಥವಾ ಬೇರೆ ಪ್ರಾಣಿಗಳಿಗೆ ಮನಸ್ಸಿಂದ ಹತ್ತೋದು ಕೂಡ ಕಷ್ಟ ಅದನ್ನ ಎನ್ನುವಂತೆ ಇತ್ತು. ಆ ಶಿಖರದ ಮೇಲೆ ರಾವಣ ಪಾಲಿತವಾದ ಲಂಕೆ. ನೂರು ಯೋಜನ ನಗರ, ಮೂವತ್ತು ಯೋಜನ ಉದ್ದ. ಆಯತವಾಗಿತ್ತು ಲಂಕೆ. ಎತ್ತರೆತ್ತರದ, ಬಿಳಿಬಿಳಿಯ ಗೋಪುರಗಳು, ಬೆಳ್ಳಿಯ-ಬಂಗಾರದ ಕೋಟೆ, ಏಳೆಂಟು ಉಪ್ಪರಿಗೆಯ ಮನೆಗಳು. ಬಹಳ ಸುಂದರವಾಗಿತ್ತಂತೆ ಅಲ್ಲಿಂದ ಕಂಡ ಲಂಕೆಯ ಒಂದು ದೃಶ್ಯ. ಅದರ ಮಧ್ಯೆ ಸಾವಿರ ಸ್ತಂಭಗಳ ಒಂದು ಪ್ರಾಸಾದ. ಅದು ಅರಮನೆ. ಕೈಲಾಸ ಶಿಖರದಂತೆ ಇದೆ. ಆಕಾಶಕ್ಕೇ ಚಾಚಿ ನಿಂತಿದೆ. ಅದು ರಾವಣನ ಮನೆ. ಇಡೀ ಲಂಕಾ ನಗರಕ್ಕೆ ಅಲಂಕಾರವಾಗಿದೆ ಅದು. ನೂರು (ತುಂಬಾ) ರಾಕ್ಷಸರು ನಿತ್ಯ ಕಾಯ್ತಾರೆ ಆ ಮನೆಯನ್ನು.

ಅಂತಹ ರಾಕ್ಷಸೇಂದ್ರನ ಭವನವನ್ನು ಕೂಡಾ ಕಾಣುತ್ತಿದ್ದಾರೆ. ಮನೋಜ್ಞವಾಗಿದೆ, ಹಸಿರಾಗಿದೆ, ಪರ್ವತಗಳ ಅಲಂಕಾರವಿದೆ ಲಂಕೆಯ ಸುತ್ತ, ಬೇರೆಬೇರೆ ಬಗೆಯ ಧಾತುಗಳಿದ್ದಾವೆ, ಉದ್ಯಾನಗಳಿವೆ, ಪಕ್ಷಿ-ಮೃಗಗಳಿದ್ದಾವೆ, ಹೂವುಗಳು, ಇದರ ಮಧ್ಯದಲ್ಲಿ ರಾಕ್ಷಸರು. ಸಮೃದ್ಧವಾದ ಲಂಕೆ ರಾವಣನ ನಗರಿ. ವಾನರರೊಡಗೂಡಿ ಲಂಕೆಯನ್ನು ರಾಮನು ಚೆನ್ನಾಗಿ ನೋಡಿದನು. ದೊಡ್ಡದೊಡ್ಡ ಭವನಗಳು, ವಿಚಿತ್ರವಾದ ನಗರಿ, ರಾಮನಿಗೇ ಆಶ್ಚರ್ಯವಾಯಿತು ಅಬ್ಬಾ! ಹೇಗಿದೆ ನಗರಿ ಎಂದು. ತುಂಬಾ ರತ್ನಗಳು ಇರುವ, ಭವನಗಳ ಮಾಲೆಯಿರುವ, ಮಹಾಯಂತ್ರಗಳಿರುವ ನಗರಿಯನ್ನು ರಾಮನು ತನ್ನ ಬಲಸಹಿತನಾಗಿ ವೀಕ್ಷಿಸಿದನು. ಬಳಿಕ ಮತ್ತೂ ಮುಂದಕ್ಕೆ ನಡೆದುಕೊಂಡು ಹೋದ ರಾಮ. ಸುವೇಲ ಪರ್ವತದ ನೆತ್ತಿಯನ್ನು ಏರುತ್ತಾನೆ. ಪರ್ವತದ ತುಟ್ಟತುದಿಯು 2 ಯೋಜನದಷ್ಟು ಅಗಲವಿದೆ. ರಾಮನ ಜೊತೆಯಲ್ಲಿ ಸುಗ್ರೀವನೂ ಬಂದ. ಇನ್ನೂ ಕೆಲವರು ಜೊತೆಯಲ್ಲಿ ಬಂದರು. ಅಲ್ಲಿ ನಿಂತು ಲಂಕಾನಗರಿಯನ್ನು ನೋಡುತ್ತಾ ಸ್ವಲ್ಪ ಹೊತ್ತು ಅಲ್ಲೇ ಇದ್ದ. ಹತ್ತೂ ದಿಕ್ಕನ್ನು ಅವಲೋಕನ ಮಾಡಿದ ರಾಮ. ಯುದ್ಧಕ್ಕೆ ಮುನ್ನ ಆ ಪ್ರದೇಶದ ಪರಿಚಯವನ್ನು ಪಡೆದುಕೊಳ್ಳುತ್ತಿದ್ದಾನೆ. ಹಾಗೇ ಲಂಕೆಯನ್ನು ವಿಶೇಷವಾಗಿ ವೀಕ್ಷಣೆ ಮಾಡುತ್ತಾನೆ. ವಿಶ್ವಕರ್ಮ ಕಟ್ಟಿದ ನಗರಿ. ಆಗ ಒಂದು ವಿಶೇಷ ಸನ್ನಿವೇಷ ಒದಗಿ ಬಂದಿತು.

ಲಂಕೆಯ ಗೋಪುರದ ಶೃಂಗದಲ್ಲಿ ರಾವಣ ನಿಂತಿದ್ದಾನೆ. ಅವನು ಕಪಿಸೇನೆಯನ್ನು ನೋಡಲು ಅಲ್ಲಿ ಹೋಗಿರುವುದು. ಅವನಿಗೆ ಚಾಮರ ಬೀಸುತ್ತಿದ್ದಾರೆ. ಛತ್ರ ನೆತ್ತಿಯ ಮೇಲಿದೆ. ಮೈಗೆಲ್ಲಾ ರಕ್ತಚಂದನವನ್ನು ಹಚ್ಚಿಕೊಂಡಿದ್ದಾನೆ. ಸಂಜೆಯ ಹೊತ್ತಿನ ಮೋಡದಂತೆ ಕಾಣುತಿದ್ದ (ಕಪ್ಪು ಮೋಡಕ್ಕೆ ಕೆಂಪು ಸೇರಿರುತ್ತದೆ). ರತ್ನಾಭರಣಗಳಿಂದ ಭೂಷಿತನಾಗಿದ್ದಾನೆ. ಚಿನ್ನದ ಬಣ್ಣದ ಬಟ್ಟೆಯನ್ನು ಉಟ್ಟಿದ್ದಾನೆ. ಅವನ ಎದೆಯಲ್ಲಿ ಐರಾವತದ ದಂತಗಳ ಗುರುತು ಇದೆ. ಅಂತಹ ರಾವಣ. ರಾವಣನನ್ನು ರಾಮ ಮತ್ತು ಕಪಿನಾಯಕರು ವೀಕ್ಷಿಸುತ್ತಿದ್ದಾರೆ. ಇದಕ್ಕಿದ್ದಂತೆ ಸುಗ್ರೀವನು ಎದ್ದು ಅಲ್ಲಿಗೆ ಹಾರಿದನು. ಸುವೇಲ ಪರ್ವತದಿಂದ ತ್ರಿಕೂಟ ಪರ್ವತದಲ್ಲಿರುವ ಲಂಕೆಯ ಗೋಪುರದ ತಲೆಗೆ ಹಾರಿದ. ವಾನರಯೂತಪತಿಗಳೆಲ್ಲಾ ಗಾಬರಿಯಿಂದ ನೋಡುತ್ತಿದ್ದಾರೆ. ರಾಮನೂ ನೋಡಿದ. ಅವನೇಕೆ ಹಾರಿದನೆಂದರೆ ಅವನಿಗೆ ರಾವಣನನ್ನು ಕಂಡಾಗ ಇವನೇ ಪಾಪಿ ಎಂದು ಭಯಂಕರ ಸಿಟ್ಟು ಬಂದಿತ್ತು. ಕ್ರೋಧಕೊಟ್ಟ ವೇಗದಿಂದ ಹಾರಿದ. ವಿಮರ್ಶೆ ಮಾಡಲಿಲ್ಲ ಮತ್ತು ಸಹಜವಾಗಿ ಬಲವಿರುವುದರಿಂದ ಹಾರಿ ರಾವಣನ ಎದುರು ನಿಂತನು. ನಿರ್ಭಯನಾಗಿ ರಾವಣನನ್ನು ನೋಡಿದನು. ಸುಗ್ರೀವನು ತನ್ನವರ ಮಧ್ಯದಿಂದ ಶತ್ರುಗಳ ಮಧ್ಯೆ ಹೋಗಿದ್ದಾನೆ. ರಾವಣನನ್ನು ಹುಲ್ಲಿನಂತೆ ಭಾವಿಸಿ ಈ ಮಾತುಗಳನ್ನಾಡಿದ. ‘ಲೋಕನಾಥನಾದ ರಾಮನ ಸಖ ನಾನು ಅಲ್ಲ, ದಾಸ ನಾನು.’ ಅಗ್ನಿಸಾಕ್ಷಿಯಾದ ಸಖ್ಯ ಅವರದ್ದು. ಇವನ ಭಾವವೇನೆಂದರೆ ತಾನು ದಾಸ ಎಂಬುದು. ‘ರಾಮನ ತೇಜಸ್ಸೇನೆಂಬುದು ಗೊತ್ತಾ ನಿನಗೆ? ನಿನ್ನನ್ನು ಸುಮ್ಮನೆ ಬಿಡಲಾರೆ’ ಎಂಬುದಾಗಿ ಹೇಳಿ ಹೋಗಿ ಅವನ ಕಿರೀಟಕ್ಕೆ ಕೈಹಾಕಿದ. ಇದ್ದಕ್ಕಿದ್ದಂತೆ ರಾವಣನ ಮೇಲೆ ಹಾರಿ ಅವನ ಕಿರೀಟವನ್ನು ಕಿತ್ತು ನೆಲಕ್ಕೆ ಎಸೆದ. ನೀನೆಂತಹ ರಾಜ, ಅದಕ್ಕೆ ಅನರ್ಹ ನೀನು ಎನ್ನುವ ಭಾವ ಅದು.

ರಾವಣನಿಗೆ ಸಿಟ್ಟು ಬಂದಿತು. ಸುಗ್ರೀವನನ್ನು ಕುರಿತು ‘ನನ್ನ ಮುಂದೆ ಹೀನಗ್ರೀವ ನೀನು’ ಎಂದು ಹೇಳಿ ಸುಗ್ರೀವನನ್ನು ಎತ್ತಿ ನೆಲಕ್ಕೆ ಎಸೆದ ರಾವಣ. ಚೆಂಡಿನ ಹಾಗೆ ಎದ್ದ ಸುಗ್ರೀವ ರಾವಣನನ್ನು ಎತ್ತಿ ನೆಲಕ್ಕೆ ಕುಕ್ಕಿದನು. ದ್ವಂದ್ವಯುದ್ಧ ಶುರುವಾಯಿತು. ಸುಮಾರು ಹೊತ್ತಾಯಿತು. ಇಬ್ಬರ ಮೈಯಲ್ಲಿಯೂ ಬೆವರು ಹರಿದಿದೆ. ರಕ್ತವೂ ಹರಿದಿದೆ. ಒಂದು ಹಂತದಲ್ಲಿ ಅವರ ಪಟ್ಟು ಹೇಗಿತ್ತು ಎಂದರೆ ಯಾರಿಗೂ ಅಲುಗಾಡಲು ಆಗಲಿಲ್ಲ. ರಕ್ತಸಿಕ್ತವಾಗಿರುವುದರಿಂದ ಕೆಂಪು ಹೂಬಿಟ್ಟ ಬೂರುಗ, ಮತ್ತುಗ ಮರದಂತೆ ಕಾಣುತ್ತಿದ್ದಾರೆ ಇಬ್ಬರೂ. ಮುಂದೆ ಮುಷ್ಟಿಪ್ರಹಾರ, ತಲಪ್ರಹಾರ(ಅಂಗೈ), ಮೊಳಕೈಯಿಂದ ತಿವಿಯುವುದು ಹೀಗೆ ಸಾಮಾನ್ಯರಿಗೆ ಸಹಿಸಲಸಾಧ್ಯವಾದ ಯುದ್ಧವನ್ನು ಮಹಾಬಲರಾದ ವಾನರೇಂದ್ರ ಮತ್ತು ರಾಕ್ಷಸೇಂದ್ರರು ಮಾಡುತ್ತಿದ್ದರು. ಬಹಳ ಹೊತ್ತಾಗಿದೆ. ಗೋಪುರದ ವೇದಿಕೆಯಲ್ಲಿ ಅವರ ಕುಸ್ತಿಪಂದ್ಯ. ಒಬ್ಬರನ್ನೊಬ್ಬರು ಎತ್ತಿ ಎಸೆಯುತ್ತಿದ್ದರು. ಕೆಲವೊಮ್ಮೆ ಒಬ್ಬರನ್ನೊಬ್ಬರು ನೆಲಕ್ಕೆ ಹಾಕುತ್ತಿದ್ದರು. ವಿಚಿತ್ರವಾದ ಹೆಜ್ಜೆಗಳನ್ನಿಡುತ್ತಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ಘಟ್ಟಿಸಿ ಪಕ್ಕದ ಕಂದಕದಲ್ಲಿ ಬಿದ್ದರು. ಆದರೆ ಭೂಮಿಯನ್ನು ಮುಟ್ಟುವ ಮೊದಲೇ ಮೇಲಕ್ಕೆ ಹಾರಿ ಮತ್ತೆ ಗೋಪುರದಲ್ಲಿ ನಿಂತರು. ಅಷ್ಟು ಹೊತ್ತಿಗೆ ಇಬ್ಬರೂ ಏದುಸಿರು ಬಿಡುತ್ತಿದ್ದರು. ಆ ಯುದ್ಧದಲ್ಲಿ ಕೋಪ, ಮಲ್ಲಯುದ್ಧದ ಶಿಕ್ಷೆ, ಬಲ ಎಲ್ಲವೂ ಸೇರಿ ಹೆಬ್ಬುಲಿಗಳಂತೆ ಹೋರಾಡಿದರು.ಇಷ್ಟು ಹೊತ್ತು ಕಳೆದರೂ ನಿರಾಯಾಸವಾಗಿ ಯುದ್ಧ ಮಾಡುತ್ತಿದ್ದರು. ಇಬ್ಬರೂ ಮದಗಜಗಳಂತಿದ್ದಾರೆ. ಅವರ ಬಾಹುಗಳು ಆನೆಯ ಸೊಂಡಿಲಿನಂತೆ ಇವೆ. ಅದರಿಂದ ಪರಸ್ಪರರ ಪ್ರಹಾರಗಳನ್ನು ತಡೆಯುತ್ತಿದ್ದಾರೆ. ಮಂಡಲಕ್ರಮದಲ್ಲಿ ಹೆಜ್ಜೆಯಿಡುತ್ತಾ ಒಬ್ಬರನ್ನೊಬ್ಬರು ಸುತ್ತುವರೆಯುತ್ತಿದ್ದಾರೆ. ಒಬ್ಬರನ್ನೊಬ್ಬರು ಸಂಹಾರಮಾಡುವ ಮನಸ್ಸಿನಿಂದ ಯುದ್ಧಮಾಡುತ್ತಿದ್ದಾರೆ.

ಅವರು ಸ್ಥಾನ, ಮಂಡಲ, ಗೋಮೂತ್ರಕಗಳು, ಗತಪ್ರತ್ಯಾಗತಗಳು, ವಕ್ರಗತಾ, ವರ್ಜನ, ಆಪ್ಲಾವ, ಪರಾವೃತ್ತಗಳು, ಅಪಾವೃತ್ತಗಳು, ಅವದೃತ, ಉಪನ್ಯಸ್ತ, ಅಪನ್ಯಸ್ತ ಮತ್ತನೇಕ ಮಲ್ಲಯುದ್ಧದ ಪಟ್ಟುಗಳನ್ನು ಬಳಸಿದರು. ಸ್ಥಾನವೆಂದರೆ ಪಾದಗಳನ್ನು ಹಿಂದೆ ಮುಂದೆ ಮಾಡಿ ಸಿಂಹ, ಹುಲಿ ಮೊದಲಾದ ಪ್ರಾಣಿಗಳಂತೆ ನಿಲ್ಲುವುದು. ವೈಷ್ಣವ, ಸಮಪಾದ, ವೈಶಾಖ, ಮಂಡಲ, ಪ್ರತ್ಯಾಲೀಢ, ಅನಾಲೀಢ ಎನ್ನುವ ಆರು ಜಾತಿಗಳು ಇದರಲ್ಲಿ. ಮಂಡಲಗಳು ಎಂದರೆ ಒಬ್ಬರನ್ನೊಬ್ಬರು ಸುತ್ತುವರಿಯುವುದು. ಅದರಲ್ಲಿ ಹೆಜ್ಜೆಗಳಿವೆ. ಚಾರಿ(ಒಂದು ಕಾಲನ್ನು ಮುಂದಿಡುವುದು), ಕರಣ(ಎರಡೂ ಕಾಲನ್ನು ಮುಂದಿಡುವುದು), ಹಲವು ಕರಣದಿಂದ ಖಂಡ, ಮೂರು-ನಾಲ್ಕು ಖಂಡಗಳಿಂದ ಮಹಾಮಂಡಲ. ಅವರ ಸಂಚಾರದ ವಿಶೇಷವದು. ಗೋಮೂತ್ರಕ ಅಂದರೆ ವಕ್ರವಕ್ರವಾಗಿ ಹೋಗುವುದು. ಗತ ಎಂದರೆ ಶತ್ರುವಿನ ಮೇಲೆ ಥಟ್ಟನೆ ನುಗ್ಗುವುದು. ಪ್ರತ್ಯಾಗತ ಎಂದರೆ ಥಟ್ಟನೆ ಹಿಂದೆ ಸರಿಯುವುದು.ವಕ್ರಗತ ಎಂದರೆ ಎಡಕ್ಕೂ ಬಲಕ್ಕೂ ತಿರುಗುತ್ತಾ ಇರುವ ಸಂಚಾರ, ವರ್ಜನ ಎಂದರೆ ಪ್ರಹಾರಕ್ಕೆ ಸಿದ್ಧನಾಗಿದ್ದರೂ ಮಾಡದಿರುವುದು. ಪರಿಧಾವನ ಎಂದರೆ ಶತ್ರು ನಿಂತಾಗ ಸುತ್ತ ಓಡುವುದು. ಆಪ್ಲಾವ ಎಂದರೆ ಕಪ್ಪೆಯಂತೆ ಶರೀರವನ್ನು ಬಗ್ಗಿಸಿ ನೆಗೆಯುವುದು.ಪರಾವೃತ್ತವೆಂದರೆ ಹಿಂದೆ ಸರಿಯುವುದು. ಅಪಾವೃತ್ತವೆಂದರೆ ವಾಲುವುದು. ಅವದೃತ ಎಂದರೆ ಶತ್ರುವನ್ನು ಹಿಡಿಯಲು ಬಗ್ಗುವುದು. ಉಪನ್ಯಸ್ತ ಎಂದರೆ ಶತ್ರುವನ್ನು ಹಿಡಿಯಲು ಬಾಹುವನ್ನು ಮುಂದೆ ಚಾಚುವುದು. ಅಪನ್ಯಸ್ತ ಎಂದರೆ ಬಾಹುಗಳು ಕೆಳಗಿರುತ್ತವೆ. ನಿಜವಾಗಿಯೂ ಅವನು ಹಿಡಿಯುವ ತಯಾರಿಯಲ್ಲಿರುತ್ತಾನೆ. ಇಂತಹ ಅನೇಕ ಮಲ್ಲಯುದ್ಧದ ತಂತ್ರಗಳನ್ನು ಇಬ್ಬರೂ ಬಳಸಿದ್ದಾರೆ. ಹಾಗೆ ಭಯಂಕರ ಯುದ್ಧದಲ್ಲಿ ರಾವಣನಿಗೆ ಸುಗ್ರೀವನನ್ನು ಗೆಲ್ಲಲು ಆಗಲಿಲ್ಲ. ಆಗ ಆ ರಕ್ಷಸ್ಸು(ನಪುಂಸಕ ಲಿಂಗ) ಏನು ಮಾಡಿತು ಎಂದರೆ ಮಾಯೆಯನ್ನು ಶುರುಮಾಡಿತು.

ರಾವಣ ಮಹಾ ಬಲಿಷ್ಠನೇ ಹೌದು. ಆದರೆ ಸುಗ್ರೀವನಲ್ಲಿ ತುಂಬಾ ಭಾವ ಇದೆ. ಸುಗ್ರೀವ ಭಾವಾವೇಷದಲ್ಲಿ ಯುದ್ಧ ಮಾಡ್ತಾ ಇದ್ದಾನೆ, ಜಟಾಯುವಿನ ಹಾಗೆ. ಹಾಗಾಗಿ ಗೆಲ್ಲಲಿಕ್ಕೆ ಸಾಧ್ಯವಿಲ್ಲದಾಗ ರಾವಣ ಮಾಯಾವೇಶ ಮಾಡಲಿಕ್ಕೆ ಶುರುಮಾಡಿದನಂತೆ. ಜಟಾಯು ಮತ್ತು ಸುಗ್ರೀವನಲ್ಲಿ ತುಂಬಾ ವ್ಯತ್ಯಾಸ ಇದೆ. ಸುಗ್ರೀವ ಇಂಥದ್ದರಲ್ಲಿ ತುಂಬಾ ಹುಷಾರಿ. ಯಾರಾದರೂ ಮೋಸ ಮಾಡ್ತಾರೆ ಅಂದ್ರೆ ಮೊದಲು ಗೊತ್ತಾಗುತ್ತದೆ ಅವನಿಗೆ. ರಾವಣ ಇನ್ನೂ ಮಾಯೆಯಿಂದ ಮೋಸ ಮಾಡಲಿಕ್ಕೆ ಮಾಡ್ತಾ ಇದ್ದಾನೆ, ಗೊತ್ತಾಯಿತು ಸುಗ್ರೀವನಿಗೆ. ಆ ಮಾಯಾವಿಯನ್ನೇ ಮೋಹಗೊಳಿಸಿ ಬಿಡ್ತಾನೆ ಸುಗ್ರೀವ. ಏನೋ ಮಾಡುವವನಾಗಿ ಹಾರಿ ರಾಮನ ಬಳಿ ಬಂದು ಬಿದ್ದುಬಿಟ್ಟನಂತೆ ಸುಗ್ರೀವ. ತನ್ನ ಮೇಲೆ ಹಾರ್ತಾನೆ ಅಂತ ತಿಳಿದುಕೊಂಡಿದ್ದ ರಾವಣ, ಆದರೆ ಅವನನ್ನು ವಂಚಿಸಿ ಹಾರಿದ್ದೇಲ್ಲಿ ಸುಗ್ರೀವ ಅಂದ್ರೆ ರಾಮನ ಬಳಿಗೆ. ಪಾಪ ರಾವಣ ನೋಡ್ತಾ ನಿಂತನಂತೆ. ಕಪಿ ಶ್ರೇಷ್ಠರಿಗೇ ಸುಗ್ರೀವ ಒಡೆಯ. ರಾವಣನನ್ನು ಬಳಸಿ ಯುದ್ಧದ ಕೀರ್ತಿಯನ್ನು ಪಡೆದು ಆಕಾಶದಿಂದ ನೇರವಾಗಿ ರಾಮನ ಪಕ್ಕದಲ್ಲಿ ಇಳಿದು ತನ್ನ ಸೇನೆಯನ್ನು ಪ್ರವೇಶ ಮಾಡ್ತಾನೆ. ಇದರ ಮೂಲಕವಾಗಿ ಯುದ್ಧ ಆರಂಭವೇ ಆಗಿಹೋಯಿತು. ಹಿಂದಿರುಗಿದಾಗ ಎಲ್ಲ ಕಪಿಗಳು ಸುಗ್ರೀವನನ್ನು ಗೌರವಿಸಿದರು. ಯೂತಪತಿಗಳು, ಯುದ್ಧ ನಿಷ್ಣಾತರು, ಅವರೆಲ್ಲ ಸುಗ್ರೀವನನ್ನು ಬಹಳ ಗೌರವಿಸಿದರು. ಆದರೆ ರಾಮ ಮಾತ್ರ ಸುಗ್ರೀವನ ಮೈಮೇಲೆ ಆಗಿದ ಗಾಯವನ್ನು ನೋಡಿ, ತಾಯಿಯಂತೆ ಪ್ರೀತಿಯಿಂದ ನೋಡಿ ಸುಗ್ರೀವನನ್ನು ಬಾಚಿ ತಬ್ಬಿ ಹೇಳಿದನಂತೆ, “ಒಂದು ಮಾತನ್ನೂ ಹೇಳದೇ, ಸಮಾಲೋಚನೆಯನ್ನೂ ಮಾಡದೇ ಇಷ್ಟು ದೊಡ್ಡ ಸಾಹಸ ಮಾಡಿಬಿಟ್ಟೆಯಲ್ಲ. ನನ್ನನ್ನೂ, ವಿಭೀಷಣನನ್ನೂ ಸೈನವನ್ನೂ ಸಂಶಯಕೊಡ್ಡಿ, ಕಷ್ಟದ ಕೆಲಸ ಮಾಡಿಬಿಟ್ಟೆ. ನೀನು ಕಪಿರಾಜ, ದೊರೆಗಳು ತಮಗೆ ಹೀಗೆ ಅಪಾಯ ತಂದುಕೊಳ್ಳಬಾರದು. ಇಡೀ ಸೈನ್ಯ ತೊಂದರೆ ಆಗ್ತದೆ. ಇನ್ನು ಮುಂದೆ ಹೀಗೆ ಮಾಡಕೂಡದು”. ಎಂದು ಹೇಳಿ ಕಾರಣ ಹೇಳ್ತಾನೆ, “ಒಂದು ವೇಳೆ ನಿನಗೆ ಏನಾದರೂ ಆಗಿದ್ದರೇ ಸೀತೆಯನ್ನು ಮರಳಿ ಪಡೆದರೂ ಕೂಡ ಏನು ನನಗೆ. ನೀನು ಇಲ್ಲದಿದ್ದರೆ, ಸೀತೆಯಾಗಲಿ, ಭರತನಾಗಲಿ, ಲಕ್ಷ್ಮಣನಾಗಲಿ, ಶತ್ರುಘ್ನನಾಗಲಿ ಅಥವಾ ಈ ಶರೀರವಾಗಲಿ ನನಗೆ ಬೇಡಾ. ನಿನಗೆ ಏನಾದರೂ ಆಗಿ ಮರಳಿ ಬಾರದಿದ್ದರೇ, ನಾನೊಂದು ನಿಶ್ಚಯ ಮಾಡಿದ್ದೆ. ರಾವಣನನ್ನು ಕೊಂದು ವಿಭೀಷಣನಿಗೆ ರಾಜ್ಯಾಭಿಷೇಕ ಮಾಡುತ್ತಿದ್ದೆ ಆದರೆ ಅದರ ಬಳಿಕ ಭರತನಿಗೆ ರಾಜ್ಯವನ್ನು ಕೊಟ್ಟು ಸೀತೆಯೊಡನೆ ನಾನು ದೇಹತ್ಯಾಗ ಮಾಡ್ತಾ ಇದ್ದೆ. ನೀನು ಅಳಿದ ಮೇಲೆ ನಾನು ಉಳಿಯುತ್ತಿರಲಿಲ್ಲ. ಇನ್ನು ಹಾಗೆ ಮಾಡಬೇಡಾ.” ಸಖ್ಯ ಅಂದ್ರೆ ಅದೇನು ತಮಾಷೆಯ ಸಖ್ಯ ಅಲ್ಲ. ನೀನು ಇಲ್ಲದಿದ್ದರೆ ನನಗೂ ಈ ಜೀವ ಬೇಡ ಎನ್ನುವ ಸಖ್ಯದ ಪಾಠವನ್ನು ಮಾಡ್ತಾನೆ ರಾಮ. ಕೆಲವು ಸಾರಿ ಮೈತ್ರಿ ಮೈತ್ರಿ ಬರೇ ಲಾಭಕ್ಕಾಗಿ ಇರ್ತದೆ, ಕ್ಷಣಿಕಕ್ಕೆ ಇರ್ತದೆ.

ಆಗ ಸುಗ್ರೀವ ರಾಮನಿಗೆ ಹೇಳಿದನಂತೆ,”ನಾನು ಹೇಗೆ ಸಹಿಸಲೀ. ನಿನ್ನ ಪತ್ನಿ ಸೀತೆಯನ್ನು ಅಪಹಾರ ಮಾಡಿದವನು. ನಿನಗೆ ಅಕಾರಣವಾಗಿ ಇಂತಹ ದೊಡ್ಡ ಕಷ್ಟವನ್ನು ಕೊಟ್ಟವನು. ನನಗೆ ನನ್ನ ಬಲ ಗೊತ್ತು. ಗೊತ್ತಿದ್ದೂ ಕೂಡ ಹೇಗೆ ಸಹಿಸಲಿ. ಹಾರಿಬಿಟ್ಟೆ. ರಾವಣನಿಗೆ ಸರೀ ಬುದ್ಧಿ ಬಂದಿದೆ. ಯುದ್ಧದ ಉದ್ಘಾಟನೆ ಕಪಿರಾಜ ಸುಗ್ರೀವನಿಂದ.” ರಾಮ ಪ್ರಕೃತಿಯನ್ನು ಗಮನಿಸುತ್ತಾ ಇದ್ದಾನೆ, ಹಿಂದೆ ಅವನೇ ಹೇಳಿರತಕ್ಕಂತಹ ಉತ್ಪಾತಗಳು ಆಗ್ತಾನೇ ಇವೆ. ಲಕ್ಷ್ಮಣನಿಗೆ ಹೇಳ್ತಾನೆ, “ಸೇನೆಯನ್ನು ವ್ಯೂಹ ಕ್ರಮದಲ್ಲಿ ನಿಲ್ಲಿಸಿ ಎಲ್ಲಿ ನೀರಿದೆ, ಹಣ್ಣುಹಂಪಲು ಬೇಕಾದಷ್ಟು ಇದೆ, ಅಂತಹ ಕಾಡುಗಳನ್ನು ಆಶ್ರಯಿಸಿ ಲಂಕೆಯ ಕಡೆಗೆ ನಾವು ಈಗ ಹೋಗಬೇಕಾಗಿದೆ. ಈಗಲೇ ರಾವಣ ಪಾಲಿತವಾಗಿರುವ ಲಂಕೆಯನ್ನು ವಾನರಸೇನೆ ಸಮೇತರಾಗಿ ಮುತ್ತೋಣ.” ಎಂದು ಹೇಳಿ ಪರ್ವತದಿಂದ ಇಳಿಯಲಿಕ್ಕೆ ಪ್ರಾರಂಭ ಮಾಡ್ತಾನೆ. ಬಂದು ನೋಡಿದರೇ ತನ್ನ ಸೇನಾ ಸಮುದ್ರ. ಎಷ್ಟು ದೊಡ್ಡ ಸೈನ್ಯ ನನ್ನದು. ಬಳಿಕ ಬೇಕಾದ ಸಿದ್ಧತೆಯನ್ನು ಮಾಡಿ, ಸಕಾಲದಲ್ಲಿ, ಆ ಕಪಿಸೇನೆಯನ್ನು ಯುದ್ಧಕ್ಕೆ ಅಪ್ಪಣೆಯನ್ನು ಇತ್ತನು. ಅಪ್ಪಣೆ ಮಾಡಿದ್ದೊಂದೇ ಅಲ್ಲ, ತಾನೇ ಮುಂದುವರಿಯುತ್ತಾನೆ. ಎಲ್ಲರಿಗಿಂತ ಮುಂದೆ ಧನಸ್ಸು ಹಿಡಿದ ರಾಮ. ಅವನ ಹಿಂದೆ ಸುಗ್ರೀವ, ವಿಭೀಷಣ, ಲಕ್ಷ್ಮಣ, ಅಂಗದ, ಜಾಂಬವಂತ, ನಲ, ನೀಲ ಮತ್ತು ಧೂಮ್ರ – ವೃಕ್ಷರಾಜ ಅಂದ್ರೆ ಜಾಂಬವಂತನ ಅಣ್ಣ. ಅವರ ಹಿಂದೆ ದೊಡ್ಡ ಭೂಮಿಯನ್ನೇ ಮುಚ್ಚುವಂತಹ ಸೈನ್ಯ. ಎಲ್ಲರೂ ದೊಡ್ಡ ದೊಡ್ಡ ವೃಕ್ಷಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಎಲ್ಲರೂ ಸ್ವಲ್ಪ ಕಾಲದಲ್ಲಿ ಲಂಕೆಯನ್ನು ಸೇರಿದರು. ದಾರಿ ಎಂತಹ ದುರ್ಗಮವಾಗಿದ್ದರೂ ಅವರಿಗೆ ಅದು ದುರ್ಗಮ ಅಂತ ಅನ್ನಿಸಲಿಲ್ಲ ಯಾಕೆಂದ್ರೆ ವೀರ ಶ್ರೇಷ್ಠರು ಅವರು. ಕಪಿಗಳಿಗೆ ಇದೆಲ್ಲ ಸಹಜ.

ಲಂಕೆಯನ್ನು ಸೇರಿದರು. ಉದ್ಯಾನವನ ಶೋಭಿತವಾಗಿದೆ. ವಿಚಿತ್ರವಾದ, ಸುಲಭವಾಗಿ ದಾಟಲು ಸಾಧ್ಯವಿಲ್ಲದಂತಹ ಎತ್ತರವಾದ ಕೋಟೆಗಳಿಂದ ಕೂಡಿದೆ. ಇಂತಹ ಲಂಕೆಯನ್ನು ರಾಮನ ಮಾತಿನಿಂದ ಪ್ರಚೋದಿತವಾದ ಕಪಿಗಳು ಎಲ್ಲೆಡೆಯಿಂದ ಮುತ್ತಿದರು. ಲಂಕೆಗೆ ಮುತ್ತಿಗೆ ಹಾಕಿ ಬೀಡು ಬಿಟ್ಟರು ಕಪಿಗಳು. ಉತ್ತರದ್ವಾರದಲ್ಲಿ, ಅಂದ್ರೆ ಭಾರತದಿಂದ ಹೋದಾಗ ಸಿಗುವ ದ್ವಾರದಲ್ಲಿ, ರಾಮ. ಬಹಳ ಎತ್ತರದ ದ್ವಾರ. ಆ ದ್ವಾರವನ್ನು ರಾಮ ಲಕ್ಷ್ಮಣನೊಡಗೂಡಿ ನಿರೋಧಿಸಿದನು. ಅಲ್ಲಿಂದ ಯಾರೂ ಹೊರಗೆ ಬರುವಂತಿಲ್ಲ. ತನ್ನ ಬಳಗಕ್ಕೆ ರಕ್ಷೆಯನ್ನು ಇತ್ತಿನು. ಯಾಕೆ ಅಂದ್ರೆ ಉತ್ತರ ದ್ವಾರದಲ್ಲಿ ಒಳಗಿನಿಂದ ರಾವಣನಿದ್ದಾನೆ. ರಾಮನನ್ನು ಬಿಟ್ಟು ಮತ್ಯಾರಿಗೂ ಆ ದ್ವಾರವನ್ನು ಎದುರಿಸಲು ಸಾಧ್ಯ ಇಲ್ಲ. ಯಾಕೆಂದ್ರೆ ರಾವಣನಿದ್ದಾನೆ ಮತ್ತು ಬಹುಸಂಖ್ಯೆಯಲ್ಲಿ ರಾಕ್ಷಸರೂ ಇದ್ದಾರೆ. ಯೋಧರ ಕವಚಗಳು ಮತ್ತು ಆಯುಧಗಳು ಕೋಟೆಯ ಮೇಲೆ ಇದ್ದವು. ದಕ್ಷಿಣದ್ವಾರವನ್ನು ಅಂಗದನು ಹೋಗಿ ಮುತ್ತಿದ. ಹನುಮಂತನು, ಋಷಭ, ಗವಾಕ್ಷ, ಗವಯರೊಡಗೂಡಿ, ಇಂದ್ರಜಿತು ಇದ್ದಂತಹ, ಪಶ್ಚಿಮದ್ವಾರವನ್ನು ಮುತ್ತಿದ. ಇದೆಲ್ಲ ಅವರ ಯೋಜನೆ, ಅದರ ಪ್ರಕಾರ ಒಬ್ಬೊಬ್ಬರೂ ಮಾಡ್ತಾ ಇದ್ದಾರೆ. ಪೂರ್ವದ್ವಾರವನ್ನು ನೀಲ, ಮೈಂದ ದ್ವಿವಿಧರೊಡಗೂಡಿ, ಲಂಕೆಯನ್ನು ಮುತ್ತಿದನು. ಸುಗ್ರೀವ ಎಲ್ಲಿ ಅಂದ್ರೆ ನಡುವಿನಲ್ಲಿ. ಪಶ್ಚಿಮ ಉತ್ತರ ದ್ವಾರದ ಮಧ್ಯದಲ್ಲಿ ಸುಗ್ರೀವ. ರಾವಣ ಉತ್ತರದ್ವಾರದಲ್ಲಿ ಇದ್ದಾನೆ, ಇಂದ್ರಜಿತು ಪಶ್ಚಿಮ ದ್ವಾರದಲ್ಲಿ ಇವರಿಬ್ಬರೂ ವೀರಶ್ರೇಷ್ಠರು. ಹಾಗಾಗಿ ಇದೆರಡು ದ್ವಾರದ ಮಧ್ಯದಲ್ಲಿ ಸುಗ್ರೀವ. ಅಲ್ಲಿ ಹೆಚ್ಚು ಅಗತ್ಯ ಬೀಳುವ ಸಂಧರ್ಭ ಇದೆ. ಪ್ರಮಾಥಿ ಪಗಸ ಮೊದಲಾದ ಅನೇಕ ವೀರರೊಡಗೂಡಿ ಸುಗ್ರೀವ ಬೀಡು ಬಿಟ್ಟನು. ಮುವತ್ತಾರು ಕೋಟಿ ಪ್ರಖ್ಯಾತ ಕಪಿನಾಯಕರು ಸುಗ್ರೀವನನ್ನು ಸುತ್ತುವರಿಯುತ್ತಾರೆ. ಆ ಸೈನ್ಯ ಬೇಕಾದಾಗ ಬೇಕಾದಷ್ಟು ಸೈನ್ಯವನ್ನು ಪೂರೈಸಲಿಕ್ಕೆ ಇರುವಂತಹ ಸೈನ್ಯ ಅದು. ಬಳಿಕ ರಾಮನ ಅಪ್ಪಣೆಯ ಮೇರೆಗೆ ಲಕ್ಶ್ಮಣನು ವಿಭೀಷಣನೊಡಗೂಡಿ ಇನ್ನೊಂದು ದ್ವಾರಕ್ಕೆ ಒಂದೊಂದು ಕೋಟಿ ಸೈನ್ಯ ಕೊಟ್ಟು ನೆಲೆಗೊಳಿಸುತ್ತಾನೆ. ಅಲ್ಲಿ ಇರುವ ಸೈನ್ಯಕ್ಕೆ ಒಂದು ಕೋಟಿ ಸೈನ್ಯವನ್ನು ಜೋಡಿಸುತ್ತಾನೆ ಲಕ್ಷ್ಮಣ. ರಾಮನ ಪಶ್ಚಿಮದಲ್ಲಿ, ಬೇಕಾದರೆ ಎನ್ನುವ ಕಾರಣಕ್ಕೆ ಜಾಂಬವಂತನೊಡಗೂಡಿ ತನ್ನ ಬಳಗದೊಂದಿಗೆ ಸುಗ್ರೀವನಿದ್ದಾನೆ.

ಆ ವಾನರರದ್ದು ವರ್ಣನೆ ಇದೆ. ಹುಲಿಗಳ ಹಾಗೆ ಹಲ್ಲುಗಳು ಆ ವಾನರರದ್ದು, ಕೈಯಲ್ಲಿ ವೃಕ್ಷಗಳು ಮತ್ತು ಬಂಡೆಗಳು. ಕೆಲವರ ಉಗುರುಗಳನ್ನು ನೋಡಿದ್ರೆ ಹೆದರಿಕೆ ಆಗುವಂತೆ ಇದೆ, ಕೆಲವರ ಹಲ್ಲುಗಳನ್ನು ನೋಡಿದ್ರೆ ಹೆದರಿಕೆ, ಕೆಲವರ ಮೈ ನೋಡಿದ್ರೆ ಹೆದರಿಕೆ ಆಗುವಂತೆ ಇದೆ. ಕೆಲವರ ಮುಖ ನೋಡಿದ್ರೆ ಉಗುಳು ಬರುವ ಹಾಗೆ ಇದೆಯಂತೆ. ಹತ್ತಾನೆ, ನೂರಾನೆ, ಸಾವಿರ ಆನೆ ಬಲದವರು. ಕೆಲವರು ಆನೆಯ ಹಿಂಡಿಗೆ ಇರುವಷ್ಟು ಬಲ ಹೊಂದಿರತಕ್ಕಂತವರು ಇದ್ದಾರೆ. ಅವರ ನೂರು ಪಾಲು ಬಲ ಉಳ್ಳಂತಹ ಕಪಿಗಳು. ಇನ್ನು ಕೆಲವು ಕಪಿಗಳ ಬಲ ಇಷ್ಟು ಅಂತ ಹೇಳಲಿಕ್ಕೆ ಬರುವುದಿಲ್ಲ ಅಂತಹ ಕಪಿಗಳು, ಉದಾಹರಣೆ ಹನುಮಂತ. ಅಂತವರೆಲ್ಲ ಇದ್ದರು ಅಲ್ಲಿ. ಮಿಡತೆಗಳು ಭೂಮಿಯನ್ನು ಮುಚ್ಚುವ ಹಾಗೆ. ಆ ಋತು ಬಂದಾಗ ಅಸಂಖ್ಯಾತ ಮಿಡತೆಗಳು ಬಂದು ಭೂಮಿಯನ್ನು ಮುಚ್ಚುವ ಹಾಗೆ ಮುತ್ತಿದ್ದಾರೆ ಲಂಕೆಯ ಪರಿಸರವನ್ನು. ಬಂದು ಸೇರಿದವರೇನು, ಬಂದು ಸೇರುವವರೇನು, ಇನ್ನೂ ಬರ್ತಾ ಇದ್ದಾರೆ. ಹೀಗೆ ಲಂಕೆ ಎಲ್ಲ ಕಡೆಯಿಂದ ಕಪಿಗಳಿಂದ ಆವೃತ್ತವಾಯಿತು. ವಾಯು ಕೂಡ ಪ್ರವೇಶಿಸಲಿಕ್ಕೆ ಸಾಧ್ಯ ಇಲ್ಲ.

ರಾಕ್ಷಸರು ಒಳಗಿನಿಂದ ನೋಡಿದಾಗ ವಿಸ್ಮಯವಾಯಿತಂತೆ ಅವರಿಗೆ. ಅವರ ಕಲ್ಪನೆಗೂ ಮೀರಿದ್ದು. ಅಷ್ಟು ವಾನರರ ಶಬ್ದ ಎಷ್ಟಾಗಿರಬೇಡ. ದಂಡೆಯನ್ನು ಒಡೆದು ಬರುವ ಸಮುದ್ರದಂತೆ ಶಬ್ದವಾಯಿತು. ಆ ಶಬ್ದದಿಂದ ಲಂಕೆ ನಡುಗಿತು. ಆ ಹೊತ್ತಿನಲ್ಲಿ ರಾಮನು ರಾಜಧರ್ಮವನ್ನು ಸ್ಮರಣೆ ಮಾಡಿಕೊಳ್ತಾನೆ. ರಾಜಧರ್ಮ ಏನು? ತನ್ನ ಮಂತ್ರಿಗಳ ಜೊತೆಯಲ್ಲಿ, ಸಲಹೆ ಸೂಚೆನೆ ಕೊಡುವಂತವರು, ಅವರ ಜೊತೆಗೆ ಪುನಃ ಪುನಃ ಸಮಾಲೋಚನೆ ಮಾಡಿ ನಿಶ್ಚಯ ಮಾಡ್ತಾನೆ. ಯಾವುದಾದ ಮೇಲೆ ಯಾವುದು? ಯಾವುದು ಯಾವಾಗ ಸರಿ? ಯಾವುದರ ತತ್ವ ಏನು? ಎಂಬುದಾಗಿ ಬಲ್ಲ ರಾಮನು, ವಿಭೀಷಣನ ಒಪ್ಪಿಗೆಯಲ್ಲಿ, ಒಂದು ನಿರ್ಧಾರಕ್ಕೆ ಬರ್ತಾನೆ. ಅಂಗದನನ್ನು ಕರೆದ. ಕರೆದು ಅವನಿಗೆ ಹೇಳಿದ್ದೇನು ಅಂದ್ರೆ, “ಹೋಗಿ ರಾವಣನಿಗೆ ಹೇಳು, ಅಂಗದ ಸಂಧಾನ. ನಿನಗೆ ಯಾವ ಭಯವೂ ಇಲ್ಲ, ವ್ಯಥೆಯೂ ಇಲ್ಲ. ಈ ಪ್ರಾಕಾರವನ್ನು ಸುಲಭವಾಗಿ ದಾಟಿ ಹೋಗ ಬಲ್ಲೆ. ಅದು ಗೊತ್ತು ನನಗೆ. ನೀನು ದೂತನಾಗಿ ಹೋಗು ಮತ್ತು ನನ್ನ ಮಾತುಗಳನ್ನು ಹೋಗಿ ರಾವಣನಿಗೆ ಹೇಳು.

“ದಾರಿದ್ರ್ಯ ಬಂದು ಅಡರಿದವನೇ, ಅಧಿಕಾರವನ್ನು ಪ್ರಭುತ್ವವನ್ನು ಕಳೆದುಕೊಂಡವನೇ, ಸಾಯಲಿದ್ದವನೇ, ನಷ್ಟ ಚೇತನ, ಬುದ್ಧಿ ಇಲ್ಲದವನು, ಋಷಿಗಳ, ನಾಗರ, ಗಂಧರ್ವರ, ಅಪ್ಸರೆಯರ, ಯಕ್ಷರ ಮತ್ತು ಭೂಮಿಯ ಅನೇಕ ರಾಜರುಗಳ ವಿಷಯದಲ್ಲಿ ಯಾವ ಪಾಪವನ್ನೂ ನೀನು ಮಾಡಿದೆಯೋ ಮೋಹದಿಂದ, ಗರ್ವದಿಂದ ವಿವೇಕವನ್ನು ಕಳೆದುಕೊಂಡು, ಆ ಪಾಪಕ್ಕೆ ಇಂದು ಫಲ ಬಂತು. ಆ ಫಲವನ್ನು ತಪ್ಪಿಸಿಕೊಳ್ಳಲಿಕ್ಕೆ ಸಾಧ್ಯವಿಲ್ಲ, ಇಂದು ಬ್ರಹ್ಮ ಕೊಟ್ಟ ವರದ ಸೊಕ್ಕು ಇಳಿದಿರಬಹುದು. ನಿನ್ನ ಪಾಲಿಗೆ ನಾನೇ ದಂಡಧರ. ಯಾವ ಬಲವನ್ನು ಆಶ್ರಯಿಸಿ ನಾನು ಆಶ್ರಮದಿಂದ ದೂರ ಹೋಗುವಂತೆ ಮಾಡಿ, ಸೀತೆಯನ್ನು ಕದ್ದೆಯೋ, ಆ ಬಲವನ್ನು ತೋರಿಸು. ಈ ಲೋಕವನ್ನು ರಾಕ್ಷಸರೇ ಇಲ್ಲದಂತೆ ಮಾಡುತ್ತೇನೆ. ಬಹುಪಾಲು ರಾಕ್ಷಸರು ನನ್ನ ತೀಕ್ಷ್ಣ ಬಾಣಗಳಿಂದ ಸಾಯುತ್ತಾರೆ. ಬಂದು ಶರಣಾಗದಿದ್ದರೆ, ಮೈಥಿಲಿಯನ್ನು ತಂದು ಒಪ್ಪಿಸದಿದ್ದರೆ ರಾಕ್ಷಸರು ಸಾಯ್ತಾರೆ. ಧರ್ಮಾತ್ಮನಾದ ವಿಭೀಷಣನು ರಾಕ್ಷಸ ರಾಜನಾಗುತ್ತಾನೆ. ಅಕಂಟಕವಾದ ಲಂಕಾಧಿಪತ್ಯವನ್ನು ವಿಭಿಷಣ ಪಡೆದು ಆಗಿದೆ. ಒಂದು ಕ್ಷಣವೂ ಕೂಡ ನೀನು ದೊರೆಯಾಗಿ ಮುಂದುವರಿಯಬಾರದು. ಲಂಕೈಶ್ವರ್ಯವನ್ನು ನೀನು ಇನ್ನು ಅನುಭವಿಸಬಾರದು. ನಿನ್ನಂಥ ಪಾಪಿ ದೊರೆಯಾಗಿರುವುದು ಸಾಧ್ಯವಿಲ್ಲ. ಸೀತೆಯನ್ನು ಕೊಟ್ಟು ಶರಣಾಗುವುದಿಲ್ಲವಾದರೆ, ಧೈರ್ಯವನ್ನಾಶ್ರಯಿಸಿ, ಶೌರ್ಯತಾಳಿ ಯುದ್ಧ ಮಾಡು. ನನ್ನ ಬಾಣಗಳಿಂದ ನೀನು ಶಾಂತನಾಗುವೆ, ಪವಿತ್ರನಾಗುವೆ. ಆಗ ಬೆದರಿ ನೀನು ಸಣ್ಣ ಪಕ್ಷಿಯಾಗಿ ಮೂರು ಲೋಕ ಸಂಚರಿಸಿದರೂ, ನಾನು ಬಿಡುವುದಿಲ್ಲ. ನಾನು ಚಕ್ಷುಪಥ. ಲಂಕೆಯನ್ನೊಮ್ಮೆ ಚೆನ್ನಾಗಿ ನೋಡಿಬಿಡು. ನಿನ್ನ ಅಪರಕ್ರಿಯೆಗಳಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊ” ಎಂದು ಧರ್ಮವೇ ಮೈವೆತ್ತ ರಾಮನು, ರಾವಣನಿಗೆ ಅವಕಾಶಗಳನ್ನು ಕೊಟ್ಟು ಕೊಟ್ಟು, ಧರ್ಮವನ್ನು ಪಾಲಿಸಿದನು.

ಅಷ್ಟು ಹೇಳುತ್ತಿರುವಂತೆ ಅಂಗದ ಆಕಾಶಕ್ಕೆ ನೆಗೆದ. ರಾವಣನ ಎದುರು ಅಂಗದ ಪ್ರತ್ಯಕ್ಷನಾದನು. ರಾವಣನನ್ನು ನೋಡಿ, ರಾಮ ಹೇಳಿದ್ದೆಲ್ಲವನ್ನೂ ರಾವಣನಿಗೆ ಹೇಳಿದನು. ಮೊದಲು, ತನ್ನ ಪರಿಚಯವನ್ನು ಮಾಡಿಕೊಂಡ, ಕೋಸಲೇಂದ್ರನ ದೂತ ನಾನು. ಅಕ್ಲಿಷ್ಟಕರ್ಮ ರಾಮನ ದೂತ ನಾನು. ವಾಲಿಯ ಪುತ್ರ. ರಾಮನು ನಿನಗೆ ಹೇಳಿದ್ದೇನು ಅಂದರೆ, ನಿನ್ನ ನಗರದ ಉತ್ತರ ದ್ವಾರದಲ್ಲಿ ಬಂದು ನಿಂತಿದ್ದೇನೆ, ಬಂದು ಯುದ್ಧ ಮಾಡು. ಹೇ ಕ್ರೂರಿ, ಲಂಕೆಯೊಳಗಡಗಿ ಕೂರುವುದಲ್ಲ. ನಿನ್ನ ಮಕ್ಕಳು, ಸೈನ್ಯ, ಪರಿವಾರ ಸಮೇತ ಕೊಲ್ಲುತ್ತೇನೆ, ಈ ಲೋಕವು ಶಾಂತವಾಗಲಿ. ಭಯಮುಕ್ತವಾಗಲಿ. ದೇವದಾನವ ಯಕ್ಷರ, ಸರ್ವರ ಕಂಟಕವಾಗಿರುವ ರಾವಣನೆಂಬ ಮುಳ್ಳನ್ನು ತೆಗೀತೆನೆ ನಾನು. ನೀನು ಸತ್ತರೆ, ವಿಭೀಷಣ ದೊರೆಯಾಗ್ತಾನೆ. ಬಂದು, ಕಾಲಿಗೆ ಬಿದ್ದು, ಸೀತೆಯನ್ನೊಪ್ಪಿಸದಿದ್ದರೆ, ಇದೆಲ್ಲ ಆಗುತ್ತದೆ ಎಂದು ಅಂಗದ ಹೇಳಿದಾಗ, ಕೂಗಿಕೊಂಡನು ರಾವಣ. ತಡೆಯಲಸಾಧ್ಯವಾದ ಕಾಟವನ್ನು ತಡೆಯಲಾರದೆ, ಕೊಲ್ಲಿ ಇವನನ್ನು ಎಂದನು ರಾವಣ. ದೂತವಧೆ ಸಲ್ಲದು, ರಾವಣನಿಗೆ ಧರ್ಮವಿಲ್ಲ. ಹಾಗೆ ಹೇಳಿದಾಗ ನಾಲ್ಕು ಯೋಧರು ಬಂದು ಹಿಡ್ಕೊಂಡ್ರು ಅಂಗದನನ್ನು. ಅಂಗದ ಸುಮ್ಮನಿದ್ದನು. ಗಟ್ಟಿಹಿಡಿದುಕೊಂಡ ಮೇಲೆ, ಆಕಾಶಕ್ಕೆ ಹಾರಿದನು ಅಂಗದ. ಮತ್ತೆ ಅವರನ್ನು ವದರಿದನು, ರಾಕ್ಷಸರು ಭೂಮಿಗೆ ಬಿದ್ದರು. ರಾವಣನ ಅರಮನೆಯ ಕಲಶ ಶಿಖರವನ್ನು ಅಂಗದ ತನ್ನ ಕಾಲಿಂದ ಧ್ವಂಸಮಾಡಿದನು. ಇದಿಷ್ಟನ್ನು ರಾವಣನ ಮುಂದೇ ಮಾಡಿದನು ಅಂಗದ. ಮತ್ತೆ ಅಂಗದ ನಾನು ಎಂದು ಕೂಗಿ, ರಾಮನೆದುರು ಹೋಗಿ ನಿಂತನು. ರಾವಣನ ಕ್ರೋಧಕ್ಕೆ ಮಿತಿಯಿಲ್ಲ. ವಾನರರಿಗೆಲ್ಲ ಹರ್ಷೋದ್ಘಾರ. ತನ್ನ ನಾಶ ಕಣ್ಣಮುಂದೆ ಬಂದಿತು ರಾವಣನಿಗೆ, ನಿಟ್ಟುಸಿರು ಬಿಟ್ಟನು.

ಅತ್ತ ರಾಮನು ಯುದ್ಧಕ್ಕೆ ಮೊದಲಾದನು. ಸುಷೇಣ ಸುಗ್ರೀವನ ಆಜ್ಞೆಯ ಪ್ರಕಾರ ಎಲ್ಲ ದಿಕ್ಕುಗಳಲ್ಲಿ ಕಾರ್ಯಕರ್ತರಿಗೆ ಹಣ್ಣು, ಕಲ್ಲುಬಂಡೆ, ಸೈನ್ಯ ಏನು ಬೇಕು ಎಂಬುದನ್ನು ನೋಡ್ಕೊಳ್ತಾ ಇದ್ದಾನೆ. ವಾನರರಿಗೆ ಯುದ್ಧೋತ್ಸಾಹ! ಕೋಟೆಯ ಆಕಡೆ ಪೂರ್ತಿ ವಾನರ ಸೈನ್ಯ ಇರುವುದನ್ನು ಕಂಡು, ರಾಕ್ಷಸರು ಹೆದರಿದರು. ಹೀಗೆ ಸಂಗ್ರಾಮವು ಪ್ರಾರಂಭವಾಯಿತು. ಕೆಲವರಿಗೆ ಯುದ್ಧೋತ್ಸಾಹ, ಕೆಲವರಿಗೆ ಆತಂಕ. ಯುದ್ಧ ಹೇಗೆ ನಡೆಯಿತು ಎಂಬುದನ್ನು ಮುಂದಿನ ಪ್ರವಚನದಲ್ಲಿ ಗಮನಿಸೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments