ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ರಾಮನು ಪ್ರಹಸ್ತ ಹೊರಗೆ ಬಂದಾಗ ಅವನ ಪರಿಚಯವನ್ನು ಕೇಳ್ತಾ ಇದ್ದಾನೆ. ಪ್ರಹಸ್ತನಲ್ಲಿ ಬೇಕಾದಷ್ಟು ಬಲವೋ, ಪರಾಕ್ರಮವೋ, ಬುದ್ಧಿ, ವೈಭವವೋ, ತೇಜಸ್ಸೋ ಎಲ್ಲಾ ಇದೆ. ಹಾಗಾಗಿಯೇ ವಿಭೀಷಣನ ಬಳಿ ಮುಗುಳ್ನಕ್ಕು ಕೇಳ್ತಾನೆ ಶ್ರೀರಾಮ, ‘ಯಾರಿವನು? ಬಹುದೊಡ್ಡ ಶರೀರದವನು, ಬಹುದೊಡ್ಡ ಸೈನ್ಯದೊಂದಿಗೆ ಹೊರಗೆ ಬರ್ತಾ ಇದ್ದಾನೆ. ಮೇಲ್ನೋಟಕ್ಕೆ ಹೇಳ್ಬಹುದು ಇವನಾರೋ ವೀರ್ಯವಂತ’ ಎಂಬುದಾಗಿ. ವಿಭೀಷಣ ವಿವರಣೆ ಕೊಟ್ಟ, ‘ಇವನು ಪ್ರಹಸ್ತ, ರಾವಣನ ಸೇನಾಪತಿ. ಮಂತ್ರಿಯೂ ಕೂಡ ಹೌದು, ರಾವಣನ ಅತ್ಯಾಪ್ತರಲ್ಲಿ ಓರ್ವ, ಬಹಳ ಹಳೆಯ ಕಾಲದಿಂದ ರಾವಣನ ಜೊತೆಗಿರುವವನು. ಅವನ ಜೊತೆಗೆ ರಾವಣನ ಒಟ್ಟು ಸೇನೆಯ ಮೂರನೇ ಒಂದು ಭಾಗ ಹೊರಗೆ ಬಂದಿದೆ. ಇವನು ವೀರ, ಅಸ್ತ್ರಜ್ಞ, ಶೂರ, ಪರಾಕ್ರಮದಲ್ಲಿ ಪ್ರಖ್ಯಾತ’. ಹೀಗೆ ರಾಮ ವಿಭೀಷಣರು ಮಾತಾಡ್ತಾ ಇರುವಾಗ, ಪೂರ್ವದಿಕ್ಕಿನ ವಾನರಸೇನೆಯು ಪ್ರಹಸ್ತನನ್ನು ಮತ್ತು ಅವನ ಮಹಾಸೈನ್ಯವನ್ನು ಗಮನಿಸಿ ಯುದ್ಧೋತ್ಸಾಹದಿಂದ ಮೇಲೆದ್ದರು. ಘೋರ ಸಮರವೂ ನಡೀತಂತೆ, ರಾಕ್ಷಸರ ಕಡೆಯಿಂದ ಶರವೃಷ್ಟಿ, ಕಪಿಗಳ ಕಡೆಯಿಂದ ಶಿಲಾವೃಷ್ಟಿ! ಏತನ್ಮಧ್ಯದಲ್ಲಿ ಪ್ರಹಸ್ತನ ನಾಲ್ವರು ಸಚಿವರು ವಾನರರ ಸಂಹಾರವನ್ನು ಅವ್ಯಾಹತವಾಗಿ ಮಾಡ್ತಾ ಇದ್ದಾಗ, ಇವರನ್ನು ಹೀಗೆ ಬಿಟ್ಟರೆ ಸರಿಯಲ್ಲ ಎಂಬ ಕಾರಣಕ್ಕೆ ನಾಲ್ವರು ವಾನರ ನಾಯಕರು ಆ ನಾಲ್ವರಿಗೆ ಪ್ರತಿಧ್ವನಿಗಳಾಗಿ ಸಜ್ಜಾದರು.

ದ್ವಿವಿದನು ಒಂದು ಗಿರಿಶೃಂಗವನ್ನು ಕೈಗೆತ್ತಿಕೊಂಡು ಅದರಿಂದ ನರಾಂತಕನನ್ನು ಸಂಹಾರವೇ ಮಾಡಿದ. ಬಳಿಕ ದುರ್ಮುಖನೆಂಬ ಮತ್ತೊಬ್ಬ ಕಪಿ ದೊಡ್ಡ ದೊಡ್ಡವೃಕ್ಷವನ್ನು ತೆಗೆದುಕೊಂಡು ಸಮುನ್ನತನನ್ನು ತಿವಿದುಬಿಟ್ಟ. ಮತ್ತೇನೂ ಉಳಿದಿಲ್ಲ ಅಲ್ಲಿ. ಆಮೇಲೆ ಹಿರಿಯ ಜಾಂಬವಂತ ಸೀದಾ ದೊಡ್ಡ ಬಂಡೆಯನ್ನು ತೆಗೆದುಕೊಂಡು ಬಂದು ಮಹಾನಾದನ ಎದೆಯ ಮೇಲೆ ಪ್ರಹರಿಸಿದ. ಅದು ಮುಕ್ತಾಯ. ಕುಂಭಹನುವನ್ನು ತಾರನೆಂಬ ವಾನರನಾಯಕನು ದೊಡ್ಡ ಮರದಿಂದ ನೆತ್ತಿಯ ಮೇಲೆ ಬಡಿದು ಆತನನ್ನು ಸಂಹಾರ ಮಾಡಿದ. ಪ್ರಹಸ್ತ ನೋಡ್ತಾ ಇದ್ದಾನೆ, ಅವನ ಕಣ್ಮುಂದೆ ಅವನ ನಾಲ್ವರು ಸಚಿವರು ಹತರಾಗಿ ಹೋಗಿದ್ದಾರೆ. ಸಹಿಸಲಿಕ್ಕೆ ಆಗಲಿಲ್ಲ ಅವನಿಗೆ. ಘೋರಯುದ್ಧವನ್ನು ವಾನರರ ಜೊತೆಗೆ ಪ್ರಹಸ್ತ ಮಾಡ್ತಾ, ಏಕಾಂಗಿಯಾಗಿ ವಾನರರನ್ನು ಹಿಮ್ಮೆಟ್ಟಿಸ್ತಾ ಇದ್ದಾನೆ. ಈ ಸಾರಿ ರಕ್ತದ ಹೊಳೆ ಭೀಕರವಾಗಿ ಹರಿಯಿತು. ಏತನ್ಮಧ್ಯೆ, ರಥದ ಮೇಲೆ ಕುಳಿತು ಬಾಣಗಳ ಮಳೆಯನ್ನು ಸುರಿಸುವ ಪ್ರಹಸ್ತನನ್ನು ನೀಲನು ಕಂಡ. ನೀಲನು ರಾಕ್ಷಸ ಸೈನ್ಯವನ್ನು ಚದುರಿಸ್ತಾ ಇದ್ದಾನೆ. ಹಾಗಾಗಿ, ಪ್ರಹಸ್ತನು ನೀಲನ ಬಳಿಗೆ ಸಾಗಿ, ನೀಲನ ಮೇಲೆ ಬಾಣಗಳನ್ನು ಪ್ರಯೋಗಿಸಿದನು. ಆ ಬಾಣಗಳು ನೀಲನನ್ನು ಭೇದಿಸಿದವು. ಕೋಪಗೊಂಡ ನೀಲ, ಒಂದು ವೃಕ್ಷವನ್ನು ತಂದು ಪ್ರಹಸ್ತನ ಮೇಲೆ ಅಪ್ಪಳಿಸಿದ. ಪ್ರಹಸ್ತ ಆ ವೃಕ್ಷ ಪ್ರಹಾರವನ್ನ ಸಹಿಸಿದ, ನೀಲನ ಮೇಲೆ ಬಾಣಗಳ‌ ಮಳೆಯನ್ನೇ ಗರೆದ. ಅವುಗಳನ್ನು ತಡೆಯಲಿಕ್ಕೆ ನೀಲನಿಗೆ ಸಾಧ್ಯವಾಗಲಿಲ್ಲ; ಕಣ್ಮುಚ್ಚಿ, ತಲೆ ಬಗ್ಗಿ ಸಹಿಸುತ್ತಲೇ ಒಂದು ಸಾಲವೃಕ್ಷವನ್ನು ಕಿತ್ತು ನೇರವಾಗಿ ಪ್ರಹಸ್ತನ ರಥದ ಬಳಿಗೆ ಬಂದು ಅವನ ಕುದುರೆಗಳನ್ನು ಬಡಿದು ಕೊಂದುಬಿಟ್ಟ. ಮರುಕ್ಷಣದಲ್ಲಿ ಪ್ರಹಸ್ತನ ಕೈಯಿಂದ ಧನುಸ್ಸನ್ನು ಕಿತ್ತುಕೊಂಡು ಮುರಿದುಬಿಟ್ಟ ನೀಲ. ಹಾಗಾಗಿ ಒಂದು ಮುಸಲವನ್ನು ಕೈಗೆತ್ತಿಕೊಂಡು ರಥದಿಂದ ಕೆಳಗೆ ಧುಮುಕಿದನು ಪ್ರಹಸ್ತ. ಅವರಿಬ್ಬರ ಮಧ್ಯೆ ಭೂಮಿಯಲ್ಲಿ ಘೋರವಾದ ಯುದ್ಧ ನಡೆಯಿತು. ಮುಸಲ ಹೋಗಿ ಮಲ್ಲಯುದ್ಧ ನಡೀತಾ ಇದೆ. ಇಬ್ಬರ ಶರೀರದಲ್ಲಿಯೂ ಇಬ್ಬರ ಕೋರೆ ದವಡೆಗಳ ಆಳದ ಗುರುತುಗಳು ಬಿದ್ದವು. ಯುದ್ಧ ಮುಂದುವರೀತಾ ಇದೆ, ಏತನ್ಮಧ್ಯೆ ಆ ಮುಸಲವನ್ನು ಕೈಗೆತ್ತಿಕೊಂಡ ಪ್ರಹಸ್ತನು ನೀಲನ ಶಿರಸ್ಸಿನ ಮೇಲೆ ಬಲವಾಗಿ ಪ್ರಹರಿಸ್ತಾನೆ. ಹಣೆ ಒಡೆದು ರಕ್ತ ಚಿಮ್ಮಿದೆ ನೀಲನಿಗೆ. ಆದರೆ, ಇರಲಿ ಬಿಡು ಎಂಬಂತೆ ಇನ್ನೊಂದು ದೊಡ್ಡ ವೃಕ್ಷವನ್ನು ತಂದು ಪ್ರಹಸ್ತನನ್ನು ಅಪ್ಪಳಿಸಿದ ನೀಲ. ಇದನ್ನೂ ಲೆಕ್ಕಿಸಲಿಲ್ಲ ಪ್ರಹಸ್ತ. ಮಿಂಚಿನ ವೇಗದಲ್ಲಿ‌ ಬಂದ ನೀಲನು ಆ ಮುಸಲಯೋಧಿ ಪ್ರಹಸ್ತನ ನೆತ್ತಿಯ ಮೇಲೆ ದೊಡ್ಡ ಶಿಲೆಯಿಂದ ಅಪ್ಪಳಿಸಿದಾಗ, ಅಲ್ಲಿಗೆ ಪ್ರಹಸ್ತನ ಆಯಸ್ಸು ಮುಗಿದು ಹೋಯಿತು. ಇಬ್ಬರು ಸೇನಾಪತಿಗಳ ನಡುವೆ ನಡೆದ ಸಮರದಲ್ಲಿ ರಾಕ್ಷಸ ಸೇನಾಪತಿಯ ಅವಸಾನವಾಯಿತು.

ಈ ಆಘಾತವನ್ನು ತಡೆದುಕೊಳ್ಲಿಕ್ಕೆ ಪ್ರಹಸ್ತನ ಸೈನ್ಯಕ್ಕೆ ಸಾಧ್ಯವಾಗಲಿಲ್ಲ. ದುಃಖ ತಪ್ತರಾದ ರಾಕ್ಷಸರು ಲಂಕೆಯ ಕಡೆ ನಡೆದರು. ಅವರಿಗೆ ಕೈ ಕಾಲಾಡಲಿಲ್ಲ. ನೇರವಾಗಿ ರಾವಣನ ಮನೆಗೆ ಹೋಗಿ ಚಿಂತೆ ಮತ್ತು ಮೌನವನ್ನು ತಾಳಿ ಸುಮ್ಮನೆ ನಿಂತುಕೊಂಡರು‌. ಇದು ಬಹಳ ದೊಡ್ಡ ಪೆಟ್ಟಾಗಿತ್ತು. ಆ ಕಡೆಗೆ ನೀಲ ವಿಜಯಿಯಾಗಿದ್ದಾನೆ, ಎಲ್ಲ ಕಪಿಗಳೂ ಪ್ರಶಂಸೆ ಮಾಡ್ತಾ ಇದ್ದಾರೆ. ನೇರವಾಗಿ ಹೋಗಿ ರಾಮ-ಲಕ್ಷ್ಮಣರನ್ನು ಸೇರಿ ತನ್ನ ಹರ್ಷವನ್ನು‌ ಹಂಚಿಕೊಂಡ. ರಾಕ್ಷಸ ಸೈನ್ಯವು ಚದುರಿ ಓಡಿ ಹೋಗಿದೆ. ರಾವಣನಿಗೆ ಆತ್ಮೀಯನ ಸಾವಿನ ಸುದ್ದಿ ತಲುಪಿ ಭಯಂಕರವಾದ ಕ್ರೋಧವುಂಟಾಯ್ತಂತೆ. ಉಳಿದ ರಾಕ್ಷಸರಿಗೆ ಗಂಭೀರವಾಗಿ ಹೇಳಿದನಂತೆ, ‘ಈ ಶತ್ರುವಿನ ಬಗ್ಗೆ ಅವಜ್ಞೆಯನ್ನು ಮಾಡಕೂಡದು. ಇದು ಸಣ್ಣ ವಿಷಯವಲ್ಲ, ನಾನೇ ಹೊರಡ್ತೇ‌ನೆ’ ಅಂತ ಹೇಳಿ ಶತ್ರುಸಂಹಾರದ ಸಲುವಾಗಿ, ರಾಕ್ಷಸರ ವಿಜಯಕ್ಕಾಗಿ, ರಾವಣನೇ ಹೊರಟ ಯುದ್ಧಕ್ಕೆ. ಅವನ ಸುತ್ತ ಬೆಂಕಿಯ ಕಣ್ಣುಗಳ ಭೂತಗಳಿದ್ದವು! ಆ ನಗರಿಯಿಂದ ಹೊರಗೆ ಬಂದು ಉಗ್ರವಾದ ವಾನರ ಸೈನ್ಯವನ್ನು ನೋಡಿದ. ಸಾವಿರಾರು ಬೆಟ್ಟಗಳು, ವೃಕ್ಷಗಳನ್ನು ಹಿಡ್ಕೊಂಡು ನಿತ್ತಿದ್ದಾರೆ ಅವ್ರೆಲ್ಲ‌ ಕೈಯಲ್ಲಿ. ಏತನ್ಮಧ್ಯೆ ರಾಮನು ದೊಡ್ಡ ಸೈನ್ಯವನ್ನು ಅವಲೋಕನ ಮಾಡ್ತಾನೆ. ವಿಭೀಷಣನನ್ನು ರಾಮನು ಕೇಳ್ತಾನೆ, ‘ಅತಿ ಪ್ರಚಂಡವಾದ ರಾಕ್ಷಸ ಸೇನೆ, ಹೇಡಿಗಳು ಈ ಸೇನೆಯನ್ನು ನೋಡಿದರೇ ಎದೆ ಒಡೆದುಕೊಂಡಾರು. ಯಾರದಿದು?’.

ವಿಭೀಷಣ ಉತ್ತರ ಕೊಡ್ತಾನೆ, ‘ರಾವಣನೊಬ್ಬನೇ ಹೊರಗೆ ಬಂದಿಲ್ಲ, ಲಂಕೆಯ ಪ್ರಧಾನ ವೀರರೆಲ್ರೂ ಒಟ್ಟಿಗೆ ಬಂದಿದ್ದಾರೆ ಕುಂಭಕರ್ಣನೊಬ್ಬನನ್ನು ಬಿಟ್ಟು. ಅಕಂಪನ, ಇಂದ್ರಜಿತು (ಇವನೇ ಪ್ರಧಾನ ಲಂಕೆಯ ವೀರರ ಪೈಕಿಯಲ್ಲಿ), ಅತಿಕಾಯ, ಮಹೋದರ, ಪಿಶಾಚ, ತ್ರಿಶಿರ, ಕುಂಭ-ನಿಕುಂಭರು, ನರಾಂತಕ, ಅದರ ಬಳಿಕ ಒಂಟೆ, ಆನೆ, ಜಿಂಕೆ, ಕುದುರೆಗಳ ಮುಖದ ಭೂತಗಳು, ಅವರ ನಡುವೆ ಇರುವವನೇ ರಾಕ್ಷಸಾಧಿಪತಿ ರಾವಣ’. ಅವನ ತೇಜಸ್ಸನ್ನು ನೋಡಿ ರಾಮನಿಗೂ ಆಶ್ಚರ್ಯವಾಯಿತಂತೆ. ಬಳಿಕ ರಾಮ, ‘ಪಾಪಿ! ಕಣ್ಣಿಗೆ ಬಿದ್ದನಾ! ಅದೃಷ್ಟವಶಾತ್ ಈ ಪಾಪಾತ್ಮನು ಇಂದು ನನ್ನ ಕಣ್ಣಿಗೆ ಬಿದ್ದಿದ್ದಾನೆ. ಸೀತೆಯ ಅಪಹರಣದ ಕೋಪವನ್ನು ಇಂದು ನಾನು ಹೊರಹಾಕುವೆ. ಲಕ್ಷ್ಮಣಾ, ಕೊಡು ಧನುಸ್ಸನ್ನು’ ಎಂಬುದಾಗಿ ಧನುಸ್ಸನ್ನು, ಉತ್ತಮವಾದ ಬಾಣವನ್ನೂ ಕೈಗೆತ್ತಿಕೊಂಡ.

ಅತ್ತ, ರಾವಣನು ಉಳಿದ ಮಹಾರಾಕ್ಷಸರಿಗೆ ಹೇಳಿದ್ನಂತೆ, ‘ನೀವೆಲ್ಲ ನನ್ನ ಜೊತೆಗೆ ಬರ್ಬೇಡಿ. ಲಂಕೆಯ ನಾಲ್ಕೂ ದ್ವಾರಗಳಲ್ಲಿ, ಮಹಾಮಾರ್ಗಗಳು, ಗೋಪುರಗಳಲ್ಲಿ ಕಾವಲು ಕಾಯಿರಿ’. ಅವರು ಅತ್ತ ತೆರಳಿದ್ರು, ರಾವಣ ಮುಂದೆ ಬಂದ. ಸಮುದ್ರದಂತೆ ಇದ್ದ ಕಪಿಸೇನೆಯನ್ನು ರಾವಣನು ಪ್ರವೇಶ ಮಾಡ್ತಾನೆ. ತನ್ನ ಬಾಣಜಾಲದಿಂದ ವಾನರಸೇನೆಯನ್ನು ಸೀಳಿದ. ಆಗ ಸುಗ್ರೀವ ಕಾಣ್ತಾನೆ. ದೊಡ್ಡ ಪರ್ವತಾಘ್ರವನ್ನೇ ಕಿತ್ತು ಹಿಡಿದು ಆ ದೊಡ್ಡ ಶೈಲಶೃಂಗವನ್ನು ರಾವಣನ ಮೇಲೆ ಎತ್ತಿ ಎಸೆದ ಸುಗ್ರೀವ. ಆದ್ರೆ ಆ ಪರ್ವತಶಿಖರವನ್ನು ಚೂರಾಗಿಸಿದ ರಾವಣ ಒಂದು ಘೋರ ಬಾಣವನ್ನು ತೆಗೆದುಕೊಂಡು ಸುಗ್ರೀವನ ಮೇಲೆ ಪ್ರಯೋಗ ಮಾಡಿದ. ಆ ಬಾಣವು ಸುಗ್ರೀವನನ್ನು ಭೇದಿಸಿತು. ಸುಗ್ರೀವನಿಗೆ ನಿಲ್ಲಲಿಕ್ಕೆ ಸಾಧ್ಯವಾಗಲಿಲ್ಲ, ಚೀತ್ಕಾರ ಹೊರಗೆ ಬಂತು, ಕುಸಿದು ಬಿದ್ದ. ರಾಕ್ಷಸರು ಸಿಂಹನಾದ ಮಾಡಿದರು! ಆಗ ಐವರು ವಾನರ ನಾಯಕರು ಬೆಟ್ಟಗಳಿಂದ ರಾವಣನನ್ನು ಮುತ್ತುತ್ತಾರೆ, ರಾವಣ ಐದನ್ನೂ ನುಚ್ಚುನೂರು ಮಾಡಿ ಐದೂ ನಾಯಕರು ಬಿದ್ದುಬಿಟ್ಟಿದ್ದಾರೆ. ಬಳಿಕ ವಾನರ ಸೇನೆಯ ಮೇಲೆ ದಾಳಿ ಮಾಡ್ತಾನೆ. ಸೇನೆಯು ಆಕ್ರಂದನ ಮಾಡಿತು ಮತ್ತು ಎಲ್ಲ ಓಡಿದರು ರಾಮನಿದ್ದಲ್ಲಿಗೆ. ಅತ್ತ ರಾಮನು ರಾವಣನ ಕಡೆಗೇ ಬರ್ತಾ ಇದ್ದಾನೆ‌. ಆಗ ಲಕ್ಷ್ಮಣ ಅವನ ಮುಂದೆ ಬಂದು ಕೈಮುಗಿದು ಹೇಳಿದ್ನಂತೆ, ‘ಅಣ್ಣಾ, ನೀನವನ ವಧೆಯನ್ನು ಮಾಡಿಯೇ ಮಾಡಬಲ್ಲೆ ಎನ್ನುವುದು ಗೊತ್ತು ನನಗೆ. ಆದರೆ ನನಗೊಂದು ಅವಕಾಶ ಕೊಡು, ಆ ನೀಚನಿಗೆ ನನ್ನ ಬಾಣದ ರುಚಿ ತೋರಿಸ್ತೇನೆ’ ಎಂದಾಗ ಒಪ್ಪಿದನಂತೆ ರಾಮ, ಆದರೆ ಎಚ್ಚರಿಕೆಯನ್ನೂ ಕೊಡ್ತಾನೆ. ಅತ್ತ ಹನುಮಂತ ರಾವಣನ ಮುಂದೆ ಬಂದು ರಾವಣನ ಬಾಣದ ಮಳೆಯನ್ನು ತನ್ನ ಪರ್ವತಗಳ ಮತ್ತು ವೃಕ್ಷಗಳ ಮಳೆಯಿಂದ ತಡೆದ ಹನುಮಂತ. ಆಮೇಲೆ ನೇರವಾಗಿ ರಾವಣನ ರಥದೆದುರು ಹೋಗಿ ಬಲಭುಜವನ್ನು ಮೇಲೆತ್ತಿ ರಾವಣನನ್ನು ಬೆದರಿಸಿದನಂತೆ, ‘ನಿನ್ನ ವರವನ್ನು ನೆನಪು ಮಾಡ್ಕೋ, ನಿನ್ನ ಪಟ್ಟಿಯಲ್ಲಿ ನಾವಿಲ್ಲ. ವಾನರರಿಂದ ಆಪತ್ತು ನಿನಗೆ’ ಎಂಬುದಾಗಿ. ರಾವಣನಿಗೆ ಸಿಟ್ಟು ಬಂದು ಹನುಮಂತನಿಗೆ ಹೇಳಿದನಂತೆ, ‘ಬೇಗ ಹೊಡಿ, ನಿನ್ನ ಪರಾಕ್ರಮವನ್ನು ನೋಡಿದ ಮೇಲೆ ನಿನ್ನನ್ನು ನೋಡಿಕೊಳ್ತೇನೆ’ ಎಂಬುದಾಗಿ. ಅದಕ್ಕೆ ನಾನು ಹೊಡೆದಾಗಿದೆ ಎಂದು ಹೇಳಿದಾಗ ಹನುಮಂತನ ವಕ್ಷಸ್ಥಳದ ಮೇಲೆ ತನ್ನ ತಲದಿಂದ ಇದ್ದಷ್ಟು ಶಕ್ತಿ ಹಾಕಿ ಹೊಡೀತಾನೆ. ಹನುಮಂತ ಒಮ್ಮೆ ಕಂಪಿಸಿದ. ಆಮೇಲೆ ಅದೇ ರೀತಿ ತಿರುಗಿ ರಾವಣನಿಗೆ ಹನುಮಂತ ಹೊಡೆದಾಗ ರಾವಣ ಬಹಳ ಕಂಪಿಸಿದನಂತೆ. ಆಗ ದೇವತೆಗಳೆಲ್ಲ ಹರ್ಷೋದ್ಗಾರ ಮಾಡ್ತಾರೆ.

ಮತ್ತೆ ರಾವಣನು ಮುಷ್ಟಿಯಿಂದ ಹನುಮಂತನ ವಕ್ಷಸ್ಥಳಕ್ಕೆ ಪ್ರಹಾರ ಮಾಡ್ತಾನೆ, ಮತ್ತೊಮ್ಮೆ ಕಂಪಿಸಿದ ಹನುಮಂತ. ಅವನು ಮತ್ತೆ ನಿಂತುಕೊಳ್ಳುವುದರ ಒಳಗೆ ರಾವಣನು ನೀಲನ ಕಡೆಗೆ ಹೋದನಂತೆ. ವಾನರ ಸೇನಾಪತಿಯನ್ನು ನಾನಾ ಪ್ರಕಾರ ಬಾಣಗಳಿಂದ ಪ್ರಹಾರ ಮಾಡ್ತಾ ಇದ್ದಾನೆ. ಒಂದೇ ಕೈಯಲ್ಲಿ ಒಂದು ಬೆಟ್ಟ ಹಿಡ್ಕೊಂಡು ನಿಂತಿದ್ದ ನೀಲ ರಾವಣನ ಮೇಲೆ ಬೆಟ್ಟವನ್ನೆತ್ತಿದ. ನೀಲನ ಗಿರಿಶೃಂಗವನ್ನು ಏಳು ಬಾಣಗಳಿಂದ ವಿಫಲ ಮಾಡಿದ ರಾವಣ. ನೀಲ ಸಿಟ್ಟಿನಿಂದ ಒಂದರ ಹಿಂದೆ ಒಂದರಂತೆ ಹಲವಾರು ವೃಕ್ಷಗಳನ್ನು ರಾವಣನ ಕಡೆಗೆ ಎಸೆದ, ಅವೆಲ್ಲವನ್ನೂ ಕಡಿದು ಘೋರವಾದ ಬಾಣಗಳಿಂದ ಅಭಿಷೇಕ ಮಾಡಿದ ರಾವಣ. ನೀಲ ಕೂಡಲೇ ಚಿಕ್ಕ ರೂಪವನ್ನು ತಾಳಿ ತಪ್ಪಿಸಿಕೊಂಡು, ಹೋಗಿ ರಾವಣನ ರಥದ ಮೇಲೆ ಹಾರಿ ಧ್ವಜದ ತುದಿಯಲ್ಲಿ ಕುಳಿತುಕೊಂಡ. ರಾವಣ ಮೇಲೆ ನೋಡಿದಾಗ ಅಲ್ಲಿಂದ ಹಾರಿ, ರಾವಣನ ಧನುಸ್ಸಿನ ಮೇಲೆ ಹೋಗಿ ಕುಳಿತುಕೊಂಡ. ಕೊನೆಗೆ ಕಿರೀಟದ ಮೇಲೆ ಕುಳಿತ. ರಾವಣನಿಗೆ ಭ್ರಮೆ ಉಂಟಾಯಿತು. ಸಿಟ್ಟಿನಿಂದ ಆಗ್ನೇಯಾಸ್ತ್ರವನ್ನು ಕೈಗೆತ್ತಿಕೊಂಡ. ಅದು ನೀಲನನ್ನು ಹುಡುಕಿಕೊಂಡು ಹೋಗಿ‌ ಹೊಡೆಯಿತು. ಕುಸಿದ ನೀಲ ಮಂಡಿಯ ಮೇಲೆ ಕುಳಿತುಕೊಂಡ ಆದರೆ ಪ್ರಾಣ ಹೋಗಲಿಲ್ಲ.

ಆಗ ರಾವಣನು ಲಕ್ಷ್ಮಣನ ಕಡೆಗೆ ತಿರುಗಿ ತನ್ನ ಧನುಸ್ಸನ್ನು ಠೇಂಕರಿಸಿದ, ಭೂಮಿಯೇ ಕಂಪಿಸಿದಂತೆ. ತನ್ನ ಪರಾಕ್ರಮದಿಂದ ಲಕ್ಷ್ಮಣನನ್ನೂ, ಸಮಸ್ತ ವಾನರಸೇನೆಯನ್ನೂ ತಡೆದು ನಿಲ್ಲಿಸಿದ್ದಾನಂತೆ ರಾವಣ. ಆಗ ಲಕ್ಷ್ಮಣ ಹೇಳಿದನಂತೆ, ‘ಬಾ, ಬಾ, ಉಳಿದ ವಾನರ ಸೇನೆ ನಿನಗೆ ಸಾಲದು, ನಿನ್ನ ಘನತೆಗೆ ಕಡಿಮೆಯಾಯಿತು, ನನ್ನ ಬಳಿಗೆ ಬಾ’ ಎಂದು ಧನುಷ್ಠೇಂಕಾರ ಮಾಡಿದನಂತೆ. ಆಗ ರಾವಣ, ‘ಒಳ್ಳೆಯದಾಯಿತು, ನನ್ನ ಕಣ್ಣಿಗೆ ಬಿದ್ದೆ ನೀನು. ಇದು ನಿನ್ನ ಕೊನೆ’ ಎಂಬುದಾಗಿ ಅಬ್ಬರಿಸಿದಾಗ ಲಕ್ಷ್ಮಣ, ‘ಪಾಪಕರ್ಮಿಗಳಲ್ಲಿ ಅಗ್ರಗಣ್ಯ ನೀನು. ಬಾ, ಯುದ್ಧ ಮಾಡು. ಕೊಚ್ಚಕೊಳ್ಳಬೇಡ’ ಎಂದಾಗ ಏಳು ಬಾಣಗಳನ್ನು ರಾವಣ ಎಸೆದ ಲಕ್ಷ್ಮಣನ ಕಡೆಗೆ. ಏಳೂ ಬಾಣಗಳನ್ನು ಲಕ್ಷ್ಮಣ ಕತ್ತರಿಸಿದ. ಆಗ ಬಾಣಗಳ ಮಳೆಯನ್ನೇಗರೆದ, ಲಕ್ಷ್ಮಣ ಅವೆಲ್ಲವನ್ನೂ ಕತ್ತರಿಸಿದ. ಅಚ್ಚರಿಗೊಂಡ ರಾವಣ. ಬಳಿಕ ಲಕ್ಷ್ಮಣನೂ ಕೆಲವು ಬಾಣಗಳನ್ನು ಬಿಡ್ತಾನೆ, ಆದರೆ ರಾವಣ ಅವುಗಳನ್ನು ಕತ್ತರಿಸ್ತಾನೆ. ಬಳಿಕ, ಲಕ್ಷ್ಮಣನ ಹಣೆಯನ್ನು ಭೇದಿಸ್ತಾನೆ. ಕಷ್ಟ ಆಯ್ತು ಲಕ್ಷ್ಮಣನಿಗೆ, ಎಚ್ಚರ ತಪ್ಪಿತು. ಬಹಳ ಕಷ್ಟದಿಂದ ಮತ್ತೆ ಎಚ್ಚರಗೊಂಡ ಲಕ್ಷ್ಮಣ, ರಾವಣನ ಧನುಸ್ಸನ್ನು ಕತ್ತರಿಸಿದ ಮತ್ತು ಮೂರು ಬಾಣಗಳಿಂದ ರಾವಣನನ್ನು ಪ್ರಹರಿಸಿದ. ರಾವಣನಿಗೆ ಪ್ರಜ್ಞೆ ತಪ್ಪಿತು. ಎಚ್ಚೆತ್ತ ರಾವಣ ಒಂದು ಶಕ್ತ್ಯಾಯುಧವನ್ನು ಕೈಗೆತ್ತಿಕೊಂಡು ಲಕ್ಷ್ಮಣನ ಕಡೆಗೆಸೆದ. ಲಕ್ಷ್ಮಣ ಅನೇಕಾನೇಕ ಬಾಣಗಳನ್ನು ಪ್ರಯೋಗಿಸ್ತಾನೆ ಆ ಶಕ್ತ್ಯಾಯುಧದ ಮೇಲೆ, ಅದು ನಿಲ್ಲಲೇ ಇಲ್ಲ, ಲಕ್ಷ್ಮಣನ ಎದೆ ಸೇರಿತು, ಕುಸಿದು ಬಿದ್ದ. ಅರೆಪ್ರಜ್ಞೆಯಿಂದ ಬಿದ್ದ ಲಕ್ಷ್ಮಣನನ್ನು ಎತ್ತಿ ಲಂಕೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡ್ತಾನೆ ರಾವಣ. ಆದರೆ ವಿಷ್ಣುವಿನ ಅಂಶವಾದ ಲಕ್ಷ್ಮಣನನ್ನು ಎತ್ತಲಿಕ್ಕೆ ಸಾಧ್ಯವೇ ಆಗಲಿಲ್ಲ. ಆಗ ಎಲ್ಲಿಂದಲೋ ಚಂಡಮಾರುತದಂತೆ ಧಾವಿಸಿ ಬಂದನಂತೆ ಮಾರುತಿ, ರಾವಣನ ಎದೆಗೆ ಒಂದು ಗುದ್ದಿದನಂತೆ. ಪರಿಣಾಮ ಬಿದ್ದುಬಿಟ್ಟ ರಾವಣ. ಬಾಯಿ, ಕಣ್ಣು, ಕಿವಿಗಳಿಂದ ರಕ್ತ ಬಂತು. ತೆವಳಿ ರಥಯೇರಿದ್ರೆ, ಏನೂ ಮಾಡೋಕ್ಕಾಗ್ತಾ ಇಲ್ಲ, ಮೂರ್ಛಿತನಾದ. ಹನುಮ ನೇರವಾಗಿ ಲಕ್ಷ್ಮಣನನ್ನು ಮಗುವಿನ ತರಹ ಆರಾಮವಾಗಿ ಎತ್ಕೊಂಡು ಹೋಗ್ತಾನೆ ರಾಮನ ಬಳಿಗೆ. ಏತನ್ಮಧ್ಯೆ ಶಕ್ತ್ಯಾಯುಧ ಪುನಃ ರಾವಣನ ರಥವನ್ನು ಸೇರಿತು. ಲಕ್ಷ್ಮಣ ಚೇತರಿಸಿಕೊಳ್ತಾನೆ.

ಅತ್ತ ರಾವಣನೂ ಸ್ವಲ್ಪ ಸುಧಾರಿಸಿಕೊಂಡ, ಮತ್ತೆ ಯುದ್ಧಕ್ಕೆ ಸಜ್ಜಾಗ್ತಾನೆ. ಈಗ ರಾಮ ನೋಡ್ತಾನೆ, ವಾನರ ಸೇನೆಯ ನಾಯಕರು ಹೆಚ್ಚಿನವರೂ ಪತಿತರಾಗಿದ್ದಾರೆ. ಆಗ ರಾಮನು ರಾವಣನ ಕಡೆಗೆ ಧಾವಿಸ್ತಾನೆ. ಹನುಮಂತ ಅಡ್ಡ ಬಂದನಂತೆ. ಅವನು ರಥದ ಮೇಲೆ ಕೂತಿದ್ದಾನೆ, ನೀನು ಯಾಕೆ ನೆಲದ ಮೇಲೆ ನಿಲ್ಬೇಕು? ಸ್ವಲ್ಪವಾದ್ರೂ ಎತ್ತರದಲ್ಲಿ ಇರ್ಬೇಕು ನೀನು. ನನ್ನ ಬೆನ್ನ ಮೇಲೆ ಕೂತ್ಕೋಬೇಕು ನೀನು ಎಂಬುದಾಗಿ ಹನುಮಂತ ಪ್ರಾರ್ಥನೆ ಮಾಡಿದಾಗ, ಒಪ್ಪಿದ ರಾಮ ಮಹಾಬಲನಾದ ಹನುಮಂತನನ್ನು ಏರಿ ರಾವಣನತ್ತ ಸಾಗಿದ. ಸಿಡಿಲಿಗೆ ಸಮನಾದ ಧನುಷ್ಠೇಂಕಾರದೊಂದಿಗೆ ಯುದ್ಧಾಹ್ವಾನ ಮಾಡ್ತಾನೆ. ರಾವಣನಿಗೆ ರಾಮ ಹೇಳಿದನಂತೆ, ‘ನಿಲ್ಲು ನಿಲ್ಲು, ಇಂತಹ ಅಪ್ರಿಯವನ್ನು ಮಾಡಿದ ನೀನು ಎಲ್ಲಿ ಹೋಗಿಯೂ ನನ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನೀನು ಇಲ್ಲಿಯೇ ನಿಂತೆಯಾದರೆ ನಿನಗೆ ಮೃತ್ಯು ಸಿದ್ಧ ಈಗಲೇ. ತೋರಿಸು ನಿನ್ನ ಪರಾಕ್ರಮ’ ಎಂಬುದಾಗಿ ಹೇಳಿದಾಗ ರಾವಣ ಯುದ್ಧಕ್ಕೆ ಮುಂದಾದ. ತೀಕ್ಷ್ಣವಾದ ಬಾಣಗಳಿಂದ ಹನುಮಂತನನ್ನು ಭೇದಿಸ್ತಾ ಇದ್ದಾನೆ. ಹನುಮಂತನಿಗೇನೂ ಆಗ್ಲಿಲ್ಲ. ಆದರೆ ರಾಮ ನೋಡ್ತಾನೆ, ಕ್ರೋಧವಶನಾದ. ಅದರ ಪರಿಣಾಮ, ಮುಂದಿನ ಅರೆಕ್ಷಣದಲ್ಲಿ ರಾವಣನ ರಥವು ಭಗ್ನವಾಗಿದೆ, ಚಕ್ರಗಳು ತುಂಡಾಗಿವೆ, ಕುದುರೆಗಳು ಸತ್ತಿವೆ, ಸಾರಥಿ ಸತ್ತ, ಧನುಸ್ಸಿಲ್ಲ, ಏನೇನೂ ಉಳಿದಿಲ್ಲ. ಬಳಿಕ ಇನ್ನೊಂದು ಬಾಣದಿಂದ ರಾವಣನ ವಕ್ಷಸ್ಥಳವನ್ನು ಭೇದಿಸಿದ. ಆಗ ರಾವಣ ನಡುಗಿದ, ಆರ್ತನಾದ, ಓಲಾಡ್ತಾ ಇದ್ದಾನೆ. ಆಗ ರಾಮನು ಅರ್ಧಚಂದ್ರಾಕಾರದ ಬಾಣ ತೆಗೆದುಕೊಂಡು ರಾವಣ ತಲೆಯ ಮೇಲೆ ಪ್ರಯೋಗ ಮಾಡ್ತಾ ಇದ್ದಾನೆ. ಆದ್ರೆ, ತಲೆಯನ್ನು ತೆಗೆಯಲಿಲ್ಲ, ರಾವಣನ ಹತ್ತೂ ಕಿರೀಟಗಳನ್ನು ಕಿತ್ತೆಸೆದನಂತೆ.

ಎಲ್ಲವನ್ನು ಕಳೆದುಕೊಂಡು ಶಕ್ತಿಯಿಲ್ಲದೆ ಕುಸಿದು ಬಿದ್ದಿದ್ದಾನೆ. ರಾಮ ರಾವಣನಿಗೆ ಹೇಳಿದ್ನಂತೆ, ‘ಹೋಗು, ಬದುಕಿಕೋ. ಜೀವಸಹಿತ ಬಿಡ್ತೇನೆ ನಿನ್ನನ್ನು. ನನ್ನ ಕಡೆಯ ಅನೇಕ ವೀರರನ್ನು ನೀನು ಪತನಗೊಳಿಸಿದ್ದೀಯೆ. ಶ್ರಮವಾಗಿದೆ ನಿನಗೆ. ಇಂಥವರನ್ನು ಕೊಲ್ಲುವುದು ರಾಮನ ಕ್ರಮವಲ್ಲ. ಹಾಗಾಗಿ ಹೋಗು, ಅಪ್ಪಣೆ ಕೊಟ್ಟಿದ್ದೇನೆ. ನಿನಗೆ ವಿಶ್ರಾಂತಿಯ, ಚಿಕಿತ್ಸೆಯ ಅಗತ್ಯವಿದೆ. ಇನ್ನು ನಿನ್ನ ಸಹಜ ಉಲ್ಲಾಸದೊಡನೆ ಮತ್ತೆ ಯುದ್ಧಕ್ಕೆ ಬಾ, ಆಗ ತೋರಿಸ್ತೇನೆ ನಾನು ಏನೂಂತ. ರಾಮನದು ವೀರ ಕ್ಷತ್ರಿಯ ಸ್ವಭಾವ ಮತ್ತು ಅನುಕಂಪ! ಅದು ರಾಮ. ದರ್ಪವೆಲ್ಲವೂ ಅಡಗಿತು ರಾವಣನದು. ಹರ್ಷದ ಸೊಲ್ಲೇ ಇಲ್ಲ. ಅಂಥಾ ಸ್ಥಿತಿಯಲ್ಲಿ ಕಾಲೆಳೆದುಕೊಂಡು ಕೂಡಿದಷ್ಟು ಬೇಗ ಲಂಕೆಯ ಪ್ರವೇಶ ಮಾಡಿದ. ರಾವಣ ತೊಲಗಿದ ಮೇಲೆ ರಾಮನು ಲಕ್ಷ್ಮಣನಿಗೂ ವಾನರರಿಗೂ ಚಿಕಿತ್ಸೆ ಮಾಡಿಸ್ತಾನೆ. ಕಪಿಗಳೆಲ್ಲ ಸ್ವಸ್ಥರಾದರು‌ ಮತ್ತೆ. ಪ್ರಪಂಚದ ಸಮಸ್ತ ಜೀವಗಳೂ ಸಂತೋಷ ಪಟ್ಟಿದ್ದಾವೆ. ರಾವಣ ಮಾತ್ರ ರಾಮನ ಬಾಣಗಳ ಭಯದಿಂದ ಆವೃತಗೊಂಡು ಅಚಲಿತನಾಗಿದ್ದಾನೆ. ಎಲ್ಲಿ ಮುಟ್ಟಿದ್ರೂ ನೋವು ಎನ್ನುವ ಸ್ಥಿತಿ. ರಾಮನ ಬಾಣಗಳನ್ನು ನೆನಪು ಮಾಡಿ, ಮಾಡಿ ವ್ಯಥೆಪಡ್ತಾನೆ. ಸೀತೆಯ ಸೌಂದರ್ಯದ ಹಿಂದಿರುವ ರಾಮನ ಪರಾಕ್ರಮವನ್ನು ಅನುಭವಿಸಿದ. ತನ್ನ ಬಗ್ಗೆಯೇ ನಾಚಿಕೆಯಾಗ್ತಾ ಇದೆ. ರಾಕ್ಷಸರೆಲ್ಲ ನೋಡಿದ್ರಂತೆ, ಕಣ್ಣಿನಲ್ಲಿ ಸೋತ ಕಳೆ. ಹೇಳಿದನಂತೆ, ನನ್ನ ತಪಸ್ಸು ಪೂರ್ತಿ ವ್ಯರ್ಥ. ಒಬ್ಬ ಮನುಷ್ಯನ ಮುಂದೆ ಸೋತೆ.
ಬ್ರಹ್ಮವರ ನೆನಪಾಗ್ತಾ ಇದೆ, ‘ಮನುಷ್ಯ, ಮರ್ಕಟರಿಂದ ನಿನಗೆ ಸೋಲು, ಸಾವಿದೆ’. ಯಾಕೆ ಹಾಗೆ ಮಾಡಿದೆ ನಾನು? ಎಂದು ಎಷ್ಟೋ ಕಾಲ ಕಳೆದ ಮೇಲೆ ಪಶ್ಚಾತ್ತಾಪ ಆಗ್ತಾ ಇದೆ. ರಾಮನ ಪೂರ್ವಜ ಅನರಣ್ಯನನ್ನು ಅನ್ಯಾಯವಾಗಿ ಕೊಂದಿದ್ದು, ಅವನು ಸಾಯುವಾಗ, ‘ನನ್ನ ವಂಶದಲ್ಲಿ ಪುರುಷೋತ್ತಮನೊಬ್ಬ ಹುಟ್ಟಿ ಬರ್ತಾನೆ, ಅವನು ನಿನ್ನನ್ನು, ನಿನ್ನವರೆಲ್ಲರನ್ನೂ ಯುದ್ಧದಲ್ಲಿ ಕೊಂದು ಹಾಕ್ತಾನೆ’ ಎಂದು ಶಪಿಸಿದ್ದು ನೆನಪಾಯ್ತು. ವೇದವತಿಯನ್ನು ಕೆಣಕಿದಾಗ ಆಕೆ ‘ಹೆಣ್ಣಾಗಿ ಹುಟ್ಟಿ ಬರ್ತೇನೆ ನಿನ್ನನ್ನು ಕೊಲ್ಲಲು’ ಅಂತ ಶಪಿಸಿದ್ದು ನೆನಪಾಯ್ತು. ಸೀತೆಯೇ ಅವಳು ಅಂತ ರಾವಣ ಹೇಳ್ತಾನೆ. ಪಾರ್ವತಿ, ನಂದೀಶ್ವರ, ರಂಭೆ, ವರುಣಕನ್ಯೆ ಕೊಟ್ಟ ಶಾಪಗಳೆಲ್ಲ‌ ಫಲ ಕೊಡ್ತಾ ಇದೆ. “ಋಷಿಗಳ ಮಾತು ಸುಳ್ಳಾಗೋದಿಲ್ಲ” ಎಂದು ರಾವಣನು ಸಭಾ ಮಧ್ಯದಲ್ಲಿ ಹೇಳ್ತಾ ಇದ್ದಾನೆ. ಆಮೇಲೆ, ‘ರಾಕ್ಷಸರೇ, ಎಲ್ಲಾ ರಾಜಮಾರ್ಗಗಳಲ್ಲಿ, ಗೋಪುರಗಳಲ್ಲಿ, ದ್ವಾರಗಳಲ್ಲಿ ಹೋಗಿ ಕಾವಲು ಕಾಯಿರಿ’ ಅಂದ.

ತನ್ನವರಾರೂ ತನ್ನನ್ನು ರಕ್ಷಿಸಲಾರರು ಎಂದು ತಿಳಿದಾಗ ನೆನಪಾಯ್ತಂತೆ, ‘ಅಪ್ರತಿಮ ಗಂಭೀರನಾದ, ದೇವ-ದಾನವ ದರ್ಪಘ್ನನಾದ, ಬ್ರಹ್ಮಶಾಪಾಭಿಭೂತನಾದ ನನ್ನ ತಮ್ಮ ಕುಂಭಕರ್ಣನನ್ನು ಎಬ್ಬಿಸಿ’ ಎಂಬುದಾಗಿ ಅಪ್ಪಣೆ ಮಾಡಿದ.

ಮುಂದೇನಾಯಿತು…? ಮುಂದಿನ ಪ್ರವಚನದಲ್ಲಿ ನೋಡೋಣ!

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments