ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಆಸೆ ನಿರಾಸೆಯ ದಡದಿಂಕೂಡು ಜೀವನನದಿಯಿದು ಸೆಳೆದಿಹುದಯ್ಯ…ಬದುಕು ಅಂದರೆ ಹಾಗೇ..ಒಮ್ಮೊಮ್ಮೆ ಏನೂ ಸಮಸ್ಯೆಯಿಲ್ಲ ಬದುಕು ಸುಗಮ ಎನಿಸುತ್ತದೆ. ಧುತ್ತನೆ ಭೂತಾಕಾರದ ಸಮಸ್ಯೆ ಬಂದು ಎದುರಾಗ್ತದೆ. ಪರಿಹಾರ ಆಗ್ಹೋಯ್ತು ಅಂತ ಅನ್ಕೊಳ್ತೇವೆ ನಾವು. ಸಂಪೂರ್ಣ ಪರಿಹಾರ ಆಗಿ ಮುಕ್ತ. ಕೂಡಲೇ ಗೊತ್ತಾಗ್ತದೆ ಅದು ಹಾಗೇ ಇದೆ ಅಂತ.
ಇನ್ನೂ ಬಿಗಡಾಯಿಸಿದೆ ಅಂತ. ನಾವಾಗೆ ಏನೂ ಮಾಡಿಕೊಳ್ಳದಿದ್ರು ಸಮಸ್ಯೆಗಳು ಬಂದು ಮುತ್ತಿಕೊಳ್ತವೆ ನಮ್ಮನ್ನ. ಬದುಕು ಹೇಗಿದೆ ಅಂದ್ರೆ ತಪ್ಪೇ ಮಾಡದಿದ್ರೂ ಕೂಡ ಸಮಸ್ಯೆಗಳು ಬರ್ತವೆ. ಇನ್ನು ಸ್ವಯಂ ಆಪತ್ತನ್ನ ಕರೆದರೆ ಹೇಗೆ? ರಾವಣನ ಸ್ಥಿತಿ ಇದು. ತಾನೇ ತನ್ನ ಮೇಲೆ ಎಳೆದುಕೊಂಡ ಆಪತ್ತು. ತನ್ನ ಮೇಲೆ ಮಾತ್ರವಲ್ಲ, ತನ್ನ ಬಂಧುಬಾಂಧವರು, ಸೈನಿಕರು, ರಾಷ್ಟ್ರದ ಮೇಲೆ ಅಕಾರಣವಾಗಿ ಅಥವಾ ದುಷ್ಕಾರಣದಿಂದ ಎಳೆದುಕೊಂಡಿರತಕ್ಕಂತಹ ಆಪತ್ತು. ಅದು ಪರಿಹಾರ ಆಯ್ತು ಅನ್ದ್ಕೊಂಡ ಒಂದ್ಸಾರಿ : ಇಂದ್ರಜಿತುವಿನ ನಾಗಪಾಶ ಬಂಧ.ಅದರ ಮೂಲಕವಾಗಿ ತನ್ನ ಸಮಸ್ಯೆಯ ಮೂಲವೇ ನಿರ್ಮೂಲವಾಗಿ ಹೋಯಿತು. ತಾನು ಮಾಡಿದ ತಪ್ಪು ಅದೇ ಸರಿ ಅಂತ ಸಿದ್ಧವಾಯಿತು. ದಕ್ಕಿಸಿಕೊಂಡೆ ತಾನು ಮಾಡಿದ್ದನ್ನು ಎಂದುಕೊಂಡ. ಆದರೆ ಮರುಕ್ಷಣದಲ್ಲಿ ಗೊತ್ತಾಯಿತು; ಇಲ್ಲ, ರಾಮಲಕ್ಷ್ಮಣರು ಎದ್ದು ನಿಂತಿದ್ದಾರೆ. ಇಡೀ ವಾನರ ಸೇನೆ ಎದ್ದು ನಿಂತಿದೆ. ಬಾಗಿಲ ಬಳಿ ಬಂದಿದ್ದಾರೆ. ಅವರು ಸಿಂಹನಾದವನ್ನ ಮಾಡ್ತಾ ಇದಾರೆ. ಭೇರಿ ಮೃದಂಗಗಳನ್ನ ನುಡಿಸ್ತಾ ಇದಾರೆ. ಘರ್ಜಿಸ್ತಾ ಇದಾರೆ. ಇಮ್ಮಡಿ ಕಾಂತಿ, ಇಮ್ಮಡಿ ತೇಜಸ್ಸು ರಾಮ-ಲಕ್ಷ್ಮಣರಲ್ಲಿ ಕಾಣ್ತಾಯಿದೆ ಎಂಬುದು ಗೊತ್ತಾದಾಗ ಕುಸಿದ.

ಬಳಿಕ ಮತ್ತೆ ಕ್ರುದ್ಧನಾದ.
ರಾಕ್ಷಸರ ಮಧ್ಯದಲ್ಲಿ ಧೂಮ್ರಾಕ್ಷನೆಂಬ ರಾಕ್ಷಸನನ್ನು ಕರೆದು ವಾನರಸಂಹಾರಕ್ಕೆ ಹೊರಡು ಈಗಲೇ ಅಂತ ಅಪ್ಪಣೆ ಮಾಡಿದ.
ಸಂತೋಷಗೊಂಡ ಧೂಮ್ರಾಕ್ಷ ರಾವಣನಿಗೆ ವಂದಿಸಿ ಹೊರಗೆ ಬಂದ. ಬಲಾಧ್ಯಕ್ಷನನ್ನು ಕರೆದು ಸೇನೆಯನ್ನು ಸಿದ್ಧಗೊಳಿಸಲು ಹೇಳಿದ. ರಾಕ್ಷಸರು ಸರ್ವಸದ್ಧರಾಗಿ ಹೊರಗೆ ಬಂದರು.
ಧೂಮ್ರಾಕ್ಷನು ಅಟ್ಟಹಾಸದಿಂದ ನಗ್ತಾ ಪಶ್ಚಿಮ ದ್ವಾರದಲ್ಲಿ ಹೊರಗೆ ಬಂದ. ಹನುಮಂತನಿದ್ದಾನೆ ಅಲ್ಲಿ. ಅವನು ಹೊರಗೆ ಬರುವಾಗ ಅನೇಕ ಅಪಶಕುನಗಳಾದವು.
ಹೊರಗೆ ಬಂದು ದೊಡ್ಡ ವಾನರ ಸೇನೆಯನ್ನು ಕಂಡ. ಅದು ರಾಮ ಬಾಹು ಪಾಲಿತವಾಗಿತ್ತು. ಧೂಮ್ರಾಕ್ಷನನ್ನು ವಾನರರೂ ಕಂಡರು. ವಾನರರರಿಗೂ, ರಾಕ್ಷಸರಿಗೂ ತುಮುಲ ಯುದ್ಧವು ಪ್ರಾರಂಭವಾಯಿತು.
ವಾನರಸೇನೆಯಿಂದ ರಾಕ್ಷಸಸೇನೆಯೇ ಪರಾಭವಗೊಂಡು ಓಡಿತು. ಇದನ್ನ ನೋಡಿ ಕ್ರೋಧಗೊಂಡ ಧೂಮ್ರಾಕ್ಷನು ಘೋರವಾದ ಯುದ್ಧವನ್ನು ವಾನರರ ಮೇಲೆ ಮಾಡ್ತಿದಾನೆ.
ಅದನ್ನೂ ಕಂಡನಂತೆ ಹನುಮಂತ. ಅವನ ಸೇನೆ ಅದು. ಕೂಡಲೆ ಒಂದು ದೊಡ್ಡ ಬಂಡೆಯನ್ನು ತೆಗೆದುಕೊಂಡು ಹೋಗಿ ಧೂಮ್ರಾಕ್ಷನ ರಥದ ಮೇಲೆ ಹಾಕಿದ. ಧೂಮ್ರಾಕ್ಷ ಗದೆಯೊಡನೆ ಕೆಳಗೆ ಹಾರಿ ಬದುಕಿಕೊಂಡ. ರಥ ಧ್ವಂಸವಾಯಿತು. ರಾಕ್ಷಸ ಸೇನೆಯನ್ನು ಓಡಿಸ್ತಾನೆ ಹನುಮಂತ. ಧೂಮ್ರಾಕ್ಷ ಒಬ್ಬನೇ ಉಳಿದಿದಾನೆ. ಆಗ ಒಂದು ದೊಡ್ಡ ಬೆಟ್ಟವನ್ನು ಹಿಡ್ಕೊಂಡು ಬರ್ತಾನೆ ಹನುಮಂತ. ಅದನ್ನ ನೋಡಿದ ಧೂಮ್ರಾಕ್ಷ ತನ್ನ ಗದೆಯಿಂದ ಜೋರಾಗಿ ಬೀಸಿ ಹನುಮನಿಗೆ ಹೊಡೆದನಂತೆ. ಹನುಮಂತ ಅದನ್ನ ಲೆಕ್ಕಕ್ಕೇ ತಗೊಳ್ದೆ ಗಿರಿಶೃಂಗವನ್ನು ಎತ್ತಿ ಧೂಮ್ರಾಕ್ಷನ ತಲೆಯ ಮೇಲೆ ಎಸೆದ. ಹತನಾದ ಧೂಮ್ರಾಕ್ಷ. ಉಳಿದ ರಾಕ್ಷಸರು ಲಂಕೆಯ ಮಹಾದ್ವಾರದೆಡೆಗೆ ಓಡ್ತಿದಾರೆ.
ರಾವಣನಿಗೆ ಧೂಮ್ರಾಕ್ಷ ಹತನಾದ ವಿಷಯ ಗೊತ್ತಾಗಿದೆ. ಕ್ರೋಧ ಬಂತು.

ವಜ್ರದಂಷ್ಟ್ರನನ್ನು ಕರೆದು ಯುದ್ಧಕ್ಕೆ ಹೋಗಲಿಕ್ಕೆ ಅಪ್ಪಣೆ ಮಾಡ್ತಾನೆ ರಾವಣ. ತನ್ನ ಸೇನೆಯನ್ನು ತೆಗೆದುಕೊಂಡು ಲಂಕೆಯ ದಕ್ಷಿಣದ್ವಾರದಲ್ಲಿ ಹೊರಗೆ ಬಂದ. ಅಲ್ಲಿ ಯುವರಾಜ ಅಂಗದ ಇದಾನೆ. ಅಪಶಕುನಗಳಾದವು. ಆತಂಕವಾಯಿತು ಅವನಿಗೆ ಆದರೂ ಧೈರ್ಯದಿಂದ ಹೋದ. ಯುದ್ಧ ಆರಂಭವಾಯಿತು.
ವಜ್ರದಂಷ್ಟ್ರ ಮತ್ತು ಅವನ ಅನೇಕ ಸೈನಿಕರು ವಾನರಸೇನೆಯನ್ನು ಪರಾಭವಗೊಳಿಸ್ತಿದಾರೆ. ದೊಡ್ಡ ವೃಕ್ಷವನ್ನು ಹಿಡಿದುಕೊಂಡು ಧಾವಿಸಿದ ಅಂಗದ. ಅಂಗದನ ಧಾಳಿಗೆ ಇಡೀ ರಾಕ್ಷಸಸೈನ್ಯ ಕಂಪಿಸಿತು. ಕ್ರುದ್ಧನಾದ ವಜ್ರದಂಷ್ಟ್ರ. ವಜ್ರದಂಷ್ಟ್ರ ಮತ್ತು ಅಂಗದನಿಗೆ ಯುದ್ಧ ಪ್ರಾರಂಭವಾಯಿತು. ಅವನ ರಥವನ್ನು ಧ್ವಂಸ ಮಾಡಿದ ಅಂಗದ. ತನ್ನ ಗದೆಯೊಡನೆ ಹಾರಿದ ವಜ್ರದಂಷ್ಟ್ರ. ಅಂಗದನ ಹೊಡೆತದಿಂದ ಮೂರ್ಛೆ ತಪ್ತಾನೆ. ಮತ್ತೆ ಎದ್ದು ಗದೆಯಿಂದ ಅಂಗದನ ವಕ್ಷಸ್ಥಲಕ್ಕೆ ಹೊಡೆದ. ಗದೆ ಚೂರಾಯಿತು. ಕೊಂಚ ಹೊತ್ತಿನಲ್ಲಿ ಇಬ್ಬರಿಗೂ ಸುಸ್ತಾಗಿ ಮಂಡಿಯಲ್ಲಿ ಕುಳಿತರಂತೆ. ಕ್ಷಣಮಾತ್ರದಲ್ಲಿ ಎದ್ದ ಅಂಗದ ಖಡ್ಗದಿಂದ ವಜ್ರದಂಷ್ಟ್ರನ ತಲೆ ಕತ್ತರಿಸಿದ.

ರಾಕ್ಷಸರೆಲ್ಲ ಲಂಕೆಗೆ ಪಲಾಯನ ಮಾಡಿದಾರೆ. ರಾವಣನಿಗೆ ಸುದ್ಧಿ ಗೊತ್ತಾಯಿತು. ಆಗ ರಾವಣನಿಗೆ ನೆನಪಾದ ಹೆಸರು ಅಕಂಪನ. ಸೀತಾಪಹರಣದ ಪ್ರೇರಣೆ ಕೊಟ್ಟವನು. ಅಕಂಪನ ಹೊರಟ ತನ್ನ ಸೇನೆಯೊಂದಿಗೆ. ಅಪಶಕುನಗಳಾದವು. ಅಕಂಪನ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಯುದ್ಧ ಪ್ರಾರಂಭವಾಯಿತು.
ಮೈಂದ-ದ್ವಿವಿಧರು ಭಯಂಕರ ಯುದ್ಧವನ್ನು ಮಾಡಿದರು. ರಾಕ್ಷನ ಸೇನೆ ಪರಾಭವಗೊಳ್ತಿದೆ. ಅಕಂಪನ ಆ ಕಡೆಗೆ ತೆರಳ್ತಾನೆ. ಅವನನ್ನು ಎದುರಿಸಲಾಗಲಿಲ್ಲ ವಾನರರಿಗೆ. ಪಶ್ಚಿಮ ದಿಕ್ಕಿನಲ್ಲಿ ಯುದ್ಧ ನಡೀತಿದೆ. ಹನುಮಂತ ತನ್ನವರನ್ನ ಗಮನಿಸ್ತಾನೆ. ಅವರ ರಕ್ಷಣೆಗೆ ಧಾವಿಸ್ತಾನೆ. ಅಕಂಪನ ಹನುಮಂತನ ಮೇಲೆ ಬಾಣಗಳ ಮಳೆಗರಿತಾನೆ. ಅಕಂಪನನೆಡೆಗೆ ಗಿರಿಶಿಖರವನ್ನು ಹೊತ್ತು ಬರ್ತಾ ಇದಾನೆ ಹನುಮಂತ. ಅಕಂಪನ ಅದನ್ನು ತನ್ನ ಬಾಣದಿಂದ ಭೇದಿಸಿದ. ದೊಡ್ಡ ಮರವನ್ನು ಕಿತ್ತ ಹನುಮಂತ. 14 ಬಾಣಗಳಿಂದ ಹನುಮಂತನ ಮೇಲೆ ಪ್ರಯೋಗಿಸ್ತಾನೆ ಅಕಂಪನ. ಮತ್ತೊಂದು ವೃಕ್ಷ ಕಿತ್ತು ಅದನ್ನು ಬಲವಾಗಿ ಅಕಂಪನನಿಗೆ ಬಡಿದ. ಹತನಾದ ಅಕಂಪನ. ಧಾವಿಸಿದರು ಲಂಕೆಯೆಡೆಗೆ ರಾಕ್ಷಸರು.

ರಾವಣನಿಗೆ ವಾರ್ತೆ ತಲುಪಿತು. ದೀನನಾದ ರಾವಣ. ಒಂದಷ್ಟು ಹೊತ್ತು ಸುಮ್ಮನೆ ಕುಳಿತ. ನಂತರ ನಗರಾವಲೋಕನಕ್ಕೆ ಹೊರಟ. ತನ್ನ ಸೇನೆಯನ್ನು ನೋಡಿಬರಲು. ಸೇನೆಯಿಂದ ತುಂಬಿದೆ ಲಂಕೆ. ಅದು ಕಾಣಲಿಲ್ಲ ರಾವಣನಿಗೆ. ಅವನಿಗೆ ಕಂಡಿದ್ದು ಲಂಕೆಯ ಹೊರಗಿದ್ದ ವಾನರರು. ಪಕ್ಕದಲ್ಲಿದ್ದ ಪ್ರಹಸ್ತನನ್ನು ಕುರಿತು ಹೇಳಿದನಂತೆ. ಲಂಕೆಗೆ ಮುತ್ತಿಗೆ ಹಾಕಲಾಗಿದೆ. ಯುದ್ಧ ಮಾಡಲೇಬೇಕಾಗಿದೆ. ಅದರ ಹೊರತು ಅನ್ಯ ದಾರಿಯಿಲ್ಲ. ನಮ್ಮಲ್ಲಿನ ಅನೇಕ ರಾಕ್ಷಸರಿಗೆ ಈ ಯುದ್ಧವನ್ನು ಎದುರಿಸಲು ಸಾಧ್ಯವಿಲ್ಲ. ನಾನು ಎದುರಿಸಬಹುದು, ಕುಂಭಕರ್ಣ, ಇಂದ್ರಜಿತು, ಸೇನಾಪತಿಯಾದ ನೀನು, ಕುಂಭಕರ್ಣನ ಎರಡನೆಯ ಮಗ ನಿಕುಂಭ. ನಮ್ಮ ಹೊರತು ಇನ್ನಾರಿಗೂ ಇದು ಸಾಧ್ಯವಿಲ್ಲ. ಹಾಗಾಗಿ ಪ್ರಹಸ್ತ ನೀನು ಹೊರಡು. ನೀನು ಹೊರಗೆ ಹೋಗುತ್ತಿರುವಂತೆಯೇ ಕಪಿಗಳು ಪಲಾಯನ ಮಾಡ್ತಾರೆ. ನೋಡು ಪ್ರಹಸ್ತ ಒಂದು, ಆಪತ್ತು ಸಂಶಯ ಇನ್ನೊಂದು, ಆಪತ್ತು ನಿಶ್ಚಿತ. ಹೋದರೆ ಆಪತ್ತು ಸಂಶಯ. ಇಲ್ಲದಿದ್ದರೆ ಅವರು ಇಲ್ಲಿಗೆ ಬರ್ತಾರೆ ಆಪತ್ತು ನಿಶ್ಚಿತ. ಇದರ ಹೊರತು ಬೇರೆ ಅಭಿಪ್ರಾಯವಿದ್ದರೆ ಹೇಳು. ಪ್ರಹಸ್ತ ಹೇಳ್ತಾನೆ. ಅವತ್ತು ಸಮಾಲೋಚನೆ ಮಾಡಿದಾಗ ವಿಭೀಷಣ ಹೇಳಿದಂತೆ ನಾನೂ ಹೇಳಿದ್ದೆ. ಸೀತೆಯನ್ನು ಕೊಟ್ಟುಬಿಡು ಎಂದು ಹೇಳಿದ್ದೆ ಅಂತ ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳ್ತಿದಾನೆ. ಕೊನೆಯಲ್ಲಿ ಹೇಳ್ತಾನೆ. ನನಗೆ ಸಮೃದ್ಧಿ ಕೊಟ್ಟಿದೀಯೆ, ನಿನಗೆ ಪ್ರಿಯವಾದದ್ದನ್ನು ನಾನು ಮಾಡಬೇಕು. ನೋಡು ನೀನು ನಿನಗಾಗಿ ನನ್ನ ಪ್ರಾಣವನ್ನು ಆಹುತಿಯಾಗಿ ನೀಡುವುದನ್ನು ಕಾಣುವಿಯಂತೆ ಎಂದ. ಇದಿಷ್ಟು ಹೇಳಿ ಸೈನ್ಯ ಸಜ್ಜುಗೊಳಿಸಲು ಹೇಳಿದ. ಸೇನಾ ವ್ಯವಸ್ಥೆಯಾಯಿತು. ತನ್ನ ಮಹಾಸೇನೆಯೊಂದಿಗೆ ನಾಲ್ವರು ಸಹಚರರೊಡಗೂಡಿ ಹೊರಟ ಪ್ರಹಸ್ಥ. ಅನೇಕ ಅಪಶಕುನಗಳಾದವು. ಪೂರ್ವಾಭಿಮುಖವಾಗಿ ಬರ್ತಿದಾನೆ. ಅಲ್ಲಿ ವಾನರ ಸೇನಾಪತಿ ನೀಲನಿದ್ದಾನೆ. ಸೇನಾಪತಿಗಳ ಯುದ್ಧ ಆಗುವಂಥದ್ದು. ದುರ್ಮತಿ ಪ್ರಹಸ್ತ ಹೊರಟ ಅಂತ ವಾಲ್ಮೀಕಿಗಳು ಹೇಳ್ತಾರೆ. ಅವನ ಪರಿಚಯವನ್ನ ಕೇಳ್ತಾನೆ ರಾಮ ವಿಭೀಷಣನಲ್ಲಿ.

ವಿಭೀಷಣ ರಾಮನಿಗೆ ಪ್ರಹಸ್ತನ ಪರಿಚಯ ಮಾಡಿಸ್ತಾನೆ. ಅದನ್ನು ಮುಂದಿನ ಪ್ರವಚನದಲ್ಲಿ ನೋಡೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments