ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

‘ನಾವು ಮಾಡಿದ ತಪ್ಪು ಕೂಡಲೇ ಫಲ ಕೊಡ್ಬೇಕು ಅಂತ ಇಲ್ಲ, ನಿಧಾನಕ್ಕೆ ಫಲ ಬರುವಂಥದ್ದು. ಬರುವಾಗ ಮಾತ್ರ, ಆ ತಪ್ಪು ಮಾಡಿದವನ ಬೇರು ಬೇರುಗಳನ್ನೂ ಕತ್ತರಿಸಿಬಿಡ್ತದೆ’ ಎಂಬ ಮನುಸ್ಮೃತಿಯ ಮಾತು ರಾವಣನಿಗೆ ಅನ್ವಯವಾಗ್ತಾ ಇದೆ‌. ರಾಕ್ಷಸರು ರಾಕ್ಷಸೇಂದ್ರನಿಗೆ ಕುಂಭಕರ್ಣನ ನಿಧನದ ನಿವೇದನೆಯನ್ನು ಮಾಡ್ತಾ ಇದ್ದಾರೆ, “ಮೃತ್ಯುವಿನಂತೆ ಇದ್ದವನು, ವಾನರಸೇನೆಯನ್ನು ದಾರಿ ಕೆಡಿಸಿ, ಅದೆಷ್ಟೋ ವಾನರರನ್ನು ಮುಕ್ತಿಗೊಳಿಸಿ, ಒಂದಷ್ಟು ಹೊತ್ತು ರಣಭೂಮಿಯಲ್ಲಿ ವಿಜೃಂಭಿಸಿ, ಬಳಿಕ ರಾಮನ ತೇಜಸ್ಸಿನಿಂದ ಮೃತ್ಯುವಶನಾಗಿ ಹೋದ ಕುಂಭಕರ್ಣ. ಅರ್ಧ ಶರೀರ ಸಮುದ್ರದಲ್ಲಿ, ಇನ್ನರ್ಧ ಲಂಕೆಯ ದ್ವಾರಕ್ಕೆ ಅಡ್ಡವಾಗಿದೆ, ಕಂಠವು ಬೇರೆಯಾಗಿದೆ, ತೊಡೆಗಳಲ್ಲಿ, ಭುಜಗಳಲ್ಲಿ ಕತ್ತರಿಸಲ್ಪಟ್ಟಿದೆ ಶರೀರ, ರಕ್ತವು ಪ್ರವಾಹವಾಗಿ ಹರಿದು ಹೋಗಿದೆ. ತುಂಡು ತುಂಡಾಗಿ ಬಿದ್ದಿದ್ದಾನೆ ಕುಂಭಕರ್ಣ” ಎಂಬುದಾಗಿ ರಾವಣನಿಗೆ ಅರುಹಿದ್ದಾರೆ ರಾಕ್ಷಸರು. ಸಾವಿರ ಸಿಡಿಲು ಒಮ್ಮೆಲೆ ಬಡಿದಂತೆ ಆಗಿದೆ ಅವನಿಗೆ. ಕುಂಭಕರ್ಣನ ಮೇಲೆ ಅಷ್ಟು ಭರವಸೆ ಇತ್ತು ಅವನಿಗೆ. ನೊಂದು ಗೊತ್ತಿಲ್ಲ, ನೋಯಿಸಿ ಗೊತ್ತು ರಾವಣನಿಗೆ! ಅಂತವನಿಗೆ ತಡೆಯಲಾರದಷ್ಟು ನೋವು ಬಂತು. ಹಾಗೇ ಮೂರ್ಛೆ ತಪ್ಪಿ ಬಿದ್ದನು ರಾವಣ. ಅವನ ನಾಲ್ವರು ಮಕ್ಕಳು ದೇವಾಂತಕ, ನರಾಂತಕ, ತ್ರಿಶಿರ ಮತ್ತು ಅತಿಕಾಯ ಅವನ ಜೊತೆಯಲ್ಲಿದ್ದಾರೆ. ಜೊತೆಗೆ ಇಬ್ಬರು ಸಹೋದರರು ಮಹೋದರ ಮತ್ತು ಮಹಾಪಾರ್ಶ್ವ ಕೂಡ ಇದ್ದಾರೆ. ಅವರೂ ಕೂಡ ಶೋಕಪೀಡಿತರಾಗಿ ರೋಧಿಸಿದರು. ರಾವಣನಿಗೆ ಪ್ರಜ್ಞೆ ಬರುವುದಕ್ಕೆ ಬಹಳ ಹೊತ್ತು ಬೇಕಾಯ್ತು. ತನ್ನ ಬಲಗೈಯಂತಿದ್ದ ಕುಂಭಕರ್ಣನನ್ನು ನೆನೆದು ದೀನನಾಗಿ ವಿಲಪಿಸಿದನು ರಾವಣ. ‘ದೇವತೆಗಳು ಋಷಿಗಳೆಲ್ಲ‌ ಮೇಲಿಂದ ಹರ್ಷೋದ್ಗಾರ ಮಾಡ್ತಾ ಇದ್ದಾರೆ! ನೀನು ಹೋದ ಮೇಲೆ ಇದಾಗುವುದೇ ಖಂಡಿತ. ಇಂದೇ ವಾನರರು ಲಂಕೆಯ ಕೋಟೆಯನ್ನೇರ್ತಾರೆ. ಬಾಗಿಲು ಮುರಿದು ಒಳಗೆ ಬಂದುಬಿಡ್ತಾರೆ. ಕುಂಭಕರ್ಣನೇ ಇಲ್ಲದ ಮೇಲೆ ರಾಜ್ಯವಿದ್ದೇನು? ಸೀತೆಯಿದ್ದೇನು? ನನ್ನ ‌ಬದುಕಿನ ಆಸಕ್ತಿಯೇ ಹೊರಟುಹೋಗಿದೆ. ಅದು ಮತ್ತೆ ಬರಬೇಕಾದ್ರೆ ಯುದ್ಧದಲ್ಲಿ ನಾನು ರಾಮನನ್ನು ಸಂಹಾರ ಮಾಡ್ಬೇಕು. ಈ ವ್ಯರ್ಥ ಜೀವಿತಕ್ಕಿಂತ ಸತ್ತರೇ ಒಳ್ಳೆದಿತ್ತು ನಾನು! ನನಗೆ ಹೆದರಿ ನಡುಗಿಕೊಂಡಿದ್ದವರು ಇನ್ನು ನನ್ನನ್ನು ತಮಾಷೆ ಮಾಡ್ತಾರೆ. ಯಾಕಂದ್ರೆ ದೇವತೆಗಳಿಗೆ ನಾನು ಪೂರ್ವಾಪಕಾರಿ. ಹೇಗೆ ಇನ್ನು ಇಂದ್ರನನ್ನು, ದೇವತೆಗಳನ್ನು ಗೆಲ್ಲಲೋ’ ಎಂಬುದಾಗಿ ಪ್ರಲಾಪಿಸಿದ.

ತುಂಬ ಪ್ರಾಮಾಣಿಕವಾದ ಕ್ಷಣ ರಾವಣನ ಜೀವನದಲ್ಲಿ ಬಂತು ಈಗ. ಏನಂದ್ರೆ, ಒಂದು ಪಶ್ಚಾತ್ತಾಪ ಬಾಧಿಸಿತು. ಅವನ ಕಿವಿಯಲ್ಲಿ ವಿಭೀಷಣನ ಮಾತುಗಳು ಮೊಳಗಿದವು. ‘ವಿಭೀಷಣ ಅಂದು ಆಡಿದ ಮಾತು ಇಂದು ಸತ್ಯವಾಯಿತು. ಅಂದು ಬುದ್ಧಿಯಿಲ್ಲದೆ ವಿಭೀಷಣನ ಮಾತನ್ನು ತಿರಸ್ಕರಿಸಿದೆ ನಾನು. ಆ ಮಾತಿಂದು ಸತ್ಯವಾಗಿ ಬಂದು‌ ನನ್ನ ಮುಂದೆ ನಿಂತಿದೆ. ಯಾವಾಗ ಪ್ರಹಸ್ತ ತೀರಿಹೋದನೋ, ಯಾವಾಗ ಕುಂಭಕರ್ಣನ ಅವಸಾನವಾಯಿತೋ, ‘ರಾಮನೊಡನೆ ಹೋರಾಡಲಿಕ್ಕೆ‌ ನಿಮಗಾರಿಗೂ ಸಾಧ್ಯವಿಲ್ಲ, ಸರ್ವನಾಶವಾಗ್ತದೆ ರಾಕ್ಷಸರದು’ ಎಂದು ಸಾರಿ ಸಾರಿ ವಿಭೀಷಣ ಹೇಳಿದ ಮಾತು ಸತ್ಯವಾಯಿತು. ಒಂದು ಬಗೆಯ ಆತ್ಮ ತಿರಸ್ಕಾರ ನನ್ನನ್ನು ಕಾಡ್ತಾ ಇದೆ. ವಿಭೀಷಣನನ್ನು ಏಕೆ ಹೊರನೂಕಿದೆ ನಾನು ಲಂಕೆಯಿಂದ? ತಪ್ಪು ಮಾಡಿದ. ಇದು ಒಳ್ಳೆಯವನಾದ, ಧಾರ್ಮಿಕನಾದ ವಿಭೀಷಣನನ್ನು ಅವಮಾನಪಡಿಸಿ ಹೊರನೂಕಿದುದರ ಫಲ ಬಂತು ನನಗೆ’.
ವಿಭೀಷಣನಿಗೆ ಮಾಡಿದ ಅನ್ಯಾಯ ಕಾಡಿತು ಅವನನ್ನು. ದೈನ್ಯದಿಂದ ವಿಲಪಿಸಿ‌, ವಿಲಪಿಸಿ ಬಿದ್ದುಬಿಟ್ಟ ಮತ್ತೆ ಬೋಧ ತಪ್ಪಿ. ಹೀಗೆ ದುರಾತ್ಮನಾದ ರಾವಣನು ವಿಲಪಿಸುತ್ತಿರಲಾಗಿ, ಅವನ ಮಗ ತ್ರಿಶಿರ ಕ್ರೋಧದಿಂದ ನುಡಿದ, ‘ಅಪ್ಪಾ, ಎಷ್ಟೋ ಜನ ಸತ್ತಿದ್ದಾರೆ, ಎಷ್ಟು ಜನ ಬದುಕಿದ್ದಾರೆ. ಆದ್ರೆ ನಿನ್ನ ಹಾಗೆ ಯಾರೂ ಅಳ್ತಾ ಕೂತ್ಕೊಳ್ಳೋದಿಲ್ಲ. ನೀನು ಮೂರು ಲೋಕಕ್ಕೆ ದೊರೆ. ನಿನ್ನ ಬಳಿ ಎಂತೆಂಥಾ ಆಯುಧಗಳಿವೆ! ನೀನು ರಾಮನನ್ನು ನಿಗ್ರಹಿಸ್ಲಿಕ್ಕೆ ಧಾರಾಳ ಸಾಧ್ಯವಿದೆ. ಆದ್ರೆ, ನೀನು ಇಲ್ಲೇ ಇರು, ನಾನೇ ಹೊರಟೆ. ಅದನ್ನು ಕೇಳಿದ ರಾವಣನಿಗೆ ಮತ್ತೆ ಹುಟ್ಟಿದಂತೆ ಭಾಸವಾಯ್ತು, ಮತ್ತೆ ಸಂತೋಷವಾಯ್ತು. ಯಾಕಂದ್ರೆ, ಕಾಲ ಕರೆದಿತ್ತು.

ಏತನ್ಮಧ್ಯೆ ತ್ರಿಶಿರನ ಮಾತು ಕೇಳಿ ಮತ್ತೆ ಮೂವರು; ದೇವಾಂತಕ, ನರಾಂತಕ ಮತ್ತು ತೇಜಸ್ವಿಯಾದ ಅತಿಕಾಯ ಯುದ್ಧಕ್ಕೆ ಸಿದ್ಧರಾದರು. ಆ ಮಕ್ಕಳನ್ನು ತಬ್ಬಿಕೊಂಡು ಆಶೀರ್ವದಿಸಿ ರಣಕ್ಕೆ ಬೀಳ್ಕೊಟ್ಟನು ರಾವಣ. ರಕ್ಷಣೆಗಾಗಿ ಈರ್ವರು ಸೋದರರನ್ನೂ ಕಳುಹಿಸಿಕೊಟ್ಟ. ಆ ಮಹಾರಾಕ್ಷಸರು ಯುದ್ಧಕ್ಕೆ ಮೊದಲು ಮಾಡಬೇಕಾದ ವಿಧಿಗಳನ್ನು ಪೂರೈಸಿ ಕಾಲದ ಕರೆಗೆ ಓಗೊಟ್ಟು ಹೊರ್ಟಿದ್ದಾರೆ. ಮಹೋದರನು ದೊಡ್ಡ ಆನೆಯನ್ನು ಏರಿ ಹೊರಟಿದ್ದಾನೆ. ಮೂರು ತಲೆಯ ತ್ರಿಶಿರನು ಕುದುರೆಯನ್ನೇರಿದ. ಅತಿಕಾಯನು ಅದ್ಭುತವಾದ ರಥವನ್ನೇರಿದ. ನರಾಂತಕನು ಕನಕಭೂಷಣವಾದ ಪ್ರಾಸವನ್ನು ಹಿಡಿದು ಬಿಳಿಯ ಕುದುರೆಯನ್ನೇರಿದ.‌ ದೇವಾಂತಕನು ಪರಿಘವನ್ನು ಹಿಡಿದ, ಮಹಾಪಾರ್ಶ್ವ, ಮಹೋದರ ಇವರೆಲ್ಲರೂ ಕೂಡ ಅವರವರ ಸೈನ್ಯವನ್ನು ಕೂಡಿಕೊಂಡು ಹೊರಟರು. ಶತ್ರುಗಳು ಸೋಲಬೇಕು ಅಥವಾ ನಾವು ಸಾಯಬೇಕು ಎನ್ನುವುದನ್ನು ನಿಶ್ಚಯ ಮಾಡಿ ಹೊರಟಿದ್ದಾರೆ. ಪರ್ವತ, ವೃಕ್ಷ , ಕೊಂಬೆಗಳನ್ನು ಹಿಡಿದುಕೊಂಡು‌ ಸಿದ್ಧವಾಗಿದೆ ವಾನರ ಸೈನ್ಯ.
ರಾಕ್ಷಸ ವಾನರರ ಮುಖಾಮುಖಿಯಾಯಿತು, ಗರ್ಜನೆಯಾಯಿತು, ಎರಡೂ ಕಡೆಯ ಸೈನಿಕರ ಘೋರ ಸಮರ ನಡೆಯಿತು, ವಾನರ ಸೇನೆಯ ಕೈ ಮೇಲಾಯಿತು. ದೇವತೆಗಳು, ಮಹರ್ಷಿಗಳು ಹರ್ಷೋದ್ಗಾರ ಮಾಡ್ತಾ ಇದ್ದಾರೆ. ಆಗ ಕುದುರೆಯ ಮೇಲೆ ಕುಳಿತಿದ್ದ ನರಾಂತಕ ತನ್ನ ಪರಾಕ್ರಮವನ್ನು ಮೆರೆಸಿದ. ಪ್ರಾಸವೆಂಬ ಆಯುಧ ಹಿಡಿದು ಕಪಿರಾಜನ ಸೇನೆಯನ್ನು ಪ್ರವೇಶಿಸಿ ಅದ್ಭುತ ಯುದ್ಧವನ್ನು ಮಾಡ್ತಾನೆ. ಕಣ್ಣೆವೆಯಿಕ್ಕುವುದರ ಒಳಗೆ 700 ವಾನರರನ್ನು ಕೆಡವಿದನಂತೆ! ಅವನು ಹೋದಲ್ಲಿ ದೊಡ್ಡ ದೊಡ್ಡ ಶವಗಳ ರಾಶಿ! ವಾನರರಿಗೆ ಯೋಚಿಸಲೂ ಅವಕಾಶವಿಲ್ಲದಂತೆ ಅಂತಹ ಯುದ್ಧವನ್ನು ನರಾಂತಕ ಮಾಡ್ತಾನೆ. ವಾನರರು ವೃಕ್ಷ ಪರ್ವತಗಳನ್ನು ಕಿತ್ತೆತ್ತುವಾಗಲೇ ಸತ್ತು ಬಿದ್ದಾಯಿತು‌. ಅಂತಹ ವೇಗವನ್ನು ನರಾಂತಕ ಹೊಂದಿದ್ದ. ಅದನ್ನು ತಡೆದುಕೊಳ್ಲಿಕ್ಕೆ ವಾನರ ಸೇನೆಗೆ ಸಾಧ್ಯವಾಗದೆ ಆಕ್ರಂದಿಸಿದರು.

ದೂರದಿಂದ ಕುಂಭಕರ್ಣನಿಂದ ಗಾಯಗೊಂಡ ವಾನರರಿಗೆ ಚಿಕಿತ್ಸೆ ಕೊಡಿಸಿ ಯುದ್ಧಕ್ಕೆ ಮರಳಿಸುತ್ತಿದ್ದ ಸುಗ್ರೀವ ನೋಡ್ತಾನೆ ಈ ದೃಶ್ಯವನ್ನು. ಅಂಗದನನ್ನು ಕರೆದು ಆ ರಾಕ್ಷಸನ ಪ್ರಾಣ ತೆಗೆಯಲು ಅಪ್ಪಣೆ ಮಾಡ್ತಾನೆ. ಅದನ್ನು ಸ್ವೀಕರಿಸಿದ ಅಂಗದ ಸೈನ್ಯದಿಂದ ಹೊರಗೆ ಬಂದು ನಿರಾಯುಧನಾಗಿ ನೇರವಾಗಿ ಹೋಗಿ ನರಾಂತಕನ ಮುಂದೆ ನಿಂತುಕೊಂಡು, ‘ನೋಡು, ಸಣ್ಣ ಸಣ್ಣ ಕಪಿಗಳ ಜೊತೆಗೆ ಬೇಡ, ನಾನು ಬಂದಿದ್ದೇನೆ,‌ ನಿನಗೆ ತಾಕತ್ತಿದ್ದರೆ ನಿನ್ನ ತ್ರಾಸದಿಂದ ನನ್ನ ಎದೆಯಲ್ಲಿ ಪ್ರಹರಿಸು’ ಎಂದಾಗ ನರಾಂತಕ ಹಿಂದೆ ಹೋಗಿ, ಧಾವಿಸಿ ಬಂದು ಪ್ರಾಸವನ್ನೆತ್ತಿ ಅಂಗದನ ಎದೆಯ ಮೇಲೆ ಅಪ್ಪಳಿಸಿದ. ಪರಿಣಾಮ, ಪ್ರಾಸವು ಚೂರುಚೂರಾಗಿ ಕೆಳಗೆ ಬಿತ್ತು! ಅಂಗದ ಅಲುಗಾಡಲೂ ಇಲ್ಲ! ಇದು ಅನೇಕ ದಿನಗಳ ಯುದ್ಧದ ನಂತರವೂ ಅಂಗದನಲ್ಲಿದ್ದ ಶಕ್ತಿ, ಚೈತನ್ಯ. ಆಮೇಲೆ ನರಾಂತಕನ ಕುದುರೆಯ ಮೇಲೆ ಅಂಗದನ ಕಣ್ಣುಬಿತ್ತು. ಅಂಗೈಯಲ್ಲಿ ಅದರ ತಲೆಗೊಂದು ಬಲವಾದ ಪ್ರಹಾರ ಕೊಟ್ಟು ಕೊಂದ. ಆಗ ಸಿಟ್ಟಿನಿಂದ ನರಾಂತಕನು ಮುಷ್ಠಿಯಿಂದ ಅಂಗದನ ನೆತ್ತಿಯ ಮೇಲೆ ರಕ್ತ ಚಿಮ್ಮುವಂತೆ ಪ್ರಹಾರವನ್ನು ಮಾಡಿದ. ಒಂದು ಕ್ಷಣ ಕಣ್ಣು ಕತ್ತಲೆ ಬಂದಿದೆ ಅಂಗದನಿಗೆ. ಎಚ್ಚೆತ್ತು ತಾನೂ ಮುಷ್ಠಿಕಟ್ಟಿ ನರಾಂಕತನ ವಕ್ಷಸ್ಥಳದಲ್ಲಿ ಪ್ರಹರಿಸ್ತಾನೆ ಅಂಗದ. ಅಲ್ಲಿಗೆ, ಬಿದ್ದ ನರಾಂತಕ ಮತ್ತೆ ಏಳಲಿಲ್ಲ. ದೊಡ್ಡ ಜಯಘೋಷ ಕೇಳಿ ಬಂತು.

ಮತ್ತೆ ಯಾರಿದ್ದಾರೆ ಅಂತ ಹುಡುಕ್ಲಿಕ್ಕೆ ಶುರು ಮಾಡಿದ್ನಂತೆ ಅಂಗದ. ಮೂವರು ರಾಕ್ಷಸ ಪುಂಗವರು ಒಟ್ಟಿಗೆ ಆಕ್ರಮಣ ಮಾಡ್ತಾರೆ ಅಂಗದನ ಮೇಲೆ. ದೇವಾಂತಕ, ತ್ರಿಶಿರ ಮತ್ತು ಮಹೋದರ. ಮಹೋದರ ಆನೆಯ ಮೇಲೇರಿ ಅಂಗದನ ಮೇಲೆ ಧಾವಿಸಿ ಬಂದ. ದೇವಾಂತಕ ತನ್ನ ಪರಿಘವನ್ನು ಹಿಡಿದುಕೊಂಡು, ತ್ರಿಶಿರ ರಥವೇರಿ ನುಗ್ಗಿ ಬಂದ. ಅಂಗದ ಒಂದು ದೊಡ್ಡ ಮರ ಕಿತ್ತು ದೇವಾಂತಕನ ಮೇಲೆ ಹೊತ್ತು ಹಾಕಿದ. ತ್ರಿಶಿರ ಆ ವೃಕ್ಷವನ್ನು ಬಾಣಗಳಿಂದ ಕತ್ತರಿಸಿದ. ಆಮೇಲೆ ನೂರಾರು ವೃಕ್ಷಗಳು, ಬಂಡೆಗಳು, ಪರ್ವತ ಶೃಂಗಗಳನ್ನು ತಂದು ತಂದು ಹಾಕ್ತಾನೆ ಆ ರಾಕ್ಷಸರ ಮೇಲೆ. ಅವೆಲ್ಲವನ್ನೂ ತ್ರಿಶಿರ ತನ್ನ ಬಾಣಗಳಿಂದ ಕತ್ತರಿಸ್ತಾನೆ. ದೇವಾಂತಕ ತನ್ನ ಪರಿಘದಿಂದ ಅವುಗಳಲ್ಲಿ ಕೆಲವನ್ನು ಕೆಡವಿ ಹಾಕ್ತಾನೆ. ಬಳಿಕ ತ್ರಿಶಿರ ಅನೇಕ ಬಾಣಗಳನ್ನು ಪ್ರಯೋಗ ಮಾಡ್ತಾನೆ ಅಂಗದನ ಮೇಲೆ. ಏತನ್ಮಧ್ಯೆ, ಮಹೋದರ ಇನ್ನೊಂದು ಕಡೆಯಿಂದ ಬಂದು ಅಂಗದನ ವಕ್ಷಸ್ಥಳಕ್ಕೆ ಪ್ರಹಾರ ಮಾಡ್ತಾನೆ. ದೇವಾಂತಕ ಧಾವಿಸಿ ಬಂದು ಪರಿಘದಿಂದ ಬಲವಾಗಿ ಪ್ರಹರಿಸಿ ಆ ಕಡೆ ಓಡಿ ಹೋದ್ನಂತೆ. ಮೂವರು ಬಂದು ಆಕ್ರಮಣ ಮಾಡ್ತಿದ್ದರೂ ಅಂಗದನು ಹೆಮ್ಮೆಟ್ಟಲಿಲ್ಲ, ಭಯಪಡಲೂ ಇಲ್ಲ, ಚಿಂತೆಯನ್ನೂ ಮಾಡಲಿಲ್ಲ. ಮಹಾವೇಗ ತಾಳಿ ತನ್ನ ಅಂಗೈಯಿಂದ ಆನೆಯ ತಲೆ ಮೇಲೊಂದ ಬಡಿದ. ಆನೆ ಘೀಳಿಟ್ಟಿತು. ಆ ಆನೆಯ ದಂತವನ್ನು ಕಿತ್ತು ಅದರಿಂದ ದೇವಾಂತಕನಿಗೆ ಹೊಡೆದ್ನಂತೆ. ಅವನಿಗೆ ತಡೆದುಕೊಳ್ಳಲಾಗದೆ ಬಿದ್ದುಬಿಟ್ಟ. ಅಂಗದ ಇನ್ನಿಬ್ಬರ ಜೊತೆ ಯುದ್ಧ ಮಾಡ್ತಿದ್ದಾಗ ದೇವಾಂತಕ ಎದ್ದು ಬಂದು ಪರಿಘದಿಂದ ಬಲವಾದ ಪ್ರಹಾರ ಮಾಡಿದಾಗ ಒಂದು ಕ್ಷಣ ಕುಸಿದ ಅಂಗದ. ಏಳುವಾಗ ಅವನ ಹಣೆಯನ್ನು ಬಾಣದಿಂದ ಕೆಡವ್ತಾನೆ ತ್ರಿಶಿರ. ಇದನ್ನು ದೂರದಿಂದ ನೋಡಿದ ಹನುಮಂತ ಮತ್ತು ನೀಲರು ಬಂದ್ರು. ನೀಲ ತ್ರಿಶಿರನ ಮೇಲೆ ಬೆಟ್ಟವೊಂದನ್ನು ಎಸೆದ, ಅವನು ಬಾಣಗಳಿಂದ ಖಂಡಿಸಿದ. ದೇವಾಂತಕ ಹನುಮಂತನ ಮೇಲೇರಿ ಹೋಗಿದ್ದಾನೆ. ಅವನ ತಲೆಗೊಂದು ಗುದ್ದಿದ ಹನುಮಂತ, ಅದ್ಭುತ ಗರ್ಜನೆಯಿಂದ ರಾಕ್ಷಸ ಸೇನೆಯನ್ನು ಬೆದರಿಸಿದ. ದೇವಾಂತಕ ಇನ್ನಿಲ್ಲ! ಆಗ ತ್ರಿಶಿರ ನೀಲನ ನೇಲೆ ಬಾಣದ ಮಳೆಯನ್ನು ಗರೀತಾನೆ, ಮಹೋದರ ಇನ್ನೊಂದು ಆನೆಯನ್ನೇರಿ ಬರ್ತಾನೆ. ನೀಲನ ಮೇಲೆ ಬಾಣಗಳ ಮಳೆ ಬೀಳ್ತಾ ಇದೆ. ಏನೂ ಮಾಡ್ಲಿಕ್ಕೆ ಆಗ್ತಾ ಇಲ್ಲ. ಸ್ವಲ್ಪ ಹೊತ್ತು ಪ್ರಜ್ಞೆಯೇ ಹೋಯ್ತು ನೀಲನಿಗೆ. ಎಚ್ಚರವಾದ ಕೂಡ್ಲೆ ಒಂದು ದೊಡ್ಡ ಪರ್ವತ ಕಿತ್ತು ತಂದು ಮಹೋದರನ ಮೇಲೆ ಹಾಕಿದ. ಆಯಿತು, ಮಹೋದರ ಮತ್ತೆ ಏಳಲಿಲ್ಲ. ತ್ರಿಶಿರ ಹನುಮಂತನ ಮೇಲೆ ಬಾಣ ಪ್ರಯೋಗ ಮಾಡ್ತಾನೆ, ಹನುಮಂತ ಒಂದು ಪರ್ವತಗಳಿಂದ ಬಾಣಗಳನ್ನು ಖಂಡಿಸಿದ ತ್ರಿಶಿರ. ಆಮೇಲೆ ಒಂದಷ್ಟು ವೃಕ್ಷಗಳ ಮರೆಗೆರೀತಾನೆ, ಅದನ್ನೆಲ್ಲ ಬಾಣಗಳಿಂದ ಕಡಿದ ತ್ರಿಶಿರ. ಹನುಮಂತ ತ್ರಿಶಿರನ ಕುದುರೆಗಳನ್ನೆಲ್ಲ ಉಗುರುಗಳಿಂದ ಸೀಳಿಬಿಟ್ಟನಂತೆ. ಆಗ ಒಂದು ಶಕ್ತ್ಯಾಯುಧವನ್ನು ಕೈಗೆತ್ತಿಕೊಂಡ ತ್ರಿಶಿರ ಹನುಮಂತನ ಮೇಲೆಸೆದ. ಹನುಮಂತ, ಬಂದ ಕೂಡ್ಲೆ ಅದನ್ನು ಹಿಡ್ಕೊಂಡು ಮುರಿದು ಎಸೆದ. ವಾನರರು ಸಂತೋಷಪಟ್ಟು ಗರ್ಜನೆ ಮಾಡ್ತಾ ಇದ್ದಾರೆ. ಆಗ ತ್ರಿಶಿರ ಒಂದು ಖಡ್ಗವನ್ನು ಹಿಡಿದು ಹನುಮನ ವಕ್ಷಸ್ಥಳದಲ್ಲಿ ಬಲವಾದ ಪ್ರಹಾರವನ್ನು ಮಾಡ್ತಾನೆ. ಆಗ ಹನುಮಂತ ಅಂಗೈಯಿಂದ ತಿರುಗಿ ತ್ರಿಶಿರನ ಎದೆಗೆ ಹೊಡೆದಾಗ ಎಚ್ಚರ ತಪ್ಪಿ ಬಿದ್ದ ಅವನು. ಅವನ ಖಡ್ಗವನ್ನು ಕಸಿದು ಹನುಮಂತ ಗರ್ಜಿಸಿದಾಗ ಎಚ್ಚರವಾಯ್ತು ತ್ರಿಶಿರನಿಗೆ ಆ ಗರ್ಜನೆಯಿಂದ. ಎದ್ದು ಬಂದು ಮುಷ್ಠಿಯಿಂದ ಹನುಮನಿಗೆ ಗುದ್ದಿದ. ಹನುಮ ತ್ರಿಶಿರನ ತಲೆಯನ್ನು ಹಿಡ್ಕೊಂಡು ಅವನೇ ಖಡ್ಗದಿಂದ ಮೂರೂ ತಲೆಗಳನ್ನು ಕಡಿದು ಚೆಲ್ಲಿದ.

ಬಳಿಕ ಮತ್ತ(ಮಹಾಪಾರ್ಶ್ವ) ಅದ್ಭುತವಾದ ಗಧೆಯನ್ನು ಕೈಗೆತ್ತಿಕೊಂಡು ವಾನರ ಸೈನ್ಯದ ಮೇಲೆ ಧಾವಿಸಿ ಬಂದನಂತೆ ಮತ್ತ. ಅವನೆದುರು ವೃಷಭನೆಂಬ ವಾನರ ನಾಯಕ ಹೋಗಿ ನಿಲ್ತಾನೆ, ಅವನಿಗೆ ಗಧೆಯಿಂದ ಪ್ರಹಾರ ಮಾಡ್ತಾನೆ ಮತ್ತ. ರಕ್ತ ಸುರಿಯಿತು, ಪ್ರಜ್ಞೆ ತಪ್ಪಿತು. ಮತ್ತೆ ಪ್ರಜ್ಞೆ ಬಂದಾಗ ತುಟಿ ಅದುರಿತು ಸಿಟ್ಟಿನಿಂದ. ವೃಷಭ ಮುಷ್ಠಿಯಿಂದ ಅವನ ವಕ್ಷಸ್ಥಳಕ್ಕೆ ಪ್ರಹಾರ ಮಾಡ್ತಾನೆ. ಬಿದ್ದ ಮಹಾಪಾರ್ಶ್ವ. ಆ ಗಧೆ ತಗೊಂಡ ವೃಷಭ, ಅವನದೇ ಗಧೆಯಿಂದ ಅವನಿಗೆ ಬಲವಾದ ಪ್ರಹಾರವನ್ನು ಕೊಟ್ಟು ಮಹಾಪಾರ್ಶ್ವನನ್ನು ಮುಗಿಸಿಬಿಟ್ಟ. ಆಗ ಮಹೋದರ(ಉನ್ಮತ್ತ) ಬರ್ತಾನೆ‌. ಅವನಿಗೂ ಗವಾಕ್ಷನೆಂಬ ಗೋಲಾಂಗುಲ ನಾಯಕನಿಗೂ ಯುದ್ಧ ಆಗ್ತದೆ. ಆ ಯುದ್ಧದಲ್ಲಿ ತಲಪ್ರಹಾರದಿಂದ ಉನ್ನತ್ತನನ್ನು ಸಂಹಾರ ಮಾಡ್ತಾನೆ ಗವಾಕ್ಷ. ಇನ್ನುಳಿದವನೊಬ್ಬನೆ. ಅತಿಕಾಯ! ರಾಕ್ಷಸ ಸೈನ್ಯವಿಡೀ ಹೆದರಿದೆ. ಸೋದರರು ಹತರಾಗಿದ್ದಾರೆ. ಕೋಪದಿಂದ ರಥವೇರಿ ಮುನ್ನುಗ್ತಾ ಇದ್ದಾನೆ. ದೊಡ್ಡ ಧನುಸ್ಸನ್ನು ಠೇಂಕರಿಸಿ ಯುದ್ಧಕ್ಕೆ ಕರೀತಾನೆ. ವಾನರರು ಓಡಿದರು ಕುಂಭಕರ್ಣನ ಬಂದ ಅಂತ ಅಂದ್ಕೊಂಡು! ಹೆಚ್ಚಿನ ಕಪಿಗಳು ಬಂದು ರಾಮನಿಗೆ ಶರಣಾದರು, ‘ಅತಿಕಾಯನನ್ನು ಸೋಲಿಸಲು ನೀನೇ ಗತಿ’. ರಾಮ ನೋಡ್ತಾನೆ. ಅವನಿಗೂ ಆಶ್ಚರ್ಯವಾಯ್ತು. ವಾನರರಿಗೆ ಧೈರ್ಯ ಕೊಟ್ಟು ವಿಭೀಷಣನಲ್ಲಿ ಕೇಳ್ತಾನೆ, ‘ಯಾರದೀ ಪರ್ವತಾಕಾರ? ವಿಶಾಲವಾದ ರಥದಲ್ಲಿ ಕುಳಿತಿದ್ದಾನೆ. ಯುದ್ಧಭೂಮಿಗೇ ಶೋಭೆಯಂತಿರುವ ರಾಕ್ಷಸಶ್ರೇಷ್ಠ ಯಾರಿವನು?’ ಎಂದು ಕೇಳಿದಾಗ ವಿಭೀಷಣ ವಿವರಣೆ ಕೊಡ್ತಾನೆ. ‘ಇವನು ರಾವಣನ ಮಗ. ಸ್ವಲ್ಪ ಸಂಸ್ಕಾರವಂತ.‌ಹಿರಿಯರಲ್ಲಿ ಗೌರವ ಜಾಸ್ತಿ ಅವನಿಗೆ. ವೇದಗಳನ್ನು ಬಲ್ಲ. ಒಳ್ಳೆ ಶ್ರೋತ, ಎಲ್ಲ ಅಸ್ತ್ರಗಳನ್ನು, ನೀತಿಶಾಸ್ತ್ರ ಬಲ್ಲವನು. ಪರಾಕ್ರಮಿ. ಇವನು ತಪಸ್ಸಿನಿಂದ ಬ್ರಹ್ಮನನ್ನು ಒಲಿಸಿಕೊಂಡಿದ್ದಾನೆ. ದೇವತೆಗಳಿಂದ, ರಾಕ್ಷಸರಿಂದ ಸಾವಿಲ್ಲದ ವರವಿದೆ. ರಾಕ್ಷಸರನ್ನು ನೂರಾರು ಬಾರಿ ರಕ್ಷಿಸಿದವನು’ ಎಂದು ಪರಿಚಯ ಹೇಳ್ತಾ ಇದ್ದಾನೆ.

ಏತನ್ಮಧ್ಯೆ, ಮಹಾಕಾಯನು ರಾಮನ ಸೇನೆಯ ಮಧ್ಯ ಬಂದು ದೊಡ್ಡದಾಗಿ ಧನುಷ್ಠೇಂಕಾರ ಮಾಡಿದನು. ಐದು ಮುಖ್ಯರಾದ ವಾನರರು ವೃಕ್ಷ, ಶೃಂಗಗಳನ್ನು ಹಿಡಿದು ಧಾವಿಸಿದರು. ಅವುಗಳನ್ನು ತನ್ನ ಅಸ್ತ್ರಗಳಿಂದ ತಡೆದ ಅತಿಕಾಯ, ಅವರ ಮೇಲೆ ಬಾಣಪ್ರಯೋಗ ಮಾಡಿದ. ಅದರ ಪರಿಣಾಮವಾಗಿ ಆ ಐವರು ವಾನರಶ್ರೇಷ್ಠರು ನಿಸ್ಸಹಾಯಕರಾದರು, ಗಾಯವೂ ಆಯ್ತು. ಸಮರದಲ್ಲಿ ಕೈ ಸೋತರು‌. ಅತಿಕಾಯ ಕಪಿಗಳೆಲ್ಲರನ್ನೂ ಬೆದರಿಸಿದನಂತೆ. ಯುದ್ಧಧರ್ಮವನ್ನು ಪಾಲಿಸ್ತಾನೆ ಅತಿಕಾಯ. ಗರ್ವಿಷ್ಠ. ಮತ್ತೆ, ನೇರವಾಗಿ ರಾಮನ ಬಳಿಗೆ ಹೋಗಿ ಹೇಳಿದ್ನಂತೆ, ‘ನೋಡಿ, ರಥವನ್ನೇರಿ ಬಂದಿದ್ದೇನೆ, ಧನುರ್ಬಾಣಪಾಣಿಯಾಗಿ ಬಂದಿದ್ದೇನೆ. ನನಗೆ ಸಣ್ಣ ಪುಟ್ಟವರ ಜೊತೆ ಯುದ್ಧ ಮಾಡೋದಿಲ್ಲ. ನನ್ನ ಯೋಗ್ಯತೆಗೆ ತಕ್ಕವರು ಬಂದರೆ ಮಾತ್ರ ಯುದ್ಧ’.
ಅದನ್ನು ಕೇಳಿ ಸಹಿಸ್ಲಿಕ್ಕೆ ಆಗ್ಲಿಲ್ಲ ಲಕ್ಷ್ಮಣನಿಗೆ. ಧನುಸ್ಸನ್ನು ಕೈಗೆತ್ತಿಕೊಂಡ, ಒಮ್ಮೆ ನಕ್ಕ. ಅತಿಕಾಯನ ಮುಂದೆ ಬಂದು ತನ್ನ ಧನುಸ್ಸನ್ನು ಸೆಳೆದ. ಭೂಮಿಯೆಲ್ಲ ತುಂಬುವಂತೆ, ಪರ್ವತಗಳು ಮಾರ್ದನಿಸುವಂತೆ, ಲಕ್ಷ್ಮಣನ ಧನುಷ್ಠೇಂಕಾರ ಕೇಳಿ ಬಂತು. ರಾಕ್ಷಸರು ಬೆದರಿ ಅತ್ತಿತ್ತ ಓಡಿದರು. ಅದನ್ನು ಕೇಳಿ‌ ಅಚ್ಚರಿಗೊಂಡನಂತೆ ಅತಿಕಾಯ. ಲಕ್ಷ್ಮಣ ಅಂತ ಗೊತ್ತಾಯ್ತು. ‘ಹೇ ಲಕ್ಷ್ಮಣ, ನೀನಿನ್ನೂ ಸಣ್ಣವನು. ಮೃತ್ಯುವಿನ ಜೊತೆ ಯುದ್ಧ ಮಾಡ್ಲಿಕ್ಕೆ ಬರ್ಬೇಡ. ನನ್ನನ್ನು ಕೆಣಕಬೇಡ, ಇಡು ಧನುಸ್ಸನ್ನು, ಹೋಗಿ ಪ್ರಾಣ ಉಳಿಸಿಕೋ’ ಅಂತ ತನ್ನ ಆಯುಧಗಳ ಶಕ್ತಿಯ ಬಗ್ಗೆ ಎಚ್ಚರ ಹೇಳಿ ಒಂದು ಬಾಣವನ್ನು ಧನುಸ್ಸಿನಲ್ಲಿ ಹೂಡಿದ. ಲಕ್ಷ್ಮಣ ಹೇಳ್ತಾನೆ, ‘ಯಾರು ಬರೇ ಬಾಯಿಯಲ್ಲಿ ಕೊಚ್ಚಿಕೊಳ್ಳುವುದರಿಂದ ವೀರ ಎನಿಸಿಕೊಳ್ಳುವುದಿಲ್ಲ. ಕರ್ಮದಲ್ಲಿ ಮಾಡಿತೋರಿಸು. ಮತ್ತೆ, ನಾನು ಚಿಕ್ಕವನು ಅಂತ ಯೋಚಿಸ್ಬೇಡ. ನಿನ್ನ ಪಾಲಿಗೆ ನಾನು ಮೃತ್ಯುವೇ ಹೌದು’ ಎಂಬುದಾಗಿ ಹೇಳಿ ಲಕ್ಷ್ಮಣನೂ ಕೂಡ ಬಾಣಗಳನ್ನು ಧನುಸ್ಸಿನಲ್ಲಿ ಹೂಡಿದ. ಯುದ್ಧ ಪ್ರಾರಂಭವಾಯ್ತು‌. ಲಕ್ಷ್ಮಣನ ಮೇಲೆ ಬಾಣ ಬಿಡ್ತಾನೆ ಅತಿಕಾತ, ಲಕ್ಷ್ಮಣ ಅದನ್ನು ಅರ್ಧಚಂದ್ರ ಎಂಬ ಬಾಣದಿಂದ ತುಂಡು ಮಾಡ್ತಾನೆ. ಅತಿಕಾಯ ಐದು ಬಾಣಗಳನ್ನು ಬಿಡ್ತಾನೆ, ಲಕ್ಷ್ಮಣ ಐದನ್ನೂ ತುಂಡರಿಸ್ತಾನೆ. ಬಳಿಕ ಲಕ್ಷ್ಮಣ ವಿಶೇಷ ಬಾಣವೊಂದನ್ನು ಧನುಸ್ಸಿನಲ್ಲಿ ಹೂಡಿ ಬಲವಾಗಿ ಸೆಳೆದು ಪ್ರಯೋಗಿಸ್ತಾನೆ. ಆ ಬಾಣವು ಅತಿಕಾಯನನ್ನು ಅಣಕಿಸಿತು. ತೂಗಾಡಿದನು ಅತಿಕಾಯ. ಲಕ್ಷ್ಮಣನ ತಾಕತ್ತಿನ ಅರಿವಾದ ಅತಿಕಾಯ ಮತ್ತೆ ಲಕ್ಷ್ಮಣನ ಮೇಲೆ ವಿಷಮ ಸಂಖ್ಯೆಯಲ್ಲಿ ಹೆಚ್ಚೆಚ್ಚು ಬಾಣ ಪ್ರಯೋಗವನ್ನು ಮಾಡ್ತಾನೆ. ಅವೆಲ್ಲವನ್ನೂ ಲಕ್ಷ್ಮಣನು ಕತ್ತರಿಸಿ ಒಗೆದ. ಬಳಿಕ ಅತಿಕಾಯನು ಇನ್ನೊಂದು ಬಾಣದಿಂದ ಲಕ್ಷ್ಮಣ ನ ವಕ್ಷಸ್ಥಳವನ್ನು ಭೇದಿಸಿದ, ರಕ್ತ ಸುರಿಯಿತು. ಎದೆಗೆ ಸಿಕ್ಕ ಬಾಣವನ್ನು ತಾನೇ ಕಿತ್ತೆಸೆದು ಆಗ್ನೇಯಾಸ್ತ್ರವನ್ನು ಪ್ರಯೋಗಿಸ್ತಾನೆ. ಪ್ರತಿಯಾಗಿ ಅತಿಕಾಯ ಸೌರಾಸ್ತ್ರವನ್ನು ಪ್ರಯೋಗ ಮಾಡ್ತಾನೆ‌. ಎರಡೂ ಒಂದನ್ನೊಂದು ಸುಟ್ಟು ಬಿದ್ದಿತು. ಹೀಗೆ ಎರಡೂ ಕಡೆಯಿಂದ ಪ್ರಯೋಗ, ನಾಶ ಆಯ್ತು. ಬಳಿಕ ಲಕ್ಷ್ಮಣ ಅತಿಕಾಯನ ಮೇಲೆ ಬಾಣಗಳ‌ ಮಳೆಗರೀತಾನೆ. ಆದರೆ ಬ್ರಹ್ಮದತ್ತ ಕವಚದಿಂದಾಗಿ ಬಾಣಗಳು ತುದಿ ಬಿದ್ದವು ಕೆಳಗೆ. ಆಗ ಲಕ್ಷ್ಮಣ ಆಶ್ಚರ್ಯಗೊಂಡು ಸಾವಿರಾರು ಬಾಣಗಳ ಪ್ರಯೋಗ ಮಾಡ್ತಾನೆ. ಅತಿಕಾಯ ವಿಚಲಿತನಾಗಲಿಲ್ಲ. ಆಗ, ಅತಿಕಾಯ ಇನ್ನೊಂದು ಬಾಣ ತೆಗೆದುಕೊಂಡು ಮರ್ಮಸ್ಥಾನದಲ್ಲಿ ಸೌಮಿತ್ರಿಯನ್ನು ಭೇದಿಸಿದಾಗ ಸೌಮಿತ್ರಿ ಸಂಜ್ಞೆ ತಪ್ಪಿದ. ಎಚ್ಚೆತ್ತ.

ಎಚ್ಚೆತ್ತಾಗ ನಾಲ್ಕು ಬಾಣಗಳಿಂದ ಅತಿಕಾಯನ ನಾಲ್ಕು ಕುದುರೆಗಳನ್ನು ಸಂಹಾರ ಮಾಡ್ತಾನೆ. ಇನ್ನೊಂದು ಬಾಣದಿಂದ ಸಾರಥಿಯನ್ನು ಕೊಲ್ತಾನೆ, ಮತ್ತೊಂದು ಬಾಣದಿಂದ ಧ್ವಜವನ್ನು ಕತ್ತರಿಸಿ ಕೆಡವ್ತಾನೆ. ಮತ್ತಷ್ಟು ಬಾಣಗಳನ್ನು ಪ್ರಯೋಗ ಮಾಡ್ತಾ ಇದ್ದಾನೆ ಲಕ್ಷ್ಮಣ. ಆದ್ರೆ, ಆ ಬಾಣಗಳು ಅತಿಕಾಯನಲ್ಲಿ ಕೆಲಸ ಮಾಡ್ತಾ ಇಲ್ಲ. ಆಗ, ವಾಯುದೇವ ಬಂದು ಲಕ್ಷ್ಮಣನ ಕಿವಿಯಲ್ಲಿ ಅತಿಕಾಯನಿಗಿರುವ ಬ್ರಹ್ಮನ ವರದ ಕುರಿತು ಹೇಳ್ತಾನೆ. ‘ಈ ಕವಚವನ್ನು ಬೇರೆ ಬಾಣಗಳು ಭೇದಿಸಲಾರವು, ಬ್ರಹ್ಮಾಸ್ತ್ರವೊಂದೇ ದಾರಿ. ಬೇರೆ ಅಸ್ತ್ರಗಳಿಂದ ಸಾಯುವವನಲ್ಲ. ಮುಹೂರ್ತ ಇದುವೇ, ಬೇಗ ಮಾಡು’ ಎಂದು ವಾಯುದೇವನೆಂದಾಗ ಅದನ್ನು ಪರಿಗ್ರಹಿಸಿದ ಲಕ್ಷ್ಮಣನು ಅಮೋಘವಾದ ಬಾಣವೊಂದನ್ನು ತೆಗೆದು ಬ್ರಹ್ಮಾಸ್ತ್ರದಿಂದ ಸಂಯೋಜನೆ ಮಾಡ್ತಾನೆ.
ಇಡೀ ಪ್ರಕೃತಿಯ ಮೇಲೆ ಬ್ರಹ್ಮಾಸ್ತ್ರದ ಪರಿಣಾಮವಾಯ್ತಂತೆ. ಪ್ರಕೃತಿಮಂಡಲದಲ್ಲಿಯೇ ಕಂಪನ. ಹೀಗೆ ಬ್ರಹ್ಮಾಸ್ತ್ರವನ್ನು ಆಧರಿಸಿ ಆ ಬಾಣವನ್ನು ಸೆಳೆದು ಬಿಟ್ಟನಂತೆ ಸೌಮಿತ್ರಿ. ಬಾಣವು ಅತಿಕಾಯನ ಕಡೆ ಅಮೋಘ ವೇಗದಲ್ಲಿ ಬರ್ತಾ ಇದೆ. ಅತಿಕಾಯ ನೋಡ್ತಾನೆ, ಆ ಬಾಣದ ಮೇಲೆ ನೂರಾರು ಬಾಣಗಳನ್ನು ಪ್ರಯೋಗ ಮಾಡ್ತಾನೆ‌. ಆದರೆ ಆ ಬಾಣಗಳನ್ನು ಈ ಬಾಣವು ಕೇಳಲೇ ಇಲ್ಲ. ಬಾಣಗಳು ಕೆಲಸ ಮಾಡದಿದ್ದಾಗ ಅತಿಕಾಯನು ಏನು ಕೈಗೆ ಸಿಕ್ಕಿತೋ ಅವುಗಳನ್ನು ಪ್ರಯೋಗ ಮಾಡ್ತಾ ಇದ್ದಾನೆ. ಆದ್ರೆ ಈ ಬಾಣವು ಮುನ್ನುಗ್ಗಿ ಬಂದು ಕಿರೀಟ ಸಹಿತವಾಗಿರ್ತಕ್ಕಂತ ಅತಿಕಾಯನ ಶಿರಸ್ಸನ್ನು ಹಾರಿಸಿಬಿಟ್ಟಿತು ಬ್ರಹ್ಮಾಸ್ತ್ರ.
ಒಂದು ರಾಕ್ಷಸನೂ ಉಳಿಯಲಿಲ್ಲ ಅಲ್ಲಿ. ದೂರದಿಂದ ನೋಡ್ತಾ ಇದ್ದವ್ರೂ ಓಡಿ ಹೋದರು. ಇಡೀ ರಾಕ್ಷಸ ಸೇನೆ ಲಂಕೆಗೆ ಓಡಿ ಬದುಕಿದೆ. ಆದ್ರೆ, ಆಘಾತ ತುಂಬ ದೊಡ್ಡದಿದು. ಎಲ್ರೂ ಸತ್ತು ಹೋಗಿದ್ದಾರೆ‌. ದೊಡ್ಡ ಪೆಟ್ಟು ಲಂಕೆಗೆ. ಈ ಕಡೆಗೆ ವಾನರರು ಹರ್ಷಾಚರಣೆ ಮಾಡ್ತಾ ಇದ್ದಾರೆ, ಲಕ್ಷ್ಮಣನನ್ನು ಗೌರವಿಸ್ತಾ ಇದ್ದಾರೆ.

ಹೀಗೆ, ಅತಿಕಾಯನ‌್ನು ಸಂಹಾರ ಮಾಡಿ ಸಂತುಷ್ಟನಾಗಿ ಲಕ್ಷ್ಮಣನು ರಾಮನ ಬಳಿಗೆ ಬರ್ತಾನೆ. ರಾಮನ ಆಶೀರ್ವಾದವನ್ನು, ಅಭಿಮಾನವನ್ನು ಪಡ್ಕೊಳ್ತಾನೆ. ಇದು ಅತಿಕಾಯ ಸಂಹಾರ. ಇದು ರಾವಣನಿಗೆ ಬಹು ದೊಡ್ಡ ಆಘಾತ! ನಾರಾಯಣನಿರ್ಬೇಕು ಇವನು ಎಂಬ ಉದ್ಗಾರ ರಾವಣನ ಬಾಯಿಂದ ಬಂತು!

ಮುಂದೇನಾಯಿತು..? ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ನೋಡೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments