ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಸಂದರ್ಭಕ್ಕೆ ತಕ್ಕಂತೆ ಅಂಗಿ ತೊಟ್ಟುಕೊಳ್ಳುವುದು ಗೊತ್ತಿದೆ, ಶರೀರವನ್ನು ತೊಟ್ಟುಕೊಳ್ಳುವುದು ಗೊತ್ತಿದೆಯಾ? ಕೆಲವರು ಮಾಯಾವಿಗಳಾದ ರಾಕ್ಷಸರು ಸಂದರ್ಭಾನುಸಾರವಾಗಿ ರೂಪವನ್ನು ಮರೆಮಾಚ್ತಾರೆ, ಮಾಯಾಮಯವಾದ ಬೇರೊಂದು ರೂಪವನ್ನು ಧಾರಣೆ ಮಾಡ್ತಾರೆ. ಆದರೆ ಸಾಯುವಾಗ ನಿಜರೂಪವನ್ನೇ ತಾಳ್ತಾರೆ. ನಿಜರೂಪಕವು ಎರಡಿರ್ಲಿಕ್ಕೆ ಸಾಧ್ಯವುಂಟಾ? ಕುಂಭಕರ್ಣನಿಗೆ ಹಾಗಿತ್ತು! ಅವನ ಯುದ್ಧ ಶರೀರ ಬೇರೆ, ಸಹಜ ಜೀವನದ ಶರೀರ ಬೇರೆ. ಅವನ ಸಹಜ ಶರೀರವೇ ಬೃಹದಾಕಾರ, ಯುದ್ಧ ಶರೀರ ಅದ್ಭುತ ಆಕಾರ. ಯುದ್ಧಕ್ಕೆ ಹೊರಡುವಾಗ ಧಾರುಣವಾದ ಮತ್ತೊಂದು ಶರೀರವನ್ನು ಧರಿಸಿ ಕುಂಭಕರ್ಣ ಹೊರಗೆ ಬಂದ. ಯಾಕಂದ್ರೆ, ಅವನದ್ದು ಪ್ರತಿಪಕ್ಷದ ಸೈನಿಕರನ್ನು ತಿನ್ನುವುದೇ ಯುದ್ಧ! ಅದಕ್ಕೆ ತಕ್ಕ ಹೊಟ್ಟೆ, ಕೈಕಾಲು ಎಲ್ಲ, ಹಾಗಿದೆ ಅದು. ರೌದ್ರ ರೂಪದಲ್ಲಿದ್ದ. ಮಹಾ ಪರ್ವತದಂತಿದ್ದ ಕುಂಭಕರ್ಣ. ಮುಂದೆ ಹೊರಟವನು ಹಿಂದಿರುಗಿ ರಾಕ್ಷಸರ ಕಡೆ ನೋಡಿ ನಕ್ಕು ಹೇಳಿದನಂತೆ, ‘ಇಂದು ವಾನರ ಮುಖ್ಯರ ಯೂಥಗಳನ್ನು ಸುಡುವೆ, ಅಲ್ಲ; ವಾನರದೇನು ತಪ್ಪಿಲ್ಲ. ಲಂಕೆಯ ಮತ್ತಿಗೆಗೆ ಮೂಲ ರಾಮ ಮತ್ತು ಲಕ್ಷ್ಮಣ. ಅವರು ಹತರಾದರೆ ಎಲ್ಲವೂ ಹತವಾದಂತೆ. ರಾಮ ಲಕ್ಷ್ಮಣರ ಮೇಲೆ ನನ್ನ ಶಕ್ತಿಯನ್ನು ಪ್ರಯೋಗಿಸಲು ಬಯಸ್ತೇನೆ’ ಎಂಬುದಾಗಿ ಕುಂಭಕರ್ಣನು ಹೇಳಿದಾಗ ರಾಕ್ಷಸರು ಭಯಂಕರ ಘರ್ಜನೆ ಮಾಡಿದರಂತೆ. ಒಂದು ಹೆಜ್ಜೆ ಮುಂದಿಟ್ಟ ಕುಂಭಕರ್ಣ ಯುದ್ಧಕ್ಕಾಗಿ. ಪ್ರಕೃತಿಯಲ್ಲಿ, ಶರೀರದಲ್ಲಿ ಘೋರ ಅಪಶಕುನಗಳಾದವು! ಕುಂಭಕರ್ಣ ಅದನ್ನು ಲೆಕ್ಕಿಸಲಿಲ್ಲ, ಯಾಕಂದ್ರೆ ಸಾವೇ ಒಂದು ಲೆಕ್ಕ ಅಲ್ಲ‌ ಅವನಿಗೆ. ಮುಂದುವರಿದ ಕುಂಭಕರ್ಣ, ಕಾಲವು ಯಮನೂರಿಗೆ ಕರೆದಿತ್ತು! ಯುದ್ಧಕ್ಕೆ ಲಂಕೆಯ ಅತ್ಯುನ್ನತವಾದ ಕೋಟೆಯನ್ನು ಬರಿಗಾಲಿಂದ ದಾಟಿ ಹೊರಗೆ ಬಂದನಂತೆ. ನೋಡಿದ, ಅದ್ಭುತವಾದ ವಾನರ ಸೈನ್ಯ ಹೊರಗಿತ್ತು.

ಕುಂಭಕರ್ಣನ ಆ ರೂಪವನ್ನು ಕಂಡೊಡನೆ ವಾನರರೆಲ್ಲ‌ ದಿಕ್ಕು ದಿಕ್ಕಿಗೆ ಓಡಿದರು. ಹರ್ಷದಿಂದ ಅಟ್ಟಹಾಸ ಮಾಡಿ ಘರ್ಜಿಸಿದನು ಕುಂಭಕರ್ಣ. ಆಗ ಒಂದಷ್ಟು ವಾನರರು ಪ್ರಜ್ಞೆ ತಪ್ಪಿ ಬಿದ್ದುಬಿಟ್ರಂತೆ. ದೊಡ್ಡ ಪರಿಘವನ್ನು ಹಿಡಿದು ಹೊರಟ ಆ ಮಹಾಕಾಯನು ಕಪಿಗಳಿಗೆ ಭಯವುಂಟು ಮಾಡಿದ. ಯುದ್ಧ ಪ್ರಾರಂಭಕ್ಕಿಂತ ಮುಂಚೆ ಕುಂಭಕರ್ಣ ನಿಜವಾದ ಘರ್ಜನೆ ಮಾಡಿದ. ಅವನ ಘರ್ಜನೆಗೆ ಸಮುದ್ರವೇ ಮಾರ್ಮೊಳಗಿತು. ಇದ್ದ ವಾನರರು ದೂರ ದೂರಕ್ಕೆ ಓಡಿ‌ಹೋದರು; ಅವರಿಗೆ ಎದುರಿಸುವ ಧೈರ್ಯವೇ ಬರಲಿಲ್ಲ. ಯುವರಾಜ ಅಂಗದನು ನೋಡ್ತಾನೆ, ವಾನರ ನಾಯಕರಾದ ಗಜ, ಗವಾಕ್ಷ, ಕುಮುದರೂ ಓಡಿದ್ದಾರೆ. ‘ನಿಮಗೆ ನೀವ್ಯಾರು ಅಂತಲೇ ಮರೆತು ಹೋಯ್ತಾ? ನಿಮ್ಮ ಪರಾಕ್ರಮ ಮರೆತುಹೋಯ್ತಾ? ಯಾವ ಕುಲದಲ್ಲಿ ಹುಟ್ಟಿದ್ದೀರ? ಯಾರ ಮಕ್ಕಳು ನೀವು ಎನ್ನುವುದು ನೆನಪಾಗಲಿಲ್ವಾ? ಎಲ್ಲಿ ಓಡ್ತೀರಿ ಹೆದರಿ? ಹಿಂದಿರುಗಿ! ವೀರರಾದ ನೀವು ಬಂದಿರುಗಿ, ಯುದ್ಧವೆಂದ ಮೇಲೆ ಗೆಲುವೋ ಸೋಲೋ ಸಾವೋ ಬರ್ಬಹುದು. ಪ್ರಾಣದ ಆಸೆಯಾ? ಇದು ರಾಕ್ಷಸ ಅಲ್ಲ, ದೊಡ್ಡ ಬೊಂಬೆ. ನಮ್ಮನ್ನು ಹೆದರಿಸ್ಲಿಕ್ಕೆ ರಾವಣನ ಕಡೆಯವರು ಮಾಡಿದ್ದು, ಈ ಯಂತ್ರದ ಗೊಂಬೆಯನ್ನು ಧ್ವಂಸ ಮಾಡೋಣ, ಬನ್ನಿ ಹಿಂದಿರುಗಿ’ ಎಂದು ಅಂಗದ ಕರೆದಾಗ, ಕಷ್ಟದಿಂದ ಸುಧಾರಿಸಿಕೊಂಡು, ಕೈಯಲ್ಲಿ ವೃಕ್ಷ-ಬೆಟ್ಟಗಳನ್ನು ಹಿಡಿದುಕೊಂಡು ವಾನರರು ಯುದ್ಧಕ್ಕೆ ಮರಳಿದರು. ಕುಂಭಕರ್ಣನನ್ನು ತಮ್ಮ ಆಯುಧಗಳಿಂದ ಪ್ರಹರಿಸಿದ್ರು, ಅಲ್ಲಾಡಲಿಲ್ಲ ಕುಂಭಕರ್ಣ. ಅವನು ಯುದ್ಧ ಶುರುಮಾಡಿದ, ವಾನರ ಸೈನ್ಯವನ್ನು ಮಧಿಸಿದನು. ಅಟ್ಟಿಸಿಕೊಂಡು ಬಂದು ಕೊಲ್ತಾ ಇದ್ದಾನೆ, ನುಂಗ್ತಾ ಇದ್ದಾನೆ ಕುಂಭಕರ್ಣ. ರಕ್ತಸಿಕ್ತವಾಗಿ ದೊಡ್ಡ ಸಂಖ್ಯೆಯಲ್ಲಿ ಅಲ್ಲೇ ಬಿದ್ದರು ವಾನರರು, ತಪ್ಪಿಸಿಕೊಳ್ಳಲು ಓಡಿದ್ರು, ಬೇರೆ ಬೇರೆ ಉಪಾಯಗಳನ್ನು ಮಾಡಿದ್ರು. ಮತ್ತೆ ವಾನರರನ್ನು ಪ್ರಚೋದಿಸ್ತಾನೆ ಅಂಗದ, “ಒಂದೋ ಯುದ್ಧ ಮಾಡ್ತಾ ಮಾಡ್ತಾ ಬ್ರಹ್ಮಲೋಕವನ್ನು ಹೊಂದೋಣ, ಅಥವಾ ಶತ್ರುವನ್ನು ಸಂಹರಿಸಿ ವೀರಲೋಕವನ್ನು ಪಡೆಯೋಣ. ಕುಂಭಕರ್ಣ ರಾಮನ ಕಣ್ಣಿಗೆ ಬಿದ್ದರೆ ಬದುಕಿ ಉಳಿಯೋದಿಲ್ಲ, ನಾ ಹೇಳ್ತೇನೆ ಕೇಳಿ!” ವೀರ ಅಂಗದನು ಎಲ್ಲರ ಭಯವನ್ನು ಹೋಗಲಾಡಿಸಿ, ಸಮಾಧಾನ ಮಾಡಿ, ರೋಷ, ಛಲವನ್ನು ತುಂಬಿ ಮರಳಿ ಕರ್ಕೊಂಡು ಬರ್ತಾನೆ.

ವಾನರ ಯೂಥಪತಿಗಳು ಯುದ್ಧಭೂಮಿಗೆ ಬಂದು ಅಂಗದನ ಆಜ್ಞೆಯನ್ನು ಪ್ರತೀಕ್ಷೆ ಮಾಡ್ತಾ ಪುನಃ ವ್ಯೂಹವನ್ನು ರಚನೆ ಮಾಡಿದ್ರು. ಎಲ್ಲರಿಗಿಂತ ಮುಂದೆ ಹನುಮಂತನಿದ್ದಾನೆ. ಈ ಸಾರಿ ವಾನರರು ನಿಶ್ಚಯ ಮಾಡಿದ್ರು, ಸಾಯುವುದಾದ್ರೆ ರಾಮನಿಗಾಗಿ ಸಾಯುವುದು ಅಂತ. ಭಯಂಕರವಾದ ಯುದ್ಧವನ್ನು ವಾನರರು ಮಾಡ್ತಾರೆ. ಕುಂಭಕರ್ಣನಾದರೋ ಕ್ರುದ್ಧನಾಗಿ ತನ್ನ ಗಧೆಯಿಂದ ಅತ್ತ ಇತ್ತ ಇರಿದಾಡಿದನು ಕಪಿಗಳನ್ನು. ಸಾವಿರ ಕಪಿಗಳು ಕುಂಭಕರ್ಣನಿಂದ ವಧಿಸಲ್ಪಟ್ಟು ಬಿದ್ದಿದ್ದಾರೆ ಭೂಮಿಯಲ್ಲಿ. ಇವನು ವಾನರರನ್ನು ಗುಂಪು ಗುಂಪಾಗಿ ತಗೊಂಡು ತಿನ್ನುತ್ತಾ ಇದ್ದಾನೆ. ಇಷ್ಟಾದರೂ ಕಪಿಗಳು ಈ ಬಾರಿ ಯುದ್ಧವನ್ನು ಬಿಟ್ಟು ಓಡಲಿಲ್ಲ. ಬಹಳ‌ ಕಷ್ಟದಿಂದ ಚೇತರಿಸಿಕೊಂಡು ಮತ್ತೆ ಕೈಯಲ್ಲಿ ವೃಕ್ಷ-ಪರ್ವತಗಳನ್ನು ಹಿಡಿದು ನಿಂತರು ಯುದ್ಧಕ್ಕಾಗಿ. ಏತನ್ಮಧ್ಯೆ ದ್ವಿವಿದನೆಂಬ ಯೂಥಪತಿ ತನ್ನ ಶಕ್ತಿಗೂ ಮಿಗಿಲಾದ ದೊಡ್ಡ ಪರ್ವತವನ್ನು ಹೊತ್ತುಕೊಂಡು ಬಂದು ಕಷ್ಟಪಟ್ಟು ಕುಂಭಕರ್ಣನ ಮೇಲೆಸೆದ. ಅದು ಕೆಳಗೆ ಬಿತ್ತು, ರಾಕ್ಷಸ ಸೈನ್ಯ ಧ್ವಂಸವಾಯಿತು. ಇನ್ನೊಂದು ಪರ್ವತವನ್ನು ತಂದೆಸೆದಾಗ ಅದೂ ರಾಕ್ಷಸ ಸೈನ್ಯವನ್ನು ಮರ್ದಿಸಿತು. ಏತನ್ಮಧ್ಯೆ, ಹನುಮಂತ ಕುಂಭಕರ್ಣನೆದುರು ಬಂದು ನಿಂತ ಯುದ್ಧದ ಸಲುವಾಗಿ. ಆಕಾಶಕ್ಕೆ ಹಾರಿ, ಅಲ್ಲಿಂದ ಪರ್ವತಗಳು, ವೃಕ್ಷಗಳ ಮಳೆಗರೆದ! ಕುಂಭಕರ್ಣ ತನ್ನ ಶೂಲದಿಂದ ಅವುಗಳನ್ನು ತಡೆದನು. ಬಳಿಕ ತನ್ನ ಶೂಲವನ್ನು ಹಿಡಿದು ಕಪಿಸೈನ್ಯವನ್ನು ಅಟ್ಟಿಸಿಕೊಂಡು ಹೋಗ್ತಾನೆ. ಆಗ ಅವನನ್ನು ಅಡ್ಡಗಟ್ಟಿ ಹಿಡಿದ ಹನುಮಂತ ಆ ದೊಡ್ಡ ಶೈಲದಿಂದ ಕುಂಭಕರ್ಣನನ್ನು ನೆತ್ತರಿಳಿಯುವಂತೆ ಅಪ್ಪಳಿಸಿದನು. ತನ್ನ ಶೂಲವನ್ನ ಎತ್ತಿ ಹನುಮಂತನ ಎದೆಯನ್ನು ಇರಿದ. ಆ ಭಾರೀ ಪ್ರಹಾರದಿಂದ ಹನುಮಂತನ ಬಾಯಿಂದ ರಕ್ತ ಚಿಮ್ಮಿತು, ಹನುಮಂತ ನೋವಿನಲ್ಲಿ ಘರ್ಜಿಸಿದ.

ಕಪಿಗಳು ಓಡಿದರು ಮತ್ತೆ. ಆಗ, ಕಪಿ ಸೇನಾಪತಿ ನೀಲ ಮುಂದಕ್ಕೆ ಬರ್ತಾನೆ. ತನ್ನ ಸೈನ್ಯವನ್ನು ಸಮಾಧಾನ ಮಾಡ್ತಾ ದೊಡ್ಡ ಪರ್ವತವನ್ನು ಕುಂಭಕರ್ಣನಿಗೆ ಎಸೆದ. ಆಗ ಕುಂಭಕರ್ಣ ಮುಷ್ಠಿಯಿಂದ ಹೊಡೆದನಂತೆ ಆ ಪರ್ವತಕ್ಕೆ, ಪರ್ವತ ಚೂರಾಯ್ತು. ಆಗ ಐವರು ಕಪಿಶಾರ್ದೂಲರು ಸೇರಿ ಅವರ ಕೈಯಲ್ಲಿ ಆಗಿದ್ದೆಲ್ಲ ಮಾಡಿದ್ರು; ಗುದ್ದಿದ್ರು, ಒದ್ದರು, ಎಸೆದರು. ಅವನ ಸ್ಪರ್ಶದಂತೆ ಆಯ್ತಷ್ಟೆ! ಬಳಿಕ ಐವರ ಮೇಲೂ ಒಟ್ಟಿಗೆ ಪ್ರಹಾರ ಮಾಡಿದ. ಎಲ್ಲ ಅಲ್ಲಲ್ಲಿ ಬಿದ್ದು ಎಚ್ಚರ ತಪ್ಪಿದರು. ಆಗ ಸಾವಿರಾರು ವಾನರರು ಕುಂಭಕರ್ಣನನ್ನು ಮುತ್ತಿದರು, ಅವನ ಮೇಲೆ ಹತ್ತಿ ಕಚ್ಚಿದ್ರು, ಪರಚಿದ್ರು, ಗುದ್ದಿದ್ರು, ಎಲ್ಲಾ ಮಾಡ್ತಾರೆ. ಕುಂಭಕರ್ಣ ಕೈಗೆ ಸಿಕ್ಕಿದವರನ್ನೆಲ್ಲ ಬಾಯಿಗೆ ಹಾಕಿದ್ನಂತೆ. ಆ ಕಪಿಗಳೆಲ್ಲ ಬಾಯಿಗೆ ಹಾಕಿದ ಕೂಡಲೆ ಕೆಲವರು ಕಿವಿಯಿಂದ, ಕೆಲವರು‌ ಮೂಗಿಂದ ಹೊರಗೆ ಬಂದ್ರಂತೆ. ವಾನರ ಸೈನ್ಯವನ್ನು ಸುಡ್ತಾ ಇದ್ದಾನೆ ಕುಂಭಕರ್ಣ. ವಿಕಾರವಾಗಿ ಕೂಗಿಕೊಂಡ್ರು ಕಪಿಗಳು, ಅನೇಕರು ಹೋಗಿ ರಾಮನ ಬಳಿ ಶರಣಾದರು, ‘ಪ್ರಭೂ ನೀನೇ ಗತಿ ಇನ್ನು, ನಮ್ಮಿಂದ ಸಾಧ್ಯ ಇಲ್ಲ‌’ ಎಂಬುದಾಗಿ. ಏತನ್ಮಧ್ಯೆ ಒಂಟಿ ಅಂಗದ ಸಿದ್ಧನಾಗ್ತಾ ಇದ್ದಾನೆ ಕುಂಭಕರ್ಣನ ವಿರುದ್ಧ ಒಂದು ಬಲವಾದ ಯುದ್ಧಕ್ಕೆ. ಧಾವಿಸಿ ಹೋದನಂತೆ ಅಂಗದ. ಅವನ ಕೈಯಲ್ಲಿ ದೊಡ್ಡದೊಂದು ಪರ್ವತ ಶೃಂಗವಿತ್ತು.‌ ಬಾರಿ ಬಾರಿಗೂ ಗರ್ಜನೆ ಮಾಡ್ತಾ ಇದ್ದ. ಸುತ್ತ ಮುತ್ತ ಇದ್ದ ರಾಕ್ಷಸರು ಹೆದರಿಹೋದ್ರು. ಬಳಿಕ ಆ ಶೈಲಶೃಂಗದಿಂದ ಕುಂಭಕರ್ಣನ ನೆತ್ತಿಯನ್ನು ಅಪ್ಪಳಿಸಿದನು ಅಂಗದ. ಆ ಬಲವಾದ ಪ್ರಹಾರದಿಂದ ಕುಂಭಕರ್ಣನೇ ವಿಚಲಿತನಾದ. ಆ ಪೆಟ್ಟನ್ನು ಸಹಿಸಲಾರದೇ ವಾಲೀಪುತ್ರನ ಮೇಲೆ ಧಾವಿಸಿದ ಕುಂಭಕರ್ಣ. ಬಳಿಕ ತನ್ನ ಶೂಲವನ್ನು ಅಂಗದನ ಮೇಲ ಎಸೆದ. ಅಂಗದ ತಪ್ಪಿಸಿಕೊಂಡು ಬೇರೆ ಕಡೆ ಹಾರಿಕೊಂಡ. ಶೂಲ ಹೋಗಿ ನೆಲದ ಮೇಲೆ ಬಿತ್ತು. ಈ ಕಡೆಯಿಂದ ಮೇಲೆದ್ದು ಬಂದು ನೆಗೆದು ಹಾರಿ ಕುಂಭಕರ್ಣನ ಎದೆಯನ್ನು ತಲುಪಿ ತನ್ನ ಕರತಲದಿಂದ ಅದ್ಭುತವಾದ ಪ್ರಹಾರವನ್ನ ಎದೆಯ ಮೇಲೆ ಮಾಡ್ತಾನೆ. ಆ ಪ್ರಹಾರಕ್ಕೆ ಕುಂಭಕರ್ಣನಿಗೆ ಪ್ರಜ್ಞೆ ತಪ್ಪಿತು. ಎಚ್ಚರವಾದವನೇ ದಿಢೀರನೆ ಅಂಗದನಿಗೆ ಎಡ ಮುಷ್ಠಿಯಿಂದ ಗುದ್ದಿ ಬಿಡ್ತಾನೆ. ನಿರೀಕ್ಷೆಯಿಲ್ಲದ ಅಂಗದ ಮೂರ್ಛಿತನಾಗಿ ಬಿದ್ದ. ಅಲ್ಲಿಗೆ ಅಂಗದನ ಯುದ್ಧ ಮುಗೀತು.

ಅಂಗದನು ಬೀಳಲಾಗಿ ಸುಗ್ರೀವನ ಮೇಲೇರಿ ಹೋಗ್ತಾನೆ ಕುಂಭಕರ್ಣ. ಕುಂಭಕರ್ಣ ತನ್ನೆಡೆಗೆ ಬರೋದು ಕಂಡ ಸುಗ್ರೀವ ಗಾಬರಿಗೊಳ್ಳದೆ ಎದ್ದು ನಿಂತ. ದೊಡ್ಡ ಪರ್ವತವನ್ನು ಹಿಡಿದುಕೊಂಡು ಅವನೂ ಧಾವಿಸಿದ ಕುಂಭಕರ್ಣನ ಕಡೆಗೆ. ಕುಂಭಕರ್ಣನ ಮೈಮೇಲೆಲ್ಲ ಕಪಿಗಳ ರಕ್ತ, ತಿನ್ತಾ ಇದ್ದಾನೆ ಕಪಿಗಳನ್ನ. ಆಗ ಸುಗ್ರೀವ ಹೇಳ್ತಾನೆ, ‘ನಿಜ, ನನ್ನವರನೇಕರನ್ನ ನೀನು ಪಥನಗೊಳಿಸಿದೆ. ಮೆಚ್ಚಲೇಬೇಕು ನಿನ್ನ ಸಾಹಸಕ್ಕೆ. ಆದರೆ ಯಾರು ನಿನಗೆ ಸಮರೋ ಅವರ ಜೊತೆ ಯುದ್ಧ ಮಾಡಬೇಕು ನೀನು. ಬಾ, ನನ್ನ ಮೇಲೆ ಜೊತೆ ಯುದ್ಧ ಮಾಡು ಬಾ. ನನ್ನ ಒಂದು ಪೆಟ್ಟನ್ನು ಸಹಿಸು ಎಂದು ಧೈರ್ಯದಿಂದ ಸುಗ್ರೀವನು ಹೇಳುವಾಗ, ಕುಂಭಕರ್ಣ ಹೇಳಿದನಂತೆ, ‘ಶಾಭಾಷ್, ಬ್ರಹ್ಮನ ಮೊಮ್ಮಗನೇ, ನಿನ್ನ ವಂಶಕ್ಕೆ ಸರಿಯದು, ಪೌರುಷಕ್ಕೆ ಸರಿಯಾಗಿ ಗರ್ಜನೆ ಮಾಡ್ತಾ ಇದ್ದೀಯೆ ಎಂಬುದಾಗಿ ಕುಂಭಕರ್ಣ ಹೇಳ್ತಾ ಇದ್ದಂತೆಯೇ ಸುಗ್ರೀವನು ನನ್ನ ಕೈಯಲ್ಲಿದ್ದ ಪರ್ವತಾಗ್ರವನ್ನು ಅವನ ಮೇಲೆಸೆದನು. ಆ ಮಹಾಪರ್ವತ ಕುಂಭಕರ್ಣನ ಎದೆ ಸೇರಿ ಚೂರಾಗಿ ಬಿತ್ತು. ಕಪಿಗಳಿಗೆಲ್ಲ ವಿಷಾದವಾಯಿತು. ರಾಕ್ಷಸರು ಸಿಂಹನಾದ ಮಾಡಿದ್ರು. ಸಿಟ್ಟು ಬಂತು ಕುಂಭಕರ್ಣನಿಗೆ.

ಆಗ ಶೂಲವನ್ನು ಕೈಗೆತ್ತಿಕೊಂಡ ಕುಂಭಕರ್ಣ ಸುಗ್ರೀವನನ್ನು ಮುಗಿಸಿಬಿಡಬೇಕೆಂಬ ಸಂಕಲ್ಪದಿಂದ. ಸುಗ್ರೀವನ ಮೇಲೆ ಶೂಲವನ್ನು ಎಸೆದ. ಗಾಳಿಯಲ್ಲಿ ಹಾರಿಬಂದು, ಹನುಮಂತ ಬಂದು ಎರಡೂ ಕೈಯಿಂದ ಶೂಲವನ್ನು ಹಿಡಿದುಕೊಂಡು ಭೂಮಿಗೆ ಇಳಿದ. ಇಳಿದೂ, ಕುಂಭಕರ್ಣನ ಕಡೆಗೊಮ್ಮೆ ನೋಡಿ ಶೂಲವನ್ನು ಮುರಿದೆಸೆದ ಹನುಮಂತ. ಒಂದು ಸಾವಿರ ಭಾರಗಳ ಶೂಲವದು. ಒಂದು ಭಾರ ಅಂದರೆ 250ಪೌಂಡ್. ಅಂದರೆ 113.4ಟನ್ ಭಾರದ ಶೂಲವದು. ಅದನ್ನು ಮುರಿದು ಹನುಮಂತ ಚೆಲ್ಲಿದಾಗ, ಕಪಿಗಳು ಧಾವಿಸಿಬಂದರು. ಕುಂಭಕರ್ಣನಿಗೆ ಭಯವಾಯಿತು…! ದಿಗ್ಭ್ರಾಂತನಾಗಿ ಯುದ್ಧಕ್ಕೆ ವಿಮುಖನಾದನು. ಅದನ್ನು ಕಂಡಂತೂ ಕಪಿಗಳು ಕೂಗಿಕೊಂಡು, ಜಯಘೋಷ ಮಾಡಿದರು. ಆಗ ತನ್ನದೇ ಲಂಕೆಯ ಶಿಖರವನ್ನು ಕಿತ್ತು, ಸುಗ್ರೀವನನ್ನು ಅಪ್ಪಳಿಸಿದನು ಕುಂಭಕರ್ಣ, ಸುಗ್ರೀವ ಮೂರ್ಛೆತಪ್ಪಿದನು. ರಾಕ್ಷಸರು ಜಯಘೋಷ ಮಾಡಿದರು.

ಸುಗ್ರೀವ ಘೋರವಾದ ವೀರ. ವಾನರ ರಾಜ. ರಾಮನಿಗೂ ತುಂಬ ಹತ್ತಿರದವನು. ಇವನು ಸೂತ್ರ ಎಂದನಿಸಿತು ಕುಂಭಕರ್ಣನಿಗೆ . ಇವನನ್ನು ಲಂಕೆಗೆ ತೆಗೆದುಕೊಂಡು ಹೋದರೆ, ರಾಮ ಲಂಕೆಗೆ ಬರುತ್ತಾನೆ ಎಂದುಕೊಂಡು ಸುಗ್ರೀವನನ್ನು ಎತ್ತುಕೊಂಡು ಹೊರಟ ಕುಂಭಕರ್ಣ. ಅವನ ಭಾವ ಇವನೊಬ್ಬನನ್ನು ಅಪಹರಿಸಿದರೆ, ಇಡೀ ಸೇನೆಯನ್ನು ಗೆದ್ದಂತೆ ಎಂದು ಆಲೋಚಿಸಿದನು. ಹನುಮಂತ ಚಿಂತಿಸಿದನು. ನಾನೂ ಪರ್ವತಾಕಾರನಾಗಿ ಅಡ್ಡಗಟ್ಟಿ ಕುಂಭಕರ್ಣನನ್ನು ಕೊಲ್ಲಲೇ…? ಸುಗ್ರೀವನನ್ನು ತಂದರಾಯಿತು ಹಾಗೇ.. ಎಂದು ಆಲೋಚಿಸಿದನು. ಮುಂದೆ ಒಂದು ಹೆಜ್ಜೆ ಇಡುವಾಗ ನೆನಪಾಯಿತಂತೆ, ಇದು ದೊರೆತನಕ್ಕೇ ಕಲಂಕವಾಗಬಹುದು. ನಮ್ಮ ದೊರೆ ಸುಗ್ರೀವನಿಗೆ ಶಕ್ತಿಯಿದೆ. ಕುಂಭಕರ್ಣನೇನು, ಮೂರುಲೋಕವೇ ಅವನನ್ನು ಹಿಡಿದುಕೊಂಡರೂ, ತಪ್ಪಿಸಿಕೊಂಡು ಬರುವ ಶಕ್ತಿ ಅವನಿಗಿದೆ. ಈಗ ಎಚ್ಚರವಿಲ್ಲ. ಎಚ್ಚರಾಗುವಾಗ, ಮಾಡ್ತಾನೆ ಅವನು. ದೊರೆಯ ಪರಾಕ್ರಮಕ್ಕಾಗಿ ಕಾಯ್ತೇನೆ ಎಂದು, ವಾನರಸೇನೆಯನ್ನು ಪುನರ್ವ್ಯೂಹ ರಚನೆ ಮಾಡಿ, ಎಲ್ಲ ಕಪಿಗಳನ್ನು ಯುದ್ಧಕ್ಕೆ ಕರೆತಂದ ಹನುಮಂತ. ಅಷ್ಟು ಹೊತ್ತಿಗೆ ಕುಂಭಕರ್ಣ ಲಂಕೆಯ ಅರಮನೆಗೆ ಬರುತ್ತಿದ್ದನು. ಹೂವುಗಳಿಂದ, ಪುಷ್ಟವೃಷ್ಟಿಯನ್ನು, ಪನ್ನೀರನ್ನು ಸಿಂಪಡಿಸಿದರು ಯುದ್ಧದಿಂದ ಬಂದ ಕುಂಭಕರ್ಣನಿಗೆ. ಆ ನೀರು ಸಿಂಪಡಿಸುವಿಕೆಗೆ ಸುಗ್ರೀವನಿಗೆ ಎಚ್ಚರವಾಯಿತು. ರಾಜಮಾರ್ಗ ತಂಪಾಗಿತ್ತು. ಎಲ್ಲ ಸೇರಿದಾಗ ಎಚ್ಚರವಾಯಿತು. ನೋಡಿದಾಗ ಯಾವುದೋ ಊರು. ಮತ್ತೆ ಅರ್ಥವಾಯಿತು ಕುಂಭಕರ್ಣ ನನ್ನನ್ನು ಲಂಕೆಗೆ ಹಿಡಿದು ತಂದಿದ್ದಾನೆ ಎಂದು. ಆಲೋಚಿಸಿದನು ಸುಗ್ರೀವ ಏನು ಮಾಡೋದು ಎಂದು. ಕಪಿಗಳಿಗೆ ಸಂತಸವಾಗುವ ಕೆಲಸ ಮಾಡಬೇಕೆಂದು ಆಲೋಚಿಸಿದನು. ಕುಂಭಕರ್ಣನ ಮೂಗಿಗೆ ಬಾಯಿ ಹಾಕಿ, ಉಗುರುಗಳಿಂದ ಕಿವಿಯನ್ನು ಹರಿದನು. ಕುಂಭಕರ್ಣನ ಎರಡೂ ಪಾರ್ಶ್ವಗಳನ್ನು ಪರಚಿ ಪರಚಿ ಹಾಕಿದನು ಸುಗ್ರೀವ. ಎತ್ತಿ ಬಿಸಾಡಿದನಂತೆ ಕುಂಭಕರ್ಣ, ಸುಗ್ರೀವನು ಮಾಡಿದ ಗಾಯದ ನೋವನ್ನು ತಡೆದುಕೊಳ್ಳಲಾರದೆ…! ಸುಗ್ರೀವನು ಚೆಂಡಿನ ಹಾಗೆ ಹಾರಿ, ರಾಮನ ಪಕ್ಕದಲ್ಲಿ ಹೋಗಿ ಇಳಿದನಂತೆ.

ರಕ್ತ ಚಿಮ್ಮಿ ಹರಿಯುತ್ತಿದೆ ಕುಂಭಕರ್ಣನ ದೇಹದಿಂದ. ಮತ್ತೆ ಯುದ್ಧಕ್ಕೆ ಬಂದನು ಕುಂಭಕರ್ಣ. ಒಂದಷ್ಟು ಕಪಿಗಳನ್ನು ತಿಂದನು ಕುಂಭಕರ್ಣ. ಹುಚ್ಚು ಆವರಿಸಿತ್ತು ಕುಂಭಕರ್ಣನಿಗೆ, ರಾಕ್ಷಸ ಪಿಶಾಚರನ್ನೂ ತಿನ್ನುತ್ತಿದ್ದಾನೆ. ಕಪಿಗಳೆಲ್ಲ ರಾಮನಿಗೆ ಶರಣಾದರು. ಆಗ ಲಕ್ಷ್ಮಣ ಎದುರಾದನು, ಏಳು ಬಾಣಗಳನ್ನು ನೆಟ್ಟನು ಲಕ್ಷ್ಮಣ. ಮತ್ತೆ ಯುದ್ಧಕವಚದ ಮೇಲೆ ನೂರಾರು ಬಾಣಗಳನ್ನು ಪ್ರಯೋಗಿಸಿದನು ಲಕ್ಷ್ಮಣ, ಎಲ್ಲವನ್ನೂ ಸಹಿಸಿದ ಕುಂಭಕರ್ಣ. ಮತ್ತೆ ಮಾತನಾಡಿದ ಕುಂಭಕರ್ಣ, ನನ್ನ ಮುಂದೆ ಬಂದು ನಿಂತೆಯಲ್ಲ, ಮೆಚ್ಚಿದೆ ನಿನ್ನನ್ನು, ಮಹಾವೀರ ನೀನು ಎಂದನಂತೆ. ಏ ಬಾಲಕ, ಎಷ್ಟು ಪರಾಕ್ರಮ ನಿನ್ನಲ್ಲಿ. ರಾಮನನ್ನು ತೋರಿಸು. ನಿನ್ನ ಮೇಲೆ ನನ್ನ ದೃಷ್ಟಿಯಿಲ್ಲ, ಸರಿ ಪಕ್ಕಕ್ಕೆ ಎಂದನು ಕುಂಭಕರ್ಣ. ಆಗ ಲಕ್ಷ್ಮಣ ನಿನ್ನ ಪರಾಕ್ರಮ ದೊಡ್ಡದು. ಒಪ್ಪುತ್ತೇನೆ ಯಾರೂ ನಿನ್ನ ಮುಂದೆ ನಿಲ್ಲಲಾರರು. ಅಚಲವಾಗಿ ನಿಂತಿದ್ದಾನೆ ರಾಮ. ಅಲ್ಲಿ ಹೋದರೆ, ನಿನ್ನ ಬಯಕೆ ಪೂರ್ಣವಾಗುತ್ತದೆ ಎಂದನು. ಕುಂಭಕರ್ಣ ಹೋದನು ರಾಮನ ಹತ್ತಿರ. ರಾಮನ ಬಾಣಗಳ ಘಾತವನ್ನು ಸಹಿಸಲಾಗಲಿಲ್ಲ ಕುಂಭಕರ್ಣನಿಗೆ. ಕೆಂಡದ ಜ್ವಾಲೆ ಕುಂಭಕರ್ಣನ ಬಾಯಿಂದ ಹೊರಬರ್ತಿದೆ. ಆಯುಧಗಳನ್ನು ಹಿಡಿಯಲು ಸಾಧ್ಯವಾಗಲಿಲ್ಲ ಕುಂಭಕರ್ಣನಿಗೆ. ದೊಡ್ಡ ಪರ್ವತವನ್ನು ರಾಮನ ಮೇಲೆ ಎಸೆದನು ಕುಂಭಕರ್ಣ. ತನ್ನ ಏಳು ಬಾಣಗಳಿಂದ ಅದನ್ನು ಬೀಳಿಸಿದನು ರಾಮ. ಅದರ ಜೊತೆಗೆ ಇನ್ನೂರು ವಾನರರೂ ಬಿದ್ದರು, ಎಂದರೆ ಪರ್ವತದ ಗಾತ್ರವನ್ನೂ, ರಾಮನ ಶಕ್ತಿಯನ್ನೂ ನೋಡಿ. ಆಗ ಲಕ್ಷ್ಮಣ ರಾಮನಿಗೆ ಹೇಳುತ್ತಾನೆ. ಕುಂಭಕರ್ಣನು ಬೀಳುವಾಗ, ಕಪಿಗಳ ಸಾವಾಗಬಹುದು. ಅದಕ್ಕಾಗಿ ಅವನು ಬೀಳುವಾಗ ವ್ಯವಸ್ಥೆ ಮಾಡಬೇಕು ಎಂದನಂತೆ. ಕಪಿಗಳು ಅದನ್ನು ಕೇಳಿ, ಕುಂಭಕರ್ಣನ ಮೈಮೇಲೆ ಹತ್ತಲಾರಂಭಿಸಿದನು. ಕೊಡವಿದನು ಕುಂಭಕರ್ಣ, ಆದರೂ ಹತ್ತಿ ಕುಳಿತರು ಕಪಿಗಳು. ರಾಮನು ಕೋಪಗೊಂಡು, ಕುಂಭಕರ್ಣನನ್ನು ಮುಗಿಸಬೇಕೆಂದು ಸಂಕಲ್ಪಿಸಿದನು.

ಧನುಷ್ಠೇಂಕಾರವನ್ನು ಮಾಡಿದನು ರಾಮ. ರಾಮನ ಕಡೆಗೆ ಧಾವಿಸಿದನು ಕುಂಭಕರ್ಣ. ಆಗ ಒಂದು ಘಟನೆ ನಡೆಯಿತು. ರಾಮನ ಮುಂದೆ ವಿಭೀಷಣ ಕುಂಭಕರ್ಣನ ಎದುರಿಸಲು ನಿಂತುಕೊಂಡನು. ವೇಗವಾಗಿ ಧಾವಿಸಿದನು ವಿಭೀಷಣ ರಾಮನಿಗಾಗಿ. ಕುಂಭಕರ್ಣನಿಗೆ ಕಾಣಿಸಿತು ವಿಭೀಷಣ ಬರುತಿರುವಂಥದ್ದು. ಆಗ ಕುಂಭಕರ್ಣ, “ಶೀಘ್ರವಾಗಿ ನನ್ನ ಮೇಲೆ ಪ್ರಹಾರವನ್ನು ಮಾಡು. ಯುದ್ಧಧರ್ಮವೇನು ಅಂದರೆ, ಅಣ್ಣತಮ್ಮ ಎಂದು ನೋಡಬಾರದು, ಧರ್ಮಕ್ಕಾಗಿಯೇ ಯುದ್ಧವನ್ನು ಮಾಡಬೇಕು. ರಾಮನಿಗಾಗಿ, ಅವನಿಗೆ ಹೇಗೆ ಸರಿಯೋ ಹಾಗೆ ಯುದ್ಧವನ್ನು ಮಾಡು. ನಮ್ಮ ಕೆಲಸವಾಯಿತು ತಮ್ಮ, ನೀನು ಯಾವಾಗ ರಾಮನನ್ನು ಸೇರಿದೆಯೋ, ನಮ್ಮ ಕೆಲಸವನ್ನೇ ಮಾಡಿದ ಹಾಗಾಯಿತು. ರಾಕ್ಷಸ ಜಾತಿಯಲ್ಲೇ ಧರ್ಮರಕ್ಷಣೆಯನ್ನು ಯಾರಾದರೂ ಮಾಡಿದವರಿದ್ದರೆ, ನೀನೊಬ್ಬನೆ. ನಾವೆಲ್ಲ ಕೆಟ್ಟವರು, ನೀನು ಧರ್ಮನಿಷ್ಠ, ಯಾರ ಮನಸ್ಸು ಧರ್ಮದಲ್ಲಿ ನೆಲೆನಿಂತಿದೆಯೋ, ಧರ್ಮವೇ ಅವರನ್ನು ಕಾಯ್ತದೆ. ಹಾಗಾಗಿ ಧರ್ಮದಲ್ಲಿ ನಿನ್ನ ಮನಸ್ಸು ಸ್ಥಿರ. ಧರ್ಮ ನಿನ್ನನ್ನು ರಕ್ಷಣೆ ಮಾಡ್ತದೆ. ವಿಭೀಷಣ, ಇಡೀ ನಮ್ಮ ಕುಲಕ್ಕೆ ನೀನೊಬ್ಬನು ಉಳೀತಿಯ. ನೀನೊಬ್ಬ ರಾಮನ ಪಕ್ಷಕ್ಕೆ ಹೋಗದ್ದರಿಂದ, ನಮ್ಮ ಕುಲದ ಕುಡಿ ಉಳಿಯುತ್ತದೆ, ನಿನ್ನ ಮೂಲಕ ಬೆಳೆಯುತ್ತದೆ. ನಾಳೆ ನಮಗೆ ತರ್ಪಣ ಕೊಡುವವರು ನಿನ್ನ ಪೀಳಿಗೆಯವರು. ನಮ್ಮವರು ಯಾರೂ ಉಳಿಯುವುದಿಲ್ಲ. ನಮಗೆ ಸಂಸ್ಕಾರ ನೀಡುವುದು ನಿನ್ನ ಪೀಳಿಗೆ. ಮಾತ್ರವಲ್ಲ, ರಾಮನ ಕರುಣೆಯಿಂದ ಲಂಕಾಧಿಪತಿಯಾಗುವೆ” ಎಂದು ತುಂಬ ಸಂತಸದಿಂದ ಕುಂಭಕರ್ಣ ವಿಭೀಷಣನಿಗೆ ಹೇಳಿದನು. ಕೊನೆಯಲ್ಲಿ, “ಹೋಗು ಪಕ್ಕಕ್ಕೆ! ಯಾಕೆ ಎಂದರೆ, ನನ್ನ ಬುದ್ಧಿ ಕೆಟ್ಟಿದೆ, ಎಲ್ಲಿಯಾದರೂ ತಪ್ಪಿ ನಿನ್ನನ್ನು ಕೊಂದು ಬಿಟ್ಟೇನು, ಪಕ್ಕಕ್ಕೆ ಸರಿದುಕೊ” ಎಂದನು. ಆಗ ವಿಭೀಷಣ “ಏನು ಮಾಡಲಿ ಅಣ್ಣ, ನಾನು ಅಂದು ಮಾತನಾಡುವಾಗ ರಾವಣ ನನ್ನ ಮಾತನ್ನು ಕೇಳಲಿಲ್ಲ. ಮತ್ತೆ ಉಳಿದವರ್ಯಾರೂ ಕೇಳಲಿಲ್ಲ. ಯಾವ ಬೆಲೆಯನ್ನೂ ಕೊಡಲಿಲ್ಲ ಅಂದು. ಲಂಕೆಗೆ ನಾನು ಬೇಡವಾದೆ ಅಂದು. ಧರ್ಮಕ್ಕಾಗಿ ರಾಮನನ್ನು ಬಂದು ಸೇರಿದೆ” ಎಂದು ಹೇಳಿ ವಿಭೀಷಣ ಅಲ್ಲಿಂದ ಹೊರಟುಹೋದನು. ಯಾಕೆ ಹೊರಟನು ಅಂದರೆ, ಏಕಾಂತವನ್ನು ಸೇರಿ ಕಣ್ತುಂಬ ಅತ್ತನು ವಿಭೀಷಣ. ಈ ಅಣ್ಣ ತಮ್ಮರ ಸಂಬಂಧ ಇಡೀ ಪ್ರಪಂಚವನ್ನೇ ಬೆಳಗಿಸುವಂಥದ್ದು. ಕುಂಭಕರ್ಣ ಮೊದಲು ವಿಭೀಷಣನ ನಿಲುವನ್ನು ಸ್ಥಿರಗೊಳಿಸಿದನು. ನಮ್ಮ ವಂಶಕ್ಕೆ ನೀನೇ ಉಳಿಯುವುದು, ರಾಜನಾಗುವುದು ರಾಮನ ಕರುಣೆಯಿಂದ. ರಾಮನಿಗೆ ಸರಿಯಾಗುವ ಹಾಗೆ ಕಾರ್ಯ ಮಾಡು. ನನಗೆ ಆ ಯೋಗ ಇಲ್ಲ. ನೀನು ಮಾತ್ರ ರಾಮನ ಸೇವೆ ಮಾಡು ಎಂದ ಕುಂಭಕರ್ಣ ಆ ಸಂದರ್ಭದಲ್ಲಿ ಎಷ್ಟು ದೊಡ್ಡವನಾದನು…..!

ರಾಮನು ಕುಂಭಕರ್ಣನಿಗೆ ಹೇಳಿದನು, ” ಬಾ ಕುಂಭಕರ್ಣ, ಯಾರನ್ನು ಹುಡುಕ್ತಾ ಇಡೀ ಯುದ್ಧಭೂಮಿಯನ್ನು ಅಡ್ಡಾಡಿದೆಯೋ, ಆ ರಾಮ ನಾನೇ.. ಇದೊಂದು ಮೂಹೂರ್ತ ನಿನಗೆ”. ರಾಮ ಎಂದು ಗೊತ್ತಾದಾಗ ಕುಂಭಕರ್ಣ ದೊಡ್ಡದಾಗಿ ನಕ್ಕನಂತೆ. ರಾಮನಿಗೆ ಹೇಳಿದನು, ನಾನು ಖರ, ವಿರಾಧ, ಮಾರೀಚ, ವಾಲಿಯಲ್ಲ,…! ಈಗ ನಿನ್ನ ಮುಂದೆ ಬಂದವನು ಕುಂಭಕರ್ಣ. ಕಿವಿಯಿಲ್ಲ, ಮೂಗಿಲ್ಲ ಎಂದು ಯುದ್ಧ ನಿಲ್ಲಿಸಬೇಡ. ಹೇ ಇಕ್ಷ್ವಾಕು ಕುಲ ಶಾರ್ದೂಲನೇ, ನಿನ್ನ ಪರಾಕ್ರಮವನ್ನು ನನ್ನ ಮೇಲೆ ಪ್ರಯೋಗಿಸು ಎಂದನು ಕುಂಭಕರ್ಣ. ಆಗ ರಾಮ ಯಾವ ಬಾಣದಿಂದ ಸಪ್ತತಾಲವೃಕ್ಷವನ್ನು ತುಂಡರಿಸಿದ್ದನೋ, ಅದೇ ಬಾಣಗಳನ್ನು ಪ್ರಯೋಗಿಸುತ್ತಾನೆ. ವಾಲಿಯನ್ನು ಕೊಂದ ಬಾಣಗಳನ್ನು ಪ್ರಯೋಗಿಸಿದಾಗ, ಏನೂ ಪ್ರಯೋಜನವಾಗಲಿಲ್ಲ. ರಾಮ ಬಹಳಷ್ಟು ಬಾಣಗಳನ್ನು ಪ್ರಯೋಗಿಸಿದರೂ, ಏನೂ ಆಗಲಿಲ್ಲ ಕುಂಭಕರ್ಣನಿಗೆ. ಮುದ್ಗರವನ್ನು ಬೀಸಿ ಕಪಿಗಳನ್ನು ಓಡಿಸಿದನು ಕುಂಭಕರ್ಣ. ಇನ್ನೇನು ಮುದ್ಗರದಿಂದ ರಾಮನನ್ನು ಕೊಲ್ಲಬೇಕು, ಅಷ್ಟರಲ್ಲಿ ರಾಮನು ವಾಯುವ್ಯಾಸ್ತ್ರದಿಂದ ಕುಂಭಕರ್ಣನ ಕೈಯನ್ನೇ ಕತ್ತರಿಸಿದನಂತೆ. ಕೈಕೆಳಗೆ ಬಿತ್ತು, ಆ ಜಾಗದ ವಾನರ ಸೈನ್ಯ ಹತವಾಯಿತು. ಉಳಿದ ಕಪಿಗಳು ನಡುಗುತ್ತಾ ದೂರದಲ್ಲಿ ಹೋಗಿ ನಿಂತು ನೋಡಿದರು. ಇನ್ನೊಂದು ಕೈಯಿಂದ ಮರವನ್ನು ಕಿತ್ತು ರಾಮನ ಮೇಲೆ ಪ್ರಯೋಗಿಸುವ ಮೊದಲು, ಐಂದ್ರಾಸ್ತ್ರದಿಂದ ಕಡಿದೊಗೆದನು ಆ ಕೈಯನ್ನು ರಾಮ. ಆ ಭುಜ ಬೀಳುವಾಗ, ಆ ಜಾಗದ ಮರಗಳು ಬಿದ್ದವು. ಎರಡೂ ಕೈ ತುಂಡಾದರೂ, ರಾಮನ ಕಡೆಗೆ ಬರುತ್ತಿರುವ ಕುಂಭಕರ್ಣನನ್ನು ನೋಡಿ ಅಸ್ತ್ರಗಳಿಂದ ಅವನ ಪಾದಗಳನ್ನು ಕತ್ತರಿಸಿದನು ರಾಮ. ಬಾಯನ್ನು ತೆರೆದು ಮುಂದೆ ನುಗ್ಗಿದನು ಕುಂಭಕರ್ಣ. ರಾಮನು ಬಾಣಗಳಿಂದ ಬಾಯಿಯನ್ನು ತುಂಬಿಸಿದನು. ಕುಂಭಕರ್ಣನ ಧ್ವನಿ ಕಷ್ಟದಿಂದ ಹೊರಬರುತ್ತಿತ್ತು. ಐಂದ್ರಾಸ್ತ್ರವನ್ನು ರಾಮ ಕುಂಭಕರ್ಣನ ಮೇಲೆ ಪ್ರಯೋಗಿಸಿದನು. ಕುಂಭಕರ್ಣನ ಶಿರಸ್ಸನ್ನು ಗಗನಕ್ಕೆ ಹಾರಿಸಿತು. ಆ ತಲೆ ಹೋಗಿ ಲಂಕೆಯಲ್ಲಿ ಬಿತ್ತು. ಅದು ಒಂದು ಭಾಗದ ಕೋಟೆಯನ್ನೇ ಕೆಡವಿತು. ಶರೀರದ ಅರ್ಧಭಾಗ ಸಮುದ್ರದಲ್ಲಿ ಬಿದ್ದು ತಳವನ್ನು ಸೇರಿತು. ಹೀಗೆ ಆ ಮಹಾರಾಕ್ಷಸನ ವಧೆಯಾಯಿತು. ಎಲ್ಲ ದೇವರ್ಷಿ ಗಂಧರ್ವರು ಹರ್ಷಿತರಾದರು ರಾಮನ ಪರಾಕ್ರಮದಿಂದ. ಕಪಿಗಳ ಸಂತೋಷಕ್ಕೆ ಪಾರವೇ ಇಲ್ಲ. ರಾಮನನ್ನು ಎಲ್ಲ ಕಪಿಗಳೂ ಗೌರವಿಸಿ, ಪೂಜಿಸುತ್ತಿದ್ದಾರೆ. ರಾಮನಿಗೂ ಸಮಾಧಾನವಾಯಿತು. ಇದು ರಾಮಾಯಣದ ಕುಂಭಕರ್ಣಪರ್ವ.

ಕುಂಭಕರ್ಣನು ಬಹಳ ಒಳ್ಳೆಯವನು, ಆದರೆ ಕೆಟ್ಟವನಿಗೆ ನಿಷ್ಠೆ. ರಾವಣನ ಜೊತೆಗೂಡಿ ಕೆಟ್ಟವನು ಇವನು. ಎಲ್ಲ ಸದ್ಗುಣಗಳಿದ್ದರೂ, ರಾವಣ ಹಾಕಿದ ಗೆರೆಯನ್ನು ದಾಟುವುದಿಲ್ಲ. ಇದನ್ನು ಬಿಟ್ಟರೆ ಕುಂಭಕರ್ಣನೂ ವಿಭೀಷಣನಂತೆ. ಆದರೆ ಇದೊಂದು ವ್ಯತ್ಯಾಸ. ವಿಭೀಷಣ ರಾವಣನ ಮಾತನ್ನೂ ಮೀರಿ ಧರ್ಮದೆಡೆ ಹೋದರೆ, ಕುಂಭಕರ್ಣ ರಾವಣನ ಗೆರೆಯನ್ನು ದಾಟುತ್ತಿರಲಿಲ್ಲ. ಇದೇ ವ್ಯತ್ಯಾಸ. ಕುಂಭಕರ್ಣನದು ಮೋಕ್ಷವೇ ಆಯಿತು.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments