ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ :

ಮಿಥಿಲೆಯ ಪ್ರವೇಶ ಸ್ಥಳದಲ್ಲಿರುವುದು ಜನಕನ ಪುರೋಹಿತರಾದ ಗೌತಮ ಮುನಿಗಳ ಆಶ್ರಮ. ಅಹಲ್ಯಾಸಹಿತರಾಗಿ ತುಂಬಾ ತಪಸ್ಸು ಮಾಡಿದ್ದಾರೆ. ದೇವರಾಜ ಇಂದ್ರ ಅಹಲ್ಯಾ ಗೌತಮರ ತಪಸ್ಸನ್ನು ಭಂಗಮಾಡಿದನು. ಗೌತಮರ ವೇಷಧಾರಣೆ ಮಾಡಿ, ಮಾಡಬಾರದ್ದನ್ನು ಮಾಡಲು ಬಂದನು. ಮುನಿವೇಷಧಾರಿಯಾಗಿ ಇಂದ್ರನೇ ಬಂದಿರುವುದೆಂದು ಗೊತ್ತಿದ್ದೂ, ಆತನಲ್ಲಿ ಮನಸ್ಸು ಮಾಡಿದಳು ಅಹಲ್ಯಾ.

ಅರಿಯದೇ ಅಪರಾಧ ಮಾಡಿದರೆ, ಪರಿಹಾರವಿದೆ. ಅರಿತೂ ಅಪರಾಧ ಮಾಡಿ ಪಶ್ಚಾತ್ತಾಪ ಬಂದರೆ, ಪರಿಹಾರವಿದೆ. ಆದರೆ ಅಹಲ್ಯೆ ಆ ಕಾರ್ಯದಲ್ಲಿ ಕೃತಾರ್ಥಳಾದಳು…!

ದೇವೇಂದ್ರನು ಆಶ್ರಮದ ಹೊರಹೋಗುವಾಗ, ಗೌತಮರು ಎದುರೇ ಸಿಕ್ಕಿದರು. ಗಡಗಡ ನಡುಗಿದ ಇಂದ್ರ. ಗೌತಮರು ಮುನಿವೇಷಧರನಾದ ಸಹಸ್ರಾಕ್ಷನನ್ನೇ ನೋಡಿದರು. “ಮಾಡಬಾರದ್ದನ್ನು ಮಾಡಲಿಕ್ಕೆ ನನ್ನ ವೇಷವಾ? ಇನ್ನು ಮುಂದೆ ನೀನು ಪುರುಷನಲ್ಲ. ಇಂದ್ರಪಟ್ಟ ನಿನಗೆ ಸ್ಥಿರವಲ್ಲ. ಸದಾ ಭಯವನ್ನು ಹೊಂದು” ಎಂದು ಶಪಿಸಿದರು.

ಅಹಲ್ಯೆಗೆ, “ಬಹುಸಹಸ್ರವರ್ಷಗಳ ಕಾಲ ಅದೃಶಳಾಗಿರು. ಅನಂತಕಾಲ ಬೂದಿರಾಶಿಯಲ್ಲಿ ಬಿದ್ದಿರು. ರಾಮಬರುವವರೆಗೆ ಈ ವನದಲ್ಲಿ ಈ ಆಶ್ರಮದಲ್ಲಿ ಬಿದ್ದಿರು. ಯಾವಾಗ ರಾಮನ ಪೂಜೆ ಮಾಡುತ್ತಿಯೋ, ಆಗ ಮತ್ತೆ ನನ್ನವಳಾಗುತ್ತೀಯ” ಎಂದರು. ತಪಸ್ಸಿನ ಮೂಲಕ ಪಾವಿತ್ರ್ಯತೆ ಪಡೆಯಬೇಕು ಅಹಲ್ಯೆಗೆ. ಇಷ್ಟು ಹೇಳಿ ಗೌತಮರು ಆಶ್ರಮ ತೊರೆದು, ಹಿಮಾಲಯಕ್ಕೆ ತೆರಳಿದರು.

ರಾಮಪಾದಸ್ಪರ್ಶದಿಂದ ಅಹಲ್ಯೆಯ ಶಾಪವಿಮೋಚನೆಯಾಯಿತು…! ಎಲ್ಲರ ಕಣ್ಣಿಗೆ ಕಂಡಳು. ಗೌತಮರು ಪ್ರಕಟರಾದರು..! ರಾಮನನ್ನು ಪೂಜಿಸಿದರು ಗೌತಮ ಅಹಲ್ಯಾದಂಪತಿಗಳು.

ಜನಕನು ವಿಶ್ವಾಮಿತ್ರರು ತನ್ನ ನಗರಿಗೆ ಬಂದ ವಿಚಾರವನ್ನು ತಿಳಿದು, ಪುರೋಹಿತರಾದ ಶತಾನಂದರು, ಋಷಿವೃಂದದ ಸಮೇತ ಅವರಿರುವ ಕುಟೀರದೆಡೆಗೆ ಬಂದರು. ವಿಶ್ವಾಮಿತ್ರರನ್ನು ಸತ್ಕರಿಸಿ, ಜನಕ ರಾಮಲಕ್ಷ್ಮಣರನ್ನು ನೋಡಿ ಕೇಳಿದ, “ಇವರ್ಯಾರು…? ದೇವಸಮಾನರು… ಮಹಾಪುರುಷರ ನಡಿಗೆಯುಳ್ಳ ಕಮಲಾಕ್ಷರು ಯಾರಿವರು…? ತನ್ನಿಚ್ಛೆಯಂತೆ ದೇವರು ಭುವಿಗಿಳಿದ ರೂಪ ಇವರದು. ಯಾವ ದೇಶದ ಯಾವ ರಾಜನ ಮಕ್ಕಳೀರ್ವರು..?” ಎಂದಾಗ ವಿಶ್ವಾಮಿತ್ರರು, ಕೋಸಲ ಅಯೋಧ್ಯೆಯ ದಶರಥನ ಮಕ್ಕಳು ಎಂದು ಆರಂಭಿಸಿ, ಅಲ್ಲಿವರೆಗಿನ ಎಲ್ಲ ಕಥೆಯನ್ನು ಹೇಳಿದರು.

ರಾಮಪಾದದ ಧೂಳಿನ ಸ್ಪರ್ಶಮಾತ್ರದಿಂದ ಅಹಲ್ಯೆಯ ದರ್ಶನವಾಯಿತು ಎಂದಾಗ, ಅಹಲ್ಯಾ ಸುಪುತ್ರ ಶತಾನಂದರಿಗೆ ರಾಮನ ಕುರಿತು ಎಲ್ಲಿಲ್ಲದ ವಿಸ್ಮಯ….! ಆಗ ಶತಾನಂದರು, “ತನ್ನ ತಾಯಿಯಾದ ಅಹಲ್ಯೆ ರಾಮನನ್ನು ಪೂಜಿಸಿದಳಾ? ತಂದೆ ತಾಯಿ ಒಂದಾದರಾ..? ರಾಮನನ್ನು ಗೌತಮರು ಪೂಜಿಸಿದರಾ..? ” ಎಂದು ತುಂಬಾ ವಿಸ್ಮಿತರಾದರು. ಆಗ ವಿಶ್ವಾಮಿತ್ರರು “ಹೌದು, ಕರ್ತವ್ಯಪಾಲನೆಯಾಗಿದೆ” ಎಂದರು.

ವಿಶ್ವಾಮಿತ್ರರು ಯಾರು ಎಂಬುದನ್ನು ರಾಮನಿಗೆ ಶತಾನಂದರು ಹೇಳುವರು. ಮುಂದಿನ ಧಾರಾರಾಮಾಯಣದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ :

ಪ್ರವಚನವನ್ನು ನೋಡಲು :

Facebook Comments