ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ಪೆಟ್ಟು ಯಾವಾಗಲೂ ಕೆಟ್ಟದ್ದು ಅಂತೇನಿಲ್ಲ. ನೂರಾರು ಸಾವಿರಾರು ಪಿಟ್ಟು ಬಿದ್ದೆ ಶಿಲೆಯು ಮೂರ್ತಿಯಾಗುವಂಥದ್ದು. ಯಾವುದಕ್ಕಾದರೂ ಒಂದು ಆಕಾರ ಬರಬೇಕು ಅಂದ್ರೆ ಅದರ ಹಿಂದೆ ಪೆಟ್ಟುಗಳಿರ್ತವೆ. ಜೀವನದಲ್ಲಿ ಕೂಡ ಹಾಗೇ. ಸೋಲುಗಳು, ನೋವುಗಳು ನಮ್ಮನ್ನ ರೂಪಿಸ್ತವೆ. ನಮ್ಮನ್ನು ಪಕ್ವಗೊಳಿಸ್ತವೆ. ಯಾವುದೇ ಪೆಟ್ಟಿನಲ್ಲಿ, ನಮ್ಮ ಪೂರ್ವ ಪಾಪವು ಕಳೆದೇ ಇರೋದಿಲ್ಲ, ಅದು ಕ್ಷಯಿಸ್ತದೆ. ಆ ಒಂದು ಕನಿಷ್ಟ ಲಾಭ ಇದ್ದೇ ಇದೆ ಪೆಟ್ಟಿಗೆ.

ರಾವಣನಿಗೆ ಪೆಟ್ಟಿನ ಮೇಲೆ ಪೆಟ್ಟು ಬೀಳ್ತಾಯಿದೆ. ಅವನೇ ಲೆಕ್ಕ ಹಾಕ್ತಾ ಇದಾನೆ. ಅತಿಕಾಯನ ಮರಣದ ನಂತರ ಧೂಮ್ರಾಕ್ಷ, ಅಕಂಪನ, ಪ್ರಹಸ್ಥ ಕುಂಭಕರ್ಣ ಇವು ಪ್ರಮುಖ ಹೆಸರುಗಳು. ಇದರ ಮಧ್ಯೆ ಎಷ್ಟೋ ಜನ ಯುದ್ಧಕ್ಕೆ ಹೋದವರು ಹೋಗಿಬಿಟ್ಟಿದಾರೆ. ರಾಕ್ಷಸ ರಾಜನಿಗೆ ಮತ್ತೊಮ್ಮೆ ಉದ್ವೇಗವಾಯಿತು. ಅತಿಕಾಯನ ಮರಣದ ವಾರ್ತೆಯನ್ನು ಕೇಳಿದಾಗ ಅವನ ಹಿಂದೆ ಮಡಿದ ವೀರರ ಸರಣಿಯನ್ನು ಎಣಿಸಿದಾಗಲಂತೂ ವಿಚಿತ್ರವಾದ ಮನಸ್ಥಿತಿ ರಾವಣನಲ್ಲಿ ಉಂಟಾಯಿತು. ಈ ಮಹಾವೀರರು, ಯುದ್ಧಾಕಾಂಕ್ಷಿಗಳು ಎಂದೂ ಸೋತವರಲ್ಲ, ಏನಾಯಿತು ಅವರಿಗೆಲ್ಲ? ರಾಮನಿಂದಲೋ, ರಾಮನ ಕಡೆಯವರಿಂದಲೋ ಇವರಿಗೆಲ್ಲ ಸೋಲು, ಸಾವು ಹೇಗೆ ಬಂತು? ಅದಿರಲಿ, ಪ್ರಖ್ಯಾತ ಬಲ, ಪ್ರಖ್ಯಾತ ವೀರ್ಯ ಇಂದ್ರಜಿತು, ರಾವಣನ ಮಗ. ಅವನು ನಾಗಪಾಶದಿಂದ ಬಂಧಿಸಿದಾನೆ ಈ ಅಣ್ಣತಮ್ಮಂದಿರನ್ನು (ರಾಮಲಕ್ಷ್ಮಣರನ್ನು). ಏನಾಯಿತು ಆ ಪಾಶಕ್ಕೆ? ಸುರಾಸುರರಿಂದ ವಿಮೋಚನೆಗೊಳಿಸಲಾದ ಆ ಪಾಶವನ್ನು ಯಾರು ವಿಮೋಚನೆ ಮಾಡಿದರು? ಹೇಗೆ ವಿಮೋಚನೆ ಮಾಡಿದರು? ಮತ್ತೆ ಹೇಗೆ ಮೊದಲಿಗಿಂತ ಇಮ್ಮಡಿಯಾದ ಉತ್ಸಾಹದಲ್ಲಿ ಅವರು ಯುದ್ಧಕ್ಕೆ ಸಿದ್ಧರಾಗಿ ನಿಂತರು? ತನ್ನ ಶಾಸನದಂತೆ ಹೊರಟ ವೀರರೆಲ್ಲರೂ ಏಕೆ ಮರಳಿ ಬರ್ತಾಯಿಲ್ಲ. ವಾನರರಿಂದ ಸಂಹರಿಸಲ್ಪಡ್ತಾ ಇದ್ದಾರೆ ಎಂಬುದಾಗಿ ಚಿಂತಿಸ್ತಾ ಹೀಗೆ ಒಂದು ಅವಲೋಕನ ಮಾಡಿದಾಗ ಅವನ ಮುಂದೆ ಒಂದು ಶೂನ್ಯ ಬಂದು ನಿಂತಿತು. ಏನು ಅವಲೋಕನ ಅಂದ್ರೆ ಇನ್ನೀಗ ಯಾರನ್ನ ಕಳುಹಿಸಿಕೊಡಲಿ ಯುದ್ಧಕ್ಕೆ? ಸುಗ್ರೀವ,ಲಕ್ಷ್ಮಣ, ಸೇನಾಸಮೇತನಾಗಿರತಕ್ಕಂತಹ ರಾಮನನ್ನು ಯುದ್ಧದಲ್ಲಿ ಜಯಿಸುವ ವೀರರನ್ನು ಲಂಕೆಯಲ್ಲಿ ನಾ ಕಾಣೆ. ಆಗ ಒಂದೆರಡು ಮಾತುಗಳು ಅವನ ಬಾಯಿಯಿಂದ ಹೊರಬಂದವು. ಏನು ಬಲಶಾಲಿ ರಾಮ. ಎಂತಹ ಅದ್ಭುತವಾದ ಅಸ್ತ್ರಬಲ ಅವನದ್ದು. ಅವನ ವಿಕ್ರಮದ ಮುಂದೆ ಈ ರಾಕ್ಷಸರೆಲ್ಲ ಸಾಲಾಗಿ ಸಾವಿಗೆ ಸಂದಿದಾರೆ. ಇಷ್ಟೆಲ್ಲ ಮಾಡಿದ ಆ ವೀರನಾದ ರಾಘವನು ಅನಾಮಯನಾದ ನಾರಾಯಣನೇ ಸರಿ. ಲಂಕೆಯ ದ್ವಾರತೋರಣಗಳು ಪೂರ್ತಿಯಾಗಿ ಮುಚ್ಚಲ್ಪಟ್ಟಿವೆಯಲ್ಲ, ಯಾರಿಂದ ಮಾಡ್ಲಿಕ್ಕೆ ಸಾಧ್ಯ ಹೀಗೆಲ್ಲ ಎಂದರೆ ರಾಮನಿಗೆ ಮಾತ್ರ ಸಾಧ್ಯ ಎಂಬುದಾಗಿ ಮುಕ್ತಕಂಠದಿಂದ ತನ್ನವರೆದುರು ಉದ್ಗರಿಸಿ ಬಳಿಕ ಮುಂದಿನ ಕರ್ತವ್ಯಕ್ಕೆ ಉನ್ಮುಖನಾದ. ರಾಕ್ಷಸರಿಗೆ ಹೇಳಿದ. ಜಾಗರೂಕರಾಗಿ ಲಂಕೆಯನ್ನು ರಕ್ಷಿಸಿ. ಅಶೋಕವನವನ್ನು ತುಂಬ ಜೋಪಾನಮಾಡಿ. ಅಶೋಕವನದಲ್ಲಿ ಎಲ್ಲಿ ಸೀತೆಯಿದ್ದಾಳೋ, ಎಲ್ಲಿ ಸೀತೆಯನ್ನು ರಕ್ಷಣೆ ಮಾಡಲಾಗ್ತಾ ಇದೆಯೋ ಅಲ್ಲಿ ಯಾರದೂ ಆಗಮನ ನಿರ್ಗಮನ ಗೊತ್ತಾಗಬೇಕು. ಎಲ್ಲೆಲ್ಲಿ ಯೋಧರ ಶಿಬಿರಗಳಿವೆಯೋ ಅಲ್ಲಿ ಬಹಳ ಜಾಗರೂಕರಾಗಿ ನೋಡಿಕೊಳ್ಳಬೇಕು. ವಾನರರ ಹೋಗಿಬರುವಿಕೆಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡಬೇಕು. ಯಾವ ಕಾರಣಕ್ಕೂ ಉಪೇಕ್ಷೆ ಮಾಡಬೇಡಿ. ಎಚ್ಚರಿಕೆ ವಹಿಸಿ. ಶತ್ರುಗಳ ಸೈನ್ಯದ ಬಗ್ಗೆ ತಿಳಿಯಿರಿ ಎಂದಾಗ ರಾಕ್ಷಸರು ಅದನ್ನೊಪ್ಪಿಕೊಂಡು ಹಾಗೆಯೇ ಅದನ್ನು ಯಥಾವತ್ತಾಗಿ ನೆರವೇರಿಸಲಿಕ್ಕೆ ಮುಂದೆ ಹೋದರು. ಅವರಿಗೆಲ್ಲ ಹೇಳಿ ಕಳುಹಿಸಿ ರಾವಣ ತನ್ನ ಮನೆಯನ್ನ ಪ್ರವೇಶ ಮಾಡ್ತಾನೆ. ಅವನ ಎದೆಯಲ್ಲಿ ದುಃಖವೆಂಬ ಆಯುಧ ಹೊಕ್ಕಿಬಿಟ್ಟಿದೆ. ಮಕ್ಕಳ ಮರಣವನ್ನೆಣಿಸಿ ಅವನನ್ನು ಕೋಪ-ದುಃಖಗಳು ಕಾಡಿದವು. ನಿಟ್ಟುಸಿರಿಟ್ಟ. ಇಂದ್ರಜಿತು ಬರ್ತಾನೆ ತಂದೆಯನ್ನು ಕಾಣಲಿಕ್ಕೆ. ಕಣ್ಣೀರಿಡ್ತಾಯಿದಾನೆ ರಾವಣ. ದುಃಖದಲ್ಲಿ ಮೂರ್ಛೆ ಹೋಗ್ತಿದಾನೆ. ಇಂದ್ರಜಿತುವಿಗೆ ರೋಷ ಬಂತಂತೆ. ಅಪ್ಪ ನೀನ್ಯಾಕೆ ಚಿಂತೆ ಮಾಡ್ಬೇಕು? ನಾನಿಲ್ಲವಾ? ನನ್ನ ಬಾಣಾವಳಿಗಳ ಮುಂದೆ ರಾಮನೇನು, ಲಕ್ಷ್ಮಣನೇನು ಎನ್ನುವುದನ್ನ ತೋರಿಸ್ತೇನೆ ಇಂದು ನಿನಗೆ ಎಂದು ತಂದೆಯನ್ನು ಸಂತೈಸಿ ಯುದ್ಧಕ್ಕೋಸ್ಕರವಾಗಿ ರಥವನ್ನೇರಿ ಯುದ್ಧಭೂಮಿಯ ಕಡೆಗೆ ಹೊರಟನಂತೆ. ಅವನ ಹಿಂದೆ ಅನೇಕ ರಾಕ್ಷಸರು. ಮಗನನ್ನ ಬೀಳ್ಕೊಡ್ತಾನೆ ರಾವಣ. ನೀನು ಇಂದ್ರನನ್ನು ಗೆದ್ದಂಥವನು. ಮನುಷ್ಯ ರಾಮನನ್ನು ಗೆಲ್ಲುವುದು ಯಾವ ಮಾತು ಅಂತ ಆಶೀರ್ವಾದ ಮಾಡಿ ಕಳುಹಿಸ್ತಾನೆ.

ಯುದ್ಧಭೂಮಿಗೆ ಹೋದ ಇಂದ್ರಜಿತು ಸಮೀಪದಲ್ಲಿ ಹೋಮ ಮಾಡಿದ. ವಾಮಾಚಾರ ಮಾಡಿದ್ದು ಅವನು. ಹೋಮದಲ್ಲಿ ಕಂಡುಬಂದ ಸೂಚನೆಗಳು ಇಂದ್ರಜಿತು ಗೆಲ್ತಾನೆ ಎನ್ನುವುದನ್ನು ಸೂಚಿಸ್ತಾ ಇದಾವೆ. ಅಗ್ನಿದೇವ ಬಂದು ಹವಿಸ್ಸನ್ನು ಸ್ವೀಕಾರ ಮಾಡಿದ ಮೇಲೆ ಬ್ರಹ್ಮಾಸ್ತ್ರವನ್ನು ಆವಾಹನೆ ಮಾಡಿದ. ಬಳಿಕ ತನ್ನ ರಥವನ್ನು, ಧನುಸ್ಸನ್ನು ಅಭಿಮಂತ್ರಿಸಿದ. ಹೋಮ ಮುಗಿದ ನಂತರ ಒಂದು ಕೈಯಲ್ಲಿ ಬಾಣವನ್ನು ಹಿಡಿದು ರಥವನ್ನೇರಿದ. ಪ್ರಯೋಗ ಮಾಡಿದ. ಇದ್ದಕಿದ್ದಂತೆ ಎಲ್ಲ ಮಾಯವಾಯಿತು. ಇಂದ್ರಜಿತು ಕಾಣಲಿಲ್ಲ, ರಥ ಕಾಣಲಿಲ್ಲ, ಶಬ್ಧ ಕೇಳಲಿಲ್ಲ. ಬಳಿಕ ಪ್ರಕಟವಾಗಿ ರಣರಂಗಕ್ಕೆ ಧಾವಿಸ್ತಾನೆ. ಅವನ ರಾಕ್ಷಸರು ವಾನರರನ್ನು ಆಕ್ರಮಿಸಿದರು. ನಾನಾ ಪ್ರಕಾರದ ಶಸ್ತ್ರಗಳಿಂದ ವಾನರರನ್ನು ಪ್ರಹರಿಸಿದರು. ವಾನರರೂ ಕೂಡ ಮರಗಳನ್ನು ಬಂಡೆಗಳನ್ನು ಹಿಡಿದು ಇಂದ್ರಜಿತುವಿನ ಕಡೆಗೆ ಧಾವಿಸ್ತಾರೆ. ಇಂದ್ರಜಿತು ವಾನರರ ಶರೀರವನ್ನು ಧ್ವಂಸ ಮಾಡಿದನು. ಇಂದ್ರಜಿತುವಿನ ಮುಂದೆ ವಾನರರ ಯುದ್ಧ ಸಾಗಲಿಲ್ಲ. ಪ್ರಮುಖ ವಾನರ ನಾಯಕರು ಧರೆಗೊರಗಿದರು. ಮಾಯಾಯುದ್ಧವನ್ನು ಪ್ರಾರಂಭಿಸ್ತಾನೆ ಇಂದ್ರಜಿತು. ತನ್ನ ಸೈನ್ಯವನ್ನು ಬಿಟ್ಟು ವಾನರ ಸೈನ್ಯವನ್ನು ಪ್ರವೇಶ ಮಾಡ್ತಾನೆ. ಯಾರಿಗೂ ಕಾಣ್ಸೋದಿಲ್ಲ. ಗಾಯವಿಲ್ಲದ ವಾನರರಿಲ್ಲ ಎನ್ನುವ ಸ್ಥಿತಿ ಬಂದಿದೆ. ವಾನರ ಪ್ರಮುಖರೆಲ್ಲರನ್ನು ಮಂತ್ರಪೂರ್ವಕವಾದ ಬಾಣಗಳಿಂದ ಪ್ರಹರಿಸ್ತಿದಾನೆ ಇಂದ್ರಜಿತು. ಇಡೀ ಕಪಿಸೈನ್ಯ ಧರಾಶಯ್ಯವಾಯಿತು. ಬಳಿಕ ರಾಮಲಕ್ಷ್ಮಣರು. ರಾಮ ಮತ್ತು ಲಕ್ಷ್ಮಣನನ್ನು ತೀಕ್ಷ್ಣವಾದ ಬಾಣಗಳಿಂದ ಭೇದಿಸ್ತಾನೆ.ಆ ಬಾಣಗಳನ್ನು ರಾಮನು ಲೆಕ್ಕಿಸಲೇ ಇಲ್ಲ.

ಆ ಬಾಣಗಳನ್ನ ನೋಡ್ತಾ ನೋಡ್ತಾ ಲಕ್ಷ್ಮಣನಿಗೆ ರಾಮನು ಹೇಳ್ತಾನೆ ; ನೋಡು ಲಕ್ಷ್ಮಣ ಇದು ಬ್ರಹ್ಮಾಸ್ತ್ರ ನಾವಿದನ್ನು ಗೌರವಿಸಬೇಕು. ಬೇರೆ ದಾರಿ ಇಲ್ಲ. ಬ್ರಹ್ಮಾಸ್ತ್ರವನ್ನಾಶ್ರಯಿಸಿ ಅದರ ಮೂಲಕವಾಗಿ ಇಡೀ ಕಪಿಸೇನೆಯನ್ನು ಒರಗಿಸಿ ಈಗ ನಮ್ಮ ಮೇಲೆ ಬಾಣಗಳನ್ನ ಪ್ರಯೋಗ ಮಾಡ್ತಿದಾನೆ. ಏನು ಮಾಡ್ಲಿಕ್ಕೆ ಸಾಧ್ಯ ಲಕ್ಷ್ಮಣ ? ಕಾಣ್ತಾಯಿಲ್ಲ. ಕಂಡರೆ ಅವನನ್ನೆ ಹೊಡೆದುರುಳಿಸಬಹುದು. ಆದರೆ ಬ್ರಹ್ಮಾಸ್ತ್ರವು ತನ್ನ ಕೆಲಸ ಮಾಡ್ತಾಯಿದೆ. ಕಣ್ಣಿಗೇ ಕಾಣದವನ ಮೇಲೆ ಯುದ್ಧ ಮಾಡೋದಾದ್ರೂ ಹೇಗೆ? ಆಗಲಿ. ಇದು ಬ್ರಹ್ಮನ ಪ್ರಸಾದ ಅಂತ ನಾವು ಸ್ವೀಕಾರ ಮಾಡಲಿಕ್ಕಿರುವಂಥದ್ದು. ಬೇರೆ ಆಲೋಚನೆ ಏನೂ ಇಲ್ಲ. ನೋಡು ಇಡೀ ವಾನರ ಸೇನೆ ಒರಗಿದೆ. ಇನ್ನು ಕೆಲವು ಕ್ಷಣಗಳಲ್ಲಿ ನಾವೂ ಕೂಡ ಹೀಗೇ ಆಗಿರ್ತೇವೆ. ಹಾಗಾಗಿ ಮೌನವಾಗಿ ಸ್ವೀಕರಿಸು ಬಾಣಗಳನ್ನು. ಏನೂ ಭಯಪಡಬೇಡ. ನಾನೂ ಹಾಗೇ ಎಂಬುದಾಗಿ ಲಕ್ಷ್ಮಣನಿಗೆ ಹೇಳಿ ಇವತ್ತು ಇವನು ಈ ಯುದ್ಧವನ್ನು ಗೆದ್ದು ಹೋಗ್ತಾನೆ ಲಂಕೆಗೆ ಎಂದು ಹೇಳಿ ಲಕ್ಷ್ಮಣನನ್ನು ಸಂತೈಸಿ ಬಾಣಗಳನ್ನು ಸ್ವೀಕರಿಸಿದನು ರಾಮ. ಆ ಅಸ್ತ್ರಗಳನ್ನು ಸ್ವೀಕರಿಸಿ ಹಾಗೇ ಧರೆಗೊರಗಿದಾರೆ ರಾಮ-ಲಕ್ಷ್ಮಣರು. ವಾನರ ಸೇನೆಯಲ್ಲಿ ಒಂದೇ ಒಂದು ವಾನರನೂ ಇಲ್ಲ ಎದ್ದು ನಿಲ್ಲುವ ಸ್ಥಿತಿಯಲ್ಲಿ.

ಹೀಗೆ ರಾಮ-ಲಕ್ಷ್ಮಣರು ಬ್ರಹ್ಮಾಸ್ತ್ರದ ಗತಿಯಲ್ಲಿ ಒರಗಿರಲಾಗಿ ಇಡೀ ಕಪಿಸೇನೆಯಲ್ಲಿ ಯಾರೂ ಇಲ್ಲ. ಯಾರೂ ಇಲ್ಲವಾ ಅಂದ್ರೆ, ಈ ಧಾಳಿಯ ಬಳಿಕವೂ ವಿಭೀಷಣ ಇದ್ದಾನೆ. ಯಾಕೆಂದರೆ ಅವನು ಚಿರಂಜೀವಿ. ಅವನಿಗೆ ಸಾವಿಲ್ಲದ ವರವಿದೆ. ಮತ್ತು ಇಂದ್ರಜಿತುವಿನ ಈ ದುರ್ಮಾರ್ಗಗಳ ಬಗ್ಗೆ ಅವನಿಗೆ ಕಲ್ಪನೆಯಿದೆ. ಕೊನೆಪಕ್ಷ ಹುಡುಕುವಂತಹ ತಂತ್ರಗಳು ಗೊತ್ತು ಅವನಿಗೆ. ಅವನು ವಾನರ ಸೇನೆಯನ್ನು ಸಂತೈಸುವ ಪ್ರಯತ್ನ ಮಾಡ್ತಾ ಇದಾನೆ. ಅವನಿಗೆ ರಾಮಲಕ್ಷ್ಮಣರು ಧರೆಗೊರಗಿದ್ದು ಕಂಡಿದೆ. ರಾಮ-ಲಕ್ಷ್ಮಣರು ಬ್ರಹ್ಮಾಸ್ತ್ರಕ್ಕೆ ಗೌರವ ಕೊಟ್ಟಿದ್ದದು. ಸೋತಿದ್ದಲ್ಲ. ವಿಷಾದ ಪಡಬೇಡಿ ಎಂದು ಸಂತೈಸ್ತಾ ಇದಾನೆ. ಯಾರಿದಾರೆ ಕೇಳೋದಕ್ಕೆ? ಅರಣ್ಯರೋಧನವಾಯಿತು ವಿಭೀಷಣನದ್ದು. ಹೀಗೆ ವಿಭೀಷಣನು ಹುಡುಕುವಾಗ ಇನ್ನೊಬ್ಬ ಇದಾನೆ. ಹನುಮಂತ. ಅವನೂ ಚಿರಂಜೀವಿಯೇ ಹೌದು ಮತ್ತು ಅಸ್ತ್ರಗಳಿಂದ ಅವಧ್ಯ ಹನುಮಂತ. ಅವನೂ ಹುಡುಕ್ತಾ ಇದಾನೆ ಯಾರಿದ್ದಾರೆ ಸೈನ್ಯದಲ್ಲಿ ಎಂಬುದಾಗಿ. ವಿಭೀಷಣ ಮತ್ತು ಹನುಮಂತ ಒಬ್ಬರಿಗೊಬ್ಬರು ಭೇಟಿಯಾದರು. ವಿಭೀಷಣನಿಗೆ ಹನುಮಂತ ಹೇಳ್ತಾನೆ. ವಿಭೀಷಣ ಸೇನೆಗೆ ಸೇನೆಯೇ ಒರಗಿದೆ. ನಮ್ಮ ಕರ್ತವ್ಯ ಏನೀಗ? ಹುಡುಕೋಣ ಯಾರ್ಯಾರಿಗೆ ಜೀವ ಇದೆ? ಜೀವ ಇದ್ದವರನ್ನು ಸಂತೈಸುವ, ಧೈರ್ಯ ತುಂಬುವ ಕೆಲಸ ಮಾಡೋಣ ಎಂದಾಗ ವಿಭೀಷಣ ಆಯ್ತು ಅಂದ. ಇಬ್ಬರೂ ಒಂದೊಂದು ಕಂದೀಲನ್ನು ಹಿಡಿದುಕೊಂಡು ಹುಡುಕ್ತಾ ಇದಾರೆ. ರಾತ್ರಿಯಲ್ಲಿ. ಅವರಿಗೆ ಎದ್ದು ನಿಲ್ಲುವಂಥವರು ಯಾರೂ ಸಿಗಲಿಲ್ಲ. ಅವರಿಗೆ ಕಂಡಿದ್ದು ಕಪಿಗಳ ಶವಗಳು ಮತ್ತು ಕತ್ತರಿಸಿದ ಅಂಗಾಗಗಳು. ಹುಡುಕ್ತಾ ಹುಡುಕ್ತಾ ಅವರಿಗೆ ಸುಗ್ರೀವ ಕಂಡ. ಅವನ ದೇಹ. ನೀಲ, ಶರಭ, ಗಂಧಮಾದನ ಮುಂತಾದ ಅನೇಕ ಕಪಿಗಳು ಬಿದ್ದಿದಾರೆ. ಯಾರ್ಯಾರು ಸತ್ತಿದಾರೋ, ಯಾರು ಸತ್ತ ಸ್ಥಿತಿಯಲ್ಲಿ ಬಿದ್ದಿದಾರೋ ಅಂತೂ ಎಲ್ಲರೂ ಬಿದ್ದಿದಾರೆ. ಲಂಕೆಯ ಸುತ್ತಮುತ್ತ ಎಂತಹ ಪರಿಸ್ಥಿತಿ ಇತ್ತು ಅಂದ್ರೆ ಅರವತ್ತೇಳು ಕೋಟಿ ವಾನರನಾಯಕರು ಸತ್ತು ಬಿದ್ದಿದಾರೆ. ಆಗ ಹನುಮಂತ ಹೇಳ್ತಾನೆ ವಿಬೀಷಣ ನಾನು ಹೇಳಿದ್ದು ಹೌದು ಯಾರ್ಯಾರು ಎದ್ದು ನಿಲ್ಲುವ ಸ್ಥಿತಿಯಲ್ಲಿದ್ದಾರೆ ಅಂತ ಆದರೆ ಯಾರೂ ಇಲ್ಲ. ಇನ್ನೊಬ್ಬನನ್ನು ಹುಡುಕುವ ಆಸೆ ಇದೆ ನನಗೆ. ಅವನೊಬ್ಬ ಸಿಕ್ಕಿದರೆ ಅವನಿಗೆ ಈ ಸಮಯದಲ್ಲಿ ಏನು ಮಾಡ್ಬೇಕು ಅಂತ ಗೊತ್ತಿರ್ತದೆ. ಜಾಂಬವಂತನನ್ನು ಹುಡುಕ್ತಾನೆ ಹನುಮಂತ. ಸಿಕ್ಕಿದನಂತೆ ಜಾಂಬವಂತ. ಹೇಗಿದ್ದ ಅಂದ್ರೆ ಆರುವ ಅಗ್ನಿಯಂತೆ. ಸಾವಿನ ಹಾದಿಯಲ್ಲಿದ್ದ. ಸ್ವಭಾವತಃ ವೃದ್ಧ. ವಿಭೀಷಣ ಮುಂದಾಗಿ ಹೋಗಿ ಮಾತಾಡಿಸ್ತಾನೆ. ಅಜ್ಜ, ಬದುಕಿದ್ದೀಯಾ? ಶರಗಳು ನಿನ್ನನ್ನು ಧ್ವಂಸ ಮಾಡಿಲ್ಲ ತಾನೇ? ಎಂದು ಕೇಳಿದಾಗ ಬಹಳ ಕಷ್ಟದಿಂದ ಮಾತನಾಡಿದನಂತೆ ಜಾಂಬವಂತ. ವಿಭೀಷಣನೇ? ಅಂತ ಕೇಳಿದ. ಆ ಬಾಣದ ಹತಿಯಲ್ಲಿ ದೃಷ್ಟಿ ಹೋಗಿದೆ. ಈ ಬಾಣಗಳ ಪೀಡೆಯಲ್ಲಿ ನನಗೆ ನಿನ್ನನ್ನು ಕಣ್ಣಿನಿಂದ ನೋಡೋದಕ್ಕೆ ಆಗ್ತಾಯಿಲ್ಲ. ಇಷ್ಟು ಹೇಳಿ ಮುಂದಿನ ಮಾತೇನು ಅಂದ್ರೆ ಹನುಮಂತ ಬದುಕಿರುವನೇ? ವಿಭೀಷಣನಿಗೆ ಆಶ್ಚರ್ಯವಾಯಿತು. ರಾಮನನ್ನು ಕೇಳಲಿಲ್ಲ, ಲಕ್ಷ್ಮಣನನ್ನು ಕೇಳಲಿಲ್ಲ, ಸುಗ್ರೀವನನ್ನು, ಅಂಗದನನ್ನು ಕೇಳಲಿಲ್ಲ. ಹನುಮಂತನನ್ನು ಕೇಳ್ತಿದಾನೆ. ಅದನ್ನೇ ಕೇಳಿದ ವಿಭೀಷಣ ; ಅದೇನು ಜಾಂಬವಂತ ಈ ಪರಿಯ ಪ್ರೀತಿ ಹನುಮಂತನಲ್ಲಿ ಎಂದಾಗ ವಿಭೀಷಣ ಹೇಳ್ತಾನೆ: ಪ್ರೀತಿಯಿರಲಿ ಅದು ಮಾತ್ರವಲ್ಲ ಹನುಮಂತ ಬದುಕಿದ್ದರೆ ನಾವೆಲ್ಲ ಸತ್ತರೂ ಬದುಕಿರುವಂತೆಯೇ, ಬದುಕಿಸ್ತಾನೆ. ಹನುಮಂತ ಬದುಕಿಲ್ಲದಿದ್ದರೆ ನಾವು ಬದುಕಿದ್ದರೂ ಸತ್ತಂತೆಯೇ. ಆದ್ದರಿಂದ ಕೇಳ್ತಿದೇನೆ. ಇಲ್ಲಿಂದ ಮುಂದಿನ ದಾರಿ ಹನುಮಂತನೇ. ಹಾಗಾಗಿ ವಿಭೀಷಣ, ಬದುಕಿರುವನೇ ಹನುಮ? ಬದುಕಿದ್ದರೆ ಬದುಕಿನ ಆಶಯ ನಮಗೆಲ್ಲ. ಹಾಗೆಂದಾಗ ಹನುಮಂತ ಮುಂದೆ ಬಂದು ಪ್ರಣಾಮ ಮಾಡ್ತಾನೆ ಜಾಂಬವಂತನಿಗೆ. ಪಾದಗಳನ್ನು ಹನುಮಂತ ಮುಟ್ಟಿದ ಕೂಡಲೆ ಗೊತ್ತಾಯ್ತು ಜಾಂಬವಂತನಿಗೆ ಇದು ಹನುಮಂತ ಅಂತ. ಮತ್ತೆ ಹುಟ್ಟಿದ ಭಾವ ಬಂತು ಜಾಂಬವಂತನಿಗೆ. ಜಾಂಬವಂತ ಹನುಮಂತನಿಗೆ ಹೇಳ್ತಾನೆ; ಬಾ ಹನುಮಂತ. ಕಾಪಾಡು ವಾನರರನ್ನು. ಇನ್ಯಾರಿಗೂ ಆಗೋದಿಲ್ಲ ಈ ಕಾರ್ಯ. ಮಾಡಿದರೆ ನೀನೊಬ್ಬ ಮಾಡ್ಬೇಕು. ಈ ವಾನರರಿಗೆ ಎಂದಿದ್ದರೂ ನೀನೇ ಪರಮಸಖ. ನಿನ್ನ ಪರಾಕ್ರಮದ ಕಾಲವಿದು. ಯಾರೂ ಎದ್ದಿಲ್ಲ. ಎದ್ದರೂ ಯಾರಿಂದಲೂ ಆಗೋದಿಲ್ಲ ಈ ಕಾರ್ಯ. ಮತ್ತೊಮ್ಮೆ ಈ ವಾನರಸೇನೆಯಲ್ಲಿ ಜೀವಸಂಚಾರ ಮಾಡು. ಮತ್ತೊಮ್ಮೆ ವಾನರಸೇನೆಯನ್ನು ಪುಟಿದೇಳಿಸು. ರಾಮ-ಲಕ್ಷ್ಮಣರನ್ನು ಈ ಬಾಣಶಯ್ಯೆಯಿಂದ ಬಿಡುಗಡೆಮಾಡಿ ಮತ್ತೆ ಅವರನ್ನು ಪುನಶ್ಚೇತನಗೊಳಿಸು. ಏನು ಮಾಡ್ಬೇಕು ಅನ್ನೋದನ್ನ ಬಹಳ ಕಷ್ಟದಲ್ಲಿ ಹೇಳ್ತಾನೆ ಜಾಂಬವಂತ. ಅಂದು ನೀನು ಸಮುದ್ರವನ್ನು ಹಾರಿದೆಯಲ್ಲ ಅದೇ ರೀತಿ ಇಂದೂ ಹಾರಬೇಕು. ಆದರೆ ಅಂದಿನಷ್ಟೇ ಅಲ್ಲ, ಇನ್ನೂ ತುಂಬ ದೂರ ಹೋಗಲಿಕ್ಕಿದೆ ನೀನು. ನೀನು ಇಲ್ಲಿಂದ ಸಮುದ್ರ ಹಾರಿ ಸಾಗುತ್ತಾ ಸಾಗುತ್ತಾ ಹಿಮಾಲಯದವರೆಗೆ ಹೋಗ್ಬೇಕು. ಅಲ್ಲಿ ಅನೇಕಾನೇಕ ಶಿಖರಗಳ ಮಧ್ಯದಲ್ಲಿ ಒಂದು ಕಾಂಚನ ಪರ್ವತವಿದೆ. ಪಕ್ಕದಲ್ಲಿ ಕೈಲಾಸ ಪರ್ವತ.

ಈ ಎರಡು ಪರ್ವತಗಳನ್ನ ಕಾಣ್ತೀಯೆ ನೀನು. ಈ ಎರಡು ಪರ್ವತಗಳ ನಡುವಿನಲ್ಲಿ ಓಷಧಿ ಪರ್ವತವಿದೆ. ಗುರುತಿಸಲಿಕ್ಕೆ ಕಷ್ಟಪಡಬೇಡ. ಗಿಡಮೂಲಿಕೆಗಳ ಪ್ರಭೆಯಿಂದಲೇ ಅದು ಬೆಳಗ್ತಾಯಿರ್ತದೆ ರಾತ್ರಿಹೊತ್ತಿನಲ್ಲಿಯೂ ಕೂಡ. ಅತ್ಯಂತ ದುರ್ಲಭಾತಿದುರ್ಲಭವಾದಂತಹ ದಿವ್ಯಶಕ್ತಿಪ್ರಭಾವದ ಅತ್ಯಮೂಲ್ಯ ಗಿಡಮೂಲಿಕೆಗಳು ಆ ಓಷಧಿ ಪರ್ವತದಲ್ಲಿದಾವೆ. ಜೀವಲೋಕಕ್ಕೆ ಲಭ್ಯವಿರತಕ್ಕಂತಹ ಎಲ್ಲಾ ಔಷಧಿಗಳೂ ಅಲ್ಲಿ ಲಭ್ಯ ಇವೆ. ಆ ಓಷಧಿಗಳಲ್ಲಿ ಎಲ್ಲ ಓಷಧಗಳಲ್ಲಿ ಶ್ರೇಷ್ಠವಾಗಿರತಕ್ಕಂತಹ ನಾಲ್ಕು ಮೂಲಿಕೆಗಳು ಇವೆ. ಅವುಗಳನ್ನ ನೀನು ತರಬೇಕು. ಮೃತಸಂಜೀವಿನಿ – ಅಷ್ಟೇ ಸತ್ತವನನ್ನು ಮತ್ತೆ ಬದುಕಿಸ್ತದೆ, ವಿಶಲ್ಯಕರಣಿ – ಒಳಗಿರುವ ಆಯುಧದ ಚೂರನ್ನು ತಾನಾಗಿ ಹೊರಬರುವಂತೆ ಮಾಡ್ತದೆ, ಸಾವರ್ಣ್ಯಕರಣಿ – ಕಲೆ ಇರದಂತೆ ಮೊದಲ ಬಣ್ಣವನ್ನು ಉಂಟುಮಾಡುವಂಥದ್ದು,
ಸಂಧಾನಕರಣಿ – ಮುರಿದ ಅಂಗಗಳನ್ನು ತಾನಾಗಿ ಕೂಡಿಸುವಂಥದ್ದು ಈ ನಾಲ್ಕು ಔಷಧಿಗಳನ್ನು ಕಿತ್ತು ತಾ. ಮತ್ತೇನೂ ಮಾಡಬೇಕಾಗಿಲ್ಲ. ನೀನು ಆ ಔಷಧಗಳನ್ನು ಹಿಡಿದುಕೊಂಡು ಇಲ್ಲಿಗೆ ಬಂದರೆ ಸಾಕು. ಉಳಿದ ಕಾರ್ಯವನ್ನು ನಿನ್ನ ತಂದೆ ಮಾಡ್ತಾನೆ. ಆ ಗಿಡಮೂಲಿಕೆಗಳ ಮೇಲೆ ಬೀಸುವ ಗಾಳಿ ಅದು ಎಲ್ಲಾ ಕಾರ್ಯವನ್ನು ಮಾಡ್ತದೆ. ಈ ಕಾರ್ಯವನ್ನು ಮಾಡು ಎಂದಾಗ ಹನುಮಂತನಲ್ಲಿ ಒಂದು ವಿಚಿತ್ರ ಆವೇಶ ಬಂತು. ಅದು ಸಾಮಾನ್ಯ ಬಲ ಅಲ್ಲ ಅಂತ ವಾಲ್ಮೀಕಿಗಳು ಹೇಳ್ತಾರೆ. ಅದ್ಭುತ, ಅಪರೂಪದ ಯಾವುದೋ ಒಂದು ಅನಿರ್ವಚನೀಯವಾದ ಶಕ್ತಿ ಅವನಲ್ಲಿ ತುಂಬಿತು. ಶಕ್ತಿರಾಶಿಯಿಂದ ತುಂಬಿತುಳುಕಿದನು. ತ್ರಿಕೂಟ ಪರ್ವತದ ಶಿಖರವೊಂದನ್ನು ಏರ್ತಾನೆ ಹನುಮಂತ. ಅವನ ಶಕ್ತಿಯನ್ನು ತಡೆದುಕೊಳ್ಳಲಿಕ್ಕೆ ಸಾಧ್ಯವಾಗಲಿಲ್ಲ ಆ ಪರ್ವತಕ್ಕೆ. ಹಾಗಾಗಿ ಅದು ಮೆಲ್ಲನೆ ಕುಸಿಯುತ್ತಿದೆ. ಪರ್ವತಕ್ಕೆ ಪರ್ವತವೇ ತೂಗ್ತಾಯಿದೆ. ಪರ್ವತ ಮಾತ್ರವಲ್ಲ. ಲಂಕೆಯಲ್ಲಿ ಭಯಂಕರವಾದ ಪರಿಣಾಮವಾಗ್ತಾಯಿದೆ. ಹನುಮಂತ ಹಾರುವ ಸಮಯದಲ್ಲಿ ಲಂಕೆಗೆ ಲಂಕೆಯೆ ತೂಗಾಡಿತು. ಆ ಇಡೀ ಭೂಭಾಗವೇ ಕ್ಷೋಭೆಗೊಂಡಿದೆ. ಹಾರುವ ಮುನ್ನ ತನ್ನ ಬಾಯ್ದೆರೆದು ಅತ್ಯುಗ್ರವಾದ ರಾಕ್ಷಸರ ಎದೆನಡುಗುವಂತೆ ಘರ್ಜನೆಯನ್ನು ಮಾಡಿದಾನೆ ಹನುಮಂತ. ಹಾರುವ ಮುನ್ನ ಈ ಬಾರಿ ರಾಮನಿಗೆ ಮಾತ್ರ ಪ್ರಣಾಮ ಮಾಡ್ತಾನೆ. ಬಳಿಕ ಆ ಪರ್ವತವನ್ನು ಒದೆದು ಆಕಾಶಕ್ಕೆ ನೆಗೆದನು ಹನುಮಂತ. ಸಮುದ್ರವು ಅಸ್ತವ್ಯಸ್ತವಾಯಿತು.

ವಿಷ್ಣುವಿನ ಬೆರಳ ತುದಿಯಿಂದ ಬಿಡಲ್ಪಟ್ಟ ಸುದರ್ಶನ ಚಕ್ರದಂತೆ ಅವನು ಗಗನಮಾರ್ಗದಲ್ಲಿ ಸಾಗಿ ಹೋಗ್ತಾ ಇದಾನೆ. ಬಹುದೂರ ಸಾಗಿದ ಮೇಲೆ ಜಾಂಬವಂತನ ವಾಕ್ಯವನ್ನು ನೆನಪು ಮಾಡಿಕೊಂಡನಂತೆ. ಹಿಮಾಲಯ ಗೋಚರಿಸಿತು. ಝರಿಗಳು, ಬಹುಕಂದರಗಳು, ಮೋಡಮಾಲಿಕೆಯನ್ನು ಹೋಲುವ ಪರ್ವತ ಶಿಖರಗಳು, ಹಿಮಾಲಯ, ಕೆಲವೆಡೆ ಅಪರೂಪದ ವೃಕ್ಷಗಳು. ಹಿಮಾಲಯ ಪರ್ವತವನ್ನು ಸೇರ್ತಾನೆ. ಪುಣ್ಯಾಶ್ರಮಗಳ ದರ್ಶನವಾಗ್ತದೆ ಹನುಮಂತನಿಗೆ. ಅದರ ಬಳಿಕ ಕೆಲವು ದಿವ್ಯಸ್ಥಾನಗಳನ್ನು ಹನುಮಂತ ಅವಲೋಕನ ಮಾಡ್ತಾನೆ. ಹಾಗೇ ಮುಂದೆ ಬಂದಾಗ ಋಷಭ(ಕಾಂಚನ ಪರ್ವತ) ಪರ್ವತ. ಪಕ್ಕದಲ್ಲಿ ಕೈಲಾಸ ಪರ್ವತವಿದೆ. ಆ ಪರ್ವತಗಳನ್ನು ಕಂಡಾಗ ಮತ್ತೆ ಜಾಂಬವಂತನ ನೆನಪು. ಆ ಎರಡು ಪರ್ವತಗಳ ನಡುವೆ ಓಷಧಿ ಪರ್ವತವಿದೆ. ಅದನ್ನು ಕಂಡ. ಆ ಓಷಧಿಗಳು ಬೆಳಗ್ತಾ ಇರೋದ್ರಿಂದ ಇಡೀ ಪರ್ವತವೇ ಬೆಳಗ್ತಾ ಇದೆ. ಅಲ್ಲಿ ಇಳಿದು ಹುಡುಕಲು ಶುರುಮಾಡಿದ. ಆಶ್ಚರ್ಯಪಟ್ಟನಂತೆ. ಹುಡುಕ್ತಾ ಇದಾನೆ. ಆದರೆ ಆ ಮಹೌಷಧಿಗಳು ಮಾಯವಾದವು. ಈ ಓಷಧಿಗಳು ವೈದ್ಯರು ಬಂದರೆ ಮಾತ್ರ ಪ್ರಕಟವಾಗ್ತವೆ. ಹುಡುಕಿದರೆ ಸಿಗಲಿಲ್ಲ. ಆ ಪರ್ವತದ ಮೇಲೆ ಭಯಂಕರ ಕೋಪವೇ ಬಂತಂತೆ ಹನುಮಂತನಿಗೆ. ಅಬ್ಬರಿಸಿದ ನಿನ್ನನ್ನೀಗ ನುಚ್ಚುನೂರು ಮಾಡ್ತೇನೆ ಅಂತ. ಕಾಣಬಹುದು, ಕಾಣದೇ ಇರಬಹುದು. ಜಾಂಬವಂತ ಹೇಳಿದಾನಲ ಇದೇ ಪರ್ವತದಲ್ಲಿದೆ ಅಂತ. ಈ ಪರ್ವತವನ್ನೇ ಹೊತ್ತುಕೊಂಡು ಹೋಗ್ತೇನೆ. ಆ ಇಡೀ ಪರ್ವತವನ್ನೇ ಕಿತ್ತನಂತೆ. ಆ ಪರ್ವತವನ್ನು ಕಿತ್ತು, ಎತ್ತಿ, ಕೈಯಲ್ಲಿ ಹಿಡಿದು ಹೊರಟ. ಅವನು ಪರ್ವತವನ್ನು ಕಿತ್ತೆತ್ತುವಾಗ ದೇವತೆಗಳು ಬೆಚ್ಚಿದರಂತೆ. ಆಕಾಶ ಮಾರ್ಗದಲ್ಲಿ ಹಾರಿ ಬರುವಾಗ ಎಲ್ಲ ದೇವತೆಗಳು ಹನುಮನ ಸ್ತುತಿ ಮಾಡ್ತಾ ಇದಾರೆ. ಉಗ್ರಗರುಡನ ವೇಗದಲ್ಲಿ ಹಾರಿ ಬರ್ತಿದಾನೆ ಹನುಮಂತ.

ಬಂದೇಬಿಟ್ಟ. ಒಂದು ಘರ್ಜನೆ ಮಾಡ್ತಾನೆ ಹನುಮಂತ. ಈ ಘರ್ಜನೆಯನ್ನು ಕೇಳಿ ಲಂಕೆಯಲ್ಲಿ ರಾಕ್ಷಸರೂ ಅರಚಿಕೊಂಡರು ಏನೋ ಆಯ್ತು ಅಂತ. ಆ ಪರ್ವತವನ್ನು ತಂದು ಯುದ್ಧಭೂಮಿಯಲ್ಲಿ ಧೊಪ್ಪನೆ ಇಳಿದನಂತೆ. ಗಾಳಿ ಬೀಸಿತು. ಆಗ ಒಬ್ಬೊಬ್ಬರಾಗಿ ಎದ್ದರು. ಹನುಮಂತ ಸತ್ತಂತಹ ವಾನರರ ಮಧ್ಯದಲ್ಲಿ ಬಂದು ಜಾಂಬವಂತನಿಗೆ ನಮಸ್ಕರಿಸಿ ಹೋಗಿ ವಿಭೀಷಣನನ್ನು ತಬ್ಬಿಕೊಂಡ. ತಬ್ಬಿಕೊಂಡು ನೋಡಿದರೆ ರಾಮ-ಲಕ್ಷ್ಮಣರು ಏಳ್ತಾ ಇದಾರೆ. ಸಾನ್ನಿಧ್ಯ ಮಾತ್ರದಿಂದ, ಗಂಧ ಮಾತ್ರದಿಂದ ಆ ಓಷಧಿಗಳು ರಾಮಲಕ್ಷ್ಮಣರನ್ನು ಏಳಿಸಿದವು. ಒಳಗಿನ ಶಸ್ತ್ರಗಳ ಚೂರುಗಳು ತಾನಾಗಿ ಹೊರಬರ್ತಾ ಇವೆ. ಮೊದಲು ರಾಮಲಕ್ಷ್ಮಣರೆದ್ದರು. ಬಳಿಕ ಉಳಿದ ವಾನರರು ಎದ್ದರು. ನೋವು ಕಡಿಮೆಯಾಯ್ತು. ಗಾಯಗಳು ಕ್ಷಿಪ್ರವಾಗಿ ಮಾಗಿದವು. ಮಲಗಿ ಎದ್ದವರಂತೆ ಎದ್ದರು ವಾನರರು. ರಾಕ್ಷಸರಲ್ಲು ಸತ್ತಿದ್ದರಲ್ಲ ಅವರ್ಯಾಕೆ ಏಳಲಿಲ್ಲ ಅಂದ್ರೆ ರಾವಣ ಸತ್ತ ರಾಕ್ಷಸರನ್ನು ಸಮುದ್ರಕ್ಕೆ ಎಸೆಯಲು ಹೇಳಿದ್ದನಂತೆ. ಶತ್ರು ಸೈನ್ಯದವರಿಗೆ ಲೆಕ್ಕ ಸಿಗಬಾರದು ಅಂತ. ಇಡೀ ಕಪಿಸೇನೆ ಎದ್ದು ನಿಂತಿದೆ. ರಾಮಲಕ್ಷ್ಮಣರು ಎದ್ದು ನಿಂತಿದಾರೆ. ಹನುಮಂತ ಮತ್ತೆ ಹಿಮಾಲಯಕ್ಕೆ ಹೋಗಿ ಪರ್ವತವನ್ನು ಅದರ ಜಾಗದಲ್ಲಿ ಇಟ್ಟು ಬಂದನಂತೆ.

ಇಂತಹ ಹನುಮಂತನನ್ನು ನಾವು ನಮ್ಮ ಹೃದಯದಲ್ಲಿ ಧಾರಣೆ ಮಾಡೋಣ. ಎಂತಹ ಕಷ್ಟಗಳು ಬಂದರೂ ಹನುಮಂತ ಸಂಜೀವಿನಿ. ಎಲ್ಲಾ ರೋಗಗಳನ್ನು, ಪೀಡೆಯನ್ನು ನಿವಾರಣೆ ಮಾಡುವ ಸಂಜೀವಿನಿಯಾದ ಹನುಮಂತನನ್ನು ಹೃದಯದಲ್ಲಿ ಧಾರಣೆ ಮಾಡೋಣ.

ಮುಂದೇನಾಯಿತು ಎನ್ನುವುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ನಿರೀಕ್ಷಿಸೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments